“ಸಕಲ ಸಾಂತ್ವನದ” ದೇವರಾದ ಯೆಹೋವನಲ್ಲಿ ಭರವಸೆಯಿಡಿ
“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿದ್ದಾನೆ.”—2 ಕೊರಿಂ. 1:3.
1. ಪ್ರತಿಯೊಬ್ಬ ಮನುಷ್ಯನಿಗೆ ಯಾವುದರ ಆವಶ್ಯಕತೆಯಿದೆ?
ಹುಟ್ಟಿನಿಂದಲೂ ಸಾಂತ್ವನ ಆದರಣೆಗಾಗಿ ನಾವು ತವಕಪಡುತ್ತೇವೆ. ಮಗುವೊಂದು ಹಸಿದಾಗ ಅಥವಾ ಎತ್ತಿಕೊಳ್ಳಬೇಕೆಂದಾಗ ರಚ್ಚೆಹಿಡಿದು ಅಳುತ್ತದೆ. ಹೀಗೆ ತನ್ನನ್ನು ಸಂತೈಸುವಂತೆ ಸಂದೇಶ ಬಿತ್ತರಿಸುತ್ತದೆ. ಬೆಳೆದು ದೊಡ್ಡವರಾದ ಮೇಲೂ ನಮಗೆ ಸಾಂತ್ವನದ ಆವಶ್ಯಕತೆಯಿದೆ. ಅದರಲ್ಲೂ ಕಷ್ಟಮಯ ಸನ್ನಿವೇಶಗಳನ್ನು ಎದುರಿಸುವಾಗ ಸಾಂತ್ವನಕ್ಕಾಗಿ ಹುಡುಕುತ್ತೇವೆ.
2. ಯೆಹೋವನು ತನ್ನಲ್ಲಿ ಭರವಸೆಯಿಡುವವರಿಗೆ ಯಾವ ಖಾತ್ರಿ ನೀಡುತ್ತಾನೆ?
2 ಮನೆಮಂದಿ ಮತ್ತು ಮಿತ್ರರು ಸ್ವಲ್ಪಮಟ್ಟಿಗಿನ ಸಾಂತ್ವನ ಒದಗಿಸಬಲ್ಲರು. ಆದರೆ ಕೆಲವು ಸಂದರ್ಭಗಳಲ್ಲಿ ಮಾನವರು ಸಂತೈಸಲಾಗದಂಥ ಸನ್ನಿವೇಶ ನಮಗೆ ಎದುರಾಗಬಹುದು. ಆಗ ದೇವರು ಮಾತ್ರ ಸಂತೈಸಬಲ್ಲನು. ಬೈಬಲ್ ಕೊಡುವ ಖಾತ್ರಿಯನ್ನು ಗಮನಿಸಿ: “ಯೆಹೋವನಿಗೆ . . . ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. . . . ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” (ಕೀರ್ತ. 145:18, 19) ಹೌದು, “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತ. 34:15) ಆದರೆ ದೇವರ ಬೆಂಬಲ ಮತ್ತು ಸಾಂತ್ವನ ಪಡೆದುಕೊಳ್ಳಬೇಕಾದರೆ ನಾವಾತನಲ್ಲಿ ಭರವಸೆಯಿಡಬೇಕು. ಕೀರ್ತನೆಗಾರ ದಾವೀದನ ಮಾತಿನಲ್ಲಿ ಇದು ಸ್ಪಷ್ಟವಾಗುತ್ತದೆ: “ಯೆಹೋವನು, ಕುಗ್ಗಿಹೋದವರಿಗೆ ಆಶ್ರಯವೂ ಆಪತ್ಕಾಲದಲ್ಲಿ ದುರ್ಗವೂ ಆಗಿರುವನು. ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೋಗುವವರನ್ನು ನೀನು ಕೈಬಿಡುವವನಲ್ಲ.”—ಕೀರ್ತ. 9:9, 10.
3. ಯೆಹೋವನು ತನ್ನ ಜನರನ್ನು ಬಹಳವಾಗಿ ಪ್ರೀತಿಸುತ್ತಾನೆಂದು ಯೇಸುವಿನ ಮಾತುಗಳು ಹೇಗೆ ತೋರಿಸುತ್ತವೆ?
3 ಯೆಹೋವ ದೇವರಿಗೆ ತನ್ನ ಭಕ್ತರು ಅಮೂಲ್ಯರು. ಯೇಸುವಿನ ಮಾತಿನಿಂದ ನಮಗದು ತಿಳಿಯುತ್ತದೆ: “ಚಿಕ್ಕ ಬೆಲೆಯ ಎರಡು ಕಾಸಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವೆ, ಅಲ್ಲವೆ? ಹಾಗಿದ್ದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ನಿಮ್ಮ ತಲೆಗಳ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.” (ಲೂಕ 12:6, 7) ಯೆಹೋವನು ತಾನಾದುಕೊಂಡ ಜನಾಂಗಕ್ಕೆ ಪ್ರವಾದಿ ಯೆರೆಮೀಯನ ಮೂಲಕ ಹೀಗೆ ತಿಳಿಸಿದನು: “ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ.”—ಯೆರೆ. 31:3.
4. ಯೆಹೋವ ದೇವರ ವಾಗ್ದಾನಗಳಲ್ಲಿ ನಾವೇಕೆ ಅಚಲ ಭರವಸೆ ಇಡಬಹುದು?
