‘ಶಾಂತಿಯ ಸಮಯ’ ಸಮೀಪವಿದೆ!
“ಪ್ರತಿಯೊಂದಕ್ಕೂ ನಿಯುಕ್ತವಾದ ಸಮಯವೊಂದಿದೆ, . . . ಯುದ್ಧಕ್ಕೊಂದು ಸಮಯ, ಶಾಂತಿಗೊಂದು ಸಮಯ.”—ಪ್ರಸಂಗಿ 3:1, 8, NW.
1. ಇಪ್ಪತ್ತನೆಯ ಶತಮಾನದಲ್ಲಿ, ಯುದ್ಧ ಹಾಗೂ ಶಾಂತಿಯ ಸಂಬಂಧದಲ್ಲಿ ಯಾವ ಹಾಸ್ಯವ್ಯಂಗ್ಯವಾದ ಸನ್ನಿವೇಶವು ಅಸ್ತಿತ್ವದಲ್ಲಿತ್ತು?
ಸಕಾರಣದಿಂದಲೇ ಅಧಿಕಾಂಶ ಜನರು ಶಾಂತಿಗಾಗಿ ಹಂಬಲಿಸುತ್ತಾರೆ. ಇತಿಹಾಸದಲ್ಲಿ ಹಿಂದಿನ ಯಾವುದೇ ಶತಮಾನಕ್ಕಿಂತಲೂ 20ನೆಯ ಶತಮಾನವು ತುಂಬ ಕಡಿಮೆ ಶಾಂತಿಯನ್ನು ಅನುಭವಿಸಿದೆ. ಇದು ಹಾಸ್ಯವ್ಯಂಗ್ಯ, ಏಕೆಂದರೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿ ಈ ಮುಂಚೆ ಎಂದೂ ಇಷ್ಟು ಪ್ರಯತ್ನಗಳು ಮಾಡಲ್ಪಟ್ಟಿರಲಿಲ್ಲ. 1920ರಲ್ಲಿ ಜನಾಂಗ ಸಂಘವನ್ನು ರಚಿಸಲಾಯಿತು. 1928ರಲ್ಲಿ ಮಾಡಲ್ಪಟ್ಟ ಕೆಲ್ಲಾಗ್-ಬ್ರಿಆ್ಯಂಡ್ ಒಪ್ಪಂದದ ಬಗ್ಗೆ ಒಂದು ಪ್ರಮಾಣಗ್ರಂಥವು ತಿಳಿಸಿದ್ದು: “Iನೆಯ ಲೋಕ ಯುದ್ಧದ ಬಳಿಕ ಶಾಂತಿಯನ್ನು ಕಾಪಾಡಲಿಕ್ಕಾಗಿ ಮಾಡಲ್ಪಟ್ಟ ಅನೇಕಾನೇಕ ಪ್ರಯತ್ನಗಳಲ್ಲಿಯೇ ಇದು ಮಹತ್ವೋದ್ದೇಶವುಳ್ಳದ್ದಾಗಿತ್ತು.” ಮತ್ತು “ರಾಷ್ಟ್ರೀಯ ಕಾರ್ಯನೀತಿಯ ಒಂದು ಸಾಧನದೋಪಾದಿ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಲು ಒಪ್ಪಿಕೊಳ್ಳುವ ಮೂಲಕ . . . ಬಹುಮಟ್ಟಿಗೆ ಲೋಕದ ಎಲ್ಲ ರಾಷ್ಟ್ರಗಳು” ಇದಕ್ಕೆ ತಮ್ಮ ಬೆಂಬಲವನ್ನು ನೀಡಿದವು. ತದನಂತರ, 1945ರಲ್ಲಿ, ನಿಷ್ಕ್ರಿಯವಾಗಿದ್ದ ಜನಾಂಗ ಸಂಘಕ್ಕೆ ಬದಲಾಗಿ ವಿಶ್ವ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು.
2. ವಿಶ್ವ ಸಂಸ್ಥೆಯ ಗುರಿಯು ಏನೆಂದು ಹೇಳಲಾಗುತ್ತದೆ, ಮತ್ತು ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡೆಯಿತು?
2 ಜನಾಂಗ ಸಂಘದಂತೆಯೇ, ವಿಶ್ವ ಸಂಸ್ಥೆಯು ಸಹ ಲೋಕ ಶಾಂತಿಯನ್ನು ಸ್ಥಾಪಿಸುವ ಗುರಿಯುಳ್ಳದ್ದೆಂದು ಹೇಳಿಕೊಳ್ಳುತ್ತದೆ. ಆದರೆ ಇದು ಹೆಚ್ಚು ಯಶಸ್ಸನ್ನು ಪಡೆದುಕೊಂಡಿಲ್ಲ. ಎರಡು ಲೋಕ ಯುದ್ಧಗಳಲ್ಲಿ ಎಷ್ಟು ವ್ಯಾಪಕವಾಗಿ ಯುದ್ಧವು ನಡೆಯಿತೋ ಅಷ್ಟು ಯುದ್ಧವು ಇಂದು ಎಲ್ಲಿಯೂ ನಡೆಯುತ್ತಿಲ್ಲ ಎಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೂ, ಡಜನ್ಗಟ್ಟಲೆ ಚಿಕ್ಕಪುಟ್ಟ ಹೋರಾಟಗಳು, ಲಕ್ಷಾಂತರ ಮಂದಿಯ ಮನಶ್ಶಾಂತಿಯನ್ನು, ಸಂಪತ್ತನ್ನು ಹಾಗೂ ಅವರ ಜೀವಗಳನ್ನೇ ಕಸಿದುಕೊಳ್ಳುತ್ತಿವೆ. ಹೀಗಿರುವಾಗ, ವಿಶ್ವ ಸಂಸ್ಥೆಯು 21ನೆಯ ಶತಮಾನವನ್ನು ‘ಶಾಂತಿಯ ಸಮಯ’ವಾಗಿ ಮಾರ್ಪಡಿಸಬಲ್ಲದೆಂದು ನಾವು ನಿರೀಕ್ಷಿಸಸಾಧ್ಯವಿದೆಯೊ?
ನಿಜ ಶಾಂತಿಗಾಗಿರುವ ಆಧಾರ
3. ದ್ವೇಷವಿರುವಲ್ಲಿ ನಿಜವಾದ ಶಾಂತಿಯು ಏಕೆ ಇರಲಾರದು?
