ಅವಿಶ್ವಾಸಿ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಿರಿ
“ನಿನ್ನ ಸಂಬಂಧಿಕರ ಬಳಿಗೆ ಹೋಗು ಮತ್ತು ಯೆಹೋವನು ನಿನಗೆ ಮಾಡಿದ್ದೆಲ್ಲವನ್ನು ಹಾಗೂ ಆತನು ನಿನಗೆ ತೋರಿಸಿದ ಕರುಣೆಯನ್ನು ಅವರಿಗೆ ತಿಳಿಸು” ಎಂದನು ಯೇಸು ಕ್ರಿಸ್ತನು ಒಬ್ಬ ವ್ಯಕ್ತಿಗೆ. ಪ್ರಾಯಶಃ ಯೇಸು ಗಲಿಲಾಯ ಸಮುದ್ರದ ಆಗ್ನೇಯದಲ್ಲಿದ್ದ ಗದರ ಎಂಬ ಸ್ಥಳದಲ್ಲಿದ್ದಾಗ ತನ್ನ ಹಿಂಬಾಲಕನಾಗಲು ಬಯಸಿದ ಆ ವ್ಯಕ್ತಿಗೆ ಹಾಗಂದನು. ಯೇಸುವಿನ ಆ ಮಾತುಗಳು ಮಾನವರಲ್ಲಿ ಸಹಜವಾಗಿ ಬಂದಿರುವ ಒಂದು ಸ್ವಭಾವವನ್ನು ಅವನು ಅರ್ಥಮಾಡಿಕೊಂಡಿದ್ದನೆಂದು ತೋರಿಸುತ್ತವೆ. ಅದು ಯಾವ ಸ್ವಭಾವ? ಯಾವುದಾದರೂ ಆಸಕ್ತಿಯ ಅಥವಾ ಪ್ರಾಮುಖ್ಯ ವಿಷಯವನ್ನು ತಿಳಿದೊಡನೆ ಸಂಬಂಧಿಕರೊಂದಿಗೆ, ಆಪ್ತರೊಂದಿಗೆ ಹಂಚಿಕೊಳ್ಳಲು ತವಕಿಸುವುದೇ.—ಮಾರ್ಕ 5:19.
ಆ ಸ್ವಭಾವ ಇಂದು ನಮ್ಮಲ್ಲಿ ಸಹ ಇದೆ. ಕೆಲವು ಸಂಸ್ಕೃತಿಗಳಲ್ಲಿ ಸ್ವಲ್ಪ ಹೆಚ್ಚಿದ್ದರೆ ಇನ್ನು ಕೆಲವು ಸಂಸ್ಕೃತಿಗಳಲ್ಲಿ ಕಡಿಮೆಯಿರಬಹುದು ಅಷ್ಟೆ. ಹಾಗಾಗಿ ಒಬ್ಬ ವ್ಯಕ್ತಿ ಸತ್ಯ ದೇವರಾದ ಯೆಹೋವನ ಆರಾಧಕನಾದ ಕೂಡಲೆ ತನ್ನ ಹೊಸ ನಂಬಿಕೆಗಳ ಕುರಿತು ಕುಟುಂಬದವರಿಗೆ ತಿಳಿಸಲು ಹಾತೊರೆಯುತ್ತಾನೆ. ಆದರೆ ಪ್ರಶ್ನೆಯೇನೆಂದರೆ ಅವನು ಅದನ್ನು ಹೇಗೆ ತಿಳಿಸಬೇಕು? ಇತರ ಧರ್ಮವನ್ನು ಪಾಲಿಸುವ ಅಥವಾ ದೇವರನ್ನೇ ನಂಬದ ತನ್ನ ಸಂಬಂಧಿಕನ ಹೃದಯವನ್ನು ಸ್ಪರ್ಶಿಸಲು ಏನು ಮಾಡಬೇಕು? ಈ ಕುರಿತು ಪ್ರಯೋಜನದಾಯಕ ಮತ್ತು ಪ್ರಾಯೋಗಿಕ ಸಲಹೆಗಳು ಬೈಬಲಿನಲ್ಲಿವೆ.
“ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ”
ಒಂದನೇ ಶತಮಾನದಲ್ಲಿ ಯೇಸುವನ್ನು ಮೆಸ್ಸೀಯನೆಂದು ಗುರುತಿಸಿದ ಮೊದಲಿಗರಲ್ಲಿ ಒಬ್ಬನು ಅಂದ್ರೆಯ. ಅದನ್ನು ಕೂಡಲೆ ಅವನು ಯಾರಿಗೆ ತಿಳಿಸಿದನು ಗೊತ್ತೆ? ‘ಅಂದ್ರೆಯನು ಮೊದಲಾಗಿ ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವನಿಗೆ, “ನಮಗೆ ಮೆಸ್ಸೀಯನು (ಭಾಷಾಂತರಿಸಿದಾಗ ಇದರ ಅರ್ಥ ಕ್ರಿಸ್ತ ಎಂದಾಗಿದೆ) ಸಿಕ್ಕಿದ್ದಾನೆ” ಎಂದು ಹೇಳಿದನು.’ ಅನಂತರ ಅಂದ್ರೆಯನು ಸೀಮೋನನಾದ ಪೇತ್ರನನ್ನು ಯೇಸುವಿನ ಬಳಿಗೆ ಕರೆದುಕೊಂಡು ಹೋದನು. ಹೀಗೆ ಪೇತ್ರನಿಗೆ ಯೇಸುವಿನ ಶಿಷ್ಯನಾಗುವ ಅವಕಾಶವನ್ನು ಮಾಡಿಕೊಟ್ಟನು.—ಯೋಹಾ. 1:35-42.