4 ಯೆಹೋವ ದೇವರಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ಭರವಸೆಯಿಡುವುದು ಸಂಕಷ್ಟಗಳ ಸಮಯದಲ್ಲಿ ನಮಗೆ ಸಾಂತ್ವನ ಒದಗಿಸುತ್ತದೆ. ಹಾಗಾಗಿ ಯೆಹೋಶುವನಂತೆ ನಾವು ಸಹ ದೇವರಲ್ಲಿ ಅಚಲ ಭರವಸೆ ಇಡೋಣ. ಯೆಹೋಶುವನು ತನ್ನ ಭರವಸೆಯನ್ನು ಹೀಗೆ ವ್ಯಕ್ತಪಡಿಸಿದನು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋ. 23:14) ಕಷ್ಟಗಳು ನಮ್ಮನ್ನು ಈಗ ಕುಗ್ಗಿಸುತ್ತಿರುವುದಾದರೂ “ದೇವರು ನಂಬಿಗಸ್ತನು” ಎಂಬದನ್ನು ನಾವು ಮರೆಯದಿರೋಣ. ಆತನು ಎಂದಿಗೂ ತನ್ನ ಭಕ್ತರ ಕೈಬಿಡನು.—1 ಕೊರಿಂಥ 10:13 ಓದಿ.
5. ಇತರರನ್ನು ಸಂತೈಸಲು ನಮಗೆ ಹೇಗೆ ಸಾಧ್ಯವಾಗುತ್ತದೆ?
5 ಅಪೊಸ್ತಲ ಪೌಲ ಯೆಹೋವನನ್ನು “ಸಕಲ ಸಾಂತ್ವನದ” ದೇವರು ಎಂದು ವರ್ಣಿಸಿದನು. “ಸಂತೈಸು” ಎನ್ನುವುದರ ಅರ್ಥ ಕಷ್ಟದುಃಖದಲ್ಲಿ ಇರುವವರನ್ನು ಸಮಾಧಾನಪಡಿಸು ಎಂದಾಗಿದೆ. ಅಂದರೆ ಅವರ ದುಃಖದ ಭಾರವನ್ನು ಇಳಿಸಿ ನೆಮ್ಮದಿ ಉಂಟುಮಾಡುವುದಾಗಿದೆ. ಯೆಹೋವ ದೇವರು ಹಾಗೆ ಮಾಡುತ್ತಾನೆ. (2 ಕೊರಿಂಥ 1:3, 4 ಓದಿ.) ನಮ್ಮ ತಂದೆಯಾಗಿರುವ ಆತನಿಗೆ ಅಸಾಧ್ಯವಾದ ವಿಷಯವೆಂಬುದೇ ಇಲ್ಲ. ಆತನನ್ನು ಯಾರೂ ನಿರ್ಬಂಧಿಸಲಾರರು. ಆತನು ತನ್ನನ್ನು ಪ್ರೀತಿಸುವವರನ್ನು ಸಕಲ ರೀತಿಯಲ್ಲಿ ಸಂತೈಸಬಲ್ಲನು. “ದೇವರಿಂದ ನಾವು ಹೊಂದಿರುವ ಸಾಂತ್ವನದಿಂದಾಗಿ ಯಾವುದೇ ರೀತಿಯ ಸಂಕಟದಲ್ಲಿರುವವರನ್ನು ನಾವು ಸಾಂತ್ವನಗೊಳಿಸಲು ಶಕ್ತರಾಗುತ್ತೇವೆ.” ಸಂಕಷ್ಟಗಳಲ್ಲಿ ಇರುವವರಿಗೆ ಸಾಂತ್ವನ ನೀಡುವ ವಿಷಯದಲ್ಲಿ ಯೆಹೋವನಿಗೆ ಸರಿಸಾಟಿಯಿಲ್ಲ!
ದುಃಖಕ್ಕೆ ಕಾರಣಗಳು
6. ದುಃಖ ತಂದೊಡ್ಡಬಲ್ಲ ವಿಷಯಗಳನ್ನು ಉದಾಹರಿಸಿ.
6 ಬದುಕಿನ ಎಲ್ಲಾ ಮಗ್ಗುಲಲ್ಲೂ ನಮಗೆ ಸಾಂತ್ವನ ಬೇಕಿರುತ್ತದೆ. ನಮಗೆ ದುಃಖ ತರುವ ಒಂದು ವಿಷಯ ಪ್ರೀತಿಪಾತ್ರರ ಅಗಲುವಿಕೆ. ಬಾಳ ಸಂಗಾತಿಯನ್ನೋ ಮಕ್ಕಳನ್ನೋ ಕಳೆದುಕೊಂಡರಂತೂ ಹೃದಯ ಛಿದ್ರವಾಗುತ್ತದೆ. ತಾರತಮ್ಯ ಪಕ್ಷಪಾತಕ್ಕೆ ಗುರಿಯಾದಾಗಲೂ ಕೆಲವರು ಸಾಂತ್ವನಕ್ಕಾಗಿ ಅರಸುತ್ತಾರೆ. ಅನಾರೋಗ್ಯ, ವೃದ್ಧಾಪ್ಯ, ಬಡತನ, ಕೌಟುಂಬಿಕ ಸಮಸ್ಯೆ ಅಥವಾ ಪ್ರಪಂಚದಲ್ಲಿ ನಡೆಯುತ್ತಿರುವ ಇನ್ನಿತರ ದಾರುಣ ಘಟನೆಗಳು ನಾವು ಸಾಂತ್ವನಕ್ಕೆ ಹಾತೊರೆಯುವಂತೆ ಮಾಡುತ್ತವೆ.
7. (ಎ) ಕಷ್ಟದ ಸಮಯಗಳಲ್ಲಿ ನಮಗೆ ಏನು ಬೇಕಾಗುತ್ತದೆ? (ಬಿ) ನಮ್ಮ ಹೃದಯ “ಜಜ್ಜಿ” ಹೋಗಿದ್ದರೂ ಯೆಹೋವನು ಏನು ಮಾಡಬಲ್ಲನು?
