ವಾಚಕರಿಂದ ಪ್ರಶ್ನೆಗಳು
ಜಾರತ್ವ ಮತ್ತು ಸಡಿಲು ನಡತೆಗಾಗಿ ಹೇಗೋ ಹಾಗೆಯೇ ಅಶುದ್ಧತೆಗಾಗಿಯೂ ಒಬ್ಬನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡಬಲ್ಲನೋ?
ಹೌದು. ಜಾರತ್ವ, ಕೆಲವು ರೀತಿಯ ಅಶುದ್ಧ ನಡತೆ ಅಥವಾ ಸಡಿಲು ನಡತೆಯನ್ನು ಒಬ್ಬನು ಪಶ್ಚಾತ್ತಾಪಪಡದೆ ನಡೆಸುತ್ತಾ ಇರುವುದಾದರೆ ಅವನನ್ನು ಸಭೆಯಿಂದ ಬಹಿಷ್ಕಾರ ಮಾಡಸಾಧ್ಯವಿದೆ. ಅಪೊಸ್ತಲ ಪೌಲನು ಈ ಮೂರೂ ತರದ ಪಾಪಗಳನ್ನು ಬಹಿಷ್ಕಾರಕ್ಕೆ ಅರ್ಹವಾದ ಇತರ ಪಾಪಗಳೊಂದಿಗೆ ಉಲ್ಲೇಖಿಸುತ್ತಾ ಬರೆದದ್ದು: “ಶರೀರಭಾವದ ಕಾರ್ಯಗಳು ವ್ಯಕ್ತವಾಗಿಯೇ ಇವೆ. ಅವು ಯಾವುವೆಂದರೆ, ಜಾರತ್ವ, ಅಶುದ್ಧತೆ, ಸಡಿಲು ನಡತೆ . . . ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂದು ನಾನು ಈ ಮುಂಚೆ ನಿಮಗೆ ಎಚ್ಚರಿಕೆ ನೀಡಿದಂತೆಯೇ ಈಗಲೂ ಎಚ್ಚರಿಕೆ ನೀಡುತ್ತಿದ್ದೇನೆ.”—ಗಲಾತ್ಯ 5:19-21.
ಜಾರತ್ವವು (ಗ್ರೀಕ್ ಪದ, ಪೋರ್ನಿಯ) ದೇವ ವಾಕ್ಯಾಧಾರಿತ ವಿವಾಹದ ಹೊರಗಿನ ಎಲ್ಲಾ ಅಕ್ರಮ ಲೈಂಗಿಕ ಸಂಬಂಧಗಳಿಗೆ ಅನ್ವಯಿಸುತ್ತದೆ. ಅದರಲ್ಲಿ ವ್ಯಭಿಚಾರ, ಸೂಳೆಗಾರಿಕೆ ಮತ್ತು ಅವಿವಾಹಿತ ವ್ಯಕ್ತಿಗಳ ನಡುವಣ ಲೈಂಗಿಕ ಸಂಭೋಗಗಳು, ಮೌಖಿಕ ಮತ್ತು ಗುದಕಾಮ, ತನ್ನ ವಿವಾಹ ಸಂಗಾತಿಯಲ್ಲದ ವ್ಯಕ್ತಿಯ ಜನನಾಂಗಗಳನ್ನು ಲೈಂಗಿಕವಾಗಿ ಉದ್ರೇಕಿಸುವುದು ಮುಂತಾದವುಗಳು ಸೇರಿವೆ. ಯಾರು ಪಶ್ಚಾತ್ತಾಪಪಡದೆ ಜಾರತ್ವವನ್ನು ಮಾಡುತ್ತಾ ಇರುತ್ತಾರೋ ಅವರು ಕ್ರೈಸ್ತ ಸಭೆಯಲ್ಲಿರಲು ಅಯೋಗ್ಯರು.
