ನಿಮ್ಮ ನೋಟಕ್ಷೇತ್ರದಾಚೆಗೆ ದೃಷ್ಟಿಹರಿಸಿರಿ!
ಒಳ್ಳೆಯ ಭೌತಿಕ ದೃಷ್ಟಿಶಕ್ತಿಯು ಒಂದು ಆಶೀರ್ವಾದವಾಗಿದೆ. ವಾಸ್ತವವಾಗಿ, ತಾವು ಹೊಂದಿರುವ ಕೆಲವೇ ವಸ್ತುಗಳು ದೃಷ್ಟಿಶಕ್ತಿಗಿಂತಲೂ ಹೆಚ್ಚು ಅಮೂಲ್ಯವಾಗಿವೆ ಎಂದು ಹೆಚ್ಚಿನ ಜನರು ಹೇಳುವರು. ಹಾಗಿದ್ದರೂ, ಕ್ರೈಸ್ತರಿಗೆ ಒಳ್ಳೆಯ ಭೌತಿಕ ದೃಷ್ಟಿಶಕ್ತಿಗಿಂತಲೂ ಭಾರಿ ಹೆಚ್ಚು ಮೌಲ್ಯದ್ದಾಗಿರುವ, ಅಪೊಸ್ತಲ ಪೌಲನಿಂದ ಉಲ್ಲೇಖಿಸಲ್ಪಟ್ಟಂತಹ ಒಂದು ರೀತಿಯ ದೃಷ್ಟಿಶಕ್ತಿಯಿದೆ. “ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ” ಎಂದು ಪೌಲನು ಬರೆದನು. (2 ಕೊರಿಂಥ 4:18) ನಿಜವಾಗಿಯೂ ಕಾಣದಿರುವಂಥ ವಿಚಾರಗಳನ್ನು ನೋಡುವಂತೆ ಒಬ್ಬನನ್ನು ಶಕ್ತನನ್ನಾಗಿ ಮಾಡುವಂಥ ತೀರ ವಿಶೇಷ ರೀತಿಯ ದೃಷ್ಟಿಯು ಅದಾಗಿರಲೇಬೇಕು! ಅತ್ಯುತ್ತಮವಾದ ಆತ್ಮಿಕ ದೃಷ್ಟಿಶಕ್ತಿಯೆಂದು ನಾವು ಅದನ್ನು ಕರೆಯಬಹುದು.
ಅಗತ್ಯವಿದೆ ಏಕೆ?
ಪ್ರಥಮ ಶತಮಾನದ ಕ್ರೈಸ್ತರು ಇಂತಹ ರೀತಿಯ ಆತ್ಮಿಕ ದೃಷ್ಟಿಶಕ್ತಿಯನ್ನು ಪಡೆಯುವ ನೈಜ ಅಗತ್ಯದಲ್ಲಿದ್ದರು. ಅಧಿಕ ಸಂಕಷ್ಟದ ಕೆಳಗೆ ಅವರು ತಮ್ಮ ಕ್ರೈಸ್ತ ಶುಶ್ರೂಷೆಯನ್ನು ನೆರವೇರಿಸುತ್ತಿದ್ದರು. ಪೌಲನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.”—2 ಕೊರಿಂಥ 4:8, 9.
ಅಂತಹ ಪರಿಸ್ಥಿತಿಗಳ ಹೊರತೂ, ನಂಬಿಗಸ್ತ ಶಿಷ್ಯರು ದೃಢರಾಗಿ ನಿಂತರು. ದೇವರಲ್ಲಿನ ಬಲವಾದ ನಂಬಿಕೆಯೊಂದಿಗೆ, ಅವರು ಪೌಲನು ಹೇಳಿದಂತೆ ಹೇಳಶಕ್ತರಾಗಿದ್ದರು: “ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.” ಆದರೂ, ಈ ದಿನೇದಿನೇ ನವೀಕರಿಸುವುದನ್ನು ಯಾವುದು ಸಾಧ್ಯಮಾಡಿತು? ಪೌಲನು ಇನ್ನೂ ಹೇಳಿದ್ದು: “ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ. ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.”—2 ಕೊರಿಂಥ 4:16-18.
