ಯೆಹೋವನ ಪರಮಾಧಿಕಾರವನ್ನು ನೀವು ಬೆಂಬಲಿಸುತ್ತೀರೋ?
“ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; . . . ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.”—ಕೀರ್ತನೆ 96:10.
ಭೂಮಿಯಲ್ಲಿ ಹಿಂದೆಂದೂ ಕಂಡಿರದಿದ್ದ ಒಂದು ಮಹತ್ವಪೂರ್ಣ ಘಟನೆಯು ಸಾ.ಶ. 29ರ ಸರಿಸುಮಾರು ಅಕ್ಟೋಬರ ತಿಂಗಳಲ್ಲಿ ಸಂಭವಿಸಿತು. ಯೇಸು ದೀಕ್ಷಾಸ್ನಾನ ಪಡೆದ ಕೂಡಲೇ ನೀರಿನಿಂದ ಮೇಲೆ ಬಂದಾಗ, ದೇವರಾತ್ಮವು ಪಾರಿವಾಳದ ಹಾಗೆ ಯೇಸುವಿನ ಮೇಲೆ ಇಳಿದುಬರುವುದನ್ನು ಸ್ನಾನಿಕನಾದ ಯೋಹಾನನು ನೋಡಿದನು. ಸುವಾರ್ತೆಯ ಲೇಖಕನಾದ ಮತ್ತಾಯನು ವರದಿಸುವುದು: “ಆಗ—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.” ಬೈಬಲಿನ ನಾಲ್ಕು ಸುವಾರ್ತಾ ಲೇಖಕರಲ್ಲಿ ಎಲ್ಲರೂ ವರದಿಸಿದ್ದ ಕೆಲವೇ ಘಟನೆಗಳಲ್ಲಿ ಇದು ಒಂದಾಗಿತ್ತು.—ಮತ್ತಾಯ 3:16, 17; ಮಾರ್ಕ 1:9-11; ಲೂಕ 3:21, 22; ಯೋಹಾನ 1:32-34.
2 ಯೇಸುವಿನ ಮೇಲೆ ಪವಿತ್ರಾತ್ಮದ ದೃಶ್ಯ ಸುರಿಸುವಿಕೆಯು ಆತನನ್ನು, ಅಭಿಷಿಕ್ತನು ಎಂಬ ಅರ್ಥವುಳ್ಳ ಮೆಸ್ಸೀಯ ಅಥವಾ ಕ್ರಿಸ್ತನಾಗಿ ಗುರುತಿಸಿತು. (ಯೋಹಾನ 1:33) ಕಟ್ಟಕಡೆಗೆ ಆ ವಾಗ್ದತ್ತ “ಸಂತಾನ” ತೋರಿಬಂದನು! ಯಾವನ ಹಿಮ್ಮಡಿಯನ್ನು ಸೈತಾನನು ಕಚ್ಚಲಿದ್ದನೋ ಮತ್ತು ಯಾವನು ಯೆಹೋವನ ಮತ್ತು ಆತನ ಪರಮಾಧಿಕಾರದ ಪ್ರಧಾನ ಶತ್ರುವಾದ ಸೈತಾನನ ತಲೆಯನ್ನು ಜಜ್ಜಲಿದ್ದನೋ ಆ ಯೇಸುವು ಸ್ನಾನಿಕನಾದ ಯೋಹಾನನ ಮುಂದೆ ಈಗ ನಿಂತಿದ್ದನು. (ಆದಿಕಾಂಡ 3:15) ಆ ಸಮಯದಿಂದ ಹಿಡಿದು ಯೇಸುವಿಗೆ, ಯೆಹೋವನ ಪರಮಾಧಿಕಾರ ಮತ್ತು ರಾಜ್ಯದ ಕುರಿತ ಆತನ ಉದ್ದೇಶವನ್ನು ನೆರವೇರಿಸಲು ತಾನು ಹೆಣಗಾಡಲೇಬೇಕೆಂಬ ಪೂರ್ಣ ಅರಿವಿತ್ತು.
3 ಮುಂದಿರುವ ಹೊಸ ನೇಮಕಕ್ಕೆ ತನ್ನನ್ನು ಸಿದ್ಧಪಡಿಸಿಕೊಳ್ಳುವದಕ್ಕಾಗಿ ‘ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್ ಹೊಳೆಯಿಂದ ಹಿಂತಿರುಗಿ ದೇವರಾತ್ಮದಿಂದ ಅಡವಿಯಲ್ಲಿ ನಡಿಸಲ್ಪಟ್ಟನು.’ (ಲೂಕ 4:1; ಮಾರ್ಕ 1:12) ಅಲ್ಲಿ, ಸೈತಾನನಿಂದ ಎಬ್ಬಿಸಲಾದ ಪರಮಾಧಿಕಾರದ ವಿವಾದದ ಕುರಿತು ಮತ್ತು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲಿಕ್ಕಾಗಿ ತನಗೆ ಮಾಡಲಿದ್ದ ಕೆಲಸದ ಕುರಿತು ನಾಲ್ವತ್ತು ದಿನಗಳ ವರೆಗೆ ಗಾಢವಾಗಿ ಧ್ಯಾನಿಸಲು ಯೇಸುವಿಗೆ ಸಮಯ ದೊರೆಯಿತು. ಆ ವಿವಾದವು ಭೂಮ್ಯಾಕಾಶಗಳಲ್ಲಿರುವ ಬುದ್ಧಿಜೀವಿಗಳಾದ ಎಲ್ಲರನ್ನು ಒಳಗೂಡಿಸುತ್ತದೆ. ಆದುದರಿಂದ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ನಾವು ಸಹ ಇಚ್ಛೈಸುತ್ತೇವೆಂದು ತೋರಿಸಲಿಕ್ಕಾಗಿ ಏನು ಮಾಡಬೇಕೆಂದು ನೋಡಲು, ಯೇಸುವಿನ ನಂಬಿಗಸ್ತ ಜೀವನಕ್ರಮವನ್ನು ನಾವು ಪರಿಗಣಿಸಬೇಕು.—ಯೋಬ 1:6-12; 2:2-6.