ಸಡಿಲು ನಡತೆಯು (ಗ್ರೀಕ್ ಪದ, ಆಸೆಲ್ಯೀಆ) “ವಿಷಯಲಂಪಟತೆ, ಸ್ವೇಚ್ಛಾಚಾರ, ನಾಚಿಕೆಗೆಟ್ಟ ನಡತೆ, ಕಾಮುಕತೆಯನ್ನು” ಸೂಚಿಸುತ್ತದೆ. ದ ನ್ಯೂ ಥೇಯರ್ಸ್ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆ ಗ್ರೀಕ್ ಪದವನ್ನು “ಸಂಯಮವಿಲ್ಲದ ಕಾಮಾಸಕ್ತಿ, . . . ಅತ್ಯಾಚಾರ, ನಾಚಿಕೆಗೇಡಿತನ, ದುರಂಹಕಾರ” ಎಂದು ಅರ್ಥ ವಿವರಿಸುತ್ತದೆ. ಇನ್ನೊಂದು ನಿಘಂಟಿಗೆ ಅನುಸಾರ ಸಡಿಲು ನಡತೆಯು, “ಸಮಾಜದಲ್ಲಿ ಒಪ್ಪಲ್ಪಡುವ ನಡವಳಿಕೆಗಳ ಎಲ್ಲಾ ಎಲ್ಲೆಯನ್ನೂ ಮೀರಿ ನಡೆಯುವಂಥ” ವರ್ತನೆ ಎಂದಾಗಿದೆ.
ಮೇಲಿನ ಅರ್ಥ ವಿವರಣೆಗಳು ತೋರಿಸುವ ಪ್ರಕಾರ, ‘ಸಡಿಲು ನಡತೆಯು’ ಎರಡು ಕಾರಣಗಳಿಂದಾಗಿ ತಪ್ಪಾಗಿದೆ: (1) ಆ ನಡತೆಯು ತಾನೇ ದೇವರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಮತ್ತು (2) ತಪ್ಪುಮಾಡಿದವನ ವರ್ತನೆಯು ಮರ್ಯಾದೆಗೆಟ್ಟದ್ದೂ ನಿರ್ಲಜ್ಜೆಯದ್ದೂ ಆಗಿದೆ.
ಆದುದರಿಂದ “ಸಡಿಲು ನಡತೆ”ಯು ಚಿಕ್ಕ ತರಹದ ದುರ್ನಡತೆಯಲ್ಲ, ಗಂಭೀರ ದುರ್ನಡತೆಯಾಗಿದೆ. ದೇವರ ನಿಯಮಗಳ ಗಂಭೀರ ಉಲ್ಲಂಘನೆಗಳಾದ ಕೃತ್ಯಗಳನ್ನು ಅಂದರೆ ನಿರ್ಲಜ್ಜೆಯ ಹಾಗೂ ಅತಿ ದುರಹಂಕಾರದ ಪ್ರವೃತ್ತಿಯನ್ನು ಅದು ಸೂಚಿಸುತ್ತದೆ. ಅಧಿಕಾರ, ನಿಯಮಗಳು ಮತ್ತು ನೀತಿಯ ಮಟ್ಟಗಳಿಗೆ ಅಗೌರವ ಮತ್ತು ತಿರಸ್ಕಾರವನ್ನೂ ಅದು ತೋರಿಸುತ್ತದೆ. ಸಡಿಲು ನಡತೆಯನ್ನು ಪೌಲನು ನಿಷಿದ್ಧ ಸಂಭೋಗಕ್ಕೆ ಜೋಡಿಸುತ್ತಾನೆ. (ರೋಮನ್ನರಿಗೆ 13:13, 14) ಗಲಾತ್ಯ 5:19-21 ಸಡಿಲು ನಡತೆಯನ್ನು ಹಲವಾರು ಪಾಪಪೂರ್ಣ ಕೃತ್ಯಗಳೊಂದಿಗೆ ಜತೆಗೂಡಿಸುತ್ತದೆ. ಆದ್ದರಿಂದ ಅಂಥ ಪಾಪಗಳು ಒಬ್ಬನನ್ನು ದೇವರ ರಾಜ್ಯಕ್ಕೆ ಬಾಧ್ಯನಾಗಲು ಅನರ್ಹನನ್ನಾಗಿ ಮಾಡುತ್ತವೆ. ಹೀಗೆ ಸಡಿಲು ನಡತೆಯು ಗದರಿಕೆಗೆ ಮತ್ತು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡುವ ಸಾಧ್ಯತೆಗೆ ಆಧಾರವನ್ನು ಕೊಡುತ್ತದೆ.
