ಬೈಬಲಿನ ದೃಷ್ಟಿಕೋನ
ಅಹಂಕಾರ ಹಾಗೂ ಅಭಿಮಾನವನ್ನು ದೇವರು ಯಾವ ದೃಷ್ಟಿಯಿಂದ ನೋಡುತ್ತಾನೆ?
ಏಳು ಮಹಾಪಾಪಗಳಲ್ಲಿ ಅಹಂಕಾರವು ಪ್ರಪ್ರಥಮವಾದದ್ದಾಗಿದೆ ಎಂಬ ಹಳೆಯ ಗಾದೆಮಾತಿದೆ. ಆದರೂ, ಇಂದು ಅಂತಹ ಒಂದು ಕಲ್ಪನೆಯು ಸಂಪೂರ್ಣವಾಗಿ ಹಳೆಯದಾಗಿ ಹೋಗಿದೆ ಎಂದು ಅನೇಕರು ನಂಬುತ್ತಾರೆ. 21ನೆಯ ಶತಮಾನದ ಆರಂಭದಲ್ಲಿ, ಅಹಂಕಾರವು ಒಂದು ಪಾಪವಲ್ಲ, ಬದಲಾಗಿ ಒಂದು ಆಸ್ತಿಯಾಗಿದೆಯೆಂದು ಪರಿಗಣಿಸಲಾಗುತ್ತದೆ.
ಆದರೂ, ಬೈಬಲು ಅಹಂಕಾರದ ಕುರಿತು ಮಾತಾಡುವಾಗ, ಸಾಮಾನ್ಯವಾಗಿ ನಕಾರಾತ್ಮಕವಾದ ಸೂಚಿತಾರ್ಥವನ್ನು ಕೊಡುತ್ತದೆ. ಬೈಬಲಿನ ಜ್ಞಾನೋಕ್ತಿ ಪುಸ್ತಕದಲ್ಲಿ, ಅಹಂಕಾರವನ್ನು ಖಂಡಿಸುವಂತಹ ಅನೇಕ ಹೇಳಿಕೆಗಳಿವೆ. ಉದಾಹರಣೆಗೆ, ಜ್ಞಾನೋಕ್ತಿ 8:13 ಹೀಗೆ ಹೇಳುತ್ತದೆ: “ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.” ಜ್ಞಾನೋಕ್ತಿ 16:5 ಹೇಳುವುದು: “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.” ಮತ್ತು 18ನೆಯ ವಚನವು ಹೀಗೆ ಎಚ್ಚರಿಸುತ್ತದೆ: “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.”
ಅಹಂಕಾರ—ಬೈಬಲಿನ ಅಭಿಪ್ರಾಯ
ಬೈಬಲಿನಲ್ಲಿ ಯಾವುದರ ಬಗ್ಗೆ ಖಂಡಿಸಿ ಮಾತನಾಡಲಾಗಿದೆಯೋ ಆ ಅಹಂಕಾರವನ್ನು, ಅತಿಯಾದ ಆತ್ಮಾಭಿಮಾನ, ಒಬ್ಬನು ತನ್ನ ವಿಶೇಷ ಸಾಮರ್ಥ್ಯ, ಸೌಂದರ್ಯ, ಐಶ್ವರ್ಯ, ಶಿಕ್ಷಣ, ಸ್ಥಾನಮಾನ, ಇನ್ನು ಮುಂತಾದವುಗಳ ವಿಷಯದಲ್ಲಿ ವ್ಯಕ್ತಪಡಿಸುವ ಅವಿವೇಕದಿಂದ ಕೂಡಿದ ಉತ್ಕೃಷ್ಟ ಭಾವನೆ ಎಂದು ಅರ್ಥನಿರೂಪಿಸಸಾಧ್ಯವಿದೆ. ತಿರಸ್ಕಾರದ ವರ್ತನೆ, ಜಂಬಕೊಚ್ಚಿಕೊಳ್ಳುವಿಕೆ, ದುರಹಂಕಾರ, ಅಥವಾ ದುರಭಿಮಾನಗಳಲ್ಲಿ ಇದು ವ್ಯಕ್ತವಾಗಬಹುದು. ತನ್ನ ಬಗ್ಗೆ ಒಬ್ಬನು ಅತಿಯಾಗಿ ಭಾವಿಸಿಕೊಳ್ಳುವುದು, ಅಗತ್ಯವಿರುವ ತಿದ್ದುಪಾಟನ್ನು ಕಡೆಗಣಿಸುವಂತೆ ಮಾಡಬಹುದು; ತಪ್ಪುಗಳನ್ನು ಒಪ್ಪಿಕೊಳ್ಳದಿರುವಂತೆ ಹಾಗೂ ಕ್ಷಮೆಯಾಚಿಸದಂತೆ, ತನ್ನ ಅಧಿಕಾರವನ್ನು ಬಿಟ್ಟು ಹಿಮ್ಮೆಟ್ಟುವಂತೆ, ಅವಮಾನ ಹೊಂದಲು ನಿರಾಕರಿಸುವಂತೆ ಮಾಡಬಹುದು; ಅಥವಾ ಯಾರಾದರೊಬ್ಬರು ಮಾಡಿದ ಇಲ್ಲವೆ ಹೇಳಿದ ಸಂಗತಿಯಿಂದ ಬೇಗನೆ ಅಸಮಾಧಾನಗೊಳ್ಳುವಂತೆ ಮಾಡಬಹುದು.
