ಅದೃಶ್ಯ ವ್ಯಕ್ತಿಯ ನಿಜಬಣ್ಣ...!?
“ಈ ಲೋಕದ ಅಧಿಪತಿಯು ಹೊರಗೆ ಹಾಕಲ್ಪಡುವನು” ಎಂದು ಯೇಸು ಹೇಳಿದ್ದನು. “[ಈ ಲೋಕದ ಅಧಿಪತಿಗೆ] ನನ್ನ ಮೇಲೆ ಹಿಡಿತವಿಲ್ಲ” ಮತ್ತು ‘ಈ ಲೋಕದ ಅಧಿಪತಿಗೆ ನ್ಯಾಯತೀರ್ಪಾಗಿದೆ’ ಎಂದೂ ತಿಳಿಸಿದ್ದನು. (ಯೋಹಾನ 12:31; 14:30; 16:11) ಇಲ್ಲಿ ಯೇಸು ಯಾರ ಬಗ್ಗೆ ಮಾತಾಡುತ್ತಿದ್ದನು?
ತನ್ನ ತಂದೆ ಯೆಹೋವ ದೇವರ ಕುರಿತಂತೂ ಅಲ್ಲ. ಹಾಗಾದರೆ ಈ “ಲೋಕದ ಅಧಿಪತಿ” ಯಾರು? ಅವನು ‘ಹೊರಗೆ ಹಾಕಲ್ಪಡುವುದು’ ಹೇಗೆ? ಅವನಿಗೆ ಯಾವ ‘ತೀರ್ಪು’ ಕೊಡಲಾಗಿದೆ?
“ಈ ಲೋಕದ ಅಧಿಪತಿ” ತನ್ನನ್ನು ತಾನೇ ತೋರಿಸಿಕೊಂಡನು
ಒಬ್ಬ ಪಾತಕಿ ತಾನು ಸಿಕ್ಕಿಕೊಳ್ಳಬೇಕೆಂದು ಖಂಡಿತ ಆಸೆ ಪಡುವುದಿಲ್ಲ. ಆದರೂ ತನ್ನ ಶಕ್ತಿ ಪ್ರಭಾವದ ಬಗ್ಗೆ ಕೊಚ್ಚಿಕೊಳ್ಳದೆ ಇರಲಾರ. ಪಿಶಾಚನು ಕೂಡ ಹಾಗೆಯೇ. ದೇವಕುಮಾರನಾದ ಯೇಸುವನ್ನು ಅವನು ಶೋಧನೆಗೆ ಒಳಪಡಿಸಿದ ಸಂದರ್ಭವನ್ನು ಗಮನಿಸಿ. “ಭೂಮಿಯ ಎಲ್ಲ ರಾಜ್ಯಗಳನ್ನು” ಯೇಸುವಿಗೆ ತೋರಿಸಿದ ಬಳಿಕ ಅವನು, “ಈ ಎಲ್ಲ ಅಧಿಕಾರವನ್ನೂ ಇವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಏಕೆಂದರೆ ಇದನ್ನು ನನ್ನ ವಶಕ್ಕೆ ಕೊಡಲಾಗಿದೆ ಮತ್ತು ನನಗೆ ಮನಸ್ಸು ಬಂದವನಿಗೆ ನಾನು ಅದನ್ನು ಕೊಡುತ್ತೇನೆ. ಆದುದರಿಂದ, ನೀನು ನನ್ನ ಮುಂದೆ ಒಂದು ಆರಾಧನಾ ಕ್ರಿಯೆಯನ್ನು ಮಾಡುವಲ್ಲಿ ಇದೆಲ್ಲವೂ ನಿನ್ನದಾಗುವುದು” ಎಂದು ಬಡಾಯಿಕೊಚ್ಚಿಕೊಂಡನು.—ಲೂಕ 4:5-7.