ಅಶುದ್ಧತೆ (ಗ್ರೀಕ್ ಪದ, ಅಕಾಥಾರ್ಸೀಆ). “ಜಾರತ್ವ” “ಅಶುದ್ಧತೆ” ಮತ್ತು “ಸಡಿಲು ನಡತೆ” ಎಂದು ಭಾಷಾಂತರಗೊಂಡ ಮೂರು ಗ್ರೀಕ್ ಪದಗಳಲ್ಲಿ ಅಶುದ್ಧತೆಗೆ ವಿಸ್ತಾರವಾದ ಅರ್ಥವಿದೆ. ಅದು ಯಾವುದೇ ರೀತಿಯ ಅಶುದ್ಧತೆ ಅಂದರೆ ಲೈಂಗಿಕ ವಿಷಯಗಳಲ್ಲಿ, ಮಾತುಗಳಲ್ಲಿ, ಕ್ರಿಯೆಗಳಲ್ಲಿ ಮತ್ತು ಆಧ್ಯಾತ್ಮಿಕ ಸಂಬಂಧಗಳಲ್ಲಿ ತೋರಿಸುವ ಅಶುದ್ಧತೆಯನ್ನು ಸೂಚಿಸುತ್ತದೆ. ಅಶುದ್ಧತೆಯಲ್ಲಿ ಅನೇಕ ಗಂಭೀರ ಪಾಪಗಳು ಒಳಗೂಡಿರುತ್ತವೆ.
2 ಕೊರಿಂಥ 12:21 ರಲ್ಲಿ ದಾಖಲೆಯಾಗಿರುವ ಪ್ರಕಾರ, “ಪೂರ್ವದಲ್ಲಿ ಪಾಪಮಾಡಿದ್ದರೂ ತಾವು ಅಭ್ಯಾಸಿಸುತ್ತಿದ್ದ ಅಶುದ್ಧತೆ, ಹಾದರ ಮತ್ತು ಸಡಿಲು ನಡತೆಯ ವಿಷಯದಲ್ಲಿ ಪಶ್ಚಾತ್ತಾಪಪಡದಿರುವಂಥ ಅನೇಕರ” ಕುರಿತು ಪೌಲನು ತಿಳಿಸುತ್ತಾನೆ. ‘ಅಶುದ್ಧತೆಯನ್ನು’ “ಹಾದರ ಮತ್ತು ಸಡಿಲು ನಡತೆಯ” ಜೊತೆಗೆ ಹಾಕಿರಲಾಗಿ, ಕೆಲವು ರೀತಿಯ ಅಶುದ್ಧತೆಗಳು ನ್ಯಾಯನಿರ್ಣಾಯಕ ಕ್ರಮಕ್ಕೆ ಕಾರಣ ಕೊಡುತ್ತವೆ. ಆದರೆ ಅಶುದ್ಧತೆ ಎಂಬದು ವಿಶಾಲಾರ್ಥದ ಪದವಾಗಿದ್ದು ಅದರಲ್ಲಿ ನ್ಯಾಯನಿರ್ಣಾಯಕ ಕ್ರಮಕ್ಕೆ ಒಳಪಡದ ವಿಷಯಗಳೂ ಸೇರಿರುತ್ತವೆ. ಉದಾಹರಣೆಗೆ ಒಂದು ಮನೆಯು ಸ್ವಲ್ಪಮಟ್ಟಿಗೆ ಕೊಳಕಾಗಿರಬಹುದು ಅಥವಾ ಸಂಪೂರ್ಣವಾಗಿ ಕೊಳಕಾಗಿರಲೂಬಹುದು. ಅಂತೆಯೇ ಅಶುದ್ಧತೆಗೆ ವಿವಿಧ ರೀತಿಯ ಪ್ರಮಾಣಗಳಿವೆ.
