“ಸತ್ತವರು ಎಬ್ಬಿಸಲ್ಪಡುವರು”
“ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.”—1 ಕೊರಿಂಥ 15:52.
1, 2. (ಎ) ಪ್ರವಾದಿಯಾದ ಹೋಶೇಯನ ಮೂಲಕ ಯಾವ ಸಾಂತ್ವನದಾಯಕ ವಾಗ್ದಾನವನ್ನು ನೀಡಲಾಯಿತು? (ಬಿ) ಸತ್ತವರನ್ನು ಜೀವಿತರನ್ನಾಗಿ ಮಾಡಲು ದೇವರು ಇಷ್ಟವುಳ್ಳವನಾಗಿದ್ದಾನೆಂದು ನಮಗೆ ಹೇಗೆ ಗೊತ್ತು?
ನೀವು ಎಂದಾದರೂ ಪ್ರಿಯರೊಬ್ಬರನ್ನು ಮರಣದಲ್ಲಿ ಕಳೆದುಕೊಂಡಿದ್ದೀರೊ? ಹಾಗಾದರೆ, ಮರಣವು ತರಬಲ್ಲ ವೇದನೆಯ ಅರಿವು ನಿಮಗಿದೆ. ಆದರೂ, ದೇವರು ಪ್ರವಾದಿಯಾದ ಹೋಶೇಯನ ಮೂಲಕ ಕೊಟ್ಟ ವಾಗ್ದಾನದಲ್ಲಿ ಕ್ರೈಸ್ತರು ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ: “ನಾನು ಅದನ್ನು ಪಾತಾಳದ [ಷಿಓಲ್ನ] ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳೆಲ್ಲಿ? ಪಾತಾಳವೇ [ಷಿಓಲೇ], ನೀನು ಮಾಡುವ ನಾಶನವೆಲ್ಲಿ?”—ಹೋಶೇಯ 13:14.
2 ಮೃತರು ಪುನಃ ಜೀವಿತರಾಗುವ ವಿಚಾರವು, ಸಂದೇಹವಾದಿಗಳಿಗೆ ಅಸಂಬದ್ಧವಾಗಿ ತೋರುತ್ತದೆ. ಆದರೆ ಅಂತಹ ಒಂದು ಅದ್ಭುತವನ್ನು ಮಾಡುವ ಶಕ್ತಿ ಸರ್ವಶಕ್ತ ದೇವರಲ್ಲಿ ಖಂಡಿತವಾಗಿಯೂ ಇದೆ! ಆದರೆ ನಿಜವಾದ ವಾದಾಂಶವೇನೆಂದರೆ, ಯೆಹೋವನು ಮೃತರನ್ನು ಜೀವಿತರನ್ನಾಗಿ ಮಾಡಲು ಇಷ್ಟವುಳ್ಳವನು ಆಗಿದ್ದಾನೊ ಇಲ್ಲವೊ ಎಂಬುದೇ. ನೀತಿವಂತ ಪುರುಷನಾದ ಯೋಬನು ಕೇಳಿದ್ದು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ತರುವಾಯ, ಅವನು ಪುನರಾಶ್ವಾಸನೆ ನೀಡುವ ಈ ಉತ್ತರವನ್ನು ಕೊಟ್ಟನು: “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:14, 15) “ಹಂಬಲಿಕೆ” ಎಂಬ ಪದವು, ತೀವ್ರವಾದ ಬಯಕೆ ಇಲ್ಲವೆ ಅಪೇಕ್ಷೆಯನ್ನು ಸೂಚಿಸುತ್ತದೆ. (ಕೀರ್ತನೆ 84:2ನ್ನು ಹೋಲಿಸಿರಿ.) ಹೌದು, ಯೆಹೋವನು ಪುನರುತ್ಥಾನವನ್ನು ತವಕದಿಂದ ಎದುರುನೋಡುತ್ತಾನೆ—ತನ್ನ ಸ್ಮರಣೆಯಲ್ಲಿ ಜೀವಂತರಾಗಿರುವ, ಅಗಲಿಹೋದ ನಂಬಿಗಸ್ತರನ್ನು ಮತ್ತೊಮ್ಮೆ ನೋಡಲು ಆತನು ಹಂಬಲಿಸುತ್ತಾನೆ.—ಮತ್ತಾಯ 22:31, 32.
ಪುನರುತ್ಥಾನದ ವಿಷಯದ ಮೇಲೆ ಯೇಸು ಬೆಳಕು ಬೀರುತ್ತಾನೆ
3, 4. (ಎ) ಪುನರುತ್ಥಾನದ ನಿರೀಕ್ಷೆಯ ಮೇಲೆ ಯೇಸು ಯಾವ ಬೆಳಕನ್ನು ಬೀರಿದನು? (ಬಿ) ಯೇಸು ಒಬ್ಬ ಮಾನವನಾಗಿ ಅಲ್ಲ, ಒಬ್ಬ ಸ್ವರ್ಗೀಯ ವ್ಯಕ್ತಿಯಾಗಿ ಏಕೆ ಎಬ್ಬಿಸಲ್ಪಟ್ಟನು?
3 ಯೋಬನಂತಹ ಪ್ರಾಚೀನ ಕಾಲದ ನಂಬಿಗಸ್ತ ಪುರುಷರಿಗೆ, ಪುನರುತ್ಥಾನದ ಕುರಿತು ಕೇವಲ ಆಂಶಿಕ ತಿಳಿವಳಿಕೆಯಿತ್ತು. ಈ ಅದ್ಭುತಕರವಾದ ನಿರೀಕ್ಷೆಯ ಮೇಲೆ ಸಂಪೂರ್ಣ ಬೆಳಕನ್ನು ಬೀರಿದ್ದು ಯೇಸು ಕ್ರಿಸ್ತನೇ. ತಾನು ವಹಿಸಲಿದ್ದ ಮುಖ್ಯ ಪಾತ್ರವನ್ನು ನಿರೂಪಿಸುತ್ತಾ ಅವನು ಹೇಳಿದ್ದು: “ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು.” (ಯೋಹಾನ 3:36) ಆ ಜೀವನವನ್ನು ಎಲ್ಲಿ ಅನುಭವಿಸಬಹುದು? ನಂಬಿಕೆಯನ್ನಿಡುವ ಅಧಿಕಾಂಶ ಜನರು ಅದನ್ನು ಭೂಮಿಯ ಮೇಲೆಯೇ ಅನುಭವಿಸುವರು. (ಕೀರ್ತನೆ 37:11) ಹಾಗಿದ್ದರೂ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” (ಲೂಕ 12:32) ದೇವರ ರಾಜ್ಯವು ಸ್ವರ್ಗದ್ದಾಗಿದೆ. ಆದಕಾರಣ, ಒಂದು ‘ಚಿಕ್ಕ ಹಿಂಡು,’ ಮಹಿಮಾಭರಿತ ಜೀವಿಗಳೋಪಾದಿ ಯೇಸುವಿನೊಂದಿಗೆ ಸ್ವರ್ಗದಲ್ಲಿ ಇರಬೇಕಾಗುವುದೆಂದು ಈ ವಾಗ್ದಾನವು ಅರ್ಥೈಸುತ್ತದೆ. (ಯೋಹಾನ 14:2, 3; 1 ಪೇತ್ರ 1:3, 4) ಎಂತಹ ಒಂದು ಮಹಿಮಾಭರಿತ ಪ್ರತೀಕ್ಷೆ! ಈ ‘ಚಿಕ್ಕ ಹಿಂಡಿನ’ ಸಂಖ್ಯೆ ಕೇವಲ 1,44,000 ಆಗಿರುವುದೆಂದು, ತದನಂತರ ಯೇಸು ಅಪೊಸ್ತಲ ಯೋಹಾನನಿಗೆ ಪ್ರಕಟಪಡಿಸಿದನು.—ಪ್ರಕಟನೆ 14:1.