ಪರಮಾಧಿಕಾರದ ವಿವಾದವು ಎದುರಿಗೆ ಬಂತು
4 ಈ ಮೊದಲೇ ತಿಳಿಸಲಾದ ಘಟನೆಗಳೆಲ್ಲವನ್ನು ಸೈತಾನನು ಸೂಕ್ಷ್ಮವಾಗಿ ಗಮನಿಸಿದನು ನಿಶ್ಚಯ. ಸ್ವಲ್ಪ ಸಮಯವನ್ನೂ ವ್ಯಯಿಸದೆ ಅವನು ದೇವರ “ಸ್ತ್ರೀಯ” ಪ್ರಧಾನ ‘ಸಂತಾನದ’ ಮೇಲೆ ತನ್ನ ಆಕ್ರಮಣವನ್ನು ಪ್ರಾರಂಭಿಸಿದನು. (ಆದಿಕಾಂಡ 3:15) ಸೈತಾನನು ಯೇಸುವನ್ನು ಮೂರು ಬಾರಿ ಪ್ರಲೋಭನೆಗೆ ಒಳಪಡಿಸಿ, ಆತನು ತನಗೆ ಲಾಭದಾಯಕವಾಗಿ ಕಂಡದ್ದನ್ನು ಮಾಡಬೇಕೇ ಹೊರತು ತನ್ನ ತಂದೆಯು ಮಾಡಹೇಳಿದ್ದನ್ನಲ್ಲ ಎಂದು ಸೂಚಿಸಿದನು. ವಿಶೇಷವಾಗಿ ಮೂರನೇ ಪ್ರಲೋಭನೆಯು ಪರಮಾಧಿಕಾರದ ಆ ವಿವಾದವನ್ನು ಎದುರಿಗೆ ತಂದಿತು. ಯೇಸುವಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ತೋರಿಸುತ್ತಾ ಸೈತಾನನು ಭಂಡತನದಿಂದ ಹೇಳಿದ್ದು: “ನೀನು ನನಗೆ ಸಾಷ್ಟಾಂಗ ನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು.” ಪಿಶಾಚನಿಗೆ ನಿಶ್ಚಯವಾಗಿಯೂ “ಪ್ರಪಂಚದ ಎಲ್ಲಾ ರಾಜ್ಯಗಳ” ಮೇಲೆ ಅಧಿಕಾರವಿದೆ ಎಂಬುದನ್ನು ಪೂರ್ಣ ಬಲ್ಲವನಾಗಿದ್ದ ಯೇಸು, ಪರಮಾಧಿಕಾರದ ವಿವಾದದಲ್ಲಿ ತನ್ನ ನಿಲುವನ್ನು ತೋರಿಸುತ್ತಾ ಉತ್ತರಿಸಿದ್ದು: “ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.”—ಮತ್ತಾಯ 4:8-10.
5 ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವುದೇ ತನ್ನ ಪ್ರಧಾನ ಗುರಿ ಎಂಬುದನ್ನು ಯೇಸುವಿನ ಜೀವನಕ್ರಮವು ಸ್ಪಷ್ಟವಾಗಿ ತೋರಿಸಿತು. ದೇವರ ಪರಮಾಧಿಕಾರದ ನ್ಯಾಯವಾದ ಹಕ್ಕನ್ನು ರುಜುಪಡಿಸಲಿಕ್ಕಾಗಿ, ಸೈತಾನನ ಕೈಯಿಂದ ಬರಲಿರುವ ಮರಣದ ತನಕ ಅಂದರೆ ಪ್ರವಾದನಾ ರೂಪವಾಗಿ ಮುಂತಿಳಿಸಿದ ಸ್ತ್ರೀಯ ‘ಸಂತಾನದ’ ಹಿಮ್ಮಡಿಯು ಕಚ್ಚಲ್ಪಡುವ ತನಕ ತಾನು ನಂಬಿಗಸ್ತನಾಗಿ ಉಳಿಯಬೇಕೆಂದು ಯೇಸುವಿಗೆ ಪೂರ್ಣ ತಿಳಿದಿತ್ತು. (ಮತ್ತಾಯ 16:21; 17:12) ದಂಗೆಕೋರ ಸೈತಾನನನ್ನು ಅಣಗಿಸಿಬಿಡಲು ಮತ್ತು ಸಮಸ್ತ ಸೃಷ್ಟಿಯಲ್ಲಿ ಶಾಂತಿ ಮತ್ತು ವ್ಯವಸ್ಥೆಯನ್ನು ಪುನಃಸ್ಥಾಪಿಸಲು ದೇವರ ರಾಜ್ಯವು ಯೆಹೋವನಿಂದ ನಿಯೋಜಿಸಲಾದ ಮಾಧ್ಯಮವೆಂಬ ಸಾಕ್ಷಿಯನ್ನು ಸಹ ಅವನು ಕೊಡಬೇಕಿತ್ತು. (ಮತ್ತಾಯ 6:9, 10) ಈ ಕಷ್ಟಕರ ನಿಯೋಗವನ್ನು ಪೂರೈಸಲಿಕ್ಕಾಗಿ ಯೇಸು ಏನು ಮಾಡಿದನು?
“ದೇವರ ರಾಜ್ಯವು ಸಮೀಪಿಸಿತು”
6 ಆ ನಿಯೋಗವನ್ನು ಆರಂಭಿಸುತ್ತಾ “ಯೇಸು ಗಲಿಲಾಯ ಸೀಮೆಗೆ ಬಂದು—ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, . . . ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು.” (ಮಾರ್ಕ 1:14, 15) ವಾಸ್ತವದಲ್ಲಿ ಅವನಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:18-21, 43) ಯೇಸು ದೇಶದಾದ್ಯಂತ ಸಂಚರಿಸುತ್ತಾ “ದೇವರ ರಾಜ್ಯದ ಸುವಾರ್ತೆಯನ್ನು” ಸಾರಿದನು. (ಲೂಕ 8:1) ಅವನು ಅನೇಕ ಮಹತ್ಕಾರ್ಯಗಳನ್ನೂ ಮಾಡಿದನು; ಜನರ ಗುಂಪುಗಳಿಗೆ ಅದ್ಭುತಕರವಾಗಿ ಉಣಿಸಿದನು, ಆಪತ್ಕಾರಕ ಹವಾಮಾನವನ್ನು ಶಾಂತಗೊಳಿಸಿದನು, ರೋಗಿಗಳನ್ನು ಗುಣಪಡಿಸಿದನು, ಸತ್ತವರನ್ನೂ ಎಬ್ಬಿಸಿದನು. ಏದೆನಿನಲ್ಲಾದ ದಂಗೆಯಿಂದ ಉಂಟಾದ ಎಲ್ಲ ಹಾನಿಯನ್ನು ಮತ್ತು ಕಷ್ಟಸಂಕಟಗಳನ್ನು ತೆಗೆದುಹಾಕಲು ಮತ್ತು ಹೀಗೆ “ಸೈತಾನನ ಕೆಲಸಗಳನ್ನು ಲಯ” ಮಾಡಲು ದೇವರು ಶಕ್ತನೆಂಬುದನ್ನು ಯೇಸು ರುಜುಪಡಿಸಿದನು.—1 ಯೋಹಾನ 3:8.
