ಯೆಹೋವನು ಒದಗಿಸುವ ಸಾಂತ್ವನದಲ್ಲಿ ಪಾಲಿಗರಾಗುವುದು
“ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥೈರ್ಯಗೆಡದ್ದಾಗಿದೆ, ಏಕೆಂದರೆ ನೀವು ಬಾಧೆಗಳ ಪಾಲಿಗರಾಗುತ್ತಿದ್ದೀರಿ ಎಂದು ನಮಗೆ ತಿಳಿದಿರುವಂತೆಯೇ ನೀವು ಸಾಂತ್ವನವನ್ನೂ ಹಂಚಿಕೊಳ್ಳುವಿರಿ.”—2 ಕೊರಿಂಥ 1:7, NW.
1, 2. ಇಂದು ಕ್ರೈಸ್ತರಾಗಿರುವ ಅನೇಕರ ಅನುಭವವೇನಾಗಿದೆ?
ಪತ್ರಿಕೆಯಾದ ಕಾವಲಿನಬುರುಜುವಿನ ಅನೇಕ ಪ್ರಚಲಿತ ಓದುಗರು, ದೇವರ ಸತ್ಯದ ಜ್ಞಾನವಿಲ್ಲದೇ ಬೆಳೆದರು. ಪ್ರಾಯಶಃ ಅದು ನಿಮ್ಮ ವಿಷಯದಲ್ಲಿಯೂ ನಿಜವಾಗಿದೆ. ಹಾಗಿದ್ದರೆ, ನಿಮ್ಮ ತಿಳಿವಳಿಕೆಯ ನೇತ್ರಗಳು ತೆರೆಯಲಾರಂಭವಾದಾಗ, ನಿಮಗೆ ಹೇಗನಿಸಿತೆಂಬುದನ್ನು ಜ್ಞಾಪಿಸಿಕೊಳ್ಳಿ. ಉದಾಹರಣೆಗೆ, ಮೃತರು ಬಾಧೆ ಪಡುತ್ತಿಲ್ಲ, ಪ್ರಜ್ಞಾರಹಿತರಾಗಿದ್ದಾರೆಂದು ನೀವು ಮೊದಲು ತಿಳಿದಾಗ, ನಿಮಗೆ ನೆಮ್ಮದಿಯಾಗಲಿಲ್ಲವೊ? ಮೃತರಿಗಿರುವ ನಿರೀಕ್ಷೆಯ ಕುರಿತು ನೀವು ಅರಿತಾಗ, ದೇವರ ನೂತನ ಲೋಕದಲ್ಲಿ ಕೋಟ್ಯಂತರ ಮಂದಿಗೆ ಜೀವಕ್ಕೆ ಪುನರುತ್ಥಾನವಾಗುವುದು ಎಂದು ನಿಮಗೆ ತಿಳಿದಾಗ, ನಿಮಗೆ ಸಾಂತ್ವನವಾಗಲಿಲ್ಲವೊ?—ಪ್ರಸಂಗಿ 9:5, 10; ಯೋಹಾನ 5:28, 29.
2 ದುಷ್ಟತನವನ್ನು ಅಂತ್ಯಗೊಳಿಸಿ, ಈ ಭೂಮಿಯನ್ನು ಪ್ರಮೋದವನವಾಗಿ ಮಾಡುವ ದೇವರ ವಾಗ್ದಾನದ ವಿಷಯವೇನು? ಇದರ ಕುರಿತು ನೀವು ಕಲಿತಾಗ, ಅದು ನಿಮ್ಮನ್ನು ಸಾಂತ್ವನಗೊಳಿಸಿ ಉತ್ಸಾಹದ ನಿರೀಕ್ಷಣೆಯಿಂದ ತುಂಬಿಸಲಿಲ್ಲವೊ? ಎಂದಿಗೂ ಸಾಯದೆ ಇದ್ದು, ಬರಲಿರುವ ಭೂಪ್ರಮೋದವನದೊಳಕ್ಕೆ ಪಾರಾಗುವ ಸಾಧ್ಯತೆಯ ಕುರಿತು ನೀವು ಕಲಿತಾಗ ನಿಮಗೆ ಹೇಗನಿಸಿತು? ನೀವು ರೋಮಾಂಚಗೊಂಡಿರೆಂಬುದು ನಿಸ್ಸಂಶಯ. ಹೌದು, ಯೆಹೋವನ ಸಾಕ್ಷಿಗಳಿಂದ ಈಗ ಲೋಕವ್ಯಾಪಕವಾಗಿ ಸಾರಲ್ಪಡುತ್ತಿರುವ ದೇವರ ಸಾಂತ್ವನದಾಯಕ ಸಂದೇಶದ ಗ್ರಾಹಕರು ನೀವಾದಿರಿ.—ಕೀರ್ತನೆ 37:9-11, 29; ಯೋಹಾನ 11:26; ಪ್ರಕಟನೆ 21:3-5.
3. ಇತರರೊಂದಿಗೆ ದೇವರ ಸಾಂತ್ವನದಾಯಕ ಸಂದೇಶವನ್ನು ಹಂಚಿಕೊಳ್ಳುವವರೂ ಸಂಕಟವನ್ನು ಅನುಭವಿಸುವುದೇಕೆ?
3 ಆದರೂ, ನೀವು ಬೈಬಲಿನ ಸಂದೇಶದಲ್ಲಿ ಇತರರೊಂದಿಗೆ ಪಾಲಿಗರಾಗಲು ಪ್ರಯತ್ನಿಸಿದಾಗ, “ನಂಬಿಕೆಯು ಎಲ್ಲಾ ಜನರ ಸ್ವತ್ತಾಗಿರುವುದಿಲ್ಲ” ಎಂಬುದನ್ನೂ ನೀವು ಗ್ರಹಿಸತೊಡಗಿದಿರಿ. (2 ಥೆಸಲೊನೀಕ 3:2, NW) ಪ್ರಾಯಶಃ ನಿಮ್ಮ ಮಾಜಿ ಮಿತ್ರರಲ್ಲಿ ಕೆಲವರು, ಬೈಬಲಿನ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ನಿಮಗೆ ಅಪಹಾಸ್ಯಮಾಡಿದರು. ಯೆಹೋವನ ಸಾಕ್ಷಿಗಳ ಸಹವಾಸದಲ್ಲಿ ನೀವು ಬೈಬಲ್ ಅಭ್ಯಾಸವನ್ನು ಮುಂದುವರಿಸುತ್ತಿದ್ದುದಕ್ಕಾಗಿ ನೀವು ಹಿಂಸೆಯನ್ನೂ ಅನುಭವಿಸಿದ್ದಿರಬಹುದು. ಬೈಬಲ್ ಮೂಲತತ್ವಗಳಿಗೆ ಹೊಂದಿಕೆಯಾಗಿರುವಂತೆ ನಿಮ್ಮ ಜೀವನವನ್ನು ತರಲು ನೀವು ಬದಲಾವಣೆಗಳನ್ನು ಮಾಡತೊಡಗಿದಾಗ, ವಿರೋಧವು ತೀಕ್ಷ್ಣಗೊಂಡಿದ್ದಿರಬಹುದು. ದೇವರ ಸಾಂತ್ವನವನ್ನು ಅಂಗೀಕರಿಸುವವರೆಲ್ಲರ ಮೇಲೆ ಸೈತಾನನೂ ಅವನ ಲೋಕವೂ ತರುವ ಸಂಕಟಗಳನ್ನು ನೀವು ಅನುಭವಿಸತೊಡಗಿದಿರಿ.
4. ಹೊಸದಾಗಿ ಆಸಕ್ತರಾಗಿರುವವರು ಸಂಕಟಕ್ಕೆ ಯಾವ ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯಿಸಬಹುದು?
