ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
“ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.”—1 ಕೊರಿಂಥ 16:14.
ಮಗುವಿನ ಜನನವು ಜೀವನದ ಅತ್ಯಂತ ಸಂತಸಕರ ಘಟನೆಗಳಲ್ಲಿ ಒಂದೆಂದು ಹೆಚ್ಚಿನವರು ಒಪ್ಪುವರು. ಅಲೀಯ ಎಂಬ ಹೆಸರಿನ ತಾಯಿ ಹೇಳಿದ್ದು: “ನನ್ನ ನವಜಾತ ಕಂದಳನ್ನು ಪ್ರಥಮ ಬಾರಿ ನೋಡಿದಾಗ ನಾನು ಸಂತೋಷದಿಂದ ಮೈಮರೆತೆ. ನಾನು ಈವರೆಗೂ ಇಷ್ಟು ಮುದ್ದಾದ ಮಗುವನ್ನು ನೋಡಲೇ ಇಲ್ಲವೆಂದೆನಿಸಿತು.” ಆದರೆ ಈ ಸಂತಸದ ಸಂದರ್ಭವು ಹೆತ್ತವರಿಗೆ ಚಿಂತೆಯನ್ನೂ ತರಬಹುದು. ಅಲೀಯಳ ಗಂಡ ಹೇಳಿದ್ದು: “ಜೀವನದ ಜಂಜಾಟಗಳಿಗಾಗಿ ನನ್ನ ಮಗಳನ್ನು ಸರಿಯಾಗಿ ಸಿದ್ಧಗೊಳಿಸಲು ನನ್ನಿಂದಾಗುವುದೊ ಎಂಬ ಚಿಂತೆ ನನ್ನನ್ನು ಕಾಡಿತು.” ಅನೇಕ ಹೆತ್ತವರಿಗೆ ಇಂಥದ್ದೇ ಚಿಂತೆಗಳಿವೆ. ತಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡುವ ಅಗತ್ಯವಿದೆಯೆಂದು ಅವರು ಗ್ರಹಿಸುತ್ತಾರೆ. ಆದರೆ ಇಂಥ ಪ್ರೀತಿಭರಿತ ತರಬೇತಿಕೊಡಲು ಅಪೇಕ್ಷಿಸುವ ಕ್ರೈಸ್ತ ಹೆತ್ತವರ ಮುಂದೆ ಸವಾಲುಗಳೇಳುತ್ತವೆ. ಅವುಗಳಲ್ಲಿ ಕೆಲವೊಂದು ಯಾವುವು?
2 ನಾವೀಗ ಈ ವ್ಯವಸ್ಥೆಯ ಕಡೇ ದಿವಸಗಳ ಕೊನೇ ಗಳಿಗೆಯಲ್ಲಿ ಜೀವಿಸುತ್ತಿದ್ದೇವೆ. ಮುಂತಿಳಿಸಲಾದಂತೆಯೇ ಪ್ರೀತಿರಹಿತವಾದ ಮನೋಭಾವವು ಸಮಾಜದಲ್ಲೆಲ್ಲ ವ್ಯಾಪಿಸಿದೆ. ಕುಟುಂಬ ಸದಸ್ಯರು ಸಹ ‘ಮಮತೆಯಿಲ್ಲದವರಾಗಿದ್ದಾರೆ’ ಮತ್ತು ನಿಷ್ಠಾರಹಿತರೂ “ಉಪಕಾರನೆನಸದವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ” ಆಗಿದ್ದಾರೆ. (2 ತಿಮೊಥೆಯ 3:1-5) ಇಂಥ ಗುಣಗಳನ್ನು ತೋರಿಸುವ ಜನರೊಂದಿಗೆ ದಿನದಿನದ ಸಂಪರ್ಕವು, ಕ್ರೈಸ್ತ ಕುಟುಂಬಗಳ ಸದಸ್ಯರು ಸಹ ಪರಸ್ಪರರನ್ನು ಉಪಚರಿಸುವ ರೀತಿಯನ್ನು ಬಾಧಿಸಬಹುದು. ಅದಲ್ಲದೆ, ಬಾಧ್ಯತೆಯಾಗಿ ಪಡೆದಿರುವ ಪ್ರವೃತ್ತಿಯ ವಿರುದ್ಧವೂ ಹೆತ್ತವರಿಗೆ ಹೋರಾಡಲಿಕ್ಕಿದೆ. ಅವರು ಸ್ವನಿಯಂತ್ರಣ ಕಳೆದುಕೊಳ್ಳಬಹುದು, ತಿಳಿಯದೇ ಮನನೋಯಿಸುವಂಥ ಮಾತುಗಳನ್ನಾಡಬಹುದು ಮತ್ತು ಬೇರೆ ವಿಧಗಳಲ್ಲಿ ವಿವೇಚನಾಶಕ್ತಿಯ ಕೊರತೆಯನ್ನು ತೋರಿಸಬಹುದು.—ರೋಮಾಪುರ 3:23; ಯಾಕೋಬ 3:2, 8, 9.
3 ಹೆತ್ತವರು ಈ ಸವಾಲುಗಳ ಮಧ್ಯೆಯೂ ಸಂತೋಷವುಳ್ಳವರೂ ಆಧ್ಯಾತ್ಮಿಕವಾಗಿ ಆರೋಗ್ಯವಂತರೂ ಆದ ಮಕ್ಕಳನ್ನು ಬೆಳೆಸಸಾಧ್ಯವಿದೆ. ಹೇಗೆ? “ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ” ಎಂಬ ಬೈಬಲ್ ಬುದ್ಧಿವಾದವನ್ನು ಪಾಲಿಸುವ ಮೂಲಕವೇ. (1 ಕೊರಿಂಥ 16:14) ವಾಸ್ತವದಲ್ಲಿ, ಪ್ರೀತಿಯು “ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:14) ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರದಲ್ಲಿ ವರ್ಣಿಸಿದ ಈ ಪ್ರೀತಿಯ ಮೂರು ಅಂಶಗಳನ್ನು ನಾವೀಗ ಪರಿಶೀಲಿಸೋಣ. ಅಲ್ಲದೆ, ಹೆತ್ತವರು ತಮ್ಮ ಮಕ್ಕಳಿಗೆ ತರಬೇತಿಕೊಡುವಾಗ ಈ ಗುಣವನ್ನು ಹೇಗೆ ಅನ್ವಯಿಸಬಹುದೆಂದು ಚರ್ಚಿಸೋಣ.—1 ಕೊರಿಂಥ 13:4-8.
