ಕಳ್ಳರಿಲ್ಲದ ಒಂದು ಲೋಕ
ಅಷ್ಟೊಂದು ತ್ವರಿತವಾಗಿ ಅದು ಸಂಭವಿಸಿತು. ಒಳ್ಳೆಯ ಉಡುಪು ಧರಿಸಿದ ಒಬ್ಬ ಮನುಷ್ಯನು, ಬ್ರಜಿಲ್ನ ಸಾ ಪೌಲೊದಲ್ಲಿರುವ ಅವನ ಮನೆಯ ಮುಂದೆ, ಆ್ಯನ್ಟನಿಯೋನa ತಲೆಗೆ ಒಂದು ಬಂದೂಕಿನಿಂದ ಗುರಿಯನ್ನಿಡುತ್ತಾ, ಅವನ ಕಾರಿನ ಕೀಲಿ ಕೈಗಳು ಮತ್ತು ದಾಖಲೆ ಪತ್ರಗಳನ್ನು ಕೊಡುವಂತೆ ಬೆದರಿಕೆಯನ್ನೊಡ್ಡಿದನು, ಮತ್ತು ಕೂಡಲೆ ಓಡಿಹೋದನು.
ರಿಯೋಡಿಜನೈರೋದಲ್ಲಿ, ಅವನ ಹತ್ತು ವರ್ಷ ಪ್ರಾಯದ ಮಗಳ ಎದುರಿನಲ್ಲಿಯೇ, ನಾಲ್ಕು ಶಸ್ತ್ರಸಜ್ಜಿತರಾದ ಪುರುಷರು ಪೌಲೊ ಎಂಬ ಒಬ್ಬ ಮನುಷ್ಯನನ್ನು ನಿಗ್ರಹಿಸಿದರು. ಅನಂತರ, ಅವನ ಮನೆಗೆ ಹೋದ ಬಳಿಕ, ಕಳ್ಳರು ಒಳಗೆ ಪ್ರವೇಶಿಸಿದರು ಮತ್ತು ಅವರಿಗೆ ಏನು ಬೇಕಿತ್ತೋ ಅದೆಲ್ಲವನ್ನು ದೋಚಿಕೊಂಡು, ಪೌಲೊನ ಎರಡು ಕಾರುಗಳಲ್ಲಿಯೂ ತುಂಬಿಸಿದರು. ಪೌಲೊನ ಹೆಂಡತಿಗೆ ಮರಣದ ಬೆದರಿಕೆಯನ್ನೊಡ್ಡುತ್ತಾ, ಅವಳನ್ನು ಮತ್ತು ಒಬ್ಬ ಉದ್ಯೋಗಸ್ಥನನ್ನೂ ಅವರೊಂದಿಗೆ ಒತ್ತೆಯಾಳುಗಳಾಗಿ ಪೇಟೆಯಲ್ಲಿರುವ ಪೌಲೊನ ಆಭರಣಗಳ ಅಂಗಡಿಗೆ ಕರೆದೊಯ್ದು, ಅಲ್ಲಿ ಬೆಲೆಬಾಳುವ ಪ್ರತಿಯೊಂದನ್ನೂ ಸುಲಿಗೆ ಮಾಡಿಕೊಂಡು ಹೊರಟು ಹೋದರು. ಆದರೂ, ಅನಿರೀಕ್ಷಿತವಾಗಿ, ಆ ಕಳ್ಳರು ಕಾರುಗಳನ್ನು ಎಲ್ಲಿ ಬಿಟ್ಟಿದ್ದಾರೆಂದು ಫೋನಿನ ಮೂಲಕ ಅನಂತರ ತಿಳಿಸಿದರು.