3 ಜನರು ಹಾಗೂ ರಾಷ್ಟ್ರಗಳು ಶಾಂತಿಯಿಂದಿರಲು, ಕೇವಲ ಸಹನೆಗಿಂತಲೂ ಹೆಚ್ಚಿನದ್ದು ಅಗತ್ಯವಿದೆ. ಯಾರೇ ಆಗಲಿ ತಾನು ದ್ವೇಷಿಸುವಂತಹ ವ್ಯಕ್ತಿಯೊಂದಿಗೆ ನಿಜವಾಗಿಯೂ ಶಾಂತಿಯಿಂದ ವ್ಯವಹರಿಸಬಲ್ಲನೊ? ಇಲ್ಲ, ಏಕೆಂದರೆ 1 ಯೋಹಾನ 3:15 ಹೇಳುವುದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ.” ಕಡುದ್ವೇಷಗಳು ಹಂತಹಂತವಾಗಿ ಬೆಳೆದು ಹಿಂಸಾಕೃತ್ಯಗಳಾಗಿ ಪರಿಣಮಿಸುತ್ತವೆ ಎಂದು ಇತ್ತೀಚಿನ ಇತಿಹಾಸವು ರುಜುಪಡಿಸುತ್ತದೆ.
4. ಯಾರು ಮಾತ್ರ ಶಾಂತಿಯನ್ನು ಅನುಭವಿಸುವರು, ಮತ್ತು ಏಕೆ?
4 ಯೆಹೋವನು “ಶಾಂತಿದಾಯಕನಾದ ದೇವ”ರಾಗಿರುವುದರಿಂದ, ದೇವರಿಗಾಗಿ ಪ್ರೀತಿ ಮತ್ತು ಆತನ ನೀತಿಯ ಮೂಲತತ್ವಗಳಿಗಾಗಿ ಆಳವಾದ ಗೌರವವಿರುವ ಜನರು ಮಾತ್ರ ಶಾಂತಿಯನ್ನು ಅನುಭವಿಸಬಲ್ಲರು. ಯೆಹೋವನು ಎಲ್ಲರಿಗೂ ಶಾಂತಿಯನ್ನು ಒದಗಿಸುವುದಿಲ್ಲ ಎಂಬುದು ಸ್ಪಷ್ಟ. “ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ನುಡಿಯುತ್ತಾನೆ.” ಏಕೆಂದರೆ ಯಾವುದರ ಫಲವು ಶಾಂತಿಯಾಗಿದೆಯೋ ಆ ದೇವರ ಪವಿತ್ರಾತ್ಮದ ಮಾರ್ಗದರ್ಶನಕ್ಕನುಸಾರ ನಡೆಯಲು ದುಷ್ಟರು ನಿರಾಕರಿಸುತ್ತಾರೆ.—ರೋಮಾಪುರ 15:33; ಯೆಶಾಯ 57:21; ಗಲಾತ್ಯ 5:22.
5. ನಿಜ ಕ್ರೈಸ್ತರು ಯಾವ ಸಂಗತಿಯನ್ನು ಯೋಚಿಸಲೂ ಸಾಧ್ಯವಿಲ್ಲ?
5 ವಿಶೇಷವಾಗಿ 20ನೆಯ ಶತಮಾನದಲ್ಲಿ, ಕ್ರೈಸ್ತರೆಂದು ಕರೆಸಿಕೊಂಡಿರುವವರು ಆಗಿಂದಾಗ್ಗೆ ಮಾಡಿರುವಂತೆ, ಜೊತೆ ಮಾನವರ ಮೇಲೆ ಯುದ್ಧಮಾಡುವುದನ್ನು ನಿಜ ಕ್ರೈಸ್ತರು ಯೋಚಿಸಲೂ ಸಾಧ್ಯವಿಲ್ಲ. (ಯಾಕೋಬ 4:1-4) ನಿಜ ಕ್ರೈಸ್ತರು ದೇವರನ್ನು ತಪ್ಪಾಗಿ ಪ್ರತಿನಿಧಿಸುವಂತಹ ಬೋಧನೆಗಳ ವಿರುದ್ಧ ಯುದ್ಧಮಾಡುತ್ತಾರಾದರೂ, ಈ ಹೋರಾಟವು ಜನರಿಗೆ ಹಾನಿಮಾಡಲಿಕ್ಕಾಗಿ ಅಲ್ಲ, ಬದಲಾಗಿ ಸಹಾಯ ಮಾಡಲಿಕ್ಕಾಗಿ ರೂಪಿಸಲ್ಪಟ್ಟಿದೆ. ಧಾರ್ಮಿಕ ಭಿನ್ನತೆಗಳ ಕಾರಣ ಇತರರನ್ನು ಹಿಂಸಿಸುವುದು ಅಥವಾ ರಾಷ್ಟ್ರೀಯ ಕಾರಣಗಳಿಗಾಗಿ ಭೌತಿಕ ಹಾನಿಯನ್ನು ಉಂಟುಮಾಡುವುದು, ನಿಜ ಕ್ರೈಸ್ತತ್ವಕ್ಕೆ ತದ್ವಿರುದ್ಧವಾದದ್ದಾಗಿದೆ. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂದು ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬುದ್ಧಿವಾದ ಹೇಳಿದನು.—ರೋಮಾಪುರ 12:17-19; 2 ತಿಮೊಥೆಯ 2:24, 25.
6. ಇಂದು ಎಲ್ಲಿ ಮಾತ್ರವೇ ನಿಜವಾದ ಶಾಂತಿಯನ್ನು ಕಂಡುಕೊಳ್ಳಸಾಧ್ಯವಿದೆ?
6 ಇಂದು, ದೈವಿಕವಾಗಿ ಕೊಡಲ್ಪಡುವ ಶಾಂತಿಯು ಕೇವಲ ಯೆಹೋವ ದೇವರ ಆರಾಧಕರ ಮಧ್ಯೆ ಕಂಡುಬರುತ್ತದೆ. (ಕೀರ್ತನೆ 119:165; ಯೆಶಾಯ 48:18) ಯಾವುದೇ ರೀತಿಯ ರಾಜಕೀಯ ತಾರತಮ್ಯವು ಅವರ ಐಕ್ಯಭಾವಕ್ಕೆ ಧಕ್ಕೆ ತರುವುದಿಲ್ಲ, ಏಕೆಂದರೆ ಭೂಮಿಯಲ್ಲಿ ಎಲ್ಲೇ ಇರಲಿ ಅವರು ರಾಜಕೀಯವಾಗಿ ತಟಸ್ಥರಾಗಿದ್ದಾರೆ. (ಯೋಹಾನ 15:19; 17:14) ಅವರು “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿ”ರುವುದರಿಂದ, ಯಾವುದೇ ರೀತಿಯ ಧಾರ್ಮಿಕ ತಾರತಮ್ಯವು ಅವರ ಶಾಂತಿಗೆ ಬೆದರಿಕೆಯನ್ನು ಒಡ್ಡುವುದಿಲ್ಲ. (1 ಕೊರಿಂಥ 1:10) ಯೆಹೋವನ ಸಾಕ್ಷಿಗಳು ಅನುಭವಿಸುವಂತಹ ಶಾಂತಿಯು, ಆಧುನಿಕ ದಿನದ ಪವಾಡವಾಗಿದ್ದು, ‘ಶಾಂತಿಯನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು’ ಎಂಬ ದೇವರ ವಾಗ್ದಾನಕ್ಕನುಗುಣವಾಗಿ ಕಾರ್ಯರೂಪಕ್ಕೆ ತರಲ್ಪಟ್ಟದ್ದಾಗಿದೆ.—ಯೆಶಾಯ 60:17; ಇಬ್ರಿಯ 8:10.
