ಬೈಬಲಿನ ದೃಷ್ಟಿಕೋನ
ಕ್ರೀಡೆಗಳಲ್ಲಿನ ಸ್ಪರ್ಧೆಯು ತಪ್ಪಾಗಿದೆಯೋ?
ಚದುರಂಗದಂಥ ಒಂದು ಆಟವನ್ನು ಆಡುತ್ತಾ, ಇಬ್ಬರು ವಯಸ್ಸಾದ ಪುರುಷರು ಒಂದು ಪ್ರಕಾಶಮಾನವಾದ ದಿನದಂದು ಉದ್ಯಾನವನವೊಂದರಲ್ಲಿ ಕುಳಿತುಕೊಂಡಿದ್ದಾರೆ. ಹತ್ತಿರದಲ್ಲೇ ಮುಟ್ಟುವ ಆಟವನ್ನು ಆಡುತ್ತಿರುವ ಮಕ್ಕಳ ಕಿರಿಚುತ್ತಿರುವ ಮತ್ತು ಓಡುತ್ತಿರುವ ಶಬ್ದಗಳು ಕೇಳಿಸುತ್ತಿವೆ. ಸಮೀಪದಲ್ಲೇ, ಬಾಸ್ಕೆಟ್ ಬಾಲ್ನ ಆಟವೊಂದರಲ್ಲಿ ಯೌವನಸ್ಥರ ಗುಂಪೊಂದು ಆನಂದಿಸುತ್ತಿದೆ. ಹೌದು, ಪ್ರತಿ ದಿನ ನಮ್ಮ ಸುತ್ತಲಿರುವವರೆಲ್ಲರೂ, ಯೌವನಸ್ಥರೂ ವೃದ್ಧರೂ, ಕ್ರೀಡೆಗಳಲ್ಲಿ ಮತ್ತು ಆಟಗಳಲ್ಲಿ ಸಂತೋಷಿಸುತ್ತಾರೆ. ಅವರು ಭಾಗವಹಿಸುವಾಗ, ಅಧಿಕಾಂಶ ಜನರು ತಮ್ಮ ಕೈಲಾದಷ್ಟು ಅತ್ಯುತ್ತಮವಾಗಿ ನಿರ್ವಹಿಸಲು ಕಠಿನವಾಗಿ ಪ್ರಯತ್ನಿಸುತ್ತಾರೆ. ಪ್ರಾಯಶಃ ನೀವೂ ಹಾಗೆ ಮಾಡುತ್ತೀರಿ.
ಆದರೆ ಸ್ಪರ್ಧೆಯ ಅಂಥ ಸ್ನೇಹಮಯ ರೂಪಗಳು ತಪ್ಪಾಗಿವೆಯೆಂದು ಹೇಳಸಾಧ್ಯವಿದೆಯೋ? ಗಲಾತ್ಯ 5:26 (NW)ರಲ್ಲಿರುವ ಅಪೊಸ್ತಲ ಪೌಲನ ಬುದ್ಧಿವಾದದ ಕುರಿತಾಗಿ ಅನೇಕರು ಅರಿವುಳ್ಳವರಾಗಿದ್ದಾರೆ, ಕ್ರೈಸ್ತರು “ಒಬ್ಬರು ಇನ್ನೊಬ್ಬರೊಂದಿಗೆ ಸ್ಪರ್ಧೆಯನ್ನು ಎಬ್ಬಿಸು”ತ್ತಿರಬಾರದೆಂದು ಅಲ್ಲಿ ಅವನು ಹೇಳಿದನು. ಇದರ ನೋಟದಲ್ಲಿ, ಮನೋರಂಜನಾತ್ಮಕ ಕ್ರೀಡೆ ಮತ್ತು ಆಟಗಳಲ್ಲಿ ಸ್ಪರ್ಧಿಸುವುದು ಕ್ರೈಸ್ತರಿಗೆ ಅಯೋಗ್ಯವಾಗಿರುವುದೋ?
ಸರಳವಾಗಿ ಹೇಳುವುದಾದರೆ, ಇಲ್ಲ. ಅದು ಹಾಗೇಕೆ? ಆ ಪ್ರಶ್ನೆಯನ್ನು ಉತ್ತರಿಸುವ ಮುನ್ನ, ಕ್ರೀಡೆಗಳ ಮತ್ತು ಆಟಗಳ ಇತಿಹಾಸದತ್ತ ನಾವು ಸಂಕ್ಷಿಪ್ತವಾದ ನೋಟವನ್ನು ಹರಿಸೋಣ.
