ಅಧ್ಯಾಯ 7
ವಿಧೇಯತೆ ತೋರಿಸುವುದು ನಿನ್ನನ್ನು ಸಂರಕ್ಷಿಸುತ್ತದೆ
ನಿನ್ನ ಮನಸ್ಸಿಗೆ ಬಂದಂತೆ ಮಾಡುವುದು ನಿನಗೆ ಇಷ್ಟನಾ? ‘ನಾನು ಏನು ಮಾಡಬೇಕು ಏನು ಮಾಡಬಾರದು ಅಂತ ಯಾರೂ ನನಗೆ ಹೇಳಬಾರದು’ ಅಂತ ಕೆಲವೊಮ್ಮೆ ನಿನಗೆ ಅನಿಸುತ್ತದಾ? ಏನು ಸಂಕೋಚವಿಲ್ಲದೆ ಮನಸ್ಸಿನಲ್ಲಿ ಇರುವುದನ್ನು ಹೇಳು.—
ಹಾಗಾದ್ರೆ ಯಾವುದು ಸರಿ? ನಿನ್ನ ಇಷ್ಟದಂತೆ ಮಾಡುವುದಾ, ಅಥವಾ ನಿನ್ನ ಅಪ್ಪಅಮ್ಮನ ಮಾತನ್ನು ಕೇಳುವುದಾ? ಇದರಲ್ಲಿ ಯಾವುದು ಒಳ್ಳೆಯದು ಅಂತ ನಿನಗೆ ಅನಿಸುತ್ತೆ?— ಅಪ್ಪಅಮ್ಮನ ಮಾತನ್ನು ನೀನು ಕೇಳಬೇಕು ಎಂದು ದೇವರು ಹೇಳುತ್ತಾನೆ. ದೇವರೇ ಹೀಗೆ ಹೇಳಿರುವುದಾದರೆ ಅದಕ್ಕೆ ಒಳ್ಳೇ ಕಾರಣಗಳು ಇರಲೇಬೇಕು. ಅದೇನೆಂದು ನಾವು ನೋಡೋಣ.
ನಿನಗೆ ಈಗ ಎಷ್ಟು ವಯಸ್ಸು?— ನಿನ್ನ ಅಪ್ಪನಿಗೆ?— ಅಮ್ಮನಿಗೆ, ಅಜ್ಜಿಗೆ, ಅಜ್ಜನಿಗೆ ಎಷ್ಟು ವಯಸ್ಸು ಅಂತ ಕೇಳಿದಿಯಾ?— ಅವರು ವಯಸ್ಸಿನಲ್ಲಿ ನಿನಗಿಂತ ತುಂಬಾ ದೊಡ್ಡವರು. ವ್ಯಕ್ತಿಗಳು ದೊಡ್ಡವರಾಗುತ್ತಾ ಹೋದಂತೆ ಹೆಚ್ಚು ವಿಷಯಗಳನ್ನು ಕಲಿಯುತ್ತಾ ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಅವರು ಹೆಚ್ಚೆಚ್ಚು ವಿಷಯಗಳನ್ನು ನೋಡುತ್ತಾರೆ, ಕೇಳುತ್ತಾರೆ ಮತ್ತು ಮಾಡುತ್ತಾರೆ. ಹೀಗೆ ಬದುಕಿನಲ್ಲಿ ಅನುಭವವೂ ಹೆಚ್ಚುತ್ತಾ ಹೋಗುತ್ತೆ. ಚಿಕ್ಕವರು ದೊಡ್ಡವರ ಈ ಅನುಭವದಿಂದ ಅನೇಕ ವಿಷಯಗಳನ್ನು ಕಲಿಯಬಹುದು.
