ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗೂ ಇದೆಯೇ?
“ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ಆವಶ್ಯಕವಾದವುಗಳಾಗಿವೆ.”—1 ಕೊರಿಂ. 12:22.
1, 2. ಬಲಹೀನರನ್ನು ಅರ್ಥಮಾಡಿಕೊಳ್ಳಲು ಪೌಲನಿಗೆ ಸಾಧ್ಯವಾಯಿತು ಏಕೆ?
ನಮಗೆಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಬಲಹೀನತೆಯ ಅನುಭವ ಆಗಿರುತ್ತದೆ. ಫ್ಲೂ ಜ್ವರದಿಂದಲೊ ಅಲರ್ಜಿಗಳಿಂದಲೊ ನಾವು ದುರ್ಬಲರಾಗಿರಬಹುದು. ಎಷ್ಟರ ಮಟ್ಟಿಗೆಯೆಂದರೆ, ನಮ್ಮ ದೈನಂದಿನ ಕೆಲಸಕಾರ್ಯಗಳನ್ನೂ ನಮ್ಮಿಂದ ಮಾಡಲು ಆಗದೆ ಹೋಗಿರಬಹುದು. ನೆನಸಿ, ನೀವು ಹೀಗೆ ಒಂದೆರಡು ವಾರಕ್ಕಲ್ಲ, ತಿಂಗಳುಗಟ್ಟಲೆ ಸಮಯ ಬಲಹೀನರಾಗಿದ್ದೀರಿ. ಇಂಥ ಸನ್ನಿವೇಶದಲ್ಲಿ ಇತರರು ನಿಮ್ಮ ಪರಿಸ್ಥಿತಿ ಅರ್ಥಮಾಡಿಕೊಂಡು ನಡೆದುಕೊಂಡಾಗ ನೀವೆಷ್ಟು ಆಭಾರಿಗಳಾಗಿರುತ್ತೀರಿ ಅಲ್ಲವೇ?
2 ಅಪೊಸ್ತಲ ಪೌಲನಿಗೂ ಬಲಹೀನನಾಗಿರುವುದರ ಅನುಭವ ಆಗಿತ್ತು. ಏಕೆಂದರೆ ಅವನಿಗೆ ಸಭೆಯೊಳಗಿಂದಲೂ ಹೊರಗಿನಿಂದಲೂ ಅನೇಕ ಒತ್ತಡಗಳಿದ್ದವು. ಇನ್ನು ಮುಂದೆ ತನಗೆ ಸಹಿಸಲಿಕ್ಕಾಗುವುದಿಲ್ಲ ಎಂದವನಿಗೆ ಅನಿಸಿತು. (2 ಕೊರಿಂ. 1:8; 7:5) ತನ್ನ ಬದುಕಿನ ಬಗ್ಗೆ ಮತ್ತು ನಂಬಿಗಸ್ತ ಕ್ರೈಸ್ತನಾಗಿ ಅನುಭವಿಸಿದ್ದ ಕಷ್ಟಗಳ ಬಗ್ಗೆ ಪೌಲನು ಒಮ್ಮೆ ಹಿನ್ನೋಟ ಬೀರುತ್ತಾ, “ಬೇರೆಯವರಂತೆ ನಾನೂ ಬಲಹೀನ” ಎಂದು ಒಪ್ಪಿಕೊಂಡನು. (2 ಕೊರಿಂ. 11:29, ಪವಿತ್ರ ಗ್ರಂಥ ಭಾಷಾಂತರ) ಕ್ರೈಸ್ತ ಸಭೆಯಲ್ಲಿರುವ ಸದಸ್ಯರನ್ನು ಮಾನವ ದೇಹದ ಬೇರೆ ಬೇರೆ ಅಂಗಗಳಿಗೆ ಹೋಲಿಸುತ್ತಾ ಅವನಂದದ್ದು: “ಬಲಹೀನವಾಗಿ ತೋರುವ ಅಂಗಗಳು ಆವಶ್ಯಕವಾದವುಗಳಾಗಿವೆ.” (1 ಕೊರಿಂ. 12:22) ಅವನ ಮಾತಿನ ಅರ್ಥವೇನು? ಬಲಹೀನರೆಂಬಂತೆ ತೋರುವವರ ಬಗ್ಗೆ ನಮಗೆ ಏಕೆ ಯೆಹೋವನ ನೋಟ ಇರಬೇಕು? ಇದರಿಂದ ನಮಗೇನು ಪ್ರಯೋಜನ?
ಮಾನವ ಬಲಹೀನತೆಗಳ ಬಗ್ಗೆ ಯೆಹೋವನ ನೋಟ
3. ಸಭೆಯಲ್ಲಿ ನೆರವಿನ ಅಗತ್ಯವಿರುವವರ ಕುರಿತ ನಮ್ಮ ನೋಟವನ್ನು ಯಾವುದು ಪ್ರಭಾವಿಸಬಹುದು?
3 ನಾವಿಂದು ಜೀವಿಸುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಲ ಹಾಗೂ ಯೌವನಕ್ಕೇ ಪ್ರಾಶಸ್ತ್ಯ ಕೊಡಲಾಗುತ್ತದೆ. ಅನೇಕರು ಯಶಸ್ಸಿನ ಮೆಟ್ಟಿಲೇರಲಿಕ್ಕಾಗಿ ತಮಗಿಂತ ಬಲಹೀನರಾದವರ ಭಾವನೆಗಳನ್ನು ಕಾಲಕಸದಂತೆ ತುಳಿಯಲೂ ಹೇಸುವುದಿಲ್ಲ. ಕ್ರೈಸ್ತರಾಗಿ ನಾವು ಅಂಥ ನಡವಳಿಕೆಯನ್ನು ಇಷ್ಟಪಡುವುದಿಲ್ಲ. ಆದರೂ ಲೋಕದ ಪ್ರಭಾವದಿಂದಾಗಿ ನಮಗೇ ಅರಿವಿಲ್ಲದೆ ನಮ್ಮ ಸಹಾಯದ ಅಗತ್ಯವುಳ್ಳವರ ಬಗ್ಗೆ ನಕಾರಾತ್ಮಕ ನೋಟ ಬೆಳೆಯಬಹುದು. ಸಭೆಯವರ ಬಗ್ಗೆಯೂ ನಮಗೆ ಆ ಭಾವನೆ ಬರಬಹುದು. ಹಾಗಿದ್ದರೂ ನಾವು ಒಂದು ಸಮತೂಕದ ನೋಟ ಅಂದರೆ ದೇವರ ನೋಟವನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ.