7 ರಾಜ್ಯ ಸುವಾರ್ತೆಯನ್ನು ಸಮಗ್ರವಾಗಿ ಸಾರಲಿಕ್ಕಾಗಿ ಯೇಸು ನಂಬಿಗಸ್ತ ಹಿಂಬಾಲಕರ ಒಂದು ಗುಂಪನ್ನು ಒಟ್ಟುಗೂಡಿಸಿ ಆ ಕೆಲಸಕ್ಕಾಗಿ ಅವರನ್ನು ತರಬೇತುಗೊಳಿಸಿದನು. ಮೊದಲಾಗಿ, ಅವನು ತನ್ನ 12 ಅಪೊಸ್ತಲರನ್ನು ನೇಮಿಸಿ ‘ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೆ ಕಳುಹಿಸಿದನು.’ (ಲೂಕ 9:1, 2) ಅನಂತರ ಇನ್ನೂ ಎಪ್ಪತ್ತು ಮಂದಿಯನ್ನು “ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ” ಎಂಬ ಸಂದೇಶವನ್ನು ಸಾರಿ ಹೇಳಲು ಕಳುಹಿಸಿದನು. (ಲೂಕ 10:1, 8, 9) ಈ ಶಿಷ್ಯರು ಹಿಂತಿರುಗಿ ಬಂದು ರಾಜ್ಯ ಸಾರುವ ಕೆಲಸದಲ್ಲಿ ತಮಗೆ ಸಿಕ್ಕಿದ್ದ ಯಶಸ್ಸನ್ನು ವರದಿಸಿದಾಗ ಯೇಸು ಪ್ರತಿಕ್ರಿಯಿಸಿದ್ದು: “ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು.”—ಲೂಕ 10:17, 18.
8 ರಾಜ್ಯಕ್ಕೆ ಸಾಕ್ಷಿನೀಡಲು ದೊರೆತ ಯಾವ ಸಂದರ್ಭವನ್ನೂ ಯೇಸು ಬಿಟ್ಟುಬಿಡಲಿಲ್ಲ ಮತ್ತು ಅದಕ್ಕಾಗಿ ತನ್ನನ್ನು ಪೂರ್ಣವಾಗಿ ವ್ಯಯಿಸಿಕೊಂಡನು. ಅವನು ಎಡೆಬಿಡದೆ ಕೆಲಸಮಾಡಿದನು, ಅಹೋರಾತ್ರಿ ದುಡಿದನು ಮತ್ತು ಜೀವನದ ಸಾಮಾನ್ಯ ಆರಾಮಗಳನ್ನು ಸಹ ತ್ಯಜಿಸಿದನು. “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದನವನು. (ಲೂಕ 9:58; ಮಾರ್ಕ 6:31; ಯೋಹಾನ 4:31-34) ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ ಯೇಸು ಪೊಂತ್ಯ ಪಿಲಾತನ ಮುಂದೆ ಧೈರ್ಯದಿಂದ ನುಡಿದದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಯೇಸುವಿನ ಇಡೀ ಜೀವನಕ್ರಮ ತೋರಿಸಿದ್ದೇನಂದರೆ ಆತನು ಲೋಕಕ್ಕೆ ಬಂದದ್ದು ಬರೇ ಒಬ್ಬ ಮಹಾ ಬೋಧಕನಾಗಲಿಕ್ಕಾಗಿ ಅಲ್ಲ, ಪವಾಡ ಪುರುಷನಾಗಲಿಕ್ಕಾಗಿ ಅಲ್ಲ ಅಥವಾ ತನ್ನನ್ನೇ ಬಲಿಯಾಗಿ ಕೊಟ್ಟ ರಕ್ಷಕನಾಗಲಿಕ್ಕಾಗಿ ಕೂಡ ಅಲ್ಲ. ಬದಲಾಗಿ ಪರಮಾಧಿಕಾರಿ ಯೆಹೋವನ ಚಿತ್ತವನ್ನು ಬೆಂಬಲಿಸಲಿಕ್ಕಾಗಿ ಮತ್ತು ಆ ಚಿತ್ತವನ್ನು ತನ್ನ ರಾಜ್ಯದ ಮೂಲಕ ನೆರವೇರಿಸಲು ದೇವರಿಗಿರುವ ಶಕ್ತಿಯ ಕುರಿತು ಸಾಕ್ಷಿಕೊಡುವುದಕ್ಕಾಗಿ ಬಂದನು.—ಯೋಹಾನ 14:6.
“ತೀರಿತು”
9 ದೇವರ ರಾಜ್ಯದ ಸಂಬಂಧದಲ್ಲಿ ಯೇಸು ಮಾಡಿದ ವಿಷಯಗಳೆಲ್ಲವು ಶತ್ರುವಾದ ಪಿಶಾಚ ಸೈತಾನನಿಗೆ ಮಾತ್ರ ಮೆಚ್ಚಿಕೆಯಾಗಲಿಲ್ಲ. ಪದೇ ಪದೇ ಅವನು ತನ್ನ ‘ಸಂತಾನದ’ ಐಹಿಕ ಭಾಗವಾದ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳ ಮೂಲಕವಾಗಿ ದೇವರ ಸ್ತ್ರೀಯ “ಸಂತಾನ”ವನ್ನು ಕೊಂದುಬಿಡಲು ಪ್ರಯತ್ನಿಸಿದನು. ಯೇಸು ತನ್ನ ಜನನದಿಂದ ಹಿಡಿದು ಭೂಜೀವಿತದ ಅಂತ್ಯದ ತನಕ ಸೈತಾನ ಮತ್ತು ಅವನ ದುರಾತ್ಮಗಳ ಆಕ್ರಮಣದ ಗುರಿಹಲಗೆಯಾಗಿದ್ದನು. ಕೊನೆಗೆ ಸಾ.ಶ. 33ರ ವಸಂತ ಕಾಲದಲ್ಲಿ ಹಿಮ್ಮಡಿಯಲ್ಲಿ ಕಚ್ಚಲ್ಪಡಲಿಕ್ಕಾಗಿ ಮನುಷ್ಯಕುಮಾರನನ್ನು ಅವನ ವಿರೋಧಿಯ ಕೈಗೆ ಒಪ್ಪಿಸಲ್ಪಡುವ ಸಮಯ ಬಂತು. (ಮತ್ತಾಯ 20:18, 19; ಲೂಕ 18:31-33) ಯೇಸುವನ್ನು ಖಂಡನೆಗೂ ಯಾತನೆಯ ಕಂಬದ ಮೇಲೆ ವೇದನಾಮಯ ಮರಣಕ್ಕೂ ಗುರಿಪಡಿಸಲು ಇಸ್ಕರಿಯೋತ ಯೂದನಿಂದ ಹಿಡಿದು ಮಹಾ ಯಾಜಕರು, ಶಾಸ್ತ್ರಿಗಳು, ಫರಿಸಾಯರು ಮತ್ತು ರೋಮನರನ್ನು ಸೈತಾನನು ಹೇಗೆ ಕುಟಿಲತೆಯಿಂದ ಬಳಸಿದನೆಂದು ಸುವಾರ್ತಾ ವೃತ್ತಾಂತಗಳು ಸ್ಪಷ್ಟವಾಗಿ ತೋರಿಸುತ್ತವೆ.—ಅ. ಕೃತ್ಯಗಳು 2:22, 23.
