ವಿವೇಚನಾ ಶಕ್ತಿಯನ್ನು ಬೆಳೆಸಿಕೊಳ್ಳಿರಿ
“ನಿಮ್ಮ ವಿವೇಚನಾ ಶಕ್ತಿಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.”—ಫಿಲಿಪ್ಪಿ 4:5, NW.
1. ಇಂದಿನ ಲೋಕದಲ್ಲಿ ವಿವೇಚನೆಯುಳ್ಳವರಾಗಿರುವುದು ಯಾಕೆ ಒಂದು ಸವಾಲಾಗಿದೆ?
“ವಿವೇಚನೆಯುಳ್ಳ ಮನುಷ್ಯನು”—ಇಂಗ್ಲಿಷ್ ಪತ್ರಿಕೋದ್ಯೋಗಿ ಸರ್ ಆ್ಯಲೆನ್ ಪ್ಯಾಟ್ರಿಕ್ ಹರ್ಬರ್ಟ್ ಅವನನ್ನು ಒಬ್ಬ ಕಾಲ್ಪನಿಕ ವ್ಯಕ್ತಿಯೆಂದು ಕರೆದನು. ನಿಜವಾಗಿಯೂ, ಕಲಹದಿಂದ ತುಂಬಿದ ಈ ಲೋಕದಲ್ಲಿ ವಿವೇಚನೆಯುಳ್ಳ ಯಾವುದೇ ಜನರು ಇನ್ನೂ ಉಳಿದಿಲ್ಲವೆಂದು ಕೆಲವೊಮ್ಮೆ ತೋರಬಹುದು. ಈ ಕಠಿನವಾದ “ಕಡೇ ದಿವಸಗಳಲ್ಲಿ” ಜನರು “ಉಗ್ರತೆಯುಳ್ಳವರೂ,” “ದುಡುಕಿನವರೂ,” ಮತ್ತು “ಸಮಾಧಾನವಾಗದವರೂ”—ಬೇರೆ ಮಾತುಗಳಲ್ಲಿ, ವಿವೇಚನೆಯೇ ಇಲ್ಲದವರಾಗಿರುವರೆಂದು ಬೈಬಲ್ ಮುಂತಿಳಿಸಿತು. (2 ತಿಮೊಥೆಯ 3:1-5) ಆದರೂ, ನಿಜ ಕ್ರೈಸ್ತರು ವಿವೇಚನಾ ಶಕ್ತಿಯನ್ನು—ಅದು ದೈವಿಕ ವಿವೇಕದ ಒಂದು ಗುರುತೆಂದು ತಿಳಿಯುತ್ತಾ—ಉನ್ನತ ಗೌರವದಿಂದ ಕಾಣುತ್ತಾರೆ. (ಯಾಕೋಬ 3:17) ವಿವೇಚನೆರಹಿತ ಲೋಕದಲ್ಲಿ ವಿವೇಚನೆಯುಳ್ಳವರಾಗಿರುವುದು ಅಸಾಧ್ಯವೆಂದು ನಮಗನಿಸುವುದಿಲ್ಲ. ಬದಲಿಗೆ, ಫಿಲಿಪ್ಪಿ 4:5 ರಲ್ಲಿ ಕಂಡುಕೊಳ್ಳಲ್ಪಡುವ ಅಪೊಸ್ತಲ ಪೌಲನ ಪ್ರೇರಿತ ಸಲಹೆಯಲ್ಲಿನ ಸವಾಲನ್ನು ನಾವು ಸಂಪೂರ್ಣವಾಗಿ ಸ್ವೀಕರಿಸುತ್ತೇವೆ: “ನಿಮ್ಮ ವಿವೇಚನಾ ಶಕ್ತಿಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.”
2. ನಾವು ವಿವೇಚನೆಯುಳ್ಳವರಾಗಿದ್ದೇವೊ ಇಲ್ಲವೊ ಎಂದು ನಿರ್ಣಯಿಸಲು ಫಿಲಿಪ್ಪಿ 4:5 ರಲ್ಲಿರುವ ಅಪೊಸ್ತಲ ಪೌಲನ ಮಾತುಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?
2 ನಾವು ವಿವೇಚನೆಯುಳ್ಳವರಾಗಿದ್ದೇವೊ ಇಲ್ಲವೊ ಎಂಬುದನ್ನು ಪರೀಕ್ಷಿಸಲು, ಪೌಲನ ಮಾತುಗಳು ನಮಗೆ ಹೇಗೆ ಸಹಾಯಮಾಡುತ್ತವೆ ಎಂಬುದನ್ನು ಗಮನಿಸಿರಿ. ನಾವು ನಮ್ಮನ್ನು ಹೇಗೆ ವೀಕ್ಷಿಸಿಕೊಳ್ಳುತ್ತೇವೆ ಎಂಬುದು ದೊಡ್ಡ ಪ್ರಶ್ನೆಯಾಗಿರುವುದಿಲ್ಲ, ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೆ, ನಾವು ಹೇಗೆ ತಿಳಿಯಲ್ಪಡುತ್ತೇವೆ ಎಂಬುದು ಒಂದು ಪ್ರಶ್ನೆಯಾಗಿರುತ್ತದೆ. ಈ ವಚನವನ್ನು ಫಿಲಿಪ್ಸ್ ಭಾಷಾಂತರವು ಹೀಗೆ ಭಾಷಾಂತರಿಸುತ್ತದೆ: “ವಿವೇಚನೆಯುಳ್ಳವರಾಗಿರುವುದಕ್ಕಾಗಿ ಸತ್ಕೀರ್ತಿಯನ್ನು ಹೊಂದಿರ್ರಿ.” ನಮ್ಮಲ್ಲಿ ಪ್ರತಿಯೊಬ್ಬರು, ‘ನಾನು ಹೇಗೆ ತಿಳಿಯಲ್ಪಡುತ್ತೇನೆ? ವಿವೇಚನೆಯುಳ್ಳವನೂ, ಬಗ್ಗುವವನೂ, ಮತ್ತು ಕೋಮಲನೂ ಎಂಬ ಪ್ರಸಿದ್ಧಿ ನನಗಿದೆಯೊ? ಅಥವಾ ನಾನು ಅನಮ್ಯನೂ, ಕಠೋರನೂ, ಅಥವಾ ಅತಿಹಠಮಾರಿಯೂ ಎಂಬುದಾಗಿ ತಿಳಿಯಲ್ಪಡುತ್ತೇನೊ?’ ಎಂಬುದಾಗಿ ಕೇಳಿಕೊಳ್ಳಬಹುದು.
3. (ಎ) “ವಿವೇಚನೆಯುಳ್ಳ” ಎಂಬುದಾಗಿ ಭಾಷಾಂತರಿಸಲಾದ ಗ್ರೀಕ್ ಪದವು ಏನನ್ನು ಅರ್ಥೈಸುತ್ತದೆ, ಮತ್ತು ಯಾಕೆ ಈ ಗುಣವು ಆಕರ್ಷಕವಾಗಿದೆ? (ಬಿ) ಹೆಚ್ಚು ವಿವೇಚನೆಯುಳ್ಳವನಾಗಿರಲು ಒಬ್ಬ ಕ್ರೈಸ್ತನು ಹೇಗೆ ಕಲಿಯಬಹುದು?