4 ಆದರೆ, ಈ 1,44,000 ಮಂದಿ ಸ್ವರ್ಗೀಯ ಮಹಿಮೆಯೊಳಗೆ ಹೇಗೆ ಪ್ರವೇಶಿಸುವರು? ಯೇಸು “ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದನು.” ತನ್ನ ರಕ್ತದ ಮೂಲಕ, ಅವನು ಸ್ವರ್ಗಕ್ಕೆ “ಜೀವವುಳ್ಳ ಹೊಸ ದಾರಿ”ಯನ್ನು ಉದ್ಘಾಟಿಸಿದನು. (2 ತಿಮೊಥೆಯ 1:10; ಇಬ್ರಿಯ 10:19, 20) ಪ್ರಥಮವಾಗಿ, ಅವನು ಹೇಗೆ ಸಾಯುವನೆಂದು ಬೈಬಲ್ ಮುಂತಿಳಿಸಿತೋ ಹಾಗೆಯೇ ಅವನು ಸತ್ತನು. (ಯೆಶಾಯ 53:12) ತದನಂತರ, ಅಪೊಸ್ತಲ ಪೇತ್ರನು ಘೋಷಿಸಿದಂತೆ, “ಈ ಯೇಸುವನ್ನೇ ದೇವರು ಎಬ್ಬಿಸಿದನು.” (ಅ. ಕೃತ್ಯಗಳು 2:32) ಆದರೆ ಯೇಸು ಒಬ್ಬ ಮನುಷ್ಯನೋಪಾದಿ ಎಬ್ಬಿಸಲ್ಪಡಲಿಲ್ಲ. ಅವನು ಹೀಗೆ ಹೇಳಿದ್ದನು: “ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು.” (ಯೋಹಾನ 6:51) ತನ್ನ ಮಾಂಸವನ್ನು ಹಿಂದೆ ತೆಗೆದುಕೊಳ್ಳುವುದು, ಆ ಯಜ್ಞವನ್ನು ರದ್ದುಪಡಿಸುವುದು. ಆದಕಾರಣ, ಯೇಸು “ಶರೀರಸಂಬಂಧದಲ್ಲಿ ಕೊಲ್ಲಲ್ಪಟ್ಟನು, ಆತ್ಮಸಂಬಂಧದಲ್ಲಿ ತಿರಿಗಿ ಬದುಕುವವನಾದನು.” (1 ಪೇತ್ರ 3:18) ಹೀಗೆ ಯೇಸು, “ನಮಗೋಸ್ಕರ” ಅಂದರೆ ‘ಚಿಕ್ಕ ಹಿಂಡಿ’ಗೋಸ್ಕರ “ನಿತ್ಯವಿಮೋಚನೆಯನ್ನು ಸಂಪಾದಿಸಿ”ದನು. (ಇಬ್ರಿಯ 9:12) ಅವನು ದೇವರಿಗೆ ತನ್ನ ಪರಿಪೂರ್ಣ ಮಾನವ ಜೀವದ ಮೌಲ್ಯವನ್ನು, ಪಾಪಪೂರ್ಣ ಮಾನವಕುಲಕ್ಕೆ ಪ್ರಾಯಶ್ಚಿತ್ತವಾಗಿ ಅರ್ಪಿಸಿದನು. ಇದರಿಂದ ಪ್ರಥಮವಾಗಿ ಪ್ರಯೋಜನ ಪಡೆದವರು 1,44,000 ಜನರಾಗಿದ್ದರು.
5. ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರಿಗೆ ಯಾವ ನಿರೀಕ್ಷೆಯು ಕೊಡಲ್ಪಟ್ಟಿತ್ತು?
5 ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನ ಹೊಂದುವವರಲ್ಲಿ ಯೇಸು ಒಬ್ಬನೇ ಸೇರಿರುವುದಿಲ್ಲ. ರೋಮ್ ಪಟ್ಟಣದಲ್ಲಿದ್ದ ಜೊತೆ ಕ್ರೈಸ್ತರಿಗೆ ಪೌಲನು ಹೇಳಿದ್ದೇನೆಂದರೆ, ಅವರು ದೇವರ ಪುತ್ರರೂ ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರೂ ಆಗಿರಲು, ಪವಿತ್ರಾತ್ಮದಿಂದ ಅಭಿಷಿಕ್ತರಾಗಿದ್ದರು. ಕೊನೆಯ ವರೆಗೆ ತಾಳಿಕೊಳ್ಳುವ ಮೂಲಕ ಅವರು ತಮ್ಮ ಅಭಿಷೇಕವನ್ನು ದೃಢಪಡಿಸಸಾಧ್ಯವಿತ್ತು. (ರೋಮಾಪುರ 8:16, 17) ಪೌಲನು ಹೀಗೂ ವಿವರಿಸಿದನು: “ನಾವು ಆತನ ಮರಣಕ್ಕೆ ಸದೃಶವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.”—ರೋಮಾಪುರ 6:5.
ಪುನರುತ್ಥಾನದ ನಿರೀಕ್ಷೆಯ ಸಮರ್ಥನೆಯಲ್ಲಿ
6. ಪುನರುತ್ಥಾನದಲ್ಲಿನ ನಂಬಿಕೆಯು ಕೊರಿಂಥ ಪಟ್ಟಣದಲ್ಲಿ ಏಕೆ ಆಕ್ರಮಣಕ್ಕೊಳಗಾಯಿತು, ಮತ್ತು ಅಪೊಸ್ತಲ ಪೌಲನು ಹೇಗೆ ಪ್ರತಿಕ್ರಿಯಿಸಿದನು?
