ಕೊನೆಯ ಶತ್ರುವಾದ ಮರಣ—ಆಗಲಿದೆ ನಿರ್ಮೂಲನ!
“ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು.”—1 ಕೊರಿಂ. 15:26.
1, 2. (ಎ) ಆರಂಭದಲ್ಲಿ ಆದಾಮಹವ್ವರು ಯಾವ ಪರಿಸ್ಥಿತಿಯಲ್ಲಿದ್ದರು? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?
ಆದಾಮಹವ್ವರ ಸೃಷ್ಟಿಯಾದಾಗ ಅವರಿಗೆ ಯಾವ ಶತ್ರುಗಳೂ ಇರಲಿಲ್ಲ. ಅವರು ಪರದೈಸಲ್ಲಿ ಬದುಕುತ್ತಿದ್ದ ಪರಿಪೂರ್ಣ ಮಾನವರಾಗಿದ್ದರು. ಸೃಷ್ಟಿಕರ್ತನ ಮಗ ಮತ್ತು ಮಗಳಾಗಿ ಆತನೊಟ್ಟಿಗೆ ಆಪ್ತ ಸಂಬಂಧ ಅವರಿಗಿತ್ತು. (ಆದಿ. 2:7-9; ಲೂಕ 3:38) ಅವರ ಆಯಸ್ಸು ಎಷ್ಟಿರಲಿತ್ತೆಂದು ದೇವರು ಅವರಿಗೆ ಕೊಟ್ಟ ನೇಮಕದಿಂದ ತಿಳಿದುಬರುತ್ತಿತ್ತು. (ಆದಿಕಾಂಡ 1:28 ಓದಿ.) ‘ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಲು’ ಅವರಿಗೆ ನಿರ್ದಿಷ್ಟ ಸಮಯಾವಧಿ ಸಾಕಾಗುತ್ತಿತ್ತು. ಆದರೆ ‘ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡುತ್ತಾ ಇರಲು’ ಅವರು ಶಾಶ್ವತವಾಗಿ ಜೀವಿಸಬೇಕಿತ್ತು. ಆದ್ದರಿಂದ ಆದಾಮನು ತನ್ನ ನೇಮಕದ ಮೇಲ್ವಿಚಾರಣೆಯನ್ನು ಬೇರೆಯವರಿಗೆ ದಾಟಿಸುವ ಪ್ರಮೇಯವೇ ಬರುತ್ತಿರಲಿಲ್ಲ.
2 ಹಾಗಾದರೆ ಈಗ ಪರಿಸ್ಥಿತಿ ಇಷ್ಟು ಬದಲಾಗಿರುವುದಕ್ಕೆ ಕಾರಣವೇನು? ಮಾನವ ಸಂತೋಷಕ್ಕೆ ಇಷ್ಟೊಂದು ಶತ್ರುಗಳು ಅದರಲ್ಲೂ ಮರಣವೆಂಬ ಅತೀ ದೊಡ್ಡ ಶತ್ರು ಹೇಗೆ ಹುಟ್ಟಿಕೊಂಡಿತು? ಈ ಶತ್ರುಗಳನ್ನು ನಿರ್ಮೂಲ ಮಾಡಲು ದೇವರು ಏನು ಮಾಡಲಿದ್ದಾನೆ? ಈ ಪ್ರಶ್ನೆಗಳಿಗೆ ಮತ್ತು ಇದಕ್ಕೆ ಸಂಬಂಧಿಸಿದ ಇತರ ಪ್ರಶ್ನೆಗಳಿಗೆ ಉತ್ತರಗಳು ನಮಗೆ ಬೈಬಲ್ ದಾಖಲೆಯಲ್ಲಿ ಸಿಗುತ್ತವೆ. ಕೆಲವು ಮುಖ್ಯ ಅಂಶಗಳನ್ನು ಈಗ ಪರಿಗಣಿಸೋಣ.
ಪ್ರೀತಿಯ ಎಚ್ಚರಿಕೆ
3, 4. (ಎ) ಯೆಹೋವನು ಆದಾಮಹವ್ವರಿಗೆ ಯಾವ ಆಜ್ಞೆ ಕೊಟ್ಟನು? (ಬಿ) ಆ ಆಜ್ಞೆಯನ್ನು ಪಾಲಿಸುವುದು ಎಷ್ಟು ಪ್ರಾಮುಖ್ಯವಾಗಿತ್ತು?
3 ಆದಾಮಹವ್ವರು ಶಾಶ್ವತವಾಗಿ ಜೀವಿಸಬಹುದಿತ್ತಾದರೂ ಅವರಿಗೆ ಅಮರತ್ವವಿರಲಿಲ್ಲ. ಬದುಕಬೇಕಿದ್ದರೆ ಅವರು ಉಸಿರಾಡಬೇಕಿತ್ತು, ಊಟ ಮಾಡಬೇಕಿತ್ತು, ನಿದ್ರೆ ಮಾಡಬೇಕಿತ್ತು. ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಬದುಕು ಜೀವದಾತನೊಂದಿಗಿನ ಅವರ ಸಂಬಂಧದ ಮೇಲೆ ಹೊಂದಿಕೊಂಡಿತ್ತು. (ಧರ್ಮೋ. 8:3) ಶಾಶ್ವತವಾಗಿ ಸಂತೋಷದಿಂದ ಬದುಕಲು ಆದಾಮಹವ್ವರು ದೇವರ ನಿರ್ದೇಶನವನ್ನು ಪಾಲಿಸಲೇಬೇಕಿತ್ತು. ಈ ವಿಷಯವನ್ನು ಯೆಹೋವನು ಹವ್ವಳನ್ನು ಸೃಷ್ಟಿಸುವ ಮೊದಲೇ ಆದಾಮನಿಗೆ ಸ್ಪಷ್ಟಪಡಿಸಿದ್ದನು. ಹೇಗೆ? “ಯೆಹೋವ ದೇವರು ಆ ಮನುಷ್ಯನಿಗೆ—ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ ಎಂದು ವಿಧಿಸಿದನು.”—ಆದಿ. 2:16, 17.
