ಪ್ರಮೋದವನಕ್ಕ ಹಿಂತೆರಳುವ ಮಾರ್ಗವನ್ನು ತೆರೆಯುವದು
“[ಯೇಸು] ಅವನಿಗೆ “ನಾನು ಇಂದೇ ನಿನಗೆ ಸತ್ಯವಾಗಿ ಹೇಳುತ್ತೇನೆ ಏನೆಂದರೆ ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ.”—ಲೂಕ 23:43, NW.
1, 2. (ಎ) ಪ್ರಮೋದವನವೆಂದರೇನು ಮತ್ತು ಏದೆನ್ ತೋಟ ಯಾವುದರಂತೆ ಇದ್ದಿರಬೇಕು? (ಬಿ) ಕ್ರೈಸ್ತ ಗೀಕ್ ಶಾಸ್ತ್ರ ಗ್ರಂಥಗಳಲ್ಲಿ “ತೋಟ” ವೆಂಬದಕ್ಕಿರುವ ಇಬ್ರಿಯ ಪದ ಹೇಗೆ ಭಾಷಾಂತರಿಸಲ್ಪಟ್ಟಿದೆ?
ಮಾನವ ಕುಟುಂಬದ ಪ್ರಾರಂಭ ಪ್ರಮೋದವನದಲ್ಲಾಯಿತು. ಮಾನವ ಸೃಷ್ಟಿಯ ಸಂಬಂಧದಲ್ಲಿ ಪವಿತ್ರ ಶಾಸ್ತ್ರಗಳ ಪ್ರಥಮ ಪುಸ್ತಕದಲ್ಲಿ ನಾವು ಓದುವದು: “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು.” (ಆದಿಕಾಂಡ 2:7,8) “ಏದೆನ್” ಎಂಬ ಹೆಸರಿನ ಅರ್ಥ “ಪ್ರಮೋದ” ಎಂದಾಗಿದೆ. ಮತ್ತು ಹೀಗೆ ಏದೆನ್ ಉದ್ಯಾನವು ಸುಂದರವಾದ ಮತು ವಿವಿಧ ಲಕ್ಷಣಗಳಿದ್ದ ಒಂದು ವಿಸ್ತಾರವಾದ ವನವಾಗಿತ್ತು.
2. “ಪಾರಡೈಸ್” ಎಂಬ ಇಂಗ್ಲಿಷ್ ಪದ ಗ್ರೀಕ್ ಭಾಷೆಯಿಂದ ಬಂದಿದ್ದು ಉದ್ಯಾನ ಸದೃಶವಾದ ತೋಟವೆಂದೇ ಅದರರ್ಥ. “ತೋಟ” ವೆಂಬ ಅರ್ಥವುಳ್ಳ ಇಬ್ರಿಯ ನಾಮಪದ ಗಾನ್ ಎಂಬದನ್ನು ಭಾಷಾಂತರಿಸಲು ಪಾರದೀಸೊಸ್ ಎಂಬ ಗ್ರೀಕ್ ಪದವನ್ನು ಉಪಯೋಗಿಸಲಾಗಿದೆ. ಮತ್ತಾಯ ಪುಸ್ತಕದಿಂದ ಪ್ರಕಟನೆಯ ವರೆಗಿನ ಶಾಸ್ತ್ರಗಳನ್ನು ಗ್ರೀಕ್ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ಸಾ. ಶ. 33 ರ ನೈಸನ್ 14 ರಂದು ಕಲ್ವೇರಿಯಲ್ಲಿ ಯಾತನೆಯ ಕಂಭದ ಮೇಲೆ ಮರಣಶಿಕ್ಷೆ ಅನುಭವಿಸುತ್ತಿದ್ದ ಕರ್ತನಾದ ಯೇಸುಕ್ರಿಸ್ತನ ಮಾತುಗಳನ್ನು ದಾಖಲೆಮಾಡುವಾಗ ಈ ಗ್ರೀಕ್ ಭಾಷೆಯನ್ನು ಉಪಯೋಗಿಸಲಾಗಿತ್ತು.
ಒಬ್ಬ ದುಷ್ಕರ್ಮಿಗೆ ಯೇಸು ಕೊಟ್ಟ ಪ್ರಮೋದವನದ ವಚನ
3. (ಎ)ಸಹಾನುಭೂತಿಯ ದುಷ್ಕರ್ಮಿ ಯೇಸುವಿನೊಡನೆ ಏನುಕೇಳಿಕೊಂಡನು.? (ಬಿ) ಈ ದುಷ್ಕರ್ಮಿ ಮಾಡಿದ ಭಿನ್ನಹ ಅವನಿಗೆ ಯೇಸುವಿನ ವಿಷಯ ಯಾವ ನಂಬಿಕೆ ಇತ್ತೆಂದು ತೋರಿಸಿತು?
3. ಆ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಯೇಸುವಿನ ಪಕ್ಕದಲ್ಲಿ ಶೂಲಕ್ಕೆ ಏರಿಸಲ್ಪಟ್ಟಿದ್ದರು. ಯೇಸುವಿನ ಒಂದು ಪಕ್ಕದಲ್ಲಿದ್ದ ಕಳ್ಳನು ಇನ್ನೊಂದು ಪಕ್ಕದಲ್ಲಿದ್ದ ಕಳ್ಳನು ಮಾತಾಡುತ್ತಾ ಇದ್ದಂತೆ ಧೂಷಿಸುವದನ್ನು ನಿಲ್ಲಿಸಿದ್ದನು. ಈ ಸಹಾನುಭೂತಿಯ ದುಷ್ಕರ್ಮಿ ಯೇಸುವಿನ ಕಡೆ ತಿರುಗಿ, “ಯೇಸುವೇ, ನೀನು ರಾಜ್ಯವನ್ನು ಪಡೆದು ಬರುವಾಗ ನನ್ನನ್ನು ನೆನಸಿಕೋ” ಎಂದು ಹೇಳಿ, ಯೇಸು ಪಕ್ಕದಲ್ಲಿ ತೂಗಹಾಕಲ್ಪಟ್ಟಿದ್ದರೂ ಭಾವೀ ರಾಜ್ಯಾಧಿಕಾರಿ ಎಂಬದರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದನು. (ಲೂಕ 23:42; ಮಾರ್ಕ 15:32) ಇದು ಯೇಸುವಿನ ಹೃದಯವನ್ನು ಎಷ್ಟು ನಾಟಿದ್ದಿರಬೇಕು! ಯೇಸು ನಿರಪರಾಧಿ ಮತ್ತು ಬಹಿರಂಗವಾಗಿ ಮಾನಭಂಗವಾಗುವಂತೆ ಶೂಲಕೇರಿಸಲ್ಪಡುವಷ್ಟು ಕಠಿಣ ಶಿಕ್ಷೆಗೆ ಅರ್ಹನಲ್ಲ ಎಂದು ಆ ಮಿತ್ರಭಾವದ ಪಾತಕಿ ನಂಬಿದನು. (ಲೂಕ 23:41) ಹೀಗೆ ವಿಜ್ಞಾಪಿಸಿದರಲ್ಲಿ, ಯೇಸು ಸತ್ತವರೊಳಗಿಂದ ಪುನರುತ್ಥಾನವಾಗುವನೆಂದೂ ರಾಜ್ಯಾಧಿಕಾರಕ್ಕೆ ಬರುವನೆಂದೂ ಅವನು ನಂಬಿದನೆಂದು ತೋರಿಸಿದನು. ತನಗೂ ಪುನರುತ್ಥಾನವಾಗ ಸಾಧ್ಯವಿದೆಂದೂ ಮತ್ತು ತನ್ನನ್ನು ಮೃತರೊಳಗಿಂದ ಕರೆದು ಭೂಮಿಯ ಮೇಲೆ ನವೀಕರಿಸಲ್ಪಡುವ ಜೀವವನ್ನು ಅನುಗ್ರಹಿಸುವವವನು ಯೇಸುವೆಂದೂ ಆ ದುಷ್ಕರ್ಮಿ ನಂಬಿಕೆಯನ್ನು ತೋರಿಸಿದನು.