ಇದು “ಯುದ್ಧಕ್ಕೆ ಒಂದು ಸಮಯ”ವಾಗಿದೆ ಏಕೆ?
7, 8. (ಎ) ಯೆಹೋವನ ಸಾಕ್ಷಿಗಳು ಶಾಂತಿಭರಿತ ನಿಲುವನ್ನು ತೆಗೆದುಕೊಂಡಿರುವುದಾದರೂ, ಸದ್ಯದ ಸಮಯವನ್ನು ಅವರು ಹೇಗೆ ಪರಿಗಣಿಸುತ್ತಾರೆ? (ಬಿ) ಕ್ರೈಸ್ತ ಯುದ್ಧದಲ್ಲಿ ಯಾವುದು ಪ್ರಮುಖ ಆಯುಧವಾಗಿದೆ?
7 ಯೆಹೋವನ ಸಾಕ್ಷಿಗಳು ಶಾಂತಿಭರಿತ ನಿಲುವನ್ನು ತೆಗೆದುಕೊಂಡಿರುವುದಾದರೂ, ಸದ್ಯದ ಸಮಯವು ಮುಖ್ಯವಾಗಿ ‘ಯುದ್ಧದ ಸಮಯ’ವಾಗಿದೆ ಎಂದು ಅವರು ಪರಿಗಣಿಸುತ್ತಾರೆ. ಖಂಡಿತವಾಗಿಯೂ ಇದು ಅಕ್ಷರಾರ್ಥಕ ಯುದ್ಧವಲ್ಲ, ಏಕೆಂದರೆ ನಮ್ಮ ಅಧಿಕಾರವನ್ನು ಉಪಯೋಗಿಸಿ ಬೈಬಲ್ ಸಂದೇಶವನ್ನು ಸ್ವೀಕರಿಸುವಂತೆ ಇತರರ ಮೇಲೆ ಒತ್ತಡ ಹೇರುವುದು, “ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ” ಎಂಬ ದೇವರ ಆಮಂತ್ರಣಕ್ಕೆ ವಿರುದ್ಧವಾದದ್ದಾಗಿದೆ. (ಓರೆ ಅಕ್ಷರಗಳು ನಮ್ಮವು.) (ಪ್ರಕಟನೆ 22:17) ಒತ್ತಾಯಪೂರ್ವಕವಾಗಿ ಮತಾಂತರಿಸುವ ವಿಷಯವು ಇಲ್ಲಿಲ್ಲ! ಯೆಹೋವನ ಸಾಕ್ಷಿಗಳು ಮಾಡುವ ಯುದ್ಧವು ನಿರ್ದಿಷ್ಟವಾಗಿ ಆತ್ಮಿಕ ರೀತಿಯದ್ದಾಗಿದೆ. ಪೌಲನು ಬರೆದುದು: “ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.”—2 ಕೊರಿಂಥ 10:4; 1 ತಿಮೊಥೆಯ 1:18.
8 “ನಾವು ಉಪಯೋಗಿಸುವ ಆಯುಧಗಳಲ್ಲಿ” ಪ್ರಮುಖವಾದದ್ದು, “ದೇವರ ವಾಕ್ಯವೆಂಬ ಕತ್ತಿಯೇ” ಆಗಿದೆ. (ಎಫೆಸ 6:17) ಈ ಕತ್ತಿಯು ತುಂಬ ಪ್ರಬಲವಾಗಿದೆ. “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಈ ಕತ್ತಿಯನ್ನು ಉಪಯೋಗಿಸುವ ಮೂಲಕ ಕ್ರೈಸ್ತರು, “ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ” ಕೆಡವಿಹಾಕಲು ಶಕ್ತರಾಗಿದ್ದಾರೆ. (2 ಕೊರಿಂಥ 10:5) ಇದು ದೈವಿಕ ಜ್ಞಾನಕ್ಕೆ ಬದಲಾಗಿ ಮಾನವ ಜ್ಞಾನವನ್ನು ಪ್ರತಿಬಿಂಬಿಸುವಂತಹ ಸುಳ್ಳು ಸಿದ್ಧಾಂತಗಳನ್ನು, ಹಾನಿಕರ ದುರಭ್ಯಾಸಗಳನ್ನು, ಮತ್ತು ತತ್ವಜ್ಞಾನಗಳನ್ನು ಬಯಲುಪಡಿಸುವಂತೆ ಅವರನ್ನು ಶಕ್ತರನ್ನಾಗಿ ಮಾಡುತ್ತದೆ.—1 ಕೊರಿಂಥ 2:6-8; ಎಫೆಸ 6:11-13.
9. ಪಾಪಪೂರ್ಣ ಶರೀರದ ವಿರುದ್ಧ ನಾವು ಏಕೆ ಹೋರಾಟ ನಡೆಸುತ್ತಲೇ ಇರಬೇಕು?
9 ಇನ್ನೊಂದು ರೀತಿಯ ಆತ್ಮಿಕ ಯುದ್ಧವು, ಪಾಪಪೂರ್ಣ ಶರೀರದ ವಿರುದ್ಧ ನಡೆಸುವ ಹೋರಾಟವೇ ಆಗಿದೆ. ಕ್ರೈಸ್ತರು ಪೌಲನ ಮಾದರಿಯನ್ನು ಅನುಸರಿಸುತ್ತಾರೆ. ಅವನು ಒಪ್ಪಿಕೊಂಡದ್ದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ” ಎಂದು ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಬುದ್ಧಿವಾದ ನೀಡಲಾಗಿತ್ತು. (ಕೊಲೊಸ್ಸೆ 3:5) ಮತ್ತು ಬೈಬಲ್ ಬರಹಗಾರನಾದ ಯೂದನು ಕ್ರೈಸ್ತರನ್ನು ಹುರಿದುಂಬಿಸಿದ್ದು: “ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಿರಿ.” (ಯೂದ 3) ನಾವೇಕೆ ಹೋರಾಟ ನಡೆಸಬೇಕು? ಪೌಲನು ಉತ್ತರಿಸುವುದು: “ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶಮಾಡುವದಾದರೆ ಜೀವಿಸುವಿರಿ.” (ರೋಮಾಪುರ 8:13) ಈ ಸ್ಪಷ್ಟವಾದ ಹೇಳಿಕೆಗನುಸಾರ, ಕೆಟ್ಟ ಪ್ರವೃತ್ತಿಗಳ ವಿರುದ್ಧ ನಾವು ಯಾವಾಗಲೂ ಹೋರಾಡುತ್ತಲೇ ಇರಬೇಕಾಗಿದೆ.