4 “ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರ” ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆ ಎಂಬುದರ ಪ್ರತೀಕವಾಗಿತ್ತು. ಆದಾಮನಿಗೆ ಈಗಾಗಲೇ ಸರಿ ತಪ್ಪಿನ ಕುರಿತ ಅರಿವಿತ್ತು. ಯೆಹೋವನ ಸ್ವರೂಪದಲ್ಲಿ ಅವನ ಸೃಷ್ಟಿಯಾದದ್ದರಿಂದ ಅವನಿಗೆ ಮನಸ್ಸಾಕ್ಷಿ ಇತ್ತು. ಆದರೂ ಆದಾಮಹವ್ವರಿಗೆ ಯಾವಾಗಲೂ ದೇವರ ನಿರ್ದೇಶನದ ಅಗತ್ಯವಿದೆ ಎಂಬುದನ್ನು ಆ ಮರ ಸೂಚಿಸುತ್ತಿತ್ತು. ಒಂದುವೇಳೆ ಅವರು ಆ ಮರದ ಹಣ್ಣನ್ನು ತಿಂದರೆ, ತಮಗೆ ದೇವರ ನಿಯಮಗಳ ಅಗತ್ಯವಿಲ್ಲವೆಂದು ತೋರಿಸಿಕೊಟ್ಟಂತೆ ಆಗುತ್ತಿತ್ತು. ದೇವರಿಂದ ಈ ರೀತಿ ಸ್ವತಂತ್ರರಾಗುವುದು ಅವರಿಗೂ ಮುಂದೆ ಹುಟ್ಟಲಿದ್ದ ಅವರ ಸಂತತಿಗೂ ಮಾರಕ ಪರಿಣಾಮಗಳನ್ನು ತರಲಿತ್ತು. ಎಷ್ಟು ಮಾರಕ ಎನ್ನುವುದು ದೇವರು ಕೊಟ್ಟ ಆಜ್ಞೆಯಲ್ಲೇ ಗೊತ್ತಾಗುತ್ತಿತ್ತು.
ಮಾನವಕುಲಕ್ಕೆ ಮರಣ ಅಂಟಿಕೊಂಡದ್ದು ಹೇಗೆ?
5. ಆದಾಮಹವ್ವರನ್ನು ಅವಿಧೇಯತೆಗೆ ಹೇಗೆ ನಡೆಸಲಾಯಿತು?
5 ಹವ್ವಳು ಸೃಷ್ಟಿಯಾದ ನಂತರ ಆದಾಮನು ದೇವರು ಕೊಟ್ಟ ಆಜ್ಞೆ ಬಗ್ಗೆ ಆಕೆಗೆ ಹೇಳಿದನು. ಆಕೆಗೆ ಆ ಆಜ್ಞೆ ಏನೆಂದು ಚೆನ್ನಾಗಿ ತಿಳಿಯಿತು. ಆದ್ದರಿಂದಲೇ ಮುಂದೊಂದು ಸಂದರ್ಭದಲ್ಲಿ ಆ ಮಾತುಗಳನ್ನು ಇದ್ದ ಹಾಗೇ ಪುನರುಚ್ಛರಿಸಿದಳು. (ಆದಿ. 3:1-3) ಅದನ್ನಾಕೆ ಹೇಳಿದ್ದು ಯುಕ್ತಿಯುಳ್ಳ ಜೀವಿಯಾದ ಸರ್ಪಕ್ಕೆ. ಈ ಸರ್ಪದ ಹಿಂದೆ ಇದ್ದವನು ಪಿಶಾಚನಾದ ಸೈತಾನ. ಇವನು ದೇವರ ಆತ್ಮೀಕ ಪುತ್ರರಲ್ಲಿ ಒಬ್ಬನಾಗಿದ್ದ. ದೇವರಿಂದ ಸ್ವತಂತ್ರನಾಗುವ ಮತ್ತು ಸ್ವಂತ ಅಧಿಕಾರ ಸ್ಥಾಪಿಸುವ ತನ್ನ ದುರಾಶೆಗೆ ನೀರೆರೆದಿದ್ದ. (ಯಾಕೋಬ 1:14, 15 ಹೋಲಿಸಿ.) ತನ್ನ ದುರುದ್ದೇಶವನ್ನು ಸಾಧಿಸಲು ದೇವರು ಸುಳ್ಳುಗಾರ ಎಂಬ ಆರೋಪ ಹಾಕಿದ. ಹವ್ವಳು ದೇವರಿಂದ ಸ್ವತಂತ್ರಳಾದರೆ ಸಾಯುವುದಿಲ್ಲ ಬದಲಾಗಿ ದೇವರಂತೆ ಆಗುವಳು ಎಂಬುದನ್ನು ಆಕೆಯ ತಲೆಯಲ್ಲಿ ತುಂಬಿದ. (ಆದಿ. 3:4, 5) ಹವ್ವ ಅವನನ್ನು ನಂಬಿದಳು. ತಾನು ದೇವರಿಂದ ಸ್ವತಂತ್ರಳು ಎಂಬುದನ್ನು ತೋರಿಸುತ್ತಾ ಆ ಮರದ ಹಣ್ಣನ್ನು ತಿಂದಳು, ಸಾಲದ್ದಕ್ಕೆ ತನ್ನ ಗಂಡನಿಗೂ ತಿನ್ನಲು ಕೊಟ್ಟಳು. (ಆದಿ. 3:6, 17) ಪಿಶಾಚನು ಸುಳ್ಳು ಹೇಳಿದ್ದನು. (1 ತಿಮೊಥೆಯ 2:14 ಓದಿ.) ಆದರೂ ಆದಾಮನು “ಹೆಂಡತಿಯ ಮಾತು” ಕೇಳಿದನು. ಸರ್ಪವು ಮಿತ್ರನಂತೆ ತೋರಿದ್ದರೂ ಅದರ ಹಿಂದಿದ್ದ ಪಿಶಾಚನಾದ ಸೈತಾನನು ಕ್ರೂರ ವೈರಿಯಾಗಿದ್ದ. ಹವ್ವಳಿಗೆ ಕೊಟ್ಟ ತನ್ನ ಸಲಹೆಯಿಂದ ಉಂಟಾಗುವ ಮಾರಣಾಂತಿಕ ಫಲಿತಾಂಶ ಅವನಿಗೆ ಚೆನ್ನಾಗಿ ಗೊತ್ತಿತ್ತು.
