ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಿರಿ!
“ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲಿಯೇ ನಡೆದುಕೊಳ್ಳಿರಿ.”—ಫಿಲಿ. 1:27.
ಉತ್ತರಿಸುವಿರಾ?
ಯಾರು ದೇವರ ರಾಜ್ಯದ ಪ್ರಜೆಗಳಾಗಬಲ್ಲರು?
ದೇವರ ರಾಜ್ಯದ ಭಾಷೆ, ಇತಿಹಾಸ, ನಿಯಮಗಳನ್ನು ಕಲಿಯುವುದರ ಅರ್ಥವೇನು?
ದೇವರ ರಾಜ್ಯದ ಪ್ರಜೆಗಳು ದೇವರ ನಿಯಮಗಳನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸುತ್ತಾರೆ?
1, 2. ಫಿಲಿಪ್ಪಿ ಸಭೆಗೆ ಪೌಲ ಕೊಟ್ಟ ಸಲಹೆ ಏಕೆ ವಿಶೇಷ ಅರ್ಥವುಳ್ಳದ್ದಾಗಿತ್ತು?
“ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲಿಯೇ ನಡೆದುಕೊಳ್ಳಿರಿ” ಎಂದು ಅಪೊಸ್ತಲ ಪೌಲನು ಫಿಲಿಪ್ಪಿ ಸಭೆಯವರನ್ನು ಪ್ರೋತ್ಸಾಹಿಸಿದನು. (ಫಿಲಿಪ್ಪಿ 1:27 ಓದಿ.) ಈ ವಚನದಲ್ಲಿ “ನಡೆದುಕೊಳ್ಳಿರಿ” ಎಂಬುದಕ್ಕೆ ಪೌಲ ಉಪಯೋಗಿಸಿದ ಗ್ರೀಕ್ ಪದವನ್ನು “ಪ್ರಜೆಗಳಾಗಿ ಮುಂದುವರಿಯಿರಿ” ಎಂದು ಸಹ ಅನುವಾದಿಸಬಹುದು. ಈ ವಾಕ್ಯವು ಫಿಲಿಪ್ಪಿ ಸಭೆಯವರಿಗೆ ವಿಶೇಷ ಅರ್ಥವುಳ್ಳದ್ದಾಗಿತ್ತು. ಏಕೆ? ಏಕೆಂದರೆ ರೋಮ್ ಚಕ್ರವರ್ತಿಯು ಫಿಲಿಪ್ಪಿ ನಗರವಾಸಿಗಳಿಗೆ ರೋಮ್ನ ಪೌರತ್ವ ಹೊಂದಿರಲು ಅನುಮತಿಸಿದ್ದನು. ರೋಮ್ನ ಕಾನೂನು ಸಹ ಅವರಿಗೆ ಸಂರಕ್ಷಣೆ ಕೊಡುತ್ತಿತ್ತು. ಹಾಗಾಗಿ ಅವರು ತಾವು ರೋಮ್ ಪ್ರಜೆಗಳೆಂದು ಹೇಳಿಕೊಳ್ಳಲು ತುಂಬ ಹೆಮ್ಮೆಪಡುತ್ತಿದ್ದರು.
2 ಆದರೆ ಫಿಲಿಪ್ಪಿ ಸಭೆಯ ಕ್ರೈಸ್ತರಿಗೆ ಹೆಮ್ಮೆಪಡಲು ಅದಕ್ಕಿಂತ ಹೆಚ್ಚಿನ ಕಾರಣವಿತ್ತು. ಅಭಿಷಿಕ್ತ ಕ್ರೈಸ್ತರಾದ ಅವರ “ಪೌರತ್ವವು ಸ್ವರ್ಗದಲ್ಲಿದೆ” ಎಂದು ಪೌಲ ನೆನಪಿಸಿದನು. (ಫಿಲಿ. 3:20) ಅವರು ಎಲ್ಲ ಮಾನವ ಸರ್ಕಾರಗಳಿಗಿಂತಲೂ ಮಹೋನ್ನತವಾದ ದೇವರ ರಾಜ್ಯದ ಪ್ರಜೆಗಳಾಗಿದ್ದರು. ಅದರಿಂದ ಅವರಿಗೆ ಸಿಗುತ್ತಿದ್ದ ಪ್ರಯೋಜನ, ಸಂರಕ್ಷಣೆ ಎಣೆಯಿಲ್ಲದ್ದಾಗಿತ್ತು.—ಎಫೆ. 2:19-22.
3. (1) ದೇವರ ರಾಜ್ಯದ ಪ್ರಜೆಗಳಾಗುವ ಸದವಕಾಶ ಯಾರಿಗಿದೆ? (2) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?
3 “ಪ್ರಜೆಗಳಾಗಿ ಮುಂದುವರಿಯಿರಿ” ಎಂದು ಪೌಲ ಕೊಟ್ಟ ಸಲಹೆ ಮುಖ್ಯವಾಗಿ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲಿಕ್ಕಿರುವವರಿಗೆ ಅನ್ವಯಿಸುತ್ತದೆ. (ಫಿಲಿ. 3:20) ಆ ಸಲಹೆಯು ದೇವರ ರಾಜ್ಯದ ಭೂಪ್ರಜೆಗಳಿಗೂ ಅನ್ವಯಿಸುತ್ತದೆ. ಏಕೆ ಹೀಗೆ ಹೇಳಸಾಧ್ಯ? ಏಕೆಂದರೆ ಎಲ್ಲ ಸಮರ್ಪಿತ ಕ್ರೈಸ್ತರು ಆರಾಧಿಸುವುದು ರಾಜನಾದ ಯೆಹೋವನನ್ನೇ. ಆತನು ಅಭಿಷಿಕ್ತರಿಗೂ ಭೂನಿರೀಕ್ಷೆಯುಳ್ಳವರಿಗೂ ಕೊಟ್ಟಿರುವ ನಿಯಮಗಳೂ ಒಂದೇ ರೀತಿಯದ್ದಾಗಿವೆ. (ಎಫೆ. 4:4-6) ಇಂದು ಅನೇಕರು ಶ್ರೀಮಂತ ರಾಷ್ಟ್ರದ ಪ್ರಜೆಯಾಗಲು ಬಹಳ ಶ್ರಮಪಡುತ್ತಾರೆ. ನಮಗಾದರೋ ಮಹೋನ್ನತ ದೇವರ ರಾಜ್ಯದ ಪ್ರಜೆಗಳಾಗುವ ಸದವಕಾಶವಿದೆ. ನಾವದನ್ನು ಬಹಳ ಗಣ್ಯಮಾಡಬೇಕಲ್ಲವೇ? ಈ ನಿಟ್ಟಿನಲ್ಲಿ ನಮ್ಮ ಗಣ್ಯತೆಯನ್ನು ಆಳಗೊಳಿಸಲು ನಾವೀಗ ಒಂದು ದೇಶದ ಪ್ರಜೆಯಾಗಲು ಬೇಕಾದ ಅರ್ಹತೆಗಳು ಮತ್ತು ದೇವರ ರಾಜ್ಯದ ಪ್ರಜೆಯಾಗಲು ಬೇಕಾದ ಅರ್ಹತೆಗಳ ಮಧ್ಯೆ ಇರುವ ಹೋಲಿಕೆಗಳನ್ನು ನೋಡೋಣ. ಬಳಿಕ ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಲು ನಾವು ಮಾಡಬೇಕಾದ ಮೂರು ಸಂಗತಿಗಳನ್ನು ಗಮನಿಸೋಣ.