3 ಈ ವಿಷಯದಲ್ಲಿ ನಮ್ಮ ಪ್ರಸಿದ್ದಿಯು, ನಾವು ಯೇಸು ಕ್ರಿಸ್ತನನ್ನು ಅನುಕರಿಸುವ ಮಟ್ಟವನ್ನು ಮಾತ್ರ ಪ್ರತಿಬಿಂಬಿಸುವುದು. (1 ಕೊರಿಂಥ 11:1) ಭೂಮಿಯಲ್ಲಿರುವಾಗ ಯೇಸು, ವಿವೇಚನಾ ಶಕ್ತಿಯ ಕುರಿತಾದ ತನ್ನ ತಂದೆಯ ಶ್ರೇಷ್ಠ ಮಾದರಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಯೋಹಾನ 14:9) ವಾಸ್ತವದಲ್ಲಿ, ಅಪೊಸ್ತಲ ಪೌಲನು ‘ಕ್ರಿಸ್ತನ ಶಾಂತಮನಸ್ಸು ಮತ್ತು ಸಾತ್ವಿಕತದ್ವ’ ಕುರಿತು ಬರೆದಾಗ, ಸಾತ್ವಿಕತ್ವಕ್ಕಾಗಿ (ಎಪಿಯಿಕಿಎಸ್) ಅವನು ಬಳಸಿದ ಗ್ರೀಕ್ ಪದವು “ವಿವೇಚನಾ ಶಕ್ತಿ” ಯನ್ನು ಯಾ, ಅಕ್ಷರಶಃ, “ಬಗ್ಗುವುದು” ಎಂಬುದಾಗಿಯೂ ಅರ್ಥಕೊಡುತ್ತದೆ. (2 ಕೊರಿಂಥ 10:1) ಇದನ್ನು ದ ಎಕ್ಸ್ಪೊಸಿಟರ್ಸ್ ಬೈಬಲ್ ಕಾಮೆಂಟರಿಯು “ಹೊಸ ಒಡಂಬಡಿಕೆಯಲ್ಲಿ ಚಾರಿತ್ರ್ಯ ವರ್ಣನೆಯ ಮಹಾ ಪದಗಳಲ್ಲಿ ಒಂದು” ಎಂಬುದಾಗಿ ಕರೆಯುತ್ತದೆ. ಅದು ಎಷ್ಟೊಂದು ಇಷ್ಟವಾಗುವ ಗುಣವನ್ನು ವರ್ಣಿಸುತ್ತದೆ ಎಂದರೆ, ಒಬ್ಬ ಪಂಡಿತನು “ಸೊಗಸಾದ ವಿವೇಚನಾ ಶಕ್ತಿ” ಎಂಬ ಪದವನ್ನು ಬಳಸುತ್ತಾನೆ. ಆದುದರಿಂದ ನಾವು, ಯೇಸು ತನ್ನ ತಂದೆಯಾದ ಯೆಹೋವನಂತೆ, ವಿವೇಚನಾ ಶಕ್ತಿಯನ್ನು ಪ್ರದರ್ಶಿಸಿದ ಮೂರು ವಿಧಗಳನ್ನು ಚರ್ಚಿಸೋಣ. ಹೀಗೆ ಸ್ವತಃ ನಾವು ಹೇಗೆ ಅಧಿಕ ವಿವೇಚನೆಯುಳ್ಳವರಾಗಬಹುದೆಂದು ಕಲಿಯಬಹುದು.—1 ಪೇತ್ರ 2:21.
“ಕ್ಷಮಿಸಲು ಸಿದ್ಧನು”
4. ಯೇಸು ತನ್ನನ್ನು “ಕ್ಷಮಿಸಲು ಸಿದ್ಧ” ನೆಂದು ಹೇಗೆ ತೋರಿಸಿದನು?
4 ತನ್ನ ತಂದೆಯಂತೆ ಯೇಸು ಮೇಲಿಂದ ಮೇಲೆ “ಕ್ಷಮಿಸಲು ಸಿದ್ಧ” ನಾಗಿರುವ ಮೂಲಕ ವಿವೇಚನಾ ಶಕ್ತಿಯನ್ನು ತೋರಿಸಿದನು. (ಕೀರ್ತನೆ 86:5) ಒಬ್ಬ ಆಪ್ತ ಸಂಗಾತಿಯಾದ ಪೇತ್ರನು, ಯೇಸುವಿನ ಸೆರೆಹಿಡಿಯುವಿಕೆ ಮತ್ತು ನ್ಯಾಯವಿಚಾರಣೆಯ ರಾತ್ರಿಯಂದು ಯೇಸುವನ್ನು ಮೂರು ಬಾರಿ ಅಲ್ಲಗಳೆದ ಸಮಯವನ್ನು ಪರಿಗಣಿಸಿರಿ. ಸ್ವತಃ ಯೇಸುವೇ ಈ ಹಿಂದೆ ಹೇಳಿದ್ದು: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” (ಮತ್ತಾಯ 10:33) ಈ ನಿಯಮವನ್ನು ಯೇಸು ಪೇತ್ರನ ವಿಷಯದಲ್ಲಿ ಅನಮ್ಯವಾಗಿಯೂ ಕರುಣಾರಹಿತವಾಗಿಯೂ ಅನ್ವಯಿಸಿದನೊ? ಇಲ್ಲ; ತನ್ನ ಪುನರುತ್ಥಾನದ ಅನಂತರ—ನಿಸ್ಸಂದೇಹವಾಗಿ ಪಶ್ಚಾತಾಪ್ತಪಟ್ಟಿರುವ, ಎದೆಯೊಡೆದ ಈ ಅಪೊಸ್ತಲನನ್ನು ಸಾಂತ್ವನಿಸಲು ಮತ್ತು ಪುನರ್ಆಶ್ವಾಸನೆಯನ್ನು ನೀಡಲು—ಯೇಸು ಪೇತ್ರನಿಗೆ ಒಂದು ವೈಯಕ್ತಿಕ ಭೇಟಿಯನ್ನು ನೀಡಿದನು. (ಲೂಕ 24:34; 1 ಕೊರಿಂಥ 15:5) ಸ್ವಲ್ಪ ಸಮಯದ ತರುವಾಯ, ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುವಂತೆ ಯೇಸು ಪೇತ್ರನನ್ನು ಅನುಮತಿಸಿದನು. (ಅ. ಕೃತ್ಯಗಳು 2:1-41) ಇಲ್ಲಿ ಅತ್ಯಂತ ಸೊಗಸಾದ ವಿವೇಚನಾ ಶಕ್ತಿಯು ಪ್ರದರ್ಶಿತವಾಯಿತು! ಯೆಹೋವನು ಎಲ್ಲ ಮಾನವಜಾತಿಯ ಮೇಲೆ ಯೇಸುವನ್ನು ನ್ಯಾಯಧೀಶನಂತೆ ನೇಮಿಸಿದ್ದಾನೆಂದು ಯೋಚಿಸುವುದು ಸಾಂತ್ವನದಾಯಕವಾಗಿಲ್ಲವೊ?—ಯೆಶಾಯ 11:1-4; ಯೋಹಾನ 5:22.
5. (ಎ) ಕುರಿಗಳೊಳಗೆ ಹಿರಿಯರಿಗೆ ಯಾವ ಸತ್ಕೀರ್ತಿ ಇರಬೇಕು? (ಬಿ) ನ್ಯಾಯ ವಿಚಾರಣೆಯ ವಿದ್ಯಮಾನಗಳನ್ನು ನಿರ್ವಹಿಸುವ ಮೊದಲು ಹಿರಿಯರು ಯಾವ ವಿಷಯವನ್ನು ವಿಮರ್ಶಿಸಬಹುದು, ಮತ್ತು ಯಾಕೆ?
