“ಎಪಿಕೂರಿಯರ” ವಿಷಯದಲ್ಲಿ ಎಚ್ಚರಿಕೆ
“ಅವನು ಎಷ್ಟು ಸಜ್ಜನನಾಗಿದ್ದಾನೆ! ಅವನು ಜೀವನದಲ್ಲಿ ಪಾಲಿಸುವ ನೈತಿಕ ಮಟ್ಟಗಳು ಉಚ್ಚರೀತಿಯವು. ಅವನು ಧೂಮಪಾನಮಾಡುವುದಿಲ್ಲ, ಅಮಲೌಷಧಗಳನ್ನು ದುರುಪಯೋಗಿಸುವುದಿಲ್ಲ, ದುರ್ಭಾಷೆಯನ್ನಾಡುವುದೂ ಇಲ್ಲ. ವಾಸ್ತವವಾಗಿ, ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವರಿಗಿಂತ ಅವನು ಹೆಚ್ಚು ಒಳ್ಳೆಯವನು!”
ತಾವು ಬೆಳೆಸಿಕೊಳ್ಳುವ ಅಯೋಗ್ಯ ರೀತಿಯ ಮಿತ್ರತ್ವಗಳನ್ನು ಸಮರ್ಥಿಸಲು ಆ ರೀತಿಯ ತರ್ಕಸರಣಿಯನ್ನು ಕೆಲವರು ಉಪಯೋಗಿಸುವುದನ್ನು ನೀವು ಕೇಳಿದ್ದೀರೊ? ಶಾಸ್ತ್ರೀಯ ಪರಿಶೀಲನೆಯಡಿಯಲ್ಲಿ ಅದು ಸಮರ್ಥನೀಯವಾಗಿದೆಯೊ? ಆದಿಕ್ರೈಸ್ತ ಸಭೆಯಲ್ಲಿನ ಒಂದು ಉದಾಹರಣೆಯು ಈ ವಿಷಯದ ಮೇಲೆ ಬೆಳಕುಬೀರುತ್ತದೆ.
ಒಂದನೆಯ ಶತಮಾನದಲ್ಲಿ, ಅಪೊಸ್ತಲ ಪೌಲನು ಕೊರಿಂಥ ಸಭೆಯನ್ನು ಎಚ್ಚರಿಸಿದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಪ್ರಾಯಶಃ ಕೆಲವು ಕ್ರೈಸ್ತರು, ಎಪಿಕೂರಿಯರ (ಎಪಿಕ್ಯುರೀಯನ್ಸ್) ತತ್ತ್ವಜ್ಞಾನವು ಸೇರಿದ, ಗ್ರೀಕ್ ತತ್ತ್ವಜ್ಞಾನದಿಂದ ಪ್ರಭಾವಿತರಾದ ವ್ಯಕ್ತಿಗಳೊಂದಿಗೆ ಒತ್ತಾದ ಒಡನಾಟವನ್ನು ಮಾಡುತ್ತಿದ್ದರು. ಎಪಿಕೂರಿಯರು ಯಾರಾಗಿದ್ದರು? ಅವರು ಕೊರಿಂಥದಲ್ಲಿನ ಕ್ರೈಸ್ತರಿಗೆ ಆತ್ಮಿಕ ಬೆದರಿಕೆಯನ್ನು ಒಡ್ಡಸಾಧ್ಯವಿದ್ದುದು ಏಕೆ? ಇಂದು ಕೂಡ ಅವರಂತಹ ಜನರು ಇದ್ದಾರೊ? ಅವರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕಾಗಿದೆಯೊ?—1 ಕೊರಿಂಥ 15:33.
ಎಪಿಕೂರಿಯರು ಯಾರಾಗಿದ್ದರು?
