“ಸಕಲವಿಧವಾಗಿ ಸಂತೈಸುವ ದೇವ” ರಿಂದ ಸಾಂತ್ವನ
“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.”—2 ಕೊರಿಂಥ 1:3, 4.
1, 2. ದುಃಖಿಸುವ ಜನರಿಗೆ ಯಾವ ವಿಧದ ಸಾಂತ್ವನದ ಅಗತ್ಯವಿದೆ?
ದುಃಖಿಸುವ ಜನರಿಗೆ ಯಥಾರ್ಥ ಸಾಂತ್ವನದ ಅಗತ್ಯವಿದೆ—ಕೇವಲ ಸರ್ವಸಾಮಾನ್ಯ ಮಾತುಗಳು ಮತ್ತು ಸವಕಲು ಮಾತುಗಳಲ್ಲ. ‘ಕಾಲವು ಮನಸ್ಸಿನ ಗಾಸಿಗಳನ್ನು ವಾಸಿಮಾಡುವುದು’ ಎಂಬ ನಾಣ್ಣುಡಿಯನ್ನು ನಾವೆಲ್ಲರೂ ಕೇಳಿದ್ದೇವೆ, ಆದರೆ ವಿಯೋಗಾವಸ್ಥೆಯ ಆರಂಭದ ಹಂತಗಳಲ್ಲಿ ಯಾವ ದುಃಖತಪ್ತ ವ್ಯಕ್ತಿಯು ಆ ಯೋಚನೆಯಿಂದ ಸಂತೈಸಲ್ಪಡುತ್ತಾನೆ? ದೇವರು ಒಂದು ಪುನರುತ್ಥಾನವನ್ನು ವಾಗ್ದಾನಿಸಿದ್ದಾನೆಂದು ಕ್ರೈಸ್ತರಿಗೆ ತಿಳಿದಿದೆ, ಆದರೆ ಒಂದು ಹಠಾತ್ತಾದ ಕಳೆದುಕೊಳ್ಳುವಿಕೆಯ ಆಳವಾದ ನೋವು ಮತ್ತು ಮಾನಸಿಕ ಗಾಯವನ್ನು ಅದು ತಡೆಯುವುದಿಲ್ಲ. ಮತ್ತು ನೀವು ಒಂದು ಮಗುವನ್ನು ಕಳೆದುಕೊಂಡಿರುವಲ್ಲಿ, ಬದುಕುಳಿದಿರುವ ಇತರ ಮಕ್ಕಳು ಆ ಅಮೂಲ್ಯ ಮಗುವಿನ ಬದಲಿಗಳಾಗಿರಲಾರವು ಎಂಬುದು ನಿಶ್ಚಯ.
2 ಕಳೆದುಕೊಳ್ಳುವಿಕೆಯ ಸಮಯಗಳಲ್ಲಿ ನಾವು ಯಥಾರ್ಥ ಸಾಂತ್ವನ, ದೇವರ ವಾಗ್ದಾನಗಳಲ್ಲಿ ಒಂದು ಸುದೃಢ ಆಧಾರವಿರುವ ಸಾಂತ್ವನದಿಂದ ಅತಿ ಹೆಚ್ಚಾಗಿ ಸಹಾಯ ಮಾಡಲ್ಪಡುತ್ತೇವೆ. ನಮಗೆ ಅನುಕಂಪದ ಅಗತ್ಯವೂ ಇದೆ. ಆ ಪೈಶಾಚಿಕ ಕುಲಸಂಬಂಧಿತ ಕಗ್ಗೊಲೆಯಲ್ಲಿ ಪ್ರಿಯ ಜನರನ್ನು ಕಳೆದುಕೊಂಡ ರುಆಂಡದ ಜನರ, ಮತ್ತು ವಿಶೇಷವಾಗಿ ಯೆಹೋವನ ಸಾಕ್ಷಿಗಳ ನೂರಾರು ಕುಟುಂಬಗಳ ವಿಷಯದಲ್ಲಿ ಇದು ನಿಶ್ಚಯವಾಗಿಯೂ ಸತ್ಯವಾಗಿರುತ್ತದೆ. ದುಃಖಿಸುವವರೆಲ್ಲರೂ ಯಾರಿಂದ ಸಾಂತ್ವನವನ್ನು ಪಡೆಯಬಲ್ಲರು?
ಯೆಹೋವ—ಸಾಂತ್ವನದ ದೇವರು
3. ಸಾಂತ್ವನವನ್ನು ನೀಡುವುದರಲ್ಲಿ ಯೆಹೋವನು ಹೇಗೆ ಮಾದರಿಯನ್ನಿಟ್ಟಿದ್ದಾನೆ?
3 ನಮಗೆಲ್ಲರಿಗೆ ಸಾಂತ್ವನವನ್ನು ಕೊಡುವುದರಲ್ಲಿ ಯೆಹೋವನು ಮಾದರಿಯನ್ನು ಇಟ್ಟಿದ್ದಾನೆ. ನಮಗೆ ನಿತ್ಯ ಸಾಂತ್ವನ ಮತ್ತು ನಿರೀಕ್ಷೆಯನ್ನು ಕೊಡಲು ಅವನು ತನ್ನ ಏಕಜಾತ ಪುತ್ರನಾದ ಕ್ರಿಸ್ತ ಯೇಸುವನ್ನು ಭೂಮಿಗೆ ಕಳುಹಿಸಿದನು. ಯೇಸು ಕಲಿಸಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಅವನು ತನ್ನ ಹಿಂಬಾಲಕರಿಗೆ ಇದನ್ನೂ ಹೇಳಿದನು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ಇನ್ನೊಂದು ಸಂದರ್ಭದಲ್ಲಿ ಅವನಂದದ್ದು: “ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.” (ಮತ್ತಾಯ 20:28) ಮತ್ತು ಪೌಲನು ತಿಳಿಸಿದ್ದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:8) ಈ ವಚನಗಳ ಮತ್ತು ಇತರ ಅನೇಕ ವಚನಗಳ ಮೂಲಕ ನಾವು ದೇವರ ಮತ್ತು ಕ್ರಿಸ್ತ ಯೇಸುವಿನ ಪ್ರೀತಿಯನ್ನು ಗ್ರಹಿಸುತ್ತೇವೆ.
4. ಅಪೊಸ್ತಲ ಪೌಲನು ಯೆಹೋವನಿಗೆ ವಿಶೇಷವಾಗಿ ಋಣಿಯಾಗಿದ್ದನು ಏಕೆ?
4 ಅಪೊಸ್ತಲ ಪೌಲನು ಯೆಹೋವನ ಅಪಾತ್ರ ದಯೆಯ ಕುರಿತಾಗಿ ವಿಶೇಷವಾಗಿ ಅರಿವುಳ್ಳವನಾಗಿದ್ದನು. ಅವನನ್ನು ಆತ್ಮಿಕವಾಗಿ ಮೃತ ಪರಿಸ್ಥಿತಿಯೊಂದರಿಂದ, ಕ್ರಿಸ್ತನ ಹಿಂಬಾಲಕರ ಒಬ್ಬ ಉನ್ಮತ್ತ ಹಿಂಸಕನಿಂದ, ಸ್ವತಃ ಒಬ್ಬ ಹಿಂಸಿಸಲ್ಪಟ್ಟ ಕ್ರೈಸ್ತನ ಸ್ಥಿತಿಗೆ ವಿಮೋಚಿಸಲಾಗಿತ್ತು. (ಎಫೆಸ 2:1-5) ಅವನು ತನ್ನ ಅನುಭವವನ್ನು ವರ್ಣಿಸುತ್ತಾನೆ: “ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದರ್ದಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ. ನನಗುಂಟಾದ ಆತನ ಕೃಪೆಯು ನಿಷ್ಫಲವಾಗಲಿಲ್ಲ; ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.”—1 ಕೊರಿಂಥ 15:9, 10.