ಪ್ರಜೆಯಾಗಲು ಬೇಕಾದ ಅರ್ಹತೆಗಳು
4. (1) ಶುದ್ಧ ಭಾಷೆ ಏನಾಗಿದೆ? (2) ಶುದ್ಧ ಭಾಷೆಯನ್ನು ಮಾತಾಡುವುದೆಂದರೆ ಏನು?
4 ಭಾಷೆ ಕಲಿಯಬೇಕು. ಕೆಲವು ದೇಶಗಳಲ್ಲಿ ಅಲ್ಲಿನ ಪ್ರಜೆಯಾಗಲು ಬಯಸುವವರು ಆ ದೇಶದ ಪ್ರಮುಖ ಭಾಷೆಯನ್ನು ಕಲಿಯಬೇಕೆಂಬ ನಿಯಮವಿದೆ. ಭಾಷೆ ಕಲಿತು ಆ ದೇಶದ ಪ್ರಜೆಗಳಾದ ಮೇಲೂ ಅನೇಕರು ಅಲ್ಲಿನ ಭಾಷೆಯನ್ನು ನಿರರ್ಗಳವಾಗಿ ಮಾತಾಡಲು ವರ್ಷಗಟ್ಟಲೆ ಪ್ರಯತ್ನಿಸುತ್ತಾರೆ. ವ್ಯಾಕರಣಾಂಶಗಳನ್ನು ಬೇಗನೆ ಕಲಿತರೂ ಉಚ್ಚಾರಣೆ ಕಲಿತು ಸರಾಗವಾಗಿ ಮಾತಾಡಶಕ್ತರಾಗಲು ಸಮಯ ತಗಲುತ್ತದೆ. ಅದೇ ರೀತಿ ದೇವರ ರಾಜ್ಯದ ಪ್ರಜೆಯಾಗಲು ಬಯಸುವವರು ಒಂದು ಹೊಸ ಭಾಷೆಯನ್ನು ಕಲಿಯಬೇಕು. ಅದನ್ನು ಚೆಫನ್ಯ 3:9 (NW) “ಶುದ್ಧ ಭಾಷೆ” ಎಂದು ಕರೆಯುತ್ತದೆ. ಆ ವಚನ ಹೀಗೆ ಓದುತ್ತದೆ: “ಆಗ ಹೆಗಲಿಗೆ ಹೆಗಲು ಕೊಟ್ಟು ಎಲ್ಲರು ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರಿಗೆ ಶುದ್ಧ ಭಾಷೆಯನ್ನು ಕೊಡುವೆನು.” ಈ ಶುದ್ಧ ಭಾಷೆ ಏನಾಗಿದೆ? ದೇವರ ಮತ್ತು ಆತನ ಉದ್ದೇಶಗಳ ಕುರಿತು ಬೈಬಲಿನಲ್ಲಿರುವ ಸತ್ಯವೇ. ಶುದ್ಧ ಭಾಷೆ ಆಡುವುದೆಂದರೆ ದೇವರ ನಿಯಮಗಳಿಗೂ ಮೂಲತತ್ವಗಳಿಗೂ ವಿಧೇಯರಾಗುವುದು. ದೇವರ ರಾಜ್ಯದ ಪ್ರಜೆಗಳಾದ ನಾವು ಬೈಬಲಿನ ಮೂಲಭೂತ ಬೋಧನೆಗಳನ್ನು ಬೇಗನೆ ಕಲಿತು ದೀಕ್ಷಾಸ್ನಾನ ಹೊಂದಿರಬಹುದು. ಆದರೆ ದೀಕ್ಷಾಸ್ನಾನದ ಬಳಿಕವೂ ಆ ಶುದ್ಧ ಭಾಷೆಯನ್ನು ಸ್ಪಷ್ಟವಾಗಿ ಸರಾಗವಾಗಿ ಮಾತಾಡಲು ನಾವು ಶ್ರಮಪಡಬೇಕು. ಯಾವ ವಿಧದಲ್ಲಿ? ಬೈಬಲಿನಿಂದ ನಾವು ಕಲಿತಿರುವ ಸಂಗತಿಗಳಿಗೆ ತಕ್ಕ ಹಾಗೆ ನಡೆಯುವ ಮೂಲಕವೇ.
5. ಯೆಹೋವನ ಸಂಘಟನೆಯ ಇತಿಹಾಸದ ಕುರಿತು ನಾವೇಕೆ ಸಾಧ್ಯವಾದಷ್ಟು ಹೆಚ್ಚು ಕಲಿಯಬೇಕು?