ಎಪಿಕೂರಿಯರು, ಸಾ.ಶ.ಪೂ. 341ರಿಂದ 270ರ ತನಕ ಜೀವಿಸಿದ ಗ್ರೀಕ್ ತತ್ತ್ವಜ್ಞಾನಿ ಎಪಿಕ್ಯುರಸನ ಹಿಂಬಾಲಕರು. ಸುಖಾನುಭವವೇ ಜೀವನದಲ್ಲಿರುವ ಏಕಮಾತ್ರ ಅಥವಾ ಮುಖ್ಯ ಒಳಿತಾಗಿದೆಯೆಂದು ಅವನು ಕಲಿಸಿದನು. ಅಂದರೆ, ಎಪಿಕೂರಿಯರು ನಾಚಿಕೆಗೇಡಿಗಳಾಗಿ, ನೀತಿನಿಷ್ಠೆಗಳಿಲ್ಲದೆ ಜೀವಿಸಿ, ಸುಸಮಯದ ಸತತವಾದ ಅನ್ವೇಷಣೆಯಲ್ಲಿ ಕೀಳುಮಟ್ಟದ ಆಚಾರಗಳನ್ನು ಅವಲಂಬಿಸಿದರೆಂಬುದು ಅದರ ಅರ್ಥವೊ? ಆಶ್ಚರ್ಯಕರವಾಗಿ, ತನ್ನ ಹಿಂಬಾಲಕರು ಹಾಗೆ ಜೀವಿಸಬೇಕೆಂದು ಎಪಿಕ್ಯುರಸ್ ಕಲಿಸಲಿಲ್ಲ! ಬದಲಿಗೆ, ಯುಕ್ತಾಯುಕ್ತ ಪರಿಜ್ಞಾನ, ಧೈರ್ಯ, ಆತ್ಮನಿಯಂತ್ರಣ ಮತ್ತು ನ್ಯಾಯಾನುಸಾರ ಜೀವಿಸುವುದರಿಂದ, ಸುಖಾನುಭವವು ಅತ್ಯುತ್ತಮವಾಗಿ ಲಭಿಸುತ್ತದೆಂದು ಅವನು ಬೋಧಿಸಿದನು. ಅವನು ಒಡನೆ ದೊರೆಯುವ, ಕ್ಷಣಿಕ ಸುಖಾನುಭವವನ್ನಲ್ಲ, ಜೀವನಪರ್ಯಂತ ಬಾಳುವ ಸುಖಾನುಭವದ ಬೆನ್ನಟ್ಟುವಿಕೆಯನ್ನು ಸಮರ್ಥಿಸಿದನು. ಹೀಗೆ, ಗಂಭೀರವಾದ ಪಾಪಗಳನ್ನು ಆಚರಿಸುವವರೊಂದಿಗೆ ಹೋಲಿಸುವಾಗ, ಎಪಿಕೂರಿಯರು ಸದ್ಗುಣಶೀಲರಾಗಿ ಕಂಡುಬಂದಿರಬಹುದು.—ಹೋಲಿಸಿ ತೀತ 1:12.
ಕ್ರೈಸ್ತತ್ವ ಸದೃಶವೊ?
ನೀವು ಆದಿ ಕೊರಿಂಥ ಸಭೆಯ ಸದಸ್ಯರಾಗಿರುತ್ತಿದ್ದರೆ, ನೀವು ಎಪಿಕೂರಿಯರಿಂದ ಪ್ರಭಾವಿಸಲ್ಪಡುತ್ತಿದ್ದಿರೊ? ಎಪಿಕೂರಿಯರ ಉದಾತ್ತವೆಂದು ತೋರಿಬಂದ ನೀತಿನಿಷ್ಠೆಗಳು, ಅವರನ್ನು ಕ್ರೈಸ್ತರಿಗೆ ಅನಪಾಯಕರ ಒಡನಾಡಿಗಳಾಗಿ ಮಾಡಿತೆಂದು ಕೆಲವರು ತರ್ಕಿಸಿದ್ದಿರಬಹುದು. ತಾರ್ಕಿಕವಾಗಿ ಇನ್ನೂ ಮುಂದುವರಿಯುತ್ತ, ಎಪಿಕೂರಿಯರ ಮಟ್ಟಗಳು ಹಾಗೂ ದೇವರ ವಾಕ್ಯದ ಮಟ್ಟಗಳ ನಡುವೆ ಸಮಾಂತರವಾಗಿ ಕಂಡುಬಂದ ವಿಷಯಗಳನ್ನು ಕೊರಿಂಥದವರು ಗಮನಿಸಿದ್ದಿರಬಹುದು.
