ನಮಗೆ ಒಪ್ಪಿಸಲ್ಪಟ್ಟಿರುವ ನಿಕ್ಷೇಪ
1 ಅಪೊಸ್ತಲ ಪೌಲನು, ದೇವರು ತನಗೆ ಕೊಟ್ಟ ಸಾರುವ ನೇಮಕವನ್ನು ಅಮೂಲ್ಯವೆಂದು ಎಣಿಸಿದನು ಮತ್ತು ಅದನ್ನು “ನಿಕ್ಷೇಪ”ವೆಂದು ಕರೆದನು. (2 ಕೊರಿಂ. 4:7) ಆ ನೇಮಕವನ್ನು ಪೂರೈಸಲು ಅವನು ಕಷ್ಟತೊಂದರೆ ಮತ್ತು ಹಿಂಸೆಯನ್ನು ತಾಳಿಕೊಂಡನು. ತನಗೆ ಸಿಕ್ಕಿದ ಎಲ್ಲಾ ಅವಕಾಶಗಳಲ್ಲಿ ಅವನು ಅವಿರತವಾಗಿ ಸಾರಿದನು. ಅವನು ಭೂಮಾರ್ಗವಾಗಿಯೂ ಸಮುದ್ರಮಾರ್ಗವಾಗಿಯೂ ಅನೇಕ ಕಷ್ಟಕರ ಮತ್ತು ಅಪಾಯಕರವಾದ ಪ್ರಯಾಣಗಳನ್ನು ಕೈಗೊಂಡನು. ನಾವು ಪೌಲನನ್ನು ಅನುಕರಿಸುತ್ತಾ ನಮ್ಮ ಶುಶ್ರೂಷೆಯನ್ನು ಅಮೂಲ್ಯವಾಗಿ ಎಣಿಸುತ್ತೇವೆಂದು ಹೇಗೆ ತೋರಿಸಬಲ್ಲೆವು? (ರೋಮಾ. 11:13) ನಮ್ಮ ಶುಶ್ರೂಷೆಯು ಯಾವುದರೊಂದಿಗೂ ತುಲನೆಮಾಡಲಾಗದ ನಿಕ್ಷೇಪವಾಗಿರುವುದು ಏಕೆ?
2 ಉತ್ಕೃಷ್ಟವಾದ ನಿಕ್ಷೇಪ: ಭೂಸಂಬಂಧವಾದ ನಿಕ್ಷೇಪಗಳು ಹೆಚ್ಚಿನ ಸಂದರ್ಭಗಳಲ್ಲಿ ಮನೋವ್ಯಥೆ ಮತ್ತು ಕೇವಲ ಮಿತವಾದ ಅಥವಾ ತಾತ್ಕಾಲಿಕ ಪ್ರಯೋಜನಗಳನ್ನು ಮಾತ್ರ ತರುತ್ತವೆ. ಇನ್ನೊಂದು ಕಡೆ, ನಮ್ಮ ಶುಶ್ರೂಷೆಯಾದರೊ ನಮಗೂ ಇತರರಿಗೂ ಬಾಳುವಂತಹ ಆಶೀರ್ವಾದಗಳನ್ನು ತರುತ್ತದೆ. (1 ತಿಮೊ. 4:16) ಅದು ಪ್ರಾಮಾಣಿಕ ಜನರು ಯೆಹೋವನನ್ನು ತಿಳಿದುಕೊಳ್ಳುವಂತೆ, ತಮ್ಮ ಜೀವಿತಗಳಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವಂತೆ ಮತ್ತು ನಿತ್ಯಜೀವದ ನಿಜ ನಿರೀಕ್ಷೆಯನ್ನು ಪಡೆಯುವಂತೆ ಸಹಾಯಮಾಡುತ್ತದೆ. (ರೋಮಾ. 10:13-15) ನಮ್ಮ ಶುಶ್ರೂಷೆಯನ್ನು ಅತ್ಯಮೂಲ್ಯವಾಗಿ ಪರಿಗಣಿಸುವುದರ ಮೂಲಕ ನಾವು ಜೀವನದಲ್ಲಿ ಒಂದು ಸಂತೃಪ್ತಿಕರ ಉದ್ದೇಶ, ಏನನ್ನೊ ಸಾಧಿಸಿದ್ದೇವೆಂಬ ಅಳಿದುಹೋಗದ ಭಾವನೆ ಮತ್ತು ಭವಿಷ್ಯಕ್ಕಾಗಿ ಹರ್ಷಭರಿತ ನಿರೀಕ್ಷೆಯನ್ನು ಪಡೆದುಕೊಳ್ಳುತ್ತೇವೆ.—1 ಕೊರಿಂ. 15:58.
