ಬೈಬಲಿನ ದೃಷ್ಟಿಕೋನ
ಬಂಧಿಸುವಂತಹ ಪ್ರೀತಿ
ಉತ್ತರ ಅಟ್ಲಾಂಟಿಕದಲ್ಲಿನ ಒಂದು ಭಾರಿ ಬಿರುಗಾಳಿಯು, 1978ರಲ್ಲಿ, ಕ್ವೀನ್ ಎಲಿಸಬೆತ್ 2 ಎಂಬ ಆಡಂಬರದ ಹಡಗನ್ನು ಅಪ್ಪಳಿಸಿತು. ಹತ್ತು ಮಾಳಿಗೆಯ ಕಟ್ಟಡದಷ್ಟು ಎತ್ತರದ ಅಲೆಗಳು ಹಡಗನ್ನು ರಭಸದಿಂದ ಅಪ್ಪಳಿಸಿ, ಅದನ್ನು ಒಂದು ಕಾರ್ಕಿನಂತೆ ಪುಟಿಸಿದವು. ಹಡಗು ಉಗ್ರವಾಗಿ ತೂಗಾಡುತ್ತಿದ್ದಂತೆ, ಪೀಠೋಪಕರಣಗಳು ಹಾಗೂ ಪ್ರಯಾಣಿಕರು ಎಲ್ಲ ದಿಕ್ಕಿಗೂ ಎಸೆಯಲ್ಪಟ್ಟರು. ಗಮನಾರ್ಹವಾಗಿ, 1,200 ಮಂದಿ ಪ್ರಯಾಣಿಕರಲ್ಲಿ ಅಲ್ಪ ಗಾಯಗಳು ಮಾತ್ರ ಆದವು. ಒಳ್ಳೆಯ ಯಂತ್ರಶಿಲ್ಪ, ಸಾಮಗ್ರಿಗಳು, ಮತ್ತು ನಿರ್ಮಾಣವು, ಹಡಗು ಒಡೆದುಹೋಗುವುದರಿಂದ ತಡೆಯಿತು.
ಶತಮಾನಗಳ ಹಿಂದೆ, ಒಂದು ಉಗ್ರಾವೇಶದ ಬಿರುಗಾಳಿಯ ಬಿಗಿಹಿಡಿತದಲ್ಲಿ ಮತ್ತೊಂದು ಹಡಗಿತ್ತು. ಅದರೊಳಗೆ ಅಪೊಸ್ತಲ ಪೌಲನು ಮತ್ತು ಇತರ 275 ಜನರೂ ಇದ್ದರು. ಬಿರುಗಾಳಿಯ ತೀವ್ರತೆಯಿಂದಾಗಿ ಹಡಗು ಚೂರುಚೂರಾಗಿ ಒಡೆದುಹೋಗುವುದೆಂದು ಹೆದರುತ್ತಾ, ನಾವಿಕರು ಈ ವ್ಯಾಪಾರಿ ಹಡಗಿನ ಒಡಲನ್ನು ರೂಪಿಸಿದ ಮರದ ಹಲಗೆಗಳನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು, ಹಡಗಿನ ತಳದಿಂದ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ “ಹೊರಜಿಗಳನ್ನು”—ಸರಪಣಿಗಳು ಇಲ್ಲವೆ ಹಗ್ಗಗಳು—ಸಾಗಿಸಿದರೆಂಬುದು ವ್ಯಕ್ತ. ಹಡಗಿನಲ್ಲಿದ್ದ ಪ್ರಯಾಣಿಕರೆಲ್ಲರು ರಕ್ಷಿಸಲ್ಪಟ್ಟರಾದರೂ ಹಡಗನ್ನು ರಕ್ಷಿಸಲಾಗಲಿಲ್ಲ.—ಅ. ಕೃತ್ಯಗಳು, ಅಧ್ಯಾಯ 27.