5. ದೇವರಿಂದ ಬರುವ ಸಾಂತ್ವನದ ಕುರಿತಾಗಿ ಪೌಲನು ಏನು ಬರೆದನು?
5 ಹಾಗಿರುವಾಗ ತಕ್ಕದಾಗಿಯೇ, ಪೌಲನು ಬರೆದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ. ಯಾಕಂದರೆ ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯು ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ. ನಮಗೆ ಸಂಕಟಬರುತ್ತದೋ ಅದರಿಂದ ನಿಮಗೆ ಧೈರ್ಯವೂ ರಕ್ಷಣೆಯೂ ಉಂಟಾಗುತ್ತದೆ; ನಮಗೆ ಸಂಕಟ ಪರಿಹಾರವಾಗುತ್ತದೋ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ. ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರ ಆದರಣೆಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.”—2 ಕೊರಿಂಥ 1:3-7.
6. “ಸಾಂತ್ವನ” ಎಂದು ನಿರೂಪಿಸಲ್ಪಟ್ಟಿರುವ ಗ್ರೀಕ್ ಶಬ್ದದಿಂದ ಏನು ಸೂಚಿಸಲ್ಪಡುತ್ತದೆ?
6 ಎಂತಹ ಪ್ರೇರಕ ಮಾತುಗಳು! ಇಲ್ಲಿ “ಸಾಂತ್ವನ” ಎಂದು ನಿರೂಪಿಸಲ್ಪಟ್ಟಿರುವ ಗ್ರೀಕ್ ಶಬ್ದವು “ಒಬ್ಬನ ಪಕ್ಕಕ್ಕೆ ಕರೆಯುವಿಕೆ”ಗೆ ಸಂಬಂಧಿಸಿದೆ. ಆದುದರಿಂದ, “ಅದು ಒಬ್ಬ ವ್ಯಕ್ತಿಯು ಕಠಿನವಾದ ಪರೀಕೆಗ್ಷೆ ಒಳಪಟ್ಟಾಗ ಅವನನ್ನು ಪ್ರೋತ್ಸಾಹಿಸಲು ಅವನ ಬಳಿಯಲ್ಲಿ ನಿಂತಿರುವುದಾಗಿದೆ.” (ಎ ಲಿಂಗ್ವಿಸ್ಟಿಕ್ ಕೀ ಟು ದ ಗ್ರೀಕ್ ನ್ಯೂ ಟೆಸ್ಟಮೆಂಟ್) ಒಬ್ಬ ಬೈಬಲ್ ಸಂಬಂಧಿತ ವಿದ್ವಾಂಸನು ಬರೆದದ್ದು: “ಆ ಶಬ್ದವು . . . ಯಾವಾಗಲೂ ಶಮನಮಾಡುವ ಸಹಾನುಭೂತಿಗಿಂತ ಹೆಚ್ಚನ್ನು ಅರ್ಥೈಸುತ್ತದೆ. . . . ಧೈರ್ಯವನ್ನು ತರುವ ಸಾಂತ್ವನವು, ಜೀವಿತವು ಒಬ್ಬ ವ್ಯಕ್ತಿಗೆ ಮಾಡಸಾಧ್ಯವಿರುವದೆಲ್ಲವನ್ನು ನಿಭಾಯಿಸಲು ಶಕ್ತನನ್ನಾಗಿ ಮಾಡುವ ಸಾಂತ್ವನವು, ಕ್ರೈಸ್ತ ಸಾಂತ್ವನವಾಗಿದೆ.” ಸತ್ತವರ ಪುನರುತ್ಥಾನದ ಒಂದು ಸುದೃಢ ವಾಗ್ದಾನ ಮತ್ತು ನಿರೀಕ್ಷೆಯ ಮೇಲೆ ಆಧರಿತವಾದ ಸಾಂತ್ವನದ ಮಾತುಗಳನ್ನು ಸಹ ಇದು ಒಳಗೂಡುತ್ತದೆ.
ಯೇಸು ಮತ್ತು ಪೌಲ—ಕನಿಕರದ ಸಾಂತ್ವನಕಾರರು
7. ತನ್ನ ಕ್ರೈಸ್ತ ಸಹೋದರರಿಗೆ ಪೌಲನು ಹೇಗೆ ಸಾಂತ್ವನದಾಯಕನಾಗಿದ್ದನು?
7 ಸಾಂತ್ವನವನ್ನು ನೀಡುವುದರಲ್ಲಿ ಪೌಲನು ಎಂತಹ ಒಂದು ಒಳ್ಳೆಯ ಮಾದರಿಯಾಗಿದ್ದನು! ಥೆಸಲೊನೀಕದಲ್ಲಿದ್ದ ಸಹೋದರರಿಗೆ ಅವನು ಹೀಗೆ ಬರೆಯಶಕ್ತನಾಗಿದ್ದನು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು. ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿಹೇಳುತ್ತಾ ಧೈರ್ಯಪಡಿಸುತ್ತಾ” ಇದ್ದೆವು. ಪ್ರೀತಿಸುವ, ಪರಾಮರಿಸುವ ಹೆತ್ತವರಂತೆ, ನಾವೆಲ್ಲರೂ ಇತರರೊಂದಿಗೆ ಅವರ ಅಗತ್ಯದ ಸಮಯದಲ್ಲಿ ನಮ್ಮ ಹೃದಯೋಲ್ಲಾಸ ಮತ್ತು ತಿಳಿವಳಿಕೆಯನ್ನು ಹಂಚಿಕೊಳ್ಳಬಲ್ಲೆವು.—1 ಥೆಸಲೊನೀಕ 2:7, 8, 11.
8. ದುಃಖಿಸುವವರಿಗೆ ಯೇಸುವಿನ ಬೋಧನೆ ಯಾಕೆ ಒಂದು ಸಾಂತ್ವನವಾಗಿದೆ?
8 ಅಂತಹ ಆರೈಕೆ ಮತ್ತು ದಯೆಯನ್ನು ತೋರಿಸುವುದರಲ್ಲಿ, ಪೌಲನು ಕೇವಲ ತನ್ನ ಮಹಾನ್ ಆದರ್ಶಪ್ರಾಯನಾದ ಯೇಸುವನ್ನು ಅನುಕರಿಸುತ್ತಿದ್ದನು. ಮತ್ತಾಯ 11:28-30 ರಲ್ಲಿ ದಾಖಲಿಸಲ್ಪಟ್ಟಿರುವಂತೆ ಯೇಸು ಎಲ್ಲರಿಗೆ ನೀಡುವ ಕನಿಕರದ ಆಮಂತ್ರಣವನ್ನು ನೆನಪಿಸಿಕೊಳ್ಳಿರಿ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” ಹೌದು, ಯೇಸುವಿನ ಬೋಧನೆಯು ಚೈತನ್ಯಕರವಾಗಿದೆ ಯಾಕಂದರೆ ಅದು ನಿರೀಕ್ಷೆ ಮತ್ತು ಒಂದು ವಾಗ್ದಾನ—ಪುನರುತ್ಥಾನದ ವಾಗ್ದಾನ—ವನ್ನು ಕೊಡುತ್ತದೆ. ಉದಾಹರಣೆಗಾಗಿ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರನ್ನು ನಾವು ಅವರಲ್ಲಿ ಬಿಟ್ಟುಬರುವಾಗ, ನಾವು ಜನರಿಗೆ ಈ ನಿರೀಕ್ಷೆ ಮತ್ತು ವಾಗ್ದಾನವನ್ನು ನೀಡುತ್ತಿದ್ದೇವೆ. ನಾವು ಬಹು ಸಮಯದಿಂದ ದುಃಖಿಸುತ್ತಿರುವುದಾದರೂ, ಈ ನಿರೀಕ್ಷೆಯು ನಮ್ಮೆಲ್ಲರಿಗೆ ಸಹಾಯ ಮಾಡಬಲ್ಲದು.