ಕೆಲವರು ನಂಬುವಂತೆ, ಪಿಶಾಚನೊಬ್ಬ ವ್ಯಕ್ತಿಯಲ್ಲ ಮನುಷ್ಯನಲ್ಲಿರುವ ಕೆಟ್ಟ ಗುಣ ಎನ್ನುವುದು ಸರಿಯೆಂದೇ ಇಟ್ಟುಕೊಳ್ಳಿ. ಆದರೆ ಯೇಸುವಿಗೆ ಎದುರಾದ ಆ ಪ್ರಲೋಭನೆಯನ್ನು ಹೇಗೆ ವಿವರಿಸುವಿರಿ? ತನ್ನಲ್ಲಿದ್ದ ಕೆಟ್ಟ ಗುಣದೊಂದಿಗೆ ಯೇಸು ವಾಗ್ವಾದ ಮಾಡುತ್ತಿದ್ದನಾ? ದೀಕ್ಷಾಸ್ನಾನದ ಬಳಿಕ ಯಾವುದೋ ಆಂತರಿಕ ತೊಳಲಾಟಕ್ಕೆ ಒಳಗಾಗಿದ್ದನಾ? ಇಲ್ಲ, ಇವ್ಯಾವೂ ಸತ್ಯವಾಗಿರಸಾಧ್ಯವಿಲ್ಲ ಏಕೆಂದರೆ “[ಯೇಸುವಿನಲ್ಲಿ] ಯಾವುದೇ ಪಾಪವಿಲ್ಲ” ಎಂದು ಬೈಬಲ್ ಹೇಳುತ್ತದೆ. (1 ಯೋಹಾನ 3:5) ಮಾನವರ ಮೇಲೆ ಪಿಶಾಚನಿಗೆ ಇರುವ ಶಕ್ತಿಯನ್ನು ಯೇಸು ಅಲ್ಲಗಳೆಯಲಿಲ್ಲ. ಬದಲಾಗಿ ಆ ಶಕ್ತಿಗೆ ಸೂಚಿಸುತ್ತಾ ಪಿಶಾಚನನ್ನು “ಈ ಲೋಕದ ಅಧಿಪತಿ” ಎಂದು ಕರೆದನು. “ನರಹಂತಕ” ಹಾಗೂ “ಸುಳ್ಳುಗಾರ” ಎಂದು ವರ್ಣಿಸಿದನು.—ಯೋಹಾನ 14:30; 8:44.
ಯೇಸು ಆ ಪ್ರಲೋಭನೆಯನ್ನು ಎದುರಿಸಿದ ಸುಮಾರು 60 ವರ್ಷಗಳ ಬಳಿಕ, ಅಪೊಸ್ತಲ ಯೋಹಾನನು ಪಿಶಾಚನ ಪ್ರಭಾವದ ಕುರಿತು ಕ್ರೈಸ್ತರಿಗೆ ನೆನಪಿಸಿದನು. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಹೇಳಿದನು. “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿ”ದ್ದಾನೆಂದೂ ಎಚ್ಚರಿಸಿದನು. (1 ಯೋಹಾನ 5:19; ಪ್ರಕಟನೆ 12:9) ಹೌದು, ಬೈಬಲ್ ಹೇಳುವುದು ಸ್ಪಷ್ಟ—“ಈ ಲೋಕದ ಅಧಿಪತಿ” ಒಬ್ಬ ಅದೃಶ್ಯ ಆತ್ಮಜೀವಿಯಾದ ಸೈತಾನನು. ಈ ಲೋಕವನ್ನು ಆಳುವುದರಲ್ಲಿ ಸೈತಾನನಿಗೆ ಬೆಂಬಲ ನೀಡುತ್ತಿರುವವರು ಯಾರು?
ಲೋಕಾಧಿಪತಿಯ ಸಹಚರರು . . .
ನಂಬಿಕೆ ಕಾಪಾಡಿಕೊಳ್ಳುವ ಹೋರಾಟದಲ್ಲಿ ಕ್ರೈಸ್ತರ ವಿರುದ್ಧ ಏಳುವ ಕಡು ವೈರಿಗಳು ಯಾರು ಎನ್ನುವುದನ್ನು ಅಪೊಸ್ತಲ ಪೌಲನು ಗುರುತಿಸಿದನು. “ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; ಸರಕಾರಗಳ ವಿರುದ್ಧವಾಗಿಯೂ ಅಧಿಕಾರಗಳ ವಿರುದ್ಧವಾಗಿಯೂ ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿಯೂ ಇದೆ” ಎಂದು ಎಚ್ಚರಿಸಿದನು. (ಎಫೆಸ 6:12) ಹಾಗಾದರೆ, ನಮ್ಮ ಹೋರಾಟ “ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ” ಅಂದರೆ ಮಾನವರ ವಿರುದ್ಧವಲ್ಲ ಬದಲಾಗಿ “ದುಷ್ಟಾತ್ಮ ಸೇನೆಗಳ” ವಿರುದ್ಧ.
