ರಾಜ್ಯ ಸತ್ಯದ ಬೀಜಗಳನ್ನು ಬಿತ್ತುವುದು
“ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ.”—ಪ್ರಸಂಗಿ 11:6.
1. ಯಾವ ಅರ್ಥದಲ್ಲಿ ಇಂದು ಕ್ರೈಸ್ತರು ಬೀಜವನ್ನು ಬಿತ್ತುತ್ತಿದ್ದಾರೆ?
ಬೇ ಸಾಯವು ಪುರಾತನ ಹೀಬ್ರು ಸಮಾಜದಲ್ಲಿ ಒಂದು ಮುಖ್ಯ ವೃತ್ತಿಯಾಗಿತ್ತು. ಆದುದರಿಂದ ಮಾನವನೋಪಾದಿ ತನ್ನ ಇಡೀ ಜೀವನವನ್ನು ವಾಗ್ದತ್ತ ದೇಶದಲ್ಲಿಯೇ ಕಳೆದಿದ್ದ ಯೇಸು ತನ್ನ ಸಾಮ್ಯಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ವಿಷಯಗಳನ್ನೇ ಸೇರಿಸುತ್ತಿದ್ದನು. ಉದಾಹರಣೆಗೆ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ಅವನು ಬೀಜ ಬಿತ್ತುವುದಕ್ಕೆ ಹೋಲಿಸಿದನು. (ಮತ್ತಾಯ 13:1-9, 18-23; ಲೂಕ 8:5-15) ಬೇಸಾಯವೇ ಮುಖ್ಯ ವೃತ್ತಿಯಾಗಿರುವ ಒಂದು ಸಮಾಜದಲ್ಲಿ ಅಥವಾ ಬೇಸಾಯವು ಮಾಡಲ್ಪಡದೆ ಇರುವಂತಹ ಒಂದು ಸಮಾಜದಲ್ಲಿ ನಾವು ಜೀವಿಸುತ್ತಿರಬಹುದು. ಅದೇನೇ ಇರಲಿ, ಇಂದು ಸುವಾರ್ತೆಯನ್ನು ಸಾರುವ ಮೂಲಕ ಸತ್ಯದ ಬೀಜವನ್ನು ಬಿತ್ತುವುದು, ಕ್ರೈಸ್ತರು ಮಾಡುವ ಅತಿ ಪ್ರಾಮುಖ್ಯ ಕೆಲಸವಾಗಿದೆ.
2. ನಮ್ಮ ಸಾರುವ ಕೆಲಸ ಎಷ್ಟು ಪ್ರಾಮುಖ್ಯವಾಗಿದೆ, ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಇಂದು ಮಾಡಲಾಗುವ ಕೆಲವು ವಿಷಯಗಳು ಯಾವುವು?
2 ಈ ಅಂತ್ಯದ ಸಮಯದಲ್ಲಿ ಬೈಬಲ್ ಸತ್ಯದ ಬೀಜಗಳನ್ನು ಬಿತ್ತುವ ಕೆಲಸದಲ್ಲಿ ಪಾಲ್ಗೊಳ್ಳುವುದು ಒಂದು ಮಹಾ ಸುಯೋಗವಾಗಿದೆ. ಈ ಕೆಲಸದ ಮಹತ್ವವನ್ನು ರೋಮಾಪುರ 10:14, 15 ಚೆನ್ನಾಗಿ ವ್ಯಕ್ತಪಡಿಸುತ್ತದೆ: “ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.” ದೇವರು ಕೊಟ್ಟಿರುವ ಈ ನೇಮಕವನ್ನು ಒಳ್ಳೆಯ ಮನೋಭಾವದಿಂದ ಪೂರೈಸುತ್ತಾ ಮುಂದೆ ಸಾಗುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ಯೆಹೋವನ ಸಾಕ್ಷಿಗಳು ಬೈಬಲುಗಳನ್ನು ಮತ್ತು ಬೈಬಲ್ ಅಭ್ಯಾಸದ ಸಹಾಯಕಗಳನ್ನು 340 ಭಾಷೆಗಳಲ್ಲಿ ಉತ್ಪಾದಿಸುವುದರಲ್ಲಿ ಮತ್ತು ವಿತರಿಸುವುದರಲ್ಲಿಯೇ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಸಾಹಿತ್ಯವನ್ನು ತಯಾರಿಸಲು, ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿರುವ ಬ್ರಾಂಚ್ ಆಫೀಸುಗಳಲ್ಲಿ 18,000ಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರು ಕೆಲಸಮಾಡುತ್ತಿದ್ದಾರೆ. ಮತ್ತು ಈ ಬೈಬಲ್ ಸಾಹಿತ್ಯವನ್ನು ಲೋಕದಲ್ಲೆಲ್ಲಾ ವಿತರಿಸುವುದರಲ್ಲಿ ಸುಮಾರು 60 ಲಕ್ಷದಷ್ಟು ಜನರು ಪಾಲ್ಗೊಳ್ಳುತ್ತಿದ್ದಾರೆ.
3. ರಾಜ್ಯ ಸತ್ಯವನ್ನು ಬಿತ್ತುವುದರಿಂದ ಏನು ಪೂರೈಸಲ್ಪಡುತ್ತದೆ?
3 ಈ ಕಠಿಣ ಪ್ರಯಾಸಕ್ಕೆ ಸಿಕ್ಕಿರುವ ಪ್ರತಿಫಲವೇನು? ಕ್ರೈಸ್ತತ್ವದ ಆರಂಭದ ದಿನಗಳಲ್ಲಿ ಆದಂತೆಯೇ, ಇಂದು ಸಹ ಅನೇಕರು ಸತ್ಯವನ್ನು ಸ್ವೀಕರಿಸುತ್ತಿದ್ದಾರೆ. (ಅ. ಕೃತ್ಯಗಳು 2:41, 46, 47) ಹೀಗಿದ್ದರೂ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡ ರಾಜ್ಯ ಪ್ರಚಾರಕರ ದೊಡ್ಡ ಸಂಖ್ಯೆಗಿಂತಲೂ ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಯೇನೆಂದರೆ, ಈ ಮಹಾ ಸಾಕ್ಷಿಕಾರ್ಯವು ಯೆಹೋವನ ಹೆಸರಿನ ಪವಿತ್ರೀಕರಣ ಮತ್ತು ಒಬ್ಬನೇ ಸತ್ಯ ದೇವರೋಪಾದಿ ಆತನ ನಿರ್ದೋಷೀಕರಣಕ್ಕೆ ಸಹಾಯಮಾಡುತ್ತದೆ. (ಮತ್ತಾಯ 6:9) ಇನ್ನೂ ಹೆಚ್ಚಾಗಿ, ದೇವರ ವಾಕ್ಯದ ಜ್ಞಾನವು ಅನೇಕರ ಜೀವಿತಗಳನ್ನು ಸುಧಾರಿಸುತ್ತಿದೆ ಮತ್ತು ಇದು ಅವರನ್ನು ರಕ್ಷಣೆಗೆ ನಡೆಸಸಾಧ್ಯವಿದೆ.—ಅ. ಕೃತ್ಯಗಳು 13:47.