5 ಸಭೆಯಲ್ಲಿ ಹಿರಿಯರು ನ್ಯಾಯಧೀಶರಂತೆ ಕ್ರಿಯೆನಡಿಸುವಾಗ, ಅವರು ಯೇಸುವಿನ ವಿವೇಚನೆಯುಳ್ಳ ಮಾದರಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ದಂಡಿಸುವವರೋಪಾದಿ ಅವರಿಗೆ ಕುರಿಗಳು ಭಯಪಡುವುದನ್ನು ಅವರು ಇಷ್ಟಪಡುವುದಿಲ್ಲ. ಬದಲಿಗೆ, ಪ್ರೀತಿಯ ಕುರುಬರಂತೆ ಅವರೊಂದಿಗೆ ಕುರಿಗಳು ಸುರಕ್ಷಿತ ಅನಿಸಿಕೆಯನ್ನು ಅನುಭವಿಸುವಂತೆ ಅವರು ಯೇಸುವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ನ್ಯಾಯ ನಿರ್ಣಾಯಕ ವಿದ್ಯಮಾನಗಳಲ್ಲಿ, ವಿವೇಚನೆಯುಳ್ಳವರಾಗಿರಲು, ಕ್ಷಮಿಸಲಿಕ್ಕಾಗಿ ಸಿದ್ಧರಾಗಿರಲು ಎಲ್ಲ ಪ್ರಯತ್ನವನ್ನು ಅವರು ಮಾಡುತ್ತಾರೆ. ಅಂತಹ ಒಂದು ವಿಷಯವನ್ನು ನಿರ್ವಹಿಸುವ ಮುಂಚೆ, ಅಕ್ಟೋಬರ 1, 1992ರ ಕಾವಲಿನಬುರುಜು ಪತ್ರಿಕೆಯ, “ಯೆಹೋವ, ನಿಷ್ಪಕ್ಷಪಾತನಾದ ‘ಸರ್ವಲೋಕಕ್ಕೆ ನ್ಯಾಯತೀರಿಸುವವನು’”, ಮತ್ತು “ಹಿರಿಯರೇ, ನೀತಿಯಿಂದ ನ್ಯಾಯತೀರಿಸಿರಿ,” ಎಂಬ ಲೇಖನಗಳನ್ನು ವಿಮರ್ಶಿಸುವುದು ಸಹಾಯಕಾರಿಯೆಂದು ಕೆಲವು ಹಿರಿಯರು ಕಂಡುಕೊಂಡಿದ್ದಾರೆ. ಹೀಗೆ ಅವರು ಯೆಹೋವನ ನ್ಯಾಯತೀರಿಸುವ ವಿಧದ ಸಾರಾಂಶವನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ: “ಎಲ್ಲಿ ಅಗತ್ಯವೊ ಅಲ್ಲಿ ದೃಢತೆ, ಎಲ್ಲಿ ಸಾಧ್ಯವೊ ಅಲ್ಲಿ ಕರುಣೆ.” ನ್ಯಾಯವಿಚಾರಣೆಯಲ್ಲಿ ಕರುಣೆಯ ಕಡೆಗೆ ಬಾಗುವ ನ್ಯಾಯಸಮ್ಮತ ಆಧಾರವಿರುವಲ್ಲಿ ಹಾಗೆ ಮಾಡುವುದು ತಪ್ಪಾಗಿರುವುದಿಲ್ಲ. (ಮತ್ತಾಯ 12:7) ಕಠೋರವಾಗಿ ಯಾ ಕರುಣಾರಹಿತವಾಗಿರುವುದು ಘೋರವಾದ ತಪ್ಪಾಗಿದೆ. (ಯೆಹೆಜ್ಕೇಲ 34:4) ಹೀಗೆ, ನ್ಯಾಯದ ಮೇರೆಯೊಳಗೆ ಸಾಧ್ಯವಾದ ಅತ್ಯಂತ ಪ್ರೀತಿಪರ, ಕರುಣಾಮಯ ಮಾರ್ಗವನ್ನು ಸಕ್ರಿಯವಾಗಿ ಹುಡುಕುವ ಮೂಲಕ ಹಿರಿಯರು ತಪ್ಪುಮಾಡುವುದನ್ನು ತ್ಯಜಿಸುತ್ತಾರೆ.—ಹೋಲಿಸಿ ಮತ್ತಾಯ 23:23; ಯಾಕೋಬ 2:13.
ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಎದುರಿಸುವಾಗ ಬಾಗುವುದು
6. ಯಾರ ಮಗಳಿಗೆ ದೆವ್ವ ಹಿಡಿದಿತ್ತೊ ಆ ಅನ್ಯಜನಾಂಗದ ಸ್ತ್ರೀಯೊಂದಿಗೆ ನಿಭಾಯಿಸುವಾಗ ಯೇಸು ವಿವೇಚನಾ ಶಕ್ತಿಯನ್ನು ಹೇಗೆ ಪ್ರದರ್ಶಿಸಿದನು?
6 ಯೆಹೋವನಂತೆ ಯೇಸು, ಕಾರ್ಯಗತಿಯನ್ನು ಬದಲಿಸಲು ಯಾ ಹೊಸ ಸನ್ನಿವೇಶಗಳು ಎದ್ದಂತೆ ಅವುಗಳಿಗೆ ಹೊಂದಿಕೊಳ್ಳಲು ಕ್ಷಿಪ್ರನಾಗಿ ಪರಿಣಮಿಸಿದನು. ಒಂದು ಸಂದರ್ಭದಲ್ಲಿ ಒಬ್ಬಾಕೆ ಗ್ರೀಕ್ ಸ್ತ್ರೀಯು ಬಹುಕಾಟದ ದೆವ್ವ ಹಿಡಿದ ಅವಳ ಮಗಳನ್ನು ಸ್ವಸ್ಥಮಾಡುವಂತೆ ಅವನನ್ನು ಬೇಡಿಕೊಂಡಳು. ಮೂರು ವಿಭಿನ್ನ ರೀತಿಗಳಲ್ಲಿ, ಆಕೆಗೆ ಸಹಾಯ ಮಾಡುವುದಿಲ್ಲ ಎಂಬುದನ್ನು ಯೇಸು ಆರಂಭದಲ್ಲಿ ಸೂಚಿಸಿದನು—ಪ್ರಥಮವಾಗಿ, ಆಕೆಗೆ ಉತ್ತರ ಕೊಡಲು ತಡೆಯುವುದರಿಂದ, ಎರಡನೆಯದಾಗಿ, ಅವನು ಅನ್ಯಜನಾಂಗಗಳಿಗಾಗಿ ಅಲ್ಲ ಯೆಹೂದ್ಯರಿಗಾಗಿ ಕಳುಹಿಸಲ್ಪಟ್ಟಿದ್ದನೆಂದು ನೇರವಾಗಿ ಹೇಳುವ ಮೂಲಕ; ಮತ್ತು ಮೂರನೆಯದಾಗಿ, ಅದೇ ಅಂಶವನ್ನು ದಯೆಯಿಂದ ದೃಢಪಡಿಸಿದ ದೃಷ್ಟಾಂತವನ್ನು ಕೊಡುವ ಮೂಲಕ. ಹಾಗಿದ್ದರೂ, ಅಸಾಧಾರಣವಾದ ನಂಬಿಕೆಯ ಪ್ರಮಾಣವನ್ನು ಕೊಡುತ್ತಾ, ಈ ಎಲ್ಲ ವಿಷಯಗಳ ಉದ್ದಕ್ಕೂ ಆ ಸ್ತ್ರೀಯು ಬಿಡದೆ ಪಟ್ಟುಹಿಡಿದಳು. ಈ ವಿಶೇಷವಾದ ಪರಿಸ್ಥಿತಿಯನ್ನು ಪರಿಗಣಿಸುತ್ತಾ, ಇದು ಸಾಮಾನ್ಯವಾದ ನಿಯಮವನ್ನು ಕಾರ್ಯರೂಪಕ್ಕೆ ತರುವ ಸಮಯ ಅಲ್ಲವೆಂದು ಯೇಸು ನೋಡಶಕ್ತನಾದನು; ಅದು ಉನ್ನತವಾದ ತತ್ವಗಳಿಗೆ ಪ್ರತಿಕ್ರಿಯೆಯಲ್ಲಿ ಬಾಗುವ ಸಮಯವಾಗಿತ್ತು.a ಹೀಗೆ, ಯೇಸು ಮೂರು ಬಾರಿ ಏನನ್ನು ಮಾಡುವುದಿಲ್ಲವೆಂದು ಸೂಚಿಸಿದ್ದನೊ ನಿಖರವಾಗಿ ಅದನ್ನೇ ಮಾಡಿದನು. ಆ ಸ್ತ್ರೀಯ ಮಗಳನ್ನು ಗುಣಪಡಿಸಿದನು!—ಮತ್ತಾಯ 15:21-28.
7. ಹೆತ್ತವರು ಯಾವ ವಿಧಗಳಲ್ಲಿ ವಿವೇಚನಾ ಶಕ್ತಿಯನ್ನು ತೋರಿಸಬಹುದು, ಮತ್ತು ಯಾಕೆ?