ದುಃಖಿಸುವವರನ್ನು ಸಾಂತ್ವನಗೊಳಿಸುವ ವಿಧ
9. ದುಃಖಿಸುವವರೊಂದಿಗೆ ನಾವು ಯಾಕೆ ಅಸಹನೆಯಿಂದಿರಬಾರದು?
9 ಒಬ್ಬ ಪ್ರಿಯ ವ್ಯಕ್ತಿಯ ಮರಣದ ತತ್ಕ್ಷಣ ನಂತರದ ಒಂದು ನಿಗದಿತ ಸಮಾಯಾವಧಿಗೆ ದುಃಖವು ಸೀಮಿತವಾಗಿರುವುದಿಲ್ಲ. ಕೆಲವು ಜನರು, ವಿಶೇಷವಾಗಿ ಮಕ್ಕಳನ್ನು ಕಳೆದುಕೊಂಡಿರುವವರು, ತಮ್ಮ ದುಃಖದ ಹೊರೆಯನ್ನು ತಮ್ಮ ಜೀವಮಾನಕಾಲದಲ್ಲೆಲ್ಲಾ ಹೊರುತ್ತಾರೆ. ಸ್ಪೆಯ್ನ್ನಲ್ಲಿರುವ ಒಬ್ಬ ನಂಬಿಗಸ್ತ ದಂಪತಿಗಳು 1963 ರಲ್ಲಿ, ಮಿದುಳುಬಳ್ಳಿಯ ಪೊರೆಗಳ ಉರಿಯೂತದ [ಮೆನಿಂಜೈಟಿಸ್] ಕಾರಣದಿಂದಾಗಿ ತಮ್ಮ 11 ವರ್ಷ ಪ್ರಾಯದ ಮಗನನ್ನು ಕಳೆದುಕೊಂಡರು. ಈ ದಿನದ ವರೆಗೂ, ಅವರು ಪಕೀಟೊವಿನ ಕುರಿತಾಗಿ ಮಾತಾಡುವಾಗ ಇನ್ನೂ ಕಣ್ಣೀರು ಸುರಿಸುತ್ತಾರೆ. ವಾರ್ಷಿಕೋತ್ಸವಗಳು, ಛಾಯಾಚಿತ್ರಗಳು, ಸ್ಮರಣೀಯ ವಸ್ತುಗಳು, ದುಃಖಕರ ನೆನಪುಗಳನ್ನು ಎಬ್ಬಿಸಬಹುದು. ಈ ಕಾರಣದಿಂದ, ನಾವು ಎಂದೂ ಅಸಹನೆಯುಳ್ಳವರಾಗಿದ್ದು ಇತರರು ಮರಣನಷ್ಟದಿಂದ ಉಂಟಾದ ದುಃಖದಿಂದ ಇಷ್ಟರಲ್ಲಿ ಚೇತರಿಸಿಕೊಂಡಿರಬೇಕೆಂದು ನೆನಸಬಾರದು. ಒಬ್ಬ ವೈದ್ಯಕೀಯ ಅಧಿಕಾರಿಯು ಒಪ್ಪಿಕೊಳ್ಳುವುದು: “ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ಹಲವಾರು ವರ್ಷಗಳಷ್ಟು ದೀರ್ಘ ಸಮಯ ಉಳಿಯಬಲ್ಲವು.” ಆದುದರಿಂದ, ದೈಹಿಕ ಗಾಯದ ಕಲೆಗಳು ದೇಹದ ಮೇಲೆ ನಮ್ಮ ಜೀವನದುದ್ದಕ್ಕೂ ಉಳಿಯಸಾಧ್ಯವಿರುವಂತೆ, ಅನೇಕ ಭಾವನಾತ್ಮಕ ಗಾಯದ ಕಲೆಗಳು ಸಹ ಉಳಿಯಬಲ್ಲವು ಎಂಬುದನ್ನು ನೆನಪಿನಲ್ಲಿಡಿರಿ.
10. ದುಃಖಿಸುವವರಿಗೆ ಸಹಾಯ ಮಾಡಲು ನಾವೇನು ಮಾಡಬೇಕು?
10 ಕ್ರೈಸ್ತ ಸಭೆಯಲ್ಲಿ ದುಃಖಿಸುವವರನ್ನು ಸಾಂತ್ವನಗೊಳಿಸಲು ನಾವು ಮಾಡಬಹುದಾದಂತಹ ಕೆಲವು ವ್ಯಾವಹಾರಿಕ ಸಂಗತಿಗಳು ಯಾವುವು? “ನಾನು ಸಹಾಯ ಮಾಡಸಾಧ್ಯವಿರುವ ಯಾವದಾದರೂ ಸಂಗತಿ ಇದ್ದಲ್ಲಿ, ನನಗೆ ತಿಳಿಸಿರಿ” ಎಂದು ಸಾಂತ್ವನದ ಅಗತ್ಯದಲ್ಲಿರುವ ಒಬ್ಬ ಸಹೋದರ ಅಥವಾ ಸಹೋದರಿಗೆ ನಾವು ಪೂರ್ಣ ಯಥಾರ್ಥತೆಯೊಂದಿಗೆ ಹೇಳಬಹುದು. ಆದರೆ ವಿಯೋಗಾವಸ್ಥೆಯಲ್ಲಿರುವ ಒಬ್ಬ ವ್ಯಕ್ತಿಯು ನಮ್ಮನ್ನು ವಾಸ್ತವದಲ್ಲಿ ಕರೆದು “ನೀವು ನನಗೆ ಸಹಾಯ ಮಾಡಸಾಧ್ಯವಿರುವ ಒಂದು ಸಂಗತಿಯನ್ನು ಯೋಚಿಸಿದ್ದೇನೆ” ಎಂದು ಎಷ್ಟು ಸಾರಿ ಹೇಳಿರುತ್ತಾರೆ? ಸ್ಫುಟವಾಗಿ, ವಿಯೋಗಾವಸ್ಥೆಯಲ್ಲಿ ಇರುವವರನ್ನು ಸಾಂತ್ವನಗೊಳಿಸಬೇಕಾದರೆ, ನಾವು ತಕ್ಕದಾದ ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವ ಆವಶ್ಯಕತೆಯಿದೆ. ಹಾಗಾದರೆ, ಒಂದು ಉಪಯುಕ್ತ ವಿಧದಲ್ಲಿ ನಾವೇನನ್ನು ಮಾಡಬಲ್ಲೆವು? ಕೆಲವೊಂದು ವ್ಯಾವಹಾರಿಕ ಸಲಹೆಗಳು ಇಲ್ಲಿವೆ.
11. ನಮ್ಮ ಕಿವಿಗೊಡುವಿಕೆಯು ಇತರರಿಗೆ ಒಂದು ಸಾಂತ್ವನವಾಗಿರಸಾಧ್ಯವಿದೆ ಹೇಗೆ?