5 ಇತಿಹಾಸ ತಿಳಿಯಬೇಕು. ಒಂದು ದೇಶದ ಪ್ರಜೆಯಾಗಲು ಅಪೇಕ್ಷಿಸುವ ವ್ಯಕ್ತಿ ಅದರ ಇತಿಹಾಸವನ್ನೂ ತಿಳಿಯಬೇಕಾಗುತ್ತದೆ. ಅದೇ ರೀತಿ ದೇವರ ರಾಜ್ಯದ ಪ್ರಜೆಯಾಗಲು ಬಯಸುವವರು ಆ ರಾಜ್ಯದ ಕುರಿತು ಸಾಧ್ಯವಾದಷ್ಟು ಹೆಚ್ಚು ಕಲಿಯಬೇಕು. ಈ ವಿಷಯದಲ್ಲಿ ಕೋರಹನ ಮಕ್ಕಳು ಒಳ್ಳೇ ಮಾದರಿಯಾಗಿದ್ದಾರೆ. ಪ್ರಾಚೀನ ಇಸ್ರಾಯೇಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಯೆರೂಸಲೇಮ್ ಮತ್ತು ಅಲ್ಲಿದ್ದ ಆರಾಧನಾ ಸ್ಥಳವೆಂದರೆ ಬಹಳ ಪ್ರೀತಿ. ಇತರರ ಬಳಿ ಅದರ ಬಗ್ಗೆ ಉತ್ಸುಕತೆಯಿಂದ ಮಾತಾಡುತ್ತಿದ್ದರು. ಅದು ನೋಡಲು ಭವ್ಯವಾಗಿತ್ತೆಂಬ ಕಾರಣದಿಂದಲ್ಲ. ಬದಲಾಗಿ ಯೆರೂಸಲೇಮ್ ‘ರಾಜಾಧಿರಾಜನಾದ’ ಯೆಹೋವನ “ಪಟ್ಟಣ”ವಾಗಿದ್ದರಿಂದಲೇ. ಮಾತ್ರವಲ್ಲ ಅದು ಸತ್ಯಾರಾಧನೆಯ ಕೇಂದ್ರವಾಗಿತ್ತು. ಯೆಹೋವನ ಧರ್ಮಶಾಸ್ತ್ರವನ್ನು ಅಲ್ಲಿ ಕಲಿಸಲಾಗುತ್ತಿತ್ತು. ರಾಜಾಧಿರಾಜನಾದ ಆತನು ತನ್ನ ಆಳ್ವಿಕೆಯ ಕೆಳಗಿದ್ದ ಜನರಿಗೆ ವಿಶೇಷ ರೀತಿಯ ಪ್ರೀತಿ, ದಯೆ ತೋರಿಸಿದ್ದನು. (ಕೀರ್ತನೆ 48:1, 2, 9, 12, 13 ಓದಿ.) ಕೋರಹನ ಮಕ್ಕಳಂತೆ ನಿಮ್ಮಲ್ಲೂ ಯೆಹೋವನ ಸಂಘಟನೆಯ ಭೂಭಾಗದ ಇತಿಹಾಸವನ್ನು ಅಧ್ಯಯನ ಮಾಡುವ ಮತ್ತು ಇತರರಿಗೆ ವಿವರಿಸಿ ಹೇಳುವ ತವಕ ಇದೆಯೇ? ಯೆಹೋವನ ಸಂಘಟನೆ ಮತ್ತು ಆತನು ತನ್ನ ಜನರನ್ನು ಬೆಂಬಲಿಸುವ ಕುರಿತು ಹೆಚ್ಚೆಚ್ಚು ಕಲಿಯುತ್ತ ಹೋದಂತೆ ದೇವರ ರಾಜ್ಯ ನಮಗೆ ಹೆಚ್ಚೆಚ್ಚು ನೈಜವಾಗುವುದು. ರಾಜ್ಯದ ಸುವಾರ್ತೆಯನ್ನು ಸಾರಬೇಕೆಂಬ ನಮ್ಮ ಅಪೇಕ್ಷೆ ತನ್ನಿಂದ ತಾನೇ ತೀವ್ರವಾಗುವುದು.—ಯೆರೆ. 9:24; ಲೂಕ 4:43.
6. ತನ್ನ ರಾಜ್ಯದ ನಿಯಮಗಳನ್ನೂ ಮೂಲತತ್ವಗಳನ್ನೂ ನಾವು ಅರಿತು ವಿಧೇಯರಾಗಬೇಕೆಂದು ಯೆಹೋವನು ಅಪೇಕ್ಷಿಸುವುದು ನ್ಯಾಯವೇಕೆ?
6 ನಿಯಮಗಳನ್ನು ಅರಿಯಬೇಕು. ಪ್ರಜೆಗಳು ದೇಶದ ನಿಯಮಗಳನ್ನು ಅರಿತು ಅವುಗಳಿಗೆ ವಿಧೇಯರಾಗಬೇಕೆಂದು ಮಾನವ ಸರ್ಕಾರಗಳು ಅಪೇಕ್ಷಿಸುತ್ತವೆ. ಹೀಗಿರುವಾಗ ದೇವರ ರಾಜ್ಯದ ಪ್ರಜೆಗಳು ತನ್ನ ನಿಯಮಗಳನ್ನೂ ಮೂಲತತ್ವಗಳನ್ನೂ ಅರಿತು ವಿಧೇಯರಾಗಬೇಕೆಂದು ಯೆಹೋವನು ಅಪೇಕ್ಷಿಸುವುದು ನ್ಯಾಯೋಚಿತ. (ಯೆಶಾ. 2:3; ಯೋಹಾ. 15:10; 1 ಯೋಹಾ. 5:3) ಮಾನವ ನಿಯಮಗಳಲ್ಲಿ ಲೋಪದೋಷಗಳು ಇರುತ್ತವೆ. ಕೆಲವೊಮ್ಮೆ ಅನ್ಯಾಯವೂ ಕಂಡುಬರುತ್ತದೆ. ಆದರೆ ಯೆಹೋವನ ನಿಯಮ “ಲೋಪವಿಲ್ಲದ್ದು.” (ಕೀರ್ತ. 19:7) ಇಂಥ ಪರಿಪೂರ್ಣ ನಿಯಮಗಳನ್ನು ತಿಳಿಯಲಿಕ್ಕಾಗಿ ದೇವರ ವಾಕ್ಯವನ್ನು ನಾವು ಪ್ರತಿ ದಿನ ಓದಿ ಅಧ್ಯಯನ ಮಾಡಬೇಕು. (ಕೀರ್ತ. 1:1, 2) ನಮಗಾಗಿ ಬೇರೆ ಯಾರೂ ಅದನ್ನು ಮಾಡಲಾರರು. ನೀವು ಬೈಬಲನ್ನು ದಿನಾ ಓದಿ ಆನಂದಿಸುತ್ತಿದ್ದೀರಾ?
