ಅಧ್ಯಾಯ 37
ಯೆಹೋವನನ್ನೂ ಯೇಸುವನ್ನೂ ಜ್ಞಾಪಿಸಿಕೊಳ್ಳಬೇಕು
ನಿನಗೆ ಒಬ್ಬರು ತುಂಬಾ ಬೆಲೆಬಾಳುವ ಒಂದು ಉಡುಗೊರೆ ಕೊಟ್ಟಿದ್ದಾರೆ ಅಂತಿಟ್ಕೋ. ನಿನಗೆ ಹೇಗನಿಸುತ್ತದೆ?— ಧನ್ಯವಾದ ಹೇಳ್ತಿಯಾ ತಾನೇ. ಆಮೇಲೆ ಆ ವ್ಯಕ್ತಿಯನ್ನು ಮರೆತುಬಿಡುತ್ತೀಯಾ? ಅಥವಾ ಅವರನ್ನೂ ಅವರು ಕೊಟ್ಟ ಅಮೂಲ್ಯ ಉಡುಗೊರೆಯನ್ನೂ ಸದಾ ನೆನಪಿಟ್ಟುಕೊಳ್ಳುತ್ತೀಯಾ?—
ಯೆಹೋವ ದೇವರು ನಮಗೊಂದು ಬೆಲೆಬಾಳುವ ಉಡುಗೊರೆ ಕೊಟ್ಟಿದ್ದಾನೆ. ನಮಗಾಗಿ ಜೀವತೆರಲು ತನ್ನ ಮಗನನ್ನೇ ಈ ಭೂಮಿಗೆ ಕಳುಹಿಸಿಕೊಟ್ಟನು. ಯೇಸು ನಮಗಾಗಿ ಏಕೆ ಜೀವತೆರಬೇಕಾಗಿತ್ತು?— ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಪ್ರಾಮುಖ್ಯ.
ಅಧ್ಯಾಯ 23ರಲ್ಲಿ ನಾವು ಕಲಿತ ವಿಷಯ ನಿನಗೆ ನೆನಪಿರಬಹುದು. ಆದಾಮನು ದೇವರ ಪರಿಪೂರ್ಣ ನಿಯಮವನ್ನು ಮೀರಿದಾಗ ಪಾಪಿಯಾದನು. ಅವನು ಮಾನವರೆಲ್ಲರ ಮೂಲಪಿತನಾದ ಕಾರಣ ಆ ಪಾಪವನ್ನು ಎಲ್ಲರಿಗೂ ದಾಟಿಸಿದನು. ಹಾಗಾದರೆ ಇಂದು ಮಾನವರೆಲ್ಲರಿಗೆ ಯಾರ ಅಗತ್ಯವಿದೆ?— ಒಬ್ಬ ತಂದೆಯ ಅಗತ್ಯವಿದೆ. ಆ ತಂದೆ ಇದೇ ಭೂಮಿಯಲ್ಲಿ ಜೀವಿಸಿರಬೇಕು, ಯಾವುದೇ ಪಾಪವಿಲ್ಲದೆ ಪರಿಪೂರ್ಣನಾಗಿರಬೇಕು. ಯಾರು ಅಂಥ ತಂದೆಯಾಗಿರಲು ಸಾಧ್ಯ ಅಂತ ಹೇಳ್ತಿಯಾ?— ಯೇಸು.