4 ದುಃಖಕರವಾಗಿ, ಯೇಸು ಮುಂತಿಳಿಸಿದಂತೆ, ಸಂಕಟಗಳು ಕೆಲವರನ್ನು ಮುಗ್ಗರಿಸುವಂತೆ ಮತ್ತು ಕ್ರೈಸ್ತ ಸಭೆಯೊಂದಿಗೆ ಅವರ ಒಡನಾಟವನ್ನು ನಿಲ್ಲಿಸುವಂತೆ ಮಾಡುತ್ತವೆ. (ಮತ್ತಾಯ 13:5, 6, 20, 21) ಇತರರು ತಮ್ಮ ಮನಸ್ಸುಗಳನ್ನು ತಾವು ಕಲಿಯುತ್ತಿರುವ ಸಾಂತ್ವನದಾಯಕ ವಾಗ್ದಾನಗಳ ಮೇಲೆ ನೆಲೆಗೊಳಿಸುವ ಮೂಲಕ ಸಂಕಟಗಳನ್ನು ಸಹಿಸಿಕೊಳ್ಳುತ್ತಾರೆ. ಕಟ್ಟಕಡೆಗೆ ಅವರು ಯೆಹೋವನಿಗೆ ತಮ್ಮ ಜೀವನಗಳನ್ನು ಸಮರ್ಪಿಸಿಕೊಂಡು, ಆತನ ಪುತ್ರನಾದ ಯೇಸು ಕ್ರಿಸ್ತನ ಶಿಷ್ಯರಾಗಿ ದೀಕ್ಷಾಸ್ನಾನಹೊಂದುತ್ತಾರೆ. (ಮತ್ತಾಯ 28:19, 20; ಮಾರ್ಕ 8:34) ಕ್ರೈಸ್ತನೊಬ್ಬನು ದೀಕ್ಷಾಸ್ನಾನಹೊಂದಿದ ಕೂಡಲೆ ಸಂಕಟವು ನಿಲ್ಲುವುದಿಲ್ಲವೆಂಬುದು ನಿಶ್ಚಯ. ಉದಾಹರಣೆಗೆ, ವ್ಯಭಿಚಾರದ ಹಿನ್ನೆಲೆಯ ವ್ಯಕ್ತಿಯೊಬ್ಬನಿಗೆ ಲೈಂಗಿಕವಾಗಿ ನಿರ್ಮಲನಾಗಿರುವುದು ಪ್ರಯಾಸದ ಹೋರಾಟವಾಗಿರಸಾಧ್ಯವಿದೆ. ಇತರರು ಅವಿಶ್ವಾಸಿಗಳಾದ ಕುಟುಂಬ ಸದಸ್ಯರಿಂದ ಸತತವಾದ ವಿರೋಧದೊಂದಿಗೆ ಹೆಣಗಾಡಬೇಕಾಗಿದೆ. ಸಂಕಟವು ಯಾವುದೇ ಆಗಿರಲಿ, ದೇವರಿಗೆ ಸಮರ್ಪಣೆಯ ಜೀವನವನ್ನು ನಂಬಿಕೆಯಿಂದ ಅನುಸರಿಸುವವರೆಲ್ಲರು ಒಂದು ವಿಷಯದ ಕುರಿತು ಖಾತರಿಯಿಂದಿರಬಲ್ಲರು. ತೀರ ವ್ಯಕ್ತಿಪರವಾಗಿ, ಅವರು ದೇವರ ಸಾಂತ್ವನ ಮತ್ತು ಸಹಾಯವನ್ನು ಅನುಭವಿಸುವರು.
“ಸಕಲ ಸಾಂತ್ವನದ ದೇವರು”
5. ಪೌಲನು ತಾಳಿಕೊಂಡ ಅನೇಕ ಪರೀಕ್ಷೆಗಳೊಂದಿಗೆ, ಅವನು ಏನನ್ನೂ ಅನುಭವಿಸಿದನು?
5 ದೇವರು ಒದಗಿಸುವ ಸಾಂತ್ವನವನ್ನು ಆಳವಾಗಿ ಗಣ್ಯಮಾಡಿದ ಒಬ್ಬ ವ್ಯಕ್ತಿಯು ಅಪೊಸ್ತಲ ಪೌಲನಾಗಿದ್ದನು. ಏಷಿಯ ಮತ್ತು ಮಕೆದೋನ್ಯದಲ್ಲಿ ಒಂದು ವಿಶೇಷವಾಗಿ ಪರೀಕ್ಷಾತ್ಮಕ ಸಮಯವನ್ನು ಕಳೆದ ಬಳಿಕ, ತನ್ನ ತಪ್ಪು ಮನಗಾಣಿಸುವಿಕೆಯ ಪತ್ರಕ್ಕೆ ಕೊರಿಂಥದ ಸಭೆಯು ಉತ್ತಮವಾಗಿ ಪ್ರತಿವರ್ತಿಸಿತ್ತು ಎಂಬುದನ್ನು ಕೇಳಿ ಅವನು ಮಹಾ ಉಪಶಮನವನ್ನು ಅನುಭವಿಸಿದನು. ಇದು, ಅವನು ಅವರಿಗೆ ಎರಡನೆಯ ಪತ್ರವನ್ನು ಬರೆಯುವಂತೆ ಪ್ರಚೋದಿಸಿತು. ಅದರಲ್ಲಿ ಪ್ರಶಂಸೆಯ ಈ ಕೆಳಗಣ ಅಭಿವ್ಯಕ್ತಿಯಿತ್ತು: “ನಮ್ಮನ್ನು ನಮ್ಮ ಸಕಲ ಸಂಕಟಗಳಲ್ಲಿ ಸಾಂತ್ವನಗೊಳಿಸುವ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ, ಕೋಮಲವಾದ ಕರುಣೆಗಳ ಪಿತನೂ, ಸಕಲ ಸಾಂತ್ವನದ ದೇವರೂ ಆದಾತನಿಗೆ ಸ್ತುತಿಯಾಗಲಿ.”—2 ಕೊರಿಂಥ 1:3, 4, NW.
6. ನಾವು 2 ಕೊರಿಂಥ 1:3, 4ರಲ್ಲಿ ಕಂಡುಬರುವ ಪೌಲನ ಮಾತುಗಳಿಂದ ಏನನ್ನು ಕಲಿಯುತ್ತೇವೆ?
6 ಈ ಪ್ರೇರಿತ ಮಾತುಗಳು ಬಹಳ ಅರ್ಥಪೂರ್ಣವಾಗಿವೆ. ನಾವು ಅವುಗಳನ್ನು ವಿಶ್ಲೇಷಿಸೋಣ. ಪೌಲನು ದೇವರಿಗೆ ಸ್ತುತಿಯನ್ನು ಅಥವಾ ಉಪಕಾರವನ್ನು ಸಲ್ಲಿಸುವಾಗ ಅಥವಾ ತನ್ನ ಪತ್ರಗಳಲ್ಲಿ ಆತನಿಗೆ ವಿಜ್ಞಾಪಿಸುವಾಗ, ಅವನು ಕ್ರೈಸ್ತ ಸಭೆಯ ಶಿರಸ್ಸಾದ ಯೇಸುವಿಗೂ ಆಳವಾದ ಗಣ್ಯತೆಯನ್ನು ಸೇರಿಸುತ್ತಾನೆಂದು ನಾವು ಸಾಮಾನ್ಯವಾಗಿ ಕಂಡುಕೊಳ್ಳುತ್ತೇವೆ. (ರೋಮಾಪುರ 1:8; 7:25; ಎಫೆಸ 1:3; ಇಬ್ರಿಯ 13:20, 21) ಆದಕಾರಣ ಪೌಲನು ಸ್ತುತಿಯ ಈ ಅಭಿವ್ಯಕ್ತಿಯನ್ನು, “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ” ಆದಾತನಿಗೆ ಸಂಬೋಧಿಸುತ್ತಾನೆ. ಬಳಿಕ, ತನ್ನ ಬರಹಗಳಲ್ಲಿ ಪ್ರಥಮ ಬಾರಿ, “ಕೋಮಲವಾದ ಕರುಣೆಗಳು” ಎಂಬುದಾಗಿ ಭಾಷಾಂತರವಾಗಿರುವ ಗ್ರೀಕ್ ನಾಮಪದವೊಂದನ್ನು ಅವನು ಉಪಯೋಗಿಸುತ್ತಾನೆ. ಈ ನಾಮಪದವು, ಇನ್ನೊಬ್ಬನ ಬಾಧೆಗಳಿಗಾಗಿ ಶೋಕವನ್ನು ವ್ಯಕ್ತಪಡಿಸಲು ಉಪಯೋಗಿಸಲ್ಪಡುವ ಒಂದು ಪದದಿಂದ ಬರುತ್ತದೆ. ಹೀಗೆ ಸಂಕಟವನ್ನು ಅನುಭವಿಸುತ್ತಿರುವ ತನ್ನ ನಂಬಿಗಸ್ತ ಸೇವಕರಲ್ಲಿ ಯಾವನ ಕಡೆಗಾದರೂ ದೇವರ ಕೋಮಲವಾದ ಅನಿಸಿಕೆಗಳನ್ನು, ಅವರ ಪರವಾಗಿ ಕರುಣೆಯಿಂದ ವರ್ತಿಸುವಂತೆ ದೇವರನ್ನು ಪ್ರಚೋದಿಸುವ ಕೋಮಲವಾದ ಅನಿಸಿಕೆಗಳನ್ನು ಪೌಲನು ವರ್ಣಿಸುತ್ತಾನೆ. ಅಂತಿಮವಾಗಿ, ಪೌಲನು ಯೆಹೋವನನ್ನು, “ಕೋಮಲವಾದ ಕರುಣೆಗಳ ಪಿತ” ಎಂದು ಕರೆಯುವ ಮೂಲಕ, ಯೆಹೋವನು ಈ ಅಪೇಕ್ಷಣೀಯ ಗುಣದ ಮೂಲನೆಂಬುದಾಗಿ ಆತನ ಕಡೆಗೆ ನೋಡಿದನು.