7 ಕಷ್ಟದ ಸಮಯಗಳಲ್ಲಿ ನಾವು ಅನೇಕ ರೀತಿಯಲ್ಲಿ ದುಃಖ ಅನುಭವಿಸುತ್ತೇವೆ. ಆಗ ನಾವು ಸಾಂತ್ವನಕ್ಕಾಗಿ ಆಶಿಸುತ್ತೇವೆ. ಏಕೆಂದರೆ, ನಮ್ಮ ಹೃದಮನಗಳು ನೊಂದುಹೋಗಬಹುದು, ಮಾನಸಿಕವಾಗಿ ಜರ್ಜರಿತರಾಗಬಹುದು, ಭಾವನೆಗಳಿಗೆ ಪೆಟ್ಟಾಗಬಹುದು, ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಳಲಿಬೆಂಡಾಗಬಹುದು. ಉದಾಹರಣೆಗೆ ಹೃದಮನದ ಕುರಿತು ನೋಡೋಣ. ಕೆಲವೊಮ್ಮೆ ನಮಗೆ ಮನಸ್ಸು ಮುರಿದುಹೋಗಿ “ಜಜ್ಜಿಹೋದ” ಹಾಗೆ ಅನಿಸಬಹುದು. ಹಾಗಾಗಸಾಧ್ಯವೆಂದು ದೇವರ ವಾಕ್ಯ ಸಹ ಒಪ್ಪಿಕೊಳ್ಳುತ್ತದೆ. (ಕೀರ್ತ. 51:17) ಆದರೆ ಅಂಥ ಸಮಯಗಳಲ್ಲೂ ಯೆಹೋವನು ಸಹಾಯ ಮಾಡುವನು, ಆತನು “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.” (ಕೀರ್ತ. 147:3) ಸಂಕಷ್ಟಗಳಡಿಯಲ್ಲಿ ನಾವು ನಲುಗಿಹೋದರೂ ನಂಬಿಕೆಯಿಂದ ದೇವರ ಬಳಿ ಪ್ರಾರ್ಥಿಸಿ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವಲ್ಲಿ ಆತನು ನಮ್ಮ ಜಜ್ಜಿದ ಹೃದಯಕ್ಕೆ ಉಪಶಮನ ಕೊಡುತ್ತಾನೆ.—1 ಯೋಹಾನ 3:19-22; 5:14, 15 ಓದಿ.
8. ಮಾನಸಿಕವಾಗಿ ಜರ್ಜರಿತರಾಗಿರುವಾಗ ಯೆಹೋವನು ಹೇಗೆ ಸಹಾಯ ನೀಡುವನು?
8 ಬದುಕಿನಲ್ಲಿ ನಂಬಿಕೆಯನ್ನು ಪರೀಕ್ಷಿಸುವ ವಿಭಿನ್ನ ಕಷ್ಟಗಳು ಎದುರಾಗುವಾಗ ಕೆಲವೊಮ್ಮೆ ನಾವು ಮಾನಸಿಕವಾಗಿ ಜರ್ಜರಿತರಾಗುತ್ತೇವೆ. ನಮ್ಮ ಮನಸ್ಸು ಸಾಂತ್ವನಕ್ಕಾಗಿ ಮೊರೆಯಿಡುತ್ತದೆ. ಅಂಥ ಕಷ್ಟಪರೀಕ್ಷೆಗಳನ್ನು ನಾವು ಸ್ವಂತ ಶಕ್ತಿ ಸಾಮರ್ಥ್ಯದಿಂದ ಎದುರಿಸಲಾರೆವು ನಿಜ. ಆದರೆ ಕೀರ್ತನೆಗಾರನ ಹಾಡಿನಲ್ಲಿರುವ ಆದರಣೆಯನ್ನು ಗಮನಿಸಿ: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತ. 94:19) ಅದೇರೀತಿ ಪೌಲ ಬರೆದಿರುವುದನ್ನು ಸಹ ಗಮನಿಸಿ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ಆದ್ದರಿಂದ, ಮಾನಸಿಕವಾಗಿ ಕುಗ್ಗಿಹೋಗಿರುವಾಗ ಶಾಸ್ತ್ರವಚನಗಳನ್ನು ಓದಿ ಧ್ಯಾನಿಸಿ. ಅದು ನಿಮಗೆ ಮನಶ್ಶಾಂತಿ ತರುವುದು.—2 ತಿಮೊ. 3:15-17.
9. ನಕಾರಾತ್ಮಕ ಭಾವನೆಗಳನ್ನು ನಾವು ಹೇಗೆ ನಿಭಾಯಿಸಬಹುದು?
9 ಕೆಲವೊಮ್ಮೆ ಜೀವನದಲ್ಲಿ ಎಷ್ಟೊಂದು ನಿರಾಶೆ ತುಂಬಿರುತ್ತದೆಂದರೆ, ನಕಾರಾತ್ಮಕ ಭಾವನೆಗಳು ನಮ್ಮನ್ನು ಪೀಡಿಸಬಹುದು. ಯೆಹೋವನು ಅಪೇಕ್ಷಿಸುವ ವಿಷಯಗಳನ್ನು ನನ್ನಿಂದ ಮಾಡಸಾಧ್ಯವಿಲ್ಲ ಅಥವಾ ಸಭೆಯಲ್ಲಿ ದೊರೆತ ಒಂದು ಜವಾಬ್ದಾರಿಯನ್ನು ನಿರ್ವಹಿಸಲಾರೆ ಎಂಬ ಭಾವನೆ ಬಲವಾಗಬಹುದು. ಈ ಸನ್ನಿವೇಶದಲ್ಲೂ ಯೆಹೋವನು ನಮ್ಮನ್ನು ಸಂತೈಸಿ ನೆರವು ನೀಡಬಲ್ಲನು. ಯೆಹೋಶುವನ ಉದಾಹರಣೆ ತೆಗೆದುಕೊಳ್ಳಿ. ಇಸ್ರಾಯೇಲ್ಯರ ನಾಯಕನಾಗುವಂತೆ ಯೆಹೋವನು ಅವನಿಗೆ ತಿಳಿಸಿದನು. ಬಲಿಷ್ಠ ಶತ್ರು ಜನಾಂಗಗಳ ವಿರುದ್ಧ ಅವನು ಯುದ್ಧ ಮಾಡಬೇಕಿತ್ತು. ಆಗ ಮೋಶೆ ಜನರಿಗೆ ಹೀಗಂದನು: “ನೀವು ಶೂರರಾಗಿ ಧೈರ್ಯದಿಂದಿರ್ರಿ; ಅವರಿಗೆ ಅಂಜಬೇಡಿರಿ, ಕಳವಳಪಡಬೇಡಿರಿ. ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ; ಆತನು ನಿಮ್ಮನ್ನು ಕೈಬಿಡುವದಿಲ್ಲ, ಅಪಜಯಕ್ಕೆ ಗುರಿಪಡಿಸುವದೇ ಇಲ್ಲ.” (ಧರ್ಮೋ. 31:6) ಯೆಹೋವನು ಯೆಹೋಶುವನ ಸಂಗಡವಿದ್ದು ವಿರೋಧಿಗಳನ್ನು ಮಣ್ಣುಮುಕ್ಕಿಸಿ ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ಕರೆತರುವಂತೆ ಅವನನ್ನು ಬಲಪಡಿಸಿದನು. ಈ ಮುಂಚೆ ಕೆಂಪು ಸಮುದ್ರದ ಬಳಿ ಮೋಶೆ ಸಹ ಯೆಹೋವನ ಬೆಂಬಲವನ್ನು ಸಾಕ್ಷಾತ್ ಕಂಡಿದ್ದನು.—ವಿಮೋ. 14:13, 14, 29-31.