ಎಫೆಸ 4:19 ಕ್ಕೆ ಅನುಸಾರ ಕೆಲವು ವ್ಯಕ್ತಿಗಳು “ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರಾಗಿ” ಇದ್ದರೆಂದೂ ಮತ್ತು ಅವರು “ಪ್ರತಿಯೊಂದು ರೀತಿಯ ಅಶುದ್ಧತೆಯನ್ನು ಅತ್ಯಾಶೆಯಿಂದ ನಡಿಸಲಿಕ್ಕಾಗಿ ತಮ್ಮನ್ನು ತಾವೇ ಸಡಿಲು ನಡತೆಗೆ ಒಪ್ಪಿಸಿ” ಕೊಟ್ಟಿದ್ದರೆಂದೂ ಪೌಲನು ಹೇಳಿದನು. ಇಲ್ಲಿ ಪೌಲನು “ಅಶುದ್ಧತೆಯನ್ನು ಅತ್ಯಾಶೆಯಿಂದ” ನಡಿಸುವುದನ್ನು ಸಡಿಲು ನಡತೆಯ ಅದೇ ವರ್ಗದಲ್ಲಿ ಹಾಕುತ್ತಾನೆ. ಆದುದರಿಂದ ದೀಕ್ಷಾಸ್ನಾನ ಪಡೆದ ವ್ಯಕ್ತಿಯೊಬ್ಬನು ಪಶ್ಚಾತ್ತಾಪಪಡದೆ “ಅಶುದ್ಧತೆಯನ್ನು ಅತ್ಯಾಶೆಯಿಂದ” ನಡಿಸುವುದಾದರೆ ಅಂಥವನು ಘೋರ ಅಶುದ್ಧತೆಯ ಕಾರಣ ಸಭೆಯಿಂದ ಬಹಿಷ್ಕೃತನಾಗಬಲ್ಲನು.
ಉದಾಹರಣೆಗೆ, ಮದುವೆಗೆ ನಿಶ್ಚಿತಾರ್ಥವಾದ ದಂಪತಿಯೊಬ್ಬರು ಕಾಮೋದ್ರೇಕಗೊಳಿಸುವ ಅತೀ ಮುದ್ದಾಟ ಮತ್ತು ಆಲಿಂಗನಗಳನ್ನು ಹಲವಾರು ಸಂದರ್ಭಗಳಲ್ಲಿ ಮಾಡಿದ್ದರೆಂದು ನೆನಸೋಣ. ಇವರು ಸಡಿಲು ನಡತೆಯನ್ನು ಸೂಚಿಸುವ ನಿರ್ಲಜ್ಜಾಭಾವವನ್ನು ತೋರಿಸದಿದ್ದರೂ ಅವರ ನಡತೆಯಲ್ಲಿ ಸ್ವಲ್ಪಮಟ್ಟಿನ ಅತ್ಯಾಶೆಯಿತ್ತು ಎಂದು ಹಿರಿಯರು ಒಂದುವೇಳೆ ನಿರ್ಣಯಿಸಿಯಾರು. ಹೀಗೆ ಘೋರ ಅಶುದ್ಧತೆಯು ಒಳಗೂಡಿದ್ದ ಕಾರಣ ಹಿರಿಯರು ನ್ಯಾಯನಿರ್ಣಾಯಕ ಕ್ರಮವನ್ನು ತಕ್ಕೊಳ್ಳಬಹುದು. ಇನ್ನೊಂದು ಉದಾಹರಣೆ: ಒಬ್ಬ ವ್ಯಕ್ತಿ ಲೈಂಗಿಕ ವಿಷಯಗಳ ಕುರಿತು ಹೊಲಸು ಮಾತುಗಳನ್ನಾಡುತ್ತಾ ಇನ್ನೊಬ್ಬರಿಗೆ ಪದೇ ಪದೇ ಫೋನ್ ಮಾಡುತ್ತಿದ್ದಾನೆಂದು ನೆನಸಿ. ಅವನಿಗೆ ಈ ಮೊದಲೇ ಆ ಕುರಿತು ಹಿರಿಯರಿಂದ ಸಲಹೆಸೂಚನೆ ಸಿಕ್ಕಿದೆ. ಆದರೂ ಅವನದನ್ನು ಮುಂದುವರಿಸುತ್ತಾ ಇರುವ ಸಂದರ್ಭದಲ್ಲಿ ಅದು ಘೋರ ಅಶುದ್ಧತೆಯಾಗಿ ಪರಿಗಣಿಸಲ್ಪಡಬಹುದು.
