ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ
“ದೇವರ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ; ಅದರಿಂದಲೇ ನೀವು . . . ಮುದ್ರೆಯೊತ್ತಲ್ಪಟ್ಟಿದ್ದೀರಿ.” —ಎಫೆ. 4:30.
1. ಯೆಹೋವನು ಲಕ್ಷಾಂತರ ಮಂದಿ ಜನರಿಗಾಗಿ ಏನನ್ನು ಮಾಡಿದ್ದಾನೆ, ಮತ್ತು ಅವರಿಗೆ ಯಾವ ಕರ್ತವ್ಯವಿದೆ?
ಯೆಹೋವನು ಈ ತೊಂದರೆಭರಿತ ಲೋಕದಲ್ಲಿ ಜೀವಿಸುತ್ತಿರುವ ಲಕ್ಷಾಂತರ ಮಂದಿ ಜನರಿಗೆ ವಿಶೇಷವಾದ ಸಂಗತಿಯೊಂದನ್ನು ಮಾಡಿದ್ದಾನೆ. ತನ್ನ ಏಕೈಕಜಾತ ಪುತ್ರ ಯೇಸು ಕ್ರಿಸ್ತನ ಮೂಲಕ ತನ್ನ ಸಮೀಪಕ್ಕೆ ಬರಸಾಧ್ಯವಿರುವ ಮಾರ್ಗವನ್ನು ಅವರಿಗೆ ತೆರೆದಿದ್ದಾನೆ. (ಯೋಹಾ. 6:44) ನೀವು ದೇವರಿಗೆ ಸಮರ್ಪಣೆ ಮಾಡಿಕೊಂಡು ಅದಕ್ಕನುಸಾರ ಜೀವಿಸುತ್ತಿದ್ದೀರೊ? ಹಾಗಿರುವಲ್ಲಿ ಈ ಮಾರ್ಗದಲ್ಲಿ ನಡೆಯುತ್ತಿರುವವರಲ್ಲಿ ನೀವೊಬ್ಬರು. ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ವ್ಯಕ್ತಿಯಾಗಿರುವ ನಿಮಗೆ ಆ ಆತ್ಮಕ್ಕನುಸಾರ ನಡೆಯುವ ಕರ್ತವ್ಯವಿದೆ.—ಮತ್ತಾ. 28:19.
2. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿಕ್ಕಿದ್ದೇವೆ?
2 ‘ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುವ’ ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುತ್ತೇವೆ. (ಗಲಾ. 6:8; ಎಫೆ. 4:17-24) ಆದರೆ ಅಪೊಸ್ತಲ ಪೌಲನು ನಮಗೆ ಸಲಹೆ ನೀಡುತ್ತಾ ದೇವರ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ ಎಂದು ಎಚ್ಚರಿಸುತ್ತಾನೆ. (ಎಫೆಸ 4:25-32 ಓದಿ.) ನಾವೀಗ ಅಪೊಸ್ತಲನ ಸಲಹೆಯನ್ನು ಹೆಚ್ಚು ಜಾಗರೂಕತೆಯಿಂದ ಪರಿಶೀಲಿಸೋಣ. ದೇವರಾತ್ಮವನ್ನು ದುಃಖಪಡಿಸುವುದರ ಕುರಿತು ಹೇಳಿದಾಗ ಪೌಲನ ಮಾತುಗಳ ತಾತ್ಪರ್ಯ ಏನಾಗಿತ್ತು? ಯೆಹೋವನಿಗೆ ಸಮರ್ಪಿಸಿಕೊಂಡಿರುವ ವ್ಯಕ್ತಿ ಹೇಗೆ ತಾನೇ ಅಂಥ ವಿಷಯವನ್ನು ಮಾಡಬಲ್ಲನು? ಮಾತ್ರವಲ್ಲ ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
ಪೌಲನ ಮಾತುಗಳ ತಾತ್ಪರ್ಯ
3. ಎಫೆಸ 4:30ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳ ತಾತ್ಪರ್ಯವೇನೆಂದು ನೀವು ಹೇಗೆ ವಿವರಿಸುವಿರಿ?
3 ಮೊತ್ತಮೊದಲಾಗಿ ಎಫೆಸ 4:30ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳನ್ನು ಗಮನಿಸಿ. “ದೇವರ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ; ಅದರಿಂದಲೇ ನೀವು ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆಯ ದಿನಕ್ಕಾಗಿ ಮುದ್ರೆಯೊತ್ತಲ್ಪಟ್ಟಿದ್ದೀರಿ” ಎಂದವನು ಬರೆದನು. ತನ್ನ ಪ್ರಿಯ ಜೊತೆ ವಿಶ್ವಾಸಿಗಳು ತಮ್ಮ ಆಧ್ಯಾತ್ಮಿಕತೆಯನ್ನು ಅಪಾಯಕ್ಕೊಡ್ಡುವುದನ್ನು ಅವನು ಬಯಸಲಿಲ್ಲ. ಅವರು ಯೆಹೋವನ ಪವಿತ್ರಾತ್ಮದಿಂದಲೇ ‘ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆಯ ದಿನಕ್ಕಾಗಿ ಮುದ್ರೆಯೊತ್ತಲ್ಪಟ್ಟಿದ್ದರು.’ ದೇವರ ಪವಿತ್ರಾತ್ಮವು ಹಿಂದಿನ ಕಾಲದಲ್ಲಿ ಮುದ್ರೆಯಾಗಿತ್ತು, ಈಗಲೂ ಮುದ್ರೆಯಾಗಿದೆ. ಅದು ಅಭಿಷಿಕ್ತ ಸಮಗ್ರತಾ ಪಾಲಕರಿಗೆ ‘ಬರಬೇಕಾದ ಸಂಗತಿಯ [ಮುಂಗಡ] ಗುರುತಾಗಿದೆ.’ (2 ಕೊರಿಂ. 1:22) ಅವರು ದೇವರ ಸ್ವತ್ತಾಗಿದ್ದಾರೆ ಮತ್ತು ಸ್ವರ್ಗೀಯ ಜೀವನವನ್ನು ಪಡೆದುಕೊಳ್ಳಲಿಕ್ಕಿದ್ದಾರೆ ಎಂಬುದಕ್ಕೆ ಆ ಮುದ್ರೆಯು ಸೂಚನೆ. ಮುದ್ರೆಯೊತ್ತಲ್ಪಡುವವರ ಸಂಖ್ಯೆ ಅಂತಿಮವಾಗಿ 1,44,000 ಮಂದಿ ಆಗಿರುವುದು.—ಪ್ರಕ. 7:2-4.
4. ದೇವರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸುವುದು ಏಕೆ ಪ್ರಾಮುಖ್ಯ?
4 ಒಬ್ಬ ಕ್ರೈಸ್ತನು ತನ್ನ ಜೀವಿತದಲ್ಲಿ ದೇವರ ಕಾರ್ಯಕಾರಿ ಶಕ್ತಿಯ ಪ್ರಭಾವವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದಕ್ಕೆ ನಡೆಸುವ ಮೊದಲ ಹೆಜ್ಜೆ ಪವಿತ್ರಾತ್ಮವನ್ನು ದುಃಖಪಡಿಸುವುದು ಆಗಿರಬಲ್ಲದು. ಇದು ಸಾಧ್ಯವೆಂದು ದಾವೀದನ ಮಾತುಗಳು ತೋರಿಸುತ್ತವೆ. ಅವನು ಬತ್ಷೆಬೆಯೊಂದಿಗೆ ಪಾಪಮಾಡಿದ ಬಳಿಕ ಪಶ್ಚಾತ್ತಾಪಭಾವದಿಂದ ಯೆಹೋವನನ್ನು ಬೇಡಿಕೊಂಡದ್ದು: “ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.” (ಕೀರ್ತ. 51:11) ಅಭಿಷಿಕ್ತರಲ್ಲಿ ‘ಮರಣದ ತನಕವೂ ನಂಬಿಗಸ್ತರಾಗಿರುವವರು’ ಮಾತ್ರ ಸ್ವರ್ಗದಲ್ಲಿ ಅಮರ ಜೀವನದ “ಕಿರೀಟವನ್ನು” ಪಡೆದುಕೊಳ್ಳುವರು. (ಪ್ರಕ. 2:10; 1 ಕೊರಿಂ. 15:53) ಭೂನಿರೀಕ್ಷೆಯುಳ್ಳ ಕ್ರೈಸ್ತರಿಗೆ ಸಹ ಪವಿತ್ರಾತ್ಮ ಅಗತ್ಯ. ಆಗಮಾತ್ರ ಅವರು ದೇವರ ಕಡೆಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲರು. ಮಾತ್ರವಲ್ಲದೆ ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಂದಾಗಿ ಜೀವವರವನ್ನು ಪಡೆದುಕೊಳ್ಳಬಲ್ಲರು. (ಯೋಹಾ. 3:36; ರೋಮ. 5:8; 6:23) ಆದುದರಿಂದ ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸುವ ವಿಷಯದಲ್ಲಿ ನಾವೆಲ್ಲರೂ ಜಾಗ್ರತೆ ವಹಿಸಬೇಕು.
ಕ್ರೈಸ್ತನೊಬ್ಬನು ಪವಿತ್ರಾತ್ಮವನ್ನು ದುಃಖಪಡಿಸುವುದು ಹೇಗೆ?
5, 6. ಕ್ರೈಸ್ತನೊಬ್ಬನು ಯೆಹೋವನ ಪವಿತ್ರಾತ್ಮವನ್ನು ಹೇಗೆ ದುಃಖಪಡಿಸಸಾಧ್ಯವಿದೆ?
5 ಸಮರ್ಪಿತ ಕ್ರೈಸ್ತರಾದ ನಾವು ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸಬಲ್ಲೆವು. ನಾವು ‘ಪವಿತ್ರಾತ್ಮಕ್ಕನುಸಾರ ನಡೆಯುತ್ತಾ ಅದಕ್ಕನುಸಾರ ಜೀವಿಸುತ್ತಿರುವಲ್ಲಿ’ ಇದು ಸಾಧ್ಯ. ಆಗ ನಾವು ತಪ್ಪಾದ ಶಾರೀರಿಕ ಬಯಕೆಗಳಿಗೆ ಬಲಿಬೀಳುವುದಿಲ್ಲ ಮತ್ತು ಕೆಟ್ಟ ಪ್ರವೃತ್ತಿಗಳನ್ನು ತೋರಿಸುವುದಿಲ್ಲ. (ಗಲಾ. 5:16, 25, 26) ಆದರೆ ಸನ್ನಿವೇಶ ಬದಲಾಗಬಲ್ಲದು. ನಾವು ಮೆಲ್ಲಮೆಲ್ಲನೆ ದೇವರಿಂದ ದೂರಸರಿಯುವ ಮೂಲಕ ಒಂದಿಷ್ಟು ಮಟ್ಟಿಗೆ ದೇವರಾತ್ಮವನ್ನು ದುಃಖಪಡಿಸಸಾಧ್ಯ. ಇದು ಪ್ರಾಯಶಃ ಗಮನಕ್ಕೇ ಬಾರದಷ್ಟು ಸೂಕ್ಷ್ಮವಾಗಿ ಸಂಭವಿಸುತ್ತಾ ದೇವರ ಪವಿತ್ರಾತ್ಮಪ್ರೇರಿತ ವಾಕ್ಯದಲ್ಲಿ ಖಂಡಿಸಲಾದ ನಡತೆಯ ಕಡೆಗೆ ನಡೆಸಬಲ್ಲದು.