4, 5. (ಎ) 1 ಕೊರಿಂಥ 12:21-23ರಲ್ಲಿರುವ ದೃಷ್ಟಾಂತವು ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟವನ್ನು ಗ್ರಹಿಸಲು ಹೇಗೆ ನೆರವಾಗುತ್ತದೆ? (ಬಿ) ಬಲಹೀನರಿಗೆ ಸಹಾಯ ಮಾಡುವುದರಿಂದ ನಮಗೇನು ಪ್ರಯೋಜನ?
4 ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರದಲ್ಲಿ ಒಂದು ದೃಷ್ಟಾಂತವಿದೆ. ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ಇದರಿಂದ ತಿಳಿದುಬರುತ್ತದೆ. ಮಾನವ ದೇಹದಲ್ಲಿ ಅಂದವಿಲ್ಲದ ಅಥವಾ ತುಂಬ ಬಲಹೀನವಾದ ಅಂಗಕ್ಕೂ ಒಂದು ಕೆಲಸ ಇರುತ್ತದೆಂದು ಪೌಲನು ಅಧ್ಯಾಯ 12ರಲ್ಲಿ ಹೇಳಿದ್ದಾನೆ. (1 ಕೊರಿಂಥ 12:12, 18, 21-23 ಓದಿ.) ವಿಕಾಸವಾದಿಗಳಾದರೊ ಮಾನವ ದೇಹದ ಕೆಲವು ಅಂಗಗಳು ಉಪಯುಕ್ತವಲ್ಲವೆಂದು ಹೇಳುತ್ತಾರೆ. ಆದರೆ ನಿಷ್ಪ್ರಯೋಜಕ ಎಂದೆಣಿಸಲಾಗುತ್ತಿದ್ದ ದೇಹಾಂಗಗಳು ಸಹ ಮಹತ್ವಪೂರ್ಣ ಕೆಲಸಗಳನ್ನು ಮಾಡುತ್ತವೆಂದು ದೇಹರಚನೆಯ ಅಧ್ಯಯನದಿಂದ ಕಂಡುಬಂದಿದೆ.a ಉದಾಹರಣೆಗೆ ಕಿರು ಕಾಲ್ಬೆರಳಿನ ಉಪಯೋಗವಾದರೂ ಏನು ಎಂದು ಕೆಲವರು ಸವಾಲೆಬ್ಬಿಸಿದ್ದಾರೆ. ಆದರೆ ಇಡೀ ದೇಹದ ಸಮತೋಲನ ಕಾಪಾಡುವುದರಲ್ಲಿ ಅದಕ್ಕೂ ಒಂದು ಪಾತ್ರವಿದೆಯೆಂದು ಈಗ ತಿಳಿದುಬಂದಿದೆ.
5 ಕ್ರೈಸ್ತ ಸಭೆಯ ಎಲ್ಲ ಸದಸ್ಯರು ಉಪಯುಕ್ತರೆಂದು ಪೌಲನ ದೃಷ್ಟಾಂತ ಎತ್ತಿತೋರಿಸುತ್ತದೆ. ಸೈತಾನನಿಗೆ ಮಾನವರ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಆದರೆ ಯೆಹೋವನು ಹಾಗಲ್ಲ. ತನ್ನೆಲ್ಲಾ ಸೇವಕರು, ಬಲಹೀನರಂತೆ ತೋರುವವರು ಸಹ “ಆವಶ್ಯಕ” ಎಂಬ ನೋಟ ಆತನಿಗಿದೆ. (ಯೋಬ 4:18, 19) ಈ ವಿಚಾರವು ಸ್ಥಳೀಯ ಸಭೆಯಲ್ಲಿ ನಮಗಿರುವ ಪಾತ್ರದ ಬಗ್ಗೆ ಹಾಗೂ ದೇವಜನರ ಲೋಕವ್ಯಾಪಕ ಸಭೆಯ ಭಾಗವಾಗಿದ್ದೇವೆ ಎಂಬದರ ಬಗ್ಗೆ ನಾವು ಹೆಮ್ಮೆಪಡುವಂತೆ ಮಾಡಬೇಕು. ನೀವು ಯಾವತ್ತಾದರೂ ವೃದ್ಧರೊಬ್ಬರಿಗೆ ನಿಮ್ಮ ಕೈಯನ್ನು ಆಸರೆಯಾಗಿ ಕೊಟ್ಟದ್ದನ್ನು ನೆನಪಿಸಿಕೊಳ್ಳಿ. ಆಗ ಅವರ ನಿಧಾನವಾದ ನಡಿಗೆಗೆ ಸರಿಹೊಂದುವ ವೇಗದಲ್ಲಿ ನೀವು ಹೆಜ್ಜೆಹಾಕಿದಿರಿ. ಹೀಗೆ ನೆರವಾದಾಗ ಅವರಿಗೂ ಪ್ರಯೋಜನವಾಯಿತು ನಿಮಗೂ ಖುಷಿ ಆಯಿತು ಅಲ್ಲವೇ? ಹೌದು ನಾವು ಬೇರೆಯವರ ಅಗತ್ಯಗಳಿಗೆ ಸ್ಪಂದಿಸುವಾಗ ನಮಗೆ ಆನಂದವಾಗುತ್ತದೆ. ಅಲ್ಲದೆ ನಮ್ಮ ತಾಳ್ಮೆ, ಪ್ರೀತಿ ಹಾಗೂ ಪ್ರೌಢತೆ ಹೆಚ್ಚಾಗುತ್ತದೆ. (ಎಫೆ. 4:15, 16) ನಮ್ಮೆಲ್ಲಾ ಸಹೋದರ ಸಹೋದರಿಯರನ್ನು, ಅದರಲ್ಲೂ ಬಲಹೀನರಾಗಿ ತೋರುವವರನ್ನು ನಾವು ಅಮೂಲ್ಯರೆಂದೆಣಿಸಬೇಕು ಎಂಬುದು ಯೆಹೋವನ ಅಪೇಕ್ಷೆ. ಹೀಗೆ ಮಾಡುವಾಗ ನಾವು ಅವರ ಇತಿಮಿತಿಗಳನ್ನು ಮನಸ್ಸಿನಲ್ಲಿಟ್ಟು ಅತಿಯಾದದ್ದನ್ನು ನಿರೀಕ್ಷಿಸುವುದಿಲ್ಲ. ಸಭೆಯಲ್ಲಿ ಪ್ರೀತಿಯೂ ಹೆಚ್ಚಾಗುತ್ತದೆ.