10. ಸಮಸ್ಯೆಗಳ ಒತ್ತಡದಿಂದ ಆರೋಗ್ಯ ಕೆಟ್ಟಾಗ ಯಾವುದು ನಮಗೆ ಸಹಾಯ ಮಾಡಬಲ್ಲದು?
10 ಸಮಸ್ಯೆಗಳ ಒತ್ತಡ ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಕೆಡಿಸಬಹುದು. ಸಮಯಕ್ಕೆ ಸರಿಯಾಗಿ ಊಟ, ಸಾಕಷ್ಟು ನಿದ್ರೆ, ವಿಶ್ರಾಂತಿ, ವ್ಯಾಯಾಮ, ನೈರ್ಮಲ್ಯ ಇವೆಲ್ಲಾ ತಕ್ಕಮಟ್ಟಿಗೆ ನಮಗೆ ನೆರವಾಗಬಹುದು. ಮಾತ್ರವಲ್ಲ, ಬೈಬಲ್ ತಿಳಿಸುವ ಸುಂದರ ಭವಿಷ್ಯದ ಬಗ್ಗೆ ಯೋಚಿಸುವುದು ಆರೋಗ್ಯಕ್ಕೆ ಚೇತೋಹಾರಿ. ಹಾಗಾಗಿ, ಚಿಂತೆ ದುಗುಡಗಳಿಂದ ಬಳಲುವಾಗ ಪೌಲನ ಅನುಭವವನ್ನು ಮನಸ್ಸಿನಲ್ಲಿಡುವುದು ಸಹಾಯಕಾರಿ. ಅವನ ಸ್ಫೂರ್ತಿದಾಯಕ ಮಾತುಗಳನ್ನೂ ನೆನಪಿನಲ್ಲಿಡಿ: “ನಾವು ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ, ಆದರೆ ಅಲುಗಾಡಲು ಸಾಧ್ಯವಿಲ್ಲದಷ್ಟು ನಿರ್ಬಂಧಿಸಲ್ಪಟ್ಟಿಲ್ಲ; ನಾವು ದಿಕ್ಕುಕಾಣದವರಾಗಿದ್ದೇವೆ, ಆದರೆ ಸಂಪೂರ್ಣವಾಗಿ ದಾರಿಕಾಣದವರಲ್ಲ; ನಾವು ಹಿಂಸಿಸಲ್ಪಟ್ಟಿದ್ದೇವೆ, ಆದರೆ ಕೈಬಿಡಲ್ಪಟ್ಟವರಲ್ಲ; ನಾವು ಕೆಡವಲ್ಪಟ್ಟಿದ್ದೇವೆ, ಆದರೆ ನಾಶಮಾಡಲ್ಪಟ್ಟವರಲ್ಲ.”—2 ಕೊರಿಂ. 4:8, 9.
11. ಆಧ್ಯಾತ್ಮಿಕವಾಗಿ ಅಸ್ವಸ್ಥರಾದರೆ ನಾವೇನು ಮಾಡಬೇಕು?
11 ಕಷ್ಟಪರೀಕ್ಷೆಗಳು ಆಧ್ಯಾತ್ಮಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಲ್ಲವು. ಇಂಥ ಸಂದರ್ಭಗಳಲ್ಲಿ ಯೆಹೋವನು ನಮಗೆ ಆಪತ್ಬಾಂಧವನಾಗಿರುತ್ತಾನೆ. ಆತನ ವಾಕ್ಯ ಆ ಖಾತರಿ ಕೊಡುತ್ತದೆ: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.” (ಕೀರ್ತ. 145:14) ಆಧ್ಯಾತ್ಮಿಕವಾಗಿ ಅಸ್ವಸ್ಥರಾಗುತ್ತಿದ್ದೇವೆ ಎಂದು ನಮಗನಿಸಿದರೆ ನಾವು ಹಿರಿಯರ ನೆರವನ್ನು ಕೋರಬೇಕು. (ಯಾಕೋ. 5:14, 15) ನಿತ್ಯಜೀವದ ನಿರೀಕ್ಷೆಯನ್ನು ಮನಸ್ಸಿನಲ್ಲಿ ಸದಾ ಹಚ್ಚಹಸುರಾಗಿ ಇಟ್ಟುಕೊಳ್ಳುವುದು ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವ ಸಮಯದಲ್ಲಿ ಬಲವೊದಗಿಸುತ್ತದೆ.—ಯೋಹಾ. 17:3.