ದೇವರ ರಾಜ್ಯದ ಪ್ರಜೆಗಳು ಆತನ ನಿಯಮಗಳನ್ನು ಪ್ರೀತಿಸುತ್ತಾರೆ
7. ದೇವರ ರಾಜ್ಯದ ಪ್ರಜೆಗಳು ಆತನ ನಿಯಮಗಳಿಗೆ ವಿಧೇಯರಾಗಲು ಕಾರಣವೇನು?
7 ದೇವರ ರಾಜ್ಯದ ಪ್ರಜೆಗಳು ಆತನ ನಿಯಮಗಳನ್ನು ಅರಿತಿರಬೇಕು ಮಾತ್ರವಲ್ಲ ಅವನ್ನು ಪ್ರೀತಿಸಬೇಕು ಸಹ. ಅನೇಕ ದೇಶದ ಪ್ರಜೆಗಳು ಸರ್ಕಾರದ ಕಾನೂನು ಕಾಯಿದೆಗಳನ್ನು ಪಾಲಿಸುತ್ತೇವೆಂದು ಹೇಳುತ್ತಾರೆ. ಆದರೆ ಅವನ್ನು ಪಾಲಿಸಲು ಕಷ್ಟವಾದಾಗ ಮತ್ತು ತಮ್ಮನ್ನು ಯಾರೂ ಗಮನಿಸದಿರುವಾಗ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೆಚ್ಚಾಗಿ ಇವರು ನಿಯಮಗಳಿಗೆ ವಿಧೇಯರಾಗುವುದು ‘ಮನುಷ್ಯರನ್ನು ಮೆಚ್ಚಿಸಲಿಕ್ಕಾಗಿ.’ (ಕೊಲೊ. 3:22) ಆದರೆ ದೇವರ ರಾಜ್ಯದ ಪ್ರಜೆಗಳು ಯೆಹೋವನ ನಿಯಮಗಳಿಗೆ ವಿಧೇಯರಾಗುವುದು ಆತನ ಮೇಲಿನ ಪ್ರೀತಿಯಿಂದಾಗಿ. ಆದ್ದರಿಂದ ಯಾರು ನೋಡಲಿ ನೋಡದಿರಲಿ ನಾವು ದೇವರ ನಿಯಮಗಳಿಗೆ ವಿಧೇಯರಾಗುತ್ತೇವೆ.—ಯೆಶಾ. 33:22; ಲೂಕ 10:27 ಓದಿ.
8, 9. ದೇವರ ನಿಯಮಗಳ ಮೇಲೆ ನಿಮಗೆ ನಿಜವಾಗಿಯೂ ಪ್ರೀತಿಯಿದೆ ಎನ್ನುವುದನ್ನು ಹೇಗೆ ತಿಳಿಯಬಲ್ಲಿರಿ?
8 ದೇವರ ನಿಯಮಗಳ ಮೇಲೆ ನಿಮಗೆ ನಿಜವಾಗಿ ಪ್ರೀತಿ ಇದೆಯಾ ಎಂದು ಹೇಗೆ ತಿಳಿಯಬಲ್ಲಿರಿ? ಸಲಹೆ ಸಿಗುವಾಗ ನೀವು ಪ್ರತಿಕ್ರಿಯಿಸುವ ವಿಧವನ್ನು ಪರಿಶೀಲಿಸುವ ಮೂಲಕ. ಕೆಲವೊಮ್ಮೆ ವೈಯಕ್ತಿಕ ಆಯ್ಕೆಯೆಂದು ನೀವು ಎಣಿಸುವ ವಿಷಯದಲ್ಲಿ ಸಲಹೆ ಸಿಗಬಹುದು. ಒಂದುವೇಳೆ ಉಡುಪು ಮತ್ತು ಹೊರತೋರಿಕೆಯ ವಿಷಯದಲ್ಲಿ ಸಲಹೆ ಸಿಗಬಹುದು. ಸತ್ಯವನ್ನು ಕಲಿಯುವ ಮುಂಚೆ ನೀವು ಹೇಗೆ ಬೇಕೋ ಹಾಗೆ ಬಟ್ಟೆ ಧರಿಸುತ್ತಿದ್ದಿರಬಹುದು ಅಥವಾ ಇತರರಲ್ಲಿ ಅನೈತಿಕ ಯೋಚನೆಯನ್ನು ಹುಟ್ಟಿಸುವಂಥ ರೀತಿಯಲ್ಲಿ ಧರಿಸುತ್ತಿದ್ದಿರಬಹುದು. ಆದರೆ ನಿಮಗೆ ದೇವರ ಮೇಲೆ ಪ್ರೀತಿ ಹೆಚ್ಚಿದಂತೆ ಉಡುಪು ಮತ್ತು ತೋರಿಕೆ ವಿಷಯದಲ್ಲಿ ಬದಲಾವಣೆ ಮಾಡಿಕೊಂಡಿರಿ. (1 ತಿಮೊ. 2:9, 10; 1 ಪೇತ್ರ 3:3, 4) ಈಗ ನಿಮ್ಮ ಉಡುಪು ಸಭ್ಯವಾಗಿದೆ ಎಂದು ನಿಮಗನಿಸಬಹುದು. ಆದರೆ ಸಭಾ ಹಿರಿಯರು ನಿಮ್ಮ ಉಡುಗೆ ಅನೇಕ ಪ್ರಚಾರಕರಿಗೆ ಮುಜುಗರ ಉಂಟುಮಾಡುತ್ತಿದೆ ಎಂದು ಹೇಳಿದರೆ ಹೇಗೆ ಪ್ರತಿಕ್ರಿಯಿಸುತ್ತೀರಿ? ನೀವು ಮಾಡುತ್ತಿರುವುದೇ ಸರಿಯೆಂದು ವಾದಿಸುವಿರಾ? ಕೋಪಿಸಿಕೊಳ್ಳುವಿರಾ? ನನ್ನಿಷ್ಟದಂತೆ ಮಾಡುತ್ತೇನೆ ಎಂದು ಹಠಹಿಡಿಯುವಿರಾ? ನೆನಪಿಡಿ, ದೇವರ ರಾಜ್ಯದ ಪ್ರಜೆಗಳು ವಿಧೇಯರಾಗಬೇಕಾದ ಒಂದು ಪ್ರಮುಖ ನಿಯಮ ಕ್ರಿಸ್ತನನ್ನು ಅನುಕರಿಸುವುದು. (1 ಪೇತ್ರ 2:21) ಯೇಸುವಿನ ಮಾದರಿಯ ಕುರಿತು ಅಪೊಸ್ತಲ ಪೌಲ ಹೀಗೆ ಬರೆದನು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಭಕ್ತಿವೃದ್ಧಿಗಾಗಿ ಒಳ್ಳೇದನ್ನೇ ಮಾಡುತ್ತಾ ಅವನನ್ನು ಮೆಚ್ಚಿಸಲಿ. ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ.” (ರೋಮ. 15:2, 3) ಸಭೆಯಲ್ಲಿ ಶಾಂತಿ ಕಾಪಾಡಲಿಕ್ಕಾಗಿ ಪ್ರೌಢ ಕ್ರೈಸ್ತನೊಬ್ಬನು ಇತರರ ಮನಸ್ಸಾಕ್ಷಿಯನ್ನು ನೋಯಿಸದಿರಲು ತನಗೆ ಇಷ್ಟವಾದದ್ದನ್ನು ಸಿದ್ಧಮನಸ್ಸಿನಿಂದ ಬಿಟ್ಟುಕೊಡುತ್ತಾನೆ, ಸಿಟ್ಟುಮಾಡಿಕೊಳ್ಳುವುದಿಲ್ಲ.—ರೋಮ. 14:19-21.