ಸಮಸ್ಯೆಗಳು, ತೊಂದರೆಗಳು, ಹಿಂಸೆಗಳು, ಯಾವುದೇ ಸ್ವರೂಪದ ಕಷ್ಟಸಂಕಟಗಳು, ಅವರ ಮುಂದೆ ಇಡಲ್ಪಟ್ಟಿರುವ ವೈಭವಯುತವಾದ ಬಹುಮಾನದ ಕುರಿತಾದ ಅವರ ನೋಟವನ್ನು ಅಸ್ಪಷ್ಟಗೊಳಿಸುವಂತೆ ಅನುಮತಿಸಬಾರದೆಂದು ಪೌಲನು ತನ್ನ ಆತ್ಮಿಕ ಸಹೋದರರನ್ನು ಉತ್ತೇಜಿಸುತ್ತಿದ್ದನು. ಕ್ರೈಸ್ತ ಮಾರ್ಗಕ್ರಮದ ಸಂತೋಷಕರ ಪರಿಣಾಮದ ಮೇಲೆ ತಮ್ಮ ಕಣ್ಣುಗಳನ್ನು ಕೇಂದ್ರೀಕರಿಸುತ್ತಾ, ಅವರು ತಮ್ಮ ಪ್ರಸ್ತುತ ಪರಿಸ್ಥಿತಿಗಳ ಆಚೆ ದೃಷ್ಟಿಹರಿಸಬೇಕು. ಕದನದಲ್ಲಿ ಮುಂದುವರಿಯಲಿಕ್ಕಾಗಿರುವ ತಮ್ಮ ದೃಢಸಂಕಲ್ಪವನ್ನು ದಿನೇದಿನೇ ನವೀಕರಿಸಲು ಅದು ತಾನೇ ಅವರಿಗೆ ಸಹಾಯ ಮಾಡಿತ್ತು. ಇಂದು ಕ್ರೈಸ್ತರು ಅಂತಹ ಒಳ್ಳೆಯ ಆತ್ಮಿಕ ದೃಷ್ಟಿಶಕ್ತಿಯನ್ನು ಹೊಂದಿರುವುದು ಅಷ್ಟೇ ಅಗತ್ಯವಾಗಿದೆ.
ಪ್ರಸ್ತುತ ಇರುವ ಕಷ್ಟಸಂಕಟಗಳನ್ನು ಕ್ಷಣಿಕವಾದದ್ದಾಗಿ ದೃಷ್ಟಿಸಿರಿ!
ಅನಿವಾರ್ಯವಾಗಿ, ನಾವು ನೋಡಬಾರದೆಂದು ಇಚ್ಛಿಸುವಂತಹ ವಿಚಾರಗಳನ್ನು ನಾವು ದಿನಾಲೂ ನೋಡುತ್ತೇವೆ. ಕನ್ನಡಿಯೊಳಗೆ ನೋಡಿಕೊಳ್ಳುವಾಗ, ಶಾರೀರಿಕ ಅಪರಿಪೂರ್ಣತೆಗಳ ನಿರ್ದೇಶಕಗಳಾದ ಅನಪೇಕ್ಷಣೀಯ ಲೋಪದೋಷಗಳು ಸ್ಪಷ್ಟವಾಗಿ ಕಾಣಿಸುತ್ತವೆ. ದೇವರ ವಾಕ್ಯದ ಕನ್ನಡಿಯೊಳಗೆ ನಾವು ಇಣಿಕಿ ನೋಡುವಾಗ, ಸ್ವತಃ ನಮ್ಮಲ್ಲಿರುವ ಹಾಗೂ ಇತರರಲ್ಲಿರುವ ಆತ್ಮಿಕ ಲೋಪದೋಷಗಳನ್ನು ನಾವು ನೋಡುತ್ತೇವೆ. (ಯಾಕೋಬ 1:22-25) ಮತ್ತು ನಾವು ದೈನಂದಿನ ವಾರ್ತಾಪತ್ರಿಕೆ ಅಥವಾ ಟೆಲಿವಿಷನ್ ಪರದೆಯ ಕಡೆಗೆ ನೋಡುವಾಗ, ಅನ್ಯಾಯ, ಕ್ರೂರತ್ವ, ಮತ್ತು ದುರಂತಗಳ ವೃತ್ತಾಂತಗಳು ಆ ಕೂಡಲೆ ನಮ್ಮ ಗಮನಕ್ಕೆ ತರಲ್ಪಡುತ್ತವೆ ಮತ್ತು ದುಃಖವನ್ನು ಉಂಟುಮಾಡುತ್ತವೆ.