ಅಂಥ ನಿರ್ಣಯಗಳನ್ನು ಮಾಡುವಾಗ ಹಿರಿಯರು ವಿವೇಚನೆಯನ್ನು ಉಪಯೋಗಿಸುವ ಅಗತ್ಯವಿದೆ. ನ್ಯಾಯನಿರ್ಣಾಯಕ ಕ್ರಮವನ್ನು ಕೈಕೊಳ್ಳಬೇಕೋ ಬೇಡವೋ ಎಂಬದನ್ನು ನಿರ್ಧರಿಸಲು ಅವರು ನಡೆದ ಸಂಗತಿಯನ್ನು ಜಾಗ್ರತೆಯಿಂದ ಪರೀಕ್ಷಿಸಿ ಆ ಅಶುದ್ಧತೆ ಎಷ್ಟರ ಮಟ್ಟಿಗೆ ನಡೆಯುತಿತ್ತೆಂಬುದನ್ನು ಪರಿಶೀಲಿಸಬೇಕು. ಶಾಸ್ತ್ರೀಯ ಸೂಚನೆಯನ್ನು ಸ್ವೀಕರಿಸುವುದಿಲ್ಲ ಎಂಬ ಕಾರಣ ಮಾತ್ರದಿಂದ ಅವರು ಯಾರ ಮೇಲಾದರೂ ಸಡಿಲು ನಡತೆಯ ಆರೋಪವನ್ನು ಹೊರಿಸುವ ವಿಷಯವು ಅದಲ್ಲ. ಇಲ್ಲವೆ ಒಂದು ಪಾಪಕೃತ್ಯವನ್ನು ಒಬ್ಬನು ಎಷ್ಟು ಸಲ ನಡೆಸಸಾಧ್ಯವಿದೆ ಎಂದು ಲೆಕ್ಕ ಮಾಡಿ ಅವನಿಗೆ ನ್ಯಾಯನಿರ್ಣಾಯಕ ಶಿಕ್ಷೆ ವಿಧಿಸುವ ವಿಷಯವೂ ಅದಲ್ಲ. ಪ್ರತಿಯೊಂದು ಸನ್ನಿವೇಶವನ್ನು ಹಿರಿಯರು ಜಾಗ್ರತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ತೂಗಿನೋಡಬೇಕು. ನಡೆದ ಸಂಗತಿಯೇನು ಮತ್ತು ಅದು ಎಷ್ಟು ಸಲ ನಡೆದಿದೆ, ಆ ದುರ್ನಡತೆಯು ಯಾವ ತರಹದ್ದು ಮತ್ತು ಎಷ್ಟು ಗಹನವಾಗಿದೆ, ತಪ್ಪಿತಸ್ಥನು ಯಾವ ದುರುದ್ದೇಶ ಮತ್ತು ಹೇತುವಿನಿಂದ ಮಾಡಿದ್ದಾನೆಂದು ಅವರು ಪರೀಕ್ಷಿಸಿ ನೋಡಬೇಕು.
ಘೋರ ಅಶುದ್ಧತೆಯಲ್ಲಿ ಲೈಂಗಿಕ ಪಾಪಗಳು ಮಾತ್ರವಲ್ಲ ಬೇರೆಯೂ ಸೇರಿರುತ್ತವೆ. ಉದಾಹರಣೆಗೆ, ಒಬ್ಬ ಸ್ನಾತ ಹುಡುಗನು ಸ್ವಲ್ಪ ಸಮಯ ಕೆಲವು ಸಿಗರೇಟನ್ನು ಸೇದಿರಬಹುದು. ಅವನದನ್ನು ತನ್ನ ಹೆತ್ತವರಿಗೆ ಅರಿಕೆ ಮಾಡುತ್ತಾನೆ. ಇನ್ನು ಮುಂದೆ ಸೇದದೇ ಇರಲು ನಿರ್ಧರಿಸುತ್ತಾನೆ. ಇದು ಅಶುದ್ಧತೆಯಾಗಿದೆ ಆದರೆ ಅದು ಘೋರ ಅಶುದ್ಧತೆಯ ಹಂತವನ್ನೂ ತಲಪಿರುವುದಿಲ್ಲ ಅಥವಾ “ಅಶುದ್ಧತೆಯನ್ನು ಅತ್ಯಾಶೆಯಿಂದ” ನಡೆಸುವ ಹಂತವನ್ನು ಮುಟ್ಟಿರುವುದಿಲ್ಲ. ಅಂಥ ಸಂದರ್ಭದಲ್ಲಿ ಹುಡುಗನ ಹೆತ್ತವರ ಬೆಂಬಲದೊಂದಿಗೆ ಒಬ್ಬಿಬ್ಬರು ಹಿರಿಯರು ನೀಡುವ ಶಾಸ್ತ್ರೀಯ ಸಲಹೆಸೂಚನೆಗಳು ಅವನಿಗೆ ಸಾಕಾದೀತು. ಆದರೆ ಆ ಹುಡುಗನು ಪದೇ ಪದೇ ಬಿಡದೆ ಸಿಗರೇಟು ಸೇದುತ್ತಾನಾದರೆ ಅದು ಶರೀರವನ್ನು ಉದ್ದೇಶಪೂರ್ವಕವಾಗಿ ಅಶುದ್ಧಮಾಡುವ ಕಲ್ಮಶವಾಗಿರುವುದು ಮತ್ತು ಈ ಘೋರ ಅಶುದ್ಧತೆಯ ಪ್ರಕರಣವನ್ನು ಪರೀಕ್ಷಿಸಲು ನ್ಯಾಯನಿರ್ಣಾಯಕ ಕಮಿಟಿಯ ಮುಂದೆ ತರಲಾಗುವುದು. (2 ಕೊರಿಂಥ 7:1) ಆ ಹುಡುಗನು ಪಶ್ಚಾತ್ತಾಪಪಡದಿದ್ದಲ್ಲಿ ಅವನನ್ನು ಬಹಿಷ್ಕರಿಸಲಾಗುವುದು.