7 ಸೂಕ್ತವಾಗಿರುವಾಗ ಬಾಗುವ ಇಚ್ಛೆಗಾಗಿ ನಾವು ಅಂತೆಯೇ ಹೆಸರುವಾಸಿಯಾಗಿದ್ದೇವೊ? ಹೆತ್ತವರು ಆಗಿಂದಾಗ್ಗೆ ಅಂತಹ ವಿವೇಚನಾ ಶಕ್ತಿಯನ್ನು ತೋರಿಸುವ ಅಗತ್ಯವಿದೆ. ಪ್ರತಿ ಮಗುವು ಅಪೂರ್ವವಾಗಿರುವುದರಿಂದ, ಒಂದು ಮಗುವಿನೊಂದಿಗೆ ಯಶಸ್ವಿಕರವಾಗಿರುವ ವಿಧಾನಗಳು ಇನ್ನೊಂದು ಮಗುವಿಗೆ ಸೂಕ್ತವಾಗದಿರಬಹುದು. ಇನ್ನೂ ಹೆಚ್ಚಾಗಿ, ಮಕ್ಕಳು ಬೆಳೆದಂತೆ, ಅವರ ಅಗತ್ಯಗಳು ಬದಲಾಗುತ್ತವೆ. ಮಕ್ಕಳು ಮನೆಗೆ ಹಿಂದಿರುಗಬೇಕಾದ ಸಮಯವನ್ನು ಸರಿಹೊಂದಿಸಬೇಕೊ? ಹೆಚ್ಚು ಉತ್ಸಾಹವುಳ್ಳ ವಿಧಾನದಿಂದ ಕುಟುಂಬ ಅಧ್ಯಯನವು ಪ್ರಯೋಜನಪಡೆಯುವುದೊ? ಯಾವುದೊ ಅಲ್ಪ ತಪ್ಪಿಗಾಗಿ ಹೆತ್ತವರಲ್ಲೊಬ್ಬರು ಅತಿಯಾಗಿ ಪ್ರತಿಕ್ರಿಯಿಸುವಾಗ, ಅವನು ಯಾ ಅವಳು ದೀನರಾಗಿರಲು ಮತ್ತು ವಿಷಯಗಳನ್ನು ಸರಿಪಡಿಸಲು ಬಯಸುವರೊ? ಇಂತಹ ರೀತಿಗಳಲ್ಲಿ ಬಗ್ಗುವ ಹೆತ್ತವರು, ತಮ್ಮ ಮಕ್ಕಳಿಗೆ ಅನಾವಶ್ಯವಾಗಿ ಕಿರುಕುಳಕೊಡುವುದನ್ನು ಮತ್ತು ಯೆಹೋವನಿಂದ ಅವರನ್ನು ದೂರಮಾಡುವುದನ್ನು ತ್ಯಜಿಸುತ್ತಾರೆ.—ಎಫೆಸ 6:4.
8. ಟೆರಿಟೊರಿಯ ಅಗತ್ಯಗಳಿಗೆ ಹೊಂದಿಕೊಳ್ಳುವಲ್ಲಿ ಸಭಾ ಹಿರಿಯರು ಹೇಗೆ ನಾಯಕತ್ವವನ್ನು ತೆಗೆದುಕೊಳ್ಳಬಹುದು?
8 ಹಿರಿಯರು ಕೂಡ, ದೇವರ ನಿರ್ದಿಷ್ಟ ನಿಯಮಗಳ ಒಪ್ಪಂದ ಎಂದಿಗೂ ಮಾಡದಿದ್ದಾಗ್ಯೂ, ಹೊಸ ಪರಿಸ್ಥಿತಿಗಳು ಎದ್ದಂತೆ ಹೊಂದಿಕೊಳ್ಳುವ ಅಗತ್ಯವಿದೆ. ಸಾರುವ ಕಾರ್ಯದ ಮೇಲ್ವಿಚಾರಣೆಮಾಡುವಾಗ, ಟೆರಿಟೊರಿಯಲ್ಲಿನ ಬದಲಾವಣೆಗಳಿಗೆ ನೀವು ಎಚ್ಚರವುಳ್ಳವರಾಗಿದ್ದೀರೊ? ನೆರೆಹೊರೆಯಲ್ಲಿ ಜೀವನ ಶೈಲಿಗಳು ಬದಲಾದಂತೆ, ಬಹುಶಃ ಸಂಜೆ ಸಾಕ್ಷಿಕಾರ್ಯ, ರಸ್ತೆ ಸಾಕ್ಷಿಕಾರ್ಯ, ಅಥವಾ ಟೆಲಿಫೋನ್ ಸಾಕ್ಷಿಕಾರ್ಯವು ಪ್ರವರ್ತಿಸಲ್ಪಡಬೇಕು. ಇಂತಹ ರೀತಿಗಳಲ್ಲಿ ಹೊಂದಿಕೊಳ್ಳುವುದು ನಮ್ಮ ಸಾರುವ ನಿಯೋಗವನ್ನು ಅಧಿಕ ಪರಿಣಾಮಕಾರಿಯಾಗಿ ನೆರವೇರಿಸುವಂತೆ ನಮಗೆ ಸಹಾಯ ಮಾಡುತ್ತದೆ. (ಮತ್ತಾಯ 28:19, 20; 1 ಕೊರಿಂಥ 9:26) ತನ್ನ ಶುಶ್ರೂಷೆಯಲ್ಲಿ ಎಲ್ಲ ರೀತಿಯ ಜನರಿಗೆ ಹೊಂದಿಕೊಳ್ಳುವ ವಿಷಯವನ್ನು ಕೂಡ ಪೌಲನು ಹೇಳಿದನು. ಉದಾಹರಣೆಗೆ, ಜನರಿಗೆ ಸಹಾಯ ಮಾಡಲು ಶಕ್ತರಾಗುವಂತೆ, ಸ್ಥಳಿಕ ಧರ್ಮಗಳ ಮತ್ತು ಸಂಸ್ಕೃತಿಗಳ ಕುರಿತು ಸಾಕಷ್ಟು ಕಲಿಯುವ ಮೂಲಕ, ನಾವೂ ಅದನ್ನೇ ಮಾಡುತ್ತೇವೊ?—1 ಕೊರಿಂಥ 9:19-23.
9. ತಾನು ಗತಕಾಲದಲ್ಲಿ ನಿರ್ವಹಿಸಿದಂತೆಯೇ ಯಾವಾಗಲೂ ಸಮಸ್ಯೆಗಳನ್ನು ನಿರ್ವಹಿಸುವುದರ ಕುರಿತು ಒಬ್ಬ ಹಿರಿಯನು ಯಾಕೆ ಒತ್ತಾಯಿಸಬಾರದು?
9 ಈ ಕಡೇ ದಿವಸಗಳು ಇನ್ನೂ ಅಧಿಕ ಕಠಿನವಾದಂತೆ, ತಮ್ಮ ಹಿಂಡನ್ನು ಈಗ ಎದುರುಗೊಳ್ಳುತ್ತಿರುವ ಕೆಲವೊಂದು ಸಮಸ್ಯೆಗಳ ತಬ್ಬಿಬ್ಬುಗೊಳಿಸುವ ಕ್ಲಿಷ್ಟತೆ ಮತ್ತು ಮನಸ್ತಾಪಕ್ಕೆ ಹೊಂದಿಕೊಳ್ಳುವ ಅಗತ್ಯ ಕೂಡ ಕುರುಬರಿಗೆ ಇರಬಹುದು. (2 ತಿಮೊಥೆಯ 3:1) ಹಿರಿಯರೇ, ಇದು ಅನಮ್ಯವಾಗಿರುವ ಸಮಯವಲ್ಲ! ತನ್ನ ವಿಧಾನಗಳು ಅಪ್ರಭಾವಕಾರಿಯಾಗಿ ಪರಿಣಮಿಸಿರುವಲ್ಲಿ ಯಾ “ನಂಬಿಗಸ್ತ ಮತ್ತು ವಿವೇಕಿಯಾದ ಆಳು” ಅಂತಹ ವಿಷಯಗಳ ಕುರಿತು ಹೊಸ ವಿಚಾರವನ್ನು ಪ್ರಕಟಿಸುವುದು ಸೂಕ್ತವೆಂದು ಕಂಡಿರುವಾಗ, ತಾನು ಹಿಂದೆ ಸಮಸ್ಯೆಗಳನ್ನು ನಿಭಾಯಿಸಿದ ರೀತಿಯಲ್ಲಿಯೇ ಈಗ ಮಾಡಲು ಒಬ್ಬ ಹಿರಿಯನು ಖಂಡಿತವಾಗಿಯೂ ಒತ್ತಾಯಿಸಲಾರನು. (ಮತ್ತಾಯ 24:45; ಹೋಲಿಸಿ ಪ್ರಸಂಗಿ 7:10; 1 ಕೊರಿಂಥ 7:31.) ಒಬ್ಬ ಒಳ್ಳೆಯ ಕಿವಿಗೊಡುವವನ ಅಗತ್ಯವಿದ್ದ ಒಬ್ಬಾಕೆ ಹತಾಶ ಸಹೋದರಿಗೆ ಸಹಾಯ ನೀಡಲು ಒಬ್ಬ ನಂಬಿಗಸ್ತ ಹಿರಿಯನು ಪ್ರಾಮಾಣಿಕವಾಗಿ ಪ್ರಯತ್ನಿಸಿದನು. ಹಾಗಿದ್ದರೂ, ಅವನು ಆಕೆಯ ಖಿನ್ನತೆಯನ್ನು ಬಹಳ ಗಂಭೀರವಾಗಿ ಎಣಿಸಲಿಲ್ಲ ಮತ್ತು ಆಕೆಗೆ ಸರಳವಾದ ಪರಿಹಾರಗಳನ್ನು ನೀಡಿದನು. ಆಕೆಯ ಸಮಸ್ಯೆಯನ್ನೇ ನಿರ್ವಹಿಸಿದ ಬೈಬಲ್ ಆಧಾರಿತ ಮಾಹಿತಿಯನ್ನು ವಾಚ್ ಟವರ್ ಸೊಸೈಟಿಯು ಆಮೇಲೆ ಪ್ರಕಟಿಸಿತು. ಹೊಸ ವಿಚಾರವನ್ನು ಈ ಸಮಯ ಅನ್ವಯಿಸುತ್ತಾ ಮತ್ತು ಆಕೆಯ ಸ್ಥಿತಿಗಾಗಿ ಅನುಭೂತಿಯನ್ನು ತೋರಿಸುತ್ತಾ, ಆಕೆಯೊಂದಿಗೆ ಪುನಃ ಮಾತಾಡಲು ಹಿರಿಯನು ನಿಶ್ಚಯಿಸಿದನು. (ಹೋಲಿಸಿ 1 ಥೆಸಲೊನೀಕ 5:14, 15.) ವಿವೇಚನಾ ಶಕ್ತಿಯ ಎಂತಹ ಉತ್ತಮ ಮಾದರಿ!