ಜೀವಿತದಲ್ಲಿನ ಪರೀಕ್ಷೆಗಳು ಕೆಲವೊಮ್ಮೆ, ನಾವು ದುರ್ದಮ್ಯ ಸಮುದ್ರಗಳಲ್ಲಿರುವ ಒಂದು ಹಡಗಿನಲ್ಲಿದ್ದೇವೊ ಎಂಬಂತೆ ಅನಿಸುವಂತೆ ಮಾಡಬಹುದು. ನಮ್ಮ ಪ್ರೀತಿಯನ್ನು ಪರಮಾವಧಿಯ ವರೆಗೆ ಪರೀಕ್ಷಿಸುತ್ತಾ, ಆತಂಕ, ನಿರಾಶೆ, ಮತ್ತು ಖಿನ್ನತೆಯ ಅಲೆಗಳು ನಮ್ಮ ಮೇಲೆ ಬೀಸಬಲ್ಲವು. ಅಂತಹ ಬಿರುಗಾಳಿಗಳನ್ನು ನಿಭಾಯಿಸಲು ಮತ್ತು ಒಡೆದುಹೋಗುವುದನ್ನು ತೊರೆಯಲು, ನಮಗೂ ಕೆಲವು ಹೊರಜಿಗಳು ಬೇಕಾಗಿವೆ.
ಬಿರುಗಾಳಿಗಳು ಏಳುವಾಗ
ಅಪೊಸ್ತಲ ಪೌಲನ ನಂಬಿಕೆ ಮತ್ತು ತಾಳ್ಮೆಯು ಬೈಬಲಿನಲ್ಲಿ ಚೆನ್ನಾಗಿ ನಮೂದಿಸಲ್ಪಟ್ಟಿದೆ. ಅವನು ಆರಂಭದ ಕ್ರೈಸ್ತ ಸಭೆಗಳ ಪರವಾಗಿ ಕಷ್ಟಪಟ್ಟು ಶ್ರಮಿಸಿದನು. (2 ಕೊರಿಂಥ 11:24-28) ಕರ್ತನ ಕೆಲಸದಲ್ಲಿನ ಅವನ ಸಾಧನೆಗಳು, ತನ್ನ ನೆರೆಯವರಿಗಾಗಿರುವ ಅವನ ತೀಕ್ಷ್ಣವಾದ ಪ್ರೀತಿ ಮತ್ತು ದೇವರೊಂದಿಗಿರುವ ಅವನ ಬಲವಾದ ಸಂಬಂಧಕ್ಕೆ ಸ್ಪಷ್ಟವಾದ ರುಜುವಾತನ್ನು ನೀಡುತ್ತವೆ. ಆದರೂ ಪೌಲನ ಜೀವಿತವು ಕಷ್ಟಗಳಿಂದ ಯಾವಾಗಲೂ ಮುಕ್ತವಾಗಿರಲಿಲ್ಲ. ಅಕ್ಷರಾರ್ಥಕವಾಗಿ ಮತ್ತು ಸಾಂಕೇತಿಕವಾಗಿ—ಎರಡೂ ವಿಧಗಳಲ್ಲೂ—ಆ ಅಪೊಸ್ತಲನು ಅನೇಕ ಬಿರುಗಾಳಿಗಳನ್ನು ನಿಭಾಯಿಸಿದನು.