ದೇವರಿಂದ ಸಾಂತ್ವನ ಪಡೆದವರು
12. ಯೆಹೋವನು ಅಬ್ರಹಾಮನಿಗೆ ಸಾಂತ್ವನ ನೀಡಿದ ರೀತಿಯನ್ನು ವಿವರಿಸಿ.
12 ಕೀರ್ತನೆಗಾರನೊಬ್ಬನು ಯೆಹೋವನ ಕುರಿತು ಹೇಳಿದ ಮಾತು: “ನಿನ್ನ ವಾಗ್ದಾನವನ್ನು ನಿನ್ನ ಸೇವಕನಿಗೋಸ್ಕರ ನೆನಪುಮಾಡಿಕೋ; ನನ್ನಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದೀಯಲ್ಲಾ! ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ; ಆಪತ್ಕಾಲದಲ್ಲಿ ಇದೇ ನನಗೆ ಆದರಣೆ.” (ಕೀರ್ತ. 119:49, 50) ಇಂದು ನಮಗೆ ಯೆಹೋವನ ನುಡಿ ಬೈಬಲ್ ರೂಪದಲ್ಲಿ ಇದೆ. ಅದರಲ್ಲಿ ದೇವರಿಂದ ಸಾಂತ್ವನ ಪಡೆದವರ ಧಾರಾಳ ಉದಾಹರಣೆಗಳಿವೆ. ಅಬ್ರಹಾಮನ ಉದಾಹರಣೆ ಗಮನಿಸಿ. ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವನೆಂದು ದೇವರು ತಿಳಿಸಿದಾಗ ಅವನು ಚಿಂತೆಗೀಡಾದನು. ವ್ಯಾಕುಲದಿಂದ “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ?” ಎಂದು ದೇವರನ್ನು ಕೇಳಿದನು. ಕೇವಲ 50 ಮಂದಿ ನೀತಿವಂತರಿದ್ದರೂ ಸೊದೋಮನ್ನು ನಾಶ ಮಾಡುವುದಿಲ್ಲವೆಂದು ವಚನ ನೀಡಿ ದೇವರು ಅವನನ್ನು ಸಂತೈಸಿದನು. ಆದರೆ ಅಬ್ರಹಾಮನ ಚಿಂತೆ ಅಲ್ಲಿಗೆ ಮುಗಿಯಲಿಲ್ಲ. ನೀತಿವಂತರ ಸಂಖ್ಯೆಯನ್ನು 45, 40, 30, 20, 10 ಎಂದು ಇಳಿಸುತ್ತಾ ಹೋದನು. ಈ ರೀತಿ ಐದು ಬಾರಿ ಪ್ರಶ್ನಿಸಿದಾಗಲೂ ಯೆಹೋವ ದೇವರು ತಾಳ್ಮೆಗೆಡಲಿಲ್ಲ. ಅಷ್ಟು ಮಂದಿ ನೀತಿವಂತರು ಇರುವುದಾದರೆ ಸೊದೋಮನ್ನು ನಾಶಮಾಡುವುದಿಲ್ಲ ಎಂದು ಪ್ರೀತಿಯಿಂದ ಆಶ್ವಾಸನೆ ನೀಡಿದನು. ಕೊನೆಗೆ ಹತ್ತೇ ಹತ್ತು ಮಂದಿ ನೀತಿವಂತರು ಇಲ್ಲದಿದ್ದರೂ ಯೆಹೋವನು ಲೋಟನನ್ನೂ ಅವನ ಪುತ್ರಿಯರನ್ನೂ ಉಳಿಸಿದನು.—ಆದಿ. 18:22-32; 19:15, 16, 26.
13. ಯೆಹೋವನ ಕೃಪಾಹಸ್ತದಲ್ಲಿ ಭರವಸೆ ಇದೆಯೆಂದು ಹನ್ನಳು ಹೇಗೆ ತೋರಿಸಿದಳು?
13 ಇನ್ನೊಂದು ಉದಾಹರಣೆ ಎಲ್ಕಾನನ ಪತ್ನಿ ಹನ್ನ. ಬಂಜೆಯಾಗಿದ್ದ ಕಾರಣ ಅವಳಲ್ಲಿ ದುಃಖ ಮಡುಗಟ್ಟಿತ್ತು. ಮಕ್ಕಳನ್ನು ಪಡೆಯುವ ತೀವ್ರಾಪೇಕ್ಷೆಯಿದ್ದ ಆಕೆ ಯೆಹೋವನಿಗೆ ಮೊರೆಯಿಟ್ಟಳು. ಮಹಾ ಯಾಜಕ ಏಲಿ, “ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಎಂದು ಹರಸಿದನು. ಆ ಮಾತು ಹನ್ನಳಲ್ಲಿ ಎಷ್ಟು ಸಾಂತ್ವನ ತುಂಬಿತೆಂದರೆ “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.” (1 ಸಮು. 1:8, 17, 18) ತನ್ನ ಕೊರಗನ್ನು ಯೆಹೋವನು ನೀಗಿಸುವನೆಂಬ ಅಚಲ ನಂಬಿಕೆ ಆಕೆಗಿತ್ತು. ಆತನ ಕೃಪಾಹಸ್ತದಲ್ಲಿ ಆಕೆ ಭರವಸೆಯಿಟ್ಟಳು. ಮುಂದೆ ಏನಾಗುವುದೆಂಬ ಸುಳಿವು ಇರದಿದ್ದರೂ ಆಕೆಯ ಮನಸ್ಸು ಪ್ರಶಾಂತವಾಯಿತು. ಸಕಾಲದಲ್ಲಿ ಯೆಹೋವನು ಆಕೆಯ ಪ್ರಾರ್ಥನೆಗೆ ಸದುತ್ತರ ದಯಪಾಲಿಸಿದನು. ಆಕೆ ಗಂಡು ಮಗುವಿಗೆ ಜನ್ಮ ನೀಡಿ ಸಮುವೇಲ ಎಂದು ಹೆಸರಿಟ್ಟಳು.—1 ಸಮು. 1:20.