9 ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ ಲೈಂಗಿಕತೆ ಮತ್ತು ವಿವಾಹದ ಕುರಿತು ನಿಮಗಿರುವ ನೋಟ. ದೇವರ ರಾಜ್ಯದ ಪ್ರಜೆಗಳಲ್ಲದವರು ಸಲಿಂಗಕಾಮ ತಪ್ಪಲ್ಲ ಎಂದು ಹೇಳಬಹುದು. ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿ ಹಾನಿ ಇಲ್ಲ, ಅದೊಂದು ರೀತಿಯ ಮೋಜು; ವ್ಯಭಿಚಾರ ಮತ್ತು ವಿಚ್ಛೇದನ ಅವರವರಿಗೆ ಬಿಟ್ಟ ವಿಚಾರ ಎನ್ನಬಹುದು. ಆದರೆ ಪರಿಣಾಮಗಳ ಬಗ್ಗೆ ಚಿಂತಿಸದ ಅಂಥ ಸ್ವಾರ್ಥ ಮನೋಭಾವಗಳನ್ನು ದೇವರ ರಾಜ್ಯದ ಪ್ರಜೆಗಳಾದ ನಾವು ಹೇಸುತ್ತೇವೆ. ಅನೇಕ ಕ್ರೈಸ್ತರು ಹಿಂದೆ ಅನೈತಿಕ ಜೀವನ ನಡೆಸಿದ್ದರಾದರೂ ಈಗ ಲೈಂಗಿಕತೆ ಮತ್ತು ವಿವಾಹವನ್ನು ದೇವರ ಉಡುಗೊರೆಯಾಗಿ ವೀಕ್ಷಿಸುತ್ತಾರೆ. ಯೆಹೋವನ ಉನ್ನತ ಮಟ್ಟಗಳನ್ನು ಪ್ರೀತಿಸುತ್ತಾರೆ. ಅನೈತಿಕತೆಯಲ್ಲಿ ಒಳಗೂಡುವವರು ದೇವರ ರಾಜ್ಯದ ಪ್ರಜೆಗಳಾಗಿರಲು ಅರ್ಹರಲ್ಲ ಎನ್ನುವುದು ಅವರಿಗೆ ತಿಳಿದಿದೆ. (1 ಕೊರಿಂ. 6:9-11) ಹೃದಯ ಎಲ್ಲಕ್ಕಿಂತ ವಂಚಕ ಎನ್ನುವುದನ್ನು ಕೂಡ ಅವರು ಅರಿತಿದ್ದಾರೆ. (ಯೆರೆ. 17:9) ಆದ್ದರಿಂದ ಉನ್ನತ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಕೆ ಕೊಡಲ್ಪಡುವಾಗ ಅದನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತಾರೆ.
ದೇವರ ರಾಜ್ಯದ ಪ್ರಜೆಗಳು ಎಚ್ಚರಿಕೆಗಳನ್ನು ಗಣ್ಯಮಾಡುತ್ತಾರೆ
10, 11. (1) ದೇವರ ರಾಜ್ಯವು ಯಾವ ಸಮಯೋಚಿತ ಎಚ್ಚರಿಕೆಗಳನ್ನು ಕೊಡುತ್ತಿದೆ? (2) ಅಂಥ ಎಚ್ಚರಿಕೆಗಳ ಬಗ್ಗೆ ನಿಮಗೆ ಹೇಗನಿಸುತ್ತದೆ?