ಕ್ರೀಡೆಗಳ ಮತ್ತು ಆಟಗಳ ಇತಿಹಾಸ
ಕ್ರೀಡೆ ಮತ್ತು ಆಟಗಳಲ್ಲಿನ ಭಾಗವಹಿಸುವಿಕೆಯು ಪುರಾತನ ಸಮಯಗಳಷ್ಟು ಹಿಂದಿನ ಕಾಲದ್ದಾಗಿದೆ ಮತ್ತು ಇದು—ದೇವರ ಜನರ ಇತಿಹಾಸವನ್ನು ಒಳಗೊಂಡು—ಇತಿಹಾಸದಾದ್ಯಂತ ಒಂದು ನಿರಂತರವಾದ ವೈಶಿಷ್ಟ್ಯವಾಗಿತ್ತು. ‘ಚೆಂಡು’ ಅನ್ನುವ ಪದವು ಬೈಬಲಿನಲ್ಲಿ ಕೂಡ ಕಂಡುಬರುತ್ತದೆ. ಯೆಶಾಯ 22:18ರಲ್ಲಿ ದುಷ್ಟ ಮನುಷ್ಯರ ವಿರುದ್ಧವಾಗಿ ಯೆಹೋವ ದೇವರ ಉಗ್ರ ಖಂಡನೆಗಳನ್ನು ಉಲ್ಲೇಖಿಸುತ್ತಿರುವಾಗ, ಅದು ಹೇಳುವುದು: “(ಅವರನ್ನು) ಚಂಡಿನಂತೆ ಸುತ್ತಿ ಸುತ್ತಿ . . . ಬಿಸಾಡುವನು.” ಕೆಲವು ಆಧುನಿಕ ಚೆಂಡುಗಳು—ಗಾಲ್ಫ್ ಬಾಲ್ಗಳು ಮತ್ತು ಬೇಸ್ಬಾಲ್ಗಳಂತೆ—ಈಗಲೂ ವಸ್ತುಗಳನ್ನು ಬಿಗಿಯಾಗಿ ಸುತ್ತುವ ಮೂಲಕ ಮಾಡಲ್ಪಡುತ್ತವೆ. ಅದೇ ವಚನವನ್ನು ಕಿಂಗ್ ಜೇಮ್ಸ್ ಬೈಬಲ್ ಹೀಗೆ ಭಾಷಾಂತರಿಸುತ್ತದೆ: “ಆತನು . . . ನಿನ್ನನ್ನು ಒಂದು ಚೆಂಡಿನಂತೆ ಮೇಲೆ ಎಸೆಯುವನು.” ಈ ಸಾದೃಶ್ಯವು ಸಮಂಜಸವಾಗಿರಲು, ಆ ಸಮಯದಲ್ಲಿ ಜೀವಿಸುತ್ತಿದ್ದವರಿಂದ ಚೆಂಡುಗಳು ಉಪಯೋಗಿಸಲ್ಪಟ್ಟಿರಲೇಬೇಕು.
ಅದಕ್ಕೆ ಕೂಡಿಸಿ, ಬೈಬಲಿನಲ್ಲಿ ಕುಲಪತಿಯಾದ ಯಾಕೋಬನು ಒಬ್ಬ ದೇವದೂತನೊಂದಿಗೆ ಹೋರಾಡುತ್ತಿರುವ ಉದಾಹರಣೆಯಿದೆ. ತಾಸುಗಟ್ಟಲೆ ನಡೆದ ಆ ಹೆಣಗಾಡುವಿಕೆಯು ಅನಿರ್ಧಾರಿತವಾಗಿದ್ದುದರಿಂದ, ಈ ದಾಖಲೆಯು ಯಾಕೋಬನ ವತಿಯಿಂದ ಮುಂದಾಗಿಯೇ ಅಭ್ಯಸಿಸಲ್ಪಟ್ಟಿದ್ದ ತುಸು ನೈಪುಣ್ಯದ ಕುರಿತು ಪೂರ್ವಸೂಚಿಸುವಂತೆ ತೋರುತ್ತದೆ. (ಆದಿಕಾಂಡ 32:24-26) ರಸಕರವಾಗಿ, ಕೆಲವು ಪಂಡಿತರಿಗನುಸಾರ, ಹೋರಾಟದ ನಿಯಮಗಳ ಕುರಿತು ಯಾಕೋಬನು ತಿಳಿದಿದ್ದನೆಂದು ದಾಖಲೆಯು ಸೂಚಿಸಬಹುದು. ಇಸ್ರಾಯೇಲ್ಯರು ಬಹುಶಃ ಧನುರ್ವಿದ್ಯೆ—ಅಭ್ಯಾಸ ಮತ್ತು ನೈಪುಣ್ಯವನ್ನು ಕೇಳಿಕೊಳ್ಳುವ ಮತ್ತೊಂದು ಕ್ರೀಡೆ—ಯಲ್ಲಿ ಕೂಡ ಭಾಗವಹಿಸಿದರು. (1 ಸಮುವೇಲ 20:20; ಪ್ರಲಾಪಗಳು 3:12) ಓಟವು ಮತ್ತೊಂದು ಅಂಗಸಾಧನಾ ಸಾಹಸವಾಗಿತ್ತು, ಇದಕ್ಕಾಗಿ ಹಿಂದಿನ ಪುರುಷರು ವ್ಯಾಯಾಮಮಾಡಿ ತರಬೇತು ಪಡೆದುಕೊಂಡರು.—2 ಸಮುವೇಲ 18:23-27; 1 ಪೂರ್ವಕಾಲವೃತ್ತಾಂತ 12:8.