ಪೌಲನು ಈ ವಚನದಲ್ಲಿ, ‘ದುಷ್ಟಾತ್ಮ ಸೇನೆಗಳು’ ಎಂದು ಹೇಳಿದಾಗ ಯಾವುದೋ ಅಗೋಚರವಾದ ಕೆಟ್ಟಗುಣದ ಬಗ್ಗೆ ಮಾತಾಡುತ್ತಿರಲಿಲ್ಲ. ಬದಲಾಗಿ ಶಕ್ತಿಯುತ ದುಷ್ಟ ಆತ್ಮಜೀವಿಗಳ ಬಗ್ಗೆ ಹೇಳುತ್ತಿದ್ದನು. ಹಾಗಾದರೆ, ಸ್ವರ್ಗದಲ್ಲಿನ “ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ” ಇತರ ದಂಗೆಕೋರ ದೇವದೂತರ ಮೂಲಕ ಪಿಶಾಚನು ತನ್ನ ಶಕ್ತಿಯನ್ನು ಚಲಾಯಿಸುತ್ತಾ ಇದ್ದಾನೆ.—ಯೂದ 6.
‘ಲೋಕಾಧಿಪತಿಗಳು’ ಪುರಾತನ ಕಾಲದಿಂದಲೂ ಲೋಕದ ಮೇಲೆ ಹೇಗೆ ಅಧಿಕಾರ ಚಲಾಯಿಸುತ್ತಾ ಬಂದಿದ್ದಾರೆ ಎಂಬುದನ್ನು ದಾನಿಯೇಲ ಎಂಬ ಬೈಬಲ್ ಪ್ರವಾದನಾ ಪುಸ್ತಕ ತಿಳಿಸುತ್ತದೆ. ದಾನಿಯೇಲನಿಗೆ ತನ್ನ ಜೊತೆ ಯೆಹೂದ್ಯರ ಬಗ್ಗೆ ಚಿಂತೆಯಿತ್ತು. ಬಾಬೆಲಿನ ಬಂಧಿವಾಸದಿಂದ ಬಿಡುಗಡೆಯಾಗಿ ಕ್ರಿ.ಪೂ. 537ರಲ್ಲಿ ಯೆರೂಸಲೇಮಿಗೆ ಹಿಂತಿರುಗಿ ಬಂದ ಈ ಯೆಹೂದ್ಯರಿಗಾಗಿ ಮೂರು ವಾರಗಳು ಪ್ರಾರ್ಥನೆ ಮಾಡಿದನು. ಸದುತ್ತರವಾಗಿ ದೇವರು ತನ್ನ ದೂತನನ್ನು ಕಳುಹಿಸಿದನು. ತಡವಾಗಿ ತಲಪಿದ ದೂತನು ವಿಳಂಬದ ಕಾರಣ ತಿಳಿಸುತ್ತಾ ‘ಪಾರಸಿಯ ರಾಜ್ಯದ ದಿವ್ಯಪಾಲಕನು ಇಪ್ಪತ್ತೊಂದು ದಿವಸ ನನ್ನನ್ನು ತಡೆದನು’ ಎಂದು ಹೇಳಿದನು.—ದಾನಿಯೇಲ 10:2, 13.