ತಾಳ್ಮೆತೋರಿಸುವ ಅಗತ್ಯ
4 ಪೌಲನು ಬರೆದುದು: “ಪ್ರೀತಿ ಬಹು ತಾಳ್ಮೆಯುಳ್ಳದ್ದು.” (1 ಕೊರಿಂಥ 13:4) ಇಲ್ಲಿ ತಾಳ್ಮೆ ಎಂದು ಕೊಡಲಾಗಿರುವ ಮೂಲ ಪದದ ಅರ್ಥ “ಕೋಪಿಸುವುದರಲ್ಲಿ ನಿಧಾನಿ” ಎಂದೂ ಆಗಿದೆ. ಹೆತ್ತವರಿಗೆ ತಾಳ್ಮೆ ಏಕೆ ಅಗತ್ಯ? ಅದಕ್ಕೆ ಅನೇಕ ಕಾರಣಗಳಿರಬಹುದು. ಕೆಲವೊಂದು ಉದಾಹರಣೆಗಳನ್ನು ಗಮನಿಸಿ. ಮಕ್ಕಳು ತಮಗೇನಾದರೂ ಬೇಕಿದ್ದರೆ ಕೇವಲ ಒಮ್ಮೆ ಕೇಳಿ ಸುಮ್ಮಗಾಗುವುದಿಲ್ಲ. ಹೆತ್ತವರು ‘ಇಲ್ಲ’ ಎಂದು ದೃಢವಾಗಿ ಹೇಳಿದರೂ ಅವರು ಪುನಃ ಪುನಃ ಕೇಳುತ್ತಾ ಇರುತ್ತಾರೆ. ಹೆತ್ತವರು ಎಲ್ಲಾದರೂ ಮನಸ್ಸುಬದಲಾಯಿಸಿ ಒಪ್ಪಿಕೊಳ್ಳುವರೆಂದು ಮಕ್ಕಳು ನಿರೀಕ್ಷಿಸುತ್ತಾರೆ. ಹದಿವಯಸ್ಕರಾದರೊ ತಾವು ಮಾಡಬೇಕೆಂದಿರುವ—ಆದರೆ ಅದು ಮೂರ್ಖತನವೆಂದು ಹೆತ್ತವರಿಗೆ ತಿಳಿದಿರುವ—ಯಾವುದೊ ವಿಷಯದ ಕುರಿತು ವಾದಿಸುತ್ತಾ ಇರಬಹುದು. (ಜ್ಞಾನೋಕ್ತಿ 22:15) ಮತ್ತು ನಮ್ಮೆಲ್ಲರಂತೆ, ಮಕ್ಕಳು ಕೆಲವೊಂದು ತಪ್ಪುಗಳನ್ನು ಪುನಃ ಪುನಃ ಮಾಡುತ್ತಾ ಇರುವ ಸಾಧ್ಯತೆಯೂ ಇದೆ.—ಕೀರ್ತನೆ 130:3.
5 ಹೆತ್ತವರು ತಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರುವಂತೆ ಯಾವುದು ಸಹಾಯಮಾಡುವುದು? ರಾಜ ಸೊಲೊಮೋನನು ಬರೆದುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” (ಜ್ಞಾನೋಕ್ತಿ 19:11) ಹೆತ್ತವರು ತಮ್ಮ ಮಕ್ಕಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಒಂದು ಕಾಲದಲ್ಲಿ ತಾವೂ ‘ಬಾಲಕರಂತೆ ಮಾತಾಡಿದೆವು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆವು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆವು’ ಎಂಬುದನ್ನು ನೆನಪಿಗೆ ತರಬೇಕು. (1 ಕೊರಿಂಥ 13:11) ಹೆತ್ತವರೇ, ನಿಮ್ಮ ಹುಡುಗಾಟಿಕೆಯ ಒಂದು ಬೇಡಿಕೆಯನ್ನು ನಿಮ್ಮ ತಂದೆ ಅಥವಾ ತಾಯಿ ಪೂರೈಸುವಂತೆ ನೀವು ಅವರನ್ನು ಕಾಡಿಸಿದ್ದು ನೆನಪುಂಟೋ? ಅಥವಾ ನೀವು ಹದಿವಯಸ್ಕರಾಗಿದ್ದಾಗ, ನಿಮ್ಮ ಹೆತ್ತವರಿಗೆ ನಿಮ್ಮ ಭಾವನೆಗಳು ಇಲ್ಲವೇ ಸಮಸ್ಯೆಗಳು ಅರ್ಥವೇ ಆಗುವುದಿಲ್ಲವೆಂದು ಎಂದಾದರೂ ನೆನಸಿದ್ದುಂಟೋ? ಹಾಗಿರುವಲ್ಲಿ, ಈಗ ನಿಮ್ಮ ಮಕ್ಕಳು ಯಾಕೆ ಹೀಗೆ ನಡೆದುಕೊಳ್ಳುತ್ತಾರೆ ಮತ್ತು ನಿಮ್ಮ ನಿರ್ಣಯಗಳ ಕುರಿತಾಗಿ ಅವರಿಗೆ ಯಾಕೆ ಪದೇ ಪದೇ ತಾಳ್ಮೆಯಿಂದ ನೆನಪುಹುಟ್ಟಿಸುತ್ತಾ ಇರಬೇಕೆಂದು ನಿಮಗೆ ಅರ್ಥವಾಗಬಹುದು. (ಕೊಲೊಸ್ಸೆ 4:6) ಇಸ್ರಾಯೇಲ್ಯ ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ನಿಯಮಗಳನ್ನು ‘ಅಭ್ಯಾಸಮಾಡಿಸ’ಬೇಕೆಂದು ಆತನು ಹೇಳಿದ್ದನ್ನು ಗಮನಕ್ಕೆ ತರುವುದು ಒಳ್ಳೇದು. (ಧರ್ಮೋಪದೇಶಕಾಂಡ 6:6, 7) ‘ಅಭ್ಯಾಸಮಾಡಿಸಿ’ ಎಂಬದರ ಹೀಬ್ರು ಪದದ ಅರ್ಥ “ಪುನರುಚ್ಚರಿಸು,” “ಪುನಃ ಪುನಃ ಹೇಳು,” “ಮನಸ್ಸಿನಲ್ಲಿ ಅಚ್ಚೊತ್ತು” ಎಂದಾಗಿದೆ. ಇದು, ದೇವರ ನಿಯಮಗಳನ್ನು ಮಕ್ಕಳು ಅನ್ವಯಿಸಲು ಕಲಿಯಬೇಕಾದರೆ ಹೆತ್ತವರು ಅದನ್ನು ಅನೇಕ ಸಲ ಪುನಃ ಪುನಃ ಹೇಳಬೇಕಾದೀತೆಂದು ಸೂಚಿಸುತ್ತದೆ. ಅಂತೆಯೇ ಜೀವನದಲ್ಲಿ ಬೇರೆ ಪಾಠಗಳನ್ನು ಕಲಿಸಲಿಕ್ಕಾಗಿಯೂ ಅನೇಕವೇಳೆ ಪುನರುಚ್ಚರಿಸುವುದರ ಅಗತ್ಯವಿರುತ್ತದೆ.