4. ಅಪೊಸ್ತಲರು ತಾವು ಸಾರುತ್ತಿದ್ದ ಜನರ ಕಡೆಗೆ ಎಷ್ಟರ ಮಟ್ಟಿಗೆ ಚಿಂತಿತರಾಗಿದ್ದರು?
4 ಸುವಾರ್ತೆಯಿಂದಾಗಿ ಇತರರು ನಿತ್ಯಜೀವವನ್ನು ಗಳಿಸುವ ಸಾಧ್ಯತೆಯಿರುವುದರಿಂದ, ಅದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಅಪೊಸ್ತಲರು ಪೂರ್ಣವಾಗಿ ಅರಿತಿದ್ದರು ಮತ್ತು ಅವರು ಯಾರಿಗೆ ಸಾರುತ್ತಿದ್ದರೋ ಅವರ ಕಡೆಗೆ ಇವರಿಗೆ ಆಳವಾದ ಭಾವನೆಗಳಿದ್ದವು. ಇದು ಅಪೊಸ್ತಲ ಪೌಲನ ಈ ಮಾತುಗಳಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ: “ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸಲೊನೀಕ 2:8) ಜನರಿಗಾಗಿ ಇಂತಹ ನೈಜವಾದ ಚಿಂತೆಯನ್ನು ತೋರಿಸುವುದರ ಮೂಲಕ ಪೌಲನು ಮತ್ತು ಇತರ ಅಪೊಸ್ತಲರು, ಯೇಸುವನ್ನು ಮಾತ್ರವಲ್ಲ ಈ ಜೀವರಕ್ಷಿಸುವ ಕೆಲಸದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿರುವ ಸ್ವರ್ಗೀಯ ದೇವದೂತರನ್ನು ಅನುಕರಿಸುತ್ತಿದ್ದರು. ರಾಜ್ಯ ಸತ್ಯದ ಬೀಜವನ್ನು ಬಿತ್ತುವುದರಲ್ಲಿ ದೇವರ ಈ ಸ್ವರ್ಗೀಯ ಸೇವಕರು ವಹಿಸುತ್ತಿರುವ ಮುಖ್ಯ ಪಾತ್ರಗಳನ್ನು ನಾವೀಗ ಪುನರ್ವಿಮರ್ಶಿಸೋಣ ಮತ್ತು ಅವರ ಉದಾಹರಣೆಯು ನಮ್ಮ ಪಾತ್ರವನ್ನು ಪೂರೈಸುವುದರಲ್ಲಿ ಹೇಗೆ ಉತ್ತೇಜನವನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಯೇಸು—ರಾಜ್ಯ ಸತ್ಯವನ್ನು ಬಿತ್ತುವವನು
5. ಯೇಸು ಭೂಮಿಯ ಮೇಲಿದ್ದಾಗ ಯಾವ ಕೆಲಸದಲ್ಲಿ ಪ್ರಾಮುಖ್ಯವಾಗಿ ನಿರತನಾಗಿದ್ದನು?
5 ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದನು. ತನ್ನ ಸಮಯದಲ್ಲಿದ್ದ ಜನರಿಗೆ ಪ್ರಾಪಂಚಿಕ ರೀತಿಯಲ್ಲಿ ಅನೇಕ ಒಳ್ಳೆಯ ವಸ್ತುಗಳನ್ನು ಕೊಡುವ ಸಾಮರ್ಥ್ಯ ಅವನಿಗಿತ್ತು. ದೃಷ್ಟಾಂತಕ್ಕೆ, ಅವನ ದಿನದಲ್ಲಿದ್ದ ಅನೇಕ ವೈದ್ಯಕೀಯ ತಪ್ಪಭಿಪ್ರಾಯಗಳನ್ನು ಅವನು ಸರಿಪಡಿಸಬಹುದಾಗಿತ್ತು ಅಥವಾ ಬೇರಾವುದೇ ಕ್ಷೇತ್ರದಲ್ಲಿ ಮಾನವ ತಿಳಿವಳಿಕೆಯನ್ನು ಅವನು ಹೆಚ್ಚಿಸಬಹುದಿತ್ತು. ಇಷ್ಟೆಲ್ಲ ಅವನಿಗೆ ಮಾಡಲು ಸಾಧ್ಯವಿತ್ತಾದರೂ, ತನ್ನ ಮುಖ್ಯ ನೇಮಕವು ಸುವಾರ್ತೆಯನ್ನು ಸಾರುವುದೇ ಆಗಿದೆ ಎಂಬುದನ್ನು ಅವನು ತನ್ನ ಶುಶ್ರೂಷೆಯ ಆರಂಭದಲ್ಲಿಯೇ ಸ್ಪಷ್ಟೀಕರಿಸಿದ್ದನು. (ಲೂಕ 4:17-21) ಅಷ್ಟೇ ಅಲ್ಲದೆ, ತನ್ನ ಶುಶ್ರೂಷೆಯ ಅಂತ್ಯದಲ್ಲಿ, ಅವನು ವಿವರಿಸಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ.” (ಯೋಹಾನ 18:37) ಆದುದರಿಂದ, ಯೇಸು ರಾಜ್ಯ ಸತ್ಯದ ಬೀಜಗಳನ್ನು ಬಿತ್ತುವುದರಲ್ಲಿಯೇ ನಿರತನಾದನು. ಅವನು ತನ್ನ ಕಾಲದಲ್ಲಿದ್ದ ಜನರಿಗೆ ನೀಡಬಹುದಾಗಿದ್ದ ಬೇರೆ ಯಾವುದೇ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ದೇವರ ಮತ್ತು ಆತನ ಉದ್ದೇಶಗಳ ಕುರಿತಾಗಿ ಕಲಿಸುವುದೇ ಪ್ರಾಮುಖ್ಯವಾಗಿತ್ತು.—ರೋಮಾಪುರ 11:33-36.
6, 7. (ಎ) ಯೇಸು ಸ್ವರ್ಗಕ್ಕೆ ಏರಿಹೋಗುವುದರ ಮುಂಚೆ ಯಾವ ಗಮನಾರ್ಹವಾದ ವಾಗ್ದಾನವನ್ನು ಮಾಡಿದನು, ಮತ್ತು ಅವನು ಆ ಮಾತನ್ನು ಇಂದು ಹೇಗೆ ಪೂರೈಸುತ್ತಿದ್ದಾನೆ? (ಬಿ) ಸಾರುವ ಕೆಲಸದ ಕಡೆಗೆ ಯೇಸುವಿಗಿದ್ದ ಮನೋಭಾವವು ನಿಮ್ಮ ಮೇಲೆ ವೈಯಕ್ತಿಕವಾಗಿ ಹೇಗೆ ಪರಿಣಾಮವನ್ನು ಬೀರುತ್ತದೆ?