ಒಬ್ಬನು ಕಷ್ಟದಿಂದ ಸಂಪಾದಿಸಿದ ಹಣ ಮತ್ತು ಸ್ವತ್ತುಗಳು ಅಪಹರಿಸಲ್ಪಡುವುದು ಎಷ್ಟೊಂದು ಹತಾಶೆಯದ್ದಾಗಿದೆ! ಆ್ಯನ್ಟನಿಯೋ ಆಗಲಿ ಅಥವಾ ಪೌಲೊ ಆಗಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲಿಲ್ಲವಾದರೂ, ಇತರರು ಕಾನೂನಿನ ಆಧಾರವಿಲ್ಲದೇ ತಾವಾಗಿಯೇ ಕ್ರಿಯೆಯನ್ನು ಕೈಕೊಳ್ಳುತ್ತಾರೆ. ಅವರು ಕಳ್ಳನನ್ನು ಕೊಲ್ಲಬಹುದು ಅಥವಾ ಅಂಗಹೀನನನ್ನಾಗಿ ಮಾಡಬಹುದು, ಅಥವಾ ಅವರು ತಮ್ಮ ಜೀವಗಳನ್ನೇ ಕಳೆದುಕೊಳ್ಳಬಹುದು. ಉದಾಹರಣೆಗೆ, ಯೌವನಸ್ಥನೊಬ್ಬನು ಅವಳ ವಾಚನ್ನು ಕಸಿದುಕೊಂಡಾಗ, ಬ್ರಜಿಲ್ನ ಒಬ್ಬ ಕ್ರೋಧಗೊಂಡ ಸ್ತ್ರೀಯು ಅವಳ ಬ್ಯಾಗಿನಿಂದ ಬಂದೂಕನ್ನು ಹೊರತೆಗೆದು, ಕಳ್ಳನನ್ನು ಗುಂಡು ಹಾರಿಸಿ ಕೊಂದಳು. ಫಲಿತಾಂಶವೇನು? ಉ ಎಸ್ಟಾಡೊ ಡ ಸಾನ್ ಪೌಲು ವರದಿಮಾಡುವುದು: “ಘಟನಾವಳಿಯನ್ನು ವೀಕ್ಷಿಸಿದ ಜನರು ಈ ಅನಾಮಿಕ ಸ್ತ್ರೀಯ ನಿಲುವನ್ನು ಕುರಿತು ಪ್ರಶಂಸೆಯಿಂದ ಮಾತಾಡಿದರು, ಅವಳನ್ನು ಗುರುತಿಸುವುದರಲ್ಲಿ ಪೊಲೀಸರಿಗೆ ಸಹಾಯ ಮಾಡಲು ಅವರಲ್ಲಿ ಯಾರೂ ಬಯಸಲಿಲ್ಲ.” ಕಳ್ಳರಿಲ್ಲದ ಒಂದು ಲೋಕಕ್ಕಾಗಿ ಅವರು ಹಾತೊರೆಯುತ್ತಿರುವುದಾದರೂ, ಕ್ರೈಸ್ತರು ಆ ಸ್ತ್ರೀಯು ಮಾಡಿದಂತೆ ಪ್ರತೀಕಾರವನ್ನು ಮಾಡುವುದಿಲ್ಲ. ಯಾಕಂದರೆ ಮುಯ್ಯಿ ತೀರಿಸುವಿಕೆಯು ದೇವರಿಗೆ ಸೇರಿದ್ದಾಗಿದೆ, ಜ್ಞಾನೋಕ್ತಿಗಳು 24:19, 20 ರಲ್ಲಿರುವ ಮಾತುಗಳಿಗೆ ಕಿವಿಗೊಡುತ್ತಾರೆ: “ಕೆಡುಕರ ಮೇಲೆ ಉರಿಗೊಳ್ಳದಿರು; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. ಕೆಟ್ಟವನಿಗೆ ಶುಭಕಾಲವು ಬಾರದು, ದುಷ್ಟರ ದೀಪವು ಆರಿಯೇ ಹೋಗುವುದು.”
ಆದರೆ ಆಕ್ರಮಣ ಮಾಡಲ್ಪಟ್ಟಾಗ, ನೀವೇನು ಮಾಡಬಲ್ಲಿರಿ? ಶಾಂತರಾಗಿ ಉಳಿಯುವುದು ಎಷ್ಟೊಂದು ಪ್ರಾಮುಖ್ಯವಾದದ್ದಾಗಿದೆ ಎಂದು ರಿಯೋಡಿಜನೈರೋದಲ್ಲಾದ ಒಂದು ಘಟನೆಯು ತೋರಿಸುತ್ತದೆ. ಎಲೌಜ ಎಂಬ ಕ್ರೈಸ್ತಳೊಬ್ಬಳು ಒಂದು ಬೈಬಲ್ ಅಭ್ಯಾಸವನ್ನು ನಡಿಸಲು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳು ಪ್ರಯಾಣಿಕರಿಂದ ಸುಲಿಗೆ ಮಾಡತೊಡಗಿದರು. ಅವಳು ಇಳಿಯಬೇಕಾದ ಬಸ್ ನಿಲ್ದಾಣವನ್ನು ತಲಪಿದಾಗ, ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೆಂದೂ ಮತ್ತು ಒಂದು ಬೈಬಲ್ ಅಭ್ಯಾಸವನ್ನು ನಡಿಸಲು ಅವಳು ಹೋಗುತ್ತಿರುವುದಾಗಿಯೂ ಎಲೌಜಳು ಅವರಿಗೆ ಹೇಳಿದಳು. ಅವಳು ತನ್ನ ಬೈಬಲನ್ನು ಮತ್ತು ಅಭ್ಯಾಸದ ಪುಸ್ತಕವನ್ನು ಅವರಿಗೆ ತೋರಿಸಿದಳು. ಅವಳಿಂದ ಏನನ್ನೂ ಕಸಿದುಕೊಳ್ಳದೆ, ಆ ಕಳ್ಳರು ಅವಳು ಇಳಿಯುವಂತೆ ಅವಳಿಗೆ ಅನುಮತಿ ನೀಡಿದರು. ಆದರೂ, ಇನ್ನೊಬ್ಬ ಪ್ರಯಾಣಿಕನು ಹೋಗಲು ಬಿಡಲ್ಪಡಲಿಲ್ಲ. ಅಂತಹದ್ದನ್ನು ಅವನೆಂದೂ ಕಂಡಿರಲಿಲ್ಲವೆಂದು ಅನಂತರ ಬಸ್ ಚಾಲಕನು ಹೇಳಿದನು.