ನಾವು ನೋಡುವಂತಹ ವಿಚಾರಗಳ ಕಾರಣದಿಂದ ನಾವು ನಿರಾಶೆಗೊಳ್ಳುವಂತೆ ಅಥವಾ ಅಡ್ಡದಾರಿ ಹಿಡಿಯಲ್ಪಟ್ಟವರಾಗಿ ಪರಿಣಮಿಸಿ, ನಂಬಿಕೆಯಲ್ಲಿ ಕದಲಿಹೋಗಲಾರಂಭಿಸುವಂತೆ ಮಾಡಲು ಸೈತಾನನು ಇಷ್ಟಪಡುತ್ತಾನೆ. ಇದು ಸಂಭವಿಸುವುದರಿಂದ ನಾವು ಹೇಗೆ ತಡೆಗಟ್ಟಸಾಧ್ಯವಿದೆ? “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು” ಎಂದು ಅಪೊಸ್ತಲ ಪೌಲನು ಹೇಳಿದಾಗ, ಅವನಿಂದ ಶಿಫಾರಸ್ಸು ಮಾಡಲ್ಪಟ್ಟಂತೆ, ಯೇಸು ಕ್ರಿಸ್ತನಿಂದ ಇಡಲ್ಪಟ್ಟ ಮಾದರಿಯನ್ನು ನಾವು ಅನುಸರಿಸಬೇಕು. (1 ಪೇತ್ರ 2:21) ಕ್ರೈಸ್ತ ಜೀವಿತದ ಪ್ರತಿಯೊಂದು ಅಂಶದಲ್ಲಿ, ಯೇಸುವು ಪರಿಪೂರ್ಣ ಮಾದರಿಯಾಗಿದ್ದನು.
ಯೇಸುವನ್ನು ನಮ್ಮ ಆದರ್ಶದೋಪಾದಿ ಸೂಚಿಸುವುದರಲ್ಲಿ, ಯೇಸು ಕಷ್ಟಾನುಭವಿಸಿದನೆಂದು ಪೇತ್ರನು ವಿಶೇಷವಾಗಿ ಉಲ್ಲೇಖಿಸಿದನು. ವಾಸ್ತವವಾಗಿ, ಭೂಮಿಯಲ್ಲಿರುವಾಗ ಯೇಸು ಬಹಳವಾಗಿ ಕಷ್ಟಾನುಭವಿಸಿದನು. ಮಾನವಕುಲದ ಸೃಷ್ಟಿಯ ಸಮಯದಲ್ಲಿದ್ದ ಯೆಹೋವನ “ಶಿಲ್ಪಿ”ಯೋಪಾದಿ, ಮಾನವರು ಹೇಗಿರಬೇಕೆಂದು ದೇವರು ಉದ್ದೇಶಿಸಿದ್ದನೆಂದು ಆತನಿಗೆ ನಿಷ್ಕೃಷ್ಟವಾಗಿ ತಿಳಿದಿತ್ತು. (ಜ್ಞಾನೋಕ್ತಿ 8:30, 31) ಆದರೆ ಪಾಪ ಹಾಗೂ ಅಪರಿಪೂರ್ಣತೆಯು ಅವರಿಗೆ ಏನನ್ನು ಉಂಟುಮಾಡಿತ್ತೆಂಬುದನ್ನು ಆತನು ಈಗ ನೇರವಾಗಿ ನೋಡಿದನು. ದಿನಾಲೂ ಆತನು ನೋಡಿದನು ಮತ್ತು ಜನರ ಅಪರಿಪೂರ್ಣತೆಗಳು ಹಾಗೂ ಬಲಹೀನತೆಗಳೊಂದಿಗೆ ಆತನು ವ್ಯವಹರಿಸಬೇಕಿತ್ತು. ಅದು ಆತನಿಗೆ ಪರೀಕ್ಷಾತ್ಮಕವಾಗಿದ್ದಿರಬೇಕು.—ಮತ್ತಾಯ 9:36; ಮಾರ್ಕ 6:34.