ವಯಸ್ಸಿನಲ್ಲಿ ನಿನಗಿಂತ ಚಿಕ್ಕವರಾಗಿರುವ ಯಾರದಾದರೂ ಒಬ್ಬರ ಹೆಸರು ಹೇಳುತ್ತೀಯಾ?— ಅವರಿಗಿಂತ ಹೆಚ್ಚು ವಿಷಯಗಳು ನಿನಗೆ ಗೊತ್ತಿವೆ ಅಲ್ವಾ?— ಅದು ಹೇಗೆ?— ಹೇಗೆಂದರೆ ಅವರು ವಯಸ್ಸಿನಲ್ಲಿ ನಿನಗಿಂತ ಚಿಕ್ಕವರು. ತುಂಬಾ ವಿಷಯಗಳನ್ನು ತಿಳಿದುಕೊಳ್ಳಲು ಅವರಿಗಿಂತ ನಿನಗೆ ಹೆಚ್ಚು ಸಮಯ ಸಿಕ್ಕಿದೆ.
ಆದರೆ ನಿನಗಿಂತ, ನನಗಿಂತ, ನಮ್ಮೆಲ್ಲರಿಗಿಂತಲೂ ಅನೇಕಾನೇಕ ವರ್ಷಗಳ ಹಿಂದಿನಿಂದ ಜೀವಿಸುತ್ತಿರುವವನು ಯಾರು? ಹೇಳು ನೋಡೋಣ.— ಹೌದು, ಯೆಹೋವ ದೇವರೇ. ನಮ್ಮಿಬ್ಬರಿಗೆ ಗೊತ್ತಿರುವುದಕ್ಕಿಂತ ಹೆಚ್ಚು ವಿಷಯಗಳು ಆತನಿಗೆ ಗೊತ್ತಿವೆ. ಆದ್ದರಿಂದ ಆತನು ನಮಗೆ ಏನಾದರೂ ಮಾಡಲು ಹೇಳುವಾಗ ಅದು ಕಷ್ಟವಾಗಿ ಕಂಡರೂ ಅದನ್ನು ಮಾಡುವುದೇ ಜಾಣತನ. ಒಮ್ಮೆ ಮಹಾ ಬೋಧಕನಿಗೂ ದೇವರ ಮಾತಿಗೆ ವಿಧೇಯತೆ ತೋರಿಸಲು ಕಷ್ಟವಾಗಿತ್ತು. ಆಶ್ಚರ್ಯ ಆಗುತ್ತಾ?—
ಒಂದ್ಸಲ ದೇವರು ಯೇಸುವಿಗೆ ಕೆಲಸವೊಂದನ್ನು ವಹಿಸಿದನು. ಆ ಕೆಲಸ ಮಾಡಲು ಯೇಸುವಿಗೆ ತುಂಬಾ ಕಷ್ಟವಾಯಿತು. ಆಗ ಈ ಚಿತ್ರದಲ್ಲಿ ಕಾಣುವಂತೆ ಯೇಸು ದೇವರಿಗೆ ಪ್ರಾರ್ಥಿಸಿದನು. ‘ತಂದೆಯೇ, ನಿನಗೆ ಇಷ್ಟವಿದ್ದರೆ ಈ ಕಷ್ಟವನ್ನು ನನ್ನಿಂದ ದೂರಮಾಡು’ ಎಂದು ಕೇಳಿಕೊಂಡನು. ದೇವರ ಚಿತ್ತವನ್ನು ಮಾಡುವುದು ಕೆಲವೊಮ್ಮೆ ಕಷ್ಟವಾಗಿ ಇರುತ್ತದೆ ಎಂದು ಯೇಸುವಿನ ಮಾತುಗಳಿಂದ ತಿಳಿದುಬರುತ್ತದೆ. ಆದರೆ ಯೇಸು ತನ್ನ ಪ್ರಾರ್ಥನೆಯ ಕೊನೆಯಲ್ಲಿ ಏನು ಹೇಳಿದನು? ನಿನಗೆ ಗೊತ್ತಾ?—
“ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದು ಹೇಳಿದನು. (ಲೂಕ 22:41, 42) ಹೌದು, ತನ್ನ ಸ್ವಂತ ಚಿತ್ತವಲ್ಲ, ದೇವರ ಚಿತ್ತ ನೆರವೇರಬೇಕು ಎಂದು ಯೇಸು ಬಯಸಿದನು. ಆದುದರಿಂದ ದೇವರು ಹೇಳಿದ ಕೆಲಸವನ್ನು ಮಾಡಿದನೇ ಹೊರತು ತನಗೆ ಸರಿಯೆಂದು ತೋಚಿದ್ದನ್ನಲ್ಲ.
