ಯೆಹೋವನ ಕರುಣೆಯನ್ನು ಅನುಕರಿಸಿರಿ
“ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ ನೀವೂ ಕರುಣೆಯುಳ್ಳವರಾಗಿರಿ.”—ಲೂಕ 6:36, NW.
1. ಫರಿಸಾಯರು ತಮ್ಮನ್ನು ನಿಷ್ಕರುಣಿಗಳಾಗಿ ತೋರಿಸಿಕೊಂಡದ್ದು ಹೇಗೆ?
ಮಾನವರು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿರುವುದಾದರೂ, ಅನೇಕವೇಳೆ ಅವರು ಆತನ ಕರುಣೆಯನ್ನು ಅನುಕರಿಸಲು ಅಸಫಲರಾಗಿದ್ದಾರೆ. (ಆದಿಕಾಂಡ 1:27) ಉದಾಹರಣೆಗೆ, ಫರಿಸಾಯರನ್ನು ಪರಿಗಣಿಸಿರಿ. ಫರಿಸಾಯರ ಗುಂಪು, ಸಬ್ಬತ್ತಿನ ದಿನದಂದು ಯೇಸು ಒಬ್ಬ ಮನುಷ್ಯನ ಬತ್ತಿಹೋದ ಕೈಯನ್ನು ಕರುಣೆಯಿಂದ ವಾಸಿಮಾಡಿದಾಗ, ಅದನ್ನು ನೋಡಿ ಸಂತೋಷಪಡಲಿಲ್ಲ. ಅದಕ್ಕೆ ಬದಲಾಗಿ, ಅವನನ್ನು ‘ಉಪಾಯದಿಂದ ಕೊಲ್ಲಲು’ ಅವರು ಸಂಚುಹೂಡಿದರು. (ಮತ್ತಾಯ 12:9-14) ಇನ್ನೊಂದು ಸಂದರ್ಭದಲ್ಲಿ, ಒಬ್ಬ ಹುಟ್ಟುಕುರುಡನನ್ನು ಯೇಸು ವಾಸಿಮಾಡಿದನು. ಮತ್ತೊಮ್ಮೆ “ಆ ಫರಿಸಾಯರಲ್ಲಿ ಕೆಲವರು” ಯೇಸುವಿನ ಕರುಣೆಯನ್ನು ನೋಡಿ ಆನಂದಪಡಲಿಲ್ಲ. ಅದಕ್ಕೆ ಬದಲಾಗಿ ಅವರು ಆಪಾದಿಸಿದ್ದು: “ಈ ಮನುಷ್ಯನು ದೇವರಿಂದ ಬಂದವನಲ್ಲ; ಅವನು ಸಬ್ಬತ್ದಿವಸವನ್ನು ಲಕ್ಷ್ಯಮಾಡುವದಿಲ್ಲವಲ್ಲಾ.”—ಯೋಹಾನ 9:1-7, 16.
2, 3. ಫರಿಸಾಯರ “ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಯೇಸು ಹೇಳಿದ್ದರ ಅರ್ಥವೇನಾಗಿತ್ತು?
2 ಫರಿಸಾಯರ ನಿರ್ದಯ ಮನೋಭಾವವು, ಮಾನವೀಯತೆಯ ವಿರುದ್ಧ ಅಪರಾಧವಾಗಿತ್ತು ಹಾಗೂ ದೇವರ ವಿರುದ್ಧ ಪಾಪವಾಗಿತ್ತು. (ಯೋಹಾನ 9:39-41) ಸಕಾರಣದಿಂದಲೇ, ಈ ಪ್ರಮುಖ ಗುಂಪಿನ ಮತ್ತು ಸದ್ದುಕಾಯರಂತಹ ಇತರ ಧಾರ್ಮಿಕರ “ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆ ನೀಡಿದನು. (ಮತ್ತಾಯ 16:6) ಬೈಬಲಿನಲ್ಲಿ ಹುಳಿ ಹಿಟ್ಟು (ಕಿಣ್ವ), ಪಾಪ ಹಾಗೂ ಭ್ರಷ್ಟತೆಯನ್ನು ಸೂಚಿಸಲು ಉಪಯೋಗಿಸಲ್ಪಟ್ಟಿದೆ. ಆದುದರಿಂದ, ‘ಶಾಸ್ತ್ರಿಗಳು ಮತ್ತು ಫರಿಸಾಯರ’ ಬೋಧನೆಯು, ಶುದ್ಧಾರಾಧನೆಯನ್ನು ಭ್ರಷ್ಟಗೊಳಿಸಸಾಧ್ಯವಿದೆ ಎಂದು ಯೇಸು ಹೇಳುತ್ತಿದ್ದನು. ಹೇಗೆ? ದೇವರ ನಿಯಮಶಾಸ್ತ್ರವನ್ನು ಕೇವಲ ಸ್ವಇಷ್ಟಾನುಸಾರವಾದ ನಿಯಮಗಳು ಹಾಗೂ ಮತಸಂಸ್ಕಾರಗಳ ರೂಪದಲ್ಲಿ ಪರಿಗಣಿಸುವಂತೆ ಆ ಬೋಧನೆಯು ಜನರಿಗೆ ಕಲಿಸಿತು; ಅದೇ ಸಮಯದಲ್ಲಿ, ಕರುಣೆಯನ್ನೂ ಸೇರಿಸಿ, ದೇವರ ನಿಯಮಶಾಸ್ತ್ರದ ಅತ್ಯಂತ ಪ್ರಮುಖ ಆವಶ್ಯಕತೆಗಳನ್ನು ಅವರು ಅಲಕ್ಷಿಸಿದರು. (ಮತ್ತಾಯ 23:23) ಈ ಮತಸಂಸ್ಕಾರದ ರೀತಿಯ ಧರ್ಮವು, ದೇವರ ಆರಾಧನೆಯನ್ನು ಸಹಿಸಲು ಅಸಾಧ್ಯವಾದ ಒಂದು ಹೊರೆಯನ್ನಾಗಿ ಮಾಡಿತು.
3 ಪೋಲಿಹೋದ ಮಗನ ಕುರಿತಾದ ತನ್ನ ಸಾಮ್ಯದ ಎರಡನೆಯ ಭಾಗದಲ್ಲಿ, ಯೆಹೂದಿ ಧಾರ್ಮಿಕ ಮುಖಂಡರ ಭ್ರಷ್ಟ ಆಲೋಚನೆಯನ್ನು ಯೇಸು ಬೆಳಕಿಗೆ ತಂದನು. ಆ ಸಾಮ್ಯದಲ್ಲಿನ ತಂದೆಯು, ಯೆಹೋವನನ್ನು ಪ್ರತಿನಿಧಿಸುತ್ತಾನೆ. ಆ ತಂದೆಯು ಪಶ್ಚಾತ್ತಾಪಪಟ್ಟ ತನ್ನ ಮಗನನ್ನು ಕ್ಷಮಿಸಲು ಕಾತುರನಾಗಿದ್ದನು. ಆದರೆ ಆ ಹುಡುಗನ ಅಣ್ಣನು, ‘ಫರಿಸಾಯರನ್ನು ಹಾಗೂ ಶಾಸ್ತ್ರಿಗಳನ್ನು’ ಪ್ರತಿನಿಧಿಸುತ್ತಾನೆ. ಆ ವಿಷಯದ ಕುರಿತು ಅವನಿಗೆ ಸಂಪೂರ್ಣವಾಗಿ ಭಿನ್ನವಾದ ಅಭಿಪ್ರಾಯಗಳಿದ್ದವು.—ಲೂಕ 15:2.
ಒಬ್ಬ ಸಹೋದರನ ಸಿಟ್ಟು
4, 5. ಪೋಲಿಹೋದ ಹುಡುಗನ ಅಣ್ಣನು ಯಾವ ಅರ್ಥದಲ್ಲಿ “ಕಳೆದುಹೋಗಿದ್ದನು”?
4 “ಅವನ ಹಿರೀಮಗನು ಹೊಲದಲ್ಲಿದ್ದನು. ಅವನು ಮನೆಯ ಹತ್ತಹತ್ತರಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿ ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು—ಇದೇನು ಎಂದು ವಿಚಾರಿಸಿದನು. ಆಳು ಅವನಿಗೆ—ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತವಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ ಎಂದು ಹೇಳಿದನು. ಇದನ್ನು ಕೇಳಿ ಅವನಿಗೆ ಸಿಟ್ಟುಬಂದು ಒಳಕ್ಕೆ ಹೋಗಲೊಲ್ಲದೆ ಇದ್ದನು.”—ಲೂಕ 15:25-28.