6 ಯೇಸು ತಾನು ರಾಜ್ಯ ಸತ್ಯದ ಬೀಜಗಳನ್ನು ಬಿತ್ತುವವನೆಂದು ಅಪ್ರತ್ಯಕ್ಷವಾಗಿ ಸೂಚಿಸಿದನು. (ಯೋಹಾನ 4:35-38) ಪ್ರತಿಯೊಂದು ಸಂದರ್ಭದಲ್ಲೂ ಅವನು ಸುವಾರ್ತೆಯ ಬೀಜಗಳನ್ನು ಬಿತ್ತಿದನು. ಯಾತನಾ ಕಂಭದ ಮೇಲೆ ಅವನು ಸಾಯುತ್ತಿದ್ದಾಗ ಸಹ, ಭವಿಷ್ಯತ್ತಿನ ಭೂಪ್ರಮೋದವನದ ಕುರಿತಾದ ಸುವಾರ್ತೆಯನ್ನು ಪ್ರಚುರಪಡಿಸಿದನು. (ಲೂಕ 23:43) ಹೀಗಿದ್ದರೂ, ಸುವಾರ್ತೆಯು ಸಾರಲ್ಪಡಬೇಕೆಂಬ ಆಳವಾದ ಚಿಂತೆಯು, ಅವನು ಯಾತನಾ ಕಂಭದ ಮೇಲೆ ಸತ್ತಾಗಲೂ ಅಂತ್ಯವಾಗಲಿಲ್ಲ. ಅವನು ಸ್ವರ್ಗಕ್ಕೆ ಏರಿಹೋಗುವ ಮುಂಚೆ, ರಾಜ್ಯ ಸತ್ಯದ ಬೀಜಗಳನ್ನು ಬಿತ್ತುವುದನ್ನು ಮತ್ತು ಶಿಷ್ಯರನ್ನು ಮಾಡುವುದನ್ನು ಮುಂದುವರಿಸಬೇಕೆಂದು ಅಪೊಸ್ತಲರಿಗೆ ಆಜ್ಞೆಕೊಟ್ಟನು. ಅನಂತರ ಅವನು ಈ ಗಮನಾರ್ಹವಾದ ವಾಗ್ದಾನವನ್ನು ಮಾಡಿದನು: “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 28:19, 20.
7 ಈ ಮಾತುಗಳನ್ನು ಹೇಳುವುದರ ಮೂಲಕ, “ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ” (ಓರೆ ಅಕ್ಷರಗಳು ನಮ್ಮವು.) ಸುವಾರ್ತೆ ಸಾರುವ ಕೆಲಸವನ್ನು ಬೆಂಬಲಿಸುವ, ಮಾರ್ಗದರ್ಶಿಸುವ ಮತ್ತು ಅದನ್ನು ಸಂರಕ್ಷಿಸುವ ಕೆಲಸಕ್ಕೆ ಬದ್ಧನಾದನು. ಇಂದು ನಮ್ಮ ದಿನದ ವರೆಗೆ, ಯೇಸು ಸೌವಾರ್ತಿಕ ಕೆಲಸದಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದನ್ನು ಮುಂದುವರಿಸಿದ್ದಾನೆ. ಅವನು ನಮ್ಮ ನಾಯಕನಾಗಿದ್ದಾನೆ, ಅಂದರೆ ರಾಜ್ಯದ ಕುರಿತಾದ ಸತ್ಯವನ್ನು ಬಿತ್ತುವುದರಲ್ಲಿ ಮುಂದಾಳತ್ವವನ್ನು ವಹಿಸುತ್ತಿದ್ದಾನೆ. (ಮತ್ತಾಯ 23:10) ಕ್ರೈಸ್ತ ಸಭೆಯ ಶಿರಸ್ಸಾಗಿ, ಈ ಲೋಕವ್ಯಾಪಕ ಕೆಲಸಕ್ಕಾಗಿ ಯೇಸು ಯೆಹೋವನ ಮುಂದೆ ಜವಾಬ್ದಾರನಾಗಿದ್ದಾನೆ.—ಎಫೆಸ 1:22, 23; ಕೊಲೊಸ್ಸೆ 1:18.
ದೇವದೂತರು ಶುಭವರ್ತಮಾನವನ್ನು ಪ್ರಚುರಪಡಿಸುತ್ತಾರೆ
8, 9. (ಎ) ದೇವದೂತರು ಮಾನವ ಕಾರ್ಯಕಲಾಪಗಳಲ್ಲಿ ಯಾವ ರೀತಿಯಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದ್ದಾರೆ? (ಬಿ) ಯಾವ ಅರ್ಥದಲ್ಲಿ ನಾವು ದೇವದೂತರ ಮುಂದೆ ಪ್ರದರ್ಶನ ನೀಡುತ್ತಿದ್ದೇವೆ?
8 ಯೆಹೋವನು ಭೂಮಿಯನ್ನು ಸೃಷ್ಟಿಸಿದಾಗ, ದೇವದೂತರು “ಉತ್ಸಾಹಧ್ವನಿಯೆತ್ತುತ್ತಾ . . . ಆನಂದಘೋಷಮಾಡುತ್ತಾ” ಇದ್ದರು. (ಯೋಬ 38:4-7) ಅಂದಿನಿಂದ ಈ ಸ್ವರ್ಗೀಯ ಜೀವಿಗಳು ಮಾನವ ಕಾರ್ಯಕಲಾಪಗಳಲ್ಲಿ ಆಳವಾದ ಅಭಿರುಚಿಯನ್ನು ತೋರ್ಪಡಿಸಿದ್ದಾರೆ. ಮಾನವರಿಗೆ ದೈವಿಕ ಸಂದೇಶಗಳನ್ನು ರವಾನಿಸಲು ಯೆಹೋವನು ಅವರನ್ನು ಉಪಯೋಗಿಸಿದ್ದಾನೆ. (ಕೀರ್ತನೆ 103:20) ನಮ್ಮ ದಿನದಲ್ಲಿ ಸುವಾರ್ತೆಯನ್ನು ಸಾರುವ ಸಂಬಂಧದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಅಪೊಸ್ತಲ ಯೋಹಾನನಿಗೆ ನೀಡಲಾದ ಪ್ರಕಟನೆಯಲ್ಲಿ “ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು” ಕಂಡನು. ‘ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು—ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ . . . ಎಂದು ಮಹಾ ಶಬ್ದದಿಂದ ಹೇಳಿದನು.’—ಪ್ರಕಟನೆ 14:6, 7.
