ಯೆಹೋವನು ‘ಆರಂಭದಲ್ಲಿಯೇ ಅಂತ್ಯವನ್ನು ತಿಳಿಸುತ್ತಾನೆ’
“ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.”—ಯೆಶಾಯ 46:10.
ರಾತ್ರಿಯ ಪ್ರಶಾಂತತೆಯಲ್ಲಿ ವೈರಿ ಸೈನಿಕರು ಯೂಫ್ರೇಟೀಸ್ ನದೀತಳದಲ್ಲಿ ಗುಟ್ಟಾಗಿ ಹೆಜ್ಜೆಹಾಕುತ್ತಾ ಮುಂದೆ ಹೋಗುತ್ತಿದ್ದಾರೆ. ಬಾಬೆಲ್ ನಗರವನ್ನು ವಶಮಾಡಿಕೊಳ್ಳುವುದೇ ಅವರ ಉದ್ದೇಶ. ಅವರು ನಗರದ ಬಾಗಿಲಿನ ಹತ್ತಿರಕ್ಕೆ ಬರುತ್ತಿರುವಾಗ ಅಚ್ಚರಿಹುಟ್ಟಿಸುವ ಒಂದು ದೃಶ್ಯವನ್ನು ಕಾಣುತ್ತಾರೆ. ಬಾಬೆಲಿನ ಬೃಹದಾಕಾರದ ಕೋಟೆಬಾಗಿಲುಗಳು ತೆರೆದಿಡಲ್ಪಟ್ಟಿವೆ! ನದೀತಳದಿಂದ ಮೇಲೆ ಹತ್ತಿದ ಸೈನಿಕರು ನಗರದೊಳಕ್ಕೆ ಪ್ರವೇಶಿಸುತ್ತಾರೆ. ಸ್ವಲ್ಪದರಲ್ಲೇ ನಗರವು ಕೈವಶವಾಗುತ್ತದೆ. ವೈರಿ ಸೈನಿಕರ ನಾಯಕನಾಗಿರುವ ಕೋರೆಷನು ಕೈವಶವಾದ ಬಾಬೆಲನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ಸಮಯಾನಂತರ ಇಸ್ರಾಯೇಲ್ ಬಂಧಿವಾಸಿಗಳನ್ನು ಬಿಡುಗಡೆಗೊಳಿಸುವ ಒಂದು ರಾಜಾಜ್ಞೆಯನ್ನು ಹೊರಡಿಸುತ್ತಾನೆ. ಬಾಬೆಲ್ನಲ್ಲಿ ದೇಶಭ್ರಷ್ಟರಾಗಿದ್ದ ಇವರಲ್ಲಿ ಸಾವಿರಾರು ಮಂದಿ ತಮ್ಮ ಸ್ವದೇಶವಾದ ಯೆರೂಸಲೇಮಿನಲ್ಲಿ ಯೆಹೋವನ ಆರಾಧನೆಯನ್ನು ಪುನಃಸ್ಥಾಪಿಸಲಿಕ್ಕಾಗಿ ಹಿಂದಿರುಗುತ್ತಾರೆ.—2 ಪೂರ್ವಕಾಲವೃತ್ತಾಂತ 36:22, 23; ಎಜ್ರ 1:1-4.
2 ಸಾ.ಶ.ಪೂ. 539-537ರಲ್ಲಿ ನಡೆದ ಈ ಎಲ್ಲ ಘಟನೆಗಳು ನಿಜವೆಂದು ಹಲವಾರು ಇತಿಹಾಸಕಾರರು ದೃಢೀಕರಿಸುತ್ತಾರೆ. ಆದರೆ ಆಶ್ಚರ್ಯಕರ ಸಂಗತಿ ಏನೆಂದರೆ, ಈ ಎಲ್ಲ ಘಟನೆಗಳು ನಡೆಯುವುದಕ್ಕೆ 200 ವರ್ಷಗಳ ಮುಂಚೆಯೇ ಅವುಗಳ ಬಗ್ಗೆ ತಿಳಿಸಲಾಗಿತ್ತು. ಅಷ್ಟು ಸಮಯದ ಹಿಂದೆಯೇ ಬಾಬೆಲಿನ ಪತನದ ಕುರಿತು ಮುಂತಿಳಿಸುವಂತೆ ಯೆಹೋವನು ತನ್ನ ಪ್ರವಾದಿಯಾದ ಯೆಶಾಯನನ್ನು ಪ್ರೇರಿಸಿದ್ದನು. (ಯೆಶಾಯ 44:24-45:7) ಬಾಬೆಲಿನ ಪತನಕ್ಕೆ ಸಂಬಂಧಪಟ್ಟ ಘಟನೆಗಳ ಕುರಿತು ಮಾತ್ರವಲ್ಲದೆ ಅದನ್ನು ವಶಮಾಡಿಕೊಳ್ಳುವ ನಾಯಕನ ಹೆಸರನ್ನು ಸಹ ಯೆಹೋವನು ತಿಳಿಯಪಡಿಸಿದ್ದನು.a ಇದನ್ನು ಮುಂತಿಳಿಸಿದ ಸಮಯದಲ್ಲಿ ತನ್ನ ಸಾಕ್ಷಿಗಳಾಗಿದ್ದ ಇಸ್ರಾಯೇಲ್ಯರಿಗೆ ಆತನು ಹೀಗೆ ಹೇಳಿದನು: “ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನೂ ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.” (ಯೆಶಾಯ 46:9, 10) ಹೌದು, ಯೆಹೋವನು ಮುಂದೆ ಸಂಭವಿಸಲಿರುವ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಶಕ್ತನಾಗಿರುವ ದೇವರಾಗಿದ್ದಾನೆ.