ಅಹಂಕಾರಿಗಳು ಯಾವಾಗಲೂ ತಾವು ಹೇಳುವ ಹಾಗೆಯೇ ಇತರರು ಮಾಡಬೇಕು ಎಂದು ಒತ್ತಾಯಪಡಿಸಬಹುದು. ಅನೇಕವೇಳೆ ಇಂತಹ ಮನೋಭಾವದ ಕಾರಣದಿಂದ ಒಂದಲ್ಲ ಒಂದು ರೀತಿಯ ವೈಯಕ್ತಿಕ ಘರ್ಷಣೆಗಳು ಉಂಟಾಗುತ್ತವೆ ಎಂಬುದನ್ನು ನೋಡುವುದು ಕಷ್ಟಕರವೇನಲ್ಲ. ಜಾತಿ ಅಥವಾ ರಾಷ್ಟ್ರೀಯತೆಯ ಕುರಿತಾದ ಅಹಂಕಾರವು, ಅಸಂಖ್ಯಾತ ಯುದ್ಧಗಳಿಗೆ ಹಾಗೂ ರಕ್ತಪಾತಕ್ಕೆ ಕಾರಣವಾಗಿದೆ. ಬೈಬಲಿಗನುಸಾರ, ದೇವರ ಆತ್ಮಿಕ ಪುತ್ರನೊಬ್ಬನು ದೇವರ ವಿರುದ್ಧ ದಂಗೆಯೆದ್ದು, ತನ್ನನ್ನು ಪಿಶಾಚನಾದ ಸೈತಾನನಾಗಿ ಮಾಡಿಕೊಳ್ಳಲು ಅಹಂಕಾರವೇ ಕಾರಣವಾಗಿತ್ತು. ಕ್ರೈಸ್ತ ಹಿರಿಯರ ಅರ್ಹತೆಗಳ ಕುರಿತು ಪೌಲನು ಸಲಹೆ ನೀಡಿದ್ದು: “ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು; ಅಂಥವನಾದರೆ [“ಅಹಂಕಾರದಿಂದ,” NW] ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.” (1 ತಿಮೊಥೆಯ 3:6; ಹೋಲಿಸಿರಿ ಯೆಹೆಜ್ಕೇಲ 28:13-17.) ಇವು ಅಹಂಕಾರದ ಪರಿಣಾಮಗಳಾಗಿರುವಲ್ಲಿ, ದೇವರು ಇದನ್ನು ಖಂಡಿಸುತ್ತಾನೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೂ, ‘ಅಭಿಮಾನದ ಕುರಿತಾಗಿ ಏನು?’ ಎಂದು ನೀವು ಕೇಳಬಹುದು.
