ಅಧ್ಯಯನ ಲೇಖನ 26
ನಿಮ್ಮಿಂದ ಬೈಬಲ್ ಕಲಿಸೋಕೆ ಆಗುತ್ತೆ!
‘ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ದೇವರೇ ಕೊಡ್ತಾನೆ.’—ಫಿಲಿ. 2:13.
ಗೀತೆ 44 ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು
ಕಿರುನೋಟa
1. ಯೆಹೋವ ದೇವರು ನಿಮ್ಮನ್ನ ಹೇಗೆ ಆರಿಸ್ಕೊಂಡ್ರು?
ನೀವು ಹೇಗೆ ಯೆಹೋವನ ಸಾಕ್ಷಿ ಆದ್ರಿ? ಮೊದಲು ನೀವು “ಸಿಹಿಸುದ್ದಿ” ಕೇಳಿಸಿಕೊಂಡ್ರಿ. ಅದನ್ನ ನಿಮ್ಮ ಅಪ್ಪಅಮ್ಮ ಅಥವಾ ನಿಮ್ಮ ಸ್ನೇಹಿತರು ನಿಮಗೆ ಹೇಳಿರಬಹುದು. ಅಥವಾ ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಬಂದು ಸಾರಿರಬಹುದು. (ಮಾರ್ಕ 13:10) ಆಮೇಲೆ ಅವರು ಆಗಾಗ ಬಂದು ನಿಮ್ಮ ಜೊತೆ ಮಾತಾಡಿ ಬೈಬಲ್ ಕಲಿಸಿಕೊಟ್ರು. ಕಲೀತಾ ಕಲೀತಾ ನೀವು ಯೆಹೋವ ದೇವರನ್ನ ಪ್ರೀತಿಸೋಕೆ ಶುರುಮಾಡಿದ್ರಿ. ದೇವರು ನಿಮ್ಮನ್ನ ಎಷ್ಟು ಪ್ರೀತಿಸ್ತಾರೆ ಅಂತ ತಿಳುಕೊಂಡ್ರಿ. ಯೆಹೋವ ದೇವರು ನಿಮ್ಮನ್ನ ಸೆಳೆದಿದ್ದರಿಂದಾನೇ ನೀವು ಶಿಷ್ಯರಾದ್ರಿ. ಶಾಶ್ವತವಾಗಿ ಜೀವನ ಮಾಡೋ ನಿರೀಕ್ಷೆ ಸಿಕ್ತು. (ಯೋಹಾ. 6:44) ಬೈಬಲ್ ಕಲಿಸೋಕೆ ಯೆಹೋವ ದೇವರು ನಿಮ್ಮ ಹತ್ರ ಒಬ್ಬರನ್ನ ಕಳಿಸಿದ್ದಕ್ಕೆ ಮತ್ತು ಆತನು ನಿಮ್ಮನ್ನ ಆರಿಸಿಕೊಂಡಿದ್ದಕ್ಕೆ ಯಾವಾಗಲೂ ದೇವರಿಗೆ ಥ್ಯಾಂಕ್ಸ್ ಹೇಳ್ತಿರಾ ಅಲ್ವಾ?
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ನಮಗೆ ಈಗ ಸತ್ಯ ಗೊತ್ತಾಗಿರೋದ್ರಿಂದ ಅದನ್ನ ಬೇರೆಯವ್ರಿಗೆ ಹೇಳೋ ಸುಯೋಗ ಇದೆ. ಅದು ಅವರಿಗೆ ಶಾಶ್ವತ ಜೀವ ಕೊಡುತ್ತೆ. ನಿಮಗೆ ಮನೆಮನೆಗೆ ಹೋಗಿ ಸಿಹಿಸುದ್ದಿ ಸಾರೋಕೆ ಸುಲಭ ಅನಿಸಬಹುದು. ಆದ್ರೆ ಅದೇ ಮನೆಯವರನ್ನ ‘ನೀವು ಬೈಬಲ್ ಕಲಿತೀರಾ’ ಅಂತ ಕೇಳೋಕೆ ಭಯ ಆಗ್ತಿದ್ಯಾ? ಅದನ್ನ ಧೈರ್ಯವಾಗಿ ಕೇಳೋಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ. ನಾವೀಗ ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ. ನಾವು ಬರೀ ಸಿಹಿಸುದ್ದಿ ಸಾರೋದು ಮಾತ್ರವಲ್ಲ ಬೈಬಲ್ ಸ್ಟಡಿ ಮಾಡೋದು ಯಾಕೆ ಅಷ್ಟು ಪ್ರಾಮುಖ್ಯ? ಶಿಷ್ಯರನ್ನ ಮಾಡೋಕೆ ನಮಗೆ ಯಾರ ಮೇಲೆ ಪ್ರೀತಿ ಇರಬೇಕು? ಜನರಿಗೆ ಬೈಬಲ್ ಕಲಿಸೋಕೆ ಕೆಲವೊಂದು ಸಲ ನಮಗೆ ಯಾಕೆ ಕಷ್ಟ ಆಗುತ್ತೆ, ಆಗ ನಾವೇನು ಮಾಡಬೇಕು?
ಕಲಿಸಬೇಕು ಅಂತನೂ ಯೇಸು ಆಜ್ಞೆ ಕೊಟ್ಟಿದ್ದಾರೆ
3. ನಾವು ಯಾಕೆ ಸಿಹಿಸುದ್ದಿ ಸಾರುತ್ತೀವಿ?
3 ಯೇಸು ಕೊಟ್ಟ ಆಜ್ಞೆಯಲ್ಲಿ ಎರಡು ವಿಷಯ ಸೇರಿತ್ತು. ಒಂದು, ಜನ್ರಿಗೆ ಸಿಹಿಸುದ್ದಿ ಸಾರೋದು. ಅದನ್ನ ಹೇಗೆ ಮಾಡಬೇಕು ಅಂತ ಅವರೇ ಹೇಳಿಕೊಟ್ಟಿದ್ದಾರೆ. (ಮತ್ತಾ. 10:7; ಲೂಕ 8:1) ಜನ ಆ ಸಂದೇಶನ ಕೇಳಿದ್ರೆ ಏನು ಮಾಡಬೇಕು, ಕೇಳದಿದ್ರೆ ಏನು ಮಾಡಬೇಕು ಅಂತಾನೂ ಹೇಳಿಕೊಟ್ಟಿದ್ದಾರೆ. (ಲೂಕ 9:2-5) ಅಷ್ಟೇ ಅಲ್ಲ, ಈ ಸಿಹಿಸುದ್ದಿ ಎಷ್ಟರ ಮಟ್ಟಿಗೆ ಜನ್ರಿಗೆ ತಲುಪುತ್ತೆ ಅಂದ್ರೆ “ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ” ಅಂತನೂ ಹೇಳಿದ್ದಾರೆ. (ಮತ್ತಾ. 24:14; ಅ. ಕಾ. 1:8) ಹಾಗಾಗಿ ಯೇಸು ಕಾಲದಲ್ಲಿ ಜನ ಕೇಳಲಿ ಬಿಡಲಿ ಆತನ ಶಿಷ್ಯರು ದೇವರ ಸರ್ಕಾರದ ಬಗ್ಗೆ, ಅದು ಏನನ್ನೆಲ್ಲಾ ಸಾಧಿಸುತ್ತೆ ಅನ್ನೋದರ ಬಗ್ಗೆ ಸಾರಿದ್ರು.