10. ಇಸವಿ 1914ರಲ್ಲಿ ಏನು ಸಂಭವಿಸಿತು, ಮತ್ತು ಸಮೀಪ ಭವಿಷ್ಯತ್ತಿನಲ್ಲಿ ಇದು ಯಾವುದಕ್ಕೆ ನಡಿಸುತ್ತದೆ?
10 ಸದ್ಯದ ಸಮಯವನ್ನು ಯುದ್ಧದ ಸಮಯವಾಗಿ ಪರಿಗಣಿಸಸಾಧ್ಯವಿದೆ ಎಂಬುದಕ್ಕಿರುವ ಇನ್ನೊಂದು ಕಾರಣವು, “ನಮ್ಮ ದೇವರು ಮುಯ್ಯಿತೀರಿಸುವ ದಿನ”ವು ಸನ್ನಿಹಿತವಾಗಿರುವುದೇ ಆಗಿದೆ. (ಯೆಶಾಯ 61:1, 2) 1914ರಲ್ಲಿ, ಮೆಸ್ಸೀಯ ರಾಜ್ಯವನ್ನು ಸ್ಥಾಪಿಸಿ, ಸೈತಾನನ ವ್ಯವಸ್ಥೆಯ ವಿರುದ್ಧ ಸಕ್ರಿಯವಾಗಿ ಯುದ್ಧ ನಡಿಸುವಂತೆ ಅದಕ್ಕೆ ಅಧಿಕಾರ ಕೊಡುವ ಯೆಹೋವನ ನೇಮಿತ ಸಮಯವು ಬಂದಿತ್ತು. ದೇವರು ಮಧ್ಯೆ ಪ್ರವೇಶಿಸದೆ, ಮಾನವ ನಿರ್ಮಿತ ಆಳ್ವಿಕೆಯೊಂದಿಗೆ ಪ್ರಯೋಗ ನಡೆಸಲಿಕ್ಕಾಗಿ ಮನುಷ್ಯರಿಗೆ ನಿಗದಿಪಡಿಸಲ್ಪಟ್ಟ ಕಾಲಾವಧಿಯು ಆ ಸಮಯದಲ್ಲೇ ಮುಗಿದುಹೋಯಿತು. ದೇವರ ಮೆಸ್ಸೀಯನ ಆಳ್ವಿಕೆಯನ್ನು ಅಂಗೀಕರಿಸುವುದಕ್ಕೆ ಬದಲಾಗಿ, ಪ್ರಥಮ ಶತಮಾನದಲ್ಲಿ ಅನೇಕರು ಮಾಡಿದಂತೆ, ಇಂದು ಸಹ ಅಧಿಕಾಂಶ ಜನರು ಅವನನ್ನು ತಿರಸ್ಕರಿಸುತ್ತಾರೆ. (ಅ. ಕೃತ್ಯಗಳು 28:27) ರಾಜ್ಯಕ್ಕೆ ವಿರೋಧವು ತೋರಿಸಲ್ಪಟ್ಟ ಕಾರಣ, ಕ್ರಿಸ್ತನು “[ತನ್ನ] ವೈರಿಗಳ ಮಧ್ಯದಲ್ಲಿ ದೊರೆತನಮಾಡು”ವಂತೆ ಒತ್ತಾಯಿಸಲ್ಪಟ್ಟಿದ್ದಾನೆ. (ಕೀರ್ತನೆ 110:2) ಸಂತೋಷಕರವಾಗಿಯೇ, ಅವನು “ತನ್ನ ವಿಜಯವನ್ನು ಪೂರ್ಣಗೊಳಿಸಲು” ಹೊರಡುವನು ಎಂದು ಪ್ರಕಟನೆ 6:2 (NW) ವಾಗ್ದಾನಿಸುತ್ತದೆ. “ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್” ಎಂದು ಕರೆಯಲ್ಪಡುವ “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ದಲ್ಲಿ ಅವನು ತನ್ನ ವಿಜಯವನ್ನು ಪೂರ್ಣಗೊಳಿಸುವನು.—ಪ್ರಕಟನೆ 16:14, 16.
“ಮಾತಾಡಲು ಒಂದು ಸಮಯ”
11. ಯೆಹೋವನು ಏಕೆ ಅಪಾರ ತಾಳ್ಮೆಯನ್ನು ತೋರಿಸಿದ್ದಾನೆ, ಆದರೆ ಅಂತಿಮವಾಗಿ ಏನು ಬರುವುದು?
11 ಮಾನವ ವ್ಯವಹಾರಗಳಲ್ಲಿ 1914ರಲ್ಲಾದ ಸಂಧಿಕಾಲವು ಆರಂಭವಾಗಿ 85 ವರ್ಷಗಳು ಸಂದಿವೆ. ಯೆಹೋವನು ಮಾನವಕುಲಕ್ಕೆ ಅಪಾರ ತಾಳ್ಮೆಯನ್ನು ತೋರಿಸಿದ್ದಾನೆ. ತನ್ನ ಸಾಕ್ಷಿಗಳು ಸನ್ನಿವೇಶದ ಜರೂರಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳುವಂತೆ ಆತನು ಮಾಡಿದ್ದಾನೆ. ಕೋಟಿಗಟ್ಟಲೆ ಜನರ ಜೀವಗಳು ಪ್ರಾಣಾಪಾಯದಲ್ಲಿವೆ. ಈ ಜನಸ್ತೋಮಕ್ಕೆ ಎಚ್ಚರಿಕೆಯನ್ನು ನೀಡುವ ಅಗತ್ಯವಿದೆ, ಏಕೆಂದರೆ “ಯಾವನಾದರೂ ನಾಶವಾಗುವದರಲ್ಲಿ ಆತನು [ಯೆಹೋವನು] ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿ”ದ್ದಾನೆ. (2 ಪೇತ್ರ 3:9) ಆದರೂ, “ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲ”ವು ಬೇಗನೆ ಬರುವುದು. ಆಗ, ದೇವರ ರಾಜ್ಯದ ಸಂದೇಶವನ್ನು ಯಾರು ಉದ್ದೇಶಪೂರ್ವಕವಾಗಿ ತಿರಸ್ಕರಿಸುತ್ತಾರೋ ಅವರೆಲ್ಲರೂ “ಪ್ರತೀಕಾರ”ವನ್ನು ಅನುಭವಿಸುವರು. ಆ ಸಮಯದಲ್ಲಿ “ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.”—2 ಥೆಸಲೊನೀಕ 1:6-9.