ಅಭಿಮಾನ—ಬೈಬಲಿನ ಅಭಿಪ್ರಾಯ
ಕ್ರೈಸ್ತ ಗ್ರೀಕ್ಶಾಸ್ತ್ರವಚನಗಳಲ್ಲಿ, “ಅಭಿಮಾನಪಡು, ಗರ್ವಪಡು, ಜಂಬಕೊಚ್ಚಿಕೊ” ಎಂದು ಭಾಷಾಂತರಿಸಲ್ಪಟ್ಟಿರುವ ಕಾಫ್ಕಾಜಾಮೆ ಎಂಬ ಕ್ರಿಯಾಪದವು, ನಕಾರಾತ್ಮಕ ಹಾಗೂ ಸಕಾರಾತ್ಮಕ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. ಉದಾಹರಣೆಗೆ, ನಾವು “ದೇವರ ಮಹಿಮೆಯನ್ನು ಹೊಂದುವೆವೆಂಬ ಭರವಸದಿಂದ ಉಲ್ಲಾಸ [“ಗರ್ವ,” NW]”ಪಡಬಹುದು ಎಂದು ಪೌಲನು ಹೇಳುತ್ತಾನೆ. ಅವನು ಹೀಗೂ ಶಿಫಾರಸ್ಸು ಮಾಡುತ್ತಾನೆ: “ಹೆಚ್ಚಳಪಡುವವನು ಕರ್ತ [“ಯೆಹೋವ,” NW]ನಲ್ಲಿಯೇ ಹೆಚ್ಚಳಪಡಲಿ.” (ರೋಮಾಪುರ 5:2; 2 ಕೊರಿಂಥ 10:17) ಇದರ ಅರ್ಥ, ನಮ್ಮ ದೇವರೋಪಾದಿ ಯೆಹೋವನ ವಿಷಯದಲ್ಲಿ ಅಭಿಮಾನಪಡುವುದು, ಅಂದರೆ ಆತನ ಒಳ್ಳೆಯ ಹೆಸರು ಹಾಗೂ ಸತ್ಕೀರ್ತಿಯ ಬಗ್ಗೆ ಹೆಚ್ಚಳಪಡುವಂತಹ ಒಂದು ಅನಿಸಿಕೆಯೇ ಆಗಿದೆ.
ದೃಷ್ಟಾಂತಕ್ಕಾಗಿ: ಒಂದು ಒಳ್ಳೆಯ ಹೆಸರಿನ ಮೇಲೆ ಮಿಥ್ಯಾಪವಾದ ಹೊರಿಸಲ್ಪಡುವಾಗ, ಆ ಹೆಸರನ್ನು ಸಮರ್ಥಿಸಿ ಮಾತಾಡಲು ಬಯಸುವುದು ತಪ್ಪೋ? ಖಂಡಿತವಾಗಿಯೂ ಇಲ್ಲ. ನಿಮ್ಮ ಕುಟುಂಬದ ಸದಸ್ಯರ ಕುರಿತು ಅಥವಾ ನೀವು ಪ್ರೀತಿಸಿ ಗೌರವಿಸುವಂತಹ ಬೇರೆ ವ್ಯಕ್ತಿಗಳ ಕುರಿತು ಜನರು ಅನುಚಿತವಾಗಿ ಮಾತಾಡುವಲ್ಲಿ, ನೀವು ಕೋಪಗೊಂಡು ಅವರ ಪರವಾಗಿ ಮಾತಾಡುವಂತೆ ಪ್ರಚೋದಿಸಲ್ಪಡುವುದಿಲ್ಲವೋ? “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ” ಎಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 22:1) ಒಂದು ಸಂದರ್ಭದಲ್ಲಿ, ಅಹಂಕಾರಿಯಾಗಿದ್ದ ಐಗುಪ್ತದ ಫರೋಹನೊಬ್ಬನಿಗೆ ಸರ್ವಶಕ್ತನಾದ ದೇವರು ಹೇಳಿದ್ದು: “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.” (ವಿಮೋಚನಕಾಂಡ 9:16) ಹೀಗೆ, ದೇವರು ತನ್ನ ಒಳ್ಳೆಯ ಹೆಸರಿನ ಬಗ್ಗೆ ಹಾಗೂ ಸತ್ಕೀರ್ತಿಯ ಬಗ್ಗೆ ಹೆಮ್ಮೆಪಡುತ್ತಾನೆ ಮತ್ತು ಅದರ ಬಗ್ಗೆ ಅತ್ಯಭಿಮಾನಿಯಾಗಿದ್ದಾನೆ. ನಾವು ಸಹ ನಮ್ಮ ಒಳ್ಳೆಯ ಹೆಸರನ್ನು ಹಾಗೂ ಸತ್ಕೀರ್ತಿಯನ್ನು ಎತ್ತಿಹಿಡಿಯುವುದರಲ್ಲಿ ಆಸಕ್ತಿಯನ್ನು ತೋರಿಸಸಾಧ್ಯವಿದೆ, ಆದರೆ ಒಣಹೆಮ್ಮೆ ಹಾಗೂ ಸ್ವಾರ್ಥಪರ ಅಹಂಕಾರದಿಂದ ಪ್ರಚೋದಿತರಾಗಬಾರದು.—ಜ್ಞಾನೋಕ್ತಿ 16:18.
ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ಗೌರವವು ಅತ್ಯಗತ್ಯವಾಗಿದೆ. ನಮ್ಮ ಒಡನಾಡಿಗಳಲ್ಲಿ ನಾವು ಭರವಸೆಯನ್ನು ಕಳೆದುಕೊಳ್ಳುವಲ್ಲಿ, ನಮ್ಮ ಸಾಮಾಜಿಕ ಜೀವನ ಹಾಗೂ ವ್ಯಾಪಾರ ವ್ಯವಹಾರಗಳು ಸಫಲವಾಗುವುದಿಲ್ಲ. ತದ್ರೀತಿಯಲ್ಲಿ, ಒಂದು ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚು ಜನರು ಪಾಲುದಾರರಾಗುವಾಗ, ಅವರಲ್ಲಿ ಒಬ್ಬನು ಆ ಸಂಸ್ಥೆಗೆ ಕೆಟ್ಟ ಹೆಸರನ್ನು ತರುವಂತಹ ಒಂದು ಕೆಲಸವನ್ನು ಮಾಡುವಲ್ಲಿ, ಆ ವ್ಯಾಪಾರವೇ ಹಾಳಾಗಸಾಧ್ಯವಿದೆ. ಅವರ ಗುರಿಗಳು ಏನೇ ಆಗಿರಲಿ, ಅವುಗಳನ್ನು ತಲಪಲಿಕ್ಕಾಗಿ ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಬೇಕು. ಕ್ರೈಸ್ತ ಸಭೆಯಲ್ಲಿರುವ ಮೇಲ್ವಿಚಾರಕರು ಹೊರಗಿನವರಿಂದ ಏಕೆ ‘ಒಳ್ಳೆಯವರೆನಿಸಿಕೊಂಡಿರಬೇಕು’ ಎಂಬುದಕ್ಕೆ ಇದು ಒಂದು ಕಾರಣವಾಗಿದೆ. (1 ತಿಮೊಥೆಯ 3:7) ಒಳ್ಳೆಯ ಹೆಸರನ್ನು ಪಡೆದುಕೊಳ್ಳುವಂತಹ ಅವರ ಬಯಕೆಯು, ಅಹಂಕಾರದಿಂದ ಕೂಡಿದ ಗರ್ವದಿಂದಲ್ಲ, ಬದಲಾಗಿ ಯೋಗ್ಯವಾದ ಹಾಗೂ ಘನತೆಯುಳ್ಳ ರೀತಿಯಲ್ಲಿ ದೇವರನ್ನು ಪ್ರತಿನಿಧಿಸುವ ಅಗತ್ಯದಿಂದ ಪ್ರಚೋದಿತವಾಗಿರಬೇಕು. ಏನೇ ಆದರೂ, ಹೊರಗಿನವರಿಂದ ಒಳ್ಳೆಯ ಹೆಸರನ್ನು ಪಡೆದುಕೊಂಡಿರದ ಒಬ್ಬ ಶುಶ್ರೂಷಕನು ಎಷ್ಟು ವಿಶ್ವಾಸಾರ್ಹನಾಗಿರಸಾಧ್ಯವಿದೆ?
ವೈಯಕ್ತಿಕ ಸಾಧನೆಗಳ ಬಗ್ಗೆ ಅಭಿಮಾನಪಡುವುದರ ಕುರಿತಾಗಿ ಏನು? ಉದಾಹರಣೆಗೆ, ಶಾಲೆಯಲ್ಲಿ ತಮ್ಮ ಮಗುವು ಚೆನ್ನಾಗಿ ಓದುವಾಗ ಹೆತ್ತವರಿಗೆ ಯಾವ ಅನಿಸಿಕೆಯಾಗಬಹುದು ಎಂಬುದನ್ನು ಪರಿಗಣಿಸಿರಿ. ಅಂತಹ ಒಂದು ಸಾಧನೆಯು ಯೋಗ್ಯವಾದ ಸಂತೃಪ್ತಿಯ ಮೂಲವಾಗಿದೆ. ಥೆಸಲೊನೀಕದಲ್ಲಿರುವ ಜೊತೆ ಕ್ರೈಸ್ತರಿಗೆ ಪತ್ರವನ್ನು ಬರೆಯುವಾಗ, ತನ್ನ ಸಾಧನೆಗಳ ಬಗ್ಗೆ ತಾನು ಕೂಡ ಆನಂದಪಟ್ಟೆನೆಂದು ಪೌಲನು ತೋರಿಸಿದನು: “ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿಹೊಂದುತ್ತಾ ಬರುತ್ತದೆ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚುತ್ತಾ ಬರುತ್ತದೆ. ಹೀಗಿರುವದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ಹೆಚ್ಚಳಪಟ್ಟು [“ಅಭಿಮಾನಪಟ್ಟು,” NW] ದೇವರ ಸಭೆಗಳೊಳಗೆ ನಾವೇ ಮಾತಾಡುತ್ತೇವೆ.” (2 ಥೆಸಲೊನೀಕ 1:3, 4) ಹೌದು, ನಮ್ಮ ಪ್ರಿಯ ಜನರ ಸಾಧನೆಗಳನ್ನು ಕಂಡು ಹೆಮ್ಮೆಪಡುವುದು ಸಹಜ ಪ್ರವೃತ್ತಿಯಾಗಿದೆ. ಹಾಗಾದರೆ, ಅಹಂಕಾರಕ್ಕೂ ಅಭಿಮಾನಕ್ಕೂ ನಡುವೆ ಇರುವ ಭಿನ್ನತೆಯನ್ನು ಯಾವುದು ಗುರುತಿಸುತ್ತದೆ?