10. (ಎ) ಪರಸ್ಪರವಾಗಿ ಮತ್ತು ಇಡೀಯಾಗಿ ಹಿರಿಯ ಮಂಡಲಿಯ ಕಡೆಗೆ ಬಗ್ಗುವ ಮನೋಭಾವವನ್ನು ಹಿರಿಯರು ಹೇಗೆ ತೋರಿಸಬೇಕು? (ಬಿ) ತಮ್ಮನ್ನು ವಿವೇಚನೆರಹಿತರೆಂದು ತೋರಿಸಿಕೊಳ್ಳುವವರನ್ನು ಹಿರಿಯರ ಮಂಡಲಿಯು ಹೇಗೆ ವೀಕ್ಷಿಸಬೇಕು?
10 ಹಿರಿಯರು ಸಹ ಒಬ್ಬರಿಗೊಬ್ಬರ ಕಡೆಗೆ ಬಗ್ಗುವ ಮನೋಭಾವವನ್ನು ತೋರಿಸುವ ಅಗತ್ಯವಿದೆ. ಹಿರಿಯರ ಮಂಡಲಿಯು ಕೂಡಿಬರುವಾಗ, ಯಾವನೇ ಒಬ್ಬ ಹಿರಿಯನು ಕಾರ್ಯವಿಧಾನಗಳ ಮೇಲೆ ಅಧಿಕಾರ ನಡೆಸದೆ ಇರುವುದು ಎಷ್ಟು ಪ್ರಾಮುಖ್ಯವು! (ಲೂಕ 9:48) ಅಧ್ಯಕ್ಷತೆ ವಹಿಸುತ್ತಿರುವವನಿಗೆ ವಿಶೇಷವಾಗಿ ಈ ಸಂಬಂಧದಲ್ಲಿ ನಿಗ್ರಹದ ಅಗತ್ಯವಿದೆ. ಹಿರಿಯರ ಸಂಪೂರ್ಣ ಮಂಡಲಿಯ ನಿರ್ಣಯದೊಂದಿಗೆ ಒಬ್ಬರು ಯಾ ಇಬ್ಬರು ಹಿರಿಯರು ಒಪ್ಪದಿದ್ದಲ್ಲಿ, ತಾವು ಬಯಸಿದಂತೆ ಆಗುವಂತೆ ಅವರು ಒತ್ತಾಯ ಪಡಿಸಲಾರರು. ಬದಲಿಗೆ, ಯಾವುದೇ ಶಾಸ್ತ್ರೀಯ ತತ್ವವು ಉಲ್ಲಂಘಿಸಲ್ಪಡದ ವರೆಗೆ, ವಿವೇಚನಾ ಶಕ್ತಿಯು ಹಿರಿಯರಿಂದ ಕೇಳಿಕೊಳ್ಳಲ್ಪಡುವ ಸಂಗತಿಯೆಂದು ಜ್ಞಾಪಿಸಿಕೊಳ್ಳುತ್ತಾ, ಅವರು ಬಗ್ಗುವರು. (1 ತಿಮೊಥೆಯ 3:2, 3) ಇನ್ನೊಂದು ಕಡೆಯಲ್ಲಿ, “ಅತಿಶ್ರೇಷ್ಠರಾದ ಅಪೊಸ್ತಲರು” ಎಂದು ತಮ್ಮನ್ನು ಸಾದರಪಡಿಸಿಕೊಂಡ ‘ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಂಡದ್ದಕ್ಕಾಗಿ’ ಪೌಲನು ಕೊರಿಂಥದ ಸಭೆಯನ್ನು ಗದರಿಸಿದನೆಂದು ಹಿರಿಯರ ಮಂಡಲಿಯು ನೆನಪಿನಲ್ಲಡಬೇಕು. (2 ಕೊರಿಂಥ 11:5, 19, 20) ಬಗ್ಗದ, ವಿವೇಚನೆರಹಿತ ರೀತಿಯಲ್ಲಿ ವರ್ತಿಸುವ ಒಬ್ಬ ಜೊತೆ ಹಿರಿಯನಿಗೆ ಸಲಹೆ ಕೊಡಲು ಅವರು ಸಿದ್ಧಮನಸ್ಸಿನವರಾಗಿರಬೇಕು, ಆದರೆ ಸ್ವತಃ ಅವರೇ ಹಾಗೆ ಮಾಡುವಲ್ಲಿ ದೀನರೂ ದಯೆಯುಳ್ಳವರೂ ಆಗಿರಬೇಕು.—ಗಲಾತ್ಯ 6:1.
ಅಧಿಕಾರದ ಪ್ರಯೋಗದಲ್ಲಿ ವಿವೇಚನಾ ಶಕ್ತಿ
11. ಯೇಸುವಿನ ದಿನಗಳಲ್ಲಿದ್ದ ಯೆಹೂದ್ಯ ಧಾರ್ಮಿಕ ನಾಯಕರು ಪ್ರಯೋಗಿಸಿದ ಅಧಿಕಾರದ ರೀತಿಯ ಮತ್ತು ಯೇಸು ಪ್ರಯೋಗಿಸಿದ ಅಧಿಕಾರದ ರೀತಿಯ ನಡುವೆ ಯಾವ ವ್ಯತ್ಯಾಸವಿತ್ತು?