6 ಪುನರುತ್ಥಾನವು, ಕ್ರೈಸ್ತತ್ವದ “ಪ್ರಥಮಬೋಧನೆ”ಯ ಭಾಗವಾಗಿದೆ. (ಇಬ್ರಿಯ 6:1, 2) ಹಾಗಿದ್ದರೂ, ಕೊರಿಂಥ ಪಟ್ಟಣದಲ್ಲಿ ಈ ಸಿದ್ಧಾಂತವು ಆಕ್ರಮಣಕ್ಕೆ ಒಳಗಾಗಿತ್ತು. ಸಭೆಯಲ್ಲಿದ್ದ ಕೆಲವರು, ಗ್ರೀಕ್ ತತ್ವಜ್ಞಾನದಿಂದ ಪ್ರಭಾವಿತರಾಗಿದ್ದ ಕಾರಣ, “ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು” ಹೇಳುತ್ತಿದ್ದರು. (1 ಕೊರಿಂಥ 15:12) ಈ ವಿಷಯದ ಕುರಿತಾದ ವರದಿಗಳು ಅಪೊಸ್ತಲ ಪೌಲನಿಗೆ ತಲಪಿದಾಗ, ಅವನು ಪುನರುತ್ಥಾನದ ನಿರೀಕ್ಷೆಯನ್ನು—ವಿಶೇಷವಾಗಿ ಅಭಿಷಿಕ್ತ ಕ್ರೈಸ್ತರ ನಿರೀಕ್ಷೆಯನ್ನು—ಸಮರ್ಥಿಸಿದನು. ನಾವು 1 ಕೊರಿಂಥ, 15ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಪೌಲನ ಮಾತುಗಳನ್ನು ಪರೀಕ್ಷಿಸೋಣ. ಹಿಂದಿನ ಲೇಖನದಲ್ಲಿ ಶಿಫಾರಸ್ಸು ಮಾಡಿದಂತೆ, ನೀವು ಇಡೀ ಅಧ್ಯಾಯವನ್ನು ಓದಿದ್ದರೆ, ಇದನ್ನು ನೀವು ಸಹಾಯಕರವಾದದ್ದಾಗಿ ಕಂಡುಕೊಳ್ಳುವಿರಿ.
7. (ಎ) ಯಾವ ಪ್ರಮುಖ ವಿವಾದಾಂಶದ ಮೇಲೆ ಪೌಲನು ಕೇಂದ್ರೀಕರಿಸಿದನು? (ಬಿ) ಪುನರುತ್ಥಾನಹೊಂದಿದ ಯೇಸುವನ್ನು ಯಾರು ನೋಡಿದರು?
7 ಒಂದನೆಯ ಕೊರಿಂಥ, 15ನೆಯ ಅಧ್ಯಾಯದ ಮೊದಲ ಎರಡು ವಚನಗಳಲ್ಲಿ, ಪೌಲನು ತನ್ನ ಚರ್ಚೆಯ ಮುಖ್ಯವಿಷಯಕ್ಕೆ ಪೀಠಿಕೆಯನ್ನು ಹಾಕುತ್ತಾನೆ: “ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿದಿರಿ, ಅದರಲ್ಲಿ ನಿಂತಿದ್ದೀರಿ. ನಾನು ಯಾವ ಸಂಗತಿಯನ್ನು ಹೇಳಿ ನಿಮಗೆ ಸುವಾರ್ತೆಯನ್ನು ತಿಳಿಸಿದೆನೋ ನೀವು ಅದನ್ನು ಘಟ್ಟಿಯಾಗಿ ಹಿಡುಕೊಂಡರೆ . . . ಆ ಸುವಾರ್ತೆಯಿಂದ ನಿಮಗೆ ರಕ್ಷಣೆಯಾಗುತ್ತದೆ.” ಕೊರಿಂಥದವರು ಸುವಾರ್ತೆಯಲ್ಲಿ ನೆಲೆನಿಲ್ಲಲು ತಪ್ಪಿಹೋಗುವುದಾದರೆ, ಅವರು ಸತ್ಯವನ್ನು ಸ್ವೀಕರಿಸಿದ್ದು ವ್ಯರ್ಥವೇ ಸರಿ. ಪೌಲನು ಮುಂದುವರಿಸುವುದು: “ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು. ಕೇಫನಿಗೂ ಆ ಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು. ತರುವಾಯ ಒಂದೇ ಸಮಯದಲ್ಲಿ ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನ ವರೆಗೂ ಇದ್ದಾರೆ. ಕೆಲವರು ನಿದ್ರೆಹೋಗಿದ್ದಾರೆ. ತರುವಾಯ ಆತನು ಯಾಕೋಬನಿಗೂ ಆ ಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು. ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.”—1 ಕೊರಿಂಥ 15:3-8.
8, 9. (ಎ) ಪುನರುತ್ಥಾನದಲ್ಲಿನ ನಂಬಿಕೆಯು ಎಷ್ಟು ಪ್ರಮುಖವಾದದ್ದಾಗಿದೆ? (ಬಿ) ಬಹುಶಃ ಯಾವ ಸಂದರ್ಭದಲ್ಲಿ ಯೇಸು “ಐನೂರು ಮಂದಿಗಿಂತ ಹೆಚ್ಚು ಸಹೋದರ”ರಿಗೆ ಕಾಣಿಸಿಕೊಂಡನು?
8 ಸುವಾರ್ತೆಯನ್ನು ಸ್ವೀಕರಿಸಿದ್ದವರಿಗೆ, ಯೇಸುವಿನ ಪುನರುತ್ಥಾನದಲ್ಲಿನ ನಂಬಿಕೆಯು ಐಚ್ಛಿಕವಾಗಿರಲಿಲ್ಲ. “ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು” ಮತ್ತು ಎಬ್ಬಿಸಲ್ಪಟ್ಟಿದ್ದನು ಎಂಬುದನ್ನು ದೃಢಪಡಿಸಲು ಅನೇಕ ಪ್ರತ್ಯಕ್ಷ ಸಾಕ್ಷಿಗಳಿದ್ದರು. ಅವರಲ್ಲಿ ಕೇಫನು, ಇಲ್ಲವೆ ಪೇತ್ರನೆಂದು ಹೆಚ್ಚು ಪ್ರಖ್ಯಾತನಾದಾತನು ಒಬ್ಬನಾಗಿದ್ದನು. ಯೇಸುವನ್ನು ಹಿಡಿದುಕೊಟ್ಟ ಹಾಗೂ ಕೈದುಮಾಡಿದ ರಾತ್ರಿಯಂದು, ಪೇತ್ರನು ಯೇಸುವನ್ನು ಅಲ್ಲಗಳೆದ ಮೇಲೆ, ಯೇಸು ಅವನಿಗೆ ಕಾಣಿಸಿಕೊಂಡಾಗ ಅವನು ಬಹಳವಾಗಿ ಸಂತೈಸಲ್ಪಟ್ಟಿರಬೇಕು. ಒಂದು ಗುಂಪಿನೋಪಾದಿ “ಹನ್ನೆರಡು” ಮಂದಿ ಅಪೊಸ್ತಲರೂ ಪುನರುತ್ಥಿತ ಯೇಸುವಿನಿಂದ ಭೇಟಿಮಾಡಲ್ಪಟ್ಟರು. ಇದು ಅವರ ಭಯವನ್ನು ಜಯಿಸಲು ಮತ್ತು ಯೇಸುವಿನ ಪುನರುತ್ಥಾನಕ್ಕೆ ಧೈರ್ಯವಂತ ಸಾಕ್ಷಿಗಳಾಗಲು ಅವರಿಗೆ ನಿಸ್ಸಂದೇಹವಾಗಿ ಸಹಾಯ ಮಾಡಿದ ಒಂದು ಅನುಭವವಾಗಿತ್ತು.—ಯೋಹಾನ 20:19-23; ಅ. ಕೃತ್ಯಗಳು 2:32.
