ವ್ಯತ್ಯಾಸಗಳಿಂದ ಕಲಿಯಿರಿ
ಇಲ್ಲಿಯವರೆಗೆ ಭೂಮಿಯಲ್ಲಿ ಜೀವಿಸಿರುವವರಲ್ಲಿ ಒಳ್ಳೆ ಬೋಧಕನು ಯಾರೆಂದು ಕೇಳಿದರೆ ನೀವು ಖಂಡಿತ ಯೇಸು ಎಂದು ಹೇಳುವಿರಿ. ಆತನು ಜನರಿಗೆ ಕಲಿಸಿದ ರೀತಿಯನ್ನು ನೀವು ಸಹ ಅನುಕರಿಸಲು ಪ್ರಯತ್ನಿಸಿರಬಹುದು. ಉದಾಹರಣೆಗೆ, ಆತನಂತೆಯೇ ಪ್ರಶ್ನೆಗಳನ್ನು ಮತ್ತು ದೃಷ್ಟಾಂತಗಳನ್ನು ಬಳಸಲು ಪ್ರಯತ್ನಿಸಿರಬಹುದು. ಆದರೆ ಆತನು ಎರಡು ವಿಷಯಗಳ ಮಧ್ಯೆಯಿರುವ ವ್ಯತ್ಯಾಸವನ್ನು ತೋರಿಸಿ ಕಲಿಸಿದ್ದನ್ನು ನೀವು ಗಮನಿಸಿದ್ದೀರಾ?
ಅನೇಕರು ಮಾತಾಡುವಾಗ ಒಂದನ್ನು ಇನ್ನೊಂದರೊಂದಿಗೆ ಹೋಲಿಸಿ ಮಾತಾಡುತ್ತಾರೆ. ನೀವೂ ಕೆಲವೊಮ್ಮೆ ಹಾಗೆ ಮಾಡುತ್ತಿರಬಹುದು. “ಆ ಅಂಗಡಿಯವನು ಎಲ್ಲ ಹಣ್ಣಾಗಿವೆ ಎಂದು ಹೇಳಿದ್ದ, ಆದರೆ ಇಲ್ಲಿ ನೋಡಿ ಇನ್ನೂ ಕಾಯಿ.” ಅಥವಾ “ಮೊದಲೆಲ್ಲ ಅವಳು ತುಂಬ ನಾಚಿಕೆ ಪಡುತ್ತಿದ್ದಳು. ಆದರೆ ಈಗ ಎಲ್ಲರ ಹತ್ರ ಚೆನ್ನಾಗಿ ಮಾತಾಡ್ತಾಳೆ.” ನೀವು ಯಾವತ್ತಾದರೂ ಹೀಗೆ ಹೇಳಿದ್ದೀರಾ?
ಈ ರೀತಿ ಹೇಳುವಾಗ ಮೊದಲು ನೀವು ಒಂದು ವಿಷಯವನ್ನು ಹೇಳಿ, ನಂತರ ಅದಕ್ಕೆ ವಿರುದ್ಧವಾಗಿರುವ ವಿಷಯವನ್ನು ಹೇಳುತ್ತೀರಿ. ಆಗ ನೀವು ಆದರೆ, ಆದರೂ, ಬದಲಿಗೆ, ಇನ್ನೊಂದು ಕಡೆ ಅನ್ನುವ ಪದಗಳನ್ನು ಬಳಸಿರಬಹುದು. ಅಥವಾ ಒಂದು ವಿಷಯಕ್ಕೆ ಒತ್ತು ನೀಡುವ ಇಲ್ಲವೆ ಹೆಚ್ಚಿನ ಮಾಹಿತಿ ನೀಡುವ ಮೂಲಕ ವ್ಯತ್ಯಾಸವನ್ನು ಹೇಳಲು ಪ್ರಯತ್ನಿಸಿರಬಹುದು. ನೀವು ಹೋಲಿಸಿ ಮಾತಾಡುವಾಗ ಅದು ಸುಲಭವಾಗಿ ಅರ್ಥವಾಗುತ್ತದೆ.