ಮನಸ್ಸನ್ನು ಒಳಗೂಡಿಸಿದ—ಒಗಟುಗಳ ಪರ್ಯಾಲೋಚನೆಗಳಂಥ—ಆಟಗಳು ಸ್ಪಷ್ಟವಾಗಿ ಜನಪ್ರಿಯವೂ ಹೆಚ್ಚು ಗೌರವವುಳ್ಳವುಗಳೂ ಆಗಿ ವೀಕ್ಷಿಸಲ್ಪಟ್ಟಿದ್ದವು. ಇದರ ಅತ್ಯಂತ ಗಮನಾರ್ಹವಾದ ಉದಾಹರಣೆಯು ಪ್ರಾಯಶಃ, ಫಿಲಿಷ್ಟಿಯರಿಗೆ ಸಂಸೋನನು ಪರ್ಯಾಲೋಚನೆಗಾಗಿ ಮುಂದಿಟ್ಟ ಒಂದು ಒಗಟಾಗಿದೆ.—ನ್ಯಾಯಸ್ಥಾಪಕರು 14:12-18.
ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, ಕ್ರೀಡೆಗಳು ಮತ್ತು ಆಟಗಳು ಕೆಲವೊಮ್ಮೆ ಕ್ರೈಸ್ತ ಜೀವಿತಕ್ಕಾಗಿ ರೂಪಕಾಲಂಕಾರಗಳಾಗಿ ಉಪಯೋಗಿಸಲ್ಪಟ್ಟಿದ್ದವು. ದೃಷ್ಟಾಂತಕ್ಕಾಗಿ, 1 ಕೊರಿಂಥ 9:24, 25ರಲ್ಲಿ, ಪೌಲನು ಒಬ್ಬ ಕ್ರೀಡಾಪಟುವಿನ ತರಬೇತು ಪದ್ಧತಿಯನ್ನು ಉಲ್ಲೇಖಿಸುತ್ತಾನೆ ಮತ್ತು ಅದನ್ನು ಸ್ವನಿಯಂತ್ರಣ ಮತ್ತು ಸಹನೆಗಾಗಿ ಕ್ರೈಸ್ತನೊಬ್ಬನಿಗಿರುವ ಅಗತ್ಯಕ್ಕೆ ಅನ್ವಯಿಸುತ್ತಾನೆ. ಹಾಗೂ, ಯೆಹೋವನು ತನ್ನ ಅಧಿಕ ಸೃಷ್ಟಿಗಳೊಳಗೆ—ಮಾನವನೂ ಮತ್ತು ಮೃಗವೂ ಆಟವಾಡಲು ಸಮಯವನ್ನು ಕಂಡುಕೊಳ್ಳುವಂತೆ—ವಿನೋದದ ತುಸು ಎಳೆಯನ್ನು ಸಂಘಟಿಸಿದನು ಎಂಬುದು ಸ್ಫುಟ.—ಯೋಬ 40:20; ಜೆಕರ್ಯ 8:5; ಹೋಲಿಸಿರಿ ಇಬ್ರಿಯ 12:1.