9 ಬೈಬಲು ದೇವದೂತರನ್ನು ‘ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳು’ ಎಂದು ವರ್ಣಿಸುತ್ತದೆ. (ಇಬ್ರಿಯ 1:14) ದೇವದೂತರು ತಮ್ಮ ನೇಮಿತ ಕೆಲಸಗಳನ್ನು ಅತ್ಯಾಸಕ್ತಿಯಿಂದ ಮಾಡುತ್ತಾ ಮುಂದುವರಿಯುತ್ತಿರುವಾಗ, ನಮ್ಮನ್ನು ಮತ್ತು ನಮ್ಮ ಕೆಲಸವನ್ನು ಗಮನಿಸುವ ಅವಕಾಶ ಅವರಿಗಿರುತ್ತದೆ. ತುಂಬ ಎದ್ದುಕಾಣುತ್ತಿರುವಂತಹ ಒಂದು ರಂಗಮಂಟಪದ ವೇದಿಕೆಯ ಮೇಲಿನಿಂದಲೋ ಎಂಬಂತೆ, ಸ್ವರ್ಗೀಯ ಸಭಿಕರ ಮುಂದೆ ನಾವು ನಮ್ಮ ನೇಮಿತ ಕೆಲಸವನ್ನು ಮುಂದುವರಿಸುತ್ತಿದ್ದೇವೆ. (1 ಕೊರಿಂಥ 4:9) ರಾಜ್ಯ ಸತ್ಯವನ್ನು ಬಿತ್ತುವುದರಲ್ಲಿ ನಾವು ಒಬ್ಬರೇ ಕೆಲಸ ಮಾಡುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅದೆಷ್ಟು ಮಹತ್ವದ ಮತ್ತು ರೋಮಾಂಚಕಾರಿಯಾದ ವಿಷಯವಾಗಿದೆ!
ನಾವು ನಮ್ಮ ಪಾತ್ರವನ್ನು ಅತ್ಯಾಸಕ್ತಿಯಿಂದ ನಿರ್ವಹಿಸುತ್ತಿದ್ದೇವೆ
10. ಪ್ರಸಂಗಿ 11:6ರಲ್ಲಿರುವ ಪ್ರಾಯೋಗಿಕ ಸಲಹೆಯು ನಮ್ಮ ಸೌವಾರ್ತಿಕ ಕೆಲಸದಲ್ಲಿ ಹೇಗೆ ಅನ್ವಯಿಸಲ್ಪಡಬಹುದು?
10 ಯೇಸು ಮತ್ತು ದೇವದೂತರು ನಮ್ಮ ಕೆಲಸದಲ್ಲಿ ಯಾಕೆ ಅಷ್ಟೊಂದು ಆಸಕ್ತರಾಗಿದ್ದಾರೆ? ಒಂದು ಕಾರಣವನ್ನು ಯೇಸು ಈ ಮಾತುಗಳಲ್ಲಿ ತಿಳಿಸಿದನು: “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.” (ಲೂಕ 15:10) ನಮಗೂ ಜನರಲ್ಲಿ ನಿಜವಾದ ಆಸಕ್ತಿಯಿದೆ. ಆದುದರಿಂದಲೇ, ರಾಜ್ಯ ಸತ್ಯವನ್ನು ಎಲ್ಲೆಲ್ಲೂ ಹಬ್ಬಿಸುವದಕ್ಕೆ ನಮ್ಮಿಂದ ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ. ಪ್ರಸಂಗಿ 11:6ರ ಮಾತುಗಳನ್ನು ನಮ್ಮ ಕೆಲಸಕ್ಕೂ ನಾವು ಅನ್ವಯಿಸಬಹುದು. ಬೈಬಲಿನ ಈ ವಚನವು ನಮಗೆ ಬುದ್ಧಿವಾದವನ್ನು ನೀಡುವುದು: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” ನೂರರಲ್ಲಿ ಅಥವಾ ಸಾವಿರದಲ್ಲಿ ಕೇವಲ ಒಬ್ಬನು ಮಾತ್ರ ನಮ್ಮ ಸಂದೇಶಕ್ಕೆ ಕಿವಿಗೊಡಬಹುದು, ಇತರರೆಲ್ಲರೂ ನಮ್ಮ ಸಂದೇಶವನ್ನು ನಿರಾಕರಿಸಬಹುದು ಎಂಬುದು ಒಪ್ಪತಕ್ಕದ್ದೇ. ಆದರೆ ದೇವದೂತರಂತೆ, “ಒಬ್ಬ ಪಾಪಿಯು” ಸಹ ರಕ್ಷಣೆಯ ಸಂದೇಶವನ್ನು ಸ್ವೀಕರಿಸುವಾಗ ನಮಗೆ ಸಂತೋಷವಾಗುತ್ತದೆ.
11. ಬೈಬಲ್ ಆಧಾರಿತ ಪ್ರಕಾಶನಗಳ ಉಪಯೋಗವು ಎಷ್ಟು ಪರಿಣಾಮಕಾರಿಯಾಗಿರಸಾಧ್ಯವಿದೆ?
11 ಸುವಾರ್ತೆಯನ್ನು ಸಾರುವುದರಲ್ಲಿ ಅನೇಕ ಸಂಗತಿಗಳು ಒಳಗೂಡಿವೆ. ಈ ಕೆಲಸವನ್ನು ಮಾಡಲು ಒಂದು ಮುಖ್ಯ ಸಹಾಯಕವು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುತ್ತಿರುವ ಬೈಬಲ್ ಆಧಾರಿತ ಪ್ರಕಾಶನಗಳಾಗಿವೆ. ಕೆಲವೊಂದು ವಿಧಗಳಲ್ಲಿ, ಈ ಪ್ರಕಾಶನಗಳು ಸಹ ಎಲ್ಲೆಲ್ಲೂ ಬಿತ್ತಲ್ಪಡುವ ಬೀಜಗಳಂತೆ ಇವೆ. ನಮ್ಮ ಪ್ರಕಾಶನಗಳು ಎಲ್ಲಿ ಯಶಸ್ಸನ್ನು ಪಡೆಯುವವು ಎಂಬುದು ನಮಗೆ ಗೊತ್ತಿಲ್ಲ. ಕೆಲವೊಮ್ಮೆ ಒಂದು ಪ್ರಕಾಶನವು ಒಬ್ಬ ವ್ಯಕ್ತಿಗೆ ಕೊಡಲ್ಪಟ್ಟಿದೆ ಎಂದಿಟ್ಟುಕೊಳ್ಳಿ. ಯಾರಿಗೆ ಕೊಡಲ್ಪಟ್ಟಿದೆಯೋ ಆ ವ್ಯಕ್ತಿಯು ಅದನ್ನು ಓದುವುದಕ್ಕೆ ಮೊದಲು ಆ ಪ್ರಕಾಶನವು ಇನ್ನೊಬ್ಬ ವ್ಯಕ್ತಿಯ ಕೈಸೇರಬಹುದು. ಆದುದರಿಂದ, ಯೋಗ್ಯ ಹೃದಯದ ಜನರ ಪ್ರಯೋಜನಕ್ಕಾಗಿ ಕೆಲವು ಸಂದರ್ಭಗಳಲ್ಲಿ ಈ ರೀತಿಯ ವಿಷಯಗಳು ಆಗುವಂತೆ ಯೇಸು ಮತ್ತು ದೇವದೂತರು ಘಟನೆಗಳನ್ನು ನಿರ್ದೇಶಿಸುತ್ತಿರಲೂಬಹುದು. ಜನರೊಂದಿಗೆ ಬಿಡಲಾಗಿರುವ ಸಾಹಿತ್ಯವನ್ನು ಉಪಯೋಗಿಸುತ್ತಾ ಯೆಹೋವನು ಅನಿರೀಕ್ಷಿತ ಮತ್ತು ಅದ್ಭುತಕರವಾದ ಫಲಿತಾಂಶಗಳನ್ನು ತರಬಲ್ಲನು ಎಂಬುದನ್ನು ದೃಷ್ಟಾಂತಿಸುವ ಈ ಕೆಳಗಿನ ಕೆಲವು ಅನುಭವಗಳನ್ನು ಪರಿಗಣಿಸಿರಿ.