10 ಯೇಸು ಯಾತನಾ ಕಂಬದ ಮೇಲೆ ನಿಧಾನಗತಿಯ, ವೇದನಾಮಯ ಮರಣವನ್ನು ಅನುಭವಿಸುತ್ತಿರುವುದನ್ನು ನೆನಸುವಾಗ ನಿಮ್ಮ ಮನಸ್ಸಿಗೆ ಏನು ಹೊಳೆಯುತ್ತದೆ? ಪಾಪಿ ಮಾನವಕುಲದ ಪರವಾಗಿ ಯೇಸು ನಿಸ್ವಾರ್ಥತೆಯಿಂದ ಅರ್ಪಿಸಿದ ವಿಮೋಚನಾ ಯಜ್ಞದ ಮೌಲ್ಯವು ಪ್ರಾಯಶಃ ನಿಮ್ಮ ನೆನಪಿಗೆ ಬರಬಹುದು. (ಮತ್ತಾಯ 20:28; ಯೋಹಾನ 15:13) ಆ ಯಜ್ಞವನ್ನು ಒದಗಿಸಿದ್ದರಲ್ಲಿ ಯೆಹೋವನು ತೋರಿಸಿದ ಮಹಾ ಪ್ರೀತಿಯು ನಿಮ್ಮನ್ನು ಅಚ್ಚರಿಗೊಳಿಸಬಹುದು. (ಯೋಹಾನ 3:16) ರೋಮನ್ ಸೇನಾಪತಿಯು ಯೇಸುವಿನ ಕುರಿತು “ನಿಜವಾಗಿ ಈತನು ದೇವಕುಮಾರನಾಗಿದ್ದನು” ಎಂದು ಹೇಳಲು ಪ್ರಚೋದಿತನಾದಂತೆ ನಿಮಗೂ ಅನಿಸಬಹುದು. (ಮತ್ತಾಯ 27:54) ಇವೆಲ್ಲವೂ ಸರಿಯಾದ ಪ್ರತಿವರ್ತನೆಗಳೇ ನಿಶ್ಚಯ. ಇನ್ನೊಂದು ಕಡೆ, ಯಾತನಾಕಂಬದಲ್ಲಿ ಯೇಸು ಕೊನೆಯಲ್ಲಿ ಹೇಳಿದ “ತೀರಿತು” ಎಂಬ ಮಾತನ್ನು ನೆನಪಿಗೆ ತನ್ನಿರಿ. (ಯೋಹಾನ 19:30) ಯೇಸು ತೀರಿಸಿದ್ದು ಏನನ್ನು? ಯೇಸು ತನ್ನ ಜೀವನ ಮತ್ತು ಮರಣದ ಮೂಲಕ ಅನೇಕ ವಿಷಯಗಳನ್ನು ಸಾಧಿಸಿದ್ದನಾದರೂ ಅವನು ಭೂಮಿಗೆ ಬಂದದ್ದು ಮುಖ್ಯವಾಗಿ ಯೆಹೋವನ ಪರಮಾಧಿಕಾರದ ವಿವಾದವನ್ನು ಇತ್ಯರ್ಥಗೊಳಿಸಲಿಕ್ಕಾಗಿಯೇ ಅಲ್ಲವೇ? ಮತ್ತು ಸ್ತ್ರೀಯ ‘ಸಂತಾನ’ವಾಗಿದ್ದ ಅವನು ಯೆಹೋವನ ನಾಮಕ್ಕೆ ತಗಲಿದ್ದ ನಿಂದೆಯೆಲ್ಲವನ್ನು ತೊಲಗಿಸಲಿಕ್ಕಾಗಿ ಸೈತಾನನಿಂದ ಅತಿಯಾದ ಕಷ್ಟಸಂಕಟಗಳನ್ನೂ ಅನುಭವಿಸುವನೆಂದು ಮುಂತಿಳಿಸಲಾಗಿತ್ತಲ್ಲವೇ? (ಯೆಶಾಯ 53:3-7) ಅವು ಅತಿ ಭಾರವಾದ ಜವಾಬ್ದಾರಿಗಳಾಗಿದ್ದವು, ಆದರೂ ಯೇಸು ಅವನ್ನು ಪೂರ್ಣವಾಗಿ ತೀರಿಸಿದನು. ಎಂಥ ಸಾಧನೆಯು ಅದಾಗಿತ್ತು!
