ಅಧ್ಯಯನ ಲೇಖನ 12
ಗೀತೆ 143 ಕತ್ತಲೆಯಲ್ಲಿ ಬೆಳಕು
ಕತ್ತಲಿಂದ ಹೊರಗೆ ಬನ್ನಿ, ಬೆಳಕಲ್ಲಿ ನಡೀರಿ
“ಒಂದು ಕಾಲದಲ್ಲಿ ನೀವು ಕತ್ತಲಲ್ಲಿದ್ರಿ. ಆದ್ರೆ ಈಗ . . . ಬೆಳಕಲ್ಲಿದ್ದೀರ.”—ಎಫೆ. 5:8.
ಈ ಲೇಖನದಲ್ಲಿ ಏನಿದೆ?
ಪೌಲ ಎಫೆಸ 5ನೇ ಅಧ್ಯಾಯದಲ್ಲಿ ಕತ್ತಲು ಮತ್ತು ಬೆಳಕಿನ ಬಗ್ಗೆ ಹೇಳಿದ್ದಾನೆ. ಅದ್ರಿಂದ ನಾವೇನು ಕಲಿಬಹುದು ಅಂತ ನೋಡೋಣ.
1-2. (ಎ) ಅಪೊಸ್ತಲ ಪೌಲ ಎಫೆಸದವ್ರಿಗೆ ಪತ್ರ ಬರೆದಾಗ ಎಲ್ಲಿದ್ದ ಮತ್ತು ಅವನಿಗೆ ಯಾಕೆ ಪತ್ರ ಬರಿಬೇಕು ಅಂತ ಅನಿಸ್ತು? (ಬಿ) ನಾವೀಗ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ?
ಪೌಲನಿಗೆ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಬೇಕು ಅಂತ ತುಂಬ ಆಸೆ ಇತ್ತು. ಆದ್ರೆ ಅವನು ರೋಮ್ನ ಗೃಹ ಬಂಧನದಲ್ಲಿ ಇದ್ದಿದ್ರಿಂದ ಅವ್ರ ಹತ್ರ ನೆರವಾಗಿ ಹೋಗೋಕೆ ಆಗ್ತಿರಲಿಲ್ಲ. ಅದಕ್ಕೇ ಅವ್ರಿಗೆ ಪತ್ರಗಳನ್ನ ಬರೆದ. ಎಫೆಸದವ್ರಿಗೂ ಒಂದು ಪತ್ರ ಬರೆದ. ಅದನ್ನ ಅವನು ಕ್ರಿಸ್ತ ಶಕ 60 ಅಥವಾ 61ರಲ್ಲಿ ಬರೆದಿರಬಹುದು.—ಎಫೆ. 1:1; 4:1.
2 ಪೌಲ ಹತ್ತು ವರ್ಷದ ಮುಂಚೆ ಎಫೆಸದಲ್ಲಿ ಇದ್ದಾಗ, ಜನ್ರಿಗೆ ಸಿಹಿಸುದ್ದಿ ಸಾರಿದ್ದ ಮತ್ತು ಯೆಹೋವನ ಬಗ್ಗೆ ಕಲಿಸಿದ್ದ. (ಅ. ಕಾ. 19:1, 8-10; 20:20, 21) ಅವನಿಗೆ ಅಲ್ಲಿನ ಸಹೋದರರ ಮೇಲೆ ತುಂಬ ಪ್ರೀತಿ ಇತ್ತು. ಅವರು ಯೆಹೋವನಿಗೆ ನಿಯತ್ತಾಗಿ ಇರಬೇಕು ಅನ್ನೋ ಆಸೆನೂ ಇತ್ತು. ಅದಕ್ಕೇ ಅವ್ರಿಗೆ ಪತ್ರಗಳನ್ನ ಬರೆದ. ಆದ್ರೆ ಅವನು ಅಭಿಷಿಕ್ತ ಕ್ರೈಸ್ತರಿಗೆ ಕತ್ತಲು ಮತ್ತು ಬೆಳಕಿನ ಬಗ್ಗೆ ಯಾಕೆ ಹೇಳಿದ? ಅದ್ರಿಂದ ನಾವೇನು ಕಲಿತೀವಿ? ಅದನ್ನ ಈಗ ನೋಡೋಣ.
ಕತ್ತಲಿಂದ ಬೆಳಕಿಗೆ
3. ಪೌಲ ಎಫೆಸದವ್ರಿಗೆ ಬರೆದ ಪತ್ರದಲ್ಲಿ ಯಾವುದ್ರ ಬಗ್ಗೆ ಹೇಳಿದ?
3 ಪೌಲ ಎಫೆಸದವ್ರಿಗೆ “ಒಂದು ಕಾಲದಲ್ಲಿ ನೀವು ಕತ್ತಲಲ್ಲಿದ್ರಿ. ಆದ್ರೆ ಈಗ . . . ಬೆಳಕಲ್ಲಿದ್ದೀರ” ಅಂತ ಹೇಳಿದ. (ಎಫೆ. 5:8) ಎಫೆಸದವರು ಮುಂಚೆ ಹೇಗಿದ್ರು ಆಮೇಲೆ ಹೇಗಾದ್ರು ಅಂತ ತಿಳಿಸೋಕೆ ಅವನು ಕತ್ತಲು ಮತ್ತು ಬೆಳಕಿನ ಬಗ್ಗೆ ಹೇಳಿದ. ನಾವೀಗ ಎಫೆಸದವರು ‘ಕತ್ತಲಲ್ಲಿದ್ರು’ ಅಂತ ಪೌಲ ಹೇಳಿದ ಮಾತಿನ ಅರ್ಥ ಏನು ಅಂತ ನೋಡೋಣ.