4. ದುಷ್ಕರ್ಮಿಯ ಬಿನ್ನಹಕ್ಕೆ ಯೇಸುವಿನ ಉತ್ತರವೇನಾಗಿತ್ತು?
4. ಯೇಸು ಅವನಿಗೆ, “ನಾನು ಇಂದೇ ನಿನಗೆ ಸತ್ಯವಾಗಿ ಹೇಳುತ್ತೇನೆ ಏನೆಂದರೆ ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ” ಎಂದು ಹೇಳಿದಾಗ ಆ ಸಹಾನುಭೂತಿಯ ದುಷ್ಕರ್ಮಿಗೆ ಪುನರುತ್ಥಾನವನ್ನು ಯೇಸು ಸೂಚಿಸಿದನು. ಇದು ನಂಬಿಕೆ ವ್ಯಕ್ತ ಪಡಿಸಿದ ಆ ಪಾತಕಿಗೆ ನಿಜ ಸಂತೈಸುವಿಕೆಯನ್ನು ತಂದಿರಬೇಕು. ಆದರೆ ಆ ಮನುಷ್ಯನ ಪುನರುತ್ಥಾನಕ್ಕೆ ಮೊದಲಾಗಿ ಯೇಸುವಿನ ಪುನರುತ್ಥಾನವಾಗಬೇಕಿತ್ತು. ಆ ಬಳಿಕ ತನಗೆ ದೇವರು ಕೊಡುವ ಪುನರುತ್ಥಾನದ ಶಕ್ತಿಯನ್ನು ನಿರ್ವಹಿಸುತ್ತಾ ಯೇಸು ಮಾನವ ಲೋಕದ ಪುನರುತ್ಥಾನದ ದಿನದಂದು ಆ ದುಷ್ಕರ್ಮಿಯನ್ನು ಕರೆಯುವನು.—ಲೂಕ 23:43, NW; ಯೋಹಾನ 5:28, 29; 1 ಕೊರಿಂಥ 15:20, 23; ಇಬ್ರಿಯ 9.15.
5, 6. (ಎ)ಶೂಲಕ್ಕೇರಿಸಲ್ಪಟ್ಟ ಯೇಸುವಿನ ಮೇಲ್ಬಾಗದಲ್ಲಿ ರಾಜ್ಯಪಾಲ ಪೊಂತ್ಯ ಪಿಲಾತನು ಏನು ಬರೆಯಿಸಿದ್ದನು? (ಬಿ) ಯೇಸು ದುಷ್ಕರ್ಮಿಗೆ ಯಾವ ಭಾಷೆಯಲ್ಲಿ ಮಾತಾಡಿದ್ದಿರಬೇಕು?
5. ಯೇಸು ಯಾವ ಭಾಷೆಯಲ್ಲಿ ಈ ವಚನ ಕೊಟ್ಟನು? ಇದು ದಾರಿಹೋಕರು ಯೇಸುವನ್ನು ಗುರುತಿಸುವಂತೆ ರಾಜ್ಯಪಾಲ ಪೊಂತ್ಯ ಪಿಲಾತನು ಶೂಲಕ್ಕೇರಿಸಲ್ಪಟ್ಟಿದ್ದ ಯೇಸುವಿನ ಮೇಲ್ಭಾಗದಲ್ಲಿ ಬರೆಯಿಸಿದ ಮಾತುಗಳಿಂದ ತೋರಿಬರುತ್ತದೆ. ಯೋಹಾನ 19:19, 20ರ ವೃತ್ತಾಂತವು ಹೇಳುವದು: “ಪಿಲಾತನು ಒಂದು ವಿಳಾಸವನ್ನು ಬರೆದು ಆತನ ಶಿಲುಬೆಯ [ಯಾತನಾಕಂಭ, NW] ಮೇಲ್ಗಡೆ ಹಚ್ಚಿಸಿದನು. ಅದೇನಂದರೆ- ನಜರೇತಿನ ಯೇಸು, ಯೆಹೂದ್ಯರ ಅರಸನು ಎಂಬದೇ. ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದರಿಂದ ಯೆಹೂದ್ಯರಲ್ಲಿ ಬಹುಮಂದಿ ಆ ವಿಳಾಸವನ್ನು ಓದಿದರು. ಅದು ಇಬ್ರಿಯ, ಗ್ರೀಕ್, ಲಾತೀನ್ ಭಾಷೆಗಳಲ್ಲಿ ಬರೆದಿತ್ತು.”
6. ಯೇಸು ತನ್ನ ಕನ್ಯಾತಾಯಿಯಾದ ಮರಿಯಳಲ್ಲಿ ಹುಟ್ಟಿದುದರಿಂದ ಯೆಹೂದ್ಯ ಅಥವಾ ಇಬ್ರಿಯನಾಗಿದ್ದನು. ಹೀಗಿರುವದರಿಂದ ಮೂರುವರೆ ವರ್ಷ ಅವನು ತನ್ನ ಹುಟ್ಟುನಾಡಿನಲ್ಲಿ ಸಾರುತ್ತಿದ್ದಾಗ ಆಗಿನ ಯೆಹೂದಿ ಭಾಷೆಯಲ್ಲಿ ಅಥವಾ ಇಬ್ರಿಯ ಭಾಷೆಯಲ್ಲಿ ಸಾರಿದನೆಂದು ವ್ಯಕ್ತವಾಗುತ್ತದೆ. ಈ ಕಾರಣದಿಂದ ಅವನು ಆ ಸಹಾನುಭೂತಿಯ ದುಷ್ಕರ್ಮಿಗೆ ಆ ಭರವಸೆಯ ಮಾತುಗಳನ್ನಾಡಿದಾಗ ಇಬ್ರಿಯ ಭಾಷೆಯಲ್ಲಿ ಮಾತಾಡಿರಬಹುದೆಂದು ತೋರುತ್ತದೆ. ಹೀಗಿರುವಲ್ಲಿ ಅವನು ಪ್ರಮೋದವನವನ್ನು ಸೂಚಿಸಿದಾಗ ಆದಿಕಾಂಡ 2:8 ರಲ್ಲಿ ಕಂಡುಬರುವ ಗಾನ್ ಎಂಬ ಪದವನ್ನು ಉಪಯೋಗಿಸಿದ್ದಿರಬೇಕು. ಅಲ್ಲಿ ಈ ಮೂಲ ಪದವನ್ನು ಭಾಷಾಂತರಿಸುವಾಗ ಪವಿತ್ರ ಶಾಸ್ತ್ರಗಳ ಗ್ರೀಕ್ ಸೆಪ್ಟುಜಿಂಟ್ ಭಾಷಾಂತರವು ಪಾರದೀಸೊಸ್ ಎಂಬ ಮೂಲಪದವನ್ನು ಉಪಯೋಗಿಸುತ್ತದೆ.