ಅವಳನ್ನು ಇಬ್ಬರು ಶಸ್ತ್ರಸಜ್ಜಿತ ಪುರುಷರು ಅವಳ ಕಾರನ್ನು ಹತ್ತುವಂತೆ ಆಜ್ಞಾಪಿಸಿದಾಗ ರೆಜಿನಾ ಸಹ ಶಾಂತಳಾಗಿ ಉಳಿದಿದ್ದಳು. ಅವಳ ಎಚ್ಚರ! ಪತ್ರಿಕೆಯ ವೈಯಕ್ತಿಕ ಪ್ರತಿಯನ್ನು ತೋರಿಸುತ್ತಾ, ರೆಜಿನಾ ಒಂದು ಸಾಕ್ಷಿಯನ್ನು ಕೊಟ್ಟಳು. ದರೋಡೆಕೋರರು ಹೆದರಿದ್ದರಿಂದ, ಸ್ವಲ್ಪ ಸಕ್ಕರೆ ಮಿಠಾಯಿಯನ್ನು ಇಟ್ಟಿರುವುದರಿಂದ ಕಾರಿನ ಕ್ಯಾಬಿನೆಟ್ ಅನ್ನು ತೆರೆಯುವಂತೆ ಅವಳು ಅವರನ್ನು ಕೇಳಿಕೊಂಡಳು. ಆದರೆ ಕಿಂಗ್ಡಮ್ ಮೆಲೊಡೀಸ್ ಕ್ಯಾಸೆಟನ್ನು ಕಂಡು, ಅವರು ಆ ಸಂಗೀತವನ್ನು ಆಲಿಸಲಾರಂಭಿಸಿದರು. ವಾತಾವರಣವು ಹೆಚ್ಚು ಸ್ನೇಹಮಯವಾದುದರಿಂದ, ಅವಳು ಒಬ್ಬ ದಯಾಳುವಾದ ವ್ಯಕ್ತಿಯನ್ನು ಅವಳಿಗೆ ಸಹಾಯಮಾಡಲಿಕ್ಕಾಗಿ ಕಂಡುಕೊಳ್ಳಬಹುದೆಂದು ಅವಳಿಗೆ ಭರವಸೆ ನೀಡುತ್ತಾ, ಯಾವ ಅಪಾಯವನ್ನೂ ಮಾಡದೆ ಹೆದ್ದಾರಿಯಲ್ಲಿ ರೆಜಿನಾಳನ್ನು ಬಿಟ್ಟುಬಿಡಲು ದರೋಡೆಕೋರರು ನಿರ್ಧರಿಸಿದರು. ಹತ್ತು ನಿಮಿಷಗಳ ತನಕ ನಡೆದ ಬಳಿಕ, ಅವಳು ಒಂದು ಮನೆಯನ್ನು ಕಂಡಳು, ಆದರೆ ಮನೆಯ ಯಜಮಾನನು ಅವಳ ಕಥೆಯನ್ನು ನಂಬಲಿಲ್ಲ, ಆತನಂದದ್ದು: “ನೀನು ಎಷ್ಟೊಂದು ಶಾಂತಳಾಗಿರುವಿ; ನೀನು ಆಕ್ರಮಣಕ್ಕೆ ಒಳಗಾಗಿದ್ದೆ ಎಂದು ವ್ಯಕ್ತವಾಗುವುದೇ ಇಲ್ಲ.”
ಒಬ್ಬ ಬಲಿಪಶುವು ಶಾರೀರಿಕವಾಗಿ ಹಾನಿಮಾಡಲ್ಪಡದಿದ್ದಾಗ್ಯೂ, ಅಂತಹ ಒಂದು ಚಿತ್ರ ಹಿಂಸೆಯ ಅನುಭವವು ಗಂಭೀರವಾದ ಫಲಾಂತರಗಳನ್ನು ಉಂಟುಮಾಡಬಲ್ಲದು. ‘ಆ ಬಲಿಪಶುವು ಅಸುರಕ್ಷಿತತನೂ, ಕುಟುಂಬ ಸದಸ್ಯರ ಅಥವಾ ಅವನಿಗೆ ಸಹಾಯ ಮಾಡಲು ಪ್ರಯತ್ನಿಸುವವರ ಕಡೆಗೆ ದ್ವೇಷವುಳ್ಳವನೂ, ಇತರರ ಮೇಲೆ ಭರವಸೆಯನ್ನಿಡಲು ಅಸಮರ್ಥನಾದವನೂ, ಸಂಘಟನಾ ವಿವರಣೆಗಳಿಂದ ಮನಸ್ಸು ಪೀಡಿಸಲ್ಪಟ್ಟವನೂ ಆಗಿ ಲೋಕವು ನ್ಯಾಯರಹಿತವಾದುದಾಗಿದೆಯೆಂದು ಭಾವಿಸಬಹುದು,’ ಎಂದು ಉ ಎಸ್ಟಾಡೊ ಡ ಸಾನ್ ಪೌಲು ವರದಿಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವ ದೇವರಲ್ಲಿ ಭರವಸೆಯನ್ನಿಡುವ ಒಬ್ಬ ಬಲಿಪಶುವು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಹಾನಿಕರವಲ್ಲದ ಅನುಭವದಿಂದ ಪಾರಾಗುವದು ಹೆಚ್ಚು ಸಂಭವನೀಯ. ಆದರೂ, ಇನ್ನು ಮುಂದೆ ದುಷ್ಕೃತ್ಯವಾಗಲಿ ಅಥವಾ ಭಯಕ್ಕೆ ಕಾರಣವಾದ ಯಾವುದೂ ಇಲ್ಲದಿರುವಲ್ಲಿ ಅದೊಂದು ಆಶೀರ್ವಾದವಾಗಿರುವುದೆಂದು ನೀವು ಒಪ್ಪಲಾರಿರೋ?
“ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದಿರಲಿ”
ಅನೇಕರು ಅವರ ಅತ್ಯಾಸೆಯ ಜೀವನ ಶೈಲಿಯನ್ನು ಇಷ್ಟೈಸುವುದಾದರೂ, ಕಳ್ಳರು ಅವರ ಅಪೇಕ್ಷೆಗಳನ್ನು ಮತ್ತು ಅವರ ವ್ಯಕ್ತಿತ್ವಗಳನ್ನು ಬದಲಾಯಿಸುವಂತೆ ದೇವರ ವಾಕ್ಯವು ಅವರಿಗೆ ಸಹಾಯಮಾಡಿದೆ. (ಎಫೆಸ 4:23) ಜೀವಿತದಲ್ಲಿ ಒಂದು ನಿಜವಾದ, ಬೈಬಲಾಧಾರಿತ ಉದ್ದೇಶವನ್ನೊಳಗೊಂಡಿದ್ದು, ಅವರು ಅದರ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ: “ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.” (ಜ್ಞಾನೋಕ್ತಿ 16:8) ಕ್ಲಾಡಿಯೊ ವಿವರಿಸುತ್ತಾನೆ: “ಬಹುಮಟ್ಟಿಗೆ ನನ್ನ ಕುಟುಂಬದಲ್ಲಿ ಎಲ್ಲರೂ ಸಾಕ್ಷಿಗಳಾಗಿದ್ದರು, ಆದರೆ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಅವರೇನು ಹೇಳಲಿಕ್ಕಿದ್ದರೋ ಅದಕ್ಕೆ ನಾನು ಎಂದಿಗೂ ಕಿವಿಗೊಡಲಿಲ್ಲ. ಕದ್ದಂತಹ ಒಂದು ಟ್ರಕ್ಕಿನಲ್ಲಿ, ಸುಮಾರು 2,000 ಕಿಲೊಮೀಟರ್ಗಳಷ್ಟು ದೂರದ ಪ್ರವಾಸದಿಂದ ಹಿಂದಿರುಗುತ್ತಿರುವಾಗ, ನಾನು ಪೊಲೀಸರಿಂದ ವಾಹನಗಳ ಕುರಿತಾದ ಅನೇಕ ತನಿಖೆಗಳನ್ನು ಎದುರಿಸಬೇಕ್ತಾಯು. ಈ ಕಾರ್ಯ ವಿಧಾನದಲ್ಲಿ ನನ್ನ ಜೀವಿತವನ್ನು ಬದಲಾಯಿಸಬೇಕೆಂದು ನಾನು ಮನಗಂಡೆನು. ಈ ಮುಂಚೆ ಅದನ್ನು ಮಾಡಲು ನಾನು ಪ್ರಯತ್ನಿಸಿದ್ದೆನು ಆದರೆ ಸಫಲವಾಗಿರಲಿಲ್ಲ. ಈ ಬಾರಿ ನಾನು ಯೆಹೋವನ ಸಾಕ್ಷಿಗಳಾಗಿರುವ ನನ್ನ ಸಂಬಂಧಿಕರ ಕುರಿತು, ಆನಂದ, ಸಮಾಧಾನ, ಮತ್ತು ಶಾಂತಿಯನ್ನು ಹೊಂದಿದ್ದು ಅವರೆಷ್ಟು ಬೇರೆಯಾಗಿದ್ದಾರೆಂದು ನಾನು ಯೋಚಿಸಲಾರಂಭಿಸಿದೆನು.” ಫಲಿತಾಂಶವಾಗಿ, ಕ್ಲಾಡಿಯೊ ದೇವರ ವಾಕ್ಯವನ್ನು ಅಭ್ಯಾಸಿಸಲಾರಂಭಿಸಿದನು, ಅಮಲೌಷಧ ಸೇವನೆಯನ್ನು ಮತ್ತು ಅವನ ಹಳೆಯ ಸ್ನೇಹಿತರನ್ನು ತೊರೆದು ಬಿಟ್ಟನು, ಮತ್ತು ಒಬ್ಬ ಕ್ರೈಸ್ತ ಶುಶ್ರೂಷಕನಾದನು.