ನಮ್ಮ ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲು, ಯಶಸ್ಸನ್ನು ಪಡೆದುಕೊಳ್ಳಲು, ಮತ್ತು ಅಂತಹ ಯಶಸ್ಸಿನಿಂದ ಬರುವ ಆನಂದವನ್ನು ಅನುಭವಿಸಲು ಬಯಸುವುದು ತಪ್ಪೇನಲ್ಲ. ಆದರೂ, ತಮ್ಮ ಬಗ್ಗೆ ಗರ್ವಪಡುವುದು, ದರ್ಪ ತೋರಿಸುವುದು, ಮತ್ತು ತಮ್ಮ ಕುರಿತಾಗಿ ಇಲ್ಲವೆ ಬೇರೆಯವರ ಕುರಿತಾಗಿ ಜಂಬಕೊಚ್ಚಿಕೊಳ್ಳುವುದನ್ನು ದೇವರು ಖಂಡಿಸುತ್ತಾನೆ. ಯಾರಾದರೂ ಅಹಂಕಾರದಿಂದ “ಉಬ್ಬಿಕೊಳ್ಳು”ವುದು ಅಥವಾ ‘ತಮ್ಮ ಯೋಗ್ಯತೆಗೆ ಮೀರಿ ತಮ್ಮ ಬಗ್ಗೆ ಶ್ರೇಷ್ಠರೆಂದು ಭಾವಿಸುವುದು’ ಖಂಡಿತವಾಗಿಯೂ ದುಃಖಕರವಾದ ಸಂಗತಿಯಾಗಿದೆ. ಯೆಹೋವ ದೇವರನ್ನು ಮತ್ತು ತಮಗೋಸ್ಕರ ಆತನು ಮಾಡಿರುವ ಏರ್ಪಾಡನ್ನು ಬಿಟ್ಟು, ಬೇರೆ ಯಾರ ಬಗ್ಗೆಯಾಗಲಿ ಅಥವಾ ಯಾವುದರ ಬಗ್ಗೆಯಾಗಲಿ ಅಹಂಕಾರಪಡಲು ಇಲ್ಲವೆ ಜಂಬಕೊಚ್ಚಿಕೊಳ್ಳಲು ಕ್ರೈಸ್ತರಿಗೆ ಯಾವ ಅವಕಾಶವೂ ಇಲ್ಲ. (1 ಕೊರಿಂಥ 4:6, 7; ರೋಮಾಪುರ 12:3) ಪ್ರವಾದಿಯಾದ ಯೆರೆಮೀಯನು, ಅನುಸರಿಸಲಿಕ್ಕಾಗಿ ಒಂದು ಅತ್ಯುತ್ತಮ ಮೂಲತತ್ವವನ್ನು ನಮಗೆ ಕೊಡುತ್ತಾನೆ: “ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ; ಪ್ರೀತಿನೀತಿನ್ಯಾಯಗಳೇ ನನಗೆ ಆನಂದವೆಂದು ಯೆಹೋವನು ಅನ್ನುತ್ತಾನೆ.”—ಯೆರೆಮೀಯ 9:24.
[ಪುಟ 20 ರಲ್ಲಿರುವ ಚಿತ್ರ]
“ಪೋಪ್ ಇನಸೆಂಟ್ X” ಡಾನ್ ಡಿಏಗೊ ರಾಡ್ರಿಗಸ್ ಡ ಸಿಲ್ವ ವಲಾಸ್ಕಸ್ರಿಂದ
[ಕೃಪೆ]
Scala/Art Resource, NY