ಸತ್ಯ ದೇವರ ಕೆಲಸ
12. ಯೆಹೋವನ ಕುರಿತಾಗಿ ತಿಳಿದುಕೊಳ್ಳಲು ಒಂದು ಹಳೆಯ ಪತ್ರಿಕೆಯು ಒಂದು ಕುಟುಂಬಕ್ಕೆ ಹೇಗೆ ಸಹಾಯಮಾಡಿತು?
12 ಇಸವಿ 1953ರಲ್ಲಿ, ರಾಬರ್ಟ್, ಲೈಲ ಮತ್ತು ಅವರ ಮಕ್ಕಳು ತಾವು ವಾಸಿಸುತ್ತಿದ್ದ ದೊಡ್ಡ ಪಟ್ಟಣದಿಂದ ಅಮೆರಿಕದ ಪೆನ್ಸಿಲ್ವೆನಿಯಾದ ಗ್ರಾಮೀಣ ಪ್ರದೇಶದಲ್ಲಿರುವ ಪಾಳುಬಿದ್ದಿದ್ದ ಹಳೇ ಹೊಲಮನೆ (ಫಾರ್ಮ್ಹೌಸ್)ಗೆ ಸ್ಥಳಾಂತರಿಸಿದರು. ಇಲ್ಲಿಗೆ ಬಂದ ಸ್ವಲ್ಪ ಸಮಯದ ನಂತರ ರಾಬರ್ಟ್, ಮಹಡಿಯ ಮೆಟ್ಟಿಲುಗಳ ಕೆಳಗೆ ಒಂದು ಬಚ್ಚಲುಮನೆಯನ್ನು ಕಟ್ಟಲು ನಿರ್ಧರಿಸಿದನು. ಹಲವಾರು ಹಲಗೆಗಳನ್ನು ತೆಗೆದುಹಾಕಿದ ನಂತರ, ಆ ಹಲಗೆಗಳ ಹಿಂದೆ ಗೋಡೆಯ ಹಿಂದುಗಡೆ ಇಲಿಗಳಿಂದ ಕತ್ತರಿಸಲಾಗಿದ್ದ ಕಾಗದದ ತುಂಡುಗಳನ್ನು, ಖಾಲಿ ಅಕ್ರೋಟದ ಚಿಪ್ಪುಗಳನ್ನು ಮತ್ತು ಬೇರೆ ಕಸದ ಚೂರುಗಳು ಶೇಖರವಾಗಿರುವುದನ್ನು ಕಂಡನು. ಅಲ್ಲಿಯೇ, ಅಂದರೆ ಈ ಎಲ್ಲ ಕಸದ ಮಧ್ಯೆ ಗೋಲ್ಡನ್ ಏಜ್ (ಎಚ್ಚರ!) ಪತ್ರಿಕೆಯ ಒಂದು ಪ್ರತಿಯು ಸಹ ಇತ್ತು. ಮಕ್ಕಳನ್ನು ಬೆಳೆಸುವ ವಿಷಯದ ಕುರಿತಾದ ಲೇಖನವನ್ನು ನೋಡಿದ ರಾಬರ್ಟನು ಅದರಲ್ಲಿ ವಿಶೇಷವಾಗಿ ಆಸಕ್ತನಾದನು. ಆ ಪತ್ರಿಕೆಯಲ್ಲಿ ಕೊಡಲಾಗಿದ್ದ ಸ್ಪಷ್ಟ, ಬೈಬಲ್ ಆಧಾರಿತ ಮಾರ್ಗದರ್ಶನದಿಂದ ಅವನು ಎಷ್ಟು ಪ್ರಭಾವಿತನಾದನೆಂದರೆ, ತಾವು “ಗೋಲ್ಡನ್ ಏಜ್ನ ಧರ್ಮವನ್ನು” ಸೇರಲಿದ್ದೇವೆಂದು ಅವನು ತನ್ನ ಹೆಂಡತಿಯಾದ ಲೈಲಳಿಗೆ ಹೇಳಿದನು. ಕೆಲವೇ ವಾರಗಳಲ್ಲಿ, ಯೆಹೋವನ ಸಾಕ್ಷಿಗಳು ಅವರ ಮನೆಬಾಗಿಲಿಗೆ ಬಂದರು. ಆದರೆ ತನ್ನ ಕುಟುಂಬಕ್ಕೆ “ಗೋಲ್ಡನ್ ಏಜ್ನ ಧರ್ಮ”ದಲ್ಲಿ ಮಾತ್ರವೇ ಆಸಕ್ತಿಯಿದೆಯೆಂದು ರಾಬರ್ಟ್ ಅವರಿಗೆ ಹೇಳಿದನು. ಗೋಲ್ಡನ್ ಏಜ್ ಪತ್ರಿಕೆಗೆ ಈಗ ಒಂದು ಹೊಸ ಶೀರ್ಷಿಕೆ ಇದೆಯೆಂದು ಸಾಕ್ಷಿಗಳು ಅವನಿಗೆ ವಿವರಿಸಿದರು. ಈ ಹೊಸ ಶೀರ್ಷಿಕೆಯು ಅವೇಕ್! (ಎಚ್ಚರ!) ಎಂದಾಗಿತ್ತು. ರಾಬರ್ಟ್ ಮತ್ತು ಲೈಲರು ಸಾಕ್ಷಿಗಳೊಂದಿಗೆ ಕ್ರಮವಾಗಿ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು ಮತ್ತು ಕ್ರಮೇಣವಾಗಿ ಅವರು ದೀಕ್ಷಾಸ್ನಾನ ಪಡೆದುಕೊಂಡರು. ಇವರು ಸತ್ಯವನ್ನು ಸ್ವೀಕರಿಸಿದ ನಂತರ, ಸತ್ಯದ ಬೀಜಗಳನ್ನು ತಮ್ಮ ಮಕ್ಕಳಲ್ಲಿ ಬಿತ್ತಿದರು ಮತ್ತು ಸಮೃದ್ಧವಾದ ಬೆಳೆಯನ್ನು ಕೊಯ್ದರು. ಇಂದು, ಈ ಕುಟುಂಬದಲ್ಲಿ 20ಕ್ಕಿಂತಲೂ ಹೆಚ್ಚು ಸದಸ್ಯರು ಯೆಹೋವ ದೇವರ ದೀಕ್ಷಾಸ್ನಾನಿತ ಸೇವಕರಾಗಿದ್ದಾರೆ. ಇದರಲ್ಲಿ ರಾಬರ್ಟ್ ಮತ್ತು ಲೈಲರ ಏಳು ಮಂದಿ ಮಕ್ಕಳೂ ಸೇರಿದ್ದಾರೆ.