9 ಕ್ರಿಸ್ತನು “ಐನೂರು ಮಂದಿಗಿಂತ ಹೆಚ್ಚು ಸಹೋದರರ” ಒಂದು ದೊಡ್ಡ ಗುಂಪಿಗೂ ಕಾಣಿಸಿಕೊಂಡನು. ಗಲಿಲಾಯದಲ್ಲಿ ಮಾತ್ರ ಅವನಿಗೆ ಈ ದೊಡ್ಡ ಸಂಖ್ಯೆಯ ಹಿಂಬಾಲಕರಿದ್ದ ಕಾರಣ, ಮತ್ತಾಯ 28:16-20ರಲ್ಲಿ ವರ್ಣಿಸಲಾದ ಸಂದರ್ಭದಲ್ಲಿ—ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ಯೇಸು ನೀಡಿದಾಗ—ಇದು ಸಂಭವಿಸಿದ್ದಿರಬಹುದು. ಈ ವ್ಯಕ್ತಿಗಳು ಎಂತಹ ಶಕ್ತಿಶಾಲಿ ಸಾಕ್ಷ್ಯವನ್ನು ಕೊಡಸಾಧ್ಯವಿತ್ತು! ಕೊರಿಂಥದವರಿಗೆ ಈ ಮೊದಲನೆಯ ಪತ್ರವನ್ನು ಸಾ.ಶ. 55ರಲ್ಲಿ ಪೌಲನು ರಚಿಸಿದಾಗ, ಕೆಲವರು ಇನ್ನೂ ಜೀವಂತರಾಗಿದ್ದರು. ಆದರೆ, ಯಾರು ಸತ್ತಿದ್ದರೊ ಅವರು ಮರಣದಲ್ಲಿ “ನಿದ್ರೆಹೋಗಿದ್ದಾರೆ” ಎಂಬುದಾಗಿ ಅವರ ಕುರಿತು ಹೇಳಲಾದ ವಿಷಯವನ್ನು ಗಮನಿಸಿರಿ. ಅವರು ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದುಕೊಳ್ಳಲಿಕ್ಕಾಗಿ ಇನ್ನೂ ಪುನರುತ್ಥಿತರಾಗಿರಲಿಲ್ಲ.
10. (ಎ) ತನ್ನ ಶಿಷ್ಯರೊಂದಿಗಿನ ಯೇಸುವಿನ ಕೊನೆಯ ಭೇಟಿಯ ಪರಿಣಾಮವೇನಾಗಿತ್ತು? (ಬಿ) ಯೇಸು, ‘ದಿನತುಂಬದೆ ಹುಟ್ಟಿದವನಿಗೋ ಎಂಬಂತೆ’ ಪೌಲನಿಗೆ ಹೇಗೆ ಕಾಣಿಸಿಕೊಂಡನು?
10 ಯೇಸುವಿನ ಪುನರುತ್ಥಾನಕ್ಕೆ ಮತ್ತೊಬ್ಬ ಗಮನಾರ್ಹ ಸಾಕ್ಷಿಯು ಯಾಕೋಬನಾಗಿದ್ದನು. ಇವನು ಯೋಸೇಫನ ಮತ್ತು ಯೇಸುವಿನ ತಾಯಿಯಾದ ಮರಿಯಳ ಮಗನಾಗಿದ್ದನು. ಪುನರುತ್ಥಾನಕ್ಕೆ ಮುಂಚಿತವಾಗಿ, ಯಾಕೋಬನು ಒಬ್ಬ ವಿಶ್ವಾಸಿಯಾಗಿರಲಿಲ್ಲವೆಂಬುದು ಸ್ಪಷ್ಟ. (ಯೋಹಾನ 7:5) ಆದರೆ ಯೇಸು ಅವನಿಗೆ ಕಾಣಿಸಿಕೊಂಡ ತರುವಾಯ, ಯಾಕೋಬನು ಒಬ್ಬ ವಿಶ್ವಾಸಿಯಾದನು ಮತ್ತು ತನ್ನ ಇತರ ಸಹೋದರರನ್ನು ಪರಿವರ್ತಿಸುವುದರಲ್ಲಿ ಬಹುಶಃ ಒಂದು ಪಾತ್ರವನ್ನು ವಹಿಸಿದನು. (ಅ. ಕೃತ್ಯಗಳು 1:13, 14) ಅವನು ಸ್ವರ್ಗಕ್ಕೆ ಏರಿಹೋದ ಸಂದರ್ಭದಲ್ಲಿ, ತನ್ನ ಶಿಷ್ಯರನ್ನು ಕೊನೆಯ ಬಾರಿ ಭೇಟಿಯಾದಾಗ, ಯೇಸು ಅವರಿಗೆ “ಭೂಲೋಕದ ಕಟ್ಟಕಡೆಯ ವರೆಗೂ . . . ಸಾಕ್ಷಿಗಳಾಗಿ”ರುವಂತೆ ಆದೇಶ ನೀಡಿದನು. (ಅ. ಕೃತ್ಯಗಳು 1:6-11) ತದನಂತರ, ಅವನು ಕ್ರೈಸ್ತರನ್ನು ಹಿಂಸಿಸುತ್ತಿದ್ದ ತಾರ್ಸದ ಸೌಲನಿಗೆ ಕಾಣಿಸಿಕೊಂಡನು. (ಅ. ಕೃತ್ಯಗಳು 22:6-8) ಯೇಸು ‘ದಿನತುಂಬದೆ ಹುಟ್ಟಿದವನಿಗೋ ಎಂಬಂತೆ’ ಸೌಲನಿಗೆ ಕಾಣಿಸಿಕೊಂಡನು. ಇದು, ಅಭಿಷಿಕ್ತರ ಪುನರುತ್ಥಾನವು ಸಂಭವಿಸುವ ಅನೇಕ ಶತಮಾನಗಳ ಮುಂಚೆಯೇ, ಸೌಲನು ಸ್ವರ್ಗೀಯ ಜೀವನಕ್ಕೆ ಈಗಾಗಲೇ ಪುನರುತ್ಥಿತನಾಗಿ, ಮಹಿಮಾಭರಿತ ಕರ್ತನನ್ನು ನೋಡಲು ಶಕ್ತನಾಗಿದ್ದನೋ ಎಂಬಂತಿತ್ತು. ಈ ಅನುಭವವು, ಕ್ರೈಸ್ತ ಸಭೆಯ ವಿರುದ್ಧ ಪೌಲನು ನಡೆಸಿದ್ದ ಕ್ರೂರ ವಿರೋಧವನ್ನು ತಟ್ಟನೆ ನಿಲ್ಲಿಸಿ, ಅವನಲ್ಲಿ ಎದ್ದುಕಾಣುವ ಬದಲಾವಣೆಯನ್ನು ಉಂಟುಮಾಡಿತು. (ಅ. ಕೃತ್ಯಗಳು 9:3-9, 17-19) ಸೌಲನು ಅಪೊಸ್ತಲ ಪೌಲನಾಗಿ ಪರಿಣಮಿಸಿ, ಕ್ರೈಸ್ತ ನಂಬಿಕೆಯ ಅಗ್ರಗಣ್ಯ ಸಮರ್ಥಕರಲ್ಲಿ ಒಬ್ಬನಾದನು.—1 ಕೊರಿಂಥ 15:9, 10.