ಪೌಲನ ದಿನದಲ್ಲಿ, ಹಡಗೊಂದು ದುರ್ದಮ್ಯವಾದ ಬಿರುಗಾಳಿಯನ್ನು ಎದುರಿಸಿದಾಗ, ಪ್ರಯಾಣಿಕರ ಹಾಗೂ ಹಡಗಿನ ಬದುಕಿ ಉಳಿಯುವಿಕೆಯು, ನಾವಿಕರ ಕೌಶಲದ ಮೇಲೆ ಅಷ್ಟೇ ಅಲ್ಲದೆ ಹಡಗು ಒಟ್ಟಾಗಿ ಹಿಡಿದಿಟ್ಟುಕೊಂಡ ವಿಧದ ಮೇಲೆ ಅವಲಂಬಿಸಿತು. ಆ ಅಪೊಸ್ತಲನು ಸಾಂಕೇತಿಕ ಬಿರುಗಾಳಿಗಳನ್ನು ಎದುರಿಸಿದಾಗಲೂ ಇದು ಸತ್ಯವಾಗಿತ್ತು. ಪೌಲನು ಶಾರೀರಿಕ ನಷ್ಟ, ಸೆರೆಮನೆವಾಸ, ಮತ್ತು ಹಿಂಸೆಯನ್ನು ನಿಭಾಯಿಸಿದ್ದರೂ, ಅವನ ಆತ್ಮಿಕ ಹಾಗೂ ಭಾವನಾತ್ಮಕ ಸ್ಥಿರತೆ ಮತ್ತು ಪ್ರೀತಿಸುವುದನ್ನು ಮುಂದುವರಿಸಲಿಕ್ಕಾಗಿದ್ದ ಅವನ ಸಾಮರ್ಥ್ಯವನ್ನು ಪಂಥಾಹ್ವಾನಿಸಿದ ಅತಿ ತೀಕ್ಷ್ಣವಾದ ಬಿರುಗಾಳಿಗಳು ಕ್ರೈಸ್ತ ಸಭೆಯೊಳಗಿಂದ ಬಂದವು.
ಉದಾಹರಣೆಗೆ, ಕೊರಿಂಥದ ನಗರದಲ್ಲಿನ ಸಭೆಯನ್ನು ಸ್ಥಾಪಿಸಲು, ಪೌಲನು ಒಂದೂವರೆ ವರ್ಷ ನಿರಾಯಸದಿಂದ ಶ್ರಮಿಸಿದನು. ಕೊರಿಂಥದವರೊಂದಿಗೆ ಅವನಿಗಾದ ಅನುಭವಗಳು, ಅವನು ಹಿಂಡಿಗಾಗಿ ಕೋಮಲ ಭಾವನೆಗಳನ್ನು ವಿಕಸಿಸಿಕೊಳ್ಳುವಂತೆ ಮಾಡಿದವು. ಅವರಿಗೆ ಒಬ್ಬ ತಂದೆಯಾಗಿರುವುದರ ಕುರಿತಾಗಿಯೂ ಪೌಲನು ತಾನೇ ಮಾತಾಡಿದನು. (1 ಕೊರಿಂಥ 4:15) ಆದರೂ, ಸಭೆಯ ಪರವಾಗಿ ಪ್ರೀತಿ ಮತ್ತು ಕಠಿನ ಕೆಲಸದ ವಿಷಯದಲ್ಲಿ ಅವನ ದಾಖಲೆಯ ಹೊರತೂ, ಕೊರಿಂಥದಲ್ಲಿದ್ದ ಕೆಲವರು ಪೌಲನ ಕುರಿತು ನಿಂದಾತ್ಮಕವಾಗಿ ಮಾತಾಡಿದರು. (2 ಕೊರಿಂಥ 10:10) ಸ್ವತ್ಯಾಗದ ವಿಧದಲ್ಲಿ ಅವನು ಮಾಡಿದ್ದ ಎಲ್ಲ ವಿಷಯಗಳ ನೋಟದಲ್ಲಿ, ಅದು ಎಷ್ಟು ಎದೆಗುಂದಿಸುವಂತಹದ್ದಾಗಿದ್ದಿರಬೇಕು!