6 ನಾವು ಯಾವಾಗಲೂ ಪವಿತ್ರಾತ್ಮದ ಮಾರ್ಗದರ್ಶನೆಗೆ ವಿರುದ್ಧವಾಗಿ ಹೋಗುತ್ತಿರುವಲ್ಲಿ ಅದನ್ನು ಮತ್ತು ಅದರ ಮೂಲನಾದ ಯೆಹೋವನನ್ನು ದುಃಖಪಡಿಸುತ್ತಿರುವೆವು. ಎಫೆಸ 4:25-32ರ ಪರಿಶೀಲನೆಯು ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತೋರಿಸುವುದು. ಮಾತ್ರವಲ್ಲ ದೇವರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸಲು ಸಹ ಅದು ನಮಗೆ ಸಹಾಯಮಾಡುವುದು.
ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸುವ ವಿಧ
7, 8. ನಾವೇಕೆ ಸತ್ಯವಂತರಾಗಿರಬೇಕು ಎಂದು ವಿವರಿಸಿ.
7 ನಾವು ಸತ್ಯವಂತರಾಗಿರಬೇಕು. ಎಫೆಸ 4:25ಕ್ಕನುಸಾರ, ಪೌಲನು ಬರೆದದ್ದು: “ಈಗ ನೀವು ಸುಳ್ಳುತನವನ್ನು ತೆಗೆದುಹಾಕಿರುವುದರಿಂದ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ; ಏಕೆಂದರೆ ನಾವು ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿದ್ದೇವೆ.” “ಒಬ್ಬರಿಗೊಬ್ಬರು ಸೇರಿರುವ ಅಂಗಗಳಾಗಿ” ಐಕ್ಯವಾಗಿರುವುದರಿಂದ ನಾವು ಖಂಡಿತವಾಗಿಯೂ ವಕ್ರಬುದ್ಧಿಯುಳ್ಳವರಾಗಿರಬಾರದು ಅಥವಾ ನಮ್ಮ ಜೊತೆ ಆರಾಧಕರನ್ನು ಬೇಕುಬೇಕೆಂದೇ ದಾರಿತಪ್ಪಿಸಲು ಪ್ರಯತ್ನಿಸಬಾರದು. ಏಕೆಂದರೆ ಇದು ಅವರಿಗೆ ಸುಳ್ಳುಹೇಳುವುದಕ್ಕೆ ಸಮವಾಗಿದೆ. ಇಂಥ ವಿಷಯವನ್ನು ಮಾಡುತ್ತಾ ಹೋಗುವವರು ಕೊನೆಗೆ ದೇವರೊಂದಿಗೆ ಯಾವ ಸಂಬಂಧವನ್ನೂ ಹೊಂದಿರುವುದಿಲ್ಲ.—ಜ್ಞಾನೋಕ್ತಿ 3:32 ಓದಿ.
8 ವಕ್ರಬುದ್ಧಿಯುಳ್ಳ ಮಾತುಗಳು ಮತ್ತು ಕೃತ್ಯಗಳು ಸಭೆಯ ಐಕ್ಯತೆಯನ್ನು ಭಂಗಪಡಿಸಬಲ್ಲವು. ಆದುದರಿಂದ ನಾವು ಭರವಸಯೋಗ್ಯನಾದ ಪ್ರವಾದಿ ದಾನಿಯೇಲನಂತಿರಬೇಕು. ಇತರರಿಗೆ ಅವನಲ್ಲಿ ಅಕ್ರಮವಾದದ್ದೇನೂ ಸಿಕ್ಕಲಿಲ್ಲ. (ದಾನಿ. 6:4) ಮಾತ್ರವಲ್ಲದೆ ಸ್ವರ್ಗೀಯ ನಿರೀಕ್ಷೆಯಿರುವ ಕ್ರೈಸ್ತರಿಗೆ ಪೌಲನು ಕೊಟ್ಟ ಸಲಹೆಯನ್ನು ನಾವು ಮನಸ್ಸಿನಲ್ಲಿಡುವುದು ಒಳ್ಳೇದು. ಅದೇನೆಂದರೆ ‘ಕ್ರಿಸ್ತನ ದೇಹದ’ ಪ್ರತಿಯೊಬ್ಬ ಸದಸ್ಯನು ಬೇರೆ ಎಲ್ಲರಿಗೂ ಸೇರಿದವನಾಗಿದ್ದಾನೆ ಮತ್ತು ಅವನು ಯೇಸುವಿನ ಸತ್ಯವಂತ ಅಭಿಷಿಕ್ತ ಹಿಂಬಾಲಕರೊಂದಿಗೆ ಐಕ್ಯದಿಂದ ಉಳಿಯುವ ಆವಶ್ಯಕತೆಯಿದೆ. (ಎಫೆ. 4:11, 12) ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಹೊಂದಿರುವುದಾದರೆ ನಾವು ಸಹ ಸತ್ಯವನ್ನೇ ಆಡಬೇಕು. ಹೀಗೆ ನಾವು ನಮ್ಮ ಲೋಕವ್ಯಾಪಕ ಸಹೋದರತ್ವದ ಐಕ್ಯತೆಯನ್ನು ಹೆಚ್ಚಿಸುತ್ತೇವೆ.
9. ನಾವು ಎಫೆಸ 4:26, 27ರ ಸಲಹೆಯನ್ನು ಅನುಸರಿಸುವುದು ಏಕೆ ಪ್ರಾಮುಖ್ಯ?