5 ಯೇಸುವಿನ ಸಾಮ್ಯದಲ್ಲಿ ಕೇವಲ ಪೋಲಿಹೋದ ಮಗನೊಬ್ಬನಿಗೇ ಸಮಸ್ಯೆಯಿರಲಿಲ್ಲ. “ಇಲ್ಲಿ ಚಿತ್ರಿಸಲ್ಪಟ್ಟಿರುವ ಇಬ್ಬರೂ ಪುತ್ರರು ಕಳೆದುಹೋದವರಾಗಿದ್ದಾರೆ” ಎಂದು ಒಂದು ಆಧಾರಗ್ರಂಥವು ಹೇಳುತ್ತದೆ. “ಭ್ರಷ್ಟವಾದ ಅನೀತಿಯ ಕಾರಣದಿಂದ ಕಿರಿಯ ಮಗನು ಕಳೆದುಹೋಗಿದ್ದನು, ಕುರುಡಾದ ಸ್ವನೀತಿಯ ಕಾರಣದಿಂದ ಹಿರಿಯ ಮಗನು ಕಳೆದುಹೋಗಿದ್ದನು.” ಪೋಲಿಹೋದ ಹುಡುಗನ ಅಣ್ಣನು, ಆ ಸಂತೋಷದಲ್ಲಿ ಒಳಗೂಡಲು ನಿರಾಕರಿಸಿದನು ಮಾತ್ರವಲ್ಲ, ಅವನಿಗೆ “ಸಿಟ್ಟುಬಂತು” ಎಂಬುದನ್ನು ಗಮನಿಸಿರಿ. “ಸಿಟ್ಟು” ಎಂಬುದಕ್ಕಿರುವ ಗ್ರೀಕ್ ಭಾಷೆಯ ಮೂಲ ಶಬ್ದವು, ಕೋಪದ ಸ್ಫೋಟನೆಯನ್ನು ಸೂಚಿಸುವುದಿಲ್ಲ, ಬದಲಾಗಿ ಈಗಾಗಲೇ ಮನಸ್ಸಿನಲ್ಲಿರುವ ಕೋಪವನ್ನು ಸೂಚಿಸುತ್ತದೆ. ಪೋಲಿಹೋದ ಹುಡುಗನ ಅಣ್ಣನ ಮನಸ್ಸಿನಲ್ಲಿ ತೀವ್ರವಾದ ಅಸಮಾಧಾನವಿತ್ತು. ಆದುದರಿಂದ, ಮೊದಲಾಗಿ ಮನೆಯನ್ನು ಬಿಟ್ಟುಹೋಗಲೇ ಬಾರದಾಗಿದ್ದವನ ಹಿಂದಿರುಗುವಿಕೆಯನ್ನು, ಹಬ್ಬ ಮಾಡುವ ಮೂಲಕ ಆಚರಿಸುವುದು ಸರಿಯಲ್ಲವೆಂದು ಅವನು ನೆನಸಿದನು.
6. ಪೋಲಿಹೋದ ಹುಡುಗನ ಅಣ್ಣನು ಯಾರನ್ನು ಪ್ರತಿನಿಧಿಸುತ್ತಾನೆ, ಮತ್ತು ಏಕೆ?
6 ಪೋಲಿಹೋದ ಹುಡುಗನ ಅಣ್ಣನು, ಯೇಸು ಪಾಪಿಗಳ ಕಡೆಗೆ ತೋರಿಸಿದ ಕರುಣೆ ಹಾಗೂ ಗಮನವನ್ನು ಕಂಡು ಅಸಮಾಧಾನ ಪಟ್ಟುಕೊಂಡಂತಹವರನ್ನು ಚೆನ್ನಾಗಿ ಪ್ರತಿನಿಧಿಸುತ್ತಾನೆ. ಸ್ವನೀತಿವಂತರಾದ ಈ ಜನರು, ಯೇಸುವಿನ ಕರುಣೆಯಿಂದ ಪ್ರಚೋದಿತರಾಗಲಿಲ್ಲ. ಅಥವಾ ಒಬ್ಬ ಪಾಪಿಗೆ ಕ್ಷಮಾಪಣೆಯು ನೀಡಲ್ಪಟ್ಟಾಗ, ಸ್ವರ್ಗದಲ್ಲಿ ಯಾವ ರೀತಿಯ ಆನಂದವು ಉಂಟಾಗುತ್ತದೋ ಆ ಆನಂದವನ್ನು ಅವರು ತೋರಿಸಲಿಲ್ಲ. ಅದಕ್ಕೆ ಬದಲಾಗಿ, ಯೇಸುವಿನ ಕರುಣೆಯು ಅವರ ಕೋಪವನ್ನು ಇನ್ನೂ ಹೆಚ್ಚಿಸಿತು, ಹಾಗೂ ಅವರು ತಮ್ಮ ಹೃದಯಗಳಲ್ಲಿ “ಕೆಟ್ಟ ಆಲೋಚನೆಗಳನ್ನು ಮಾಡತೊಡ”ಗಿದರು. (ಮತ್ತಾಯ 9:2-4) ಒಂದು ಸಂದರ್ಭದಲ್ಲಿ ಕೆಲವು ಫರಿಸಾಯರ ಕೋಪವು ಎಷ್ಟು ಹೆಚ್ಚಾಗಿತ್ತೆಂದರೆ, ಯೇಸು ಯಾರನ್ನು ವಾಸಿಮಾಡಿದ್ದನೋ ಆ ವ್ಯಕ್ತಿಯನ್ನು ಕರೆದು, ಅವನನ್ನು ಸಭಾಮಂದಿರದಿಂದ “ಹೊರಗೆ ಹಾಕಿದರು,” ಅಂದರೆ, ಅವನನ್ನು ಬಹಿಷ್ಕರಿಸಿದರು ಎಂಬುದು ಸುವ್ಯಕ್ತ! (ಯೋಹಾನ 9:22, 34) ತಮ್ಮನ ಆಗಮನಕ್ಕಾಗಿ ಏರ್ಪಡಿಸಲ್ಪಟ್ಟ ಹಬ್ಬವನ್ನು ಆಚರಿಸಲಿಕ್ಕಾಗಿ ಮನೆಯ “ಒಳಕ್ಕೆ ಹೋಗಲೊಲ್ಲದೆ ಇದ್ದ” ಪೋಲಿಹೋದ ಹುಡುಗನ ಅಣ್ಣನಂತೆ, “ಸಂತೋಷಪಡುವವರ ಸಂಗಡ ಸಂತೋಷ”ಪಡಲು ತಮಗೆ ಅವಕಾಶವಿರುವಾಗ, ಯೆಹೂದಿ ಧಾರ್ಮಿಕ ಮುಖಂಡರು ಅವರೊಂದಿಗೆ ಆನಂದಿಸಲಿಲ್ಲ. (ರೋಮಾಪುರ 12:15) ಯೇಸು ತನ್ನ ಸಾಮ್ಯವನ್ನು ಮುಂದುವರಿಸಿದಂತೆ, ಅವರ ತಪ್ಪು ತರ್ಕವನ್ನು ಅವನು ಇನ್ನಷ್ಟು ಬಯಲುಮಾಡಿದನು.
ತಪ್ಪು ತರ್ಕ
7, 8. (ಎ) ಪೋಲಿಹೋದ ಹುಡುಗನ ಅಣ್ಣನು, ಮನಗನಾಗಿರುವುದರ ನಿಜಾರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಯಾವ ರೀತಿಯಲ್ಲಿ ಅಸಮರ್ಥನಾಗಿದ್ದನು? (ಬಿ) ಯಾವ ರೀತಿಯಲ್ಲಿ ಆ ಹಿರಿಯ ಮಗನು ತನ್ನ ತಂದೆಗಿಂತ ಭಿನ್ನವಾಗಿದ್ದನು?
7 “ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. ಆದರೆ ಅವನು ತನ್ನ ತಂದೆಗೆ—ನೋಡು, ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಒಂದಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ; ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ ಕೊಬ್ಬಿಸಿದ ಕರುವನ್ನು ಇವನಿಗೆ ಕೊಯ್ಸಿದಿ ಎಂದು ಉತ್ತರಕೊಟ್ಟನು.”—ಲೂಕ 15:28-30.