7. ಪುನರುತ್ಥಾನಗೊಳಿಸಲ್ಪಟ್ಟಾಗ ಯೇಸು ಹೇಗೆ ಮಹಿಮೆಗೇರಿಸಲ್ಪಟ್ಟನು?
7. ಯೇಸುವಿನ ಶೂಲಜಡಿತವನ್ನನುಸರಿಸಿ ಮೂರನೆಯ ದಿನದಲ್ಲಿ ಅಥವಾ ಇಬ್ರಿಯ ಕ್ಯಾಲಂಡರಿನಲ್ಲಿ ನೈಸಾನ್ 16 ರಂದು ಅವನು ಪುನರುತ್ಥಾನಗೊಳಿಸಲ್ಪಟ್ಟನು. ನಾಲ್ವತ್ತು ದಿನಗಳ ತರುವಾಯ ಅವನು ತನ್ನ ಆದಿಬೀಡಾದ ಸ್ವರ್ಗಕ್ಕೆ, ಈಗ ಹೆಚ್ಚು ಮಹಿಮೆಯ ಸ್ಥಾನವುಳ್ಳವನಾಗಿ ಹಿಂತಿರುಗಿದನು. (ಅಪೋಸ್ತಲರ ಕೃತ್ಯ 5:30, 31; ಫಿಲಿಪ್ಪಿ 2:9) ಈಗ ಅವನು ಅಮರತ್ವ ಧರಿಸಿದವನಾಗಿ, ಈ ಗುಣದಲ್ಲಿ ತನ್ನ ಸ್ವರ್ಗೀಯ ತಂದೆಯೊಂದಿಗೆ ಪಾಲಿಗನಾದನು. ಆ ನೈಸನ್ 16 ರ ಭಾನುವಾರ ಯೇಸುವಿಗೆ ಮೃತರೊಳಗಿಂದ ಪುನರುತ್ಥಾನವಾಗುವ ತನಕ ಯೆಹೋವ ದೇವರು ಮಾತ್ರ ಈ ಅಮರತ್ವವುಳ್ಳವನಾಗಿದ್ದನು. —ರೋಮಾಪುರ 6:9; 1 ತಿಮೋಥಿ 6:15, 16.
ಪ್ರಾಯಶ್ಚಿತ್ತ ಹಾದಿ ತೆರೆಯುತ್ತದೆ
8. ಭೂಮಿಯ ಸಂಬಂಧದಲ್ಲಿ ಯೆಹೋವನ ಮೂಲ ಉದ್ದೇಶ ಏನಾಗಿತ್ತು ಮತ್ತು ಆತನು ಆ ಉದ್ದೇಶಕ್ಕೆ ಅಂಟಿಕೊಳ್ಳುತ್ತಾನೆಂದು ಯಾವುದು ತೋರಿಸುತ್ತದೆ?
8. ಇಡೀ ಭೂಮಿಯನ್ನು ಪ್ರಮೋದವನೀಯ ಸೌಂದರ್ಯದಲ್ಲಿ ತೊಡಿಸಿ, ಹೌದು, ಅದನ್ನು ಭೂವ್ಯಾಪಕ ಪ್ರಮೋದವನವನ್ನಾಗಿ ಮಾಡುವ ದೇವರ ಉದ್ದೇಶಕ್ಕೆ ಇವೆಲ್ಲ ಹೆಜ್ಜೆಗಳಾಗಿವೆ. (ಆದಿಕಾಂಡ 1:28; ಯೆಶಾಯ 55:10, 11) 1 ಕೊರಿಂಥ 15:45 ರಲ್ಲಿ ಅಪೋಸ್ತಲ ಪೌಲನು ಯೇಸುವನ್ನು “ಕಡೇ ಆದಾಮ” ಎಂದು ಕರೆಯುತ್ತಾನೆ. ಇದು ದೇವರು ಭೂಮಿಯ ಕಡೆಗಿದ್ದ ತನ್ನ ಮೂಲ ಉದ್ದೇಶವನ್ನು ಬಿಟ್ಟಿಲ್ಲವೆಂದೂ ಮೊದಲನೆಯ ಆದಾಮನು ನಿರ್ವಹಿಸದೆ ಹೋದ ಉದ್ದೇಶವನ್ನು ಇನ್ನೊಬ್ಬನು ನೆರವೇರಿಸುವನೆಂದೂ ಸೂಚಿಸುತ್ತದೆ.
9. ಪ್ರಮೋದವನಕ್ಕೆ ಹಿಂತೆರಳುವ ಹಾದಿಯನ್ನು ತೆರೆಯಲು ಯೇಸು ಏನು ಒದಗಿಸಿದನು?
9. ಪೌಲನಿಗನುಸಾರವಾಗಿ, ಯೇಸು ಒಂದು “ಅನುರೂಪವಾದ ಪ್ರಾಯಶ್ಚಿತ್ತವನ್ನು” ಕೊಟ್ಟನು. (1 ತಿಮೋಥಿ 2.6, NW) ಯೇಸು ಕ್ರಿಸ್ತನು ತಾನೇ ಹೀಗೆ ಹೇಳಿದ್ದನು: “ಹಾಗೆಯೇ ಮನುಷ್ಯಕುಮಾರನು ಸೇವೆ ಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ. ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” ಇದು, ಯೇಸು ಕ್ರಿಸ್ತನನ್ನು ನಂಬುವವರು ನಿತ್ಯಜೀವವನ್ನು ಪಡೆಯುವಂತೆ ಸಾಧ್ಯಮಾಡಿತು.—ಮತ್ತಾಯ 20:.28; ಯೋಹಾನ 3:16.
10. (ಎ) ಅನುಗ್ರಹಿತ ಮಾನವರ ಒಂದು ಪರಿಮಿತ ಗುಂಪಿನ ವಿಷಯದಲ್ಲಿ ದೇವರೇನು ನಿರ್ಣಯಿಸಿದನು? (ಬಿ) “ಚಿಕ್ಕ ಹಿಂಡಿನ” ಆಯ್ಕೆ ಯಾವಾಗ ಆರಂಭಗೊಂಡಿತು ಮತ್ತು ಯಾರಿಂದ?