6. “ಬಲಹೀನ” ಮತ್ತು ‘ಬಲವುಳ್ಳ’ ಎಂಬ ಪದಗಳನ್ನು ಪೌಲನು ಯಾವ ಅರ್ಥದಲ್ಲಿ ಬಳಸಿದನು?
6 ಪೌಲನು ಕೊರಿಂಥದವರಿಗೆ ಬರೆದಾಗ “ಬಲಹೀನ” ಮತ್ತು “ಬಲಹೀನತೆ” ಎಂಬ ಪದಗಳನ್ನು ಬಳಸಿದ ರೀತಿ ಆಸಕ್ತಿಕರ. ಒಂದನೇ ಶತಮಾನದ ಕ್ರೈಸ್ತರ ಬಗ್ಗೆ ಅವಿಶ್ವಾಸಿಗಳಿಗೆ ಇದ್ದ ನೋಟವನ್ನು ಮತ್ತು ತನ್ನ ಬಗ್ಗೆಯೇ ತನಗನಿಸಿದ್ದನ್ನು ವರ್ಣಿಸಲಿಕ್ಕಾಗಿ ಅವನು ಆ ಪದಗಳನ್ನು ಬಳಸಿದನು. (1 ಕೊರಿಂ. 1:26, 27; 2:3) ಕೆಲವು ಕ್ರೈಸ್ತರಿಗೆ ಸೂಚಿಸುತ್ತಾ ಅವರು ‘ಬಲವುಳ್ಳವರು’ ಎಂದು ಪೌಲ ಹೇಳಿದನು. ಅವನ ಉದ್ದೇಶ ಅವರು ತಮ್ಮನ್ನೇ ಇತರರಿಗಿಂತ ಶ್ರೇಷ್ಠರೆಂದು ಎಣಿಸಬೇಕು ಎಂದಾಗಿರಲಿಲ್ಲ. (ರೋಮ. 15:1) ಬದಲಿಗೆ ಹೆಚ್ಚು ಅನುಭವಿಗಳಾದ ಆ ಕ್ರೈಸ್ತರು, ಸತ್ಯದಲ್ಲಿ ಇನ್ನೂ ದೃಢವಾಗಿ ಬೇರೂರಿರದ ಕ್ರೈಸ್ತರ ಕಡೆಗೆ ಹೆಚ್ಚು ತಾಳ್ಮೆ ತೋರಿಸಬೇಕೆಂದು ಹೇಳುತ್ತಿದ್ದನು.
ನಮ್ಮ ನೋಟವನ್ನು ಸರಿಹೊಂದಿಸುವ ಅಗತ್ಯವಿದೆಯೇ?
7. ಕಷ್ಟದಲ್ಲಿರುವವರಿಗೆ ನೆರವು ನೀಡುವುದರಿಂದ ನಮ್ಮನ್ನು ಯಾವುದು ತಡೆಯಬಹುದು?
7 “ದಿಕ್ಕಿಲ್ಲದ”ವನಿಗೆ ನಾವು ನೆರವು ನೀಡುವಾಗ ಯೆಹೋವನನ್ನು ಅನುಕರಿಸುತ್ತೇವೆ. ಅಷ್ಟೇ ಅಲ್ಲ ನಮಗೆ ಆತನ ಮೆಚ್ಚಿಕೆಯೂ ಸಿಗುತ್ತದೆ. (ಕೀರ್ತ. 41:1; ಎಫೆ. 5:1) ಆದರೆ ಅವರ ಬಗ್ಗೆ ನಮಗಿರುವ ನಕಾರಾತ್ಮಕ ನೋಟದಿಂದಾಗಿ ಒಮ್ಮೊಮ್ಮೆ ನೆರವು ನೀಡಲು ಹಿಂದೇಟು ಹಾಕುತ್ತಿರಬಹುದು. ಅಥವಾ ಕಷ್ಟದಲ್ಲಿರುವವರಿಗೆ ಏನು ಹೇಳಬೇಕೆಂದು ತೋಚದೆ, ಸಂಕೋಚದಿಂದ ಅವರಿಂದ ದೂರ ಉಳಿಯಬಹುದು. ಸಿಂತಿಯಾb ಎಂಬ ಸಹೋದರಿಯ ಗಂಡ ಅವಳನ್ನು ಬಿಟ್ಟು ಹೋದನು. ಅವಳನ್ನುವುದು: “ಇಂಥ ಸಂದರ್ಭದಲ್ಲಿ ಸಹೋದರರು ನಿಮ್ಮಿಂದ ದೂರ ಉಳಿದರೆ ಅಥವಾ ಆಪ್ತ ಮಿತ್ರರು ನಾವು ನಿರೀಕ್ಷಿಸುವ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಮನಸ್ಸಿಗೆ ತುಂಬ ನೋವಾಗುತ್ತದೆ. ಕಷ್ಟಗಳನ್ನು ಎದುರಿಸುತ್ತಿರುವಾಗ ಬೆಂಬಲ ಕೊಡಲು ನಮ್ಮ ಸುತ್ತ ಜನರಿರಬೇಕೆಂದು ಅನಿಸುತ್ತದೆ.” ಪ್ರಾಚೀನಕಾಲದ ದಾವೀದನಿಗೆ ಸಹ ಜನರು ತನ್ನಿಂದ ದೂರ ಉಳಿದಿದ್ದರ ನೋವಿನ ಅನುಭವ ಆಗಿತ್ತು.—ಕೀರ್ತ. 31:12.