7. ಯೆಹೋವನು “ಸಕಲ ಸಾಂತ್ವನದ ದೇವರು” ಎಂದು ಏಕೆ ಹೇಳಸಾಧ್ಯವಿದೆ?
7 ದೇವರ “ಕೋಮಲವಾದ ಕರುಣೆಗಳು” ಸಂಕಟವನ್ನು ಅನುಭವಿಸುತ್ತಿರುವ ಒಬ್ಬನಿಗೆ ಉಪಶಮನದಲ್ಲಿ ಪರಿಣಮಿಸುತ್ತವೆ. ಆದುದರಿಂದ, ಪೌಲನು ಯೆಹೋವನನ್ನು, “ಸಕಲ ಸಾಂತ್ವನದ ದೇವರು” ಎಂಬುದಾಗಿ ವರ್ಣಿಸಲು ಮುಂದುವರಿಯುತ್ತಾನೆ. ಹೀಗೆ, ನಮ್ಮ ಜೊತೆ ವಿಶ್ವಾಸಿಗಳ ದಯೆಯಿಂದಾಗಿ ನಾವು ಯಾವುದೇ ಸಾಂತ್ವನವನ್ನು ಪಡೆಯಲಿ, ಅದರ ಉಗಮವಾಗಿ ನಾವು ಯೆಹೋವನ ಕಡೆಗೆ ನೋಡಬಲ್ಲೆವು. ದೇವರಿಂದ ಆರಂಭಗೊಳ್ಳದಿರುವ ನಿಜವಾದ, ಬಾಳಿಕೆ ಬರುವ ಸಾಂತ್ವನವು ಯಾವುದೂ ಇಲ್ಲ. ಇದಲ್ಲದೆ, ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿ, ಹೀಗೆ ನಾವು ಸಾಂತ್ವನಕಾರರಾಗುವಂತೆ ಮಾಡಿದವನು ಆತನೇ. ಮತ್ತು ದೇವರ ಸೇವಕರು ಸಾಂತ್ವನ ಬೇಕಾಗಿರುವವರ ಕಡೆಗೆ ಕೋಮಲವಾದ ಕರುಣೆಯನ್ನು ತೋರಿಸುವಂತೆ ಪ್ರಚೋದಿಸುವುದು ಆತನ ಪವಿತ್ರಾತ್ಮವೇ.
ಸಾಂತ್ವನಕಾರರಾಗಿರುವಂತೆ ತರಬೇತುಗೊಳಿಸಲ್ಪಡುವುದು
8. ದೇವರು ನಮ್ಮ ಪರೀಕ್ಷೆಗಳ ಮೂಲನಲ್ಲವಾಗಿರುವುದಾದರೂ, ಸಂಕಟಗಳ ನಮ್ಮ ಸಹಿಷ್ಣುತೆಯು ನಮ್ಮ ಮೇಲೆ ಯಾವ ಪ್ರಯೋಜನಕರವಾದ ಪರಿಣಾಮಗಳನ್ನು ಉಂಟುಮಾಡಬಲ್ಲದು?
8 ತನ್ನ ನಂಬಿಗಸ್ತ ಸೇವಕರಿಗೆ ವಿವಿಧ ಪರೀಕ್ಷೆಗಳು ಬರುವಂತೆ ದೇವರು ಅನುಮತಿಸುತ್ತಾನಾದರೂ, ಆತನೆಂದೂ ಅಂತಹ ಪರೀಕ್ಷೆಗಳ ಮೂಲನಾಗಿರುವುದಿಲ್ಲ. (ಯಾಕೋಬ 1:13) ಆದರೂ, ನಾವು ಸಂಕಟವನ್ನು ಸಹಿಸುವಾಗ ಆತನು ಕೊಡುವ ಸಾಂತ್ವನವು, ನಾವು ಇತರರ ಆವಶ್ಯಕತೆಗಳಿಗೆ ಹೆಚ್ಚು ಸಂವೇದನಶೀಲರಾಗಿರುವಂತೆ ನಮ್ಮನ್ನು ತರಬೇತುಗೊಳಿಸಬಲ್ಲದು. ಯಾವ ಫಲಿತಾಂಶದೊಂದಿಗೆ? “ನಾವೇ ದೇವರಿಂದ ಸಾಂತ್ವನಗೊಳಿಸಲ್ಪಡುತ್ತಿರುವ ಸಾಂತ್ವನದ ಮೂಲಕ ಯಾವುದೇ ರೀತಿಯ ಸಂಕಟದಲ್ಲಿರುವವರಿಗೆ ಸಾಂತ್ವನವನ್ನು ನೀಡಶಕ್ತರಾಗುವಂತೆ ಆತನು . . . ನಮ್ಮನ್ನು ಸಾಂತ್ವನಗೊಳಿಸುತ್ತಾನೆ.” (2 ಕೊರಿಂಥ 1:4, NW) ಹೀಗೆ ಯೆಹೋವನು, ನಾವು ಜೊತೆವಿಶ್ವಾಸಿಗಳೊಂದಿಗೆ ಮತ್ತು ಕ್ರಿಸ್ತನನ್ನು ಅನುಕರಿಸಿ, “ದುಃಖಿತರೆಲ್ಲರನ್ನು ಸಂತೈಸು”ವಾಗ ನಾವು ನಮ್ಮ ಶುಶ್ರೂಷೆಯಲ್ಲಿ ಸಂಧಿಸುವವರೊಂದಿಗೆ ಆತನ ಸಾಂತ್ವನದ ಕಾರ್ಯಸಾಧಕ ಪಾಲಿಗರಾಗುವಂತೆ ನಮ್ಮನ್ನು ತರಬೇತುಗೊಳಿಸುತ್ತಾನೆ.—ಯೆಶಾಯ 61:2; ಮತ್ತಾಯ 5:4.
9. (ಎ) ನಾವು ಬಾಧೆಗಳನ್ನು ತಾಳಿಕೊಳ್ಳುವಂತೆ ಯಾವುದು ಸಹಾಯ ಮಾಡುವುದು? (ಬಿ) ನಾವು ನಂಬಿಗಸ್ತಿಕೆಯಿಂದ ಸಂಕಟಗಳನ್ನು ಸಹಿಸಿಕೊಳ್ಳುವಾಗ ಇತರರು ಹೇಗೆ ಸಾಂತ್ವನಗೊಳಿಸಲ್ಪಡುತ್ತಾರೆ?
9 ಪೌಲನು ದೇವರಿಂದ ಕ್ರಿಸ್ತನ ಮೂಲಕ ಪಡೆದ ಹೇರಳವಾದ ಸಾಂತ್ವನದ ಪರಿಣಾಮವಾಗಿ, ಅನೇಕ ಬಾಧೆಗಳನ್ನು ಸಹಿಸಿಕೊಂಡನು. (2 ಕೊರಿಂಥ 1:5) ದೇವರ ಅಮೂಲ್ಯ ವಾಗ್ದಾನಗಳ ಕುರಿತು ಮನನಮಾಡುವ ಮೂಲಕ, ಆತನ ಪವಿತ್ರಾತ್ಮದ ಬೆಂಬಲಕ್ಕಾಗಿ ಪ್ರಾರ್ಥಿಸುವ ಮೂಲಕ ಮತ್ತು ನಮ್ಮ ಪ್ರಾರ್ಥನೆಗಳಿಗೆ ದೇವರ ಉತ್ತರಗಳನ್ನು ಅನುಭವಿಸುವ ಮೂಲಕ ನಾವೂ ಸಾಂತ್ವನದ ಸಮೃದ್ಧಿಯನ್ನು ಅನುಭವಿಸಬಲ್ಲೆವು. ಹೀಗೆ ನಾವು ಯೆಹೋವನ ಪರಮಾಧಿಕಾರವನ್ನು ಸಮರ್ಥಿಸುತ್ತ, ಪಿಶಾಚನು ಸುಳ್ಳುಗಾರನೆಂದು ರುಜುಪಡಿಸುತ್ತ ಮುಂದುವರಿಯುವಂತೆ ಬಲಗೊಳಿಸಲ್ಪಡುವೆವು. (ಯೋಬ 2:4; ಜ್ಞಾನೋಕ್ತಿ 27:11) ನಾವು ಯಾವುದೇ ಸಂಕಟವನ್ನು ನಂಬಿಗಸ್ತಿಕೆಯಿಂದ ತಾಳಿಕೊಂಡಿರುವಾಗ, ಪೌಲನಂತೆ ನಾವು, ಯಾರ ಸಾಂತ್ವನವು ಕ್ರೈಸ್ತರು ಪರೀಕ್ಷೆಯಲ್ಲಿ ವಿಶ್ವಸ್ಥರಾಗಿರುವಂತೆ ಶಕ್ತರನ್ನಾಗಿ ಮಾಡುತ್ತದೊ ಆ ಯೆಹೋವನಿಗೆ ಸಕಲ ಪ್ರಶಸ್ತಿಯನ್ನೂ ಕೊಡಬೇಕು. ನಂಬಿಗಸ್ತ ಕ್ರೈಸ್ತರ ಸಹಿಷ್ಣುತೆಯು ಸಹೋದರತ್ವದ ಮೇಲೆ ಸಾಂತ್ವನದಾಯಕ ಪರಿಣಾಮವನ್ನು ಬೀರಿ, ಇತರರು ‘ಅವೇ ಬಾಧೆಗಳನ್ನು ಸಹಿಸಿಕೊಳ್ಳುವಂತೆ’ ಅವರನ್ನು ದೃಢಗೊಳಿಸಬೇಕು.—2 ಕೊರಿಂಥ 1:6, NW.