ಪೌಲನ ವಿಪುಲವಾದ ಪ್ರೀತಿಯನ್ನು ಪಡೆದಿದ್ದವರು, ಹೇಗೆ ಇಷ್ಟೊಂದು ಕ್ರೂರಿಗಳೂ ಹೀನೈಸುವವರೂ ಆಗಿರಸಾಧ್ಯವಿತ್ತು? ಪೌಲನಿಗೆ ಬಿರುಗಾಳಿಯ ಹಿಡಿತದಲ್ಲಿರುವ ಒಂದು ಹಡಗಿನಂತೆ ಒಡೆದುಹೋಗುತ್ತಿರುವೆನೊ ಎಂಬ ಅನಿಸಿಕೆ ಆಗಿದ್ದಿರಬೇಕು. ಬಿಟ್ಟುಬಿಡಲು, ತನ್ನ ಗತಕಾಲದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದ್ದವೆಂದು ಭಾವಿಸಲು, ಇಲ್ಲವೆ ಕೋಪಿಸಿಕೊಳ್ಳಲು ಅವನಿಗೆ ಎಷ್ಟು ಸುಲಭವಾಗಿದ್ದಿರಬೇಕು! ಸ್ವಸ್ಥಚಿತ್ತತೆಯನ್ನು ಕಾಪಾಡಿಕೊಳ್ಳುವಂತೆ ಪೌಲನಿಗೆ ಯಾವುದು ಸಹಾಯಮಾಡಿತು? ನಿರಾಶೆಯ ಮೂಲಕ ಒಡೆದುಹೋಗುವುದರಿಂದ ಯಾವುದು ಅವನನ್ನು ತಡೆಯಿತು?
ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಪ್ರೀತಿ
ತನ್ನ ಬಲ ಹಾಗೂ ತನ್ನ ಪ್ರಚೋದನೆ—ಇವೆರಡರ—ಮೂಲದ ವಿಷಯವಾಗಿ ಪೌಲನು ತನ್ನ ಓದುಗರ ಮನಸ್ಸುಗಳಲ್ಲಿ ಯಾವ ಸಂದೇಹವನ್ನೂ ಬಿಡಲಿಲ್ಲ. ಅವನು ಬರೆದುದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ.” (2 ಕೊರಿಂಥ 5:14) ಬಲ ಹಾಗೂ ಪ್ರಚೋದನೆಯ ಸರ್ವೋತ್ಕೃಷ್ಟ ಉಗಮವನ್ನು ಪೌಲನು ಸೂಚಿಸಿದನು. ಒತ್ತಾಯಪಡಿಸುವ ಶಕ್ತಿಯು, “ಕ್ರಿಸ್ತನ ಪ್ರೀತಿ”ಯಾಗಿದೆ. ಈ ಶಾಸ್ತ್ರವಚನದ ಸಂಬಂಧದಲ್ಲಿ ಒಬ್ಬ ಬೈಬಲ್ ವಿದ್ವಾಂಸನು ಈ ಮುಂದಿನ ವೀಕ್ಷಣೆಯನ್ನು ಮಾಡಿದನು: “ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಯು, ನಮ್ಮನ್ನು ನಮ್ಮ ಶುಶ್ರೂಷೆಗೆ ಬಲವಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ ಎಂದು ಪೌಲನು ಹೇಳುವುದಿಲ್ಲ . . . ಅದು ಕೇವಲ ಅದರ ಅಂಶವಾಗಿದೆ. ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಯು, ನಮಗಾಗಿರುವ ಅವನ ಪ್ರೀತಿಯಿಂದ ಕೆರಳಿಸಲ್ಪಡುತ್ತದೆ ಮತ್ತು ಸತತವಾಗಿ ಪೋಷಿಸಲ್ಪಡುತ್ತದೆ.”—ಓರೆಅಕ್ಷರಗಳು ನಮ್ಮವು.