11 ಯೇಸು ಭೂಮಿಯಲ್ಲಿದ್ದಾಗ, ದೇವದತ್ತ ಅಧಿಕಾರವನ್ನು ಅವನು ಚಲಾಯಿಸಿದ ರೀತಿಯಲ್ಲಿ ಅವನ ವಿವೇಚನಾ ಶಕ್ತಿಯು ನಿಜವಾಗಿಯೂ ಕಂಗೊಳಿಸಿತು. ತನ್ನ ದಿನದ ಧಾರ್ಮಿಕ ನಾಯಕರಿಗಿಂತ ಅವನು ಎಷ್ಟು ಭಿನ್ನನಾಗಿದ್ದನು! ಒಂದು ಉದಾಹರಣೆಯನ್ನು ಪರಿಗಣಿಸಿರಿ. ಯಾವ ಕೆಲಸವನ್ನೂ—ಕಟ್ಟಿಗೆಗಳ ಒಟ್ಟುಗೂಡಿಸುವಿಕೆಯನ್ನೂ—ಸಬ್ಬತ್ ದಿನದಂದು ಮಾಡಬಾರದೆಂದು ದೇವರ ನಿಯಮವು ಆಜ್ಞಾಪಿಸಿತ್ತು. (ವಿಮೋಚನಕಾಂಡ 20:10; ಅರಣ್ಯಕಾಂಡ 15:32-36) ಜನರು ಆ ನಿಯಮವನ್ನು ಹೇಗೆ ಅನ್ವಯಿಸಿದರು ಎಂಬುದನ್ನು ಧಾರ್ಮಿಕ ನಾಯಕರು ನಿಯಂತ್ರಿಸಲು ಬಯಸಿದರು. ಆದುದರಿಂದ ಸಬ್ಬತ್ ದಿನದಂದು ವ್ಯಕ್ತಿಯು ನಿಖರವಾಗಿ ಏನನ್ನು ಎತ್ತಬಹುದಿತ್ತು ಎಂಬುದನ್ನು ವಿಧಿಸುವ ಜವಾಬ್ದಾರಿಯನ್ನು ತಮ್ಮ ಮೇಲೆಯೇ ತೆಗೆದುಕೊಂಡರು. ಅವರು ವಿಧಿಸಿದ್ದು: ಒಣಗಿದ ಎರಡು ಅಂಜೂರಗಳಿಗಿಂತ ಭಾರವಾದ ಏನನ್ನೂ ಅಲ್ಲ. ಮೊಳೆಗಳ ಹೆಚ್ಚಿನ ಭಾರವನ್ನು ಎತ್ತುವುದು ಕೆಲಸವನ್ನು ಸೂಚಿಸುವುದೆಂದು ವಾದಿಸುತ್ತಾ, ಮೊಳೆಗಳಿರುವ ಮೆಟ್ಟುಗಳ ಮೇಲೆಯೂ ನಿರ್ಬಂಧವನ್ನು ಅವರು ವಿಧಿಸಿದರು! ಎಲ್ಲವನ್ನು ಸೇರಿಸಿ, ಸಬ್ಬತ್ನ ಕುರಿತು ದೇವರ ನಿಯಮಕ್ಕೆ ರಬ್ಬಿಗಳು 39 ನಿಯಮಗಳನ್ನು ಕೂಡಿಸಿದರು ಮತ್ತು ಆ ನಿಯಮಗಳಿಗೆ ಅಂತ್ಯವಿಲ್ಲದ ಜೋಡಣೆಗಳನ್ನು ಮಾಡಿದರು. ಇನ್ನೊಂದು ಕಡೆಯಲ್ಲಿ ಯೇಸು, ಅಂತ್ಯವಿಲ್ಲದ ನಿರ್ಬಂಧಿಸುವ ನಿಯಮಗಳನ್ನು ಇಡುವ ಮೂಲಕ ಯಾ ಅನಮ್ಯ, ಮುಟ್ಟಲಾಗದ ಮಟ್ಟಗಳನ್ನು ಸ್ಥಾಪಿಸುವ ಮೂಲಕ ಜನರನ್ನು ಅವಮಾನಗೊಳಿಸಿ ನಿಯಂತ್ರಿಸಲು ಬಯಸಲಿಲ್ಲ.—ಮತ್ತಾಯ 23:2-4; ಯೋಹಾನ 7:47-49.
12. ಯೆಹೋವನ ನೀತಿಯ ಮಟ್ಟಗಳ ವಿಷಯ ಬಂದಾಗ ಯೇಸು ಹೊಯ್ದಾಡಲಿಲ್ಲವೆಂದು ನಾವು ಯಾಕೆ ಹೇಳಬಲ್ಲೆವು?
12 ಹಾಗಾದರೆ, ಯೇಸು ದೇವರ ನೀತಿಯ ಮಟ್ಟಗಳನ್ನು ದೃಢವಾಗಿ ಎತ್ತಿಹಿಡಿಯಲಿಲ್ಲವೆಂದು ನಾವು ಊಹಿಸಿಕೊಳ್ಳಬೇಕೊ? ಅವನು ಖಂಡಿತವಾಗಿ ದೇವರ ಮಟ್ಟಗಳನ್ನು ಎತ್ತಿಹಿಡಿದನು! ಆ ನಿಯಮಗಳ ಹಿಂದಿರುವ ತತ್ವಗಳನ್ನು ಮಾನವರು ಹೃದಯಕ್ಕೆ ತೆಗೆದುಕೊಂಡಾಗ, ನಿಯಮಗಳು ಬಹಳ ಪರಿಣಾಮಕಾರಿಯಾಗಿರುತ್ತವೆ ಎಂದು ಅವನು ತಿಳಿದುಕೊಂಡನು. ಎಣಿಕೆಯಿಲ್ಲದ ನಿಯಮಗಳಿಂದ ಜನರನ್ನು ನಿಯಂತ್ರಿಸಲು ಪ್ರಯತ್ನಿಸುವ ಕುರಿತು ಫರಿಸಾಯರು ಚಿಂತಿಸುವಾಗ, ಯೇಸು ಹೃದಯಗಳನ್ನು ತಲಪಲು ಹುಡುಕಿದನು. ಉದಾಹರಣೆಗೆ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ,” ಎಂಬಂತಹ ದೈವಿಕ ನಿಯಮಗಳ ಕುರಿತು ಯಾವುದೇ ಬಗ್ಗುವಿಕೆ ಇರುವುದಿಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. (1 ಕೊರಿಂಥ 6:18) ಆದುದರಿಂದ ಅನೈತಿಕತೆಗೆ ನಡೆಸಬಹುದಾದ ಆಲೋಚನೆಗಳ ಕುರಿತು ಅವನು ಜನರನ್ನು ಎಚ್ಚರಿಸಿದನು. (ಮತ್ತಾಯ 5:28) ಕೇವಲ ಅನಮ್ಯ, ವಿಹಿತ ನಿಯಮಗಳನ್ನು ಸ್ಥಾಪಿಸುವುದಕ್ಕಿಂತ ಅಂತಹ ಬೋಧನೆಯು ಅತ್ಯಧಿಕ ವಿವೇಕ ಮತ್ತು ವಿವೇಚನೆಯನ್ನು ಕೇಳಿಕೊಂಡಿತು.
13. (ಎ) ಅನಮ್ಯ ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಸೃಷ್ಟಿಸುವುದನ್ನು ಹಿರಿಯರು ಯಾಕೆ ತ್ಯಜಿಸಬೇಕು? (ಬಿ) ವ್ಯಕ್ತಿಯ ಮನಸ್ಸಾಕ್ಷಿಯನ್ನು ಗೌರವಿಸುವುದು ಪ್ರಾಮುಖ್ಯವಾಗಿರುವ ಕೆಲವೊಂದು ಕ್ಷೇತ್ರಗಳು ಯಾವುವು?
13 ಜವಾಬ್ದಾರ ಸಹೋದರರು ಇಂದು ಹೃದಯಗಳನ್ನು ತಲಪುವುದರಲ್ಲಿ ಅಷ್ಟೇ ಆಸಕ್ತರಾಗಿದ್ದಾರೆ. ಹೀಗೆ, ಅವರು ನಿರಂಕುಶ, ಬಾಗದ ನಿಯಮಗಳನ್ನು ಇಡುವುದನ್ನು ಯಾ ತಮ್ಮ ವೈಯಕ್ತಿಕ ದೃಷ್ಟಿಕೋನಗಳನ್ನು ಮತ್ತು ಅಭಿಪ್ರಾಯಗಳನ್ನು ನಿಯಮವಾಗಿ ತಿರುಗಿಸುವುದನ್ನು ತ್ಯಜಿಸುತ್ತಾರೆ. (ಹೋಲಿಸಿ ದಾನಿಯೇಲ 6:7-16.) ಆಗಿಂದಾಗ್ಗೆ, ಉಡುಗೆ ಮತ್ತು ನೀಟುಗಾರಿಕೆಯಂತಹ ವಿಷಯಗಳ ಕುರಿತಾದ ದಯೆಯುಳ್ಳ ಮರುಜ್ಞಾಪನಗಳು ಸೂಕ್ತವಾಗಿಯೂ ಸಮಯೋಚಿತವಾಗಿಯೂ ಇರಬಹುದು, ಆದರೆ ಇಂತಹ ವಿಷಯಗಳನ್ನು ಒಬ್ಬ ಹಿರಿಯನು ಹೇಳುತ್ತಾ ಇರುವುದಾದರೆ ಅಥವಾ ಪ್ರಥಮವಾಗಿ ತನ್ನ ವೈಯಕ್ತಿಕ ರುಚಿಯ ಸೂಚನೆಗಳಾಗಿರುವ ಸಂಗತಿಗಳನ್ನು ಹೇರಲು ಪ್ರಯತ್ನಿಸುವುದಾದರೆ, ಒಬ್ಬ ವಿವೇಚನೆಯುಳ್ಳ ಮನುಷ್ಯನೋಪಾದಿ ತನ್ನ ಸತ್ಕೀರ್ತಿಯನ್ನು ಅವನು ಗಂಡಾಂತರಕ್ಕೆ ಸಿಕ್ಕಿಸಬಹುದು. ನಿಜವಾಗಿಯೂ, ಸಭೆಯಲ್ಲಿರುವ ಎಲ್ಲರು ಇತರರನ್ನು ನಿಯಂತ್ರಿಸುವ ಪ್ರಯತ್ನವನ್ನು ತ್ಯಜಿಸಬೇಕು.—ಹೋಲಿಸಿ 2 ಕೊರಿಂಥ 1:24; ಫಿಲಿಪ್ಪಿ 2:12.
