ಮಾನವಕುಲದ ಸಮಸ್ಯೆಗಳು ಬೇಗನೆ ಕೊನೆಗೊಳ್ಳಲಿವೆ!
“ಮಾನವೀಯ ನೆರವು, ಘರ್ಷಣೆಯ ಮೂಲ ಕಾರಣಗಳನ್ನು ಕಿತ್ತೆಗೆಯುವ ಉದ್ದೇಶವುಳ್ಳ ಹೆಚ್ಚು ವ್ಯಾಪಕವಾದ ಒಂದು ಯೋಜನೆಯ ಭಾಗವಾಗಿರದಿದ್ದರೆ ಮತ್ತು ಅದಕ್ಕೆ ರಾಜಕೀಯ ಬೆಂಬಲವಿಲ್ಲದಿದ್ದರೆ, ಹೆಚ್ಚೇನನ್ನು ಮಾಡಸಾಧ್ಯವಿಲ್ಲ. ಮೂಲಭೂತವಾಗಿ ರಾಜಕೀಯ ಸ್ವರೂಪದ್ದಾಗಿರುವ ಸಮಸ್ಯೆಗಳನ್ನು ಕೇವಲ ಮಾನವೀಯ ನೆರವು ಮಾತ್ರ ಬಗೆಹರಿಸಲಾರದು ಎಂಬುದನ್ನು ಆಗಿಂದಾಗ್ಗೆ ಅನುಭವವು ತೋರಿಸಿದೆ.”—ಜಗತ್ತಿನ ನಿರಾಶ್ರಿತರ ದೆಶೆ 2000 (ಇಂಗ್ಲಿಷ್).
ಮಹತ್ತಾದ ಮಾನವೀಯ ನೆರವಿನ ಎದುರಿನಲ್ಲೂ ಮಾನವಕುಲದ ಸಮಸ್ಯೆಗಳಂತೂ ನಿರ್ದಯವಾಗಿ ಬೆಳೆಯುತ್ತಾ ಹೋಗುತ್ತಿವೆ. ಶಾಶ್ವತವಾದ ರಾಜಕೀಯ ಪರಿಹಾರದ ಯಾವ ಸಾಧ್ಯತೆಯಿದೆ? ವಾಸ್ತವದಲ್ಲಿ ತೀರ ಕಡಿಮೆ ಸಾಧ್ಯತೆಯಿದೆ. ಆದರೆ ಪರಿಹಾರಕ್ಕಾಗಿ ನಾವು ಇನ್ನೆಲ್ಲಿಗೆ ನೋಡಬಲ್ಲೆವು? ಅಪೊಸ್ತಲ ಪೌಲನು ಎಫೆಸದ ಕ್ರೈಸ್ತರಿಗೆ ಬರೆದ ಪತ್ರದ ಆರಂಭದಲ್ಲಿರುವ ಒಂದು ಅರ್ಥಪೂರ್ಣ ಭಾಗದಲ್ಲಿ, ದೇವರು ಮಾನವಕುಲದ ಎಲ್ಲ ಸಮಸ್ಯೆಗಳನ್ನು ಹೇಗೆ ಅಂತ್ಯಗೊಳಿಸುವನೆಂಬುದನ್ನು ವಿವರಿಸುತ್ತಾನೆ. ಇದನ್ನು ಮಾಡಲಿಕ್ಕಾಗಿ ದೇವರು ಯಾವ ಸಾಧನವನ್ನು ಉಪಯೋಗಿಸುವನೆಂಬುದನ್ನು ಸಹ ಅವನು ಸೂಚಿಸುತ್ತಾನೆ. ಇಂದು ನಮ್ಮನ್ನು ಪೀಡಿಸುತ್ತಿರುವ ಎಲ್ಲ ಸಮಸ್ಯೆಗಳ ಮೂಲ ಕಾರಣಗಳನ್ನು ಇದು ಬೇರುಸಮೇತ ಕಿತ್ತುಹಾಕುವುದು. ಪೌಲನು ಏನು ಹೇಳುತ್ತಾನೆಂಬುದನ್ನು ಏಕೆ ಪರಿಗಣಿಸಿನೋಡಬಾರದು? ಈ ಭಾಗವನ್ನು ಎಫೆಸ 1:3-10ರಲ್ಲಿ ಕಂಡುಕೊಳ್ಳಬಹುದು.