3 ದೇವರಿಗೆ ಭವಿಷ್ಯತ್ತಿನ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದಿದೆ? ನಮ್ಮಲ್ಲಿ ಪ್ರತಿಯೊಬ್ಬರು ಏನು ಮಾಡಲಿದ್ದೇವೆ ಎಂಬುದು ಸಹ ಯೆಹೋವನಿಗೆ ಮುಂಚಿತವಾಗಿಯೇ ತಿಳಿದಿದೆಯೋ? ನಮ್ಮಲ್ಲಿ ಪ್ರತಿಯೊಬ್ಬರ ಭವಿಷ್ಯತ್ತು ಈಗಾಗಲೇ ನಿರ್ಧರಿಸಲ್ಪಟ್ಟಿದೆಯೋ? ನಾವು ಈ ಪ್ರಶ್ನೆಗಳಿಗೆ ಮತ್ತು ಇವುಗಳಿಗೆ ಸಂಬಂಧಪಟ್ಟ ಇತರ ಪ್ರಶ್ನೆಗಳಿಗೆ ಬೈಬಲ್ ಯಾವ ಉತ್ತರಗಳನ್ನು ಕೊಡುತ್ತದೆ ಎಂಬುದನ್ನು ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಚರ್ಚಿಸುವೆವು.
ಯೆಹೋವನು—ಪ್ರವಾದನೆಯ ದೇವರು
4 ಯೆಹೋವನಿಗೆ ಭವಿಷ್ಯತ್ತನ್ನು ಮುಂಚಿತವಾಗಿ ತಿಳಿಯಲು ಸಾಧ್ಯವಿರುವುದರಿಂದ ಬೈಬಲ್ ಸಮಯಗಳಲ್ಲಿನ ತನ್ನ ಸೇವಕರು ಅನೇಕ ಪ್ರವಾದನೆಗಳನ್ನು ದಾಖಲಿಸಿಡುವಂತೆ ಆತನು ಅವರನ್ನು ಪ್ರೇರಿಸಿದನು. ಆ ಪ್ರವಾದನೆಗಳಿಂದಾಗಿ ಯೆಹೋವನು ಏನನ್ನು ಮಾಡಲು ಉದ್ದೇಶಿಸಿದ್ದಾನೆ ಎಂಬುದನ್ನು ಮುಂದಾಗಿ ತಿಳಿದುಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಯೆಹೋವನು ಘೋಷಿಸುವುದು: “ಇಗೋ, ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ತಲೆದೋರುವದಕ್ಕೆ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ.” (ಯೆಶಾಯ 42:9) ದೇವಜನರಿಗೆ ಇದೆಂತಹ ಗೌರವವಾಗಿದೆ!
5 “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” ಎಂದು ಪ್ರವಾದಿಯಾದ ಆಮೋಸನು ನಮಗೆ ಆಶ್ವಾಸನೆ ನೀಡುತ್ತಾನೆ. ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವ ಈ ಗೌರವದೊಂದಿಗೆ ಜವಾಬ್ದಾರಿಯೂ ಬರುತ್ತದೆ. ಆಮೋಸನು ನಂತರ ಉಪಯೋಗಿಸುವ ಪ್ರಬಲವಾದ ಈ ದೃಷ್ಟಾಂತಕ್ಕೆ ಗಮನಕೊಡಿರಿ: “ಸಿಂಹವು ಗರ್ಜಿಸಿದೆ, ಭಯಪಡದವರು ಯಾರು?” ಒಂದು ಸಿಂಹವು ಗರ್ಜಿಸಿದಾಗ ಸುತ್ತಮುತ್ತಲಿನಲ್ಲಿರುವ ಮನುಷ್ಯರು ಮತ್ತು ಪ್ರಾಣಿಗಳು ಹೇಗೆ ತತ್ಕ್ಷಣ ಪ್ರತಿಕ್ರಿಯೆಯನ್ನು ತೋರಿಸುತ್ತವೋ ಹಾಗೆಯೇ ಆಮೋಸನು ಮತ್ತು ಇತರ ಪ್ರವಾದಿಗಳು ಯೆಹೋವನು ಘೋಷಿಸಿದ್ದನ್ನು ಕೂಡಲೇ ಪ್ರಕಟಪಡಿಸುವ ಮೂಲಕ ಪ್ರತಿಕ್ರಿಯೆ ತೋರಿಸಿದರು. ಇದಕ್ಕೆ ಸೂಚಿಸುತ್ತಾ ಆಮೋಸನು ಹೇಳಿದ್ದು: “ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಸಾರದಿರುವವರು ಯಾರು?”—ಆಮೋಸ 3:7, 8.
ಯೆಹೋವನ “ಮಾತು” ಖಂಡಿತ ‘ಕೈಗೂಡುತ್ತದೆ’
6 ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಿದ್ದು: “ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು.” (ಯೆಶಾಯ 46:10) ಬಾಬೆಲ್ನ ಸಂಬಂಧದಲ್ಲಿ ದೇವರ “ಸಂಕಲ್ಪ” ಅಂದರೆ ಆತನ ಚಿತ್ತ ಅಥವಾ ಉದ್ದೇಶದಲ್ಲಿ, ಕೋರೆಷನನ್ನು ಪರ್ಷಿಯದಿಂದ ಬರಮಾಡಿ ಬಾಬೆಲನ್ನು ಪತನಗೊಳಿಸುವುದು ಒಳಗೂಡಿತ್ತು. ಯೆಹೋವನು ತನ್ನ ಈ ಉದ್ದೇಶವನ್ನು ಬಹಳ ಕಾಲದ ಮುಂಚೆಯೇ ಪ್ರಕಟಿಸಿದ್ದನು. ಈಗಾಗಲೇ ಗಮನಿಸಿರುವಂತೆ, ಇದು ಸಾ.ಶ.ಪೂ. 539ರಲ್ಲಿ ಸಂಪೂರ್ಣವಾಗಿ ನೆರವೇರಿತು.