ಆದಾಮನಿಗೆ ಬದಲಾಗಿ ನಮಗೆ ತಂದೆಯಾಗಿರುವಂತೆ ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿಕೊಟ್ಟನು. ‘ಮೊದಲನೆಯ ಮಾನವನಾದ ಆದಾಮನು ಜೀವಿಸುವ ವ್ಯಕ್ತಿಯಾದನು. ಕೊನೆಯ ಆದಾಮನಾದರೋ ಜೀವ ಕೊಡುವ ಆತ್ಮಜೀವಿಯಾದನು’ ಎಂದು ಬೈಬಲ್ ತಿಳಿಸುತ್ತದೆ. ಈ ಮೊದಲನೆಯ ಆದಾಮನು ಯಾರು?— ದೇವರು ಮಣ್ಣಿನಿಂದ ಉಂಟುಮಾಡಿದ ಮನುಷ್ಯ. ಕೊನೆಯ ಆದಾಮನು ಯಾರು?— ಯೇಸು. ಬೈಬಲ್ ಈ ವಿಷಯವನ್ನು ಹೀಗೆ ಸ್ಪಷ್ಟಪಡಿಸುತ್ತದೆ: ‘ಮೊದಲನೆಯವನು [ಆದಾಮನು] ಭೂಮಿಯಿಂದ ಬಂದವನಾಗಿ ಮಣ್ಣಿನಿಂದ ಮಾಡಲ್ಪಟ್ಟವನು. ಎರಡನೆಯವನು [ಯೇಸು] ಸ್ವರ್ಗದಿಂದ ಬಂದವನು.’—1 ಕೊರಿಂಥ 15:45, 47; ಆದಿಕಾಂಡ 2:7.
ಸ್ವರ್ಗದಲ್ಲಿ ಆತ್ಮಜೀವಿಯಾಗಿದ್ದ ಯೇಸುವಿನ ಜೀವವನ್ನು ದೇವರು ಮರಿಯಳ ಗರ್ಭದೊಳಗೆ ಇಟ್ಟ ಕಾರಣ ಆದಾಮನ ಪಾಪ ಯೇಸುವಿನಲ್ಲಿ ಇರಲಿಲ್ಲ. ಅವನು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದನು. (ಲೂಕ 1:30-35) ಆ ಕಾರಣದಿಂದಲೇ ಯೇಸು ಹುಟ್ಟಿದಾಗ ಒಬ್ಬ ದೇವದೂತನು, “ಇಂದು ನಿಮಗಾಗಿ ಒಬ್ಬ ರಕ್ಷಕನು ಹುಟ್ಟಿದ್ದಾನೆ” ಎಂದು ಕುರುಬರಿಗೆ ತಿಳಿಸಿದನು. (ಲೂಕ 2:11) ಆಗಷ್ಟೇ ಭೂಮಿಯಲ್ಲಿ ಜನಿಸಿದ ಪುಟಾಣಿ ಯೇಸು ನಮ್ಮ ರಕ್ಷಕನಾಗಲು ಸಾಧ್ಯನಾ?— ಇಲ್ಲ ಅವನು ಬೆಳೆದು ದೊಡ್ಡವನಾಗಬೇಕಿತ್ತು. ಆಗಲೇ ಅವನು ‘ಎರಡನೇ ಆದಾಮನಾಗಲು’ ಸಾಧ್ಯವಿತ್ತು.
ನಿನಗೆ ಗೊತ್ತಾ, ರಕ್ಷಕನಾದ ಯೇಸು ನಮಗೆ “ನಿತ್ಯನಾದ ತಂದೆ” ಸಹ ಆಗುತ್ತಾನೆ. ಬೈಬಲಿನಲ್ಲಿ ಅವನನ್ನು ಹಾಗೆ ಕರೆಯಲಾಗಿದೆ. (ಯೆಶಾಯ 9:6, 7) ಹೌದು, ಪಾಪಮಾಡಿ ಅಪರಿಪೂರ್ಣನಾದ ಆದಾಮನ ಬದಲು ಪರಿಪೂರ್ಣನಾದ ಯೇಸು ನಮ್ಮ ತಂದೆಯಾಗಬಲ್ಲನು. ಎರಡನೆಯ ಆದಾಮನಾದ ಯೇಸುವನ್ನು ನಮ್ಮ ತಂದೆಯಾಗಿ ಸ್ವೀಕರಿಸುವ ಆಯ್ಕೆ ನಮ್ಮ ಮುಂದಿದೆ. ಆದರೂ ನಾವು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಯೇಸು ಸದಾ ಯೆಹೋವ ದೇವರ ಮಗನಾಗಿಯೇ ಇರುತ್ತಾನೆ.