‘ಸಮಸ್ತವನ್ನು ಕ್ರಿಸ್ತನಲ್ಲಿ ಒಂದಾಗಿ ಕೂಡಿಸಲಿಕ್ಕಾಗಿ’
ಅಪೊಸ್ತಲನು ಹೇಳುವುದೇನೆಂದರೆ ದೇವರ ಉದ್ದೇಶವು, ಅವನ ಮಾತಿನಲ್ಲೇ ಹೇಳುವುದಾದರೆ, “ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪ [ಅಥವಾ ವಿಷಯಗಳ ಆಡಳಿತ]”ವೇ ಆಗಿದೆ. ಇದರರ್ಥವೇನು? ಏನೆಂದರೆ, ದೇವರು “ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿ”ಸುವಂಥ ರೀತಿಯಲ್ಲಿ ಕ್ರಿಯೆಗೈಯಲಿಕ್ಕಾಗಿ ಒಂದು ಸಮಯವನ್ನು ನಿಗದಿಪಡಿಸಿದ್ದಾನೆ. (ಎಫೆಸ 1:9, 10) ಹೌದು, ಭೂಪರಲೋಕಗಳಲ್ಲಿ ಇರುವಂಥದ್ದೆಲ್ಲವನ್ನೂ ತನ್ನ ನೇರವಾದ ನಿಯಂತ್ರಣದ ಕೆಳಗೆ ಪರಸ್ಪರ ಹೊಂದಿಕೆಯಲ್ಲಿ ತರಲಿಕ್ಕಾಗಿ ದೇವರು ಈಗಾಗಲೇ ಒಂದು ಏರ್ಪಾಡನ್ನು ಬಳಸಲು ಆರಂಭಿಸಿದ್ದಾನೆ. ಆಸಕ್ತಿಕರವಾದ ಸಂಗತಿಯೇನೆಂದರೆ, ‘ಒಂದಾಗಿ ಕೂಡಿಸು’ ಎಂದು ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಪದವಿನ್ಯಾಸದ ಕುರಿತಾಗಿ ಬೈಬಲ್ ವಿದ್ವಾಂಸ ಜೆ. ಏಚ್. ಥೇಯರ್ ಹೇಳಿದ್ದು: “ತನಗೋಸ್ಕರ . . . ಎಲ್ಲ ವಸ್ತುಗಳನ್ನೂ (ಈ ವರೆಗೆ ಪಾಪದಿಂದಾಗಿ ಅನೈಕ್ಯಗೊಳಿಸಲ್ಪಟ್ಟಂಥ) ಜೀವಿಗಳನ್ನೂ ಕ್ರಿಸ್ತನಲ್ಲಿ ಮೈತ್ರಿಯ ಒಂದೇ ಸಂಯೋಜಿತ ಸ್ಥಿತಿಯೊಳಗೆ ಪುನಃ ತರುವುದು.”
ಆರಂಭದಲ್ಲಿ ಅನೈಕ್ಯವು ಹೇಗೆ ಎದ್ದಿತೆಂಬದನ್ನು ಪರಿಗಣಿಸುವಾಗ, ದೇವರಿಗೆ ಇದನ್ನು ಮಾಡುವ ಅಗತ್ಯವಿತ್ತೆಂಬುದನ್ನು ಇದು ತೋರಿಸುತ್ತದೆ. ಮಾನವ ಇತಿಹಾಸದ ಆರಂಭದಲ್ಲಿ ನಮ್ಮ ಮೂಲ ಹೆತ್ತವರಾದ ಆದಾಮಹವ್ವರು, ದೇವರ ವಿರುದ್ಧ ದಂಗೆಯೇಳುವುದರಲ್ಲಿ ಸೈತಾನನನ್ನು ಹಿಂಬಾಲಿಸಿದರು. ಒಳ್ಳೇದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ಸ್ವತಃ ನಿರ್ಣಯಿಸುವ ಹಕ್ಕನ್ನು ಪಡೆದುಕೊಳ್ಳುವ ಮೂಲಕ ಅವರು ಸ್ವಾತಂತ್ರ್ಯವನ್ನು ಬಯಸಿದರು. (ಆದಿಕಾಂಡ 3:1-5) ದೈವಿಕ ನ್ಯಾಯಕ್ಕನುಸಾರ, ಅವರನ್ನು ದೇವರ ಕುಟುಂಬದಿಂದ ಹೊರಹಾಕಲಾಯಿತು ಮತ್ತು ಹೀಗೆ ಅವರು ಆತನೊಂದಿಗಿನ ತಮ್ಮ ಮೈತ್ರಿಯನ್ನು ಕಳೆದುಕೊಂಡರು. ಅವರು ಮಾನವಕುಲವನ್ನು ಅಪರಿಪೂರ್ಣತೆ ಮತ್ತು ನಾವಿಂದು ಅನುಭವಿಸುತ್ತಿರುವ ಎಲ್ಲ ಭೀಕರ ಪರಿಣಾಮಗಳ ಕೂಪಕ್ಕೆ ತಳ್ಳಿಬಿಟ್ಟರು.—ರೋಮಾಪುರ 5:12.