6 ತಾಳ್ಮೆತೋರಿಸುವ ಹೆತ್ತವರು ಕಟ್ಟುಪಾಡುಗಳನ್ನು ಕಟ್ಟುನಿಟ್ಟಿನಿಂದ ವಿಧಿಸುವುದಿಲ್ಲವೆಂದು ಇದರರ್ಥವಲ್ಲ. ದೇವರ ವಾಕ್ಯವು ಹೀಗೆ ಎಚ್ಚರಿಸುತ್ತದೆ: “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” ಹೀಗಾಗದಂತೆ ನೋಡಿಕೊಳ್ಳಲು ಏನು ಮಾಡಬೇಕೆಂದು ಅದೇ ಜ್ಞಾನೋಕ್ತಿ ಹೇಳುವುದು: “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು.” (ಜ್ಞಾನೋಕ್ತಿ 29:15) ಕೆಲವೊಮ್ಮೆ ಮಕ್ಕಳು, ತಮ್ಮನ್ನು ತಿದ್ದಲು ಹೆತ್ತವರಿಗಿರುವ ಹಕ್ಕನ್ನು ವಿರೋಧಿಸಬಹುದು. ಆದರೆ ಕ್ರೈಸ್ತ ಕುಟುಂಬಗಳು ಪ್ರಜಾಪ್ರಭುತ್ವಗಳಂತೆ ನಡೆಸಲ್ಪಡಬಾರದು, ಅಂದರೆ ಹೆತ್ತವರು ನಿಯಮಗಳನ್ನು ಜಾರಿಗೆತರುವ ತಮ್ಮ ಹಕ್ಕನ್ನು ಬಳಸಲಿಕ್ಕಾಗಿ ಮಕ್ಕಳ ಸಮ್ಮತಿ ಕೇಳುವ ಆವಶ್ಯಕತೆ ಇಲ್ಲ. ಮಕ್ಕಳಿಗೆ ತರಬೇತಿಕೊಟ್ಟು ಶಿಕ್ಷಿಸುವ ಅಧಿಕಾರವನ್ನು ಹೆತ್ತವರಿಗೆ ಕೊಟ್ಟವನು ಕುಟುಂಬದ ಸರ್ವೋಚ್ಚ ತಲೆಯಾಗಿರುವ ಯೆಹೋವನೇ. (1 ಕೊರಿಂಥ 11:3; ಎಫೆಸ 3:15; 6:1-4) ವಾಸ್ತವದಲ್ಲಿ, ಶಿಕ್ಷೆ ಎಂಬುದು ಪೌಲನು ತಿಳಿಸಿದ ಪ್ರೀತಿಯ ಮುಂದಿನ ಅಂಶದೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿದೆ.
ಪ್ರೀತಿಯಿಂದ ಶಿಕ್ಷಿಸುವ ವಿಧ
7 “ಪ್ರೀತಿ ದಯೆ ತೋರಿಸುವದು” ಎಂದು ಪೌಲನು ಬರೆದನು. (1 ಕೊರಿಂಥ 13:4) ನಿಜವಾಗಿಯೂ ದಯಾಪರರಾಗಿರುವ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷೆಯನ್ನು ಕೊಡಬೇಕಾದಾಗಲೆಲ್ಲ ಅದನ್ನು ತಪ್ಪಿಸುವುದಿಲ್ಲ ಇಲ್ಲವೇ ನಿಯಮಗಳನ್ನು ಬಗ್ಗಿಸುವುದಿಲ್ಲ. ಹೀಗೆ ಅವರು ಯೆಹೋವನನ್ನು ಅನುಕರಿಸುತ್ತಾರೆ. ‘ಯೆಹೋವನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ’ ಎಂದು ಪೌಲನು ಬರೆದನು. ಬೈಬಲಿನಲ್ಲಿ ಸೂಚಿಸಲಾಗಿರುವ ಶಿಕ್ಷೆಯ ಅರ್ಥ ಕೇವಲ ದಂಡಿಸುವುದು ಆಗಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನದಲ್ಲಿಡಿ. ಅದು, ತರಬೇತಿ ಮತ್ತು ಉಪದೇಶವನ್ನು ಸಹ ಸೂಚಿಸುತ್ತದೆ. ಅಂಥ ಶಿಕ್ಷೆಯ ಉದ್ದೇಶವೇನು? ಅದು, ‘ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ’ ಎಂದು ಪೌಲನು ತಿಳಿಸುತ್ತಾನೆ. (ಇಬ್ರಿಯ 12:6, 11) ಹೆತ್ತವರು ತಮ್ಮ ಮಕ್ಕಳಿಗೆ ದೇವರ ಚಿತ್ತಕ್ಕನುಸಾರ ದಯೆಯಿಂದ ಉಪದೇಶಿಸುವಾಗ, ಅವರು ಸಮಾಧಾನಿಗಳೂ, ನೈತಿಕವಾಗಿ ಶುದ್ಧ ನಡತೆಯುಳ್ಳವರೂ ಆಗಿ ಬೆಳೆಯುವಂತೆ ಅವಕಾಶ ಕೊಡುತ್ತಿದ್ದಾರೆ. ಮಕ್ಕಳು ‘ಯೆಹೋವನ ಶಿಕ್ಷೆಯನ್ನು’ ಸ್ವೀಕರಿಸುವಾಗ ಅವರು ಚಿನ್ನಬೆಳ್ಳಿಗಿಂತಲೂ ಹೆಚ್ಚು ಅಮೂಲ್ಯ ಆಸ್ತಿಗಳಾದ ವಿವೇಕ, ಜ್ಞಾನ ಹಾಗೂ ವಿವೇಚನಾಶಕ್ತಿಯನ್ನು ಗಳಿಸುತ್ತಾರೆ.—ಜ್ಞಾನೋಕ್ತಿ 3:11-18.
