ದೇವರು ಕೂಡಿಸಿದ್ದನ್ನು ಅಗಲಿಸಬೇಡಿ
“ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾಯ 19:6.
ನೀವು ವಾಹನದಲ್ಲಿ ಒಂದು ದೀರ್ಘ ಪ್ರಯಾಣವನ್ನು ಆರಂಭಿಸಲಿದ್ದೀರಿ ಎಂದಿಟ್ಟುಕೊಳ್ಳಿ. ಮಾರ್ಗದಲ್ಲಿ ನಿಮಗೇನಾದರೂ ಸಮಸ್ಯೆಗಳು ಉಂಟಾಗಬಹುದೋ? ಇಲ್ಲವೆಂದು ನೆನಸುವುದು ಮೂರ್ಖತನವಾಗಿದೆ. ಏಕೆಂದರೆ ಹವಾಮಾನ ಇದಕ್ಕಿದ್ದಂತೆ ಬದಲಾಗಬಹುದು ಮತ್ತು ನೀವು ವೇಗವನ್ನು ತಗ್ಗಿಸಿ, ಜಾಗರೂಕತೆಯಿಂದ ಮುಂದೆ ಸಾಗಬೇಕಾದೀತು. ಇಲ್ಲವೇ ವಾಹನದಲ್ಲಿ ಯಾವುದೋ ಯಾಂತ್ರಿಕ ತೊಡಕುಂಟಾಗಿ, ನಿಮಗದನ್ನು ಸರಿಪಡಿಸಲು ಆಗದೆ ಇರುವುದರಿಂದ ವಾಹನವನ್ನು ರಸ್ತೆಯ ಪಕ್ಕಕ್ಕೆ ತಂದು, ಬೇರೆಯವರಿಂದ ಸಹಾಯ ಕೋರಬೇಕಾದೀತು. ಆದರೆ ಇಂಥ ಸನ್ನಿವೇಶಗಳು ಎದುರಾದರೆ, ನೀವು ಆ ಪ್ರಯಾಣವನ್ನು ಆರಂಭಿಸಿದ್ದೇ ದೊಡ್ಡ ತಪ್ಪಾಗಿತ್ತೆಂದು ಹೇಳುತ್ತಾ ಆ ವಾಹನವನ್ನು ಅಲ್ಲೇ ಬಿಟ್ಟು ಹೋಗುವಿರಾ? ಇಲ್ಲ. ಏಕೆಂದರೆ ದೀರ್ಘ ಪ್ರಯಾಣವನ್ನು ಕೈಗೊಳ್ಳುವಾಗ ಸಮಸ್ಯೆಗಳು ಖಂಡಿತ ಬರುವವೆಂದು ನೀವು ನಿರೀಕ್ಷಿಸುತ್ತೀರಿ ಮತ್ತು ಅವುಗಳನ್ನು ನಿರ್ವಹಿಸಬಹುದಾದ ಮಾರ್ಗಗಳಿಗಾಗಿ ಹುಡುಕುತ್ತೀರಿ.
2 ವಿವಾಹದ ವಿಷಯದಲ್ಲೂ ಇದು ಸತ್ಯ. ಸಮಸ್ಯೆಗಳು ಅನಿವಾರ್ಯ, ಅವು ಬಂದೇ ಬರುವವು. ಮದುವೆಯಾಗಲಿರುವ ಗಂಡುಹೆಣ್ಣು ತಮ್ಮ ವಿವಾಹ ಜೀವನವು ಕೇವಲ ಸುಖದ ಸುಪ್ಪತ್ತಿಗೆ ಆಗಿರುವುದೆಂದು ನೆನಸುವುದಾದರೆ ಅದು ಮೂರ್ಖತನವಾಗಿರುವುದು. 1 ಕೊರಿಂಥ 7:28ರಲ್ಲಿ ಸ್ವತಃ ಬೈಬಲ್ ನೇರವಾಗಿ ಹೇಳುತ್ತದೇನೆಂದರೆ ಗಂಡಹೆಂಡತಿಯರಿಗೆ “ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು.” ಆದರೆ ಹೀಗಾಗುವುದು ಏಕೆ? ಚುಟುಕಾಗಿ ಹೇಳುವುದಾದರೆ, ಗಂಡಹೆಂಡತಿಯರು ಅಪರಿಪೂರ್ಣರಾಗಿದ್ದಾರೆ ಮತ್ತು ನಾವು ಜೀವಿಸುತ್ತಿರುವ ಸಮಯವು ‘ಕಡೇ ದಿವಸಗಳ ಕಠಿನಕಾಲಗಳು’ ಆಗಿರುವುದರಿಂದಲೇ. (2 ತಿಮೊಥೆಯ 3:1; ರೋಮಾಪುರ 3:23) ಆದುದರಿಂದ, ತುಂಬ ಉತ್ತಮವಾಗಿ ಹೊಂದಿಕೊಂಡು ಹೋಗುತ್ತಿರುವ, ಆಧ್ಯಾತ್ಮಿಕ-ಮನಸ್ಸಿನ ದಂಪತಿಗಳು ಸಹ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುವರು.