ಇದರಿಂದ ನಾವು ಏನನ್ನು ಕಲಿಯುತ್ತೇವೆ?— ದೇವರು ಹೇಳಿದ್ದನ್ನು ಮಾಡುವುದೇ ಯಾವಾಗಲೂ ಒಳ್ಳೇದು. ಕೆಲವೊಮ್ಮೆ ನಮಗೆ ಕಷ್ಟವಾಗಬಹುದು. ಆದರೂ ಅದನ್ನು ಮಾಡುವುದೇ ಸರಿ. ಯೇಸುವಿನ ಪ್ರಾರ್ಥನೆಯಿಂದ ಇನ್ನೊಂದು ವಿಷಯವನ್ನೂ ಕಲಿಯುತ್ತೇವೆ. ಅದೇನು ಗೊತ್ತಾ?—ದೇವರು ಮತ್ತು ಯೇಸು ಒಬ್ಬರಲ್ಲ ಬೇರೆ ಬೇರೆ ವ್ಯಕ್ತಿಗಳು. ಆದರೆ ಕೆಲವರು ಅವರಿಬ್ಬರು ಒಂದೇ ಎಂದು ಹೇಳುತ್ತಾರೆ. ಅದು ನಿಜವಲ್ಲ. ಏಕೆಂದರೆ ಯೆಹೋವ ದೇವರು ತನ್ನ ಮಗನಾದ ಯೇಸುವಿಗಿಂತ ಅನೇಕ ವರ್ಷಗಳ ಹಿಂದಿನಿಂದಲೂ ಇದ್ದಾನೆ ಮತ್ತು ಯೇಸುವಿಗಿಂತ ಹೆಚ್ಚು ವಿಷಯಗಳು ಆತನಿಗೆ ತಿಳಿದಿವೆ.
ದೇವರು ಹೇಳಿದ್ದನ್ನು ಚಾಚೂತಪ್ಪದೆ ಮಾಡುವಾಗ ನಮಗೆ ದೇವರ ಮೇಲೆ ಪ್ರೀತಿಯಿದೆ ಎಂದು ನಾವು ತೋರಿಸುತ್ತೇವೆ. ಬೈಬಲ್ ಕೂಡ, “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಎಂದು ಹೇಳುತ್ತದೆ. (1 ಯೋಹಾನ 5:3) ಇದರರ್ಥ, ನಾವೆಲ್ಲರೂ ದೇವರಿಗೆ ವಿಧೇಯರಾಗಬೇಕು. ನೀನು ಸಹ ದೇವರಿಗೆ ವಿಧೇಯತೆ ತೋರಿಸಲು ಇಷ್ಟಪಡುತ್ತೀಯ ತಾನೇ?—
ಸರಿ ಹಾಗಾದ್ರೆ, ದೇವರು ಮಕ್ಕಳಿಗೆ ಏನು ಮಾಡಲು ಹೇಳುತ್ತಾನೆ ಅಂತ ಬೈಬಲಿನಲ್ಲಿ ನೋಡೋಣ. ಎಫೆಸ 6ನೇ ಅಧ್ಯಾಯದ 1, 2 ಮತ್ತು 3ನೇ ವಚನಗಳನ್ನು ಓದೋಣ. ಅದು ಹೇಳುವುದು: “ಮಕ್ಕಳೇ, ಕರ್ತನೊಂದಿಗೆ ಐಕ್ಯದಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ನೀತಿಯಾಗಿದೆ. ವಾಗ್ದಾನಸಹಿತವಾದ ಮೊದಲ ಆಜ್ಞೆಯೇನೆಂದರೆ, ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸು. ಸನ್ಮಾನಿಸಿದರೆ ನಿನಗೆ ಮೇಲಾಗುವುದು ಮತ್ತು ನೀನು ಭೂಮಿಯ ಮೇಲೆ ಬಹುಕಾಲ ಬಾಳುವಿ.’”