ಯಾತನಾ ಕಂಬದ ಮೇಲೆ ಒಂದು ಅಪಾರ ಯಾತನೆಯ ಮರಣಕ್ಕೆ ತನ್ನನ್ನು ಅಧೀನಪಡಿಸಿಕೊಳ್ಳುವ ಮೂಲಕ—ಹೀಗೆ ವಿಶ್ವಾಸವಿಡುವ ಎಲ್ಲ ಮಾನವಜಾತಿಯನ್ನು ರಕ್ಷಿಸಲು ತನ್ನ ಪರಿಪೂರ್ಣ ಮಾನವ ಜೀವವನ್ನು ಒಂದು ಪ್ರಾಯಶ್ಚಿತ್ತದೋಪಾದಿ ಕೊಡುತ್ತಾ—ಯೇಸು ಪ್ರದರ್ಶಿಸಿದ ಪ್ರೀತಿಯು, ಕ್ರಿಸ್ತನ ಹಾಗೂ ಸಹೋದರತ್ವದ ಪ್ರಯೋಜನಕ್ಕಾಗಿ ಸೇವೆಮಾಡುವುದನ್ನು ಮುಂದುವರಿಸುವಂತೆ ಪೌಲನನ್ನು ಪ್ರಚೋದಿಸಿತು, ಒತ್ತಾಯಿಸಿತು, ಮತ್ತು ನಿರ್ಬಂಧಪಡಿಸಿತು. ಹೀಗೆ, ಕ್ರಿಸ್ತನ ಪ್ರೀತಿಯು ಪೌಲನನ್ನು ಸ್ವಾರ್ಥತೆಯಿಂದ ತಡೆಯುತ್ತಾ, ಅವನನ್ನು ನಿಯಂತ್ರಿಸಿತು ಮತ್ತು ಅವನ ಗುರಿಗಳನ್ನು ದೇವರ ಹಾಗೂ ಜೊತೆಮಾನವರ ಸೇವೆಗೆ ನಿರ್ಬಂಧಿಸಿತು.
ನಿಶ್ಚಯವಾಗಿಯೂ, ಕ್ರೈಸ್ತನೊಬ್ಬನ ನಂಬಿಗಸ್ತ ಜೀವನಮಾರ್ಗದ ಹಿಂದಿರುವ ಪ್ರಚೋದನೆಯ ಮೂಲವು ಕ್ರಿಸ್ತನ ಪ್ರೀತಿಯಾಗಿದೆ. ನಮ್ಮ ಮೇಲೆ ಶಾರೀರಿಕವಾಗಿ, ಭಾವನಾತ್ಮಕವಾಗಿ, ಮತ್ತು ಆತ್ಮಿಕವಾಗಿ ದುರ್ಬಲಗೊಳಿಸುವ ಪರಿಣಾಮವನ್ನು ಬೀರಬಲ್ಲ ಪರೀಕ್ಷೆಗಳನ್ನು ನಾವು ಎದುರಿಸುವಾಗ, ಕ್ರಿಸ್ತನ ಪ್ರೀತಿಯ ಒತ್ತಾಯಪಡಿಸುವ ಶಕ್ತಿಯು, ಕಡಿಮೆ ಪ್ರಚೋದಿತನಾಗಿರುವ ಯಾರಾದರೊಬ್ಬನು ಸೋಲನ್ನೊಪ್ಪಿಕೊಳ್ಳುವ ಬಿಂದುವಿನ ಆಚೆ ಹೋಗುವಂತೆ ನಮ್ಮನ್ನು ಶಕ್ತರನ್ನಾಗಿಮಾಡುತ್ತದೆ. ತಾಳಿಕೊಳ್ಳಲು ಅದು ನಮಗೆ ಬಲವನ್ನು ನೀಡುತ್ತದೆ.