6, 7. ತಪ್ಪಿತಸ್ಥರಿಗೆ ಯೆಹೋವನು ಹೇಗೆ ನ್ಯಾಯತೀರ್ಪು ವಿಧಿಸಿದನು?
6 ಜೀವದ ಜೊತೆಗೆ ತಮಗೆ ಬೇಕಾದದ್ದೆಲ್ಲವನ್ನೂ ಕೊಟ್ಟ ದೇವರ ವಿರುದ್ಧ ಆದಾಮಹವ್ವರು ತಮ್ಮ ಸ್ವಾರ್ಥಕ್ಕಾಗಿ ದಂಗೆಯೆದ್ದರು. ನಡೆದ ಎಲ್ಲಾ ಸಂಗತಿಗಳ ಸಂಪೂರ್ಣ ಅರಿವು ಯೆಹೋವನಿಗಿತ್ತು. (1 ಪೂರ್ವ. 28:9; ಜ್ಞಾನೋಕ್ತಿ 15:3 ಓದಿ.) ಹಾಗಿದ್ದರೂ, ತಪ್ಪುಮಾಡಿದ್ದ ಈ ಮೂವರಿಗೂ ತನ್ನ ಬಗ್ಗೆ ಯಾವ ಭಾವನೆಯಿದೆಯೆಂದು ತೋರಿಸಿಕೊಡಲು ಯೆಹೋವನು ಅವಕಾಶ ಕೊಟ್ಟನು. ಯೆಹೋವನಿಗೆ ಅವರು ಮಾಡಿದ ತಪ್ಪಿನಿಂದಾಗಿ ಖಂಡಿತ ತುಂಬ ನೋವಾಗಿತ್ತು ಏಕೆಂದರೆ ಅವನು ತಂದೆಯಾಗಿದ್ದನು. (ಆದಿಕಾಂಡ 6:6 ಹೋಲಿಸಿ.) ಆದರೆ ಈಗ ಅವನೊಬ್ಬ ನ್ಯಾಯಾಧೀಶನಾಗಿ ಕ್ರಿಯೆಗೈಯಬೇಕಿತ್ತು. ಆತನು ಈಗಾಗಲೇ ನುಡಿದಿರುವ ಪರಿಣಾಮವನ್ನು ಜಾರಿಗೆ ತರಬೇಕಿತ್ತು.
7 ದೇವರು ಆದಾಮನಿಗೆ ಹೀಗೆ ಹೇಳಿದ್ದನು: “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” ಯೆಹೋವನು “ದಿನ” ಎಂದು ಹೇಳಿದಾಗ ಅದು 24 ತಾಸುಗಳ ಒಂದು ದಿನ ಎಂದು ಆದಾಮನು ನೆನಸಿದ್ದಿರಬೇಕು. ತಾನು ದೇವರ ಆಜ್ಞೆ ಮೀರಿದ ದಿನ ಸೂರ್ಯ ಮುಳುಗುವುದರೊಳಗೆ ದೇವರು ಕ್ರಮಗೈಯುತ್ತಾನೆಂದೂ ಆದಾಮನು ಭಾವಿಸಿದ್ದಿರಬೇಕು. ಯೆಹೋವನು ಸಂಜೆಯ ಹೊತ್ತಿನಲ್ಲಿ ಆದಾಮಹವ್ವರೊಟ್ಟಿಗೆ ಮಾತಾಡಿದನು. (ಆದಿ. 3:8) ನ್ಯಾಯಾಲಯಗಳಲ್ಲಿ ಮಾಡಲಾಗುವಂತೆ ಮೊದಲು ಅವರು ಹೇಳಿದ್ದನ್ನು ಯೆಹೋವನು ಕೇಳಿ ನಿಜಾಂಶವನ್ನು ದೃಢೀಕರಿಸಿದನು. (ಆದಿ. 3:9-13) ನಂತರ ಈ ತಪ್ಪಿತಸ್ಥರಿಗೆ ದಂಡನೆ ವಿಧಿಸಿದನು. (ಆದಿ. 3:14-19) ಎಲ್ಲಾದರೂ ಆತನು ಆಗ್ಗಿಂದಾಗಲೇ ಆ ದಂಡನೆಯನ್ನು ಜಾರಿಗೊಳಿಸಿರುತ್ತಿದ್ದರೆ, ಆದಾಮಹವ್ವ ಮತ್ತವರ ಸಂತಾನದ ಬಗ್ಗೆ ಆತನ ಉದ್ದೇಶ ನೆರವೇರದೆ ಹೋಗಿಬಿಡುತ್ತಿತ್ತು. (ಯೆಶಾ. 55:11) ಪಾಪದ ಪರಿಣಾಮಗಳು ಅವರ ಮೇಲೆ ತಕ್ಷಣ ಶುರುವಾಯಿತಾದರೂ ಅವರಿಗೆ ಮಕ್ಕಳಾಗುವಂತೆ ಅನುಮತಿಸಿದನು. ಈ ಮಕ್ಕಳು ಯೆಹೋವನು ಮುಂದೆ ಮಾಡಲಿದ್ದ ಏರ್ಪಾಡುಗಳಿಂದ ಪ್ರಯೋಜನ ಹೊಂದಲಿದ್ದರು. ಆದರೆ ಆದಾಮಹವ್ವರು ಪಾಪ ಮಾಡಿದ ದಿನದಂದೇ ಸತ್ತು ಹೋದರು ಎಂದು ಹೇಳಬಹುದು. ಏಕೆಂದರೆ ಯೆಹೋವನ ದೃಷ್ಟಿಯಲ್ಲಿ ಒಂದು ದಿನ 1,000 ವರ್ಷಗಳಿಗೆ ಸಮ.—2 ಪೇತ್ರ 3:8.