8 ಇನ್ನೊಂದು ಬದಿಯಲ್ಲಿ, ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷೆಕೊಡುವುದನ್ನು ತಪ್ಪಿಸುವುದರಿಂದ ದಯೆತೋರಿಸಿದಂತಾಗುವುದಿಲ್ಲ. ಸೊಲೊಮೋನನು ಹೀಗೆ ಬರೆಯುವಂತೆ ಯೆಹೋವನು ಪ್ರೇರಿಸಿದನು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.” (ಜ್ಞಾನೋಕ್ತಿ 13:24) ಸರಿಯಾದ ಶಿಕ್ಷೆ ಸಿಗದ ಮಕ್ಕಳು ಸ್ವಾರ್ಥಿಗಳೂ ಅಸಂತೋಷಿತರೂ ಆಗಿರುವ ಸಾಧ್ಯತೆಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ ಹೆತ್ತವರು ಸಹಾನುಭೂತಿಯುಳ್ಳವರಾಗಿದ್ದು, ಅದೇ ಸಮಯದಲ್ಲಿ ಕಟ್ಟುನಿಟ್ಟಿನ ಮೇರೆಗಳನ್ನು ಕಾಪಾಡಿಕೊಳ್ಳುವಾಗ ಅವರ ಮಕ್ಕಳು ಶಾಲೆಯಲ್ಲಿ ಒಳ್ಳೇ ವಿದ್ಯಾರ್ಥಿಗಳಾಗುತ್ತಾರೆ, ಬೇರೆಯವರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ ಮತ್ತು ಸಾಮಾನ್ಯವಾಗಿ ಸಂತೋಷದಿಂದಿರುತ್ತಾರೆಂದು ಕಂಡುಕೊಳ್ಳಲಾಗಿದೆ. ಆದುದರಿಂದ, ತಮ್ಮ ಮಕ್ಕಳಿಗೆ ಶಿಕ್ಷೆಕೊಡುವ ಮೂಲಕ ಹೆತ್ತವರು ನಿಜವಾಗಿ ಅವರಿಗೆ ದಯೆ ತೋರಿಸುತ್ತಿದ್ದಾರೆ.
9 ಮಕ್ಕಳಿಗೆ ದಯಾಪರ ಹಾಗೂ ಪ್ರೀತಿಪರ ವಿಧದಲ್ಲಿ ಶಿಕ್ಷೆಕೊಡುವುದರಲ್ಲಿ ಏನು ಒಳಗೂಡಿದೆ? ಹೆತ್ತವರು ತಮ್ಮ ಮಕ್ಕಳಿಂದ ಏನನ್ನು ಅಪೇಕ್ಷಿಸುತ್ತಾರೆಂದು ಸ್ಪಷ್ಟವಾಗಿ ತಿಳಿಸಬೇಕು. ಉದಾಹರಣೆಗಾಗಿ, ಕ್ರೈಸ್ತ ಹೆತ್ತವರು ಮಕ್ಕಳಿಗೆ ಬಾಲ್ಯದಿಂದಲೇ ಬೈಬಲ್ ಮೂಲತತ್ತ್ವಗಳನ್ನು ಹಾಗೂ ಸತ್ಯಾರಾಧನೆಯ ವಿಭಿನ್ನ ಅಂಶಗಳಲ್ಲಿ ಪಾಲ್ಗೊಳ್ಳುವ ಅಗತ್ಯವನ್ನು ಕಲಿಸಬೇಕು. (ವಿಮೋಚನಕಾಂಡ 20:12-17; ಮತ್ತಾಯ 22:37-40; 28:19; ಇಬ್ರಿಯ 10:24, 25) ಈ ಆವಶ್ಯಕತೆಗಳು ಎಂದೂ ಬದಲಾಗುವುದಿಲ್ಲವೆಂದು ಮಕ್ಕಳಿಗೆ ಮನದಟ್ಟುಗೊಳಿಸಬೇಕು.
10 ಆದರೆ ಕೆಲವೊಮ್ಮೆ ಹೆತ್ತವರು “ಕುಟುಂಬ ನಿಯಮಗಳನ್ನು” ರಚಿಸುವಾಗ ತಮ್ಮ ಮಕ್ಕಳನ್ನು ಸಹ ಚರ್ಚೆಯಲ್ಲಿ ಸೇರಿಸಬಹುದು. ಇಂಥ ಚರ್ಚೆಗಳಲ್ಲಿ ಯುವ ಜನರನ್ನು ಸೇರಿಸಿದರೆ ಅವರು ಆ ನಿಯಮಗಳಿಗೆ ವಿಧೇಯರಾಗುವ ಸಾಧ್ಯತೆ ಹೆಚ್ಚು. ದೃಷ್ಟಾಂತಕ್ಕಾಗಿ, ಒಂದುವೇಳೆ ಮಕ್ಕಳು ಇಂತಿಷ್ಟು ಸಮಯದೊಳಗೆ ಮನೆಗೆ ಬರಲೇಬೇಕೆಂದು ಹೆತ್ತವರು ಅಪೇಕ್ಷಿಸುವುದಾದರೆ ಅವರೊಂದು ನಿರ್ದಿಷ್ಟ ಸಮಯವನ್ನು ಆರಿಸಿಕೊಳ್ಳಬಹುದು. ಇದಕ್ಕೆ ಪರ್ಯಾಯ ಉಪಾಯವೇನೆಂದರೆ, ಮಕ್ಕಳೇ ಒಂದು ನಿರ್ದಿಷ್ಟ ಸಮಯವನ್ನು ಸೂಚಿಸಿ, ಅವರಿಗೆ ಆ ಸಮಯ ಯಾಕೆ ಬೇಕೆಂದು ಕಾರಣಗಳನ್ನು ಕೊಡಬಹುದು. ತದನಂತರ ಹೆತ್ತವರು ತಾವು ಬಯಸುವಂಥ ಸಮಯವನ್ನು ತಿಳಿಸಿ, ಅದು ಯಾಕೆ ಸೂಕ್ತವೆಂದು ವಿವರಿಸಬಹುದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ ಸಾಧ್ಯತೆಯಿದೆ. ಆಗೇನು ಮಾಡುವುದು? ಕೆಲವು ಸಂದರ್ಭಗಳಲ್ಲಿ, ಮಕ್ಕಳ ಇಷ್ಟಗಳು ಬೈಬಲ್ ಮೂಲತತ್ತ್ವಗಳನ್ನು ಉಲ್ಲಂಘಿಸದಿರುವಲ್ಲಿ ಅದನ್ನು ಅನುಮತಿಸಸಾಧ್ಯವೆಂದು ಹೆತ್ತವರು ನಿರ್ಣಯಿಸಬಹುದು. ಹೀಗೆ ಮಾಡುವುದರಿಂದ ಹೆತ್ತವರು ತಮ್ಮ ಅಧಿಕಾರವನ್ನು ಬಿಟ್ಟುಕೊಡುತ್ತಾರೆ ಎಂದಾಗುತ್ತದೋ?