ಸುಮಾರು ಆರು ವರ್ಷಗಳ ನಂತರ ಪೇತ್ರನು ಯೊಪ್ಪದಲ್ಲಿದ್ದಾಗ ಏನಾಯಿತೆಂದು ಗಮನಿಸಿ. ಆಗ ಅವನಿಗೆ ಉತ್ತರದ ಕೈಸರೈಯದಲ್ಲಿರುವ ಸೇನಾಧಿಕಾರಿ ಕೊರ್ನೇಲ್ಯನ ಮನೆಗೆ ಹೋಗುವಂತೆ ಹೇಳಲಾಯಿತು. ಪೇತ್ರನು ಹೋದಾಗ ಅಲ್ಲಿ ಯಾರೆಲ್ಲ ಕೂಡಿದ್ದರು? “ಕೊರ್ನೇಲ್ಯನು [ಪೇತ್ರ ಮತ್ತು ಅವನೊಂದಿಗೆ ಪ್ರಯಾಣಿಸುತ್ತಿದ್ದವರನ್ನು] ಎದುರುನೋಡುತ್ತಾ ಇದ್ದನು ಮತ್ತು ತನ್ನ ಬಂಧುಬಳಗದವರನ್ನೂ ಆಪ್ತ ಸ್ನೇಹಿತರನ್ನೂ ಕರೆಸಿಕೊಂಡಿದ್ದನು.” ಹೀಗೆ ಕೊರ್ನೇಲ್ಯನು ತನ್ನ ಸಂಬಂಧಿಕರಿಗೆ ಪೇತ್ರನ ಮಾತುಗಳನ್ನು ಕೇಳಿಸಿಕೊಳ್ಳಲು ಹಾಗೂ ಅದಕ್ಕನುಸಾರ ನಿರ್ಣಯವನ್ನು ಮಾಡಲು ಅವಕಾಶ ಮಾಡಿಕೊಟ್ಟನು.—ಅ. ಕಾ. 10:22-33.
ಅಂದ್ರೆಯ ಹಾಗೂ ಕೊರ್ನೇಲ್ಯರಿಂದ ನಾವೇನು ಕಲಿಯಬಹುದು?
ಅಂದ್ರೆಯನಾಗಲಿ ಕೊರ್ನೇಲ್ಯನಾಗಲಿ, ‘ಸಂಬಂಧಿಕರಿಗೆ ಗೊತ್ತಾಗುವಾಗ ಗೊತ್ತಾಗಲಿ’ ಎಂದು ಸುಮ್ಮನೆ ಇದ್ದುಬಿಡಲಿಲ್ಲ. ಅಂದ್ರೆಯನೇ ಸ್ವತಃ ಪೇತ್ರನನ್ನು ಯೇಸುವಿನ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದನು. ಕೊರ್ನೇಲ್ಯನು ಕೂಡ ತನ್ನ ಸಂಬಂಧಿಕರು ಪೇತ್ರನ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಏರ್ಪಾಡುಗಳನ್ನು ಮಾಡಿದನು. ಆದರೆ ಅದೇ ಸಮಯದಲ್ಲಿ ಅವರಿಬ್ಬರೂ ತಮ್ಮ ಸಂಬಂಧಿಕರನ್ನು ಒತ್ತಾಯಿಸಲಿಲ್ಲ ಅಥವಾ ಅವರನ್ನು ಹೇಗಾದರೂ ಕ್ರೈಸ್ತರನ್ನಾಗಿ ಮಾಡಲು ಉಪಾಯದಿಂದ ಯೋಜನೆಗಳನ್ನು ಮಾಡಲಿಲ್ಲ. ಇವರಿಂದ ನಮಗಿರುವ ಪಾಠವೇನೆಂದು ತಿಳಿಯಿತೇ? ನಾವು ಸಹ ನಮ್ಮ ಸಂಬಂಧಿಕರೊಂದಿಗೆ ಸತ್ಯದ ತುಣುಕುಗಳನ್ನು ಹಂಚಿಕೊಳ್ಳಬಹುದು ಅಥವಾ ಅವರು ಬೈಬಲ್ ಸತ್ಯಗಳನ್ನು ಕೇಳಿಸಿಕೊಳ್ಳುವಂತೆ ಹಾಗೂ ಅವರಿಗೆ ನಮ್ಮ ಸಹೋದರ ಸಹೋದರಿಯರ ಪರಿಚಯವಾಗುವಂತೆ ಸಂದರ್ಭಗಳನ್ನು ಸೃಷ್ಟಿಸಬಹುದು. ಹಾಗಿದ್ದರೂ ಆಯ್ಕೆ ಮಾಡುವ ಹಕ್ಕು ಅವರಿಗಿದೆ ಎಂಬುದನ್ನು ನಾವು ಮರೆಯಬಾರದು. ಅವರನ್ನು ಒತ್ತಾಯಿಸಿ ಕಿರಿಕಿರಿ ಮಾಡಬಾರದು. ಹಾಗಾದರೆ ನಾವು ನಮ್ಮ ಸಂಬಂಧಿಕರಿಗೆ ನೆರವಾಗುವುದು ಹೇಗೆ? ಜರ್ಮನಿಯ ಯೂರ್ಗನ್ ಮತ್ತು ಅವರ ಪತ್ನಿ ಪೆಟ್ರಾರ ಅನುಭವ ನಮಗೆ ಸಹಾಯಮಾಡುತ್ತದೆ.