ಹೋಲಿಸಿ ಮಾತಾಡುವುದು ಕೆಲವೊಂದು ಭಾಷೆಗಳಲ್ಲಿ ಅಥವಾ ಸಂಸ್ಕೃತಿಗಳಲ್ಲಿ ಇರಲಿಕ್ಕಿಲ್ಲ. ಆದರೂ ಅದರ ಮಹತ್ವದ ಬಗ್ಗೆ ನಮಗೆ ತಿಳಿದಿರಬೇಕು. ಯಾಕೆ? ಯಾಕೆಂದರೆ, ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ಅಂಥ ಅನೇಕ ಉದಾಹರಣೆಗಳಿವೆ. ಯೇಸು ಸುಮಾರು ಬಾರಿ ಈ ರೀತಿ ವ್ಯತ್ಯಾಸವನ್ನು ತೋರಿಸುತ್ತಾ ಮಾತಾಡಿದ್ದಾನೆ. ಅಂಥ ಯಾವುದಾದರೂ ಉದಾಹರಣೆ ನಿಮಗೆ ನೆನಪಿದೆಯಾ? “ಜನರು ದೀಪವನ್ನು ಹಚ್ಚಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ.” “ನಾನು [ಧರ್ಮಶಾಸ್ತ್ರವನ್ನು] ತೆಗೆದುಹಾಕುವುದಕ್ಕೆ ಬಂದಿಲ್ಲ, ನೆರವೇರಿಸುವುದಕ್ಕಾಗಿ ಬಂದಿದ್ದೇನೆ.” “‘ವ್ಯಭಿಚಾರ ಮಾಡಬಾರದು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು . . . ವ್ಯಭಿಚಾರ ಮಾಡಿದವನಾಗಿದ್ದಾನೆ.” “‘ಕಣ್ಣಿಗೆ ಪ್ರತಿಯಾಗಿ ಕಣ್ಣು ಹಲ್ಲಿಗೆ ಪ್ರತಿಯಾಗಿ ಹಲ್ಲು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನನ್ನು ಎದುರಿಸಬೇಡಿ; ನಿನ್ನ ಬಲಗೆನ್ನೆಯ ಮೇಲೆ ಹೊಡೆಯುವವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.”—ಮತ್ತಾ. 5:15, 17, 27, 28, 38, 39.
ಬೈಬಲಿನ ಬೇರೆ ಪುಸ್ತಕಗಳಲ್ಲೂ ಇದೇ ರೀತಿ ವ್ಯತ್ಯಾಸ ಭಿನ್ನತೆಗಳನ್ನು ತಿಳಿಸಲಾಗಿದೆ. ಆ ವ್ಯತ್ಯಾಸಗಳು ಅಲ್ಲಿರುವ ಅಂಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ ಮತ್ತು ಏನನ್ನು ಮಾಡುವುದು ಅತ್ಯುತ್ತಮ ಎಂಬುದನ್ನು ಕಲಿಸಿಕೊಡುತ್ತವೆ. ಹೆತ್ತವರೇ ಈ ವ್ಯತ್ಯಾಸ ನಿಮಗೋಸ್ಕರ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.” (ಎಫೆ. 6:4) ಅಪೊಸ್ತಲ ಪೌಲನು ತಂದೆಗೆ (ಅಥವಾ ತಾಯಿಗೆ) ಮಕ್ಕಳನ್ನು ದೇವರ ಶಿಸ್ತಿನಲ್ಲಿ ಬೆಳೆಸಿರಿ ಎಂದಷ್ಟೇ ಹೇಳಿದ್ದರೂ ಅದು ಸರಿಯಾಗಿರುತ್ತಿತ್ತು. ಆದರೂ ಅವನು ‘ಮಕ್ಕಳಿಗೆ ಕಿರಿಕಿರಿ ಉಂಟುಮಾಡದೆ ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸಿರಿ’ ಎನ್ನುವ ಮೂಲಕ ವ್ಯತ್ಯಾಸವನ್ನು ಎತ್ತಿಹೇಳಿದ್ದರಿಂದ ಆ ಅಂಶ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಪೌಲನು ಅದೇ ಅಧ್ಯಾಯದಲ್ಲಿ ನಂತರ ಹೇಳಿದ್ದು: “ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; . . . ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿ” ಇದೆ. (ಎಫೆ. 6:12) ಈ ವ್ಯತ್ಯಾಸ ನಾವು ಮಾಡುವ ಹೋರಾಟ ತುಂಬ ಪ್ರಯಾಸದಿಂದ ಕೂಡಿದೆ ಎಂದು ನಮಗೆ ತಿಳಿಸುತ್ತದೆ. ನಾವು ಮನುಷ್ಯಮಾತ್ರದವರೊಂದಿಗೆ ಹೋರಾಡುವುದಲ್ಲ, ದುಷ್ಟಾತ್ಮ ಸೇನೆಗಳ ವಿರುದ್ಧ ಹೋರಾಡಬೇಕು.