11 ಯೇಸುವನ್ನು ಆತನ ನಂಬಿಗಸ್ತಿಕೆ ಮತ್ತು ನಿಷ್ಠೆಗಾಗಿ ಪುನರುತ್ಥಾನಗೊಳಿಸಲಾಯಿತು, ಮನುಷ್ಯನಾಗಿ ಅಲ್ಲ, “ಬದುಕಿಸುವ ಆತ್ಮನಾಗಿ.” (1 ಕೊರಿಂಥ 15:45; 1 ಪೇತ್ರ 3:18) ಯೆಹೋವನು ತನ್ನ ಮಹಿಮಾಭರಿತ ಪುತ್ರನಿಗೆ ಕೊಟ್ಟ ವಾಗ್ದಾನ ಹೀಗಿತ್ತು: “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು.” (ಕೀರ್ತನೆ 110:1) ಆ ‘ವಿರೋಧಿಗಳಲ್ಲಿ’ ಮುಖ್ಯ ಅಪರಾಧಿ ಸೈತಾನ ಮತ್ತು ಅವನ “ಸಂತಾನ”ದಲ್ಲಿ ಇರುವವರೆಲ್ಲರು ಸೇರಿದ್ದಾರೆ. ಯೆಹೋವನ ಮೆಸ್ಸೀಯ ರಾಜ್ಯದ ಅರಸನಾದ ಯೇಸು ಕ್ರಿಸ್ತನು ಭೂಪರಲೋಕಗಳಲ್ಲಿರುವ ದಂಗೆಕೋರರೆಲ್ಲರನ್ನು ನಾಶಮಾಡುವುದರಲ್ಲಿ ನೇತೃತ್ವ ವಹಿಸುವನು. (ಪ್ರಕಟನೆ 12:7-9; 19:11-16; 20:1-3, 10) ಆಗ ಆದಿಕಾಂಡ 3:15ರ ಪ್ರವಾದನೆ ಹಾಗೂ “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆ ಪೂರ್ಣವಾಗಿ ನೆರವೇರುವುದು.—ಮತ್ತಾಯ 6:10; ಫಿಲಿಪ್ಪಿ 2:8-11.
ಅನುಸರಿಸಲಿಕ್ಕಾಗಿ ಮಾದರಿ
12 ಯೇಸು ಪ್ರವಾದಿಸಿದ ಪ್ರಕಾರವೇ ಇಂದು ರಾಜ್ಯದ ಸುವಾರ್ತೆಯು ಅನೇಕ ದೇಶಗಳಲ್ಲಿ ಸಾರಲ್ಪಡುತ್ತಿದೆ. (ಮತ್ತಾಯ 24:14) ಫಲಿತಾಂಶವಾಗಿ, ಲಕ್ಷಾಂತರ ಜನರು ದೇವರಿಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುತ್ತಾರೆ. ರಾಜ್ಯವು ತರಲಿರುವ ಆಶೀರ್ವಾದಗಳ ಕುರಿತು ಅವರು ಪುಳಕಿತರಾಗಿದ್ದಾರೆ. ಪರದೈಸ ಭೂಮಿಯಲ್ಲಿ ಶಾಂತಿ ಮತ್ತು ಸುರಕ್ಷೆಯಲ್ಲಿ ಸದಾ ಜೀವಿಸುವುದನ್ನು ಅವರು ಮುನ್ನೋಡುತ್ತಾರೆ. ತಮ್ಮ ನಿರೀಕ್ಷೆಯ ಕುರಿತು ಅವರು ಇತರರಿಗೆ ಸಂತೋಷದಿಂದ ತಿಳಿಸುತ್ತಾರೆ. (ಕೀರ್ತನೆ 37:11; 2 ಪೇತ್ರ 3:13) ಈ ರಾಜ್ಯ ಘೋಷಕರಲ್ಲಿ ನೀವೂ ಒಬ್ಬರೋ? ಹಾಗಿರುವಲ್ಲಿ ನಿಮ್ಮನ್ನು ಪ್ರಶಂಸಿಸುತ್ತೇವೆ. ಆದರೂ ನಮ್ಮಲ್ಲಿ ಪ್ರತಿಯೊಬ್ಬನು ಗಮನಿಸಲೇಬೇಕಾದ ಬೇರೊಂದು ವಿಷಯವಿದೆ.
13 ಅಪೊಸ್ತಲ ಪೇತ್ರನು ಬರೆದದ್ದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಈ ಸಂದರ್ಭದಲ್ಲಿ ಪೇತ್ರನು ತಿಳಿಸಿದ್ದು ಯೇಸುವಿನ ಸಾರುವಿಕೆಯ ಹುರುಪನ್ನಲ್ಲ ಅಥವಾ ಬೋಧಿಸುವ ಕೌಶಲವನ್ನಲ್ಲ, ಬದಲಾಗಿ ಆತನು ಅನುಭವಿಸಿದ ಬಾಧೆಗಳನ್ನೇ ಎಂಬುದನ್ನು ಗಮನಿಸಿರಿ. ಯೆಹೋವನ ಪರಮಾಧಿಕಾರಕ್ಕೆ ಅಧೀನನಾಗಿರಲು ಹಾಗೂ ಸೈತಾನನು ಸುಳ್ಳನು ಎಂದು ರುಜುಪಡಿಸಲು ಯೇಸು ಎಷ್ಟರ ಮಟ್ಟಿಗೆ ಬಾಧೆಗಳನ್ನು ಅನುಭವಿಸಲು ಸಿದ್ಧನಿದ್ದನೆಂಬುದು ಪೇತ್ರನಿಗೆ ತಿಳಿದಿತ್ತು ಯಾಕಂದರೆ ಅವನು ಅದನ್ನು ಕಣ್ಣಾರೆ ಕಂಡಿದ್ದನು. ಹೀಗಿರಲಾಗಿ ಯೇಸುವಿನ ಹೆಜ್ಜೆಜಾಡನ್ನು ನಾವು ಯಾವ ವಿಧಗಳಲ್ಲಿ ಅನುಸರಿಸಬಲ್ಲೆವು? ನಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ಮತ್ತು ಗೌರವಿಸಲು ನಾನು ಎಷ್ಟರ ಮಟ್ಟಿಗೆ ಬಾಧೆಯನ್ನು ಅನುಭವಿಸಲು ಸಿದ್ಧನು? ನಾನು ಜೀವಿಸುವ ರೀತಿ ಹಾಗೂ ಶುಶ್ರೂಷೆ ನಡಿಸುವ ರೀತಿಯಿಂದ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವುದೇ ನನ್ನ ಪರಮೋಚ್ಛ ಗುರಿಯೆಂದು ತೋರಿಸುತ್ತೇನೋ?’—ಕೊಲೊಸ್ಸೆ 3:17.