8, 9. ಆದಾಮನು ಮಾಡಿದ ಪಾಪ ಅವನ ಸಂತಾನವನ್ನು ಹೇಗೆ ಬಾಧಿಸಿತು? (ಶೀರ್ಷಿಕೆ ಚಿತ್ರ ನೋಡಿ.)
8 ಆದಾಮಹವ್ವ ಏನು ಮಾಡಿದರೊ ಅದು ಅವರ ಮಕ್ಕಳ ಮೇಲೆ ಪರಿಣಾಮಬೀರಲಿತ್ತಾ? ಹೌದು. ರೋಮನ್ನರಿಗೆ 5:12 ವಿವರಿಸುವುದು: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” ಸಾವಿಗೆ ತುತ್ತಾದ ಮೊತ್ತಮೊದಲ ಮನುಷ್ಯ ನಂಬಿಗಸ್ತ ಹೇಬೆಲನಾಗಿದ್ದನು. (ಆದಿ. 4:8) ನಂತರ ಆದಾಮನ ಇತರ ಮಕ್ಕಳು ವಯಸ್ಸಾಗಿ ಸತ್ತು ಹೋದರು. ಅವರು ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದರಾ? ಅಪೊಸ್ತಲ ಪೌಲನು ಹೀಗೆ ಉತ್ತರಿಸುತ್ತಾನೆ: ‘ಒಬ್ಬ ಮನುಷ್ಯನ ಅವಿಧೇಯತೆಯಿಂದ ಅನೇಕರು ಪಾಪಿಗಳಾಗಿ ಪರಿಗಣಿಸಲ್ಪಟ್ಟರು.’ (ರೋಮ. 5:19) ಹೀಗೆ ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪ ಮತ್ತು ಮರಣ ಅವನ ಮಕ್ಕಳಿಗೆ ಮತ್ತು ಇಡೀ ಮಾನವಕುಲಕ್ಕೆ ಕ್ರೂರ ಶತ್ರುಗಳಾದವು. ಇವುಗಳಿಂದ ಯಾವ ಅಪರಿಪೂರ್ಣ ಮನುಷ್ಯನಿಗೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದಾಮನ ಮಕ್ಕಳಿಗೆ ಮತ್ತವರ ಸಂತಾನದವರಿಗೆ ಪಾಪ ಮತ್ತು ಮರಣ ಹೇಗೆ ದಾಟಿತು ಎಂದು ಸ್ಪಷ್ಟವಾಗಿ ವಿವರಿಸಲು ಆಗುವುದಿಲ್ಲ. ಆದರೆ ಅದು ದಾಟಿದ್ದಂತೂ ನೂರಕ್ಕೆ ನೂರು ಸತ್ಯ.
9 ಬಾಧ್ಯತೆಯಾಗಿ ಬಂದಿರುವ ಪಾಪ ಮತ್ತು ಮರಣವನ್ನು ‘ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕು, ಸಕಲ ದೇಶೀಯರ ಮೇಲೆ ಹಾಕಿರುವ ತೆರೆ’ ಎಂದು ಬೈಬಲ್ ಕರೆಯುತ್ತದೆ. (ಯೆಶಾ. 25:7) ತೆರೆ ಅಥವಾ ಉಸಿರುಗಟ್ಟಿಸುವ ಈ ಮುಸುಕು ಅಂದರೆ ಮರಣದಂಡನೆಯೆಂಬ ಬಿಡಿಸಿಕೊಳ್ಳಲಾಗದ ಜಾಲದೊಳಗೆ ಎಲ್ಲಾ ಜನರು ಸಿಕ್ಕಿಬೀಳುತ್ತಾರೆ. ಹಾಗಾದರೆ ‘ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವುದು’ ಅಲ್ಲಗಳೆಯಲಾಗದ ಸತ್ಯಾಂಶ. (1 ಕೊರಿಂ. 15:22) ಆದ್ದರಿಂದ ಪೌಲನು ಕೇಳಿದ ಈ ಪ್ರಶ್ನೆ ಸಹಜವಾಗಿಯೇ ಏಳುತ್ತದೆ: “ಈ ಮರಣಕ್ಕೆ ಒಳಗಾಗುತ್ತಿರುವ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು?” ಯಾರಿಂದಲಾದರೂ ಸಾಧ್ಯವೇ?a —ರೋಮ. 7:24.