ಈ “ಪಾರಸಿಯ ರಾಜ್ಯದ ದಿವ್ಯಪಾಲಕನು” ಯಾರು? ಆಗಿನ ಪರ್ಷಿಯನ್ ರಾಜ ಕೋರೆಷನಂತೂ ಅಲ್ಲ. ದಾನಿಯೇಲ ಮತ್ತು ಅವನ ಜನರಿಗೆ ದಯೆ ತೋರಿಸಿದ ಅವನು ದೇವದೂತನನ್ನು ಯಾಕೆ ತಡೆಯುವನು? ಅದಲ್ಲದೆ, ಅಲ್ಪ ಮಾನವನೊಬ್ಬನು ಬಲಿಷ್ಠ ಆತ್ಮಜೀವಿಯನ್ನು ಹೇಗೆ ತಡೆಯಸಾಧ್ಯ. ಒಂದೇ ರಾತ್ರಿಯಲ್ಲಿ 1,85,000 ಧೀರ ಸೈನಿಕರನ್ನು ಹತಮಾಡಲು ಒಬ್ಬನೇ ಒಬ್ಬ ದೇವದೂತನು ಸಾಕಾಗಿದ್ದನು. (ಯೆಶಾಯ 37:36) ದೇವದೂತರಿಗೆ ಅಷ್ಟು ಬಲವಿರುವಾಗ, ಕೋರೆಷನು ದೂತನನ್ನು ಮೂರು ವಾರಗಳ ತನಕ ಅಡ್ಡಗಟ್ಟಿದನು ಎಂದು ಹೇಳುವುದು ಅವಾಸ್ತವಿಕ. ಸೈತಾನನ ದಳ್ಳಾಳಿಯೇ ಈ “ಪಾರಸಿಯ ರಾಜ್ಯದ ದಿವ್ಯಪಾಲಕನು” ಮತ್ತು ಪಾರಸಿ ಸಾಮ್ರಾಜ್ಯದ ಆಧಿಪತ್ಯವನ್ನು ಅವನಿಗೆ ಕೊಟ್ಟವನು ಪಿಶಾಚನೇ ಎನ್ನುವುದರಲ್ಲಿ ಸಂಶಯವಿಲ್ಲ. ಅದೇ ವೃತ್ತಾಂತದಲ್ಲಿ ದೇವದೂತನು, ತಾನು “ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ” ಮತ್ತು ‘ಗ್ರೀಕ್ ರಾಜ್ಯದ ದಿವ್ಯಪಾಲಕನೊಂದಿಗೆ’ ಹೋರಾಡಬೇಕು ಎಂದು ಹೇಳಿದನು.—ದಾನಿಯೇಲ 10:20.
ಅದೃಶ್ಯ ‘ಲೋಕಾಧಿಪತಿಗಳು,’ ದೆವ್ವಗಳ ದಿವ್ಯಪಾಲಕರು ನಿಜವಾಗಿ ಇದ್ದಾರೆ ಮತ್ತು ಈ ಲೋಕವನ್ನು ಆಳುವುದರಲ್ಲಿ ಸೈತಾನನಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹಾಗಾದರೆ ಅವರ ಮುಖ್ಯ ಧ್ಯೇಯ ಏನು?
ಲೋಕಾಧಿಪತಿ ತನ್ನ ನಿಜಬಣ್ಣವನ್ನು ತೋರಿಸಿಕೊಂಡನು
ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯು ಮಹತ್ವಪೂರ್ಣ ಘಟನೆಗಳನ್ನು ನಮ್ಮ ಮುಂದಿಡುತ್ತದೆ. ಪ್ರಧಾನ ದೇವದೂತ ಮಿಕಾಯೇಲನ ಪಾತ್ರದಲ್ಲಿ ಯೇಸು, ಪಿಶಾಚ ಮತ್ತವನ ದೆವ್ವಗಳನ್ನು ಯುದ್ಧದಲ್ಲಿ ಸೋಲಿಸಿದರ ಬಗ್ಗೆ ಅಪೊಸ್ತಲ ಯೋಹಾನನು ಆ ಪುಸ್ತಕದಲ್ಲಿ ತಿಳಿಸುತ್ತಾನೆ. ಅವರನ್ನು ಸ್ವರ್ಗದಿಂದ ಹೊರದೊಬ್ಬಿದ್ದರ ಪರಿಣಾಮಗಳ ಬಗ್ಗೆಯೂ ಹೇಳುತ್ತಾ: ‘ಭೂಮಿಗೆ ಅಯ್ಯೋ, ಏಕೆಂದರೆ ಪಿಶಾಚನು ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ’ ಎಂದು ಎಚ್ಚರಿಸುತ್ತಾನೆ.—ಪ್ರಕಟನೆ 12:9, 12.