10. ಸತ್ತವರೊಳಗಿಂದ ಪುನರುತ್ಥಾನವಾದ ಬಳಿಕ ಯೇಸು ಸ್ವರ್ಗಕ್ಕೇರಿದಾಗ ಮಾನವ ಕುಟುಂಬಕ್ಕೆ ತಾನು ನೀಡಿದ ಪ್ರಾಯಶ್ಚಿತ್ತ ಯಜ್ನದ ಯೋಗ್ಯತೆಯನ್ನು ದೇವರಿಗೆ ಅರ್ಪಿಸ ಸಾಧ್ಯವಿತ್ತು. ಆದರೂ ಅವನ ಸ್ವರ್ಗೀಯ ಪಿತನಾದ ಯೆಹೋವನ ಉದ್ದೇಶವು ಭೂಮಿಯ ಜನಾಂಗಗಳಿಂದ “ತನ್ನ ಹೆಸರಿಗಾಗಿ . . .ಒಂದು ಪ್ರಜೆಯನ್ನು” ಆರಿಸಿಕೊಳ್ಳುವದಾಗಿತ್ತು. (ಅಪೋಸ್ತಲರ ಕೃತ್ಯ 15:14) ಪ್ರಕಟನೆ 7:4 ಮತ್ತು 14:1-4 ಕ್ಕನುಸಾರ, ದೇವರ ಸ್ವರ್ಗೀಯ ರಾಜ್ಯಕ್ಕೆ ಕರೆಯಲ್ಪಟ್ಟಿರುವ “ಚಿಕ್ಕ ಹಿಂಡು” ಆಗಿರುವ ಇವರ ಸಂಖ್ಯೆ ಕೇವಲ 144,000 ಮಂದಿ. (ಲೂಕ 12:32) ಯೆಹೋವದೇವರಿಂದ ವಿಶೇಷವಾಗಿ ಅನುಗ್ರಹಿಸಲ್ಪಟ್ಟ ಇವರ ಆಯ್ಕೆ ಯೇಸುವಿನ 12 ಜನ ಅಪೋಸ್ತಲರ ಆಯ್ಕೆಯಲ್ಲಿ ಆರಂಭವಾಯಿತು. (ಮತ್ತಾಯ 10:2-4; ಅಪೋಸ್ತಲರ ಕೃತ್ಯ1:23-26) ಯೇಸು ತನ್ನ ಸಭೆಯ ಈ ಮೂಲ ಸದಸ್ಯರಿಗೆ, “ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ. ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು” ಎಂದು ಹೇಳಿದನು. (ಯೋಹಾನ 15:16) ರಾಜ್ಯದ ಕೆಳಗೆ ಬರಲಿದ್ದ ಆ ಭೂವ್ಯಾಪಕ ಪ್ರಮೋದವನವನ್ನು ಘೋಷಿಸುವ ಕೆಲಸದಲ್ಲಿ ಇವರು ನುಗ್ಗುಮೊನೆಯಾಗಿದ್ದಾರೆ.
ರಾಜ್ಯದ ಬರೋಣಕ್ಕೆ ಸಕಾಲ
11. ಮೆಸ್ಸೀಯ ರಾಜ್ಯವು ಸ್ಥಾಪಿಸಲ್ಪಡುವ ಸಮಯವು ಯಾವುದಾಗಿತ್ತು?
11. ಕರ್ತನಾದ ಯೇಸು ಕ್ರಿಸ್ತನ ಹೆಸರಲ್ಲಿ ನಾವಿಂದು ದೇವರ ರಾಜ್ಯದ ಬರೋಣಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತೇವೆ. (ಮತ್ತಾಯ 6.9,10; ಯೋಹಾನ 14:13,14) ಮೆಸ್ಸೀಯನ ರಾಜ್ಯವು “ಅನ್ಯದೇಶದವರ ಸಮಯಗಳು” ಅಂತ್ಯಗೊಂಡಾಗ ಸ್ಥಾಪಿಸಲ್ಪಡಲಿಕ್ಕಿತ್ತು. (ಲೂಕ 21:24) ಆ ಯೆಹೂದ್ಯೇತರ ಸಮಯಗಳು 1914 ರೊಳಗೆ ಮುಗಿದು ಹೋದವು.a
12. ಯೇಸುವಿನ ಅದೃಶ್ಯ ಸಾನಿಧ್ಯವನ್ನು ಸೂಚಿಸುವ ಗಮನಾರ್ಹ ವಿಷಯಗಳ ಯೇಸುವಿನ ಪ್ರವಾದನೆಗನುಸಾರ 1914 ರಲ್ಲಿ ಏನು ನಡೆಯಿತು?
12. ಆ ವರ್ಷವು ಮಾನವ ಇತಿಹಾಸದ ಪ್ರಥಮ ಜಾಗತಿಕ ಯುದ್ಧದಿಂದ ಗುರುತಿಸಲ್ಪಟ್ಟಿತು. ಅವನು ಭೂಮಿಯ ಮೇಲಿನ ರಾಜ್ಯಾಧಿಕಾರದಿಂದ ಅದೃಶ್ಯನಾಗಿ ಸನ್ನಿಧನಾಗುವಾಗ ನಡೆಯುವ ಗಮನಾರ್ಹ ವಿಷಯಗಳನ್ನು ಕುರಿತು ಹೇಳಿದ್ದನು. ಶಿಷ್ಯರು ಅವನಿಗೆ “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು” ಎಂದು ಕೇಳಿದ್ದರು. ಉತ್ತರವಾಗಿ ಯೇಸು ಹೀಗೆಂದನು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು ಬರುವವು; ಭೂಕಂಪಗಳು ಆಗುವವು. ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ. ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:3, 7, 8, 14; ಮಾರ್ಕ 13:10.
13. (ಎ) ದೇವರ ರಾಜ್ಯದ ಸಾರುವಿಕೆಯು ಯಾವ ವಿಧದಲ್ಲಿ ಸುವಾರ್ತೆಯಾಗಿದೆ? (ಬಿ) ದೇವರ ರಾಜ್ಯ ಬರಲಿ ಎಂಬ ಪ್ರಾರ್ಥನೆ ಎಷ್ಟು ಕಾಲದಿಂದ ಮಾಡಲ್ಪಟ್ಟಿದೆ ಮತ್ತು ಆತನ ಭೂಸಾಕ್ಷಿಗಳಿಗೆ ಆ ಪ್ರಾರ್ಥನೆಯನ್ನು ಅರ್ಪಿಸಿ ಅರ್ಪಿಸಿ ಬೇಸರ ಹಿಡಿಯಲ್ಲಿಲ್ಲವೇ?
