ನೀವೊಬ್ಬ ವಿಶ್ವಾಸಾರ್ಹ ಮನೆವಾರ್ತೆಯವರು!
“ನೀವು ನಿಮಗೆ ಸೇರಿದವರಲ್ಲ.”—1 ಕೊರಿಂ. 6:19.
ನಿಮ್ಮ ಉತ್ತರವೇನು?
ಪ್ರಾಚೀನ ಸಮಯದಲ್ಲಿದ್ದ ಮನೆವಾರ್ತೆಯವರಿಗೆ ಯಾವ ಜವಾಬ್ದಾರಿಗಳಿದ್ದವು?
ದೇವರ ಮನೆವಾರ್ತೆಯವರಾಗಿರುವ ಎಲ್ಲರಿಗೆ ಯಾವ ಜವಾಬ್ದಾರಿಗಳಿವೆ?
ದೇವರ ಮನೆವಾರ್ತೆಯವರಾಗಿ ಇರುವುದರ ಬಗ್ಗೆ ನಮಗೆ ಹೇಗನಿಸಬೇಕು?
1. ಆಳು ಎಂದಾಕ್ಷಣ ಜನರು ಏನು ನೆನಸುತ್ತಾರೆ?
ಯಾರೊಬ್ಬರೂ ಅಡಿಯಾಳಾಗಿ ಕೆಲಸ ಮಾಡಲು ಬಯಸುವುದಿಲ್ಲ.” ಗ್ರೀಕ್ ಬರಹಗಾರನು 2,500 ವರ್ಷಗಳ ಹಿಂದೆ ಬರೆದ ಈ ಮಾತನ್ನು ಇಂದು ಬಹುತೇಕ ಜನರು ಒಪ್ಪುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಳು ಎಂದಾಕ್ಷಣ ಮನಸ್ಸಿಗೆ ಬರುವುದು, ಬೇರೆಯವರ ಕೈಕೆಳಗೆ ಚಾಕರಿ ಮಾಡುವವರು ಅಥವಾ ಬಲವಂತವಾಗಿ ಗುಲಾಮಗಿರಿಗೆ ಒಳಗಾದವರು ಎಂದು. ಇಂಥವರ ಪರಿಶ್ರಮ, ತ್ಯಾಗ ಸ್ವತಃ ಅವರಿಗೆ ಪ್ರಯೋಜನ ತರುವುದಿಲ್ಲ. ಅವರನ್ನು ದುಡಿಸಿಕೊಳ್ಳುವವರಿಗೇ ಹೆಚ್ಚಿನ ಲಾಭ.
2, 3. (1) ಯೇಸುವಿನ ಸಿದ್ಧಮನಸ್ಸಿನ ಆಳುಗಳು ಅಥವಾ ಸೇವಕರಿಗೆ ಯಾವ ಸ್ಥಾನವಿದೆ? (2) ಮನೆವಾರ್ತೆಯವರ ಕುರಿತು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
2 ತನ್ನ ಶಿಷ್ಯರು ದೀನ ಸೇವಕರು ಅಥವಾ ಆಳುಗಳು ಆಗಿರುವರೆಂದು ಯೇಸು ಸೂಚಿಸಿದನು. ಆದರೆ ವಿಶೇಷತೆ ಏನೆಂದರೆ ನಿಜ ಕ್ರೈಸ್ತರಾಗಿರುವ ಈ ಆಳುಗಳನ್ನು ಕೀಳಾಗಿ ಕಾಣಲಾಗುವುದಿಲ್ಲ ಅಥವಾ ದುರುಪಚರಿಸಲಾಗುವುದಿಲ್ಲ. ಬದಲಿಗೆ ಗೌರವಯುತ ಸ್ಥಾನ ಅವರಿಗಿದೆ, ವಿಶ್ವಾಸಾರ್ಹರಾಗಿದ್ದಾರೆ. ಉದಾಹರಣೆಗೆ, ಯೇಸು ತಾನು ಸಾಯುವ ಸ್ವಲ್ಪ ಸಮಯದ ಮುನ್ನ ಒಬ್ಬ ‘ಆಳಿನ’ ಕುರಿತು ಏನೆಂದನೆಂದು ಗಮನಿಸಿ. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆ ಆಳಿಗೆ’ ಕೆಲಸಗಳನ್ನು ನೇಮಿಸುವೆನು ಅಂದನು.—ಮತ್ತಾ. 24:45-47.
3 ಇದೇ ವಿಷಯದ ಕುರಿತ ಲೂಕನ ವೃತ್ತಾಂತದಲ್ಲಿ ಆಳು ಎಂಬ ಪದಕ್ಕೆ ಬದಲಾಗಿ “ಮನೆವಾರ್ತೆಯವನು” ಎಂಬ ಪದವನ್ನು ಬಳಸಿರುವುದು ಗಮನಾರ್ಹ. (ಲೂಕ 12:42-44 ಓದಿ.) ಇಂದಿರುವ ಅನೇಕ ನಂಬಿಗಸ್ತ ಕ್ರೈಸ್ತರು ಯೇಸು ತಿಳಿಸಿದ ಆ ನಂಬಿಗಸ್ತ ಮನೆವಾರ್ತೆ ವರ್ಗದ ಸದಸ್ಯರಲ್ಲ. ಆದರೂ ಯೆಹೋವನ ಸೇವಕರೆಲ್ಲರು ಮನೆವಾರ್ತೆಯವರು ಎಂದು ಬೈಬಲ್ ತಿಳಿಸುತ್ತದೆ. ಅವರಿಗೆ ಯಾವ ಜವಾಬ್ದಾರಿಗಳಿವೆ? ಆ ಜವಾಬ್ದಾರಿಗಳನ್ನು ಹೇಗೆ ವೀಕ್ಷಿಸಬೇಕು? ಉತ್ತರಕ್ಕಾಗಿ ಪ್ರಾಚೀನ ಕಾಲದಲ್ಲಿದ್ದ ಮನೆವಾರ್ತೆಯವರ ಪಾತ್ರ ಏನಾಗಿತ್ತೆಂಬುದನ್ನು ಪರಿಶೀಲಿಸೋಣ.