ಆದಾಮನಿಂದ ಬಂದ ಪಾಪ ಮತ್ತು ಮರಣದ ನಿರ್ಮೂಲನ
10. (ಎ) ಆದಾಮನಿಂದ ಬಂದ ಮರಣವನ್ನು ನಿರ್ಮೂಲ ಮಾಡಲಾಗುವುದೆಂದು ಯಾವ ಬೈಬಲ್ ವಚನಗಳು ತೋರಿಸುತ್ತವೆ? (ಬಿ) ಈ ವಚನಗಳು ಯೆಹೋವ ಮತ್ತವನ ಮಗನ ಬಗ್ಗೆ ಏನನ್ನು ತಿಳಿಸುತ್ತವೆ?
10 ಪೌಲನನ್ನು ರಕ್ಷಿಸಲು ಯೆಹೋವನಿಂದ ಮಾತ್ರ ಸಾಧ್ಯವಿತ್ತು. ‘ಮುಸುಕಿನ’ ಬಗ್ಗೆ ಹೇಳಿದ ನಂತರ ಯೆಶಾಯನು ಹೀಗಂದನು: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾ. 25:8) ತಂದೆಯಾದವನು ತನ್ನ ಮಕ್ಕಳ ನೋವಿಗೆ ಕಾರಣವಾದ ವಿಷಯವನ್ನು ತೆಗೆದುಹಾಕಿ ಕಣ್ಣೀರು ಒರೆಸುತ್ತಾನೆ. ಹಾಗೆಯೇ ಯೆಹೋವನು ಮನುಷ್ಯರ ದುಃಖಕ್ಕೆ ಕಾರಣವಾದ ಮರಣವನ್ನು ನಿರ್ಮೂಲ ಮಾಡಲು ಸಂತೋಷಿಸುತ್ತಾನೆ. ಇದನ್ನು ಮಾಡಲು ಆತನಿಗೊಬ್ಬ ಸಹಾಯಕನಿದ್ದಾನೆ. 1 ಕೊರಿಂಥ 15:22 ಹೀಗನ್ನುತ್ತದೆ: “ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವಂತೆಯೇ ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು.” ಇದನ್ನೇ ಪೌಲನು ಇನ್ನೊಂದು ಕಡೆ ಹೇಳಿದನು. “ನನ್ನನ್ನು ರಕ್ಷಿಸುವವರು ಯಾರು?” ಎಂದು ಕೇಳಿ ತಾನೇ ಉತ್ತರ ಕೊಟ್ಟದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ!” (ರೋಮ. 7:25) ಮಾನವಕುಲವನ್ನು ಸೃಷ್ಟಿಸಲು ಯೆಹೋವನನ್ನು ಯಾವುದು ಪ್ರೇರಿಸಿತೊ ಆ ಪ್ರೀತಿ ಆದಾಮಹವ್ವ ದಂಗೆಯೆದ್ದಾಗಲೂ ತಣ್ಣಗಾಗಲಿಲ್ಲ. ಮೊದಲ ದಂಪತಿಯನ್ನು ಸೃಷ್ಟಿಸುವ ಕೆಲಸದಲ್ಲಿ ಯೆಹೋವನಿಗೆ ಸಹಾಯಕನಾಗಿದ್ದವನು ಸಹ ಮಾನವ ಸಂತಾನದ ಮೇಲಿನ ವಿಶೇಷ ಪ್ರೀತಿಯನ್ನು ಕಳಕೊಳ್ಳಲಿಲ್ಲ. (ಜ್ಞಾನೋ. 8:30, 31) ಆದರೆ ಪಾಪ ಮತ್ತು ಮರಣದಿಂದ ಮಾನವಕುಲವನ್ನು ರಕ್ಷಿಸುವುದಾದರೂ ಹೇಗೆ?
11. ಮಾನವಕುಲಕ್ಕೆ ಸಹಾಯ ಮಾಡಲು ಯೆಹೋವನು ಯಾವ ಏರ್ಪಾಡು ಮಾಡಿದನು?
11 ಆದಾಮನು ಪಾಪ ಮಾಡಿದಾಗ ಯೆಹೋವನು ಅವನಿಗೆ ಮರಣದಂಡನೆ ವಿಧಿಸಿದನು. ಇದರಿಂದಾಗಿ ಮನುಷ್ಯರೆಲ್ಲರೂ ಅಪರಿಪೂರ್ಣತೆ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದರು. (ರೋಮ. 5:12, 16) ‘ಒಂದು ಅಪರಾಧದ ಫಲಿತಾಂಶವಾಗಿ ಎಲ್ಲ ರೀತಿಯ ಜನರು ಖಂಡನೆಗೆ ಗುರಿಯಾದರು’ ಎಂದು ಬೈಬಲ್ ಹೇಳುತ್ತದೆ. (ರೋಮ. 5:18) ತನ್ನ ಮಟ್ಟಗಳನ್ನು ರಾಜಿ ಮಾಡಿಕೊಳ್ಳದೆ ತಾನು ವಿಧಿಸಿದ ಖಂಡನಾತ್ಮಕ ತೀರ್ಪನ್ನು ಯೆಹೋವನು ತೆಗೆದುಹಾಕಬೇಕಾದರೆ ಏನು ಮಾಡಬೇಕಿತ್ತು? ಯೇಸುವಿನ ಮಾತುಗಳಲ್ಲಿ ಇದಕ್ಕೆ ಉತ್ತರ ಇದೆ: ‘ಮನುಷ್ಯಕುಮಾರನು ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೆ ಬಂದನು.’ (ಮತ್ತಾ. 20:28) ಯೆಹೋವನ ಆತ್ಮೀಕ ಪುತ್ರರಲ್ಲಿ ಮೊದಲನೆಯವನಾದ ಆತನು ವಿಮೋಚನಾ ಮೌಲ್ಯ ಕೊಡಲಿದ್ದನೆಂದು ಸ್ಪಷ್ಟಪಡಿಸಿದನು. ಯಾಕೆಂದರೆ ಆತನು ಭೂಮಿಯ ಮೇಲೆ ಪರಿಪೂರ್ಣ ಮಾನವನಾಗಿ ಹುಟ್ಟಿದ್ದನು. ಈ ವಿಮೋಚನಾ ಮೌಲ್ಯ ಯೆಹೋವನ ನ್ಯಾಯದ ತಕ್ಕಡಿಯನ್ನು ಹೇಗೆ ಸರಿದೂಗಿಸಲಿತ್ತು?—1 ತಿಮೊ. 2:5, 6.