ಇತರರ ಕಷ್ಟಸಂಕಟಗಳ ಹೊರತಾಗಿ, ಸ್ವತಃ ಯೇಸುವು ಕಷ್ಟಸಂಕಟಗಳನ್ನು ಅನುಭವಿಸಿದನು. (ಇಬ್ರಿಯ 5:7, 8) ಆದರೆ ಪರಿಪೂರ್ಣ ಆತ್ಮಿಕ ದೃಷ್ಟಿಶಕ್ತಿಯಿಂದ, ತನ್ನ ಯಥಾರ್ಥ ಮಾರ್ಗಕ್ರಮಕ್ಕಾಗಿರುವ ಅಮರ ಜೀವಿತಕ್ಕೇರಿಸಲ್ಪಡುವ ಪ್ರತಿಫಲವನ್ನು ಅವಲೋಕಿಸಲಿಕ್ಕಾಗಿ ಆತನು ಅವುಗಳ ಆಚೆ ದೃಷ್ಟಿಹರಿಸಿದನು. ತದನಂತರ ಮೆಸ್ಸೀಯ ಸಂಬಂಧಿತ ಅರಸನೋಪಾದಿ, ವ್ಯಥಿತ ಮಾನವಕುಲವನ್ನು ಅದರ ಕೀಳ್ಮಟ್ಟದ ಸ್ಥಿತಿಯಿಂದ, ಯೆಹೋವನು ಮೂಲತಃ ಉದ್ದೇಶಿಸಿದ್ದ ಪರಿಪೂರ್ಣತೆಗೆ ಏರಿಸುವ ಸುಯೋಗವನ್ನು ಆತನು ಹೊಂದಿರಸಾಧ್ಯವಿತ್ತು. ಅದೃಶ್ಯವಾದ ಭವಿಷ್ಯತ್ತಿನ ಈ ಪ್ರತೀಕ್ಷೆಗಳ ಮೇಲೆ ತನ್ನ ಕಣ್ಣನ್ನು ಕೇಂದ್ರೀಕರಿಸುವುದು, ಆತನು ಸತತವಾಗಿ ಕಂಡಂತಹ ಕಷ್ಟಸಂಕಟಗಳ ಹೊರತಾಗಿಯೂ ದೈವಿಕ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳುವಂತೆ ಆತನಿಗೆ ಸಹಾಯ ಮಾಡಿತು. ತದನಂತರ ಪೌಲನು ಬರೆದುದು: “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷ [“ಆನಂದ,” NW]ಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”—ಇಬ್ರಿಯ 12:2.
ಕಷ್ಟದೆಸೆಗಳು ಮತ್ತು ಪರೀಕ್ಷಾತ್ಮಕ ಸನ್ನಿವೇಶಗಳು, ತನ್ನನ್ನು ನಿರಾಶೆಗೊಳಿಸುವಂತೆ, ಅಡ್ಡದಾರಿ ಹಿಡಿಯಲ್ಪಟ್ಟವನಾಗಿ ಪರಿಣಮಿಸುವಂತೆ, ಅಥವಾ ತನ್ನ ನಂಬಿಕೆಯಲ್ಲಿ ಕದಲಿಹೋಗುವಂತೆ ಮಾಡಲು ಯೇಸು ಎಂದಿಗೂ ಅನುಮತಿಸಲಿಲ್ಲ. ಆತನ ಶಿಷ್ಯರೋಪಾದಿ, ನಾವು ಆತನ ಪ್ರಾಮಾಣಿಕ ಮಾದರಿಯನ್ನು ನಿಕಟವಾಗಿ ಅನುಸರಿಸಬೇಕು.—ಮತ್ತಾಯ 16:24.
ಅದೃಶ್ಯ ಶಾಶ್ವತ ವಿಚಾರಗಳ ಮೇಲೆ ಕೇಂದ್ರೀಕರಿಸಿರಿ!