ದುಷ್ಟತನಕ್ಕೆ ತಾತ್ಕಾಲಿಕ ಅನುಮತಿ
‘ಅವರು ಹಾಗೆ ಮಾಡುವಂತೆ ದೇವರು ಬಿಟ್ಟದ್ದೇಕೆ?’ ಎಂದು ಕೆಲವರು ಕೇಳಬಹುದು. ‘ತನ್ನ ಸರ್ವೋಚ್ಚ ಶಕ್ತಿಯನ್ನು ಉಪಯೋಗಿಸಿ, ತನ್ನ ಚಿತ್ತವನ್ನು ಜಾರಿಗೆ ತಂದು, ಹೀಗೆ ನಾವಿಂದು ಅನುಭವಿಸುತ್ತಿರುವ ಎಲ್ಲ ದುಃಖ ಮತ್ತು ನೋವನ್ನು ಆತನು ತಡೆಯಲಿಲ್ಲವೇಕೆ?’ ಹಾಗೆ ಯೋಚಿಸುವುದು ಸ್ವಾಭಾವಿಕವೇ ಸರಿ. ಆದರೆ ಅಷ್ಟೊಂದು ಪ್ರಮಾಣದ ಶಕ್ತಿಯನ್ನು ಆ ರೀತಿಯಲ್ಲಿ ಬಳಸುವುದರಿಂದ ನಿಜವಾಗಿ ಏನು ಸಾಬೀತಾಗುತ್ತಿತ್ತು? ತನ್ನ ವಿರುದ್ಧ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಸೂಚನೆಯನ್ನು ಪಡೆದಾಕ್ಷಣ, ತನ್ನ ಬಳಿ ಶಕ್ತಿಯಿದೆ ಎಂದಮಾತ್ರಕ್ಕೆ ಎಲ್ಲ ವಿರೋಧವನ್ನು ಜಜ್ಜಿಬಿಡುವ ಒಬ್ಬ ವ್ಯಕ್ತಿಯ ಕುರಿತು ನೀವು ಮೆಚ್ಚುಗೆ ಸೂಚಿಸುವಿರೊ ಇಲ್ಲವೆ ಸಮ್ಮತಿಯನ್ನು ವ್ಯಕ್ತಪಡಿಸುವಿರೊ? ಖಂಡಿತವಾಗಿಯೂ ಇಲ್ಲ.
ಆ ದಂಗೆಕೋರರು ಸವಾಲೊಡ್ಡಿದ್ದು, ದೇವರ ಮಹಾ ಶಕ್ತಿಯ ವಿಷಯದಲ್ಲಲ್ಲ. ಬದಲಾಗಿ ಅವರು ನಿರ್ದಿಷ್ಟವಾಗಿ ದೇವರ ಆಳುವ ವಿಧಾನದ ನೈತಿಕ ಹಕ್ಕು ಮತ್ತು ನ್ಯಾಯಯುಕ್ತತೆಯ ಬಗ್ಗೆ ಸವಾಲೊಡ್ಡಿದರು. ಒಮ್ಮೆಯೇ ಎಲ್ಲ ಕಾಲಕ್ಕೂ ಈ ಮೂಲಭೂತ ವಿವಾದಾಂಶಗಳನ್ನು ಇತ್ಯರ್ಥಗೊಳಿಸಲಿಕ್ಕಾಗಿ, ಒಂದು ಸೀಮಿತ ಸಮಯದ ವರೆಗೆ ತನ್ನ ನೇರವಾದ ನಿಯಂತ್ರಣವಿಲ್ಲದೆ ತನ್ನ ಸೃಷ್ಟಿಜೀವಿಗಳು ತಮ್ಮನ್ನೇ ಆಳಿಕೊಳ್ಳುವಂತೆ ಯೆಹೋವನು ಅನುಮತಿಸಿದನು. (ಪ್ರಸಂಗಿ 3:1; ಲೂಕ 21:24) ಆ ಸಮಯವು ಮುಗಿದಾಕ್ಷಣ, ಭೂಮಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪುನಃ ಸ್ಥಾಪಿಸಲು ಅವನು ಮಧ್ಯ ಪ್ರವೇಶಿಸುವನು. ಅಷ್ಟರೊಳಗೆ, ಈ ಮಾತು ತುಂಬ ಸ್ಪಷ್ಟವಾಗಿಬಿಡುವುದು. ಅದೇನೆಂದರೆ, ಕೇವಲ ಆತನ ಆಳ್ವಿಕೆಯ ವಿಧಾನವು, ಭೂನಿವಾಸಿಗಳಿಗೆ ಶಾಶ್ವತವಾದ ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಖಾತರಿಯನ್ನು ಕೊಡುತ್ತದೆ. ಆಗ ಲೋಕದ ಎಲ್ಲ ದಬ್ಬಾಳಿಕೆಗಾರರನ್ನು ಸದಾಕಾಲಕ್ಕೂ ತೆಗೆದುಹಾಕಲಾಗುವುದು.—ಕೀರ್ತನೆ 72:12-14; ದಾನಿಯೇಲ 2:44.