13. ಯೆಹೋವನ ರಾಜ್ಯದ ಈ ಸುವಾರ್ತೆ ಈಗ 200 ಕ್ಕೂ ಹೆಚ್ಚು ದೇಶಗಳಲ್ಲಿ ಸಾರಲಾಗುತ್ತಿದ್ದು ಇನ್ನೂ ಹೆಚ್ಚು ದೇಶಗಳಿಗೆ ವಿಸ್ತರಿಸುವ ಪ್ರಯತ್ನ ನಡಿಯುತ್ತದೆ. ಈ ವಾರ್ತೆ ಮುಂದೆ ಬರಲಿರುವ ಒಂದು ಲೋಕಸರಕಾರದ ವಾರ್ತೆಯಲ್ಲ, ಈಗ ಅದಿಕಾರದಲ್ಲಿರುವ, ಆಗಲೇ ಆಳುತ್ತಿರುವ ರಾಜ್ಯದ ವಾರ್ತೆಯಾಗಿದೆ. ಈ ರಾಜ್ಯ 1914 ರಲ್ಲಿ ಸ್ಥಾಪಿಸಲ್ಪಟ್ಟಿತು. 1900 ವರ್ಷಗಳ ಹಿಂದೆ ಯೇಸು ಹೇಳಿದ ಪ್ರಾರ್ಥನೆಗೆ ಇದು ಉತ್ತರವನ್ನೊದಗಿಸಲು ಪ್ರಾರಂಭಿಸಿತು. ಆ ಸರಕಾರದ ಅರಸನು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸಿದಂದಿನಿಂದ ಆ ಪ್ರಾರ್ಥನೆಯನ್ನು ಆ ರಾಜ್ಯದ ಸ್ಥಾಪಕನಿಗೆ ಮಾಡಲಾಗಿದೆ. ಹೀಗೆ, ಆ ರಾಜ್ಯದ ಕರ್ತೃ ಈ ಭಿನ್ನಹವನ್ನು ದೀರ್ಘಕಾಲದಿಂದ ಕೇಳುತ್ತಿದ್ದಾನೆ. ಆ ಸಮಯಗಳಲ್ಲೆಲ್ಲಾ ಆತನ ಭೂಸಾಕ್ಷಿಗಳು ಅರ್ಪಿಸಿರುವ ಪ್ರಾರ್ಥನೆಯನ್ನು ಆತನು ಕೇಳಲು ಇಷ್ಟಪಟ್ಟಿದ್ದಾನೆ. ಏಕೆಂದರೆ ಅದು ಆ ರಾಜ್ಯದ ಬರೋಣದಲ್ಲಿ ಅವರಿಗಿರುವ ನಂಬಿಕೆಯನ್ನು ಪ್ರದರ್ಶಿಸಿದೆ. “ಪರಲೋಕದಲ್ಲಿರುವ ತನ್ನ ತಂದೆಗೆ” ಪ್ರಾರ್ಥನೆಯನ್ನು ಅರ್ಪಿಸಿದರಲ್ಲಿ, ಅದು ಹಳಸಿಹೋಗಿದೆಯೋ ಎಂಬಂತೆ ಅವರು ಬಳಲಿ ಹೋಗಲಿಲ್ಲ.—ಮತ್ತಾಯ 6:9,10.
14. ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಪಟ್ಟು ಹಿಡಿದು ಸಾರುವದೇಕೆ?
14. ರಾಜ್ಯವು 1914 ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆಯೆಂದು ಯೆಹೋವನ ಸಾಕ್ಷಿಗಳು ನಂಬಿ ಪ್ರಕಟಿಸಿದರೂ ರಾಜ್ಯದ ಈ ಸುವಾರ್ತೆಯನ್ನು ಅವರು ಪಟ್ಟು ಹಿಡಿದು ಸಾರುತ್ತಾರೆ. ಸ್ಥಾಪಿತವಾದ ರಾಜ್ಯವು ಭೂಮಿಯನ್ನು ಪೂರ್ಣವಾಗಿ ಹತೋಟಿಗೆ ತಂದಿರದೆ ಲೋಕ ರಾಜ್ಯಗಳು ಮನುಷ್ಯಕುಲದ ಮತ್ತುವಂಶಗಳ ಮೇಲೆ ಶಕ್ತಿ ಮತ್ತು ಅಧಿಕಾರವನ್ನು ನಿರ್ವಹಿಸುವಂತೆ ಅನುಮತಿಸಿರುವದರಿಂದ ಅವರು ಹೀಗೆ ಸಾರುತ್ತಾ ಇದ್ದಾರೆ. (ರೋಮಾಪುರ13:1) ಆದುದರಿಂದ ಅದು ಪೂರ್ಣಾರ್ಥದಲ್ಲಿ ಬರಬೇಕು, ಅಂದರೆ ಇಡೀ ಭೂಮಿಯ ಮೇಲೆ ಅಧಿಕಾರ ನಡಿಸುವ ಒಂದೇ ಸರಕಾರ ಅದಾಗಿರಬೇಕು.—ದಾನಿಯೇಲ 2:44.
15. ಸಾ. ಶ. 33 ರ ಪಂಚಾಶತ್ತಮದಿಂದ ಹಿಡಿದು, ಇಸ್ರಾಯೇಲಿನ ರಾಜರು ಅಭಿಷಿಕ್ತರಾಗುವಾಗ ಇದ್ದುದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಏನು ನಡೆಯುತ್ತಾ ಬಂದಿದೆ?
15. ಆ ರಾಜ್ಯದ ರಾಜನಾಗಿ ನೇಮಿಸಲ್ಪಟ್ಟಿರುವದಾದರೂ ಯೇಸು ಒಬ್ಬನೇ ಆಳುವದಲ್ಲ. ದೇವರ ಮೆಸ್ಸೀಯನ ರಾಜ್ಯದಲ್ಲಿ ಸಹ ಬಾಧ್ಯಸ್ಥರಾಗುವಂತೆ ತನ್ನ ರಾಜಕುಮಾರನ 144,000 ಮಂದಿ ಹಿಂಬಾಲಕರನ್ನು ಆತನು ನೇಮಿಸಿದ್ದಾನೆ. (ದಾನಿಯೇಲ 7:27) ಹಳೆಯ ಇಸ್ರಾಯೇಲಿನ ಅರಸರನ್ನು ಮಹಾಯಾಜಕನು ಪವಿತ್ರ ಅಭಿಷೇಕ ತೈಲದಿಂದ ಅಭಿಷೇಕಿಸಿದಂತೆಯೇ ಸಾ. ಶ. 33 ರ ಪಂಚಾಶತ್ತಮ ದಿನದಿಂದ ಹಿಡಿದು ಯೆಹೋವನು ಯೇಸುಕ್ರಿಸ್ತನ 144,000 ಮಂದಿ ಸಹಬಾಧ್ಯರನ್ನು ತನ್ನ ಪವಿತ್ರ ಆತ್ಮದಿಂದ ಅಭಿಷೇಕಿಸಿ ಅವರು “ರಾಜಾಧಿರಾಜನೂ ಕರ್ತರಕರ್ತನೂ” ಆದವನೊಂದಿಗೆ ಸ್ವರ್ಗದಲ್ಲಿ ಆತ್ಮ ಜೀವನ ಮಾಡುವಂತೆ ಹುಟ್ಟಿಸುತ್ತಾನೆ.—ಪ್ರಕಟನೆ 19:16; ಇದನ್ನು 1 ಅರಸು 1:39ಕ್ಕೆ ಹೋಲಿಸಿ.