4. ಮತ್ತಾಯ 28:18-20ರಲ್ಲಿ ಹೇಳೋ ಪ್ರಕಾರ ಸಿಹಿಸುದ್ದಿ ಸಾರೋದರ ಜೊತೆಗೆ ನಾವು ಇನ್ನೇನು ಮಾಡಬೇಕು?
4 ಯೇಸು ಕೊಟ್ಟ ಆಜ್ಞೆಯಲ್ಲಿದ್ದ ಎರಡನೇ ವಿಷ್ಯ ಯಾವುದು? ಯೇಸು ಹೇಳಿರೋದನ್ನೆಲ್ಲ ಹೇಗೆ ಪಾಲಿಸೋದು ಅಂತ ಜನ್ರಿಗೆ ಕಲಿಸೋದು. ಈ ಕೆಲಸನ ಬರೀ ಒಂದನೇ ಶತಮಾನದ ಕ್ರೈಸ್ತರಿಗೆ ಮಾತ್ರ ಕೊಟ್ಟಿದ್ದು ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ಹಾಗಲ್ಲ. ಯೇಸು 500 ಜನ್ರಿಗೆ ಕಾಣಿಸಿಕೊಂಡಾಗ ಈ ಆಜ್ಞೆ ಕೊಟ್ಟಿದ್ದೇನೋ ನಿಜ. (1 ಕೊರಿಂ. 15:6) ಆದ್ರೆ ಇದನ್ನ ಅವರಿಗೆ ಮಾತ್ರ ಅಲ್ಲ ನಮಗೂ ಕೊಟ್ಟಿದ್ದಾರೆ. ಯಾಕಂದ್ರೆ “ಲೋಕದ ಅಂತ್ಯ ಬರೋ ತನಕ” ನೀವು ಸಿಹಿಸುದ್ದಿ ಸಾರುತ್ತಾ ಇರಿ ಅಂತ ಯೇಸು ಹೇಳಿದ್ದಾರೆ. (ಮತ್ತಾಯ 28:18-20 ಓದಿ.) ಅಷ್ಟೇ ಅಲ್ಲ, ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ಹಾಗೆ ತನ್ನ ಎಲ್ಲ ಶಿಷ್ಯರು ಜನರಿಗೆ ಯೆಹೋವ ದೇವರ ಬಗ್ಗೆ ಕಲಿಸಲೇಬೇಕು ಅಂತ ಯೇಸು ಯೋಹಾನನಿಗೆ ಕೊಟ್ಟ ದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.—ಪ್ರಕ. 22:17.
5. ಒಂದನೇ ಕೊರಿಂಥ 3:6-9ರಲ್ಲಿ ಪೌಲ ಹೇಳಿರೋ ಉದಾಹರಣೆಯಿಂದ ಸಾರೋದಕ್ಕೂ ಕಲಿಸೋದಕ್ಕೂ ಸಂಬಂಧ ಇದೆ ಅಂತ ಹೇಗೆ ಗೊತ್ತಾಗುತ್ತೆ?
5 ಅಪೊಸ್ತಲ ಪೌಲ ಶಿಷ್ಯರನ್ನಾಗಿ ಮಾಡೋ ಕೆಲಸನ ಕೃಷಿಗೆ ಹೋಲಿಸಿದ್ದಾನೆ. ನಾವು ಬೀಜ ಬಿತ್ತುವುದರ ಜೊತೆಗೆ ಇನ್ನೂ ಒಂದು ಕೆಲಸ ಮಾಡಬೇಕು. ಅದು ಏನು ಅಂತ ಪೌಲ ಕೊರಿಂಥದವರಿಗೆ ಹೇಳಿದ ಮಾತಿಂದ ಗೊತ್ತಾಗುತ್ತೆ. ಅವನು ಹೇಳಿದ್ದು: ‘ನಾನು ಬೀಜ ಬಿತ್ತಿದೆ, ಅಪೊಲ್ಲೊಸ ನೀರು ಹಾಕಿದ. ನೀವು ಕೃಷಿ ಮಾಡ್ತಿರೋ ದೇವರ ಹೊಲ.’ (1 ಕೊರಿಂಥ 3:6-9 ಓದಿ.) ‘ದೇವರ ಹೊಲದಲ್ಲಿ’ ಕೆಲಸಗಾರರಾಗಿರೋ ನಾವು ಬರೀ ಬೀಜ ಬಿತ್ತಿ ಬರೋದಲ್ಲ, ಅದಕ್ಕೆ ನೀರು ಹಾಕಿ ಚೆನ್ನಾಗಿ ಬೆಳಿತಾ ಇದ್ಯಾ ಅಂತನೂ ನೋಡಬೇಕು. (ಯೋಹಾ. 4:35) ಆದ್ರೆ ಅದನ್ನ ಬೆಳೆಸೋದು ದೇವರು ಅಂತ ನಾವು ಅರ್ಥಮಾಡ್ಕೊಬೇಕು.
6. ನಾವು ನಮ್ಮ ವಿದ್ಯಾರ್ಥಿಗೆ ಕಲಿಸುವಾಗ ಯಾವ ಸಹಾಯ ಮಾಡಬೇಕು?