13. ಪೋರ್ಟರೀಕೊದಲ್ಲಿರುವ ಒಬ್ಬ ದಂಪತಿಯು ಬೈಬಲಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಯಾವುದು ಪ್ರಚೋದಿಸಿತು?
13 ಸುಮಾರು 40 ವರ್ಷಗಳ ಹಿಂದೆ, ಪೋರ್ಟರೀಕೊದ ವಿವಾಹಿತ ದಂಪತಿಯಾದ ವಿಲ್ಯಮ್ ಮತ್ತು ಎಡಾಗೆ ಬೈಬಲನ್ನು ಅಭ್ಯಾಸಿಸುವುದರಲ್ಲಿ ಆಸಕ್ತಿಯೇ ಇರಲಿಲ್ಲ. ಯೆಹೋವನ ಸಾಕ್ಷಿಗಳು ತಮ್ಮ ಬಾಗಿಲನ್ನು ತಟ್ಟಿದಾಗಲೆಲ್ಲ, ಈ ದಂಪತಿಗಳು ಯಾರೂ ಮನೆಯಲ್ಲಿಲ್ಲ ಎಂಬಂತೆ ನಟಿಸುತ್ತಿದ್ದರು. ಒಂದು ದಿನ ವಿಲ್ಯಮ್ ತನ್ನ ಮನೆಯಲ್ಲಿ ಯಾವುದೋ ರಿಪೇರಿ ಕೆಲಸಕ್ಕೆ ಬೇಕಾಗಿದ್ದ ವಸ್ತುವನ್ನು ಕೊಂಡುಕೊಳ್ಳಲಿಕ್ಕಾಗಿ ಗುಜರಿ ಅಂಗಡಿಗೆ ಹೋದನು. ಅಲ್ಲಿಂದ ಹೊರಬರುತ್ತಿದ್ದಾಗ, ದೊಡ್ಡ ಕಸದ ಬುಟ್ಟಿಯಲ್ಲಿ ಉಜ್ವಲವಾಗಿ ಹೊಳೆಯುವ ಹಳದಿ ಬಣ್ಣದ ಒಂದು ಪುಸ್ತಕವನ್ನು ಅವನು ನೋಡಿದನು. ಆ ಪುಸ್ತಕದ ಹೆಸರು ಧರ್ಮ (ಇಂಗ್ಲಿಷ್) ಎಂದಾಗಿತ್ತು. ಇದು 1940ರಲ್ಲಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದ್ದ ಪುಸ್ತಕವಾಗಿತ್ತು. ವಿಲ್ಯಮ್ ಆ ಪುಸ್ತಕವನ್ನು ಮನೆಗೆ ಕೊಂಡೊಯ್ದನು. ಮತ್ತು ಸುಳ್ಳು ಧರ್ಮ ಹಾಗೂ ಸತ್ಯ ಧರ್ಮದ ನಡುವಣ ವ್ಯತ್ಯಾಸದ ಕುರಿತು ಆ ಪುಸ್ತಕದಲ್ಲಿ ಕೊಡಲ್ಪಟ್ಟಿದ್ದ ವಿಷಯವನ್ನು ಓದಿ ಅವನಿಗೆ ಆಶ್ಚರ್ಯವಾಯಿತು. ಮುಂದಿನ ಸಲ ಯೆಹೋವನ ಸಾಕ್ಷಿಗಳು ಅವರ ಮನೆಯನ್ನು ಭೇಟಿಯಾದಾಗ, ವಿಲ್ಯಮ್ ಮತ್ತು ಎಡಾ ಸಂತೋಷದಿಂದ ಅವರ ಸಂದೇಶವನ್ನು ಆಲಿಸಿದರು ಮತ್ತು ಅವರೊಂದಿಗೆ ಬೈಬಲನ್ನು ಅಭ್ಯಾಸಿಸುವುದಕ್ಕೆ ಆರಂಭಿಸಿದರು. ಕೆಲವು ತಿಂಗಳುಗಳ ನಂತರ, 1958ರಲ್ಲಿ ನಡೆದ ದೈವಿಕ ಚಿತ್ತ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅಂದಿನಿಂದ, ನಮ್ಮ ಕ್ರೈಸ್ತ ಸಹೋದರತ್ವದ ಭಾಗವಾಗುವಂತೆ ಅವರು 50ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಸಹಾಯಮಾಡಿದ್ದಾರೆ.
14. ಒಂದು ಅನುಭವದಲ್ಲಿ ತೋರಿಸಲಾದಂತೆ, ನಮ್ಮ ಬೈಬಲ್ ಆಧಾರಿತ ಸಾಹಿತ್ಯಕ್ಕೆ ಏನು ಮಾಡುವ ಸಾಧ್ಯತೆಯಿದೆ?