ಕೆಲವು ಕ್ರೈಸ್ತರು ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿ ಒಳಗೂಡಿದ್ದಾರೆ. ಇದು ದೇವರಿಗೆ ಅಸಹ್ಯ ಮತ್ತು ಜೊತೆ ವಿಶ್ವಾಸಿಯೊಬ್ಬನು ಇದನ್ನು ಮಾಡಿದ್ದು ಗೊತ್ತಾದಾಗ ಹಿರಿಯರಿಗೆ ದಿಗಿಲಾಗಬಹುದು. ಆದರೆ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಎಲ್ಲಾ ಪ್ರಕರಣಗಳು ನ್ಯಾಯನಿರ್ಣಾಯಕ ಕಮಿಟಿಯಿಂದ ವಿಚಾರಣೆಯನ್ನು ಕೇಳಿಕೊಳ್ಳುವುದಿಲ್ಲ. ಉದಾಹರಣೆಗೆ, ಒಬ್ಬ ಸಹೋದರನು ಸಾಫ್ಟ್-ಕೋರ್ ಎನ್ನಲಾಗುವ ಅಶ್ಲೀಲ ಚಿತ್ರಗಳನ್ನು ಹಲವಾರು ಸಲ ನೋಡಿದ್ದಾನೆ ಎಂದು ನೆನಸಿ. ಈಗ ಅವನು ನಾಚಿಕೊಂಡು ಹಿರಿಯನಿಗೆ ಅದನ್ನು ಅರಿಕೆಮಾಡುತ್ತಾನೆ ಮತ್ತು ಆ ಪಾಪವನ್ನು ಪುನಃ ಮಾಡದಂತೆ ನಿರ್ಧಾರ ಮಾಡಿದ್ದಾನೆ. ಹಿರಿಯನು ಆಗ ತೀರ್ಮಾನಿಸಬಹುದು ಏನೆಂದರೆ ಈ ಸಹೋದರನ ನಡವಳಿಕೆಯು “ಅಶುದ್ಧತೆಯನ್ನು ಅತ್ಯಾಶೆಯಿಂದ” ನಡೆಸುವ ಹಂತಕ್ಕೆ ಏರಿರುವುದಿಲ್ಲ; ಇಲ್ಲವೆ ಸಡಿಲು ನಡತೆಯ ಸೂಚಕವಾದ ನಿರ್ಲಜ್ಜಾಭಾವವನ್ನು ಅವನು ತೋರಿಸಿರುವುದೂ ಇಲ್ಲ ಎಂಬುದಾಗಿ. ಇಲ್ಲಿ ಯಾವ ನ್ಯಾಯನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲಾಗದಿದ್ದರೂ ಈ ರೀತಿಯ ಅಶುದ್ಧತೆಗೆ ಬಲವಾದ ಶಾಸ್ತ್ರೀಯ ಸಲಹೆ ಕೊಡಲ್ಪಡಬೇಕು ಮತ್ತು ಅನಂತರ ಹಿರಿಯರಿಂದ ಹೆಚ್ಚಿನ ಸಹಾಯವೂ ಅವನಿಗೆ ಬೇಕಾಗಬಹುದು.