9 ನಮ್ಮನ್ನು ಆಧ್ಯಾತ್ಮಿಕವಾಗಿ ಹಾನಿಗೊಳಿಸಲು ಪಿಶಾಚನಿಗೆ ಅವಕಾಶವನ್ನು ಕೊಡದಂತೆ ನಾವು ಅವನನ್ನು ಎದುರಿಸಬೇಕು. (ಯಾಕೋ. 4:7) ಪವಿತ್ರಾತ್ಮವು ಸೈತಾನನನ್ನು ಪ್ರತಿರೋಧಿಸಲು ನಮಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಅನಿಯಂತ್ರಿತ ಕ್ರೋಧವನ್ನು ದೂರವಿಡುವ ಮೂಲಕ ನಾವು ಅವನನ್ನು ಪ್ರತಿರೋಧಿಸಬಲ್ಲೆವು. “ನೀವು ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ. ಪಿಶಾಚನಿಗೆ ಅವಕಾಶಕೊಡಬೇಡಿ” ಎಂದು ಬರೆದನು ಪೌಲನು. (ಎಫೆ. 4:26, 27) ಒಂದುವೇಳೆ ನಮಗೆ ಸಹಜವಾಗಿಯೇ ಕೋಪ ಬಂದರೂ ತಕ್ಷಣವೇ ಒಂದು ಮೌನ ಪ್ರಾರ್ಥನೆಯನ್ನು ಸಲ್ಲಿಸುವಾಗ ‘ಶಾಂತಾತ್ಮರಾಗಿರಲು’ ಸಹಾಯ ಸಿಗುವುದು. ಹೀಗೆ ನಾವು ಸ್ವನಿಯಂತ್ರಣವನ್ನು ತೋರಿಸುವೆವಲ್ಲದೆ ದೇವರಾತ್ಮವನ್ನು ದುಃಖಪಡಿಸುವ ವಿಧದಲ್ಲಿ ವರ್ತಿಸೆವು. (ಜ್ಞಾನೋ. 17:27) ಆದುದರಿಂದ ನಾವು ಕೋಪೋದ್ರಿಕ್ತರಾಗಿಯೇ ಉಳಿಯದೆ, ಯಾವುದೇ ದುಷ್ಟಕಾರ್ಯವನ್ನು ನಡಿಸುವಂತೆ ನಮ್ಮನ್ನು ಪ್ರಚೋದಿಸಲು ಸೈತಾನನಿಗೆ ಅವಕಾಶ ಕೊಡದೆ ಇರೋಣ. (ಕೀರ್ತ. 37:8, 9) ಅವನನ್ನು ಪ್ರತಿರೋಧಿಸುವ ಒಂದು ವಿಧವು ಯೇಸುವಿನ ಸಲಹೆಯ ಮೇರೆಗೆ ಅಸಮಾಧಾನಗಳನ್ನು ಶೀಘ್ರವಾಗಿ ಪರಿಹರಿಸುವುದೇ ಆಗಿದೆ.—ಮತ್ತಾ. 5:23, 24; 18:15-17.
10, 11. ನಾವು ಏಕೆ ಕಳವು ಮಾಡಬಾರದು ಅಥವಾ ಅಪ್ರಾಮಾಣಿಕವಾಗಿ ವರ್ತಿಸಬಾರದು?
10 ಕಳ್ಳತನ ಮಾಡುವ ಅಥವಾ ಅಪ್ರಾಮಾಣಿಕರಾಗುವ ಯಾವುದೇ ಪ್ರಲೋಭನೆಗೆ ನಾವು ಬಲಿಬೀಳಬಾರದು. ಕಳ್ಳತನದ ಕುರಿತು ಪೌಲನು ಬರೆದದ್ದು: “ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ ತನ್ನ ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು.” (ಎಫೆ. 4:28) ಸಮರ್ಪಿತ ಕ್ರೈಸ್ತನೊಬ್ಬನು ಕಳವು ಮಾಡುವುದಾದರೆ ಅವನು ವಾಸ್ತವದಲ್ಲಿ ‘ದೇವರ ಹೆಸರಿಗೆ ದೂಷಣೆ’ ಅಥವಾ ನಿಂದೆಯನ್ನು ತರುವನು. (ಜ್ಞಾನೋ. 30:7-9) ಬಡತನವು ಸಹ ಕಳ್ಳತನವನ್ನು ಸಮರ್ಥಿಸುವುದಿಲ್ಲ. ಕಳ್ಳತನವನ್ನು ಎಂದೂ ಸಮರ್ಥಿಸಸಾಧ್ಯವಿಲ್ಲ ಎಂಬುದು ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸುವ ಜನರಿಗೆ ತಿಳಿದಿದೆ.—ಮಾರ್ಕ 12:28-31.