ಯೇಸುವನ್ನು ತಾಳಿಕೊಳ್ಳುವಂತೆ ಶಕ್ತನನ್ನಾಗಿ ಮಾಡಿದ ವಿಷಯದ ಕುರಿತಾಗಿ ಮಾತಾಡುತ್ತಾ, “ನಮ್ಮ ನಂಬಿಕೆಯ ಪ್ರಮುಖ ನಿಯೋಗಿಯೂ ಪರಿಪೂರ್ಣನೂ ಆಗಿರುವ ಯೇಸುವಿನ ಕಡೆಗೆ ದೃಷ್ಟಿಯಿಟ್ಟು ನೋಡುವವರೋಪಾದಿ, ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ನಾವು ತಾಳ್ಮೆಯಿಂದ ಓಡೋಣ” ಎಂದು ಬರೆದಾಗ, ಪೌಲನು ನಮಗಾಗಿ ಆ ಮಾರ್ಗಕ್ರಮವನ್ನೂ ಸೂಚಿಸಿದನು. (ಇಬ್ರಿಯ 12:1, 2, NW) ಹೌದು, ಕ್ರೈಸ್ತ ಮಾರ್ಗಕ್ರಮವನ್ನು ಯಶಸ್ವಿಯಾಗಿ ಮತ್ತು ಸಂತೋಷಭರಿತವಾಗಿ ಓಡಲಿಕ್ಕಾಗಿ, ನಮ್ಮ ಮುಂದಿರುವ ವಿಚಾರಗಳ ಆಚೆ ನಾವು ತತ್ಕ್ಷಣವೇ ದೃಷ್ಟಿಹರಿಸಬೇಕು. ಆದರೆ ಯೇಸುವಿನ ಕಡೆಗೆ ನಾವು “ದೃಷ್ಟಿಯಿಟ್ಟು ನೋಡು”ವುದು ಹೇಗೆ, ಮತ್ತು ಅದು ನಮಗಾಗಿ ಏನನ್ನು ಮಾಡುವುದು?
ಒಂದು ಉದಾಹರಣೆಯೋಪಾದಿ, 1914ರಲ್ಲಿ ಯೇಸುವು ದೇವರ ರಾಜ್ಯದ ಅರಸನಾಗಿ ಪ್ರತಿಷ್ಠಾಪಿಸಲ್ಪಟ್ಟನು, ಮತ್ತು ಆತನು ಸ್ವರ್ಗದಿಂದ ಆಳಿಕೆ ನಡೆಸುತ್ತಾನೆ. ಇದೆಲ್ಲವೂ ನಮ್ಮ ಭೌತಿಕ ಕಣ್ಣುಗಳಿಗೆ ಅದೃಶ್ಯವಾಗಿದೆ ಎಂಬುದು ನಿಶ್ಚಯ. ಆದರೂ, ನಾವು ಯೇಸುವಿನ ಕಡೆಗೆ “ದೃಷ್ಟಿಯಿಟ್ಟು ನೋಡು”ವುದಾದರೆ, ಆತನು ಪ್ರಸ್ತುತ ಇರುವ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲಿಕ್ಕಾಗಿ ಮತ್ತು ಸೈತಾನನನ್ನು ಹಾಗೂ ದೆವ್ವ ಸೇನೆಗಳನ್ನು ಜಡತೆಯ ಬಂಧನಗಳೊಳಗೆ ದೂಡಲಿಕ್ಕಾಗಿ ಕ್ರಿಯೆಗೈಯಲು ಈಗ ಸಿದ್ಧನಾಗಿದ್ದಾನೆಂಬುದನ್ನು ಅವಲೋಕಿಸಲು, ನಮ್ಮ ಆತ್ಮಿಕ ದೃಷ್ಟಿಶಕ್ತಿಯು ನಮಗೆ ಸಹಾಯ ಮಾಡುವುದು. ಇನ್ನೂ ಹೆಚ್ಚಾಗಿ ದೃಷ್ಟಿಹರಿಸುವಲ್ಲಿ, ನಮ್ಮ ಆತ್ಮಿಕ ದೃಷ್ಟಿಯು ಅದ್ಭುತಕರವಾದ ಹೊಸ ಲೋಕವನ್ನು ಪ್ರಕಟಪಡಿಸುವುದು; ಅದರಲ್ಲಿ “ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 19:11-16; 20:1-3; 21:4.