8 ಈ ಮಾತುಗಳಿಂದ ಪೋಲಿಹೋದ ಹುಡುಗನ ಅಣ್ಣನು, ಮಗನಾಗಿರುವುದರ ನಿಜಾರ್ಥವೇನು ಎಂಬುದನ್ನು ತಿಳಿದುಕೊಳ್ಳಲು ತಾನು ಅಸಮರ್ಥನಾಗಿದ್ದನು ಎಂಬುದನ್ನು ಸ್ಪಷ್ಟಪಡಿಸಿದನು. ಒಬ್ಬ ನೌಕರನು ತನ್ನ ಧಣಿಯ ಸೇವೆಯನ್ನು ಹೇಗೆ ಮಾಡುತ್ತಾನೋ ಹಾಗೆಯೇ ಅವನು ತನ್ನ ತಂದೆಯ ಸೇವೆ ಮಾಡಿದನು. ಏಕೆಂದರೆ ಅವನು ತನ್ನ ತಂದೆಗೆ ಹೇಳಿದ್ದು: “ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ.” ಈ ಹಿರಿಯ ಮಗನು ಎಂದೂ ಮನೆಯನ್ನು ಬಿಟ್ಟುಹೋಗಿರಲಿಲ್ಲ ಅಥವಾ ತನ್ನ ತಂದೆಯ ಆಜ್ಞೆಗೆ ಅವಿಧೇಯನಾಗಿರಲಿಲ್ಲ ನಿಜ. ಆದರೆ ಅವನ ವಿಧೇಯತೆಯು ಪ್ರೀತಿಯಿಂದ ಪ್ರಚೋದಿತವಾದದ್ದಾಗಿತ್ತೋ? ತನ್ನ ತಂದೆಯ ಸೇವೆ ಮಾಡುವುದರಲ್ಲಿ ಅವನು ನಿಜವಾಗಿಯೂ ಆನಂದವನ್ನು ಕಂಡುಕೊಂಡನೋ, ಅಥವಾ “ಹೊಲದಲ್ಲಿ” ಕೆಲಸಮಾಡುವ ಮೂಲಕ ನನ್ನ ಕರ್ತವ್ಯಗಳನ್ನು ನಾನು ಪೂರೈಸಿರುವುದರಿಂದ ನಾನೇ ತಂದೆಗೆ ತಕ್ಕ ಮಗನೆಂದು ನಂಬುತ್ತಾ, ಅವನು ಪ್ರಗತಿಯನ್ನು ಮಾಡದಂತಹ ಸ್ಥಿತಿಗೆ ತಲಪಿದ್ದನೋ? ಅವನು ನಿಜವಾಗಿಯೂ ಒಬ್ಬ ನಿಷ್ಠಾವಂತ ಮಗನಾಗಿರುತ್ತಿದ್ದಲ್ಲಿ, ಅವನು ತನ್ನ ತಂದೆಯಂತಹ ಮನೋಭಾವವನ್ನು ಏಕೆ ತೋರಿಸಲಿಲ್ಲ? ತನ್ನ ತಮ್ಮನಿಗೆ ಕರುಣೆಯನ್ನು ತೋರಿಸುವ ಅವಕಾಶವು ಕೊಡಲ್ಪಟ್ಟಾಗ, ಸಹಾನುಭೂತಿಯನ್ನು ತೋರಿಸಲು ಅವನ ಮನಸ್ಸು ಏಕೆ ಒಪ್ಪಲಿಲ್ಲ?—ಕೀರ್ತನೆ 50:20-22ನ್ನು ಹೋಲಿಸಿರಿ.
9. ಯೆಹೂದಿ ಧಾರ್ಮಿಕ ಮುಖಂಡರು ಹೇಗೆ ಹಿರಿಯ ಮಗನನ್ನು ಹೋಲುತ್ತಿದ್ದರು ಎಂಬುದನ್ನು ವಿವರಿಸಿರಿ.
9 ಯೆಹೂದಿ ಧಾರ್ಮಿಕ ಮುಖಂಡರು ಈ ಹಿರಿಯ ಮಗನನ್ನು ಹೋಲುತ್ತಿದ್ದರು. ತಾವು ದೇವರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ, ಆದುದರಿಂದ ತಾವು ದೇವರಿಗೆ ನಿಷ್ಠಾವಂತರಾಗಿದ್ದೇವೆ ಎಂದು ಅವರು ನಂಬಿದ್ದರು. ವಿಧೇಯತೆಯು ಅತ್ಯಾವಶ್ಯಕವಾಗಿದೆ ಎಂಬುದು ನಿಜ. (1 ಸಮುವೇಲ 15:22) ಆದರೆ ಮತಸಂಸ್ಕಾರಗಳಿಗೆ ಅವರು ನೀಡುತ್ತಿದ್ದ ಮಹತ್ವ, ದೇವರ ಆರಾಧನೆಯನ್ನು ನಿರರ್ಥಕವನ್ನಾಗಿ ಮಾಡಿತ್ತು. ಭಕ್ತಿಯ ಹೊರತೋರಿಕೆಯೇ ಹೊರತು ನಿಜ ಆತ್ಮಿಕತೆ ಅದರಲ್ಲಿರಲಿಲ್ಲ. ಕೇವಲ ಸಂಪ್ರದಾಯಗಳೇ ಅವರ ಮನಸ್ಸುಗಳನ್ನು ತುಂಬಿಕೊಂಡಿದ್ದವು. ಅವರು ಪ್ರೀತಿರಹಿತರಾಗಿದ್ದರು. ಅಷ್ಟೇಕೆ, ಅವರು ಸಾಮಾನ್ಯ ಜನರನ್ನು ತಮ್ಮ ಕಾಲಿನ ಕಸದೋಪಾದಿ ನೋಡುತ್ತಿದ್ದರು. ಅಷ್ಟು ಮಾತ್ರವಲ್ಲ, ಅವರನ್ನು ತಿರಸ್ಕಾರಭಾವದಿಂದ ‘ಶಾಪಗ್ರಸ್ತವಾದ ಹಿಂಡು’ ಎಂದು ಕರೆಯುತ್ತಿದ್ದರು. (ಯೋಹಾನ 7:49) ನಿಜವಾಗಿಯೂ, ಅಂತಹ ಮುಖಂಡರು ದೇವರನ್ನು ಪ್ರೀತಿಸದಿರುವಾಗ, ಆತನು ಹೇಗೆ ಅವರ ಕಾರ್ಯಗಳಿಂದ ಪ್ರಸನ್ನನಾಗಸಾಧ್ಯವಿತ್ತು?—ಮತ್ತಾಯ 15:7, 8.
10. (ಎ) “ನನಗೆ ಯಜ್ಞವು ಬೇಡ, ಕರುಣೆಯೇ ಬೇಕು” ಎಂಬ ಮಾತುಗಳು, ಏಕೆ ಸೂಕ್ತವಾದ ಸಲಹೆಯಾಗಿದ್ದವು? (ಬಿ) ಕರುಣೆಯ ಕೊರತೆಯು ಎಷ್ಟು ಗಂಭೀರವಾದ ವಿಷಯವಾಗಿದೆ?