ದೃಷ್ಟಾಂತಕ್ಕೆ, ಸುಖಾನುಭವದ ಬೆನ್ನಟ್ಟುವಿಕೆಯಲ್ಲಿ ಎಪಿಕೂರಿಯರು ಮಿತಸ್ವಭಾವಿಗಳಾಗಿದ್ದರು. ಅವರು ಶಾರೀರಿಕ ಸುಖಾನುಭವಗಳಿಗಿಂತಲೂ ಹೆಚ್ಚಾಗಿ ಮಾನಸಿಕ ಸುಖಾನುಭವಗಳನ್ನು ಬೆಲೆಯುಳ್ಳದ್ದಾಗಿ ಕಂಡರು. ಒಬ್ಬ ವ್ಯಕ್ತಿ ಏನನ್ನು ತಿಂದನೊ ಅದು, ಅವನು ಅದನ್ನು ಯಾರ ಜೊತೆಯಲ್ಲಿ ತಿಂದನೊ ಅವನೊಂದಿಗಿನ ಸಂಬಂಧದಷ್ಟು ಪ್ರಾಮುಖ್ಯವಾಗಿರಲಿಲ್ಲ. ಎಪಿಕೂರಿಯರು ರಾಜಕೀಯ ಒಳಗೊಳ್ಳುವಿಕೆ ಮತ್ತು ಗುಪ್ತ ಪಾಪದಿಂದಲೂ ದೂರವಿದ್ದರು. ಆದಕಾರಣ, “ಅವರು ಹೆಚ್ಚುಕಡಮೆ ನಮ್ಮಂತೆಯೇ ಇದ್ದಾರೆ!” ಎಂದು ಎಷ್ಟು ಸುಲಭವಾಗಿ ಊಹಿಸಸಾಧ್ಯವಿತ್ತು.
ಆದರೂ, ಎಪಿಕೂರಿಯರು ನಿಜವಾಗಿಯೂ ಆದಿಕ್ರೈಸ್ತರಂತಿದ್ದರೊ? ಖಂಡಿತವಾಗಿಯೂ ಇಲ್ಲ. ಸುಶಿಕ್ಷಿತ ಗ್ರಹಣಶಕ್ತಿಯಿದ್ದವರಿಗೆ, ಗಮನಾರ್ಹ ವ್ಯತ್ಯಾಸಗಳನ್ನು ಕಂಡುಹಿಡಿಯಸಾಧ್ಯವಿತ್ತು. (ಇಬ್ರಿಯ 5:14) ನಿಮಗೆ ಸಾಧ್ಯವಿದೆಯೆ? ಎಪಿಕ್ಯುರಸನ ಬೋಧನೆಗಳನ್ನು ನಾವು ಹೆಚ್ಚು ನಿಕಟವಾಗಿ ನೋಡೋಣ.