ನಾವು ಯೇಸುವಿನ ಬಗ್ಗೆ ಕಲಿತುಕೊಳ್ಳುವಾಗ ಅವನನ್ನು ನಮ್ಮ ರಕ್ಷಕನಾಗಿ ಅಂಗೀಕರಿಸುತ್ತೇವೆ. ನಮಗೇಕೆ ರಕ್ಷಣೆ ಬೇಕು?— ಏಕೆಂದರೆ ಆದಾಮನಿಂದ ನಾವು ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ನಮಗೋಸ್ಕರ ಯೇಸು ತನ್ನ ಪರಿಪೂರ್ಣ ಜೀವವನ್ನು ಅರ್ಪಿಸಿದನಲ್ವಾ. ಅದನ್ನೇ ವಿಮೋಚನಾ ಮೌಲ್ಯ ಅಂತ ಕರೆಯಲಾಗುತ್ತದೆ. ನಮ್ಮ ಪಾಪಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ ಸಲುವಾಗಿ ಈ ವಿಮೋಚನಾ ಮೌಲ್ಯವನ್ನು ಯೆಹೋವನು ಒದಗಿಸಿದನು.—ಮತ್ತಾಯ 20:28; ರೋಮನ್ನರಿಗೆ 5:8; 6:23.
ಇಂಥ ಭಾರೀ ಉಡುಗೊರೆ ಕೊಟ್ಟಂಥ ಯೆಹೋವನನ್ನು ಮತ್ತು ಆತನ ಮಗನನ್ನು ಮರೆಯಲು ಸಾಧ್ಯವೇ?— ಅವರು ನೀಡಿದ ವಿಮೋಚನಾ ಮೌಲ್ಯವನ್ನು ಸ್ಮರಿಸುವುದಕ್ಕಾಗಿರುವ ಒಂದು ವಿಧಾನವನ್ನು ಯೇಸು ತನ್ನ ಶಿಷ್ಯರಿಗೆ ತೋರಿಸಿಕೊಟ್ಟನು. ಅದೇನೆಂದು ನೋಡೋಣ.
ಯೆರೂಸಲೇಮಿನ ಒಂದು ಮನೆ. ಅದರ ಮೇಲಂತಸ್ತಿನ ಕೋಣೆಯಲ್ಲಿ ನೀನು ಇದ್ದೀ ಅಂತ ಕಲ್ಪಿಸಿಕೋ. ರಾತ್ರಿಯಾಗಿದೆ. ಯೇಸು ಮತ್ತು ಅವನ ಅಪೊಸ್ತಲರು ಊಟದ ಮೇಜಿನ ಸುತ್ತ ಕೂತಿದ್ದಾರೆ. ಹುರಿದ ಕುರಿಮಾಂಸ, ರೊಟ್ಟಿಗಳು ಮತ್ತು ಕೆಂಪು ದ್ರಾಕ್ಷಾಮದ್ಯ ಅವರ ಮುಂದಿದೆ. ಅವರೆಲ್ಲಾ ಅಲ್ಲಿ ಒಂದು ವಿಶೇಷ ಭೋಜನ ಮಾಡುತ್ತಿದ್ದಾರೆ. ಏನು ವಿಶೇಷ ಇರಬಹುದು?—
ಯೆಹೋವನು ಮಾಡಿದ ಒಂದು ಮಹಾ ಅದ್ಭುತವನ್ನು ಜ್ಞಾಪಿಸಿಕೊಳ್ಳಲಿಕ್ಕಾಗಿ ಇಸ್ರಾಯೇಲ್ಯರು ಈ ಭೋಜನವನ್ನು ಪ್ರತಿವರ್ಷ ಏರ್ಪಡಿಸುತ್ತಿದ್ದರು. ಈಜಿಪ್ಟ್ನ ಗುಲಾಮಗಿರಿಯಿಂದ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡುವ ಸಮಯದಲ್ಲಿ ಯೆಹೋವನು ಹೀಗೆ ಅಪ್ಪಣೆಕೊಟ್ಟನು: ‘ಪ್ರತಿಯೊಂದು ಕುಟುಂಬಕ್ಕಾಗಿ ಒಂದು ಕುರಿಮರಿಯನ್ನು ಕೊಯ್ಯಿರಿ. ಅದರ ರಕ್ತವನ್ನು ನಿಮ್ಮ ಮನೆಗಳ ಬಾಗಿಲ ಚೌಕಟ್ಟಿಗೆ ಹಚ್ಚಿರಿ. ನಂತರ ನಿಮ್ಮ ಮನೆಯೊಳಗೆ ಹೋಗಿ ಕುರಿಮರಿಯ ಮಾಂಸವನ್ನು ಭೋಜನಮಾಡಿ.’