ನಮ್ಮನ್ನು ಪೋಷಿಸಿ, ಪ್ರಚೋದಿಸುವಂತೆ ನಾವು ನಮ್ಮ ಅಪರಿಪೂರ್ಣ ಭಾವನೆಗಳ ಮೇಲೆ ಆತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಪರೀಕ್ಷೆಗಳು ನಿರಾಶೆ ಅಥವಾ ಆತಂಕದ ಫಲಸ್ವರೂಪವಾಗಿ ಬರುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ಇನ್ನೊಂದು ಕಡೆಯಲ್ಲಿ, ನಮ್ಮನ್ನು ನಮ್ಮ ಶುಶ್ರೂಷೆಗೆ ಬಲವಾಗಿ ಅಂಟಿಕೊಳ್ಳುವಂತೆ ಮಾಡುವ, ನಮ್ಮ ವೈಯಕ್ತಿಕ ಪರೀಕ್ಷೆಯ ಹೊರತೂ ನಮ್ಮನ್ನು ಪೋಷಿಸಿ, ಪ್ರಚೋದಿಸುವ ಶಕ್ತಿ ಕ್ರಿಸ್ತನ ಪ್ರೀತಿಗಿದೆ. ಕ್ರಿಸ್ತನ ಪ್ರೀತಿಯು ಒಬ್ಬ ಕ್ರೈಸ್ತನನ್ನು, ಇತರರ ನಿರೀಕ್ಷಣೆಗಳನ್ನು ಮಾತ್ರವಲ್ಲ ಬಹುಶಃ ಅವನ ಸ್ವಂತ ನಿರೀಕ್ಷಣೆಗಳನ್ನೂ ಮೀರಿ ತಾಳಿಕೊಳ್ಳುವಂತೆ ಶಕ್ತಗೊಳಿಸುತ್ತದೆ.
ಅದೂ ಅಲ್ಲದೆ, ಕ್ರಿಸ್ತನ ಪ್ರೀತಿಯು ತಾಳಿಕೊಳ್ಳುವಂತಹದ್ದು ಆಗಿರುವುದರಿಂದ, ಪರಿಣಾಮವು ಎಂದೂ ಅಂತ್ಯಗೊಳ್ಳದೆ ಇರುವಂತಹದ್ದಾಗಿದೆ. ಅದು ಹೊಯ್ದಾಡದ ಇಲ್ಲವೆ ಕುಗ್ಗದ ಒಂದು ಒತ್ತಾಯಪಡಿಸುವ ಶಕ್ತಿಯಾಗಿದೆ. “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:8) ಏನೇ ಆಗಲಿ ಅವನನ್ನು ನಂಬಿಗಸ್ತರಾಗಿ ಅನುಸರಿಸುತ್ತಾ ಮುಂದುವರಿಯುವಂತೆ, ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.
ಭಾವನಾತ್ಮಕ ಪರೀಕ್ಷೆಗಳು ನಮ್ಮನ್ನು ಧ್ವಂಸಮಾಡಬಲ್ಲ ಶಕ್ತಿಯನ್ನು ಬೀರುತ್ತವೆ. ಆದುದರಿಂದ, ನಮಗಾಗಿ ಕ್ರಿಸ್ತನು ಪ್ರದರ್ಶಿಸಿದ ಪ್ರೀತಿಯ ಕುರಿತು ನಾವು ಮನನ ಮಾಡುವುದು ಬಹಳ ಪ್ರಾಮುಖ್ಯವಾದದ್ದಾಗಿದೆ. ಕ್ರಿಸ್ತನ ಪ್ರೀತಿಯು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವುದು. ನಮ್ಮ ನಂಬಿಕೆಯ ಹಡಗೊಡೆತವನ್ನು ದೂರವಿರಿಸುವಂತೆ ಅವನ ಪ್ರೀತಿಯು ಶಕ್ಯಗೊಳಿಸುತ್ತದೆ. (1 ತಿಮೊಥೆಯ 1:14-19) ಇನ್ನೂ ಹೆಚ್ಚಾಗಿ, ಕ್ರಿಸ್ತನ ಪ್ರೀತಿಯ ಅಭಿವ್ಯಕ್ತಿಯನ್ನು ಸಾಧ್ಯಗೊಳಿಸಿದ ವ್ಯಕ್ತಿಯಾದ, ಯೆಹೋವ ದೇವರನ್ನು ಮಹಿಮೆಪಡಿಸಲು, ನಮ್ಮಿಂದ ಸಾಧ್ಯವಾಗುವುದೆಲ್ಲವನ್ನು ಮಾಡುವಂತೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ.—ರೋಮಾಪುರ 5:6-8.