7 ಕೋರೆಷನು ಬಾಬೆಲನ್ನು ವಶಪಡಿಸಿಕೊಳ್ಳುವುದಕ್ಕೆ ನಾನೂರು ವರ್ಷಗಳ ಹಿಂದೆ ಯೆಹೂದದ ರಾಜನಾದ ಯೆಹೋಷಾಫಾಟನು ಅಮ್ಮೋನಿಯರ ಮತ್ತು ಮೋವಾಬ್ಯರ ಮೈತ್ರಿಪಡೆಯನ್ನು ಎದುರಿಸಿದನು. ಅವನು ದೃಢವಿಶ್ವಾಸದಿಂದ ಪ್ರಾರ್ಥಿಸಿದ್ದು: “ಯೆಹೋವನೇ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿರುವಾತನು ನೀನಲ್ಲವೋ? ನೀನು ಜನಾಂಗಗಳ ಎಲ್ಲಾ ರಾಜ್ಯಗಳನ್ನು ಆಳುವವನಾಗಿರುತ್ತೀ; ನಿನ್ನ ಹಸ್ತದಲ್ಲಿ ಬಲಪರಾಕ್ರಮಗಳಿರುತ್ತವೆ; ನಿನ್ನೆದುರಿನಲ್ಲಿ ಯಾರೂ ನಿಲ್ಲಲಾರರು.” (2 ಪೂರ್ವಕಾಲವೃತ್ತಾಂತ 20:6) ಯೆಶಾಯನು ತದ್ರೀತಿಯ ದೃಢವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಹೀಗೆ ಹೇಳಿದನು: “ಸೇನಾಧೀಶ್ವರನಾದ ಯೆಹೋವನು ಉದ್ದೇಶಮಾಡಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು?” (ಯೆಶಾಯ 14:27) ಕಾಲಾನಂತರ, ಬಾಬೆಲ್ನ ರಾಜನಾದ ನೆಬೂಕದ್ನೆಚ್ಚರನು ಸ್ವಲ್ಪಕಾಲ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು ಪುನಃ ಸ್ವಸ್ಥನಾದಾಗ ನಮ್ರತೆಯಿಂದ ಹೀಗೆ ಒಪ್ಪಿಕೊಂಡನು: “ಯಾರೂ [ದೇವರ] ಕೈಯನ್ನು ಹಿಂದಕ್ಕೆ ತಳ್ಳಲಾರರು, ನೀನು ಏನು ಮಾಡುತ್ತೀ ಎಂದು ಯಾರೂ ಕೇಳಲಾರರು.” (ದಾನಿಯೇಲ 4:35) ಹೌದು, ಯೆಹೋವನು ತನ್ನ ಜನರಿಗೆ ಈ ಆಶ್ವಾಸನೆಯನ್ನು ನೀಡುತ್ತಾನೆ: “ನನ್ನ . . . ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:11) ಯೆಹೋವನ “ಮಾತು” ಯಾವಾಗಲೂ ಸತ್ಯವಾಗುವುದು ಎಂಬ ವಿಷಯದಲ್ಲಿ ನಾವು ಪೂರ್ಣ ಭರವಸೆಯನ್ನಿಡಬಲ್ಲೆವು. ದೇವರ ಉದ್ದೇಶವು ಖಂಡಿತ ನೆರವೇರುವುದು.
ದೇವರು “ಅನಾದಿಕಾಲದಿಂದ ಮಾಡಿದ ಸಂಕಲ್ಪ”
8 ಅಪೊಸ್ತಲ ಪೌಲನು ಎಫೆಸದಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ, ದೇವರು “ಅನಾದಿಕಾಲದಿಂದ ಮಾಡಿದ ಸಂಕಲ್ಪ” ಇಲ್ಲವೆ ಉದ್ದೇಶದ ಕುರಿತು ತಿಳಿಸಿದನು. (ಎಫೆಸ 3:10) ಈ ಸಂಕಲ್ಪವು ಒಂದು ಕೆಲಸವನ್ನು ಪೂರೈಸಲು ಮಾಡುವ ಯೋಜನೆಯಾಗಿರುವುದಿಲ್ಲ. ಏಕೆಂದರೆ ದೇವರು ಏನನ್ನು ಮಾಡಲಿಕ್ಕಿದ್ದಾನೋ ಅದಕ್ಕಾಗಿ ಯೋಜನೆ ಮಾಡಬೇಕಾದ ಆವಶ್ಯಕತೆಯಿರಲಿಲ್ಲ. ಬದಲಿಗೆ, ಆ ‘ಸಂಕಲ್ಪವು’ ಯೆಹೋವನು ಆದಿಯಲ್ಲಿ ಮನುಷ್ಯರಿಗಾಗಿ ಮತ್ತು ಭೂಮಿಗಾಗಿ ಏನನ್ನು ಉದ್ದೇಶಿಸಿದನೋ ಅದನ್ನು ಪೂರೈಸಲು ಆತನಿಗಿರುವ ದೃಢನಿಶ್ಚಯಕ್ಕೆ ಸಂಬಂಧಿಸಿದೆ. (ಆದಿಕಾಂಡ 1:28) ದೇವರ ಉದ್ದೇಶವು ಖಂಡಿತ ನೆರವೇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಮೊದಲನೇ ಪ್ರವಾದನೆಯನ್ನು ಪರಿಗಣಿಸಿರಿ.
9 ಆದಾಮಹವ್ವರು ಪಾಪಮಾಡಿದ ಕೂಡಲೆ ಯೆಹೋವನು ಆದಿಕಾಂಡ 3:15ರಲ್ಲಿರುವ ವಾಗ್ದಾನವನ್ನು ಮಾಡಿದನು. ಇದು, ತನ್ನ ಸಾಂಕೇತಿಕ ಸ್ತ್ರೀಯು ಒಂದು ಸಂತಾನ ಅಥವಾ ಪುತ್ರನನ್ನು ಹಡೆಯುವುದೆಂದು ಆತನು ನಿಶ್ಚಯಿಸಿದ್ದನ್ನು ಸೂಚಿಸುತ್ತದೆ. ಈ ಸ್ತ್ರೀ ಮತ್ತು ಸೈತಾನ ಹಾಗೂ ಈ ಸ್ತ್ರೀಯ ಸಂತಾನ ಮತ್ತು ಸೈತಾನನ ಸಂತಾನದ ಮಧ್ಯೆ ಉಂಟಾಗಲಿರುವ ಹಗೆಯ ಫಲಿತಾಂಶವನ್ನು ಸಹ ಯೆಹೋವನು ಮುಂಗಂಡನು. ತನ್ನ ಸ್ತ್ರೀಯ ಸಂತಾನದ ಹಿಮ್ಮಡಿ ಕಚ್ಚಲ್ಪಡುವಂತೆ ಆತನು ಅನುಮತಿಸಲಿಕ್ಕಿದ್ದನಾದರೂ, ಆತನ ನೇಮಿತ ಸಮಯದಲ್ಲಿ ಸ್ತ್ರೀಯ ಸಂತಾನವು ಸರ್ಪದ ಅಂದರೆ ಪಿಶಾಚನಾದ ಸೈತಾನನ ತಲೆಯನ್ನು ಜಜ್ಜಲಿಕ್ಕಿತ್ತು. ಇದೆಲ್ಲ ಸಂಭವಿಸುವುದಕ್ಕಿಂತ ಮುಂಚೆ, ಯೆಹೋವನ ಉದ್ದೇಶವು ತಪ್ಪದೇ ನೆರವೇರುತ್ತಾ ಆತನು ಆದುಕೊಂಡಿದ್ದ ವಂಶಾವಳಿಯಲ್ಲಿ ಯೇಸು ವಾಗ್ದತ್ತ ಮೆಸ್ಸೀಯನಾಗಿ ಹುಟ್ಟಿಬಂದನು.—ಲೂಕ 3:15, 23-38; ಗಲಾತ್ಯ 4:4.