4. ಎಫೆಸದವರು ಸುಳ್ಳು ಧರ್ಮ ಅನ್ನೋ ಕತ್ತಲಲ್ಲಿದ್ರು ಅಂತ ಹೇಗೆ ಹೇಳಬಹುದು?
4 ಸುಳ್ಳು ಧರ್ಮ ಅನ್ನೋ ಕತ್ತಲು. ಎಫೆಸದಲ್ಲಿದ್ದ ಕ್ರೈಸ್ತರು ಸತ್ಯ ಕಲಿಯೋಕೆ ಮುಂಚೆ ಸುಳ್ಳು ದೇವರುಗಳನ್ನ ಆರಾಧಿಸ್ತಿದ್ರು. ಹಾಗಾಗಿ ಅವರು ಅಲ್ಲಿನ ಆಚಾರ-ವಿಚಾರಗಳನ್ನ ಮಾಡ್ತಿದ್ರು. ಅವ್ರಿಗೆ ಮೂಢ ನಂಬಿಕೆನೂ ಇತ್ತು. ಅಷ್ಟೇ ಅಲ್ಲ ಎಫೆಸ ಪಟ್ಟಣದಲ್ಲಿ ಅರ್ತೆಮೀ ದೇವತೆಯ ಒಂದು ಪ್ರಸಿದ್ಧ ದೇವಸ್ಥಾನ ಇತ್ತು. ಆ ಕಾಲದಲ್ಲಿ ಜಗತ್ತಿನ ಏಳು ಅದ್ಭುತಗಳಲ್ಲಿ ಅದೂ ಒಂದಾಗಿತ್ತು. ಅಲ್ಲಿನ ಜನ ಮೂರು ಹೊತ್ತು ಪೂಜೆ-ಪುನಸ್ಕಾರ ಅಂತ ಅದ್ರಲ್ಲೇ ಮುಳುಗಿ ಹೋಗಿದ್ರು. ಅಲ್ಲಿ ಅರ್ತೆಮೀ ದೇವತೆಯ ಮೂರ್ತಿಗಳನ್ನ ಮಾರೋದು ಒಂದು ದೊಡ್ಡ ವ್ಯಾಪಾರ ಆಗಿತ್ತು. (ಅ. ಕಾ. 19:23-27) ಅಷ್ಟೇ ಅಲ್ಲ ಆ ಪಟ್ಟಣ ಮಾಟಮಂತ್ರಕ್ಕೆ ಹೆಸ್ರುವಾಸಿ ಆಗಿತ್ತು.—ಅ. ಕಾ. 19:19.
5. ಎಫೆಸದವರು ಅನೈತಿಕತೆ ಅನ್ನೋ ಕತ್ತಲಲ್ಲಿದ್ರು ಅಂತ ಹೇಗೆ ಹೇಳಬಹುದು?
5 ಅನೈತಿಕತೆ ಅನ್ನೋ ಕತ್ತಲು. ಎಫೆಸದಲ್ಲಿ ಲೈಂಗಿಕ ಅನೈತಿಕತೆ, ನಾಚಿಕೆಗೆಟ್ಟ ನಡತೆ ಸರ್ವೇಸಾಮಾನ್ಯ ಆಗಿಬಿಟ್ಟಿತ್ತು. ಅವರು ನಾಟಕಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಅಶ್ಲೀಲ ವಿಷ್ಯಗಳ ಬಗ್ಗೆನೇ ಮಾತಾಡ್ತಿದ್ರು. (ಎಫೆ. 5:3) ಅಲ್ಲಿನ ಜನ್ರಿಗೆ “ನೈತಿಕ ಪ್ರಜ್ಞೆ ಒಂಚೂರು” ಇರ್ಲಿಲ್ಲ. ಒಂದರ್ಥದಲ್ಲಿ ಅವ್ರ ಮನಸ್ಸು ‘ಮರಗಟ್ಟಿ’ ಹೋಗಿತ್ತು. (ಎಫೆ. 4:17-19, ಪಾದಟಿಪ್ಪಣಿ) ಸತ್ಯ ಕಲಿಯೋಕೂ ಮುಂಚೆ ಅವ್ರಿಗೆ ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಿರ್ಲಿಲ್ಲ. ಹಾಗಾಗಿ ಅವರು ಮಾಡಿದ ತಪ್ಪಿಂದ ಯೆಹೋವ ದೇವ್ರಿಗೆ ನೋವಾಗುತ್ತೆ ಅನ್ನೋ ಯೋಚ್ನೆನೂ ಬರ್ಲಿಲ್ಲ, ಅವ್ರ ಮನಸಾಕ್ಷಿನೂ ಚುಚ್ಚಲಿಲ್ಲ. ಅದಕ್ಕೇ ಪೌಲ “ಅವ್ರ ಮನಸ್ಸು ಕತ್ತಲಲ್ಲಿದೆ. ದೇವರು ನಮಗೆ ಕೊಡೋ ಜೀವವನ್ನ ಅವರು ಪಡ್ಕೊಳ್ಳಲ್ಲ” ಅಂತ ಹೇಳಿದ್ದ.
6. ಕೆಲವು ಎಫೆಸದವರು ‘ಈಗ ಬೆಳಕಲ್ಲಿದ್ದಾರೆ’ ಅಂತ ಪೌಲ ಯಾಕೆ ಹೇಳಿದ?