14 ಪ್ರತಿ ದಿನವೂ ನಮಗೆ ಚಿಕ್ಕ-ದೊಡ್ಡ ಪರೀಕ್ಷೆಗಳನ್ನು ಎದುರಿಸಲಿಕ್ಕಿದೆ, ನಿರ್ಣಯಗಳನ್ನು ಮಾಡಲಿಕ್ಕಿದೆ. ಯಾವ ರೀತಿಯ ಪ್ರತಿಕ್ರಿಯೆ ತೋರಿಸಬೇಕೆಂದು ನಾವು ನಿರ್ಧರಿಸುವುದು ಹೇಗೆ? ಉದಾಹರಣೆಗೆ, ನಮ್ಮ ಕ್ರೈಸ್ತ ನಿಲುವನ್ನು ಅಪಾಯಕ್ಕೊಡ್ಡುವ ವಿಷಯವನ್ನು ಮಾಡುವ ಪ್ರಲೋಭನೆಯು ಎದುರೆದುರಾಗಿ ಬಂದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಯೇಸು ಸ್ವತಃ ತನಗೆ ದಯೆತೋರಿಸಿಕೊಳ್ಳಬೇಕೆಂದು ಪೇತ್ರನು ಹೇಳಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ . . . ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಉದ್ಗರಿಸಿದನು ಯೇಸು. (ಮತ್ತಾಯ 16:21-23) ಅಧ್ಯಾತ್ಮಿಕ ನಷ್ಟವನ್ನು ತರಸಾಧ್ಯವಿರುವಂಥ ಆರ್ಥಿಕ ಲಾಭದ ಅಥವಾ ಉದ್ಯೋಗದ ಬಡ್ತಿಯ ಸುಸಂದರ್ಭಗಳು ದೊರೆಯುವಲ್ಲಿ ನಾವು ಯೇಸುವಿನಂತೆ ಪ್ರತಿಕ್ರಿಯೆ ತೋರಿಸುವೆವೋ? ತನ್ನ ಅದ್ಭುತಗಳನ್ನು ನೋಡಿದ ಜನರು “ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು” ಯೇಸು ತಿಳುಕೊಂಡಾಗ ಅವನು ಬೇಗನೆ ಅವರನ್ನು ಬಿಟ್ಟು ಹೊರಟುಹೋದನು.—ಯೋಹಾನ 6:15.
15 ಇವುಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಯೇಸು ಅಷ್ಟು ದೃಢವಾದ ಪ್ರತಿಕ್ರಿಯೆಯನ್ನು ತೋರಿಸಿದ್ದು ಏಕೆ? ಏಕೆಂದರೆ ಅವುಗಳಲ್ಲಿ ತನ್ನ ವೈಯಕ್ತಿಕ ಸುರಕ್ಷೆ ಅಥವಾ ಪ್ರಯೋಜನಕ್ಕಿಂತ ಹೆಚ್ಚಿನದ್ದು ಒಳಗೂಡಿತ್ತೆಂದು ಅವನಿಗೆ ಸ್ಪಷ್ಟವಾಗಿ ತೋರಿಬಂತು. ಯಾವುದೇ ಕಷ್ಟನಷ್ಟಗಳು ಬರಲಿ ತನ್ನ ತಂದೆಯ ಚಿತ್ತವನ್ನು ಮಾಡಲು ಮತ್ತು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ಅವನು ಬಯಸಿದ್ದನು. (ಮತ್ತಾಯ 26:50-54) ಹೀಗೆ ಯೆಹೋವನ ಪರಮಾಧಿಕಾರದ ವಿವಾದವನ್ನು ಯೇಸು ಯಾವಾಗಲೂ ತನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿ ಇಟ್ಟನು. ಒಂದುವೇಳೆ ನಾವು ಹಾಗೆ ಮಾಡದಿರುವಲ್ಲಿ ರಾಜಿಮಾಡುವ ಅಥವಾ ತಪ್ಪುಮಾಡುವ ಅಪಾಯವು ಸದಾ ಇದೆ. ಏಕೆ? ಏಕೆಂದರೆ ತಪ್ಪಾದ ವಿಷಯವು ಆಕರ್ಷಕವಾಗಿ ತೋರುವಂತೆ ಮಾಡುವುದರಲ್ಲಿ ಚಾಣಾಕ್ಷನಾದ ಸೈತಾನನ ತಂತ್ರೋಪಾಯಗಳಿಗೆ ನಾವು ಸುಲಭವಾಗಿ ಬಲಿಬೀಳಬಲ್ಲೆವು. ಹವ್ವಳನ್ನೂ ಅವನು ಹಾಗೆಯೇ ಪ್ರಲೋಭನೆಗೆ ಒಡ್ಡಿದನಲ್ಲಾ.—2 ಕೊರಿಂಥ 11:14; 1 ತಿಮೊಥೆಯ 2:14.
16 ನಮ್ಮ ಶುಶ್ರೂಷೆಯಲ್ಲಿ ಜನರಿಗಿರುವ ಚಿಂತೆಗಳ ಕುರಿತು ಅವರೊಂದಿಗೆ ಮಾತಾಡುತ್ತೇವೆ ಮತ್ತು ಬೈಬಲ್ ಕೊಡುವ ಉತ್ತರಗಳನ್ನು ಅವರಿಗೆ ತೋರಿಸುತ್ತೇವೆ. ಬೈಬಲ್ ಅಧ್ಯಯನ ಮಾಡುವಂತೆ ಅವರ ಆಸಕ್ತಿಯನ್ನು ಹುಟ್ಟಿಸಲು ಇದೊಂದು ಪರಿಣಾಮಕಾರಿ ವಿಧಾನ. ಆದರೆ ನಮ್ಮ ಕಟ್ಟಕಡೆಯ ಗುರಿಯು, ಬೈಬಲ್ ಏನನ್ನುತ್ತದೆಂದು ತಿಳಿಯಲು ಮತ್ತು ದೇವರ ರಾಜ್ಯವು ಯಾವ ಆಶೀರ್ವಾದಗಳನ್ನು ತರಲಿದೆಯೆಂದು ಅರಿಯಲು ಜನರಿಗೆ ಸಹಾಯ ಮಾಡುವುದು ಮಾತ್ರವೇ ಅಲ್ಲ. ದೇವರ ಪರಮಾಧಿಕಾರದ ವಿವಾದವನ್ನು ಅವರು ಗ್ರಹಿಸುವಂತೆ ನಾವು ಅವರಿಗೆ ಸಹಾಯ ಮಾಡಲೇಬೇಕು. ಅವರು ನಿಜ ಕ್ರೈಸ್ತರಾಗಲು ಮತ್ತು ತಮ್ಮ ‘ಯಾತನಾ ಕಂಬವನ್ನು’ (NW) ಹೊತ್ತುಕೊಂಡು ರಾಜ್ಯದ ಸಲುವಾಗಿ ಬಾಧೆಯನ್ನು ಅನುಭವಿಸಲು ಸಿದ್ಧರಾಗಿರುವರೋ? (ಮಾರ್ಕ 8:34) ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವ ಜನರೊಂದಿಗೆ ಸೇರಲು ಅವರು ತಯಾರಿದ್ದಾರೋ ಮತ್ತು ಹೀಗೆ ಸೈತಾನನನ್ನು ಸುಳ್ಳನೆಂದೂ ನಿಂದಕನೆಂದೂ ರುಜುಪಡಿಸುವರೋ? (ಜ್ಞಾನೋಕ್ತಿ 27:11) ಹಾಗೆ ಮಾಡುವಂತೆ ನಮಗೂ ಇತರರಿಗೂ ಸಹಾಯ ಮಾಡುವುದು ನಮಗಿರುವ ಗೌರವವಾಗಿದೆ.—1 ತಿಮೊಥೆಯ 4:16.