ಪೆಟ್ರಾ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಅಧ್ಯಯನ ಮಾಡಿ ದೀಕ್ಷಾಸ್ನಾನ ಪಡೆದುಕೊಂಡರು. ಸೇನೆಯಲ್ಲಿ ಅಧಿಕಾರಿಯಾಗಿದ್ದ ಆಕೆಯ ಪತಿ ಯೂರ್ಗನ್ರಿಗೆ ಮೊದಮೊದಲು ಇದು ಇಷ್ಟವಾಗಲಿಲ್ಲ. ಆದರೆ ಸಾಕ್ಷಿಗಳು ಬೈಬಲಿನಿಂದ ಸತ್ಯವನ್ನೇ ಕಲಿಸುತ್ತಿದ್ದಾರೆಂದು ಅವರಿಗೆ ಸಮಯಾನಂತರ ತಿಳಿಯಿತು. ಹಾಗಾಗಿ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. ಈಗ ಸ್ಥಳೀಯ ಸಭೆಯಲ್ಲಿ ಹಿರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕ್ಷಿಯಲ್ಲದ ಕುಟುಂಬ ಸದಸ್ಯರೊಬ್ಬರ ಹೃದಯ ಸ್ಪರ್ಶಿಸಲು ಏನು ಮಾಡಬೇಕೆಂದು ಅವರು ಹೇಳುವುದನ್ನು ಕೇಳಿ:
“ಆಧ್ಯಾತ್ಮಿಕ ವಿಷಯಗಳನ್ನೇ ಯಾವಾಗಲೂ ಹೇಳುತ್ತಾ ಅವುಗಳನ್ನು ಅವರ ಮೇಲೆ ಹೇರಲು ಪ್ರಯತ್ನಿಸಬಾರದು. ಹಾಗೆ ಮಾಡಿದರೆ ಅವರು ಬೈಬಲ್ ಕಲಿಯಲಿಕ್ಕೆ ಯಾವತ್ತೂ ಮನಸ್ಸು ಮಾಡಲಿಕ್ಕಿಲ್ಲ. ಆದ್ದರಿಂದ ಆಗಾಗ ಸ್ವಲ್ಪ ಸ್ವಲ್ಪ ವಿಷಯಗಳನ್ನು ಜಾಣ್ಮೆಯಿಂದ ಹೇಳುವುದು ಒಳ್ಳೇದು. ನಮ್ಮ ಸಂಬಂಧಿಕರಿಗೆ ಅವರ ಪ್ರಾಯದ, ಅವರಿಗಿರುವಂಥದ್ದೇ ಅಭಿರುಚಿಗಳಿರುವ ಸಹೋದರ ಸಹೋದರಿಯರ ಪರಿಚಯವಾಗುವಂತೆ ನೋಡಿಕೊಳ್ಳುವುದು ಸಹ ಉತ್ತಮ. ಆಗ ನಾವು ಅವರಿಗೆ ಸಹಾಯಮಾಡಲು ಸುಲಭವಾಗುತ್ತದೆ.”
ಅಪೊಸ್ತಲ ಪೇತ್ರನು ಹಾಗೂ ಕೊರ್ನೇಲ್ಯನ ಸಂಬಂಧಿಕರು ಬೇಗನೆ ಒಳ್ಳೇ ಪ್ರತಿಕ್ರಿಯೆ ತೋರಿಸಿದರು. ಆದರೆ ಒಂದನೇ ಶತಮಾನದಲ್ಲಿ ಇನ್ನಿತರರು ಕ್ರಿಯೆಗೈಯಲು ಹೆಚ್ಚು ಸಮಯ ತಕ್ಕೊಂಡರು.
ಯೇಸುವಿನ ತಮ್ಮಂದಿರು?
ಯೇಸು ಜನರಿಗೆ ಸುವಾರ್ತೆ ಸಾರುತ್ತಿದ್ದ ಸಮಯಾವಧಿಯಲ್ಲಿ ಅವನ ಸಂಬಂಧಿಕರಲ್ಲಿ ಹಲವರು ಅವನಲ್ಲಿ ನಂಬಿಕೆಯಿಟ್ಟರು. ಉದಾಹರಣೆಗೆ, ಸಲೋಮೆಯು ಯೇಸುವಿನ ತಾಯಿಯ ಸಹೋದರಿ ಆಗಿದ್ದಿರಬೇಕು. ಆಕೆಯ ಮಕ್ಕಳು ಅಪೊಸ್ತಲರಾದ ಯಾಕೋಬ ಮತ್ತು ಯೋಹಾನ. “ತಮ್ಮ ಸ್ವತ್ತುಗಳಿಂದ ಅವರಿಗೆ [ಯೇಸುವಿಗೂ ಅಪೊಸ್ತಲರಿಗೂ] ಉಪಚಾರಮಾಡುತ್ತಿದ್ದ” ಅನೇಕ ಸ್ತ್ರೀಯರಲ್ಲಿ ಸಲೋಮೆಯೂ ಒಬ್ಬಳಾಗಿದ್ದಿರಬಹುದು.—ಲೂಕ 8:1-3.