6 ಆದ್ರೆ ಎಫೆಸದಲ್ಲಿದ್ದ ಕೆಲವರು ಕತ್ತಲಲ್ಲೇ ಇರ್ಲಿಲ್ಲ, ಬೆಳಕಿಗೆ ಬಂದ್ರು. ಅದಕ್ಕೇ ಪೌಲ ಅವ್ರಿಗೆ “ಈಗ ನೀವು ಪ್ರಭು ಜೊತೆ ಒಂದಾಗಿದ್ರಿಂದ ಬೆಳಕಲ್ಲಿದ್ದೀರ” ಅಂತ ಬರೆದ. (ಎಫೆ. 5:8) ಅಂದ್ರೆ ಅವರು ಬೈಬಲಿನಲ್ಲಿ ಇರೋದನ್ನ ಅವ್ರ ಜೀವನದಲ್ಲಿ ಪಾಲಿಸ್ತಿದ್ರು. ಹೀಗೆ ದೇವರ ವಾಕ್ಯದ ಬೆಳಕು ಅವ್ರನ್ನ ನಡೆಸೋಕೆ ಬಿಟ್ಟುಕೊಟ್ರು. (ಕೀರ್ತ. 119:105) ಇವರು ಈ ಮುಂಚೆ ಮಾಡ್ತಿದ್ದ ಸುಳ್ಳು ಆರಾಧನೆ ಮತ್ತು ಲೈಂಗಿಕ ಅನೈತಿಕತೆನ ಬಿಟ್ಟುಬಿಟ್ರು. ಆಮೇಲೆ ಯೆಹೋವ ದೇವರನ್ನ ‘ಅನುಕರಿಸೋಕೆ,’ ಆತನನ್ನ ಆರಾಧಿಸೋಕೆ ಮತ್ತು ಆತನನ್ನ ಮೆಚ್ಚಿಸೋಕೆ ತುಂಬ ಪ್ರಯತ್ನ ಮಾಡಿದ್ರು.—ಎಫೆ. 5:1.
7. ಎಫೆಸದ ಕ್ರೈಸ್ತರ ತರ ನಾವೂ ಏನು ಮಾಡ್ತಿದ್ವಿ?
7 ನಾವು ಕೂಡ ಬೈಬಲ್ ಕಲಿಯೋ ಮುಂಚೆ ಸುಳ್ಳು ಧರ್ಮ ಅನ್ನೋ ಕತ್ತಲಲ್ಲಿ ಇದ್ವಿ. ನಮ್ಮಲ್ಲಿ ಕೆಲವರು ಹಬ್ಬ-ಹರಿದಿನಗಳನ್ನ ಮಾಡ್ತಿದ್ವಿ, ಅನೈತಿಕ ಜೀವನಾನೂ ನಡೆಸ್ತಿದ್ವಿ. ಆದ್ರೆ ಯೆಹೋವನ ನೀತಿ ನಿಯಮಗಳ ಬಗ್ಗೆ ತಿಳ್ಕೊಂಡಾಗ, ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಾದಾಗ ಬದಲಾದ್ವಿ. ಯೆಹೋವ ದೇವರಿಗೆ ಇಷ್ಟ ಆಗೋ ತರ ಜೀವಿಸೋಕೆ ಶುರು ಮಾಡಿದ್ವಿ. ಇದ್ರಿಂದ ನಮಗೆ ತುಂಬ ಒಳ್ಳೇದಾಗಿದೆ. (ಯೆಶಾ. 48:17) ಆದ್ರೆ ನಾವು ಮತ್ತೆ ಕತ್ತಲೆಗೆ ಹೋಗದೆ ಯಾವಾಗ್ಲೂ “ಬೆಳಕಿನ ಮಕ್ಕಳ ತರ” ನಡ್ಕೊಳ್ತಾ ಇರೋದು ಅಷ್ಟು ಸುಲಭ ಅಲ್ಲ. ಆದ್ರೂ ಬೆಳಕಲ್ಲಿ ನಡೀತಾ ಇರಬೇಕು. ಅದಕ್ಕೆ ಏನು ಮಾಡಬೇಕು ಅಂತ ನೋಡೋಣ.
ಕತ್ತಲಿಂದ ದೂರ ಇರಿ
8. ಎಫೆಸದವರು ಏನೆಲ್ಲ ಮಾಡಬಾರದಿತ್ತು? (ಎಫೆಸ 5:3-5)
8 ಎಫೆಸ 5:3-5 ಓದಿ. ಎಫೆಸದಲ್ಲಿದ್ದ ಕ್ರೈಸ್ತರು ಮತ್ತೆ ಅನೈತಿಕತೆ ಅನ್ನೋ ಕತ್ತಲೆಗೆ ಹೋಗದೇ ಇರೋಕೆ ಯೆಹೋವನಿಗೆ ಇಷ್ಟ ಆಗದೆ ಇರೋ ಯಾವ ಕೆಲಸನೂ ಮಾಡಬಾರದಿತ್ತು. ಅಂದ್ರೆ, ಲೈಂಗಿಕ ಅನೈತಿಕತೆಯಷ್ಟೇ ಅಲ್ಲ ಅಶ್ಲೀಲ ಮಾತುಗಳನ್ನೂ ಆಡಬಾರದಿತ್ತು. ಎಫೆಸದಲ್ಲಿದ್ದ ಕ್ರೈಸ್ತರು ಇದನ್ನೆಲ್ಲ ಒಂದುವೇಳೆ ಬಿಡಲಿಲ್ಲಾಂದ್ರೆ, ಅವರು “ಕ್ರಿಸ್ತನು ರಾಜನಾಗೋ ದೇವರ ಆಳ್ವಿಕೆಗೆ ಸೇರಲ್ಲ” ಅಂತ ಪೌಲ ಹೇಳಿದ.