ಎಪಿಕೂರಿಯ ಸಿದ್ಧಾಂತದ ದೋಷಯುಕ್ತ ಮುಖ
ದೇವತೆಗಳ ಮತ್ತು ಮರಣದ ಭಯವನ್ನು ಜನರು ಜಯಿಸುವಂತೆ ಸಹಾಯಮಾಡಲು, ದೇವತೆಗಳಿಗೆ ಮಾನವಕುಲದಲ್ಲಿ ಆಸಕ್ತಿಯಿಲ್ಲವೆಂದೂ ಮಾನವ ವಿಚಾರಗಳಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲವೆಂದೂ ಎಪಿಕ್ಯುರಸನು ಬೋಧಿಸಿದನು. ಎಪಿಕ್ಯುರಸನಿಗನುಸಾರ, ದೇವತೆಗಳು ವಿಶ್ವವನ್ನು ಸೃಷ್ಟಿಸಲಿಲ್ಲ ಮತ್ತು ಜೀವವು ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತು. ಇದು ಸೃಷ್ಟಿಕರ್ತನಾದ “ಒಬ್ಬನೇ ದೇವರು” ಇದ್ದಾನೆ ಮತ್ತು ಆತನು ತನ್ನ ಮಾನವಜೀವಿಗಳನ್ನು ಪರಾಮರಿಸುತ್ತಾನೆ ಎಂಬ ಬೈಬಲಿನ ಬೋಧನೆಯೊಂದಿಗೆ ಸ್ಪಷ್ಟವಾಗಿ ಸಂಘರ್ಷಿಸುವುದಿಲ್ಲವೆ?—1 ಕೊರಿಂಥ 8:6; ಎಫೆಸ 4:6; 1 ಪೇತ್ರ 5:6, 7.
ಮರಣಾನಂತರ ಜೀವವಿರಸಾಧ್ಯವಿಲ್ಲವೆಂದೂ ಎಪಿಕ್ಯುರಸನು ಬೋಧಿಸಿದನು. ಇದು ಬೈಬಲಿನ ಪುನರುತ್ಥಾನದ ಬೋಧನೆಗೆ ಪ್ರತಿಕೂಲವಾಗಿತ್ತು ನಿಶ್ಚಯ. ವಾಸ್ತವವೇನಂದರೆ, ಅಪೊಸ್ತಲ ಪೌಲನು ಅರಿಯೊಪಾಗದಲ್ಲಿ ಮಾತಾಡಿದಾಗ, ಪುನರುತ್ಥಾನದ ಸಿದ್ಧಾಂತದೊಂದಿಗೆ ಅಸಮ್ಮತಿಸಿದವರಲ್ಲಿ ಎಪಿಕೂರಿಯರು ಇದ್ದಿರುವ ಸಂಭವವಿತ್ತು.—ಅ. ಕೃತ್ಯಗಳು 17:18, 31, 32; 1 ಕೊರಿಂಥ 15:12-14.
ಎಪಿಕ್ಯುರಸನ ತತ್ತ್ವಜ್ಞಾನದಲ್ಲಿ ಅತಿ ಅಪಾಯಕರವಾಗಿದ್ದ ಅಂಶವು, ಅತಿ ಮಾರ್ಮಿಕವೂ ಆಗಿದ್ದಿರಬಹುದು. ಮರಣೋತ್ತರ ಜೀವನದ ಕುರಿತಾದ ಅವನ ಅಲ್ಲಗಳೆಯುವಿಕೆಯು, ಮನುಷ್ಯನು ಭೂಮಿಯ ಮೇಲಿರುವ ಸ್ವಲ್ಪ ಸಮಯದಲ್ಲಿ ಸಾಧ್ಯವಿರುವಷ್ಟು ಸಂತೋಷದಿಂದ ಬದುಕಬೇಕೆಂಬ ತೀರ್ಮಾನಕ್ಕೆ ನಡೆಸಿತು. ನಾವು ನೋಡಿರುವಂತೆ, ಪಾಪಪೂರ್ಣರಾಗಿ ಬದುಕಬೇಕೆಂಬುದು ಅವನ ವಿಚಾರವಾಗಿರಲಿಲ್ಲ, ಬದಲಿಗೆ ನಮಗೆ ಮರಣೋತ್ತರ ಜೀವಿತವು ಇಲ್ಲದಿರುವುದರಿಂದ, ವರ್ತಮಾನ ಕಾಲವನ್ನು ಆಸ್ವಾದಿಸಬೇಕು ಎಂಬುದೇ ಅವನ ವಿಚಾರವಾಗಿತ್ತು.