ಯೆಹೋವನು ಯಾವುದನ್ನು ಮುಂದಾಗಿಯೇ ನಿರ್ಧರಿಸುತ್ತಾನೆ?
10 ದೇವರ ಉದ್ದೇಶದಲ್ಲಿ ಯೇಸುವಿಗಿರುವ ಪಾತ್ರದ ಕುರಿತು ತಿಳಿಸುತ್ತಿದ್ದಾಗ ಅಪೊಸ್ತಲ ಪೇತ್ರನು ಹೀಗೆ ಬರೆದನು: “ಆತನು [ಯೇಸು] ಜಗದುತ್ಪತ್ತಿಗೆ ಮೊದಲೇ ಗೊತ್ತುಮಾಡಲ್ಪಟ್ಟು ಅಂತ್ಯಕಾಲದಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.” (1 ಪೇತ್ರ 1:20) ಇದರರ್ಥ, ಆದಾಮಹವ್ವರು ಪಾಪಮಾಡಬೇಕು ಮತ್ತು ಯೇಸು ಕ್ರಿಸ್ತನು ವಿಮೋಚನಾ ಮೌಲ್ಯ ಯಜ್ಞವನ್ನು ಕೊಡಬೇಕು ಎಂದು ದೇವರು ಆದಿಯಲ್ಲೇ ಮುಂದಾಗಿ ನಿರ್ಧರಿಸಿದ್ದನು ಎಂದಾಗುತ್ತದೊ? ಇಲ್ಲ. “ಜಗದುತ್ಪತ್ತಿ”ಗಾಗಿರುವ ಮೂಲ ಗ್ರೀಕ್ ಪದವು ಮಾನವ ಸಂತಾನೋತ್ಪತ್ತಿಗೆ ಸೂಚಿಸುತ್ತದೆ. ಆದಾಮಹವ್ವರು ಪಾಪಮಾಡುವ ಮುಂಚೆ ಮಾನವ ಸಂತಾನೋತ್ಪತ್ತಿ ಆಗಿತ್ತೋ? ಇಲ್ಲ, ಅವರು ಅವಿಧೇಯರಾದ ತರುವಾಯವೇ ಅವರಿಗೆ ಮಕ್ಕಳು ಹುಟ್ಟಿದವು. (ಆದಿಕಾಂಡ 4:1) ಆದುದರಿಂದ “ಸಂತಾನವು” ತೋರಿಬರಬೇಕೆಂದು ಯೆಹೋವನು ಮುಂದಾಗಿ ನಿರ್ಧರಿಸಿದ್ದು, ಆದಾಮಹವ್ವರು ದಂಗೆಯೆದ್ದ ನಂತರ ಆದರೆ ಅವರಿಗೆ ಮಕ್ಕಳು ಹುಟ್ಟುವ ಮುಂಚೆಯೇ. ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ವಿಮೋಚನಾ ಮೌಲ್ಯ ಯಜ್ಞವೆಂಬ ಪ್ರೀತಿಪರ ಏರ್ಪಾಡುಮಾಡಲ್ಪಟ್ಟಿತ್ತು. ಈ ಯಜ್ಞದ ಮುಖಾಂತರ ಪಿತ್ರಾರ್ಜಿತವಾಗಿ ಬಂದಿರುವ ಪಾಪವು ತೆಗೆದುಹಾಕಲ್ಪಡುವುದು ಮತ್ತು ಸೈತಾನನ ಕೆಲಸಗಳು ಲಯವಾಗುವವು.—ಮತ್ತಾಯ 20:28; ಇಬ್ರಿಯ 2:14; 1 ಯೋಹಾನ 3:8.
11 ದೇವರು ತನ್ನ ಉದ್ದೇಶವನ್ನು ನೆರವೇರಿಸುವುದರಲ್ಲಿ ಮತ್ತೊಂದು ವಿಷಯವನ್ನು ಮುಂದಾಗಿಯೇ ನಿರ್ಧರಿಸಿದನು. ಇದನ್ನು ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ಸೂಚಿಸಲಾಗಿದೆ. ದೇವರು ‘ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸುವನೆಂದು’ ಪೌಲನು ಹೇಳಿದನು. ನಂತರ ‘ಪರಲೋಕದಲ್ಲಿರುವ ಸಮಸ್ತವನ್ನು’ ಅಂದರೆ ಕ್ರಿಸ್ತನೊಂದಿಗೆ ಬಾಧ್ಯಸ್ಥರಾಗಿ ಆಯ್ಕೆಮಾಡಲ್ಪಟ್ಟಿರುವವರ ಕುರಿತು ತಿಳಿಸುತ್ತಾ ಪೌಲನು ವಿವರಿಸುವುದು: “ಸಮಸ್ತಕಾರ್ಯಗಳನ್ನು ತನ್ನ ಇಷ್ಟದಂತೆ ನಡಿಸುವ ದೇವರು ತನ್ನ ಸಂಕಲ್ಪದ ಮೇರೆಗೆ ನಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು.” (ಎಫೆಸ 1:9, 11) ಹೌದು, ಒಂದು ಸೀಮಿತ ಸಂಖ್ಯೆಯ ಮಾನವರು ತನ್ನ ಸ್ತ್ರೀಯ ಸಂತಾನದ ದ್ವಿತೀಯ ಭಾಗವಾಗಬೇಕು ಮತ್ತು ಯೇಸುವಿನೊಂದಿಗೆ ಸೇರಿ ವಿಮೋಚನಾ ಮೌಲ್ಯ ಯಜ್ಞದ ಪ್ರಯೋಜನಗಳನ್ನು ಭೂಮಿಯ ಮೇಲಿರುವ ಮಾನವರು ಪಡೆದುಕೊಳ್ಳುವಂತೆ ಸಹಾಯಮಾಡಬೇಕು ಎಂಬುದನ್ನು ಯೆಹೋವನು ಮುಂದಾಗಿಯೇ ನಿರ್ಧರಿಸಿದನು. (ರೋಮಾಪುರ 8:28-30) ಅಪೊಸ್ತಲ ಪೇತ್ರನು ಇವರನ್ನು “ದೇವರಾದುಕೊಂಡ ಜನಾಂಗ” ಎಂದು ಕರೆಯುತ್ತಾನೆ. (1 ಪೇತ್ರ 2:9) ಕ್ರಿಸ್ತನೊಂದಿಗೆ ಬಾಧ್ಯಸ್ಥರಾಗುವವರ ಸಂಖ್ಯೆ 1,44,000 ಎಂಬುದನ್ನು ಒಂದು ದರ್ಶನದಿಂದ ತಿಳಿದುಕೊಳ್ಳುವ ಅಪೂರ್ವ ಅವಕಾಶವು ಅಪೊಸ್ತಲ ಯೋಹಾನನಿಗಿತ್ತು. (ಪ್ರಕಟನೆ 7:4-8; 14:1, 3) ರಾಜನಾಗಿರುವ ಕ್ರಿಸ್ತನನ್ನು ಬೆಂಬಲಿಸುತ್ತಾ ಇವರು ‘ದೇವರ ಮಹಿಮೆಗೆ ಎಷ್ಟೋ ಪ್ರಖ್ಯಾತಿಯನ್ನು ಉಂಟುಮಾಡುವರು.’—ಎಫೆಸ 1:12-14.