ವ್ಯತ್ಯಾಸಗಳಿಂದ ಪ್ರಯೋಜನ ಹೊಂದಿ
ಎಫೆಸ ಪುಸ್ತಕದಲ್ಲಿ ಪೌಲನು ಇಂಥದ್ದೇ ಆದ ಅನೇಕ ವ್ಯತ್ಯಾಸಗಳನ್ನು ಹೇಳಿದ್ದಾನೆ. ಈ ವ್ಯತ್ಯಾಸಗಳ ಕುರಿತು ನಾವು ಯೋಚಿಸಿದರೆ ಪೌಲನು ಹೇಳಿದ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ನಾವು ಏನು ಮಾಡಬೇಕೆಂಬುದೂ ಅದರಿಂದ ತಿಳಿಯುವುದು.
ಎಫೆಸ 4 ಮತ್ತು 5ನೇ ಅಧ್ಯಾಯದಲ್ಲಿ ಇಂಥ ಅನೇಕ ವ್ಯತ್ಯಾಸಗಳಿವೆ. ಅವುಗಳನ್ನು ಈ ಲೇಖನದಲ್ಲಿರುವ ಚಾರ್ಟ್ನಲ್ಲಿ ಕೊಡಲಾಗಿದೆ. ಅದನ್ನು ಪರಿಗಣಿಸುವಾಗ ನಿಮ್ಮ ಕುರಿತು ಯೋಚಿಸುತ್ತಾ ಹೀಗೆ ಕೇಳಿಕೊಳ್ಳಿ: ‘ನಿಜವಾಗಿಯೂ ನನ್ನಲ್ಲಿ ಯಾವ ಮನೋಭಾವವಿದೆ? ಇಂಥದ್ದೇ ಸನ್ನಿವೇಶಗಳಲ್ಲಿ ನಾನು ಹೇಗಿರುತ್ತೇನೆ? ಈ ಎರಡರಲ್ಲಿ ನಾನು ಯಾವ ಗುಂಪಿಗೆ ಸೇರಿದವನು ಎಂದು ಬೇರೆಯವರಿಗೆ ಅನಿಸುತ್ತದೆ?’ ಅಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಅಂಶದಲ್ಲಿ ನೀವು ಪ್ರಗತಿ ಮಾಡಬೇಕೆಂದು ಅನಿಸುವಲ್ಲಿ, ಅದನ್ನು ಮಾಡಿ. ಈ ವೈದೃಶ್ಯಗಳು ನಿಮಗೆ ಸಹಾಯಮಾಡಲಿ.