ಪಿಶಾಚನು ತನ್ನ ಮಹಾ ಕೋಪವನ್ನು ಹೇಗೆ ತೋರಿಸುತ್ತಿದ್ದಾನೆ? ಯಾವುದಕ್ಕೂ ಹೇಸದ ಅನೇಕ ಉಗ್ರ ಪಾತಕಿಗಳಂತೆಯೇ ಪಿಶಾಚನು ‘ಆಳು ಇಲ್ಲವೇ ಅಳಿ’ ಎಂಬ ಧೋರಣೆಯನ್ನು ಪಾಲಿಸುತ್ತಾನೆ. ಭೂಮಿ ಮತ್ತು ಅದರ ನಿವಾಸಿಗಳು ತಮ್ಮೊಂದಿಗೆ ನಾಶವಾಗಬೇಕೆನ್ನುವುದು ಸೈತಾನ ಮತ್ತವನ ದೆವ್ವಗಳ ದೃಢಸಂಕಲ್ಪ. ತನಗಿರುವ ಸಮಯ ಸ್ವಲ್ಪವೆಂದು ಪಿಶಾಚನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಮಾನವ ಸಮಾಜದ ಒಂದು ಪ್ರಮುಖ ಘಟಕವಾದ ವಾಣಿಜ್ಯ ಕ್ಷೇತ್ರವನ್ನು ಬಳಸಿ ಕೆಲಸ ಸಾಧಿಸುತ್ತಿದ್ದಾನೆ. ಗಿರಾಕಿಗಳಲ್ಲಿ ಖರೀದಿಸುವ ಉನ್ಮಾದವನ್ನು ಹೊಡೆದೆಬ್ಬಿಸುತ್ತಿದ್ದಾನೆ. ಇದರಿಂದ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿವೆ, ಲೋಕದಾದ್ಯಂತ ಪರಿಸರ ಹದಗೆಡುತ್ತಿದೆ. ಹೀಗೆ ಸೈತಾನನು ಮಾನವ ಸಂಕುಲವನ್ನು ನಾಶಮಾಡುವ ತನ್ನ ಗುರಿಯತ್ತ ಸಾಗುತ್ತಿದ್ದಾನೆ.—ಪ್ರಕಟನೆ 11:18; 18:11-17.
ಪಿಶಾಚನಿಗಿರುವ ಅಧಿಕಾರದ ಲಾಲಸೆಯನ್ನು ಮಾನವ ಇತಿಹಾಸದ ಆರಂಭದಿಂದಲೂ ಕಾಣಬಹುದು. ಧರ್ಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸ್ಪಷ್ಟವಾಗಿ ನೋಡಬಹುದು. ಪ್ರಕಟನೆ ಪುಸ್ತಕದಲ್ಲಿ, ರಾಜಕೀಯ ಅಧಿಕಾರಗಳನ್ನು “ಕಾಡುಮೃಗ” ಎಂದು ವರ್ಣಿಸಿ ಆ ಮೃಗಕ್ಕೆ ಪಿಶಾಚನು “ಮಹಾ ಅಧಿಕಾರವನ್ನೂ” ಕೊಟ್ಟಿದ್ದಾನೆ ಎಂದು ಹೇಳಲಾಗಿದೆ. ರಾಜಕೀಯ ಮತ್ತು ಧರ್ಮಗಳ ಮಧ್ಯೆ ಇರುವ ನಿರ್ಲಜ್ಜೆಯ ಮೈತ್ರಿಯನ್ನು ಆಧ್ಯಾತ್ಮಿಕ ಜಾರತ್ವವೆಂದು ಬೈಬಲ್ ವರ್ಣಿಸುತ್ತದೆ. (ಪ್ರಕಟನೆ 13:2; 17:1, 2) ಎಷ್ಟೋ ಶತಮಾನಗಳಿಂದ ಎಷ್ಟೋ ಲಕ್ಷಾಂತರ ಪ್ರಾಣಗಳನ್ನು ಬಲಿತೆಗೆದುಕೊಂಡಿರುವ ದಬ್ಬಾಳಿಕೆ, ದಾಸತ್ವ, ಯುದ್ಧ ಮತ್ತು ಜಾತೀಯ ಕಲಹಗಳ ಕುರಿತು ತುಸು ಯೋಚಿಸಿ. ಇಂಥ ಭೀಕರ, ಭೀಬತ್ಸ ಘಟನೆಗಳಿಗೆ ನಮ್ಮ ನಿಮ್ಮಂಥ ಮಾನವರೇ ಕಾರಣರಾಗಿದ್ದಾರೆಂದು ಯೋಚಿಸುವುದಕ್ಕೂ ಆಗುವುದಿಲ್ಲ. ಹಾಗಾದರೆ, ಇವೆಲ್ಲವುಗಳ ಹಿಂದೆ ಅದೃಶ್ಯ ಆತ್ಮ ಸೇನೆಗಳ ಕೈವಾಡವಿರಬಹುದೋ?