12 ದೇವರು 1,44,000 ಮಂದಿಯ ಕುರಿತು ಮುಂದಾಗಿಯೇ ನಿರ್ಧರಿಸಿರುವುದು, ನಿರ್ದಿಷ್ಟ ವ್ಯಕ್ತಿಗಳು ಕೊನೆ ವರೆಗೂ ದೇವರಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುವರೆಂಬುದು ಮೊದಲೇ ನಿರ್ಧರಿಸಲ್ಪಟ್ಟಿದೆ ಎಂಬುದನ್ನು ಸೂಚಿಸುವುದಿಲ್ಲ. ಈ ಕಾರಣದಿಂದಲೇ ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವು, ಈ ಅಭಿಷಿಕ್ತ ವ್ಯಕ್ತಿಗಳು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ತಮ್ಮ ಸ್ವರ್ಗೀಯ ಕರೆಗೆ ಯೋಗ್ಯರಾಗಿ ಉಳಿಯುವಂತೆ ಮಾರ್ಗದರ್ಶಿಸಿ ಬಲಪಡಿಸಲು ಪ್ರಧಾನವಾಗಿ ಅವರಿಗೋಸ್ಕರ ಬರೆಯಲ್ಪಟ್ಟಿತ್ತು. (ಫಿಲಿಪ್ಪಿ 2:12; 2 ಥೆಸಲೊನೀಕ 1:5, 11; 2 ಪೇತ್ರ 1:10, 11) ತನ್ನ ಉದ್ದೇಶವನ್ನು ನೆರವೇರಿಸಲು 1,44,000 ಮಂದಿ ಅರ್ಹರಾಗುವರು ಎಂಬುದು ಯೆಹೋವನಿಗೆ ಮುಂದಾಗಿಯೇ ತಿಳಿದಿದೆ ನಿಜ. ಆದರೆ ಕಟ್ಟಕಡೆಗೆ ನಿರ್ದಿಷ್ಟವಾಗಿ ಯಾರು ಅರ್ಹರಾಗುವರು ಎಂಬುದು, ಆ ಸ್ವರ್ಗೀಯ ಕರೆಯನ್ನು ಪಡೆದುಕೊಂಡಿರುವ ಪ್ರತಿಯೊಬ್ಬನು ಆರಿಸಿಕೊಳ್ಳುವಂಥ ಜೀವನರೀತಿಯ ಮೇಲೆ ಅವಲಂಬಿಸಿದೆ.—ಮತ್ತಾಯ 24:13.
ಯೆಹೋವನಿಗೆ ಯಾವುದು ಮುಂದಾಗಿಯೇ ತಿಳಿದಿದೆ?
13 ಯೆಹೋವನು ಪ್ರವಾದನೆ ಮತ್ತು ಉದ್ದೇಶದ ದೇವರು ಆಗಿರುವುದರಿಂದ, ವಿಷಯಗಳನ್ನು ಮುಂದಾಗಿಯೇ ತಿಳಿಯುವ ತನ್ನ ಸಾಮರ್ಥ್ಯವನ್ನು ಆತನು ಹೇಗೆ ಉಪಯೋಗಿಸುತ್ತಾನೆ? ಮೊದಲಾಗಿ, ದೇವರು ಮಾಡುವಂಥದ್ದೆಲ್ಲವೂ ಸತ್ಯ, ನೀತಿ, ಪ್ರೀತಿಯಿಂದ ಕೂಡಿದವುಗಳಾಗಿವೆ ಎಂಬ ನಿಶ್ಚಯ ನಮಗಿದೆ. ದೇವರ ವಾಗ್ದಾನ ಮತ್ತು ಆಣೆಯೆಂಬ “ಎರಡು ನಿಶ್ಚಲವಾದ . . . ಆಧಾರಗಳನ್ನು ಕೊಟ್ಟದ್ದರಲ್ಲಿ ದೇವರು ಸುಳ್ಳಾಡಿರಲಾರನು” ಎಂಬ ಮಾತನ್ನು ಅಪೊಸ್ತಲ ಪೌಲನು ಸಾ.ಶ. ಪ್ರಥಮ ಶತಮಾನದಲ್ಲಿದ್ದ ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ದೃಢೀಕರಿಸಿದನು. (ಇಬ್ರಿಯ 6:17-19) ಶಿಷ್ಯನಾದ ತೀತನಿಗೆ ಬರೆದ ಪತ್ರದಲ್ಲಿಯೂ ದೇವರು ‘ಸುಳ್ಳಾಡಲಾರನು’ ಎಂದು ಬರೆದಾಗ ಅಪೊಸ್ತಲ ಪೌಲನು ಇದೇ ವಿಚಾರವನ್ನು ವ್ಯಕ್ತಪಡಿಸಿದನು.—ತೀತ 1:1.
