ಯುವ ಜನರು ಪ್ರಶ್ನಿಸುವುದು . . .
ದೇವರು ನನ್ನ ಮಿತ್ರನಾಗಿ ಉಳಿಯುವನೊ?
ರಾಜ ದಾವೀದನು ದೇವರ ಮಿತ್ರತ್ವವನ್ನು ಅನುಭವಿಸಿದ ಒಬ್ಬ ಮನುಷ್ಯನಾಗಿದ್ದನು. ಆದರೆ ಒಂದು ಹಂತದಲ್ಲಿ ಅವನು ಹೇಳಿದ್ದು: “ನನ್ನ ಹೃದಯದ ಸಂಕಟಗಳು ಹೆಚ್ಚಾಗಿವೆ” (NW). ದಾವೀದನು ಇತರರಿಂದ ದುರುಪಚರಿಸಲ್ಪಟ್ಟಿದ್ದರಿಂದ ಮಾತ್ರವಲ್ಲ, ತನ್ನ ಸ್ವಂತ ತಪ್ಪುಗಳಿಂದಲೂ ಕಷ್ಟಾನುಭವಿಸುತ್ತಿದ್ದನು. ದೇವರು ಸಹ ತನ್ನನ್ನು ತಿರಸ್ಕರಿಸಿದ್ದನೆಂದು ಅವನಿಗೆ ಅನಿಸತೊಡಗಿತು, ಮತ್ತು ಅವನು ಪ್ರಾರ್ಥಿಸಿದ್ದು: “ನಾನು ಒಬ್ಬೊಂಟಿಗನೂ ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು.”—ಕೀರ್ತನೆ 25:11, 16-19.
ಬಹುಶಃ ನಿಮಗೂ ಕಷ್ಟಕ್ಕೀಡಾದ ಅನಿಸಿಕೆಯಾಗುತ್ತಿದೆ. ಮನೆಯಲ್ಲೊ ಶಾಲೆಯಲ್ಲೊ ನಿಮ್ಮನ್ನು ಪೂರ್ತಿಯಾಗಿ ಜಜ್ಜಿಬಿಡುವಂತಹ ಅಹಿತಕರವಾದ ಒಂದು ಸನ್ನಿವೇಶದಲ್ಲಿ ನೀವು ಇದ್ದೀರಿ. ಅದಲ್ಲದೆ, ನಿಮಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿರಬಹುದು ಇಲ್ಲವೆ ನಿಮಗೆ ಎದುರಾಗಿರುವ ಯಾವುದೊ ಬಲಹೀನತೆಯಿಂದಾಗಿ ನೀವು ನಿರುತ್ಸಾಹಿಯಾಗಿರುವುದನ್ನು ಕಂಡುಕೊಳ್ಳಬಹುದು. ವಿಷಯವು ಏನೇ ಆಗಿರಲಿ, ನೀವು ಒಬ್ಬಂಟಿಗರಾಗಿ ಕಷ್ಟಾನುಭವಿಸುವ ಅಗತ್ಯವಿಲ್ಲ; ದೇವರು ಧಾರಾಳವಾಗಿ ತನ್ನ ಮಿತ್ರತ್ವ ಹಾಗೂ ಬೆಂಬಲವನ್ನು ನೀಡುತ್ತಾನೆ.a ಈಗಾಗಲೇ ನೀವು ಆತನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳತೊಡಗಿರುವುದಾದರೆ, ತನ್ನ ಮಿತ್ರರು ತೊಂದರೆಯ ಸಮಯವನ್ನು ಅನುಭವಿಸುತ್ತಿರುವಾಗ ಆತನು ಅವರ ಕೈಬಿಡುವುದಿಲ್ಲ ಎಂಬುದನ್ನು ಅರಿಯುವುದರಿಂದ ನೀವು ಸಂತೈಸಲ್ಪಡುವಿರಿ. ನೀವು ತೊಂದರೆಗಳಿಂದ ಆಕ್ರಮಿಸಲ್ಪಡುವಾಗಲೂ, ದೇವರು ಬಹುದೂರ ಇದ್ದಾನೆಂದು ನಿಮಗೆ ಅನಿಸಬಹುದು. ಆತನು ನಿಮಗೆ ಯಾವ ಸಹಾಯವನ್ನೂ ನೀಡುತ್ತಿಲ್ಲವೆಂಬಂತೆಯೂ ತೋರಬಹುದು. ಆದರೆ ವಿಷಯವು ನಿಜವಾಗಿಯೂ ಹಾಗಿದೆಯೊ?