“ಕಡೇ ಆದಾಮ” ನಿಂದ ಪ್ರಮೋದವನದ ಪುನ:ಸಂಪಾದನೆ
16. ಯೇಸುವಿನ ಶೂಲಜಡಿತದ ಸಮಯದಲ್ಲಿ ರಾಜ್ಯದ ಸಂಬಂಧದಲ್ಲಿ ಯಾವ ಹೊರನೋಟವಿತ್ತು, ಆದರೆ ಅವನು ತಪ್ಪಾದ ಸುವಾರ್ತೆಯ ಘೋಷಕನಾಗಿರಲಿಲ್ಲವೇಕೆ?
16. ಸಾ. ಶ. 33 ರಲ್ಲಿ ಯೇಸುವಿಗೆ ಶೂಲಜಡಿತವಾದಾಗ ಅವನಿಗೆ ರಾಜ್ಯ ದೊರೆಯುವದು ಅಸಂಭವವೆಂದು ಕಂಡುಬಂತು. ಆದರೆ ದೇವರ ರಾಜ್ಯದ ಸಾರೋಣದ ಸಂಬಂಧದಲ್ಲಿ ಅವನು ತಪ್ಪಾದ ವಾರ್ತೆಯ ಘೋಷಕನಾಗಿರಲಿಲ್ಲ. ಶೂಲಜಡಿತವಾಗಿ ಮೂರನೆಯ ದಿನದಲ್ಲಿ ಆ ರಾಜ್ಯ ಸ್ಥಾಪಕನು ಯೋಸುವಿನ ಶಿಷ್ಯರು ಅಸಂಭವವಾಗಿರುವ ಸರಕಾರಕ್ಕಾಗಿ ಪ್ರಾರ್ಥಿಸದಿರುವಂತೆ ಖಂಡಿತಮಾಡಿದನು. ಯೆಹೋವನು ಈ ಬೇಡಲ್ಪಟ್ಟಿರುವ ರಾಜ್ಯದಲ್ಲಿ ತನ್ನನ್ನು ಪ್ರತಿನಿಧೀಕರಿಸುವ ವ್ಯಕ್ತಿಯನ್ನು ಪುನರುತ್ಥಾನಗೊಳಿಸಿ ಅವನಿಗೆ ಅಮರತ್ವವನ್ನು ತೊಡಿಸಿದನು.
17, 18. (ಎ) ಯೇಸು “ಕಡೇ ಆದಾಮ” ನೆಂದು ಕರೆಯಲ್ಪಟ್ಟದರಲ್ಲಿ ವೈಶಿಷ್ಟ್ಯವೇನು (ಬಿ) 1914 ರಿಂದೀಚಿಗಿನ ಲೋಕ ಸಂಭವಗಳು ಏನು ಸೂಚಿಸುತ್ತವೆ?
17. ಭೂಮಿಯ ಮೇಲಿನ ಪ್ರಥಮ ಪ್ರಮೋದವನದ ನಿರ್ಮಾಣಿಕನು ಪ್ರಮೋದವನವನ್ನು ನವೀಕರಿಸುವ ಮತ್ತು ಈ ಭೂವ್ಯಾಪಕವಾದ ಉದ್ಯಾನವನವನ್ನು ಜನರಿಂದ ತುಂಬಿಸುವ ಜವಾಬ್ದಾರಿಯನ್ನು ತನ್ನ ಮೇಲೆ ಇಡುವನೆಂದು ಯೇಸು ತಿಳಿದಿದ್ದನು. 1 ಕೊರಿಂಥ 15:45, 47ರಲ್ಲಿ ನಾವು ಓದುವದು: “ಮೊದಲನೆಯ ಮನುಷ್ಯನಾದ ಆದಾಮನು ಬದುಕುವ ಪ್ರಾಣಿಯಾದನೆಂದು ಬರೆದದೆಯಲ್ಲಾ. ಕಡೇ ಆದಾಮನೋ ಬದುಕಿಸುವ ಆತ್ಮನು. ಮೊದಲನೆಯ ಮನುಷ್ಯನು ಭೂಮಿಯೊಳಗಿಂದ ಉತ್ಪನ್ನನಾಗಿ ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.” ಎರಡನೆಯ ಆದಾಮನು ಪರಲೋಕದಿಂದ ಕೆಳಗೆ ಬಂದವನು. ಮತ್ತು ಭೂಮಿಯ ಮೇಲೆ ಪ್ರಮೋದವನವನ್ನು ಪುನ:ಸ್ಥಾಪಿಸುವರೆ ಯೆಹೋವನು ಉಪಯೋಗಿಸುವವನು ಇವನೇ. ಈ ಆಧಾರದಿಂದಲೇ ಕರ್ತನಾದ ಯೇಸು ಆ ಸಹಾನುಭೂತಿ ತೋರಿಸಿದ ಪಾತಕಿಗೆ, “ನೀನು ನನ್ನ ಸಂಗಡ ಪ್ರಮೋದವನಲ್ಲಿರುವಿ” ಎಂದು ಹೇಳಿದನು. (ಲೂಕ 23:43, NW) ಈ ಸಂಭಾಷಣೆಯಿಂದ, ಪ್ರಮೋದವನವು ಭೂಮಿಯಲ್ಲಿ “ಕಡೇ ಆದಾಮ” ನಾದ ಮಹಿಮೆಗೇರಿಸಲ್ಪಟ್ಟ ಯೇಸುವಿನ ಕೈಯಲ್ಲಿರುವ ಸ್ವರ್ಗರಾಜ್ಯದ ಕೆಳಗೆ ಸ್ಥಾಪಿಸಲ್ಪಡುವದೆಂದು ಪುನ: ವ್ಯಕ್ತವಾಗುತ್ತದೆ.
18. ಯೇಸು ನುಡಿದ ಭವಿಷ್ಯವಾಣಿಗೆ 1914 ರಿಂದೀಚೆಗೆ ನಡೆದಿರುವ ಲೋಕ ಘಟನೆಗಳು ಹೊಂದಿಕೆಯಾಗಿದ್ದು ಹೀಗೆ ಯೇಸು ಅಂದಿನಿಂದ ಅಧಿಕಾರ ಪಡೆದಿದ್ದಾನೆಂದು ರುಜುಪಡಿಸುತ್ತದೆ. ಈಗ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ, 1914 ರಿಂದ ಜೀವಿಸುತ್ತಿರುವ ಈ ಇಪ್ಪತ್ತನೆಯ ಶತಮಾನದ ಜನಸಂತತಿಯು ಮತ್ತಾಯ 24ನೇ ಅಧ್ಯಾಯದಲ್ಲಿ ಕಂಡುಬರುವ ಘಟನಾವಳಿಯ ನೆರವೇರಿಕೆಯನ್ನು ಅನುಭವಿಸಿದೆ. ಆದುದರಿಂದ ಈ ಸಮಯಾವಧಿ ತನ್ನ ಅಂತ್ಯವನ್ನು ಹತ್ತರಿಸುತ್ತಿದೆ. ಪ್ರಮೋದವನದ ಪುನ:ಸ್ಥಾಪನೆ ಅದರ ಬೆನ್ನಲ್ಲಿದೆ.—ಮತ್ತಾಯ 24:32-35; ಇದಕ್ಕೆ ಕೀರ್ತನೆ 9:10 ಹೋಲಿಸಿ.