ಹೀಗೆ ಎಪಿಕ್ಯುರಸನು, ಪ್ರಸ್ತುತದ ಸಂತೋಷಕ್ಕೆ ನಿಜವಾಗಿಯೂ ಒಂದು ಬೆದರಿಕೆಯಾಗಿರುವ, ಕಂಡುಹಿಡಿಯಲ್ಪಡುವ ಭಯದಿಂದ ದೂರವಿರಲಿಕ್ಕಾಗಿ, ಗುಪ್ತವಾದ ತಪ್ಪುಗೈಯುವಿಕೆಯನ್ನು ಅಸಮ್ಮತಿಸಿದನು. ಪ್ರಸಕ್ತ ಸಂತೋಷಕ್ಕೆ ಇನ್ನೊಂದು ತಡೆಯಾದ ಮಿತಿಮೀರಿದ ಲೋಲುಪತೆಯ ಪರಿಣಾಮಗಳಿಂದ ದೂರವಿರುವಂತೆ ಅವನು ಮಿತಸ್ವಭಾವವನ್ನು ಪ್ರೋತ್ಸಾಹಿಸಿದನು. ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನೂ ಅವನು ಪ್ರೋತ್ಸಾಹಿಸಿದನು, ಏಕೆಂದರೆ ಪರಸ್ಪರ ವಿನಿಮಯ ಲಾಭದಾಯಕವಾಗಿತ್ತು. ಗುಪ್ತ ಪಾಪಗಳಿಂದ ದೂರವಿರುವುದು, ಮಿತಸ್ವಭಾವವನ್ನು ಅಭ್ಯಸಿಸುವುದು ಮತ್ತು ಸ್ನೇಹಗಳನ್ನು ಬೆಳೆಸುವುದು ಖಂಡಿತವಾಗಿಯೂ ಪ್ರಶಂಸಾರ್ಹ ಕಾರ್ಯವಾಗಿದೆ. ಹಾಗಾದರೆ, ಎಪಿಕ್ಯುರಸನ ತತ್ತ್ವಜ್ಞಾನವು ಒಬ್ಬ ಕ್ರೈಸ್ತನಿಗೆ ಏಕೆ ಅಪಾಯಕರವಾಗಿತ್ತು? ಏಕೆಂದರೆ ಅವನ ಸಲಹೆಯು ತನ್ನ ನಂಬಿಕೆರಹಿತ ಹೊರನೋಟವಾದ, “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬುದರ ಮೇಲೆ ಆಧಾರಿಸಿತ್ತು.—1 ಕೊರಿಂಥ 15:32.
ಜನರು ಈಗ ಸಂತೋಷದಿಂದ ಹೇಗೆ ಜೀವಿಸಬೇಕೆಂಬುದನ್ನು ಬೈಬಲು ತೋರಿಸುತ್ತದೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೂ ಅದು ಸಲಹೆ ನೀಡುವುದು: “ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 21) ಹೌದು, ಬೈಬಲು ಕ್ಷಣಿಕ ವರ್ತಮಾನಕಾಲದ ಮೇಲಲ್ಲ, ಅನಂತ ಭವಿಷ್ಯತ್ತಿನ ಮೇಲೆ ಹೆಚ್ಚು ಒತ್ತನ್ನು ಹಾಕುತ್ತದೆ. ಒಬ್ಬ ಕ್ರೈಸ್ತನಿಗೆ ದೇವರನ್ನು ಸೇವಿಸುವುದೇ ಮುಖ್ಯಾಸಕ್ತಿಯಾಗಿದೆ ಮತ್ತು ದೇವರನ್ನು ಪ್ರಥಮ ಸ್ಥಾನದಲ್ಲಿಡುವಾಗ, ಅವನು ಸಂತುಷ್ಟನೂ ಸಾರ್ಥಕಭಾವದವನೂ ಆಗಿ ತನ್ನನ್ನು ಕಂಡುಕೊಳ್ಳುತ್ತಾನೆ. ಅದೇ ರೀತಿ ಯೇಸು, ತನ್ನ ಸ್ವಂತಾಸಕ್ತಿಗಳಲ್ಲಿ ಮಗ್ನನಾಗಿರುವ ಬದಲು, ನಿಸ್ವಾರ್ಥಭಾವದಿಂದ ಯೆಹೋವನನ್ನು ಸೇವಿಸುವುದರಲ್ಲಿ ಮತ್ತು ಜನರಿಗೆ ಸಹಾಯಮಾಡುವುದರಲ್ಲಿ ತನ್ನ ಶಕ್ತಿಗಳನ್ನು ವ್ಯಯಿಸಿದನು. ಇತರರಿಗೆ ಒಳ್ಳೆಯದನ್ನು ಮಾಡುವಂತೆ ಅವನು ತನ್ನ ಶಿಷ್ಯರಿಗೆ ಕಲಿಸಿದನು—ಸಹಾಯ ವಿನಿಮಯದ ಉದ್ದೇಶದಿಂದಲ್ಲ, ಅವರ ಕಡೆಗಿದ್ದ ನಿಜ ಪ್ರೀತಿಯ ಉದ್ದೇಶದಿಂದಲೇ. ಎಪಿಕೂರಿಯ ಸಿದ್ಧಾಂತ ಮತ್ತು ಕ್ರೈಸ್ತತ್ವದ ಮೂಲ ಪ್ರಚೋದನೆಗಳು ಪೂರ್ತಿಯಾಗಿ ಭಿನ್ನವಾಗಿವೆಯೆಂಬುದು ಸ್ಪಷ್ಟ.—ಮಾರ್ಕ 12:28-31; ಲೂಕ 6:32-36; ಗಲಾತ್ಯ 5:14; ಫಿಲಿಪ್ಪಿ 2:2-4.
ನವಿರಾದ ಅಪಾಯಸಂಭವ
ಹಾಸ್ಯವ್ಯಂಗ್ಯವಾಗಿ, ಎಪಿಕೂರಿಯರು ಸಂತೋಷವಾಗಿರುವುದರ ಮೇಲೆ ಅಷ್ಟೊಂದು ಒತ್ತನ್ನು ಹಾಕಿದರೂ, ಅವರ ಸಂತೋಷವು ಹೆಚ್ಚೆಂದರೆ ಸೀಮಿತ ಸಂತೋಷವಾಗಿತ್ತು. “ಯೆಹೋವನ ಆನಂದ”ದ ಕೊರತೆಯಿದ್ದವನಾಗಿ, ಎಪಿಕ್ಯುರಸನು ಜೀವನವನ್ನು “ಕಹಿಯಾದ ಕೊಡುಗೆ” ಎಂದು ಕರೆದನು. (ನೆಹೆಮೀಯ 8:10) ಇದಕ್ಕೆ ಹೋಲಿಕೆಯಾಗಿ, ಆದಿಕ್ರೈಸ್ತರು ಎಷ್ಟು ಸಂತುಷ್ಟರಾಗಿದ್ದರು! ಯೇಸು ಸ್ವಪರಿತ್ಯಾಗದ ಅಸಂತೋಷಕರ ಜೀವಿತವನ್ನು ಶಿಫಾರಸ್ಸು ಮಾಡಲಿಲ್ಲ. ವಾಸ್ತವವೇನಂದರೆ, ಆತನ ಮಾರ್ಗವನ್ನು ಅನುಸರಿಸುವುದೇ ಮಹಾ ಸಂತೋಷಕ್ಕೆ ಮಾರ್ಗವಾಗಿದೆ.—ಮತ್ತಾಯ 5:3-12.
ಎಪಿಕೂರಿಯ ಯೋಚನೆಯಿಂದ ಪ್ರಭಾವಿತರಾದವರೊಂದಿಗೆ, ತಮ್ಮ ನಂಬಿಕೆಗೆ ಹಾನಿಯಾಗದೆ ಸಹವಾಸಿಸಬಹುದೆಂದು ಕೊರಿಂಥ ಸಭೆಯ ಕೆಲವು ಸದಸ್ಯರು ನೆನಸುತ್ತಿದ್ದರೆ, ಆ ಎಣಿಕೆ ತಪ್ಪಾಗಿತ್ತು. ಕೊರಿಂಥದವರಿಗೆ ತನ್ನ ಮೊದಲನೆಯ ಪತ್ರವನ್ನು ಪೌಲನು ಬರೆದ ಸಮಯದಲ್ಲಿ, ಅವರಲ್ಲಿ ಕೆಲವರಿಗೆ ಪುನರುತ್ಥಾನದಲ್ಲಿ ಆಗಲೇ ನಂಬಿಕೆಯು ನಷ್ಟವಾಗಿತ್ತು.—1 ಕೊರಿಂಥ 15:12-19.