ಈ ಚಾರ್ಟನ್ನು ನಿಮ್ಮ ಕುಟುಂಬ ಆರಾಧನೆಯಲ್ಲಿ ಉಪಯೋಗಿಸಬಹುದು. ಪಟ್ಟಿಮಾಡಲಾಗಿರುವ ವೈದೃಶ್ಯಗಳನ್ನು ಮೊದಲು ಎಲ್ಲರು ಓದಿ. ನಂತರ ಒಬ್ಬರು ಚಾರ್ಟ್ನ ಎಡಕ್ಕೆ ಕೊಟ್ಟಿರುವುದನ್ನು ಹೇಳಿದರೆ ಉಳಿದವರು ಬಲಕ್ಕೆ ಕೊಟ್ಟಿರುವುದನ್ನು ನೋಡದೇ ಹೇಳಲು ಪ್ರಯತ್ನಿಸಿ. ಹೀಗೆ ಮಾಡಿದರೆ ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸುತ್ತೀರಿ ಮತ್ತು ಅಂಶಗಳನ್ನು ಅನ್ವಯಿಸಿಕೊಳ್ಳಲು ಸುಲಭವಾಗುತ್ತದೆ. ಎಳೆಯರೇ ಇರಲಿ, ವಯಸ್ಕರೇ ಇರಲಿ ಇಂಥ ವ್ಯತ್ಯಾಸಗಳನ್ನು ಅಧ್ಯಯನ ಮಾಡುವಲ್ಲಿ ಅವರು ಕುಟುಂಬದಲ್ಲೂ ಬೇರೆ ಸಂದರ್ಭಗಳಲ್ಲೂ ಕ್ರೈಸ್ತ ನಡತೆಯನ್ನು ತೋರಿಸಲು ಸಾಧ್ಯವಾಗುವುದು.
ವೈದೃಶ್ಯಗಳ ಮಹತ್ವ ತಿಳಿದ ಮೇಲೆ ನೀವು ಬೈಬಲಿನಲ್ಲಿರುವ ಇಂಥ ವೈದೃಶ್ಯಗಳನ್ನು ಹೆಚ್ಚು ಗುರುತಿಸುವಿರಿ. ಸೇವೆಯಲ್ಲೂ ಇವು ನಿಮಗೆ ತುಂಬ ಸಹಾಯಕಾರಿಯಾಗಿರುವವು. ಉದಾಹರಣೆಗೆ, ಮನೆಯವರಿಗೆ ನೀವು ಹೀಗೆ ಹೇಳಬಹುದು: “ಪ್ರತಿಯೊಬ್ಬರಲ್ಲಿ ಅಮರ ಆತ್ಮ ಇದೆ ಎಂದು ತುಂಬ ಜನರು ಹೇಳುತ್ತಾರೆ. ಆದರೆ ಬೈಬಲ್ ಏನು ಹೇಳುತ್ತದೆ ಎಂದು ನೋಡಿ.” ಬೈಬಲ್ ವಿದ್ಯಾರ್ಥಿಗೆ ಹೀಗೆ ಕೇಳಬಹುದು: “ಹೆಚ್ಚಿನವರು ಹೇಳ್ತಾರೆ, ದೇವರು ಮತ್ತು ಯೇಸು ಬೇರೆಬೇರೆ ಅಲ್ಲ ಒಬ್ಬರೇ ಅಂತ. ಆದರೆ ನಾವೇನು ಕಲಿತೆವು? ಬೈಬಲ್ ಇದರ ಬಗ್ಗೆ ಏನು ಹೇಳುತ್ತೆ? ನೀವೇನು ನಂಬುತ್ತೀರಿ?”
ಬೈಬಲಿನಲ್ಲಿರುವ ಇನ್ನೂ ಅನೇಕ ವೈದೃಶ್ಯಗಳು ನಮಗೆ ತುಂಬ ವಿಷಯಗಳನ್ನು ಕಲಿಸುತ್ತವೆ. ದೇವರು ತೋರಿಸುವ ದಾರಿಯಲ್ಲಿ ನಡೆಯಲು ನಮಗೆ ಸಹಾಯಮಾಡುತ್ತವೆ. ಇತರರಿಗೆ ಸಹ ಬೈಬಲ್ ಸತ್ಯವನ್ನು ಕಲಿಸಲು ಇವು ನಮಗೆ ನೆರವಾಗುತ್ತವೆ.