ಇತರರೂ ಸಹ ಇಂದು ಈ ಮಾತುಗಳಿಗೆ ಕಿವಿಗೊಡುತ್ತಾರೆ: “ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ; ಸುಲಿಗೆಯಿಂದ ಗಳಿಸಿ ಸೊಕ್ಕಿರಬೇಡಿರಿ.” (ಕೀರ್ತನೆ 62:10) ಷುಜೆ, ಒಬ್ಬ ಅಮಲೌಷಧ ಚಟವುಳ್ಳವನೂ ಮತ್ತು ಅಮಲೌಷಧದ ಕಾನೂನುಬಾಹಿರ ವ್ಯವಹಾರಗಳನ್ನು ನಡೆಸುತ್ತಿದ್ದವನಾಗಿದ್ದು, ಒಂದು ದರೋಡೆಯ ಸಮಯದಲ್ಲಿ ನರ ಹತ್ಯೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಸೆರೆಶಿಕ್ಷೆಯನ್ನು ಅನುಭವಿಸಿದ ಅನಂತರ, ಅವನ ಭಾವನೊಂದಿಗೆ ಬೈಬಲಿನ ಒಂದು ಅಭ್ಯಾಸದಿಂದ ಪ್ರಯೋಜನ ಗಳಿಸಿದನು. ಅಮಲೌಷಧವನ್ನು ಉಪಯೋಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಿಬಿಟ್ಟನು ಮತ್ತು ಅವನು ಇಂದು ಒಬ್ಬ ಉತ್ಸಾಹಿ ಸಾಕ್ಷಿಯಾಗಿದ್ದಾನೆ.
ಆದರೂ, ಒಂದು ಹೊಸ ವ್ಯಕ್ತಿತ್ವವು ತತ್ಕ್ಷಣವೇ ಅಥವಾ ಅದ್ಭುತಕರವಾಗಿ ಬರುವುದಿಲ್ಲ. ಅಮಲೌಷಧ ಮತ್ತು ಕಳ್ಳತನದೊಂದಿಗೆ ಆಳವಾಗಿ ಒಳಗೊಂಡಿದ್ದ ಆಸ್ಕರ್ ಹೇಳುತ್ತಾನೆ: “ನಾನು ಎಷ್ಟೊಂದು ಉದ್ರಿಕ್ತನಾಗಿ ಯೆಹೋವನಿಗೆ ಪ್ರಾರ್ಥಿಸಿದ್ದೇನಂದರೆ ಕೆಲವೊಮ್ಮೆ ನೆಲವು ನನ್ನ ಕಣ್ಣೀರಿನಿಂದ ತೋಯ್ದು ಒಂದು ಸಣ್ಣ ಸರೋವರವಾಗುವಂತೆ ತೋರುತ್ತಿತ್ತು.” ಹೌದು, ದೇವರ ವಾಕ್ಯದ ಕುರಿತಾದ ಶ್ರದ್ಧೆಯ ಅಭ್ಯಾಸ ಮಾತ್ರವಲ್ಲದೆ, ನಿತ್ಯವಾದ, ಹೃದಯಪೂರ್ವಕವಾದ ಪ್ರಾರ್ಥನೆಯು ಅಗತ್ಯವಾದದ್ದಾಗಿದೆ. ಈ ಪ್ರಾರ್ಥನಾಪೂರ್ವಕವಾದ ದೃಷ್ಟಿಯಲ್ಲಿರುವ ವಿವೇಕವನ್ನು ಗಮನಿಸಿರಿ: “ನನ್ನಿಂದ ಕಪಟವನ್ನೂ ಸುಳ್ಳುಮಾತನ್ನೂ ತೊಲಗಿಸು, ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.”—ಜ್ಞಾನೋಕ್ತಿ 30:8, 9.
ಸ್ವಾರ್ಥಚಿಂತನೆಯು ಯಥಾರ್ಥವಾದ ಪ್ರೀತಿಯಿಂದ ಸ್ಥಾನಪಲ್ಲಟವಾಗಬೇಕು: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” (ಎಫೆಸ 4:28) ಹಿಂದೆ ‘ಕಳ್ಳರೂ ಮತ್ತು ಲೋಭಿ’ ಗಳೂ ಆಗಿದ್ದ ಪ್ರಥಮ ಶತಮಾನದ ಕೆಲವು ಕ್ರೈಸ್ತರಂತೆಯೇ, ಪಶ್ಚಾತ್ತಾಪ ಪಡುವವರನ್ನು ಯೆಹೋವನು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಕರುಣೆಯಿಂದ ಕ್ಷಮಿಸುತ್ತಾನೆ. (1 ಕೊರಿಂಥ 6:9-11) ನಮ್ಮ ಹಿಂದಿನ ಜೀವಿತವು ಏನೇ ಇದ್ದಿರಲಿ, ನಮ್ಮ ಜೀವನ ಶೈಲಿಯನ್ನು ನಾವು ಬದಲಾಯಿಸುವುದು ಮತ್ತು ದೇವರ ಅನುಗ್ರಹಕ್ಕೆ ಪಾತ್ರರಾಗಸಾಧ್ಯವಿರುವುದು ಎಂತಹ ಸಂತೈಸುವಿಕೆಯಾಗಿದೆ!—ಯೋಹಾನ 3:16.