10 ಯೇಸು ಫರಿಸಾಯರಿಗೆ “ನೀವು ಹೋಗಿ—ನನಗೆ ಯಜ್ಞವು ಬೇಡ, ಕರುಣೆಯೇ ಬೇಕು ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ” ಅಂದನು. (ಮತ್ತಾಯ 9:13; ಹೋಶೇಯ 6:6) ಯಾವುದು ಹೆಚ್ಚು ಪ್ರಾಮುಖ್ಯವಾದದ್ದು ಎಂಬುದು ಅವರಿಗೆ ಗೊತ್ತಿರಲಿಲ್ಲ. ಏಕೆಂದರೆ ಕರುಣೆಯಿಲ್ಲದ ಅವರ ಯಜ್ಞಗಳೆಲ್ಲವೂ ವ್ಯರ್ಥವಾಗಿದ್ದವು. ಖಂಡಿತವಾಗಿಯೂ ಇದು ಗಂಭೀರವಾದ ವಿಷಯವಾಗಿತ್ತು, ಏಕೆಂದರೆ “ಕರುಣೆಯಿಲ್ಲದವರು” ದೇವರಿಂದ “ಮರಣಕ್ಕೆ ಪಾತ್ರರಾಗಿ” ಪರಿಗಣಿಸಲ್ಪಡುತ್ತಾರೆ ಎಂದು ಬೈಬಲು ಹೇಳುತ್ತದೆ. (ರೋಮಾಪುರ 1:31, 32) ಆದುದರಿಂದ, ಒಂದು ಗುಂಪಿನೋಪಾದಿ ಈ ಧಾರ್ಮಿಕ ಮುಖಂಡರು ನಿತ್ಯ ನಾಶನವನ್ನು ಎದುರಿಸಲಿಕ್ಕಿದ್ದರು ಎಂದು ಯೇಸು ಹೇಳಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರು ಮರಣವನ್ನು ಎದುರಿಸಲಿಕ್ಕಿದ್ದ ಮುಖ್ಯ ಕಾರಣಗಳಲ್ಲಿ ಒಂದು ಯಾವುದೆಂದರೆ, ಅವರು ಇತರರಿಗೆ ಕರುಣೆಯನ್ನು ತೋರಿಸಲು ಅಸಫಲರಾದದ್ದೇ. (ಮತ್ತಾಯ 23:33) ಆದರೆ ಪ್ರಾಯಶಃ ಈ ವರ್ಗದಲ್ಲಿರುವ ಕೆಲವು ವ್ಯಕ್ತಿಗಳಿಗೆ ಸಹಾಯ ಮಾಡಸಾಧ್ಯವಿದೆ. ತನ್ನ ಸಾಮ್ಯವನ್ನು ಮುಕ್ತಾಯಗೊಳಿಸುತ್ತಾ, ಆ ಹಿರಿಯ ಮಗನಿಗೆ ತಂದೆಯು ನುಡಿದಂತಹ ಮಾತುಗಳಿಂದ ಅಂತಹ ಯೆಹೂದ್ಯರ ಆಲೋಚನೆಯನ್ನು ಯೇಸು ಸರಿಪಡಿಸಲು ಪ್ರಯತ್ನಿಸಿದನು. ಹೇಗೆ ಎಂಬುದನ್ನು ನಾವು ಈಗ ನೋಡೋಣ.
ತಂದೆಯೊಬ್ಬನ ಕರುಣೆ
11, 12. ಯೇಸುವಿನ ಸಾಮ್ಯದಲ್ಲಿನ ತಂದೆಯು ಹೇಗೆ ತನ್ನ ಹಿರಿಯ ಮಗನೊಂದಿಗೆ ತರ್ಕಿಸಲು ಪ್ರಯತ್ನಿಸುತ್ತಾನೆ, ಮತ್ತು “ನಿನ್ನ ತಮ್ಮ” ಎಂಬ ವಾಕ್ಸರಣಿಯನ್ನು ತಂದೆಯು ಉಪಯೋಗಿಸಿರುವುದರಲ್ಲಿನ ವಿಶೇಷತೆ ಏನಾಗಿರಬಹುದು?
11 “ಅದಕ್ಕೆ ತಂದೆಯು—ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿ ಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು.”—ಲೂಕ 15:31, 32.
12 ಆ ತಂದೆಯು “ನಿನ್ನ ತಮ್ಮ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಿರುವುದನ್ನು ನೀವು ಗಮನಿಸಿದಿರೊ? ತನ್ನ ತಂದೆಯೊಂದಿಗೆ ಮಾತಾಡುತ್ತಿರುವಾಗ, ಹಿರಿಯ ಮಗನು ಪೋಲಿಹೋದ ಮಗನನ್ನು ‘ನನ್ನ ತಮ್ಮ’ ಎಂದು ಕರೆಯಲಿಲ್ಲ, ಬದಲಾಗಿ “ನಿನ್ನ ಮಗನು” ಎಂದು ಕರೆದಿದ್ದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ತನ್ನ ಹಾಗೂ ತನ್ನ ತಮ್ಮನ ನಡುವಿನ ರಕ್ತಸಂಬಂಧವನ್ನು ಅವನು ಒಪ್ಪಿಕೊಂಡಂತೆ ತೋರಲಿಲ್ಲ. ಆದುದರಿಂದ, ಈಗ ತಂದೆಯು ತನ್ನ ಹಿರಿಯ ಮಗನಿಗೆ ಹೀಗೆ ಹೇಳುತ್ತಿದ್ದಾನೆ: ‘ಇವನು ಕೇವಲ ನನ್ನ ಮಗನಲ್ಲ. ಇವನು ನಿನ್ನ ತಮ್ಮನಾಗಿದ್ದಾನೆ, ನಿನ್ನ ಒಡಹುಟ್ಟಿದ ಸಹೋದರನಾಗಿದ್ದಾನೆ. ಅವನ ಹಿಂದಿರುಗುವಿಕೆಗಾಗಿ ಸಂತೋಷಿಸಲು ನಿನಗೆ ಸಕಾರಣವಿದೆ!’ ಯೇಸುವಿನ ಸಂದೇಶವು ಯೆಹೂದಿ ಮುಖಂಡರಿಗೆ ಸ್ಪಷ್ಟವಾಗಿ ಅರ್ಥವಾಗಿದ್ದಿರಬೇಕು. ಅವರು ಕಡೆಗಣಿಸಿದ್ದ ಪಾಪಿಗಳು, ವಾಸ್ತವದಲ್ಲಿ ಅವರ “ಸಹೋದರ”ರಾಗಿದ್ದರು. ನಿಜವಾಗಿಯೂ “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.” (ಪ್ರಸಂಗಿ 7:20) ಆದುದರಿಂದ, ಪಾಪಿಗಳು ಪಶ್ಚಾತ್ತಾಪಪಟ್ಟಾಗ ಅವರ ವಿಷಯದಲ್ಲಿ ಆನಂದಿಸಲು, ಪ್ರಮುಖ ಯೆಹೂದಿಗಳಿಗೆ ಸಕಾರಣವಿತ್ತು.
13. ಯೇಸುವಿನ ಸಾಮ್ಯವು ಇದ್ದಕ್ಕಿದ್ದಂತೆ ಕೊನೆಗೊಂಡಿರುವುದು, ನಮ್ಮ ಮುಂದೆ ಯಾವ ಗಂಭೀರವಾದ ಪ್ರಶ್ನೆಯನ್ನು ಒಡ್ಡುತ್ತದೆ?
13 ತಂದೆಯ ಬೇಡಿಕೆಯ ಬಳಿಕ, ಆ ಸಾಮ್ಯವು ಇದ್ದಕ್ಕಿದ್ದಂತೆ ಕೊನೆಗೊಳ್ಳುತ್ತದೆ. ಇದು, ತನ್ನ ಕೇಳುಗರು ಈ ಕಥೆಯ ಮುಕ್ತಾಯವನ್ನು ನಿರ್ಣಯಿಸುವಂತೆ ಯೇಸು ಆಮಂತ್ರಿಸುತ್ತಾನೋ ಎಂಬಂತೆ ಇದೆ. ಹಿರಿಯ ಮಗನ ಪ್ರತಿಕ್ರಿಯೆಯು ಏನೇ ಆಗಿರಲಿ, ಪ್ರತಿಯೊಬ್ಬ ಕೇಳುಗನು, ‘ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ, ಸ್ವರ್ಗದಲ್ಲಾಗುವ ಸಂತೋಷದಲ್ಲಿ ನೀವು ಸಹ ಪಾಲ್ಗೊಳ್ಳುವಿರೊ?’ ಎಂಬ ಪ್ರಶ್ನೆಗೆ ಉತ್ತರಿಸಬೇಕಿತ್ತು. ಆ ಪ್ರಶ್ನೆಗೆ ತಮ್ಮ ಉತ್ತರವನ್ನು ಕೊಡುವ ಅವಕಾಶವು ಇಂದು ಕ್ರೈಸ್ತರಿಗೆ ಸಹ ಕೊಡಲ್ಪಟ್ಟಿದೆ. ಹೇಗೆ?
ಇಂದು ದೇವರ ಕುರಣೆಯನ್ನು ಅನುಕರಿಸುವುದು
14. (ಎ) ಕರುಣೆಯ ವಿಷಯಕ್ಕೆ ಬರುವಾಗ, ಎಫೆಸ 5:1ರಲ್ಲಿ ಕಂಡುಬರುವ ಪೌಲನ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ? (ಬಿ) ದೇವರ ಕರುಣೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ವಿಷಯದಲ್ಲಿ ನಾವು ಹೇಗೆ ಜಾಗ್ರತೆಯಿಂದಿರಬೇಕು?