3 ಈ ಆಧುನಿಕ ಜಗತ್ತಿನಲ್ಲಾದರೊ ಸಮಸ್ಯೆಗಳು ಎದುರಾದಾಗ ಕೆಲವು ದಂಪತಿಗಳ ಪ್ರಥಮ ಪ್ರತಿಕ್ರಿಯೆಯು ತಮ್ಮ ವಿವಾಹಬಂಧವನ್ನು ಮುರಿದುಬಿಡುವುದೇ ಆಗಿದೆ. ಅನೇಕ ದೇಶಗಳಲ್ಲಿ ವಿವಾಹವಿಚ್ಛೇದದ ಪ್ರಮಾಣಗಳು ಹತೋಟಿಮೀರಿ ಹೆಚ್ಚುತ್ತಲೇ ಇವೆ. ಆದರೆ ಸತ್ಯ ಕ್ರೈಸ್ತರು ಸಮಸ್ಯೆಗಳಿಗೆ ಬೆನ್ನುಹಾಕುವ ಬದಲಿಗೆ ಅವುಗಳಿಗೆ ಮುಖಮಾಡಿ ನಿಲ್ಲುತ್ತಾರೆ. ಏಕೆ? ಏಕೆಂದರೆ ಅವರ ದೃಷ್ಟಿಯಲ್ಲಿ ವಿವಾಹವು ಯೆಹೋವನು ಕೊಟ್ಟಿರುವ ಒಂದು ಪವಿತ್ರ ಉಡುಗೊರೆ ಆಗಿದೆ. ವಿವಾಹಿತ ಜೋಡಿಗಳ ಬಗ್ಗೆ ಯೇಸು ಹೀಗಂದನು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾಯ 19:6) ಈ ಮಟ್ಟಕ್ಕನುಸಾರ ಜೀವಿಸುವುದು ಯಾವಾಗಲೂ ಸುಲಭವಲ್ಲವೆಂಬುದು ನಿಜ. ಏಕೆಂದರೆ ಬೈಬಲ್ ಮೂಲತತ್ತ್ವಗಳನ್ನು ಅಂಗೀಕರಿಸದ ಸಂಬಂಧಿಕರು ಹಾಗೂ ಕೆಲವು ವಿವಾಹ ಸಲಹೆಗಾರರ ಸಮೇತ ಇತರರು, ಅನೇಕವೇಳೆ ದಂಪತಿಗಳಿಗೆ ಶಾಸ್ತ್ರಾಧಾರಿತವಲ್ಲದ ಕಾರಣಗಳಿಗಾಗಿ ಪ್ರತ್ಯೇಕಗೊಳ್ಳುವಂತೆ ಇಲ್ಲವೆ ವಿಚ್ಛೇದ ಪಡೆಯುವಂತೆ ಉತ್ತೇಜಿಸುತ್ತಾರೆ.a ಕ್ರೈಸ್ತರಿಗಾದರೊ ತಿಳಿದಿರುವ ಸಂಗತಿಯೇನೆಂದರೆ, ದುಡುಕಿ ವಿವಾಹಬಂಧವನ್ನು ಮುರಿದುಬಿಡುವ ಬದಲು ಅದನ್ನು ದುರಸ್ತುಗೊಳಿಸಿ, ಕಾಪಾಡಿಕೊಳ್ಳುವುದು ಹೆಚ್ಚು ಉತ್ತಮ. ಆದುದರಿಂದ ಬೇರೆಯವರ ಸಲಹೆಸೂಚನೆಗಳಿಗನುಸಾರವಲ್ಲ ಬದಲಾಗಿ ಯೆಹೋವನ ವಿಧದಲ್ಲಿ ವಿಷಯಗಳನ್ನು ಮಾಡುವ ದೃಢಸಂಕಲ್ಪವನ್ನು ನಾವು ಆರಂಭದಿಂದಲೇ ಮಾಡುವುದು ಅತ್ಯಾವಶ್ಯಕ.—ಜ್ಞಾನೋಕ್ತಿ 14:12.
ಸಮಸ್ಯೆಗಳನ್ನು ಜಯಿಸುವುದು
4 ವಾಸ್ತವಾಂಶವೇನೆಂದರೆ, ಪ್ರತಿಯೊಬ್ಬರ ವಿವಾಹದಲ್ಲಿ ಆಗಾಗ್ಗೆ ಸಮಸ್ಯೆಗಳಿಂದಾಗಿ ವಿಶೇಷ ಗಮನ ಕೊಡಬೇಕಾಗುವ ಸಂದರ್ಭಗಳು ಬರುತ್ತವೆ. ಹೆಚ್ಚಿನ ವಿದ್ಯಮಾನಗಳಲ್ಲಿ ಇದು ಚಿಕ್ಕಪುಟ್ಟ ಮನಸ್ತಾಪಗಳನ್ನು ಇತ್ಯರ್ಥಮಾಡುವುದಕ್ಕಾಗಿರುತ್ತದೆ. ಆದರೆ ಕೆಲವೊಂದು ವಿವಾಹಗಳಲ್ಲಿ, ಹೆಚ್ಚು ತೀಕ್ಷ್ಣವಾದ ಸವಾಲುಗಳು ವಿವಾಹ ಸಂಬಂಧದ ಅಸ್ತಿವಾರವನ್ನು ಅಲುಗಾಡಿಸುತ್ತವೆ. ಕೆಲವೊಮ್ಮೆ ಒಬ್ಬ ಅನುಭವೀ ವಿವಾಹಿತ ಕ್ರೈಸ್ತ ಹಿರಿಯನಿಂದ ನೀವು ಸಹಾಯವನ್ನೂ ಕೇಳಬೇಕಾದೀತು. ಇಂಥ ಸನ್ನಿವೇಶಗಳು ನಿಮ್ಮ ವಿವಾಹಜೀವನವು ಸಂಪೂರ್ಣ ಸೋಲಾಗಿದೆ ಎಂಬುದನ್ನು ಸೂಚಿಸುವುದಿಲ್ಲ. ಅದರ ಬದಲು, ಪರಿಹಾರಕ್ಕಾಗಿ ಬೈಬಲ್ ಮೂಲತತ್ತ್ವಗಳಿಗೆ ನಿಕಟವಾಗಿ ಅಂಟಿಕೊಳ್ಳುವುದರ ಮಹತ್ತ್ವವನ್ನು ಅವು ಎತ್ತಿತೋರಿಸುತ್ತವೆ ಅಷ್ಟೇ.
5 ಯೆಹೋವನು ಮಾನವಕುಲದ ಸೃಷ್ಟಿಕರ್ತನು ಹಾಗೂ ವಿವಾಹ ಏರ್ಪಾಡಿನ ಮೂಲಕರ್ತನು. ಆದುದರಿಂದ, ವೈವಾಹಿಕ ಸಂಬಂಧವು ಯಶಸ್ವಿ ಆಗಲಿಕ್ಕೋಸ್ಕರ ಏನು ಅಗತ್ಯವೆಂಬುದು ಬೇರಾವನಿಗಿಂತಲೂ ಆತನಿಗೇ ಹೆಚ್ಚು ಉತ್ತಮವಾಗಿ ತಿಳಿದಿದೆ. ಪ್ರಶ್ನೆಯೇನೆಂದರೆ, ಆತನ ವಾಕ್ಯದಲ್ಲಿರುವ ಸಲಹೆಗೆ ನಾವು ಕಿವಿಗೊಟ್ಟು ಅದಕ್ಕೆ ವಿಧೇಯರಾಗುತ್ತೇವೋ? ನಾವು ಹಾಗೆ ಮಾಡುವಲ್ಲಿ ಖಂಡಿತ ಪ್ರಯೋಜನಹೊಂದುವೆವು. ಯೆಹೋವನು ತನ್ನ ಪ್ರಾಚೀನಕಾಲದ ಜನರಿಗೆ ಹೀಗಂದನು: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:18) ಬೈಬಲಿನಲ್ಲಿ ಇಡಲ್ಪಟ್ಟಿರುವ ನಿರ್ದೇಶನಗಳಿಗೆ ಅಂಟಿಕೊಳ್ಳುವುದರಿಂದ ಒಂದು ವಿವಾಹವು ಯಶಸ್ವಿ ಆಗಬಲ್ಲದು. ಮೊದಲಾಗಿ, ಗಂಡಂದಿರಿಗೆ ಬೈಬಲು ಕೊಡುವ ಸಲಹೆಯನ್ನು ನಾವು ಪರಿಗಣಿಸೋಣ.
ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಾ ಇರ್ರಿ
6 ಅಪೊಸ್ತಲ ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ಗಂಡಂದಿರಿಗೆ ಸ್ಪಷ್ಟವಾದ ನಿರ್ದೇಶನಗಳಿವೆ. ಪೌಲನು ಬರೆದುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ. ಅದಿರಲಿ; ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು.”—ಎಫೆಸ 5:25, 26, 28, 29, 33.
7 ಗಂಡಹೆಂಡತಿಯರ ನಡುವೆ ಏಳಬಹುದಾದ ಪ್ರತಿಯೊಂದು ಸಮಸ್ಯೆಯನ್ನು ಪೌಲನು ಇಲ್ಲಿ ಊಹಿಸಿ ಚರ್ಚಿಸುತ್ತಿಲ್ಲ. ಅದರ ಬದಲು, ಸಮಸ್ಯೆ ಏನೇ ಆಗಿರಲಿ ಅದಕ್ಕಾಗಿರುವ ಮೂಲಭೂತ ಪರಿಹಾರವು ಪ್ರೀತಿಯೇ ಎಂದು ಅವನು ಸೂಚಿಸುತ್ತಾನೆ. ಪ್ರೀತಿಯು ಪ್ರತಿಯೊಂದು ಕ್ರೈಸ್ತ ವಿವಾಹದ ಅಸ್ತಿವಾರದ ಮುಖ್ಯ ಭಾಗವಾಗಿರಬೇಕು. ವಾಸ್ತವದಲ್ಲಿ, ಪ್ರೀತಿ ಎಂಬ ಪದವನ್ನು ಹಿಂದಿನ ಪ್ಯಾರದಲ್ಲಿ ಕೊಡಲಾಗಿರುವ ವಚನಗಳಲ್ಲಿ ಎಂಟು ಸಲ ತಿಳಿಸಲಾಗಿದೆ. ಇನ್ನೊಂದು ವಿಷಯವನ್ನೂ ಗಮನಿಸಿರಿ. ಗಂಡನು ‘ತನ್ನ ಹೆಂಡತಿಯನ್ನು ಪ್ರೀತಿಸಬೇಕು’ ಎಂದು ಪೌಲನು ಹೇಳುವಾಗ, ಮೂಲಭಾಷೆಯಲ್ಲಿ ಅದು ಅವನು ತನ್ನ ಹೆಂಡತಿಯನ್ನು ಪ್ರೀತಿಸುತ್ತಾ ಇರಬೇಕು ಎಂಬ ಅರ್ಥ ಕೊಡುತ್ತದೆ. ಪ್ರೀತಿ ಹುಟ್ಟುವುದು ಸುಲಭ ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟ ಎಂಬ ಮಾತನ್ನು ಪೌಲನು ಅಂಗೀಕರಿಸಿದನೆಂಬ ವಿಷಯದಲ್ಲಿ ಸಂದೇಹವಿಲ್ಲ. ಇದು ಈ “ಕಡೆಯ ದಿವಸಗಳಲ್ಲಿ” ವಿಶೇಷವಾಗಿ ಸತ್ಯವಾಗಿದೆ ಏಕೆಂದರೆ ಈ ದಿನಗಳಲ್ಲಿ ಅನೇಕರು ‘ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರು’ ಮತ್ತು ‘ಸಮಾಧಾನವಾಗದವರು’ ಆಗಿದ್ದಾರೆ. (2 ತಿಮೊಥೆಯ 3:1-3, NIBV) ಇಂಥ ನಕಾರಾತ್ಮಕ ಗುಣಗಳು ಇಂದು ಅನೇಕ ವಿವಾಹಗಳನ್ನು ಒಳಗಿಂದೊಳಗೆಯೇ ಶಿಥಿಲಗೊಳಿಸುತ್ತಿವೆ. ಆದರೆ ಒಬ್ಬ ಗಂಡನು ಪ್ರೀತಿಪರನಾಗಿರುವಲ್ಲಿ, ಲೋಕದ ಈ ರೀತಿಯ ಸ್ವಾರ್ಥ ಗುಣಗಳು ತನ್ನ ಯೋಚನೆ ಹಾಗೂ ಕ್ರಿಯೆಗಳನ್ನು ಪ್ರಭಾವಿಸುವಂತೆ ಅವನು ಬಿಡುವುದಿಲ್ಲ.—ರೋಮಾಪುರ 12:2.
ನಿಮ್ಮ ಹೆಂಡತಿಯ ಅಗತ್ಯಗಳನ್ನು ಹೇಗೆ ಪೂರೈಸಬಲ್ಲಿರಿ?
8 ನೀವೊಬ್ಬ ಕ್ರೈಸ್ತ ಗಂಡನಾಗಿರುವಲ್ಲಿ, ಸ್ವಾರ್ಥಪರ ಪ್ರವೃತ್ತಿಗಳನ್ನು ಪ್ರತಿರೋಧಿಸಿ ನಿಮ್ಮ ಹೆಂಡತಿಗೆ ನಿಜ ಪ್ರೀತಿಯನ್ನು ಹೇಗೆ ತೋರಿಸಬಲ್ಲಿರಿ? ಈ ಲೇಖನದಲ್ಲಿ ಹಿಂದೆ ಉಲ್ಲೇಖಿಸಲಾದಂತೆ ಎಫೆಸದವರಿಗೆ ಪೌಲನು ಬರೆದ ಮಾತುಗಳಲ್ಲಿ ನೀವು ಮಾಡಬೇಕಾದ ಎರಡು ವಿಷಯಗಳನ್ನು ಅವನು ಗುರುತಿಸುತ್ತಾನೆ. ಒಂದನೆಯದಾಗಿ, ನಿಮ್ಮ ಹೆಂಡತಿಯ ಅಗತ್ಯಗಳನ್ನು ಪೂರೈಸಬೇಕು. ಮತ್ತು ಎರಡನೆಯದಾಗಿ, ನಿಮ್ಮ ಸ್ವಂತ ಶರೀರವನ್ನು ಸಂರಕ್ಷಿಸುವಂತೆ ಅವಳನ್ನು ಸಂರಕ್ಷಿಸಬೇಕು ಅಂದರೆ ಪ್ರಿಯವೆಂದೆಣಿಸಬೇಕು. ನಿಮ್ಮ ಪತ್ನಿಯ ಅಗತ್ಯಗಳನ್ನು ಹೇಗೆ ಪೂರೈಸಬಲ್ಲಿರಿ? ಒಂದು ವಿಧವು, ಭೌತಿಕ ರೀತಿಯಲ್ಲಿ ಅಂದರೆ ನಿಮ್ಮ ಹೆಂಡತಿಯ ಶಾರೀರಿಕ ಅಗತ್ಯಗಳನ್ನು ನೋಡಿಕೊಳ್ಳುವುದೇ ಆಗಿದೆ. ಪೌಲನು ತಿಮೊಥೆಯನಿಗೆ ಹೀಗೆ ಬರೆದನು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ [‘ತನ್ನ ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸದೆ ಹೋದರೆ,’ NW] ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