10 ಸರ್ಕಾರಗಳು ಪ್ರಜೆಗಳ ಆರೋಗ್ಯವನ್ನು ಮನಸ್ಸಿನಲ್ಲಿಟ್ಟು ಕೆಲವು ರೋಗಗಳ ಬಗ್ಗೆ ಅಥವಾ ಆಹಾರ, ಔಷಧಿಗಳ ಬಗ್ಗೆ ಎಚ್ಚರಿಕೆ ಕೊಡುತ್ತವೆ. ಎಲ್ಲ ಆಹಾರ, ಔಷಧಿಗಳು ಕೆಟ್ಟದ್ದಲ್ಲ. ಆದರೆ ಯಾವುದಾದರೂ ಆಹಾರ, ಔಷಧದಿಂದ ಅಪಾಯವಿದೆ ಎಂದು ತಿಳಿದೊಡನೆ ಸರ್ಕಾರವು ಪ್ರಜೆಗಳಿಗೆ ಎಚ್ಚರಿಕೆ ಕೊಡುತ್ತದೆ. ಹಾಗೆ ಮಾಡದಿದ್ದಲ್ಲಿ ಸರ್ಕಾರಕ್ಕೆ ಪ್ರಜೆಗಳಲ್ಲಿ ಹಿತಾಸಕ್ತಿಯಿಲ್ಲ ಎಂದಾಗುತ್ತದೆ. ಅದೇ ರೀತಿ ದೇವರ ರಾಜ್ಯವು ನೈತಿಕ ಮತ್ತು ಆಧ್ಯಾತ್ಮಿಕ ಅಪಾಯಗಳ ಕುರಿತು ಸಮಯೋಚಿತ ಎಚ್ಚರಿಕೆಗಳನ್ನು ಕೊಡುತ್ತದೆ. ಉದಾಹರಣೆಗೆ ಇಂಟರ್ನೆಟ್ ಬಳಕೆಯ ಕುರಿತು. ಸಂವಹನ, ಶಿಕ್ಷಣ, ಮನೋರಂಜನೆಗೆ ಇಂಟರ್ನೆಟ್ ಬಹಳ ಉಪಯುಕ್ತ. ದೇವರ ಸಂಘಟನೆ ಕೂಡ ಇಂಟರ್ನೆಟ್ ಅನ್ನು ಒಳ್ಳೇ ಕೆಲಸಗಳಿಗಾಗಿ ಬಳಸುತ್ತದೆ. ಆದರೆ ಇಂಟರ್ನೆಟ್ನ ಅನೇಕ ಸೈಟ್ಗಳು ನೈತಿಕವಾಗಿ, ಆಧ್ಯಾತ್ಮಿಕವಾಗಿ ಹಾನಿಕರವಾಗಿವೆ. ಅಶ್ಲೀಲ ಚಿತ್ರಗಳಿರುವ ಸೈಟ್ಗಳು ದೇವರ ರಾಜ್ಯದ ಪ್ರಜೆಗಳ ಆಧ್ಯಾತ್ಮಿಕ ಆರೋಗ್ಯಕ್ಕೆ ಅಪಾಯಕರ. ಆದ್ದರಿಂದ ಅನೇಕ ವರ್ಷಗಳಿಂದ ನಂಬಿಗಸ್ತ ಆಳು ವರ್ಗವು ಅಂಥ ಸೈಟ್ಗಳ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ನಮ್ಮ ಆಧ್ಯಾತ್ಮಿಕ ಆರೋಗ್ಯ ಕಾಪಾಡಲಿಕ್ಕಾಗಿ ಕೊಡಲಾದ ಈ ಎಚ್ಚರಿಕೆಗಳಿಗೆ ನಾವು ತುಂಬ ಕೃತಜ್ಞರಾಗಿದ್ದೇವೆ.
11 ಇತ್ತೀಚೆಗೆ ಸೋಶಿಯಲ್ ನೆಟ್ವರ್ಕಿಂಗ್ ಹೆಚ್ಚು ಪ್ರಸಿದ್ಧವಾಗಿದೆ. ಇದರಿಂದ ಉಪಯೋಗ ಇದೆ, ಜಾಗ್ರತೆಯಿಂದ ಉಪಯೋಗಿಸದಿದ್ದರೆ ತುಂಬ ಅಪಾಯವೂ ಇದೆ. ದುಸ್ಸಹವಾಸದ ಬಲೆಗೆ ಸಿಕ್ಕಿಸುತ್ತದೆ. (1 ಕೊರಿಂ. 15:33) ಆದ್ದರಿಂದಲೇ ಇಂಥ ಸೈಟ್ಗಳ ವಿಷಯದಲ್ಲಿ ದೇವರ ಸಂಘಟನೆ ನಮಗೆ ಎಚ್ಚರಿಕೆಗಳನ್ನು ನೀಡಿದೆ. ಸೋಶಿಯಲ್ ನೆಟ್ವರ್ಕಿಂಗ್ ಸೈಟ್ಗಳ ಕುರಿತು ನಂಬಿಗಸ್ತ ಆಳು ಇತ್ತೀಚೆಗೆ ಪ್ರಕಾಶಿಸಿದ ಲೇಖನಗಳನ್ನು ನೀವು ಓದಿದ್ದೀರೋ? ಅವುಗಳನ್ನು ಓದದೆ ಅಂಥ ಸೈಟ್ಗಳಿಗೆ ಕೈಹಾಕಲು ಹೋಗಬೇಡಿ. ಹಾಕಿದರೆ ಕೈ ಸುಟ್ಟುಕೊಳ್ಳುವುದು ಗ್ಯಾರಂಟಿ.a ಔಷಧದ ಬಾಟಲಿ ಮೇಲೆ ಹಾಕಿರುವ ಎಚ್ಚರಿಕೆಯನ್ನು ಓದದೆ ಔಷಧಿಯನ್ನು ಸೇವಿಸುವಂತಿರುತ್ತದೆ.
12. ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದು ಏಕೆ ಮೂರ್ಖತನವಾಗಿದೆ?
12 ನಂಬಿಗಸ್ತ ಆಳು ಕೊಡುವ ಎಚ್ಚರಿಕೆಗಳನ್ನು ನಿರ್ಲಕ್ಷಿಸುವವರಿಗೆ ಹಾನಿ ತಪ್ಪಿದ್ದಲ್ಲ. ಅಂಥವರು ತಮ್ಮ ಬಂಧುಮಿತ್ರರಿಗೂ ಹಾನಿಯನ್ನು ಉಂಟುಮಾಡುತ್ತಾರೆ. ಕೆಲವರು ಅಶ್ಲೀಲ ಚಿತ್ರಗಳ ವ್ಯಸನಕ್ಕೆ ಬಲಿಯಾಗಿದ್ದಾರೆ, ಅನೈತಿಕತೆಯಲ್ಲಿ ಒಳಗೂಡಿದ್ದಾರೆ. ತಾವು ಮಾಡುತ್ತಿರುವುದು ಯೆಹೋವನಿಗೆ ಕಾಣುವುದಿಲ್ಲ ಎಂಬುದು ಅವರೆಣಿಕೆ. ತಮ್ಮ ದುರ್ನಡತೆಯನ್ನು ಯೆಹೋವನಿಂದ ಮುಚ್ಚಿಡಸಾಧ್ಯವೆಂದು ನೆನಸುವುದು ಎಂಥ ಮೂರ್ಖತನ! (ಜ್ಞಾನೋ. 15:3; ಇಬ್ರಿಯ 4:13 ಓದಿ.) ಇಂಥವರಿಗೆ ನೆರವಿನ ಅಗತ್ಯವಿದೆ. ಅವರಿಗೆ ನೆರವಾಗುವಂತೆ ಯೆಹೋವನು ತನ್ನ ಭೂಪ್ರತಿನಿಧಿಗಳನ್ನು ಪ್ರೇರಿಸುತ್ತಾನೆ. (ಗಲಾ. 6:1) ಪಾತಕ ಕೃತ್ಯಗಳನ್ನು ಮಾಡುವವರ ಪೌರತ್ವವನ್ನು ಮಾನವ ಸರ್ಕಾರ ರದ್ದುಗೊಳಿಸುತ್ತದೆ. ಅದೇ ರೀತಿ ಪಶ್ಚಾತ್ತಾಪಪಡದೆ ತನ್ನ ನಿಯಮಗಳನ್ನು ಪದೇ ಪದೇ ಮುರಿಯುವವರ ಪೌರತ್ವವನ್ನು ಯೆಹೋವನು ರದ್ದುಗೊಳಿಸುತ್ತಾನೆ.b (1 ಕೊರಿಂ. 5:11-13) ಆದರೆ ಆತನು ಕರುಣಾಮಯಿ. ಪಶ್ಚಾತ್ತಾಪಪಟ್ಟು ತಿದ್ದಿಕೊಳ್ಳುವವರು ತನ್ನ ಮುಂದೆ ಶುದ್ಧ ನಿಲುವನ್ನು ಪಡೆಯುವಂತೆ ಮತ್ತು ತನ್ನ ರಾಜ್ಯದ ಪ್ರಜೆಗಳಾಗುವಂತೆ ಆತನು ಅವಕಾಶ ಕೊಡುತ್ತಾನೆ. (2 ಕೊರಿಂ. 2:5-8) ಇಂಥ ಪ್ರೀತಿಯ ಮಹಾ ರಾಜನ ಪ್ರಜೆಗಳಾಗಿರುವುದು ಎಂಥ ಸೌಭಾಗ್ಯ!