“ಜಗದುತ್ಪತ್ತಿಗೆ ಮುಂಚೆ”
ಇದೆಲ್ಲವನ್ನೂ ಮಾಡಲು ಯೆಹೋವನು ಎಷ್ಟೋ ಸಮಯದ ಹಿಂದೆ ಉದ್ದೇಶಿಸಿದನು. “ಜಗದುತ್ಪತ್ತಿಗೆ ಮುಂಚೆ” ಎಂದು ಪೌಲನು ಹೇಳುತ್ತಾನೆ. (ಓರೆ ಅಕ್ಷರಗಳು ನಮ್ಮವು.) (ಎಫೆಸ 1:4) ಇದು ಭೂಮಿಯ ಅಥವಾ ಆದಾಮಹವ್ವರ ಸೃಷ್ಟಿಯ ಮುಂಚೆ ಆಗಿರಲಿಲ್ಲ. ಏಕೆಂದರೆ ಆ ಜಗತ್ತು “ಬಹು ಒಳ್ಳೇದಾಗಿತ್ತು” ಮತ್ತು ಆಗ ದಂಗೆಯು ಇನ್ನೂ ಆರಂಭವಾಗಿರಲಿಲ್ಲ. (ಆದಿಕಾಂಡ 1:31) ಹಾಗಾದರೆ, ಅಪೊಸ್ತಲ ಪೌಲನು ಯಾವ ‘ಜಗತ್ತನ್ನು’ ಅರ್ಥೈಸಿದನು? ಆದಾಮಹವ್ವರ ಮಕ್ಕಳ ಜಗತ್ತನ್ನೇ. ಅಂದರೆ ವಿಮೋಚಿಸಲ್ಪಡುವ ಪ್ರತೀಕ್ಷೆಯುಳ್ಳ, ಮಾನವಕುಲದ ಒಂದು ಪಾಪಭರಿತ, ಅಪರಿಪೂರ್ಣ ಜಗತ್ತು. ಯಾವುದೇ ಮಕ್ಕಳು ಹುಟ್ಟುವ ಮುಂಚೆಯೇ, ಆದಾಮನ ವಿಮೋಚನಸಾಧ್ಯ ವಂಶಜರಿಗಾಗಿ ಪರಿಹಾರವನ್ನು ಒದಗಿಸಲಿಕ್ಕಾಗಿ ತಾನು ಹೇಗೆ ವಿಷಯಗಳನ್ನು ನಿರ್ವಹಿಸುವನೆಂಬುದು ಯೆಹೋವನಿಗೆ ಆಗಲೇ ತಿಳಿದಿತ್ತು.—ರೋಮಾಪುರ 8:20.
ವಿಶ್ವದ ಪರಮಾಧಿಕಾರಿಯು, ಮನುಷ್ಯರಂತೆಯೇ ವಿಷಯಗಳನ್ನು ನಿರ್ವಹಿಸಬೇಕಾಗುತ್ತದೆಂದು ಇದು ಸೂಚಿಸುತ್ತಿಲ್ಲ. ಏನಾದರೂ ತುರ್ತು ಪರಿಸ್ಥಿತಿ ಏಳಬಹುದೆಂಬುದನ್ನು ಗ್ರಹಿಸುತ್ತಾ, ಮನುಷ್ಯರು ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ವಿಭಿನ್ನವಾದ ವಿವರವಾದ ಯೋಜನೆಗಳನ್ನು ಯೋಜಿಸುತ್ತಾರೆ. ಸರ್ವಶಕ್ತನಾದ ದೇವರು ಹಾಗಲ್ಲ. ಆತನು ತನ್ನ ಉದ್ದೇಶವನ್ನು ಸಂಕಲ್ಪಿಸುತ್ತಾನೆ ಮತ್ತು ಪೂರೈಸಿಯೇ ಬಿಡುತ್ತಾನೆ. ಹಾಗಿದ್ದರೂ, ಮಾನವಕುಲಕ್ಕೆ ಶಾಶ್ವತವಾದ ಪರಿಹಾರವನ್ನು ತರಲಿಕ್ಕಾಗಿ ಯೆಹೋವನು ವಿಷಯಗಳನ್ನು ಹೇಗೆ ಬಗೆಹರಿಸಿದನೆಂಬುದನ್ನು ಪೌಲನು ವಿವರಿಸುತ್ತಾನೆ. ಆ ಕ್ರಮಗಳು ಯಾವುವು?
ಯಾರು ಪರಿಹಾರವನ್ನು ತರುವರು?