ಸ್ಪರ್ಧೆಯು ವಿಪರೀತಕ್ಕೆ ಹೋಗುವಾಗ
ಹಾಗಾದರೆ, ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ “ಒಬ್ಬರು ಇನ್ನೊಬ್ಬರೊಂದಿಗೆ ಸ್ಪರ್ಧೆಯನ್ನು ಎಬ್ಬಿಸಬಾರದು” ಎಂದು ಹೇಳಿದಾಗ ಅವನು ಅವರಿಗೆ ಏನನ್ನು ಹೇಳುತ್ತಿದ್ದನು? (ಗಲಾತ್ಯ 5:26, NW) ಪೂರ್ವಾಪರದಲ್ಲಿ ಉತ್ತರವು ಅಡಗಿದೆ. ಅವರು “ಅಹಂಕಾರಿ”ಗಳಾಗಬಾರದು, ಅಥವಾ ಇತರ ಬೈಬಲ್ ಭಾಷಾಂತರಗಳು ಅದನ್ನು ಹೇಳುವ ರೀತಿಯಲ್ಲಿ, “ದುರಹಂಕಾರ,” “ಒಣಹೆಮ್ಮೆ,” “ವ್ಯರ್ಥ ಪ್ರತಿಷ್ಠೆಯ ಅಭಿಲಾಷೆ”ಯುಳ್ಳವರಾಗಬಾರದು ಎಂದು ಹೇಳುವ ಮೂಲಕ ಪೌಲನು ಈ ಹೇಳಿಕೆಯ ಪ್ರಸ್ತಾವನೆ ಮಾಡಿದನು. ಪೌಲನ ದಿನದ ಕ್ರೀಡಾಪಟುಗಳ ನಡುವೆ ಕೀರ್ತಿಯ ಮತ್ತು ಪ್ರತಿಷ್ಠೆಯ ಬೆನ್ನಟ್ಟುವಿಕೆಯು ಸಲುವಳಿಯಲ್ಲಿತ್ತು.
ಹಾಗೆಯೇ ಇಂದಿನ ಒಣಹೆಮ್ಮೆಯ ಲೋಕದಲ್ಲಿ, ಹೆಚ್ಚೆಚ್ಚು ಕ್ರೀಡಾಪಟುಗಳು ಬಿಂಕವುಳ್ಳವರಾಗಿ ಸ್ವತಃ ತಮಗೆ ಮತ್ತು ತಮ್ಮ ನೈಪುಣ್ಯಗಳಿಗೆ ಗಮನಸೆಳೆಯುವುದನ್ನು ಆಶ್ರಯಿಸುತ್ತಾರೆ. ಕೆಲವರು ಇತರರನ್ನು ತುಚ್ಛರೆಂದೆಣಿಸುವಷ್ಟು ದೂರ ಹೋಗುತ್ತಾರೆ. ಹಂಗಿಸುವುದು, ದೋಷಾರೋಪಣೆ ಮಾಡುವುದು, ಮತ್ತು ಶಾಬ್ದಿಕ ಹೀನೈಸುವಿಕೆ, ಅಥವಾ ಕೆಲವು ಕ್ರೀಡಾಪಟುಗಳು ಕರೆಯುವಂತೆ “ಖಂಡನೆಯ ಭಾಷಣ,” ಇವು ವೇಗಗತಿಯಲ್ಲಿ ರೂಢಿಯಾದ ವಿಷಯವಾಗಿ ಪರಿಣಮಿಸುತ್ತಿವೆ. ಇದೆಲ್ಲವು ಪೌಲನು ಯಾವುದನ್ನು ಗಲಾತ್ಯ 5:26 (NW)ರ ಅಂತ್ಯ ಭಾಗದಲ್ಲಿ ಸೂಚಿಸಿದನೋ ಅದಕ್ಕೆ—ಅಸೂಯೆಗೆ—ನಡೆಸುತ್ತಾ, “ಸ್ಪರ್ಧೆಯನ್ನು ಎಬ್ಬಿಸ”ಸಾಧ್ಯವಿದೆ.