14. ಇತರರ ಕುರಿತು ತಾನು ಅಪೇಕ್ಷಿಸಿದ ವಿಷಯದಲ್ಲಿ ಅವನು ವಿವೇಚನೆಯುಳ್ಳವನಾಗಿದ್ದನೆಂದು ಯೇಸು ಹೇಗೆ ತೋರಿಸಿದನು?
14 ಇನ್ನೊಂದು ವಿಷಯದ ಕುರಿತು ಹಿರಿಯರು ತಮ್ಮನ್ನು ಪರೀಕ್ಷಿಸಿಕೊಳ್ಳಲು ಬಯಸಬಹುದು; ‘ನಾನು ಇತರರಿಂದ ಅಪೇಕ್ಷಿಸುವ ವಿಷಯಗಳ ಸಂಬಂಧದಲ್ಲಿ ವಿವೇಚನೆಯುಳ್ಳವನಾಗಿದ್ದೇನೊ?’ ಯೇಸು ಖಂಡಿತವಾಗಿಯೂ ವಿವೇಚನೆಯುಳ್ಳವನಾಗಿದ್ದನು. ತಮ್ಮ ಮನಃಪೂರ್ವಕವಾದ ಪ್ರಯತ್ನಗಳಿಗಿಂತ ಹೆಚ್ಚಿನದನ್ನು ಅವನು ಅಪೇಕ್ಷಿಸಲಿಲ್ಲವೆಂದು ಮತ್ತು ಇವುಗಳನ್ನು ಅವನು ಬಹಳವಾಗಿ ಬೆಲೆಯುಳ್ಳವುಗಳೆಂದು ಎಣಿಸಿದನೆಂದು ತನ್ನ ಹಿಂಬಾಲಕರಿಗೆ ಸುಸಂಗತವಾಗಿ ತೋರಿಸಿದನು. ಸಣ್ಣ ಮೌಲ್ಯದ ತನ್ನ ಕಾಸುಗಳನ್ನು ನೀಡಿದುದಕ್ಕಾಗಿ ಅವನು ಆ ಬಡ ವಿಧವೆಯನ್ನು ಪ್ರಶಂಸಿಸಿದನು. (ಮಾರ್ಕ 12:42, 43) ಮರಿಯಳ ದುಬಾರಿಯಾದ ಕಾಣಿಕೆಯನ್ನು ಶಿಷ್ಯರು ಟೀಕಿಸಿದಾಗ ತನ್ನ ಶಿಷ್ಯರನ್ನು ಅವನು ಗದರಿಸಿದನು. ಅವನಂದದ್ದು: “ಈಕೆಯನ್ನು ಬಿಡಿರಿ. . . . ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ.” (ಮಾರ್ಕ್ 14:6, 8) ತನ್ನ ಹಿಂಬಾಲಕರು ಅವನನ್ನು ಆಸೆಗೆಡಿಸಿದಾಗಲೂ ಅವನು ವಿವೇಚನೆಯುಳ್ಳವನಾಗಿದ್ದನು. ಉದಾಹರಣೆಗೆ, ತನ್ನ ದಸ್ತಗಿರಿಯ ರಾತ್ರಿಯಂದು ಮಲಗದೆ ಅವನೊಂದಿಗೆ ಎಚ್ಚರವಾಗಿರಲು ತನ್ನ ಮೂವರು ಅತ್ಯಂತ ಆಪ್ತರಾದ ಅಪೊಸ್ತಲರನ್ನು ಅವನು ಉತ್ತೇಜಿಸಿದರೂ, ಸತತವಾಗಿ ಮಲಗುವ ಮೂಲಕ ಅವರು ಅವನನ್ನು ನಿರಾಶೆಗೊಳಿಸಿದರು. ಆದರೂ, ಅವನು ಸಹಾನುಭೂತಿಯಿಂದ ಹೇಳಿದ್ದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲಸಾಲದು.”—ಮಾರ್ಕ 14:34-38.
15, 16. (ಎ) ಹಿಂಡನ್ನು ಒತ್ತಾಯಿಸದೆ ಇರುವುದರ ಯಾ ಬೆದರಿಸದೆ ಇರುವುದರ ಕುರಿತು ಹಿರಿಯರು ಯಾಕೆ ಜಾಗರೂಕರಾಗಿರಬೇಕು? (ಬಿ) ಆಕೆ ಇತರರ ವಿಷಯದಲ್ಲಿ ಅಪೇಕ್ಷಿಸಿದ ವಿಷಯಗಳ ಕುರಿತು ಒಬ್ಬಾಕೆ ನಂಬಿಗಸ್ತ ಸಹೋದರಿಯು ಹೇಗೆ ಸರಿಹೊಂದಿಸಿಕೊಂಡಳು?
15 ಯೇಸು ತನ್ನ ಹಿಂಬಾಲಕರನ್ನು ‘ಕಷ್ಟಪಟ್ಟು ಹೆಣಗಾಡುವಂತೆ’ ಪ್ರೋತ್ಸಾಹಿಸಿದನು ನಿಜ. (ಲೂಕ 13:24) ಆದರೆ ಹಾಗೆ ಮಾಡುವಂತೆ ಅವನೆಂದೂ ಅವರನ್ನು ಒತ್ತಾಯಿಸಲಿಲ್ಲ! ಅವರನ್ನು ಅವನು ಪ್ರೇರೇಪಿಸಿದನು, ಮಾದರಿಯನ್ನು ಇಟ್ಟನು, ನಾಯಕತ್ವವನ್ನು ತೆಗೆದುಕೊಂಡನು, ಮತ್ತು ಅವರ ಹೃದಯಗಳನ್ನು ತಲಪಲು ಯತ್ನಿಸಿದನು. ಉಳಿದದ್ದನ್ನು ಮಾಡುವಂತೆ ಅವನು ಯೆಹೋವನ ಆತ್ಮದ ಶಕ್ತಿಯಲ್ಲಿ ಭರವಸೆಯನ್ನಿಟ್ಟನು. ಅಂತೆಯೇ ಇಂದು ಹಿರಿಯರು, ಯೆಹೋವನನ್ನು ಮನಃಪೂರ್ವಕವಾಗಿ ಸೇವಿಸುವಂತೆ ಹಿಂಡನ್ನು ಉತ್ತೇಜಿಸಬೇಕೇ ವಿನಾ ಅವರು ಯೆಹೋವನ ಸೇವೆಯಲ್ಲಿ ಪ್ರಚಲಿತವಾಗಿ ಮಾಡುವುದು ಯಾವುದೊ ರೀತಿಯಲ್ಲಿ ಸಾಕಷ್ಟು ಇಲ್ಲದ ಮತ್ತು ಅಸ್ವೀಕರಣೀಯವಾದ ಕಾರ್ಯವೆಂದು ಸೂಚಿಸುತ್ತಾ, ಅವರನ್ನು ಅಪರಾಧಿ ಪ್ರಜ್ಞೆ ಯಾ ಅವಮಾನದಿಂದ ಬೆದರಿಸುವುದನ್ನು ತ್ಯಜಿಸಬೇಕು. “ಹೆಚ್ಚನ್ನು ಮಾಡಿರಿ, ಹೆಚ್ಚನ್ನು ಮಾಡಿರಿ, ಹೆಚ್ಚನ್ನು ಮಾಡಿರಿ!” ಎಂಬ ಒಂದು ಅನಮ್ಯ ಪ್ರೇರಣೆಯ ಪ್ರಸ್ತಾಪವು, ತಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡುತ್ತಿರುವವರನ್ನು ಎದೆಗುಂದಿಸಬಹುದು. “ಮೆಚ್ಚಿಸಲು ಕಠಿನ”—ವಿವೇಚನಾ ಶಕಿಯ್ತಿಂದ ಬಹಳ ಭಿನ್ನವಾದ—ವಾಗಿರುವುದಕ್ಕಾಗಿ ಪ್ರಸಿದ್ಧಿಯನ್ನು ಒಬ್ಬ ಹಿರಿಯನು ಬೆಳೆಸಿಕೊಳ್ಳುವುದಾದರೆ ಅದು ಎಷ್ಟು ದುಃಖಕರವಾಗಿರುವುದು!—1 ಪೇತ್ರ 2:18.