9 ಆದರೆ ಕೇವಲ ಆಹಾರ, ಬಟ್ಟೆ, ವಸತಿಯನ್ನು ಒದಗಿಸಿದರೆ ಸಾಲದು. ಅದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಏಕೆ? ಏಕೆಂದರೆ ಒಬ್ಬ ಗಂಡನು ತನ್ನ ಹೆಂಡತಿಯ ಭೌತಿಕ ಅಗತ್ಯಗಳನ್ನು ತುಂಬ ಉತ್ತಮ ರೀತಿಯಲ್ಲಿ ಪೂರೈಸುತ್ತಿರಬಹುದಾದರೂ ಅವಳ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ತಪ್ಪಿಬೀಳುತ್ತಿರಬಹುದು. ಈ ಅಗತ್ಯಗಳನ್ನು ಪೂರೈಸುವುದು ಸಹ ಅತಿ ಪ್ರಾಮುಖ್ಯ. ಅನೇಕ ಕ್ರೈಸ್ತ ಪುರುಷರು ಸಭೆಗೆ ಸಂಬಂಧಪಟ್ಟ ವಿಚಾರಗಳನ್ನು ನೋಡಿಕೊಳ್ಳುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ ನಿಜ. ಆದರೆ ಒಬ್ಬ ಗಂಡನಿಗೆ ಸಭೆಯಲ್ಲಿ ಭಾರಿ ಜವಾಬ್ದಾರಿಗಳು ಇವೆ ಎಂದಮಾತ್ರಕ್ಕೆ, ಕುಟುಂಬದ ತಲೆಯಾಗಿ ಅವನಿಗಿರುವ ದೇವ-ದತ್ತ ಹಂಗನ್ನು ಅವನು ಅಲಕ್ಷಿಸಬಹುದು ಎಂಬುದು ಇದರ ಅರ್ಥವಲ್ಲ. (1 ತಿಮೊಥೆಯ 3:5, 12) ಈ ವಿಷಯದ ಕುರಿತಾಗಿ ಚರ್ಚಿಸುತ್ತಾ ಈ ಪತ್ರಿಕೆಯು ಕೆಲವು ವರ್ಷಗಳ ಹಿಂದೆ ಈ ಹೇಳಿಕೆಯನ್ನು ಮಾಡಿತು: “ಬೈಬಲಿನ ಆವಶ್ಯಕತೆಗಳಿಗನುಸಾರವಾಗಿ, ‘ಪಾಲನೆ ಮನೆಯಿಂದ ಪ್ರಾರಂಭವಾಗುತ್ತದೆ’ ಎಂದು ಹೇಳಸಾಧ್ಯವಿದೆ. ಹಿರಿಯನು ತನ್ನ ಕುಟುಂಬವನ್ನು ಅಲಕ್ಷಿಸುವಲ್ಲಿ ತನ್ನ ನೇಮಕವನ್ನೂ ಅಪಾಯಕ್ಕೊಳಪಡಿಸಸಾಧ್ಯವಿದೆ.”b ಹಾಗಾದರೆ, ನಿಮ್ಮ ಹೆಂಡತಿಯ ಶಾರೀರಿಕ, ಭಾವನಾತ್ಮಕ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಆಧ್ಯಾತ್ಮಿಕ ಅಗತ್ಯಗಳನ್ನೂ ಪೂರೈಸುವುದು ನಿಮ್ಮ ಕರ್ತವ್ಯ ಎಂಬುದು ಸ್ಪಷ್ಟ.
ನಿಮ್ಮ ಹೆಂಡತಿಯನ್ನು ಪ್ರಿಯವೆಂದೆಣಿಸುವುದರ ಅರ್ಥವೇನು?
10 ಒಂದುವೇಳೆ ನೀವು ನಿಮ್ಮ ಹೆಂಡತಿಯನ್ನು ಪ್ರಿಯವೆಂದೆಣಿಸುತ್ತೀರಾದರೆ, ನೀವು ಅವಳನ್ನು ಪ್ರೀತಿಸುವ ಕಾರಣ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂದರ್ಥ. ನೀವಿದನ್ನು ಮಾಡಲು ಹಲವಾರು ಮಾರ್ಗಗಳಿವೆ. ಮೊದಲನೆಯದಾಗಿ, ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಿರಿ. ಈ ವಿಷಯವನ್ನು ನೀವು ಅಲಕ್ಷಿಸುವುದಾದರೆ ನಿಮ್ಮ ಹೆಂಡತಿಗೆ ನಿಮ್ಮ ಮೇಲಿರುವ ಪ್ರೀತಿಯು ಆರಿಹೋಗುವುದು. ಇನ್ನೊಂದು ವಿಷಯವನ್ನೂ ಪರಿಗಣಿಸಿರಿ. ನಿಮ್ಮ ಹೆಂಡತಿಗೆ ಎಷ್ಟು ಸಮಯ ಮತ್ತು ಗಮನ ಬೇಕೆಂದು ನೀವೆಣಿಸುತ್ತೀರೊ, ಅಷ್ಟು ಸಾಕೆಂದು ಬಹುಶಃ ಆಕೆಗೆ ಅನಿಸಲಿಕ್ಕಿಲ್ಲ. ನಿಮ್ಮ ಹೆಂಡತಿಯನ್ನು ನೀವು ಪ್ರಿಯವೆಂದೆಣಿಸುತ್ತೀರೆಂದು ಹೇಳಿದರೆ ಸಾಲದು, ಅವಳಿಗೆ ಅದರ ಅನುಭವ ಆಗಬೇಕು. ಪೌಲನು ಬರೆದುದು: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:24) ನೀವು ಒಬ್ಬ ಪ್ರೀತಿಯ ಗಂಡನಾಗಿದ್ದು, ನಿಮ್ಮ ಹೆಂಡತಿಯ ನಿಜವಾದ ಅಗತ್ಯಗಳು ನಿಮಗೆ ಅರ್ಥವಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.—ಫಿಲಿಪ್ಪಿ 2:4.