ಮನೆವಾರ್ತೆಯವರ ಜವಾಬ್ದಾರಿಗಳು
4, 5. ಪ್ರಾಚೀನ ಕಾಲದ ಮನೆವಾರ್ತೆಯವರಿಗೆ ಯಾವ ಜವಾಬ್ದಾರಿಗಳಿದ್ದವು? ಉದಾಹರಣೆಗಳನ್ನು ಕೊಡಿ.
4 ಪ್ರಾಚೀನ ಕಾಲದಲ್ಲಿ ಮನೆವಾರ್ತೆಯವನು ಯಜಮಾನನಿಗೆ ನಂಬಿಗಸ್ತ ಆಳಾಗಿರುತ್ತಿದ್ದನು. ಯಜಮಾನನ ಮನೆ ಅಥವಾ ವ್ಯಾಪಾರ-ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವನಿಗೆ ವಹಿಸಲಾಗುತ್ತಿತ್ತು. ಸಾಮಾನ್ಯವಾಗಿ ಮನೆವಾರ್ತೆಯವನು ಯಜಮಾನನ ಆಸ್ತಿಪಾಸ್ತಿ ಹಾಗೂ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದನು ಮಾತ್ರವಲ್ಲ ಯಜಮಾನನ ಇತರ ಸೇವಕರ ಮೇಲೂ ತಕ್ಕಮಟ್ಟಿಗಿನ ಅಧಿಕಾರವಿತ್ತು. ಇದನ್ನು ನಾವು ಎಲೀಯೆಜರನ ವಿಷಯದಲ್ಲಿ ಕಾಣಬಹುದು. ಅಬ್ರಹಾಮನು ತನ್ನ ಬೃಹತ್ ಪ್ರಮಾಣದ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲೀಯೆಜರನಿಗೆ ವಹಿಸಿದ್ದನು. ಮೆಸಪಟೇಮ್ಯಕ್ಕೆ ಹೋಗಿ ತನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ಹುಡುಕುವ ಜವಾಬ್ದಾರಿಯನ್ನು ಕೂಡ ಅಬ್ರಹಾಮ ಪ್ರಾಯಶಃ ಎಲೀಯೆಜರನಿಗೆ ವಹಿಸಿದನು. ಖಂಡಿತವಾಗಿಯೂ ಇದೊಂದು ದೊಡ್ಡ ಜವಾಬ್ದಾರಿಯಾಗಿತ್ತು!—ಆದಿ. 13:2; 15:2; 24:2-4.
5 ಅಬ್ರಹಾಮನ ಮರಿಮಗನಾದ ಯೋಸೇಫನು ಪೋಟೀಫರನ ಮನೆಯನ್ನು ನೋಡಿಕೊಳ್ಳುತ್ತಿದ್ದನು. (ಆದಿ. 39:1, 2, 4) ಸಮಯಾನಂತರ ಸ್ವತಃ ಯೋಸೇಫನಿಗೆ ಒಬ್ಬ ‘ಮನೆವಾರ್ತೆಯವನಿದ್ದನು.’ ಯೋಸೇಫನ ಹತ್ತು ಮಂದಿ ಅಣ್ಣಂದಿರಿಗೆ ಅತಿಥಿಸತ್ಕಾರದ ವ್ಯವಸ್ಥೆ ಮಾಡಿದವನು ಈ ಮನೆವಾರ್ತೆಯವನೇ. ಬೆಳ್ಳಿಯ ಪಾನಪಾತ್ರೆ ಮೂಲಕ ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸಲು ಮಾಡಿದ ಉಪಾಯದಲ್ಲೂ ಇವನು ಮಹತ್ವದ ಪಾತ್ರ ವಹಿಸಿದನು. ಇದು ಮನೆವಾರ್ತೆಯವನ ಮೇಲೆ ಯಜಮಾನನಿಗೆ ಎಷ್ಟೊಂದು ಭರವಸೆಯಿತ್ತೆಂದು ತೋರಿಸುತ್ತದೆ.—ಆದಿ. 43:19-25; 44:1-12.
6. ಕ್ರೈಸ್ತ ಮೇಲ್ವಿಚಾರಕರಿಗೆ ಯಾವ ಜವಾಬ್ದಾರಿಗಳಿವೆ?
6 ಅನೇಕ ಶತಮಾನಗಳ ನಂತರ ಅಪೊಸ್ತಲ ಪೌಲನು ಕ್ರೈಸ್ತ ಮೇಲ್ವಿಚಾರಕರು ‘ದೇವರ ಮನೆವಾರ್ತೆಯವರಾಗಿದ್ದಾರೆ’ ಎಂದು ಬರೆದನು. (ತೀತ 1:7) “ದೇವರ ಮಂದೆ”ಯನ್ನು ಪರಿಪಾಲಿಸುವ ಆ ಮೇಲ್ವಿಚಾರಕರು ಸಭೆಯಲ್ಲಿ ಮುಂದಾಳತ್ವ ವಹಿಸುತ್ತಾ ಬೇಕಾದ ನಿರ್ದೇಶನಗಳನ್ನು ಕೊಡುತ್ತಾರೆ. (1 ಪೇತ್ರ 5:1, 2) ದೇವರ ಸಂಘಟನೆಯಲ್ಲಿ ಮೇಲ್ವಿಚಾರಕರಿಗೆ ಭಿನ್ನಭಿನ್ನ ಜವಾಬ್ದಾರಿಗಳಿವೆ. ಉದಾಹರಣೆಗೆ, ಹೆಚ್ಚಿನ ಕ್ರೈಸ್ತ ಹಿರಿಯರಿಗೆ ಒಂದು ಸಭೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಸಂಚರಣ ಮೇಲ್ವಿಚಾರಕರು ಅನೇಕ ಸಭೆಗಳ ಉಸ್ತುವಾರಿ ವಹಿಸುತ್ತಾರೆ. ದೇಶದೆಲ್ಲೆಡೆ ಇರುವ ಸಭೆಗಳ ಕಾಳಜಿ ವಹಿಸುವವರು ಬ್ರಾಂಚ್ ಕಮಿಟಿಯ ಸದಸ್ಯರು. ಇವರೆಲ್ಲರೂ ತಮ್ಮ ತಮ್ಮ ನೇಮಿತ ಕೆಲಸಗಳನ್ನು ನಂಬಿಗಸ್ತಿಕೆಯಿಂದ ಮಾಡುವಂತೆ ಅಪೇಕ್ಷಿಸಲಾಗುತ್ತದೆ. ಏಕೆಂದರೆ ಎಲ್ಲರೂ ದೇವರಿಗೆ ‘ಲೆಕ್ಕ ಒಪ್ಪಿಸಬೇಕು.’—ಇಬ್ರಿ. 13:17.