ಇಸ್ರಾಯೇಲ್ಯರು ಹಾಗೇ ಮಾಡಿದರು. ಅಂದು ರಾತ್ರಿ ದೇವರ ದೂತನು ಈಜಿಪ್ಟಿನ ಪ್ರತಿಯೊಂದು ಮನೆಯನ್ನು ಹಾದುಹೋದನು. ಹಾಗೇ ಹಾದುಹೋಗುವಾಗ ಯಾವ ಮನೆಗಳ ಬಾಗಿಲ ಚೌಕಟ್ಟಿನಲ್ಲಿ ರಕ್ತ ಹಚ್ಚಲಾಗಿರಲಿಲ್ಲವೋ ಆ ಮನೆಗಳಲ್ಲಿನ ಚೊಚ್ಚಲ ಮಕ್ಕಳನ್ನು ಸಂಹರಿಸಿದನು. ಆದರೆ ಬಾಗಿಲ ಚೌಕಟ್ಟಿನಲ್ಲಿ ರಕ್ತದ ಗುರುತಿದ್ದ ಮನೆಗಳನ್ನು ಹಾಗೇ ದಾಟಿಹೋದನು. ಯಾವ ಮಕ್ಕಳನ್ನು ಸಂಹರಿಸಲಿಲ್ಲ. ಯೆಹೋವನ ದೂತನು ಮಾಡಿದ ಈ ಕಾರ್ಯದಿಂದ ಈಜಿಪ್ಟ್ನ ರಾಜ ಫರೋಹ ಭಯದಿಂದ ತತ್ತರಿಸಿದನು. ಕೂಡಲೇ ಇಸ್ರಾಯೇಲ್ಯರಿಗೆ, ‘ನಿಮ್ಮನ್ನು ಬಿಡುಗಡೆಗೊಳಿಸುತ್ತಿದ್ದೇನೆ. ಈ ದೇಶದಿಂದ ಹೊರಟುಹೋಗಿ’ ಎಂದು ಅಪ್ಪಣೆ ನೀಡಿದನು. ಇಸ್ರಾಯೇಲ್ಯರೆಲ್ಲರೂ ಒಂಟೆ ಹಾಗೂ ಕತ್ತೆಗಳ ಮೇಲೆ ತಮ್ಮ ಸಾಮಾನುಗಳನ್ನು ಹೇರಿಕೊಂಡು ಅಲ್ಲಿಂದ ಹೊರಟರು.