6 ‘ಶಾಶ್ವತ ಜೀವ ಪಡೆಯೋ ಯೋಗ್ಯತೆ ಇರೋ ಜನ್ರನ್ನ’ ಹುಡುಕುತ್ತೀವಿ. (ಅ. ಕಾ. 13:48) ಆದ್ರೆ ಅವರು ಯೇಸುವಿನ ಶಿಷ್ಯರಾಗಬೇಕಂದ್ರೆ ಬೈಬಲಲ್ಲಿ ಇರೋದನ್ನ ಅರ್ಥಮಾಡಿಕೊಳ್ಳಬೇಕು, ಅದನ್ನ ನಂಬಬೇಕು, ಕಲಿತಿದ್ದನ್ನ ಪಾಲಿಸಬೇಕು. ಅದಕ್ಕೆ ನಾವು ಸಹಾಯ ಮಾಡಬೇಕು. (ಯೋಹಾ. 17:3; ಕೊಲೊ. 2:6, 7; 1 ಥೆಸ. 2:13) ಬೈಬಲ್ ವಿದ್ಯಾರ್ಥಿಗಳು ಸಭೆಗೆ ಬಂದಾಗ ಸಭೆಯಲ್ಲಿರೋ ಎಲ್ಲರೂ ಅವರ ಜೊತೆ ನಗುನಗ್ತಾ ಮಾತಾಡಬೇಕು, ಪ್ರೀತಿಯಿಂದ ನಡ್ಕೊಬೇಕು. (ಯೋಹಾ. 13:35) ಅಷ್ಟೇ ಅಲ್ಲ, ವಿದ್ಯಾರ್ಥಿಯ ಮನಸ್ಸಲ್ಲಿ “ದೊಡ್ಡದೊಡ್ಡ ಕೋಟೆಗಳ ತರ” ಮನೆ ಮಾಡ್ಕೊಂಡಿರೋ ತಪ್ಪಾದ ನಂಬಿಕೆಗಳನ್ನ ತೆಗೆದುಹಾಕೋಕೆ ಸ್ಟಡಿ ಮಾಡೋರು ಸಹಾಯ ಮಾಡಬೇಕು. ಅದಕ್ಕೋಸ್ಕರ ಅವರ ಸಮಯ-ಶಕ್ತಿ ಎಲ್ಲನೂ ಅವರು ಸುರಿಬೇಕಾಗುತ್ತೆ. (2 ಕೊರಿಂ. 10:4, 5) ಇಂಥ ನಂಬಿಕೆಗಳನ್ನೆಲ್ಲ ತೆಗೆದುಹಾಕಿ ಜೀವನದಲ್ಲಿ ಬದಲಾವಣೆಗಳನ್ನ ಮಾಡಿಕೊಳ್ಳಬೇಕಾದರೆ ತುಂಬ ತಿಂಗಳುಗಳೇ ಹಿಡಿಯುತ್ತೆ. ಆದ್ರೆ ನಾವು ಹಾಕೋ ಪ್ರಯತ್ನ ಯಾವತ್ತೂ ವ್ಯರ್ಥ ಆಗಲ್ಲ. ಇದ್ರಿಂದ ಅವರು ದೀಕ್ಷಾಸ್ನಾನದ ಗುರಿ ಮುಟ್ಟೋಕೆ ಆಗುತ್ತೆ.
ನಮ್ಮಲ್ಲಿ ಪ್ರೀತಿ ಇರಬೇಕು
7. ಜನ್ರಿಗೆ ಸಾರೋಕೆ ಮತ್ತು ಕಲಿಸೋಕೆ ನಮಗೆ ಯಾರ ಮೇಲೆ ಪ್ರೀತಿ ಇರಬೇಕು?
7 ಜನ್ರಿಗೆ ಸಾರೋಕೆ ಮತ್ತು ಕಲಿಸೋಕೆ ನಮಗೆ ಯಾರ ಮೇಲೆ ಪ್ರೀತಿ ಇರಬೇಕು? ಯೆಹೋವನ ಮೇಲೆ ಪ್ರೀತಿ ಇರಬೇಕು. ಸಿಹಿಸುದ್ದಿ ಸಾರೋಕೆ ಮತ್ತು ಶಿಷ್ಯರನ್ನ ಮಾಡೋಕೆ ನೀವು ಹಾಕ್ತಿರೋ ಪ್ರಯತ್ನಾನೇ ನಿಮಗೆ ಯೆಹೋವ ದೇವರ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸುತ್ತೆ. (1 ಯೋಹಾ. 5:3) ಈಗ ನೀವೇ ಯೋಚನೆ ಮಾಡಿ, ಮೊದಮೊದಲು ನೀವು ಸಾರೋಕೆ ಹೋದಾಗ ಭಯ ಆಗಿತ್ತಲ್ವಾ? ಆದ್ರೂ ಯೆಹೋವ ದೇವರ ಮೇಲೆ ನಿಮಗಿರೋ ಪ್ರೀತಿಯಿಂದ ಸಾರೋಕೆ ಹೋದ್ರಿ. ಅದು ಅಷ್ಟು ಸುಲಭವಾಗಿತ್ತಾ? ಇಲ್ಲ. ಆದ್ರೂ ಯೇಸು ಕೊಟ್ಟಿದ್ದ ಆಜ್ಞೆನ ಪಾಲಿಸಬೇಕು ಅಂತ ನೀವು ಸಾರಿದ್ರಿ. ಹೋಗ್ತಾ ಹೋಗ್ತಾ ಸಿಹಿಸುದ್ದಿ ಸಾರೋದು ನಿಮಗೆ ಸುಲಭ ಆಗೋಯ್ತು. ಈಗ ಬೈಬಲ್ ಸ್ಟಡಿ ಮಾಡೋಕೆ ನಿಮಗೆ ಭಯ ಆಗ್ತಿದ್ಯಾ? ಹಾಗಾದ್ರೆ ಧೈರ್ಯಕ್ಕೋಸ್ಕರ ಯೆಹೋವ ದೇವರ ಹತ್ರ ಬೇಡ್ಕೊಳ್ಳಿ. ಆಗ ಜನ್ರಿಗೆ ಬೈಬಲ್ ಕಲಿಸಬೇಕು ಅನ್ನೋ ಆಸೆನ ದೇವರು ನಿಮ್ಮ ಮನಸ್ಸಲ್ಲಿ ತುಂಬಿಸ್ತಾರೆ. ಆಗ ನಿಮಗೆ ಧೈರ್ಯ ಸಿಗುತ್ತೆ.
8. ಮಾರ್ಕ 6:34ರಲ್ಲಿ ಹೇಳಿರೋ ಪ್ರಕಾರ ಬೈಬಲ್ ಕಲಿಸೋಕೆ ಇನ್ನೂ ಯಾರ ಮೇಲೆ ಪ್ರೀತಿ ಇರಬೇಕು?
8 ಸಿಹಿಸುದ್ದಿ ಸಾರೋಕೆ ನಮಗೆ ಇನ್ನೂ ಯಾರ ಮೇಲೆ ಪ್ರೀತಿ ಇರಬೇಕು? ಜನರ ಮೇಲೆ ಪ್ರೀತಿ ಇರಬೇಕು. ಆಗ ಸತ್ಯ ಕಲಿಸೋಕೆ ನಾವು ಮುಂದೆ ಬರ್ತಿವಿ. ಒಂದಿನ ಯೇಸು ಮತ್ತು ಶಿಷ್ಯರು ಸಿಹಿಸುದ್ದಿ ಸಾರಿ ತುಂಬ ಸುಸ್ತಾಗಿ ಹೋಗಿದ್ರು. ಒಂದುಕಡೆ ವಿಶ್ರಾಂತಿ ತಗೊಳ್ಳೋಕೆ ಬಂದಿದ್ದಾಗ ಅಲ್ಲಿಗೂ ತುಂಬ ಜನ ಅವರನ್ನ ಹುಡುಕೊಂಡು ಬಂದುಬಿಟ್ರು. ಆದ್ರೆ ಯೇಸುಗೆ ಅವರ ಮೇಲೆ ಕನಿಕರ ಇದ್ದಿದ್ರಿಂದ ಅಷ್ಟು ಸುಸ್ತಾಗಿದ್ರೂ “ತುಂಬ ವಿಷ್ಯ ಕಲಿಸೋಕೆ ಶುರುಮಾಡಿದನು.” (ಮಾರ್ಕ 6:34 ಓದಿ.) ಯೇಸುಗೆ ಯಾಕೆ ಅವರ ಮೇಲೆ ಕನಿಕರ ಹುಟ್ಟಿತು? ಯಾಕಂದ್ರೆ ಅಲ್ಲಿದ್ದ ಜನರು ದಿಕ್ಕಿಲ್ಲದವರು ಆಗಿಬಿಟ್ಟಿದ್ರು. ಅವರ ಪಾಲಿಗೆ ನಿರೀಕ್ಷೆನೇ ಇರಲಿಲ್ಲ. ಅವರ ಮನಸ್ಸಲ್ಲಿದ್ದ ನೋವು, ಕಷ್ಟ ಯೇಸುಗೆ ಚೆನ್ನಾಗಿ ಅರ್ಥ ಆಗ್ತಿತ್ತು. ಅದಕ್ಕೆ ಆ ಕನಿಕರ ಹುಟ್ಟಿ ಅವರಿಗೆ ಸಹಾಯ ಮಾಡೋಕೆ ಮುಂದೆ ಬಂದನು. ಇವತ್ತೂ ಜನ ಹಾಗೇ ಇದ್ದಾರೆ. ಮೇಲೆ ನೋಡೋಕೆ ಅವರು ಸಂತೋಷವಾಗಿ ಇರ್ತಾರೆ ಆದ್ರೆ ಒಳಗೆ ತುಂಬ ದುಃಖದಲ್ಲಿ ಇರ್ತಾರೆ, ಕಷ್ಟಪಡ್ತಾ ಇರ್ತಾರೆ. ಅವರು ಒಂದು ರೀತಿಯಲ್ಲಿ ಕಳೆದುಹೋದ ಕುರಿ ತರ. ಅವರಿಗೆ ಸರಿಯಾದ ದಾರಿ ತೋರಿಸುವವರು ಯಾರೂ ಇಲ್ಲ. ಹಾಗಾಗಿ ಪೌಲ ಇಂಥ ಜನರನ್ನ ನಿರೀಕ್ಷೆ ಇಲ್ಲದವರು, ದೇವರು ಯಾರು ಅಂತ ಗೊತ್ತಿಲ್ಲದವರು ಅಂತ ಹೇಳಿದ್ದಾನೆ. (ಎಫೆ. 2:12) ಇಂಥವರು ‘ನಾಶಕ್ಕೆ ಹೋಗೋ’ ದಾರಿಯಲ್ಲಿ ನಡಿತಿದ್ದಾರೆ. (ಮತ್ತಾ. 7:13) ನಮ್ಮ ಟೆರಿಟೊರಿಯಲ್ಲಿರೋ ಜನರಿಗೂ ಇದೇ ಪರಿಸ್ಥಿತಿ ಇದೆ. ಅವರ ಮೇಲೆ ಕನಿಕರ ಮತ್ತು ಪ್ರೀತಿ ಬೆಳೆಸಿಕೊಳ್ಳಬೇಕು. ಆಗ ಸಹಾಯ ಮಾಡೋಕೆ ಮುಂದೆ ಬರ್ತಿವಿ, ಅವರಿಗೆ ಬೈಬಲ್ ಕಲಿಸೋಕೂ ನಮ್ಮಿಂದ ಆಗುತ್ತೆ.
9. ಫಿಲಿಪ್ಪಿ 2:13ರ ಪ್ರಕಾರ ಯೆಹೋವ ದೇವರು ನಿಮಗೆ ಹೇಗೆ ಸಹಾಯ ಮಾಡ್ತಾರೆ?
9 ಸ್ಟಡಿ ಮಾಡೋಕೆ ಮತ್ತು ಅದಕ್ಕೆ ತಯಾರಿ ಮಾಡೋಕೆ ತುಂಬ ಸಮಯ ಹಿಡಿಯೋದ್ರಿಂದ ನೀವು ಸ್ಟಡಿ ಮಾಡೋಕೆ ಹಿಂದೇಟು ಹಾಕ್ತಾ ಇರಬಹುದು. ನಿಮಗೆ ಹಾಗೆ ಅನಿಸಿದಾಗೆಲ್ಲ ಯೆಹೋವನಿಗೆ ಪ್ರಾರ್ಥನೆ ಮಾಡಿ. ಹೊಸ ಸ್ಟಡಿ ಸಿಗೋಕೆ, ಅವರಿಗೆ ಬೈಬಲ್ ಕಲಿಸೋಕೆ ‘ನನಗೆ ಮನಸ್ಸು ಕೊಡಪ್ಪಾ’ ಅಂತ ಬೇಡ್ಕೊಳ್ಳಿ. (ಫಿಲಿಪ್ಪಿ 2:13 ಓದಿ.) ಆಗ ಯೆಹೋವ ದೇವರು ನಿಮಗೆ ಆ ಮನಸ್ಸನ್ನ ಕೊಟ್ಟೇ ಕೊಡ್ತಾರೆ. ಯಾಕಂದ್ರೆ ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಆ ಸಹಾಯ ಮಾಡ್ತಾರೆ ಅಂತ ಅಪೊಸ್ತಲ ಯೋಹಾನ ಹೇಳಿದ್ದಾನೆ.—1 ಯೋಹಾ. 5:14, 15.
ಸಮಸ್ಯೆಗಳು-ಪರಿಹಾರಗಳು
10-11. ಬೈಬಲ್ ಸ್ಟಡಿ ಮಾಡೋಕೆ ಕೆಲವರಿಗೆ ಯಾಕೆ ಕಷ್ಟ ಅಂತ ಅನಿಸುತ್ತೆ?