7. ನಿಜ ಕ್ರೈಸ್ತರೆಲ್ಲರು ಮನೆವಾರ್ತೆಯವರಾಗಿದ್ದಾರೆಂದು ಹೇಗೆ ಹೇಳಸಾಧ್ಯವಿದೆ?
7 ಮೇಲ್ವಿಚಾರಕರಲ್ಲದ ಅನೇಕಾನೇಕ ನಿಷ್ಠಾವಂತ ಕ್ರೈಸ್ತರ ಕುರಿತೇನು? ಅಪೊಸ್ತಲ ಪೇತ್ರನು ಎಲ್ಲಾ ಕ್ರೈಸ್ತರನ್ನು ಉದ್ದೇಶಿಸುತ್ತ ತನ್ನ ಪತ್ರದಲ್ಲಿ ತಿಳಿಸಿದ್ದು: “ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿರುವ ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆ ಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸಲಿ.” (1 ಪೇತ್ರ 1:1; 4:10) ದೇವರು ತನ್ನ ಅಪಾತ್ರ ದಯೆಯಿಂದ ನಮಗೆಲ್ಲರಿಗೂ ಒಂದೊಂದು ರೀತಿಯ ವರ, ಸ್ವತ್ತು, ಸಾಮರ್ಥ್ಯ ಅಥವಾ ಪ್ರತಿಭೆಗಳನ್ನು ದಯಪಾಲಿಸಿದ್ದಾನೆ. ನಾವು ಇವುಗಳನ್ನು ನಮ್ಮ ಜೊತೆ ಸಹೋದರ ಸಹೋದರಿಯರಿಗೆ ಸಹಾಯಮಾಡಲು ಉಪಯೋಗಿಸಬೇಕು. ಹೀಗೆ ಯೆಹೋವನಿಗೆ ಸೇವೆಸಲ್ಲಿಸುವ ಪ್ರತಿಯೊಬ್ಬರು ಮನೆವಾರ್ತೆಯವರಾಗಿದ್ದೇವೆ. ಮನೆವಾರ್ತೆಯವರಾದ ನಮ್ಮ ಮೇಲೆ ಯೆಹೋವನು ಭರವಸೆಯಿಡುತ್ತಾನೆ, ನಮ್ಮನ್ನು ಗೌರವಿಸುತ್ತಾನೆ, ಆತನು ನಮಗೆ ಕೊಟ್ಟಿರುವುದನ್ನೆಲ್ಲ ಒಳ್ಳೇದಕ್ಕಾಗಿ ಬಳಸುವಂತೆ ಅಪೇಕ್ಷಿಸುತ್ತಾನೆ.
ನಾವು ದೇವರಿಗೆ ಸೇರಿದವರು
8. ನಾವು ನೆನಪಿನಲ್ಲಿಡಬೇಕಾದ ಒಂದು ಪ್ರಾಮುಖ್ಯ ವಿಷಯ ಯಾವುದು?
8 ಮನೆವಾರ್ತೆಯವರಾದ ನಾವು ಮನಸ್ಸಿನಲ್ಲಿಡಬೇಕಾದ ಮೂರು ಅಂಶಗಳನ್ನು ಈಗ ಪರಿಗಣಿಸೋಣ. ಮೊದಲನೇದಾಗಿ, ನಾವೆಲ್ಲರೂ ದೇವರಿಗೆ ಸೇರಿದವರು, ಆದ್ದರಿಂದ ಆತನನ್ನು ಮೆಚ್ಚಿಸಬೇಕು. “ನೀವು ನಿಮಗೆ ಸೇರಿದವರಲ್ಲ; ನೀವು ಕ್ರಯಕ್ಕೆ” ಅಂದರೆ ಕ್ರಿಸ್ತನ ಯಜ್ಞಾರ್ಪಿತ ರಕ್ತದಿಂದ “ಕೊಳ್ಳಲ್ಪಟ್ಟವರಾಗಿದ್ದೀರಿ” ಎಂದನು ಪೌಲ. (1 ಕೊರಿಂ. 6:19, 20) ನಾವು ಯೆಹೋವನಿಗೆ ಸೇರಿದವರಾದ್ದರಿಂದ ಆತನ ಆಜ್ಞೆಗಳಿಗೆ ವಿಧೇಯರಾಗಲೇಬೇಕು. ಆದರೆ ಆತನ ಆಜ್ಞೆಗಳು ಭಾರವಾದವುಗಳಲ್ಲ. (ರೋಮ. 14:8; 1 ಯೋಹಾ. 5:3) ನಾವು ಕ್ರಿಸ್ತನಿಗೆ ಕೂಡ ದಾಸರು. ಪ್ರಾಚೀನ ಸಮಯದಲ್ಲಿದ್ದ ಮನೆವಾರ್ತೆಯವರಿಗಿದ್ದಂತೆ ನಮಗೂ ಹೆಚ್ಚು ಸ್ವಾತಂತ್ರ್ಯವಿದೆ. ಆದರೆ ಅದಕ್ಕೊಂದು ಎಲ್ಲೆ ಇದೆ. ನಮಗೆ ಕೊಡಲಾಗಿರುವ ನಿರ್ದೇಶನಗಳಿಗೆ ಅನುಸಾರ ನಾವು ನಡೆಯಬೇಕು. ನಮಗೆ ಯಾವ ರೀತಿಯ ಸೇವಾಸುಯೋಗಗಳೇ ಇರಲಿ ನಾವೆಲ್ಲರೂ ದೇವರಿಗೆ ಮತ್ತು ಕ್ರಿಸ್ತನಿಗೆ ಸೇವಕರೇ.
9. ಯಜಮಾನನು ತನ್ನ ಆಳಿನಿಂದ ಏನನ್ನು ನಿರೀಕ್ಷಿಸುತ್ತಾನೆಂದು ಯೇಸು ವಿವರಿಸಿದ್ದು ಹೇಗೆ?