ಆದುದರಿಂದ, ಪ್ರತಿ ದಿನ ನಾವು ಎದುರಿಸಬೇಕಾಗಿರಬಹುದಾದ ತಾತ್ಕಾಲಿಕ ಕಷ್ಟಸಂಕಟಗಳಿಂದ ಹೊರೆಹೊರಿಸಲ್ಪಟ್ಟವರಾಗಿರುವುದಕ್ಕೆ ಬದಲಾಗಿ, ನಿತ್ಯವಾಗಿರುವ ವಿಚಾರಗಳ ಮೇಲೆ ನಮ್ಮ ದಿಟ್ಟನೋಟವನ್ನು ಏಕೆ ಕೇಂದ್ರೀಕರಿಸಬಾರದು? ನಂಬಿಕೆಯ ಕಣ್ಣುಗಳಿಂದ, ಮಲಿನಗೊಂಡ ಈ ಭೂಮಿಯಲ್ಲಿರುವ ಅಸ್ವಸ್ಥತೆ ಮತ್ತು ಲೋಭದ ಆಚೆ, ಆರೋಗ್ಯಕರ, ಸಂತೋಷಭರಿತ, ಮತ್ತು ಪರಾಮರಿಸುವ ಜನರಿಂದ ತುಂಬಿರುವ ಪ್ರಮೋದವನವನ್ನು ಅವಲೋಕಿಸಲು ಏಕೆ ದೃಷ್ಟಿಹರಿಸಬಾರದು? ಶಾರೀರಿಕ ಮತ್ತು ಆತ್ಮಿಕ—ಎರಡೂ ರೀತಿಯ ಲೋಪದೋಷಗಳ ಆಚೆ ದೃಷ್ಟಿಹರಿಸಿ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪ್ರತಿಫಲದ ಮೂಲಕ ನಾವು ಅವುಗಳಿಂದ ಸದಾಕಾಲಕ್ಕೂ ಸ್ವತಂತ್ರರಾಗಿರುವುದರ ಕುರಿತು ಏಕೆ ಅವಲೋಕಿಸಬಾರದು? ಯುದ್ಧ, ದುಷ್ಕೃತ್ಯ, ಮತ್ತು ಹಿಂಸಾಕೃತ್ಯದಿಂದ ಹಿಂದೆಬಿಡಲ್ಪಟ್ಟ ಕಗ್ಗೊಲೆಯ ಆಚೆ ದೃಷ್ಟಿಹರಿಸಿ, ಹೊಸದಾಗಿ ಪುನರುತ್ಥಾನಹೊಂದಿದವರು ಯೆಹೋವನ ಶಾಂತಿ ಮತ್ತು ನೀತಿಯಲ್ಲಿ ಬೋಧಿಸಲ್ಪಡುವುದನ್ನು ಏಕೆ ನೋಡಬಾರದು?
ಇದಕ್ಕೆ ಕೂಡಿಸಿ, ಯೇಸುವಿನ ಕಡೆಗೆ “ದೃಷ್ಟಿಯಿಟ್ಟು ನೋಡು”ವುದರಲ್ಲಿ, ಅದೃಶ್ಯವಾಗಿರುವುದಾದರೂ ರಾಜ್ಯವು ಭೂಮಿಯ ಮೇಲಿರುವ ದೇವರ ಜನರ ನಡುವೆ ಈಗಾಗಲೆ ನೆರವೇರಿಸಿರುವ—ಐಕ್ಯ, ಶಾಂತಿ, ಪ್ರೀತಿ, ಸಹೋದರ ವಾತ್ಸಲ್ಯ, ಮತ್ತು ಆತ್ಮಿಕ ಸಮೃದ್ಧಿ—ವಿಷಯಗಳ ಮೇಲೆ ನಮ್ಮ ಆತ್ಮಿಕ ದೃಷ್ಟಿಶಕ್ತಿಯನ್ನು ಕೇಂದ್ರೀಕರಿಸುವುದು