11 ಆ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ, ಯೆಹೋವನು ಲೋಟನೊಂದಿಗೂ ಅವನ ಕುಟುಂಬದೊಂದಿಗೂ ವ್ಯವಹರಿಸಿದಾಗ ತನ್ನ ಅಧಿಕಾರವನ್ನು ಹೇಗೆ ಪ್ರೀತಿಯಿಂದ ಬಳಸಿದನೆಂಬುದನ್ನು ಪರಿಗಣಿಸಿರಿ. ಲೋಟನನ್ನು, ಅವನ ಹೆಂಡತಿ ಹಾಗೂ ಪುತ್ರಿಯರನ್ನು ಸೊದೋಮಿನಿಂದ ಹೊರಗೆ ತಂದ ಬಳಿಕ ದೇವದೂತರು ಅಂದದ್ದು: “ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು.” ಆದರೆ ಲೋಟನು ಉತ್ತರಿಸಿದ್ದು: “ಸ್ವಾಮೀ, [“ಯೆಹೋವನೇ,” NW] ಅದು ನನ್ನಿಂದಾಗದು.” ಹೀಗೆ ಹೇಳಿ, ಅವನು ಇನ್ನೊಂದು ಪರ್ಯಾಯ ಮಾರ್ಗದ ಸಲಹೆಕೊಟ್ಟನು: “ಅಗೋ, ಅಲ್ಲಿ ಒಂದು ಊರು ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವದು.” ಇದಕ್ಕೆ ಯೆಹೋವನ ಪ್ರತಿಕ್ರಿಯೆ ಏನಾಗಿತ್ತು? “ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು” ಎಂದನು ಆತನು. (ಆದಿಕಾಂಡ 19:17-22) ಹೀಗೆ ಮಾಡುವ ಮೂಲಕ ಯೆಹೋವನು ತನ್ನ ಅಧಿಕಾರವನ್ನು ಬಿಟ್ಟುಕೊಟ್ಟನೋ? ಖಂಡಿತವಾಗಿಯೂ ಇಲ್ಲ! ಆದರೆ ಅವನು ಲೋಟನ ವಿನಂತಿಯನ್ನು ಪರಿಗಣಿಸಿ, ಈ ವಿಷಯದಲ್ಲಿ ಹೆಚ್ಚಿನ ದಯೆ ತೋರಿಸುವ ಆಯ್ಕೆ ಮಾಡಿದನು. ನೀವೊಬ್ಬ ಹೆತ್ತವರಾಗಿರುವಲ್ಲಿ, ಕುಟುಂಬ ನಿಯಮಗಳನ್ನು ಸ್ಥಾಪಿಸುವಾಗ ನಿಮ್ಮ ಮಕ್ಕಳ ವಿನಂತಿಗಳನ್ನು ಮನಸ್ಸಿನಲ್ಲಿಡಬಹುದಾದ ಸಂದರ್ಭಗಳು ಇವೆಯೋ?
12 ಮಕ್ಕಳಿಗೆ ಕುಟುಂಬ ನಿಯಮಗಳನ್ನು ಮಾತ್ರವಲ್ಲ, ಅದನ್ನು ಮುರಿದರೆ ಸಿಗುವ ದಂಡನೆಯ ಕುರಿತೂ ತಿಳಿದಿರಬೇಕು. ದಂಡನೆಯ ಬಗ್ಗೆ ಚರ್ಚಿಸಿ, ಅವರಿಗದು ಅರ್ಥವಾದ ಬಳಿಕ ನಿಯಮಗಳನ್ನು ಜಾರಿಗೆತರಬೇಕು. ಹೆತ್ತವರು ಮಕ್ಕಳಿಗೆ ಕೊಡಬೇಕಾದ ಒಂದು ಶಿಕ್ಷೆಯ ಕುರಿತಾಗಿ ಯಾವಾಗಲೂ ಎಚ್ಚರಿಸುತ್ತಾ ಇದ್ದು, ತದನಂತರ ಅದನ್ನು ಕೊಡದಿರುವಾಗ ದಯೆ ತೋರಿಸಿದಂತಾಗುವುದಿಲ್ಲ. “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು” ಎನ್ನುತ್ತದೆ ಬೈಬಲ್. (ಪ್ರಸಂಗಿ 8:11) ಹೆತ್ತವರು ಮಕ್ಕಳನ್ನು ಎಲ್ಲರ ಮುಂದೆ ಇಲ್ಲವೇ ಅವರ ಸಮಾನಸ್ಥರ ಮುಂದೆ ಶಿಕ್ಷಿಸುವುದರಿಂದ ದೂರವಿರಬೇಕು ನಿಜ. ಹೀಗೆ ಮಕ್ಕಳನ್ನು ಮುಜುಗರದಿಂದ ತಪ್ಪಿಸಬಹುದು. ಆದರೆ, ಶಿಕ್ಷೆ ಕೊಟ್ಟರೂ ಸರಿ ಕೊಡದಿದ್ದರೂ ಸರಿ, ತಮ್ಮ ಹೆತ್ತವರ ಮಾತು “ಹೌದಾದರೆ ಹೌದು, ಅಲ್ಲವಾದರೆ ಅಲ್ಲ” ಆಗಿರುತ್ತದೆಂದು ಮಕ್ಕಳಿಗೆ ಗೊತ್ತಿರುವಾಗ ಅವರಲ್ಲಿ ಹೆಚ್ಚು ಸುರಕ್ಷಿತ ಭಾವನೆ ಮೂಡುತ್ತದೆ. ಅಲ್ಲದೆ ಹೆತ್ತವರ ಮೇಲಿನ ಅವರ ಗೌರವವೂ ಪ್ರೀತಿಯೂ ಹೆಚ್ಚು ಬೆಳೆಯುತ್ತದೆ.—ಮತ್ತಾಯ 5:37.
13 ಕೊಡಲಾಗುವಂಥ ಶಿಕ್ಷೆಯು ದಯೆಯುಳ್ಳದ್ದು ಆಗಿರಬೇಕಾದರೆ, ಆ ಶಿಕ್ಷೆ ಮತ್ತು ಅದನ್ನು ಕೊಡಲಾಗುವ ವಿಧವು ಮಗುವಿನ ಸ್ವಭಾವಕ್ಕೆ ತಕ್ಕಂತೆ ಹೊಂದಿಸಿದಂಥದ್ದು ಆಗಿರಬೇಕು. ಪ್ಯಾಮ್ ಎಂಬವರು ಜ್ಞಾಪಿಸಿಕೊಳ್ಳುವುದು: “ಶಿಕ್ಷೆಯ ವಿಷಯದಲ್ಲಿ ನಮ್ಮ ಇಬ್ಬರು ಮಕ್ಕಳ ಅಗತ್ಯಗಳು ಭಿನ್ನಭಿನ್ನವಾಗಿದ್ದವು. ದೊಡ್ಡವಳಿಗೆ ಸರಿಯಾಗುತ್ತಿದ್ದ ಶಿಕ್ಷೆ ಚಿಕ್ಕವಳಿಗೆ ಸರಿಯಾಗುತ್ತಿರಲಿಲ್ಲ.” ಪ್ಯಾಮ್ಳ ಗಂಡ ಲ್ಯಾರಿ ವಿವರಿಸುವುದು: “ನಮ್ಮ ಹಿರಿ-ಮಗಳು ಹಠಮಾರಿಯಾಗಿದ್ದಳು. ಕಠಿನ ಶಿಕ್ಷೆ ಕೊಟ್ಟರೆ ಮಾತ್ರ ಬಗ್ಗುತ್ತಿದ್ದಳು. ಆದರೆ ಕಿರಿಯವಳಿಗೆ, ಸ್ವಲ್ಪ ಜೋರಾಗಿ ಹೇಳಿದರೆ ಅಥವಾ ಒಂದು ಬಿರುನೋಟ ಕೊಟ್ಟರೇ ಸಾಕಾಗುತ್ತಿತ್ತು.” ಹೌದು, ದಯಾಪರ ಹೆತ್ತವರು ತಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರಿಗೆ ಯಾವ ರೀತಿಯ ಶಿಕ್ಷೆ ಕಾರ್ಯಕಾರಿ ಆಗಿದೆ ಎಂಬುದನ್ನು ವಿವೇಚಿಸಲು ಶ್ರಮಪಡುತ್ತಾರೆ.