‘ಶರೀರದಲ್ಲಿ ಒಂದು ಶೂಲ’
ಪ್ರಪ್ರಥಮವಾಗಿ, 2 ಕೊರಿಂಥ 12:7-10ನ್ನು ದಯವಿಟ್ಟು ಓದಿರಿ. ಅಲ್ಲಿ ಅಪೊಸ್ತಲ ಪೌಲನು, ‘ಶರೀರದಲ್ಲಿ ಒಂದು ಶೂಲ’ವೆಂದು ಕರೆಯಲ್ಪಟ್ಟ ಯಾವುದೊ ವಿಷಯದಿಂದ ತಾನು ಹೇಗೆ ಕಷ್ಟಾನುಭವಿಸಿದೆನೆಂದು ಹೇಳುತ್ತಾನೆ. ಆ “ಶೂಲ”ವು, ಬಹುಶಃ ಅವನ ಕಣ್ಣಿನ ದೃಷ್ಟಿಯನ್ನು ಒಳಗೊಂಡ ಯಾವುದೊ ಬಗೆಯ ಶಾರೀರಿಕ ದೌರ್ಬಲ್ಯವಾಗಿದ್ದಿರಬಹುದು. ಅದು ಏನೇ ಆಗಿದ್ದಿರಲಿ, ಅದು ಅವನನ್ನು ಭಾವನಾತ್ಮಕವಾಗಿ “ಗುದ್ದು”ತ್ತಾ ಇತ್ತು. ಅದನ್ನು ತೆಗೆದುಹಾಕುವಂತೆ ದೇವರಿಗೆ ಮೂರು ಬಾರಿ ಶ್ರದ್ಧಾಪೂರ್ವಕ ಬೇಡಿಕೆಗಳನ್ನು ಮಾಡಿದರೂ, ಆ “ಶೂಲ”ವು ಉಳಿಯಿತು.
ಯೆಹೋವನು ಪೌಲನ ಪ್ರಾರ್ಥನೆಗಳನ್ನು ಅಲಕ್ಷಿಸುತ್ತಿದ್ದನೊ? ಖಂಡಿತವಾಗಿಯೂ ಇಲ್ಲ! ದೇವರು ಅವನಿಗೆ ಹೇಳಿದ್ದು: “ನನ್ನ ಅಪಾತ್ರ ದಯೆಯೇ ನಿನಗೆ ಸಾಕು; ನನ್ನ ಶಕ್ತಿಯು ಬಲಹೀನತೆಯಲ್ಲಿ ಸಿದ್ಧಗೊಳಿಸಲ್ಪಡುತ್ತದೆ” (NW). ಆ “ಶೂಲ”ವನ್ನು ಕಿತ್ತೊಗೆಯಲು ಯೆಹೋವನು ಆರಿಸಿಕೊಳ್ಳಲಿಲ್ಲವಾದರೂ, ಆತನು ಪೌಲನ ಕೈಬಿಡಲಿಲ್ಲ. ದೇವರ ಅಪಾತ್ರ ದಯೆಯ ಮುಖಾಂತರ, ಪೌಲನು ಆತನೊಂದಿಗೆ ಒಂದು ಆಪ್ತ ಸ್ನೇಹವನ್ನು ಅನುಭವಿಸಿದನು. ತನ್ನ ದೌರ್ಬಲ್ಯವನ್ನು ನಿಭಾಯಿಸಲಿಕ್ಕಾಗಿ ಪೌಲನಿಗೆ ಸಹಾಯ ಮಾಡಲು ಅದು ‘ಸಾಕಾ’ಗಿತ್ತು. ದೌರ್ಬಲ್ಯವನ್ನು ನಿಭಾಯಿಸಲು ಪೌಲನು ಹೆಣಗಾಡಿದಂತೆ, ಅವನು ದೇವರ ಪೋಷಕ ಶಕ್ತಿಯನ್ನು ಒಂದು ನವೀನ ಹಾಗೂ ವೈಯಕ್ತಿಕ ವಿಧದಲ್ಲಿ ಅನುಭವಿಸಲಿದ್ದನು.