9 ಯಜಮಾನನು ತನ್ನ ಆಳಿನಿಂದ ಏನನ್ನು ನಿರೀಕ್ಷಿಸುತ್ತಾನೆ ಎನ್ನುವುದನ್ನು ತಿಳಿಯಲು ಯೇಸು ಹೇಳಿದ ದೃಷ್ಟಾಂತವೊಂದು ನಮಗೆ ಸಹಾಯಮಾಡುತ್ತದೆ. ಒಬ್ಬ ಆಳು ದಿನವಿಡೀ ಕೆಲಸ ಮಾಡಿ ಯಜಮಾನನ ಮನೆಗೆ ಬಂದಾಗ ಯಜಮಾನನು ಏನನ್ನುವನು? “ ‘ಕೂಡಲೆ ಇಲ್ಲಿಗೆ ಬಂದು ಊಟಕ್ಕೆ ಕುಳಿತುಕೊ’ ಎಂದು ಹೇಳುವುದುಂಟೆ?” ಇಲ್ಲ. ಬದಲಿಗೆ ಅವನು “ನನ್ನ ಸಂಧ್ಯಾ ಭೋಜನಕ್ಕಾಗಿ ಏನನ್ನಾದರೂ ಸಿದ್ಧಪಡಿಸು ಮತ್ತು ನಾನು ಊಟಮಾಡಿ ಕುಡಿಯುವ ತನಕ ಮೇಲ್ಬಟ್ಟೆ ಧರಿಸಿಕೊಂಡು ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು, ಕುಡಿ” ಎಂದು ಹೇಳುವನು. ಈ ದೃಷ್ಟಾಂತದ ಮೂಲಕ ಯೇಸು ತನ್ನ ಶಿಷ್ಯರಿಗೆ ಯಾವ ಪಾಠವನ್ನು ಕಲಿಸುತ್ತಿದ್ದನು? ಅವನು ಹೇಳಿದ್ದು: “ಅದರಂತೆಯೇ, ನಿಮಗೆ ನೇಮಿಸಲ್ಪಟ್ಟಿರುವ ಎಲ್ಲವನ್ನೂ ಮಾಡಿ ಮುಗಿಸಿದ ಬಳಿಕ, ‘ನಾವು ಕೆಲಸಕ್ಕೆ ಬಾರದ ಆಳುಗಳು. ನಾವು ಮಾಡಬೇಕಾಗಿದ್ದುದನ್ನೇ ಮಾಡಿದ್ದೇವೆ’ ಎಂದು ಹೇಳಿರಿ.”—ಲೂಕ 17:7-10.
10. ನಮ್ಮ ಸೇವೆಯನ್ನು ಯೆಹೋವನು ಗಣ್ಯಮಾಡುತ್ತಾನೆಂದು ಯಾವುದು ತೋರಿಸುತ್ತದೆ?
10 ಹಾಗಾದರೆ ನಾವು ಮಾಡುವ ಕೆಲಸಗಳನ್ನು ಯೆಹೋವನು ಗಣ್ಯಮಾಡುವುದಿಲ್ಲವೇ? ಹಾಗಲ್ಲ. ಆತನು ಖಂಡಿತ ಗಣ್ಯಮಾಡುತ್ತಾನೆ. ಬೈಬಲ್ ನಮಗೆ ಕೊಡುವ ಆಶ್ವಾಸನೆ ಏನೆಂದರೆ “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.” (ಇಬ್ರಿ. 6:10) ನಮ್ಮಿಂದ ಮಾಡಲಿಕ್ಕೆ ಆಗುವುದನ್ನೇ ಯೆಹೋವನು ಕೇಳಿಕೊಳ್ಳುತ್ತಾನೆ. ಮಾತ್ರವಲ್ಲ ಆತನು ನಮಗೇನನ್ನು ಮಾಡಲು ಹೇಳುತ್ತಾನೋ ಅದು ನಮ್ಮ ಒಳಿತಿಗಾಗಿಯೇ ಆಗಿದೆ. ಅದೆಂದೂ ನಮ್ಮ ಶಕ್ತಿಗೆ ಮೀರಿದ್ದಾಗಿರುವುದಿಲ್ಲ. ಹಾಗಿದ್ದರೂ ಯೇಸು ತಿಳಿಸಿದ ದೃಷ್ಟಾಂತಕ್ಕನುಸಾರ ಒಬ್ಬ ಆಳು ತನ್ನ ಇಚ್ಛೆಗಳಿಗೆ ಆದ್ಯತೆ ಕೊಡಲಿಕ್ಕಾಗದು. ಅವನು ತನ್ನ ಯಜಮಾನನ ಇಚ್ಛೆಗಳನ್ನೇ ಮೊದಲು ಮಾಡಬೇಕು. ಅದೇ ರೀತಿ ನಾವು ದೇವರಿಗೆ ನಮ್ಮನ್ನು ಸಮರ್ಪಿಸಿಕೊಂಡ ಮೇಲೆ ಆತನ ಚಿತ್ತವನ್ನು ಮಾಡುವುದಕ್ಕೆ ಜೀವನದಲ್ಲಿ ಆದ್ಯತೆ ಕೊಡಬೇಕು. ಇದನ್ನು ನೀವು ಒಪ್ಪುವುದಿಲ್ಲವೇ?
ಯೆಹೋವನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳು
11, 12. (1) ಮನೆವಾರ್ತೆಯವರಾದ ನಾವು ಯಾವ ಗುಣವನ್ನು ತೋರಿಸಬೇಕು? (2) ಏನನ್ನು ತೊರೆಯಬೇಕು?