11 ನಿಮ್ಮ ಹೆಂಡತಿಯನ್ನು ಪ್ರಿಯವೆಂದೆಣಿಸುತ್ತೀರೆಂದು ತೋರಿಸುವ ಇನ್ನೊಂದು ವಿಧವು, ಮಾತಿನಲ್ಲೂ ವರ್ತನೆಯಲ್ಲೂ ಅವಳನ್ನು ಕೋಮಲವಾಗಿ ಉಪಚರಿಸುವುದೇ ಆಗಿದೆ. (ಜ್ಞಾನೋಕ್ತಿ 12:18) ಪೌಲನು ಕೊಲೊಸ್ಸೆಯವರಿಗೆ ಹೀಗೆ ಬರೆದನು: “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.” (ಕೊಲೊಸ್ಸೆ 3:19) ಒಂದು ಕೃತಿಗನುಸಾರ, ಪೌಲನ ಈ ಹೇಳಿಕೆಯ ಕೊನೆಯ ಭಾಗವನ್ನು ಸಾಮಾನ್ಯ ನುಡಿಗಟ್ಟಿನಲ್ಲಿ ಹೀಗನ್ನಬಹುದು: “ಅವಳನ್ನು ಒಬ್ಬ ಮನೆಕೆಲಸದವಳಂತೆ ನಡೆಸಬೇಡ,” ಇಲ್ಲವೇ “ಅವಳನ್ನು ಒಬ್ಬ ದಾಸಿಯನ್ನಾಗಿ ಮಾಡಬೇಡ.” ಗಂಡನು ಮನೆಯೊಳಗೆ ಇಲ್ಲವೆ ಹೊರಗೆ ಒಬ್ಬ ಪೀಡಕನಂತಿರುವಲ್ಲಿ ಅವನು ತನ್ನ ಹೆಂಡತಿಯನ್ನು ಪ್ರಿಯವೆಂದೆಣಿಸುತ್ತಿಲ್ಲ ಎಂದು ಅದು ತೋರಿಸುತ್ತದೆ. ಅವನು ತನ್ನ ಹೆಂಡತಿಯೊಂದಿಗೆ ಕಠೋರವಾಗಿ ವರ್ತಿಸುವಲ್ಲಿ ಅದು ದೇವರೊಂದಿಗೆ ಅವನಿಗಿರುವ ಸಂಬಂಧವನ್ನೂ ಬಾಧಿಸುವುದು. ಅಪೊಸ್ತಲ ಪೇತ್ರನು ಗಂಡಂದಿರಿಗೆ ಹೀಗೆ ಬರೆದನು: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.”c—1 ಪೇತ್ರ 3:7.
12 ನಿಮ್ಮ ಹೆಂಡತಿಗೆ ನಿಮ್ಮ ಮೇಲೆ ಪ್ರೀತಿ ತನ್ನಷ್ಟಕ್ಕೇ ತಾನೇ ಹುಟ್ಟಿಕೊಳ್ಳುವುದು ಎಂದು ಭಾವಿಸಬೇಡಿ. ನೀವು ಅವಳನ್ನು ಪ್ರೀತಿಸುತ್ತೀರೆಂದು ಅವಳಿಗೆ ಯಾವಾಗಲೂ ಆಶ್ವಾಸನೆ ಕೊಡುತ್ತಾ ಇರ್ರಿ. ಯೇಸು ಕ್ರೈಸ್ತ ಸಭೆಯನ್ನು ಉಪಚರಿಸಿದ ರೀತಿಯು ಕ್ರೈಸ್ತ ಗಂಡಂದಿರಿಗಾಗಿ ಒಂದು ಮಾದರಿಯಾಗಿದೆ. ಅವನು ಎಲ್ಲ ಸಮಯದಲ್ಲೂ—ತನ್ನ ಹಿಂಬಾಲಕರು ಪದೇ ಪದೇ ನಕಾರಾತ್ಮಕ ಗುಣಗಳನ್ನು ತೋರಿಸಿದಾಗಲೂ—ಸೌಮ್ಯನು, ದಯಾಪರನು ಮತ್ತು ಕ್ಷಮಿಸುವವನು ಆಗಿದ್ದನು. ಆದುದರಿಂದಲೇ ಅವನು ಇತರರಿಗೆ ಹೀಗನ್ನಸಾಧ್ಯವಿತ್ತು: “ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ [“ಹೊಸ ಚೈತನ್ಯ,” NW] ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ . . . ನನ್ನಲ್ಲಿ ಕಲಿತುಕೊಳ್ಳಿರಿ.” (ಮತ್ತಾಯ 11:28, 29) ಯೇಸುವನ್ನು ಅನುಕರಿಸುತ್ತಾ ಒಬ್ಬ ಕ್ರೈಸ್ತ ಗಂಡನು, ಯೇಸು ಸಭೆಯನ್ನು ಉಪಚರಿಸಿದ ರೀತಿಯಲ್ಲೇ ತನ್ನ ಹೆಂಡತಿಯನ್ನು ಉಪಚರಿಸುತ್ತಾನೆ. ತನ್ನ ಹೆಂಡತಿಯನ್ನು ನಿಜವಾಗಿಯೂ ಪ್ರಿಯವೆಂದೆಣಿಸುತ್ತಿರುವ, ಅಂದರೆ ಅದನ್ನು ಮಾತಿನಲ್ಲೂ ಕ್ರಿಯೆಯಲ್ಲೂ ತೋರಿಸುತ್ತಿರುವ ಗಂಡನು, ಅವಳಿಗೆ ನಿಜವಾಗಿಯೂ ಚೈತನ್ಯದ ಚಿಲುಮೆ ಆಗಿರುವನು.
ಬೈಬಲ್ ಮೂಲತತ್ತ್ವಗಳಿಗನುಸಾರ ಜೀವಿಸುವ ಹೆಂಡತಿಯರು
13 ಹೆಂಡತಿಯರಿಗೂ ಸಹಾಯಮಾಡುವ ಮೂಲತತ್ತ್ವಗಳು ಬೈಬಲಿನಲ್ಲಿವೆ. ಎಫೆಸ 5:22-24, 33 ತಿಳಿಸುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. ಅದಿರಲಿ; ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು. . . . ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ [“ಗಾಢ ಗೌರವದಿಂದ,” NW] ನಡೆದುಕೊಳ್ಳಬೇಕು.”
14 ಅಧೀನತೆ ಹಾಗೂ ಗೌರವಗಳಿಗೆ ಪೌಲನು ಒತ್ತು ನೀಡುತ್ತಿರುವುದನ್ನು ಗಮನಿಸಿ. ತನ್ನ ಗಂಡನಿಗೆ ಅಧೀನಳಾಗಬೇಕೆಂದು ಪ್ರತಿ ಹೆಂಡತಿಗೆ ಜ್ಞಾಪಕಹುಟ್ಟಿಸಲಾಗಿದೆ. ಇದು ದೇವರ ಏರ್ಪಾಡಿಗೆ ಹೊಂದಿಕೆಯಲ್ಲಿದೆ. ಭೂಮ್ಯಾಕಾಶಗಳಲ್ಲಿರುವ ಪ್ರತಿಯೊಂದು ಜೀವಿಯು ಒಬ್ಬರಿಗಲ್ಲ ಒಬ್ಬರಿಗೆ ಅಧೀನವಾಗಿದೆ. ಯೇಸು ಸಹ ಯೆಹೋವ ದೇವರಿಗೆ ಅಧೀನನಾಗಿದ್ದಾನೆ. (1 ಕೊರಿಂಥ 11:3) ಆದರೆ ಹೆಂಡತಿಯು ಅಧೀನತೆ ತೋರಿಸುವುದನ್ನು ಸುಲಭಗೊಳಿಸಲು ಗಂಡನು ತನ್ನ ತಲೆತನವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು.