14. ದಾವೀದನ ಮನ ಸಾಂತ್ವನಕ್ಕಾಗಿ ತುಡಿಯಲು ಕಾರಣವೇನು? ಅವನು ಯಾರಲ್ಲಿ ಮೊರೆಯಿಟ್ಟನು?
14 ದೇವರಿಂದ ಸಾಂತ್ವನ ಪಡೆದ ಇನ್ನೊಬ್ಬ ವ್ಯಕ್ತಿ ಪ್ರಾಚೀನ ಇಸ್ರಾಯೇಲಿನ ರಾಜ ದಾವೀದ. “ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವ” ದೇವರಾದ ಯೆಹೋವನು ದಾವೀದನನ್ನು ಇಸ್ರಾಯೇಲಿನ ರಾಜನಾಗಿ ಅಭಿಷೇಕ ಮಾಡಿದನು. ಏಕೆಂದರೆ, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವನಿಗೆ ಸತ್ಯಾರಾಧನೆಗೆ ತನ್ನನ್ನು ಮುಡುಪಾಗಿಡುವ ಮನಸ್ಸಿದೆ ಎಂದು ದೇವರಿಗೆ ಗೊತ್ತಿತ್ತು. (1 ಸಮು. 16:7; 2 ಸಮು. 5:10) ದಾವೀದ ತದನಂತರ ಬತ್ಷೆಬೆಯೊಂದಿಗೆ ವ್ಯಭಿಚಾರ ಮಾಡಿ ಆ ಪಾಪವನ್ನು ಮುಚ್ಚಿಹಾಕಲು ಆಕೆಯ ಗಂಡನನ್ನು ಕೊಲೆ ಮಾಡಿಸಿದನು. ತಾನು ಘೋರ ಪಾಪ ಮಾಡಿದ್ದೇನೆಂದು ಅರಿವಾದಾಗ ಅವನು ಯೆಹೋವನ ಮೊರೆಹೋದನು: “ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.” (ಕೀರ್ತ. 51:1-3) ಯಥಾರ್ಥವಾಗಿ ಪಶ್ಚಾತ್ತಾಪಪಟ್ಟ ದಾವೀದನನ್ನು ಯೆಹೋವನು ಕ್ಷಮಿಸಿದನು. ಆದರೂ ಪಾಪದ ಫಲವನ್ನು ಅವನು ಉಣ್ಣಬೇಕಾಯಿತು. (2 ಸಮು. 12:9-12) ವಿನಯಶೀಲನಾಗಿದ್ದ ಅವನಿಗೆ ಯೆಹೋವನ ಕರುಣೆ ಸಾಂತ್ವನ ಕೊಟ್ಟಿತು.
15. ಯೇಸುವಿನ ಮರಣಕ್ಕೆ ಮುಂಚೆ ಯೆಹೋವನು ಅವನಿಗೆ ಹೇಗೆ ಸಹಾಯ ಮಾಡಿದನು?
15 ಯೇಸು ಭೂಮಿಯಲ್ಲಿದ್ದಾಗ ಅನೇಕ ಸಂಕಷ್ಟಗಳನ್ನು ಅನುಭವಿಸಿದನು. ಅವನ ನಂಬಿಕೆಗೆ ಪರೀಕ್ಷೆಯಾಗಿದ್ದ ಅಂಥ ಸನ್ನಿವೇಶಗಳನ್ನು ಯೆಹೋವ ದೇವರು ಅನುಮತಿಸಿದನು. ಯೇಸು ಅವೆಲ್ಲವುಗಳ ಮಧ್ಯೆಯೂ ಸಮಗ್ರತೆಯನ್ನು ಕಾಪಾಡಿಕೊಂಡನು. ಪರಿಪೂರ್ಣ ವ್ಯಕ್ತಿಯಾಗಿದ್ದ ಅವನು ಯೆಹೋವ ದೇವರಲ್ಲಿ ಪೂರ್ಣ ಭರವಸೆಯಿಟ್ಟು ಆತನೇ ಪರಮಾಧಿಕಾರಿಯೆಂದು ಮಹಿಮೆಪಡಿಸಿದನು. ಮರಣದಂಡನೆಗೆ ಒಳಗಾಗುವ ಮೊದಲು ಯೇಸು “ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದು ಹೇಳಿದನು. ಆಗ ದೇವದೂತನೊಬ್ಬನು ಬಂದು ಯೇಸುವನ್ನು ಬಲಪಡಿಸಿದನು. (ಲೂಕ 22:42, 43) ಹೀಗೆ ಯೇಸುವಿಗೆ ಬೇಕಾಗಿದ್ದ ಸಾಂತ್ವನ, ಬಲ ಮತ್ತು ಸಹಾಯವನ್ನು ದೇವರು ಕೊಟ್ಟನು.
16. ಕ್ರೈಸ್ತ ನಂಬಿಕೆಗಾಗಿ ಜೀವವನ್ನು ಅಪಾಯಕ್ಕೆ ಒಡ್ಡಬೇಕಾದಾಗ ದೇವರು ನಮಗೆ ಹೇಗೆ ಸಹಾಯ ಮಾಡುವನು?