11 ಮನಸ್ಸಿನಲ್ಲಿಡಬೇಕಾದ ಎರಡನೇ ಅಂಶ: ಮನೆವಾರ್ತೆಯವರಾದ ನಾವೆಲ್ಲರೂ ಒಂದೇ ರೀತಿಯ ಮಟ್ಟಗಳನ್ನು ಅನುಸರಿಸುತ್ತೇವೆ. ಕ್ರೈಸ್ತ ಸಭೆಯಲ್ಲಿ ಕೆಲವು ಜವಾಬ್ದಾರಿಗಳನ್ನು ಕೆಲವರಿಗೆ ಮಾತ್ರ ವಹಿಸಲಾಗಿರುತ್ತದೆ ನಿಜ. ಆದರೆ ಹೆಚ್ಚಾಗಿ ನಮ್ಮೆಲ್ಲರಿಗಿರುವ ಜವಾಬ್ದಾರಿಗಳು ಒಂದೇ ರೀತಿಯದ್ದು. ಉದಾಹರಣೆಗೆ, ಕ್ರಿಸ್ತನ ಹಿಂಬಾಲಕರೂ ಯೆಹೋವನ ಸಾಕ್ಷಿಗಳೂ ಆಗಿರುವ ನಮಗೆ ಒಬ್ಬರನ್ನೊಬ್ಬರು ಪ್ರೀತಿಸುವ ಆಜ್ಞೆಯಿದೆ. ಪ್ರೀತಿ ನಿಜ ಕ್ರೈಸ್ತರ ಗುರುತೆಂದು ಯೇಸು ಹೇಳಿದನು. (ಯೋಹಾ. 13:35) ನಮ್ಮ ಪ್ರೀತಿ ನಮ್ಮ ಸಹೋದರ ಬಳಗದಿಂದಾಚೆಗೂ ಪಸರಿಸುತ್ತದೆ. ಹೊರಗಿನವರಿಗೂ ಪ್ರೀತಿ ತೋರಿಸಲು ಸಾಧ್ಯವಾದುದ್ದೆಲ್ಲವನ್ನೂ ಮಾಡಬೇಕು. ಇಂಥ ಪ್ರೀತಿಯನ್ನು ನಾವೆಲ್ಲರೂ ತೋರಿಸಸಾಧ್ಯವಿದೆ. ತೋರಿಸಬೇಕು ಸಹ.
12 ನಾವು ಸುನಡತೆಯುಳ್ಳವರಾಗಿರಬೇಕು ಎಂದು ಸಹ ದೇವರು ಬಯಸುತ್ತಾನೆ. ಹಾಗಾಗಿ ದೇವರ ವಾಕ್ಯವು ಖಂಡಿಸುವ ನಡತೆಯನ್ನು, ಜೀವನಶೈಲಿಯನ್ನು ತೊರೆಯಬೇಕು. “ಜಾರರಾಗಲಿ ವಿಗ್ರಹಾರಾಧಕರಾಗಲಿ ವ್ಯಭಿಚಾರಿಗಳಾಗಲಿ ಅಸ್ವಾಭಾವಿಕ ಲೈಂಗಿಕ ಉದ್ದೇಶಕ್ಕಾಗಿರುವ ಪುರುಷರಾಗಲಿ ಪುರುಷಗಾಮಿಗಳಾಗಲಿ ಕಳ್ಳರಾಗಲಿ ಲೋಭಿಗಳಾಗಲಿ ಕುಡುಕರಾಗಲಿ ದೂಷಕರಾಗಲಿ ಸುಲಿಗೆಮಾಡುವವರಾಗಲಿ ಯಾರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.” (1 ಕೊರಿಂ. 6:9, 10) ದೇವರ ನೀತಿಯ ಮಟ್ಟಗಳಿಗೆ ಅನುಸಾರ ಜೀವಿಸಲು ನಾವು ಪ್ರಯತ್ನ ಹಾಕಬೇಕು ನಿಜ. ಅಂಥ ಪ್ರಯತ್ನ ಸಾರ್ಥಕವಾಗಿದೆ. ನಮಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಒಳ್ಳೇ ಆರೋಗ್ಯಕ್ಕೆ ನೆರವಾಗುವ ಜೀವನಶೈಲಿ ನಮ್ಮದಾಗುತ್ತದೆ. ಇತರರೊಂದಿಗೆ ಸ್ನೇಹಸಂಬಂಧ ಇರುತ್ತದೆ. ಮಾತ್ರವಲ್ಲ ದೇವರ ಮೆಚ್ಚಿಕೆಗೂ ಪಾತ್ರರಾಗುತ್ತೇವೆ.—ಯೆಶಾಯ 48:17, 18 ಓದಿ.
13, 14. (1) ಎಲ್ಲ ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ? (2) ಆ ಜವಾಬ್ದಾರಿಯೆಡೆಗೆ ನಮಗೆ ಯಾವ ಮನೋಭಾವವಿರಬೇಕು?
13 ಪ್ರಾಚೀನ ಸಮಯದಲ್ಲಿ ಮನೆವಾರ್ತೆಯವನು ಕೆಲಸಗಳನ್ನು ಸಹ ಮಾಡಬೇಕಿತ್ತೆಂದು ನೆನಪಿಸಿಕೊಳ್ಳಿ. ಅದೇ ರೀತಿ ನಮಗೆ ಕೂಡ ಕೆಲಸ ಮಾಡಲಿಕ್ಕಿದೆ. ದೇವರು ನಮಗೆ ಒಂದು ಅಮೂಲ್ಯ ಉಡುಗೊರೆಯನ್ನು ಕೊಟ್ಟಿದ್ದಾನೆ. ಸತ್ಯದ ಜ್ಞಾನವೇ ಅದು. ಆ ಜ್ಞಾನವನ್ನು ನಾವು ಇತರರಿಗೂ ಹಂಚಬೇಕೆನ್ನುವುದು ಆತನ ಅಪೇಕ್ಷೆ. (ಮತ್ತಾ. 28:19, 20) “ಮನುಷ್ಯನು ನಮ್ಮನ್ನು ಕ್ರಿಸ್ತನ ಕೈಕೆಳಗಿನವರೆಂದೂ ದೇವರ ಪವಿತ್ರ ರಹಸ್ಯಗಳ ಮನೆವಾರ್ತೆಗಾರರೆಂದೂ ಎಣಿಸಲಿ” ಎಂದು ಪೌಲ ಬರೆದನು. (1 ಕೊರಿಂ. 4:1) ಹೌದು, ಮನೆವಾರ್ತೆಗಾರರು ‘ಪವಿತ್ರ ರಹಸ್ಯಗಳು’ ಅಥವಾ ಬೈಬಲ್ ಸತ್ಯಗಳು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕೆಂದು ಮತ್ತು ಯಜಮಾನನಾದ ಯೇಸು ಕ್ರಿಸ್ತನ ಮಾರ್ಗದರ್ಶನಕ್ಕನುಸಾರ ನಂಬಿಗಸ್ತಿಕೆಯಿಂದ ಅದನ್ನು ಇತರರಿಗೆ ತಿಳಿಸಬೇಕೆಂದು ಪೌಲನು ಅರಿತಿದ್ದನು.—1 ಕೊರಿಂ. 9:16.