14 ಪೌಲನು ಎಫೆಸದವರಿಗೆ ಸಲಹೆ ನೀಡಿದ್ದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 5:1) ಆದುದರಿಂದ, ಕ್ರೈಸ್ತರೋಪಾದಿ ನಾವು ದೇವರ ಕರುಣೆಯನ್ನು ಗಣ್ಯಮಾಡಬೇಕು, ಅದನ್ನು ನಮ್ಮ ಹೃದಯಗಳಲ್ಲಿ ಬೇರೂರಿಸಬೇಕು, ಮತ್ತು ತದನಂತರ ಈ ಗುಣವನ್ನು ಇತರರೊಂದಿಗೆ ವ್ಯವಹರಿಸುವಾಗ ತೋರಿಸಬೇಕು. ಆದರೆ ಜಾಗ್ರತೆವಹಿಸಿರಿ. ದೇವರು ಕರುಣಾಮಯಿಯಾಗಿರುವುದರಿಂದ, ನಾವು ಯಾವುದೇ ಪಾಪವನ್ನು ಮಾಡಸಾಧ್ಯವಿದೆ ಎಂದು ತಪ್ಪಾಗಿ ಊಹಿಸಿಕೊಳ್ಳಬಾರದು. ಉದಾಹರಣೆಗಾಗಿ, ‘ನಾನು ಪಾಪವನ್ನು ಮಾಡುವಲ್ಲಿ, ನಾನು ಯಾವಾಗಲೂ ದೇವರಲ್ಲಿ ಕ್ಷಮಾಪಣೆಗಾಗಿ ಪ್ರಾರ್ಥಿಸಸಾಧ್ಯವಿದೆ, ಆಗ ಆತನು ಕರುಣೆಯನ್ನು ತೋರಿಸುತ್ತಾನೆ’ ಎಂದು ಮೂರ್ಖತನದಿಂದ ತರ್ಕಿಸುವಂತಹ ಜನರಿದ್ದಾರೆ. ಅಂತಹ ಮನೋಭಾವವು, ಯಾವುದನ್ನು ಬೈಬಲ್ ಬರಹಗಾರನಾದ ಯೂದನು, “ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವ”ದೆಂದು ಕರೆಯುತ್ತಾನೋ ಅದಕ್ಕೆ ಸರಿಸಮವಾಗಿದೆ. (ಯೂದ 4) ಯೆಹೋವನು ಕರುಣೆಯುಳ್ಳವನಾಗಿದ್ದಾನಾದರೂ, ಪಶ್ಚಾತ್ತಾಪಪಡದಂತಹ ತಪ್ಪಿತಸ್ಥರೊಂದಿಗೆ ವ್ಯವಹರಿಸುವಾಗ, “ಅಪರಾಧಗಳನ್ನು ಶಿಕ್ಷಿಸದೆ ಬಿಡದವ”ನಾಗಿರುತ್ತಾನೆ.—ವಿಮೋಚನಕಾಂಡ 34:7; ಹೋಲಿಸಿರಿ ಯೆಹೋಶುವ 24:19; 1 ಯೋಹಾನ 5:16.
15. (ಎ) ವಿಶೇಷವಾಗಿ ಹಿರಿಯರು ಕರುಣೆಯ ವಿಷಯದಲ್ಲಿ ಯಾಕೆ ಸಮತೂಕವಾದ ನೋಟವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ? (ಬಿ) ಗೊತ್ತಿದ್ದೂ ಮಾಡಿದ ತಪ್ಪನ್ನು ಸಹಿಸುವುದಿಲ್ಲವಾದರೂ, ಹಿರಿಯರು ಏನು ಮಾಡಲು ಪ್ರಯತ್ನಿಸಬೇಕು, ಮತ್ತು ಏಕೆ?
15 ಅದೇ ಸಮಯದಲ್ಲಿ, ನಾವು ಇನ್ನೊಂದು ವೈಪರೀತ್ಯಕ್ಕೆ ಹೋಗುವುದರ ವಿರುದ್ಧ, ಅಂದರೆ, ತಮ್ಮ ಪಾಪಗಳ ಕುರಿತು ನಿಜವಾದ ಪಶ್ಚಾತ್ತಾಪ ಹಾಗೂ ದೈವಿಕ ದುಃಖವನ್ನು ತೋರಿಸುವವರ ಕಡೆಗೆ ತುಂಬ ನಿಷ್ಠುರವಾಗಿ ಹಾಗೂ ವಿಮರ್ಶಾತ್ಮಕವಾಗಿ ವರ್ತಿಸುವ ಒಂದು ಪ್ರವೃತ್ತಿಯ ವಿಷಯದಲ್ಲಿ ನಮ್ಮನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. (2 ಕೊರಿಂಥ 7:11) ಯೆಹೋವನ ಕುರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯು ಹಿರಿಯರಿಗೆ ಕೊಡಲ್ಪಟ್ಟಿರುವುದರಿಂದ, ವಿಶೇಷವಾಗಿ ನ್ಯಾಯ ನಿರ್ಣಾಯಕ ವಿಚಾರಗಳನ್ನು ನಿರ್ವಹಿಸುತ್ತಿರುವಾಗ, ಅವರು ಸಮತೂಕವಾದ ನೋಟವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಕ್ರೈಸ್ತ ಸಭೆಯನ್ನು ಶುದ್ಧವಾಗಿಡಬೇಕಾದ ಕಾರಣ, ಬಹಿಷ್ಕರಿಸುವ ಮೂಲಕ ‘ಆ ದುಷ್ಟನನ್ನು ಹೊರಹಾಕು’ವುದು ಶಾಸ್ತ್ರೀಯವಾಗಿ ಸೂಕ್ತವಾದದ್ದಾಗಿದೆ. (1 ಕೊರಿಂಥ 5:11-13) ಅದೇ ಸಮಯದಲ್ಲಿ, ಕರುಣೆಯನ್ನು ತೋರಿಸಲು ಸ್ಪಷ್ಟವಾದ ಕಾರಣವಿರುವಾಗ, ಕರುಣೆಯನ್ನು ತೋರಿಸುವುದು ಅತ್ಯುತ್ತಮವಾದದ್ದಾಗಿದೆ. ಹೀಗೆ, ಗೊತ್ತಿದ್ದೂ ಮಾಡಿದ ತಪ್ಪು ಕೆಲಸವನ್ನು ಹಿರಿಯರು ಸಹಿಸುವುದಿಲ್ಲವಾದರೂ, ಅವರು ಪ್ರೀತಿಪೂರ್ಣವಾದ ಹಾಗೂ ಕರುಣಾಭರಿತ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಕರುಣೆಗೆ ಒಂದು ಮಿತಿಯಿದೆ. ಅವರಿಗೆ ಈ ಬೈಬಲ್ ಮೂಲತತ್ವದ ಅರಿವು ಇದೆ: “ಕರುಣೆತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ.”—ಯಾಕೋಬ 2:13; ಜ್ಞಾನೋಕ್ತಿ 19:17; ಮತ್ತಾಯ 5:7.
16. (ಎ) ತಪ್ಪುಮಾಡುತ್ತಿರುವವರು ತನ್ನ ಬಳಿಗೆ ಹಿಂದಿರುಗುವಂತೆ ಯೆಹೋವನು ಹೇಗೆ ಅಪೇಕ್ಷಿಸುತ್ತಾನೆ ಎಂಬುದನ್ನು ಬೈಬಲನ್ನು ಉಪಯೋಗಿಸುತ್ತಾ ತೋರಿಸಿರಿ. (ಬಿ) ಪಶ್ಚಾತ್ತಾಪಪಡುವ ಪಾಪಿಗಳ ಹಿಂದಿರುಗುವಿಕೆಯನ್ನು ನಾವು ಸಹ ಸ್ವಾಗತಿಸುತ್ತೇವೆ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ?