ಇಂದು ಎಪಿಕ್ಯುರೀಯನ್ ಸಿದ್ಧಾಂತ?
ಸಾ.ಶ. ನಾಲ್ಕನೆಯ ಶತಮಾನದಲ್ಲಿ ಎಪಿಕ್ಯುರೀಯನ್ ಸಿದ್ಧಾಂತವು ಇಲ್ಲದೆ ಹೋಯಿತಾದರೂ, ಇಂದು ಅದೇ ರೀತಿಯ, ಇಂದಿಗಾಗಿ ಜೀವಿಸುವ ದೃಷ್ಟಿಕೋನವನ್ನು ಆಯ್ದುಕೊಳ್ಳುವ ಜನರಿದ್ದಾರೆ. ಈ ಜನರಿಗೆ ದೇವರ ನಿತ್ಯಜೀವದ ಕುರಿತ ವಾಗ್ದಾನದಲ್ಲಿ ಕೊಂಚವೇ ನಂಬಿಕೆಯಿದೆ ಅಥವಾ ಇಲ್ಲವೇ ಇಲ್ಲ. ಆದರೂ, ಅವರಲ್ಲಿ ಕೆಲವರಿಗೆ ಸಾಪೇಕ್ಷವಾಗಿ ನಡತೆಯ ಉಚ್ಚ ಮಟ್ಟಗಳಿವೆ.
ಒಬ್ಬ ಕ್ರೈಸ್ತನು ಇಂತಹವರೊಡನೆ, ಅವರ ಸಭ್ಯ ಗುಣಗಳು ಮಿತ್ರತ್ವವನ್ನು ಸಮರ್ಥಿಸುತ್ತವೆಂದು ಪ್ರಾಯಶಃ ತರ್ಕಿಸಿ, ಅವರೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವಂತೆ ಪ್ರೇರಿಸಲ್ಪಡಬಹುದು. ನಮ್ಮನ್ನು ಶ್ರೇಷ್ಠರೆಂದೆಣಿಸಿಕೊಳ್ಳದಿದ್ದರೂ, ಎಲ್ಲ ‘ದುಸ್ಸಹವಾಸಗಳು’—ಯಾರ ಪ್ರಭಾವವು ಹೆಚ್ಚು ನವಿರಾಗಿರುತ್ತದೋ ಅವರನ್ನೂ ಒಳಗೊಂಡು—“ಸದಾಚಾರವನ್ನು ಕೆಡಿಸುತ್ತ”ವೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಕೆಲವು ವ್ಯಾಪಾರ ಸೆಮಿನಾರುಗಳಲ್ಲಿ, ಸ್ವಸಹಾಯ ಪುಸ್ತಕಗಳಲ್ಲಿ, ಕಥೆಗಳಲ್ಲಿ, ಚಲನ ಚಿತ್ರಗಳಲ್ಲಿ, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಮತ್ತು ಸಂಗೀತಗಳಲ್ಲಿಯೂ ಈ ಇಂದಿಗಾಗಿ ಜೀವಿಸೋಣ ಎಂಬ ತತ್ತ್ವಜ್ಞಾನ ಎದ್ದುಬರುತ್ತದೆ. ಅದು ಪಾಪಮಯ ನಡತೆಗೆ ನೇರವಾಗಿ ಉತ್ತೇಜನ ಕೊಡದಿದ್ದರೂ, ಈ ನಂಬಿಕೆರಹಿತ ದೃಷ್ಟಿಕೋನವು ನಮ್ಮನ್ನು