12. (ಎ) ಮಹಾ ಸಂಕಟವು ಯಾವಾಗ ಆರಂಭಗೊಳ್ಳಬಹುದು ಎಂಬುದರ ಬಗ್ಗೆ ಯಾವುದೇ ಊಹಾಪೋಹಗಳನ್ನು ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲವೇಕೆ? (ಬಿ) ಈ ವಿಷಯದಲ್ಲಿ ಯಾವ ಅಪಾಯದ ಕುರಿತು ಯೇಸು ಎಚ್ಚರಿಸಿದನು?
12 ಅಂತಿಮವಾಗಿ ಯಾವಾಗ ಯೆಹೋವನ ತಾಳ್ಮೆಯು ಕೊನೆಗೊಳ್ಳುವುದು? “ಮಹಾ ಸಂಕಟ”ವು ಯಾವಾಗ ಆರಂಭಗೊಳ್ಳಬಹುದು ಎಂಬುದರ ಬಗ್ಗೆ ಊಹಾಪೋಹಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ. ಯೇಸು ಸ್ಪಷ್ಟವಾಗಿ ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ . . . ಮತ್ತಾರಿಗೂ ತಿಳಿಯದು.” ಇನ್ನೊಂದು ಕಡೆಯಲ್ಲಿ ಅವನು ಬುದ್ಧಿಹೇಳಿದ್ದು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. . . . ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:21, 36, 42, 44) ಸರಳವಾಗಿ ಹೇಳುವಲ್ಲಿ, ಪ್ರತಿ ದಿನ ನಾವು ಲೌಕಿಕ ಘಟನೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಮಹಾ ಸಂಕಟದ ಆರಂಭವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದೇ ಇದರ ಅರ್ಥವಾಗಿದೆ. (1 ಥೆಸಲೊನೀಕ 5:1-5) ಮುಂದಿನ ಘಟನೆಗಳು ಹೇಗೆ ಸಂಭವಿಸುವವು ಎಂಬುದನ್ನು ಕಣ್ಣಾರೆ ನೋಡಲು ಕಾಯುತ್ತಾ, ನಾವು ಸಹಜವೆಂದು ತೋರುವಂತಹ ಜೀವನವನ್ನು ನಡೆಸುವುದಾದರೆ ತಪ್ಪೇನಿಲ್ಲ ಎಂದು ಭಾವಿಸಿ ನಮ್ಮ ವೇಗವನ್ನು ತಗ್ಗಿಸುವುದು ಎಷ್ಟು ಅಪಾಯಕರವಾಗಿದೆ! ಯೇಸು ಹೇಳಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.” (ಲೂಕ 21:34, 35) ಆದರೆ ಈ ಸಂಗತಿಯ ಬಗ್ಗೆಯಂತೂ ನಾವು ದೃಢನಿಶ್ಚಿತರಾಗಿರಸಾಧ್ಯವಿದೆ: ಸದ್ಯಕ್ಕೆ ಯೆಹೋವನ “ನಾಲ್ಕು ಮಂದಿ ದೇವದೂತ”ರಿಂದ ತಡೆಹಿಡಿಯಲ್ಪಟ್ಟಿರುವ ನಾಶನದ “ಚತುರ್ದಿಕ್ಕುಗಳ ಗಾಳಿ”ಯು ಸದಾಕಾಲಕ್ಕೂ ಹೀಗೆಯೇ ತಡೆಹಿಡಿಯಲ್ಪಡುವುದಿಲ್ಲ.—ಪ್ರಕಟನೆ 7:1-3.
13. ಸುಮಾರು 60 ಲಕ್ಷ ಜನರು ಏನನ್ನು ಅರ್ಥಮಾಡಿಕೊಂಡಿದ್ದಾರೆ?
13 ವೇಗವಾಗಿ ಧಾವಿಸುತ್ತಿರುವ ಮುಯ್ಯಿ ತೀರಿಸುವ ದಿನವನ್ನು ಪರಿಗಣಿಸುವಾಗ, ‘ಮಾತಾಡುವ ಸಮಯ’ದ ಕುರಿತಾದ ಸೊಲೊಮೋನನ ಮಾತುಗಳು ವಿಶೇಷ ಅರ್ಥವನ್ನು ಪಡೆದುಕೊಳ್ಳುತ್ತವೆ. (ಪ್ರಸಂಗಿ 3:7) ಖಂಡಿತವಾಗಿಯೂ ಇದು ಮಾತಾಡುವ ಸಮಯವಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿರುವ ಸುಮಾರು 60 ಲಕ್ಷದಷ್ಟು ಯೆಹೋವನ ಸಾಕ್ಷಿಗಳು, ದೇವರ ರಾಜತ್ವದ ಮಹಿಮೆಯ ಕುರಿತು ಅತ್ಯಂತ ಹುರುಪಿನಿಂದ ಮಾತಾಡುತ್ತಿದ್ದಾರೆ ಮತ್ತು ಆತನ ಮುಯ್ಯಿ ತೀರಿಸುವ ದಿನದ ಕುರಿತು ಎಚ್ಚರಿಕೆ ನೀಡುತ್ತಿದ್ದಾರೆ. ಕ್ರಿಸ್ತನು ಸೈನ್ಯವನ್ನು ಕೂಡಿಸುವ ಈ ದಿನದಲ್ಲಿ ಅವರು ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಳ್ಳುತ್ತಾರೆ.—ಕೀರ್ತನೆ 110:3; 145:10-12.
“ಕ್ಷೇಮ [“ಶಾಂತಿ,” NW]ವಿಲ್ಲದಿದ್ದರೂ ಕ್ಷೇಮ” ಎಂದು ಹೇಳುವವರು
14. ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಯಾವ ಸುಳ್ಳು ಪ್ರವಾದಿಗಳು ಅಸ್ತಿತ್ವದಲ್ಲಿದ್ದರು?
14 ಸಾ.ಶ.ಪೂ. ಏಳನೆಯ ಶತಮಾನದಲ್ಲಿ, ಯೆರೂಸಲೇಮ್ ಮನಬಂದಂತೆ ನಡೆದುಕೊಳ್ಳುವ ಮೂಲಕ ದೇವರಿಗೆ ಅವಿಧೇಯತೆ ತೋರಿಸಿದ್ದಕ್ಕಾಗಿ, ಅದರ ವಿರುದ್ಧ ದೇವರ ಪ್ರವಾದಿಗಳಾದ ಯೆರೆಮೀಯ ಹಾಗೂ ಯೆಹೆಜ್ಕೇಲರು ದೈವಿಕ ಸಂದೇಶಗಳನ್ನು ಪ್ರಕಟಿಸಿದರು. ದೇವರ ಸಂದೇಶವಾಹಕರು ಮುಂತಿಳಿಸಿದ್ದು ತಪ್ಪೆಂದು ಅನೇಕ ಅಗ್ರಗಣ್ಯ ಹಾಗೂ ಪ್ರಭಾವಶಾಲಿ ಧಾರ್ಮಿಕ ಮುಖಂಡರು ಹೇಳಿದ್ದರೂ, ಯೆರೆಮೀಯ ಮತ್ತು ಯೆಹೆಜ್ಕೇಲರು ಮುಂತಿಳಿಸಿದಂತಹ ನಾಶನವು ಸಾ.ಶ.ಪೂ. 607ರಲ್ಲಿ ಸಂಭವಿಸಿತು. “ಕ್ಷೇಮವಿಲ್ಲದಿದ್ದರೂ . . . ಕ್ಷೇಮ [“ಶಾಂತಿ,” NW] ಎಂದು ಹೇಳಿ . . . [ದೇವರ] ಜನರನ್ನು ವಂಚಿಸಿದ್ದ” ಈ ಧಾರ್ಮಿಕ ಮುಖಂಡರು “ಮೂರ್ಖ ಪ್ರವಾದಿ”ಗಳಾಗಿ ಕಂಡುಬಂದರು.—ಯೆಹೆಜ್ಕೇಲ 13:1-16; ಯೆರೆಮೀಯ 6:14, 15; 8:8-12.