10 ಜನರಿಗೆ ಬೈಬಲ್ ಬಗ್ಗೆ ಕಲಿಸೋದು ತುಂಬ ಮುಖ್ಯ ಅಂತ ನಮಗೆ ಗೊತ್ತು. ಅದೂ ಅಲ್ಲದೇ ಅದನ್ನ ಚೆನ್ನಾಗಿ ಮಾಡಬೇಕು ಅನ್ನೋ ಆಸೆನೂ ನಮಗಿದೆ. ಆದ್ರೆ ಕೆಲವರಿಗೆ ಬೇರೆಬೇರೆ ಕಾರಣಗಳಿಂದ ಅದನ್ನ ಮಾಡೋಕೆ ಆಗ್ತಿಲ್ಲ. ಅದೇನು ಅಂತ ಒಂದೊಂದಾಗಿ ನೋಡೋಣ. ಅದಕ್ಕಿರೋ ಪರಿಹಾರಗಳ ಬಗ್ಗೆನೂ ಚರ್ಚೆ ಮಾಡೋಣ.
11 ಪರಿಸ್ಥಿತಿ ನಿಮ್ಮ ಕೈಕಟ್ಟಿ ಹಾಕಿದೆ ಅಂತ ಅನಿಸ್ತಾ ಇದ್ಯಾ? ‘ನನಗೆ ವಯಸ್ಸಾಗಿದೆ, ಹುಷಾರಿಲ್ಲ. ಹೀಗಿರುವಾಗ ನಾನು ಹೇಗೆ ಬೈಬಲ್ ಸ್ಟಡಿ ಮಾಡೋದು’ ಅಂತ ನಿಮಗೆ ಅನಿಸಬಹುದು. ಆದ್ರೆ ಸ್ವಲ್ಪ ಯೋಚನೆ ಮಾಡಿ, ಈ ಕೊರೋನ ಕಾಯಿಲೆ ಬಂದಮೇಲೆ ನಾವು ಬೇರೆ ವಿಧದಲ್ಲಿ ಬೈಬಲ್ ಸ್ಟಡಿ ಮಾಡೋಕೆ ಕಲಿತ್ವಿ. ಈಗ ನಾವೆಲ್ಲ ಮೊಬೈಲ್ ಅಥವಾ ಟ್ಯಾಬಿಂದ ಸ್ಟಡಿ ಮಾಡೋದನ್ನ ಕಲ್ತಿದ್ದೀವಿ ಅಲ್ವಾ? ಅಂದಮೇಲೆ ನಾವು ಮನೆಯಲ್ಲೇ ಕೂತು ಬೇರೆಯವರಿಗೆ ಬೈಬಲ್ ಸ್ಟಡಿ ಮಾಡಕ್ಕಾಗುತ್ತೆ. ಆದ್ರೆ ಬೈಬಲ್ ವಿದ್ಯಾರ್ಥಿಗಳಿಗೆ ಬೇರೆ ತರದ ಸಮಸ್ಯೆಗಳು ಇರಬಹುದು. ಅವರಿಗೆ ಬೈಬಲ್ ಕಲಿಯೋಕೆ ಇಷ್ಟ ಇರಬಹುದು. ಆದ್ರೆ ನಮ್ಮ ಸಮಯಕ್ಕೆ ಅವರು ಸಿಗಲ್ಲ. ಅವರು ಬೆಳಬೆಳ್ಳಗೆ ಅಥವಾ ರಾತ್ರಿ ಫ್ರೀ ಇರ್ತಾರೆ. ಆಗ ‘ಪರಿಸ್ಥಿತಿ ನನ್ನ ಕೈಕಟ್ಟಿ ಹಾಕಿದೆ’ ಅಂತ ನಿಮಗೆ ಅನಿಸಬಹುದು. ಹಾಗಿದ್ರೆ ನೀವು ಅವರಿಗೆ ಫೋನಲ್ಲಿ ಸ್ಟಡಿ ಮಾಡಕ್ಕಾಗುತ್ತಾ? ಯೇಸುನೂ ನಿಕೊದೇಮನಿಗೆ ರಾತ್ರಿನೇ ಕಲಿಸಿದ್ದು.—ಯೋಹಾ. 3:1, 2.
12. ನೀವು ಯಾವ ಮೂರು ವಿಷ್ಯಗಳನ್ನ ಮನಸ್ಸಲ್ಲಿಟ್ಟರೆ ಬೈಬಲ್ ಸ್ಟಡಿ ಮಾಡೋಕೆ ಧೈರ್ಯ ಬರುತ್ತೆ?
12 ‘ನನಗೆ ಅಷ್ಟು ಚೆನ್ನಾಗಿ ಬೈಬಲ್ ಸ್ಟಡಿ ಮಾಡೋಕೆ ಬರಲ್ಲ’ ಅಂತ ನಿಮಗೆ ಅನಿಸ್ತಿದ್ಯಾ? ಬೈಬಲ್ ಬಗ್ಗೆ ಒಳ್ಳೇ ಜ್ಞಾನ ಇರಬೇಕು, ಸ್ಕೂಲ್ ಟೀಚರ್ ತರ ಚೆನ್ನಾಗಿ ಕಲಿಸೋಕೆ ಗೊತ್ತಿರಬೇಕು ಅಂತ ಕೆಲವರು ನೆನಸಿ ಬೈಬಲ್ ಸ್ಟಡಿ ಮಾಡೋಕೆ ಹಿಂಜರಿತಾರೆ. ನಿಮಗೂ ಈ ತರ ಅನಿಸೋದಾದ್ರೆ ಮೂರು ವಿಷ್ಯಗಳನ್ನ ನೀವು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಒಂದು, ಬೈಬಲ್ ಸ್ಟಡಿ ಮಾಡೋಕೆ ನಿಮ್ಮಿಂದ ಆಗುತ್ತೆ ಅಂತ ಯೆಹೋವ ದೇವರಿಗೆ ನಿಮ್ಮ ಮೇಲೆ ನಂಬಿಕೆ ಇದೆ. (2 ಕೊರಿಂ. 3:5) ಎರಡು, ಸ್ವರ್ಗದಲ್ಲೂ ಭೂಮಿಯಲ್ಲೂ ಎಲ್ಲ ಅಧಿಕಾರ ಇರೋ ಯೇಸುನೇ ಬೇರೆಯವರಿಗೆ ಬೈಬಲ್ ಕಲಿಸೋ ಅಧಿಕಾರನ ನಿಮಗೆ ಕೊಟ್ಟಿದ್ದಾನೆ. (ಮತ್ತಾ. 28:18) ಮೂರು, ನೀವು ಬೇರೆಯವರಿಂದಾನೂ ಸಹಾಯ ತಗೊಬಹುದು. ಜನರಿಗೆ ಏನು ಕಲಿಸಬೇಕು ಅಂತ ಯೆಹೋವ ದೇವರು ಯೇಸುಗೆ ಹೇಳಿಕೊಟ್ರು. ಅದೇ ತರ ನಿಮಗೂ ಯೆಹೋವ ದೇವರು ಸಹಾಯ ಮಾಡ್ತಾರೆ. (ಯೋಹಾ. 8:28; 12:49) ಅಷ್ಟೇ ಅಲ್ಲ, ನಿಮ್ಮ ಕ್ಷೇತ್ರಸೇವಾ ಗುಂಪಿನ ಮೇಲ್ವಿಚಾರಕ, ಸಭೆಯಲ್ಲಿರೋ ಪಯನೀಯರರು ಅಥವಾ ಅನುಭವ ಇರೋ ಬೇರೆ ಪ್ರಚಾರಕರು ಒಂದು ಸ್ಟಡಿನ ಶುರುಮಾಡಿ ಮುಂದುವರಿಸಿಕೊಂಡು ಹೋಗೋಕೆ ನಿಮಗೆ ಸಹಾಯ ಮಾಡ್ತಾರೆ. ನೀವು ಅವರ ಬೈಬಲ್ ಸ್ಟಡಿಗಳಿಗೂ ಅವರ ಜೊತೆ ಹೋಗಿ. ಆಗ ಬೈಬಲ್ ಸ್ಟಡಿ ಹೇಗೆ ಮಾಡೋದು ಅಂತ ಕಲಿಯಕ್ಕಾಗುತ್ತೆ.