9. ಲೈಂಗಿಕ ಅನೈತಿಕತೆಗೆ ನಡೆಸೋ ವಿಷ್ಯಗಳಿಂದ ನಾವ್ಯಾಕೆ ದೂರ ಇರಬೇಕು?
9 ನಾವು ಕೂಡ “ಕತ್ತಲೆಗೆ ಸೇರಿದ ಕೆಲಸಗಳಿಂದ” ಯಾವಾಗ್ಲೂ ದೂರ ಇರಬೇಕು. (ಎಫೆ. 5:11) ಅಶ್ಲೀಲವಾದ ಮತ್ತು ಅನೈತಿಕ ವಿಷ್ಯಗಳನ್ನೇ ನೋಡ್ತಾ ಇದ್ರೆ, ಕೇಳಿಸ್ಕೊಳ್ತಾ ಇದ್ರೆ ಮತ್ತು ಅದ್ರ ಬಗ್ಗೆನೇ ಮಾತಾಡ್ತಾ ಇದ್ರೆ ಒಂದಲ್ಲಾ ಒಂದು ದಿನ ತಪ್ಪು ಮಾಡಿಬಿಡ್ತೀವಿ. (ಆದಿ. 3:6; ಯಾಕೋ. 1:14, 15) ಇದಕ್ಕೊಂದು ಉದಾಹರಣೆ ನೋಡಿ. ಒಂದು ದೇಶದಲ್ಲಿದ್ದ ಕೆಲವು ಸಹೋದರ ಸಹೋದರಿಯರು ಆನ್ಲೈನ್ನಲ್ಲಿ ಒಂದು ಗ್ರೂಪ್ ಮಾಡ್ಕೊಂಡು ಮೆಸೇಜ್ ಮಾಡ್ತಿದ್ರು. ಹೀಗೆ ಅವ್ರೆಲ್ಲ “ಫ್ರೆಂಡ್ಸ್” ಆದ್ರು. ಮೊದಮೊದ್ಲು ಅವರು ಯೆಹೋವ ದೇವರ ಬಗ್ಗೆ, ತಾವು ಕಲಿತ ವಿಷ್ಯಗಳ ಬಗ್ಗೆ ಮಾತಾಡ್ಕೊಳ್ತಿದ್ರು. ಆದ್ರೆ ಹೋಗ್ತಾಹೋಗ್ತಾ ಯೆಹೋವನಿಗೆ ಇಷ್ಟ ಇಲ್ಲದೆ ಇರೋದನ್ನ ಮಾತಾಡೋಕೆ ಶುರು ಮಾಡಿದ್ರು. ಆಮೇಲೆ ಸೆಕ್ಸ್ ಬಗ್ಗೆನೇ ಮಾತಾಡ್ತಿದ್ರು. ಇದ್ರಿಂದ ಏನಾಯ್ತು? ಈ ರೀತಿ ಮಾತಾಡಿದ್ರಿಂದ ತಮ್ಮಲ್ಲಿ ಕೆಲವರು ಲೈಂಗಿಕ ಅನೈತಿಕತೆನೂ ಮಾಡಿದ್ರು ಅಂತ ಆ ಸಹೋದರರು ಆಮೇಲೆ ಹೇಳಿದ್ರು.
10. ಸೈತಾನ ನಮ್ಮನ್ನ ಹೇಗೆ ಮರುಳು ಮಾಡ್ತಿದ್ದಾನೆ? (ಎಫೆಸ 5:6)
10 ಯೆಹೋವ ಯಾವುದನ್ನ ಕೆಟ್ಟದು ಮತ್ತು ಅಶುದ್ಧ ಅಂತ ಹೇಳಿದ್ದಾನೋ ಅದನ್ನ ಮಾಡೋದ್ರಲ್ಲಿ ತಪ್ಪೇನಿಲ್ಲ ಅಂತ ಸೈತಾನನ ಲೋಕ ನಮ್ಮನ್ನ ನಂಬಿಸ್ತಿದೆ. (2 ಪೇತ್ರ 2:19) ಸೈತಾನ ಮಾಡ್ತಾ ಇರೋ ಈ ಕುತಂತ್ರ ಹೊಸದೇನಲ್ಲ. ಅವನು ಹಿಂದಿನ ಕಾಲದಲ್ಲೂ ಹೀಗೇ ಮಾಡಿದ್ದ. ಜನ್ರನ್ನ ಅವನು ಎಷ್ಟು ಮರುಳು ಮಾಡಿದ್ದ ಅಂದ್ರೆ, ಅವ್ರಿಗೆ ಸರಿ ಯಾವುದು ತಪ್ಪು ಯಾವುದು ಅಂತಾನೇ ಗೊತ್ತಾಗ್ತಿರ್ಲಿಲ್ಲ. (ಯೆಶಾ. 5:20; 2 ಕೊರಿಂ. 4:4) ಇವತ್ತೂ ಎಷ್ಟೋ ಸಿನಿಮಾಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ವೆಬ್ಸೈಟ್ಗಳಲ್ಲಿ ಯೆಹೋವನಿಗೆ ಇಷ್ಟ ಆಗದೆ ಇರೋ ವಿಷ್ಯಗಳನ್ನೇ ತೋರಿಸ್ತಿದ್ದಾರೆ. ಇದನ್ನೆಲ್ಲ ಮಾಡೋದ್ರಿಂದ ಏನೂ ತೊಂದ್ರೆ ಆಗಲ್ಲ, ಮಜಾ ಸಿಗುತ್ತೆ ಅಂತ ಸೈತಾನ ನಮ್ಮನ್ನ ನಂಬಿಸೋಕೆ ಪ್ರಯತ್ನ ಮಾಡ್ತಿದ್ದಾನೆ.—ಎಫೆಸ 5:6 ಓದಿ.