ನೋಡಿದಿಯಾ, ತಂದೆತಾಯಿಗೆ ವಿಧೇಯತೆ ತೊರಿಸಬೇಕೆಂದು ಯೆಹೋವ ದೇವರೇ ಹೇಳಿದ್ದಾನೆ. ತಂದೆತಾಯಿಯನ್ನು ‘ಸನ್ಮಾನಿಸುವುದು’ ಅಂದರೆ ಏನು? ಅಂದರೆ ಅವರಿಗೆ ಮರ್ಯಾದೆ ಕೊಡಬೇಕು ಎಂದರ್ಥ. ತಂದೆತಾಯಿಗೆ ನೀನು ವಿಧೇಯತೆ ತೋರಿಸಿದರೆ “ನಿನಗೆ ಮೇಲಾಗುವುದು” ಅಂದರೆ ಒಳ್ಳೆಯದಾಗುವುದು ಎಂದು ದೇವರು ಮಾತುಕೊಟ್ಟಿದ್ದಾನೆ.
ಈಗ ನಿನಗೆ ನಿಜ ಕಥೆಯೊಂದನ್ನು ಹೇಳುತ್ತೇನೆ ಕೇಳು. ಇದು ಬಹಳ ವರ್ಷಗಳ ಹಿಂದೆ ಯೆರೂಸಲೇಮ್ ಪಟ್ಟಣದಲ್ಲಿ ನಡೆದ ಘಟನೆ. ಆ ದೊಡ್ಡ ಪಟ್ಟಣದ ಕೆಲವು ಜನರು ಹೇಗೆ ವಿಧೇಯತೆ ತೋರಿಸಿ ತಮ್ಮ ಪ್ರಾಣ ಉಳಿಸಿಕೊಂಡರು ಅಂತ ಈ ಕಥೆ ಹೇಳುತ್ತದೆ. ಯೆರೂಸಲೇಮ್ ಪಟ್ಟಣದಲ್ಲಿದ್ದ ಹೆಚ್ಚಿನವರು ದೇವರ ಮಾತಿನಂತೆ ನಡೆಯುತ್ತಿರಲಿಲ್ಲ. ಆದುದರಿಂದ ಆ ಪಟ್ಟಣವನ್ನು ದೇವರು ನಾಶಮಾಡುತ್ತಾನೆ ಎಂದು ಯೇಸು ಅಲ್ಲಿನ ಜನರಿಗೆ ಎಚ್ಚರಿಕೆ ನೀಡಿದನು. ದೇವರ ಮಾತನ್ನು ಕೇಳುವವರು ಈ ವಿನಾಶದಿಂದ ತಪ್ಪಿಸಿಕೊಳ್ಳಬಹುದು ಎಂದು ಸಹ ಯೇಸು ಹೇಳಿದನು. ಮಾತ್ರವಲ್ಲ ನಾಶನದಿಂದ ತಪ್ಪಿಸಿಕೊಳ್ಳಬೇಕಾದರೆ ಏನು ಮಾಡಬೇಕೆಂದು ಕೂಡ ತಿಳಿಸಿದನು. ‘ಯೆರೂಸಲೇಮ್ ಪಟ್ಟಣದ ಸುತ್ತಲೂ ಸೈನ್ಯಗಳು ಸುತ್ತುವರಿದಿರುವುದನ್ನು ನೀವು ನೋಡುವಾಗ, ಅದರ ವಿನಾಶವು ಸಮೀಪಿಸಿದೆ ಎಂದು ತಿಳಿದುಕೊಳ್ಳುವಿರಿ. ಯೆರೂಸಲೇಮನ್ನು ಬಿಟ್ಟು ಬೆಟ್ಟಗಳಿಗೆ ಓಡಿಹೋಗಲು ಅದೇ ತಕ್ಕ ಸಮಯವಾಗಿರುವುದು’ ಎಂದು ಯೇಸು ಸ್ಪಷ್ಟವಾಗಿ ಹೇಳಿದನು.—ಲೂಕ 21:20-22.