14 ಸತ್ಯವನ್ನು ಕಲಿಸುವುದು ನಾವು ಪರರಿಗೆ ಪ್ರೀತಿ ತೋರಿಸುವ ಒಂದು ವಿಧವಾಗಿದೆ. ಆದರೆ ಕ್ಷೇತ್ರ ಸೇವೆಯಲ್ಲಿ ಒಬ್ಬರು ಮಾಡಿದಷ್ಟನ್ನು ಇನ್ನೊಬ್ಬರು ಮಾಡಲು ಆಗಲಿಕ್ಕಿಲ್ಲ. ಏಕೆಂದರೆ ಎಲ್ಲರ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಇದನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ಆದರೂ ನಾವು ನಮ್ಮ ಕೈಲಾಗುವುದನ್ನೆಲ್ಲ ಮಾಡಬೇಕು. ಹೀಗೆ ದೇವರ ಮೇಲೆ ಮತ್ತು ಜನರ ಮೇಲೆ ನಿಸ್ವಾರ್ಥ ಪ್ರೀತಿಯಿದೆ ಎಂದು ನಾವು ತೋರಿಸುತ್ತೇವೆ.
ನಂಬಿಗಸ್ತರಾಗಿರುವುದರ ಮಹತ್ವ
15-17. (1) ಮನೆವಾರ್ತೆಯವನು ನಂಬಿಗಸ್ತನಾಗಿರುವುದು ಏಕೆ ತುಂಬ ಪ್ರಾಮುಖ್ಯ? (2) ಅಪನಂಬಿಗಸ್ತಿಕೆಯ ಪರಿಣಾಮವನ್ನು ಯೇಸು ದೃಷ್ಟಾಂತದ ಮೂಲಕ ಹೇಗೆ ತಿಳಿಸಿದನು?
15 ನಾವು ಮನಸ್ಸಿನಲ್ಲಿಡಬೇಕಾದ ಮೂರನೇ ಅಂಶವು ಹಿಂದಿನ ಎರಡು ಅಂಶಗಳಿಗೆ ನಿಕಟವಾಗಿ ಸಂಬಂಧಿಸಿದೆ. ಅದೇನೆಂದರೆ ನಾವು ನಂಬಿಗಸ್ತರೂ ಭರವಸಾರ್ಹರೂ ಆಗಿರಬೇಕು. ಒಬ್ಬ ಮನೆವಾರ್ತೆಯವನಿಗೆ ಅನೇಕ ಸದ್ಗುಣಗಳು, ಸಾಮರ್ಥ್ಯಗಳು ಇರಬಹುದು. ಆದರೆ ಅವನು ಬೇಜವಾಬ್ದಾರನೂ ಯಜಮಾನನಿಗೆ ಅಪನಂಬಿಗಸ್ತನೂ ಆಗಿದ್ದಲ್ಲಿ ಅವನಲ್ಲಿರುವ ಆ ಸದ್ಗುಣ, ಸಾಮರ್ಥ್ಯವೆಲ್ಲ ವ್ಯರ್ಥವೇ. ಉತ್ತಮ ಕೆಲಸಗಾರನೂ ಯಜಮಾನನ ಮೆಚ್ಚುಗೆಗೆ ಪಾತ್ರನೂ ಆಗಿರಬೇಕಾದರೆ ಅವನು ನಂಬಿಗಸ್ತನಾಗಿರಬೇಕು. ಪೌಲ ಬರೆದಂತೆ “ಮನೆವಾರ್ತೆಗಾರರಲ್ಲಿ ಅವರು ನಂಬಿಗಸ್ತರಾಗಿ ಕಂಡುಬರುವುದನ್ನೇ ಅಪೇಕ್ಷಿಸಲಾಗುತ್ತದೆ.”—1 ಕೊರಿಂ. 4:2.
16 ನಂಬಿಗಸ್ತರಾಗಿದ್ದರೆ ಆಶೀರ್ವಾದಗಳು ನಮಗೆ ಸಿಗುವುದು ಖಂಡಿತ. ನಂಬಿಗಸ್ತರಾಗಿರದಿದ್ದರೆ ನಮಗೇ ನಷ್ಟ. ತಲಾಂತುಗಳ ದೃಷ್ಟಾಂತದಲ್ಲಿ ಯೇಸು ಈ ಕುರಿತು ತಿಳಿಸಿದ್ದಾನೆ. ಕೊಟ್ಟ ಹಣದಲ್ಲಿ ನಂಬಿಗಸ್ತಿಕೆಯಿಂದ ‘ವ್ಯಾಪಾರಮಾಡಿದ’ ಆಳುಗಳನ್ನು ಯಜಮಾನ ಶ್ಲಾಘಿಸಿದನು. ಅವರಿಗೆ ಹೇರಳ ಆಶೀರ್ವಾದಗಳೂ ಸಿಕ್ಕಿದವು. ಆದರೆ ಬೇಜವಾಬ್ದಾರ ಆಳನ್ನು “ಕೆಟ್ಟವನೂ ಮೈಗಳ್ಳನೂ” ‘ಕೆಲಸಕ್ಕೆ ಬಾರದವನೂ’ ಆಗಿದ್ದಾನೆಂದು ತೀರ್ಮಾನಿಸಲಾಯಿತು. ಮಾತ್ರವಲ್ಲ ಕೊಟ್ಟಿದ್ದ ತಲಾಂತನ್ನು ಹಿಂತೆಗೆದುಕೊಂಡು ಅವನನ್ನು ಹೊರಹಾಕಲಾಯಿತು.—ಮತ್ತಾಯ 25:14-18, 23, 26, 28-30 ಓದಿ.