10, 11. (ಎ) ಪುರಾತನ ಕೊರಿಂಥದ ಸಭೆಗೆ ಬಾಧೆಯನ್ನು ಬರಮಾಡಿದ ಕೆಲವು ಸಂಗತಿಗಳಾವುವು? (ಬಿ) ಪೌಲನು ಕೊರಿಂಥ ಸಭೆಯನ್ನು ಹೇಗೆ ಸಾಂತ್ವನಗೊಳಿಸಿದನು, ಮತ್ತು ಅವನು ಯಾವ ನಿರೀಕ್ಷೆಯನ್ನು ವ್ಯಕ್ತಪಡಿಸಿದನು?
10 ಸಕಲ ಸತ್ಯ ಕ್ರೈಸ್ತರ ಮೇಲೆ ಬರುವ ಬಾಧೆಗಳಲ್ಲಿ ಕೊರಿಂಥದವರಿಗೂ ಪಾಲಿತ್ತು. ಇದಕ್ಕೆ ಕೂಡಿಸಿ, ಒಬ್ಬ ಪಶ್ಚಾತ್ತಾಪಪಟ್ಟಿರದ ಹಾದರಿಗನನ್ನು ಬಹಿಷ್ಕರಿಸುವ ಸಲಹೆಯೂ ಅವರಿಗೆ ಬೇಕಾಗಿತ್ತು. (1 ಕೊರಿಂಥ 5:1, 2, 11, 13) ಈ ಕ್ರಮವನ್ನು ಕೈಕೊಳ್ಳಲು ಮತ್ತು ಕಲಹ ಮತ್ತು ವಿಭಾಗಗಳಿಗೆ ಅಂತ್ಯವನ್ನು ತರಲು ತಪ್ಪಿಹೋದದ್ದು ಸಭೆಗೆ ಅಪಮಾನವನ್ನು ತಂದಿತ್ತು. ಆದರೆ ಅವರು ಕೊನೆಗೆ ಪೌಲನ ಸಲಹೆಯನ್ನು ಅನ್ವಯಿಸಿಕೊಂಡು, ನಿಜ ಪಶ್ಚಾತ್ತಾಪವನ್ನು ಪ್ರದರ್ಶಿಸಿದರು. ಆದಕಾರಣ, ಅವನು ಅವರನ್ನು ಹೃದಯೋಲ್ಲಾಸದಿಂದ ಪ್ರಶಂಸಿಸಿ, ತನ್ನ ಪತ್ರಕ್ಕೆ ಅವರ ಉತ್ತಮ ಪ್ರತಿವರ್ತನೆಯು ತನ್ನನ್ನು ಸಾಂತ್ವನಗೊಳಿಸಿದೆಯೆಂದು ಹೇಳಿದನು. (2 ಕೊರಿಂಥ 7:8, 10, 11, 13) ಆ ಬಹಿಷ್ಕೃತನೂ ಪಶ್ಚಾತ್ತಾಪಪಟ್ಟಿದ್ದನೆಂಬುದು ಸ್ಪಷ್ಟ. ಆದಕಾರಣ ಪೌಲನು, ಅವನನ್ನು ‘ಮನ್ನಿಸಿ, ಸಂತೈಸಬೇಕೆಂದೂ, ಇಲ್ಲವಾದರೆ ತೀರ ದುಃಖದಲ್ಲಿ ಮುಳುಗಿಹೋದಾನೆಂದೂ’ ಅವರಿಗೆ ಸಲಹೆ ನೀಡಿದನು.—2 ಕೊರಿಂಥ 2:7.
11 ಪೌಲನ ಎರಡನೆಯ ಪತ್ರವು ಕೊರಿಂಥ ಸಭೆಯನ್ನು ನಿಶ್ಚಯವಾಗಿಯೂ ಸಾಂತ್ವನಗೊಳಿಸಿದ್ದಿರಬೇಕು. ಮತ್ತು ಇದು ಅವನ ಉದ್ದೇಶಗಳಲ್ಲೊಂದಾಗಿತ್ತು. ಅವನು ವಿವರಿಸಿದ್ದು: “ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥೈರ್ಯಗೆಡದ್ದಾಗಿದೆ, ಏಕೆಂದರೆ ನೀವು ಬಾಧೆಗಳ ಪಾಲಿಗರಾಗುತ್ತಿದ್ದೀರಿ ಎಂದು ನಮಗೆ ತಿಳಿದಿರುವಂತೆಯೇ ನೀವು ಸಾಂತ್ವನವನ್ನೂ ಹಂಚಿಕೊಳ್ಳುವಿರಿ.” (2 ಕೊರಿಂಥ 1:7, NW) ತನ್ನ ಪತ್ರದ ಸಮಾಪ್ತಿಯಲ್ಲಿ, ಪೌಲನು ಪ್ರೋತ್ಸಾಹಿಸಿದ್ದು: “ಸಾಂತ್ವನಗೊಳಿಸಲ್ಪಡುತ್ತ . . . ಮುಂದುವರಿಯಿರಿ. ಮತ್ತು ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮೊಂದಿಗಿರುವನು.”—2 ಕೊರಿಂಥ 13:11, NW.
12. ಎಲ್ಲ ಕ್ರೈಸ್ತರಿಗೆ ಯಾವುದು ಅಗತ್ಯ?
12 ಇದರಿಂದ ನಾವು ಎಷ್ಟು ಪ್ರಮುಖವಾದ ಪಾಠವೊಂದನ್ನು ಕಲಿಯಸಾಧ್ಯವಿದೆ! ಕ್ರೈಸ್ತ ಸಭೆಯ ಸಕಲ ಸದಸ್ಯರು, ದೇವರು ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ತನ್ನ ಭೂಸಂಸ್ಥೆಯ ಮೂಲಕ ಒದಗಿಸುವ “ಸಾಂತ್ವನವನ್ನು ಹಂಚಿಕೊಳ್ಳು”ವುದು ಅಗತ್ಯ. ಬಹಿಷ್ಕೃತರು ಪಶ್ಚಾತ್ತಾಪಪಟ್ಟು ತಮ್ಮ ತಪ್ಪು ದಾರಿಯನ್ನು ತಿದ್ದಿಕೊಂಡಿರುವಲ್ಲಿ, ಅವರಿಗೂ ಸಾಂತ್ವನವು ಬೇಕಾಗಬಹುದು. ಆದಕಾರಣ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಅವರಿಗೆ ಸಹಾಯ ಕೊಡಲು ಒಂದು ಕರುಣಾಭರಿತ ಒದಗಿಸುವಿಕೆಯನ್ನು ಸ್ಥಾಪಿಸಿದ್ದಾನೆ. ವರ್ಷಕ್ಕೊಮ್ಮೆ ಕೆಲವು ಬಹಿಷ್ಕೃತರಿಗೆ ಇಬ್ಬರು ಮಂದಿ ಹಿರಿಯರು ಭೇಟಿಕೊಡಬಹುದು. ಅವರು ಈಗ ದಂಗೆಯ ಮನೋಭಾವವನ್ನು ತೋರಿಸದಿರಬಹುದು, ಅಥವಾ ಘೋರವಾದ ಪಾಪವನ್ನು ಮಾಡದೆ ಇರಬಹುದು ಮತ್ತು ಹೀಗೆ, ಪುನಸ್ಸ್ಥಾಪಿಸಲ್ಪಡಲು ಅಗತ್ಯವಿರುವ ಹೆಜ್ಜೆಗಳನ್ನು ಇಡಲು ಅವರಿಗೆ ಸಹಾಯ ಬೇಕಾಗಬಹುದು.—ಮತ್ತಾಯ 24:45; ಯೆಹೆಜ್ಕೇಲ 34:16.