16 ತಪ್ಪುಮಾಡುತ್ತಿರುವವರು ತನ್ನ ಬಳಿಗೆ ಹಿಂದಿರುಗುವಂತೆ ಯೆಹೋವನು ಅಪೇಕ್ಷಿಸುತ್ತಾನೆ ಎಂಬುದನ್ನು ಪೋಲಿಹೋದ ಮಗನ ಸಾಮ್ಯವು ಸ್ಪಷ್ಟಪಡಿಸುತ್ತದೆ. ನಿಜವಾಗಿಯೂ, ಯೆಹೋವನು ತಪ್ಪುಮಾಡುತ್ತಿರುವವರು ಪಶ್ಚಾತ್ತಾಪಪಟ್ಟು ತನ್ನ ಚಿತ್ತವನ್ನು ಮಾಡಲು ಬಯಸುವಷ್ಟರ ವರೆಗೆ, ಅವರಿಗೆ ತನ್ನ ಬಳಿಗೆ ಬರುವಂತೆ ಆಮಂತ್ರಿಸುತ್ತಾ ಇರುತ್ತಾನೆ. (ಯೆಹೆಜ್ಕೇಲ 33:11; ಮಲಾಕಿಯ 3:7; ರೋಮಾಪುರ 2:4, 5; 2 ಪೇತ್ರ 3:9) ಪೋಲಿಹೋದ ಮಗನ ತಂದೆಯಂತೆ, ತನ್ನ ಬಳಿಗೆ ಹಿಂದಿರುಗುವವರನ್ನು ಯೆಹೋವನು ಗೌರವದಿಂದ ಕಾಣುತ್ತಾನೆ, ಮತ್ತು ಕುಟುಂಬದ ಸದಸ್ಯನಂತೆಯೇ ಅವನನ್ನು ಪುನಃ ಸ್ವೀಕರಿಸುತ್ತಾನೆ. ಈ ವಿಷಯದಲ್ಲಿ ನೀವು ಯೆಹೋವನನ್ನು ಅನುಕರಿಸುತ್ತಿದ್ದೀರೋ? ಸ್ವಲ್ಪ ಸಮಯದ ವರೆಗೆ ಜೊತೆ ವಿಶ್ವಾಸಿಯೊಬ್ಬನು ಬಹಿಷ್ಕರಿಸಲ್ಪಟ್ಟಿದ್ದು, ಈಗ ಅವನು ಪುನಸ್ಸ್ಥಾಪಿಸಲ್ಪಡುವಲ್ಲಿ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಈ ವಿಷಯದಲ್ಲಿ “ಪರಲೋಕದಲ್ಲಿ ಸಂತೋಷವುಂಟಾಗುವದೆಂದು” ನಮಗೆ ಈಗಾಗಲೇ ತಿಳಿದಿದೆ. (ಲೂಕ 15:7) ಆದರೆ ಭೂಮಿಯಲ್ಲಿ, ನಿಮ್ಮ ಸಭೆಯಲ್ಲಿ, ನಿಮ್ಮ ಮನಸ್ಸಿನಲ್ಲಿ ಸಹ ಸಂತೋಷವುಂಟಾಗುತ್ತದೊ? ಅಥವಾ ಸಾಮ್ಯದಲ್ಲಿನ ಹಿರಿಯ ಮಗನಂತೆ, ಮೊದಲಾಗಿ ದೇವರ ಆರಾಧನೆಯನ್ನು ಬಿಟ್ಟುಹೋಗಲೇ ಬಾರದಾಗಿದ್ದಂತಹ ಒಬ್ಬ ವ್ಯಕ್ತಿಯನ್ನು ಅಂಗೀಕರಿಸುವುದು ತಪ್ಪು ಎಂಬ ಅಸಮಾಧಾನ ನಿಮಗಿದೆಯೆ?
17. (ಎ) ಪ್ರಥಮ ಶತಮಾನದ ಕೊರಿಂಥದಲ್ಲಿ ಯಾವ ಸನ್ನಿವೇಶವು ಉಂಟಾಯಿತು, ಮತ್ತು ಈ ಸಮಸ್ಯೆಯನ್ನು ನಿರ್ವಹಿಸುವುದರ ಕುರಿತು ಸಭೆಯಲ್ಲಿರುವವರಿಗೆ ಪೌಲನು ಹೇಗೆ ಬುದ್ಧಿವಾದ ಹೇಳಿದನು? (ಬಿ) ಪೌಲನ ಬುದ್ಧಿವಾದವು ಏಕೆ ಪ್ರಾಯೋಗಿಕವಾಗಿತ್ತು, ಮತ್ತು ಇಂದು ನಾವು ಅದನ್ನು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ? (ಬಲಭಾಗದಲ್ಲಿರುವ ರೇಖಾಚೌಕವನ್ನು ಸಹ ನೋಡಿರಿ.)
17 ಈ ವಿಷಯದಲ್ಲಿ ನಾವು ನಮ್ಮನ್ನು ಪರೀಕ್ಷಿಸಿಕೊಳ್ಳಲಿಕ್ಕಾಗಿ, ಸುಮಾರು ಸಾ.ಶ. 55ನೆಯ ವರ್ಷದಲ್ಲಿ ಕೊರಿಂಥದಲ್ಲಿ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಅಲ್ಲಿ, ಸಭೆಯಿಂದ ಬಹಿಷ್ಕರಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನು ಕೊನೆಗೆ ತನ್ನ ಜೀವನ ರೀತಿಯನ್ನು ಬದಲಾಯಿಸಿಕೊಂಡನು. ಅಲ್ಲಿನ ಸಹೋದರರು ಏನು ಮಾಡಬೇಕಿತ್ತು? ಅವನ ಪಶ್ಚಾತ್ತಾಪವನ್ನು ಸಂದೇಹದಿಂದ ನೋಡುತ್ತಾ, ಅವನನ್ನು ದೂರವಿಡುವುದನ್ನು ಮುಂದುವರಿಸಬೇಕಿತ್ತೋ? ಇಲ್ಲ. ಅದಕ್ಕೆ ಬದಲಾಗಿ, ಪೌಲನು ಕೊರಿಂಥದವರನ್ನು ಉತ್ತೇಜಿಸಿದ್ದು: “ಅವನನ್ನು . . . ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು. ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (2 ಕೊರಿಂಥ 2:7, 8) ಅನೇಕವೇಳೆ, ಪಶ್ಚಾತ್ತಾಪವನ್ನು ತೋರಿಸುವ ತಪ್ಪಿತಸ್ಥರು, ನಿಂದೆ ಹಾಗೂ ಹತಾಶೆಯ ಭಾವನೆಗಳಿಗೆ ವಿಶೇಷವಾಗಿ ಸೂಕ್ಷ್ಮಸಂವೇದಿಗಳಾಗಿರುತ್ತಾರೆ. ಆದುದರಿಂದ, ಜೊತೆ ಕ್ರೈಸ್ತರು ಹಾಗೂ ಯೆಹೋವನು ಅವರನ್ನು ಪ್ರೀತಿಸುತ್ತಾನೆ ಎಂಬ ಪುನರಾಶ್ವಾಸನೆಯನ್ನು ಅವರಿಗೆ ಕೊಡುವ ಅಗತ್ಯವಿದೆ. (ಯೆರೆಮೀಯ 31:3; ರೋಮಾಪುರ 1:12) ಇದು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ. ಏಕೆ?
18, 19. (ಎ) ಈ ಮುಂಚೆ ಕೊರಿಂಥದವರು ತಮ್ಮನ್ನು ಹೆಚ್ಚು ಸೌಮ್ಯಭಾವದವರನ್ನಾಗಿ ತೋರ್ಪಡಿಸಿಕೊಂಡದ್ದು ಹೇಗೆ? (ಬಿ) ಕರುಣೆಯಿಲ್ಲದ ಒಂದು ಮನೋಭಾವದ ಕಾರಣದಿಂದ, ಕೊರಿಂಥದ ಜನರನ್ನು ಹೇಗೆ ‘ಸೈತಾನನು ವಂಚಿಸಿ ನಷ್ಟಪಡಿಸಲು’ ಸಾಧ್ಯವಿತ್ತು?
18 ಕ್ಷಮಾಭಾವವನ್ನು ರೂಢಿಮಾಡಿಕೊಳ್ಳುವಂತೆ ಕೊರಿಂಥದವರಿಗೆ ಬುದ್ಧಿವಾದ ಹೇಳುತ್ತಿರುವಾಗ, ಪೌಲನು ಒಂದು ಕಾರಣವನ್ನು ಕೊಟ್ಟನು. ಅದೇನೆಂದರೆ “ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಜನೆಗಳನ್ನು ನಾವು ಅರಿಯದವರಲ್ಲವಲ್ಲಾ.” (2 ಕೊರಿಂಥ 2:11) ಅವನ ಮಾತುಗಳ ಅರ್ಥವೇನು? ಈ ಮುಂಚೆ ಕೊರಿಂಥ ಸಭೆಯವರು ಹೆಚ್ಚು ಸೌಮ್ಯಭಾವದವರಾಗಿದ್ದರಿಂದ ಪೌಲನು ಅವರಿಗೆ ಈ ವಿಷಯದಲ್ಲಿ ತಪ್ಪು ಮನಗಾಣಿಸಬೇಕಾಯಿತು. ಯಾವುದೇ ಶಿಕ್ಷೆಯನ್ನು ಅನುಭವಿಸದೆ, ಆ ವ್ಯಕ್ತಿಯು ತನ್ನ ಪಾಪವನ್ನು ಮುಂದುವರಿಸುವಂತೆ ಅವರು ಅನುಮತಿಸಿದ್ದರು. ಹಾಗೆ ಮಾಡುವ ಮೂಲಕ, ಸಭೆಯು—ವಿಶೇಷವಾಗಿ ಅದರ ಹಿರಿಯರು—ಸೈತಾನನನ್ನು ಪ್ರಸನ್ನಗೊಳಿಸುವಂತಹ ರೀತಿಯಲ್ಲಿ ಕಾರ್ಯನಡಿಸಿತು. ಏಕೆಂದರೆ ಅಪಕೀರ್ತಿಯನ್ನು ಪಡೆಯುವಂತಹ ಸ್ಥಿತಿಗೆ ಆ ಸಭೆಯನ್ನು ತಂದುಮುಟ್ಟಿಸಲು ಅವನು ಹರ್ಷಿಸುತ್ತಿದ್ದಿರಬಹುದು.—1 ಕೊರಿಂಥ 5:1-5.