ಕ್ರಿಸ್ತನ ಆತ್ಮಾಭಿಷಿಕ್ತ ಶಿಷ್ಯರು, ಆದಾಮನಿಂದ ಬಂದಿರುವ ಪಾಪದಿಂದಾಗಿ ಉಂಟಾಗಿರುವ ಹಾನಿಯನ್ನು ಕಳಚಿಹಾಕುವುದರಲ್ಲಿ ಒಂದು ವಿಶೇಷ ಪಾತ್ರವನ್ನು ವಹಿಸುತ್ತಾರೆಂದು ಪೌಲನು ವಿವರಿಸುತ್ತಾನೆ. ಯೆಹೋವನು ತನ್ನ ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಆಳಲಿಕ್ಕಾಗಿ ‘ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡನು’ ಎಂದು ಪೌಲನು ಹೇಳುತ್ತಾನೆ. ಇದನ್ನು ಮುಂದಕ್ಕೆ ವಿವರಿಸುತ್ತಾ, ಪೌಲನು ಹೇಳುವುದೇನೆಂದರೆ ಯೆಹೋವನು “ನಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನ ಪುತ್ರರನ್ನಾಗಿ ಸ್ವೀಕರಿಸುವದಕ್ಕೆ [“ದತ್ತುತೆಗೆದುಕೊಳ್ಳುವುದಕ್ಕೆ,” NW] . . . ಮೊದಲೇ ಸಂಕಲ್ಪಮಾಡಿದ್ದನು.” (ಎಫೆಸ 1:4-6) ಯೆಹೋವನು ಅವರನ್ನು ಒಬ್ಬೊಬ್ಬರಾಗಿ ಆಯ್ಕೆಮಾಡಲಿಲ್ಲ ಇಲ್ಲವೆ ಮೊದಲೇ ಸಂಕಲ್ಪಮಾಡಲಿಲ್ಲವೆಂಬದು ನಿಜ. ಆದರೆ, ಒಂದು ವರ್ಗದೋಪಾದಿ ಅವನು ನಂಬಿಗಸ್ತ ಹಾಗೂ ಸಮರ್ಪಿತಭಾವದ ಜನರ ಬಗ್ಗೆ ಮೊದಲೇ ಸಂಕಲ್ಪಮಾಡಿದ್ದನು. ಇವರು, ಪಿಶಾಚನಾದ ಸೈತಾನನು ಆದಾಮಹವ್ವರೊಡನೆ ಒಡಗೂಡಿ ಮಾನವ ಕುಟುಂಬದ ಮೇಲೆ ಬರಮಾಡಿದ ಹಾನಿಯನ್ನು ಕಳಚಿಹಾಕುವುದರಲ್ಲಿ ಕ್ರಿಸ್ತನೊಂದಿಗೆ ಭಾಗಿಗಳಾಗುವರು.—ಲೂಕ 12:32; ಇಬ್ರಿಯ 2:14-18.
ಎಂಥ ಆಶ್ಚರ್ಯಕರ ಸಂಗತಿ! ದೇವರ ಪರಮಾಧಿಕಾರದ ವಿರುದ್ಧ ಸೈತಾನನು ಮೊದಲು ಸವಾಲನ್ನೊಡ್ಡಿದಾಗ, ಅವನು ದೇವರು ಸೃಷ್ಟಿಸಿರುವ ಮಾನವರಲ್ಲಿ ಏನೋ ದೋಷವಿದೆಯೆಂಬುದನ್ನು ಸೂಚ್ಯವಾಗಿ ಹೇಳುತ್ತಿದ್ದನು. ಅಂದರೆ ಸಾಕಷ್ಟು ಒತ್ತಡ ಅಥವಾ ಪ್ರಲೋಭನವನ್ನು ಅವರ ಮೇಲೆ ಬರಮಾಡುವಲ್ಲಿ, ಅವರೆಲ್ಲರೂ ದೇವರ ಆಳ್ವಿಕೆಯ ವಿರುದ್ಧ ದಂಗೆಯೇಳುವರೆಂದೇ. (ಯೋಬ 1:7-12; 2:2-5) ತನ್ನ “ಕೃಪಾದಾನ”ದ ಒಂದು ಮನಮುಟ್ಟುವ ಪ್ರದರ್ಶನದಲ್ಲಿ, ಆದಾಮನ ಪಾಪಭರಿತ ಕುಟುಂಬದವರಲ್ಲಿ ಕೆಲವರನ್ನು ತನ್ನ ಆತ್ಮಿಕ ಮಕ್ಕಳಾಗಿರುವಂತೆ ದತ್ತುತೆಗೆದುಕೊಳ್ಳುವ ಮೂಲಕ ಯೆಹೋವ ದೇವರು ಕಾಲಾನಂತರ ತನ್ನ ಭೂಸೃಷ್ಟಿಯಲ್ಲಿ ತನಗಿರುವ ಭರವಸೆಯನ್ನು ತೋರಿಸಿದನು. ಈ ಚಿಕ್ಕ ಗುಂಪಿನಲ್ಲಿರುವವರನ್ನು ಸ್ವರ್ಗದಲ್ಲಿ ಸೇವೆಸಲ್ಲಿಸಲಿಕ್ಕಾಗಿ ಕೊಂಡೊಯ್ಯಲಾಗುವುದು. ಆದರೆ ಯಾವ ಉದ್ದೇಶಕ್ಕಾಗಿ?—ಎಫೆಸ 1:3-6; ಯೋಹಾನ 14:2, 3; 1 ಥೆಸಲೊನೀಕ 4:15-17; 1 ಪೇತ್ರ 1:3, 4.