11 ಪೌಲನು ನಾವೇನು ಮಾಡಕೂಡದು ಎಂದು ಬರೇ ಹೇಳಲಿಲ್ಲ, ನಾವೇನು ಮಾಡಬೇಕು ಎಂಬುದನ್ನೂ ತಿಳಿಸಿದನು. ನಾವು ಪವಿತ್ರಾತ್ಮಕ್ಕನುಸಾರ ಜೀವಿಸುತ್ತಾ ನಡೆಯುತ್ತಾ ಇರುವಲ್ಲಿ ನಮ್ಮ ಕುಟುಂಬವನ್ನು ನೋಡಿಕೊಳ್ಳಲು ಮತ್ತು ‘ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಸಹ ನಮ್ಮ ಬಳಿ ಏನಾದರೂ ಇರುವಂತೆ’ ಕಷ್ಟಪಟ್ಟು ದುಡಿಯುವೆವು. (1 ತಿಮೊ. 5:8) ಯೇಸು ಮತ್ತು ಅವನ ಅಪೊಸ್ತಲರು ಬಡವರಿಗೆ ಸಹಾಯಮಾಡಲಿಕ್ಕಾಗಿ ಸ್ವಲ್ಪ ಹಣವನ್ನು ಎತ್ತಿಡುತ್ತಿದ್ದರು. ಆದರೆ ದ್ರೋಹಿಯಾದ ಇಸ್ಕರಿಯೋತ ಯೂದನು ಆ ಹಣದಲ್ಲಿ ಸ್ವಲ್ಪವನ್ನು ತೆಗೆದುಕೊಳ್ಳುತ್ತಿದ್ದನು. (ಯೋಹಾ. 12:4-6) ಅವನು ಖಂಡಿತವಾಗಿಯೂ ಪವಿತ್ರಾತ್ಮದಿಂದ ನಡೆಸಲ್ಪಡುತ್ತಿರಲಿಲ್ಲ. ಆದರೆ ದೇವರಾತ್ಮದಿಂದ ಮಾರ್ಗದರ್ಶಿಸಲ್ಪಡುವ ನಾವು ಪೌಲನು ಹೇಳಿದಂತೆ, ‘ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳುತ್ತೇವೆ.’ (ಇಬ್ರಿ. 13:18) ಹೀಗೆ ನಾವು ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸುತ್ತೇವೆ.
ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸುವ ಇತರ ವಿಧಗಳು
12, 13. (ಎ) ಎಫೆಸ 4:29ರಲ್ಲಿ ತೋರಿಸಲ್ಪಟ್ಟಿರುವಂತೆ ಯಾವ ರೀತಿಯ ಮಾತನ್ನು ನಾವು ತ್ಯಜಿಸಬೇಕು? (ಬಿ) ನಮ್ಮ ಮಾತಿನ ಧಾಟಿ ಹೇಗಿರಬೇಕು?
12 ನಾವು ನಮ್ಮ ಮಾತಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಪೌಲನು ತಿಳಿಸಿದ್ದು: “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು.” (ಎಫೆ. 4:29) ಇಲ್ಲಿ ಸಹ ಅಪೊಸ್ತಲನು ನಾವೇನು ಮಾಡಕೂಡದು ಎಂಬುದನ್ನು ಮಾತ್ರ ಹೇಳದೆ, ಏನು ಮಾಡಬೇಕು ಎಂಬುದನ್ನು ಸಹ ತಿಳಿಸುತ್ತಾನೆ. ದೇವರಾತ್ಮದ ಪ್ರಭಾವದ ಕೆಳಗೆ ನಾವು ‘ಭಕ್ತಿವೃದ್ಧಿಮಾಡುವ ಯೋಗ್ಯವಾದ ಮಾತನ್ನು ಆಡುವೆವು. ಅದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡುವುದು.’ ಅದಲ್ಲದೆ ನಮ್ಮ ಬಾಯಿಂದ ಯಾವ “ಹೊಲಸು ಮಾತೂ” ಬರದಂತೆ ನಾವು ನೋಡಿಕೊಳ್ಳಬೇಕು. “ಹೊಲಸು” ಎಂದು ತರ್ಜುಮೆ ಮಾಡಲ್ಪಟ್ಟಿರುವ ಗ್ರೀಕ್ ಪದವನ್ನು ಕೊಳೆತುಹೋಗುತ್ತಿರುವ ಹಣ್ಣು, ಮೀನು ಅಥವಾ ಮಾಂಸಕ್ಕೆ ಸೂಚಿಸಲು ಉಪಯೋಸಲಾಗಿತ್ತು. ನಾವು ಇಂಥ ಆಹಾರವನ್ನು ನೋಡಿ ಅಸಹ್ಯಪಡುವ ರೀತಿಯಲ್ಲೇ ಯೆಹೋವನು ಕೆಟ್ಟದ್ದೆಂದು ಪರಿಗಣಿಸುವ ಮಾತನ್ನೂ ದ್ವೇಷಿಸುತ್ತೇವೆ.
13 ನಮ್ಮ ಮಾತು ಸಭ್ಯವೂ ದಯಾಭರಿತವೂ “ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ” ಇರಬೇಕು. (ಕೊಲೊ. 3:8-10; 4:6) ನಾವಾಡುವ ಮಾತುಗಳನ್ನು ಕೇಳಿಸಿಕೊಳ್ಳುವಾಗ ಜನರಿಗೆ ನಾವು ಭಿನ್ನರು ಎಂದು ಭಾಸವಾಗಬೇಕು. ಆದುದರಿಂದ “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ” ಮಾತನ್ನಾಡುವ ಮೂಲಕ ಇತರರಿಗೆ ಸಹಾಯಮಾಡೋಣ. ಆಗ ಕೀರ್ತನೆಗಾರನಂತೆ ನಮಗನಿಸುವುದು. ಅವನು ಹಾಡಿದ್ದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.”—ಕೀರ್ತ. 19:14.
14. ಎಫೆಸ 4:30, 31ಕ್ಕನುಸಾರ ನಾವು ನಮ್ಮಿಂದ ಏನನ್ನು ತೆಗೆದುಹಾಕಬೇಕು?