ಏಷಿಯದಲ್ಲಿ ಪೌಲನ ಸಂಕಟ
13, 14. (ಎ) ಏಷಿಯದಲ್ಲಿ ತನಗಾದ ಕಠಿನ ಸಂಕಟದ ಒಂದು ಸಮಯವನ್ನು ಪೌಲನು ಹೇಗೆ ವರ್ಣಿಸಿದನು? (ಬಿ) ಯಾವ ಘಟನೆಯು ಪೌಲನ ಮನಸ್ಸಿನಲ್ಲಿದ್ದಿರಬಹುದು?
13 ಈ ಹಂತದ ತನಕ ಕೊರಿಂಥ ಸಭೆಯು ಅನುಭವಿಸಿದ್ದ ರೀತಿಯ ಬಾಧೆಯನ್ನು, ಪೌಲನು ತಾಳಿಕೊಳ್ಳಬೇಕಾಗಿದ್ದ ಅನೇಕ ಸಂಕಟಗಳಿಗೆ ಹೋಲಿಸಲು ಸಾಧ್ಯವಾಗದು. ಆದಕಾರಣ, ಅವನು ಅವರಿಗೆ ಹೀಗೆ ಜ್ಞಾಪಕ ಹುಟ್ಟಿಸಲು ಸಾಧ್ಯವಾಗಿತ್ತು: “ಸಹೋದರರೇ, ಆಸ್ಯ ಸೀಮೆಯಲ್ಲಿ ನಮಗೆ ಸಂಭವಿಸಿದ ಸಂಕಟವನ್ನು ಕುರಿತು ವಿಚಾರಿಸುತ್ತೀರೋ ಅದರಲ್ಲಿ ನಾವು ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿ ಜೀವವುಳಿಯುವ ಮಾರ್ಗವನ್ನು ಕಾಣದವರಾದೆವೆಂಬದನ್ನು ನೀವು ತಿಳಿಯಬೇಕೆಂದು ಅಪೇಕ್ಷಿಸುತ್ತೇನೆ. ಮರಣವಾಗುತ್ತದೆಂಬ ನಿಶ್ಚಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಹೀಗಾಯಿತು. ಆತನು ನಮ್ಮನ್ನು ಎಂಥ ಭಯಂಕರ ಮರಣದಿಂದ ತಪ್ಪಿಸಿದನು, ಮುಂದೆಯೂ ತಪ್ಪಿಸುವನು. . . . ಆತನು ಇನ್ನು ಮೇಲೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ.”—2 ಕೊರಿಂಥ 1:8-10.
14 ಕೆಲವು ಮಂದಿ ಬೈಬಲ್ ತಜ್ಞರು, ಪೌಲನು ಎಫೆಸದಲ್ಲಿ ನಡೆದ ದೊಂಬಿಯನ್ನು ಸೂಚಿಸುತ್ತಿದ್ದನೆಂದು ನಂಬುತ್ತಾರೆ. ಅದರಲ್ಲಿ ಪೌಲನ ಹಾಗೂ ಅವನ ಇಬ್ಬರು ಮಕೆದೋನ್ಯದ ಪಯಣ ಸಂಗಾತಿಗಳಾಗಿದ್ದ ಗಾಯ ಮತ್ತು ಅರಿಸ್ತಾರ್ಕ ಎಂಬವರ ಜೀವಗಳು ನಷ್ಟವಾಗುತ್ತಿದ್ದವು. ಈ ಇಬ್ಬರು ಕ್ರೈಸ್ತರನ್ನು ಎಲ್ಲಿ ಒಂದು ಗಲಭೆಯ ಗುಂಪು, “ಎಫೆಸದವರ ಅರ್ತೆಮೀದೇವಿ ಮಹಾದೇವಿ ಎಂದು ಎರಡು ಘಂಟೆ ಹೊತ್ತು” ಕೂಗಿತೊ, ಆ ನಾಟಕಶಾಲೆಯೊಳಗೆ ಬಲಾತ್ಕಾರದಿಂದ ಕೊಂಡೊಯ್ಯಲಾಯಿತು. ಕಟ್ಟಕಡೆಗೆ ಪಟ್ಟಣದ ಒಬ್ಬ ಅಧಿಕಾರಿಯು ಜನರ ಗುಂಪನ್ನು ಮೌನವಾಗಿರಿಸುವುದರಲ್ಲಿ ಸಫಲನಾದನು. ಗಾಯ ಮತ್ತು ಅರಿಸ್ತಾರ್ಕರ ಜೀವಕ್ಕಿದ್ದ ಈ ಅಪಾಯವು ಪೌಲನನ್ನು ಮಹತ್ತಾಗಿ ಸಂಕಟಕ್ಕೊಳಪಡಿಸಿದ್ದಿರಬೇಕು. ವಾಸ್ತವವೇನಂದರೆ, ಪೌಲನು ಆ ಮತಾಂಧ ಗುಂಪಿದ್ದಲ್ಲಿಗೆ ಹೋಗಿ ಅವರೊಂದಿಗೆ ತರ್ಕಿಸಬೇಕೆಂದಿದ್ದನು, ಆದರೆ ತನ್ನ ಜೀವವನ್ನು ಈ ರೀತಿ ಅಪಾಯಕ್ಕೊಳಪಡಿಸುವುದರಿಂದ ಅವನನ್ನು ತಡೆಯಲಾಯಿತು.—ಅ. ಕೃತ್ಯಗಳು 19:26-41.
15. 1 ಕೊರಿಂಥ 15:32ರಲ್ಲಿ ಯಾವ ಉಗ್ರ ಸ್ಥಿತಿಯು ವರ್ಣಿಸಲ್ಪಟ್ಟಿರಬಹುದು?
15 ಆದರೂ, ಪೌಲನು ಈ ಮೇಲಿನ ಘಟನೆಗಿಂತಲೂ ಎಷ್ಟೋ ಹೆಚ್ಚು ಉಗ್ರ ಸ್ಥಿತಿಯ ಒಂದು ಸನ್ನಿವೇಶವನ್ನು ವರ್ಣಿಸುತ್ತಿದ್ದಿರಬಹುದು. ಕೊರಿಂಥದವರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ, “ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ?” ಎಂದು ಪೌಲನು ಕೇಳಿದನು. (1 ಕೊರಿಂಥ 15:32) ಇದರ ಅರ್ಥವು, ಪೌಲನ ಜೀವವು ಅಪಾಯಕ್ಕೊಳಗಾದದ್ದು ಪಶುಪ್ರಾಯರಾದ ಜನರಿಂದ ಮಾತ್ರವಲ್ಲ, ಎಫೆಸದ ಕ್ರೀಡಾಂಗಣದಲ್ಲಿ ಅಕ್ಷರಾರ್ಥವಾದ ಕಾಡುಮೃಗಗಳಿಂದಲೂ ಎಂದಾಗಿರಬಹುದು. ಪಾತಕಿಗಳನ್ನು ಕೆಲವು ಬಾರಿ, ರಕ್ತದಾಹವಿರುವ ಜನಸ್ತೋಮವು ಪ್ರೇಕ್ಷಿಸುತ್ತಿರುವಾಗ, ಅವರು ಕಾಡುಮೃಗಗಳೊಂದಿಗೆ ಹೋರಾಡುವಂತೆ ನಿರ್ಬಂಧಿಸಲಾಗುತ್ತಿತ್ತು. ತಾನು ಅಕ್ಷರಾರ್ಥವಾದ ಕಾಡುಮೃಗಗಳ ಎದುರಾಗಿದ್ದೆನೆಂದು ಪೌಲನು ಅರ್ಥೈಸಿದ್ದರೆ, ದಾನಿಯೇಲನು ಅಕ್ಷರಾರ್ಥದ ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟಂತೆಯೇ, ಅವನು ಕೊನೆಯ ಕ್ಷಣದಲ್ಲಿ ಕ್ರೂರವಾದ ಮರಣದಿಂದ ಅದ್ಭುತಕರವಾಗಿ ಉಳಿಸಲ್ಪಟ್ಟಿದ್ದಿರಲೇಬೇಕು.—ದಾನಿಯೇಲ 6:22.