ಉತ್ತೇಜಕವಾದ ನೂತನಲೋಕ ಯುಗ ಮುಂದಿದೆ
19, 20. (ಎ)ಅರ್ಮಗೆದ್ದೋನಿನ ನಂತರ ಯೆಹೋವನು ತನ್ನನ್ನು ಪ್ರೀತಿಸುವವರನ್ನು ಯಾವದರೊಳಗೆ ತರುವನು? (ಬಿ) ಅರ್ಮಗೆದ್ದೋನಿನ ಬಳಿಕ ಸ್ವಲ್ಪದರಲ್ಲಿ ಎನು ಮಾಡುವ ಅಗತ್ಯವಿರುವದು?
19. ತನ್ನ ವಿಶ್ವ ಸಾರ್ವಭೌಮತೆಯನ್ನು ಅರ್ಮಗೆದ್ದೋನ್ ರಣರಂಗದಲ್ಲಿ ನಿಸ್ಸಂದೇಹವಾಗಿ ನಿರ್ದೋಶೀಕರಿಸಿದ ಬಳಿಕ ಯೆಹೋವನು ತನ್ನನ್ನು ಪ್ರೀತಿಸುವವರಿಗೆ ಪರಿಚಯಿಸುವದು ಬೇಸರಹಿಡಿಸುವ ನೀರಸ ವ್ಯವಸ್ಥೆಯೊಂದನ್ನಲ್ಲ. ದೇವಕುಮಾರ ಮೆಸ್ಸೀಯ ರಾಜ ಯೇಸುವಿನ ಹಿತಕರ ಆಳಿಕೆಯ ಕೆಳಗಿರುವ ಮಾನವ ಕುಟಂಬದ ಮುಂದಿರುವ ಯುಗವು ಅತಿ ಉತ್ತೇಜಕ ಸಮಯವಾಗಿರುವದು. ಅಲ್ಲಿ ಎಷ್ಟು ಪ್ರಯೋಜನಕಾರಿ ವಿಷಯಗಳನ್ನು ಮಾಡಲಿಕ್ಕದೆ! ಯೆಹೋವನ ಸ್ವರ್ಗೀಯ ಸೈನ್ಯ ಮತ್ತು ವ್ಯವಸ್ಥಿತ ದುಷ್ಟ ಸೈನ್ಯಗಳ ನಡುವೆ ನಡೆದ ಭೂವ್ಯಾಪಕ ಹೋರಾಟದಿಂದಾಗಿ ಭೂಮುಖದ ಮೇಲೆ ಆಗಿರುವ ಯಾವುದೇ ಕಲೆಗಳು ತೆಗೆದು ಹಾಕಲ್ಪಡುವವು. ಅದರ ಅವಶೇಷವೇ ಇರದು.
20. ಆದರೆ ರಾಷ್ಟ್ರಗಳು ಬಿಟ್ಟುಹೋಗಿರುವ ಯುದ್ಧೋಪಕರಣಗಳ ಕುರಿತೇನು? ಅವುಗಳಲ್ಲಿ ದಹಿಸುವ ಭಾಗಗಳನ್ನು ನಿರ್ಮೂಲಮಾಡಲು ಕೊಟ್ಟಿರುವ ಸಾಂಕೇತಿಕ ಸಮಯಾವಧಿಯ ದೃಷ್ಟಿಯಲ್ಲಿ ನೋಡುವುದಾದರೆ ಅದರ ಮೊತ್ತ ವಿಪರೀತವೇ ಸರಿ. (ಯೆಹೆಜ್ಕೇಲ 39:8-10) ರಾಷ್ಟಗಳ ಉಳಿದಿರುವ ಯುದ್ಧ ಸ್ಮಾರಕಗಳ ಭಾಗಗಳನ್ನು ಅರ್ಮಗೆದ್ದೋನನ್ನು ಪಾರಾಗುವವರು ಸದುಪಯೋಗಿಸಿಕೊಳ್ಳಲು ಸಮರ್ಥರಾಗಬಹುದು.—ಯೆಶಾಯ 2:2-4.
21. ಜಲಪ್ರಳಯವನ್ನು ಪಾರಾದವರ ಅನುಭವದಂತೆ ಅರ್ಮಗೆದ್ದೋನನ್ನು ಪಾರಾಗುವವರನ್ನು ಯಾವ ಪರಿಸ್ಥಿತಿ ಎದುರಿಸುವದು, ಆದರೆ ಮುಖ್ಯ ವ್ಯತ್ಯಾಸ ಯಾವುದು?
21. ಭೂವ್ಯಾಪಕ ಜಲಪ್ರಳಯವನ್ನು ಅದ್ಭುತಕರವಾಗಿ ಪಾರಾದ ನೋಹ ಮತ್ತು ಅವನ ಪರಿವಾರದ ಆಧುನಿಕ ದಿನಗಳ ಆಶೀರ್ವದಿತ ಪಡಿರೂಪವಾದ ಜನರು ನೋಹನ ಕುಟುಂಬವು ಎದುರಿಸಿದಂತಹ ಸ್ಥಿತಿಗತಿಯನ್ನು ಎದುರಿಸುವರು. ಆದರೆ ಸೈತಾನನೂ ಅವನ ದೆವ್ವ ಸೈನ್ಯಗಳೂ ಭೂಮಿಯನ್ನು ಆವರಿಸುವ ಅದೃಶ್ಯ ಆಕಾಶವನ್ನು ಉಪದ್ರವಿಸದೆ ಹತ್ತು ಶತಮಾನಗಳ ತನಕ ಪೂರ್ತಿ ನಿಷ್ಕ್ರಿಯರಾಗುವರು. (ಪ್ರಕಟನೆ 20:1-_3) ಅರ್ಮಗೆದ್ದೋನನ್ನು ಪಾರಾಗುವವರಿಗೆ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ವನ್ನು ದಾಟಿರುವ ಭೂಮಿಯನ್ನು ವಶಪಡಿಸಿಕೊಳ್ಳುವ ಪಂಥಾಹ್ವಾನದ ಕೆಲಸವಿರುವದು. ಭೂಗ್ರಹದ ಮೇಲೆ ಮಾಡಿರುವ ಪರಿಣಾಮವನ್ನು ಎದುರಿಸುವ ಕೆಲಸ ಅವರಿಗಿರುವದು.—ಪ್ರಕಟನೆ 16:14.