ಆದರೆ ಯೇಸುವಿನ ಕುಟುಂಬದ ಇನ್ನಿತರರು ಕೂಡಲೆ ಅವನಲ್ಲಿ ನಂಬಿಕೆಯಿಡಲಿಲ್ಲ. ಇದು ನಮಗೆ ಹೇಗೆ ಗೊತ್ತಾಗುತ್ತದೆ? ಯೇಸುವಿನ ದೀಕ್ಷಾಸ್ನಾನವಾಗಿ ಒಂದು ವರ್ಷದ ನಂತರ ಜನರು ಯೇಸುವಿನ ಮಾತುಗಳನ್ನು ಆಲಿಸಲಿಕ್ಕಾಗಿ ಒಂದು ಮನೆಯಲ್ಲಿ ಕೂಡಿಬಂದಿದ್ದರು. ಆದರೆ “ಅವನ ಸಂಬಂಧಿಕರು ಇದನ್ನು ಕೇಳಿಸಿಕೊಂಡಾಗ, ‘ಇವನಿಗೆ ಹುಚ್ಚುಹಿಡಿದಿದೆ’ ಎಂದು ಹೇಳುತ್ತಾ ಅವನನ್ನು ಹಿಡಿದುತರಲು ಹೋದರು.” ಸ್ವಲ್ಪ ಸಮಯದ ನಂತರ ಇನ್ನೊಂದು ಸಂದರ್ಭದಲ್ಲಿ ಯೇಸುವಿನ ಮಲತಮ್ಮಂದಿರು ಅವನ ಪ್ರಯಾಣದ ಕುರಿತು ಮಾತಾಡುತ್ತಿದ್ದಾಗ ಯೇಸು ಅವರಿಗೆ ನೇರವಾದ ಉತ್ತರ ಕೊಡಲಿಲ್ಲ. ಕಾರಣ? “ಅವನ ತಮ್ಮಂದಿರು ಅವನಲ್ಲಿ ನಂಬಿಕೆಯಿಟ್ಟಿರಲಿಲ್ಲ.”—ಮಾರ್ಕ 3:21; ಯೋಹಾ. 7:5.
ಯೇಸು ತನ್ನ ಸಂಬಂಧಿಕರೊಂದಿಗೆ ವ್ಯವಹರಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು? ಅವನ ಸಂಬಂಧಿಕರು ಅವನಿಗೆ ಹುಚ್ಚು ಹಿಡಿದಿದೆ ಎಂದಾಗ ಅವನು ಸಿಟ್ಟುಗೊಳ್ಳಲಿಲ್ಲ. ಮಾತ್ರವಲ್ಲ ಅವನು ಸತ್ತು ಪುನರುತ್ಥಾನಗೊಂಡ ನಂತರ ತನ್ನ ಸಂಬಂಧಿಕರಿಗೆ ಹೆಚ್ಚು ಉತ್ತೇಜನ ಸಿಗಬೇಕೆಂಬ ಕಾರಣದಿಂದ ತನ್ನ ಮಲತಮ್ಮನಾದ ಯಾಕೋಬನಿಗೆ ಕಾಣಿಸಿಕೊಂಡನು. ಇದರಿಂದ ಯಾಕೋಬನಿಗೆ ಮಾತ್ರವಲ್ಲ ಯೇಸುವಿನ ಇತರ ಮಲತಮ್ಮಂದಿರಿಗೂ ಯೇಸು ನಿಜವಾಗಿಯೂ ಮೆಸ್ಸೀಯನೆಂಬುದು ಮನದಟ್ಟಾಯಿತು. ಹಾಗಾಗಿ ಅವರು ಅಪೊಸ್ತಲರೊಂದಿಗೆ ಹಾಗೂ ಇತರರೊಂದಿಗೆ ಯೆರೂಸಲೇಮಿನಲ್ಲಿ ಒಂದು ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ದರು. ಅಲ್ಲಿ ಅವರು ಪವಿತ್ರಾತ್ಮ ಪಡೆದುಕೊಂಡರು ಎಂಬುದರಲ್ಲಿ ಸಂದೇಹವಿಲ್ಲ. ತದನಂತರ ಯಾಕೋಬನೂ ಯೇಸುವಿನ ಇನ್ನೊಬ್ಬ ಮಲತಮ್ಮನಾದ ಯೂದನೂ ಅನೇಕ ಸೇವಾಸುಯೋಗಗಳಲ್ಲಿ ಆನಂದಿಸಿದರು.—ಅ. ಕಾ. 1:12-14; 2:1-4; 1 ಕೊರಿಂ. 15:7.
ಕೆಲವರಿಗೆ ಹೆಚ್ಚು ಸಮಯ ಬೇಕು
ಇಂದು ಸಹ ಕೆಲವರಿಗೆ ಜೀವದ ಮಾರ್ಗಕ್ಕೆ ಬರಲು ಹೆಚ್ಚು ಸಮಯ ಬೇಕಾಗುತ್ತದೆ. ರೋಮನ್ ಕ್ಯಾಥೊಲಿಕ್ ಧರ್ಮದ ಸಕ್ರಿಯ ಸದಸ್ಯೆಯಾಗಿದ್ದ ರಾಸ್ವೀಟಾ ಎಂಬಾಕೆಯ ಅನುಭವ ಇದಕ್ಕೊಂದು ನಿದರ್ಶನ. ಆಕೆಯ ಗಂಡ 1978ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದರು. ತನ್ನ ಧರ್ಮವನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದ ರಾಸ್ವೀಟಾ ಆರಂಭದಲ್ಲಿ ಗಂಡನನ್ನು ವಿರೋಧಿಸಿದರು. ಆದರೆ ವರ್ಷಗಳು ಸಂದಂತೆ ವಿರೋಧ ಕಡಿಮೆಯಾಯಿತು ಮಾತ್ರವಲ್ಲ ಯೆಹೋವನ ಸಾಕ್ಷಿಗಳು ಕಲಿಸುವುದು ಸತ್ಯವೆಂದು ಆಕೆಗೆ ಅರಿವಾಯಿತು. 2003ರಲ್ಲಿ ಆಕೆ ದೀಕ್ಷಾಸ್ನಾನ ಪಡೆದರು. ಇಷ್ಟು ದೊಡ್ಡ ಬದಲಾವಣೆ ಹೇಗಾಯಿತು? ಆಕೆ ವಿರೋಧಿಸುತ್ತಿದ್ದಾಗ ಆಕೆಯ ಗಂಡ ಸಿಟ್ಟುಗೊಳ್ಳಲಿಲ್ಲ. ಆಕೆಯ ಅಭಿಪ್ರಾಯ ಬದಲಾಗಲು ಅವಕಾಶಗಳನ್ನು ಕೊಟ್ಟರು. ಈಗ ರಾಸ್ವೀಟಾ ಏನನ್ನುತ್ತಾರೆ? “ಒಳ್ಳೇ ಫಲಿತಾಂಶ ಸಿಗಬೇಕಾದರೆ ತುಂಬ ತುಂಬ ತಾಳ್ಮೆ ತೋರಿಸಬೇಕು. ತಾಳ್ಮೆ ತೋರಿಸುತ್ತಲೇ ಇರಬೇಕು.”