8. ನಾವು ಹೇಗೆ ಹೆಚ್ಚು ಸಹಾನುಭೂತಿಯುಳ್ಳವರು ಆಗಬಹುದು?
8 ನಮ್ಮ ಪ್ರಿಯ ಸಹೋದರ ಸಹೋದರಿಯರಲ್ಲಿ ಕೆಲವರು ಕಾಯಿಲೆ ಬಿದ್ದಿರಬಹುದು, ಅವಿಶ್ವಾಸಿ ಸದಸ್ಯರಿರುವ ಕುಟುಂಬದಲ್ಲಿ ವಾಸಿಸುತ್ತಿರಬಹುದು, ಖಿನ್ನತೆಯಿಂದ ಬಾಧಿತರಾಗಿರಬಹುದು. ಇಂಥ ಕಷ್ಟಕರ ಪರಿಸ್ಥಿತಿಗಳಿಂದಾಗಿ ಅವರು ಬಲಹೀನರಾಗುತ್ತಾರೆ ಎಂಬುದನ್ನು ಮನಸ್ಸಿನಲ್ಲಿಟ್ಟರೆ ನಾವು ಹೆಚ್ಚು ಸಹಾನುಭೂತಿ ತೋರಿಸುವೆವು. ಅವರಿಗಿರುವಂಥ ಕಷ್ಟಗಳು ನಮಗೂ ಒಂದು ದಿನ ಬಂದೀತು. ಇಸ್ರಾಯೇಲ್ಯರು ಐಗುಪ್ತದಲ್ಲಿದ್ದಾಗ ಬಡವರು, ಬಲಹೀನರು ಆಗಿದ್ದರು. ಆದ್ದರಿಂದ ಅವರು ಕಷ್ಟದಲ್ಲಿರುವ ತಮ್ಮ ಸಹೋದರರ ವಿಷಯದಲ್ಲಿ ‘ಮನಸ್ಸನ್ನು ಕಠಿಣಮಾಡಿಕೊಳ್ಳಬಾರದು’ ಎಂದು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ಅವರಿಗೆ ನೆನಪುಹುಟ್ಟಿಸಲಾಯಿತು. ಅವರು ಬಡವರಿಗೆ ಸಹಾಯ ಕೊಡುವಂತೆ ಯೆಹೋವನು ನಿರೀಕ್ಷಿಸಿದನು.—ಧರ್ಮೋ. 15:7, 11; ಯಾಜ. 25:35-38.
9. ಕಷ್ಟದಲ್ಲಿರುವವರಿಗೆ ಯಾವ ನೆರವು ನೀಡುವುದು ನಮ್ಮ ಆದ್ಯತೆ ಆಗಿರಬೇಕು? ದೃಷ್ಟಾಂತ ಕೊಡಿ.
9 ಕಷ್ಟದಲ್ಲಿರುವ ಸಹೋದರರನ್ನು ಟೀಕಿಸುವ ಅಥವಾ ಸಂಶಯಿಸುವ ಬದಲು ನಾವು ಅವರಿಗೆ ಆಧ್ಯಾತ್ಮಿಕ ಸಾಂತ್ವನ ಕೊಡಬೇಕು. (ಯೋಬ 33:6, 7; ಮತ್ತಾ. 7:1) ದೃಷ್ಟಾಂತಕ್ಕೆ, ಬೈಕ್ ಸವಾರನೊಬ್ಬ ಅಪಘಾತಕ್ಕೀಡಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದಾನೆ. ಅಲ್ಲಿನ ವೈದ್ಯಕೀಯ ತಂಡ ಅಪಘಾತಕ್ಕೆ ಯಾರು ಕಾರಣ ಎಂದು ಚರ್ಚಿಸುತ್ತಾ ಕೂತರೆ ಏನಾಗಬಹುದೆಂದು ಸ್ವಲ್ಪ ಯೋಚಿಸಿ. ಅದರ ಬದಲು ಅವರು ತಕ್ಷಣ ಚಿಕಿತ್ಸೆ ಕೊಡಬೇಕಲ್ಲವಾ? ಹಾಗೆಯೇ ಜೊತೆ ವಿಶ್ವಾಸಿಯೊಬ್ಬನು ವೈಯಕ್ತಿಕ ಸಮಸ್ಯೆಗಳಿಂದಾಗಿ ಬಲಹೀನನಾದಾಗ ನಾವು ಅವನಿಗೆ ಮೊದಲು ನೀಡಬೇಕಾದದ್ದು ಆಧ್ಯಾತ್ಮಿಕ ನೆರವು.—1 ಥೆಸಲೊನೀಕ 5:14 ಓದಿ.
10. ಕೆಲವರು ಬಲಹೀನರಂತೆ ತೋರಿದರೂ “ನಂಬಿಕೆಯಲ್ಲಿ ಐಶ್ವರ್ಯವಂತ”ರಾಗಿರುವುದು ಹೇಗೆ?