14 ಕಾರ್ಲ್ ಕೇವಲ 11 ವರ್ಷ ಪ್ರಾಯದವನಾಗಿದ್ದನು ಮತ್ತು ಸ್ವಲ್ಪ ತುಂಟನಾಗಿದ್ದನು. ಯಾವಾಗಲೂ ಒಂದಲ್ಲ ಒಂದು ಸಂಕಷ್ಟದಲ್ಲಿ ಸಿಕ್ಕಿಕೊಳ್ಳುತ್ತಿದ್ದನು. ಅವನ ತಂದೆ ಒಬ್ಬ ಜರ್ಮನ್ ಮೆತೊಡಿಸ್ಟ್ ಸೌವಾರ್ತಿಕನಾಗಿದ್ದನು. ದುಷ್ಟರು ಸತ್ತ ನಂತರ ನರಕದಲ್ಲಿ ಸುಡಲ್ಪಡುವರೆಂದು ಅವನ ತಂದೆ ಅವನಿಗೆ ಕಲಿಸಿದ್ದರು. ಹೀಗಾಗಿ ನರಕದ ಕುರಿತು ಕಾರ್ಲ್ಗೆ ತುಂಬ ಭಯವಿತ್ತು. ಇಸವಿ 1917ರ ಒಂದು ದಿನ ಕಾರ್ಲ್ ರಸ್ತೆಯಲ್ಲಿ ಒಂದು ಮುದ್ರಿತ ಹ್ಯಾಂಡ್ಬಿಲ್ (ಕರಪತ್ರ) ಬಿದ್ದಿರುವುದನ್ನು ಕಂಡನು ಮತ್ತು ಅದನ್ನು ಎತ್ತಿಕೊಂಡು ಓದಿದನು. ಅವನು ಓದುತ್ತಿದ್ದಂತೆ, ತತ್ಕ್ಷಣ ಅವನ ಕಣ್ಣುಗಳು ಈ ಪ್ರಶ್ನೆಯ ಮೇಲೆ ನೆಟ್ಟವು: “ನರಕವೆಂದರೇನು?” ಆ ಕಾಗದವು ನರಕದ ವಿಷಯದ ಮೇಲಿನ ಒಂದು ಸಾರ್ವಜನಿಕ ಭಾಷಣಕ್ಕೆ ಆಮಂತ್ರಣವಾಗಿತ್ತು. ಈ ಕಾರ್ಯಕ್ರಮವು, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧವಾಗಿರುವ ಬೈಬಲ್ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿತ್ತು. ಒಂದು ವರುಷದ ನಂತರ ಅಂದರೆ ಅನೇಕ ಬೈಬಲ್ ಅಭ್ಯಾಸಾವಧಿಗಳ ನಂತರ, ಕಾರ್ಲ್ ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಹೀಗೆ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬನಾದನು. 1925ರಲ್ಲಿ ಅವನಿಗೆ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಲ್ಲಿ ಕೆಲಸಮಾಡುವಂತೆ ಕರೆಯಲಾಯಿತು. ಅವನು ಈಗಲೂ ಇಲ್ಲಿ ಕೆಲಸಮಾಡುತ್ತಿದ್ದಾನೆ. ಎಂಬತ್ತು ವರ್ಷಗಳಷ್ಟು ದೀರ್ಘವಾದ ಕ್ರೈಸ್ತ ಜೀವನಗತಿಯು ರಸ್ತೆಯಲ್ಲಿ ಸಿಕ್ಕಿದ ಒಂದು ತುಂಡು ಕಾಗದದ ಮೂಲಕ ಆರಂಭವಾಯಿತು.
15. ಯೆಹೋವನು ತನ್ನ ಇಷ್ಟಾನುಸಾರ ಏನು ಮಾಡಬಲ್ಲನು?
15 ನಿಜ, ಈ ಅನುಭವಗಳಲ್ಲಿ ದೇವದೂತರು ನೇರವಾಗಿ ಒಳಗೂಡಿದ್ದರೊ ಮತ್ತು ಹಾಗಿರುವಲ್ಲಿ ಎಷ್ಟರ ಮಟ್ಟಿಗೆ ಎಂಬುದನ್ನು ತಿಳಿಯುವುದು ಮಾನವ ಗ್ರಹಿಕೆಗೆ ಮೀರಿರುವ ಸಂಗತಿಯಾಗಿದೆ. ಹೀಗಿದ್ದರೂ, ಯೇಸು ಮತ್ತು ಅವನ ದೇವದೂತರು ಸಾರುವ ಕೆಲಸದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿದ್ದಾರೆಂಬುದನ್ನು ಮತ್ತು ಯೆಹೋವನು ತನ್ನ ಇಷ್ಟಾನುಸಾರ ವಿಷಯಗಳನ್ನು ಮಾರ್ಗದರ್ಶಿಸಬಲ್ಲನೆಂಬ ವಿಷಯದಲ್ಲಿ ನಮಗೆ ಸ್ವಲ್ಪವೂ ಸಂದೇಹವಿರಬಾರದು. ನಾವು ಸಾಹಿತ್ಯವನ್ನು ನೀಡಿದ ಬಳಿಕ, ಅದು ಜನರಿಗೆ ಒಳ್ಳೇದನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಈ ಮೇಲಿನ ಅನುಭವಗಳು ಮಾತ್ರವಲ್ಲದೆ ಇನ್ನೆಷ್ಟೋ ಅನುಭವಗಳು ನಮಗೆ ತಿಳಿಸುತ್ತವೆ.
ನಮಗೆ ಒಂದು ನಿಕ್ಷೇಪವು ಕೊಡಲ್ಪಟ್ಟಿದೆ
16. ಎರಡನೆಯ ಕೊರಿಂಥ 4:7ರಲ್ಲಿರುವ ಮಾತುಗಳಿಂದ ನಾವು ಏನನ್ನು ಕಲಿಯಸಾಧ್ಯವಿದೆ?
16 ‘ಮಣ್ಣಿನ ಘಟಗಳಲ್ಲಿರುವ’ ನಿಕ್ಷೇಪದ ಕುರಿತು ಅಪೊಸ್ತಲ ಪೌಲನು ಮಾತಾಡಿದನು. ಈ ನಿಕ್ಷೇಪವು ದೇವರು ಕೊಟ್ಟಿರುವ ಸಾರುವ ನೇಮಕವಾಗಿದೆ. ಮತ್ತು ಆ ಮಣ್ಣಿನ ಘಟಗಳು, ಈ ನಿಕ್ಷೇಪವನ್ನು ಯೆಹೋವನು ಯಾರಿಗೆ ಕೊಟ್ಟಿದ್ದಾನೊ ಆ ಮನುಷ್ಯರೇ ಆಗಿದ್ದಾರೆ. ಈ ಮಾನವರು ಅಪರಿಪೂರ್ಣರು ಮಾತ್ರವಲ್ಲ ಸೀಮಿತ ಸಾಮರ್ಥ್ಯವುಳ್ಳವರು ಆಗಿರುವುದರಿಂದ ಇಂತಹ ಕೆಲಸವನ್ನು ಅವರಿಗೆ ಕೊಡಲ್ಪಡುವುದರ ಮೂಲಕ “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲ” ಎಂಬುದು ತೋರಿಬರುತ್ತದೆಂದು ಪೌಲನು ಮುಂದೆ ತಿಳಿಸುತ್ತಾನೆ. (2 ಕೊರಿಂಥ 4:7) ಹೌದು, ನಮಗೆ ಕೊಡಲಾಗಿರುವ ಕೆಲಸವನ್ನು ಪೂರೈಸುವುದಕ್ಕೆ ನಮಗೆ ಅಗತ್ಯವಿರುವ ಶಕ್ತಿಯನ್ನು ಯೆಹೋವನು ಕೊಡುವನೆಂಬ ಭರವಸೆ ನಮಗಿರಸಾಧ್ಯವಿದೆ.
17. ರಾಜ್ಯ ಸತ್ಯದ ಬೀಜಗಳನ್ನು ಬಿತ್ತಿದಂತೆ ನಾವು ಏನನ್ನು ಎದುರಿಸಲಿಕ್ಕಿದ್ದೇವೆ, ಮತ್ತು ಹೀಗಿದ್ದರೂ ನಾವು ಒಂದು ಯೋಗ್ಯ ಮನೋಭಾವವನ್ನು ಏಕೆ ಕಾಪಾಡಿಕೊಳ್ಳಬೇಕು?