11 ಕಿವಿಗೊಡಿರಿ: ನೀವು ಮಾಡಬಹುದಾದ ಅತ್ಯಂತ ಸಹಾಯಕಾರಿ ಸಂಗತಿಗಳಲ್ಲಿ ಒಂದು, ಕಿವಿಗೊಡುವುದರ ಮೂಲಕ ವಿಯೋಗಾವಸ್ಥೆಯಲ್ಲಿರುವವನ ದುಃಖದಲ್ಲಿ ಪಾಲಿಗರಾಗುವುದೇ ಆಗಿದೆ. ನೀವು ಹೀಗೆ ಕೇಳಬಹುದು, “ನೀವು ಅದರ ಕುರಿತಾಗಿ ಮಾತಾಡಲು ಬಯಸುತ್ತೀರೋ?” ಆ ವ್ಯಕ್ತಿಯು ನಿರ್ಣಯಿಸಲಿ. ತನ್ನ ತಂದೆಯು ಸತ್ತ ಸಮಯವನ್ನು ಒಬ್ಬ ಕ್ರೈಸ್ತನು ಜ್ಞಾಪಿಸಿಕೊಳ್ಳುತ್ತಾನೆ: “ಏನು ಸಂಭವಿಸಿತು ಎಂದು ಇತರರು ಕೇಳಿದಾಗ ಮತ್ತು ನಂತರ ನಿಜವಾಗಿ ಕಿವಿಗೊಟ್ಟಾಗ ಅದು ನನಗೆ ನಿಜವಾಗಿಯೂ ಸಹಾಯ ಮಾಡಿತು.” ಯಾಕೋಬನು ಸಲಹೆ ಕೊಟ್ಟಂತೆ, ಕಿವಿಗೊಡಲು ಚುರುಕಾಗಿರ್ರಿ. (ಯಾಕೋಬ 1:19) ತಾಳ್ಮೆಯಿಂದ ಮತ್ತು ಸಹಾನುಭೂತಿಯಿಂದ ಕಿವಿಗೊಡಿರಿ. ರೋಮಾಪುರ 12:15 ರಲ್ಲಿ “ಅಳುವವರ ಸಂಗಡ ಅಳಿರಿ” ಎಂದು ಬೈಬಲು ಶಿಫಾರಸ್ಸು ಮಾಡುತ್ತದೆ. ಯೇಸು ಮಾರ್ಥ ಮತ್ತು ಮರಿಯಳೊಂದಿಗೆ ಅತನ್ತೆಂಬದನ್ನು ಜ್ಞಾಪಿಸಿಕೊಳ್ಳಿರಿ.—ಯೋಹಾನ 11:35.
12. ಶೋಕಿಸುವವರಿಗೆ ನಾವು ಯಾವ ವಿಧದ ಪುನರಾಶ್ವಾಸನೆಯನ್ನು ಕೊಡಬಲ್ಲೆವು?
12 ಪುನರಾಶ್ವಾಸನೆಯನ್ನು ಒದಗಿಸಿರಿ: ತಾನು ಪ್ರಾಯಶಃ ಹೆಚ್ಚನ್ನು ಮಾಡಬಹುದಿತ್ತೆಂದು ಯೋಚಿಸುತ್ತಾ, ವಿಯೋಗಾವಸ್ಥೆಯಲ್ಲಿರುವ ವ್ಯಕ್ತಿಯು ಮೊದಲಲ್ಲಿ ಅಪರಾಧಿ ಭಾವನೆಯನ್ನು ಹೊಂದಿರಬಹುದೆಂಬದನ್ನು ಮನಸ್ಸಿನಲ್ಲಿಡಿರಿ. ಸಾಧ್ಯವಾದದ್ದೆಲ್ಲವೂ (ಅಥವಾ ನಿಜ ಮತ್ತು ಸಕಾರಾತ್ಮಕವೆಂದು ನಿಮಗೆ ಏನು ತಿಳಿದಿದೆಯೋ ಅದು) ಮಾಡಲ್ಪಟ್ಟಿತ್ತೆಂದು ವ್ಯಕ್ತಿಗೆ ಆಶ್ವಾಸನೆ ಕೊಡಿರಿ. ಅವನಿಗೆ ಹೇಗೆ ಅನಿಸುತ್ತದೋ ಅದು ಅಸಾಮಾನ್ಯವಲ್ಲವೆಂದು ಅವನಿಗೆ ಪುನರಾಶ್ವಾಸನೆ ನೀಡಿರಿ. ತದ್ರೀತಿಯ ನಷ್ಟದಿಂದ ಯಶಸ್ವಿಯಾಗಿ ಚೇತರಿಸಿಕೊಂಡಿರುವ ನಿಮಗೆ ತಿಳಿದಿರುವ ಇತರರ ಕುರಿತಾಗಿ ಅವನಿಗೆ ಹೇಳಿರಿ. ಬೇರೆ ಮಾತುಗಳಲ್ಲಿ, ಸೂಕ್ಷ್ಮಸಂವೇದಿಗಳು ಹಾಗೂ ಸಹಾನುಭೂತಿಯುಳ್ಳವರಾಗಿರ್ರಿ. ನಮ್ಮ ದಯಾಪರ ಸಹಾಯವು ತುಂಬ ಅರ್ಥಗರ್ಭಿತವಾಗಿರಬಲ್ಲದು! ಸೊಲೊಮೋನನು ಬರೆದದ್ದು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.”—ಜ್ಞಾನೋಕ್ತಿ 16:24; 25:11; 1 ಥೆಸಲೊನೀಕ 5:11, 14.
13. ನಾವು ನಮ್ಮನ್ನೇ ಲಭ್ಯವಾಗಿಸುವಲ್ಲಿ, ಅದು ಹೇಗೆ ಸಹಾಯ ಮಾಡಬಲ್ಲದು?
13 ಲಭ್ಯವಾಗಿರ್ರಿ: ಅನೇಕ ಸ್ನೇಹಿತರು ಮತ್ತು ಸಂಬಂಧಿಕರು ಉಪಸ್ಥಿತರಿರುವಾಗ ಕೇವಲ ಮೊದಲ ಕೆಲವು ದಿನಗಳಿಗೆ ನಿಮ್ಮನ್ನು ಲಭ್ಯಗೊಳಿಸದಿರ್ರಿ ಬದಲಾಗಿ ಅವಶ್ಯವಿದ್ದಲ್ಲಿ ಅನೇಕ ತಿಂಗಳುಗಳ ಬಳಿಕ, ಇತರರು ತಮ್ಮ ದಿನನಿತ್ಯದ ನಿಯತಕ್ರಮಕ್ಕೆ ಹಿಂದಿರುಗಿರುವಾಗಲೂ ಲಭ್ಯಗೊಳಿಸಿಕೊಳ್ಳಿರಿ. ದುಃಖಿಸುವ ಅವಧಿಯು, ಒಬ್ಬೊಬ್ಬ ವ್ಯಕ್ತಿಯ ಮೇಲೆ ಹೊಂದಿಕೊಂಡು, ಅತಿಯಾಗಿ ವಿಭಿನ್ನವಾಗಿರಬಲ್ಲದು. ನಮ್ಮ ಕ್ರೈಸ್ತ ಆಸಕ್ತಿ ಮತ್ತು ಸಹಾನುಭೂತಿಯು ಅಗತ್ಯದ ಯಾವುದೇ ಸಮಯದಲ್ಲಿ ತುಂಬ ಅರ್ಥಗರ್ಭಿತವಾಗಿರಬಲ್ಲದು. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂದು ಬೈಬಲ್ ಹೇಳುತ್ತದೆ. ಹೀಗಿರುವದರಿಂದ “ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ” ಎಂಬ ಗಾದೆಯು ನಾವು ಆಚರಿಸಬೇಕಾದ ಒಂದು ಸ್ವತಸ್ಸಿದ್ಧ ಸತ್ಯವಾಗಿದೆ.—ಜ್ಞಾನೋಕ್ತಿ 18:24; ಹೋಲಿಸಿರಿ ಅ. ಕೃತ್ಯಗಳು 28:15.