ಹೀಗೆ ಯೆಹೋವನು ಮಾಡಿದ ಅದ್ಭುತದಿಂದ ಇಸ್ರಾಯೇಲ್ಯರು ಬಿಡುಗಡೆ ಹೊಂದಿದ್ದರು. ಈ ಅದ್ಭುತ ಕಾರ್ಯವನ್ನು ಇಸ್ರಾಯೇಲ್ಯರು ಮರೆಯದೇ ಸದಾ ನೆನಪಿಟ್ಟುಕೊಳ್ಳಬೇಕೆಂದು ಯೆಹೋವನು ಇಷ್ಟಪಟ್ಟನು. ಆದುದರಿಂದ, ಆ ರಾತ್ರಿ ಮಾಡಿದ ಭೋಜನದಂತೆ ಪ್ರತಿ ವರ್ಷವೂ ಭೋಜನವನ್ನು ಏರ್ಪಡಿಸಬೇಕು ಅಂತ ಅವರಿಗೆ ಆಜ್ಞಾಪಿಸಿದನು. ಇಸ್ರಾಯೇಲ್ಯರು ಈ ವಿಶೇಷ ಭೋಜನಕ್ಕೆ ಪಸ್ಕ ಎಂದು ಹೆಸರಿಟ್ಟರು. ಪಸ್ಕ ಅಂದರೆ ‘ದಾಟಿಹೋಗು’ ಅಂತ ಅರ್ಥ. ದೇವದೂತನು ಆ ರಾತ್ರಿ ರಕ್ತದ ಗುರುತುಗಳಿದ್ದ ಮನೆಗಳನ್ನು ದಾಟಿಹೋದನಲ್ವಾ.—ವಿಮೋಚನಕಾಂಡ 12:1-13, 24-27, 31.
ಆ ಘಟನೆಯನ್ನು ಜ್ಞಾಪಿಸಿಕೊಳ್ಳುವ ಸಲುವಾಗಿಯೇ ಯೇಸು ಮತ್ತು ಅವನ ಅಪೊಸ್ತಲರು ಮೇಲಂತಸ್ತಿನ ಕೋಣೆಯಲ್ಲಿ ಪಸ್ಕದ ಭೋಜನ ಮಾಡುತ್ತಿದ್ದರು. ಪಸ್ಕದ ಊಟವಾದ ಮೇಲೆ ಈಗ ಯೇಸು ಒಂದು ವಿಶೇಷ ಕಾರ್ಯ ಮಾಡುತ್ತಾನೆ. ಅದಕ್ಕೆ ಮುಂಚೆ ದ್ರೋಹಿ ಯೂದನನ್ನು ಹೊರಗೆ ಕಳುಹಿಸುತ್ತಾನೆ. ಆಮೇಲೆ ಉಳಿದಿದ್ದ ರೊಟ್ಟಿಗಳಲ್ಲಿ ಒಂದನ್ನು ತೆಗೆದುಕೊಂಡು ಪ್ರಾರ್ಥಿಸಿ ಅದನ್ನು ಮುರಿದು ಶಿಷ್ಯರಿಗೆ ದಾಟಿಸುತ್ತಾನೆ. ‘ತೆಗೆದುಕೊಳ್ಳಿರಿ, ತಿನ್ನಿರಿ. ಈ ರೊಟ್ಟಿ ನಿಮಗೋಸ್ಕರ ನಾನು ಅರ್ಪಿಸುವ ನನ್ನ ದೇಹವನ್ನು ಸೂಚಿಸುತ್ತದೆ’ ಅಂತ ವಿವರಿಸುತ್ತಾನೆ.
ಅದಾದ ಮೇಲೆ ಯೇಸು ಕೆಂಪು ದ್ರಾಕ್ಷಾಮದ್ಯದ ಬಟ್ಟಲು ತೆಗೆದುಕೊಳ್ಳುತ್ತಾನೆ. ಪುನಃ ಒಮ್ಮೆ ಪ್ರಾರ್ಥನೆ ಮಾಡಿ ಅದನ್ನು ಅಪೊಸ್ತಲರಿಗೆ ದಾಟಿಸುತ್ತಾನೆ. ‘ನೀವೆಲ್ಲರೂ ಇದನ್ನು ಕುಡಿಯಿರಿ. ಈ ದ್ರಾಕ್ಷಾಮದ್ಯ ನನ್ನ ರಕ್ತವನ್ನು ಸೂಚಿಸುತ್ತದೆ. ನಿಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ನನ್ನ ರಕ್ತವನ್ನು ಸುರಿಯಲಿದ್ದೇನೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ಈ ಆಚರಣೆಯನ್ನು ನೀವು ಮಾಡುತ್ತಾ ಇರಿ’ ಎಂದು ಹೇಳುತ್ತಾನೆ.—ಮತ್ತಾಯ 26:26-28; 1 ಕೊರಿಂಥ 11:23-26.