ಆಧುನಿಕ ದಿನದ ಮಾದರಿಗಳು
16. (ಎ) ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ಪೌಲನು ಅನುಭವಿಸಿದ ಸಂಕಟಗಳೊಂದಿಗೆ ಏಕೆ ಗುರುತಿಸಲ್ಪಡಸಾಧ್ಯವಿದೆ? (ಬಿ) ತಮ್ಮ ನಂಬಿಕೆಯ ಕಾರಣ ಸತ್ತವರ ಸಂಬಂಧದಲ್ಲಿ ನಾವು ಯಾವ ಖಾತ್ರಿಯಿಂದಿರಸಾಧ್ಯವಿದೆ? (ಸಿ) ಕ್ರೈಸ್ತರು ಮರಣವನ್ನು ಅಲ್ಪ ಅಂತರದಲ್ಲಿ ತಪ್ಪಿಸಿಕೊಳ್ಳುವಾಗ, ಯಾವ ಒಳ್ಳೆಯ ಪರಿಣಾಮವು ಒದಗಿಬಂದಿದೆ?
16 ಪ್ರಸಕ್ತ ದಿನದ ಅನೇಕ ಮಂದಿ ಕ್ರೈಸ್ತರು, ಪೌಲನಿಂದ ಅನುಭವಿಸಲ್ಪಟ್ಟ ಸಂಕಟಗಳಿಗೆ ಸಂಬಂಧ ಕಲ್ಪಿಸಬಲ್ಲರು. (2 ಕೊರಿಂಥ 11:23-27) ಇಂದು ಸಹ, ಕ್ರೈಸ್ತರು “[ಅವರ] ಬಲವನ್ನು ಮೀರಿದಂಥ ಅತ್ಯಧಿಕ ಭಾರ” ಉಳ್ಳವರಾಗಿದ್ದಾರೆ ಮತ್ತು ಅನೇಕರು ‘ತಮ್ಮ ಜೀವಗಳ ವಿಷಯ ಅನಿಶ್ಚಿತರಾಗಿದ್ದ’ ಸನ್ನಿವೇಶಗಳನ್ನು ಎದುರಿಸಿದ್ದಾರೆ. (2 ಕೊರಿಂಥ 1:8) ಕೆಲವರು ಸಾಮೂಹಿಕ ಕೊಲೆಗಾರರ ಮತ್ತು ಕ್ರೂರ ಹಿಂಸಕರ ಕೈಗಳಲ್ಲಿ ಸತ್ತಿದ್ದಾರೆ. ದೇವರ ಸಾಂತ್ವನದಾಯಕ ಶಕ್ತಿಯು, ಅವರು ಸಹಿಸಿಕೊಳ್ಳುವಂತೆ ಸಾಮರ್ಥ್ಯವನ್ನಿತ್ತಿತು ಮತ್ತು ಅವರು ತಮ್ಮ ಹೃದಮನಗಳನ್ನು ಸ್ವರ್ಗದ ಅಥವಾ ಭೂಮಿಯ ತಮ್ಮ ನಿರೀಕ್ಷೆಯ ನೆರವೇರಿಕೆಯ ಮೇಲೆ ದೃಢವಾಗಿ ಸ್ಥಿರೀಕರಿಸುತ್ತ ಮೃತರಾದರು ಎಂಬ ಖಾತರಿಯಿಂದ ನಾವಿರಬಲ್ಲೆವು. (1 ಕೊರಿಂಥ 10:13; ಫಿಲಿಪ್ಪಿ 4:13; ಪ್ರಕಟನೆ 2:10) ಬೇರೆ ಸಂದರ್ಭಗಳಲ್ಲಿ, ಯೆಹೋವನು ವಿಷಯಗಳನ್ನು ಕೌಶಲದಿಂದ ನಿರ್ವಹಿಸಿದ್ದಾನೆ ಮತ್ತು ನಮ್ಮ ಸಹೋದರರು ಮರಣದಿಂದ ರಕ್ಷಿಸಲ್ಪಟ್ಟಿದ್ದಾರೆ. ಇಂತಹ ರಕ್ಷಣೆಯನ್ನು ಅನುಭವಿಸಿರುವವರು, “ಸತ್ತವರನ್ನು ಎಬ್ಬಿಸುವ ದೇವರ ಮೇಲೆ” ವರ್ಧಿಸಿದ ಭರವಸೆಯನ್ನು ವಿಕಸಿಸಿದ್ದಾರೆಂಬುದು ನಿಸ್ಸಂಶಯ. (2 ಕೊರಿಂಥ 1:9) ಅನಂತರ, ಅವರು ದೇವರ ಸಾಂತ್ವನದಾಯಕ ಸಂದೇಶದಲ್ಲಿ ಇತರರೊಂದಿಗೆ ಭಾಗಿಗಳಾದಾಗ, ಇನ್ನೂ ಹೆಚ್ಚಿನ ಮನವರಿಕೆಯಿಂದ ಮಾತಾಡಶಕ್ತರಾದರು.—ಮತ್ತಾಯ 24:14.
17-19. ರ್ವಾಂಡದಲ್ಲಿನ ನಮ್ಮ ಸಹೋದರರು ದೇವರ ಸಾಂತ್ವನದಲ್ಲಿ ಪಾಲಿಗರೆಂಬುದನ್ನು ಯಾವ ಅನುಭವಗಳು ತೋರಿಸುತ್ತವೆ?
17 ಇತ್ತೀಚೆಗೆ ರ್ವಾಂಡದ ನಮ್ಮ ಪ್ರಿಯ ಸಹೋದರರು ಪೌಲ ಮತ್ತು ಅವನ ಸಂಗಡಿಗರ ಹಾಗಿನ ಅನುಭವವೊಂದನ್ನು ಅನುಭವಿಸಿದರು. ಅನೇಕರು ಜೀವನಷ್ಟ ಹೊಂದಿದರೂ, ಸೈತಾನನ ಪ್ರಯತ್ನಗಳು ಅವರ ನಂಬಿಕೆಯನ್ನು ನಾಶಮಾಡುವುದರಲ್ಲಿ ನಿಷ್ಫಲಗೊಂಡವು. ಅದಕ್ಕೆ ಬದಲಾಗಿ, ಈ ದೇಶದ ನಮ್ಮ ಸಹೋದರರು ಅನೇಕ ವ್ಯಕ್ತಿಗತ ವಿಧಗಳಲ್ಲಿ ದೇವರ ಸಾಂತ್ವನವನ್ನು ಅನುಭವಿಸಿದ್ದಾರೆ. ರ್ವಾಂಡದಲ್ಲಿ ಜೀವಿಸುತ್ತಿದ್ದ ಟೂಟ್ಸೀ ಮತ್ತು ಹೂಟೂಗಳ ಜನಾಂಗ ಹತ್ಯೆಯ ಸಮಯದಲ್ಲಿ, ಟೂಟ್ಸೀಗಳನ್ನು ಸಂರಕ್ಷಿಸಲು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದ ಹೂಟೂಗಳು ಮತ್ತು ಹೂಟೂಗಳನ್ನು ರಕ್ಷಿಸಿದ ಟೂಟ್ಸೀಗಳಿದ್ದರು. ಕೆಲವರು ಜೊತೆವಿಶ್ವಾಸಿಗಳನ್ನು ಸಂರಕ್ಷಿಸಿದ್ದಕ್ಕಾಗಿ ಉಗ್ರವಾದಿಗಳಿಂದ ಕೊಲ್ಲಲ್ಪಟ್ಟರು. ಉದಾಹರಣೆಗೆ, ಗಾಹೀಸೀ ಎಂಬ ಹೆಸರಿನ ಒಬ್ಬ ಹೂಟೂ ಸಾಕ್ಷಿಯು, ಶಾಂಟಾಲ್ ಎಂಬ ಹೆಸರಿನ ಟೂಟ್ಸೀ ಸಹೋದರಿಯನ್ನು ಅಡಗಿಸಿಟ್ಟದ್ದಕ್ಕಾಗಿ ಕೊಲ್ಲಲ್ಪಟ್ಟನು. ಶಾಂಟಾಲ್ನ ಟೂಟ್ಸೀ ಗಂಡ ಶಾನ್ನನ್ನು, ಶಾರ್ಲಟ್ ಎಂಬ ಹೂಟೂ ಸಹೋದರಿ ಇನ್ನೊಂದು ಸ್ಥಳದಲ್ಲಿ ಅಡಗಿಸಿಟ್ಟಳು. ಶಾನ್ ಮತ್ತು ಇನ್ನೊಬ್ಬ ಟೂಟ್ಸೀ ಸಹೋದರನು 40 ದಿನಗಳ ತನಕ ಒಂದು ದೊಡ್ಡ ಹೊಗೆ ಕೊಳವೆಯಲ್ಲಿ ಅಡಗಿದ್ದು, ರಾತ್ರಿಕಾಲದಲ್ಲಿ ತುಸು ಸಮಯಗಳಲ್ಲಿ ಮಾತ್ರ ಹೊರಗೆ ಬರುತ್ತಿದ್ದರು. ಒಂದು ಹೂಟೂ ಸೈನಿಕ ಶಿಬಿರಕ್ಕೆ ಸಮೀಪದಲ್ಲಿ ಜೀವಿಸುತ್ತಿದ್ದರೂ, ಶಾರ್ಲಟ್ ಈ ಎಲ್ಲ ಸಮಯದಲ್ಲಿ ಅವರಿಗೆ ಆಹಾರ ಮತ್ತು ಸಂರಕ್ಷಣೆಯನ್ನು ಒದಗಿಸಿದಳು. ಈ ಪುಟದಲ್ಲಿ, ನೀವು ಪುನರ್ಮಿಲನಗೊಂಡ ಶಾನ್ ಮತ್ತು ಶಾಂಟಾಲ್ ಅವರ ಚಿತ್ರವನ್ನು ನೋಡಸಾಧ್ಯವಿದೆ. ಅವರು, ಅಪೊಸ್ತಲ ಪೌಲನಿಗಾಗಿ ಪ್ರಿಸ್ಕ ಮತ್ತು ಅಕ್ವಿಲ ಮಾಡಿದಂತೆಯೇ, ತಮಗಾಗಿ ಹೂಟೂ ಜೊತೆ ಆರಾಧಕರು “ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿ”ದ್ದಕ್ಕಾಗಿ ಆಭಾರಿಗಳಾಗಿದ್ದಾರೆ.—ರೋಮಾಪುರ 16:3, 4.