14. ವಿಯೋಗಾವಸ್ಥೆಯಲ್ಲಿರುವವರನ್ನು ಸಂತೈಸಲು ನಾವು ಯಾವುದರ ಕುರಿತಾಗಿ ಮಾತಾಡಬಲ್ಲೆವು?
14 ತಕ್ಕದಾದ ಸಮಯದಲ್ಲಿ ನೀಡಲ್ಪಟ್ಟಾಗ ಮಹಾ ಸಹಾಯವಾಗಿರುವ ಇನ್ನೊಂದು ವಿಷಯವು, ಮೃತಿಹೊಂದಿರುವ ವ್ಯಕ್ತಿಯ ಒಳ್ಳೆಯ ಗುಣಗಳ ಕುರಿತಾಗಿ ಮಾತಾಡುವುದೆ ಆಗಿದೆ. ಆ ವ್ಯಕ್ತಿಯ ಕುರಿತಾಗಿ ನೀವು ನೆನಪಿಸಿಕೊಳ್ಳಬಹುದಾದ ಸಕಾರಾತ್ಮಕ ಪ್ರಸಂಗಗಳನ್ನು ಹಂಚಿಕೊಳ್ಳಿರಿ. ವ್ಯಕ್ತಿಯ ಹೆಸರನ್ನು ಬಳಸಲು ಹೆದರದಿರ್ರಿ. ಕಳೆದುಹೋದ ಪ್ರಿಯ ವ್ಯಕ್ತಿಯು ಎಂದೂ ಅಸ್ತಿತ್ವದಲ್ಲೇ ಇರಲಿಲ್ಲವೊ ಎಂಬಂತೆ ಅಥವಾ ಅನಾಮಧೇಯನಾಗಿದವ್ದನಂತೆ ವರ್ತಿಸಬೇಡಿರಿ. ಹಾರ್ವಡ್ ಮೆಡಿಕಲ್ ಸ್ಕೂಲ್ನಿಂದ ಒಂದು ಪ್ರಕಾಶನವು ಏನನ್ನು ತಿಳಿಸಿತೋ ಅದನ್ನು ತಿಳಿಯುವುದು ಸಾಂತ್ವನಕಾರಿಯಾಗಿದೆ: “ವಿಯೋಗಾವಸ್ಥೆಯಲ್ಲಿರುವವರು ಕಟ್ಟಕಡೆಗೆ ಸತ್ತ ವ್ಯಕ್ತಿಯ ಕುರಿತಾಗಿ ತಡೆಯಲಸಾಧ್ಯವಾದ ದುಃಖವಿಲ್ಲದೇ ಯೋಚಿಸಸಾಧ್ಯವಿರುವಾಗ ಒಂದು ರೀತಿಯ ಚೇತರಿಸುವಿಕೆಯು ಸಾಧಿಸಲ್ಪಡುತ್ತದೆ . . . ಹೊಸ ವಾಸ್ತವಿಕತೆಯು ಅಂಗೀಕರಿಸಲ್ಪಟ್ಟಂತೆ ಮತ್ತು ಜೀರ್ಣಿಸಲ್ಪಟ್ಟಂತೆ, ದುಃಖವು ಅಮೂಲ್ಯವಾದ ನೆನಪುಗಳೊಳಗೆ ಮರೆಯಾಗುತ್ತದೆ.” “ಅಮೂಲ್ಯವಾದ ನೆನಪುಗಳು”—ಒಬ್ಬ ಪ್ರಿಯ ವ್ಯಕ್ತಿಯೊಂದಿಗೆ ಕಳೆದಂತಹ ಆ ಅಮೂಲ್ಯ ಕ್ಷಣಗಳನ್ನು ನೆನಪಿಸುವುದು ಎಷ್ಟು ಸಾಂತ್ವನದಾಯಕ! ಕೆಲವು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡ ಒಬ್ಬ ಸಾಕ್ಷಿಯು ಹೇಳಿದ್ದು: “ಅವರು ಸತ್ಯವನ್ನು ಅಭ್ಯಾಸಿಸಲು ಆರಂಭಿಸಿದ ಸ್ವಲ್ಪ ಸಮಯದ ನಂತರ ಅಪ್ಪನೊಂದಿಗೆ ಬೈಬಲನ್ನು ಓದುತ್ತಿದ್ದದ್ದು ನನಗೆ ಒಂದು ವಿಶೇಷವಾದ ನೆನಪಾಗಿದೆ. ಮತ್ತು ಒಂದು ನದಿಯ ದಡದಲ್ಲಿ ಮಲಗಿಕೊಂಡು ನನ್ನ ಕೆಲವು ಸಮಸ್ಯೆಗಳನ್ನು ಚರ್ಚಿಸಿದ ವಿಶೇಷ ನೆನಪು ಸಹ. ನಾನು ಅವರನ್ನು ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಲ್ಲೊಮ್ಮೆ ಮಾತ್ರ ಕಾಣುತ್ತಿದ್ದೆ, ಆದುದರಿಂದ ಆ ಸಂದರ್ಭಗಳು ಅಮೂಲ್ಯವಾಗಿದ್ದವು.”
15. ಸಹಾಯ ಮಾಡಲು ಒಬ್ಬನು ಆರಂಭದ ಹೆಜ್ಜೆಯನ್ನು ಹೇಗೆ ತೆಗೆದುಕೊಳ್ಳಬಲ್ಲನು?