14 ನಾವು ನಮ್ಮಿಂದ ವೈಷಮ್ಯ, ಕ್ರೋಧ, ನಿಂದಾತ್ಮಕ ಮಾತು ಮತ್ತು ಸಕಲ ವಿಧವಾದ ಕೆಟ್ಟತನವನ್ನು ತೆಗೆದುಹಾಕಬೇಕು. ದೇವರಾತ್ಮವನ್ನು ದುಃಖಪಡಿಸುವುದರ ವಿರುದ್ಧ ಎಚ್ಚರಿಸಿದ ತರುವಾಯ ಪೌಲನು, “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ” ಎಂದು ಬರೆದನು. (ಎಫೆ. 4:30, 31) ಅಪರಿಪೂರ್ಣ ಮಾನವರಾಗಿರುವುದರಿಂದ ನಾವೆಲ್ಲರೂ ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸಲು ಶ್ರಮಿಸಬೇಕಾಗಿದೆ. ‘ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧಗಳನ್ನು’ ನಾವು ತಡೆಯಿಲ್ಲದೆ ತೋರಿಸುವಲ್ಲಿ ನಾವು ದೇವರಾತ್ಮವನ್ನು ದುಃಖಪಡಿಸುತ್ತಿರುವೆವು. ಒಂದುವೇಳೆ ನಾವು ನಮ್ಮ ವಿರುದ್ಧ ಮಾಡಲ್ಪಟ್ಟ ತಪ್ಪುಗಳ ಲೆಕ್ಕ ಇಟ್ಟುಕೊಳ್ಳುವಲ್ಲಿ, ಅಸಮಾಧಾನ ಮನೋಭಾವವನ್ನು ವ್ಯಕ್ತಪಡಿಸುವಲ್ಲಿ ಮತ್ತು ಮನನೋಯಿಸಿದ ವ್ಯಕ್ತಿಯೊಂದಿಗೆ ಸಮಾಧಾನವಾಗಲು ನಿರಾಕರಿಸಿದಲ್ಲಿ ಸಹ ಪವಿತ್ರಾತ್ಮವನ್ನು ದುಃಖಪಡಿಸುತ್ತಿರುವೆವು. ನಾವು ಬೈಬಲಿನ ಸಲಹೆಯನ್ನು ಕಡೆಗಣಿಸಲು ಆರಂಭಿಸಿದರೂ ಕೂಡ ಪವಿತ್ರಾತ್ಮದ ವಿರುದ್ಧ ಪಾಪಗೈಯುವ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬಲ್ಲೆವು. ಇದು ನಮ್ಮ ಮೇಲೆ ವಿಪತ್ಕಾರಕ ಪರಿಣಾಮಗಳನ್ನು ತರಬಲ್ಲದು.
15. ನಮ್ಮ ವಿರುದ್ಧ ಯಾರಾದರೂ ತಪ್ಪುಮಾಡುವಲ್ಲಿ ನಾವೇನು ಮಾಡಬೇಕು?
15 ನಾವು ದಯೆಯುಳ್ಳವರಾಗಿಯೂ ಸಹಾನುಭೂತಿಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರುವ ಅಗತ್ಯವಿದೆ. “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ” ಎಂದು ಪೌಲನು ಬರೆದನು. (ಎಫೆ. 4:32) ಒಬ್ಬರು ನಮ್ಮ ವಿರುದ್ಧ ಮಾಡಿದ ತಪ್ಪಿನಿಂದ ನಮಗೆ ತುಂಬ ನೋವುಂಟಾಗಿರುವುದಾದರೂ ದೇವರು ಮಾಡುವಂತೆ ನಾವು ಸಹ ಕ್ಷಮಿಸೋಣ. (ಲೂಕ 11:4) ಪ್ರಾಯಶಃ ನಮ್ಮ ಜೊತೆ ವಿಶ್ವಾಸಿ ನಮ್ಮ ಕುರಿತು ಏನೋ ನಕಾರಾತ್ಮಕವಾಗಿ ಹೇಳಿದ್ದಾನೆಂದು ಇಟ್ಟುಕೊಳ್ಳಿ. ವಿಷಯಗಳನ್ನು ಇತ್ಯರ್ಥಗೊಳಿಸುವ ಉದ್ದೇಶದೊಂದಿಗೆ ನಾವು ಅವನ ಬಳಿ ಹೋಗುತ್ತೇವೆ. ಅವನು ನಿಜ ಖೇದವನ್ನು ವ್ಯಕ್ತಪಡಿಸುತ್ತಾ ಕ್ಷಮಿಸಿಬಿಡುವಂತೆ ಕೇಳಿಕೊಳ್ಳುತ್ತಾನೆ. ನಾವು ಅವನನ್ನು ಕ್ಷಮಿಸುತ್ತೇವೆ, ಆದರೆ ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ಯಾಜಕಕಾಂಡ 19:18 ಹೇಳುವಂತೆ, “ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.”
ಕಟ್ಟೆಚ್ಚರ ಅಗತ್ಯ
16. ಯೆಹೋವನಾತ್ಮವನ್ನು ದುಃಖಪಡಿಸದೆ ಇರಲಿಕ್ಕಾಗಿ ನಾವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತೋರಿಸುವ ಒಂದು ಉದಾಹರಣೆ ಕೊಡಿ.