11. ಎಫೆಸ 5:7ರಲ್ಲಿರೋ ಬುದ್ಧಿಮಾತನ್ನ ಪಾಲಿಸೋದು ಮುಖ್ಯ ಅಂತ ಆ್ಯಂಜಲ ಅನುಭವದಿಂದ ಹೇಗೆ ಗೊತ್ತಾಗುತ್ತೆ? (ಚಿತ್ರನೂ ನೋಡಿ.)
11 ಯಾರು ಯೆಹೋವನ ನೀತಿ ನಿಯಮ ಪಾಲಿಸಲ್ವೋ, ಅಂಥವ್ರ ಜೊತೆ ನಾವು ಸಹವಾಸ ಮಾಡಬೇಕು ಅಂತ ಸೈತಾನ ಆಸೆಪಡ್ತಾನೆ. ಹಾಗೆ ಮಾಡಿದ್ರೆ ನಮಗೆ ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋಕೆ ಕಷ್ಟ ಆಗುತ್ತೆ. ಅದು ಸೈತಾನನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಪೌಲ, ಅಂಥವ್ರ ಜೊತೆ ಸೇರಬೇಡಿ “ಅವ್ರ ತರ ಇರಬೇಡಿ” ಅಂತ ಹೇಳಿದ. (ಎಫೆ 5:7) ಎಫೆಸದವ್ರಿಗಿಂತ ನಾವು ತುಂಬ ಹುಷಾರಾಗಿ ಇರಬೇಕು. ಯಾಕಂದ್ರೆ ಈಗ ನಾವು ನೇರವಾಗಷ್ಟೇ ಅಲ್ಲ ಆನ್ಲೈನ್ನಲ್ಲೂ ಫ್ರೆಂಡ್ಸ್ ಮಾಡ್ಕೊಳ್ತಿದ್ದೀವಿ. ಏಷ್ಯಾದಲ್ಲಿರೋ ಸಹೋದರಿ ಆ್ಯಂಜಲa ಇದ್ರ ಬಗ್ಗೆ ಏನು ಹೇಳ್ತಾರೆ ನೋಡಿ. “ಸೋಶಿಯಲ್ ಮೀಡಿಯಾನ ಒಂದು ಬಲೆಗೆ ಹೋಲಿಸಬಹುದು. ಅದು ನಿಧಾನವಾಗಿ ನನ್ನ ಯೋಚ್ನೆನೇ ಬದ್ಲಾಯಿಸಿಬಿಡ್ತು. ಅದು ನನ್ನನ್ನ ಎಲ್ಲಿ ವರೆಗೂ ಕರ್ಕೊಂಡು ಹೋಯ್ತು ಅಂದ್ರೆ ಯೆಹೋವನ ನಿಯಮಗಳನ್ನ ಪಾಲಿಸದೇ ಇರೋರನ್ನ ‘ಫ್ರೆಂಡ್ಸ್’ ಮಾಡ್ಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಅಂತ ಅನಿಸೋ ಹಾಗೆ ಮಾಡಿಬಿಡ್ತು. ಆಮೇಲೆ ಯೆಹೋವನಿಗೆ ಇಷ್ಟ ಆಗದೇ ಇರೋ ತರ ಜೀವನ ಮಾಡಿದ್ರೂ ಪರವಾಗಿಲ್ಲ ಅಂತ ಅನಿಸ್ತು” ಅಂತ ಆ್ಯಂಜಲ ಹೇಳ್ತಾರೆ. ಆದ್ರೆ ಅವಳ ಸಭೆಲಿದ್ದ ಹಿರಿಯರು ಅವಳ ಯೋಚ್ನೆ ತಿದ್ಕೊಳ್ಳೋಕೆ ಪ್ರೀತಿಯಿಂದ ಸಹಾಯ ಮಾಡಿದ್ರು. “ಈಗ ನಾನು ಸೋಶಿಯಲ್ ಮೀಡಿಯಾ ಬಗ್ಗೆ ಅಲ್ಲ, ಯೆಹೋವನಿಗೆ ಇಷ್ಟ ಆಗೋ ವಿಷ್ಯಗಳ ಬಗ್ಗೆ ಯಾವಾಗ್ಲೂ ಯೋಚ್ನೆ ಮಾಡ್ತಾ ಇರ್ತೀನಿ” ಅಂತ ಆ್ಯಂಜಲ ಹೇಳ್ತಾರೆ.
12. ಯೆಹೋವನಿಗೆ ಇಷ್ಟ ಆಗೋದನ್ನ ಮಾಡೋಕೆ ನಮಗೆ ಯಾವ ವಿಷ್ಯಗಳು ಸಹಾಯ ಮಾಡುತ್ತೆ?