ದೇವರ ರಾಜ್ಯದ ಪ್ರಜೆಗಳು ಶಿಕ್ಷಣಕ್ಕೆ ಬೆಲೆಕೊಡುತ್ತಾರೆ
13. ದೇವರ ರಾಜ್ಯದ ಪ್ರಜೆಗಳು ಶಿಕ್ಷಣಕ್ಕೆ ಬೆಲೆಕೊಡುತ್ತಾರೆಂದು ಹೇಗೆ ತೋರಿಸುತ್ತಾರೆ?
13 ಅನೇಕ ಸರ್ಕಾರಗಳು ಪ್ರಜೆಗಳನ್ನು ವಿದ್ಯಾವಂತರನ್ನಾಗಿ ಮಾಡಲು ಕಠಿಣವಾಗಿ ಶ್ರಮಿಸುತ್ತವೆ. ಮೂಲಭೂತ ಶಿಕ್ಷಣ, ವೃತ್ತಿಶಿಕ್ಷಣ ಕೊಡಲು ಶಾಲೆಗಳನ್ನು ತೆರೆದಿವೆ. ಓದು, ಬರಹ ಕಲಿಸಿ ಉದ್ಯೋಗಕ್ಕೆ ನೆರವಾಗುವ ಇಂಥ ಐಹಿಕ ಶಿಕ್ಷಣವನ್ನು ದೇವರ ರಾಜ್ಯದ ಪ್ರಜೆಗಳು ಮಾನ್ಯಮಾಡುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಯೆಹೋವನು ಕೊಡುವ ಶಿಕ್ಷಣವನ್ನು ಗಣ್ಯಮಾಡುತ್ತಾರೆ. ಆತನು ಕ್ರೈಸ್ತ ಸಭೆಯ ಮೂಲಕ ಓದು-ಬರಹಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಾನೆ. ಮಕ್ಕಳಿಗೆ ಓದಿ ಹೇಳುವಂತೆ ಹೆತ್ತವರನ್ನು ಉತ್ತೇಜಿಸುತ್ತಾನೆ. ಪ್ರತಿ ಮೂರು ತಿಂಗಳಿಗೆ ನಂಬಿಗಸ್ತ ಆಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮೂಲಕ ಅನೇಕ ಪುಟಗಳಷ್ಟು ಬೈಬಲಾಧರಿತ ಮಾಹಿತಿಯನ್ನು ಪ್ರಕಾಶಿಸುತ್ತದೆ. ನೀವು ಪ್ರತಿ ದಿನ ಕೆಲವು ಪುಟಗಳನ್ನು ಓದಿದರೆ ಯೆಹೋವನು ಕೊಡುವ ಶಿಕ್ಷಣದಿಂದ ಹೆಚ್ಚು ಪ್ರಯೋಜನ ಪಡೆಯಬಲ್ಲಿರಿ.
14. (1) ನಾವು ಯಾವ ತರಬೇತಿಯನ್ನು ಪಡೆಯುತ್ತಿದ್ದೇವೆ? (2) ಕುಟುಂಬ ಆರಾಧನೆಗಾಗಿ ಕೊಡಲಾದ ಯಾವ ಸಲಹೆಯನ್ನು ನೀವು ಅನ್ವಯಿಸಿದ್ದೀರಿ?
14 ದೇವರ ರಾಜ್ಯದ ಪ್ರಜೆಗಳು ಪ್ರತಿ ವಾರ ಸಭಾ ಕೂಟಗಳಲ್ಲಿ ತರಬೇತಿ ಪಡೆಯುತ್ತಾರೆ. ಉದಾಹರಣೆಗೆ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ 60ಕ್ಕಿಂತ ಹೆಚ್ಚು ವರ್ಷಗಳಿಂದ ದೇವರ ವಾಕ್ಯದ ಉತ್ತಮ ಬೋಧಕರಾಗುವಂತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ. ನೀವು ಈ ಶಾಲೆಗೆ ಹೆಸರು ಕೊಟ್ಟಿದ್ದೀರಾ? ಇತ್ತೀಚೆಗೆ ನಂಬಿಗಸ್ತ ಆಳು ನಮ್ಮನ್ನು ಪ್ರತಿ ವಾರ ಕುಟುಂಬ ಆರಾಧನೆ ನಡೆಸುವಂತೆ ಉತ್ತೇಜಿಸಿದೆ. ಈ ಏರ್ಪಾಡು ಕುಟುಂಬ ಬಂಧವನ್ನು ಬಲಗೊಳಿಸುತ್ತದೆ. ಕುಟುಂಬ ಆರಾಧನಾ ಸಂಜೆಗಾಗಿ ಪ್ರಕಾಶನಗಳಲ್ಲಿ ಕೊಡಲಾದ ಸಲಹೆಗಳನ್ನು ನೀವು ಅನ್ವಯಿಸಿದ್ದೀರಾ?c
15. ಯಾವ ಅತಿ ದೊಡ್ಡ ಸುಯೋಗ ನಮಗಿದೆ?