ಕೆಲವು ವರ್ಷಗಳ ನಂತರ ಏನಾಯಿತು ಗೊತ್ತಾ? ಯೇಸು ಹೇಳಿದಂತೆಯೇ ಯೆರೂಸಲೇಮ್ ಪಟ್ಟಣವನ್ನು ಮುತ್ತಿಗೆ ಹಾಕಲು ದೊಡ್ಡ ಸೈನ್ಯ ಬಂತು. ಅದು ರೋಮನ್ನರ ಸೈನ್ಯವಾಗಿತ್ತು. ಆ ಸೈನ್ಯ ಯೆರೂಸಲೇಮ್ ಪಟ್ಟಣದ ಸುತ್ತಲೂ ಸುತ್ತುವರಿದು ಯುದ್ಧಕ್ಕೆ ಸಿದ್ಧವಾಗಿತ್ತು. ಆದರೆ ಏನಾಯಿತೋ ಗೊತ್ತಿಲ್ಲ ಯುದ್ಧ ಮಾಡದೆ ವಾಪಸ್ ಹೋಯಿತು. ಆಗ ಹೆಚ್ಚಿನವರು ಉಫ್! ಅಪಾಯ ತಪ್ಪಿತು, ಇನ್ನು ಆರಾಮಾಗಿ ಇಲ್ಲೇ ಇರಬಹುದು ಎಂದು ನೆನಸಿ ಆ ಪಟ್ಟಣದಲ್ಲೇ ಉಳಿದುಬಿಟ್ಟರು. ಆದರೆ ಅವರು ಏನು ಮಾಡಬೇಕಿತ್ತು? ಯೇಸು ಏನು ಹೇಳಿದ್ದನು?— ಒಂದು ವೇಳೆ ನೀನು ಅಲ್ಲಿ ಇರುತ್ತಿದ್ದರೆ ಏನು ಮಾಡುತ್ತಿದ್ದೆ?— ಯಾರು ಯೇಸುವಿನ ಮಾತುಗಳಲ್ಲಿ ನಂಬಿಕೆಯಿಟ್ಟರೋ ಅವರು ತಮ್ಮ ಮನೆಮಾರನ್ನೆಲ್ಲಾ ಬಿಟ್ಟು ತಕ್ಷಣವೇ ಯೆರೂಸಲೇಮಿನಿಂದ ದೂರ ಬೆಟ್ಟಗಳಿಗೆ ಓಡಿಹೋದರು.
ಸರಿ, ಯೆರೂಸಲೇಮಿಗೆ ಏನಾಯಿತು? ರೋಮನ್ ಸೈನ್ಯ ವಾಪಸ್ಸು ಹೋದ ಆ ವರ್ಷದಲ್ಲಿ ಏನು ಆಗಲಿಲ್ಲ. ಅದರ ಮುಂದಿನ ವರ್ಷ? ಆಗಲೂ ಏನು ಆಗಲಿಲ್ಲ. ಮೂರನೆಯ ವರ್ಷ? ಊಹೂಂ! ಏನೂ ಆಗಲಿಲ್ಲ. ಪಟ್ಟಣವನ್ನು ಬಿಟ್ಟು ಓಡಿಹೋದವರೆಲ್ಲ ಮೂರ್ಖರು ಅಂತ ಕೆಲವು ಜನರು ಅಂದುಕೊಂಡಿರಬಹುದು. ಆದರೆ ನಾಲ್ಕನೇ ವರ್ಷ ಬಂತು. ರೋಮನ್ ಸೈನ್ಯ ಮತ್ತೆ ದಂಡೆತ್ತಿ ಬಂತು. ಪುನಃ ಯೆರೂಸಲೇಮ್ ಪಟ್ಟಣವನ್ನು ಒಂದಿಷ್ಟು ಜಾಗ ಬಿಡದೆ ಸುತ್ತುವರಿದವು. ಒಳಗಿದ್ದವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಈಗ ಕಾಲ ಮಿಂಚಿಹೋಗಿತ್ತು. ಈ ಸಲ ಸೈನ್ಯ ಆ ಪಟ್ಟಣವನ್ನು ಪೂರ್ತಿ ನಾಶಮಾಡಿಯೇ ಬಿಟ್ಟಿತು. ತುಂಬಾ ಜನರು ಸತ್ತು ಹೋದರು. ಅಲ್ಲಿ ಇಲ್ಲಿ ಬದುಕಿದ್ದ ಕೆಲವರನ್ನು ಸೆರೆ ಹಿಡಿದುಕೊಂಡು ಹೋದರು.