ಪುನರುತ್ಥಾನದಲ್ಲಿ ನಂಬಿಕೆಯು ಅತ್ಯಾವಶ್ಯಕ
11. “ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು” ಹೇಳುವವರ ಕುತರ್ಕವನ್ನು ಪೌಲನು ಹೇಗೆ ಬಯಲುಪಡಿಸಿದನು?
11 ಆದುದರಿಂದ, ಯೇಸುವಿನ ಪುನರುತ್ಥಾನವು ಸಪ್ರಮಾಣವುಳ್ಳ ನಿಜತ್ವವಾಗಿತ್ತು. “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರೋಣವಾಗುತ್ತಿರುವಲ್ಲಿ ನಿಮ್ಮೊಳಗೆ ಕೆಲವರು—ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ?” ಎಂದು ಪೌಲನು ವಾದಿಸುತ್ತಾನೆ. (1 ಕೊರಿಂಥ 15:12) ಇಂತಹವರಿಗೆ ಪುನರುತ್ಥಾನದ ಕುರಿತು ವೈಯಕ್ತಿಕ ಸಂದೇಹಗಳು ಇಲ್ಲವೆ ಪ್ರಶ್ನೆಗಳಿದ್ದವು ಮಾತ್ರವಲ್ಲ, ಅವರು ಅದರಲ್ಲಿನ ತಮ್ಮ ಅವಿಶ್ವಾಸವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರು. ಆದುದರಿಂದ ಪೌಲನು ಅವರ ಕುತರ್ಕವನ್ನು ಬಯಲುಪಡಿಸುತ್ತಾನೆ. ಕ್ರಿಸ್ತನು ಎಬ್ಬಿಸಲ್ಪಟ್ಟಿರಲಿಲ್ಲವಾದರೆ, ಕ್ರೈಸ್ತ ಸಂದೇಶವು ಒಂದು ಸುಳ್ಳಾಗಿತ್ತೆಂದು, ಮತ್ತು ಕ್ರಿಸ್ತನ ಪುನರುತ್ಥಾನಕ್ಕೆ ಸಾಕ್ಷ್ಯ ನೀಡಿದವರು “ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದ”ರೆಂದು ಅವನು ಹೇಳುತ್ತಾನೆ. ಕ್ರಿಸ್ತನು ಎಬ್ಬಿಸಲ್ಪಟ್ಟಿರದಿದ್ದಲ್ಲಿ, ದೇವರಿಗೆ ಯಾವ ಪ್ರಾಯಶ್ಚಿತ್ತವೂ ನೀಡಲ್ಪಟ್ಟಿರುವುದಿಲ್ಲ; ಹಾಗಾದರೆ ಕ್ರೈಸ್ತರು ‘ಇನ್ನೂ ತಮ್ಮ ಪಾಪಗಳಲ್ಲಿಯೇ ಇದ್ದರು.’ (1 ಕೊರಿಂಥ 15:13-19; ರೋಮಾಪುರ 3:23, 24; ಇಬ್ರಿಯ 9:11-14) ಮತ್ತು ‘ಮರಣದಲ್ಲಿ ನಿದ್ರೆಹೋಗಿದ್ದ’ ಮತ್ತು ಕೆಲವು ಸಂದರ್ಭಗಳಲ್ಲಿ ಹುತಾತ್ಮರಾಗಿದ್ದ ಕ್ರೈಸ್ತರು, ಪ್ರಾಮಾಣಿಕವಾದ ನಿರೀಕ್ಷೆಯಿಲ್ಲದೆ ಸತ್ತುಹೋಗಿದ್ದರು. ಕ್ರೈಸ್ತರು ಈ ಜೀವಿತವನ್ನೇ ನಿರೀಕ್ಷಿಸಸಾಧ್ಯವಿತ್ತಾದರೆ, ಅವರ ಸ್ಥಿತಿ ಎಷ್ಟು ಶೋಚನೀಯ! ಅವರ ಕಷ್ಟಾನುಭವವು ಅರ್ಥಹೀನವಾಗಿರುತ್ತಿತ್ತು.
12. (ಎ) ಕ್ರಿಸ್ತನನ್ನು “ನಿದ್ರೆಹೋದವರಲ್ಲಿ ಪ್ರಥಮಫಲ”ವೆಂದು ಕರೆಯುವುದು, ಏನನ್ನು ಸೂಚಿಸುತ್ತದೆ? (ಬಿ) ಕ್ರಿಸ್ತನು ಪುನರುತ್ಥಾನವನ್ನು ಹೇಗೆ ಸಾಧ್ಯಗೊಳಿಸಿದನು?
12 ಆದರೆ, ವಿಷಯವು ಹಾಗಿರಲಿಲ್ಲ. ಪೌಲನು ಮುಂದುವರಿಸುವುದು: “ಕ್ರಿಸ್ತನು ಸತ್ತವರೊಳಗಿಂದ ಎದ್ದುಬಂದೇ ಇದ್ದಾನೆ.” ಇನ್ನೂ ಹೆಚ್ಚಾಗಿ, ಅವನು ‘ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲ’ವಾಗಿದ್ದಾನೆ. (1 ಕೊರಿಂಥ 15:20) ಇಸ್ರಾಯೇಲ್ಯರು ವಿಧೇಯತೆಯಿಂದ ತಮ್ಮ ಬೆಳೆಯ ಪ್ರಥಮಫಲಗಳನ್ನು ಯೆಹೋವನಿಗೆ ಕೊಟ್ಟಾಗ, ಭಾರಿ ಪ್ರಮಾಣದ ಕೊಯ್ಲಿನಿಂದ ಯೆಹೋವನು ಅವರನ್ನು ಆಶೀರ್ವದಿಸಿದನು. (ವಿಮೋಚನಕಾಂಡ 22:29, 30; 23:19; ಜ್ಞಾನೋಕ್ತಿ 3:9, 10) ಕ್ರಿಸ್ತನನ್ನು “ಪ್ರಥಮಫಲ”ವೆಂದು ಕರೆಯುವ ಮೂಲಕ, ಮರಣದಿಂದ ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಡಲಿರುವ ವ್ಯಕ್ತಿಗಳ ಮುಂದಿನ ಕೊಯ್ಲು ಇರುವುದೆಂದು ಪೌಲನು ಸೂಚಿಸಿದನು. “ಮನುಷ್ಯನ ಮೂಲಕ ಮರಣವು ಉಂಟಾದ ಕಾರಣ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವದು. ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು” ಎಂದು ಪೌಲನು ಹೇಳುತ್ತಾನೆ. (1 ಕೊರಿಂಥ 15:21, 22) ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ಕೊಡುವ ಮೂಲಕ ಪುನರುತ್ಥಾನವನ್ನು ಸಾಧ್ಯಮಾಡಿದನು. ಇದು, ಪಾಪ ಹಾಗೂ ಮರಣದ ದಾಸತ್ವದಿಂದ ಬಿಡುಗಡೆ ಪಡೆಯಲು, ಮಾನವ ಕುಲಕ್ಕೆ ದಾರಿಯನ್ನು ತೆರೆಯಿತು.—ಗಲಾತ್ಯ 1:4; 1 ಪೇತ್ರ 1:18, 19.a
13. (ಎ) ಸ್ವರ್ಗೀಯ ಪುನರುತ್ಥಾನವು ಯಾವಾಗ ಸಂಭವಿಸುತ್ತದೆ? (ಬಿ) ಅಭಿಷಿಕ್ತರಲ್ಲಿ ಕೆಲವರು ‘ಮರಣದಲ್ಲಿ ನಿದ್ರೆಹೋಗ’ದಿರುವುದು ಹೇಗೆ?