16 ಏಕಾಂತದಲ್ಲೂ ದೇವರನ್ನು ಅಪ್ರಸನ್ನಗೊಳಿಸುವ ಏನನ್ನಾದರೂ ಮಾಡುವ ಪ್ರಲೋಭನೆ ನಮಗಾಗಬಹುದು. ಉದಾಹರಣೆಗೆ, ಒಬ್ಬ ಸಹೋದರನು ಕ್ರೈಸ್ತರಿಗೆ ಅಸ್ವೀಕೃತವಾಗಿರುವ ಸಂಗೀತವನ್ನು ಆಲಿಸುತ್ತಿದ್ದಿರಬಹುದು. ಆದರೆ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಒದಗಿಸುವ ಪ್ರಕಾಶನಗಳಲ್ಲಿರುವ ಬೈಬಲ್ ಸಲಹೆಯನ್ನು ಅಲಕ್ಷಿಸಿದಕ್ಕಾಗಿ ಕಾಲಾನಂತರ ಅವನ ಮನಸ್ಸಾಕ್ಷಿ ಚುಚ್ಚಲಾರಂಭಿಸುತ್ತದೆ. (ಮತ್ತಾ. 24:45) ಅವನು ಈ ಸಮಸ್ಯೆಯ ಬಗ್ಗೆ ಪ್ರಾರ್ಥಿಸಬಹುದು ಮತ್ತು ಎಫೆಸ 4:30ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳನ್ನು ನೆನಪಿಸಿಕೊಳ್ಳಬಹುದು. ದೇವರಾತ್ಮವನ್ನು ದುಃಖಪಡಿಸುವ ಯಾವುದೇ ವಿಷಯವನ್ನು ಮಾಡುವುದಿಲ್ಲ ಎಂಬ ದೃಢತೀರ್ಮಾನದೊಂದಿಗೆ ಅವನು ಇನ್ನು ಮುಂದೆ ಕ್ರೈಸ್ತರಿಗೆ ಅಸ್ವೀಕೃತವಾಗಿರುವ ಸಂಗೀತಕ್ಕೆ ಕಿವಿಗೊಡುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಆ ಸಹೋದರನು ತೋರಿಸುವ ಮನೋಭಾವವನ್ನು ಯೆಹೋವನು ಆಶೀರ್ವದಿಸುವನು. ಆದುದರಿಂದ ದೇವರಾತ್ಮವನ್ನು ದುಃಖಪಡಿಸುವುದರ ವಿರುದ್ಧ ನಾವು ಸದಾ ಎಚ್ಚರ ವಹಿಸೋಣ.
17. ನಾವು ಕಟ್ಟೆಚ್ಚರ ವಹಿಸಿ ಪ್ರಾರ್ಥಿಸುತ್ತಾ ಇರದಿದ್ದಲ್ಲಿ ಏನಾಗಸಾಧ್ಯವಿದೆ?
17 ನಾವು ಕಟ್ಟೆಚ್ಚರ ವಹಿಸಿ ಪ್ರಾರ್ಥಿಸುತ್ತಾ ಇರದಿದ್ದಲ್ಲಿ ಅಶುದ್ಧವಾದ ಅಥವಾ ತಪ್ಪಾದ ವಿಷಯಕ್ಕೆ ಬಲಿಬೀಳಸಾಧ್ಯವಿದೆ. ಇದು ಪವಿತ್ರಾತ್ಮವನ್ನು ದುಃಖಪಡಿಸುವುದು. ನಮ್ಮ ಸ್ವರ್ಗೀಯ ತಂದೆಯ ವ್ಯಕ್ತಿತ್ವವನ್ನು ಪ್ರಕಟಿಸುವ ಗುಣಗಳನ್ನು ಪವಿತ್ರಾತ್ಮವು ಉತ್ಪಾದಿಸುವುದರಿಂದ ನಾವು ಅದನ್ನು ದುಃಖಪಡಿಸುವಾಗ ಆತನನ್ನು ದುಃಖಪಡಿಸುತ್ತೇವೆ ಅಥವಾ ವ್ಯಸನಗೊಳಿಸುತ್ತೇವೆ. ಆದುದರಿಂದ ಇಂಥ ತಪ್ಪನ್ನು ನಾವೆಂದೂ ಮಾಡದಿರೋಣ. (ಎಫೆ. 4:30) ಪ್ರಥಮ ಶತಮಾನದ ಯೆಹೂದಿ ಶಾಸ್ತ್ರಿಗಳು ಸೈತಾನನು ಕೊಡುವ ಶಕ್ತಿಯಿಂದ ಯೇಸು ಅದ್ಭುತಗಳನ್ನು ಮಾಡುತ್ತಾನೆ ಎಂದು ತಪ್ಪಾಗಿ ನುಡಿದರು. (ಮಾರ್ಕ 3:22-30 ಓದಿ.) ಕ್ರಿಸ್ತನ ಆ ಶತ್ರುಗಳು ‘ಪವಿತ್ರಾತ್ಮದ ವಿರುದ್ಧ ದೂಷಣೆಮಾಡಿದರು.’ ಹೀಗೆ ಅಕ್ಷಮ್ಯ ಪಾಪವನ್ನು ಮಾಡಿದರು. ನಮಗೆಂದೂ ಇಂಥ ದುರ್ಗತಿ ಬಾರದಿರಲಿ!
18. ನಾವು ಅಕ್ಷಮ್ಯ ಪಾಪವನ್ನು ಮಾಡಿಲ್ಲವೆಂದು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?
18 ನಾವು ಅಪ್ಪಿತಪ್ಪಿ ಕೂಡ ಅಕ್ಷಮ್ಯ ಪಾಪವನ್ನು ಮಾಡಲು ಬಯಸುವುದಿಲ್ಲ. ಆದುದರಿಂದ ಪವಿತ್ರಾತ್ಮವನ್ನು ದುಃಖಪಡಿಸದೆ ಇರುವುದರ ಕುರಿತು ಪೌಲನು ಏನು ಹೇಳಿದನೆಂಬುದನ್ನು ನಾವು ಜ್ಞಾಪಕದಲ್ಲಿಡತಕ್ಕದ್ದು. ಆದರೆ ನಾವು ಗಂಭೀರವಾಗಿ ತಪ್ಪುಮಾಡಿರುವಲ್ಲಿ ಆಗೇನು? ನಾವು ಪಶ್ಚಾತ್ತಾಪಪಟ್ಟಿರುವಲ್ಲಿ ಮತ್ತು ಹಿರಿಯರಿಂದ ನೆರವನ್ನು ಪಡೆದುಕೊಂಡಿರುವಲ್ಲಿ ದೇವರು ನಮ್ಮನ್ನು ಕ್ಷಮಿಸಿದ್ದಾನೆ ಹಾಗೂ ನಾವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿಲ್ಲವೆಂಬ ತೀರ್ಮಾನಕ್ಕೆ ಬರಬಲ್ಲೆವು. ದೇವರ ಸಹಾಯದೊಂದಿಗೆ ಮುಂದೆ ಯಾವುದೇ ವಿಧದಲ್ಲಿ ಪವಿತ್ರಾತ್ಮವನ್ನು ದುಃಖಪಡಿಸುವುದನ್ನೂ ನಾವು ವರ್ಜಿಸಸಾಧ್ಯವಿದೆ.