19 ಇನ್ನೊಂದು ಕಡೆಯಲ್ಲಿ, ಈಗ ಅವರು ತೀರ ಕಟ್ಟುನಿಟ್ಟಾಗಿ ವರ್ತಿಸುವುದಾದರೆ, ಮತ್ತು ಪಶ್ಚಾತ್ತಾಪಪಟ್ಟ ಆ ವ್ಯಕ್ತಿಯನ್ನು ಕ್ಷಮಿಸಲು ನಿರಾಕರಿಸುವುದಾದರೆ, ಸೈತಾನನು ಅವರನ್ನು ಇನ್ನೊಂದು ವಿಧದಲ್ಲಿ ಭ್ರಷ್ಟಗೊಳಿಸುವ ಸಾಧ್ಯತೆಯಿತ್ತು. ಹೇಗೆ? ಈಗ ಅವರು ನಿರ್ದಯಿಗಳೂ ಕರುಣೆಯಿಲ್ಲದವರೂ ಆಗಿರುವುದರಿಂದ, ಸೈತಾನನು ಈ ಸಂದರ್ಭದ ಸದುಪಯೋಗವನ್ನು ಮಾಡಿಕೊಳ್ಳಸಾಧ್ಯವಿತ್ತು. ಪಶ್ಚಾತ್ತಾಪಪಟ್ಟಂತಹ ಪಾಪಿಯು “ತೀರ ದುಃಖಿತನಾಗಿ”—ಅಥವಾ ಟುಡೇಸ್ ಇಂಗ್ಲಿಷ್ ವರ್ಷನ್ ಅದನ್ನು ಭಾಷಾಂತರಿಸುವಂತೆ, “ಸಂಪೂರ್ಣವಾಗಿ ತನ್ನ ಪ್ರಯತ್ನವನ್ನು ಬಿಟ್ಟುಬಿಡುವಷ್ಟರ ಮಟ್ಟಿಗೆ ದುಃಖಿತನಾಗಿ”—ಪರಿಣಮಿಸುವಲ್ಲಿ, ಹಿರಿಯರು ಯೆಹೋವನ ಮುಂದೆ ಎಷ್ಟು ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗಿದೆ! (ಹೋಲಿಸಿರಿ ಯೆಹೆಜ್ಕೇಲ 34:6; ಯಾಕೋಬ 3:1.) ಸಕಾರಣದಿಂದಲೇ, “ಈ ಚಿಕ್ಕವರಲ್ಲಿ ಒಬ್ಬ”ನನ್ನು ಎಡವುವಂತೆ ಮಾಡುವುದರ ವಿರುದ್ಧ ತನ್ನ ಹಿಂಬಾಲಕರಿಗೆ ಎಚ್ಚರಿಕೆ ನೀಡಿದ ಬಳಿಕ, ಯೇಸು ಹೇಳಿದ್ದು: “ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು.”a—ಲೂಕ 17:1-4.
20. ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ, ಯಾವ ರೀತಿಯಲ್ಲಿ ಪರಲೋಕದಲ್ಲಿ ಹಾಗೂ ಭೂಮಿಯಲ್ಲಿ ಸಂತೋಷವಿರುತ್ತದೆ?
20 ಪ್ರತಿ ವರ್ಷ ಶುದ್ಧಾರಾಧನೆಯ ಕಡೆಗೆ ಹಿಂದಿರುಗುವ ಸಾವಿರಾರು ಮಂದಿ, ತಮ್ಮ ಕಡೆಗೆ ಯೆಹೋವನು ತೋರಿಸಿರುವ ಕರುಣೆಗಾಗಿ ಕೃತಜ್ಞರಾಗಿದ್ದಾರೆ. “ನನ್ನ ಜೀವನದಲ್ಲಿ ಈ ಮುಂಚೆ ಇಷ್ಟೊಂದು ಸಂತೋಷಿತಳಾಗಿದ್ದದ್ದು ನನ್ನ ನೆನಪಿಗೆ ಬರುವುದಿಲ್ಲ” ಎಂದು, ತನ್ನ ಪುನಸ್ಸ್ಥಾಪನೆಯ ಕುರಿತು ಒಬ್ಬ ಕ್ರೈಸ್ತ ಸಹೋದರಿಯು ಹೇಳುತ್ತಾಳೆ. ಅವಳ ಆನಂದದಲ್ಲಿ ದೇವದೂತರೂ ಭಾಗಿಯಾದರು ಎಂಬುದು ನಿಶ್ಚಯ. ಒಬ್ಬ ಪಾಪಿಯು ಪಶ್ಚಾತ್ತಾಪಪಟ್ಟಾಗ ‘ಪರಲೋಕದಲ್ಲಿ ಉಂಟಾಗುವ ಸಂತೋಷದಲ್ಲಿ’ ನಾವು ಸಹ ಜೊತೆಗೂಡೋಣ. (ಲೂಕ 15:7) ಹಾಗೆ ಮಾಡುವಾಗ, ನಾವು ಸಹ ಯೆಹೋವನ ಕರುಣೆಯನ್ನು ಅನುಕರಿಸುತ್ತಿರುವೆವು.
[ಅಧ್ಯಯನ ಪ್ರಶ್ನೆಗಳು]
a ಕೊರಿಂಥದಲ್ಲಿದ್ದ ತಪ್ಪಿತಸ್ಥನು ಸ್ವಲ್ಪ ಸಮಯಾವಧಿಯೊಳಗೆ ಪುನಸ್ಸ್ಥಾಪಿಸಲ್ಪಟ್ಟಿರುವಂತೆ ತೋರುತ್ತದಾದರೂ, ಎಲ್ಲ ರೀತಿಯ ಬಹಿಷ್ಕರಿಸುವಿಕೆಗಳಿಗೆ ಇದನ್ನು ಒಂದು ನಮೂನೆಯಾಗಿ ಉಪಯೋಗಿಸಬಾರದಾಗಿದೆ. ಪ್ರತಿಯೊಬ್ಬರ ವಿಷಯದಲ್ಲಿ ಇದು ಭಿನ್ನವಾಗಿದೆ. ತಪ್ಪಿತಸ್ಥರಲ್ಲಿ ಕೆಲವರು, ಬಹಿಷ್ಕರಿಸಲ್ಪಟ್ಟ ಬಳಿಕ ಸ್ವಲ್ಪ ಸಮಯದೊಳಗೇ ನಿಜವಾದ ಪಶ್ಚಾತ್ತಾಪವನ್ನು ತೋರಿಸಲು ಆರಂಭಿಸುತ್ತಾರೆ. ಇನ್ನಿತರರಲ್ಲಿ ಅಂತಹ ಮನೋಭಾವವು ಸ್ಪಷ್ಟವಾಗಿ ಕಂಡುಬರುವಷ್ಟರೊಳಗೆ ಬಹಳಷ್ಟು ಸಮಯವು ಕಳೆದಿರುತ್ತದೆ. ಆದರೂ, ಎಲ್ಲ ಸಂದರ್ಭಗಳಲ್ಲಿ, ಪುನಸ್ಸ್ಥಾಪಿಸಲ್ಪಡುವವರು ಮೊದಲಾಗಿ ದೈವಿಕ ದುಃಖದ ಪುರಾವೆಯನ್ನು ತೋರಿಸಬೇಕು, ಮತ್ತು ಸಾಧ್ಯವಿರುವಾಗೆಲ್ಲ ಪಶ್ಚಾತ್ತಾಪಕ್ಕೆ ಯೋಗ್ಯವಾದ ಕಾರ್ಯಗಳನ್ನು ತೋರ್ಪಡಿಸಬೇಕು.—ಅ. ಕೃತ್ಯಗಳು 26:20; 2 ಕೊರಿಂಥ 7:11.