22. ಪ್ರಮೋದವನವನ್ನು ಭೂವ್ಯಾಪಕವಾಗಿ ವಿಸ್ತರಿಸುವ ಪಂಥಾಹ್ವಾನಕ್ಕೆ ಅರ್ಮಗೆದ್ದೋನ್ ಪಾರಾಗುವವರು ಹೇಗೆ ಪ್ರತಿಕ್ರಿಯೆ ತೋರಿಸುವರು?
22. ಅರ್ಮಗೆದ್ದೋನ್ ಯುದ್ಧವನ್ನು ಪಾರಾಗುವ ಸಂಬಂಧಸೂಚಕವಾಗಿ ಚಿಕ್ಕ ಸಂಖ್ಯೆಯ ಇವರಿಗೆ ಭೂವ್ಯಾಪಕವಾಗಿ ಪ್ರಮೋದವನವನ್ನು ವಿಸ್ತರಿಸುವ ಕೆಲಸವು ಸಾಧಾರಣವಾಗಿ ಅತಿ ಭಯ ಹುಟ್ಟಿಸುವ ಕೆಲಸವಾಗಿ ಕಾಣಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ವಿಪರೀತವಾಗಿ ಉತ್ತೇಜಿತರಾಗಿರುವ ಇವರು, ಇದನ್ನು ಧೈರ್ಯದಿಂದ ಮತ್ತು ವಿಧೇಯತೆಯಿಂದ ಆರಂಭಿಸುವರು. ಈ ಭೂಮಿ ದೇವರ ಸಾಂಕೇತಿಕ ಪಾದಪೀಠ ಎಂಬದನ್ನು ಪೂರ್ತಿ ಗ್ರಹಿಸಿರುವ ಇವರು ಈ ಐಹಿಕ ಗೋಳವು, ದೇವರ ಪಾದಗಳು ಅಲ್ಲಿ ಇಡಲ್ಪಡುವದಕ್ಕೆ ಅರ್ಹತೆ ಪಡೆಯುವಷ್ಟು ರಮಣೀಯವೂ ಸುಂದರವೂ ಆಗುವಂತೆ ಯಥಾರ್ಥವಾಗಿ ಇಷ್ಟಪಡುತ್ತಾರೆ.
23. ಅರ್ಮಗೆದ್ದೋನ್ ಪಾರಾಗುವವರು ಪ್ರಮೋದವನವನ್ನು ಪುನ: ಪಡೆಯುವ ಕೆಲಸ ಯಶಸ್ಸಾಗುವದೆಂಬದಕ್ಕೆ ಅಶ್ವಾಸನೆಗಾಗಿ ಅವರಿಗೆ ಯಾವ ಬೆಂಬಲವಿರುವದು?
23. ಭೂಮಿಯ ಕುರಿತಾದ ಈ ದೈವಿಕ ಕೆಲಸವನ್ನು ಪೂರ್ತಿಗೊಳಿಸುವ ಈ ಆನಂದದ ಸೇವೆಯನ್ನು ತೊಡಗಿದ ಬಳಿಕ ಅವರನ್ನು ಹಾಗೆಯೇ, ಯಾವ ಸಹಾಯವೂ ಇಲ್ಲದೆ ಬಿಡಲಾಗುವುದಿಲ್ಲ ಎಂಬದನ್ನು ತಿಳಿಯುವದು ಸಂತೋಷಕರ ಮತ್ತು ಪ್ರೋತ್ಸಾಹನೀಯ. (ಯೆಶಾಯ 65:17, 21-24 ಹೋಲಿಸಿ.) ಅವರಿಗೆ ಪ್ರಮೋದವನವನ್ನು ಪುನ:ಸ್ಥಾಪಿಸುವ ವಾಗ್ದಾನ ಕೊಟ್ಟ ಮತ್ತು ತನ್ನ ದಿವಾರೋಹಣದ ದಿವಸ “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದು ಹೇಳಿದ ವ್ಯಕ್ತಿಯ ಪೂರ್ಣ ಮತ್ತು ಅಪರಿಮಿತ ಬೆಂಬಲವು ಇರುವದು. (ಮತ್ತಾಯ 28:18) ಅವನಿಗಿನ್ನೂ ಆ ಅಧಿಕಾರವಿದೆ ಮತ್ತು ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ ಅವನು ತನ್ನ ಆ ಗಮನಾರ್ಹವಾದ ವಾಗ್ದಾನವನ್ನು ನೆರವೇರಿಸ ಶಕ್ತನಾಗಿದ್ದಾನೆ. (w89 8/15)
[ಅಧ್ಯಯನ ಪ್ರಶ್ನೆಗಳು]
a ವಿವರಣೆಗೆ, ವಾಚ್ಟವರ್ ಬೈಬಲ್ ಎಂಡ್ ಟ್ರ್ಯಾಕ್ಟ್ ಸೊಸೈಟಿಯ “ನಿನ್ನ ರಾಜ್ಯ ಬರಲಿ” ಎಂಬ ಪುಸ್ತಕದ 135-9 ಪುಟಗಳನ್ನು ನೋಡಿ. ಯೆಹೆಜ್ಕೇಲ 21:27ನ್ನೂ ನೋಡಿ.
ಪುನರ್ವಿಮರ್ಶೆಗೆ ಪ್ರಶ್ನೆಗಳು
◻ ಕಲ್ವೇರಿಯಲ್ಲಿ ಯೇಸು ಕೊಟ್ಟ ವಚನ ಮಾನವ ಸಂತತಿಗೆ ಮತ್ತು ಒಬ್ಬ ಪಾತಕಿಗೆ ಯಾವ ಆಶ್ವಾಸನೆ ಕೊಡುತ್ತದೆ?
◻ ಪ್ರಮೋದವನಕ್ಕೆ ಹಿಂದೆರಳುವ ಹಾದಿಯ ತೆರೆಯುವಿಕೆಗೆ ಯಾವುದು ಮೂಲ ವಿಷಯವಾಗಿದೆ?
◻ ಮೊದಲನೆ ಆದಾಮನು ಏನು ಮಾಡುವುದರಲ್ಲಿ ತಪ್ಪಿದನು, ಆದರೆ “ಕಡೇ ಆದಾಮನು” ಏನನ್ನು ನೆರವೇರಿಸುವನು?
◻ ಅರ್ಮಗೆದ್ದೋನಿನ ಬಳಿಕ ತನ್ನನ್ನು ಪ್ರೀತಿಸುವವರನ್ನು ಯೆಹೋವನು ಯಾವ ರೀತಿಯ ವ್ಯವಸ್ಥೆಯೊಳಗೆ ತರುವನು?
[ಪುಟ 13 ರಲ್ಲಿರುವ ಚಿತ್ರ]
“1914 ರಲ್ಲಿ ಎಲ್ಲಾ ರಾಜ್ಯಗಳ ಅಂತ್ಯ” ಎಂಬ ಲೇಖನ “ದ ವರ್ಲ್ಡ್ ಮ್ಯಾಗ್ಸಿನ್” ನಲ್ಲಿ ಆಗಸ್ಟ್ 30. 1914 ರಲ್ಲಿ ತೋರಿಬಂತು