ನನ್ನನ್ನು ಜ್ಞಾಪಿಸಿಕೊಳ್ಳಲು ಇದನ್ನು ಮಾಡುತ್ತಾ ಇರಿ ಅಂತ ಯೇಸು ಶಿಷ್ಯರಿಗೆ ಹೇಳಿದ್ದನ್ನು ಗಮನಿಸಿದೆಯಾ?— ಅಂದರೆ ಅಂದಿನಿಂದ ಅವರು ಪಸ್ಕದ ಊಟ ಮಾಡಬೇಕಾಗಿರಲಿಲ್ಲ. ಬದಲಿಗೆ, ಯೇಸು ಹಾಗೂ ಅವನರ್ಪಿಸಿದ ವಿಮೋಚನಾ ಮೌಲ್ಯವನ್ನು ಜ್ಞಾಪಿಸಿಕೊಳ್ಳಲು ಈ ವಿಶೇಷ ಭೋಜನ ಮಾಡಬೇಕಾಗಿತ್ತು. ಈ ಭೋಜನವನ್ನು ‘ಕರ್ತನ ಸಂಧ್ಯಾ ಭೋಜನ’ ಎಂದೂ ಕರೆಯುತ್ತಾರೆ. ನಾವದನ್ನು ‘ಜ್ಞಾಪಕಾಚರಣೆ’ ಎಂದು ಕರೆಯುತ್ತೇವೆ. ಏಕೆ?— ಏಕೆಂದರೆ, ಆ ಆಚರಣೆ ಯೇಸು ಮತ್ತು ಯೆಹೋವ ದೇವರು ನಮ್ಮ ರಕ್ಷಣೆಗಾಗಿ ಮಾಡಿದ ಪ್ರೀತಿಯ ಕಾರ್ಯವನ್ನು ನೆನಪಿಸುತ್ತದೆ.
ಜ್ಞಾಪಕಾಚರಣೆಯಲ್ಲಿ ಬಳಸಲಾಗುವ ರೊಟ್ಟಿಯು ನಮಗೆ ಯೇಸುವಿನ ಪರಿಪೂರ್ಣ ದೇಹವನ್ನು ನೆನಪಿಸಬೇಕು. ನಾವು ನಿತ್ಯಜೀವ ಪಡೆಯಲೆಂದು ಅವನು ತನ್ನ ದೇಹವನ್ನೇ ಅರ್ಪಿಸಲು ಸಿದ್ಧನಿದ್ದನು. ಕೆಂಪು ದ್ರಾಕ್ಷಾಮದ್ಯ ಯಾವುದರ ನೆನಪು ಹುಟ್ಟಿಸಬೇಕು?— ಯೇಸು ಸುರಿಸಿದ ರಕ್ತದ ಮೌಲ್ಯವನ್ನು. ಅವನ ರಕ್ತ ಈಜಿಪ್ಟ್ನಲ್ಲಿನ ಪಸ್ಕದ ಕುರಿಮರಿಯ ರಕ್ತಕ್ಕಿಂತ ಅತ್ಯಮೂಲ್ಯ. ಏಕೆ ಗೊತ್ತಾ?— ಯಾಕೆಂದರೆ ಯೇಸು ಸುರಿಸಿದ ರಕ್ತವು ನಮ್ಮ ಪಾಪಗಳಿಗೆ ಕ್ಷಮೆಯನ್ನು ಕೊಡುತ್ತದೆಂದು ಬೈಬಲ್ ತಿಳಿಸುತ್ತದೆ. ನಮ್ಮ ಎಲ್ಲಾ ಪಾಪಗಳು ಅಳಿಸಿ ಹೋಗುವಾಗ ನಮಗೆ ಕಾಯಿಲೆಗಳೇ ಬರುವುದಿಲ್ಲ. ಮುದಿತನವೂ ಬರುವುದಿಲ್ಲ. ಮರಣವೂ ಇರುವುದಿಲ್ಲ. ಪ್ರತಿ ವರ್ಷ ಜ್ಞಾಪಕಾಚರಣೆಗೆ ಹಾಜರಾಗುವಾಗ ನಾವು ಈ ಎಲ್ಲಾ ವಿಷಯಗಳನ್ನು ನೆನಪಿಸಿಕೊಳ್ಳಬೇಕು.