13 ಪೌಲನು ಮುಂದುವರಿಸುವುದು: “ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿರುವನು. ಕ್ರಿಸ್ತನು ಪ್ರಥಮಫಲ; ತರುವಾಯ ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಆತನವರು ಎದ್ದುಬರುವರು.” (1 ಕೊರಿಂಥ 15:23) ಕ್ರಿಸ್ತನು ಸಾ.ಶ. 33ರಲ್ಲಿ ಪುನರುತ್ಥಾನಹೊಂದಿದನು. ಆದರೆ, ಯೇಸುವಿನ ಅಭಿಷಿಕ್ತ ಹಿಂಬಾಲಕರು—“ಕ್ರಿಸ್ತನಿಗೆ ಸೇರಿರುವವರು” (NW)—ಅವನು ತನ್ನ ರಾಜಯೋಗ್ಯ ಪ್ರತ್ಯಕ್ಷತೆಯನ್ನು ಆರಂಭಿಸಿದ ತರುವಾಯ—ಇದು 1914ರಲ್ಲಿ ಸಂಭವಿಸಿತೆಂದು ಬೈಬಲ್ ಪ್ರವಾದನೆಯು ತೋರಿಸುತ್ತದೆ—ಸ್ವಲ್ಪ ಸಮಯದ ತನಕ ಕಾಯಬೇಕಿತ್ತು. (1 ಥೆಸಲೊನೀಕ 4:14-16; ಪ್ರಕಟನೆ 11:18) ಆ ಪ್ರತ್ಯಕ್ಷತೆಯ ಸಮಯದಲ್ಲಿ ಜೀವಂತರಾಗಿರುವವರ ಕುರಿತೇನು? ಪೌಲನು ಹೇಳುವುದು: “ಕೇಳಿರಿ, ಇದು ವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ—ನಾವೆಲ್ಲರೂ ನಿದ್ರೆಹೋಗುವದಿಲ್ಲ; ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.” (1 ಕೊರಿಂಥ 15:51, 52) ಸ್ಪಷ್ಟವಾಗಿಯೇ, ಎಲ್ಲ ಅಭಿಷಿಕ್ತರು ಪುನರುತ್ಥಾನವನ್ನು ಎದುರುನೋಡುತ್ತಾ ಸಮಾಧಿಯಲ್ಲಿ ನಿದ್ರಿಸುವುದಿಲ್ಲ. ಕ್ರಿಸ್ತನ ಪ್ರತ್ಯಕ್ಷತೆಯ ಸಮಯದಲ್ಲಿ ಸಾಯುವವರು ತತ್ಕ್ಷಣದಲ್ಲೇ ರೂಪಾಂತರಗೊಳ್ಳುತ್ತಾರೆ.—ಪ್ರಕಟನೆ 14:13.
14. ಅಭಿಷಿಕ್ತರು ‘ಮೃತರಾಗಿರುವ ಉದ್ದೇಶದಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು’ ಹೇಗೆ?
14 “ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು [“ಮೃತರಾಗುವ ಉದ್ದೇಶದಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವವರು,” NW] ಏನು ಮಾಡುವರು? ಸತ್ತವರು ಎದ್ದುಬರುವದೇ ಇಲ್ಲವೆಂಬದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ [“ಅವರೂ ಹಾಗಿರುವ ಉದ್ದೇಶದಿಂದ ಯಾಕೆ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದಾರೆ,” NW]? ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿದ್ದೇವೆ?” ಎಂದು ಪೌಲನು ಕೇಳುತ್ತಾನೆ. (1 ಕೊರಿಂಥ 15:29, 30) ಜೀವಂತರಾಗಿರುವವರು ಸತ್ತವರ ಪರವಾಗಿ ದೀಕ್ಷಾಸ್ನಾನ ಪಡೆದುಕೊಂಡರು—ಕೆಲವು ಬೈಬಲ್ ಭಾಷಾಂತರಗಳು ಹಾಗೆ ತೋರುವಂತೆ ಮಾಡುತ್ತವೆ—ಎಂಬುದನ್ನು ಪೌಲನು ಅರ್ಥೈಸಲಿಲ್ಲ. ಎಷ್ಟೆಂದರೂ, ದೀಕ್ಷಾಸ್ನಾನವು ಕ್ರೈಸ್ತ ಶಿಷ್ಯತ್ವಕ್ಕೆ ಸಂಬಂಧಿಸಿದೆ, ಮತ್ತು ಸತ್ತವರು ಶಿಷ್ಯರಾಗಿರಸಾಧ್ಯವಿಲ್ಲ. (ಯೋಹಾನ 4:1) ಬದಲಿಗೆ, ಪೌಲನು ಜೀವಂತ ಕ್ರೈಸ್ತರ ಕುರಿತು ಚರ್ಚಿಸುತ್ತಿದ್ದನು. ಅವರಲ್ಲಿ ಅನೇಕರು, ಪೌಲನಂತೆಯೇ, ‘ಪ್ರತಿ ಗಳಿಗೆಯಲ್ಲಿಯೂ ಜೀವದ ಭಯದಿಂದಿದ್ದರು.’ ಅಭಿಷಿಕ್ತ ಕ್ರೈಸ್ತರು ‘ಕ್ರಿಸ್ತನ ಮರಣದಲ್ಲಿ ದೀಕ್ಷಾಸ್ನಾನ’ ಮಾಡಿಸಿಕೊಂಡವರಾಗಿದ್ದರು. (ರೋಮಾಪುರ 6:3) ಅವರು ಅಭಿಷೇಕಿಸಲ್ಪಟ್ಟಂದಿನಿಂದ, ಕ್ರಿಸ್ತನು ಅನುಭವಿಸಿದಂತಹ ಮರಣಕ್ಕೆ ನಡೆಸುವ ಮಾರ್ಗದಲ್ಲೊ ಎಂಬಂತೆ, “ದೀಕ್ಷಾಸ್ನಾನ” ಪಡೆದುಕೊಂಡವರಾಗಿದ್ದರು. (ಮಾರ್ಕ 10:35-40) ಅವರು ಮಹಿಮಾಭರಿತ ಸ್ವರ್ಗೀಯ ಪುನರುತ್ಥಾನದ ನಿರೀಕ್ಷೆಯೊಂದಿಗೆ ಸಾಯುವರು.—1 ಕೊರಿಂಥ 6:14; ಫಿಲಿಪ್ಪಿ 3:10, 11.
15. ಯಾವ ಗಂಡಾಂತರಗಳನ್ನು ಪೌಲನು ಅನುಭವಿಸಿದ್ದಿರಬಹುದು, ಮತ್ತು ಪುನರುತ್ಥಾನದಲ್ಲಿನ ನಂಬಿಕೆಯು ಅವುಗಳನ್ನು ತಾಳಿಕೊಳ್ಳುವುದರಲ್ಲಿ ಹೇಗೆ ಒಂದು ಪಾತ್ರವನ್ನು ವಹಿಸಿತು?