ನಿಕೃಷ್ಟ ಸನ್ನಿವೇಶಗಳ ಕೆಳಗೆ, ಸಮತೆ ತಪ್ಪಿದ ಸ್ಪರ್ಧೆಯು ಕಾದಾಟಗಳಿಗೆ ಮತ್ತು ಮರಣಕ್ಕೂ ನಡೆಸುತ್ತದೆ. “ಪ್ರಾಯಸ್ಥರು ಎದ್ದು [ಅವರ] ಮುಂದೆ ಆಡಲಿ” ಎಂಬುದಾಗಿ ಅಬ್ನೇರ ಮತ್ತು ಯೋವಾಬರು ಒಪ್ಪಿಕೊಂಡಾಗ, ಸೌಲನ ಮತ್ತು ದಾವೀದನ ಮನುಷ್ಯರ ನಡುವೆ ಆದ ಸಂಧಿಸುವಿಕೆಯನ್ನು ಪರಿಗಣಿಸಿರಿ. (2 ಸಮುವೇಲ 2:14-32, ಟಾನಾಕ್) ಇದು ಒಂದು ರೀತಿಯ ಮಲ್ಲಯುದ್ಧ ಕ್ರೀಡಾಸ್ಪರ್ಧೆಯನ್ನು ಸೂಚಿಸುವಂತೆ ತೋರುತ್ತದೆ. ಸ್ಪರ್ಧೆಯು ಯಾವುದೇ ಆಗಿದ್ದರೂ, ಅದು ಅತಿ ಬೇಗನೆ ಒಂದು ಭೀಷಣವಾದ ಮತ್ತು ರಕ್ತಮಯ ಕದನವಾಗಿ ಅವನತಿಗೊಂಡಿತು.
ಒಂದು ಸಮತೆಯುಳ್ಳ ವೀಕ್ಷಣ
ಮನೋರಂಜನಾತ್ಮಕ ಕ್ರೀಡೆಗಳು ಮತ್ತು ಆಟಗಳು ನವಚೈತನ್ಯದಾಯಕವಾಗಿರಬೇಕು—ನಿರಾಶಾದಾಯಕವಲ್ಲ. ದೇವರಿಗೆ ಮತ್ತು ನಮ್ಮ ಜೊತೆಮಾನವರಿಗಿರುವ ನಮ್ಮ ಯೋಗ್ಯತೆಯು, ಕ್ರೀಡೆಗಳ ಅಥವಾ ಆಟಗಳಲ್ಲಿನ ನಮ್ಮ ನೈಪುಣ್ಯಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ವಿಷಯಗಳನ್ನು ಯಥಾದೃಷ್ಟಿಯಲ್ಲಿಡುವ ಮೂಲಕ ನಾವು ಇದನ್ನು ಪಡೆಯಬಲ್ಲೆವು.
ನಮ್ಮೊಳಗಿರುವ ಶಾರೀರಿಕ ಅಥವಾ ಮಾನಸಿಕ ಸಾಮರ್ಥ್ಯಗಳ ಕಾರಣ ಹೆಚ್ಚುಗಾರಿಕೆಯ ಭಾವನೆಗಳನ್ನು ಮೇಲಕ್ಕೆ ಬರಲು ಅನುಮತಿಸುವುದು ಮೂರ್ಖತನವಾಗಿರುವುದು. ಹೀಗೆ, ಪ್ರೀತಿಯು ಹೊಗಳಿಕೊಳ್ಳದಿರುವುದರಿಂದ, ನಾವು ಇತರರಲ್ಲಿ ಅಸೂಯೆಯನ್ನು ಕೆರಳಿಸದಂತೆ ಸ್ವತಃ ನಮಗೆ ಗಮನಸೆಳೆಯುವ ಅಯೋಗ್ಯವಾದ ಲೌಕಿಕ ಪ್ರವೃತ್ತಿಯನ್ನು ನಾವು ತ್ಯಜಿಸೋಣ. (1 ಕೊರಿಂಥ 13:4; 1 ಪೇತ್ರ 2:1) ತಂಡದ ಆಟಗಾರರ ನಡುವೆ ಉದ್ರೇಕ, ಉತ್ಸಾಹದ ಸ್ವಪ್ರೇರಣಾ ಅರಚುವಿಕೆಗಳನ್ನು ಮತ್ತು ಅಭಿನಂದನೆಗಳನ್ನು ಎದುರುನೋಡುವುದು ಯುಕ್ತವಾಗಿದೆಯಾದರೂ, ಈ ಭಾವಗಳು ಹತೋಟಿ ಮೀರಿ ಆಡಂಬರದ ತೋರಿಕೆಗಳಾಗುವಂತೆ ನಾವು ಬಯಸೆವು.