ಆದರೂ ಕ್ರೈಸ್ತನೊಬ್ಬನು ಹೇಯವೂ ಲೈಂಗಿಕವಾಗಿ ಅಸಹ್ಯವಾದ ಅಶ್ಲೀಲ ಚಿತ್ರಗಳನ್ನು ಹಲವಾರು ವರ್ಷಗಳಿಂದ ಗುಪ್ತವಾಗಿ ನೋಡಿದ್ದಾನೆಂದು ನೆನಸಿ ಮತ್ತು ಅದನ್ನು ಮುಚ್ಚಿಡಲು ಅವನಿಂದ ಸಾಧ್ಯವಾದದ್ದೆಲ್ಲವನ್ನೂ ಮಾಡಿದ್ದಾನೆ. ಅಂಥ ಅಶ್ಲೀಲ ಚಿತ್ರದಲ್ಲಿ ಸಾಮೂಹಿಕ ಅತ್ಯಾಚಾರ, ಕಟ್ಟಿಹಾಕಿ ಮಾಡುವ ಸಂಭೋಗ, ಕ್ರೌರ್ಯ ರತಿ, ಸ್ತ್ರೀಯರನ್ನು ಕ್ರೂರವಾಗಿ ಹಿಂಸಿಸುವುದು, ಮಕ್ಕಳ ಲಂಪಟ ಕೃತ್ಯಗಳು ಸೇರಿರಬಹುದು. ಅವನ ಈ ದುರ್ನಡತೆ ಇತರರಿಗೆ ತಿಳಿದು ಬಂದಾಗ ಅವನಿಗೆ ತುಂಬ ನಾಚಿಕೆಯಾಗುತ್ತದೆ. ಅವನು ನಿರ್ಲಜ್ಜೆಯಿಂದ ಇರಲಿಲ್ಲವಾದರೂ ಹಿರಿಯರು ನಿರ್ಣಯಿಸಬಹುದು ಏನೆಂದರೆ ಅವನು ತನ್ನನ್ನು ಈ ಹೇಯ ಹವ್ಯಾಸಕ್ಕೆ ಬಿಟ್ಟುಕೊಟ್ಟಿದ್ದಾನೆ ಮತ್ತು “ಅಶುದ್ಧತೆಯನ್ನು ಅತ್ಯಾಶೆಯಿಂದ” ನಡೆಸಿದ್ದಾನೆ ಅಂದರೆ ಅದು ಘೋರ ಅಶುದ್ಧತೆಯೇ ಎಂದು. ಆಗ ಈ ಘೋರ ಅಶುದ್ಧತೆಯ ಕಾರಣ ಒಂದು ನ್ಯಾಯನಿರ್ಣಾಯಕ ಕಮಿಟಿಯು ನೇಮಿಸಲ್ಪಡುವುದು. ತಪ್ಪಿತಸ್ಥನು ಮನಃಪೂರ್ವಕ ಪಶ್ಚಾತ್ತಾಪವನ್ನು ತೋರಿಸದಿದ್ದಲ್ಲಿ ಮತ್ತು ಅಶ್ಲೀಲ ಚಿತ್ರವನ್ನು ಇನ್ನೆಂದೂ ನೋಡೆನು ಎಂದು ನಿರ್ಧರಿಸದಿದ್ದಲ್ಲಿ ಅವನು ಬಹಿಷ್ಕರಿಸಲ್ಪಡುವನು. ಅಶ್ಲೀಲ ಚಿತ್ರಗಳನ್ನು ನೋಡಲು ಅವನು ಇತರರನ್ನು ತನ್ನ ಮನೆಗೆ ಕರೆದಿದ್ದಲ್ಲಿ ಅವನು ಕಾರ್ಯತಃ ಅದನ್ನು ಪ್ರವರ್ಧಿಸುವವನಾಗಿದ್ದಾನೆ. ಹೀಗೆ ಸಡಿಲು ನಡತೆಯನ್ನು ಸೂಚಿಸುವ ನಿರ್ಲಜ್ಜಾಭಾವಕ್ಕೆ ಪುರಾವೆಯನ್ನು ಕೊಡುತ್ತಾನೆ.