ಮಾನವ ಮುಖಂಡರನ್ನು, ಲೋಕ ಶಕ್ತಿಗಳನ್ನು ಕೈಗೊಂಬೆಯಂತೆ ಆಡಿಸುತ್ತಿರುವವನು ಯಾರೆಂದು ಬೈಬಲ್ ಬೊಟ್ಟು ಮಾಡಿದೆ. ಮುಖವಾಡ ಹಾಕಿಕೊಂಡವನನ್ನು ಬಯಲಿಗೆಳೆಯುತ್ತದೆ. ತಿಳಿದೋ ತಿಳಿಯದೆಯೋ ಮಾನವ ಸಮಾಜವು ಈ ಅಧಿಪತಿಯ ವ್ಯಕ್ತಿತ್ವವನ್ನು ಮತ್ತು ‘ಆಳು ಇಲ್ಲವೇ ಅಳಿ’ ಎಂಬ ಅವನ ಧೋರಣೆಯನ್ನು ಪ್ರತಿಬಿಂಬಿಸುತ್ತಿದೆ. ಆದರೆ ಪಿಶಾಚನು ಇನ್ನೆಷ್ಟು ಕಾಲ ಮಾನವ ಕುಲದ ಮೇಲೆ ಆಧಿಪತ್ಯ ನಡೆಸುವನು? ಇನ್ನೆಷ್ಟು ಕಾಲ ಕಷ್ಟಸಂಕಟದ ಈ ನೊಗವನ್ನು ನಾವು ಸಹಿಸಿಕೊಳ್ಳಬೇಕು?
ಪಿಶಾಚನ ಕೊನೆಯುಸಿರು!
ಒಂದನೇ ಶತಮಾನದಲ್ಲಿ ಕ್ರಿಸ್ತನು ಭೂಮಿಯಲ್ಲಿ ಮಾಡಿದ ಕೆಲಸ ಪಿಶಾಚ ಮತ್ತವನ ದೆವ್ವಗಳ ಅಂತ್ಯಕ್ಕೆ ತಳಪಾಯ ಹಾಕಿತು. ಒಮ್ಮೆ ಶಿಷ್ಯರು, ದೆವ್ವಗಳ ಪ್ರಭಾವದಿಂದ ಜನರನ್ನು ಬಿಡಿಸಿದ್ದರ ಬಗ್ಗೆ ಯೇಸುವಿಗೆ ಸಂಭ್ರಮದಿಂದ ವಿವರಿಸಿದರು. ಆಗ ಯೇಸು ಆ ಶಿಷ್ಯರಿಗೆ, “ಸೈತಾನನು ಈಗಾಗಲೇ ಮಿಂಚಿನಂತೆ ಆಕಾಶದಿಂದ ಬಿದ್ದಿರುವುದನ್ನು ನಾನು ನೋಡತೊಡಗಿದೆ” ಎಂದು ಹೇಳಿದನು. (ಲೂಕ 10:18) ಪ್ರಧಾನ ದೂತ ಮಿಕಾಯೇಲನಾಗಿ ಸ್ವರ್ಗಕ್ಕೆ ಹಿಂತಿರುಗಿದ ನಂತರ ಈ ಲೋಕಾಧಿಪತಿಯ ಮೇಲೆ ಗಳಿಸಲಿದ್ದ ವಿಜಯದ ಬಗ್ಗೆ ಯೇಸು ಇಲ್ಲಿ ಹೇಳುತ್ತಿದ್ದನು. (ಪ್ರಕಟನೆ 12:7-9) ಈ ವಿಜಯವು 1914ರಲ್ಲಿ ಅಥವಾ ಸ್ವಲ್ಪ ತರುವಾಯ ಸ್ವರ್ಗದಲ್ಲಿ ಸಂಭವಿಸಿತೆಂದು ಬೈಬಲ್ ಪ್ರವಾದನೆಗಳ ಕೂಲಂಕಷ ಅಧ್ಯಯನದಿಂದ ತಿಳಿದುಬರುತ್ತದೆ.a
ಈಗ ತನಗಿರುವ ಸಮಯ ಕೊಂಚವೇ ಎಂದು ತಿಳಿದ ಪಿಶಾಚನು ತನ್ನ ಹೋರಾಟ ಹೆಚ್ಚಿಸಿದ್ದಾನೆ. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ”ಯಾದರೂ ಲಕ್ಷಾಂತರ ಮಂದಿ ಅವನ ಮೋಸಕ್ಕೆ ಮಾರುಹೋಗದೆ ಅವನ ಉಗ್ರ ಪ್ರಯತ್ನವನ್ನು ನಿಷ್ಫಲಮಾಡಿದ್ದಾರೆ. ಬೈಬಲ್ ಅವನ ನಿಜ ಬಣ್ಣ, ಕುತಂತ್ರಗಳನ್ನು ರಟ್ಟುಮಾಡಿ ಆ ಜನರ ಕಣ್ತೆರೆದಿದೆ. (2 ಕೊರಿಂಥ 2:11) ಜೊತೆ ಕ್ರೈಸ್ತರಿಗೆ ಪೌಲನು “ಶಾಂತಿಯನ್ನು ಒದಗಿಸುವ ದೇವರು ಬೇಗನೆ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ಹಾಕಿ ಜಜ್ಜಿಬಿಡುವನು” ಎಂದು ಬರೆದನು.b ಈ ಮಾತುಗಳು ಆ ಲಕ್ಷಾಂತರ ದೃಢಮನಸ್ಕರಲ್ಲಿ ನಿರೀಕ್ಷೆ ತುಂಬಿದೆ.—ರೋಮನ್ನರಿಗೆ 16:20.
ಸೈತಾನನು ಇನ್ನೇನು ತನ್ನ ಕೊನೆ ಉಸಿರೆಳೆಯಲಿದ್ದಾನೆ. ಕ್ರಿಸ್ತನ ಪ್ರೀತಿಪರ ಆಳ್ವಿಕೆಯ ಕೆಳಗೆ ನೀತಿವಂತ ಮಾನವರು ದೇವರ ಪಾದಪೀಠವಾದ ಭೂಮಿಯನ್ನು ಒಂದು ಸುಂದರ ತೋಟವಾಗಿ ಮಾಡಲಿದ್ದಾರೆ. ಹಿಂಸಾಚಾರ, ದ್ವೇಷ ಮತ್ತು ದುರಾಶೆ ಹೇಳಹೆಸರಿಲ್ಲದಂತಾಗಲಿದೆ. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು” ಎನ್ನುತ್ತದೆ ಬೈಬಲ್. (ಯೆಶಾಯ 65:17) ಲೋಕದ ಈ ಕೃತ್ರಿಮ ಅಧಿಪತಿಯಿಂದ ಮತ್ತು ಅವನ ಅಧಿಕಾರದ ಬಂಧನದಿಂದ ಹೊರಬರುವವರೆಲ್ಲರಿಗೆ ಅದು ನಿಜ ನೆಮ್ಮದಿ ತರಲಿದೆ. (w11-E 09/01)
[ಪಾದಟಿಪ್ಪಣಿಗಳು]
a ಈ ತಾರೀಖಿನ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 215-218 ನೋಡಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
b ಪೌಲನ ಈ ಮಾತುಗಳು ಆದಿಕಾಂಡ 3:15ರಲ್ಲಿ ತಿಳಿಸಲಾದ ಬೈಬಲಿನ ಪ್ರಥಮ ಪ್ರವಾದನೆಯನ್ನು ಪ್ರತಿಧ್ವನಿಸುತ್ತದೆ. ಇವೆರಡೂ ಪಿಶಾಚನ ಅಂತಿಮ ನಾಶನವನ್ನು ಸೂಚಿಸುತ್ತವೆ.
[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕ್ರಿಸ್ತನ ಪ್ರೀತಿಪರ ಆಳ್ವಿಕೆಯ ಕೆಳಗೆ ನೀತಿವಂತ ಮಾನವರು ಇಡೀ ಭೂಮಿಯನ್ನು ನಯನಮನೋಹರ ಸ್ಥಳವಾಗಿ ಮಾಡುವರು