15 ಹೆಂಡತಿಯು, ‘ಗಂಡನಿಗೆ ಗಾಢವಾದ ಗೌರವದಿಂದ ನಡೆದುಕೊಳ್ಳಬೇಕು’ ಎಂದೂ ಪೌಲನು ಹೇಳಿದನು. ಒಬ್ಬ ಕ್ರೈಸ್ತ ಹೆಂಡತಿಯು ‘ಸಾತ್ವಿಕವಾದ ಶಾಂತಮನಸ್ಸನ್ನು’ ತೋರಿಸಬೇಕೇ ಹೊರತು, ತನ್ನ ಗಂಡನ ವಿರುದ್ಧ ಸವಾಲು ಹಾಕುವವಳು ಇಲ್ಲವೇ ತನ್ನಿಷ್ಟದಂತೆ ಸ್ವತಂತ್ರವಾಗಿ ನಡೆದುಕೊಳ್ಳುವವಳು ಆಗಿರಬಾರದು. (1 ಪೇತ್ರ 3:4) ದೇವಭಕ್ತಿಯುಳ್ಳ ಹೆಂಡತಿಯೊಬ್ಬಳು ಮನೆಯಲ್ಲಿರುವವರ ಕ್ಷೇಮಕ್ಕಾಗಿ ಪರಿಶ್ರಮಿಸುತ್ತಾಳೆ ಮತ್ತು ತನ್ನ ತಲೆಯಾದವನಿಗೆ ಮಾನವನ್ನು ತರುತ್ತಾಳೆ. (ತೀತ 2:4, 5) ಅಲ್ಲದೆ, ಅವಳು ತನ್ನ ಗಂಡನ ಬಗ್ಗೆ ಬೇರೆಯವರೊಂದಿಗೆ ಒಳ್ಳೇದನ್ನು ಮಾತಾಡಲು ಪ್ರಯತ್ನಿಸುವಳು ಮತ್ತು ಹೀಗೆ ಬೇರೆಯವರು ಅವನನ್ನು ಅಗೌರವಿಸುವಂತೆ ಮಾಡುವ ಯಾವುದೇ ವಿಷಯವನ್ನು ಮಾಡದಿರುವಳು. ಗಂಡನು ಮಾಡಿರುವ ನಿರ್ಣಯಗಳು ಸಫಲಗೊಳ್ಳುವಂತೆಯೂ ಅವಳು ಶ್ರಮಪಡುವಳು.—ಜ್ಞಾನೋಕ್ತಿ 14:1.
16 ಒಬ್ಬ ಕ್ರೈಸ್ತ ಸ್ತ್ರೀ ಸಾತ್ವಿಕವಾದ ಶಾಂತಮನಸ್ಸನ್ನು ಹೊಂದಿರಬೇಕು ಎಂಬುದರ ಅರ್ಥ ಆಕೆಗೆ ತನ್ನ ಸ್ವಂತ ಅಭಿಪ್ರಾಯಗಳು ಇರಬಾರದು ಇಲ್ಲವೇ ಆಕೆಯ ವಿಚಾರಗಳು ಪ್ರಾಮುಖ್ಯವಲ್ಲ ಎಂದಾಗಿರುವುದಿಲ್ಲ. ಹಿಂದಿನ ಕಾಲದ ದೇವಭಕ್ತ ಸ್ತ್ರೀಯರು, ಉದಾಹರಣೆಗೆ ಸಾರಾ ಮತ್ತು ರೆಬೆಕ್ಕ ನಿರ್ದಿಷ್ಟ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಂದಾದರು. ಅವರ ಈ ಕೃತ್ಯಗಳನ್ನು ಯೆಹೋವನು ಸಮ್ಮತಿಸಿದನೆಂದು ಬೈಬಲ್ ದಾಖಲೆ ತೋರಿಸುತ್ತದೆ. (ಆದಿಕಾಂಡ 21:8-12; 27:46–28:4) ಅದೇ ರೀತಿಯಲ್ಲಿ ಕ್ರೈಸ್ತ ಹೆಂಡತಿಯರು ಸಹ ತಮ್ಮ ಅನಿಸಿಕೆಗಳನ್ನು ತಿಳಿಯಪಡಿಸಬಹುದು. ಆದರೆ ಇದನ್ನು ಅವರು ಗಂಡನನ್ನು ತುಚ್ಛೀಕರಿಸುವ ಧ್ವನಿಯಲ್ಲಲ್ಲ ಬದಲಾಗಿ ಅವನ ಭಾವನೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಹಾಗೆ ಮಾಡಬೇಕು. ಅಂಥ ಸಂವಾದವು ಆಗ ಹೆಚ್ಚು ಹಿತಕರವೂ ಪರಿಣಾಮಕಾರಿಯೂ ಆಗಿರುವುದನ್ನು ಅವರು ಕಂಡುಕೊಳ್ಳುವರು.
ವಚನ ಬದ್ಧತೆಯ ಪಾತ್ರ
17 ವಿವಾಹವು ಜೀವನಪರ್ಯಂತದ ವಚನ ಬದ್ಧತೆಯಾಗಿದೆ. ಆದುದರಿಂದ ತಮ್ಮ ವಿವಾಹವನ್ನು ಯಶಸ್ವಿಗೊಳಿಸುವ ಯಥಾರ್ಥ ಆಸೆ ಗಂಡಹೆಂಡತಿಯರಿಬ್ಬರಿಗೂ ಇರಬೇಕು. ಸಂವಾದ ಇಲ್ಲದಿರುವಲ್ಲಿ, ಸಮಸ್ಯೆಗಳು ಒಂದು ಗಾಯದಂತೆ ಕೊಳೆತು ಹೆಚ್ಚು ಗಂಭೀರವಾಗುವವು. ಬಹುತೇಕವಾಗಿ ನಡೆಯುವ ಸಂಗತಿಯೇನೆಂದರೆ ಸಮಸ್ಯೆಗಳು ಉದ್ಭವಿಸುವಾಗ ಗಂಡಹೆಂಡತಿ ಪರಸ್ಪರರೊಂದಿಗೆ ಮಾತಾಡುವುದನ್ನೇ ನಿಲ್ಲಿಸಿಬಿಡುತ್ತಾರೆ ಮತ್ತು ಇದು ಅಸಮಾಧಾನವನ್ನು ಹುಟ್ಟಿಸುತ್ತದೆ. ಕೆಲವು ಸಂಗಾತಿಗಳು ತಮ್ಮ ಸಂಬಂಧವನ್ನು ಕೊನೆಗಾಣಿಸಲಿಕ್ಕಾಗಿಯೂ ಮಾರ್ಗಗಳನ್ನು ಹುಡುಕುತ್ತಾರೆ. ಉದಾಹರಣೆಗೆ ಅವರು ವಿವಾಹಬಂಧದ ಹೊರಗೆ, ಬೇರೆ ಯಾರಲ್ಲೊ ಪ್ರಣಯಾತ್ಮಕ ಆಸಕ್ತಿಯನ್ನು ತೋರಿಸಲಾರಂಭಿಸುತ್ತಾರೆ. ಆದರೆ ಯೇಸು ಎಚ್ಚರಿಸಿದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”—ಮತ್ತಾಯ 5:28.