15 ಪೌಲನು ತಾನೇ ಎಷ್ಟರ ಮಟ್ಟಿಗೆ ಜೀವದ ಭಯವನ್ನು ಅನುಭವಿಸಿದ್ದನೆಂಬುದನ್ನು ಈಗ ವಿವರಿಸುತ್ತಾನೆ. ಅವನು ಹೀಗೆ ಹೇಳಸಾಧ್ಯವಿತ್ತು: “ನಾನು ದಿನಾಲು ಸಾಯುತ್ತಲಿದ್ದೇನೆ.” ವಿಷಯವನ್ನು ಅತಿಶಯಿಸಿ ಹೇಳುತ್ತಿರುವ ಆರೋಪವನ್ನು ಅವನ ಮೇಲೆ ಹೊರಿಸದೆ ಇರಲಿಕ್ಕಾಗಿ, ಪೌಲನು ಕೂಡಿಸಿ ಹೇಳುವುದು: “ಸಹೋದರರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗಿರುವ ಹೆಚ್ಚಳದ ಮೇಲೆ ಆಣೆ ಇಟ್ಟು ನಾನು . . . ಹೇಳುತ್ತೇನೆ.” ದ ಜೆರೂಸಲೇಮ್ ಬೈಬಲ್ ಈ ವಚನವನ್ನು ಹೀಗೆ ತರ್ಜುಮೆ ಮಾಡುತ್ತದೆ: “ಸಹೋದರರೇ, ನಾನು ಮರಣವನ್ನು ಪ್ರತಿದಿನ ಎದುರಿಸುತ್ತೇನೆ, ಮತ್ತು ಇದನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ವಿಷಯವಾಗಿ ಪಡುವ ಹೆಮ್ಮೆಯ ಮೇಲೆ ಆಣೆಯಿಟ್ಟು ಹೇಳಬಲ್ಲೆ.” ತಾನು ಎದುರಿಸಿದ ಅಪಾಯಗಳ ಒಂದು ಉದಾಹರಣೆಯಾಗಿ, 32ನೆಯ ವಚನದಲ್ಲಿ ಪೌಲನು, ‘ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ’ ವಿಷಯವಾಗಿ ತಿಳಿಸುತ್ತಾನೆ. ರೋಮನರು, ಅಖಾಡದಲ್ಲಿರುವ ಕಾಡುಮೃಗಗಳಿಗೆ ಅಪರಾಧಿಗಳನ್ನು ಎಸೆಯುವ ಮೂಲಕ ಅವರನ್ನು ವಧಿಸಿದರು. ಪೌಲನು ಅಕ್ಷರಾರ್ಥ ಕಾಡುಮೃಗಗಳೊಂದಿಗಿನ ಹೋರಾಟವನ್ನು ತಾಳಿಕೊಂಡವನಾಗಿದ್ದರೆ, ಅವನು ಯೆಹೋವನ ಸಹಾಯದಿಂದ ಮಾತ್ರ ಬದುಕಿ ಉಳಿದಿರಸಾಧ್ಯವಿತ್ತು. ಪುನರುತ್ಥಾನದ ನಿರೀಕ್ಷೆಯಿಲ್ಲದೆ, ಇಂತಹ ಗಂಡಾಂತರಕ್ಕೆ ಅವನನ್ನು ಗುರಿಮಾಡಿದ ಜೀವನಮಾರ್ಗವನ್ನು ಆಯ್ದುಕೊಳ್ಳುವುದು, ನಿಶ್ಚಯವಾಗಿಯೂ ಹುಚ್ಚುಸಾಹಸವಾಗಿದ್ದಿರಬಹುದು. ಭವಿಷ್ಯತ್ತಿನ ಜೀವಿತದ ನಿರೀಕ್ಷೆಯಿಲ್ಲದೆ, ದೇವರಿಗೆ ಸೇವೆಸಲ್ಲಿಸುವುದರೊಂದಿಗೆ ಬರುವ ಕಷ್ಟದೆಸೆಗಳನ್ನೂ ತ್ಯಾಗಗಳನ್ನೂ ತಾಳಿಕೊಳ್ಳುವ ಸಂಗತಿಗೆ ಅರ್ಥವೇ ಇರಲಾರದು. “ಸತ್ತವರು ಎದ್ದುಬರುವದಿಲ್ಲವಾದರೆ—ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂದು ಪೌಲನು ಹೇಳುತ್ತಾನೆ.—1 ಕೊರಿಂಥ 15:31, 32; ನೋಡಿರಿ 2 ಕೊರಿಂಥ 1:8, 9; 11:23-27.
16. (ಎ) “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ಅಭಿವ್ಯಕ್ತಿಯು ಎಲ್ಲಿಂದ ಉದ್ಭವಿಸಿದ್ದಿರಬಹುದು? (ಬಿ) ಈ ಅಭಿಪ್ರಾಯವನ್ನು ಅಂಗೀಕರಿಸುವುದರ ಅಪಾಯಗಳಾವುವು?
16 ಪೌಲನು ಯೆಶಾಯ 22:13ನ್ನು ಉದ್ಧರಿಸಿದ್ದಿರಬಹುದು. ಅದು ಯೆರೂಸಲೇಮಿನ ಅವಿಧೇಯ ನಿವಾಸಿಗಳ ಅದೃಷ್ಟವಾದಾತ್ಮಕ ಮನೋಭಾವವನ್ನು ವರ್ಣಿಸುತ್ತದೆ. ಇಲ್ಲದಿದ್ದರೆ ಅವನಿಗೆ ಎಪಿಕ್ಯೂರಿಯರ ನಂಬಿಕೆಗಳು ಮನಸ್ಸಿನಲ್ಲಿದ್ದಿರಬಹುದು. ಇವರು ಮರಣಾನಂತರದ ಜೀವಿತದ ಯಾವುದೇ ನಿರೀಕ್ಷೆಯನ್ನು ಧಿಕ್ಕರಿಸಿ, ಶಾರೀರಿಕ ಸುಖವೇ ಜೀವಿತದ ಪ್ರಧಾನ ಗುರಿಯಾಗಿತ್ತೆಂದು ನಂಬಿದರು. ವಿಷಯವು ಏನೇ ಆಗಿರಲಿ, “ತಿನ್ನೋಣ ಕುಡಿಯೋಣ” ಎಂಬ ತತ್ವಜ್ಞಾನವು ಭಕ್ತಿಹೀನವಾದ ಸಂಗತಿಯಾಗಿತ್ತು. ಆದಕಾರಣ, ಪೌಲನು ಎಚ್ಚರಿಸುವುದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಪುನರುತ್ಥಾನವನ್ನು ತಿರಸ್ಕರಿಸಿದ ಜನರೊಂದಿಗೆ ಸಹವಾಸಿಸುವುದು ವಿಷಕರವಾಗಿರಸಾಧ್ಯವಿತ್ತು. ಇಂತಹ ಸಹವಾಸವು, ಪೌಲನು ಕೊರಿಂಥ ಸಭೆಯಲ್ಲಿ ನಿರ್ವಹಿಸಬೇಕಾಗಿದ್ದ ಲೈಂಗಿಕ ಅನೈತಿಕತೆ, ವಿಭಜನೆಗಳು, ಮೊಕದ್ದಮೆಗಳು, ಮತ್ತು ಕರ್ತನ ಸಂಧ್ಯಾ ಭೋಜನಕ್ಕೆ ಅಗೌರವದಂತಹ ಸಮಸ್ಯೆಗಳಲ್ಲಿ ಒಂದು ಪಾತ್ರವನ್ನು ವಹಿಸಿದ್ದಿರಬಹುದು.—1 ಕೊರಿಂಥ 1:11; 5:1; 6:1; 11:20-22.