15 ಸೂಕ್ತವಾಗಿರುವಾಗ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ: ದುಃಖಿಸುವ ಕೆಲವು ಜನರು ಇತರರಿಗಿಂತ ಹೆಚ್ಚು ಉತ್ತಮವಾಗಿ ನಿಭಾಯಿಸಬಲ್ಲರು. ಆದುದರಿಂದ, ಪರಿಸ್ಥಿತಿಗಳ ಮೇಲೆ ಹೊಂದಿಕೊಂಡು, ಸಹಾಯ ಮಾಡಲು ವ್ಯಾವಹಾರಿಕ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. ದುಃಖಿಸುತ್ತಿದ್ದ ಒಬ್ಬ ಕ್ರೈಸ್ತ ಸಹೋದರಿಯು ನೆನಪಿಸಿಕೊಂಡದ್ದು: “ಅನೇಕರು ‘ನಾನು ಮಾಡಸಾಧ್ಯವಿರುವ ಏನಾದರೂ ಇರುವಲ್ಲಿ, ನನಗೆ ತಿಳಿಸಿರಿ’ ಎಂದು ಹೇಳಿದರು. ಆದರೆ ಒಬ್ಬ ಕ್ರೈಸ್ತ ಸಹೋದರಿ ಕೇಳಲಿಲ್ಲ. ಅವಳು ನೇರವಾಗಿ ಮಲಗುವ ಕೋಣೆಗೆ ಹೋಗಿ, ಮಂಚದಿಂದ ಮಾಸಿದ ಬಟ್ಟೆಗೆಳನ್ನು ಕಳಚಿಹಾಕಿ ಅವುಗಳನ್ನು ತೊಳೆದಳು. ಇನ್ನೊಬ್ಬಳು ಒಂದು ಬಕೆಟು, ನೀರು ಮತ್ತು ಶುಚಿಗೊಳಿಸುವ ಸಾಮಗ್ರಿಗಳನ್ನು ತೆಗೆದುಕೊಂಡು ನನ್ನ ಗಂಡನು ವಾಂತಿಮಾಡಿದ್ದ ಜಾಗದಲ್ಲಿ ಜಮಖಾನೆಯನ್ನು ಉಜ್ಜಿತೊಳೆದಳು. ಇವರು ನಿಜವಾದ ಸ್ನೇಹಿತರಾಗಿದ್ದರು, ಮತ್ತು ನಾನು ಅವರನ್ನು ಎಂದೂ ಮರೆಯಲಾರೆ.” ಸಹಾಯಕ್ಕಾಗಿ ಒಂದು ಸ್ಪಷ್ಟವಾಗಿದ ಅಗತ್ಯವಿರುವಲ್ಲಿ, ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ—ಪ್ರಾಯಶಃ ಒಂದು ಊಟವನ್ನು ತಯಾರಿಸುವ ಮೂಲಕ, ಶುಚಿಗೊಳಿಸುವದರೊಂದಿಗೆ ಸಹಾಯ ಮಾಡುವ ಮೂಲಕ, ಅಥವಾ ಸಹಾಯಕಾರಿ ಸೇವೆಗಳನ್ನು ನಡಿಸುವ ಮೂಲಕ. ವಿಯೋಗಾವಸ್ಥೆಯಲ್ಲಿರುವ ವ್ಯಕ್ತಿಯು ಏಕಾಂತವನ್ನು ಬಯಸುವಲ್ಲಿ ನಾವು ಒಳನುಗ್ಗುವವರಾಗಿ ಇರದಂತೆ ಜಾಗ್ರತರಾಗಿರಬೇಕೆಂಬದು ನಿಶ್ಚಯ. ಈ ಕಾರಣದಿಂದ ನಾವು ಪೌಲನ ಮಾತುಗಳನ್ನು ಅನ್ವಯಿಸಿಕೊಳ್ಳಲು ಯಥಾರ್ಥವಾಗಿ ಶ್ರಮಿಸಬೇಕು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” ದಯೆ, ತಾಳ್ಮೆ, ಮತ್ತು ಪ್ರೀತಿ ಎಂದೂ ನಿಷ್ಫಲವಾಗುವದಿಲ್ಲ.—ಕೊಲೊಸ್ಸೆ 3:12; 1 ಕೊರಿಂಥ 13:4-8.
16. ಒಂದು ಪತ್ರ ಅಥವಾ ಒಂದು ಕಾರ್ಡು ಸಾಂತ್ವನವನ್ನು ಒದಗಿಸಬಲ್ಲದು ಏಕೆ?
16 ಒಂದು ಪತ್ರ ಅಥವಾ ಒಂದು ಸಾಂತ್ವನದಾಯಕ ಕಾರ್ಡನ್ನು ಕಳುಹಿಸಿರಿ: ಒಂದು ಸಂತಾಪ ಪತ್ರ ಅಥವಾ ಸುಂದರವಾದೊಂದು ಸಹಾನುಭೂತಿಯ ಕಾರ್ಡಿನ ಮೌಲ್ಯವು ಹೆಚ್ಚಾಗಿ ಉಪೇಕ್ಷಿಸಲ್ಪಡುತ್ತದೆ. ಅದರ ಪ್ರಯೋಜನವೇನು? ಅದನ್ನು ಪುನಃ ಪುನಃ ಓದಸಾಧ್ಯವಿದೆ. ಅಂತಹ ಒಂದು ಪತ್ರವು ಉದ್ದವಾಗಿರುವ ಅಗತ್ಯವಿಲ್ಲ, ಆದರೆ ಅದು ನಿಮ್ಮ ಕನಿಕರವನ್ನು ತೋರಿಸಬೇಕು. ಅದು ಒಂದು ಆತ್ಮಿಕ ಸ್ವರೂಪವನ್ನೂ ಪ್ರತಿಬಿಂಬಿಸಬೇಕು, ಆದರೆ ಬೋಧೆ ಮಾಡುತ್ತಿರುವಂತಿರಬಾರದು. “ನಿಮ್ಮನ್ನು ಬೆಂಬಲಿಸಲು ನಾವು ಲಭ್ಯವಿದ್ದೇವೆ” ಎಂಬ ಮೂಲಭೂತ ಸಂದೇಶವು ತಾನೇ ಒಂದು ಸಂತೈಸುವಿಕೆಯಾಗಿರಸಾಧ್ಯವಿದೆ.
17. ಪ್ರಾರ್ಥನೆಯು ಹೇಗೆ ಸಾಂತ್ವನವನ್ನು ತರಬಲ್ಲದು?
17 ಅವರೊಂದಿಗೆ ಪ್ರಾರ್ಥಿಸಿರಿ: ವಿಯೋಗಾವಸ್ಥೆಯಲ್ಲಿರುವ ಜೊತೆಕ್ರೈಸ್ತರೊಂದಿಗೆ ಮತ್ತು ಅವರಿಗಾಗಿ ನಿಮ್ಮ ಪ್ರಾರ್ಥನೆಗಳ ಮೌಲ್ಯವನ್ನು ಕಡಿಮೆ ಅಂದಾಜು ಮಾಡಬೇಡಿರಿ. ಯಾಕೋಬ 5:16 ರಲ್ಲಿ ಬೈಬಲ್ ಹೇಳುವುದು: “ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ.” ಉದಾಹರಣೆಗಾಗಿ, ನಾವು ಅವರ ಪರವಾಗಿ ಪ್ರಾರ್ಥಿಸುತ್ತಿರುವದನ್ನು ದುಃಖಿಸುವವರು ಕೇಳುವಾಗ, ಅಪರಾಧ ಭಾವನೆಯಂತಹ ಒಂದು ನಕಾರಾತ್ಮಕ ಭಾವನೆಯನ್ನು ತೊಲಗಿಸುವಂತೆ ಅವರಿಗೆ ಸಹಾಯ ಮಾಡುತ್ತದೆ. ನಮ್ಮ ದುರ್ಬಲತೆಯ, ನೀತಿಗೆಡಿಸುವಿಕೆಯ ಕ್ಷಣಗಳಲ್ಲಿ, ತನ್ನ “ತಂತ್ರೋಪಾಯಗಳ” ಅಥವಾ “ಕುಟಿಲ ಕೃತ್ಯಗಳ” ಮೂಲಕ ನಮ್ಮನ್ನು ಕೆಡಿಸಲು ಸೈತಾನನು ಪ್ರಯತ್ನಿಸುತ್ತಾನೆ. ಪೌಲನು ತಿಳಿಸಿದಂತೆ, ಈ ಸಮಯದಲ್ಲಿ ನಮಗೆ ಸಾಂತ್ವನ ಮತ್ತು ಪ್ರಾರ್ಥನೆಯ ಬೆಂಬಲದ ಅಗತ್ಯವಿದೆ: ‘ಪ್ರತಿಯೊಂದು ವಿಧದ ಪ್ರಾರ್ಥನೆ ಮತ್ತು ಬೇಡಿಕೆಯಿಂದ ಪ್ರತಿಯೊಂದು ಸಂದರ್ಭದಲ್ಲಿ ಆತ್ಮದಲ್ಲಿ ಪ್ರಾರ್ಥಿಸಿರಿ. ಈ ಉದ್ದೇಶದೊಂದಿಗೆ ನಿಯತವಾಗಿ ಮತ್ತು ಪವಿತ್ರ ಜನರೆಲ್ಲರ ಪರವಾಗಿ ವಿಜ್ಞಾಪನೆಯೊಂದಿಗೆ ಎಚ್ಚರವಾಗಿರ್ರಿ.’—ಎಫೆಸ 6:11, 18, ಕಿಂಗ್ಡಮ್ ಇಂಟರ್ಲಿನಿಯರ್; ಯಾಕೋಬ 5:13-15ನ್ನು ಹೋಲಿಸಿರಿ.