18 ಅಪೊಸ್ತಲ ಪೌಲನು ವಿವಾಹಿತ ಕ್ರೈಸ್ತರ ಸಮೇತ ಎಲ್ಲ ಕ್ರೈಸ್ತರಿಗೆ ಸಲಹೆಕೊಟ್ಟದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.” (ಎಫೆಸ 4:26, 27) ನಮ್ಮ ಪರಮ ಶತ್ರುವಾದ ಸೈತಾನನು ಕ್ರೈಸ್ತರ ಮಧ್ಯೆ ಉದ್ಭವಿಸಬಹುದಾದ ಮನಸ್ತಾಪಗಳನ್ನು ತನ್ನ ಲಾಭಕ್ಕಾಗಿ ಉಪಯೋಗಿಸಲು ಪ್ರಯತ್ನಿಸುತ್ತಾನೆ. ಅವನು ಯಶಸ್ವಿಯಾಗುವಂತೆ ಬಿಡಬೇಡಿ! ಸಮಸ್ಯೆಗಳೇಳುವಾಗ, ಯೆಹೋವನ ಯೋಚನಾ ರೀತಿಯ ಕುರಿತು ಬೈಬಲಿನಲ್ಲಿ ಏನು ಹೇಳಲಾಗಿದೆಯೆಂದು ಸಂಶೋಧನೆ ಮಾಡಿರಿ. ಇದಕ್ಕಾಗಿ ಬೈಬಲ್ ಆಧಾರಿತ ಪ್ರಕಾಶನಗಳನ್ನು ಬಳಸಿರಿ. ನಿಮ್ಮ ನಡುವೆ ಇರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಶಾಂತವಾಗಿ ಮತ್ತು ಮುಚ್ಚುಮರೆಯಿಲ್ಲದೆ ಚರ್ಚಿಸಿರಿ. ಯೆಹೋವನ ಮಟ್ಟಗಳ ಬಗ್ಗೆ ನಿಮಗಿರುವ ಜ್ಞಾನದೊಂದಿಗೆ ನಿಮ್ಮ ಕ್ರಿಯೆಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿರಿ. (ಯಾಕೋಬ 1:22-25) ನಿಮ್ಮ ವಿವಾಹಬಂಧದ ವಿಷಯದಲ್ಲಿ, ದಂಪತಿಯಾಗಿ ಜೊತೆಜೊತೆಯಲ್ಲಿ ದೇವರೊಂದಿಗೆ ನಡೆಯುತ್ತಾ ಇರುವ ದೃಢನಿರ್ಣಯ ಮಾಡಿರಿ ಮತ್ತು ದೇವರು ಕೂಡಿಸಿದ್ದನ್ನು ಅಗಲಿಸುವಂತೆ ಯಾರನ್ನೇ ಆಗಲಿ ಅಥವಾ ಯಾವುದನ್ನೇ ಆಗಲಿ ಬಿಡಬೇಡಿ!—ಮೀಕ 6:8. (w07 5/1)
[ಪಾದಟಿಪ್ಪಣಿಗಳು]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಎಚ್ಚರ! ಪತ್ರಿಕೆಯ 2002ರ ಫೆಬ್ರವರಿ 8ನೇ (ಇಂಗ್ಲಿಷ್) ಸಂಚಿಕೆಯ ಪುಟ 10ರಲ್ಲಿರುವ “ವಿಚ್ಛೇದ ಮತ್ತು ಪ್ರತ್ಯೇಕವಾಸ” ಎಂಬ ಚೌಕವನ್ನು ನೋಡಿ.
b ಇಸವಿ 1990, ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯ ಪುಟ 23ನ್ನು ನೋಡಿ.
c ಕ್ರೈಸ್ತ ಸಭೆಯಲ್ಲಿನ ವಿಶೇಷ ಅವಕಾಶಗಳಿಗಾಗಿ ಅರ್ಹನಾಗಲು ಒಬ್ಬ ಕ್ರೈಸ್ತನು “ಹೊಡೆದಾಡುವವನು” ಅಂದರೆ ಶಾರೀರಿಕವಾಗಿಯಾಗಲಿ, ವಾಗ್ದಾಳಿಯಿಂದಾಗಲಿ ಗದರಿಸುವವನು ಆಗಿರಬಾರದು. ಈ ಕಾರಣದಿಂದ, 1991ರ ಮೇ 1ನೇ ಸಂಚಿಕೆಯ ಕಾವಲಿನಬುರುಜು ಪುಟ 17ರಲ್ಲಿ ಹೀಗನ್ನುತ್ತದೆ: “ವಿವಾಹಿತನು, ಹೊರಗೆ ದೇವಭಕ್ತಿಯಿಂದ ವರ್ತಿಸಿ ಮನೆಯಲ್ಲಿ ದಬ್ಬಾಳಿಕೆ ನಡಿಸುವಲ್ಲಿ, ಅವನು ಅರ್ಹನಲ್ಲ.”—1 ತಿಮೊಥೆಯ 3:2-5, 12.
ನಿಮಗೆ ಜ್ಞಾಪಕವಿದೆಯೋ?
• ಕ್ರೈಸ್ತರ ವಿವಾಹಜೀವನಗಳಲ್ಲೂ ಸಮಸ್ಯೆಗಳಿರಬಹುದೇಕೆ?
• ಗಂಡನು ತನ್ನ ಹೆಂಡತಿಯ ಅಗತ್ಯಗಳನ್ನು ಹೇಗೆ ಪೂರೈಸಬಲ್ಲನು, ಮತ್ತು ಅವಳನ್ನು ಪ್ರಿಯವೆಂದೆಣಿಸುತ್ತಾನೆಂದು ಹೇಗೆ ತೋರಿಸಬಲ್ಲನು?