18 ಇನ್ನೊಬ್ಬ ಹೂಟೂ ಸಾಕ್ಷಿಯಾದ ರುಆಕಾಬೂಬೂ, ಟೂಟ್ಸೀ ಜೊತೆವಿಶ್ವಾಸಿಗಳನ್ನು ಸಂರಕ್ಷಿಸಿದುದಕ್ಕಾಗಿ ಈಂಟಾರಮಾರಾ ವಾರ್ತಾಪತ್ರದಿಂದ ಪ್ರಶಂಸಿಸಲ್ಪಟ್ಟನು.a ಅದು ಹೇಳಿದ್ದು: “ಯೆಹೋವನ ಸಾಕ್ಷಿಗಳಲ್ಲೊಬ್ಬನಾದ ರೂಆಕಾಬೂಬೂ ಎಂಬವನಿದ್ದಾನೆ. ಅವನು ಜನರನ್ನು ತನ್ನ ಸಹೋದರರ (ಜೊತೆವಿಶ್ವಾಸಿಗಳು ಒಬ್ಬರನ್ನೊಬ್ಬರು ಕರೆಯವುದು ಹಾಗೆಯೇ) ಮಧ್ಯೆ ಅಡಗಿಸಿಡುತ್ತ ಹೋದನು. ಅವನು ಉಬ್ಬಸ ರೋಗಿಯಾಗಿದ್ದರೂ, ಇಡೀ ದಿನ ಅವರಿಗಾಗಿ ಆಹಾರ ಮತ್ತು ಕುಡಿಯುವ ನೀರನ್ನು ಒಯ್ಯುತ್ತ ಕಳೆಯುತ್ತಿದ್ದನು. ಆದರೆ ದೇವರು ಅವನನ್ನು ಅಸಾಧಾರಣವಾದ ಬಲವುಳ್ಳವನಾಗಿ ಮಾಡಿದನು.”
19 ಆಸಕ್ತ ಹೂಟೂ ದಂಪತಿಗಳಾದ ನೀಕಡ್ಯಾಮ್ ಮತ್ತು ಅಟನಾಸೀ ಎಂಬವರನ್ನೂ ಪರಿಗಣಿಸಿರಿ. ಜನಾಂಗ ಹತ್ಯೆಯು ಆರಂಭಗೊಳ್ಳುವ ಮೊದಲು, ಈ ವಿವಾಹಿತ ದಂಪತಿಗಳು ಅಲ್ಫೋನ್ಸ್ ಎಂಬ ಒಬ್ಬ ಟೂಟ್ಸೀ ಸಾಕ್ಷಿಯೊಂದಿಗೆ ಬೈಬಲನ್ನು ಅಭ್ಯಸಿಸುತ್ತಿದ್ದರು. ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿ ಅವರು ಅಲ್ಫೋನ್ಸ್ನನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟರು. ಆ ಬಳಿಕ, ಮನೆಯು ಸುಭದ್ರ ಸ್ಥಳವಲ್ಲವೆಂದು ಅವರು ಗ್ರಹಿಸಿದರು. ಏಕೆಂದರೆ ಅವರ ಟೂಟ್ಸೀ ಮಿತ್ರನ ಕುರಿತಾಗಿ ಅವರ ಹೂಟೂ ನೆರೆಯವರಿಗೆ ತಿಳಿದಿತ್ತು. ಆದಕಾರಣ, ನೀಕಡ್ಯಾಮ್ ಮತ್ತು ಅಟನಾಸೀ, ಅಲ್ಫೋನ್ಸ್ನನ್ನು ತಮ್ಮ ಹಿತ್ತಲಲ್ಲಿ ಒಂದು ಕುಳಿಯಲ್ಲಿ ಬಚ್ಚಿಟ್ಟರು. ಈ ಸ್ಥಳಾಂತರವು ಉತ್ತಮವಾದದ್ದಾಗಿತ್ತು, ಏಕೆಂದರೆ ನೆರೆಯವರು ಅಲ್ಫೋನ್ಸ್ನನ್ನು ಹುಡುಕುತ್ತ, ಹೆಚ್ಚುಕಡಮೆ ಪ್ರತಿದಿನ ಬರತೊಡಗಿದರು. ಈ ಕುಳಿಯಲ್ಲಿ 28 ದಿನಗಳ ತನಕ ಇದ್ದಾಗ, ಅಲ್ಫೋನ್ಸ್, ಯೆರಿಕೋವಿನ ತನ್ನ ಮನೆಯ ಚಾವಣಿಯಲ್ಲಿ ಇಬ್ಬರು ಇಸ್ರಾಯೇಲ್ಯರನ್ನು ಅಡಗಿಸಿಟ್ಟ ರಾಹಾಬಳ ವೃತ್ತಾಂತದಂತಹ ಬೈಬಲ್ ವೃತ್ತಾಂತಗಳ ಕುರಿತು ಧ್ಯಾನಿಸಿದನು. (ಯೆಹೋಶುವ 6:17) ಇಂದು ಅಲ್ಫೋನ್ಸ್, ತನ್ನ ಹೂಟೂ ಬೈಬಲ್ ವಿದ್ಯಾರ್ಥಿಗಳು ತನಗಾಗಿ ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದ್ದರ ಪರಿಣಾಮವಾಗಿ, ರ್ವಾಂಡದಲ್ಲಿ ಸುವಾರ್ತೆಯನ್ನು ಸಾರುವವನೋಪಾದಿ ತನ್ನ ಸೇವೆಯಲ್ಲಿ ಮುಂದುವರಿಯುತ್ತಾನೆ. ಮತ್ತು ನೀಕಡ್ಯಾಮ್ ಮತ್ತು ಅಟನಾಸೀ ಅವರಿಗೆ ಏನಾಯಿತು? ಅವರು ಈಗ ಯೆಹೋವನ ದೀಕ್ಷಾಸ್ನಾತ ಸಾಕ್ಷಿಗಳಾಗಿ, ಆಸಕ್ತರೊಂದಿಗೆ 20ಕ್ಕೂ ಹೆಚ್ಚಿನ ಬೈಬಲ್ ಅಧ್ಯಯನಗಳನ್ನು ನಡೆಸುತ್ತಾರೆ.
20. ರ್ವಾಂಡದ ನಮ್ಮ ಸಹೋದರರನ್ನು ಯೆಹೋವನು ಯಾವ ವಿಧದಲ್ಲಿ ಸಾಂತ್ವನಗೊಳಿಸಿದ್ದಾನೆ, ಆದರೆ ಯಾವ ಮುಂದುವರಿದ ಆವಶ್ಯಕತೆ ಅವರಲ್ಲಿ ಅನೇಕರಿಗಿದೆ?