10 ನಮ್ಮ ಸಹೋದರರ ಪರಿಸ್ಥಿತಿಗಳ ಬಗ್ಗೆ ಯೋಚಿಸಲು ನಾವು ಸ್ವಲ್ಪ ಸಮಯ ತೆಗೆದುಕೊಂಡರೆ, ಅವರಲ್ಲಿ ಬಲಹೀನತೆಗಳಂತೆ ತೋರುವ ವಿಷಯಗಳ ಬಗ್ಗೆ ನಮ್ಮ ನೋಟವೇ ಬದಲಾಗುವುದು. ಹಲವಾರು ವರ್ಷಗಳಿಂದ ಕುಟುಂಬದ ವಿರೋಧ ಎದುರಿಸುತ್ತಿರುವ ಸಹೋದರಿಯರ ಕುರಿತು ಯೋಚಿಸಿ. ಅವರಲ್ಲಿ ಕೆಲವರು ತೀರ ಸಾಧಾರಣರು, ನಾಜೂಕು ಆಗಿರುವಂತೆ ಕಾಣಬಹುದು. ಆದರೆ ಅವರಲ್ಲಿ ಎಷ್ಟೊಂದು ದೃಢವಾದ ನಂಬಿಕೆ, ಮನೋಬಲ ಇರುತ್ತದಲ್ಲವೇ? ಒಂಟಿ ತಾಯಿಯೊಬ್ಬಳು ತನ್ನ ಮಕ್ಕಳನ್ನು ಕೂಟಗಳಿಗೆ ನಿಯಮಿತವಾಗಿ ಕರಕೊಂಡು ಬರುವುದನ್ನು ನೋಡಿ ಅವಳ ನಂಬಿಕೆ, ದೃಢ ನಿರ್ಧಾರವನ್ನು ನೀವು ಮೆಚ್ಚುವುದಿಲ್ಲವೇ? ನಮ್ಮ ಹದಿಪ್ರಾಯದವರು ಶಾಲಾಕಾಲೇಜುಗಳಲ್ಲಿ ಕೆಟ್ಟ ಪ್ರಭಾವಗಳನ್ನು ಎದುರಿಸುತ್ತಿದ್ದರೂ ಸತ್ಯಕ್ಕೆ ಅಂಟಿಕೊಂಡಿದ್ದಾರಲ್ಲವೇ? ಇವರೆಲ್ಲರೂ ಬಲಹೀನರಂತೆ ತೋರಿದರೂ “ನಂಬಿಕೆಯಲ್ಲಿ ಐಶ್ವರ್ಯವಂತ”ರಾಗಿದ್ದಾರೆ.—ಯಾಕೋ. 2:5.
ನಿಮ್ಮ ನೋಟವನ್ನು ಯೆಹೋವನ ನೋಟಕ್ಕೆ ಸರಿಹೊಂದಿಸಿರಿ
11, 12. (ಎ) ಮಾನವ ಬಲಹೀನತೆಗಳ ಬಗ್ಗೆ ನಮಗಿರುವ ನೋಟವನ್ನು ಸರಿಹೊಂದಿಸಲು ಯಾವ ಸಹಾಯವಿದೆ? (ಬಿ) ಯೆಹೋವನು ಆರೋನನೊಂದಿಗೆ ನಡೆದುಕೊಂಡ ರೀತಿಯಿಂದ ಏನು ಕಲಿಯುತ್ತೇವೆ?
11 ಮಾನವ ಬಲಹೀನತೆಗಳ ಬಗ್ಗೆ ನಮಗಿರುವ ನೋಟವನ್ನು ಯೆಹೋವನ ನೋಟಕ್ಕೆ ತಕ್ಕಂತೆ ಸರಿಹೊಂದಿಸಲು ಒಂದು ಸಹಾಯವಿದೆ. ಯೆಹೋವನು ತನ್ನ ಕೆಲವು ಸೇವಕರ ವಿಷಯದಲ್ಲಿ ಹೇಗೆ ನಡೆದುಕೊಂಡನೊ ಅದನ್ನು ಪರಿಗಣಿಸುವುದೇ ಆ ಸಹಾಯ. (ಕೀರ್ತನೆ 130:3 ಓದಿ.) ಉದಾಹರಣೆಗೆ, ಆರೋನನು ಚಿನ್ನದ ಬಸವನ ಪ್ರತಿಮೆ ಮಾಡಿದ ಸಂದರ್ಭ ತೆಗೆದುಕೊಳ್ಳಿ. ನೀವಾಗ ಅಲ್ಲಿ ಮೋಶೆಯೊಟ್ಟಿಗೆ ಇದ್ದಿದ್ದರೆ, ಆರೋನನು ಕೊಡುತ್ತಾ ಇದ್ದ ಟೊಳ್ಳು ನೆವಗಳ ಬಗ್ಗೆ ನಿಮಗೆ ಹೇಗನಿಸುತ್ತಿತ್ತು? (ವಿಮೋ. 32:21-24) ಇನ್ನೊಂದು ಸಂದರ್ಭದಲ್ಲಿ, ಮೋಶೆ ಪರದೇಶಿ ಸ್ತ್ರೀಯನ್ನು ಮದುವೆಯಾದಾಗ ಆರೋನನು ಮಿರ್ಯಾಮಳ ಕುಮ್ಮಕ್ಕಿನಿಂದ ಅವನನ್ನು ಟೀಕಿಸಿದನು. ಆಗ ನಿಮಗೆ ಹೇಗನಿಸುತ್ತಿತ್ತು? (ಅರ. 12:1, 2) ಮತ್ತೊಂದು ಸಂದರ್ಭದಲ್ಲಿ, ಯೆಹೋವನು ಮೆರೀಬಾದಲ್ಲಿ ಅದ್ಭುತವಾಗಿ ನೀರನ್ನು ಒದಗಿಸಿದಾಗ ಆರೋನ ಮತ್ತು ಮೋಶೆ ಆತನಿಗೆ ಮಹಿಮೆ ಕೊಡಲು ತಪ್ಪಿಹೋದರು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತಿತ್ತು?—ಅರ. 20:10-13.