15. ಇಂದು ಸಹ ಅದೇ ರೀತಿಯ ಸುಳ್ಳು ಪ್ರವಾದಿಗಳು ಅಸ್ತಿತ್ವದಲ್ಲಿದ್ದಾರೋ? ವಿವರಿಸಿರಿ.
15 ಆ ಸಮಯದ “ಮೂರ್ಖ ಪ್ರವಾದಿ”ಗಳಂತೆ, ಇಂದಿನ ಅಧಿಕಾಂಶ ಧಾರ್ಮಿಕ ಮುಖಂಡರು, ಸಮೀಪಿಸುತ್ತಿರುವ ದೇವರ ನ್ಯಾಯತೀರ್ಪಿನ ದಿನದ ಕುರಿತು ತಮ್ಮ ಜನರಿಗೆ ಎಚ್ಚರಿಕೆ ನೀಡುವುದರಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಬದಲಾಗಿ, ಅಂತಿಮವಾಗಿ ರಾಜಕೀಯ ಗುಂಪುಗಳು ಶಾಂತಿ ಹಾಗೂ ಭದ್ರತೆಯನ್ನು ಸಾಧಿಸುತ್ತವೆ ಎಂಬ ಆಶಾವಾದವನ್ನು ಅವರು ಜನರಿಗೆ ನೀಡುತ್ತಾರೆ. ದೇವರ ರಾಜ್ಯವು ಸ್ಥಾಪಿಸಲ್ಪಟ್ಟಿದೆ ಮತ್ತು ಸ್ವಲ್ಪದರಲ್ಲೇ ಮೆಸ್ಸೀಯ ರಾಜನು ತನ್ನ ಹೋರಾಟವನ್ನು ಪೂರ್ಣಗೊಳಿಸಲಿದ್ದಾನೆ ಎಂಬುದನ್ನು ವಿವರಿಸುವುದಕ್ಕೆ ಬದಲಾಗಿ, ದೇವರಿಗಿಂತಲೂ ಹೆಚ್ಚಾಗಿ ಮಾನವರನ್ನು ಸಂತೋಷಪಡಿಸುವ ಬಯಕೆಯಿಂದ, ತಮ್ಮ ಚರ್ಚಿನ ಸದಸ್ಯರು ಯಾವ ಸಂಗತಿಗಳನ್ನು ಆಲಿಸಲು ಬಯಸುತ್ತಾರೋ ಅದನ್ನೇ ಇವರು ಹೇಳುತ್ತಾರೆ. (ದಾನಿಯೇಲ 2:44; 2 ತಿಮೊಥೆಯ 4:3, 4; ಪ್ರಕಟನೆ 6:2) ಸುಳ್ಳು ಪ್ರವಾದಿಗಳಂತೆಯೇ ಇವರು ಸಹ ‘ಶಾಂತಿಯಿಲ್ಲದಿರುವಾಗ ಶಾಂತಿ’ಯ ಬಗ್ಗೆ ಮಾತಾಡುತ್ತಾರೆ. ಆದರೆ ಅತಿ ಬೇಗನೆ ಅವರ ನಿಶ್ಚಿತಾಭಿಪ್ರಾಯವು ಅನಿರೀಕ್ಷಿತ ಭೀತಿಯಾಗಿ ಮಾರ್ಪಡುವುದು, ಮತ್ತು ಆಗ ಅವರು ಯಾರನ್ನು ತಪ್ಪಾಗಿ ಪ್ರತಿನಿಧಿಸಿದ್ದಾರೋ, ಯಾವ ಹೆಸರಿನ ಮೇಲೆ ಅವರು ಅಪಾರ ನಿಂದೆಯನ್ನು ತಂದೊಡ್ಡಿದ್ದಾರೋ ಆತನ ರೋಷಾವೇಶವನ್ನು ಎದುರಿಸಬೇಕಾಗಿದೆ. ಬೈಬಲಿನಲ್ಲಿ ಜಾರಸ್ತ್ರೀಯೋಪಾದಿ ವರ್ಣಿಸಲ್ಪಟ್ಟಿರುವ ಸುಳ್ಳು ಧರ್ಮ ಲೋಕ ಸಾಮ್ರಾಜ್ಯದ ಮುಖಂಡರು, ಶಾಂತಿಯಿದೆಯೆಂದು ಸುಳ್ಳಾಗಿ ಕೂಗಿಹೇಳುತ್ತಿರುವಾಗಲೇ ಮರಣಾಘಾತವನ್ನು ಅನುಭವಿಸುವರು.—ಪ್ರಕಟನೆ 18:7, 8.
16. (ಎ) ಯೆಹೋವನ ಸಾಕ್ಷಿಗಳು ಯಾವ ರೀತಿಯ ದಾಖಲೆಯನ್ನು ಸ್ಥಾಪಿಸಿದ್ದಾರೆ? (ಬಿ) ‘ಶಾಂತಿಯಿಲ್ಲದಿರುವಾಗ ಶಾಂತಿ’ಯಿದೆ ಎಂದು ಕೂಗುತ್ತಿರುವಂತಹ ಜನರಿಗಿಂತ ಇವರು ಹೇಗೆ ಭಿನ್ನರಾಗಿದ್ದಾರೆ?