13. ನಾವ್ಯಾಕೆ ಹೊಸ ವಿಧಾನಕ್ಕೆ ಹೊಂದಿಕೊಳ್ಳಬೇಕು?
13 ಇದೆಲ್ಲ ಹೊಸದು, ತುಂಬ ಕಷ್ಟ ಅಂತ ಅನಿಸ್ತಿದ್ಯಾ? ಆದ್ರೂ ನಾವು ಅದಕ್ಕೆ ಹೊಂದಿಕೊಳ್ಳಬೇಕು. ಯಾಕಂದ್ರೆ ನಾವು ಈಗ ಸ್ಟಡಿ ಮಾಡೋ ವಿಧಾನ ಬದಲಾಗಿದೆ. ಮುಂಚಿನ ತರ ಇಲ್ಲ. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಿಂದ ನಾವೀಗ ಸ್ಟಡಿ ಮಾಡ್ತೀವಿ. ಅದ್ರಲ್ಲಿ ಕಮ್ಮಿ ಪ್ಯಾರಗಳು ಇರೋದ್ರಿಂದ ನಾವು ಜಾಸ್ತಿ ಚರ್ಚೆ ಮಾಡ್ತೀವಿ. ಅಷ್ಟೇ ಅಲ್ಲ, ಬೈಬಲ್ ಕಲಿಸೋಕೆ ನಾವು JW ಲೈಬ್ರರಿ ಮತ್ತು ವೆಬ್ಸೈಟನ್ನ ಉಪಯೋಗಿಸ್ತೀವಿ. ಅದ್ರಿಂದ ವಿಡಿಯೋಗಳನ್ನ ತೋರಿಸ್ತೀವಿ, ಪತ್ರಿಕೆಗಳನ್ನ ಕಳಿಸ್ತೀವಿ. ಈ ಆ್ಯಪ್ಗಳನ್ನೆಲ್ಲ ನಿಮಗೆ ಬಳಸೋಕೆ ಬರಲಿಲ್ಲ ಅಂದ್ರೆ ಬೇರೆಯವರ ಹತ್ರ ಸಹಾಯ ತಗೊಬಹುದು. ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳೋಕೆ ಕಷ್ಟ ಆಗೋದು ಮನುಷ್ಯರಿಗೆ ಸಹಜನೇ. ಆದ್ರೆ ಯೆಹೋವ ದೇವರ ಸಹಾಯದಿಂದ, ಬೇರೆ ಸಹೋದರ ಸಹೋದರಿಯರ ಸಹಾಯದಿಂದ ಹೊಸ ವಿಧಾನಗಳನ್ನ ಕಲಿಯಕ್ಕಾಗುತ್ತೆ, ಚೆನ್ನಾಗಿ ಸ್ಟಡಿ ಮಾಡೋಕೆ ಆಗುತ್ತೆ. “ಈ ಹೊಸ ವಿಧಾನದಿಂದ ನಾವೂ ಖುಷಿಯಾಗಿ ಬೈಬಲ್ ಕಲಿಸ್ತಾ ಇದ್ದೀವಿ, ಅವರೂ ಖುಷಿಯಿಂದ ಕಲೀತಾ ಇದ್ದಾರೆ” ಅಂತ ಒಬ್ಬ ಪಯನಿಯರ್ ಸಹೋದರ ಹೇಳ್ತಾರೆ.
14. (ಎ) ಜನ ನಾವು ಹೇಳೋ ಮಾತನ್ನ ಕಿವಿಗೆ ಹಾಕಿಕೊಳ್ಳಲ್ಲ ಅಂತ ಅನಿಸಿದಾಗ ನಾವು ಏನನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು? (ಬಿ) ಒಂದನೇ ಕೊರಿಂಥ 3:6, 7ರಿಂದ ನಾವೇನು ಕಲಿಬಹುದು?