14 ಅಷ್ಟುಮಾತ್ರವಲ್ಲದೆ, ಯೆಹೋವನಿಗೆ ಅಪರಿಮಿತ ಶಕ್ತಿಯಿರುವುದಾದರೂ ಆತನೆಂದೂ ಅನ್ಯಾಯದಿಂದ ಕ್ರಿಯೆಗೈಯುವವನಲ್ಲ. ಆತನ ಕುರಿತು ಮೋಶೆ ಹೀಗೆ ವರ್ಣಿಸಿದನು: “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಯೆಹೋವನು ಏನನ್ನೇ ಮಾಡಲಿ ಅದು ಆತನ ಅದ್ಭುತಕರ ವ್ಯಕ್ತಿತ್ವದೊಂದಿಗೆ ಹೊಂದಿಕೆಯಲ್ಲಿರುತ್ತದೆ. ಆತನ ಕಾರ್ಯಗಳು, ಆತನ ಪ್ರಧಾನ ಗುಣಗಳಾದ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿಯು ಒಂದಕ್ಕೊಂದು ಸಂಪೂರ್ಣ ಹೊಂದಿಕೆಯಲ್ಲಿರುವುದನ್ನು ತೋರಿಸುತ್ತವೆ.
15 ಈ ಪ್ರಧಾನ ಗುಣಗಳು ಏದೆನ್ ತೋಟದಲ್ಲಿ ನಡೆದ ಘಟನೆಗಳಲ್ಲಿ ಹೇಗೆ ತೋರಿಸಲ್ಪಟ್ಟವು ಎಂಬುದನ್ನು ಗಮನಿಸಿ. ಒಬ್ಬ ಪ್ರೀತಿಪರ ತಂದೆಯಾಗಿ ಯೆಹೋವನು ಮಾನವ ಸೃಷ್ಟಿಗೆ ಬೇಕಾದದ್ದೆಲ್ಲವನ್ನೂ ಒದಗಿಸಿದನು. ಆತನು ಆದಾಮನಿಗೆ ಚಿಂತಿಸುವ, ತಾರ್ಕಿಕವಾಗಿ ಆಲೋಚಿಸುವ ಮತ್ತು ಒಂದು ತೀರ್ಮಾನಕ್ಕೆ ಬರುವ ಸಾಮರ್ಥ್ಯವನ್ನು ಕೊಟ್ಟನು. ಹೆಚ್ಚಿನಾಂಶ ಹುಟ್ಟರಿವಿಗನುಸಾರ ಬದುಕುವ ಪ್ರಾಣಿಗಳಂತಿರದೆ ಆದಾಮನಿಗೆ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವಿತ್ತು. ಆದಾಮನು ಸೃಷ್ಟಿಮಾಡಲ್ಪಟ್ಟ ಬಳಿಕ ದೇವರು ತನ್ನ ಸ್ವರ್ಗೀಯ ಸಿಂಹಾಸನದಿಂದ “ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:26-31; 2 ಪೇತ್ರ 2:12.
16 ದೇವರು ಆದಾಮನಿಗೆ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ” ಹಣ್ಣನ್ನು ತಿನ್ನಬಾರದೆಂಬ ಆಜ್ಞೆಯನ್ನು ಕೊಟ್ಟಾಗ ಅವನು ಯಾವ ನಿರ್ಣಯ ತೆಗೆದುಕೊಳ್ಳಬೇಕೆಂದು ಸಹಾಯಮಾಡಲು ಸಾಕಷ್ಟು ಮಾಹಿತಿಯನ್ನು ಕೊಟ್ಟನು. ಒಂದು ಮರದ ಹಣ್ಣನ್ನು ಬಿಟ್ಟು, “ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು” ತಿನ್ನಲು ಆದಾಮನಿಗೆ ಅನುಮತಿ ಕೊಟ್ಟನು ಮತ್ತು ಆ ನಿಷೇಧಿತ ಮರದ ಹಣ್ಣನ್ನು ತಿಂದರೆ ಬರುವ ಮಾರಕ ಪರಿಣಾಮಗಳ ಬಗ್ಗೆ ದೇವರು ಎಚ್ಚರಿಸಿದನು. (ಆದಿಕಾಂಡ 2:16, 17) ಆದಾಮನ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ದೇವರು ಅವನಿಗೆ ವಿವರಿಸಿದನು. ಈಗ ಆದಾಮನು ಏನು ಮಾಡಲಿದ್ದನು?
17 ಎಲ್ಲವನ್ನೂ ಮುಂದಾಗಿಯೇ ತಿಳಿಯುವ ಸಾಮರ್ಥ್ಯ ಯೆಹೋವನಿಗೆ ಇದೆಯಾದರೂ, ಆದಾಮಹವ್ವರು ಏನು ಮಾಡಲಿಕ್ಕಿದ್ದಾರೆ ಎಂಬುದನ್ನು ಆತನು ಮುಂಗಾಣಲು ಬಯಸಲಿಲ್ಲ ಎಂಬುದು ವ್ಯಕ್ತ. ಆದುದರಿಂದ ಪರಿಗಣಿಸಬೇಕಾದ ಅಂಶವೇನೆಂದರೆ, ಯೆಹೋವನು ಭವಿಷ್ಯದಲ್ಲಿ ನಡೆಯಲಿರುವ ವಿಷಯಗಳನ್ನು ಮುಂದಾಗಿಯೇ ತಿಳಿದುಕೊಳ್ಳಲು ಸಾಧ್ಯವಿದೆಯೋ ಇಲ್ಲವೊ ಎಂಬುದಲ್ಲ ಬದಲಿಗೆ ಅದನ್ನು ತಿಳಿದುಕೊಳ್ಳಲು ಆತನು ಬಯಸುತ್ತಾನೋ ಇಲ್ಲವೊ ಎಂಬುದಾಗಿದೆ. ಮಾತ್ರವಲ್ಲದೆ, ಇದರ ಬಗ್ಗೆಯೂ ನಾವು ಯೋಚಿಸಬಹುದು: ಯೆಹೋವನು ಪ್ರೀತಿಸ್ವರೂಪಿ ಆಗಿರುವುದರಿಂದ ಆದಾಮಹವ್ವರು ದಂಗೆಯೇಳಬೇಕು ಮತ್ತು ಅದರಿಂದಾಗಿ ಎಲ್ಲ ದುಃಖಕರ ಫಲಿತಾಂಶಗಳು ಬರಬೇಕೆಂದು ಆತನು ತಿಳಿದೂತಿಳಿದು ಕ್ರೂರವಾಗಿ ಮುಂದಾಗಿಯೇ ನಿರ್ಧರಿಸಿರಲು ಸಾಧ್ಯವಿಲ್ಲ. (ಮತ್ತಾಯ 7:11; 1 ಯೋಹಾನ 4:8) ಹೀಗೆ ಯೆಹೋವನು ತಾನು ಯಾವುದನ್ನು ಮುಂದಾಗಿಯೇ ತಿಳಿಯಬೇಕು ಎಂಬುದನ್ನು ಆಯ್ಕೆಮಾಡುವವನಾಗಿದ್ದಾನೆ.