12 ಅನೈತಿಕ ವಿಷ್ಯಗಳನ್ನ ಮಾಡೋದ್ರಲ್ಲಿ ತಪ್ಪೇನಿಲ್ಲ ಅಂತ ಲೋಕದಲ್ಲಿರೋ ಜನ ಅಂದ್ಕೊಳ್ತಾರೆ. ಆದ್ರೆ ಆ ಯೋಚ್ನೆ ನಮ್ಮಲ್ಲಿ ಬರದೇ ಇರೋ ತರ ನೋಡ್ಕೊಬೇಕು. ಯಾಕಂದ್ರೆ ಅದು ತಪ್ಪು ಅಂತ ನಮಗೆ ಚೆನ್ನಾಗಿ ಗೊತ್ತು. (ಎಫೆ. 4:19, 20) ಹಾಗಾಗಿ ನಾವು ನಮ್ಮನ್ನ ಹೀಗೆ ಕೇಳ್ಕೊಬೇಕು: ‘ನನ್ನ ಜೊತೆ ಕೆಲಸ ಮಾಡೋರು, ನನ್ನ ಜೊತೆ ಓದ್ತಾ ಇರೋರು ಯೆಹೋವನ ನೀತಿ-ನಿಯಮಗಳಿಗೆ ಒಂಚೂರು ಬೆಲೆ ಕೊಡಲ್ಲ ಅಂತ ಗೊತ್ತಾದಾಗ ನಾನು ಅವ್ರ ಜೊತೆ ಸೇರೋದನ್ನ ನಿಲ್ಲಿಸ್ತೀನಾ? ಜನ ನನ್ನ ಬಗ್ಗೆ ತಪ್ಪು ತಿಳ್ಕೊಂಡ್ರೂ ಯೆಹೋವ ಯಾವುದನ್ನ ಸರಿ ಅಂತಾನೋ ಅದನ್ನ ಮಾಡೋಕೆ ನಾನು ಧೈರ್ಯ ತೋರಿಸ್ತೀನಾ?’ ಈ ಪ್ರಶ್ನೆಗಳನ್ನ ಕೇಳ್ಕೊಳ್ಳೋದಷ್ಟೇ ಅಲ್ಲ, 2 ತಿಮೊತಿ 2:20-22ರಲ್ಲಿ ಹೇಳೋ ಹಾಗೆ ಸಭೆಯಲ್ಲಿ ಫ್ರೆಂಡ್ಶಿಪ್ ಮಾಡ್ಕೊಳ್ಳುವಾಗ್ಲೂ ನಾವು ಹುಷಾರಾಗಿ ಇರಬೇಕು. ಯಾಕಂದ್ರೆ ಕೆಲವರು ನಾವು ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಮಾಡಲ್ಲ.
“ಬೆಳಕಿನ ಮಕ್ಕಳ ತರ” ನಡೀರಿ
13. “ಯಾವಾಗ್ಲೂ ಬೆಳಕಿನ ಮಕ್ಕಳ ತರ” ನಡ್ಕೊಳ್ಳೋದು ಅಂದ್ರೇನು? (ಎಫೆಸ 5:7-9)
13 ಪೌಲ ಎಫೆಸದ ಕ್ರೈಸ್ತರಿಗೆ ಕತ್ತಲಿಂದ ಹೊರಗೆ ಬರೋಕೆ ಅಷ್ಟೇ ಅಲ್ಲ “ಯಾವಾಗ್ಲೂ ಬೆಳಕಿನ ಮಕ್ಕಳ ತರ” ನಡೀರಿ ಅಂತ ಹೇಳಿದ. (ಎಫೆಸ 5:7-9 ಓದಿ.) ಇದರರ್ಥ ಏನು? ನಾವು ಎಲ್ಲಾ ಸಮಯದಲ್ಲೂ ನಿಜ ಕ್ರೈಸ್ತರ ತರ ನಡ್ಕೊಬೇಕು. ಅದಕ್ಕೆ ನಾವೇನು ಮಾಡಬೇಕು? ದೇವರ ವಾಕ್ಯವನ್ನ ಮತ್ತು ನಮ್ಮ ಪ್ರಕಾಶನಗಳನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಬೇಕು. ಅದ್ರಲ್ಲೂ ಮುಖ್ಯವಾಗಿ ‘ಲೋಕಕ್ಕೆ ಬೆಳಕಾದ’ ಯೇಸು ಬಗ್ಗೆ ಮತ್ತು ಆತನು ಕಲಿಸಿರೋ ವಿಷ್ಯಗಳ ಬಗ್ಗೆ ಚೆನ್ನಾಗಿ ತಿಳ್ಕೊಬೇಕು.—ಯೋಹಾ. 8:12; ಜ್ಞಾನೋ. 6:23.
14. ಪವಿತ್ರಶಕ್ತಿ ನಮಗೆ ಹೇಗೆ ಸಹಾಯ ಮಾಡುತ್ತೆ?
14 ನಾವು “ಬೆಳಕಿನ ಮಕ್ಕಳ ತರ” ನಡ್ಕೊಳ್ತಾ ಇರಬೇಕಂದ್ರೆ ಪವಿತ್ರಶಕ್ತಿಯ ಸಹಾಯನೂ ಬೇಕು. ಯಾಕಂದ್ರೆ ಈ ಕೆಟ್ಟ ಲೋಕದಲ್ಲಿ ನಾವು ಪವಿತ್ರರಾಗಿರೋದು ಅಷ್ಟು ಸುಲಭ ಅಲ್ಲ. (1 ಥೆಸ. 4:3-5, 7, 8) ಈ ಲೋಕದ ಜನ್ರು ಯೆಹೋವ ದೇವರ ತರ ಯೋಚ್ನೆ ಮಾಡಲ್ಲ. ಹಾಗಾಗಿ ನಾವು ಅವ್ರ ತರ ಯೋಚ್ನೆ ಮಾಡಬಾರದಂದ್ರೆ ಪವಿತ್ರಶಕ್ತಿಯ ಸಹಾಯ ಬೇಕೇಬೇಕು. ಅಷ್ಟೇ ಅಲ್ಲ, ಈ ಪವಿತ್ರಶಕ್ತಿ ನಮಗೆ “ಎಲ್ಲ ತರದ ಒಳ್ಳೇತನ, ನೀತಿ” ಬೆಳೆಸ್ಕೊಳ್ಳೋಕೂ ಸಹಾಯ ಮಾಡುತ್ತೆ.—ಎಫೆ. 5:9.