ದೇವರ ಈ ದತ್ತು ಪುತ್ರರು, ಅವನ ಸ್ವರ್ಗೀಯ ರಾಜ್ಯದಲ್ಲಿ “ಕ್ರಿಸ್ತನೊಂದಿಗೆ ಬಾಧ್ಯ”ರು ಆಗುತ್ತಾರೆಂದು ಅಪೊಸ್ತಲ ಪೌಲನು ಹೇಳುತ್ತಾನೆ. (ರೋಮಾಪುರ 8:14-17) ರಾಜರೂ ಯಾಜಕರೂ ಆಗಿ, ಮಾನವ ಕುಟುಂಬವು ಈಗ ಅನುಭವಿಸುತ್ತಿರುವ ದುಃಖ ನೋವುಗಳಿಂದ ಅದನ್ನು ಬಿಡಿಸುವುದರಲ್ಲಿ ಅವರು ಪಾಲ್ಗೊಳ್ಳುವರು. (ಪ್ರಕಟನೆ 5:9ಬಿ, 10) “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ” ಎಂಬುದು ನಿಜ. ಆದರೆ ಬಲುಬೇಗನೆ ಈ ವಿಶೇಷವಾಗಿ ಆಯ್ಕೆಮಾಡಲ್ಪಟ್ಟ ದೇವಪುತ್ರರೆಲ್ಲರೂ ಯೇಸು ಕ್ರಿಸ್ತನನ್ನು ಕಾರ್ಯರೂಪದಲ್ಲಿ ಅನುಸರಿಸುವರು ಮತ್ತು ಎಲ್ಲ ವಿಧೇಯ ಮಾನವಕುಲವು ಪುನಃ ಒಮ್ಮೆ “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವ”ದು.—ರೋಮಾಪುರ 8:18-22.
‘ರಕ್ತ ಸುರಿಸಿದ್ದರಿಂದ ಬಿಡುಗಡೆ’
ಇದೆಲ್ಲವೂ, ವಿಮೋಚಿಸಸಾಧ್ಯವಿರುವ ಮಾನವಕುಲದ ಜಗತ್ತಿನ ಕಡೆಗೆ ದೇವರ ಅಪಾತ್ರ ಕೃಪೆಯ ಅತಿ ಮನಮುಟ್ಟುವಂಥ ಮತ್ತು ಮಹೋನ್ನತ ಅಭಿವ್ಯಕ್ತಿಯಾದ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಸಾಧ್ಯವಾಗಿದೆ. ಪೌಲನು ಬರೆಯುವುದು: “ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ.”—ಎಫೆಸ 1:7.
ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸು ಕ್ರಿಸ್ತನು ಪ್ರಮುಖ ಪಾತ್ರ ವಹಿಸುತ್ತಾನೆ. (ಇಬ್ರಿಯ 2:10) ಅವನ ಪ್ರಾಯಶ್ಚಿತ್ತ ಯಜ್ಞವು ಯೆಹೋವನಿಗೆ, ಆತನ ನಿಯಮಗಳು ಹಾಗೂ ಮೂಲತತ್ತ್ವಗಳಲ್ಲಿ ಭರವಸೆಯನ್ನು ಶಿಥಿಲಗೊಳಿಸದೆ, ಆದಾಮನ ವಂಶಜರಲ್ಲಿ ಕೆಲವರನ್ನು ತನ್ನ ಸ್ವರ್ಗೀಯ ಕುಟುಂಬದೊಳಗೆ ದತ್ತುತೆಗೆದುಕೊಳ್ಳಲು ಮತ್ತು ಆದಾಮನಿಂದ ಬಂದಿರುವ ಪಾಪದ ಫಲಿತಾಂಶಗಳಿಂದ ಮಾನವಕುಲವನ್ನು ವಿಮೋಚಿಸಲು ಕಾನೂನುಬದ್ಧ ಆಧಾರವನ್ನು ಕೊಡುತ್ತದೆ. (ಮತ್ತಾಯ 20:28; 1 ತಿಮೊಥೆಯ 2:6) ತನ್ನ ನೀತಿಯನ್ನು ಎತ್ತಿಹಿಡಿಯುವ ಮತ್ತು ಪರಿಪೂರ್ಣ ನ್ಯಾಯದ ಬೇಡಿಕೆಗಳನ್ನು ಪೂರೈಸುವ ವಿಧದಲ್ಲೇ ಯೆಹೋವನು ಯಾವಾಗಲೂ ತನ್ನ ಕೆಲಸಗಳನ್ನು ಮಾಡುತ್ತಾನೆ.—ರೋಮಾಪುರ 3:22-26.