14 ಈ ವಿಷಯದಲ್ಲಿ ಯೆಹೋವನು ಹೆತ್ತವರಿಗಾಗಿ ಮಾದರಿಯನ್ನಿಟ್ಟಿದ್ದಾನೆ. ಆತನಿಗೆ ತನ್ನ ಪ್ರತಿಯೊಬ್ಬ ಸೇವಕನ ಬಲವಾದ ಗುಣಗಳೂ ಬಲಹೀನತೆಗಳೂ ತಿಳಿದಿವೆ. (ಇಬ್ರಿಯ 4:13) ಅಷ್ಟುಮಾತ್ರವಲ್ಲದೆ, ಯೆಹೋವನು ಶಿಕ್ಷೆಯನ್ನು ಕೊಡುವಾಗ ವಿಪರೀತ ಕಠೋರನೂ ಆಗಿರುವುದಿಲ್ಲ, ತೀರ ಸಲಿಗೆಕೊಡುವವನೂ ಅಲ್ಲ. ಬದಲಿಗೆ ಯಾವಾಗಲೂ ತನ್ನ ಜನರನ್ನು “ಯೋಗ್ಯ ಮಟ್ಟದಲ್ಲಿ” ಶಿಕ್ಷಿಸುತ್ತಾನೆ. (ಯೆರೆಮೀಯ 30:11, NW) ಹೆತ್ತವರೇ, ನಿಮ್ಮ ಮಕ್ಕಳ ಬಲವಾದ ಗುಣಗಳೂ ಬಲಹೀನತೆಗಳೂ ನಿಮಗೆ ತಿಳಿದಿವೆಯೋ? ನೀವು ಈ ಮಾಹಿತಿಯನ್ನು ಅವರಿಗೆ ಪರಿಣಾಮಕಾರಿಯಾದ, ದಯಾಪರ ವಿಧದಲ್ಲಿ ತರಬೇತಿಕೊಡಲು ಉಪಯೋಗಿಸಶಕ್ತರೋ? ಹಾಗಿರುವಲ್ಲಿ, ನೀವು ನಿಮ್ಮ ಮಕ್ಕಳನ್ನು ಪ್ರೀತಿಸುತ್ತೀರೆಂದು ರುಜುಪಡಿಸಬಲ್ಲಿರಿ.
ಮುಚ್ಚುಮರೆಯಿಲ್ಲದ ಸಂವಾದವನ್ನು ಉತ್ತೇಜಿಸಿರಿ
15 ಪ್ರೀತಿಯ ಇನ್ನೊಂದು ಅಂಶವೇನೆಂದರೆ ಅದು “ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ.” (1 ಕೊರಿಂಥ 13:6) ಸರಿಯಾದದ್ದನ್ನೂ ಸತ್ಯವಾದದ್ದನ್ನೂ ಪ್ರೀತಿಸುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ತರಬೇತಿಕೊಡಬಲ್ಲರು? ಇದಕ್ಕಾಗಿ ಒಂದು ಮೂಲಭೂತ ಹೆಜ್ಜೆಯು, ಮಕ್ಕಳು ತಮ್ಮ ಭಾವನೆಗಳನ್ನು ಮುಚ್ಚುಮರೆಯಿಲ್ಲದೆ ಹೇಳುವಂತೆ ಉತ್ತೇಜಿಸುವುದೇ. ಮಕ್ಕಳು ಹೇಳುವ ವಿಷಯಗಳನ್ನು ಹೆತ್ತವರಿಗೆ ಸ್ವೀಕರಿಸಲು ಕಷ್ಟವಾಗುವುದಾದರೂ ಅವರು ಅದನ್ನು ಹೇಳಿಬಿಡುವಂತೆ ಉತ್ತೇಜಿಸಬೇಕು. ಮಕ್ಕಳು ವ್ಯಕ್ತಪಡಿಸುವ ವಿಚಾರಗಳು ಮತ್ತು ಭಾವನೆಗಳು ನೀತಿಯ ಮಟ್ಟಗಳಿಗೆ ಹೊಂದಿಕೆಯಲ್ಲಿರುವಾಗ ಹೆತ್ತವರು ಉಲ್ಲಾಸಿಸುವುದು ಸಹಜ. ಆದರೆ ಬೇರೆ ಸಮಯಗಳಲ್ಲಿ ಮಕ್ಕಳ ಮನದಾಳದಿಂದ ಬರುವ ಮಾತುಗಳು ಅನೀತಿಯ ಕಡೆಗಿರುವ ಅವರ ಓಲುವಿಕೆಯನ್ನು ಬಯಲುಪಡಿಸಬಹುದು. (ಆದಿಕಾಂಡ 8:21) ಇದಕ್ಕೆ ಹೆತ್ತವರ ಪ್ರತಿಕ್ರಿಯೆ ಏನಾಗಿರಬೇಕು? ಅಂಥ ವಿಚಾರಗಳನ್ನು ಬಾಯಿಬಿಟ್ಟು ಹೇಳಿದ್ದಕ್ಕೆ ಆ ಕೂಡಲೇ ಮಗುವಿಗೆ ಶಿಕ್ಷೆಕೊಡುವುದೇ ಅವರ ತಕ್ಷಣದ ಪ್ರತಿಕ್ರಿಯೆ ಆಗಿರಬಹುದು. ಆದರೆ ಒಂದುವೇಳೆ ಅವರು ಹಾಗೆ ಪ್ರತಿಕ್ರಿಯಿಸಿದರೆ ಮಕ್ಕಳು ಅದರಿಂದ ಕಲಿಯುವ ಪಾಠವೇನೆಂದರೆ, ಇನ್ನು ಮುಂದೆ ಹೆತ್ತವರಿಗೆ ಕೇಳಲು ಇಷ್ಟವಾಗುವಂಥ ಸಂಗತಿಗಳನ್ನು ಮಾತ್ರ ಹೇಳಬೇಕು ಎಂಬುದೇ. ಒಂದುವೇಳೆ ಮಕ್ಕಳು ಅಗೌರವಪೂರ್ವಕವಾಗಿ ಮಾತಾಡುತ್ತಿರುವಲ್ಲಿ ಅದನ್ನು ಆ ಕೂಡಲೇ ತಿದ್ದಬೇಕು ನಿಜ. ಆದರೆ, ಮಕ್ಕಳು ಸೌಮ್ಯ ರೀತಿಯಲ್ಲಿ ತಮ್ಮ ವಿಚಾರಗಳನ್ನು ಹೇಗೆ ಹೇಳಬೇಕು ಎಂಬುದನ್ನು ಕಲಿಸುವುದಕ್ಕೂ, ಅವರು ಏನು ಹೇಳಬೇಕೆಂಬುದನ್ನು ನೀವು ನಿರ್ಧರಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ.