ಮೋನೀಕಾ ಎಂಬಾಕೆ 1974ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. ಆಕೆಯ ಇಬ್ಬರು ಗಂಡುಮಕ್ಕಳು ಸುಮಾರು ಹತ್ತು ವರ್ಷಗಳ ನಂತರ ಯೆಹೋವನ ಸಾಕ್ಷಿಗಳಾದರು. ಆಕೆಯ ಪತಿ ಹಾನ್ಸ್ ಅವರನ್ನೆಲ್ಲ ವಿರೋಧಿಸಲಿಲ್ಲವಾದರೂ ಸತ್ಯ ಸ್ವೀಕರಿಸಿ ದೀಕ್ಷಾಸ್ನಾನ ಪಡೆದುಕೊಂಡದ್ದು ಅನೇಕ ವರ್ಷಗಳ ನಂತರ 2006ರಲ್ಲಿ. ಕುಟುಂಬದವರು ತಮ್ಮ ಅನುಭವದಿಂದ ಈಗ ಏನು ಹೇಳುತ್ತಾರೆ? “ಯೆಹೋವನ ಕಡೆಗಿರುವ ನಿಷ್ಠೆಯನ್ನು ಬಿಟ್ಟುಕೊಡಬೇಡಿ. ನಂಬಿಕೆಯ ವಿಷಯ ಬರುವಾಗ ಯಾವತ್ತೂ ರಾಜಿಮಾಡಿಕೊಳ್ಳಬೇಡಿ.” ಅದೇ ಸಮಯದಲ್ಲಿ ಪತ್ನಿ ಹಾಗೂ ಮಕ್ಕಳು ಹಾನ್ಸ್ರಿಗೆ ತಾವು ಅವರನ್ನು ಪ್ರೀತಿಸುತ್ತೇವೆಂದು ಯಾವಾಗಲೂ ನಡೆನುಡಿಯಲ್ಲಿ ತೋರಿಸಿಕೊಟ್ಟರು. ಮಾತ್ರವಲ್ಲ ಹಾನ್ಸ್ರವರು ಒಂದಲ್ಲ ಒಂದು ದಿನ ಸತ್ಯಕ್ಕೆ ಬರುತ್ತಾರೆ ಎಂಬ ನಂಬಿಕೆಯನ್ನು ಅವರು ಕಳಕೊಳ್ಳಲಿಲ್ಲ.
ಸತ್ಯದ ನೀರಿನಿಂದ ಚೈತನ್ಯ
ಒಮ್ಮೆ ಯೇಸು ಸತ್ಯದ ಸಂದೇಶವನ್ನು ನಿತ್ಯಜೀವ ಕೊಡುವ ನೀರಿಗೆ ಹೋಲಿಸಿದನು. (ಯೋಹಾ. 4:13, 14) ನಮ್ಮ ಸಂಬಂಧಿಕರು ಆ ತಂಪಾದ ಶುದ್ಧ ನೀರನ್ನು ಕುಡಿದು ಚೈತನ್ಯ ಪಡೆಯಬೇಕೆಂದು ನಾವು ಬಯಸುತ್ತೇವೆ. ಆದರೆ ಇರುವ ನೀರನ್ನೆಲ್ಲ ಒಮ್ಮೆಗೆ ಜೋರಾಗಿ ಸುರಿದುಬಿಡುವಲ್ಲಿ ಹೇಗಾಗುತ್ತದೆ? ಉಸಿರುಗಟ್ಟುತ್ತದೆ ಅಲ್ಲವೇ? ಸತ್ಯದ ನೀರು ಅವರಿಗೆ ಚೈತನ್ಯ ಕೊಡುತ್ತದಾ ಅಥವಾ ಉಸಿರುಗಟ್ಟುವಂತೆ ಮಾಡುತ್ತದಾ ಎಂಬುದು ನಾವು ಸತ್ಯವನ್ನು ಅವರಿಗೆ ಹೇಗೆ ಹೇಳುತ್ತೇವೆ ಎನ್ನುವುದರ ಮೇಲೆ ಹೊಂದಿಕೊಂಡಿದೆ. “ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ” ಮತ್ತು “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ [ಒಳನೋಟವನ್ನೂ, NW] ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ ಹೆಚ್ಚಿಸುವದು” ಎನ್ನುತ್ತದೆ ಬೈಬಲ್. ಈ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?—ಜ್ಞಾನೋ. 15:28, ಪವಿತ್ರ ಗ್ರಂಥ ಭಾಷಾಂತರ; 16:23.