17 ನಂಬಿಗಸ್ತರಾಗಿ ಇರದಿದ್ದರೆ ಏನಾಗುತ್ತದೆಂದು ಯೇಸು ಇನ್ನೊಂದು ಸಂದರ್ಭದಲ್ಲೂ ಹೇಳಿದನು. ಅವನು ಹೇಳಿದ್ದು: “ಒಬ್ಬ ಮನುಷ್ಯನು ಐಶ್ವರ್ಯವಂತನಾಗಿದ್ದು ಅವನಿಗೆ ಒಬ್ಬ ಮನೆವಾರ್ತೆಯವನಿದ್ದನು. ಇವನು ಯಜಮಾನನ ವಸ್ತುಗಳನ್ನು ಹಾಳುಮಾಡುತ್ತಿದ್ದಾನೆ ಎಂಬ ದೂರು ಯಜಮಾನನಿಗೆ ಹೋಯಿತು. ಆದುದರಿಂದ ಯಜಮಾನನು ಆ ಮನೆವಾರ್ತೆಯವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುತ್ತಿರುವುದು? ನೀನು ಮನೆವಾರ್ತೆಯ ಲೆಕ್ಕವನ್ನು ಒಪ್ಪಿಸು; ಇನ್ನು ಮುಂದೆ ನೀನು ಮನೆಯನ್ನು ನೋಡಿಕೊಳ್ಳಲಾಗುವುದಿಲ್ಲ’ ಎಂದನು.” (ಲೂಕ 16:1, 2) ಆ ಮನೆವಾರ್ತೆಯವನು ಯಜಮಾನನ ಆಸ್ತಿಯನ್ನು ಹಾಳುಮಾಡುತ್ತಿದ್ದದರಿಂದ ಅವನನ್ನು ಕೆಲಸದಿಂದ ವಜಾಮಾಡಲಾಯಿತು. ಇದರಿಂದ ನಾವು ಪಾಠ ಕಲಿಯಬೇಕು. ದೇವರು ನಮ್ಮಿಂದ ಬಯಸುವುದನ್ನು ಯಾವಾಗಲೂ ನಂಬಿಗಸ್ತಿಕೆಯಿಂದ ಮಾಡಬೇಕು.
ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸರಿಯೇ?
18. ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬಾರದು ಏಕೆ?
18 ‘ನಾನು ನಿಜಕ್ಕೂ ಎಂಥ ಮನೆವಾರ್ತೆಯವನಾಗಿದ್ದೇನೆ?’ ಎಂದು ನಮ್ಮನ್ನೇ ಕೇಳಿಕೊಳ್ಳೋಣ. ಒಂದುವೇಳೆ ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಾದರೆ ಅದು ಸಮಸ್ಯೆಗೆ ಕಾರಣವಾಗುವುದು. ಬೈಬಲ್ ನಮಗೆ ಕೊಡುವ ಬುದ್ಧಿವಾದ ಹೀಗಿದೆ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದೇ ಹೊರತು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ.” (ಗಲಾ. 6:4) ನಾವು ಏನು ಮಾಡುತ್ತಿದ್ದೇವೋ ಅದನ್ನು ಇತರರು ಮಾಡುತ್ತಿರುವುದಕ್ಕೆ ಹೋಲಿಸದೆ ನಮ್ಮ ಕೆಲಸವನ್ನು ಸಾಧ್ಯವಿರುವಷ್ಟು ಉತ್ತಮವಾಗಿ ಮಾಡುವುದರ ಕಡೆಗೆ ಮತ್ತು ಪ್ರಗತಿ ಹೊಂದುವುದರ ಕಡೆಗೆ ಗಮನ ನೆಡೋಣ. ಹೀಗೆ ಮಾಡುವಾಗ ‘ಓಹ್. . . ನಾನು ಜಾಸ್ತಿ ಮಾಡಿದ್ದೇನೆ’ ಎಂದು ಅಹಂಕಾರಪಡುವುದಿಲ್ಲ ಇಲ್ಲವೆ ‘ಅಯ್ಯೋ ನನ್ನಿಂದ ಅಷ್ಟು ಮಾಡಲಿಕ್ಕಾಗಲಿಲ್ಲವಲ್ಲಾ’ ಎಂದು ನಿರುತ್ಸಾಹ ಕೂಡ ಹೊಂದುವುದಿಲ್ಲ. ನಮ್ಮ ಪರಿಸ್ಥಿತಿಗಳು ಬದಲಾಗುತ್ತವೆ ಎನ್ನುವುದನ್ನು ನೆನಪಿಡಬೇಕು. ಉದಾಹರಣೆಗೆ ಅನಾರೋಗ್ಯ, ವೃದ್ಧಾಪ್ಯ ಅಥವಾ ಇತರ ಜವಾಬ್ದಾರಿಗಳಿಂದ ಮೊದಲಿನಷ್ಟು ಸೇವೆ ಮಾಡಲು ಆಗಲಿಕ್ಕಿಲ್ಲ ಇಲ್ಲವೆ ಪರಿಸ್ಥಿತಿಗಳು ಉತ್ತಮಗೊಂಡ ಕಾರಣ ನಮ್ಮಿಂದ ಸೇವೆಯನ್ನು ಹೆಚ್ಚಿಸಲು ಆಗಬಹುದು. ಹೆಚ್ಚಿಸಲು ಸಾಧ್ಯವಿದ್ದಲ್ಲಿ ನೀವು ಯಾಕೆ ಅದರ ಕಡೆ ಗಮನಕೊಡಬಾರದು?
19. ಯಾವುದಾದರೊಂದು ಸೇವಾಸುಯೋಗ ಸಿಗದಿದ್ದಾಗ ನಾವೇಕೆ ಮನಗುಂದಬಾರದು?
19 ಬೇರೆಯವರಿಗಿರುವಂಥ ಸೇವಾಸುಯೋಗಗಳು ನಮಗೆ ಸಿಗಲಿಲ್ಲವಲ್ಲಾ ಎಂದು ನಾವು ಹಲುಬಬಾರದು. ಉದಾಹರಣೆಗೆ ಸಹೋದರರೊಬ್ಬನಿಗೆ ಸಭಾ ಹಿರಿಯನಾಗಿ ಸೇವೆಸಲ್ಲಿಸಲು ಇಲ್ಲವೆ ಸಮ್ಮೇಳನ, ಅಧಿವೇಶನಗಳಲ್ಲಿ ಭಾಷಣ ಕೊಡಲು ಆಶೆಯಿರಬಹುದು. ಅಂಥ ಸುಯೋಗಗಳಿಗೆ ಅರ್ಹರಾಗಲು ಪ್ರಯತ್ನಿಸುವುದು ತಪ್ಪಲ್ಲ. ಆದರೆ ನಿರೀಕ್ಷಿಸಿದಾಗ ಅದು ಸಿಗಲಿಲ್ಲ ಎಂದ ಮಾತ್ರಕ್ಕೆ ನಿರಾಶರಾಗಬಾರದು. ಕೆಲವು ಸುಯೋಗಗಳು ನಿರೀಕ್ಷಿಸಿದ್ದಕ್ಕಿಂತ ಎಷ್ಟೋ ಸಮಯದ ನಂತರ ಸಿಗಬಹುದು. ಕಾರಣ ಏನೆಂದು ನಮಗೆ ಕೂಡಲೆ ಗೊತ್ತಾಗದಿರಬಹುದು. ಮೋಶೆಗೆ ಕೂಡ ಹಾಗೆ ಆಯಿತಲ್ಲವೆ? ಈಜಿಪ್ಟ್ನಲ್ಲಿದ್ದ ಮೋಶೆ ತಾನು ಇನ್ನೇನು ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿ ಕರೆದುಕೊಂಡು ಹೋಗುತ್ತೇನೆಂದು ನೆನಸಿದನು. ಆದರೆ ಅದಕ್ಕಾಗಿ ಅವನು 40 ವರ್ಷ ಕಾಯಬೇಕಾಯಿತು. ಮೊಂಡರಾದ ದಂಗೆಕೋರ ಜನರನ್ನು ಮುನ್ನಡೆಸಲು ಬೇಕಾದ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಅವನಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿತು.—ಅ. ಕಾ. 7:22-25, 30-34.