ಕಷ್ಟಗಳನ್ನು ನಿಭಾಯಿಸುವುದರಲ್ಲಿ ನೆರವು
ಪೌಲನಂತೆ, ನಿರಾಶಾವಾದ ಮತ್ತು ನಿರುತ್ಸಾಹವನ್ನು ಉಂಟುಮಾಡುತ್ತಾ, ನಿಮ್ಮನ್ನು ಚುಚ್ಚುವ ಯಾವುದೊ “ಶೂಲ” ಇಲ್ಲವೆ ಸಮಸ್ಯೆ ನಿಮಗಿರಬಹುದು. ಪೌಲನ ವಿಷಯದಲ್ಲಾದಂತೆ, ಆ ತೊಂದರೆಯು ಪಟ್ಟುಹಿಡಿದಿರುವಂತೆ ದೇವರು ಅನುಮತಿಸಬಹುದು. ಅದು, ಆತನು ಇನ್ನುಮುಂದೆ ನಿಮ್ಮ ಮಿತ್ರನಲ್ಲವೆಂಬುದನ್ನು ಅರ್ಥೈಸದು. ದೇವರು ಅಪೊಸ್ತಲ ಪೌಲನಿಗೆ ಹೇಳಿದ್ದು: “ನನ್ನ ಶಕ್ತಿಯು ಬಲಹೀನತೆಯಲ್ಲಿ ಸಿದ್ಧಗೊಳಿಸಲ್ಪಡುತ್ತದೆ.” ನೀವು ನಿಮ್ಮ ಸ್ವಂತ ಶಕ್ತಿಯ ಮೇಲಲ್ಲ, ದೇವರ ಶಕ್ತಿಯ ಮೇಲೆ ಆತುಕೊಳ್ಳುವುದಾದರೆ, ನೀವು ತಾಳಿಕೊಳ್ಳಸಾಧ್ಯವಿದೆ. ದೇವರ ಆತ್ಮದ ಸಹಾಯದಿಂದ, ಸಂಭವನೀಯ ಎಂದು ನೀವು ಎಂದೂ ನೆನಸದ ವಿಷಯಗಳನ್ನು ನೀವು ಸಾಧಿಸಶಕ್ತರಾಗಿದ್ದೀರೆಂದು ಸಹ ಕಂಡುಕೊಳ್ಳಬಹುದು. ಪೌಲನು ಹೇಳಿದ್ದು: “ನನಗೆ ನಿರ್ಬಲಾವಸ್ಥೆ . . . ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.”
ರಾಬನ್b ಎಂಬ ಹೆಸರಿನ ಒಬ್ಬ ಯುವ ಸ್ತ್ರೀಯು ಇದನ್ನು ನಿಜವೆಂದು ಕಂಡುಕೊಂಡಳು. 14ರ ಪ್ರಾಯದಲ್ಲಿ ಅವಳು ಗ್ಲಾಕೋಮ ರೋಗದ ಕಾರಣ ತನ್ನ ದೃಷ್ಟಿಯನ್ನು ಕಳೆದುಕೊಂಡಳು. ಅದೇ ವರ್ಷ ಅವಳ ತಾಯಿ ಇದ್ದಕ್ಕಿದ್ದಹಾಗೆ ತೀರಿಕೊಂಡರು. ಈ ವೇದನಾಮಯ “ಶೂಲ”ಗಳೊಂದಿಗೆ ವ್ಯವಹರಿಸಲು ತೊಡಗುವುದರ ಕುರಿತು, “ಈಗ ನನಗೆ ಯೆಹೋವನು ಮಾತ್ರ ಇದ್ದನು,” ಎಂದು ರಾಬನ್ ಹೇಳಿದಳು. “ನನ್ನ ಸನ್ನಿವೇಶದೊಂದಿಗೆ ಯಶಸ್ವಿಕರವಾಗಿ ವ್ಯವಹರಿಸಬೇಕಾದಲ್ಲಿ, ನಾನು ಆತನಿಗೆ ನಿಕಟವಾಗಿ ಅಂಟಿಕೊಳ್ಳಲೇಬೇಕಿತ್ತೆಂದು ನನಗೆ ಗೊತ್ತಿತ್ತು.” ರಾಬನ್ ಕಟ್ಟಕಡೆಗೆ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಸಲ್ಲಿಸುತ್ತಾ, ದೇವರಿಗೆ ನಿಕಟವಾಗಿ ಅಂಟಿಕೊಂಡಳು. ಅವಳು ಹೇಳುವುದು: “ಸಕಲ ವಿಷಯಗಳಲ್ಲಿಯೂ ನನಗೆ ಸಹಾಯ ಮಾಡುವಂತೆ ನಾನು ಯೆಹೋವನಲ್ಲಿ ಕೇಳಿಕೊಂಡೆ. ಆತನು ನಿಜವಾಗಿಯೂ ಸಹಾಯ ಮಾಡಿದನು.”