ಉದಾಹರಣೆಗೆ, ತನ್ನ ಬೈಬಲ್ ಆಧರಿತ ನಂಬಿಕೆಗಳನ್ನು ಪತಿಗೆ ಹೇಳಲು ಬಯಸುವ ಹೆಂಡತಿಯು ತಾನು ಮಾತಾಡುವ ಮುಂಚೆ ‘ಯೋಚಿಸಬೇಕು.’ ಆಗ ಆಕೆ ಯಾವ ಪದಗಳನ್ನು ಉಪಯೋಗಿಸಬೇಕೆಂದು ಜಾಗ್ರತೆಯಿಂದ ಆರಿಸಿಕೊಳ್ಳುವಳು, ಆತುರದಿಂದ ಏನನ್ನೋ ಹೇಳಿಬಿಡುವುದಿಲ್ಲ. ಆಕೆ ತಾನೇ ನೀತಿವಂತಳು ಅಥವಾ ತಾನು ಶ್ರೇಷ್ಠಳೆಂಬಂತೆ ಮಾತಾಡಬಾರದು. ಆಕೆ ಚೆನ್ನಾಗಿ ಯೋಚಿಸಿ ಆಡುವ ಮಾತುಗಳು ಪತಿಗೆ ಚೈತನ್ಯ ತರುತ್ತವೆ ಹಾಗೂ ಅವರಿಬ್ಬರ ಮಧ್ಯೆ ಶಾಂತಿಯನ್ನು ವರ್ಧಿಸುತ್ತವೆ. ‘ಯಾವ ಸಮಯದಲ್ಲಿ ನನ್ನ ಯಜಮಾನರು ಆರಾಮವಾಗಿ, ಖುಷಿ ಖುಷಿಯಾಗಿ ಇರುತ್ತಾರೆ? ಯಾವ ವಿಷಯಗಳ ಬಗ್ಗೆ ಮಾತಾಡಲು, ಓದಲು ಅವರು ಹೆಚ್ಚು ಇಷ್ಟಪಡ್ತಾರೆ? ವಿಜ್ಞಾನ? ರಾಜಕೀಯ? ಅಥವಾ ಕ್ರೀಡೆ? ಅವರ ಭಾವನೆಗಳಿಗೆ ನೋವಾಗದಂತೆ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆಕೊಡುತ್ತಾ ಬೈಬಲಿನಲ್ಲಿ ಅವರಿಗೆ ಹೇಗೆ ಆಸಕ್ತಿ ಹುಟ್ಟಿಸಬಹುದು?’ ಈ ರೀತಿ ಯೋಚಿಸುವಲ್ಲಿ ಒಳನೋಟದಿಂದ ಮಾತಾಡಲು ಹಾಗೂ ಕ್ರಿಯೆಗೈಯಲು ಆಕೆಗೆ ಸಾಧ್ಯವಾಗುವುದು.
ಸಾಕ್ಷಿಗಳಲ್ಲದ ನಮ್ಮ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಲು ನಮ್ಮ ನಂಬಿಕೆಯನ್ನು ಆಗಾಗ ಸ್ವಲ್ಪ ಸ್ವಲ್ಪ ವಿವರಿಸಿದರಷ್ಟೇ ಸಾಲದು. ನಮ್ಮ ಮಾತುಗಳೊಟ್ಟಿಗೆ ಒಳ್ಳೇ ನಡತೆಯೂ ತೋರಿಬರಬೇಕು.
ನುಡಿಗೆ ತಕ್ಕ ನಡೆ
“ಪ್ರತಿದಿನ ಬೈಬಲ್ ತತ್ವಗಳಿಗನುಸಾರ ನಡೆಯಿರಿ. ಆಗ ಕುಟುಂಬ ಸದಸ್ಯನು ಅದನ್ನು ಗಮನಿಸಿ ಆ ಕುರಿತು ಆಲೋಚಿಸುವನು. ಅದನ್ನು ಅವನು ಬಾಯಿಬಿಟ್ಟು ಹೇಳಲಿಕ್ಕಿಲ್ಲ ಆದರೆ ಅದು ಅವನ ಮೇಲೆ ತುಂಬ ಪ್ರಭಾವ ಬೀರುತ್ತದೆ” ಎನ್ನುತ್ತಾರೆ ಈ ಮೊದಲು ತಿಳಿಸಲಾಗಿದ್ದ ಯೂರ್ಗನ್. ಸಹೋದರಿ ಮೋನೀಕಾ ದೀಕ್ಷಾಸ್ನಾನ ಹೊಂದಿ 30ಕ್ಕೂ ಹೆಚ್ಚು ವರ್ಷಗಳ ನಂತರ ಸತ್ಯಕ್ಕೆ ಬಂದ ಅವರ ಪತಿ ಹಾನ್ಸ್ ಇದನ್ನು ಒಪ್ಪಿಕೊಳ್ಳುತ್ತಾರೆ: “ನಮ್ಮ ಕ್ರೈಸ್ತ ನಡತೆ ತುಂಬ ಪ್ರಾಮುಖ್ಯ. ಏಕೆಂದರೆ ಇದರಿಂದ, ಸತ್ಯವು ನಮ್ಮ ಮೇಲೆ ಒಳ್ಳೇ ಪರಿಣಾಮ ಬೀರುತ್ತಿರುವುದನ್ನು ನಮ್ಮ ಕುಟುಂಬ ಸದಸ್ಯನು ಕಣ್ಣಾರೆ ಕಾಣುತ್ತಾನೆ.” ಹೌದು, ನಾವು ಇತರರಿಗಿಂತ ಭಿನ್ನರಾಗಿ ಕಾಣುವುದು ಸತ್ಯವು ನಮ್ಮನ್ನು ಕೆಟ್ಟವರನ್ನಾಗಿ ಅಲ್ಲ, ಒಳ್ಳೆಯವರನ್ನಾಗಿ ಮಾಡಿರುವುದರಿಂದಲೇ ಎಂಬುದನ್ನು ಕುಟುಂಬ ಸದಸ್ಯನು ನೋಡಲು ಸಾಧ್ಯವಾಗಬೇಕು.