16 ಮಕ್ಕಳು ಮುಚ್ಚುಮರೆಯಿಲ್ಲದೆ ಮಾತಾಡುವುದನ್ನು ಹೆತ್ತವರು ಹೇಗೆ ಉತ್ತೇಜಿಸಬಹುದು? ಈ ಮುಂಚೆ ತಿಳಿಸಲ್ಪಟ್ಟಿರುವ ಅಲೀಯ ಹೇಳುವುದು: “ನೆಮ್ಮದಿಗೆಡಿಸುವಂಥ ವಿಷಯಗಳನ್ನು ನಮ್ಮ ಮಕ್ಕಳು ಹೇಳುವಾಗ, ನಾವು ತಟ್ಟನೆ ಸಿಟ್ಟಿನಿಂದ ಇಲ್ಲವೇ ಭಾವೋದ್ರೇಕದಿಂದ ಪ್ರತಿಕ್ರಿಯೆ ತೋರಿಸದೇ ಇರಲು ಪ್ರಯತ್ನಿಸುವ ಮೂಲಕ ಮುಚ್ಚುಮರೆಯಿಲ್ಲದ ಮಾತುಕತೆಗಾಗಿ ಬೇಕಾದಂಥ ವಾತಾವರಣವನ್ನು ರಚಿಸಿದ್ದೇವೆ.” ಟಾಮ್ ಎಂಬ ಹೆಸರಿನ ತಂದೆ ಹೇಳುವುದು: “ನಮ್ಮ ಮಗಳು ನಮ್ಮ ವಿಚಾರಗಳನ್ನು ಒಪ್ಪದಿದ್ದಾಗಲೂ ತನ್ನ ಮನಸ್ಸಿನಲ್ಲಿದ್ದದ್ದನ್ನು ವ್ಯಕ್ತಪಡಿಸುವಂತೆ ನಾವು ಉತ್ತೇಜಿಸಿದೆವು. ಅವಳು ಮಾತಾಡುತ್ತಿರುವಾಗ ಮಧ್ಯೆ ಬಾಯಿಹಾಕಿ ನಮ್ಮ ಇಚ್ಛೆಗಳನ್ನು ಅವಳ ಮೇಲೆ ಒತ್ತಾಯದಿಂದ ಹೇರುವಲ್ಲಿ, ಅವಳು ಹತಾಶಳಾಗಿ ತನ್ನ ಮನಸ್ಸಿನಲ್ಲಿದ್ದದ್ದನ್ನು ಹೇಳಲಿಕ್ಕಿಲ್ಲವೆಂದು ನಮಗನಿಸಿತು. ಆದರೆ ನಾವು ಅವಳಿಗೆ ಕಿವಿಗೊಟ್ಟಾಗ ಅವಳು ನಮಗೆ ಕಿವಿಗೊಡುವಂತೆ ಉತ್ತೇಜಿಸಲ್ಪಡುತ್ತಿದ್ದಳು.” ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕು ನಿಶ್ಚಯ. (ಜ್ಞಾನೋಕ್ತಿ 6:20) ಆದರೆ ಮುಕ್ತ ಸಂವಾದದಿಂದಾಗಿ, ಮಕ್ಕಳು ವಿವೇಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಹಾಯಕೊಡುವ ಅವಕಾಶ ಹೆತ್ತವರಿಗೆ ಸಿಗುತ್ತದೆ. ನಾಲ್ಕು ಹೆಣ್ಣುಮಕ್ಕಳ ತಂದೆಯಾದ ವಿನ್ಸೆಂಟ್ ಹೇಳುವುದು: “ನಾವು ಯಾವುದೇ ಸನ್ನಿವೇಶದ ಲಾಭನಷ್ಟಗಳ ಕುರಿತಾಗಿ ಅನೇಕವೇಳೆ ಚರ್ಚಿಸುತ್ತಿದ್ದೆವು. ಹೀಗೆ ಅತ್ಯುತ್ತಮ ಫಲಿತಾಂಶವನ್ನು ಸ್ವತಃ ಮಕ್ಕಳೇ ನೋಡಸಾಧ್ಯವಿತ್ತು. ಇದು ಅವರ ಯೋಚನಾ ಸಾಮರ್ಥ್ಯವನ್ನು ಬೆಳೆಸುವಂತೆ ಸಹಾಯಮಾಡಿತು.”—ಜ್ಞಾನೋಕ್ತಿ 1:1-4.