ಪುನರ್ವಿಮರ್ಶೆಯಲ್ಲಿ
◻ ಯಾವ ರೀತಿಯಲ್ಲಿ ಯೆಹೂದಿ ಧಾರ್ಮಿಕ ಮುಖಂಡರು ಹಿರಿಯ ಮಗನನ್ನು ಹೋಲುತ್ತಿದ್ದರು?
◻ ಪೋಲಿಹೋದ ಹುಡುಗನ ಅಣ್ಣನು, ಯಾವ ರೀತಿಯಲ್ಲಿ ಮಗನಾಗಿರುವುದರ ನಿಜಾರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಅಸಮರ್ಥನಾಗಿದ್ದನು?
◻ ದೇವರ ಕರುಣೆಯ ಕುರಿತು ಆಲೋಚಿಸುವಾಗ, ಯಾವ ಎರಡು ವೈಪರೀತ್ಯಗಳಿಂದ ದೂರವಿರುವ ಅಗತ್ಯವಿದೆ?
◻ ಇಂದು ನಾವು ದೇವರ ಕರುಣೆಯನ್ನು ಹೇಗೆ ಅನುಕರಿಸಸಾಧ್ಯವಿದೆ?
[ಪುಟ 17 ರಲ್ಲಿರುವ ಚೌಕ]
‘ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಿರಿ’
ಪಶ್ಚಾತ್ತಾಪವನ್ನು ತೋರಿಸಿದ್ದ ಬಹಿಷ್ಕೃತ ತಪ್ಪಿತಸ್ಥನ ಕುರಿತು, ಪೌಲನು ಕೊರಿಂಥದ ಸಭೆಗೆ ಹೇಳಿದ್ದು: “ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (2 ಕೊರಿಂಥ 2:8) “ನಿಶ್ಚಯಪಡಿಸು”ವುದು ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಶಬ್ದವು, ಕಾನೂನಿನ ಒಂದು ಶಬ್ದವಾಗಿದ್ದು “ಕಾನೂನು ಸಮ್ಮತಮಾಡು” ಎಂಬುದನ್ನು ಅರ್ಥೈಸುತ್ತದೆ. ಹೌದು, ಪಶ್ಚಾತ್ತಾಪಪಟ್ಟು, ಪುನಸ್ಸ್ಥಾಪಿಸಲ್ಪಟ್ಟಿರುವವರು, ತಾವು ಪ್ರೀತಿಸಲ್ಪಡುತ್ತೇವೆ ಹಾಗೂ ಪುನಃ ಒಮ್ಮೆ ತಾವು ಸಭೆಯ ಸದಸ್ಯರೋಪಾದಿ ಸ್ವಾಗತಿಸಲ್ಪಡುತ್ತೇವೆ ಎಂಬುದನ್ನು ಗ್ರಹಿಸುವ ಅಗತ್ಯವಿದೆ.
ಆದರೂ, ಒಬ್ಬ ವ್ಯಕ್ತಿಯ ಬಹಿಷ್ಕಾರ ಹಾಗೂ ಅವನ ಪುನಸ್ಸ್ಥಾಪನೆಗೆ ನಡಿಸಿದ ನಿರ್ದಿಷ್ಟ ಕಾರಣವು ಸಭೆಯಲ್ಲಿರುವ ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಎಂಬುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಇದಲ್ಲದೆ, ಪಶ್ಚಾತ್ತಾಪಪಟ್ಟಿರುವ ವ್ಯಕ್ತಿಯಿಂದ ನಡಿಸಲ್ಪಟ್ಟ ತಪ್ಪಿನಿಂದ ವೈಯಕ್ತಿಕವಾಗಿ, ಬಹುಶಃ ದೀರ್ಘ ಸಮಯದ ವರೆಗೆ ತೊಂದರೆಗೊಳಗಾಗಿರುವ ಅಥವಾ ನೋವಿಗೊಳಗಾಗಿರುವಂತಹ ಕೆಲವರು ಸಭೆಯಲ್ಲಿ ಇರಬಹುದು. ಅವರಿಗೆ ಆ ನೋವಿನ ಅನಿಸಿಕೆಗಳು ಪ್ರಬಲವಾಗಿರುತ್ತವೆ. ಆದುದರಿಂದ, ಪುನಸ್ಸ್ಥಾಪನೆಯ ಪ್ರಕಟನೆಯು ಮಾಡಲ್ಪಟ್ಟಾಗ, ಅಂತಹವರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ವೈಯಕ್ತಿಕವಾಗಿ ಸ್ವಾಗತದ ಅಭಿವ್ಯಕ್ತಿಗಳನ್ನು ಹೇಳುವ ಸಂದರ್ಭ ಸಿಗುವ ವರೆಗೆ ಸುಮ್ಮನಿರಬೇಕು.
ಕ್ರೈಸ್ತ ಸಭೆಯ ಸದಸ್ಯರೋಪಾದಿ ತಮ್ಮನ್ನು ಪುನಃ ಸ್ವಾಗತಿಸಲಾಗುತ್ತದೆ ಎಂಬುದನ್ನು ತಿಳಿದುಕೊಂಡಾಗ, ಪುನಸ್ಸ್ಥಾಪಿಸಲ್ಪಟ್ಟಿರುವವರ ನಂಬಿಕೆಯು ಎಷ್ಟು ಬಲಗೊಳ್ಳಸಾಧ್ಯವಿದೆ! ರಾಜ್ಯ ಸಭಾಗೃಹದಲ್ಲಿ, ಕ್ಷೇತ್ರ ಸೇವೆಯಲ್ಲಿ, ಹಾಗೂ ಸೂಕ್ತವಾದ ಇನ್ನಿತರ ಸಂದರ್ಭಗಳಲ್ಲಿ ಅವರೊಂದಿಗೆ ಸಂಭಾಷಿಸುವ ಮೂಲಕ ಹಾಗೂ ಅವರ ಸಹವಾಸದಲ್ಲಿ ಆನಂದಿಸುವ ಮೂಲಕ, ಪಶ್ಚಾತ್ತಾಪಪಡುವ ಅಂತಹ ಜನರನ್ನು ನಾವು ಉತ್ತೇಜಿಸಸಾಧ್ಯವಿದೆ. ಹೀಗೆ, ಈ ಪ್ರಿಯ ಜನರಿಗಾಗಿರುವ ನಮ್ಮ ಪ್ರೀತಿಯನ್ನು ನಿಶ್ಚಯಪಡಿಸುವ ಮೂಲಕ, ಅಥವಾ ಅವರನ್ನು ಕಾನೂನು ಸಮ್ಮತವಾಗಿ ಸ್ವೀಕರಿಸುವ ಮೂಲಕ, ಅವರು ಮಾಡಿರುವ ಪಾಪಗಳ ಗಂಭೀರತೆಯನ್ನು ನಾವು ಯಾವುದೇ ರೀತಿಯಲ್ಲಿ ಕಡಿಮೆಮಾಡಲು ಪ್ರಯತ್ನಿಸುವುದಿಲ್ಲ. ಬದಲಾಗಿ, ಅವರು ಪಾಪಪೂರ್ಣ ಮಾರ್ಗವನ್ನು ತೊರೆದಿದ್ದಾರೆ ಹಾಗೂ ಯೆಹೋವನ ಕಡೆಗೆ ಹಿಂದಿರುಗಿದ್ದಾರೆ ಎಂಬ ಸಂಗತಿಯನ್ನು ತಿಳಿದು, ಪರಲೋಕದ ಸಮೂಹವು ಆನಂದಿಸುವಂತೆಯೇ ನಾವೂ ಆನಂದಿಸುತ್ತೇವೆ.—ಲೂಕ 15:7.
[ಪುಟ 15 ರಲ್ಲಿರುವ ಚಿತ್ರ]
ತನ್ನ ತಮ್ಮನ ಹಿಂದಿರುಗುವಿಕೆಯನ್ನು ನೋಡಿ ಸಂತೋಷಿಸಲು ಹಿರಿಯ ಮಗನು ನಿರಾಕರಿಸಿದನು