ಅವಿಶ್ವಾಸಿ ಗಂಡಂದಿರಿರುವ ಪತ್ನಿಯರಿಗೆ ಅಪೊಸ್ತಲ ಪೇತ್ರನು ಈ ಅಮೂಲ್ಯ ಸಲಹೆ ಕೊಟ್ಟನು: “ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು. ಜಡೆಹೆಣೆದುಕೊಳ್ಳುವುದು, ಚಿನ್ನದ ಆಭರಣಗಳನ್ನು ಹಾಕಿಕೊಳ್ಳುವುದು ಅಥವಾ ಉತ್ತಮ ವಸ್ತ್ರಗಳನ್ನು ಧರಿಸಿಕೊಳ್ಳುವುದು ಈ ಮುಂತಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರದೆ, ದೇವರ ದೃಷ್ಟಿಯಲ್ಲಿ ಅತಿ ಬೆಲೆಯುಳ್ಳ ಶಾಂತ ಮತ್ತು ಸೌಮ್ಯಭಾವವೆಂಬ ನಶಿಸಿಹೋಗದ ಉಡುಗೆಯಿಂದ ಅಲಂಕೃತವಾದ ಹೃದಯದ ಗುಪ್ತ ವ್ಯಕ್ತಿಯು ನಿಮ್ಮ ಅಲಂಕಾರವಾಗಿರಲಿ.”—1 ಪೇತ್ರ 3:1-4.
ಪೇತ್ರನು ಈ ವಚನಗಳಲ್ಲಿ ಹೇಳಿದಂತೆ, ಪತ್ನಿಯ ಸನ್ನಡತೆಯನ್ನು ನೋಡಿ ಪತಿಯು ಸತ್ಯವನ್ನು ಸ್ವೀಕರಿಸಲು ಸಾಧ್ಯ. 1972ರಲ್ಲಿ ದೀಕ್ಷಾಸ್ನಾನ ಪಡೆದಂದಿನಿಂದ ಸಹೋದರಿ ಕ್ರಿಸ್ಟಾ ಬೈಬಲಿನ ಈ ಮಾರ್ಗದರ್ಶನವನ್ನು ಪಾಲಿಸುತ್ತಾ ತನ್ನ ನಡತೆಯ ಮೂಲಕ ಗಂಡನ ಹೃದಯವನ್ನು ತಲಪಲು ಪ್ರಯತ್ನಿಸುತ್ತಿದ್ದಾರೆ. ಆಕೆಯ ಪತಿ ಒಂದೊಮ್ಮೆ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಅಧ್ಯಯನ ಮಾಡಿದ್ದರಾದರೂ ಸತ್ಯವನ್ನು ಸ್ವೀಕರಿಸಲಿಲ್ಲ. ಕೆಲವೊಮ್ಮೆ ಕೂಟಗಳಿಗೂ ಹಾಜರಾಗಿದ್ದಾರೆ. ಸಭೆಯಲ್ಲಿ ಸಹೋದರರೊಂದಿಗೂ ಚೆನ್ನಾಗಿ ಬೆರೆಯುತ್ತಾರೆ. ಅದೇ ಸಮಯದಲ್ಲಿ ಆಯ್ಕೆ ಮಾಡಲು ಅವರಿಗಿರುವ ಹಕ್ಕನ್ನು ಸಹೋದರರು ಗೌರವಿಸುತ್ತಾರೆ. ಕ್ರಿಸ್ಟಾ ತನ್ನ ಪತಿಯ ಹೃದಯ ಮುಟ್ಟಲು ಹೇಗೆ ಪ್ರಯತ್ನಿಸುತ್ತಿದ್ದಾರೆ?
ಕ್ರಿಸ್ಟಾ ಹೇಳುತ್ತಾರೆ: “ಯೆಹೋವನು ನನ್ನಿಂದ ಏನು ಬಯಸುತ್ತಾನೋ ಅದನ್ನು ಮಾಡುವುದನ್ನು ಬಿಡಬಾರದೆಂಬ ದೃಢಸಂಕಲ್ಪ ಮಾಡಿದ್ದೇನೆ. ಅದೇ ಸಮಯದಲ್ಲಿ ನನ್ನ ಒಳ್ಳೇ ನಡತೆಯಿಂದ ‘ವಾಕ್ಯೋಪದೇಶವಿಲ್ಲದೆ’ ನನ್ನ ಗಂಡನನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇನೆ. ನನ್ನ ಗಂಡನ ಅಪೇಕ್ಷೆಗಳು ಬೈಬಲ್ ತತ್ವಗಳಿಗೆ ವಿರುದ್ಧವಾಗಿಲ್ಲದಿದ್ದರೆ ಅವುಗಳಿಗೆ ತಕ್ಕಂತೆ ನಡೆಯಲು ಸಾಧ್ಯವಾದದ್ದನ್ನೆಲ್ಲ ಮಾಡುತ್ತೇನೆ. ಜೊತೆಗೆ, ಆಯ್ಕೆ ಮಾಡಲು ಅವರಿಗಿರುವ ಸ್ವಾತಂತ್ರ್ಯವನ್ನು ಗೌರವಿಸಿ ಎಲ್ಲವನ್ನು ಯೆಹೋವನ ಕೈಯಲ್ಲಿ ಒಪ್ಪಿಸಿದ್ದೇನೆ.”
ಸಹೋದರಿ ಕ್ರಿಸ್ಟಾರ ಅನುಭವವು ಹೊಂದಿಕೊಳ್ಳುವ ಸ್ವಭಾವ ನಮ್ಮಲ್ಲಿರುವುದು ಪ್ರಾಮುಖ್ಯ ಎಂದು ತೋರಿಸಿಕೊಡುತ್ತದೆ. ಈ ಸಹೋದರಿ ಕೂಟಗಳಿಗೆ ಕ್ರಮವಾಗಿ ಹೋಗುತ್ತಾರೆ. ಸೇವೆಯಲ್ಲಿ ಭಾಗವಹಿಸುತ್ತಾರೆ. ಮಾತ್ರವಲ್ಲ ಇತರ ಆಧ್ಯಾತ್ಮಿಕ ವಿಷಯಗಳಲ್ಲೂ ಒಳ್ಳೇ ರೂಢಿಯನ್ನಿಟ್ಟುಕೊಂಡಿದ್ದಾರೆ. ಅದೇವೇಳೆ ತನ್ನ ಪತಿಗೆ ತನ್ನಿಂದ ಪ್ರೀತಿ, ಸಮಯ, ಗಮನವನ್ನು ಪಡೆಯುವ ಹಕ್ಕಿದೆ ಎಂಬುದನ್ನು ಅವರು ಮನಸ್ಸಿನಲ್ಲಿಟ್ಟಿದ್ದಾರೆ. ಅವಿಶ್ವಾಸಿ ಸಂಬಂಧಿಗಳಿರುವ ಎಲ್ಲರೂ ಹೊಂದಿಕೊಳ್ಳುವವರು, ಅರ್ಥಮಾಡಿಕೊಳ್ಳುವವರು ಆಗಿರಬೇಕು. ಬೈಬಲ್ ಹೇಳುವಂತೆ “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” ಹಾಗಾಗಿ ಕುಟುಂಬ ಸದಸ್ಯರಿಗೆ ವಿಶೇಷವಾಗಿ ಸಂಗಾತಿಗೆ ಸಮಯ ಕೊಡುವುದು ಪ್ರಾಮುಖ್ಯ. ಒಟ್ಟಿಗೆ ಸಮಯ ಕಳೆಯುವುದು ಒಳ್ಳೇ ಸಂವಾದಕ್ಕೆ ಅನುವು ಮಾಡಿಕೊಡುತ್ತದೆ. ಒಳ್ಳೇ ಸಂವಾದವಿರುವಾಗ ಸಾಕ್ಷಿಯಲ್ಲದ ಸಂಗಾತಿಗೆ ಒಂಟಿತನ ಕಾಡುವ, ತನ್ನನ್ನು ಅಲಕ್ಷಿಸಲಾಗುತ್ತಿದೆ ಎಂದನಿಸುವ ಅಥವಾ ಅಸೂಯೆಯಾಗುವ ಸಾಧ್ಯತೆ ಕಡಿಮೆಯೆಂದು ಅನುಭವಗಳು ತೋರಿಸುತ್ತವೆ.—ಪ್ರಸಂ. 3:1.
ಯಾವತ್ತೂ ಆಶಾಭಾವ ಕಳಕೊಳ್ಳಬೇಡಿ
ಹಾಲ್ಗ ಎಂಬವನ ತಂದೆಯು ಇಡೀ ಕುಟುಂಬವು ದೀಕ್ಷಾಸ್ನಾನ ಪಡೆದು 20 ವರ್ಷಗಳ ನಂತರ ದೀಕ್ಷಾಸ್ನಾನ ಪಡೆದುಕೊಂಡರು. “ಸಾಕ್ಷಿಯಲ್ಲದ ನಮ್ಮ ಪ್ರಿಯ ವ್ಯಕ್ತಿಗೆ ನಾವು ಅವನನ್ನು ಪ್ರೀತಿಸುತ್ತೇವೆ ಮತ್ತು ಅವನಿಗಾಗಿ ಪ್ರಾರ್ಥಿಸುತ್ತೇವೆ ಎಂದು ತೋರಿಸುವುದು ಪ್ರಾಮುಖ್ಯ” ಎನ್ನುತ್ತಾನೆ ಹಾಲ್ಗ. ಈ ಹಿಂದೆ ಹೇಳಲಾದ ಕ್ರಿಸ್ಟಾ ಹೇಳುತ್ತಾರೆ: ‘ನನ್ನ ಗಂಡ ಸತ್ಯ ಸ್ವೀಕರಿಸುತ್ತಾರೆ, ಯೆಹೋವನ ಪಕ್ಷದಲ್ಲಿ ನಿಲ್ಲಲು ಹೆಜ್ಜೆ ತಕ್ಕೊಳ್ಳುತ್ತಾರೆ ಎಂಬ ಆಶಾಭಾವವನ್ನು ನಾನು ಯಾವತ್ತೂ ಕಳಕೊಳ್ಳುವುದಿಲ್ಲ.’ ಹೌದು, ಸಾಕ್ಷಿಗಳಲ್ಲದ ನಮ್ಮ ಕುಟುಂಬ ಸದಸ್ಯರ ಕುರಿತು ನಾವು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು. ಅವರು ಸತ್ಯವನ್ನು ಸ್ವೀಕರಿಸುವರೆಂಬ ನಿರೀಕ್ಷೆಯನ್ನು ಬಿಟ್ಟುಬಿಡಬಾರದು.
ನಮ್ಮ ಕುಟುಂಬದವರೊಂದಿಗಿನ ಸಂಬಂಧ ಹಾಳಾಗದಂತೆ ನೋಡಿಕೊಳ್ಳುವುದು, ಸತ್ಯವನ್ನು ಅವರು ಅರಿಯುವಂತೆ ಅವಕಾಶ ಮಾಡಿಕೊಡುವುದು, ಬೈಬಲಿನಲ್ಲಿರುವ ಸತ್ಯವನ್ನು ಅವರ ಹೃದಯಕ್ಕೆ ಮುಟ್ಟಿಸುವುದು, ಇದೇ ನಮ್ಮ ಗುರಿ. ಇದನ್ನೆಲ್ಲ ನಾವು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಮಾಡಬೇಕು.—1 ಪೇತ್ರ 3:15.