ದೇವರ ‘ರಹಸ್ಯವಾದ ಸಂಕಲ್ಪ’
ಸಾವಿರಾರು ವರ್ಷಗಳ ವರೆಗೆ, ದೇವರು ಭೂಮಿಯ ಕಡೆಗೆ ತನಗಿರುವ ಉದ್ದೇಶವನ್ನು ಹೇಗೆ ಪೂರೈಸುವನೆಂಬುದನ್ನು ನಿಖರವಾಗಿ ಪ್ರಕಟಪಡಿಸಲಿಲ್ಲ. ಸಾ.ಶ. ಪ್ರಥಮ ಶತಮಾನದಲ್ಲಿ, “ಆತನು ರಹಸ್ಯವಾದ ತನ್ನ ಸಂಕಲ್ಪವನ್ನು [ಕ್ರೈಸ್ತರಿಗೆ] ತಿಳಿಯಪಡಿ”ಸಿದನು. (ಎಫೆಸ 1:8) ಪೌಲನು ಮತ್ತು ಅವನ ಜೊತೆ ಅಭಿಷಿಕ್ತ ಕ್ರೈಸ್ತರು, ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸು ಕ್ರಿಸ್ತನಿಗೆ ನೇಮಿಸಲ್ಪಟ್ಟಿದ್ದ ಭವ್ಯ ಪಾತ್ರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡರು. ಕ್ರಿಸ್ತನ ಸ್ವರ್ಗೀಯ ರಾಜ್ಯದಲ್ಲಿ ಅವನ ಜೊತೆ ಬಾಧ್ಯಸ್ಥರಾಗಿ ತಮಗಿರುವ ವಿಶೇಷ ಪಾತ್ರವನ್ನೂ ಅವರು ಅರ್ಥಮಾಡಿಕೊಳ್ಳಲಾರಂಭಿಸಿದರು. (ಎಫೆಸ 3:5, 6, 8-11) ಹೌದು, ಯೇಸು ಕ್ರಿಸ್ತನು ಮತ್ತು ಅವನ ಜೊತೆ ಅಧಿಪತಿಗಳ ನಿಯಂತ್ರಣದಲ್ಲಿರುವ ರಾಜ್ಯ ಸರಕಾರವೇ, ಸ್ವರ್ಗದಲ್ಲಿ ಮಾತ್ರವಲ್ಲ ಭೂಮಿಯ ಮೇಲೂ ಶಾಶ್ವತ ಶಾಂತಿಯನ್ನು ತರಲಿಕ್ಕಾಗಿ ದೇವರು ಉಪಯೋಗಿಸುವಂಥ ಸಾಧನವಾಗಿರುವುದು. (ಮತ್ತಾಯ 6:9, 10) ಅದರ ಮೂಲಕ, ಯೆಹೋವನು ಈ ಭೂಮಿಗಾಗಿ ಆರಂಭದಲ್ಲಿ ಉದ್ದೇಶಿಸಿದಂಥ ಸ್ಥಿತಿಯನ್ನು ಪುನಃಸ್ಥಾಪಿಸುವನು.—ಯೆಶಾಯ 45:18; 65:21-23; ಅ. ಕೃತ್ಯಗಳು 3:21.
ಈ ಭೂಮಿಯಿಂದ ಎಲ್ಲ ದಬ್ಬಾಳಿಕೆ ಹಾಗೂ ಅನ್ಯಾಯವನ್ನು ಕಿತ್ತೊಗೆಯಲಿಕ್ಕಾಗಿ ನೇರವಾದ ಕ್ರಮವನ್ನು ತೆಗೆದುಕೊಳ್ಳುವ ಆತನ ನೇಮಿತ ಸಮಯವು ತುಂಬ ಹತ್ತಿರದಲ್ಲಿದೆ. ಆದರೆ ಯೆಹೋವನು ಈ ಪುನಃಸ್ಥಾಪನೆಯ ಕಾರ್ಯಗತಿಯನ್ನು ವಾಸ್ತವದಲ್ಲಿ ಸಾ.ಶ. 33ರ ಪಂಚಾಶತ್ತಮದಂದು ಆರಂಭಿಸಿದನು. ಹೇಗೆ? ‘ಪರಲೋಕಗಳಲ್ಲಿ ಇರುವ ಸಮಸ್ತವನ್ನು’ ಅಂದರೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವವರನ್ನು ಕೂಡಿಸಲು ಆರಂಭಿಸುವ ಮೂಲಕ. ಇದರಲ್ಲಿ ಎಫೆಸದ ಕ್ರೈಸ್ತರು ಸೇರಿದ್ದರು. (ಎಫೆಸ 2:4-7) ಇತ್ತೀಚೆಗೆ ನಮ್ಮ ಸಮಯದಲ್ಲಿ ಯೆಹೋವನು ‘ಭೂಮಿಯಲ್ಲಿರುವ ಸಮಸ್ತವನ್ನು’ ಒಟ್ಟುಗೂಡಿಸುತ್ತಿದ್ದಾನೆ. (ಎಫೆಸ 1:9, 10) ಒಂದು ಭೌಗೋಲಿಕ ಸಾರುವ ಕಾರ್ಯಾಚರಣೆಯ ಮೂಲಕ, ಅವನು ಎಲ್ಲ ದೇಶಗಳಿಗೆ, ಯೇಸು ಕ್ರಿಸ್ತನ ನಿಯಂತ್ರಣದಲ್ಲಿರುವ ತನ್ನ ರಾಜ್ಯ ಸರಕಾರದ ಕುರಿತಾದ ಸುವಾರ್ತೆಯನ್ನು ತಿಳಿಯಪಡಿಸುತ್ತಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ತೋರಿಸುವವರನ್ನು ಈಗಲೂ ಆತ್ಮಿಕ ಸಂರಕ್ಷಣೆ ಮತ್ತು ಗುಣಪಡಿಸುವಿಕೆಯನ್ನು ಒದಗಿಸುವಂಥ ಒಂದು ಸ್ಥಳದಲ್ಲಿ ಒಟ್ಟುಗೂಡಿಸಲಾಗುತ್ತದೆ. (ಯೋಹಾನ 10:16) ಶುದ್ಧೀಕರಿಸಲ್ಪಟ್ಟಿರುವ ಒಂದು ಪರದೈಸ ಭೂಮಿಯಲ್ಲಿ ಬೇಗನೆ ಅವರು ಎಲ್ಲ ಅನ್ಯಾಯ ಮತ್ತು ದುಃಖದಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುವರು.—2 ಪೇತ್ರ 3:13; ಪ್ರಕಟನೆ 11:18.
ದಬ್ಬಾಳಿಕೆಗೊಳಗಾಗಿರುವ ಮಾನವಜಾತಿಗೆ ಸಹಾಯಮಾಡಲು ಮಾಡಲಾಗುತ್ತಿರುವ ಮಾನವೀಯ ನೆರವು ಪ್ರಯತ್ನಗಳಲ್ಲಿ “ಅನೇಕ ದಂಗುಬಡಿಸುವಂಥ ಮುನ್ನೆಜ್ಜೆಗಳನ್ನು” ಇಡಲಾಗಿದೆ. (ಜಗತ್ತಿನ ಮಕ್ಕಳ ದಶೆ 2000, ಇಂಗ್ಲಿಷ್) ಆದರೆ ಸ್ವರ್ಗೀಯ ರಾಜ್ಯ ಸರಕಾರದಲ್ಲಿರುವ ಕ್ರಿಸ್ತ ಯೇಸು ಮತ್ತು ಅವನ ಜೊತೆ ಅಧಿಪತಿಗಳು ಸದ್ಯದಲ್ಲೇ ಮಾಡಲಿರುವ ಹಸ್ತಕ್ಷೇಪವು ಅತ್ಯಂತ ಹೆಚ್ಚು ದಂಗುಬಡಿಸುವ ಹೆಜ್ಜೆಯಾಗಿರುವುದು. ಅವರು, ಘರ್ಷಣೆಗಳ ಎಲ್ಲ ಮೂಲ ಕಾರಣಗಳನ್ನು ಮತ್ತು ನಮ್ಮ ಮೇಲೆರಗುವ ಇತರ ಎಲ್ಲ ಕೇಡುಗಳನ್ನು ಬೇರುಸಮೇತ ತೆಗೆದುಹಾಕುವರು. ಅವರು ಮಾನವಕುಲದ ಎಲ್ಲ ಸಮಸ್ಯೆಗಳಿಗೆ ಅಂತ್ಯವನ್ನು ತರುವರು.—ಪ್ರಕಟನೆ 21:1-4.
[ಪುಟ 4ರಲ್ಲಿರುವ ಚಿತ್ರಗಳು]
ಮಾನವೀಯ ಕೃತ್ಯಗಳು ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಿಲ್ಲ
[ಪುಟ 6ರಲ್ಲಿರುವ ಚಿತ್ರ]
ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಮಾನವಕುಲಕ್ಕೆ ಆದಾಮನ ಪಾಪದಿಂದ ವಿಮೋಚನೆಯನ್ನು ಕೊಟ್ಟಿತು
[ಪುಟ 7ರಲ್ಲಿರುವ ಚಿತ್ರ]
ಇಂದು ಆತ್ಮಿಕ ಸಂರಕ್ಷಣೆ ಮತ್ತು ವಾಸಿಯಾಗುವಿಕೆಯನ್ನು ಕಂಡುಕೊಳ್ಳಸಾಧ್ಯವಿದೆ
[ಪುಟ 7ರಲ್ಲಿರುವ ಚಿತ್ರಗಳು]
ಬೇಗನೆ, ಮೆಸ್ಸೀಯ ರಾಜ್ಯದ ಮೂಲಕ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರವು ಬರುವುದು