ಹೋಗಲಾಡಿಸಬೇಕಾದ ಸಂಗತಿಗಳು
18, 19. ನಾವು ನಮ್ಮ ಸಂಭಾಷಣೆಗಳಲ್ಲಿ ಸಮಯೋಚಿತ ನಯವನ್ನು ಹೇಗೆ ತೋರಿಸಬಲ್ಲೆವು?
18 ಒಬ್ಬ ವ್ಯಕ್ತಿಯು ದುಃಖಿಸುತ್ತಿರುವಾಗ, ಹೇಳಬಾರದ ಅಥವಾ ಮಾಡಬಾರದ ಸಂಗತಿಗಳು ಸಹ ಇವೆ. ಜ್ಞಾನೋಕ್ತಿ 12:18 ಎಚ್ಚರಿಸುವುದು: “ಕತಿತ್ತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” ಕೆಲವೊಮ್ಮೆ, ನಮ್ಮ ಅರಿವಿಲ್ಲದೆಯೇ, ಸಮಯೋಚಿತ ನಯವನ್ನು ತೋರಿಸಲು ನಾವು ತಪ್ಪುತ್ತೇವೆ. ಉದಾಹರಣೆಗಾಗಿ, ನಾವು ಹೇಳಬಹುದು, “ನಿಮಗೆ ಹೇಗೆ ಅನಿಸುತ್ತದೆಂದು ನನಗೆ ತಿಳಿದಿದೆ.” ಆದರೆ ಅದು ನಿಜವಾಗಿಯೂ ಸತ್ಯವಾಗಿದೆಯೋ? ನೀವು ನಿಖರವಾಗಿ ಅದೇ ರೀತಿಯ ನಷ್ಟವನ್ನು ಅನುಭವಿಸಿದ್ದೀರೋ? ಮತ್ತೂ ಜನರು ಭಿನ್ನ ರೀತಿಗಳಲ್ಲಿ ಪ್ರತಿವರ್ತಿಸುತ್ತಾರೆ. ನಿಮ್ಮ ಪ್ರತಿವರ್ತನೆಗಳು ದುಃಖಿಸುತ್ತಿರುವ ವ್ಯಕ್ತಿಯವುಗಳಿಗೆ ತದ್ರೂಪದ್ದಾಗಿರಲಿಕ್ಕಿಲ್ಲ. “ಕೆಲವು ಸಮಯದ ಹಿಂದೆ ನನ್ನ . . . ಸತ್ತಾಗ ನಾನು ಸಹ ತದ್ರೀತಿಯ ಒಂದು ನಷ್ಟವನ್ನು ಅನುಭವಿಸಿದೆ, ಆದದರಿಂದ ನಿಮಗಾಗಿ ನನ್ನಲ್ಲಿ ಅನುಕಂಪವಿದೆ” ಎಂದು ಹೇಳುವುದು ಹೆಚ್ಚು ಸೂಕ್ಷ್ಮವೇದಿಯಾಗಿರಬಹುದು.
19 ಮೃತಿಹೊಂದಿದವರು ಪುನರುತ್ಥಾನಗೊಳಿಸಲ್ಪಡುವರೋ ಇಲ್ಲವೋ ಎಂಬದರ ಮೇಲೆ ಹೇಳಿಕೆಯನ್ನು ಮಾಡುವದನ್ನು ಹೋಗಲಾಡಿಸುವುದು ಸಹ ಸೂಕ್ಷ್ಮಸಂವೇದನವನ್ನು ತೋರಿಸುತ್ತದೆ. ಸತ್ತ ಅವಿಶ್ವಾಸಿ ಸಂಗಾತಿಯ ಭವಿಷ್ಯದ ಸಾಧ್ಯತೆಗಳ ಕುರಿತಾಗಿ ಮಾಡಲ್ಪಟ್ಟ ತೀರ್ಮಾನಾತ್ಮಕ ಹೇಳಿಕೆಗಳಿಂದ ಕೆಲವು ಸಹೋದರಸಹೋದರಿಯರು ಆಳವಾಗಿ ನೋಯಿಸಲ್ಪಟ್ಟಿದ್ದಾರೆ. ಯಾರು ಪುನರುತ್ಥಾನಗೊಳಿಸಲ್ಪಡುವರು ಮತ್ತು ಯಾರು ಮಾಡಲ್ಪಡುವುದಿಲ್ಲವೆಂಬದಕ್ಕೆ ನಾವು ನ್ಯಾಯಧೀಶರಾಗಿರುವದಿಲ್ಲ. ಹೃದಯವನ್ನು ನೋಡುವ ಯೆಹೋವನು, ನಮ್ಮಲ್ಲಿ ಹೆಚ್ಚಿನವರು ಇರುವದಕ್ಕಿಂತ ಇನ್ನೂ ಹೆಚ್ಚು ಕರುಣಾಮಯಿಯಾಗಿರುವನೆಂಬ ಕಾರಣದಿಂದ ನಾವು ನೆಮ್ಮದಿಯಿಂದಿರಸಾಧ್ಯವಿದೆ.—ಕೀರ್ತನೆ 86:15; ಲೂಕ 6:35-37.
ಸಾಂತ್ವನ ನೀಡುವ ವಚನಗಳು
20, 21. ವಿಯೋಗಾವಸ್ಥೆಯಲ್ಲಿ ಇರುವವರನ್ನು ಸಂತೈಸಬಲ್ಲ ಕೆಲವು ವಚನಗಳು ಯಾವುವು?
20 ಯೋಗ್ಯವಾದ ಸಮಯದಲ್ಲಿ ನೀಡಲ್ಪಟ್ಟಾಗ, ಒತ್ತಾಸೆ ಕೊಡುವ ಅತಿ ಮಹತ್ತಾದ ಮೂಲಗಳಲ್ಲಿ ಒಂದು, ಸತ್ತವರಿಗಾಗಿರುವ ಯೆಹೋವನ ವಾಗ್ದಾನಗಳ ಒಂದು ಪರಿಗಣನೆಯಾಗಿದೆ. ವಿಯೋಗಾವಸ್ಥೆಯಲ್ಲಿರುವ ವ್ಯಕ್ತಿಯು ಈಗಾಗಲೇ ಒಬ್ಬ ಸಾಕ್ಷಿಯಾಗಿರಲಿ ಅಥವಾ ಶುಶ್ರೂಷೆಯಲ್ಲಿ ನಾವು ಸಂಧಿಸುವ ಒಬ್ಬ ವ್ಯಕ್ತಿಯಾಗಿರಲಿ, ಈ ಬೈಬಲ್ ಸಂಬಂಧಿತ ವಿಚಾರಗಳು ಪ್ರಯೋಜನಕಾರಿಯಾಗಿರುವುವು. ಈ ವಚನಗಳಲ್ಲಿ ಕೆಲವು ಯಾವುವು? ಯೆಹೋವನು ಸರ್ವ ಸಾಂತ್ವನದ ದೇವರಾಗಿದ್ದಾನೆಂದು ನಮಗೆ ತಿಳಿದಿದೆ, ಏಕೆಂದರೆ ಅವನು ಹೀಗಂದಿದ್ದಾನೆ: “ನಾನೇ, ನಾನೇ ನಿನ್ನನ್ನು ಸಂತೈಸುವವನಾಗಿ” ದ್ದೇನೆ. ಅವನು ಇದನ್ನೂ ಹೇಳಿದನು: “ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.”—ಯೆಶಾಯ 51:12; 66:13.