• ಹೆಂಡತಿಯು ತನ್ನ ಗಂಡನನ್ನು ಗಾಢವಾಗಿ ಗೌರವಿಸುತ್ತಾಳೆಂದು ತೋರಿಸಲು ಏನು ಮಾಡಬಲ್ಲಳು?
• ಗಂಡಹೆಂಡತಿಯರು ತಾವು ಕೊಟ್ಟ ವಚನಕ್ಕೆ ಬದ್ಧರಾಗಿರುವ ನಿರ್ಣಯವನ್ನು ಹೇಗೆ ಬಲಪಡಿಸಬಲ್ಲರು?
[ಅಧ್ಯಯನ ಪ್ರಶ್ನೆಗಳು]
1, 2. ದಂಪತಿಗಳು ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುವರೆಂಬುದನ್ನು ನಿರೀಕ್ಷಿಸುವುದು ಶಾಸ್ತ್ರಾಧಾರಿತವೂ ವಾಸ್ತವಿಕವೂ ಆಗಿದೆಯೇಕೆ?
3. (ಎ) ಲೋಕದಲ್ಲಿ ಅನೇಕರಿಗೆ ವಿವಾಹದ ಬಗ್ಗೆ ಯಾವ ದೃಷ್ಟಿಕೋನವಿದೆ? (ಬಿ) ಕ್ರೈಸ್ತರು ತಮ್ಮ ವಿವಾಹಬಂಧವನ್ನು ಕಾಪಾಡಿಕೊಳ್ಳಲು ಶ್ರಮಿಸುವುದು ಏಕೆ?
4, 5. (ಎ) ವಿವಾಹವೊಂದರಲ್ಲಿ ಯಾವ ಸವಾಲುಗಳನ್ನು ಎದುರಿಸಬೇಕಾಗುತ್ತದೆ? (ಬಿ) ದೇವರ ವಾಕ್ಯದಲ್ಲಿನ ಮೂಲತತ್ತ್ವಗಳು ವಿವಾಹದಲ್ಲಿ ಸಮಸ್ಯೆಗಳು ಎದ್ದಾಗಲೂ ಕಾರ್ಯಸಾಧಕವಾಗಿರುತ್ತವೆ ಏಕೆ?
6. ಗಂಡಂದಿರಿಗಾಗಿ ಯಾವ ಶಾಸ್ತ್ರಾಧಾರಿತ ಸಲಹೆಯಿದೆ?
7. (ಎ) ಯಾವ ಗುಣವು ಒಂದು ಕ್ರೈಸ್ತ ವಿವಾಹದ ಅಸ್ತಿವಾರದ ಮುಖ್ಯ ಭಾಗವಾಗಿರಬೇಕು? (ಬಿ) ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಪ್ರೀತಿಸುತ್ತಾ ಇರಬಲ್ಲರು?
8, 9. ಒಬ್ಬ ಕ್ರೈಸ್ತ ಗಂಡನು ಯಾವೆಲ್ಲ ವಿಷಯಗಳಲ್ಲಿ ತನ್ನ ಹೆಂಡತಿಯ ಅಗತ್ಯಗಳನ್ನು ಪೂರೈಸುತ್ತಾನೆ?
10. ಒಬ್ಬ ಗಂಡನು ತನ್ನ ಹೆಂಡತಿಯನ್ನು ಹೇಗೆ ಪ್ರಿಯವೆಂದೆಣಿಸಬಹುದು?
11. ಒಬ್ಬ ಗಂಡನು ತನ್ನ ಹೆಂಡತಿಯೊಂದಿಗೆ ಹೇಗೆ ನಡೆದುಕೊಳ್ಳುತ್ತಾನೋ ಅದು ದೇವರೊಂದಿಗೂ ಸಭೆಯೊಂದಿಗೂ ಅವನಿಗಿರುವ ಸಂಬಂಧವನ್ನು ಹೇಗೆ ಬಾಧಿಸುತ್ತದೆ?
12. ಕ್ರೈಸ್ತ ಸಭೆಯನ್ನು ಯೇಸು ಉಪಚರಿಸಿದ ರೀತಿಯಿಂದ ಒಬ್ಬ ಕ್ರೈಸ್ತ ಗಂಡನು ಏನನ್ನು ಕಲಿಯಬಹುದು?
13. ಹೆಂಡತಿಯರಿಗೆ ಸಹಾಯಮಾಡಬಲ್ಲ ಯಾವ ಮೂಲತತ್ತ್ವಗಳು ಬೈಬಲಿನಲ್ಲಿವೆ?
14. ಅಧೀನತೆಯ ಕುರಿತಾದ ಶಾಸ್ತ್ರಾಧಾರಿತ ಮೂಲತತ್ತ್ವವು ಸ್ತ್ರೀಯರನ್ನು ಅವಮಾನಗೊಳಿಸುವಂಥದ್ದು ಆಗಿರುವುದಿಲ್ಲವೇಕೆ?
15. ಹೆಂಡತಿಯರಿಗಾಗಿ ಬೈಬಲಿನಲ್ಲಿ ಕಂಡುಬರುವ ಸಲಹೆಗಳಲ್ಲಿ ಕೆಲವು ಯಾವುವು?
16. ಸಾರಾ ಹಾಗೂ ರೆಬ್ಬಕ್ಕಳ ಮಾದರಿಗಳಿಂದ ಕ್ರೈಸ್ತ ಹೆಂಡತಿಯರು ಏನನ್ನು ಕಲಿತುಕೊಳ್ಳಬಹುದು?
17, 18. ವೈವಾಹಿಕ ಬಂಧವನ್ನು ಕೆಡವಿಹಾಕಲು ಸೈತಾನನು ಮಾಡುವ ಪ್ರಯತ್ನಗಳನ್ನು ಗಂಡಹೆಂಡತಿಯರು ಪ್ರತಿರೋಧಿಸಬಹುದಾದ ಕೆಲವು ವಿಧಗಳಾವವು?
[ಪುಟ 24ರಲ್ಲಿರುವ ಚಿತ್ರ]
ಗಂಡನು ತನ್ನ ಹೆಂಡತಿಗೆ ಭೌತಿಕವಾಗಿ ಮಾತ್ರವಲ್ಲ, ಆಧ್ಯಾತ್ಮಿಕ ರೀತಿಯಲ್ಲೂ ಉತ್ತಮವಾಗಿ ನೋಡಿಕೊಳ್ಳಬೇಕು
[ಪುಟ 25ರಲ್ಲಿರುವ ಚಿತ್ರ]
ಕ್ರೈಸ್ತ ಹೆಂಡತಿಯರು ತಮ್ಮ ಭಾವನೆಗಳನ್ನು ಗೌರವಪೂರ್ವಕವಾಗಿ ವ್ಯಕ್ತಪಡಿಸುತ್ತಾರೆ