12. ನ್ಯಾಯದ ತಕ್ಕಡಿಯನ್ನು ಸರಿದೂಗಿಸಿದ ವಿಮೋಚನಾ ಮೌಲ್ಯ ಯಾವುದಾಗಿತ್ತು?
12 ಆದಾಮನು ಪಾಪ ಮಾಡುವುದಕ್ಕೆ ಮುಂಚೆ ಅವನಿಗಿದ್ದ ಪ್ರತೀಕ್ಷೆಗಳೇ ಪರಿಪೂರ್ಣ ಮನುಷ್ಯನಾದ ಯೇಸುವಿಗೂ ಇತ್ತು. ಯೆಹೋವನ ಉದ್ದೇಶ, ಭೂಮಿಯಲ್ಲಿ ಆದಾಮನ ಪರಿಪೂರ್ಣ ಸಂತಾನ ತುಂಬಬೇಕು ಎಂದಾಗಿತ್ತು. ಆದ್ದರಿಂದ ಯೇಸು ತನ್ನ ತಂದೆ ಮತ್ತು ಆದಾಮನ ಸಂತತಿಯವರ ಮೇಲಿನ ಗಾಢ ಪ್ರೀತಿಯ ಕಾರಣ ತನ್ನ ಮಾನವ ಜೀವವನ್ನು ಯಜ್ಞವಾಗಿ ಅರ್ಪಿಸಿದನು. ಆದಾಮನು ಕಳೆದುಕೊಂಡಿದ್ದಕ್ಕೆ ಸಮಾನವಾದ ಪರಿಪೂರ್ಣ ಜೀವವನ್ನು ಯೇಸು ತ್ಯಾಗ ಮಾಡಿದನು. ನಂತರ ಯೆಹೋವನು ತನ್ನ ಮಗನನ್ನು ಆತ್ಮಜೀವಿಯಾಗಿ ಪುನಃ ಬದುಕಿಸಿದನು. (1 ಪೇತ್ರ 3:18) ಯೆಹೋವನು ಆ ಒಬ್ಬ ಪರಿಪೂರ್ಣ ಮನುಷ್ಯನಾದ ಯೇಸುವಿನ ಯಜ್ಞವನ್ನು ವಿಮೋಚನಾ ಮೌಲ್ಯವಾಗಿ ಅಥವಾ ಬೆಲೆಯಾಗಿ ಸ್ವೀಕರಿಸಿ ನ್ಯಾಯದ ತಕ್ಕಡಿಯನ್ನು ಸರಿದೂಗಿಸಿದನು. ಇದರ ಮೂಲಕ ಆತನು ಆದಾಮನು ಕಳೆದುಕೊಂಡಂಥ ರೀತಿಯ ಜೀವನವನ್ನು ಅವನ ಕುಟುಂಬಕ್ಕೆ ಹಿಂದಿರುಗಿಸಲು ಸಾಧ್ಯವಾಗಲಿತ್ತು. ಹೀಗೆ ಒಂದರ್ಥದಲ್ಲಿ ಯೇಸು ಆದಾಮನ ಸ್ಥಾನ ತಕ್ಕೊಂಡಂತಾಯಿತು. ಪೌಲ ಹೀಗೆ ವಿವರಿಸುತ್ತಾನೆ: “‘ಮೊದಲನೆಯ ಮಾನವನಾದ ಆದಾಮನು ಜೀವಿಸುವ ಪ್ರಾಣವಾದನು’ ಎಂದು ಬರೆಯಲ್ಪಟ್ಟಿದೆ. ಕೊನೆಯ ಆದಾಮನಾದರೋ ಜೀವ ಕೊಡುವ ಆತ್ಮಜೀವಿಯಾದನು.”—1 ಕೊರಿಂ. 15:45.
13. ಸತ್ತು ಹೋಗಿರುವವರಿಗೆ “ಕೊನೆಯ ಆದಾಮ” ಹೇಗೆ ಸಹಾಯಮಾಡಲಿದ್ದಾನೆ?
13 “ಕೊನೆಯ ಆದಾಮ” ಇಡೀ ಮಾನವಕುಲಕ್ಕೆ “ಜೀವ ಕೊಡುವ ಆತ್ಮಜೀವಿ”ಯಾಗಿ ಕಾರ್ಯನಿರ್ವಹಿಸುವ ಸಮಯ ಬರಲಿದೆ. ಮಾನವಕುಲದಲ್ಲಿ ಅಧಿಕಾಂಶ ಜನರು ಈಗಾಗಲೇ ಬದುಕಿ ಸತ್ತಿದ್ದಾರೆ. ಇವರನ್ನು ಆತನು ಪುನಃ ಜೀವಕ್ಕೆ ತರುವನು. ಯಾಕೆಂದರೆ ಭೂಮಿಯ ಮೇಲೆ ಪುನಃ ಜೀವಿಸಲು ಅವರಿಗೆ ಪುನರುತ್ಥಾನದ ಅವಶ್ಯಕತೆಯಿದೆ.—ಯೋಹಾ. 5:28, 29.