20. ಯೋನಾತಾನನಿಂದ ಯಾವ ಪಾಠವನ್ನು ಕಲಿಯಬಲ್ಲೆವು?
20 ಕೆಲವೊಮ್ಮೆ ನಾವು ಇಷ್ಟಪಡುವ ಸೇವಾಸುಯೋಗ ನಮಗೆ ಯಾವತ್ತೂ ಸಿಗಲಿಕ್ಕಿಲ್ಲ. ಯೋನಾತಾನನ ವಿಷಯದಲ್ಲಿ ಇದು ಸತ್ಯವಾಗಿತ್ತು. ಸೌಲನ ಮಗನಾಗಿದ್ದ ಅವನು ತಂದೆಯ ನಂತರ ಇಸ್ರಾಯೇಲ್ನ ರಾಜನಾಗಲಿಕ್ಕಿದ್ದನು. ಆದರೆ ಯೋನಾತಾನನಿಗಿಂತ ತುಂಬ ಚಿಕ್ಕವನಾಗಿದ್ದ ದಾವೀದನನ್ನು ದೇವರು ಆರಿಸಿಕೊಂಡನು. ಇದಕ್ಕೆ ಯೋನಾತಾನ ಹೇಗೆ ಪ್ರತಿಕ್ರಿಯಿಸಿದನು? ದೇವರ ನಿರ್ಣಯವನ್ನು ಒಪ್ಪಿದನು. ಮಾತ್ರವಲ್ಲ ತನ್ನ ಜೀವವನ್ನು ಪಣಕ್ಕೊಡ್ಡಿ ದಾವೀದನನ್ನು ಬೆಂಬಲಿಸಿದನು. “ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು” ಎಂದನು ಯೋನಾತಾನ. (1 ಸಮು. 23:17) ನಮಗಿರುವ ಪಾಠ? ತನಗೆ ಸಿಗಬೇಕಾಗಿದ್ದ ಸ್ಥಾನ ಇನ್ನೊಬ್ಬನಿಗೆ ಹೋದದ್ದಕ್ಕೆ ಯೋನಾತಾನ ದೂರಲಿಲ್ಲ. ತನ್ನ ತಂದೆಯಂತೆ ದಾವೀದನ ಮೇಲೆ ಉರಿಗೊಳ್ಳಲೂ ಇಲ್ಲ. ಅದೇ ರೀತಿ ನಾವೆಲ್ಲರೂ ಇತರರಿಗಿರುವ ನೇಮಕಗಳನ್ನು ನೋಡಿ ಅಸೂಯೆ ಪಡದೆ ನಮಗಿರುವ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದರ ಮೇಲೆ ಗಮನವಿಡೋಣ. ಹೊಸ ಲೋಕದಲ್ಲಿ ಯೆಹೋವನು ತನ್ನ ಸೇವಕರೆಲ್ಲರ ಯೋಗ್ಯ ಆಶೆಗಳನ್ನು ಖಂಡಿತ ಈಡೇರಿಸುವನು.
21. ದೇವರ ಮನೆವಾರ್ತೆಯವರಾಗಿ ಇರುವುದರ ಬಗ್ಗೆ ನಮಗೆ ಹೇಗನಿಸಬೇಕು?
21 ದೇವರ ಮನೆವಾರ್ತೆಗಾರರಾದ ನಾವು ದಬ್ಬಾಳಿಕೆಯ ಕೆಳಗೆ ಕೆಲಸ ಮಾಡುವ ಆಳುಗಳಂತಿಲ್ಲ, ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿಯೂ ನಮ್ಮದಲ್ಲ. ಇದಕ್ಕಿಂತ ಎಷ್ಟೋ ಭಿನ್ನವಾಗಿ ಮನೆವಾರ್ತೆಯವರಾದ ನಮಗೆ ಗೌರವಯುತ ಸ್ಥಾನವಿದೆ. ಕಡೇ ದಿವಸಗಳಲ್ಲಿ ಸುವಾರ್ತೆ ಸಾರುವ ದೊಡ್ಡ ಸುಯೋಗವನ್ನು ದೇವರು ನಮಗೆ ಕೊಟ್ಟಿದ್ದಾನೆ. ಮುಂದೆಂದೂ ಪುನರಾವರ್ತನೆಯಾಗದ ಅಪೂರ್ವ ಕೆಲಸವದು. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ವಿಧದಲ್ಲಿ ತುಂಬ ಸ್ವಾತಂತ್ರ್ಯವೂ ನಮಗಿದೆ. ಆದ್ದರಿಂದ ನಾವು ನಂಬಿಗಸ್ತ ಮನೆವಾರ್ತೆಯವರಾಗಿರೋಣ. ವಿಶ್ವದಲ್ಲೇ ಅತಿ ಮಹೋನ್ನತನಾದ ಯೆಹೋವನ ಸೇವೆ ಮಾಡುವ ಸುಯೋಗವನ್ನು ಅತಿ ಅಮೂಲ್ಯವಾಗಿ ಪರಿಗಣಿಸೋಣ.
[ಪುಟ 12ರಲ್ಲಿರುವ ಚಿತ್ರಗಳು]
ನಮಗೆ ನೇಮಿಸಿದ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡೋಣ