ತಮ್ಮ ನಂಬಿಕೆಗಾಗಿ ದ್ವೇಷಿಸಲ್ಪಟ್ಟವರು
“ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.”—ಮತ್ತಾಯ 10:22.
1, 2. ತಮ್ಮ ಧಾರ್ಮಿಕ ನಂಬಿಕೆಗಳಿಗನುಸಾರ ಜೀವಿಸಿರುವುದಕ್ಕಾಗಿ, ಯೆಹೋವನ ಸಾಕ್ಷಿಗಳು ತಾಳಿಕೊಂಡಿರುವ ಕೆಲವು ನಿಜ ಜೀವನದ ಅನುಭವಗಳನ್ನು ನೀವು ತಿಳಿಸಬಲ್ಲಿರೊ?
ಕ್ರೀಟ್ ದ್ವೀಪದ ಒಬ್ಬ ಪ್ರಾಮಾಣಿಕ ಅಂಗಡಿಗಾರನು ಹಲವಾರು ಬಾರಿ ದಸ್ತಗಿರಿಮಾಡಲ್ಪಟ್ಟು, ಗ್ರೀಕ್ ನ್ಯಾಯಾಲಯಗಳ ಕಟಕಟೆಯಲ್ಲಿ ಅನೇಕಾವರ್ತಿ ನಿಲ್ಲಿಸಲ್ಪಟ್ಟನು. ಅವನು ತನ್ನ ಪತ್ನಿ ಹಾಗೂ ಐವರು ಮಕ್ಕಳಿಂದ ದೂರವಾಗಿ, ಆರು ವರ್ಷಗಳಿಗಿಂತಲೂ ಹೆಚ್ಚಿನ ಸಮಯವನ್ನು ಸೆರೆಮನೆಯಲ್ಲಿ ಕಳೆದನು. ಜಪಾನಿನಲ್ಲಿ, 17 ವರ್ಷ ಪ್ರಾಯದ ಒಬ್ಬ ವಿದ್ಯಾರ್ಥಿಯು ಶಾಲೆಯಿಂದ ಹೊರಹಾಕಲ್ಪಟ್ಟನು. ಅವನು ಸುನಡತೆಯುಳ್ಳವನು ಮತ್ತು 42 ವಿದ್ಯಾರ್ಥಿಗಳ್ಳುಳ್ಳ ತನ್ನ ತರಗತಿಯಲ್ಲಿ ಅಗ್ರಸ್ಥಾನವುಳ್ಳವನು ಆಗಿರುವಾಗಲೂ ಇದು ಸಂಭವಿಸಿತು. ಫ್ರಾನ್ಸಿನಲ್ಲಿ, ಅನೇಕ ಜನರು ಶ್ರದ್ಧಾಪೂರ್ವಕ ಹಾಗೂ ನ್ಯಾಯನಿಷ್ಠೆಯುಳ್ಳ ಕಾರ್ಮಿಕರೆಂಬ ಖ್ಯಾತಿಯನ್ನು ಪಡೆದಿದ್ದರೂ ತಮ್ಮ ಉದ್ಯೋಗದಿಂದ ವಿನಾ ಕಾರಣ ವಜಾಮಾಡಲ್ಪಟ್ಟರು. ಈ ನಿಜ ಜೀವನದ ಅನುಭವಗಳಲ್ಲಿರುವ ಸಾಮಾನ್ಯ ವಿಷಯವು ಯಾವುದಾಗಿದೆ?
2 ಈ ಮೇಲಿನ ವಿದ್ಯಮಾನಗಳಲ್ಲಿ ಒಳಗೊಂಡವರೆಲ್ಲರೂ ಯೆಹೋವನ ಸಾಕ್ಷಿಗಳೇ. ಅವರ “ಅಪರಾಧ”ವೇನು? ಮೂಲಭೂತವಾಗಿ, ತಮ್ಮ ಧಾರ್ಮಿಕ ನಂಬಿಕೆಗಳಿಗನುಸಾರವಾಗಿ ಜೀವಿಸುವುದೇ ಆಗಿತ್ತು. ಯೇಸು ಕ್ರಿಸ್ತನ ಬೋಧನೆಗಳಿಗೆ ವಿಧೇಯತೆ ತೋರಿಸುತ್ತಾ, ಆ ಅಂಗಡಿಗಾರನು ತನ್ನ ವಿಶ್ವಾಸವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದನು. (ಮತ್ತಾಯ 28:19, 20) ಮತಪ್ರಚಾರವನ್ನು ಒಂದು ಅಪರಾಧವೆಂದು ಗುರುತಿಸುವ ಹಳೆಯ ಗ್ರೀಕ್ ನಿಯಮದ ಆಧಾರದ ಮೇಲೆ ಅವನನ್ನು ತಪ್ಪಿತಸ್ಥನೆಂದು ಎಣಿಸಲಾಯಿತು. ಆ ವಿದ್ಯಾರ್ಥಿಯ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು, ಕಡ್ಡಾಯವಾದ ಕೆಂಡೊ (ಜ್ಯಾಪನೀಸ್ ಕತ್ತಿವರಿಸೆ) ವ್ಯಾಯಾಮಗಳಲ್ಲಿ ಭಾಗವಹಿಸುವಂತೆ ಅವನನ್ನು ಅನುಮತಿಸದಿದ್ದ ಕಾರಣ ಅವನನ್ನು ಶಾಲೆಯಿಂದ ಹೊರಹಾಕಲಾಯಿತು. (ಯೆಶಾಯ 2:4) ಮತ್ತು ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಂಡ ಏಕೈಕ ಕಾರಣಕ್ಕಾಗಿ, ಫ್ರಾನ್ಸಿನಲ್ಲಿದ್ದ ಕೆಲವು ಕಾರ್ಮಿಕರು ತಮ್ಮ ಉದ್ಯೋಗದಿಂದ ವಜಾಮಾಡಲ್ಪಟ್ಟಿದ್ದಾರೆಂದು ಅವರಿಗೆ ಹೇಳಲಾಯಿತು.
3. ಅಧಿಕಾಂಶ ಯೆಹೋವನ ಸಾಕ್ಷಿಗಳು ಜೊತೆಮಾನವರಿಂದ ತೀವ್ರವಾಗಿ ಕಷ್ಟಾನುಭವಿಸುವುದು ಏಕೆ ವಿರಳವಾದ ಸಂಗತಿಯಾಗಿದೆ?
3 ಇತ್ತೀಚೆಗೆ ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಇಂತಹ ಕಠೋರ ಅನುಭವಗಳನ್ನು ತಾಳಿಕೊಂಡಿದ್ದಾರೆ. ಆದರೆ ಹೆಚ್ಚಿನ ಯೆಹೋವನ ಸಾಕ್ಷಿಗಳಿಗೆ, ಬೇರೆಯವರಿಂದ ಬಹಳಷ್ಟು ಕಷ್ಟವನ್ನು ಅನುಭವಿಸುವುದು ತುಂಬ ವಿರಳವಾದ ಸಂಗತಿಯಾಗಿದೆ. ಯೆಹೋವನ ಜನರು ತಮ್ಮ ಉತ್ತಮ ನಡತೆಗಾಗಿ ಲೋಕದ ಎಲ್ಲೆಡೆಯೂ ಪ್ರಸಿದ್ಧರಾಗಿದ್ದಾರೆ. ಇಂತಹ ಖ್ಯಾತಿಯನ್ನು ಪಡೆದಿರುವ ಅವರಿಗೆ, ಹಾನಿಯನ್ನು ಉಂಟುಮಾಡಲು ಯಾರೊಬ್ಬರಲ್ಲಿಯೂ ಸಮಂಜಸವಾದ ಕಾರಣವು ಇರುವುದಿಲ್ಲ. (1 ಪೇತ್ರ 2:11, 12) ಅವರು ಸಂಚು ಹೂಡುವುದಿಲ್ಲ, ಇಲ್ಲವೆ ಹಾನಿಕಾರಕ ವರ್ತನೆಯಲ್ಲಿ ಭಾಗವಹಿಸುವುದಿಲ್ಲ. (1 ಪೇತ್ರ 4:15) ಬದಲಿಗೆ, ಪ್ರಥಮವಾಗಿ ದೇವರಿಗೆ, ತರುವಾಯ ಐಹಿಕ ಸರಕಾರಕ್ಕೆ ಅಧೀನರಾಗಿರಬೇಕೆಂಬ ಬೈಬಲಿನ ಸಲಹೆಗನುಸಾರ ಜೀವಿಸಲು ಅವರು ಪ್ರಯತ್ನಿಸುತ್ತಾರೆ. ಕಾನೂನು ಗೊತ್ತುಪಡಿಸಿದ ತೆರಿಗೆಗಳನ್ನು ಅವರು ಸಲ್ಲಿಸುತ್ತಾರೆ ಮತ್ತು “ಎಲ್ಲರ ಸಂಗಡ ಸಮಾಧಾನದಿಂದಿ”ರಲು ಪ್ರಯತ್ನಿಸುತ್ತಾರೆ. (ರೋಮಾಪುರ 12:18; 13:6, 7; 1 ಪೇತ್ರ 2:13-17) ತಮ್ಮ ಬೈಬಲ್ ಶಿಕ್ಷಣದ ಕಾರ್ಯಕ್ರಮದಲ್ಲಿ, ಅವರು ಕಾನೂನು, ಕೌಟುಂಬಿಕ ಮೌಲ್ಯಗಳು, ಮತ್ತು ನೈತಿಕತೆಗಾಗಿ ಗೌರವವನ್ನು ಉತ್ತೇಜಿಸುತ್ತಾರೆ. ಅವರು ನಿಯಮಪಾಲಕ ಪ್ರಜೆಗಳಾಗಿರುವ ಕಾರಣ, ಅನೇಕ ಸರಕಾರಗಳು ಅವರನ್ನು ಶ್ಲಾಘಿಸಿವೆ. (ರೋಮಾಪುರ 13:3) ಆದರೂ, ಮೊದಲನೆಯ ಪ್ಯಾರಗ್ರಾಫ್ ತೋರಿಸಿದಂತೆ, ಅವರು ಹಿಂಸೆಯ ಮತ್ತು ಕೆಲವು ದೇಶಗಳಲ್ಲಿ ಸರಕಾರಿ ನಿಷೇಧಾಜ್ಞೆಗಳ ಬಲಿಗಳೂ ಆಗಿದ್ದಾರೆ. ಇದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬೇಕೊ?
ಶಿಷ್ಯತನಕ್ಕಾಗಿ ತೆರಬೇಕಾದ “ವೆಚ್ಚ”
4. ಯೇಸುವಿಗನುಸಾರ, ತನ್ನ ಶಿಷ್ಯನಾಗುವವನೊಬ್ಬನು ಏನನ್ನು ನಿರೀಕ್ಷಿಸಬಹುದು?
4 ಯೇಸು ಕ್ರಿಸ್ತನ ಶಿಷ್ಯರಾಗುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಅವನು ಸ್ಪಷ್ಟವಾಗಿ ತಿಳಿಯಪಡಿಸಿದನು. ಅವನು ತನ್ನ ಹಿಂಬಾಲಕರಿಗೆ ಹೇಳಿದ್ದು: “ದಣಿಗಿಂತ ಆಳು ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” ಯೇಸು “ನಿಷ್ಕಾರಣವಾಗಿ” ದ್ವೇಷಿಸಲ್ಪಟ್ಟನು. (ಯೋಹಾನ 15:18-20, 25; ಕೀರ್ತನೆ 69:4; ಲೂಕ 23:22) ಅವನ ಶಿಷ್ಯರೂ ಅದನ್ನೇ ನಿರೀಕ್ಷಿಸಸಾಧ್ಯವಿದೆ, ಅಂದರೆ, ನ್ಯಾಯಸಮ್ಮತವಾದ ಯಾವ ಕಾರಣವೂ ಇಲ್ಲದ ವಿರೋಧವೇ. ಅನೇಕ ಸಂದರ್ಭಗಳಲ್ಲಿ ಅವನು ಅವರಿಗೆ ಎಚ್ಚರಿಸಿದ್ದು: “ನಿಮ್ಮನ್ನು ಎಲ್ಲರೂ ಹಗೆಮಾಡುವರು.”—ಮತ್ತಾಯ 10:22; 24:9.
5, 6. (ಎ) ಯಾವ ಕಾರಣಕ್ಕಾಗಿ ಯೇಸು ತನ್ನ ಭಾವೀ ಹಿಂಬಾಲಕರಿಗೆ “ವೆಚ್ಚವನ್ನು ಲೆಕ್ಕಮಾಡುವಂತೆ” ಪ್ರೇರಿಸಿದನು? (ಬಿ) ನಾವು ವಿರೋಧವನ್ನು ಎದುರಿಸುವಾಗ ಏಕೆ ದಿಗ್ಭ್ರಾಂತರಾಗಬಾರದು?
5 ಆದಕಾರಣ, ಭಾವೀ ಹಿಂಬಾಲಕರು ಶಿಷ್ಯತನದ “ವೆಚ್ಚವನ್ನು ಲೆಕ್ಕಮಾಡುವಂತೆ” ಯೇಸು ಪ್ರೋತ್ಸಾಹಿಸಿದನು. (ಲೂಕ 14:28, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್) ಏಕೆ? ತಾವು ಅವನ ಹಿಂಬಾಲಕರಾಗಬೇಕೊ ಇಲ್ಲವೊ ಎಂಬುದನ್ನು ನಿರ್ಧರಿಸಲಿಕ್ಕಾಗಿ ಅಲ್ಲ, ಬದಲಿಗೆ ಅದರಲ್ಲಿ ಒಳಗೊಂಡಿರುವ ಕೆಲಸವನ್ನು ಪೂರ್ತಿಯಾಗಿ ಮಾಡಲು ನಿಶ್ಚಯಿಸಿಕೊಳ್ಳಲಿಕ್ಕಾಗಿಯೇ. ಆ ಸುಯೋಗದೊಂದಿಗೆ ಬರುವಂತಹ ಯಾವುದೇ ಕಷ್ಟತೊಂದರೆಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. (ಲೂಕ 14:27) ಯೇಸುವಿನ ಹಿಂಬಾಲಕನೋಪಾದಿ ಯೆಹೋವನಿಗೆ ಸೇವೆಸಲ್ಲಿಸುವಂತೆ ಯಾರೂ ನಮ್ಮನ್ನು ಒತ್ತಾಯಿಸುವುದಿಲ್ಲ. ಅದೊಂದು ಸ್ವಯಂಪ್ರೇರಿತ ನಿರ್ಣಯವಾಗಿದ್ದು, ತಿಳಿವಳಿಕೆಯುಳ್ಳದ್ದೂ ಆಗಿದೆ. ದೇವರೊಂದಿಗೆ ಒಂದು ಸಮರ್ಪಿತ ಸಂಬಂಧದಲ್ಲಿ ಸೇರುವ ಸುಯೋಗದಿಂದ ಬರುವ ಆಶೀರ್ವಾದಗಳ ಜೊತೆಗೆ, ನಾವು ‘ಹಗೆಮಾಡಲ್ಪಡುವೆವು’ ಎಂದು ನಮಗೆ ಮುಂಚೆಯೇ ತಿಳಿದಿರುತ್ತದೆ. ಆದುದರಿಂದ ವಿರೋಧವು ಬರುವಲ್ಲಿ ನಾವು ಆಶ್ಚರ್ಯಪಡುವುದಿಲ್ಲ. ನಾವು ‘ವೆಚ್ಚವನ್ನು ಲೆಕ್ಕಮಾಡಿ’ ಅದನ್ನು ತೆರಲು ಸುಸಜ್ಜಿತರಾಗಿರುತ್ತೇವೆ.—1 ಪೇತ್ರ 4:12-14.
6 ಆದರೆ, ಸರಕಾರಿ ಅಧಿಕಾರಿಗಳನ್ನು ಸೇರಿಸಿ, ಕೆಲವರು ಸತ್ಯ ಕ್ರೈಸ್ತರನ್ನು ವಿರೋಧಿಸಲು ಬಯಸುವುದು ಏಕೆ? ಉತ್ತರಕ್ಕಾಗಿ, ಸಾ.ಶ. ಪ್ರಥಮ ಶತಮಾನದ ಎರಡು ಧಾರ್ಮಿಕ ಗುಂಪುಗಳನ್ನು ಪರಿಶೀಲಿಸುವುದು ಸಹಾಯಕರವಾಗಿರುವುದು. ಎರಡೂ ಗುಂಪುಗಳು ದ್ವೇಷಿಸಲ್ಪಟ್ಟವು, ಆದರೆ ಬಹಳ ಭಿನ್ನವಾದ ಕಾರಣಗಳಿಗಾಗಿಯೇ.
ದ್ವೇಷಭರಿತರು ಮತ್ತು ದ್ವೇಷಿಸಲ್ಪಟ್ಟವರು
7, 8. ಯಾವ ಬೋಧನೆಗಳು ಅನ್ಯರಿಗಾಗಿ ತಾತ್ಸಾರಭಾವವನ್ನು ಪ್ರತಿಬಿಂಬಿಸಿದವು, ಮತ್ತು ಈ ಕಾರಣ ಯೆಹೂದ್ಯರಲ್ಲಿ ಯಾವ ಮನೋಭಾವವು ವಿಕಸಿಸಿತು?
7 ಸಾ.ಶ. ಒಂದನೆಯ ಶತಮಾನದೊಳಗೆ, ಇಸ್ರಾಯೇಲ್ ರಾಷ್ಟ್ರವು ರೋಮನ್ ಆಳ್ವಿಕೆಯ ಕೆಳಗಿತ್ತು ಮತ್ತು ಯೆಹೂದಿ ಧಾರ್ಮಿಕ ವ್ಯವಸ್ಥೆಯಾದ ಯೆಹೂದಿಮತವು, ಬಹುಮಟ್ಟಿಗೆ ಫರಿಸಾಯರು ಹಾಗೂ ಶಾಸ್ತ್ರಿಗಳಂತಹ ನಾಯಕರ ಬಿಗಿಮುಷ್ಠಿಯಲ್ಲಿತ್ತು. (ಮತ್ತಾಯ 23:2-4) ಜನಾಂಗಗಳಿಂದ ಪ್ರತ್ಯೇಕರಾಗಿರುವುದರ ಕುರಿತಾದ ಮೋಶೆಯ ಧರ್ಮಶಾಸ್ತ್ರದ ಆಜ್ಞೆಗಳನ್ನು ಈ ಮತಭ್ರಾಂತ ನಾಯಕರು ತಿರುಚಿ, ಯೆಹೂದ್ಯೇತರರನ್ನು ಕಡೆಗಣಿಸಬೇಕೆಂದು ಒತ್ತಾಯಿಸಿದರು. ಹೀಗೆ ಮಾಡಿದಾಗ, ಅವರು ಅನ್ಯರಿಗಾಗಿ ದ್ವೇಷವನ್ನು ಹುಟ್ಟಿಸಿದಂತಹ ಮತ್ತು ಪ್ರತಿಯಾಗಿ ಅನ್ಯರಿಂದ ದ್ವೇಷವನ್ನು ಹೊರಡಿಸಿದಂತಹ ಒಂದು ಧರ್ಮಕ್ಕೆ ಕಾರಣರಾದರು.
8 ಅನ್ಯರ ವಿಷಯದಲ್ಲಿ ತಾತ್ಸಾರವನ್ನು ಮೂಡಿಸುವುದು ಯೆಹೂದಿ ನಾಯಕರಿಗೆ ಕಷ್ಟಕರವಾದ ಸಂಗತಿಯಾಗಿರಲಿಲ್ಲ. ಏಕೆಂದರೆ ಆ ಸಮಯದ ಯೆಹೂದ್ಯರು ಅನ್ಯರನ್ನು ದುಷ್ಟ ಜೀವಿಗಳೆಂದು ಪರಿಗಣಿಸಿದರು. ಯೆಹೂದಿ ಸ್ತ್ರೀಯೊಬ್ಬಳು ಎಂದಿಗೂ ಅನ್ಯರೊಂದಿಗೆ ಒಂಟಿಯಾಗಿರಬಾರದೆಂದು ಆ ಧಾರ್ಮಿಕ ನಾಯಕರು ಕಲಿಸಿದರು, ಏಕೆಂದರೆ ಅನ್ಯರು “ಸ್ತ್ರೀಲಂಪಟರೆಂಬ ಅನುಮಾನಕ್ಕೆ” ಪಾತ್ರರಾಗಿದ್ದಾರೆ. ಯೆಹೂದ್ಯನೊಬ್ಬನು “ಅವರೊಂದಿಗೆ ಒಂಟಿಯಾಗಿರಬಾರದು ಏಕೆಂದರೆ, ಅವರು ರಕ್ತವನ್ನು ಸುರಿಸುವ ಅನುಮಾನಕ್ಕೆ” ಪಾತ್ರರಾಗಿದ್ದಾರೆ. ಅನ್ಯನೊಬ್ಬನು ಹಾಲನ್ನು ಕರೆಯುವಾಗ ಅದನ್ನು ಯೆಹೂದ್ಯನೊಬ್ಬನು ಎಚ್ಚರದಿಂದ ಗಮನಿಸದೆ ಹೋಗಿದ್ದಲ್ಲಿ ಆ ಹಾಲನ್ನು ಬಳಸಲು ಸಾಧ್ಯವಿರಲಿಲ್ಲ. ತಮ್ಮ ನಾಯಕರ ಪ್ರಭಾವದಿಂದ, ಯೆಹೂದ್ಯರು ಉದಾಸೀನತೆಯನ್ನು ಮತ್ತು ಅನಮ್ಯವಾದ ಪ್ರತ್ಯೇಕತೆಯನ್ನು ಬೆಳೆಸಿಕೊಂಡಿದ್ದರು.—ಯೋಹಾನ 4:9ನ್ನು ಹೋಲಿಸಿರಿ.
9. ಯೆಹೂದ್ಯೇತರರ ಸಂಬಂಧದಲ್ಲಿ ಯೆಹೂದಿ ನಾಯಕರು ಕಲಿಸಿದ ವಿಷಯಗಳ ಪರಿಣಾಮವು ಏನಾಗಿತ್ತು?
9 ಯೆಹೂದ್ಯೇತರರ ಕುರಿತಾದ ಇಂತಹ ಬೋಧನೆಗಳು, ಯೆಹೂದ್ಯರು ಹಾಗೂ ಅನ್ಯರ ನಡುವೆ ಸಮರಸವಾದ ಸಂಬಂಧಗಳನ್ನು ಪ್ರವರ್ಧಿಸಲಿಲ್ಲ. ಯೆಹೂದ್ಯರು ಸಕಲ ಮಾನವಜಾತಿಯನ್ನು ದ್ವೇಷಿಸುವ ಜನರೆಂದೇ ಅನ್ಯರು ಭಾವಿಸಿದರು. ರೋಮನ್ ಇತಿಹಾಸಗಾರ ಟ್ಯಾಸಿಟಸ್ (ಸುಮಾರು ಸಾ.ಶ. 56ರಲ್ಲಿ ಜನಿಸಿದವನು) ಯೆಹೂದ್ಯರ ಕುರಿತು ಹೇಳಿದ್ದೇನೆಂದರೆ, “ಅವರು ವೈರಿಗಳ ಕಡೆಗೆ ತೋರಿಸುವಂತಹ ದ್ವೇಷವನ್ನು ಉಳಿದ ಮಾನವಕುಲದ ಕಡೆಗೆ ತೋರಿಸುತ್ತಾರೆ.” ಯೆಹೂದಿಮತಕ್ಕೆ ಪರಿವರ್ತಿತರಾದ ಅನ್ಯರು ತಮ್ಮ ದೇಶವನ್ನು ತ್ಯಜಿಸುವಂತೆ ಹಾಗೂ ತಮ್ಮ ಕುಟುಂಬ ಹಾಗೂ ಮಿತ್ರರನ್ನು ಅಯೋಗ್ಯರೆಂದು ಎಣಿಸುವಂತೆ ಕಲಿಸಲ್ಪಟ್ಟರೆಂದು ಸಹ ಟ್ಯಾಸಿಟಸ್ ಪ್ರತಿಪಾದಿಸುತ್ತಾರೆ. ಸಾಮಾನ್ಯವಾಗಿ ರೋಮನರು ಯೆಹೂದಿಗಳೊಂದಿಗೆ ತಾಳ್ಮೆಯಿಂದಿದ್ದರು, ಏಕೆಂದರೆ ಇವರ ಸಂಖ್ಯೆ ಅಧಿಕವಾಗಿತ್ತು. ಆದರೆ, ಸಾ.ಶ. 66ರಲ್ಲಾದ ಒಂದು ಯೆಹೂದಿ ದಂಗೆಯು ಕಠೋರವಾದ ರೋಮನ್ ಪ್ರತೀಕಾರಗಳನ್ನು ಬರಮಾಡುತ್ತಾ, ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನಕ್ಕೆ ನಡೆಸಿತು.
10, 11. (ಎ) ವಿದೇಶಿಯರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕೆಂದು ಮೋಶೆಯ ಧರ್ಮಶಾಸ್ತ್ರವು ವಿಧಿಸಿತು? (ಬಿ) ಯೆಹೂದಿಮತಕ್ಕೆ ಸಂಭವಿಸಿದ ವಿಷಯದಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?
10 ವಿದೇಶಿಯರ ಕುರಿತಾದ ಈ ನೋಟವು ಮೋಶೆಯ ಧರ್ಮಶಾಸ್ತ್ರದಲ್ಲಿ ರೇಖಿಸಲ್ಪಟ್ಟ ಆರಾಧನಾ ವಿಧಕ್ಕೆ ಹೇಗೆ ಹೋಲುತ್ತದೆ? ಇಸ್ರಾಯೇಲ್ಯರು ಜನಾಂಗಗಳಿಂದ ಪ್ರತ್ಯೇಕರಾಗಿರುವಂತೆ ಧರ್ಮಶಾಸ್ತ್ರವು ಸೂಚಿಸಿತಾದರೂ, ಇದು ವಿಶೇಷವಾಗಿ ಇಸ್ರಾಯೇಲ್ಯರ ಶುದ್ಧ ಆರಾಧನೆಯನ್ನು ಸಂರಕ್ಷಿಸುವ ಕಾರಣದಿಂದಾಗಿತ್ತು. (ಯೆಹೋಶುವ 23:6-8) ಹಾಗಿದ್ದರೂ, ಧರ್ಮಶಾಸ್ತ್ರದ ಪ್ರಕಾರ, ವಿದೇಶಿಯರು ಎಲ್ಲಿಯ ವರೆಗೆ ಇಸ್ರಾಯೇಲಿನ ನಿಯಮಗಳಿಗೆ ಅಸಂಬದ್ಧವಾಗಿ ಅವಿಧೇಯತೆಯನ್ನು ತೋರಿಸುವುದಿಲ್ಲವೊ ಅಲ್ಲಿಯ ವರೆಗೆ, ಅವರನ್ನು ನ್ಯಾಯನೀತಿಯಿಂದ ನಡೆಸಿಕೊಳ್ಳಬೇಕಿತ್ತು ಮತ್ತು ಅವರಿಗೆ ಅತಿಥಿಸತ್ಕಾರವನ್ನು ತೋರಿಸಬೇಕಿತ್ತು. (ಯಾಜಕಕಾಂಡ 24:22) ವಿದೇಶಿಯರ ಸಂಬಂಧದಲ್ಲಿ, ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ಕಂಡುಬಂದ ವಿವೇಚನಾಯುಕ್ತ ಮನೋಭಾವದಿಂದ ದೂರಸರಿಯುವ ಮೂಲಕ, ಯೇಸುವಿನ ದಿನದ ಯೆಹೂದಿ ಧಾರ್ಮಿಕ ನಾಯಕರು ದ್ವೇಷವನ್ನು ಬೆಳೆಸಿದಂತಹ ಮತ್ತು ದ್ವೇಷಿಸಲ್ಪಟ್ಟಂತಹ ಆರಾಧನಾ ರೀತಿಗೆ ಕಾರಣರಾದರು. ಕೊನೆಯಲ್ಲಿ, ಪ್ರಥಮ ಶತಮಾನದ ಯೆಹೂದಿ ಜನಾಂಗವು ಯೆಹೋವನ ಅನುಗ್ರಹವನ್ನು ಕಳೆದುಕೊಂಡಿತು.—ಮತ್ತಾಯ 23:38.
11 ಇದರಿಂದ ನಾವು ಯಾವ ಪಾಠವನ್ನಾದರೂ ಕಲಿಯಬಲ್ಲೆವೊ? ನಿಶ್ಚಯವಾಗಿಯೂ ಕಲಿಯಬಲ್ಲೆವು! ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಜೊತೆಸೇರದವರನ್ನು ತುಚ್ಛವಾಗಿ ಕಾಣುವಂತಹ ಸ್ವನೀತಿಯ ಹಾಗೂ ನಾವೇ ಶ್ರೇಷ್ಠರೆಂಬ ಮನೋಭಾವವು, ಯೆಹೋವನ ಶುದ್ಧಾರಾಧನೆಯನ್ನು ಸರಿಯಾಗಿ ಪ್ರತಿನಿಧಿಸುವುದಿಲ್ಲ, ಅಲ್ಲದೆ ಆತನನ್ನು ಮೆಚ್ಚಿಸುವುದೂ ಇಲ್ಲ. ಪ್ರಥಮ ಶತಮಾನದ ನಂಬಿಗಸ್ತ ಕ್ರೈಸ್ತರನ್ನು ಪರಿಗಣಿಸಿರಿ. ಅವರು ಕ್ರೈಸ್ತರಲ್ಲದವರನ್ನು ದ್ವೇಷಿಸಲಿಲ್ಲ, ಅಥವಾ ರೋಮ್ನ ವಿರುದ್ಧ ದಂಗೆಯೇಳಲಿಲ್ಲ. ಹಾಗಿದ್ದರೂ, ಅವರು ‘ಹಗೆಮಾಡಲ್ಪಟ್ಟರು.’ ಯಾವ ಕಾರಣಕ್ಕಾಗಿ? ಮತ್ತು ಯಾರಿಂದ?
ಆದಿ ಕ್ರೈಸ್ತರು—ಯಾರಿಂದ ದ್ವೇಷಿಸಲ್ಪಟ್ಟರು?
12. ಕ್ರೈಸ್ತರಲ್ಲದವರ ವಿಷಯದಲ್ಲಿ ತನ್ನ ಹಿಂಬಾಲಕರು ಸಮತೂಕದ ನೋಟವನ್ನು ಪಡೆದಿರಬೇಕೆಂದು ಯೇಸು ಬಯಸುವುದಾಗಿ ಶಾಸ್ತ್ರಗಳು ಹೇಗೆ ಸ್ಪಷ್ಟಪಡಿಸುತ್ತವೆ?
12 ಕ್ರೈಸ್ತರಲ್ಲದವರ ಕುರಿತು ತನ್ನ ಶಿಷ್ಯರಿಗೆ ಸಮತೂಕದ ನೋಟವಿರುವಂತೆ ಯೇಸು ಉದ್ದೇಶಿಸಿದನೆಂದು ಅವನ ಬೋಧನೆಗಳಿಂದ ಸ್ಪಷ್ಟವಾಗುತ್ತದೆ. ಒಂದು ಕಡೆಯಲ್ಲಿ ಅವನ ಹಿಂಬಾಲಕರು ಲೋಕದಿಂದ ಪ್ರತ್ಯೇಕರಾಗಿರುವರೆಂದು ಅವನು ಹೇಳಿದನು. ಅಂದರೆ, ಯೆಹೋವನ ನೀತಿಯ ಮಾರ್ಗಗಳಿಗೆ ವಿರುದ್ಧವಾಗಿರುವ ಮನೋಭಾವಗಳು ಮತ್ತು ನಡತೆಯನ್ನು ಅವರು ದೂರವಿರಿಸುವರು. ಅವರು ಯುದ್ಧ ಹಾಗೂ ರಾಜಕೀಯ ರಂಗದಲ್ಲೂ ತಟಸ್ಥರಾಗಿ ಉಳಿಯುವರು. (ಯೋಹಾನ 17:14, 16) ಆದರೆ, ಮತ್ತೊಂದು ಕಡೆಯಲ್ಲಿ ಕ್ರೈಸ್ತರಲ್ಲದವರನ್ನು ಕಡೆಗಣಿಸುವ ಬದಲಿಗೆ ‘ತಮ್ಮ ವೈರಿಗಳನ್ನು ಪ್ರೀತಿಸುವಂತೆ’ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಮತ್ತಾಯ 5:44) ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೇರಿಸಿದ್ದು: “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು.” (ರೋಮಾಪುರ 12:20) “ಎಲ್ಲರಿಗೆ ಒಳ್ಳೇದನ್ನು ಮಾಡು”ವಂತೆಯೂ ಅವನು ಕ್ರೈಸ್ತರಿಗೆ ಹೇಳಿದನು.—ಗಲಾತ್ಯ 6:10.
13. ಯೆಹೂದಿ ಧಾರ್ಮಿಕ ನಾಯಕರು ಕ್ರಿಸ್ತನ ಶಿಷ್ಯರನ್ನು ಏಕೆ ಅಷ್ಟೊಂದು ವಿರೋಧಿಸಿದರು?
13 ಆದರೂ, ಕ್ರಿಸ್ತನ ಶಿಷ್ಯರು ಮೂರು ಮೂಲಗಳಿಂದ ‘ಹಗೆಮಾಡಲ್ಪಟ್ಟರು.’ ಪ್ರಥಮ ಮೂಲವು, ಯೆಹೂದಿ ಧಾರ್ಮಿಕ ನಾಯಕರು ಆಗಿದ್ದರು. ಕ್ರೈಸ್ತರು ಬೇಗನೆ ಅವರ ಗಮನವನ್ನು ಸೆಳೆದರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕ್ರೈಸ್ತರಿಗೆ ನೈತಿಕತೆ ಹಾಗೂ ಸಮಗ್ರತೆಯ ಉಚ್ಚ ತತ್ವಗಳಿದ್ದವು, ಮತ್ತು ಅವರು ನಿರೀಕ್ಷೆಯನ್ನು ಪ್ರೇರೇಪಿಸುವ ಸಂದೇಶವನ್ನು ಅತ್ಯಧಿಕ ಹುರುಪಿನಿಂದ ಪ್ರಕಟಪಡಿಸಿದರು. ಸಾವಿರಾರು ಜನರು ಯೆಹೂದಿಮತವನ್ನು ತೊರೆದು, ಕ್ರೈಸ್ತತ್ವವನ್ನು ಸ್ವೀಕರಿಸಿಕೊಂಡರು. (ಅ. ಕೃತ್ಯಗಳು 2:41; 4:4; 6:7) ಯೆಹೂದಿ ಧಾರ್ಮಿಕ ನಾಯಕರಿಗೆ, ಯೇಸುವಿನ ಯೆಹೂದಿ ಶಿಷ್ಯರು ಧರ್ಮಭ್ರಷ್ಟರಲ್ಲದೆ ಮತ್ತೇನೂ ಆಗಿರಲಿಲ್ಲ! (ಹೋಲಿಸಿ ಅ. ಕೃತ್ಯಗಳು 13:45.) ಕ್ರೈಸ್ತತ್ವವು ತಮ್ಮ ಸಂಪ್ರದಾಯಗಳನ್ನು ರದ್ದುಪಡಿಸಿತೆಂದು ಆ ಕೋಪಿಷ್ಠ ನಾಯಕರಿಗೆ ಅನಿಸಿತು. ಅಷ್ಟೇಕೆ, ಅನ್ಯರ ವಿಷಯದಲ್ಲಿ ಅವರಿಗಿದ್ದ ನೋಟವನ್ನೂ ಅದು ಅಲ್ಲಗಳೆಯಿತು! ಸಾ.ಶ. 36ರಿಂದ, ಅನ್ಯರೂ ಕ್ರೈಸ್ತರಾಗಸಾಧ್ಯವಿತ್ತು. ಮತ್ತು ಯೆಹೂದಿ ಕ್ರೈಸ್ತರಂತೆಯೇ ಅವರು, ಒಂದೇ ರೀತಿಯ ನಂಬಿಕೆಯನ್ನು ಅನುಸರಿಸಸಾಧ್ಯವಿತ್ತು ಹಾಗೂ ಒಂದೇ ರೀತಿಯ ಸುಯೋಗಗಳಲ್ಲಿ ಆನಂದಿಸಸಾಧ್ಯವಿತ್ತು.—ಅ. ಕೃತ್ಯಗಳು 10:34, 35.
14, 15. (ಎ) ಕ್ರೈಸ್ತರು ವಿಧರ್ಮಿ ಆರಾಧಕರ ದ್ವೇಷಕ್ಕೆ ಏಕೆ ಪಾತ್ರರಾದರು? ಒಂದು ಉದಾಹರಣೆಯನ್ನು ಕೊಡಿರಿ. (ಬಿ) ಯಾವ ಮೂರನೆಯ ಗುಂಪಿನಿಂದ ಆದಿ ಕ್ರೈಸ್ತರು ‘ಹಗೆಮಾಡಲ್ಪಟ್ಟರು’?
14 ಎರಡನೆಯದಾಗಿ, ಕ್ರೈಸ್ತರು ವಿಧರ್ಮಿ ಆರಾಧಕರ ದ್ವೇಷಕ್ಕೆ ಪಾತ್ರರಾದರು. ಉದಾಹರಣೆಗೆ, ಪ್ರಾಚೀನ ಎಫೆಸದಲ್ಲಿ, ಆರ್ಟಿಮಿಸ್ ದೇವಿಯ ಬೆಳ್ಳಿಯ ಗುಡಿಗಳನ್ನು ಮಾಡುವುದು ಲಾಭದಾಯಕ ವ್ಯಾಪಾರವಾಗಿತ್ತು. ಆದರೆ ಪೌಲನು ಅಲ್ಲಿ ಸಾರಿದಾಗ, ಅದಕ್ಕೆ ಪ್ರತಿಕ್ರಿಯಿಸುತ್ತಾ ಅನೇಕ ಮಂದಿ ಎಫೆಸ ವಾಸಿಗಳು ಆರ್ಟಿಮಿಸ್ ದೇವಿಯ ಆರಾಧನೆಯನ್ನು ತೊರೆದುಬಿಟ್ಟರು. ತಮ್ಮ ವ್ಯಾಪಾರಕ್ಕೆ ನಷ್ಟವಾದಾಗ, ಅಕ್ಕಸಾಲಿಗರು ಗಲಭೆಯನ್ನು ಎಬ್ಬಿಸಿದರು. (ಅ. ಕೃತ್ಯಗಳು 19:24-41) ಕ್ರೈಸ್ತತ್ವವು ಬಿಥಿನಿಯ (ಈಗ ವಾಯವ್ಯ ಟರ್ಕಿ)ದ ವರೆಗೆ ಹರಡಿದಾಗಲೂ ತದ್ರೀತಿಯ ಘಟನೆಯು ನಡೆಯಿತು. ಕ್ರೈಸ್ತ ಗ್ರೀಕ್ ಶಾಸ್ತ್ರಗಳು ಪೂರ್ಣಗೊಂಡ ಸ್ವಲ್ಪದರಲ್ಲೇ, ಬಿಥಿನಿಯಾದ ರಾಜ್ಯಪಾಲರಾದ ಪ್ಲಿನಿ ದಿ ಯಂಗರ್ ವರದಿಸಿದ್ದೇನೆಂದರೆ, ವಿಧರ್ಮಿ ದೇವಾಲಯಗಳು ತೊರೆಯಲ್ಪಟ್ಟವು ಮತ್ತು ಯಜ್ಞಕ್ಕಾಗಿ ಮಾರಲ್ಪಡುತ್ತಿದ್ದ ಪ್ರಾಣಿಗಳ ಮೇವಿನ ವ್ಯಾಪಾರವೂ ಬಹಳವಾಗಿ ಇಳಿಮುಖಗೊಂಡಿತು. ಕ್ರೈಸ್ತರ ಆರಾಧನೆಯು ಪ್ರಾಣಿ ಯಜ್ಞಗಳನ್ನು ಮತ್ತು ಮೂರ್ತಿಗಳನ್ನು ಅನುಮತಿಸದಿದ್ದ ಕಾರಣ, ಅವರು ದೂರಲ್ಪಟ್ಟರು ಮತ್ತು ಹಿಂಸಿಸಲ್ಪಟ್ಟರು. (ಇಬ್ರಿಯ 10:1-9; 1 ಯೋಹಾನ 5:21) ಹೀಗೆ ಕ್ರೈಸ್ತತ್ವದ ಹರಡುವಿಕೆಯು, ವಿಧರ್ಮಿ ಆರಾಧನೆಯೊಂದಿಗೆ ಸೇರಿದ್ದ ಕೆಲವು ನಿರ್ದಿಷ್ಟ ಪ್ರಯೋಜನಗಳನ್ನು ಬಾಧಿಸಿತು. ಮತ್ತು ವ್ಯಾಪಾರ ಹಾಗೂ ಹಣ, ಎರಡನ್ನೂ ಕಳೆದುಕೊಂಡವರು ಅದನ್ನು ವಿರೋಧಿಸಿದರು.
15 ಮೂರನೆಯದಾಗಿ, ಕ್ರೈಸ್ತರು ರಾಷ್ಟ್ರೀಯ ಮನೋಭಾವವುಳ್ಳ ರೋಮನರಿಂದ ‘ಹಗೆಮಾಡಲ್ಪಟ್ಟರು.’ ಮೊದಮೊದಲು ಕ್ರೈಸ್ತರು ಒಂದು ಚಿಕ್ಕ ಹಾಗೂ ಮತಭ್ರಾಂತ ಗುಂಪಿನವರೆಂದು ರೋಮನರು ತಿಳಿದುಕೊಂಡರು. ಆದರೆ, ಸಕಾಲದಲ್ಲಿ ಕೇವಲ ಕ್ರೈಸ್ತರೆಂದು ಹೇಳಿಕೊಳ್ಳುವುದು ಸಹ ಮರಣಯೋಗ್ಯ ಅಪರಾಧವಾಯಿತು. ಕ್ರೈಸ್ತೋಚಿತ ಜೀವಿತವನ್ನು ನಡೆಸುತ್ತಿರುವ ಪ್ರಾಮಾಣಿಕ ಪ್ರಜೆಗಳು ಹಿಂಸೆ ಹಾಗೂ ಮರಣಕ್ಕೆ ಯೋಗ್ಯರಾದವರೆಂದು ಹೇಗೆ ಪರಿಗಣಿಸಲ್ಪಡಸಾಧ್ಯವಿತ್ತು?
ಆದಿ ಕ್ರೈಸ್ತರು—ರೋಮನ್ ಜಗತ್ತಿನಲ್ಲಿ ಏಕೆ ದ್ವೇಷಿಸಲ್ಪಟ್ಟರು?
16. ಯಾವ ರೀತಿಯಲ್ಲಿ ಕ್ರೈಸ್ತರು ಲೋಕದಿಂದ ಪ್ರತ್ಯೇಕರಾಗಿದ್ದರು, ಮತ್ತು ಇದು ಅವರನ್ನು ರೋಮನ್ ಜಗತ್ತಿನಲ್ಲಿ ಜನಪ್ರಿಯರಲ್ಲದವರನ್ನಾಗಿ ಏಕೆ ಮಾಡಿತು?
16 ಕ್ರೈಸ್ತರು ತಮ್ಮ ಧಾರ್ಮಿಕ ನಂಬಿಕೆಗಳಿಗನುಸಾರ ಜೀವಿಸಿದ ಕಾರಣ, ರೋಮನ್ ಜಗತ್ತಿನಲ್ಲಿ ದ್ವೇಷಿಸಲ್ಪಟ್ಟರು. ಉದಾಹರಣೆಗೆ, ಅವರು ಲೋಕದಿಂದ ತಮ್ಮನ್ನು ಪ್ರತ್ಯೇಕವಾಗಿ ಇರಿಸಿಕೊಂಡರು. (ಯೋಹಾನ 15:19) ಆದಕಾರಣ ಅವರು ರಾಜಕೀಯ ಸ್ಥಾನಮಾನವನ್ನು ಮತ್ತು ಮಿಲಿಟರಿ ಸೇವೆಯನ್ನು ನಿರಾಕರಿಸಿದರು. ಇದರಿಂದಾಗಿ ಅವರು “ಲೋಕದ ಸಂಬಂಧದಲ್ಲಿ ವಿರಕ್ತರಂತೆ ಹಾಗೂ ಜೀವಿತದ ಎಲ್ಲ ವಿಷಯಗಳ ಸಂಬಂಧದಲ್ಲಿ ಅಯೋಗ್ಯರಂತೆ ಪ್ರತಿನಿಧಿಸಲ್ಪಟ್ಟರು” ಎಂಬುದಾಗಿ ಇತಿಹಾಸಗಾರ ಆಗಸ್ಟಸ್ ನೀಯಾಂಡರ್ ಹೇಳುತ್ತಾರೆ. ಲೋಕದ ಭಾಗವಾಗಿರದೆ ಇರುವದೆಂದರೆ, ಭ್ರಷ್ಟವಾದ ರೋಮನ್ ಜಗತ್ತಿನ ದುಷ್ಟ ರೀತಿನೀತಿಗಳನ್ನು ತ್ಯಜಿಸುವುದೂ ಆಗಿತ್ತು. “ಈ ಚಿಕ್ಕ ಕ್ರೈಸ್ತ ಸಮುದಾಯಗಳು ತಮ್ಮ ಭಯಭಕ್ತಿ ಹಾಗೂ ಸಭ್ಯತೆಯಿಂದ, ಸುಖಭೋಗಮತ್ತರಾದ ವಿಧರ್ಮಿ ಲೋಕದ ಮನಸ್ಸಾಕ್ಷಿಯನ್ನು ಪೀಡಿಸುತ್ತಿದ್ದರು” ಎಂಬುದಾಗಿ ಇತಿಹಾಸಗಾರ ವಿಲ್ ಡ್ಯೂರೆಂಟ್ ವಿವರಿಸುತ್ತಾರೆ. (1 ಪೇತ್ರ 4:3, 4) ಕ್ರೈಸ್ತರನ್ನು ಹಿಂಸಿಸುವ ಮತ್ತು ವಧಿಸುವ ಮೂಲಕ, ಚುಚ್ಚುತ್ತಿರುವ ತಮ್ಮ ಮನಸ್ಸಾಕ್ಷಿಯ ಕೂಗನ್ನು ನಿಶಬ್ದಗೊಳಿಸಲು ರೋಮನರು ಪ್ರಯತ್ನಿಸಿದ್ದಿರಬೇಕು.
17. ಪ್ರಥಮ ಶತಮಾನದ ಕ್ರೈಸ್ತರ ಸಾರುವಿಕೆ ಪರಿಣಾಮಕಾರಿಯಾಗಿತ್ತೆಂದು ಯಾವುದು ತೋರಿಸುತ್ತದೆ?
17 ಪ್ರಥಮ ಶತಮಾನದ ಕ್ರೈಸ್ತರು ದೇವರ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಪಟ್ಟುಬಿಡದೆ ಸಾರಿದರು. (ಮತ್ತಾಯ 24:14) ಸಾ.ಶ. 60ರೊಳಗಾಗಿ, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತ್ತೆಂದು ಪೌಲನು ಹೇಳಸಾಧ್ಯವಿತ್ತು. (ಕೊಲೊಸ್ಸೆ 1:23) ಪ್ರಥಮ ಶತಮಾನದ ಅಂತ್ಯದೊಳಗಾಗಿ, ಯೇಸುವಿನ ಹಿಂಬಾಲಕರು ರೋಮನ್ ಸಾಮ್ರಾಜ್ಯದಾದ್ಯಂತ, ಏಷಿಯ, ಯೂರೋಪ್, ಮತ್ತು ಆಫ್ರಿಕದಲ್ಲಿ ಅನೇಕರನ್ನು ಶಿಷ್ಯರನ್ನಾಗಿ ಮಾಡಿದ್ದರು! “ಚಕ್ರವರ್ತಿಯ ಅರಮನೆಗೆ ಸೇರಿದ” ಕೆಲವು ಸದಸ್ಯರೂ ಕ್ರೈಸ್ತರಾಗಿದ್ದರು.a (ಫಿಲಿಪ್ಪಿ 4:22) ಈ ಹುರುಪಿನ ಸಾರುವಿಕೆಯು ಅಸಮಾಧಾನವನ್ನು ಕೆರಳಿಸಿತು. ನೀಯಾಂಡರ್ ಹೇಳುವುದು: “ಕ್ರೈಸ್ತತ್ವವು ಪ್ರತಿಯೊಂದು ವರ್ಗದ ಜನರಲ್ಲಿ ಸ್ಥಿರವಾದ ಪ್ರಗತಿಯನ್ನು ಮಾಡಿ, ಆ ರಾಜ್ಯದ ಧರ್ಮದ ಜೊತೆಗೆ ಸಮಾಜದ ಅಧಿಕಾರವನ್ನೇ ಉರುಳಿಸುವ ಬೆದರಿಕೆಯನ್ನು ಒಡ್ಡಿತು.”
18. ಯೆಹೋವನಿಗೆ ಅನನ್ಯ ಭಕ್ತಿಯನ್ನು ನೀಡಿದ ಕಾರಣ, ಕ್ರೈಸ್ತರು ರೋಮನ್ ಸರಕಾರದ ವೈರತ್ವಕ್ಕೆ ಹೇಗೆ ಗುರಿಯಾದರು?
18 ಯೇಸುವಿನ ಹಿಂಬಾಲಕರು ಯೆಹೋವನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸಿದರು. (ಮತ್ತಾಯ 4:8-10) ಬಹುಶಃ ಕ್ರೈಸ್ತರ ಆರಾಧನೆಯ ಈ ಅಂಶವು, ರೋಮನರ ದ್ವೇಷಕ್ಕೆ ಮುಖ್ಯ ಕಾರಣವಾಗಿತ್ತು. ಇತರ ಧರ್ಮಗಳ ಅನುಯಾಯಿಗಳು ಸಮ್ರಾಟನ ಆರಾಧನೆಯಲ್ಲಿಯೂ ಭಾಗವಹಿಸಿದ್ದರ ವರೆಗೆ ರೋಮನರು ಅವರನ್ನು ಸಹಿಸಿಕೊಂಡರು. ಆದಿ ಕ್ರೈಸ್ತರು ಇಂತಹ ಆರಾಧನೆಯಲ್ಲಿ ಭಾಗವಹಿಸಲು ಸಾಧ್ಯವೇ ಇರಲಿಲ್ಲ. ತಾವು ರೋಮನ್ ರಾಜ್ಯಕ್ಕಿಂತಲೂ ಉನ್ನತ ಸ್ಥಾನದಲ್ಲಿರುವ ಒಬ್ಬ ಅಧಿಕಾರಿ, ಅಂದರೆ, ಯೆಹೋವ ದೇವರಿಗೆ ಜವಾಬ್ದಾರರೆಂದು ಅವರು ಪರಿಗಣಿಸಿಕೊಂಡರು. (ಅ. ಕೃತ್ಯಗಳು 5:29) ಆದಕಾರಣ, ಬೇರೆ ಎಲ್ಲ ವಿಷಯಗಳಲ್ಲಿ ಒಬ್ಬ ಕ್ರೈಸ್ತನು ಎಷ್ಟೇ ಉತ್ತಮ ನಡತೆಯ ಪ್ರಜೆಯಾಗಿದ್ದರೂ, ಅವನು ರಾಜ್ಯದ ವೈರಿಯೆಂದು ಪರಿಗಣಿಸಲ್ಪಟ್ಟನು.
19, 20. (ಎ) ನಂಬಿಗಸ್ತ ಕ್ರೈಸ್ತರ ಕುರಿತು ಹಬ್ಬಿಸಲಾದ ಸುಳ್ಳಾರೋಪಗಳಿಗೆ ಮುಖ್ಯವಾಗಿ ಯಾರು ಕಾರಣರಾಗಿದ್ದರು? (ಬಿ) ಕ್ರೈಸ್ತರ ವಿರುದ್ಧ ಯಾವ ಸುಳ್ಳು ಆರೋಪಗಳು ಹೊರಿಸಲ್ಪಟ್ಟವು?
19 ರೋಮನ್ ಜಗತ್ತಿನಲ್ಲಿ ನಂಬಿಗಸ್ತ ಕ್ರೈಸ್ತರು ‘ಹಗೆಮಾಡಲ್ಪಟ್ಟ’ದ್ದಕ್ಕೆ ಮತ್ತೊಂದು ಕಾರಣವೂ ಇತ್ತು: ಅವರ ವಿರುದ್ಧ ಮಾಡಲ್ಪಟ್ಟ ಸುಳ್ಳಾರೋಪವನ್ನು ಬೇಗನೆ ನಂಬಲಾಯಿತು. ಯೆಹೂದಿ ಧಾರ್ಮಿಕ ನಾಯಕರೇ ಈ ಆರೋಪಗಳಿಗೆ ಹೆಚ್ಚಿನ ಮಟ್ಟಿಗೆ ಕಾರಣರಾಗಿದ್ದರು. (ಅ. ಕೃತ್ಯಗಳು 17:5-8) ಸುಮಾರು ಸಾ.ಶ. 60ರಿಂದ 61ರ ಸಮಯದಲ್ಲಿ, ಪೌಲನು ರೋಮಿನಲ್ಲಿದ್ದುಕೊಂಡು, ಸಮ್ರಾಟ ನೀರೊವಿನ ನ್ಯಾಯತೀರ್ಪನ್ನು ಎದುರುನೋಡುತ್ತಿದ್ದಾಗ, ಅಲ್ಲಿದ್ದ ಪ್ರಮುಖ ಯೆಹೂದ್ಯರು ಕ್ರೈಸ್ತರ ಕುರಿತು ಹೇಳಿದ್ದು: “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ನೀರೊ ಕ್ರೈಸ್ತರ ಕುರಿತು ನಿಂದಾತ್ಮಕ ಕಥೆಗಳನ್ನು ಕೇಳಿದ್ದಿರಬಹುದೆಂಬುದು ನಿಸ್ಸಂದೇಹ. ಸಾ.ಶ. 64ರಲ್ಲಿ ಬೆಂಕಿಯಿಂದ ರೋಮ್ ಪಟ್ಟಣವನ್ನು ಧ್ವಂಸಮಾಡಿದುದಕ್ಕಾಗಿ ಅವನನ್ನು ದೂರಿದಾಗ, ಈಗಾಗಲೇ ಕೆಟ್ಟ ಹೆಸರನ್ನು ಸಂಪಾದಿಸಿದ್ದ ಕ್ರೈಸ್ತರ ಮೇಲೆ ನೀರೊ ಆ ಆರೋಪವನ್ನು ಹೊರಿಸಿಬಿಟ್ಟನು. ಇದು ಕ್ರೈಸ್ತರನ್ನು ನಿರ್ಮೂಲ ಮಾಡುವ ಉದ್ದೇಶದಿಂದ, ಹಿಂಸಾತ್ಮಕ ವಿರೋಧದ ಅಲೆಯನ್ನು ಎಬ್ಬಿಸಿತು.
20 ಕ್ರೈಸ್ತರ ವಿರುದ್ಧ ಮಾಡಲ್ಪಟ್ಟ ಸುಳ್ಳಾರೋಪಗಳು, ಅನೇಕ ವೇಳೆ ಶುದ್ಧ ಸುಳ್ಳುಗಳು ಹಾಗೂ ಅವರ ನಂಬಿಕೆಗಳ ತಿರುಚುವಿಕೆಯಾಗಿದ್ದವು. ಅವರು ಏಕದೇವರಲ್ಲಿ ನಂಬಿಕೆಯಿಟ್ಟುಕೊಂಡಿದ್ದು, ಸಮ್ರಾಟನನ್ನು ಆರಾಧಿಸದಿದ್ದ ಕಾರಣ ಅವರನ್ನು ನಾಸ್ತಿಕರೆಂದು ಪರಿಗಣಿಸಲಾಯಿತು. ಕ್ರೈಸ್ತರಲ್ಲದ ಕುಟುಂಬದ ಸದಸ್ಯರು ತಮ್ಮ ಕ್ರೈಸ್ತ ಸಂಬಂಧಿಕರನ್ನು ವಿರೋಧಿಸಿದ ಕಾರಣ, ಕುಟುಂಬಗಳನ್ನು ವಿಭಾಗಿಸುವ ಆರೋಪವನ್ನೂ ಕ್ರೈಸ್ತರ ಮೇಲೆ ಹೊರಿಸಲಾಯಿತು. (ಮತ್ತಾಯ 10:21) ಅವರನ್ನು ನರಭಕ್ಷಕರೆಂದೂ ಕರೆಯಲಾಯಿತು. ಇದು ಕರ್ತನ ಸಂಧ್ಯಾ ಭೋಜನದ ಸಮಯದಲ್ಲಿ ಯೇಸು ನುಡಿದ ಮಾತುಗಳ ತಿರುಚುವಿಕೆಯ ಮೇಲೆ ಆಧರಿಸಿತ್ತೆಂದು ಕೆಲವರು ಹೇಳುತ್ತಾರೆ.—ಮತ್ತಾಯ 26:26-28.
21. ಯಾವ ಎರಡು ಕಾರಣಗಳಿಗಾಗಿ ಕ್ರೈಸ್ತರು ‘ಹಗೆಮಾಡಲ್ಪಟ್ಟರು’?
21 ಆದಕಾರಣ ನಂಬಿಗಸ್ತ ಕ್ರೈಸ್ತರು ರೋಮನರಿಂದ ‘ಹಗೆಮಾಡಲ್ಪಟ್ಟದ್ದು’ ಎರಡು ಮೂಲಭೂತ ಕಾರಣಗಳಿಗಾಗಿ: (1) ತಮ್ಮ ಬೈಬಲ್ ಆಧಾರಿತ ನಂಬಿಕೆಗಳು ಹಾಗೂ ಆಚರಣೆಗಳು, ಮತ್ತು (2) ಅವರ ವಿರುದ್ಧ ಹೊರಿಸಲ್ಪಟ್ಟ ಸುಳ್ಳು ಆರೋಪಗಳು. ಕಾರಣವು ಏನೇ ಆಗಿರಲಿ, ಆ ವಿರೋಧಿಗಳಿಗೆ ಒಂದೇ ಒಂದು ಉದ್ದೇಶವಿತ್ತು ಅದೇನೆಂದರೆ, ಕ್ರೈಸ್ತತ್ವದ ದಮನವೇ. ಆದರೆ ಕ್ರೈಸ್ತರ ಹಿಂಸೆಗೆ ನಿಜವಾದ ಚಿತಾವಣಿಗಾರರು ಮನುಷ್ಯಾತೀತ ವಿರೋಧಿಗಳು, ಅಂದರೆ ಅದೃಶ್ಯ ದುಷ್ಟಾತ್ಮ ಶಕ್ತಿಗಳಾಗಿವೆ.—ಎಫೆಸ 6:12.
22. (ಎ) ಯೆಹೋವನ ಸಾಕ್ಷಿಗಳು ‘ಎಲ್ಲರಿಗೆ ಒಳ್ಳೇದನ್ನು ಮಾಡಲು’ ಪ್ರಯತ್ನಿಸುತ್ತಾರೆಂದು ಯಾವ ಉದಾಹರಣೆಯು ತೋರಿಸುತ್ತದೆ? (11ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.) (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
22 ಆದಿ ಕ್ರೈಸ್ತರಂತೆ, ಆಧುನಿಕ ಸಮಯಗಳಲ್ಲಿನ ಯೆಹೋವನ ಸಾಕ್ಷಿಗಳು ಹಲವಾರು ದೇಶಗಳಲ್ಲಿ ‘ಹಗೆಮಾಡಲ್ಪಟ್ಟಿದ್ದಾರೆ.’ ಆದರೂ, ಅವರು ಸಾಕ್ಷಿಗಳಲ್ಲದವರನ್ನು ದ್ವೇಷಿಸುವುದಿಲ್ಲ, ಅಥವಾ ಸರಕಾರಗಳ ವಿರುದ್ಧ ದಂಗೆಯನ್ನು ಕೆರಳಿಸುವುದಿಲ್ಲ. ಬದಲಿಗೆ, ಎಲ್ಲ ಸಾಮಾಜಿಕ, ಕುಲಸಂಬಂಧಿತ, ಮತ್ತು ಜಾತಿಯ ಅಡ್ಡಗೋಡೆಗಳನ್ನು ಮೀರಿರುವ ಯಥಾರ್ಥವಾದ ಪ್ರೀತಿಯನ್ನು ಅಭ್ಯಾಸಿಸುವವರಾಗಿ ಲೋಕದ ಎಲ್ಲೆಡೆಯೂ ಪ್ರಸಿದ್ಧರಾಗಿದ್ದಾರೆ. ಹಾಗಾದರೆ, ಅವರು ಹಿಂಸಿಸಲ್ಪಡುವುದು ಏಕೆ? ಮತ್ತು ಅಂತಹ ಹಿಂಸೆಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.
[ಪಾದಟಿಪ್ಪಣಿ]
a “ಚಕ್ರವರ್ತಿಯ ಅರಮನೆಗೆ ಸೇರಿದ” ಎಂಬ ಅಭಿವ್ಯಕ್ತಿಯು, ಆಗ ಆಳುತ್ತಿದ್ದ ನೀರೊನ ಕುಟುಂಬದ ಸದಸ್ಯರನ್ನು ಸೂಚಿಸಬೇಕೆಂದಿಲ್ಲ. ಬದಲಿಗೆ, ಅದು ಮನೆವಾರ್ತೆಯ ಸೇವಕರನ್ನು ಹಾಗೂ ಚಿಕ್ಕಪುಟ್ಟ ಅಧಿಕಾರಿಗಳನ್ನೂ ಸೂಚಿಸಬಹುದು. ಇವರು ಚಕ್ರವರ್ತಿಯ ಕುಟುಂಬ ಹಾಗೂ ಸಿಬ್ಬಂದಿಯ ಪರವಾಗಿ ಅಡುಗೆ ಮತ್ತು ಶುಚಿಮಾಡುವಂತಹ ಕೆಲಸಗಳನ್ನು ನಿರ್ವಹಿಸಿದ್ದಿರಬಹುದು.
ನೀವು ಹೇಗೆ ಉತ್ತರಿಸುವಿರಿ?
◻ ಭಾವೀ ಹಿಂಬಾಲಕರು ಶಿಷ್ಯತನದ ವೆಚ್ಚವನ್ನು ಲೆಕ್ಕಮಾಡುವಂತೆ ಯೇಸು ಏಕೆ ಪ್ರೇರಿಸಿದನು?
◻ ಪ್ರಚಲಿತವಾಗಿದ್ದ ಯೆಹೂದ್ಯರಲ್ಲದವರ ವೀಕ್ಷಣೆಯು ಯೆಹೂದಿಮತದ ಮೇಲೆ ಯಾವ ಪರಿಣಾಮವನ್ನು ಬೀರಿತು, ಮತ್ತು ಇದರಿಂದ ನಾವು ಏನನ್ನು ಕಲಿಯುತ್ತೇವೆ?
◻ ನಂಬಿಗಸ್ತ ಆದಿ ಕ್ರೈಸ್ತರು ಯಾವ ಮೂರು ಮೂಲಗಳಿಂದ ವಿರೋಧವನ್ನು ಎದುರಿಸಿದರು?
◻ ಯಾವ ಎರಡು ಕಾರಣಗಳಿಗಾಗಿ ಆದಿ ಕ್ರೈಸ್ತರು ರೋಮನರಿಂದ ‘ಹಗೆಮಾಡಲ್ಪಟ್ಟರು’?
[ಪುಟ 11 ರಲ್ಲಿರುವ ಚೌಕ]
‘ಎಲ್ಲರಿಗೆ ಒಳ್ಳೇದನ್ನು ಮಾಡುತ್ತಿರುವುದು’
‘ಎಲ್ಲರಿಗೆ ಒಳ್ಳೇದನ್ನು ಮಾಡಬೇಕು’ ಎಂಬ ಬೈಬಲಿನ ಬುದ್ಧಿವಾದಕ್ಕೆ ಕಿವಿಗೊಡಲು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ. (ಗಲಾತ್ಯ 6:10) ಅಗತ್ಯದ ಸಮಯಗಳಲ್ಲಿ, ತಮ್ಮ ಧಾರ್ಮಿಕ ನೋಟಗಳಲ್ಲಿ ಭಾಗಿಗಳಾಗದ ಜನರಿಗೆ ಸಹಾಯ ಮಾಡುವಂತೆ ನೆರೆಯವರ ಪ್ರೀತಿಯು ಅವರನ್ನು ಪ್ರಚೋದಿಸುತ್ತದೆ. ಉದಾಹರಣೆಗೆ, 1994ರಲ್ಲಿ ರುವಾಂಡದಲ್ಲಾದ ಕ್ಷೋಭೆಗಳಲ್ಲಿ, ಸಾಕ್ಷಿಗಳು ಪರಿಹಾರ ಸರಬರಾಯಿಗಳೊಂದಿಗೆ ಯೂರೋಪಿನಿಂದ ಆಫ್ರಿಕಾಗೆ ಹೋಗಲು ಸಿದ್ಧರಾಗಿದ್ದರು. ನೆರವನ್ನು ನೀಡಲು ಸುಸಂಘಟಿತ ಶಿಬಿರಗಳು ಹಾಗೂ ಸಂಚಾರಿ ಆಸ್ಪತ್ರೆಗಳನ್ನು ಬೇಗನೆ ನಿರ್ಮಿಸಿದರು. ಆಹಾರ, ಬಟ್ಟೆಬರೆ, ಮತ್ತು ಕಂಬಳಿಗಳು ಬೃಹತ್ ಪ್ರಮಾಣಗಳಲ್ಲಿ ವಿಮಾನದ ಮೂಲಕ ತರಲ್ಪಟ್ಟವು. ಈ ಪರಿಹಾರ ಕಾರ್ಯದಿಂದ ಲಾಭಪಡೆದ ಆಶ್ರಿತರ ಸಂಖ್ಯೆಯು ಆ ಕ್ಷೇತ್ರದಲ್ಲಿರುವ ಸಾಕ್ಷಿಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಾಗಿತ್ತು.
[ಪುಟ 9 ರಲ್ಲಿರುವ ಚಿತ್ರ]
ಪ್ರಥಮ ಶತಮಾನದ ಕ್ರೈಸ್ತರು ಸುವಾರ್ತೆಯನ್ನು ಹುರುಪಿನಿಂದ ಪಟ್ಟುಬಿಡದೆ ಸಾರಿದರು