ಬೈಬಲಿನಲ್ಲಿರುವ “ಸಡಿಲು ನಡತೆ” ಎಂಬ ಪದವು ಯಾವಾಗಲೂ ಗಂಭೀರ ಪಾಪವನ್ನು, ಹೆಚ್ಚಾಗಿ ಲೈಂಗಿಕ ತರದ ಪಾಪಗಳನ್ನು ಒಳಗೂಡಿದೆ. ಸಡಿಲು ನಡತೆಯನ್ನು ಗುರುತಿಸಲು ಪ್ರಯತ್ನಿಸುವಾಗ ಹಿರಿಯರು ನಿರ್ಲಜ್ಜೆ, ವಿಷಯಲಂಪಟತೆ, ಹೊಲಸುತನ, ನಾಚಿಕೆಗೇಡಿತನ ಮತ್ತು ಸಾಮಾಜಿಕ ಸಭ್ಯತೆಗೆ ಧಕ್ಕೆ ಬರಿಸುವ ವಿಷಯ ಅಲ್ಲಿದೆಯೋ ಎಂಬುದನ್ನು ನೋಡಬೇಕು. ಇನ್ನೊಂದು ಕಡೆ ಒಬ್ಬನು ನಿರ್ಲಜ್ಜೆಯನ್ನು ತೋರಿಸಲಿಕ್ಕಿಲ್ಲ, ಆದರೂ ಯೆಹೋವ ದೇವರ ನಿಯಮದ ಘೋರ ಉಲ್ಲಂಘನೆಗಳನ್ನು “ಅತ್ಯಾಶೆಯಿಂದ” ಮಾಡಿರಬಹುದು. ಇಂಥ ಪ್ರಕರಣಗಳು ಅವು ಒಳಗೂಡಿರುವ ಘೋರ ಅಶುದ್ಧತೆಯ ಆಧಾರದ ಮೇಲೆ ನಿರ್ವಹಿಸಲ್ಪಡಬೇಕು.
ಘೋರ ಅಶುದ್ಧತೆಗೆ ಅಥವಾ ಸಡಿಲು ನಡತೆಗೆ ದೋಷಿಯಾಗುವಷ್ಟು ದೂರ ಒಬ್ಬನು ಹೋಗಿದ್ದಾನೋ ಇಲ್ಲವೋ ಎಂದು ನಿರ್ಧರಿಸುವುದು ಒಂದು ಗಂಭೀರ ಜವಾಬ್ದಾರಿಯಾಗಿದೆ ಯಾಕೆಂದರೆ ಜೀವಗಳು ಅದರಲ್ಲಿ ಒಳಗೂಡಿವೆ. ಅಂಥ ಪ್ರಕರಣಗಳನ್ನು ನಿರ್ವಹಿಸುವವರು ದೇವರ ಪವಿತ್ರಾತ್ಮಕ್ಕಾಗಿ, ವಿವೇಚನೆಗಾಗಿ, ತಿಳುವಳಿಕೆಗಾಗಿ ಕೇಳುತ್ತಾ ಪ್ರಾರ್ಥನಾಪೂರ್ವಕವಾಗಿ ಅವನ್ನು ಮಾಡಬೇಕು. ಸಭೆಯ ಶುದ್ಧತೆಯನ್ನು ಹಿರಿಯರು ಕಾಪಾಡುವ ಅಗತ್ಯವಿದೆ ಮತ್ತು ತಮ್ಮ ತೀರ್ಮಾನವನ್ನು ದೇವರ ವಾಕ್ಯದ ಮೇಲೂ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮಾರ್ಗದರ್ಶನದ ಮೇಲೂ ಆಧಾರಿಸಬೇಕು. (ಮತ್ತಾಯ 18:18; 24:45) ಈ ಕೆಟ್ಟದಿನಗಳಲ್ಲಿ ಹಿರಿಯರು ಈ ಕೆಳಗಿನ ಮಾತುಗಳನ್ನು ಎಂದಿಗಿಂತಲೂ ಹೆಚ್ಚಾಗಿ ಮನಸ್ಸಿನಲ್ಲಿಡಬೇಕು: “ನೀವು ಹೇಗೆ ಕೆಲಸನಡಿಸುತ್ತೀರಿ ಎಂಬದರ ವಿಷಯ ನೋಡಿಕೊಳ್ಳಿರಿ. ನೀವು ನ್ಯಾಯತೀರಿಸುವದು ಮನುಷ್ಯರಿಗೋಸ್ಕರವಲ್ಲ, ಯೆಹೋವನಿಗೋಸ್ಕರವೇ.”—2 ಪೂರ್ವಕಾಲವೃತ್ತಾಂತ 19:6. (w06 7/15)