14 ನಮ್ಮ ಟೆರಿಟೊರಿಯಲ್ಲಿ ಯಾರೂ ಬೈಬಲ್ ಕಲಿಯೋಕೆ ಇಷ್ಟಪಡಲ್ಲ ಅಂತ ಅನಿಸ್ತಿದ್ಯಾ? ಜನ್ರಿಗೆ ನಾವು ಹೇಳೋದು ಇಷ್ಟ ಇಲ್ಲ, ಅದನ್ನ ಅವರು ಕಿವಿಗೆ ಹಾಕಿಕೊಳ್ಳಲ್ಲ ಅಂತ ನಮಗೆ ಅನಿಸಬಹುದು. ಆದ್ರೆ ಮುಂದೆ ಒಂದಿನ ನಾವು ಹೇಳೋದನ್ನ ಅವರು ಕೇಳಬಹುದು. ಯಾಕಂದ್ರೆ ಪರಿಸ್ಥಿತಿ ಯಾವಾಗಲೂ ಹೀಗೇ ಇರಲ್ಲ. ಇವತ್ತು ದೇವರ ವಿಷ್ಯಗಳನ್ನ ಕೇಳೋಕೆ ಇಷ್ಟಪಡದೆ ಇರೋರು ಮುಂದೆ ದೇವರನ್ನ ಹುಡುಕೊಂಡು ಬರಬಹುದು. (ಮತ್ತಾ. 5:3) ಮುಂಚೆ ‘ನಿಮ್ಮ ಪತ್ರಿಕೆಗಳ ಯಾರಿಗೆ ಬೇಕು’ ಅಂತ ಹೇಳಿದವರು ಆಮೇಲೆ ‘ನಮಗೆ ಬೈಬಲ್ ಕಲಿಸಿಕೊಡಿ’ ಅಂತ ಕೇಳ್ಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಹೊಲದ ಯಜಮಾನ ಯೆಹೋವ ದೇವರು. (ಮತ್ತಾ. 9:38) ಹಾಗಾಗಿ ನಮ್ಮ ಕೆಲಸ ಬರೀ ಬಿತ್ತೋದು ಮತ್ತು ನೀರು ಹಾಕೋದು ಅಷ್ಟೇ. ಅದು ಬೆಳಿಯೋ ತರ ನೋಡಿಕೊಳ್ಳೋದು ಯೆಹೋವ ದೇವರು. (1 ಕೊರಿಂ. 3:6, 7) ‘ಒಂದು ಬೈಬಲ್ ಸ್ಟಡಿನೂ ಇಲ್ವಲ್ವಾ’ ಅಂತ ಬೇಜಾರು ಮಾಡಿಕೊಳ್ಳೋದು ಬೇಡ. ಯಾಕಂದ್ರೆ ಯೆಹೋವ ದೇವರು ನಮಗೆಷ್ಟು ಬೈಬಲ್ ಸ್ಟಡಿ ಇದೆ ಅಂತ ನೋಡಲ್ಲ, ನಾವೆಷ್ಟು ಪ್ರಯತ್ನ ಹಾಕ್ತಿದ್ದೀವಿ ಅನ್ನೋದನ್ನ ನೋಡ್ತಾರೆ.b
ಸ್ಟಡಿ ಮಾಡಿ ಖುಷಿಪಡಿ
15. ಒಬ್ಬ ವ್ಯಕ್ತಿ ಬೈಬಲ್ ಕಲಿತು ಪಾಲಿಸೋದನ್ನ ನೋಡುವಾಗ ಯೆಹೋವ ದೇವರಿಗೆ ಹೇಗನಿಸುತ್ತೆ?
15 ಒಬ್ಬ ವ್ಯಕ್ತಿ ಬೈಬಲ್ ಕಲಿತು ಬೇರೆಯವರಿಗೂ ಕಲಿಸಿದಾಗ ಯೆಹೋವ ದೇವರಿಗೆ ಖುಷಿ ಆಗುತ್ತೆ. (ಜ್ಞಾನೋ. 23:15, 16) ಕೊರೋನ ಕಾಯಿಲೆಯಿಂದಾಗಿ ಅಡೆತಡೆಗಳು ಇದ್ರೂ ನಾವು ಹುರುಪಿಂದ ಸಿಹಿಸುದ್ದಿ ಸಾರೋದನ್ನ ಮತ್ತು ಬೈಬಲ್ ಕಲಿಸೋದನ್ನ ನೋಡಿದಾಗ ಯೆಹೋವ ದೇವರಿಗೆ ಇನ್ನೂ ಖುಷಿ ಆಗಿರುತ್ತೆ. ಯಾಕಂದ್ರೆ 2020ರ ಸೇವಾ ವರ್ಷದಲ್ಲಿ ನಮ್ಮ ಸಹೋದರ ಸಹೋದರಿಯರು 77,05,765 ಬೈಬಲ್ ಅಧ್ಯಯನಗಳನ್ನ ಮಾಡಿದ್ದಾರೆ. ಇದ್ರಿಂದ 2,41,994 ಜನ ಯೆಹೋವನಿಗೆ ತಮ್ಮನ್ನ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ತಗೊಂಡ್ರು. ಈ ಹೊಸ ಶಿಷ್ಯರು ಬೇರೆಯವರಿಗೆ ಬೈಬಲ್ ಕಲಿಸಿ ಅವರನ್ನೂ ಶಿಷ್ಯರಾಗಿ ಮಾಡ್ತಿದ್ದಾರೆ. (ಲೂಕ 6:40) ಇದನ್ನ ನೋಡಿದಾಗ ಯೆಹೋವ ದೇವರಿಗೆ ಇನ್ನೂ ಇನ್ನೂ ಖುಷಿ ಆಗಿರುತ್ತೆ.
16. ನಾವು ಯಾವ ಗುರಿ ಇಡಬಹುದು?
16 ಜನರಿಗೆ ಬೈಬಲ್ ಕಲಿಸೋಕೆ ನಾವು ತುಂಬ ಪ್ರಯತ್ನ ಹಾಕಬೇಕಾಗುತ್ತೆ. ಆದ್ರೆ ಯೆಹೋವ ದೇವರು ನಮಗೆ ಖಂಡಿತ ಸಹಾಯ ಮಾಡ್ತಾರೆ. ಯಾಕಂದ್ರೆ ಆತನನ್ನ ಪ್ರೀತಿಸೋಕೆ ನಾವು ಜನರಿಗೆ ಕಲಿಸ್ತಾ ಇದ್ದೀವಿ. ಹಾಗಾಗಿ ನಾವು ಒಂದಾದರೂ ಬೈಬಲ್ ಸ್ಟಡಿ ಮಾಡೋ ಗುರಿ ಇಡೋಣ. ಯಾರಿಗೆಲ್ಲ ಬೈಬಲ್ ಸ್ಟಡಿ ಮಾಡೋಕೆ ಇಷ್ಟ ಇದೆ ಅಂತ ನಮಗೆ ಅನಿಸುತ್ತೋ ಅವರನ್ನೆಲ್ಲ ಒಂದು ಮಾತು ಕೇಳಿನೋಡೋಣ. ಆಗ ಒಂದಾದರೂ ಬೈಬಲ್ ಸ್ಟಡಿ ಸಿಗಬಹುದು ಅಥವಾ ಒಂದಕ್ಕಿಂತ ಜಾಸ್ತಿನೇ ಸಿಗಬಹುದು. ನಾವು ಹಾಕೋ ಪ್ರಯತ್ನನೆಲ್ಲಾ ಯೆಹೋವ ದೇವರು ಆಶೀರ್ವಾದ ಮಾಡೇ ಮಾಡ್ತಾರೆ.