ಒಳಗೊಂಡಿದೆ. ದೈವಿಕ ಬೋಧನೆಯ ಮೂಲಕ ಐಕ್ಯರು (ಇಂಗ್ಲಿಷ್) ಎಂಬ ವಿಡಿಯೊವನ್ನು ನೋಡಿದ ಬಳಿಕ, ಜರ್ಮನಿಯ ಒಬ್ಬ ಕ್ರೈಸ್ತ ಸ್ತ್ರೀಯು ಬರೆದುದು: “ಲೋಕದಾದ್ಯಂತ ಅನೇಕ ಕ್ರೈಸ್ತ ಸಹೋದರರು ಮತ್ತು ಸಹೋದರಿಯರು ಈ ಕ್ಷಣದಲ್ಲಿಯೇ ಯೆಹೋವನನ್ನು ನಿಷ್ಠೆಯಿಂದ—ಸಾರ್ವಜನಿಕ ವಿರೋಧದ ಹೊರತಾಗಿಯೂ—ಸೇವಿಸುತ್ತಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಡಲು, ಈ ವಿಡಿಯೊ ನನಗೆ ಅತ್ಯಧಿಕವಾಗಿ ಸಹಾಯ ಮಾಡುವುದು. ಹಿಂಸಾಕೃತ್ಯ ಮತ್ತು ದ್ವೇಷದ ಒಂದು ಲೋಕದಲ್ಲಿ ನಮ್ಮ ಸಹೋದರ ಐಕ್ಯವು ಎಷ್ಟು ಅಮೂಲ್ಯವಾದದ್ದಾಗಿದೆ!”
ನೀವು ಸಹ ಯೆಹೋವನನ್ನು, ಯೇಸುವನ್ನು, ನಂಬಿಗಸ್ತ ದೇವದೂತರನ್ನು, ಮತ್ತು ನಿಮ್ಮ ಪಕ್ಷದಲ್ಲಿ ನಿಂತಿರುವ ಲಕ್ಷಾಂತರ ಮಂದಿ ಜೊತೆ ಕ್ರೈಸ್ತರನ್ನು “ನೋಡು”ತ್ತೀರೊ? ಹಾಗಿರುವಲ್ಲಿ, ನಿಮ್ಮನ್ನು ನಿರುತ್ಸಾಹದಲ್ಲಿ ಭದ್ರವಾಗಿ ಸಿಕ್ಕಿಹಾಕಿಸಸಾಧ್ಯವಿದ್ದು, ನೀವು ಕ್ರೈಸ್ತ ಸೇವೆಯಲ್ಲಿ “ಫಲರಹಿತ”ರಾಗಿ ಪರಿಣಮಿಸುವಂತೆ ಮಾಡುವ, ಈ ವಿಷಯಗಳ ವ್ಯವಸ್ಥೆಯ ಚಿಂತೆ”ಗಳಿಂದ ವಿಪರೀತವಾಗಿ ವ್ಯಾಕುಲಿತರಾಗುವುದಿಲ್ಲ. (ಮತ್ತಾಯ 13:22, NW) ಆದುದರಿಂದ ನಿಮ್ಮ ಆತ್ಮಿಕ ಕಣ್ಣುಗಳನ್ನು ದೇವರ ಸ್ಥಾಪಿತ ರಾಜ್ಯ ಮತ್ತು ಅದರ ಆಶೀರ್ವಾದ—ಪ್ರಸ್ತುತ ಮತ್ತು ಭವಿಷ್ಯತ್ತಿನ—ಗಳ ಮೇಲೆ ಕೇಂದ್ರೀಕರಿಸುತ್ತಾ, ಯೇಸುವಿನ ಕಡೆಗೆ ‘ದೃಷ್ಟಿಯಿಟ್ಟು ನೋಡಿರಿ.’
ಅದೃಶ್ಯವಾಗಿರುವುದನ್ನು ನೋಡಲು ಜೀವಿಸಿರಿ!