3 ನಿಮ್ಮ ನಿರೀಕ್ಷೆಯನ್ನು ಅಮೂಲ್ಯವಾದದ್ದಾಗಿ ಪರಿಗಣಿಸುತ್ತೀರೆಂದು ತೋರಿಸಿರಿ: ನಾವೊಂದು ವಿಷಯವನ್ನು ಎಷ್ಟು ಅಮೂಲ್ಯವೆಂದು ಎಣಿಸುತ್ತೇವೆ ಎಂಬುದನ್ನು ನಾವು ಅದಕ್ಕೋಸ್ಕರ ಏನೆಲ್ಲಾ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂಬುದರಿಂದ ತೋರಿಸುತ್ತೇವೆ. ಯೆಹೋವನನ್ನು ಸ್ತುತಿಸುವುದರಲ್ಲಿ ನಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುವುದು ಎಂತಹ ಒಂದು ವಿಶೇಷ ಗೌರವವಾಗಿದೆ! (ಎಫೆ. 5:16, 17) ನಾವು ಸಮಯವನ್ನು ಕಳೆಯುತ್ತಿರುವ ರೀತಿಯು, ನಮಗೆ ಭೌತಿಕ ಬೆನ್ನಟ್ಟುವಿಕೆಗಳಿಗಿಂತ ಆಧ್ಯಾತ್ಮಿಕ ವಿಷಯಗಳು ಹೆಚ್ಚು ಅಮೂಲ್ಯವಾಗಿವೆ ಎಂಬದನ್ನು ತೋರಿಸಬೇಕು. ಇತರರೊಂದಿಗೆ ಹಂಚಿಕೊಳ್ಳಲು ಬಹುಮೂಲ್ಯವಾದ ವಿಷಯವು ನಮ್ಮ ಬಳಿಯಿರುವುದರಿಂದ, ನಾವು ಅದನ್ನು ಉತ್ಸಾಹದಿಂದ ಸಾರುವೆವು ಮತ್ತು ನಮಗೆ ದೊರೆಯುವ ಪ್ರತಿಯೊಂದು ಸಂದರ್ಭದಲ್ಲೂ ಅದರ ಕುರಿತು ತಿಳಿಸಲು ಎಚ್ಚರವಾಗಿರುವೆವು.
4 ಬೆಲೆಕಟ್ಟಲಾಗದ ನಿಕ್ಷೇಪಗಳನ್ನು ಸಾಮಾನ್ಯವಾಗಿ ಅಡಗಿಸಿಡುವ ಬದಲಿಗೆ ಎಲ್ಲರೂ ನೋಡಿ ಆನಂದಿಸುವಂತಾಗಲು ಅದನ್ನು ಪ್ರದರ್ಶಿಸಲಾಗುತ್ತದೆ. ನಾವು ನಮ್ಮ ಶುಶ್ರೂಷೆಯನ್ನು ನಿಕ್ಷೇಪದೋಪಾದಿ ಎಣಿಸುವುದಾದರೆ, ಅದು ನಮ್ಮ ಜೀವನದ ಒಂದು ಪ್ರಧಾನ ಭಾಗವಾಗಿರುವುದು. (ಮತ್ತಾ. 5:14-16) ಕೃತಜ್ಞತೆ ತುಂಬಿರುವ ಹೃದಯಗಳೊಂದಿಗೆ ನಾವು ಯಾವಾಗಲೂ ಅಪೊಸ್ತಲ ಪೌಲನನ್ನು ಅನುಕರಿಸೋಣ ಮತ್ತು ನಮಗೆ ದೊರೆಯುವ ಪ್ರತಿಯೊಂದು ಸಂದರ್ಭದ ಸದುಪಯೋಗ ಮಾಡಿಕೊಳ್ಳುವ ಮೂಲಕ ನಮ್ಮ ಶುಶ್ರೂಷೆಯನ್ನು ನಿಕ್ಷೇಪದೋಪಾದಿ ನಿಜವಾಗಿ ಅಮೂಲ್ಯವೆಂದೆಣಿಸುತ್ತೇವೆಂದು ತೋರಿಸೋಣ.