12 ಈ ಎಲ್ಲ ಸನ್ನಿವೇಶಗಳಲ್ಲಿ ಯೆಹೋವನು ಆರೋನನನ್ನು ತಕ್ಷಣ ಶಿಕ್ಷಿಸಬಹುದಿತ್ತು. ಆದರೆ ಆರೋನ ಕೆಟ್ಟ ವ್ಯಕ್ತಿಯಲ್ಲ ಅಥವಾ ನಡೆದಂಥ ತಪ್ಪಿಗೆ ಮುಖ್ಯವಾಗಿ ಅವನು ಕಾರಣನಲ್ಲ ಎಂದು ಯೆಹೋವನಿಗೆ ತಿಳಿದಿತ್ತು. ಆರೋನನು ಪರಿಸ್ಥಿತಿಯ ಸುಳಿಯಲ್ಲಿ ಸಿಕ್ಕಿಬಿದ್ದೊ, ಬೇರೆಯವರ ಪ್ರಭಾವಕ್ಕೆ ಒಳಗಾಗಿಯೊ ಆ ತಪ್ಪುಗಳನ್ನು ಮಾಡಿದನೆಂದು ತೋರುತ್ತದೆ. ಆದರೆ ಅವನ ತಪ್ಪನ್ನು ಅವನಿಗೆ ಹೇಳಿದಾಗ ಕೂಡಲೇ ಒಪ್ಪಿದನು ಮತ್ತು ಯೆಹೋವನ ತೀರ್ಪುಗಳನ್ನು ಬೆಂಬಲಿಸಿದನು. (ವಿಮೋ. 32:26; ಅರ. 12:11; 20:23-27) ಯೆಹೋವನು ಆರೋನನ ನಂಬಿಕೆ ಹಾಗೂ ಪಶ್ಚಾತ್ತಾಪ ತುಂಬಿದ ಮನೋಭಾವಕ್ಕೆ ಹೆಚ್ಚು ಗಮನಕೊಟ್ಟನು. ಶತಮಾನಗಳ ನಂತರವೂ ಆರೋನ ಮತ್ತವನ ವಂಶಜರನ್ನು ಯೆಹೋವನ ಭಕ್ತರೆಂದು ನೆನಪಿಸಿಕೊಳ್ಳಲಾಯಿತು.—ಕೀರ್ತ. 115:10-12; 135:19, 20.
13. ಮಾನವ ಬಲಹೀನತೆಗಳ ಕುರಿತು ನಮಗಿರುವ ನೋಟವನ್ನು ಹೇಗೆ ಪರಿಶೀಲಿಸಬಹುದು?
13 ನಮ್ಮ ಯೋಚನಾರೀತಿಯನ್ನು ಯೆಹೋವನ ಯೋಚನಾರೀತಿಗೆ ತಕ್ಕಂತೆ ಸರಿಹೊಂದಿಸಲಿಕ್ಕಾಗಿ, ಬಲಹೀನರಂತೆ ತೋರುವವರ ಬಗ್ಗೆ ನಮಗಿರುವ ನೋಟವನ್ನು ಮೊದಲು ಪರಿಶೀಲಿಸಬೇಕು. (1 ಸಮು. 16:7) ಹದಿಪ್ರಾಯದವನೊಬ್ಬ ಮನೋರಂಜನೆಯ ವಿಷಯದಲ್ಲಿ ಜಾಗ್ರತೆ ವಹಿಸುವುದಿಲ್ಲ ಇಲ್ಲವೆ ಯಾವುದೊ ಒಂದು ಸಂದರ್ಭದಲ್ಲಿ ಉಡಾಫೆ ಮನೋಭಾವ ತೋರಿಸುತ್ತಾನೆ ಎಂದಿಟ್ಟುಕೊಳ್ಳಿ. ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತದೆ? ನಾವು ಅತಿಯಾಗಿ ಟೀಕಾತ್ಮಕರು ಆಗಿರುವ ಬದಲು ಪ್ರೌಢತೆ ಬೆಳೆಸಿಕೊಳ್ಳಲು ಅವನಿಗೆ ಸಹಾಯಮಾಡುವುದರ ಬಗ್ಗೆ ಯಾಕೆ ಯೋಚಿಸಬಾರದು? ಸಹಾಯದ ಅಗತ್ಯವಿರುವ ಇಂಥವರಿಗೆ ನೆರವಾಗಲು ನಾವೇ ಮುಂದಾಗಬಹುದು. ಹೀಗೆ ಅವರನ್ನು ಹೆಚ್ಚು ಅರ್ಥಮಾಡಿಕೊಳ್ಳಲು, ಹೆಚ್ಚು ಪ್ರೀತಿಸಲು ಶಕ್ತರಾಗುವೆವು.
14, 15. (ಎ) ಎಲೀಯನು ತಾತ್ಕಾಲಿಕವಾಗಿ ಧೈರ್ಯ ಕಳೆದುಕೊಂಡದ್ದರ ಬಗ್ಗೆ ಯೆಹೋವನಿಗೆ ಹೇಗನಿಸಿತು? (ಬಿ) ಎಲೀಯನ ಅನುಭವದಿಂದ ನಾವೇನು ಕಲಿಯುತ್ತೇವೆ?
14 ಇತರರ ಕುರಿತ ನಮ್ಮ ನೋಟವನ್ನು ಸರಿಪಡಿಸಲಿಕ್ಕಾಗಿ ಇನ್ನೊಂದು ಸಂಗತಿ ಸಹಾಯಮಾಡುತ್ತದೆ. ನಮ್ಮ ಯೋಚನಾರೀತಿಯನ್ನು ಹತಾಶರಾಗಿದ್ದ ತನ್ನ ಕೆಲವು ಸೇವಕರಿಗೆ ಯೆಹೋವನು ತೋರಿಸಿದ ಪ್ರತಿಕ್ರಿಯೆಯೊಂದಿಗೆ ಹೋಲಿಸಿ ನೋಡುವುದೇ ಆ ಸಹಾಯ. ಯೆಹೋವನ ಆ ಸೇವಕರಲ್ಲೊಬ್ಬನು ಎಲೀಯ. ಬಾಳನ 450 ಪ್ರವಾದಿಗಳಿಗೆ ಕೆಚ್ಚೆದೆಯಿಂದ ಸವಾಲುಹಾಕಿದ್ದ ಈತ, ರಾಣಿ ಈಜೆಬೆಲಳು ತನ್ನನ್ನು ಕೊಲ್ಲುವ ಸಂಚುಮಾಡುತ್ತಿದ್ದಾಳೆಂಬ ಸುದ್ದಿ ಕೇಳಿದೊಡನೆ ಹೆದರಿ ಓಡಿಹೋದ. 150 ಕಿ.ಮೀ. ವರೆಗೆ ಅಂದರೆ ಬೇರ್ಷೆಬದ ತನಕ ಹೋಗಿ, ಅಲ್ಲಿಂದ ಅರಣ್ಯದೊಳಕ್ಕೆ ದೂರಕ್ಕೆ ಹೋದ. ಸುಡುಬಿಸಿಲಲ್ಲಿ ನಡೆದು ನಡೆದು ಸುಸ್ತಾಗಿ ಒಂದು ಮರದಡಿ ಕೂತು “ಮರಣವನ್ನು ಅಪೇಕ್ಷಿಸಿದ.”—1 ಅರ. 18:19; 19:1-4.