ದೇವರ ಶಾಶ್ವತ ಹೊಸ ಲೋಕ ಮತ್ತು ಇಂದಿನ ಚೂರುಚೂರಾಗಿ ಬೀಳುವ ಹಳೆಯ ಲೋಕದ ನಡುವಿನ ಸ್ಪಷ್ಟ ವ್ಯತಿರಿಕ್ತತೆಯನ್ನು ನೋಡಿ, ನಾವು ನಂಬಿಕೆಯ ಕಣ್ಣುಗಳ ಮೂಲಕವಾಗಿ ಮಾತ್ರವೇ ನೋಡಸಾಧ್ಯವಿರುವ ವಿಚಾರಗಳನ್ನು ಅಕ್ಷರಶಃ ಅವಲೋಕಿಸಲಿಕ್ಕಾಗಿ ಜೀವಿಸಲು ನಾವು ಅರ್ಹರಾಗಿ ಲೆಕ್ಕಿಸಲ್ಪಡುವಂತಹ ರೀತಿಯಲ್ಲಿ ನಮ್ಮನ್ನು ನಡಿಸಿಕೊಳ್ಳಲು ನಾವು ಪ್ರಚೋದಿಸಲ್ಪಡತಕ್ಕದ್ದು. ತಾವು ಸಾಯುವುದಕ್ಕೆ ಮೊದಲು ನೋಡಿದ್ದ ಲೋಕಕ್ಕಿಂತ ತೀರ ಭಿನ್ನವಾದ, ನೀತಿಯ ಪ್ರಮೋದವನ ಭೂಮಿಯನ್ನು ನೋಡಲಿಕ್ಕಾಗಿ ಅವರು ಎಚ್ಚರಗೊಳಿಸಲ್ಪಡುವಾಗ, ಪುನರುತ್ಥಾನಹೊಂದುವ ಸಹಸ್ರಾರು ಜನರು ತಾವು ಏನನ್ನು ನೋಡುತ್ತಿದ್ದಾರೊ ಅದನ್ನು ನಂಬುವುದನ್ನು ಕಷ್ಟಕರವಾಗಿ ಕಂಡುಕೊಳ್ಳುವರು. ಅವರನ್ನು ಅಭಿವಂದಿಸಲು, ದೇವರು ಮಾಡಿರುವ ವಿಷಯವನ್ನು ಅವರಿಗೆ ವಿವರಿಸಲು ನಾವು ಜೀವಂತರಾಗಿರುವುದರಲ್ಲಿರುವ ನಮ್ಮ ಆನಂದವನ್ನು ಊಹಿಸಿಕೊಳ್ಳಿರಿ!—ಯೋವೇಲ 2:21-27ನ್ನು ಹೋಲಿಸಿರಿ.
ಹೌದು, ಒಳ್ಳೆಯ ಆತ್ಮಿಕ ದೃಷ್ಟಿಶಕ್ತಿಯು ಎಷ್ಟು ಅಮೂಲ್ಯವಾಗಿದೆ, ಮತ್ತು ಅದನ್ನು ಚುರುಕಾಗಿಡುವುದು ಎಷ್ಟು ಅತ್ಯಾವಶ್ಯಕವಾಗಿದೆ! ವೈಯಕ್ತಿಕ ಬೈಬಲ್ ಅಭ್ಯಾಸ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ನಮ್ಮ ಬೈಬಲಾಧಾರಿತ ನಿರೀಕ್ಷೆಯ ಕುರಿತು ಇತರರೊಂದಿಗೆ ಮಾತಾಡುವುದು, ಮತ್ತು ಇವೆಲ್ಲವುಗಳಿಗಿಂತ ಮಿಗಿಲಾಗಿ, ದೈವಿಕ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುವುದರಲ್ಲಿ ಕ್ರಮವಾಗಿ ಒಳಗೂಡುತ್ತಿರುವ ಮೂಲಕ ನಾವು ಇದನ್ನು ಮಾಡಬಲ್ಲೆವು. ಇದು ನಮ್ಮ ನೋಟಕ್ಷೇತ್ರದಾಚೆಗಿರುವ ವಿಚಾರಗಳ ಕಡೆಗೆ ದೃಷ್ಟಿಹರಿಸುವಂತೆ ನಮ್ಮನ್ನು ಶಕ್ತರನ್ನಾಗಿಸುತ್ತಾ, ನಮ್ಮ ಆತ್ಮಿಕ ದೃಷ್ಟಿಯನ್ನು ಚುರುಕಾಗಿಯೂ ಸ್ಫುಟವಾಗಿಯೂ ಇಡುವುದು!