18 ಯೆಹೋವನು ತಾನು ಯಾವುದನ್ನು ಮುಂದಾಗಿಯೇ ತಿಳಿಯಬೇಕೆಂಬುದನ್ನು ಆಯ್ಕೆಮಾಡುವುದು, ಆತನಲ್ಲಿ ಏನೊ ಕುಂದು ಅಥವಾ ಕೊರತೆಯಿದೆ ಎಂದು ಸೂಚಿಸುತ್ತದೋ? ಇಲ್ಲ. ಯೆಹೋವನು ‘ನಮ್ಮ ಶರಣನು’ ಎಂದು ಮೋಶೆ ಹೇಳಿದ ಬಳಿಕ ‘ಆತನು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ’ ಎಂದು ತಿಳಿಸಿದನು. ಮಾನವ ಪಾಪದಿಂದಾಗಿ ಬಂದ ಪರಿಣಾಮಗಳಿಗೆ ಆತನು ಜವಾಬ್ದಾರನಲ್ಲ. ಇಂದು ನಾವು ಅನುಭವಿಸುತ್ತಿರುವ ಎಲ್ಲ ವಿನಾಶಕಾರಕ ವಿಷಯಗಳು ಆದಾಮನ ಅವಿಧೇಯತೆಯೆಂಬ ಅನೀತಿಯ ಕೃತ್ಯದ ಫಲವಾಗಿದೆ. ಅಪೊಸ್ತಲ ಪೌಲನು ಸ್ಪಷ್ಟವಾದ ಈ ತರ್ಕವನ್ನು ಮುಂದಿಟ್ಟನು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ಧರ್ಮೋಪದೇಶಕಾಂಡ 32:4, 5; ರೋಮಾಪುರ 5:12; ಯೆರೆಮೀಯ 10:23.
19 ಯೆಹೋವನಲ್ಲಿ ಯಾವುದೇ ಅನ್ಯಾಯವಿಲ್ಲ ಎಂಬುದನ್ನು ನಾವು ಇದುವರೆಗೆ ಈ ಚರ್ಚೆಯಲ್ಲಿ ನೋಡಿದ್ದೇವೆ. (ಕೀರ್ತನೆ 33:5) ಅದರ ಬದಲಿಗೆ ಯೆಹೋವನ ಸಾಮರ್ಥ್ಯಗಳು, ನೈತಿಕ ಗುಣಲಕ್ಷಣಗಳು ಹಾಗೂ ಮಟ್ಟಗಳು ಆತನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಉಪಯೋಗಿಸಲ್ಪಡುತ್ತವೆ ಎಂಬುದನ್ನು ನಾವು ನೋಡಿದೆವು. (ರೋಮಾಪುರ 8:28) ಪ್ರವಾದನೆಯ ದೇವರಾಗಿರುವ ಯೆಹೋವನು, ‘ಆರಂಭದಲ್ಲಿಯೇ ಅಂತ್ಯವನ್ನು ತಿಳಿಸುತ್ತಾನೆ; ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹುತ್ತಾನೆ.’ (ಯೆಶಾಯ 46:9, 10) ಯೆಹೋವನು ತಾನು ಯಾವುದನ್ನು ಮುಂದಾಗಿಯೇ ತಿಳಿಯಬೇಕೆಂಬುದನ್ನು ಆಯ್ಕೆಮಾಡುತ್ತಾನೆ ಎಂಬ ವಿಷಯವನ್ನು ಸಹ ನಾವು ಪರಿಗಣಿಸಿದೆವು. ಆದರೆ ಇದೆಲ್ಲವೂ ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ? ನಾವು ಮಾಡುವಂಥ ನಿರ್ಣಯಗಳು ದೇವರ ಪ್ರೀತಿಪರ ಉದ್ದೇಶಕ್ಕೆ ಹೊಂದಿಕೆಯಲ್ಲಿವೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? ಹೀಗೆ ಮಾಡುವುದರಿಂದ ನಮಗೆ ಯಾವ ಆಶೀರ್ವಾದಗಳು ಸಿಗುವವು? ಈ ಪ್ರಶ್ನೆಗಳನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ.
[ಪಾದಟಿಪ್ಪಣಿ]
a ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ ಪುಟ 28ನ್ನು ನೋಡಿರಿ. ಯೆಹೋವನ ಸಾಕ್ಷಿಗಳ ಪ್ರಕಾಶನ.
ವಿವರಿಸಬಲ್ಲಿರೋ?
• ದೇವರ “ಮಾತು” ಖಂಡಿತ ‘ಕೈಗೂಡುತ್ತದೆ’ ಎಂಬುದಕ್ಕೆ ಯಾವ ಪ್ರಾಚೀನ ಉದಾಹರಣೆಗಳು ಸಾಕ್ಷ್ಯವನ್ನು ನೀಡುತ್ತವೆ?
• ಯೆಹೋವನು ತಾನು ‘ಅನಾದಿಕಾಲದಿಂದ ಮಾಡಿದ ಸಂಕಲ್ಪದ’ ಸಂಬಂಧದಲ್ಲಿ ಯಾವುದನ್ನು ಮುಂದಾಗಿಯೇ ನಿರ್ಧರಿಸಿದ್ದಾನೆ?
