ಯೆಹೋವನು ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಶಕ್ತಿಯನ್ನು ಕೊಡುತ್ತಾನೆ
1 ಯೇಸುವಿನ ಎಲ್ಲ ಶಿಷ್ಯರಿಗೆ ಕ್ರೈಸ್ತ ಶುಶ್ರೂಷೆಯೆಂಬ ಪವಿತ್ರ ಸೇವೆಯ ಒಂದು ಅಮೂಲ್ಯವಾದ ಸುಯೋಗವು ವಹಿಸಲ್ಪಟ್ಟಿದೆ. (ಮತ್ತಾ. 24:14; 28:19, 20) ಆದರೆ, ಮಾನವ ಅಪರಿಪೂರ್ಣತೆ ಮತ್ತು ಈ ವಿಷಯಗಳ ವ್ಯವಸ್ಥೆಯ ಒತ್ತಡಗಳು ಕೆಲವೊಮ್ಮೆ, ನಾವು ತೀರ ಅಸಮರ್ಥರಾಗಿದ್ದೇವೆಂದು ವೀಕ್ಷಿಸುವಂತೆ ನಮ್ಮನ್ನು ಮಾಡಬಹುದು.
2 ಇದು ಸಂಭವಿಸುವಾಗ, ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಬರೆದಂತಹ ಒಂದು ಪತ್ರದಿಂದ ನಾವು ಸಾಂತ್ವನ ಪಡೆದುಕೊಳ್ಳಸಾಧ್ಯವಿದೆ. ಅವನು ಬರೆದುದು: “ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.” (2 ಕೊರಿಂ. 4:7) “ನಾವು . . . ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ [“ಬಿಟ್ಟುಕೊಡುವುದಿಲ್ಲ,” NW]” ಎಂಬ ಭರವಸೆ ಪೌಲನಿಗಿತ್ತು. (2 ಕೊರಿಂ. 4:1) ನಮ್ಮಲ್ಲಿ ಪ್ರತಿಯೊಬ್ಬರಿಗೂ—ಅಭಿಷಿಕ್ತರಾಗಿರಲಿ ಅಥವಾ “ಬೇರೆ ಕುರಿಗಳ”ವರಾಗಿರಲಿ—ಸುವಾರ್ತೆಯನ್ನು ಪ್ರಕಟಿಸುತ್ತಾ ಇರುವುದು ಮತ್ತು “ಬಿಟ್ಟುಕೊಡ”ದೆ ಇರುವುದು ಒಂದು ಪಂಥಾಹ್ವಾನವಾಗಿದೆ, ನಿಜ. “ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಶಕ್ತಿಯನ್ನು” ಒದಗಿಸುವ ದೇವರಿಂದ ನಮಗೆ ಬಲದ ಅಗತ್ಯವಿದೆ.—ಯೋಹಾ. 10:16; 2 ಕೊರಿಂ. 4:7ಬಿ, NW.
3 ಪ್ರೋತ್ಸಾಹಕರವಾಗಿ, ಅನೇಕ ಸಾಕ್ಷಿಗಳು ಕಟು ವಿರೋಧ, ಗಂಭೀರವಾದ ಆರೋಗ್ಯ ಸಮಸ್ಯೆಗಳು, ಅಥವಾ ಸೀಮಿತ ಹಣಕಾಸಿನೊಂದಿಗೆ ಹೆಣಗಾಡಬೇಕಾಗಿರುವುದಾದರೂ ಅವರು ಹುರುಪುಳ್ಳ ಸೌವಾರ್ತಿಕರಾಗಿದ್ದಾರೆ. ಸಾರುವ ನಮ್ಮ ನೇಮಕಕ್ಕೆ ಯೆಹೋವನ ಬೆಂಬಲವಿದೆಯೆಂಬುದನ್ನು ನಾವೆಲ್ಲರೂ ಗ್ರಹಿಸಬೇಕು. ಸಾರುವ ವಿಷಯದಲ್ಲಿನ ನಮ್ಮ ದೃಢನಿಶ್ಚಯವನ್ನು ನಿರುತ್ಸಾಹ ಅಥವಾ ಭಯವು ದುರ್ಬಲಗೊಳಿಸುವಂತೆ ಬಿಡುವ ಬದಲಿಗೆ, ನಾವು “ಕರ್ತನಲ್ಲಿ ಮತ್ತು ಆತನ ಬಲದ ಪರಾಕ್ರಮದಲ್ಲಿ ಶಕ್ತಿಯನ್ನು ಪಡೆದುಕೊಳ್ಳುತ್ತಾ” (NW) ಹೋಗೋಣ.—ಎಫೆ. 6:10; ಜ್ಞಾನೋ. 24:10.
4 ದೇವರ ಶಕ್ತಿಯನ್ನು ಪಡೆದುಕೊಳ್ಳುವ ವಿಧ: ದೇವರ ಸಹಾಯ ಮತ್ತು ಬಲಕ್ಕಾಗಿ ಬೇಡಿಕೊಳ್ಳುತ್ತಾ, ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಿರಿ. (ರೋಮಾ. 12:12; ಫಿಲಿ. 4:6, 7) ಅನಂತರ, ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಶಕ್ತಿಯನ್ನು ಒದಗಿಸಲಿಕ್ಕಾಗಿ ನಿಮ್ಮ ಸಂಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸೆಯಿಡಿರಿ. (ಜ್ಞಾನೋ. 3:5) ನಮ್ಮ ಪತ್ರಿಕೆಗಳಲ್ಲಿರುವ ಆಧುನಿಕ ದಿನದ ಜೀವನ ಕಥೆಗಳನ್ನು ಓದಿರಿ, ಯಾಕಂದರೆ ಸಂಕಷ್ಟಗಳನ್ನು ತಾಳಿಕೊಳ್ಳಲು ಯೆಹೋವನು ಇಂದು ತನ್ನ ಸೇವಕರಿಗೆ ಸಹಾಯಮಾಡುತ್ತಿದ್ದಾನೆಂಬ ರುಜುವಾತನ್ನು ಅವು ಕೊಡುತ್ತವೆ. ಸಭೆಯಲ್ಲಿರುವ ಸಹೋದರರೊಂದಿಗೆ ನಿಕಟವಾಗಿ ಸಹವಾಸಿಸಿರಿ, ಮತ್ತು ಸಭಾ ಕೂಟಗಳಿಗೆ ಹೋಗುವುದನ್ನು ಬಿಟ್ಟುಬಿಡಬೇಡಿರಿ.—ರೋಮಾ. 1:11, 12; ಇಬ್ರಿ. 10:24, 25.
5 ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಮತ್ತು ರಾಜ್ಯ ಸಾರುವಿಕೆಯ ಅತಿ ಪ್ರಾಮುಖ್ಯವಾದ ಕೆಲಸವನ್ನು ಬಿಟ್ಟುಕೊಡದಂತೆ ನಮಗೆ ಸಹಾಯ ಮಾಡುವ ಯೆಹೋವನ ಶಕ್ತಿಯನ್ನು ಪಡೆದುಕೊಳ್ಳಲು ಅರ್ಹರಾಗುವ ಒಂದು ಸ್ಥಾನದಲ್ಲಿ ಇರುವಂತೆ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ನಾವು ಮಾಡುವಂತಾಗಲಿ.