20 ರ್ವಾಂಡದಲ್ಲಿ ಜನಾಂಗ ಹತ್ಯೆ ಆರಂಭವಾದಾಗ, ಆ ದೇಶದಲ್ಲಿ 2,500 ಮಂದಿ ಸುವಾರ್ತಾ ಘೋಷಕರಿದ್ದರು. ನೂರಾರು ಮಂದಿ ಜೀವನಷ್ಟಪಟ್ಟರೂ, ದೇಶದಿಂದ ಓಡಿಹೋಗುವಂತೆ ನಿರ್ಬಂಧಿಸಲ್ಪಟ್ಟರೂ, ಸಾಕ್ಷಿಗಳ ಸಂಖ್ಯೆಯು 3,000ವನ್ನು ಮಿಕ್ಕಿದೆ. ದೇವರು ನಮ್ಮ ಸಹೋದರರನ್ನು ಸಾಂತ್ವನಗೊಳಿಸಿದ್ದಾನೆಂಬುದಕ್ಕೆ ಅದು ರುಜುವಾತು. ಯೆಹೋವನ ಸಾಕ್ಷಿಗಳ ಮಧ್ಯೆ ಇರುವ ಅನೇಕ ಅನಾಥರ ಮತ್ತು ವಿಧವೆಯರ ವಿಷಯದಲ್ಲೇನು? ಸ್ವಾಭಾವಿಕವಾಗಿ, ಇವರು ಇನ್ನೂ ಸಂಕಟಪಡುತ್ತಾ ಇದ್ದಾರೆ ಮತ್ತು ಅವರಿಗೆ ಮುಂದುವರಿಯುವ ಸಾಂತ್ವನದ ಅಗತ್ಯವಿದೆ. (ಯಾಕೋಬ 1:27) ಅವರ ಅಶ್ರುಗಳು ದೇವರ ನೂತನ ಲೋಕದಲ್ಲಿ ಪುನರುತ್ಥಾನವು ಸಂಭವಿಸುವಾಗ ಮಾತ್ರ ಪೂರ್ತಿಯಾಗಿ ಒರಸಿಬಿಡಲ್ಪಡುವುವು. ಆದರೂ, ತಮ್ಮ ಸಹೋದರರ ಉಪಚಾರದ ಫಲವಾಗಿ ಮತ್ತು ತಾವು “ಸಕಲ ಸಾಂತ್ವನದ ದೇವರ” ಆರಾಧಕರಾಗಿರುವ ಕಾರಣ, ಅವರು ತಮ್ಮ ಜೀವನವನ್ನು ನಿಭಾಯಿಸಶಕ್ತರಾಗಿದ್ದಾರೆ.
21. (ಎ) ನಮ್ಮ ಸಹೋದರರು ಇನ್ನೆಲ್ಲಿ ದೇವರ ಸಾಂತ್ವನದ ಆವಶ್ಯಕತೆಯುಳ್ಳವರಾಗಿದ್ದಾರೆ, ಮತ್ತು ನಾವೆಲ್ಲರೂ ಸಹಾಯಮಾಡಬಲ್ಲ ಒಂದು ವಿಧವು ಯಾವುದು? (“ನಾಲ್ಕು ವರುಷಗಳ ಯುದ್ಧಾವಧಿಯಲ್ಲಿ ಸಾಂತ್ವನ” ಎಂಬ ರೇಖಾಚೌಕ ನೋಡಿ.) (ಬಿ) ಸಾಂತ್ವನಕ್ಕಾಗಿ ನಮಗಿರುವ ಅಗತ್ಯವು ಯಾವಾಗ ಪೂರ್ಣವಾಗಿ ತೃಪ್ತಿಗೊಳಿಸಲ್ಪಡುವುದು?
21 ಎರಿಟ್ರೀಯ, ಸಿಂಗಾಪುರ ಮತ್ತು ಮುನ್ನಿನ ಯುಗೊಸ್ಲಾವಿಯದಂತಹ ಅನೇಕ ಸ್ಥಳಗಳಲ್ಲಿ, ಸಂಕಷ್ಟಗಳ ಹೊರತಾಗಿಯೂ ನಮ್ಮ ಸಹೋದರರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತ ಮುಂದುವರಿಯುತ್ತಾರೆ. ಅವರು ಸಾಂತ್ವನವನ್ನು ಪಡೆಯುವಂತೆ ಕ್ರಮವಾಗಿ ವಿಜ್ಞಾಪನೆಗಳನ್ನು ಮಾಡುವ ಮೂಲಕ ನಾವು ಅಂತಹ ಸಹೋದರರಿಗೆ ಸಹಾಯ ಮಾಡುವಂತಾಗಲಿ. (2 ಕೊರಿಂಥ 1:11) ಮತ್ತು ಅತ್ಯಂತ ಪೂರ್ಣಾರ್ಥದಲ್ಲಿ, ದೇವರು, ಯೇಸು ಕ್ರಿಸ್ತನ ಮೂಲಕ, “[ನಮ್ಮ] ಕಣ್ಣೀರನ್ನೆಲ್ಲಾ ಒರಸಿ”ಬಿಡುವ ಸಮಯದ ತನಕ ನಾವು ನಂಬಿಗಸ್ತಿಕೆಯಿಂದ ಸಹಿಸಿಕೊಳ್ಳುವಂತಾಗಲಿ. ಆಗ ಯೆಹೋವನು ತನ್ನ ನೀತಿಯ ನೂತನ ಲೋಕದಲ್ಲಿ ಒದಗಿಸಲಿರುವ ಸಾಂತ್ವನವನ್ನು ನಾವು ಸಂಪೂರ್ಣ ಮಟ್ಟದ ತನಕ ಅನುಭವಿಸುವೆವು.—ಪ್ರಕಟನೆ 7:17; 21:4; 2 ಪೇತ್ರ 3:13.
[ಪಾದಟಿಪ್ಪಣಿ]
a ಕಾವಲಿನಬುರುಜು, ಜನವರಿ 1, 1995, ಪುಟ 26, ರೂಆಕಾಬೂಬೂವಿನ ಮಗಳಾದ ಡೆಬಾರಳ ಅನುಭವವನ್ನು ತಿಳಿಸಿತು. ಆಕೆಯ ಪ್ರಾರ್ಥನೆಯು ಹೂಟೂ ಸೈನಿಕರ ಒಂದು ತಂಡದ ಹೃದಯ ಸ್ಪರ್ಶಿಸಿ, ಕೊಲೆ ಮಾಡಲ್ಪಡುವುದರಿಂದ ಆ ಕುಟುಂಬವನ್ನು ರಕ್ಷಿಸಿತು.
ನಿಮಗೆ ಗೊತ್ತಿದೆಯೆ?
◻ “ಸಕಲ ಸಾಂತ್ವನದ ದೇವರು” ಎಂದು ಯೆಹೋವನು ಕರೆಯಲ್ಪಡುವುದೇಕೆ?
◻ ಸಂಕಟಗಳನ್ನು ನಾವು ಹೇಗೆ ವೀಕ್ಷಿಸಬೇಕು?
◻ ನಾವು ಸಾಂತ್ವನದಲ್ಲಿ ಯಾರೊಂದಿಗೆ ಪಾಲಿಗರಾಗಬಲ್ಲೆವು?
◻ ಸಾಂತ್ವನಕ್ಕಾಗಿರುವ ನಮ್ಮ ಆವಶ್ಯಕತೆಯು ಹೇಗೆ ಸಂಪೂರ್ಣವಾಗಿ ತೃಪ್ತಿಗೊಳಿಸಲ್ಪಡುವುದು?
[ಪುಟ 17 ರಲ್ಲಿರುವ ಚಿತ್ರ]
ರ್ವಾಂಡದ ಜನಾಂಗ ಹತ್ಯೆಯ ಸಮಯದಲ್ಲಿ, ಶಾನ್ ಮತ್ತು ಶಾಂಟಾಲ್ ಎಂಬವರು ಟೂಟ್ಸೀ ಸಾಕ್ಷಿಗಳಾಗಿದ್ದರೂ, ಹೂಟೂ ಸಾಕ್ಷಿಗಳಿಂದ ಪ್ರತ್ಯೇಕ ಸ್ಥಳಗಳಲ್ಲಿ ಬಚ್ಚಿಡಲ್ಪಟ್ಟರು
[ಪುಟ 17 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ರ್ವಾಂಡದಲ್ಲಿ ತಮ್ಮ ನೆರೆಯವರೊಂದಿಗೆ ದೇವರ ಸಾಂತ್ವನದಾಯಕ ಸಂದೇಶದಲ್ಲಿ ಪಾಲಿಗರಾಗುತ್ತ ಮುಂದುವರಿಯುತ್ತಾರೆ