17 ಯಾವ ಹೆತ್ತವರೂ, ಮಕ್ಕಳ ಪಾಲನೆಯ ಬಗ್ಗೆ ಬೈಬಲ್ ಕೊಡುವ ಸಲಹೆಯನ್ನು ಪರಿಪೂರ್ಣ ರೀತಿಯಲ್ಲಿ ಅನ್ವಯಿಸಲು ಶಕ್ತರಾಗಿರಲಿಕ್ಕಿಲ್ಲ ನಿಜ. ಆದರೆ, ನೀವು ಮಕ್ಕಳಿಗೆ ತಾಳ್ಮೆ, ದಯೆ ಹಾಗೂ ಪ್ರೀತಿಯಿಂದ ತರಬೇತಿಕೊಡಲು ಮಾಡುವ ಪ್ರಯತ್ನಗಳನ್ನು ನಿಮ್ಮ ಮಕ್ಕಳು ತುಂಬ ಗಣ್ಯಮಾಡುವರೆಂಬ ಖಾತ್ರಿ ನಿಮಗಿರಲಿ. ನಿಮ್ಮ ಪ್ರಯತ್ನಗಳನ್ನು ಯೆಹೋವನು ನಿಶ್ಚಯವಾಗಿಯೂ ಆಶೀರ್ವದಿಸುವನು. (ಜ್ಞಾನೋಕ್ತಿ 3:33) ತಾವು ಯೆಹೋವನನ್ನು ಬಹಳಷ್ಟು ಪ್ರೀತಿಸುವಂತೆಯೇ ತಮ್ಮ ಮಕ್ಕಳೂ ಪ್ರೀತಿಸಬೇಕೆಂಬುದು ಕಟ್ಟಕಡೆಗೆ ಎಲ್ಲ ಕ್ರೈಸ್ತ ಹೆತ್ತವರ ಅಪೇಕ್ಷೆಯಾಗಿದೆ. ಈ ಉದಾತ್ತ ಗುರಿಯನ್ನು ಹೆತ್ತವರು ಹೇಗೆ ತಲಪಬಲ್ಲರು? ಮುಂದಿನ ಲೇಖನವು ಕೆಲವೊಂದು ನಿರ್ದಿಷ್ಟ ವಿಧಾನಗಳನ್ನು ಚರ್ಚಿಸುವುದು. (w07 9/1)
ಜ್ಞಾಪಕವಿದೆಯೇ?
• ಹೆತ್ತವರು ಮಕ್ಕಳನ್ನು ಅರ್ಥಮಾಡಿಕೊಳ್ಳುವುದು, ಅವರು ತಾಳ್ಮೆ ತೋರಿಸಲು ಹೇಗೆ ಸಹಾಯಮಾಡುವುದು?
• ದಯೆಗೂ ಶಿಕ್ಷೆಗೂ ಯಾವ ಸಂಬಂಧವಿದೆ?
• ಹೆತ್ತವರ ಮತ್ತು ಮಕ್ಕಳ ನಡುವೆ ಮುಚ್ಚುಮರೆಯಿಲ್ಲದ ಸಂವಾದವು ಏಕೆ ಅತ್ಯಾವಶ್ಯಕ?
[ಅಧ್ಯಯನ ಪ್ರಶ್ನೆಗಳು]
1. ಒಂದು ಮಗು ಹುಟ್ಟಿದಾಗ ಹೆತ್ತವರಲ್ಲಿ ಯಾವ್ಯಾವ ಭಾವನೆಗಳೇಳುತ್ತವೆ?
2. ಹೆತ್ತವರಿಗೆ ಯಾವ ಸವಾಲುಗಳನ್ನು ಎದುರಿಸಲಿಕ್ಕಿರುತ್ತದೆ?
3. ಹೆತ್ತವರು ಸಂತೋಷವುಳ್ಳ ಮಕ್ಕಳನ್ನು ಹೇಗೆ ಬೆಳೆಸಬಹುದು?
4. ಹೆತ್ತವರಿಗೆ ತಾಳ್ಮೆಯಿರಬೇಕು ಏಕೆ?
5. ಹೆತ್ತವರು ತಾಳ್ಮೆಯಿಂದಿರುವಂತೆ ಯಾವುದು ಸಹಾಯಮಾಡಬಲ್ಲದು?
6. ತಾಳ್ಮೆತೋರಿಸುವ ಹೆತ್ತವರು ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ವಿಧಿಸದವರು ಆಗಿರುವುದಿಲ್ಲ ಏಕೆ?
7. ದಯಾಪರ ಹೆತ್ತವರು ತಮ್ಮ ಮಕ್ಕಳಿಗೆ ಏಕೆ ಶಿಕ್ಷೆಕೊಡುವರು, ಮತ್ತು ಇಂಥ ಶಿಕ್ಷೆಯಲ್ಲಿ ಏನೇನು ಒಳಗೂಡಿದೆ?
8. ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷೆಕೊಡಲು ತಪ್ಪುವಾಗ ಸಾಮಾನ್ಯವಾಗಿ ಏನು ಫಲಿಸುತ್ತದೆ?
9. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಏನು ಕಲಿಸುತ್ತಾರೆ, ಮತ್ತು ಈ ಆವಶ್ಯಕತೆಗಳನ್ನು ಹೇಗೆ ದೃಷ್ಟಿಸಬೇಕು?
10, 11. ಕುಟುಂಬ ನಿಯಮಗಳನ್ನು ಮಾಡುವಾಗ ಹೆತ್ತವರು ತಮ್ಮ ಮಕ್ಕಳ ವಿನಂತಿಗಳನ್ನು ಏಕೆ ಮನಸ್ಸಿನಲ್ಲಿಡಬಹುದು?
12. ಮಕ್ಕಳಲ್ಲಿ ಸುರಕ್ಷಿತ ಭಾವನೆ ಮೂಡಿಸಲು ಯಾವುದು ಸಹಾಯಮಾಡುವುದು?
13, 14. ಹೆತ್ತವರು ತಮ್ಮ ಮಕ್ಕಳಿಗೆ ತರಬೇತಿಕೊಡುವಾಗ ಯೆಹೋವನನ್ನು ಹೇಗೆ ಅನುಕರಿಸಬಲ್ಲರು?
15, 16. ಮಕ್ಕಳು ಮುಚ್ಚುಮರೆಯಿಲ್ಲದೆ ಮಾತಾಡುವಂತೆ ಹೆತ್ತವರು ಹೇಗೆ ಪ್ರೋತ್ಸಾಹಿಸಬಹುದು, ಮತ್ತು ಈ ವಿಷಯದಲ್ಲಿ ಯಾವ ವಿಧಾನವು ಕಾರ್ಯಸಾಧಕವೆಂದು ಕ್ರೈಸ್ತ ಹೆತ್ತವರು ಕಂಡುಕೊಂಡಿದ್ದಾರೆ?
17. ಹೆತ್ತವರಿಗೆ ಯಾವ ಖಾತ್ರಿ ಇರಬಲ್ಲದು?
[ಪುಟ 24ರಲ್ಲಿರುವ ಚಿತ್ರಗಳು]
ಹೆತ್ತವರೇ, ನೀವು ಮಕ್ಕಳಾಗಿದ್ದಾಗ ಹೇಗಿದ್ದಿರೆಂದು ನಿಮಗೆ ನೆನಪಿದೆಯೋ?
[ಪುಟ 25ರಲ್ಲಿರುವ ಚಿತ್ರ]
ನಿಮ್ಮ ಮಕ್ಕಳು ಮುಚ್ಚುಮರೆಯಿಲ್ಲದೆ, ಮುಕ್ತವಾಗಿ ಸಂವಾದಿಸುವಂತೆ ಉತ್ತೇಜಿಸುತ್ತೀರೋ?