“ದೇವರು ಸಮಸ್ತರಲ್ಲಿಯೂ ಸಮಸ್ತವೂ” ಆಗುವಾಗ
17 ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತೇವೆಂದು ನಮ್ಮ ನಡವಳಿ ಹಾಗೂ ಶುಶ್ರೂಷೆಯ ಮೂಲಕ ತೋರಿಸಲು ನಾವೀಗ ಕೈಲಾದಷ್ಟನ್ನು ಮಾಡುವಾಗ, ಯೇಸು ಕ್ರಿಸ್ತನು ತನ್ನ ‘ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವ’ ಸಮಯಕ್ಕಾಗಿ ಮುನ್ನೋಡಸಾಧ್ಯವಿದೆ. ಅದು ಯಾವಾಗ ನಡೆಯಲಿದೆ? ಅಪೊಸ್ತಲ ಪೌಲನು ವಿವರಿಸುವುದು: “ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ . . . ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.”—1 ಕೊರಿಂಥ 15:24, 25, 28.
18 “ದೇವರು ಸಮಸ್ತರಲ್ಲಿಯೂ ಸಮಸ್ತವೂ” ಆಗುವಾಗ ಅದು ಎಷ್ಟೊಂದು ಮಹಿಮಾಭರಿತ ಸಮಯವಾಗಲಿದೆ! ಆಗ ದೇವರ ರಾಜ್ಯವು ಅದರ ಗುರಿಯನ್ನು ಸಾಧಿಸಿರುವದು. ಯೆಹೋವನ ಪರಮಾಧಿಕಾರದ ವಿರೋಧಿಗಳೆಲ್ಲರೂ ಆಗ ನಾಶವಾಗಿ ಹೋಗಿರುವರು. ಸಮಸ್ತ ವಿಶ್ವದಲ್ಲಿ ಶಾಂತಿ ಮತ್ತು ವ್ಯವಸ್ಥೆಯು ಪುನಃಸ್ಥಾಪಿಸಲ್ಪಟ್ಟಿರುವುದು. ಕೀರ್ತನೆಗಾರನ ಮಾತುಗಳಲ್ಲಿ ಸಮಸ್ತ ಸೃಷ್ಟಿಯೂ ಹೀಗೆಂದು ಹಾಡುವುದು: “ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; . . . ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; . . . ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.”—ಕೀರ್ತನೆ 96:8, 10.
ಉತ್ತರಿಸಬಲ್ಲಿರೋ?
• ದೇವರ ಪರಮಾಧಿಕಾರದ ವಿವಾದವನ್ನು ಯೇಸು ಪರಮೋಚ್ಛವಾಗಿಟ್ಟದ್ದು ಹೇಗೆ?
• ಯೇಸು ತನ್ನ ಶುಶ್ರೂಷೆ ಮತ್ತು ಮರಣದಿಂದ ಪ್ರಪ್ರಧಾನವಾಗಿ ಏನನ್ನು ತೀರಿಸಿದನು?
• ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತೇವೆಂದು ತೋರಿಸಲು ಯೇಸುವಿನ ಮಾದರಿಯನ್ನು ನಾವು ಯಾವ ವಿಧಗಳಲ್ಲಿ ಅನುಸರಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸಾ.ಶ. 29ರ ಸರಿಸುಮಾರು ಅಕ್ಟೋಬರದಲ್ಲಿ ಯಾವ ಮಹತ್ವಪೂರ್ಣ ಘಟನೆಯು ಸಂಭವಿಸಿತು? (ಬಿ) ಆ ಘಟನೆಯು ಯೇಸುವಿಗೆ ಯಾವ ಅರ್ಥದಲ್ಲಿತ್ತು?
3. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ತನಗಿದ್ದ ಪಾತ್ರಕ್ಕಾಗಿ ಯೇಸು ಹೇಗೆ ತನ್ನನ್ನು ಸಿದ್ಧಪಡಿಸಿಕೊಂಡನು?
4. ಸೈತಾನನ ಯಾವ ಕೃತ್ಯವು ಪರಮಾಧಿಕಾರದ ವಿವಾದವನ್ನು ಎದುರಿಗೆ ತಂದಿತು?
5. ಯಾವ ಕಷ್ಟಕರವಾದ ನಿಯೋಗವನ್ನು ಯೇಸು ಪೂರೈಸಬೇಕಾಗಿತ್ತು?
6. ‘ಸೈತಾನನ ಕೆಲಸಗಳನ್ನು ಲಯಮಾಡಲು’ ದೇವರು ಬಳಸುವ ಮಾಧ್ಯಮವು ದೇವರ ರಾಜ್ಯವೆಂದು ಯೇಸು ಪ್ರಕಟಪಡಿಸಿದ್ದು ಹೇಗೆ?
7. ಯೇಸು ತನ್ನ ಹಿಂಬಾಲಕರಿಗೆ ಏನು ಮಾಡಲು ಆಜ್ಞಾಪಿಸಿದನು, ಮತ್ತು ಫಲಿತಾಂಶವೇನು?
8. ಯೇಸುವಿನ ಇಡೀ ಜೀವನಕ್ರಮ ಏನನ್ನು ಸ್ಪಷ್ಟವಾಗಿ ತೋರಿಸಿತು?
9. ದೇವರ ಸ್ತ್ರೀಯ ‘ಸಂತಾನದ’ ಹಿಮ್ಮಡಿಯನ್ನು ಕಚ್ಚುವುದರಲ್ಲಿ ಸೈತಾನನು ಕೊನೆಗೆ ಹೇಗೆ ಸಫಲನಾದನು?