16 ಅಗ್ರಗಣ್ಯರೂ ಪ್ರಭಾವಶಾಲಿಗಳೂ ಆಗಿರುವ ಅಧಿಕಾಂಶ ಮುಖಂಡರು, ಶಾಂತಿಯ ಕುರಿತಾದ ಕಪಟ ವಾಗ್ದಾನವನ್ನೇ ನಂಬಿಕೊಂಡು ಮುಂದುವರಿಯುತ್ತಿರುವ ಸಂಗತಿಯು, ನಿಜವಾದ ಶಾಂತಿಯ ಕುರಿತಾದ ದೇವರ ವಾಗ್ದಾನದಲ್ಲಿ ನಂಬಿಕೆಯಿರುವ ಜನರ ದೃಢಭರವಸೆಯನ್ನು ಕದಲಿಸುವುದಿಲ್ಲ. ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ಯೆಹೋವನ ಸಾಕ್ಷಿಗಳು, ದೇವರ ವಾಕ್ಯದ ನಿಷ್ಠಾವಂತ ಸಮರ್ಥಕರು, ಸುಳ್ಳು ಧರ್ಮವನ್ನು ಧೈರ್ಯವಾಗಿ ವಿರೋಧಿಸುವವರು, ಮತ್ತು ದೇವರ ರಾಜ್ಯದ ದೃಢ ಬೆಂಬಲಿಗರು ಎಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ. ಶಾಂತಿಯ ಕುರಿತು ಮೋಡಿಮಾಡುವಂತಹ ಸುಳ್ಳು ಮಾತುಗಳಿಂದ ಜೋಗುಳ ಹಾಡುವ ಮೂಲಕ ಜನರಿಗೆ ನಿದ್ರೆಬರಿಸುವುದಕ್ಕೆ ಬದಲಾಗಿ, ಇದು ಯುದ್ಧದ ಸಮಯವಾಗಿದೆ ಎಂಬುದನ್ನು ಜನರು ವಾಸ್ತವಿಕವಾಗಿ ಅರಿತುಕೊಳ್ಳುವಂತೆ ಎಚ್ಚರಿಸಲು ಯೆಹೋವನ ಸಾಕ್ಷಿಗಳು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಾರೆ.—ಯೆಶಾಯ 56:10-12; ರೋಮಾಪುರ 13:11, 12; 1 ಥೆಸಲೊನೀಕ 5:6.
ಯೆಹೋವನು ತನ್ನ ಮೌನವನ್ನು ಮುರಿಯುತ್ತಾನೆ
17. ಸ್ವಲ್ಪದರಲ್ಲೇ ಯೆಹೋವನು ತನ್ನ ಮೌನವನ್ನು ಮುರಿಯುತ್ತಾನೆ ಎಂಬುದರ ಅರ್ಥವೇನಾಗಿದೆ?
17 ಸೊಲೊಮೋನನು ಹೀಗೂ ಹೇಳಿದನು: “[ದೇವರು] ಧರ್ಮಿಗಳಿಗೂ ಅಧರ್ಮಿಗಳಿಗೂ ನ್ಯಾಯತೀರಿಸುವನು; ಆತನ ನ್ಯಾಯಕ್ರಮದಲ್ಲಿ ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯವುಂಟು.” (ಪ್ರಸಂಗಿ 3:17) ಹೌದು, ಸುಳ್ಳು ಧರ್ಮದ ಮೇಲೆ ಹಾಗೂ “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ [ನಿಂತಿರುವ] ಭೂಪತಿಗಳ” ಮೇಲೆ ನ್ಯಾಯತೀರ್ಪನ್ನು ವಿಧಿಸುವುದಕ್ಕೆ ಯೆಹೋವನು ಒಂದು ನಿಯುಕ್ತ ಸಮಯವನ್ನು ಇಟ್ಟಿದ್ದಾನೆ. (ಕೀರ್ತನೆ 2:1-6; ಪ್ರಕಟನೆ 16:13-16) ಆ ಸಮಯವು ಆಗಮಿಸಿದ ಬಳಿಕ, ಯೆಹೋವನು “ಮೌನ”ದಿಂದಿರುವ ದಿನಗಳು ಕೊನೆಗೊಳ್ಳುತ್ತವೆ. (ಕೀರ್ತನೆ 83:1; ಯೆಶಾಯ 62:1; ಯೆರೆಮೀಯ 47:6, 7) ಸಿಂಹಾಸನಾರೂಢನಾಗಿರುವ ತನ್ನ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನ ಮೂಲಕ ಆತನು, ತನ್ನ ವಿರೋಧಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ಭಾಷೆಯಲ್ಲಿ “ಮಾತಾಡು”ವನು: “ಯೆಹೋವನು ಶೂರನಂತೆ ಹೊರಟು ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು; ಆರ್ಬಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು. ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. [ಈಗ] ಹೆರುವವಳಂತೆ ಮೂಲುಗುತ್ತಾ ಅಸುರುಸಿರಿನೊಡನೆ ಏದುವೆನು. ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ತಾರಿಸಿ ನದಿಗಳನ್ನು ಒಣದಿಣ್ಣೆಮಾಡಿ ಕೆರೆಗಳನ್ನು ಬತ್ತಿಸುವೆನು. ಮತ್ತು ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಯಿಸುವೆನು; ಅವರೆದುರಿನ ಕತ್ತಲನ್ನು ಬೆಳಕುಮಾಡಿ ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು.”—ಯೆಶಾಯ 42:13-16.
18. ಅತಿ ಬೇಗನೆ ಯಾವ ಅರ್ಥದಲ್ಲಿ ದೇವಜನರು “ಸುಮ್ಮನೆ” ಇರುವರು?
18 ತನ್ನ ದೇವತ್ವವನ್ನು ಸಮರ್ಥಿಸಿಕೊಳ್ಳುತ್ತಾ ಯೆಹೋವನು ‘ಮಾತಾಡು’ವಾಗ, ಆತನ ಜನರು ತಮ್ಮ ಪರವಾಗಿ ತಾವೇ ಇನ್ನೆಂದಿಗೂ ಮಾತಾಡುವ ಅಗತ್ಯವಿರುವುದಿಲ್ಲ. ಆಗ “ಸುಮ್ಮನಿರುವ” ಸರದಿ ಅವರದ್ದಾಗಿರುತ್ತದೆ. ಗತ ಸಮಯದ ದೇವರ ಸೇವಕರಿಗೆ ಈ ಮುಂದಿನ ಮಾತುಗಳು ಅನ್ವಯವಾದಂತೆಯೇ ಈಗಲೂ ಅನ್ವಯವಾಗುವವು: “ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. . . . ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ.”—2 ಪೂರ್ವಕಾಲವೃತ್ತಾಂತ 20:17.
19. ಕ್ರಿಸ್ತನ ಆತ್ಮಿಕ ಸಹೋದರರಿಗೆ ಬೇಗನೆ ಯಾವ ಸುಯೋಗವಿರುವುದು?