16 ನಾವು ಸಹ ಕ್ರೈಸ್ತ ನಂಬಿಕೆಯಲ್ಲಿ ಸ್ಥಿರ ನಿಲ್ಲುವಾಗ ನಮ್ಮ ಜೀವಕ್ಕೆ ಅಪಾಯ ಬರಬಹುದು. ಅಂಥ ಸಮಯದಲ್ಲಿ ಸಮಗ್ರತೆ ಕಾಪಾಡಿಕೊಳ್ಳುವಂತೆ ಯೆಹೋವ ದೇವರು ಖಂಡಿತ ನಮಗೆ ಸಹಾಯ ಮಾಡುವನು. ಮಾತ್ರವಲ್ಲ, ಪುನರುತ್ಥಾನದ ನಿರೀಕ್ಷೆಯಿಂದಲೂ ನಾವು ಸಾಂತ್ವನ ಪಡೆದುಕೊಳ್ಳುವೆವು. ‘ಮರಣವು ಕೊನೆಯ ಶತ್ರುವಾಗಿ ನಿರ್ಮೂಲವಾಗುವ’ ಆ ದಿನವನ್ನು ನೋಡಲು ನಾವು ತವಕಿಸುತ್ತೇವಲ್ಲವೇ? (1 ಕೊರಿಂ. 15:26) ಮೃತರಾಗಿರುವ ನಿಷ್ಠಾವಂತ ಸೇವಕರು ಹಾಗೂ ಇತರರು ದೇವರ ಸ್ಮರಣೆಯಲ್ಲಿದ್ದಾರೆ. ಯೆಹೋವನ ಅಪಾರ ಜ್ಞಾಪಕ ಶಕ್ತಿ ಎಂದಿಗೂ ಅಳಿಯದು. ಆತನು ಅವರನ್ನು ಪುನರುತ್ಥಾನಗೊಳಿಸುವನು. (ಯೋಹಾ. 5:28, 29; ಅ. ಕಾ. 24:15) ಪುನರುತ್ಥಾನದ ಈ ವಾಗ್ದಾನವು ಹಿಂಸೆಯನ್ನು ಅನುಭವಿಸುವಾಗ ನಮಗೆ ಸಾಂತ್ವನ ಕೊಡುತ್ತದೆ ಮತ್ತು ಮರಣಕ್ಕೆ ಹೆದರದೆ ಭವಿಷ್ಯತ್ತನ್ನು ಭರವಸೆಯಿಂದ ನೋಡುವಂತೆ ಸಹಾಯ ಮಾಡುತ್ತದೆ.
17. ಪ್ರಿಯ ವ್ಯಕ್ತಿಯೊಬ್ಬರು ಮೃತರಾದಾಗ ಯೆಹೋವನು ನಮ್ಮನ್ನು ಹೇಗೆ ಸಂತೈಸುತ್ತಾನೆ?
17 ಮೃತರಾಗಿರುವ ನಮ್ಮ ಪ್ರಿಯ ವ್ಯಕ್ತಿಗಳು ಪುನಃ ಜೀವವನ್ನು ಪಡೆದು ಯಾವುದೇ ಸಂಕಷ್ಟಗಳಿರದ ಸುಂದರ ಹೊಸ ಲೋಕದಲ್ಲಿ ನಮ್ಮೊಂದಿಗೆ ಜೀವಿಸುವರು. ಇದು ನಿಜಕ್ಕೂ ಸಾಂತ್ವನದ ವಿಷಯವೇ ಸರಿ! ಈ ದುಷ್ಟ ಲೋಕದ ನಾಶನವನ್ನು ಪಾರಾಗುವ ದೇವಸೇವಕರ ‘ಮಹಾ ಸಮೂಹದ’ ಮುಂದೆ ಒಂದು ರೋಮಾಂಚಕ ಸದವಕಾಶವಿರುವುದು. ಅವರು ಪುನರುತ್ಥಾನಗೊಂಡವರನ್ನು ಸ್ವಾಗತಿಸಿ ಅವರಿಗೆ ಬೋಧಿಸುವರು.—ಪ್ರಕ. 7:9, 10.
ದೇವರ ಹಸ್ತ ನಮಗೆ ಸದಾ ಆಧಾರ
18, 19. ಹಿಂಸೆಯ ಸಮಯದಲ್ಲಿ ದೇವರ ಸೇವಕರಿಗೆ ಹೇಗೆ ಸಾಂತ್ವನ ಸಿಕ್ಕಿತು?
18 ಮೋಶೆ ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸುತ್ತಾ ಕಾವ್ಯಾತ್ಮಕವಾಗಿ ಮನಸ್ಪರ್ಶಿ ಮಾತುಗಳನ್ನಾಡಿದಾಗ ಹೀಗಂದನು: “ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾದೇವರ ಹಸ್ತವೇ ನಿಮಗೆ ಆಧಾರ.” (ಧರ್ಮೋ. 33:27) ಸಮಯಾನಂತರ ಪ್ರವಾದಿ ಸಮುವೇಲನು ಇಸ್ರಾಯೇಲ್ಯರಿಗೆ, “ಯೆಹೋವನನ್ನು ಅಂಟಿಕೊಂಡು ಪೂರ್ಣಮನಸ್ಸಿನಿಂದ ಆತನೊಬ್ಬನನ್ನೇ ಸೇವಿಸಿರಿ. . . . ಆತನು ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ” ಎಂದು ಹೇಳಿದನು. (1 ಸಮು. 12:20-22) ಆದ್ದರಿಂದ ನಾವು ಯೆಹೋವ ದೇವರನ್ನು ಆರಾಧಿಸುತ್ತಾ ಆತನ ಕೈಹಿಡಿದು ನಡೆಯುವುದಾದರೆ ಆತನೆಂದೂ ನಮ್ಮ ಕೈಬಿಡನು. ಎಲ್ಲ ಸಂದರ್ಭಗಳಲ್ಲೂ ನಮಗೆ ಸಹಾಯಹಸ್ತ ನೀಡುವನು.