17. ಒಬ್ಬರಿಗೆ ಬೈಬಲ್ ಕಲಿಸಿದಾಗ ನಮಗೆ ಹೇಗೆ ಅನಿಸುತ್ತೆ?
17 ಸಿಹಿಸುದ್ದಿ ಸಾರಿದಾಗ ನಮಗೆ ಖುಷಿ ಆಗುತ್ತೆ. ಅದ್ರಲ್ಲೂ ಅವರಿಗೆ ಬೈಬಲ್ ಕಲಿಸಿದಾಗಂತೂ ನಮಗೆ ಇನ್ನೂ ಖುಷಿ ಆಗುತ್ತೆ. ಅಷ್ಟೇ ಅಲ್ಲ, ಇದು ದೇವರು ನಮಗೆ ಕೊಟ್ಟಿರೋ ದೊಡ್ಡ ಸುಯೋಗ. ಥೆಸಲೊನೀಕದಲ್ಲಿರೋ ತುಂಬ ಜನ್ರನ್ನ ಶಿಷ್ಯರಾಗಿ ಮಾಡಿದಾಗ ಪೌಲನಿಗೆ ಎಷ್ಟು ಖುಷಿ ಆಯ್ತು ಗೊತ್ತಾ? ಅವನು “ನಮ್ಮ ಪ್ರಭು ಯೇಸು ಮತ್ತೆ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆ, ಆನಂದ, ವಿಜಯದ ಕಿರೀಟ ಯಾರು ಆಗಿರ್ತಾರೆ? ನೀವೇ ತಾನೇ? ನಿಜ, ನೀವೇ ನಮ್ಮ ಮಹಿಮೆ, ಆನಂದ” ಅಂತ ಹೇಳಿದ. (1 ಥೆಸ. 2:19, 20; ಅ. ಕಾ. 17:1-4) ಇವತ್ತು ತುಂಬ ಜನ ಪೌಲನ ತರನೇ ಖುಷಿಯಾಗಿ ಇದ್ದಾರೆ. ಅವರಲ್ಲಿ ಒಬ್ಬರು ಸಹೋದರಿ ಸ್ಟೆಫನಿ. ತುಂಬ ಜನ ದೀಕ್ಷಾಸ್ನಾನ ತಗೊಳ್ಳೋಕೆ ಸಹೋದರಿ ಮತ್ತು ಅವರ ಗಂಡ ಸಹಾಯ ಮಾಡಿದ್ದಾರೆ. “ಯೆಹೋವ ದೇವರಿಗೆ ಸಮರ್ಪಣೆ ಮಾಡ್ಕೊಳ್ಳೋಕೆ ಬೇರೆಯವರಿಗೆ ಸಹಾಯ ಮಾಡೋದ್ರಿಂದ ಸಿಗೋ ಖುಷಿ ಬೇರೆ ಯಾವುದ್ರಿಂದಾನೂ ಸಿಗಲ್ಲ” ಅಂತ ಸಹೋದರಿ ಹೇಳ್ತಾರೆ.
ಗೀತೆ 142 ಎಲ್ಲ ರೀತಿಯ ಜನರಿಗೆ ಸಾರಿ
a ಯೆಹೋವ ನಮಗೆ ಸಿಹಿಸುದ್ದಿ ಸಾರೋ ಸುಯೋಗ ಕೊಟ್ಟಿದ್ದಾರೆ. ಅದರ ಜೊತೆ ಯೇಸು ಹೇಳಿಕೊಟ್ಟಿರೋದನ್ನೆಲ್ಲ ಹೇಗೆ ಪಾಲಿಸೋದು ಅಂತ ಜನರಿಗೆ ಕಲಿಸೋ ಸುಯೋಗನೂ ನಮಗಿದೆ. ನಮಗೆ ಯಾರ ಮೇಲೆ ಪ್ರೀತಿ ಇದ್ರೆ ಬೇರೆಯವರಿಗೆ ಬೈಬಲ್ ಕಲಿಸೋಕೆ ಮುಂದೆ ಬರ್ತಿವಿ? ಸಿಹಿಸುದ್ದಿ ಸಾರೋಕೆ ಮತ್ತು ಬೈಬಲ್ ಕಲಿಸೋಕೆ ಕೆಲವೊಂದು ಸಲ ನಮಗೆ ಯಾಕೆ ಕಷ್ಟ ಆಗುತ್ತೆ? ಅದಕ್ಕೆ ನಾವೇನು ಮಾಡಬಹುದು? ಈ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಇದೆ.
b ಒಬ್ಬರಿಗೆ ಬೈಬಲ್ ಕಲಿಸೋಕೆ ಸಭೆಯಾಗಿ ನಾವೆಲ್ಲ ಹೇಗೆ ಸಹಾಯ ಮಾಡಬಹುದು ಅಂತ ತಿಳುಕೊಳ್ಳೋಕೆ 2021ರ ಮಾರ್ಚ್ ಕಾವಲಿನಬುರುಜುನಲ್ಲಿರೋ “ಬೈಬಲ್ ವಿದ್ಯಾರ್ಥಿಗೆ ಸಭೆಯಲ್ಲಿರೋ ಎಲ್ಲರೂ ಹೇಗೆ ಸಹಾಯ ಮಾಡಬಹುದು?” ಅನ್ನೋ ಲೇಖನ ನೋಡಿ.
c ಚಿತ್ರ ವಿವರಣೆ: ಬೈಬಲ್ ಕಲಿಯೋದ್ರಿಂದ ಒಬ್ಬ ವ್ಯಕ್ತಿಯ ಜೀವನ ಹೇಗೆ ಬದಲಾಗುತ್ತೆ ಅಂತ ನೋಡಿ. ಜೀವನ ಅಂದ್ರೆ ಇಷ್ಟೇನಾ ಅಂತ ಅವನು ಅಂದುಕೊಂಡಿದ್ದ. ಯೆಹೋವ ದೇವರ ಬಗ್ಗೆ ಅವನಿಗೆ ಗೊತ್ತೇ ಇರಲಿಲ್ಲ. ಆಮೇಲೆ ಯೆಹೋವನ ಸಾಕ್ಷಿಗಳು ಅವನಿಗೆ ಸಿಹಿಸುದ್ದಿ ಸಾರಿದ್ರು. ಅವರು ಅವನಿಗೆ ಸ್ಟಡಿ ಮಾಡಿದ್ರು. ಅವನು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡ. ನಂತರ ಅವನೂ ಬೇರೆಯವರಿಗೆ ಬೈಬಲ್ ಕಲಿಸಿದ. ಕೊನೆಗೆ ಅವರೆಲ್ಲ ಪರದೈಸಲ್ಲಿ ಖುಷಿಖುಷಿಯಾಗಿದ್ದಾರೆ.