ದೇವರ ಹೊಸ ಲೋಕದಲ್ಲಿ ಭದ್ರತೆ
ಕಳ್ಳರಿಲ್ಲದ ಒಂದು ಭೂಮಿಯನ್ನು ಕುರಿತು ಊಹಿಸಿಕೊಳ್ಳಿ. ನ್ಯಾಯಾಧಿಪತಿಗಳು, ವಕೀಲರು, ಪೊಲೀಸರು, ಮತ್ತು ಸೆರೆಮನೆಗಳನ್ನೊಳಗೊಂಡಿರುವ ಒಂದು ದುಬಾರಿಯಾದ ಕಾನೂನು ನಿರ್ಬಂಧನಾ ವ್ಯವಸ್ಥೆಯ ಆವಶ್ಯಕತೆ ನಿಮಗಿರುವುದಿಲ್ಲ! ಪ್ರತಿಯೊಬ್ಬನೂ ಇತರರನ್ನು ಮತ್ತು ಅವರ ಸ್ವತ್ತುಗಳನ್ನು ಗೌರವಿಸುವ ಒಂದು ಸಮೃದ್ಧಿಯ ಲೋಕವು ಅದಾಗಲಿರುವುದು! ಅದು ನಂಬಲನರ್ಹವೆಂದು ಕಾಣುತ್ತದೋ? ದೇವರು ಮಾನವನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ನಿಜವಾಗಿ ಅಡ್ಡಬಂದು, ನಿಯಮರಾಹಿತ್ಯವನ್ನು ಕೊನೆಗೊಳಿಸುತ್ತಾನೋ? ಬೈಬಲು ದೇವರ ವಾಕ್ಯವಾಗಿದೆ ಮತ್ತು ಅದರ ಪ್ರವಾದನೆಗಳು ವಿಶ್ವಾಸಾರ್ಹವಾಗಿವೆ ಎಂಬ ರುಜುವಾತುಗಳನ್ನು ಪರೀಕ್ಷಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಬದಲಾವಣೆಯೊಂದು ಮುಂದೆ ಇದೆ ಎಂಬ ದೃಢ ಭರವಸೆಯನ್ನಿಡಲು ಒಂದು ಘನವಾದ ಅಸ್ತಿವಾರವನ್ನು ನೀವು ಕಂಡುಕೊಳ್ಳುವಿರಿ. ನೀತಿಯನ್ನು ಪ್ರೀತಿಸುವವರೆಲ್ಲರಿಗೆ ವಾಗ್ದಾನಿಸಲ್ಪಟ್ಟ ಬಿಡುಗಡೆಯನ್ನು ತರುವುದರಲ್ಲಿ ದೇವರನ್ನು ಯಾರೂ ತಡೆಯಸಾಧ್ಯವಿಲ್ಲ: “ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ. ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.” (ಕೀರ್ತನೆ 37:1, 2) ಬಹುಕಾಲದ ಹಿಂದೆ ಬರೆಯಲ್ಪಟ್ಟ ಈ ಮಾತುಗಳು ಅತಿ ಬೇಗನೆ ಸಂಪೂರ್ಣವಾಗಿ ನೆರವೇರಲಿರುವುವು.
ಅಷ್ಟೊಂದು ಅಧಿಕ ನಿರಾಶೆ ಮತ್ತು ಅಸ್ಥಿರತೆಯನ್ನುಂಟು ಮಾಡುವ ಕ್ಲೇಶ ಮತ್ತು ಅನೀತಿಯನ್ನು ದೇವರ ರಾಜ್ಯವು ಕೊನೆಗೊಳಿಸುವುದು, ಒತ್ತಡದ ಕೆಳಗೆ ಕಳ್ಳತನವನ್ನು ಮಾಡುವ ಅನಿಸಿಕೆಯಾಗುವಷ್ಟು ಅಗತ್ಯವುಳ್ಳವರು ಯಾರೂ ಇರುವುದಿಲ್ಲ. ಪ್ರವಾದನೆಯಲ್ಲಿ ಹೀಗೆ ಭರವಸೆ ನೀಡಲ್ಪಟ್ಟಿದೇವ್ದೆ: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಯಾಗಲಿ; ಪೈರುಗಳ ಶಬ್ದವು [ಪುರಾತನ] ಲೆಬನೋನಿನ ಮರಗಳ ಸಪ್ಪಳದಂತಿರಲಿ. ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.” (ಕೀರ್ತನೆ 72:16) ನಿಜವಾಗಿಯೂ, ಪುನಃ ಸ್ಥಾಪಿಸಲ್ಪಟ್ಟ ಪರದೈಸದಲ್ಲಿ, ಸತ್ಯ ದೇವರನ್ನು ತಿಳಿದು ಆತನನ್ನು ಆರಾಧಿಸುವ ಮಾನವರೆಲ್ಲರ ಶಾಂತಿಗೆ ಯಾವುದೂ ತೊಂದರೆಯನ್ನುಂಟು ಮಾಡಲಾರದು.—ಯೆಶಾಯ 32:18.