19 ಈ ಕಡೇ ದಿವಸಗಳಲ್ಲೂ ಯೆಹೋವ ದೇವರು ತನ್ನ ಜನರಿಗೆ ಸಹಾಯ ಮತ್ತು ಸಾಂತ್ವನ ನೀಡುತ್ತಾ ಬಂದಿದ್ದಾನೆ. ಸುಮಾರು ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ ಭೂಮಿಯಾದ್ಯಂತವಿರುವ ನಮ್ಮ ಸಹೋದರ ಸಹೋದರಿಯರನ್ನು ಹಿಂಸಿಸಲಾಗಿದೆ, ಸೆರೆಮನೆಗೆ ಹಾಕಲಾಗಿದೆ. ಇದಕ್ಕೆ ಕಾರಣ ಅವರು ಯೆಹೋವನನ್ನು ಆರಾಧಿಸಿದ್ದೇ. ಆದರೆ ಯೆಹೋವನು ಅವರನ್ನು ಸಂತೈಸಿದ್ದಾನೆ. ಇದಕ್ಕೆ ಅವರ ಅನುಭವಗಳೇ ನಿದರ್ಶನ. ಉದಾಹರಣೆಗೆ, ಹಿಂದಿನ ಸೋವಿಯಟ್ ಯೂನಿಯನ್ನಲ್ಲಿ ಸಹೋದರರೊಬ್ಬರು ತಮ್ಮ ಕ್ರೈಸ್ತ ನಂಬಿಕೆಗಾಗಿ 23 ವರ್ಷ ಸೆರೆಮನೆಯಲ್ಲಿದ್ದರು. ಅಲ್ಲಿಯೂ ಸಹ ಆ ಸಹೋದರನಿಗೆ ಆಧ್ಯಾತ್ಮಿಕ ಆಹಾರ ಸಿಗುವಂತೆ ಒಂದು ದಾರಿ ತೆರೆಯಲ್ಪಟ್ಟಿತು. ಇದರ ಮೂಲಕ ಅವರು ಬಲ ಮತ್ತು ಸಾಂತ್ವನ ಪಡೆದುಕೊಂಡರು. ಆ ಸಹೋದರನ ಮಾತುಗಳನ್ನು ಗಮನಿಸಿ: “ಸೆರೆಮನೆಯಲ್ಲಿದ್ದ ವರ್ಷಗಳಲ್ಲೆಲ್ಲ ಯೆಹೋವನ ಮೇಲೆ ಭರವಸೆಯಿಡಲು ಕಲಿತೆ. ಆತನು ನನಗೆ ಬಲ ಕೊಟ್ಟನು.”—1 ಪೇತ್ರ 5:6, 7 ಓದಿ.
20. ಯೆಹೋವ ದೇವರು ನಮ್ಮನ್ನೆಂದೂ ತೊರೆಯನು ಎಂದು ನಾವೇಕೆ ಭರವಸೆ ಇಡಸಾಧ್ಯವಿದೆ?
20 ಮುಂದೆ ನಾವೇನು ಎದುರಿಸುವೆವು ಎಂದು ನಮಗೆ ಗೊತ್ತಿಲ್ಲ. ಆದರೆ ಏನೇ ಬರಲಿ “ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ” ಎಂಬ ಕೀರ್ತನೆಗಾರನ ಸಾಂತ್ವನದ ನುಡಿಯನ್ನು ಯಾವತ್ತೂ ಮರೆಯದಿರೋಣ. (ಕೀರ್ತ. 94:14) ನಮಗೆ ವೈಯಕ್ತಿಕವಾಗಿ ಸಾಂತ್ವನದ ಅಗತ್ಯವಿದೆ ನಿಜ. ಅದರೊಂದಿಗೆ ಇತರರನ್ನು ಸಂತೈಸುವ ಅಪೂರ್ವ ಅವಕಾಶವೂ ನಮಗಿದೆ. ಈ ಸಂಕಟಮಯ ಲೋಕದಲ್ಲಿ ದುಃಖಿಸುತ್ತಿರುವವರನ್ನು ನಾವು ಹೇಗೆ ಸಂತೈಸಬಲ್ಲೆವು ಎಂದು ಮುಂದಿನ ಲೇಖನದಲ್ಲಿ ನೋಡೋಣ.
ಉತ್ತರಿಸಬಲ್ಲಿರಾ?
• ನಮಗೆ ದುಃಖವನ್ನು ತರಬಲ್ಲ ಕೆಲವು ವಿಷಯಗಳಾವುವು?
• ಯೆಹೋವನು ತನ್ನ ಸೇವಕರನ್ನು ಹೇಗೆ ಸಂತೈಸುತ್ತಾನೆ?
• ಕ್ರೈಸ್ತ ನಂಬಿಕೆಗಾಗಿ ಜೀವವನ್ನು ಅಪಾಯಕ್ಕೆ ಒಡ್ಡಬೇಕಾದಾಗ ಯಾವ ವಿಷಯ ನಮಗೆ ಸಾಂತ್ವನ ಕೊಡುತ್ತದೆ?
[ಪುಟ 26ರಲ್ಲಿರುವ ಚಿತ್ರ]
[ಪುಟ 25ರಲ್ಲಿರುವ ಚಿತ್ರ]
ಸಾಂತ್ವನ ಪಡೆದುಕೊಳ್ಳಿ . . .
▪ ಹೃದಮನ ನೊಂದಾಗ ಕೀರ್ತ. 147:3; 1 ಯೋಹಾ. 3:19-22; 5:14, 15
▪ ಮಾನಸಿಕ ಸ್ಥೈರ್ಯ ಕಳಕೊಂಡಾಗ ಕೀರ್ತ. 94:19; ಫಿಲಿ. 4:6, 7
▪ ಭಾವನೆಗಳಿಗೆ ಪೆಟ್ಟಾದಾಗ ವಿಮೋ. 14:13, 14; ಧರ್ಮೋ. 31:6
▪ ಆರೋಗ್ಯ ಕೆಟ್ಟಾಗ 2 ಕೊರಿಂ. 4:8, 9
▪ ಆಧ್ಯಾತ್ಮಿಕವಾಗಿ ಅಸ್ವಸ್ಥರಾದಾಗ ಕೀರ್ತ. 145:14; ಯಾಕೋ. 5:14, 15