19, 20. (ಎ) ನಾವು ವರ್ಜಿಸಬೇಕಾದ ಕೆಲವು ವಿಷಯಗಳು ಯಾವುವು? (ಬಿ) ನಾವು ಏನನ್ನು ಮಾಡುವ ದೃಢತೀರ್ಮಾನವುಳ್ಳವರಾಗಿರಬೇಕು?
19 ದೇವರು ತನ್ನ ಪವಿತ್ರಾತ್ಮದ ಮೂಲಕ ತನ್ನ ಜನರ ಪ್ರೀತಿ, ಸಂತೋಷ ಮತ್ತು ಐಕ್ಯತೆಯನ್ನು ಹೆಚ್ಚಿಸುತ್ತಾನೆ. (ಕೀರ್ತ. 133:1-3) ಆದುದರಿಂದ ನಾವು ಹಾನಿಕರ ಹರಟೆಮಾತಿನಲ್ಲಿ ತೊಡಗುವುದು ಅಥವಾ ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿರುವ ಆಧ್ಯಾತ್ಮಿಕ ಕುರುಬರಿಗೆ ಅಗೌರವ ತರುವಂಥ ಮಾತುಗಳನ್ನಾಡುವುದು ಪವಿತ್ರಾತ್ಮವನ್ನು ದುಃಖಪಡಿಸುತ್ತದಾದ್ದರಿಂದ ಅದನ್ನು ವರ್ಜಿಸಬೇಕು. (ಅ. ಕಾ. 20:28; ಯೂದ 8) ಅದರ ಬದಲಿಗೆ ನಾವು ಸಭೆಯಲ್ಲಿ ಐಕ್ಯತೆಯನ್ನು ಪ್ರವರ್ಧಿಸುವವರಾಗಿ ಒಬ್ಬರಿಗೊಬ್ಬರು ಗೌರವ ಕೊಡಬೇಕು. ತಮ್ಮತಮ್ಮೊಂದಿಗೆ ಮಾತ್ರ ಬೆರೆಯುವ ಪ್ರತ್ಯೇಕ ಗುಂಪುಗಳನ್ನು ದೇವಜನರ ಮಧ್ಯೆ ರೂಪಿಸುವುದಕ್ಕೆ ನಾವು ಖಂಡಿತ ಇಂಬುಕೊಡಬಾರದು. ಪೌಲನು ಬರೆದದ್ದು: “ಸಹೋದರರೇ, ನೀವೆಲ್ಲರೂ ಒಮ್ಮತದಿಂದ ಮಾತಾಡಬೇಕೆಂದು, ನಿಮ್ಮಲ್ಲಿ ಭೇದಗಳಿರಬಾರದೆಂದೂ ನೀವು ಏಕಮನಸ್ಸು ಮತ್ತು ಏಕವಿಚಾರಧಾರೆಯಿಂದ ಹೊಂದಿಕೊಂಡವರಾಗಿ ಐಕ್ಯದಿಂದಿರಬೇಕೆಂದೂ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಉತ್ತೇಜಿಸುತ್ತೇನೆ.”—1 ಕೊರಿಂ. 1:10.
20 ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸಲಿಕ್ಕಾಗಿ ನಮಗೆ ನೆರವು ನೀಡಲು ಯೆಹೋವನು ಸಿದ್ಧನೂ ಶಕ್ತನೂ ಆಗಿದ್ದಾನೆ. ಆದುದರಿಂದ ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದನ್ನು ಮುಂದುವರಿಸೋಣ ಮತ್ತು ಅದನ್ನು ದುಃಖಪಡಿಸದಿರುವ ದೃಢತೀರ್ಮಾನವನ್ನು ಮಾಡೋಣ. ನಾವು ದೇವರಾತ್ಮದ ಮಾರ್ಗದರ್ಶನಕ್ಕಾಗಿ ಈಗಲೂ ಎಂದೆಂದಿಗೂ ಮನಃಪೂರ್ವಕವಾಗಿ ಕೋರುತ್ತಾ ಇರುವ ಮೂಲಕ ‘ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತುತ್ತಾ’ ಇರೋಣ.
ನಿಮ್ಮ ಉತ್ತರವೇನು?
• ದೇವರಾತ್ಮವನ್ನು ದುಃಖಪಡಿಸುವುದರ ತಾತ್ಪರ್ಯವೇನು?
• ಯೆಹೋವನಿಗೆ ಸಮರ್ಪಿಸಿಕೊಂಡಿರುವ ಒಬ್ಬ ವ್ಯಕ್ತಿ ಆತನ ಪವಿತ್ರಾತ್ಮವನ್ನು ಹೇಗೆ ದುಃಖಪಡಿಸಬಲ್ಲನು?
• ನಾವು ಯಾವ ವಿಧಗಳಲ್ಲಿ ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ವರ್ಜಿಸಬಲ್ಲೆವು?
[ಪುಟ 30ರಲ್ಲಿರುವ ಚಿತ್ರ]
ಕಲಹಗಳನ್ನು ಬೇಗನೆ ಪರಿಹರಿಸಿರಿ
[ಪುಟ 31ರಲ್ಲಿರುವ ಚಿತ್ರ]
ಯಾವ ಹಣ್ಣು ನಿಮ್ಮ ಮಾತನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುತ್ತದೆ?