ಲೋಭತ್ವದಿಂದ ಕೂಡಿದ ಈ ಲೋಕದ ಮಾರ್ಗಗಳನ್ನು ನಿರೋಧಿಸುವವರಿಗೆ ಅದು ಎಂತಹ ಒಂದು ಬಹುಮಾನವಾಗಿರಲಿಕ್ಕಿರುವುದು! ಜ್ಞಾನೋಕ್ತಿ 11:19, [NW] ಹೇಳುವುದು: “ನೀತಿಯಲ್ಲಿ ದೃಢವಾಗಿ ನಿರತನಾಗಿರುವವನು ಜೀವದ ಮಾರ್ಗದಲ್ಲಿರುವನು, ಆದರೆ ಕೆಟ್ಟದ್ದನ್ನು ಬೆನ್ನಟ್ಟುವವನು ತನ್ನ ಸ್ವಂತ ಮರಣದ ಹಾದಿಯಲ್ಲಿರುವನು.” ಹೌದು, ದುಷ್ಟರೆಲ್ಲರೂ ತೆಗೆದುಹಾಕಲ್ಪಟ್ಟ ಅನಂತರ, ಯಾರೊಬ್ಬನೂ ಅವನ ಜೀವ ಮತ್ತು ಅವನ ಸ್ವತ್ತುಗಳ ಕುರಿತು ಭಯಪಡಲು ಕಾರಣವಿರುವುದಿಲ್ಲ. ಕೀರ್ತನೆ 37:11 ನಮಗೆ ಈ ವಾಗ್ದಾನವನ್ನೀಯುತ್ತದೆ: “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
[ಪುಟ 5 ರಲ್ಲಿರುವ ಚೌಕ]
ಕಳ್ಳತನದ ವಾಸ್ತವಿಕತೆಯೊಂದಿಗೆ ನಿಭಾಯಿಸುವುದು
ಮನೆಯಲ್ಲಿ—ನೀವು ಮನೆಯಲ್ಲಿ ಇರಲಿ ಅಥವಾ ಇಲ್ಲದಿರಲಿ, ಬಾಗಿಲುಗಳು ಮುಚ್ಚಲ್ಪಟ್ಟಿರಲಿ ಮತ್ತು ಬೀಗಹಾಕಲ್ಪಟ್ಟಿರಲಿ, ಕಳ್ಳರು ನಿಮ್ಮ ಮನೆಯನ್ನು ಅತಿಕ್ರಮಣ ಮಾಡಬಹುದು. ಅಲಾರ್ಮ್ಗಳನ್ನು ಅಥವಾ ಒಂದು ನಾಯಿಯನ್ನು ಹೊಂದಿರುವಂತೆ ಪರಿಣಿತರು ಶಿಫಾರಸ್ಸು ಮಾಡುತ್ತಾರೆ. ನೀವು ರಜೆಯಲ್ಲಿ ದೂರಹೋಗಿರುವಾಗ, ಭರವಸಾರ್ಹರಾದ ನೆರೆಯವರೊಬ್ಬರಿಗೆ ತಿಳಿಸಿರಿ. ಶಾಂತರಾಗಿರ್ರಿ—ದರೋಡೆಕೋರರು ತ್ವರಿತವಾಗಿ ಕ್ರಿಯೆಗೈಯುತ್ತಾರೆ, ಅನಿರೀಕ್ಷಿತವಾಗಿ, ಮತ್ತು ಅವರು ಅಧೈರ್ಯಪಟ್ಟಲ್ಲಿ ಆ ಕೂಡಲೆ ತಮ್ಮ ಹಂಚಿಕೆಗಳನ್ನು ಬದಲಾಯಿಸಬಲ್ಲರು. ಯೆಹೋವನ ಸಾಕ್ಷಿಗಳಲ್ಲಿ ನೀವು ಒಬ್ಬರಾಗಿರುವುದಾದರೆ, ನೀವೊಬ್ಬರು ಯೆಹೋವನ ಸಾಕ್ಷಿಯೆಂದು ಹೇಳಿರಿ ಮತ್ತು ಒಂದು ಸಾಕ್ಷಿಯನ್ನು ಕೊಡಲು ಪ್ರಯತ್ನಿಸಿ. ಪ್ರಾಯಶಃ ಸ್ನೇಹಭಾವವನ್ನು ಮತ್ತು ಕನಿಕರವನ್ನು ನೀವು ಹೊರಸೆಳೆಯಲು ಶಕ್ತರಾಗುವಿರಿ. ಶಾರೀರಿಕವಾಗಿ ಆಕ್ರಮಣ ಮಾಡಲ್ಪಡದ ಹೊರತು ಪ್ರತಿಭಟಿಸದಿರ್ರಿ.