• ಯೆಹೋವನು ವಿಷಯಗಳನ್ನು ಮುಂದಾಗಿಯೇ ತಿಳಿಯುವ ತನ್ನ ಸಾಮರ್ಥ್ಯವನ್ನು ಯಾವ ವಿಧದಲ್ಲಿ ಉಪಯೋಗಿಸುತ್ತಾನೆ?
[ಅಧ್ಯಯನ ಪ್ರಶ್ನೆಗಳು]
1, 2. ಬಾಬೆಲ್ನ ಪತನಕ್ಕೆ ಸಂಬಂಧಪಟ್ಟ ಘಟನೆಗಳ ವಿಷಯದಲ್ಲಿ ಆಶ್ಚರ್ಯದ ಸಂಗತಿ ಏನಾಗಿದೆ, ಮತ್ತು ಈ ನಿಜತ್ವವು ಯೆಹೋವನ ಕುರಿತು ಏನನ್ನು ಸೂಚಿಸುತ್ತದೆ?
3. ಯಾವ ಪ್ರಶ್ನೆಗಳಿಗೆ ನಾವೀಗ ಉತ್ತರಗಳನ್ನು ಚರ್ಚಿಸಲಿಕ್ಕಿದ್ದೇವೆ?
4. ಬೈಬಲಿನಲ್ಲಿ ದಾಖಲಾಗಿರುವ ಪ್ರವಾದನೆಗಳ ಮೂಲನು ಯಾರು?
5. ಯೆಹೋವನು ಮುಂದೆ ಏನು ಮಾಡಲಿಕ್ಕಿದ್ದಾನೆ ಎಂಬುದನ್ನು ಮುಂಚಿತವಾಗಿಯೇ ತಿಳಿದಿರುವುದರೊಂದಿಗೆ ಯಾವ ಜವಾಬ್ದಾರಿಯು ಬರುತ್ತದೆ?
6. ಬಾಬೆಲ್ನ ಪತನದ ಸಂಬಂಧದಲ್ಲಿ ದೇವರ “ಸಂಕಲ್ಪವು” ಹೇಗೆ ಕೈಗೂಡಿತು?
7. ಯೆಹೋವನ “ಮಾತು” ಯಾವಾಗಲೂ ಕೈಗೂಡುತ್ತದೆಂದು ನಾವೇಕೆ ಭರವಸೆಯಿಡಬಲ್ಲೆವು?
8. ದೇವರು “ಅನಾದಿಕಾಲದಿಂದ ಮಾಡಿದ ಸಂಕಲ್ಪ” ಇಲ್ಲವೆ ಉದ್ದೇಶ ಏನಾಗಿದೆ?
9. ಆದಿಕಾಂಡ 3:15 ದೇವರ ಉದ್ದೇಶಕ್ಕೆ ಹೇಗೆ ಸಂಬಂಧಪಟ್ಟಿದೆ?
10. ಆದಾಮಹವ್ವರು ಪಾಪಮಾಡಬೇಕೆಂದು ಯೆಹೋವನು ಆದಿಯಲ್ಲೇ ಮುಂದಾಗಿ ನಿರ್ಧರಿಸಿದ್ದನೋ? ವಿವರಿಸಿ.
11. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ಏನನ್ನು ಮುಂದಾಗಿಯೇ ನಿರ್ಧರಿಸಿದನು?
12. ದೇವರು 1,44,000 ಮಂದಿಯಲ್ಲಿ ಪ್ರತಿಯೊಬ್ಬನನ್ನು ಮುಂದಾಗಿಯೇ ನಿರ್ಧರಿಸಿಲ್ಲ ಎಂಬುದು ನಮಗೆ ಹೇಗೆ ಗೊತ್ತು?
13, 14. ವಿಷಯಗಳನ್ನು ಮುಂದಾಗಿಯೇ ತಿಳಿಯುವ ಯೆಹೋವನ ಸಾಮರ್ಥ್ಯವು ಯಾವುದಕ್ಕೆ ಹೊಂದಿಕೆಯಲ್ಲಿದೆ, ಮತ್ತು ಏಕೆ?
15, 16. ಏದೆನ್ ತೋಟದಲ್ಲಿ ಯೆಹೋವನು ಆದಾಮನ ಮುಂದೆ ಯಾವ ಆಯ್ಕೆಗಳನ್ನಿಟ್ಟನು?
17. ಯೆಹೋವನು ತಾನು ಯಾವುದನ್ನು ಮುಂದಾಗಿಯೇ ತಿಳಿಯಬೇಕು ಎಂಬುದನ್ನು ಆಯ್ಕೆಮಾಡುತ್ತಾನೆ ಎಂದು ನಾವು ಏಕೆ ಹೇಳಸಾಧ್ಯವಿದೆ?
18. ಯೆಹೋವನು ತಾನು ಯಾವುದನ್ನು ಮುಂದಾಗಿಯೇ ತಿಳಿಯಬೇಕೆಂಬುದನ್ನು ಆಯ್ಕೆಮಾಡುವುದು ಆತನಲ್ಲಿ ಏನೋ ಕೊರತೆಯಿದೆ ಎಂಬುದನ್ನು ಸೂಚಿಸುವುದಿಲ್ಲವೇಕೆ?
19. ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?
[ಪುಟ 22ರಲ್ಲಿರುವ ಚಿತ್ರ]
ಯೆಹೋಷಾಫಾಟನಿಗೆ ಯೆಹೋವನಲ್ಲಿ ದೃಢವಿಶ್ವಾಸವಿತ್ತು
[ಪುಟ 23ರಲ್ಲಿರುವ ಚಿತ್ರ]
ದೇವರು ಯೇಸುವಿನ ಮರಣ ಮತ್ತು ಪುನರುತ್ಥಾನದ ಕುರಿತು ಮುಂತಿಳಿಸಿದನು
[ಪುಟ 24ರಲ್ಲಿರುವ ಚಿತ್ರ]
ಆದಾಮಹವ್ವರು ಏನು ಮಾಡಲಿರುವರು ಎಂಬುದನ್ನು ಯೆಹೋವನು ಮುಂದಾಗಿಯೇ ನಿರ್ಧರಿಸಿದ್ದನೋ?