14. ಯೆಹೋವನ ಯಾವ ಏರ್ಪಾಡು ಮನುಷ್ಯರಿಗೆ ಅಪರಿಪೂರ್ಣತೆಯಿಂದ ಹೊರಬರಲು ಸಹಾಯ ಮಾಡಲಿದೆ?
14 ಬಾಧ್ಯತೆಯಾಗಿ ಬಂದ ಅಪರಿಪೂರ್ಣತೆಯೊಂದಿಗಿನ ಹೋರಾಟದಿಂದ ಮಾನವಕುಲಕ್ಕೆ ಹೇಗೆ ಮುಕ್ತಿ ಸಿಗಲಿದೆ? ಯೆಹೋವನು ಒಂದು ರಾಜ್ಯಾಡಳಿತದ ಏರ್ಪಾಡು ಮಾಡಿದ್ದಾನೆ. ಅದರಲ್ಲಿ “ಕೊನೆಯ ಆದಾಮ” ಮತ್ತು ಆತನ ಜೊತೆ ಮಾನವಕುಲದಿಂದ ಆರಿಸಲಾದವರು ಇರುವರು. (ಪ್ರಕಟನೆ 5:9, 10 ಓದಿ.) ಯೇಸುವಿನ ಜೊತೆಗಾರರಾದ ಇವರು ಒಂದು ಸಮಯದಲ್ಲಿ ಅಪರಿಪೂರ್ಣರಾಗಿದ್ದರಿಂದ ತಮ್ಮ ಪ್ರಜೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಮಾನವರಿಗೆ ತಮ್ಮ ಸ್ವಂತ ಶಕ್ತಿಯಿಂದ ಜಯಿಸಲು ಸಾಧ್ಯವಿಲ್ಲದಿದ್ದ ಅಪರಿಪೂರ್ಣತೆಯಿಂದ ಹೊರಬರಲು ಇವರು ಸಾವಿರ ವರ್ಷದ ಆಳ್ವಿಕೆಯಲ್ಲಿ ಸಹಾಯ ಮಾಡುವರು.—ಪ್ರಕ. 20:6.
15, 16. (ಎ) ‘ಕೊನೆಯ ಶತ್ರುವಾದ ಮರಣ’ ಯಾವ ರೀತಿಯ ಮರಣಕ್ಕೆ ಸೂಚಿಸುತ್ತದೆ? (ಬಿ) ಅದರ ನಿರ್ಮೂಲನ ಯಾವಾಗ? (ಸಿ) 1 ಕೊರಿಂಥ 15:28ಕ್ಕನುಸಾರ ಯೇಸು ಕಾಲಾನಂತರ ಏನು ಮಾಡುವನು?
15 ಸಾವಿರ ವರ್ಷದ ರಾಜ್ಯಾಡಳಿತದ ಕೊನೆಯಷ್ಟಕ್ಕೆ ಮಾನವಕುಲವು ಆದಾಮನ ಅವಿಧೇಯತೆಯಿಂದ ಅಸ್ತಿತ್ವಕ್ಕೆ ಬಂದ ಎಲ್ಲಾ ಶತ್ರುಗಳಿಂದ ಮುಕ್ತಿ ಹೊಂದುತ್ತದೆ. ಬೈಬಲ್ ಹೀಗನ್ನುತ್ತದೆ: “ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವಂತೆಯೇ ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು. ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು: ಕ್ರಿಸ್ತನು ಪ್ರಥಮಫಲ, ಅನಂತರ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು [ಜೊತೆರಾಜರು] ಎಬ್ಬಿಸಲ್ಪಡುವರು. ಆಮೇಲೆ ಅವನು ಎಲ್ಲ ಆಧಿಪತ್ಯವನ್ನೂ ಎಲ್ಲ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿದ ಮೇಲೆ ತನ್ನ ದೇವರೂ ತಂದೆಯೂ ಆಗಿರುವಾತನಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ. ಏಕೆಂದರೆ ದೇವರು ಎಲ್ಲ ವೈರಿಗಳನ್ನು ಅವನ ಪಾದಗಳ ಕೆಳಗೆ ಹಾಕುವ ತನಕ ಅವನು ಅರಸನಾಗಿ ಆಳುವುದು ಆವಶ್ಯಕ. ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು.” (1 ಕೊರಿಂ. 15:22-26) ಆದಾಮನಿಂದ ಬಾಧ್ಯತೆಯಾಗಿ ಬಂದ ಮರಣ ಕೊನೆಗೂ ಇಲ್ಲವಾಗುವುದು. ಇಡೀ ಮಾನವಕುಲವನ್ನು ಮುಚ್ಚಿರುವ ಈ ‘ಮುಸುಕನ್ನು’ ನಿರಂತರಕ್ಕೂ ತೆಗೆಯಲಾಗುವುದು.—ಯೆಶಾ. 25:7, 8.
16 ಮಗನ ಆಳ್ವಿಕೆಯ ಉದ್ದೇಶ ಹೀಗೆ ನೆರವೇರುವುದು. ಅಪೊಸ್ತಲ ಪೌಲನು ಪ್ರೇರಿತನಾಗಿ ಬರೆದ ಸಾರಾಂಶವನ್ನು ಕೊನೆಗೊಳಿಸುತ್ತಾ ಹೀಗಂದನು: “ಎಲ್ಲವೂ ಅವನಿಗೆ ಅಧೀನಮಾಡಲ್ಪಟ್ಟ ಬಳಿಕ ಮಗನು ಎಲ್ಲವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಎಲ್ಲರಿಗೂ ಎಲ್ಲವೂ ಆಗುವನು.” (1 ಕೊರಿಂ. 15:28) ಮಗನು ತನ್ನ ಕೆಲಸವನ್ನು ಮುಗಿಸಿದ್ದೇನೆಂಬ ಮನದಾಳದ ತೃಪ್ತಿಯಿಂದ ತನ್ನ ಅಧಿಕಾರವನ್ನು ಯೆಹೋವನಿಗೆ ಹಿಂದಿರುಗಿಸುವನು ಮತ್ತು ಪರಿಪೂರ್ಣತೆಗೇರಿಸಲಾದ ಮಾನವ ಕುಟುಂಬವನ್ನು ಆತನ ಕೈಗೊಪ್ಪಿಸುವನು.