ಆದರೆ ಯೇಸುವಿನ ಮಾತಿಗೆ ವಿಧೇಯರಾದವರಿಗೆ ಏನಾಯಿತು?— ಅವರು ಸುರಕ್ಷಿತರಾಗಿದ್ದರು. ಏಕೆಂದರೆ ಅವರು ಯೆರೂಸಲೇಮಿನಿಂದ ಬಹಳ ದೂರದಲ್ಲಿದ್ದರು. ಆದುದರಿಂದ ಅವರಿಗೆ ಏನೂ ಹಾನಿಯಾಗಲಿಲ್ಲ. ಹೀಗೆ ವಿಧೇಯತೆ ಅವರನ್ನು ಸಂರಕ್ಷಿಸಿತು.
ವಿಧೇಯತೆ ನಿನ್ನನ್ನೂ ಕಾಪಾಡುತ್ತದಾ?— ರಸ್ತೆಯಲ್ಲಿ ಆಟ ಆಡ ಕೂಡದು ಎಂದು ನಿನಗೆ ಅಪ್ಪಅಮ್ಮ ಹೇಳುತ್ತಾರೆ. ಹಾಗೆ ಯಾಕೆ ಹೇಳುತ್ತಾರೆ ಎಂದು ಯೋಚಿಸಿದ್ದಿಯಾ?— ರಸ್ತೆಯಲ್ಲಿ ಆಡುವಾಗ ಕಾರೋ ಬೈಕೋ ಬಂದು ನಿನಗೆ ಢಿಕ್ಕಿ ಹೊಡೆದರೆ! ಅದಕ್ಕೆ ಅವರು ಹಾಗೆ ಹೇಳೋದು. ಆದರೆ, ‘ರಸ್ತೆಯಲ್ಲಿ ಒಂದೂ ಕಾರು ಕಾಣಿಸುತ್ತಿಲ್ಲ. ಇದೊಂದು ಸಲ ಆಡಿದರೆ ನನಗೇನು ಆಗೊಲ್ಲ. ಬೇರೆ ಮಕ್ಕಳೆಲ್ಲ ರಸ್ತೆಯಲ್ಲಿ ಆಡೋಲ್ವಾ. ಅವರಿಗೇನು ಆಗಿಲ್ಲ. ನನಗೆ ಮಾತ್ರ ಕಾರು ಢಿಕ್ಕಿ ಹೊಡೆಯುತ್ತಾ?’ ಅಂತ ನೀನು ಯೋಚಿಸಬಹುದು.