21 ಕೀರ್ತನೆಗಾರನು ಬರೆದದ್ದು: “ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ; ಆಪತ್ಕಾಲದಲ್ಲಿ ಇದೇ ನನಗೆ ಆದರಣೆ (ಸಾಂತ್ವನ NW). ಯೆಹೋವನೇ, ನಿನ್ನ ಪುರಾತನ ವಿಧಿಗಳನ್ನು ನೆನಪು ಮಾಡಿಕೊಂಡು ನನ್ನನ್ನು ಸಂತೈಸಿಕೊಂಡಿದ್ದೇನೆ. ನಿನ್ನ ಸೇವಕನಿಗೆ ನುಡಿದ ಪ್ರಕಾರ ನನ್ನ ಸಮಾಧಾನ (ಸಾಂತ್ವನ, NW)ಕ್ಕೋಸ್ಕರ ಕೃಪೆಯನ್ನು ದಯಪಾಲಿಸು.” ಆ ವಚನಗಳಲ್ಲಿ “ಸಾಂತ್ವನ” ಎಂಬ ಶಬ್ದವು ಪದೇ ಪದೇ ಉಪಯೋಗಿಸಲ್ಪಟ್ಟಿದೆಯೆಂಬದನ್ನು ಗಮನಿಸಿರಿ. ಹೌದು, ನಮ್ಮ ಸಂಕಟದ ಸಮಯದಲ್ಲಿ ಯೆಹೋವನ ವಾಕ್ಯದ ಕಡೆಗೆ ತಿರುಗುವ ಮೂಲಕ, ನಮಗಾಗಿ ಮತ್ತು ಇತರರಿಗಾಗಿ ನಿಜ ಸಾಂತ್ವನವನ್ನು ನಾವು ಕಂಡುಕೊಳ್ಳಬಲ್ಲೆವು. ಇದು, ಸಹೋದರರ ಪ್ರೀತಿ ಮತ್ತು ಕನಿಕರದೊಂದಿಗೆ, ನಷ್ಟದಿಂದ ಉಂಟಾದ ವೇದನೆಗಳನ್ನು ಯಶಸ್ವಿಯಾಗಿ ತಾಳಿಕೊಳ್ಳಲು ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಜೀವಿತಗಳನ್ನು ಆನಂದಕರ ಚಟುವಟಿಕೆಯೊಂದಿಗೆ ಪುನಃ ತುಂಬಿಸಿಕೊಳ್ಳಲು ಸಹಾಯ ಮಾಡಬಲ್ಲದು.—ಕೀರ್ತನೆ 119:50, 52, 76.
22. ನಮ್ಮ ಮುಂದೆ ಯಾವ ಪ್ರತೀಕ್ಷೆಯಿದೆ?
22 ಇತರರಿಗೆ ಅವರ ಕಷ್ಟದೆಸೆಯಲ್ಲಿ ಸಹಾಯ ಮಾಡುವುದರಲ್ಲಿ ಕಾರ್ಯಮಗ್ನರಾಗಿರುವದರಿಂದ ನಾವು ನಮ್ಮ ದುಃಖವನ್ನು ಸ್ವಲ್ಪಮಟ್ಟಿಗೆ ಜಯಿಸಬಲ್ಲೆವು. ಸಾಂತ್ವನದ ಅಗತ್ಯದಲ್ಲಿರುವ ಇತರರ ಕಡೆಗೆ ನಾವು ನಮ್ಮ ಗಮನವನ್ನು ತಿರುಗಿಸಿದಂತೆ, ಒಂದು ಆತ್ಮಿಕ ರೀತಿಯಲ್ಲಿ ಕೊಡುವ ನಿಜ ಸಂತೋಷವು ಸಹ ನಮಗೆ ಸಿಗುತ್ತದೆ. (ಅ. ಕೃತ್ಯಗಳು 20:35) ಎಲ್ಲಾ ಪೂರ್ವಕಾಲದ ಜನಾಂಗಗಳ ಜನರು, ಒಂದನ್ನೊಂದು ಹಿಂಬಾಲಿಸುವ ಸಂತತಿಗಳು, ಸತ್ತವರೊಳಗಿಂದ ತಮ್ಮ ಸತ್ತ ಪ್ರಿಯ ಜನರನ್ನು ಒಂದು ಹೊಸ ಲೋಕದಲ್ಲಿ ಸ್ವಾಗತಿಸಲಿರುವ ಪುನರುತ್ಥಾನದ ದಿನದ ದರ್ಶನದಲ್ಲಿ ನಾವು ಅವರೊಂದಿಗೆ ಪಾಲಿಗರಾಗೋಣ. ಎಂತಹ ಒಂದು ಪ್ರತೀಕ್ಷೆ! ಯೆಹೋವನು ನಿಜವಾಗಿಯೂ “ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ” ದೇವರಾಗಿದ್ದಾನೆಂದು ನಾವು ಆಗ ಜ್ಞಾಪಿಸಿಕೊಳ್ಳುವಾಗ ಎಷ್ಟು ಆನಂದಾಶ್ರುಗಳು ಸುರಿಸಲ್ಪಡಲಿರುವವು!—2 ಕೊರಿಂಥ 7:6.
ನೀವು ನೆನಪಿಸುತ್ತೀರೋ?
◻ ಯೆಹೋವನು “ಸಕಲವಿಧವಾಗಿ ಸಂತೈಸುವ ದೇವ” ರಾಗಿದ್ದಾನೆ ಹೇಗೆ?
◻ ಯೇಸು ಮತ್ತು ಪೌಲನು ದುಃಖಿಸುತ್ತಿದ್ದವರನ್ನು ಹೇಗೆ ಸಂತೈಸಿದರು?
◻ ದುಃಖಿಸುವವರನ್ನು ಸಾಂತ್ವನಿಸಲು ನಾವು ಮಾಡಸಾಧ್ಯವಿರುವ ಕೆಲವು ಸಂಗತಿಗಳು ಯಾವುವು?
◻ ವಿಯೋಗಾವಸ್ಥೆಯಲ್ಲಿ ಇರುವವರೊಂದಿಗೆ ವ್ಯವಹರಿಸುವಾಗ ನಾವೇನನ್ನು ಹೋಗಲಾಡಿಸಬೇಕು?
◻ ಮರಣ ನಷ್ಟದ ಸಮಯಗಳಲ್ಲಿ ಸಾಂತ್ವನಕ್ಕಾಗಿರುವ ನಿಮ್ಮ ಮೆಚ್ಚಿನ ವಚನಗಳು ಯಾವುವು?
[ಪುಟ 15 ರಲ್ಲಿರುವ ಚಿತ್ರ]
ದುಃಖಿಸುವವರಿಗೆ ಸಹಾಯ ಮಾಡಲು ಸಮಯೋಚಿತ ನಯದಿಂದ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