ಸಂತೋಷಿಸಲು ನಿಮಗೆ ಯಾವ ಕಾರಣವಿದೆ?
1. ಪ್ರತಿ ತಿಂಗಳ ಕೊನೆಯಲ್ಲಿ ಸಂತೋಷಿಸಲು ನಮಗೆ ಯಾವ ಕಾರಣವಿದೆ?
1 ಪ್ರತಿ ತಿಂಗಳ ಕೊನೆಯಲ್ಲಿ ಕ್ಷೇತ್ರ ಸೇವಾ ವರದಿ ಹಾಕುವಂತೆ ಹೇಳಿದಾಗ “ಹೆಚ್ಚಳಪಡಲು” ಅಥವಾ ಸಂತೋಷಿಸಲು ನಿಮ ಯಾವ ಕಾರಣವಿದೆ? (ಗಲಾ. 6:4) ನಾವು 130 ತಾಸುಗಳನ್ನು ವರದಿಸುವ ವಿಶೇಷ ಪಯನೀಯರರಾಗಿರಲಿ ಇಲ್ಲವೆ ಸಭಾ ಸೇವಾ ಕಮಿಟಿಯಿಂದ ಒಪ್ಪಿಗೆ ಪಡೆದು 15 ನಿಮಿಷವನ್ನು ವರದಿಸುವ ಪ್ರಚಾರಕರಾಗಿರಲಿ ನಾವು ಯೆಹೋವನಿಗೆ ಪೂರ್ಣ ಪ್ರಾಣದಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಸಂತೋಷಿಸೋಣ.—ಕೀರ್ತ. 100:2.
2. ಯೆಹೋವನ ಸೇವೆಯಲ್ಲಿ ನಾವೇಕೆ ಶ್ರಮಿಸಬೇಕು?
2 ಯೆಹೋವನು ವಿಶ್ವ ಪರಮಾಧಿಕಾರಿ ಪ್ರಭು. ಹಾಗಾಗಿ ನಾವಾತನಿಗೆ ಅತ್ಯುತ್ತಮವಾದದ್ದನ್ನು ನೀಡಬೇಕು. (ಮಲಾ. 1:6) ಆತನ ಮೇಲಣ ಪ್ರೀತಿಯಿಂದ ಆತನ ಚಿತ್ತ ಮಾಡಲು ನಮ್ಮನ್ನೇ ಸಮರ್ಪಿಸಿಕೊಂಡಿದ್ದೇವೆ. ಹಾಗಾಗಿ ಯೆಹೋವನ ಸೇವೆಯಲ್ಲಿ ನಮ್ಮ ಸಮಯ, ಸಾಮರ್ಥ್ಯ, ಶಕ್ತಿಯ ‘ಪ್ರಥಮಫಲವನ್ನು’ ನೀಡಿರುವಲ್ಲಿ ದಿನದ ಅಥವಾ ತಿಂಗಳ ಕೊನೆಯಲ್ಲಿ ಸಂತೋಷಿಸಲು ನಮಗೆ ಸಕಾರಣವಿರುವುದು. (ಜ್ಞಾನೋ. 3:9) ಆದರೆ ‘ನನ್ನಿಂದ ಸಾಧ್ಯವಿದ್ದಷ್ಟನ್ನು ನಾನು ಮಾಡಲಿಲ್ಲವಲ್ಲ’ ಎಂದು ಮನಸ್ಸಾಕ್ಷಿ ಚುಚ್ಚುವಲ್ಲಿ ಆಗೇನು? ಯೆಹೋವನಿಗೆ ಅತ್ಯುತ್ತಮವಾದದ್ದನ್ನು ಕೊಡಲು ಏನು ಮಾಡಬೇಕೆಂದು ಯೋಚಿಸಿ.—ರೋಮ. 2:15.
3. ನಮ್ಮನ್ನು ಬೇರೆಯವರಿಗೆ ಹೋಲಿಸಬಾರದು ಏಕೆ?
3 “ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ”: ನಮ್ಮನ್ನು ಬೇರೆಯವರಿಗೆ ಹೋಲಿಸಬಾರದು. ಅಥವಾ ಮುಂಚೆ ನಮ್ಮಲ್ಲಿ ದೇಹಬಲ ಹೆಚ್ಚಿದ್ದಾಗ ಎಷ್ಟನ್ನು ಮಾಡುತ್ತಿದ್ದೇವೊ ಅದರೊಂದಿಗೂ ಹೋಲಿಸಬಾರದು. ಏಕೆಂದರೆ ಪರಿಸ್ಥಿತಿಗಳು ಬದಲಾಗುತ್ತವೆ, ಪ್ರತಿಯೊಬ್ಬರ ಸಾಮರ್ಥ್ಯಗಳೂ ಭಿನ್ನವಾಗಿವೆ. ನಮ್ಮನ್ನು ಬೇರೆಯವರಿಗೆ ಹೋಲಿಸುವುದರಿಂದ ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವ ಇಲ್ಲವೆ ಅಯೋಗ್ಯರೆಂಬ ಭಾವನೆ ಮೂಡುತ್ತದೆ. (ಗಲಾ. 5:26; 6:4) ಯೇಸು ಯಾರನ್ನೂ ಯಾರೊಂದಿಗೂ ಹೋಲಿಸಲಿಲ್ಲ. ಪ್ರತಿಯೊಬ್ಬರು ತಮ್ಮ ಶಕ್ತಿಸಾಮರ್ಥ್ಯಕ್ಕೆ ಅನುಸಾರ ಮಾಡಿದ ಕೆಲಸಕ್ಕಾಗಿ ಅವರನ್ನು ಪ್ರಶಂಸಿಸಿದನು.—ಮಾರ್ಕ 14:6-9.
4. ತಲಾಂತುಗಳ ಸಾಮ್ಯದಿಂದ ಯಾವ ಅಮೂಲ್ಯ ಪಾಠಗಳನ್ನು ಕಲಿಯಬಲ್ಲೆವು?
4 ಯೇಸು ಹೇಳಿದ ತಲಾಂತುಗಳ ಸಾಮ್ಯದಲ್ಲಿ ಪ್ರತಿಯೊಬ್ಬ ಆಳಿಗೆ “ಅವನವನ ಸ್ವಂತ ಸಾಮರ್ಥ್ಯಕ್ಕನುಸಾರ” ತಲಾಂತುಗಳನ್ನು ನೀಡಲಾಯಿತು. (ಮತ್ತಾ. 25:15) ಯಜಮಾನನು ಹಿಂದಿರುಗಿ ಬಂದು ಅವರಿಂದ ವರದಿ ಕೇಳಿದನು. ತಮ್ಮ ಸಾಮರ್ಥ್ಯ ಸನ್ನಿವೇಶಗಳಿಗೆ ಹೊಂದಿಕೆಯಲ್ಲಿ ಶ್ರದ್ಧೆಯಿಂದ ಕೆಲಸಮಾಡಿದ ಆಳುಗಳು ಶ್ಲಾಘನೆ ಪಡೆದರು. ಅಲ್ಲದೆ ಯಜಮಾನನ ಸಂತೋಷದಲ್ಲಿ ಸೇರಿದರು. (ಮತ್ತಾ. 25:21, 23) ಅಂತೆಯೇ ರಾಜ್ಯ ಸಾರುವ ಕೆಲಸದಲ್ಲಿ ನಾವು ಸದಾ ಮಗ್ನರಾಗಿರುವಲ್ಲಿ ದೇವರ ಅಂಗೀಕಾರ ಪಡೆಯುವೆವು, ಸಂತೋಷಿಸಲು ಕಾರಣವೂ ಇರುವುದು.