ಪರೀಕ್ಷೆಗಳನ್ನು ಅನುಭವಿಸುವುದು ವಾಸ್ತವವಾಗಿ ದೇವರಿಗೆ ಹೆಚ್ಚು ನಿಕಟರಾಗುವಂತೆ ತಮಗೆ ಸಹಾಯ ಮಾಡುತ್ತದೆಂದು ಅನೇಕ ಯುವ ಜನರು ಕಂಡುಕೊಂಡಿದ್ದಾರೆ. ಯುವ ಜೆಫ್ನನ್ನು ಪರಿಗಣಿಸಿರಿ. ಅವನ ತಂದೆಯು, ಏಳು ಮಕ್ಕಳ ಪರಾಮರಿಕೆಯನ್ನು ಜೆಫ್ನ ತಾಯಿಯ ಮೇಲೆ ಬಿಡುತ್ತಾ, ಕುಟುಂಬವನ್ನು ತ್ಯಜಿಸಿಹೋದನು. ಆ ಸಮಯದಲ್ಲಿ ಕೇವಲ 12 ವರ್ಷ ಪ್ರಾಯದವನಾಗಿದ್ದ ಜೆಫ್, “ನನಗೆ ಒಬ್ಬ ತಂದೆಯ ಕೊರತೆಯು ತೀವ್ರವಾಗಿತ್ತು,” ಎಂದು ಒಪ್ಪಿಕೊಳ್ಳುತ್ತಾನೆ. “ಪ್ರತಿದಿನ ನನಗಾಗುತ್ತಿದ್ದ ಶೂನ್ಯಭಾವವನ್ನು ತುಂಬಲು ನಾನು ಯಾರೋ ಒಬ್ಬರಿಗಾಗಿ ಹಾತೊರೆದೆ.” ಜೆಫ್ ಏನು ಮಾಡಿದನು? “ಆ ಅಗತ್ಯವನ್ನು ತುಂಬಲು ನನಗೆ ಸಹಾಯ ಮಾಡುವಂತೆ ನಾನು ಯೆಹೋವನಲ್ಲಿ ಪ್ರಾರ್ಥಿಸಿದೆ.” ತನ್ನ ಪ್ರಾರ್ಥನೆಗಳಿಗೆ ಅನುಗುಣವಾಗಿ ಜೆಫ್ ಕ್ರಿಯೆಗೈದನು ಮತ್ತು ಆತ್ಮಿಕ ಚಟುವಟಿಕೆಗಳಲ್ಲಿ ತಲ್ಲೀನನಾದನು. ಸಕಾಲದಲ್ಲಿ, ಅವನು ಯೆಹೋವನ ಬೆಂಬಲದ ಹಸ್ತವನ್ನು—ಆತನ ಬಲಪಡಿಸುವ ಪವಿತ್ರಾತ್ಮ ಮತ್ತು ಕ್ರೈಸ್ತ ಸಭೆಯ ಮುಖಾಂತರ ಒದಗಿಸಲ್ಪಟ್ಟದ್ದನ್ನು—ಗ್ರಹಿಸಸಾಧ್ಯವಿತ್ತು. (ಕೀರ್ತನೆ 27:10ನ್ನು ಹೋಲಿಸಿರಿ.) ಈಗ 27ರ ಪ್ರಾಯದಲ್ಲಿ ಜೆಫ್ ಪುನರಾಲೋಚಿಸುವುದು: “ಭದ್ರತೆಗಾಗಿ ನಾನು ಎದುರುನೋಡಸಾಧ್ಯವಿದ್ದ ಬೇರೆ ಯಾವ ವ್ಯಕ್ತಿಯೂ ನನಗಿರಲಿಲ್ಲ, ಆದುದರಿಂದ ನಾನು ಯೆಹೋವನಿಗೆ ಬಹಳ ನಿಕಟನಾದೆ.” ಆ ನಿಕಟ ಸಂಬಂಧವನ್ನು ಅವನು, “ಈ ಪರೀಕ್ಷೆಯಿಂದ ಫಲಿಸಿದ ಅಮೂಲ್ಯ ಆಶೀರ್ವಾದ” ಎಂದು ಕರೆಯುತ್ತಾನೆ.
ದೇವರ ನೆರವನ್ನು ಪಡೆದುಕೊಳ್ಳುವ ವಿಧ
ನಿಮ್ಮ ಸ್ವರ್ಗೀಯ ಮಿತ್ರನು ತದ್ರೀತಿಯಲ್ಲಿ ನಿಮ್ಮ ಕಷ್ಟಗಳಿಂದ ಹೊರಬರುವಂತೆ ನಿಮಗೆ ಸಹಾಯ ಮಾಡುವನು. ಆದರೆ ನೀವು ಏನು ಮಾಡಬೇಕು? ಒಳ್ಳೇದು, ಯಾವುದೇ ಮಿತ್ರತ್ವವು ವೃದ್ಧಿಯಾಗಬೇಕಾದರೆ, ಅಲ್ಲಿ ಸಂವಾದವು ಇರಲೇಬೇಕು. ಪ್ರಾರ್ಥನೆ, ದೇವರೊಂದಿಗೆ ಸಂವಾದಮಾಡುವ ನಮ್ಮ ವಿಧವಾಗಿದೆ. ಅದರ ಮುಖಾಂತರ ನಮಗೆ ಆತನ ಸಹಾಯ ಬೇಕೆಂದು ನಾವು ಆತನಿಗೆ ತಿಳಿಯಪಡಿಸುತ್ತೇವೆ. ಆದರೆ ಪ್ರಾರ್ಥನೆಯು ಭಾವಶೂನ್ಯವಾದದ್ದೂ ಯಾಂತ್ರಿಕವಾದದ್ದೂ ಆಗಿರುವಲ್ಲಿ, ಅದು ಕಡಿಮೆ ಮೌಲ್ಯವುಳ್ಳದ್ದಾಗಿರುತ್ತದೆ. ಮೇಲೆ ಉದ್ಧರಿಸಲ್ಪಟ್ಟ ಯುವ ಜನರಂತೆ, ನೀವು ದೇವರ ಮುಂದೆ ‘ನಿಮ್ಮ ಹೃದಯವನ್ನು . . . ಬಿಚ್ಚ’ಬೇಕು! (ಕೀರ್ತನೆ 62:8) ನೀವು ಬಿನ್ನಹಗಳನ್ನೂ ಮಾಡಬೇಕಾಗಬಹುದು. (ಫಿಲಿಪ್ಪಿ 4:6) ಬಿನ್ನಹಗಳು ವಿಶೇಷವಾಗಿ ಬಲವತ್ತಾದ ಹಾಗೂ ಶ್ರದ್ಧಾಪೂರ್ವಕವಾದ ಪ್ರಾರ್ಥನೆಗಳಾಗಿವೆ.
ನಿಮ್ಮ ಯೋಚನೆಗಳನ್ನು ನಿಯಂತ್ರಿಸಿಕೊಳ್ಳುವ ಸಮಸ್ಯೆ ಅಥವಾ ಒಂದು ಕೆಟ್ಟ ರೂಢಿಯನ್ನು ಜಯಿಸುವ ವಿಷಯದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದೀರೆಂದು ಭಾವಿಸಿರಿ. ಯೆಹೋವನಲ್ಲಿ ಬಿನ್ನೈಸಿರಿ! ಪ್ರಲೋಭನೆಯ ಸಮಯಗಳಲ್ಲಿ ಆತನ ಸಹಾಯಕ್ಕಾಗಿ ಬೇಡಿಕೊಳ್ಳಿರಿ. ಇದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ. “ತಪ್ಪುಮಾಡುವ ಬಲವಾದ ಪ್ರಚೋದನೆ ನನಗಾಗುವಾಗ, ಪ್ರಾರ್ಥನೆ ಮಾಡುವಂತೆ ನಾನು ನನ್ನನ್ನು ಒತ್ತಾಯಪಡಿಸಿಕೊಳ್ಳುತ್ತೇನೆ,” ಎಂಬುದಾಗಿ ಗ್ಯಾರಿ ಒಪ್ಪಿಕೊಂಡನು. “ಕೆಲವೊಮ್ಮೆ ನಾನು ಯೋಚಿಸುವುದು, ‘ಯೆಹೋವನನ್ನು ಸಮೀಪಿಸಲು ನಾನು ನಿಜವಾಗಿಯೂ ಅರ್ಹನೊ?’ ಆದರೂ ಸಹಾಯಕ್ಕಾಗಿ ನಾನು ಇನ್ನೂ ಆತನಲ್ಲಿ ಬೇಡಿಕೊಳ್ಳುತ್ತೇನೆ. ಬಿಡದೆ ಮುಂದುವರಿಯುವ ಸಲುವಾಗಿ ನನಗೆ ಬೇಕಾದ ಬಲವನ್ನು ಆತನು ನನಗೆ ಕೊಡುತ್ತಾನೆ.” ಮೊದಲಿಗೆ ಅದು ಕಷ್ಟಕರವಾಗಿದ್ದರೂ, ದೇವರ ಮುಂದೆ ನಿಮ್ಮ ಹೃದಯವನ್ನು ತೋಡಿಕೊಳ್ಳುತ್ತಾ ಇರಿ.
ಆದರೆ ನಿಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುತ್ತಿಲ್ಲವೆಂಬಂತೆ ತೋರುವುದಾದರೆ ಆಗೇನು? ಉದಾಹರಣೆಗೆ, ಮುಷ್ಟಿಮೈಥುನದ ಕೆಟ್ಟ ರೂಢಿಯನ್ನು ಜಯಿಸಲು ಲೋರ ಹೆಣಗಾಡುತ್ತಿದ್ದಳು. “ನಾನು ಪ್ರಾಮಾಣಿಕವಾಗಿ ಯೆಹೋವನಲ್ಲಿ ಆ ಸಮಸ್ಯೆಯ ಕುರಿತು ಮಾತಾಡುತ್ತಿದ್ದೆ, ಆದರೆ ನಿಲ್ಲಿಸಲು ನನ್ನಿಂದ ಸಾಧ್ಯವಿಲ್ಲವೊ ಎಂಬಂತೆ ತೋರುತ್ತಿತ್ತು,” ಎಂದು ಅವಳು ವಿವರಿಸುತ್ತಾಳೆ. ನಮ್ಮ ವಿನಂತಿಗಳ ವಿಷಯವಾಗಿ ನಾವು ಎಷ್ಟು ಗಂಭೀರರಾಗಿದ್ದೇವೆಂಬುದನ್ನು ಪ್ರದರ್ಶಿಸುವಂತೆ ದೇವರು ಕೆಲವೊಮ್ಮೆ ಅನುಮತಿಸಬಹುದು. (ಕೀರ್ತನೆ 88:13, 14ನ್ನು ಹೋಲಿಸಿರಿ.) ಆದುದರಿಂದ ನಾವು ಪ್ರಾರ್ಥನೆಯಲ್ಲಿ ಪಟ್ಟುಹಿಡಿದವರಾಗಿರಬೇಕು! (ಮತ್ತಾಯ 7:7; ರೋಮಾಪುರ 12:12) ಲೋರ ಅದನ್ನೇ ಮಾಡಿದಳು. ಅದೇ ಸಮಯದಲ್ಲಿ ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ಆ ವಿಷಯದ ಕುರಿತ ಪಾಠದಲ್ಲಿ ಕಂಡುಬಂದ ಸಲಹೆಗಳನ್ನು ಅವಳು ಅನ್ವಯಿಸಿಕೊಳ್ಳತೊಡಗಿದಳು.c ಸಕಾಲದಲ್ಲಿ, ಅವಳು ಫಲಿತಾಂಶಗಳನ್ನು ನೋಡತೊಡಗಿದಳು. ಅವಳು ಜ್ಞಾಪಿಸಿಕೊಳ್ಳುವುದು: “ನಾನು ಪ್ರಲೋಭನೆಯನ್ನು ಯಶಸ್ವಿಯಾಗಿ ಪ್ರತಿರೋಧಿಸಿದ ಪ್ರತಿ ಸಲ, ಯೆಹೋವನಿಗೆ ಉಪಕಾರ ಸಲ್ಲಿಸುತ್ತಿದ್ದೆ. ಏಕೆಂದರೆ ಆತನು ನನ್ನೊಂದಿಗೆ ಇದ್ದನೆಂದು ನನಗೆ ಗೊತ್ತಿತ್ತು.” ನಿಜ, ನಿಮ್ಮ ಸಮಸ್ಯೆಯ ಮೇಲೆ ನೀವು ಪ್ರಭುತ್ವವನ್ನು ಪಡೆದುಕೊಳ್ಳಲು ಹೆಣಗಾಡುವಾಗ, ನೀವು ಕೆಲವು ಮರುಕಳಿಸುವಿಕೆಗಳನ್ನು ಅನುಭವಿಸಬಹುದು. ಆದರೆ ನೀವು ಹೋರಾಡಿ, ನಿಮ್ಮ ಬಲಹೀನತೆಗಳಿಗೆ ಉದ್ದೇಶಪೂರ್ವಕವಾಗಿ ಶರಣಾಗತರಾಗದೆ ಇರುವಷ್ಟು ಸಮಯ, ದೇವರು ನಿಮ್ಮ ‘ಶ್ರದ್ಧಾಪೂರ್ವಕ ಪ್ರಯತ್ನ’ಗಳಿಂದ (NW) ಪ್ರಸನ್ನಗೊಂಡು, ನಿಮ್ಮ ಮಿತ್ರನಾಗಿ ಉಳಿಯುವನು.—2 ಪೇತ್ರ 1:5.
ದೇವರೊಂದಿಗೆ ಕೆಲಸಮಾಡುವುದು
ದೇವರ ಸಹಾಯವನ್ನು ಸ್ವತಃ ಪಡೆದುಕೊಳ್ಳುವ ಮತ್ತೊಂದು ವಿಧವು, ತನ್ನ “ಜೊತೆಕೆಲಸ”ಗಾರರಲ್ಲಿ ಒಬ್ಬರಾಗಿರುವಂತಹ ಆತನ ಆಮಂತ್ರಣವನ್ನು ಸ್ವೀಕರಿಸುವುದೇ ಆಗಿದೆ. (1 ಕೊರಿಂಥ 3:9) ಇದು, ದೇವರ ಕುರಿತು ಕಲಿಯುವಂತೆ ಇತರರಿಗೆ ಸಹಾಯ ಮಾಡುವುದರಲ್ಲಿ ಒಂದು ಪಾಲನ್ನು ಪಡೆದಿರುವುದನ್ನು ಒಳಗೊಳ್ಳುತ್ತದೆ. (ಮತ್ತಾಯ 28:19, 20) ನೀವು ಕಷ್ಟಕ್ಕೀಡಾದಾಗ ಇಲ್ಲವೆ ನಿರುತ್ಸಾಹಗೊಂಡಾಗ, ಯಾವುದೇ ರೀತಿಯ ಕೆಲಸದಲ್ಲಿ ತೊಡಗುವ ವಿಚಾರವು ಆಕರ್ಷಕವಾಗಿ ತೋರದಿರಬಹುದು. ಹಾಗಿದ್ದರೂ, “ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟನ್ನು ಪಡೆದಿರುವುದು” (NW) ನಿಜವಾಗಿಯೂ ನಿಮಗೆ ಸಹಾಯ ಮಾಡಬಲ್ಲದು. (1 ಕೊರಿಂಥ 15:58) ಏನೂ ಅಲ್ಲದಿದ್ದರೂ, ನಿಮ್ಮ ಸ್ವಂತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವುದನ್ನು ನೀವು ನಿಲ್ಲಿಸುವಿರಿ. (ಜ್ಞಾನೋಕ್ತಿ 18:1ನ್ನು ಹೋಲಿಸಿರಿ.) ಈ ಹಿಂದೆ ಉಲ್ಲೇಖಿಸಲ್ಪಟ್ಟ ರಾಬನ್, ತನ್ನ ಕಷ್ಟದ ಸಮಯಗಳ ಕುರಿತಾಗಿ ಹೇಳುವುದು: “ಪಟ್ಟುಹಿಡಿದಿರುವಂತೆ ನನಗೆ ಸಹಾಯ ಮಾಡಿದ ವಿಷಯವು, ಯೆಹೋವನಿಗಾಗಿ ನಾನು ಮಾಡುತ್ತಿದ್ದ ಕೆಲಸವೇ!”
ದೇವರೊಂದಿಗೆ ಕೆಲಸಮಾಡುವುದು, ದೇವರು ನಿಮ್ಮನ್ನು ತ್ಯಜಿಸಿದ್ದಾನೆಂಬ ಯಾವುದೇ ಬಳಸಾಡುವ ಅನಿಸಿಕೆಯನ್ನು ಜಯಿಸಲೂ ನಿಮಗೆ ಸಹಾಯ ಮಾಡಬಲ್ಲದು. ಇಬ್ಬರು ವ್ಯಕ್ತಿಗಳು ಒಂದು ಸಾಮಾನ್ಯ ಗುರಿಗಾಗಿ ಒಂದು ತಂಡದೋಪಾದಿ ಒಟ್ಟಿಗೆ ಕೆಲಸಮಾಡುವಾಗ, ಮಿತ್ರರಂತೆ ಅವರು ಅನೇಕವೇಳೆ ಹೆಚ್ಚು ಆಪ್ತರಾಗುವುದಿಲ್ಲವೊ? ನೀವು ಸಾರುವ ಕಾರ್ಯದಲ್ಲಿ ತೊಡಗಿದಂತೆ, ನೀವು ಸತತವಾಗಿ ಪಂಥಾಹ್ವಾನಗಳನ್ನು ಎದುರಿಸುತ್ತೀರಿ. ಸಹಾಯಕ್ಕಾಗಿ ನೀವು ದೇವರ ಕಡೆಗೆ ತಿರುಗುವುದನ್ನು ಸ್ವತಃ ಕಂಡುಕೊಳ್ಳುವಿರಿ. ಮತ್ತು ದೇವರು ನಿಮ್ಮ ಪರಿಶ್ರಮಗಳನ್ನು ಆಶೀರ್ವದಿಸುವಾಗ, ಆತನ ಮಿತ್ರತ್ವವು ಹೆಚ್ಚು ನೈಜವಾಗುತ್ತದೆ. ಒಬ್ಬ ಜೊತೆಕೆಲಸಗಾರನಂತೆ ದೇವರು ನಿಮ್ಮಲ್ಲಿಟ್ಟಿರುವ ಭರವಸೆಯನ್ನು ನೀವು ಗ್ರಹಿಸತೊಡಗುತ್ತೀರಿ. ಇದು ನಿಮ್ಮ ಆತ್ಮವಿಶ್ವಾಸಕ್ಕೆ ನಿಜವಾದ ಬಲವರ್ಧಕವಾಗಿರಬಲ್ಲದು.
ಉದಾಹರಣೆಗೆ, ಕ್ಯಾರಲ್, ಅತ್ಯಂತ ಅಭದ್ರ ಸ್ಥಿತಿಯಲ್ಲಿದ್ದಳು. ಅವಳ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಮತ್ತು ಅವಳ ನಿಂದಾತ್ಮಕ ತಂದೆಯು ಅವಳನ್ನು ಸತತವಾಗಿ ಕಡೆಗಣಿಸಿದನು. ಆದರೆ 17ರ ಪ್ರಾಯದಲ್ಲಿ ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಳು ಮತ್ತು ಸಾರುವ ಕೆಲಸವನ್ನು ಕೈಕೊಂಡಳು. ಈಗ ಪೂರ್ಣ ಸಮಯದ ಸೌವಾರ್ತಿಕಳಾಗಿ ಹತ್ತು ವರ್ಷಗಳನ್ನು ಕಳೆದ ಬಳಿಕ ಅವಳು ಹೇಳುವುದು: “ಈ ಕೆಲಸವು ನನಗೆ ಮಹತ್ತರವಾಗಿ ಸಹಾಯ ಮಾಡಿದೆ, ಏಕೆಂದರೆ ನಾನು ನನ್ನ ಮೇಲೆ ಯೆಹೋವನ ಆಶೀರ್ವಾದವನ್ನು ನೋಡಿದ್ದೇನೆ. ನಾನು ಸ್ವತಃ ಹೇಳಿಕೊಳ್ಳುವುದು, ‘ದೇವರು ನನ್ನನ್ನು ಪ್ರೀತಿಸುವುದಾದರೆ, ನಾನು ಅಯೋಗ್ಯಳಲ್ಲ.’ ಯೆಹೋವನ ಹೆಸರನ್ನು ಪ್ರಕಟಪಡಿಸುವುದರಲ್ಲಿ ಆತನಿಂದ ಉಪಯೋಗಿಸಲ್ಪಡುವುದು, ನನ್ನನ್ನು ಹೆಚ್ಚು ಸುಭದ್ರಳನ್ನಾಗಿ ಮಾಡಿದೆ.”
“ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ”
ಜೀವಕ್ಕೆ ಅಪಾಯಕಾರಿಯಾಗಿದ್ದ ಒಂದು ಬಿಕ್ಕಟ್ಟಿನಿಂದ ಕೂದಲೆಳೆಯಷ್ಟರಲ್ಲಿ ಪಾರಾದ ಬಳಿಕ ರಾಜ ದಾವೀದನು ಬರೆದುದು: “ಎಲ್ಲಾ ಭೀತಿಯಿಂದ [ದೇವರು] ನನ್ನನ್ನು ತಪ್ಪಿಸಿದನು.” (ಕೀರ್ತನೆ 34:4, 6, ಮೇಲ್ಬರಹ; 1 ಸಮುವೇಲ 21:10-12) ಹೀಗೆ ದಾವೀದನು ಅನುಭವದಿಂದ ಹೇಳಸಾಧ್ಯವಿತ್ತು: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.”—ಕೀರ್ತನೆ 34:8.
ದಾವೀದನ ಜೀವಕ್ಕಿದ್ದಷ್ಟು ಅಪಾಯವು ನಿಮ್ಮ ಜೀವಕ್ಕೆ ಎಂದೂ ಇರದಿದ್ದರೂ, ಕೆಲವೊಮ್ಮೆ ಒಂದಿಷ್ಟು ಒತ್ತಡ ಹಾಗೂ ಪೀಡನೆಗಳನ್ನು ನೀವು ಖಂಡಿತವಾಗಿ ಅನುಭವಿಸುತ್ತೀರಿ. ‘ನಿಮ್ಮ ಹೃದಯದಲ್ಲಿ ಸಂಕಷ್ಟಗಳು ಹೆಚ್ಚು’ ಆಗುವಾಗ, ದೇವರಲ್ಲಿ ಬಿನ್ನೈಸಿರಿ. (ಕೀರ್ತನೆ 25:17) ದೇವರು ತನ್ನ ಮಿತ್ರತ್ವವನ್ನು ಹಿಂದಕ್ಕೆ ತೆಗೆದುಕೊಳ್ಳುವನೆಂದು ಭಯಪಡಬೇಡಿರಿ. ನೀವು ಸಹನಶೀಲರಾಗಿ ತಾಳಿಕೊಂಡು, ಯೆಹೋವನ ಬೆಂಬಲ ಹಾಗೂ ಆರೈಕೆಯನ್ನು ಪ್ರತ್ಯಕ್ಷವಾಗಿ ಅನುಭವಿಸುವಾಗ, ನೀವು ಸ್ವತಃ “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡು”ವಿರಿ. ಮತ್ತು ಆತನು ಸದಾಕಾಲ ನಿಮ್ಮ ಮಿತ್ರನಾಗಿ ಉಳಿಯುವನು.—ಯಾಕೋಬ 4:8.
[ಅಧ್ಯಯನ ಪ್ರಶ್ನೆಗಳು]
a ನಮ್ಮ ಆಗಸ್ಟ್ 8, 1995ರ ಸಂಚಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ನಾನು ನಿಜವಾಗಿಯೂ ದೇವರ ಒಬ್ಬ ಸ್ನೇಹಿತನಾಗಿರಬಲ್ಲೆನೋ?” ಎಂಬ ಲೇಖನವನ್ನು ನೋಡಿರಿ.
b ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದ 25 ಮತ್ತು 26ನೆಯ ಅಧ್ಯಾಯಗಳನ್ನು ನೋಡಿರಿ.
[ಪುಟ 23 ರಲ್ಲಿರುವ ಚಿತ್ರ]
ವಿಪತ್ತಿನ ಸಮಯಗಳಲ್ಲಿ ದೇವರು ತನ್ನ ಮಿತ್ರರ ಕೈಬಿಟ್ಟುಬಿಡುತ್ತಾನೊ?