10. ಯಾತನಾ ಕಂಬದ ಮೇಲೆ ತನ್ನ ಮರಣದ ಮೂಲಕ ಯೇಸು ಪ್ರಪ್ರಧಾನವಾಗಿ ಏನನ್ನು ತೀರಿಸಿದನು?
11. ಏದೆನಿನ ಪ್ರವಾದನೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕಾಗಿ ಯೇಸು ಏನು ಮಾಡುವನು?
12, 13. (ಎ) ರಾಜ್ಯ ಸುವಾರ್ತೆಗೆ ಯಾವ ಪ್ರತಿಕ್ರಿಯೆಯು ಇಂದು ತೋರಿಬರುತ್ತದೆ? (ಬಿ) ಯೇಸುವಿನ ಹೆಜ್ಜೆಜಾಡನ್ನು ಅನುಸರಿಸಲು ಬಯಸುವಲ್ಲಿ ನಾವು ನಮಗೆ ಏನು ಕೇಳಿಕೊಳ್ಳಬೇಕು?
14, 15. (ಎ) ತಪ್ಪುದಾರಿಗೆಳೆಯುವ ಸಲಹೆ ಮತ್ತು ಸಂದರ್ಭಗಳಿಗೆ ಯೇಸು ಹೇಗೆ ಪ್ರತಿಕ್ರಿಯೆ ತೋರಿಸಿದನು, ಮತ್ತು ಏಕೆ? (ಬಿ) ಯಾವ ವಿವಾದವನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬೇಕು? (“ಯೆಹೋವನ ಪಕ್ಷದಲ್ಲಿ ನಿಂತುಕೊಳ್ಳಿರಿ” ಎಂಬ ಚೌಕದಲ್ಲಿನ ಹೇಳಿಕೆಗಳನ್ನು ಸೇರಿಸಿ.)
16. ಇತರರಿಗೆ ನೆರವಾಗುವುದರಲ್ಲಿ ನಮ್ಮ ಕಟ್ಟಕಡೆಯ ಗುರಿ ಯಾವುದಾಗಿರಬೇಕು?
17, 18. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತೇವಾದರೆ ಯಾವ ಮಹಿಮಾಭರಿತ ಸಮಯಕ್ಕಾಗಿ ನಾವು ಮುನ್ನೋಡಬಲ್ಲೆವು?
[Box/Pictures on page 11]
ಯೆಹೋವನ ಪಕ್ಷದಲ್ಲಿ ನಿಂತುಕೊಳ್ಳಿರಿ
ಕೊರಿಯದಲ್ಲಿ ಮತ್ತು ಬೇರೆಲ್ಲ ಕಡೆ ಇರುವ ಅನೇಕ ಸಹೋದರರಿಗೆ ತಿಳಿದಿರುವಂತೆ, ಕ್ರೈಸ್ತರು ತೀಕ್ಷ್ಣ ಸಂಕಟಗಳಿಗೆ ಎದುರೆದುರಾಗಿ ಬರುವಾಗ ಆ ಸಂಕಟಗಳು ಅವರ ಮೇಲೆ ಬರುವುದೇಕೆಂಬದನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಡುವುದು ಸಹಾಯಕರ.
ಮಾಜಿ ಸೋವಿಯೆಟ್ ಪ್ರಭುತ್ವದಲ್ಲಿ ಸೆರೆಮನೆಗೆ ಹಾಕಲಾಗಿದ್ದ ಯೆಹೋವನ ಸಾಕ್ಷಿಯೊಬ್ಬನು ಅಂದದ್ದು: “ದೇವರಿಗೆ ಆಳಲು ಇರುವಂಥ ನ್ಯಾಯವಾದ ಹಕ್ಕಿನ ಕುರಿತು ಏದೆನ್ ತೋಟದಲ್ಲಿ ಎಬ್ಬಿಸಲ್ಪಟ್ಟ ಆ ವಿವಾದದ ಸ್ಪಷ್ಟ ತಿಳಿವಳಿಕೆಯೇ, ಸಂಕಟಗಳನ್ನು ಸಹಿಸಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡಿತು. . . . ಯೆಹೋವನ ಆಳ್ವಿಕೆಗಾಗಿ ನಿಲುವನ್ನು ತೆಗೆದುಕೊಳ್ಳುವ ಸಂದರ್ಭವು ಅದಾಗಿತ್ತೆಂದು ನಮಗೆ ತಿಳಿದಿತ್ತು. . . . ಇದು ನಮ್ಮನ್ನು ಬಲಗೊಳಿಸಿತು ಮತ್ತು ನಮ್ಮ ಸಮಗ್ರತೆಯನ್ನು ಕಾಪಾಡಲು ಶಕ್ತರನ್ನಾಗಿ ಮಾಡಿತು.”
ಇನ್ನೊಬ್ಬ ಸಾಕ್ಷಿಯು ಶ್ರಮಶಿಬಿರದಲ್ಲಿ ತನಗೆ ಹಾಗೂ ಜೊತೆ ಸಾಕ್ಷಿಗಳಿಗೆ ಏನು ಸಹಾಯ ಮಾಡಿತೆಂಬುದನ್ನು ವಿವರಿಸುತ್ತಾನೆ. ಅವನಂದದ್ದು: “ಯೆಹೋವನು ನಮ್ಮನ್ನು ಬೆಂಬಲಿಸಿದನು. ಕಷ್ಟಕರ ಪರಿಸ್ಥಿತಿಗಳ ಮಧ್ಯೆಯೂ ನಾವು ಆಧ್ಯಾತ್ಮಿಕವಾಗಿ ಎಚ್ಚರದಿಂದಿದ್ದೆವು. ವಿಶ್ವ ಪರಮಾಧಿಕಾರದ ವಿವಾದದಲ್ಲಿ ಯೆಹೋವನ ಪಕ್ಷದಲ್ಲಿ ನಿಂತುಕೊಂಡಿದ್ದೇವೆಂಬ ಸಕಾರಾತ್ಮಕ ಮಾತುಗಳಿಂದ ನಾವು ಯಾವಾಗಲೂ ಒಬ್ಬರನ್ನೊಬ್ಬರು ಸಂತೈಸಿದೆವು.”
[Picture on page 8]
ಯೇಸು ಸೈತಾನನಿಂದ ಪ್ರಲೋಭನೆಗೆ ಒಳಗಾದಾಗ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಿದ್ದು ಹೇಗೆ?
[Picture on page 10]
ಯೇಸುವಿನ ಮರಣದಿಂದ ಏನು ತೀರಿಸಲ್ಪಟ್ಟಿತು?