15 ತನ್ನ ಈ ನಂಬಿಗಸ್ತ ಪ್ರವಾದಿ ಹೀಗೆ ಹತಾಶೆಯಲ್ಲಿ ಮುಳುಗಿರುವುದನ್ನು ಸ್ವರ್ಗದಿಂದ ನೋಡುತ್ತಾ ಇದ್ದ ಯೆಹೋವನಿಗೆ ಹೇಗನಿಸಿತು? ತಾತ್ಕಾಲಿಕವಾಗಿ ಖಿನ್ನತೆಯಲ್ಲಿದ್ದಾನೆ, ಧೈರ್ಯ ಕಳೆದುಕೊಂಡಿದ್ದಾನೆಂದು ಅವನನ್ನು ತಿರಸ್ಕರಿಸಿಬಿಟ್ಟನಾ? ಖಂಡಿತ ಇಲ್ಲ! ಯೆಹೋವನು ಎಲೀಯನ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಂಡು ತನ್ನ ದೇವದೂತನನ್ನು ಕಳುಹಿಸಿದ. ಆ ದೇವದೂತ ಎಲೀಯನಿಗೆ ಊಟಮಾಡುವಂತೆ ಎರಡು ಸಲ ಹೇಳಿದ. ಹೀಗೆ ಅವನಿಗೆ ಮುಂದೆ ಮಾಡಲಿಕ್ಕಿದ್ದ ‘ಶಕ್ತಿ ಮೀರುವ ಪ್ರಯಾಣ’ ಸುಲಭವಾಗಲಿಕ್ಕಿತ್ತು. (1 ಅರಸು 19:5-8 ಓದಿ.) ಹೌದು, ಯೆಹೋವನು ಮೊದಲು ತನ್ನ ಪ್ರವಾದಿಯ ಮಾತುಗಳನ್ನು ಆಲಿಸಿದನು. ಅವನನ್ನು ಪೋಷಿಸಲು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಂಡನು. ನಂತರವೇ ಅವನಿಗೆ ಮುಂದಿನ ನಿರ್ದೇಶನಗಳನ್ನು ಕೊಟ್ಟನು.
16, 17. ಯೆಹೋವನು ಎಲೀಯನಿಗೆ ತೋರಿಸಿದ ಕಾಳಜಿಯನ್ನು ನಾವು ಹೇಗೆ ತೋರಿಸಬಲ್ಲೆವು?
16 ನಮ್ಮ ಕಾಳಜಿಭರಿತ ದೇವರನ್ನು ಹೇಗೆ ಅನುಕರಿಸಬಲ್ಲೆವು? ಬುದ್ಧಿವಾದ ಕೊಡಲು ನಾವು ಆತುರಪಡಬಾರದು. (ಜ್ಞಾನೋ. 18:13) ತಮ್ಮ ವೈಯಕ್ತಿಕ ಪರಿಸ್ಥಿತಿಗಳಿಂದಾಗಿ ತಾವು “ಕಡಮೆ ಮಾನವುಳ್ಳ”ವರೆಂದು ನೆನಸುವವರಿಗೆ ನಾವು ಮೊದಲು ಸಹಾನುಭೂತಿಯಿಂದ ಕಿವಿಗೊಡಲು ಸಮಯ ಕೊಡುವುದು ಉತ್ತಮ. (1 ಕೊರಿಂ. 12:23) ಆಗಲೇ ನಾವು ಅವರ ನಿಜವಾದ ಅಗತ್ಯಕ್ಕನುಸಾರ ಸೂಕ್ತವಾಗಿ ಕ್ರಿಯೆಗೈಯಲು ಸಾಧ್ಯವಾಗುವುದು.
17 ಈ ಮುಂಚೆ ತಿಳಿಸಲಾದ ಸಿಂತಿಯಾಳ ಬಗ್ಗೆ ಯೋಚಿಸಿ. ಅವಳ ಗಂಡ ಅವಳನ್ನೂ ಇಬ್ಬರು ಹೆಣ್ಮಕ್ಕಳನ್ನೂ ಬಿಟ್ಟುಹೋಗಿದ್ದ. ಅವರು ಆಸರೆ ಇಲ್ಲದವರಾದರು. ಜೊತೆ ಸಾಕ್ಷಿಗಳಲ್ಲಿ ಕೆಲವರು ಹೇಗೆ ಪ್ರತಿಕ್ರಿಯಿಸಿದರು? ಅವಳು ವಿವರಿಸುವುದು: “ನಡೆದ ಸಂಗತಿಯನ್ನು ನಾವು ಅವರಿಗೆ ಫೋನಲ್ಲಿ ತಿಳಿಸಿದ 45 ನಿಮಿಷದೊಳಗೆ ನಮ್ಮ ಮನೆಗೆ ಬಂದರು. ಅವರು ಕಣ್ಣೀರಿಟ್ಟರು. ಮೊದಲ ಎರಡು ಮೂರು ದಿನಗಳ ತನಕ ನಮ್ಮೊಟ್ಟಿಗೆ ಯಾರಾದರೂ ಇದ್ದೇ ಇರುತ್ತಿದ್ದರು. ನಾವು ಸರಿಯಾಗಿ ಊಟ ಮಾಡುತ್ತಿರಲಿಲ್ಲ, ತುಂಬ ಭಾವುಕರಾಗಿದ್ದೆವು ಎಂಬ ಕಾರಣಕ್ಕೆ ಸ್ವಲ್ಪ ಸಮಯದ ವರೆಗೆ ತಮ್ಮ ಮನೆಯಲ್ಲಿ ಇರಿಸಿಕೊಂಡರು.” ಇದು ನಿಮಗೆ ಯಾಕೋಬನು ಬರೆದ ಈ ಮಾತನ್ನು ಮನಸ್ಸಿಗೆ ತಂದಿರಬಹುದು: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.” (ಯಾಕೋ. 2:15-17) ಸ್ಥಳೀಯ ಸಹೋದರ ಸಹೋದರಿಯರು ತಕ್ಕ ಸಮಯಕ್ಕೆ ಕೊಟ್ಟ ಬೆಂಬಲದಿಂದಾಗಿ ಸಿಂತಿಯಾ ಮತ್ತವಳ ಇಬ್ಬರು ಪುತ್ರಿಯರು ಆ ಆಘಾತಕಾರಿ ಅನುಭವವಾದ ಆರು ತಿಂಗಳಲ್ಲೇ ಆಕ್ಸಿಲಿಯರಿ ಪಯನೀಯರಿಂಗ್ ಮಾಡಿದರು.—2 ಕೊರಿಂ. 12:10.