19 ಸೈತಾನನಿಗೂ ಅವನ ಸಂಸ್ಥೆಗೂ ಎಂತಹ ತಲೆಯೆತ್ತಲಾಗದ ಅಪಜಯ! “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು” ಎಂಬ ವಾಗ್ದಾನಕ್ಕನುಸಾರ, ಕ್ರಿಸ್ತನ ಮಹಿಮಾನ್ವಿತ ಸಹೋದರರು ನೀತಿಯ ಪಕ್ಷದಲ್ಲಿ ತುಂಬ ಗಮನಾರ್ಹವಾದ ರೀತಿಯಲ್ಲಿ ಜಯವನ್ನು ಪಡೆದುಕೊಳ್ಳುವರು. (ರೋಮಾಪುರ 16:20) ಶಾಂತಿಗಾಗಿ ದೀರ್ಘ ಸಮಯದಿಂದಲೂ ಕಾದಿದ್ದ ಸಮಯವು ಕೊನೆಗೂ ಸಮೀಪವಾಗಿದೆ.
20. ತದನಂತರ ಅದು ಯಾವ ಸಮಯವಾಗಿರುವುದು?
20 ಯೆಹೋವನ ಶಕ್ತಿಯ ಈ ಮಹಾನ್ ಪ್ರದರ್ಶನದಿಂದ ಪಾರಾಗಿ ಭೂಮಿಯಲ್ಲಿ ಉಳಿಯುವ ಜನರು ಎಷ್ಟು ಆಶೀರ್ವದಿತರು! ತದನಂತರ ಸ್ವಲ್ಪದರಲ್ಲೇ, ಪುನರುತ್ಥಾನಕ್ಕಾಗಿ ದೇವರಿಂದ ನೇಮಿತವಾದ ಸಮಯವು ಬರುವುದು, ಮತ್ತು ಗತ ಸಮಯದ ನಂಬಿಗಸ್ತ ಸ್ತ್ರೀಪುರುಷರು ಇವರೊಂದಿಗೆ ಜೊತೆಗೂಡುವರು. ನಿಜವಾಗಿಯೂ ಕ್ರಿಸ್ತನ ಸಹಸ್ರ ವರ್ಷದಾಳಿಕೆಯು “ನೆಡುವ ಸಮಯ . . . , ಸ್ವಸ್ಥಮಾಡುವ ಸಮಯ . . . , ಕಟ್ಟುವ ಸಮಯ . . . , ನಗುವ ಸಮಯ . . . , ಕುಣಿದಾಡುವ ಸಮಯ . . . , ಅಪ್ಪುವ ಸಮಯ ಮತ್ತು . . . ಪ್ರೀತಿಸುವ ಸಮಯ”ವಾಗಿರುವುದು. ಹೌದು, ಸದಾಕಾಲಕ್ಕೂ ಅದು “ಶಾಂತಿಯ ಸಮಯ”ವಾಗಿರುವುದು.—ಪ್ರಸಂಗಿ 3:1-8; ಕೀರ್ತನೆ 29:11; 37:11; 72:7.
ನಿಮ್ಮ ಉತ್ತರವೇನು?
◻ ಸದಾಕಾಲಕ್ಕೂ ಇರುವ ಶಾಂತಿಗೆ ಆಧಾರವೇನು?
◻ ಸದ್ಯದ ಸಮಯವನ್ನು ಯೆಹೋವನ ಸಾಕ್ಷಿಗಳು “ಯುದ್ಧದ ಸಮಯ”ವಾಗಿ ಏಕೆ ಪರಿಗಣಿಸುತ್ತಾರೆ?
◻ ದೇವಜನರು ಯಾವಾಗ “ಮಾತಾಡ”ಬೇಕು, ಮತ್ತು ಅವರು ಯಾವಾಗ “ಸುಮ್ಮನಿರ”ಬೇಕು?
◻ ಹೇಗೆ ಮತ್ತು ಯಾವಾಗ ಯೆಹೋವನು ತನ್ನ ಮೌನವನ್ನು ಮುರಿಯುವನು?
[ಪುಟ 13 ರಲ್ಲಿರುವ ಚೌಕ/ಚಿತ್ರಗಳು]
ಯೆಹೋವನು ಈ ಎಲ್ಲ ಘಟನೆಗಳಿಗೆ ಒಂದು ಸಮಯವನ್ನು ನೇಮಿಸಿದ್ದಾನೆ:
◻ ಗೋಗನು ದೇವಜನರ ಮೇಲೆ ಆಕ್ರಮಣಮಾಡುವಂತೆ ಸಜ್ಜುಗೊಳಿಸುವುದು.—ಯೆಹೆಜ್ಕೇಲ 38:3, 4, 10-12
◻ ಮಹಾ ಬಾಬೆಲನ್ನು ನಾಶಮಾಡುವಂತೆ ಮಾನವ ಅರಸರ ಹೃದಯಗಳನ್ನು ಪ್ರಚೋದಿಸುವುದು.—ಪ್ರಕಟನೆ 17:15-17; 19:2
◻ ಯಜ್ಞದ ಕುರಿಯಾದಾತನ ವಿವಾಹವನ್ನು ನೆರವೇರಿಸುವುದು.—ಪ್ರಕಟನೆ 19:6, 7
◻ ಹರ್ಮಗೆದೋನ್ ಯುದ್ಧವನ್ನು ಆರಂಭಿಸುವುದು.—ಪ್ರಕಟನೆ 19:11-16, 19-21
◻ ಯೇಸುವಿನ ಸಹಸ್ರ ವರ್ಷದಾಳಿಕೆಯನ್ನು ಆರಂಭಿಸಲಿಕ್ಕಾಗಿ ಸೈತಾನನನ್ನು ಬಂಧನದಲ್ಲಿರಿಸುವುದು.—ಪ್ರಕಟನೆ 20:1-3
ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಅನುಕ್ರಮದಲ್ಲಿಯೇ ಈ ಘಟನೆಗಳನ್ನು ಪಟ್ಟಿಮಾಡಲಾಗಿದೆ. ಈ ಐದು ಘಟನೆಗಳು, ಯೆಹೋವನು ನಿರ್ಧರಿಸುವಂತಹ ಅನುಕ್ರಮದಲ್ಲಿ ಹಾಗೂ ಆತನು ನಿಗದಿಪಡಿಸುವಂತಹ ಸಮಯದಲ್ಲೇ ಸಂಭವಿಸುವವು ಎಂಬ ವಿಷಯದಲ್ಲಿ ನಾವು ಖಚಿತರಾಗಿರಸಾಧ್ಯವಿದೆ.
[ಪುಟ 15 ರಲ್ಲಿರುವ ಚಿತ್ರಗಳು]
ನಿಜವಾಗಿಯೂ ಕ್ರಿಸ್ತನ ಸಹಸ್ರ ವರ್ಷದಾಳಿಕೆಯು . . .
ನಗುವ ಸಮಯ . . .
ಅಪ್ಪುವ ಸಮಯ . . .
ಪ್ರೀತಿಸುವ ಸಮಯ . . .
ನೆಡುವ ಸಮಯ . . .
ಕುಣಿದಾಡುವ ಸಮಯ . . .
ಕಟ್ಟುವ ಸಮಯ . . . ಆಗಿರುವುದು.