ಸಾರ್ವಜನಿಕ ಸ್ಥಳಗಳಲ್ಲಿ—ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿದ್ದಾರೋ ಎಂಬುದನ್ನು ಗಮನಿಸಲು ಎಚ್ಚರದಿಂದಿರ್ರಿ. ಕಾಲುನಡಗೆಯ ಪಕ್ಕದಾರಿಗಳ ಮಧ್ಯದಲ್ಲಿ ನಡೆಯಿರಿ. ಕತ್ತಲಾದ ಮತ್ತು ನಿರ್ಜನವಾದ ಬೀದಿಗಳಲ್ಲಿ ನಡೆಯುವುದನ್ನು ತೊರೆಯಿರಿ. ನಿಮ್ಮ ಹಣದ ಚೀಲವನ್ನು ಅಥವಾ ಬೆಲೆಬಾಳುವುವುಗಳನ್ನು ಭದ್ರವಾಗಿರಿಸಿರಿ. ನೀವೆಲ್ಲಿಗೋ ಹೋಗುತ್ತಿದ್ದೀರಿ ಎಂಬಂತೆ ವೇಗವಾಗಿ ನಡೆಯಿರಿ. ಅಧಿಕ ಬೆಲೆಯ ವಸ್ತ್ರಗಳನ್ನು ಮತ್ತು ಹೊಳೆಯುವ ಆಭರಣಗಳನ್ನು ಧರಿಸುವುದನ್ನು ತೊರೆಯಿರಿ. ಪರಿಸ್ಥಿತಿಗಳು ಸಮರ್ಥಿಸಿದ್ದಲ್ಲಿ ವ್ಯಾಪಾರಕ್ಕಾಗಿ ಒಬ್ಬ ಜೊತೆಗಾರರೊಂದಿಗೆ ಹೋಗಿರಿ. ನಿಮಗೆ ಅಗತ್ಯವಿರುವಷ್ಟು ಹಣವನ್ನು ಮಾತ್ರ ಅನೇಕ ಜೇಬುಗಳಲ್ಲಿ ಅಥವಾ ಬೇರೆ ಬೇರೆ ನೆಲೆಗಳಲ್ಲಿಟ್ಟು ನಿಮ್ಮೊಂದಿಗೆ ಒಯ್ಯಿರಿ.
ಕಾರಿನಲ್ಲಿ—“ನೀವು ಕಾರಿನಲ್ಲಿರುವಾಗಲೇ ನಿಮ್ಮ ಕಾರನ್ನು ವಶಪಡಿಸಿಕೊಳ್ಳುವದು” ನಿಮ್ಮ ಕ್ಷೇತ್ರದಲ್ಲಿ ಸಾಮಾನ್ಯವಾಗಿರುವುದಾದರೆ, ನಿಮ್ಮ ಪಾರ್ಕ್ಮಾಡಲ್ಪಟ್ಟ ಕಾರಿನಲ್ಲಿ ಉಳಿಯಬೇಡಿ. ಕೆಲಸಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ನಿಮ್ಮ ದಾರಿಯನ್ನು ಬದಲಾಯಿಸಿ. ಅದು ಕೊಂಚಮಟ್ಟಿಗೆ ದೀರ್ಘವಾದದ್ದಾದರೂ ಒಂದು ಸುರಕ್ಷಿತವಾದ ಹಾದಿಯನ್ನು ಆಯ್ದುಕೊಳ್ಳಿ. ಕಾರನ್ನು ನಿಲ್ಲಿಸುವ ಮೊದಲು, ಏನಾದರೂ ಅನುಮಾನಾಸ್ಪದವಾಗಿ ಕಾಣುತ್ತದೋ ಎಂಬದನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡಿರಿ. ನಿರ್ಜನವಾದ ಕ್ಷೇತ್ರದಲ್ಲಿ ಕಾರಿನ ಡಿಕ್ಕಿಯನ್ನು ತೆರೆಯುವುದನ್ನು ತೊರೆಯಿರಿ. ಬೆಲೆಬಾಳುವ ವಸ್ತುಗಳನ್ನು ಕಾರಿನಲ್ಲಿ ಕಾಣುವಂತೆ ಬಿಡಬೇಡಿರಿ. ದೃಷ್ಟಿಗೋಚರವಾದ ಒಂದು ಬೀಗದ ಸರಪಳಿ ಅಥವಾ ಕಳ್ಳರನ್ನೆದುರಿಸುವ ಇತರ ಸಾಧನಗಳು ಆಕಸ್ಮಿಕ ಕಳ್ಳರನ್ನು ಅಧೈರ್ಯಪಡಿಸಬಹುದು.
[ಪುಟ 6 ರಲ್ಲಿರುವ ಚೌಕ]
“ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ.”—ಮತ್ತಾಯ 6:19, 20