ಯೆರೂಸಲೇಮಿನಲ್ಲಿದ್ದ ಅನೇಕರು ಸಹ ಹೀಗೇ ಯೋಚಿಸಿದ್ದರು. ರೋಮನ್ ಸೈನ್ಯ ವಾಪಸ್ ಹೋದಾಗ, ‘ನಮಗಿನ್ನು ಯಾವ ಅಪಾಯ ಇಲ್ಲ. ನಾವು ಎಲ್ಲೂ ಹೋಗಬೇಕಾಗಿಲ್ಲ. ಬೇರೆಯವರೆಲ್ಲ ಇದೇ ಪಟ್ಟಣದಲ್ಲಿ ಇದ್ದರಲ್ವಾ. ನಾವೂ ಇಲ್ಲೆ ಇದ್ದುಬಿಡೋಣ’ ಎಂದು ನೆನಸಿದರು. ನೆನಪಿದೆಯಾ, ಅವರಿಗೆ ಪಟ್ಟಣ ಬಿಟ್ಟು ಓಡಿ ಹೋಗುವಂತೆ ಎಚ್ಚರಿಕೆ ಕೊಡಲಾಗಿತ್ತು. ಆದರೂ ಅವರು ಅದಕ್ಕೆ ಗಮನ ಕೊಡಲಿಲ್ಲ. ಪರಿಣಾಮ ಏನು? ಅವರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು.
ಇನ್ನೊಂದು ಉದಾಹರಣೆಯನ್ನು ನೋಡೋಣ. ನೀನು ಎಂದಾದರೂ ಬೆಂಕಿಕಡ್ಡಿಯೊಂದಿಗೆ ಆಟ ಆಡಿದ್ದೀಯಾ?— ಬೆಂಕಿಕಡ್ಡಿ ಗೀಚಿದಾಗ ಸರ್ರ್ ಅಂತ ಬೆಂಕಿ ಉರಿಯುವುದನ್ನು ನೋಡಲು ನಿನಗೆ ಖುಷಿಯಾಗಬಹುದು. ಆದರೆ ಬೆಂಕಿ ಜೊತೆ ಆಡುವುದು ಎಷ್ಟು ಅಪಾಯ ಗೊತ್ತಾ? ಕೇವಲ ಒಂದು ಬೆಂಕಿಕಡ್ಡಿಯಿಂದ ಇಡೀ ಮನೆ ಸುಟ್ಟು ಬೂದಿ ಆಗಬಹುದು. ನಿನ್ನ ಪ್ರಾಣ ಕೂಡ ಹೋಗಬಹುದು!
ನಿನಗೆ ಏನು ಅನಿಸುತ್ತೆ, ಯಾವಾಗಲೋ ಒಮ್ಮೊಮ್ಮೆ ವಿಧೇಯರಾದರೆ ಸಾಕಾ? ಖಂಡಿತ ಇಲ್ಲ. ಪ್ರತಿಯೊಂದು ವಿಷಯದಲ್ಲೂ ನೀನು ವಿಧೇಯತೆ ತೋರಿಸಬೇಕು. ಆಗಲೇ ನೀನು ಸುರಕ್ಷಿತವಾಗಿ ಇರಬಹುದು. ಸ್ವಲ್ಪ ಯೋಚಿಸು, ‘ಮಕ್ಕಳೇ, ನಿಮ್ಮ ತಂದೆತಾಯಿಗೆ ವಿಧೇಯರಾಗಿರಿ’ ಎಂದು ಯಾರು ಹೇಳುತ್ತಿದ್ದಾರೆ?— ಬೇರಾರು ಅಲ್ಲ ದೇವರೇ. ಆತನಿಗೆ ನಿನ್ನ ಮೇಲೆ ಪ್ರೀತಿ ಇರುವುದರಿಂದಲೇ ನಿನಗೆ ಇದನ್ನು ಹೇಳುತ್ತಾನೆ. ಚಿನ್ನಾ ನೀನು ಇದನ್ನು ಎಂದೂ ಮರೆಯಬೇಡ.
ವಿಧೇಯತೆ ತೋರಿಸುವುದು ಎಷ್ಟು ಪ್ರಾಮುಖ್ಯ ಎಂದು ಈ ವಚನಗಳಿಂದ ನೋಡೋಣ: ಜ್ಞಾನೋಕ್ತಿ 23:22; ಪ್ರಸಂಗಿ 12:13; ಯೆಶಾಯ 48:17, 18 ಮತ್ತು ಕೊಲೊಸ್ಸೆ 3:20.