15 ಒಂದು ದೇಶದ ಪ್ರಜೆಗಳು ತಮಗಿಷ್ಟವಾದ ರಾಜಕೀಯ ಪಕ್ಷಕ್ಕೆ ಇತರರ ಬೆಂಬಲ ಪಡೆಯಲು ಬೀದಿಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ. ಮನೆ ಮನೆಗೂ ಹೋಗುತ್ತಾರೆ. ದೇವರ ರಾಜ್ಯದ ಪ್ರಜೆಗಳು ಆತನ ರಾಜ್ಯದ ಕುರಿತು ಹೆಚ್ಚು ವ್ಯಾಪಕವಾಗಿ ಬೀದಿ ಬೀದಿಗಳಲ್ಲೂ ಮನೆ ಮನೆಗಳಲ್ಲೂ ಪ್ರಕಟಿಸುವ ಮೂಲಕ ಅದನ್ನು ಬೆಂಬಲಿಸುತ್ತಾರೆ. ಹಿಂದಿನ ಲೇಖನದಲ್ಲಿ ನೋಡಿದಂತೆ ಯೆಹೋವನ ರಾಜ್ಯವನ್ನು ಪ್ರಕಟಿಸುವ ಕಾವಲಿನಬುರುಜು ಪತ್ರಿಕೆ ಭೂಮಿಯ ಮೇಲೆ ಹೆಚ್ಚು ವ್ಯಾಪಕವಾಗಿ ವಿತರಣೆಯಾಗುತ್ತಿರುವ ಪತ್ರಿಕೆ! ದೇವರ ರಾಜ್ಯದ ಕುರಿತು ಇತರರಿಗೆ ತಿಳಿಸುವುದು ನಮಗಿರುವ ಅತಿ ದೊಡ್ಡ ಸುಯೋಗವಾಗಿದೆ. ನೀವು ಈ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುತ್ತೀರಾ?—ಮತ್ತಾ. 28:19, 20.
16. ನೀವು ದೇವರ ರಾಜ್ಯದ ಉತ್ತಮ ಪ್ರಜೆ ಎಂದು ಹೇಗೆ ತೋರಿಸಬಲ್ಲಿರಿ?
16 ಅತಿ ಶೀಘ್ರದಲ್ಲಿ ಭೂಮಿಯ ಮೇಲೆ ದೇವರ ರಾಜ್ಯವೊಂದೇ ಆಳ್ವಿಕೆ ನಡೆಸುವುದು. ಅದು ಆಧ್ಯಾತ್ಮಿಕವಾಗಿಯೂ ಸಾಮಾಜಿಕವಾಗಿಯೂ ದೈನಂದಿನ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಮೇಲ್ವಿಚಾರಣೆ ನಡೆಸುವುದು. ಆ ಸಮಯದಲ್ಲಿ ನೀವು ದೇವರ ರಾಜ್ಯದ ಉತ್ತಮ ಪ್ರಜೆಗಳಾಗಿರುವಿರೋ? ಅದನ್ನು ಸಾಬೀತುಪಡಿಸುವ ಸಮಯ ಇದೇ ಆಗಿದೆ. ಆದ್ದರಿಂದ ದಿನನಿತ್ಯ ನೀವು ಯಾವುದೇ ನಿರ್ಣಯ ಮಾಡಲಿ ಏನೇ ಕೆಲಸ ಮಾಡಲಿ ಎಲ್ಲವನ್ನು ಯೆಹೋವ ದೇವರ ಮಹಿಮೆಗಾಗಿ ಮಾಡಿರಿ. ಹೀಗೆ ದೇವರ ರಾಜ್ಯದ ಉತ್ತಮ ಪ್ರಜೆಯಾಗಿ ಮುಂದುವರಿಯುತ್ತಿದ್ದೀರೆಂದು ತೋರಿಸಿರಿ.—1 ಕೊರಿಂ. 10:31.
[ಪಾದಟಿಪ್ಪಣಿಗಳು]
a ಉದಾಹರಣೆಗೆ, ಎಚ್ಚರ! 2012, ಜನವರಿ-ಮಾರ್ಚ್ ಪುಟ 14-21 ಮತ್ತು 2012 ಜುಲೈ-ಸೆಪ್ಟೆಂಬರ್ ಪುಟ 29-32 ನೋಡಿ.
b 2012, ಮಾರ್ಚ್ 15ರ ಕಾವಲಿನಬುರುಜು ಪುಟ 30-31 ನೋಡಿ.
c 2011, ಆಗಸ್ಟ್ 15ರ ಕಾವಲಿನಬುರುಜು ಪುಟ 6-7 ಮತ್ತು 2011ರ ಜನವರಿ ತಿಂಗಳ ನಮ್ಮ ರಾಜ್ಯ ಸೇವೆ ಪುಟ 3-6 ನೋಡಿ.
[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರ]
ಇಂಟರ್ನೆಟ್ ವಿಷಯದಲ್ಲಿ ಕೊಡಲಾಗುವ ಬೈಬಲಾಧರಿತ ಎಚ್ಚರಿಕೆಗಳಿಗೆ ಕಿವಿಗೊಡುತ್ತೀರೋ?
[ಪುಟ 12ರಲ್ಲಿರುವ ಚಿತ್ರ]
ಕೋರಹನ ಮಕ್ಕಳಂತೆ ಸತ್ಯಾರಾಧನೆಯಲ್ಲಿ ಮತ್ತು ಅದರ ಇತಿಹಾಸ ತಿಳಿಯುವುದರಲ್ಲಿ ನೀವು ಆನಂದಿಸುತ್ತೀರೋ?
[ಪುಟ 15ರಲ್ಲಿರುವ ಚಿತ್ರ]
ದೇವರ ರಾಜ್ಯದ ಉತ್ತಮ ಪ್ರಜೆಯಾಗಲು ಕುಟುಂಬ ಆರಾಧನಾ ಸಂಜೆ ನಿಮಗೂ ನಿಮ್ಮ ಮನೆಮಂದಿಗೂ ಬಹಳ ನೆರವಾಗುವುದು