15. ಪವಿತ್ರಶಕ್ತಿ ಪಡ್ಕೊಳ್ಳೋಕೆ ನಾವೇನು ಮಾಡಬೇಕು? (ಎಫೆಸ 5:19, 20)
15 ಪವಿತ್ರಶಕ್ತಿ ಪಡ್ಕೊಳ್ಳೋಕೆ ನಾವೇನು ಮಾಡಬೇಕು? ಯೆಹೋವನ ಹತ್ರ ಪ್ರಾರ್ಥಿಸಬೇಕು. ಆಗ ಯೆಹೋವ “ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ” ಕೊಡ್ತಾನೆ ಅಂತ ಯೇಸು ಹೇಳಿದ್ದಾನೆ. (ಲೂಕ 11:13) ಇದಷ್ಟೇ ಅಲ್ಲ, ಕೂಟಗಳಲ್ಲಿ ನಾವು ಯೆಹೋವನನ್ನ ಹೊಗಳುವಾಗ್ಲೂ ನಮಗೆ ಪವಿತ್ರಶಕ್ತಿ ಸಿಗುತ್ತೆ. (ಎಫೆಸ 5:19, 20 ಓದಿ.) ಆಗ ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋಕೆ ಮತ್ತು ನಡ್ಕೊಳ್ಳೋಕಾಗುತ್ತೆ.
16. ಒಳ್ಳೇ ತೀರ್ಮಾನ ಮಾಡೋಕೆ ನಾವೇನು ಮಾಡಬೇಕು? (ಎಫೆಸ 5:10, 17)
16 ನಾವು ಒಂದು ಮುಖ್ಯವಾದ ತೀರ್ಮಾನ ತಗೊಳ್ಳೋ ಮುಂಚೆ ಏನು ಮಾಡಬೇಕು? “ಯೆಹೋವನ ಇಷ್ಟ ಏನಂತ” ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕ ಹಾಗೆ ನಡ್ಕೊಬೇಕು. (ಎಫೆಸ 5:10, 17 ಓದಿ.) ನಮ್ಮ ಸನ್ನಿವೇಶಕ್ಕೆ ಯಾವ ಬೈಬಲ್ ತತ್ವ ಪಾಲಿಸಬೇಕು ಅಂತ ಕಂಡುಹಿಡಿದ್ರೆ ಯೆಹೋವ ದೇವರ ತರ ಯೋಚಿಸೋಕೆ ಪ್ರಯತ್ನ ಮಾಡ್ತಿದ್ದೀವಿ ಅಂತ ತೋರಿಸೋಕಾಗುತ್ತೆ. ಆಮೇಲೆ ಆ ತತ್ವ ಪಾಲಿಸಿದ್ರೆ ಒಳ್ಳೇ ತೀರ್ಮಾನ ಮಾಡೋಕಾಗುತ್ತೆ.
17. ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡೋಕೆ ನಾವೇನು ಮಾಡಬೇಕು? (ಎಫೆಸ 5:15, 16) (ಚಿತ್ರನೂ ನೋಡಿ.)
17 ಪೌಲ ಎಫೆಸದ ಕ್ರೈಸ್ತರಿಗೆ ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ ಅಂತನೂ ಹೇಳಿದ. (ಎಫೆಸ 5:15, 16 ಓದಿ.) ಯಾಕಂದ್ರೆ ನಮ್ಮ ವೈರಿಯಾದ “ಸೈತಾನ” ನಾವು ಈ ಲೋಕದ ವಿಷ್ಯಗಳಲ್ಲೇ ಮುಳುಗಿಹೋಗೋ ತರ ಮಾಡ್ತಾನೆ. ಆಗ ಯೆಹೋವನ ಸೇವೆ ಮಾಡೋಕೆ ನಮಗೆ ಟೈಮೇ ಇಲ್ಲ ಅಂತ ಅನಿಸಿಬಿಡುತ್ತೆ. (1 ಯೋಹಾ. 5:19) ಒಂದುವೇಳೆ ನಮಗೆ ಹೀಗೆ ಅನಿಸಿದ್ರೆ ಯೆಹೋವನ ಸೇವೆ ಮಾಡೋದಕ್ಕಿಂತ ಹಣ, ಆಸ್ತಿ-ಪಾಸ್ತಿ, ಕೆಲಸ, ಶಿಕ್ಷಣ ಇದನ್ನ ಮಾಡೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಿಬಿಡುತ್ತೆ. ಇದೆಲ್ಲ ನಮ್ಮ ಜೀವನಕ್ಕೆ ಬೇಕು ನಿಜ, ಆದ್ರೆ ಅದು ಯೆಹೋವನ ಸೇವೆಗಿಂತ ಮುಖ್ಯ ಆಗಬಾರದು. ಒಂದುವೇಳೆ ನಾವು ಹೀಗೇನಾದ್ರೂ ಮಾಡಿದ್ರೆ ನಾವೂ ಲೋಕದ ಜನ್ರ ತರ ಯೋಚ್ನೆ ಮಾಡ್ತಿದ್ದೀವಿ ಅಂತ ಅರ್ಥ. ಆದ್ರೆ ನಾವು ಲೋಕದ ಜನ್ರ ತರ ಇರದೆ “ಬೆಳಕಿನ ಮಕ್ಕಳ ತರ” ಇರಬೇಕು. ಅದಕ್ಕೆ “ಮುಖ್ಯವಾದ ವಿಷ್ಯಕ್ಕೆ ಸಮಯ” ಕೊಡಬೇಕು.
18. ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡೋಕೆ ಸಹೋದರ ಡೊನಾಲ್ಡ್ ಏನು ಮಾಡಿದ್ರು?
18 ಯೆಹೋವನ ಸೇವೆ ಜಾಸ್ತಿ ಮಾಡೋಕೆ ಅವಕಾಶಕ್ಕಾಗಿ ಹುಡುಕ್ತಾ ಇರಿ. ದಕ್ಷಿಣ ಆಫ್ರಿಕಾದಲ್ಲಿ ಇರೋ ಡೊನಾಲ್ಡ್ ಅನ್ನೋ ಸಹೋದರ ಇದನ್ನೇ ಮಾಡಿದ್ರು. “ನನಗೆ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ತುಂಬ ಆಸೆ ಇತ್ತು. ಅದಕ್ಕೋಸ್ಕರ ನಾನು ಯೆಹೋವನ ಹತ್ರ ಪ್ರಾರ್ಥಿಸಿದೆ. ಅದಕ್ಕೆ ಸರಿಹೊಂದೋ ಕೆಲಸನೂ ಸಿಗಲಿ ಅಂತ ಬೇಡ್ಕೊಂಡೆ. ಆತನ ಸಹಾಯದಿಂದ ನನಗೆ ಒಂದು ಒಳ್ಳೇ ಕೆಲಸ ಸಿಕ್ತು. ಆಮೇಲೆ ನಾನೂ ನನ್ನ ಹೆಂಡತಿ ಪೂರ್ಣ ಸಮಯದ ಸೇವೆ ಶುರುಮಾಡಿದ್ವಿ” ಅಂತ ಡೊನಾಲ್ಡ್ ಹೇಳ್ತಾರೆ.
19. “ಬೆಳಕಿನ ಮಕ್ಕಳ ತರ” ನಡಿತಾ ಇರೋಕೆ ನಾವೇನು ಮಾಡಬೇಕು?
19 ಪೌಲ ಬರೆದ ಪತ್ರದಿಂದ ಎಫೆಸದವರು ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಆಯ್ತು. ಇದು ನಮಗೂ ಸಹಾಯ ಮಾಡ್ತಲ್ವಾ? ಸರಿಯಾದ ಮನರಂಜನೆ ಆರಿಸ್ಕೊಳ್ಳೋಕೆ, ಒಳ್ಳೇ ಫ್ರೆಂಡ್ಸ್ ಮಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಅರ್ಥ ಮಾಡ್ಕೊಂಡ್ವಿ. ದಿನಾ ಬೈಬಲ್ ಓದಿದ್ರೆ ಸತ್ಯದ ದಾರಿಯಲ್ಲಿ ನಡಿಯೋಕೆ ಸಹಾಯ ಆಗುತ್ತೆ ಅಂತ ತಿಳ್ಕೊಂಡ್ವಿ. ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋಕೆ ಪವಿತ್ರಶಕ್ತಿ ಎಷ್ಟು ಮುಖ್ಯ ಅಂತ ಗೊತ್ತಾಯ್ತು. ಯೆಹೋವ ದೇವರ ತರ ಯೋಚಿಸಿದ್ರೆ ಒಳ್ಳೇ ತೀರ್ಮಾನಗಳನ್ನ ತಗೊಳ್ಳೋಕೆ ಆಗುತ್ತೆ ಅಂತ ಅರ್ಥಮಾಡ್ಕೊಂಡ್ವಿ. ಹಾಗಾಗಿ ಪೌಲ ಈ ಪತ್ರದಲ್ಲಿ ಕೊಟ್ಟ ನಿರ್ದೇಶನಗಳನ್ನ ನಾವು ಯಾವಾಗ್ಲೂ ಪಾಲಿಸ್ತಾ ಇರೋಣ. ಆಗ ಕತ್ತಲೆಗೆ ಹೋಗದೆ ಬೆಳಕಲ್ಲಿ ನಡಿತಾ ಇರೋಕೆ ಆಗುತ್ತೆ!
ನೀವೇನು ಹೇಳ್ತೀರಾ?
ಎಫೆಸ 5:8ರಲ್ಲಿ ಹೇಳಿರೋ ‘ಕತ್ತಲು’ ಮತ್ತು ‘ಬೆಳಕು’ ಅಂದ್ರೇನು?
‘ಕತ್ತಲಿಂದ’ ಹೊರಗೆ ಬರೋಕೆ ನಾವೇನು ಮಾಡಬೇಕು?
“ಬೆಳಕಿನ ಮಕ್ಕಳ ತರ” ನಡಿತಾ ಇರೋಕೆ ನಾವೇನು ಮಾಡಬೇಕು?
ಗೀತೆ 116 ಬೆಳಕು ಹೆಚ್ಚುತ್ತದೆ
a ಕೆಲವ್ರ ಹೆಸ್ರು ಬದಲಾಗಿದೆ.
b ಚಿತ್ರ ವಿವರಣೆ: ಇಲ್ಲಿ ತೋರಿಸಿರೋ ಚಿತ್ರ ಪೌಲ ಎಫೆಸದವ್ರಿಗೆ ಬರೆದ ಪತ್ರದ ಹಳೇ ಪ್ರತಿ.