17. (ಎ) ಯಾವ ಪ್ರೇರೇಪಣೆಯನ್ನು ಪೌಲನು ಕೊರಿಂಥದವರಿಗೆ ಕೊಟ್ಟನು? (ಬಿ) ಯಾವ ಪ್ರಶ್ನೆಗಳು ಉತ್ತರಿಸಲ್ಪಡಲಿಕ್ಕಿವೆ?
17 ಆದುದರಿಂದ ಪೌಲನು ಕೊರಿಂಥದವರಿಗೆ ಈ ಸಕಾರಾತ್ಮಕ ಪ್ರೇರೇಪಣೆಯನ್ನು ಕೊಡುತ್ತಾನೆ: “ಇಂಥ ಅಮಲಿನಿಂದೆಚ್ಚತ್ತು ನೀತಿವಂತರಾಗಿರಿ, ಪಾಪವನ್ನು ಬಿಟ್ಟುಬಿಡಿರಿ; ಕೆಲವರಿಗೆ ದೇವರ ವಿಷಯದಲ್ಲಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆಹುಟ್ಟಬೇಕೆಂದು ಇದನ್ನು ಹೇಳುತ್ತೇನೆ.” (1 ಕೊರಿಂಥ 15:34) ಪುನರುತ್ಥಾನದ ಒಂದು ನಕಾರಾತ್ಮಕ ದೃಷ್ಟಿಕೋನವು ಕೆಲವರನ್ನು—ಅವರು ಕುಡಿದಿರುವರೋ ಎಂಬಂತೆ—ಆತ್ಮಿಕ ಜಡತೆಗೆ ನಡೆಸಿತು. ಅವರು ಎಚ್ಚತ್ತುಕೊಂಡು, ಸ್ಥಿರಚಿತ್ತರಾಗಿರಬೇಕಿತ್ತು. ತದ್ರೀತಿಯಲ್ಲಿ ಇಂದು, ಅಭಿಷಿಕ್ತ ಕ್ರೈಸ್ತರು ಲೋಕದ ಸಂದೇಹಾತ್ಮಕ ದೃಷ್ಟಿಕೋನಗಳಿಂದ ಪ್ರಭಾವಿಸಲ್ಪಡದೆ, ಆತ್ಮಿಕವಾಗಿ ಎಚ್ಚತ್ತವರಾಗಿರಬೇಕು. ಅವರು ಸ್ವರ್ಗೀಯ ಪುನರುತ್ಥಾನದ ನಿರೀಕ್ಷೆಗೆ ಬಲವಾಗಿ ಅಂಟಿಕೊಳ್ಳಬೇಕು. ಆದರೆ ಪ್ರಶ್ನೆಗಳು ಇನ್ನೂ ಉಳಿದಿದ್ದವು—ಆಗಿನ ಕೊರಿಂಥದವರಿಗೆ ಮತ್ತು ಈಗ ನಮಗೆ. ಉದಾಹರಣೆಗೆ, ಯಾವ ರೂಪದಲ್ಲಿ 1,44,000 ಜನರು ಸ್ವರ್ಗಕ್ಕೆ ಏರಿಸಲ್ಪಡುವರು? ಮತ್ತು ಇನ್ನೂ ಸಮಾಧಿಗಳಲ್ಲಿರುವ ಹಾಗೂ ಸ್ವರ್ಗೀಯ ನಿರೀಕ್ಷೆಯಿಲ್ಲದಿರುವ ಲಕ್ಷಾಂತರ ಜನರ ಕುರಿತೇನು? ಅಂತಹವರಿಗೆ ಪುನರುತ್ಥಾನವು ಯಾವ ಅರ್ಥದಲ್ಲಿರುವುದು? ನಮ್ಮ ಮುಂದಿನ ಲೇಖನದಲ್ಲಿ, ನಾವು ಪುನರುತ್ಥಾನದ ಕುರಿತು, ಪೌಲನ ಚರ್ಚೆಯ ಉಳಿದ ಭಾಗವನ್ನು ಪರೀಕ್ಷಿಸುವೆವು.
[ಪಾದಟಿಪ್ಪಣಿ]
a ಪ್ರಾಯಶ್ಚಿತ್ತದ ಕುರಿತಾದ ಚರ್ಚೆಗಾಗಿ, 1991, ಫೆಬ್ರವರಿ 15ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯನ್ನು ನೋಡಿರಿ.
ನಿಮಗೆ ನೆನಪಿದೆಯೆ?
◻ ಪುನರುತ್ಥಾನದ ವಿಷಯದ ಮೇಲೆ ಯೇಸು ಯಾವ ಬೆಳಕನ್ನು ಬೀರಿದನು?
◻ ಕ್ರಿಸ್ತನ ಪುನರುತ್ಥಾನಕ್ಕೆ ಸಾಕ್ಷಿಗಳಾಗಿದ್ದವರಲ್ಲಿ ಕೆಲವರು ಯಾರಾಗಿದ್ದರು?
◻ ಪುನರುತ್ಥಾನದ ಸಿದ್ಧಾಂತವು ಪಂಥಾಹ್ವಾನಿಸಲ್ಪಟ್ಟದ್ದು ಏಕೆ, ಮತ್ತು ಪೌಲನ ಪ್ರತಿಕ್ರಿಯೆಯು ಏನಾಗಿತ್ತು?
◻ ಅಭಿಷಿಕ್ತ ಕ್ರೈಸ್ತರಿಗೆ ಪುನರುತ್ಥಾನದಲ್ಲಿನ ನಂಬಿಕೆಯು ಏಕೆ ಅತ್ಯಾವಶ್ಯಕವಾಗಿತ್ತು?
[ಪುಟ 15 ರಲ್ಲಿರುವ ಚಿತ್ರ]
ಪುನರುತ್ಥಾನವು ಸಾಧ್ಯವೆಂಬುದಕ್ಕೆ ಯಾಯೀರನ ಮಗಳು ಪುರಾವೆಯಾಗಿ ಪರಿಣಮಿಸಿದಳು
[ಪುಟ 16,17 ರಲ್ಲಿರುವಚಿತ್ರ]
ಪುನರುತ್ಥಾನದ ನಿರೀಕ್ಷೆಯಿಲ್ಲದೆ, ನಂಬಿಗಸ್ತ ಕ್ರೈಸ್ತರ ಹುತಾತ್ಮತೆಯು ಅರ್ಥಹೀನವಾಗಿರುವುದು