17 ಅನೇಕ ಸಲ ನಮಗೆ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಕೆಲವೊಂದು ಟೆರಿಟೊರಿಗಳಲ್ಲಿ ಕೆಲಸಮಾಡುವುದು ಕಷ್ಟಕರವಾಗಿರಬಹುದು ಅಥವಾ ಅನನುಕೂಲವಾದದ್ದಾಗಿರಬಹುದು. ಕೆಲವು ಟೆರಿಟೊರಿಗಳಲ್ಲಿರುವ ಜನರು ತೀರಾ ನಿರಾಸಕ್ತರಾಗಿರುವಾಗ, ಇನ್ನಿತರರು ಕಠಿನ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಇಂತಹ ಟೆರಿಟೊರಿಗಳಲ್ಲಿ ನಾವು ಬಹಳಷ್ಟು ಪ್ರಯತ್ನವನ್ನು ಮಾಡಿರುವುದಾದರೂ ಯಾವುದೇ ಯಶಸ್ಸು ಸಿಕ್ಕಿರಲಿಕ್ಕಿಲ್ಲ. ಆದರೆ ಜನರ ಜೀವಗಳು ಅಪಾಯದಲ್ಲಿರುವಾಗ ಈ ಎಲ್ಲಾ ಪ್ರಯತ್ನಗಳು ನಿಜಕ್ಕೂ ವ್ಯರ್ಥವಲ್ಲ. ನೀವು ಬಿತ್ತುವ ಬೀಜಗಳು ಜನರಿಗೆ ಈಗ ಸಂತೋಷವನ್ನು ಮತ್ತು ಭವಿಷ್ಯತ್ತಿನಲ್ಲಿ ನಿತ್ಯಜೀವವನ್ನು ಕೊಡಬಲ್ಲವು ಎಂಬುದನ್ನು ನೆನಪಿನಲ್ಲಿಡಿರಿ. ಕೀರ್ತನೆ 126:6ರ ಈ ಮಾತುಗಳು ಅನೇಕ ಸಲ ಸತ್ಯವಾಗಿ ರುಜುವಾಗಿವೆ: “ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.”
18. ನಾವು ನಮ್ಮ ಶುಶ್ರೂಷೆಯ ಕಡೆಗೆ ಸತತವಾದ ಗಮನವನ್ನು ಹೇಗೆ ಕೊಡಸಾಧ್ಯವಿದೆ, ಮತ್ತು ನಾವು ಏಕೆ ಈ ರೀತಿಯ ಗಮನವನ್ನು ಕೊಡಬೇಕು?
18 ರಾಜ್ಯ ಸತ್ಯದ ಬೀಜಗಳನ್ನು ಹೇರಳವಾಗಿ ಬಿತ್ತಲು ಸಿಗುವ ಪ್ರತಿಯೊಂದು ಸೂಕ್ತವಾದ ಅವಕಾಶವನ್ನು ನಾವು ಸದುಪಯೋಗಿಸೋಣ. ಬೀಜಗಳನ್ನು ನೆಟ್ಟು, ಅದಕ್ಕೆ ನೀರನ್ನು ಹೊಯ್ಯುವವರು ನಾವಾಗಿದ್ದರೂ ಅವುಗಳನ್ನು ಬೆಳೆಸುತ್ತಾ ಬರುವವನು ಯೆಹೋವ ದೇವರೇ ಆಗಿದ್ದಾನೆ ಎಂಬುದನ್ನು ನಾವೆಂದೂ ಮರೆಯದಿರೋಣ. (1 ಕೊರಿಂಥ 3:6, 7) ಹೀಗಿದ್ದರೂ, ಯೇಸು ಮತ್ತು ದೇವದೂತರು ಈ ಕೆಲಸದಲ್ಲಿ ತಮಗಿರುವ ಪಾತ್ರವನ್ನು ಪೂರೈಸುತ್ತಿರುವಂತೆಯೇ, ನಾವು ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ. (2 ತಿಮೊಥೆಯ 4:5) ನಾವು ನಮ್ಮ ಕಲಿಸುವಿಕೆಗೆ, ನಮ್ಮ ಮನೋಭಾವಕ್ಕೆ ಮತ್ತು ಶುಶ್ರೂಷೆಯಲ್ಲಿನ ಅತ್ಯುತ್ಸಾಹಕ್ಕೆ ಸತತವಾದ ಗಮನವನ್ನು ಕೊಡುತ್ತಾ ಇರೋಣ. ಯಾಕೆ? ಪೌಲನು ಹೀಗೆ ಉತ್ತರಿಸುತ್ತಾನೆ: “ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥೆಯ 4:16.
ನಾವು ಏನನ್ನು ಕಲಿತೆವು?
• ಯಾವ ವಿಧಗಳಲ್ಲಿ ನಮ್ಮ ಬಿತ್ತುವ ಕೆಲಸವು ಒಳ್ಳೆಯ ಫಲಿತಾಂಶಗಳನ್ನು ತರುತ್ತಿದೆ?
• ಯೇಸು ಕ್ರಿಸ್ತನು ಮತ್ತು ದೇವದೂತರು ಇಂದು ಸೌವಾರ್ತಿಕ ಕೆಲಸದಲ್ಲಿ ಹೇಗೆ ಒಳಗೂಡಿದ್ದಾರೆ?
• ರಾಜ್ಯ ಸತ್ಯವನ್ನು ಬಿತ್ತುವುದರಲ್ಲಿ ನಾವು ಏಕೆ ಉದಾರಿಗಳಾಗಿರಬೇಕು?
• ನಿರಾಸಕ್ತಿ ಅಥವಾ ವಿರೋಧವನ್ನು ಎದುರಿಸುವಾಗ, ಪಟ್ಟುಹಿಡಿದು ಮುಂದೆ ಸಾಗುವಂತೆ ಯಾವುದು ನಮ್ಮನ್ನು ಪ್ರಚೋದಿಸಬೇಕು?
[ಪುಟ 15ರಲ್ಲಿರುವ ಚಿತ್ರ]
ಪುರಾತನ ಇಸ್ರಾಯೇಲಿನಲ್ಲಿದ್ದ ವ್ಯವಸಾಯಗಾರರು ಮಾಡುತ್ತಿದ್ದಂತೆ, ಕ್ರೈಸ್ತರು ಇಂದು ರಾಜ್ಯ ಸತ್ಯದ ಬೀಜಗಳನ್ನು ಎಲ್ಲೆಲ್ಲೂ ಹೇರಳವಾಗಿ ಬಿತ್ತುತ್ತಾರೆ
[ಪುಟ 16, 17ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ಬೇರೆ ಬೇರೆ ರೀತಿಯ ಬೈಬಲ್ ಆಧಾರಿತ ಪ್ರಕಾಶನಗಳನ್ನು 340 ಭಾಷೆಗಳಲ್ಲಿ ಮುದ್ರಿಸುತ್ತಾರೆ ಮತ್ತು ವಿತರಿಸುತ್ತಾರೆ