ಇತರರ ಯೋಗ್ಯತೆಯನ್ನು ಕ್ರೀಡೆ ಮತ್ತು ಆಟಗಳಲ್ಲಿನ ಅವರಿಗಿರುವ ಸಾಮರ್ಥ್ಯಗಳ ಮೂಲಕ ನಾವೆಂದೂ ಅಳೆಯೆವು. ತದ್ರೀತಿಯಲ್ಲಿ, ನೈಪುಣ್ಯದ ಕೊರತೆಯ ಕಾರಣ ನಾವು ನಮ್ಮ ಕುರಿತು ಅಲ್ಪರೆಂದು ಆಲೋಚಿಸಲು ಬಯಸೆವು. ಅದು ಸ್ಕೋರ್ಗಳ ಲೆಕ್ಕವನ್ನಿಡುವುದು ತಪ್ಪಾಗಿದೆ ಎಂಬುದನ್ನು ಅರ್ಥೈಸುತ್ತದೋ? ಹಾಗಿರಬೇಕೆಂದಿಲ್ಲ. ಬದಲಿಗೆ ನಿಜವಾಗಿಯೂ ಯಾವುದೇ ಆಟವು ಎಷ್ಟೊಂದು ಅಮುಖ್ಯವಾಗಿದೆ ಎಂಬುದನ್ನು ನಾವು ಜ್ಞಾಪಕದಲ್ಲಿಡಬೇಕು—ಜನರ ನಿಜ ಯೋಗ್ಯತೆಯು ಅವರು ಎಷ್ಟು ಉತ್ತಮವಾಗಿ ಆಟವಾಡುತ್ತಾರೆಂಬುದರ ಮೇಲೆ ಆಧರಿಸುವುದಿಲ್ಲ. ತಂಡದ ಆಟದಲ್ಲಿ, ಯಾವುದೇ ಒಂದು ತಂಡವು ಸದಾ ಗೆಲ್ಲದಂತೆ, ಕೆಲವು ತಂಡಗಳು ಕ್ರಮವಾಗಿ ಬೇರೆ ಬೇರೆ ಆಟಗಾರರನ್ನು ಪ್ರತಿ ತಂಡದಲ್ಲಿ ಬದಲಾಯಿಸುತ್ತವೆ.
ಕ್ರೀಡೆಗಳು ಮತ್ತು ಆಟಗಳು ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವಾಗ, ಅವು ಕೇವಲ ವಿರಳವಾಗಿ ಉಲ್ಲೇಖಿಸಲ್ಪಟ್ಟಿವೆ ಎಂಬುದನ್ನು ಕ್ರೈಸ್ತರು ಯಾವಾಗಲೂ ಮನಸ್ಸಿನಲ್ಲಿಡಬೇಕು. ಬೈಬಲಿನಲ್ಲಿನ ಕ್ರೀಡೆಗಳ ಬರಿಯ ಉಲ್ಲೇಖವು, ಸಕಲ ಕ್ರೀಡೆಗಳ ಒಂದು ಸಂಪೂರ್ಣ ಅನುಮೋದನೆಯನ್ನು ನಿಯೋಜಿಸುತ್ತದೆ ಎಂದು ತೀರ್ಮಾನಿಸುವುದು ಒಂದು ತಪ್ಪುತಿಳಿವಳಿಕೆಯಾಗಿರುವುದು. (1 ಕೊರಿಂಥ 9:26ನ್ನು ಕೀರ್ತನೆ 11:5ರೊಂದಿಗೆ ಹೋಲಿಸಿರಿ.) ಹಾಗೂ, ಪೌಲನು “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, [“ದಿವ್ಯ,” NW] ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು,” ಎಂದು ದಾಖಲಿಸಿದನು.—1 ತಿಮೊಥೆಯ 4:8.
ಹೀಗೆ ತಮ್ಮ ತಕ್ಕ ಸ್ಥಾನದಲ್ಲಿ, ಕ್ರೀಡೆಗಳು ಮತ್ತು ಆಟಗಳು ಆನುಭೋಗ್ಯವೂ ನವಚೈತನ್ಯದಾಯಕವೂ ಆಗಿವೆ. ಬೈಬಲ್ ಎಲ್ಲಾ ಸ್ಪರ್ಧೆಯನ್ನು ಖಂಡಿಸುವುದಿಲ್ಲ, ಬದಲಿಗೆ ನಿರರ್ಥಕತೆ, ಪ್ರತಿಸ್ಪರ್ಧೆ, ದುರಾಶೆ, ಅಸೂಯೆ, ಅಥವಾ ಹಿಂಸಾಚಾರವನ್ನು ಎಬ್ಬಿಸುವ ಸ್ಪರ್ಧೆಯನ್ನು ಖಂಡಿಸುತ್ತದೆ.