17. ಅಂತಿಮವಾಗಿ ಸೈತಾನನಿಗೆ ಏನಾಗಲಿದೆ?
17 ಮಾನವಕುಲ ಅನುಭವಿಸಿರುವ ಎಲ್ಲಾ ದುಃಖಕ್ಕೆ ಮೂಲ ಕಾರಣನಾದ ಸೈತಾನನ ಬಗ್ಗೆ ಏನು? ಪ್ರಕಟನೆ 20:7-15 ಇದಕ್ಕೆ ಉತ್ತರ ನೀಡುತ್ತದೆ. ಪರಿಪೂರ್ಣ ಮಾನವರಿಗೆ ಬರಲಿರುವ ಅಂತಿಮ ಪರೀಕ್ಷೆಯಲ್ಲಿ ಅವರನ್ನು ದಾರಿತಪ್ಪಿಸಲು ಸೈತಾನನಿಗೆ ಅನುಮತಿ ನೀಡಲಾಗುತ್ತದೆ. ನಂತರ ಪಿಶಾಚನಿಗೆ ಮತ್ತವನ ಸಹಚರರಿಗೆ “ಎರಡನೆಯ ಮರಣ” ನೀಡಲಾಗುತ್ತದೆ. ಅಂದರೆ ನಿತ್ಯನಾಶನ. (ಪ್ರಕ. 21:8) ಎರಡನೆಯ ಮರಣಕ್ಕೆ ಒಳಗಾದವರು ಶಾಶ್ವತವಾಗಿ ಅಸ್ತಿತ್ವದಲ್ಲಿ ಇಲ್ಲದೆ ಹೋಗುತ್ತಾರೆ. ಹಾಗಾಗಿ ಎರಡನೆಯ ಮರಣ ಯಾವತ್ತೂ ನಿರ್ಮೂಲನವಾಗುವುದಿಲ್ಲ. ಆದರೆ ಯಾರು ಸೃಷ್ಟಿಕರ್ತನನ್ನು ಪ್ರೀತಿಸಿ ಆತನನ್ನು ಆರಾಧಿಸುತ್ತಾರೊ ಅವರು “ಎರಡನೆಯ ಮರಣ”ಕ್ಕೆ ಒಳಗಾಗುವುದಿಲ್ಲ. ಹಾಗಾಗಿ ಅದು ಅವರಿಗೆ ಶತ್ರುವಲ್ಲ.
18. ದೇವರು ಆದಾಮನಿಗೆ ಕೊಟ್ಟ ನೇಮಕ ಹೇಗೆ ಪೂರೈಸಲ್ಪಡುವುದು?
18 ಆಗ ಪರಿಪೂರ್ಣ ಮಾನವಕುಲವು ನಿತ್ಯಜೀವ ಪಡೆಯಲು ಯೆಹೋವನ ಒಪ್ಪಿಗೆ ಪಡೆದಿರುವುದು. ಎಲ್ಲೂ ಯಾವ ಶತ್ರುವೂ ಇರುವುದಿಲ್ಲ. ಆದಾಮನಿಗೆ ಕೊಡಲಾದ ನೇಮಕವನ್ನು ಆತನಿಲ್ಲದೆ ಪೂರೈಸಲಾಗಿರುವುದು. ಭೂಮಿಯಲ್ಲಿ ಆತನ ಸಂತತಿ ತುಂಬಿರುವುದು. ಅವರು ಭೂಮಿಯನ್ನು ಸಂತೋಷದಿಂದ ನೋಡಿಕೊಳ್ಳುವರು. ವೈವಿಧ್ಯಮಯ ಜೀವರಾಶಿಯನ್ನು ಆನಂದಿಸುವರು. ಕೊನೇ ಶತ್ರುವಾದ ಮರಣವನ್ನು ನಿರ್ಮೂಲ ಮಾಡಲು ದೇವರು ಪ್ರೀತಿಯಿಂದ ಮಾಡಿರುವ ಏರ್ಪಾಡಿನ ಕಡೆಗೆ ನಮ್ಮ ಕೃತಜ್ಞತೆ ಎಂದೂ ಬತ್ತಿಹೋಗದಿರಲಿ!
a ವಯಸ್ಸಾಗುವಿಕೆ ಮತ್ತು ಸಾವಿನ ಕಾರಣವನ್ನು ವಿವರಿಸಲು ವಿಜ್ಞಾನಿಗಳು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಹೀಗನ್ನುತ್ತದೆ: “ಮೊದಲ ಮಾನವ ದಂಪತಿಗೆ ಮರಣವನ್ನು ವಿಧಿಸಿದವನು ಸೃಷ್ಟಿಕರ್ತ ಮತ್ತು ಮನುಷ್ಯರಿಗೆ ಪೂರ್ತಿಯಾಗಿ ಅರ್ಥವಾಗದ ರೀತಿಯಲ್ಲಿ ಈ ದಂಡನೆಯನ್ನು ಜಾರಿಗೊಳಿಸಿದ್ದಾನೆ. ಈ ನಿಜಾಂಶವನ್ನು ವಿಜ್ಞಾನಿಗಳು ಅಲಕ್ಷಿಸುತ್ತಾರೆ.”—ಸಂಪುಟ 2, ಪುಟ 247.