ಅನೇಕರಿಗೆ ಪ್ರಯೋಜನ
18, 19. (ಎ) ತಾತ್ಕಾಲಿಕವಾಗಿ ಬಲಹೀನರಾದವರಿಗೆ ಹೇಗೆ ಸಹಾಯಮಾಡಬಲ್ಲೆವು? (ಬಿ) ಬಲಹೀನರಿಗೆ ನಾವು ನೆರವು ನೀಡುವಾಗ ಯಾರಿಗೆಲ್ಲ ಪ್ರಯೋಜನವಾಗುತ್ತದೆ?
18 ಶಕ್ತಿಗುಂದಿಸುವ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ ಎಂದು ನಿಮಗೆ ಅನುಭವದಿಂದ ಗೊತ್ತಿರಬಹುದು. ಹಾಗೆಯೇ ವೈಯಕ್ತಿಕ ಕಷ್ಟಗಳಿಂದಾಗಿಯೊ, ತುಂಬ ಕಷ್ಟಕರ ಪರಿಸ್ಥಿತಿಗಳಿಂದಾಗಿಯೊ ಬಲಹೀನನಾದ ಕ್ರೈಸ್ತನೊಬ್ಬನಿಗೆ ಆಧ್ಯಾತ್ಮಿಕ ಬಲವನ್ನು ಮರಳಿ ಪಡೆಯಲು ಸಮಯ ಹಿಡಿಯುತ್ತದೆ. ನಮ್ಮ ಜೊತೆ ವಿಶ್ವಾಸಿಯು ವೈಯಕ್ತಿಕ ಅಧ್ಯಯನ, ಪ್ರಾರ್ಥನೆ, ಮತ್ತಿತರ ಕ್ರೈಸ್ತ ಚಟುವಟಿಕೆಗಳಿಂದ ತನ್ನ ಸ್ವಂತ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಬೇಕು ನಿಜ. ಆದರೆ ಅವನು ಸಮಸ್ಥಿತಿಗೆ ಬರುವ ತನಕ ನಾವು ತಾಳ್ಮೆ ತೋರಿಸುವೆವೊ? ಅವನು ಚೇತರಿಸಿಕೊಳ್ಳುತ್ತಿರುವ ಅವಧಿಯಲ್ಲಿ ಪ್ರೀತಿ ತೋರಿಸುತ್ತಾ ಇರುವೆವೊ? ಹೀಗೆ ತಾತ್ಕಾಲಿಕವಾಗಿ ಬಲಹೀನರಾದವರು ಅಮೂಲ್ಯರೆಂಬ ಭಾವನೆ ತಾಳಲು ನೆರವಾಗುತ್ತಾ ನಮ್ಮ ಕ್ರೈಸ್ತ ಮಮತೆಯನ್ನು ಗ್ರಹಿಸುವಂತೆ ಮಾಡುತ್ತೇವೊ?—2 ಕೊರಿಂ. 8:8.
19 ನಾವು ಸಹೋದರರಿಗೆ ಬೆಂಬಲ ನೀಡುವಾಗ ಆನಂದ ನಮ್ಮದಾಗುತ್ತದೆ. ಕೊಡುವುದರಿಂದ ಮಾತ್ರ ಬರುವ ಆನಂದ ಇದಾಗಿದೆ. ಸಹಾನುಭೂತಿ, ತಾಳ್ಮೆ ತೋರಿಸುವ ನಮ್ಮ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳುತ್ತೇವೆ. ಇನ್ನೊಂದು ಪ್ರಯೋಜನವೂ ಇದೆ. ಇಡೀ ಸಭೆಯಲ್ಲಿ ಹಾರ್ದಿಕತೆ, ಪ್ರೀತಿ ಹೆಚ್ಚುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬರನ್ನೂ ಅಮೂಲ್ಯವೆಂದೆಣಿಸುವ ಯೆಹೋವನನ್ನು ನಾವು ಅನುಕರಿಸುತ್ತೇವೆ. ಹೀಗೆ, ‘ಬಲಹೀನರಿಗೆ ನೆರವು ನೀಡಿ’ ಎಂಬ ಪ್ರೋತ್ಸಾಹಕ್ಕೆ ಸ್ಪಂದಿಸಲು ನಮಗೆಲ್ಲರಿಗೂ ಸಕಾರಣಗಳಿವೆ.—ಅ. ಕಾ. 20:35.
a ಚಾರ್ಲ್ಸ್ ಡಾರ್ವಿನ್ ದ ಡಿಸೆಂಟ್ ಆಫ್ ಮ್ಯಾನ್ ಪುಸ್ತಕದಲ್ಲಿ, ದೇಹದ ಹಲವಾರು ಅಂಗಗಳನ್ನು “ನಿಷ್ಪ್ರಯೋಜಕ” ಎಂದು ವರ್ಣಿಸಿದ್ದಾನೆ. ಮಾನವ ದೇಹದಲ್ಲಿ ಅಪೆಂಡಿಕ್ಸ್ ಮತ್ತು ಥೈಮಸ್ ಗ್ರಂಥಿಯಂಥ ಹಲವಾರು ನಿಷ್ಪ್ರಯೋಜಕ ಅಂಗಗಳಿವೆಯೆಂದು ಇನ್ನೊಬ್ಬ ವಿಕಾಸವಾದಿ ಹೇಳಿದ್ದಾನೆ.
b ಹೆಸರನ್ನು ಬದಲಾಯಿಸಲಾಗಿದೆ.