ಮಾರ್ಮಿಕ ವಿಧಗಳಲ್ಲಿ ಪ್ರಭಾವಿಸಬಲ್ಲದೊ? ಉದಾಹರಣೆಗೆ, ಆತ್ಮಸಾಧನೆಯಲ್ಲಿ, ನಾವು ಯೆಹೋವನ ಪರಮಾಧಿಕಾರದ ವಿವಾದಾಂಶವನ್ನು ಮರೆತುಬಿಡುವಷ್ಟು ಮಗ್ನರಾಗಿರಸಾಧ್ಯವಿದೆಯೊ? “ಕರ್ತನ ಸೇವೆಯನ್ನು . . . ಅತ್ಯಾಸಕ್ತಿಯಿಂದ ಮಾಡುವ” ಬದಲಾಗಿ, ‘ಆರಾಮವಾಗಿರುವ’ ಪಕ್ಕ ಕಂಬಿದಾರಿಗೆ ನಾವು ತಿರುಗಿಸಲ್ಪಟ್ಟೇವೊ? ಅಥವಾ, ನಾವು ಯೆಹೋವನ ಮಟ್ಟಗಳ ಯುಕ್ತತೆ ಮತ್ತು ಪ್ರಯೋಜನಗಳನ್ನು ಸಂದೇಹಿಸುವಂತೆ ನಡೆಸಲ್ಪಟ್ಟೇವೊ? ನಾವು ಪೂರ್ತಿ ಅನೈತಿಕತೆ, ಹಿಂಸಾಚಾರ ಮತ್ತು ಪ್ರೇತವ್ಯವಹಾರವಾದಕ್ಕೆ ಒಡ್ಡಲ್ಪಡುವುದರ ವಿರುದ್ಧ ಮತ್ತು ಲೌಕಿಕ ದೃಷ್ಟಿಕೋನಗಳಿಂದ ಪ್ರಭಾವಿಸಲ್ಪಟ್ಟ ಜನರ ವಿರುದ್ಧ ಎಚ್ಚರಿಕೆ ವಹಿಸುವುದು ಅಗತ್ಯ!—1 ಕೊರಿಂಥ 15:58; ಕೊಲೊಸ್ಸೆ 2:8
ಆದಕಾರಣ, ಯೆಹೋವನ ಮಾರ್ಗದರ್ಶನವನ್ನು ಪೂರ್ಣಹೃದಯದಿಂದ ಅನುಸರಿಸುತ್ತಿರುವವರೊಂದಿಗೆ ಮುಖ್ಯವಾಗಿ ನಾವು ಸಹವಾಸವನ್ನು ಬೆಳೆಸೋಣ. (ಯೆಶಾಯ 48:17) ಇದರ ಪರಿಣಾಮವಾಗಿ, ನಮ್ಮ ಸದಾಚಾರಗಳು ಬಲಗೊಳಿಸಲ್ಪಡುವವು. ನಮ್ಮ ನಂಬಿಕೆ ಪುಷ್ಟಿಗೊಳ್ಳುವುದು. ನಾವು ಈಗ ಮಾತ್ರವಲ್ಲ, ಭವಿಷ್ಯತ್ತಿನಲ್ಲಿ ನಿತ್ಯಜೀವದ ದೃಷ್ಟಿಯುಳ್ಳವರಾಗಿ ಸಂತೋಷದಿಂದ ಜೀವಿಸುವೆವು.—ಕೀರ್ತನೆ 26:4, 5; ಜ್ಞಾನೋಕ್ತಿ 13:20.
[ಪುಟ 24 ರಲ್ಲಿರುವ ಚಿತ್ರ]
ದೇವತೆಗಳಿಗೆ ಮಾನವಕುಲದಲ್ಲಿ ಆಸಕ್ತಿಯಿಲ್ಲವೆಂದು ಎಪಿಕ್ಯುರಸನು ಕಲಿಸಿದನು
[ಕೃಪೆ]
Courtesy of The British Museum