ಜ್ಞಾಪಕಾಚರಣೆಗೆ ಹಾಜರಾಗುವ ಪ್ರತಿಯೊಬ್ಬರು ರೊಟ್ಟಿ ಹಾಗೂ ದ್ರಾಕ್ಷಾಮದ್ಯವನ್ನು ಸೇವಿಸಬಹುದಾ?— ಜ್ಞಾಪಕಾಚರಣೆಯ ರೊಟ್ಟಿಯನ್ನು ತಿನ್ನುವ ಹಾಗೂ ದ್ರಾಕ್ಷಾಮದ್ಯವನ್ನು ಕುಡಿಯುವವರಿಗೆ ಯೇಸು, ‘ನೀವು ನನ್ನ ರಾಜ್ಯದಲ್ಲಿ ರಾಜರಾಗಿರುವಿರಿ. ಸ್ವರ್ಗದಲ್ಲಿ ನನ್ನೊಂದಿಗೆ ಸಿಂಹಾಸನಗಳಲ್ಲಿ ಕುಳಿತುಕೊಳ್ಳುವಿರಿ’ ಎಂದು ಹೇಳಿದನು. (ಲೂಕ 22:19, 20, 30) ಅಂದರೆ, ಅವರು ಸ್ವರ್ಗಕ್ಕೆ ಹೋಗಿ ಯೇಸುವಿನೊಂದಿಗೆ ರಾಜರಾಗಿ ಆಳುತ್ತಾರೆ. ಹಾಗಾಗಿ ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿರುವವರು ಮಾತ್ರ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸಬೇಕು.
ಹಾಗಿದ್ದರೂ, ರೊಟ್ಟಿ ಹಾಗೂ ದ್ರಾಕ್ಷಾಮದ್ಯ ಸೇವಿಸದ ಜನರೂ ಜ್ಞಾಪಕಾಚರಣೆಗೆ ಜರೂರಾಗಿ ಹಾಜರಾಗಬೇಕು. ಏಕೆ ಗೊತ್ತಾ?— ಏಕೆಂದರೆ ಯೇಸು ಪ್ರತಿಯೊಬ್ಬ ಮಾನವನಿಗಾಗಿ ತನ್ನ ಜೀವತೆತ್ತಿದ್ದಾನೆ. ಈ ಮಹತ್ವಪೂರ್ಣ ಸಂಗತಿಯನ್ನು ಸದಾ ನೆನಪಿಸಿಕೊಳ್ಳುತ್ತೇವೆ ಅಂತ ನಾವು ಜ್ಞಾಪಕಾಚರಣೆಗೆ ಹಾಜರಾಗುವ ಮೂಲಕ ತೋರಿಸುತ್ತೇವೆ. ಹೀಗೆ ದೇವರು ನಮಗೆ ಕೊಟ್ಟಿರುವ ಬೆಲೆಬಾಳುವ ಉಡುಗೊರೆಗಾಗಿ ಕೃತಜ್ಞತೆ ತೋರಿಸುತ್ತೇವೆ.
ಯೇಸುವಿನ ವಿಮೋಚನಾ ಮೌಲ್ಯದ ಮಹತ್ವವನ್ನು ತೋರಿಸುವ ಶಾಸ್ತ್ರವಚನಗಳು ಯಾವುವೆಂದರೆ: 1 ಕೊರಿಂಥ 5:7; ಎಫೆಸ 1:7; 1 ತಿಮೊಥೆಯ 2:5, 6 ಮತ್ತು 1 ಪೇತ್ರ 1:18, 19.