16 ಇತರರಿಂದ ನಾವು ಅಪೇಕ್ಷಿಸುವ ವಿಷಯಗಳ ಕುರಿತು ನಾವೆಲ್ಲರೂ ವಿವೇಚನೆಯುಳ್ಳವರಾಗಿರಬೇಕು! ತನ್ನ ಅಸ್ವಸ್ಥ ತಾಯಿಯನ್ನು ನೋಡಿಕೊಳ್ಳಲು ತಮ್ಮ ಮಿಷನೆರಿ ನೇಮಕವನ್ನು ಆಕೆ ಮತ್ತು ಆಕೆಯ ಗಂಡ ಬಿಟ್ಟ ತರುವಾಯ, ಒಬ್ಬಾಕೆ ಸಹೋದರಿಯು ಬರೆದದ್ದು: “ಇಲ್ಲಿ ಸಭೆಯಲ್ಲಿರುವ ಪ್ರಚಾರಕರಾದ ನಮಗೆ ಈ ಸಮಯಗಳು ನಿಜವಾಗಿಯೂ ಕಷ್ಟಕರವಾದ ಸಮಯಗಳು. ಇಂತಹ ಅನೇಕ ಒತ್ತಡಗಳಿಂದ ಮರೆಮಾಡಲ್ಪಟ್ಟ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಕೆಲಸದಲ್ಲಿದ್ದ ನಾವು ಇದರ ಕುರಿತು ಹಠಾತ್ತಾಗಿ ಮತ್ತು ಸಂಕಟಕರವಾಗಿ ಅರಿಯುವಂತೆ ಮಾಡಲ್ಪಟ್ಟೆವು. ಉದಾಹರಣೆಗೆ, ನಾನು ಹೀಗೆ ಯೋಚಿಸಿದ್ದುಂಟು, ‘ಈ ತಿಂಗಳಿಗಾಗಿರುವ ಸರಿಯಾದ ಸಾಹಿತ್ಯವನ್ನು ಆ ಸಹೋದರಿಯು ಯಾಕೆ ನೀಡುವುದಿಲ್ಲ? ರಾಜ್ಯದ ಸೇವೆ ಯನ್ನು ಆಕೆ ಓದುವುದಿಲ್ಲವೆ?’ ಯಾಕೆಂದು ಈಗ ನನಗೆ ಗೊತ್ತಿದೆ. ಕೆಲವರಿಗೆ [ಸೇವೆಯಲ್ಲಿ] ಹೊರಬರುವುದೇ ಅವರು ಮಾಡಸಾಧ್ಯವಿರುವ ಸಕಲ ವಿಷಯಗಳೂ ಆಗಿವೆ.” ನಮ್ಮ ಸಹೋದರರು ಏನನ್ನು ಮಾಡುವುದಿಲ್ಲವೊ ಅದಕ್ಕಾಗಿ ಅವರನ್ನು ನ್ಯಾಯತೀರಿಸುವುದಕ್ಕಿಂತ ಅವರು ಮಾಡುವ ಸಂಗತಿಗಳಿಗಾಗಿ ಅವರನ್ನು ಪ್ರಶಂಸಿಸುವುದು ಎಷ್ಟೊಂದು ಉತ್ತಮವಾಗಿದೆ!
17. ವಿವೇಚನಾ ಶಕ್ತಿಯ ವಿಷಯದಲ್ಲಿ ಯೇಸು ನಮಗೆ ಹೇಗೆ ಒಂದು ಮಾದರಿಯನ್ನಿಟ್ಟನು?
17 ಯೇಸು ತನ್ನ ಅಧಿಕಾರವನ್ನು ವಿವೇಚನೆಯುಳ್ಳ ರೀತಿಯಲ್ಲಿ ಹೇಗೆ ಪ್ರಯೋಗಿಸುತ್ತಾನೆ ಎಂಬುದರ ಕುರಿತು ಒಂದು ಕೊನೆಯ ಉದಾಹರಣೆಯನ್ನು ಪರಿಗಣಿಸಿರಿ. ತನ್ನ ತಂದೆಯಂತೆ, ಯೇಸು ತನ್ನ ಅಧಿಕಾರವನ್ನು ಈರ್ಷ್ಯೆಯಿಂದ ಕಾಪಾಡುವುದಿಲ್ಲ. ಭೂಮಿಯ ಮೇಲೆ “ತನ್ನ ಎಲ್ಲಾ ಆಸ್ತಿಯ” ಕಾಳಜಿಗಾಗಿ ನಂಬಿಗಸ್ತ ಆಳು ವರ್ಗವನ್ನು ನೇಮಿಸುತ್ತಾ, ಅವನೂ ಕೂಡ ನಿಪುಣ ನಿಯೋಜಕನಾಗಿದ್ದಾನೆ. (ಮತ್ತಾಯ 24:45-47) ಮತ್ತು ಇತರರ ವಿಚಾರಗಳಿಗೆ ಕಿವಿಗೊಡಲು ಅವನು ಭಯಪಡುವುದಿಲ್ಲ. ಅವನು ಅನೇಕ ಬಾರಿ ತನ್ನ ಕೇಳುಗರನ್ನು: ‘ನಿಮಗೆ ಹೇಗೆ ತೋರುತ್ತದೆ?’ ಎಂದು ಕೇಳಿದನು. (ಮತ್ತಾಯ 17:25; 18:12; 21:28; 22:42) ಇಂದು ಕ್ರಿಸ್ತನ ಎಲ್ಲ ಹಿಂಬಾಲಕರ ಮಧ್ಯದಲ್ಲಿ ಹಾಗೆಯೇ ಇರಬೇಕು. ಅಧಿಕಾರವು ಎಷ್ಟೇ ಇರಲಿ, ಅದು ಅವರನ್ನು ಆಲಿಸಲು ಮನಸ್ಸಿಲ್ಲದವರಂತೆ ಮಾಡಬಾರದು. ಹೆತ್ತವರೇ, ಆಲಿಸಿರಿ! ಗಂಡಂದಿರೇ, ಆಲಿಸಿರಿ! ಹಿರಿಯರೇ, ಆಲಿಸಿರಿ!
18. (ಎ) ವಿವೇಚನಾ ಶಕಿಗ್ತಾಗಿ ನಮಗೆ ಸತ್ಕೀರ್ತಿ ಇದೆಯೊ ಇಲ್ಲವೊ ಎಂದು ನಾವು ಹೇಗೆ ಕಂಡುಹಿಡಿಯಬಹುದು? (ಬಿ) ಯಾವ ವಿಷಯವನ್ನು ನಿರ್ಧರಿಸುವುದು ನಮಗೆಲ್ಲರಿಗೂ ಒಳ್ಳೆಯದಾಗಿರಬಹುದು?
18 ನಿರ್ಣಾಯಕವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ “ವಿವೇಚನೆಯುಳ್ಳವರಾಗಿರುವುದಕ್ಕೆ ಸತ್ಕೀರ್ತಿಯನ್ನು ಪಡೆದಿರಲು” ಬಯಸುತ್ತೇವೆ. (ಫಿಲಿಪ್ಪಿ 4:5, ಫಿಲಿಪ್ಸ್) ಆದರೆ ನಮಗಂಥ ಸತ್ಕೀರ್ತಿ ಇದೆಯೆಂದು ನಮಗೆ ಹೇಗೆ ತಿಳಿಯುತ್ತದೆ? ಒಳ್ಳೆಯದು, ತನ್ನ ಕುರಿತು ಜನರು ಏನು ಹೇಳುತ್ತಿದ್ದರು ಎಂಬುದರ ಕುರಿತು ತಿಳಿಯಲು ಯೇಸು ಕುತೂಹಲವುಳ್ಳವನಾಗಿದ್ದಾಗ, ಅವನು ತನ್ನ ನೆಚ್ಚಿಕೆಯ ಸಹವಾಸಿಗಳನ್ನು ಕೇಳಿದನು. (ಮತ್ತಾಯ 16:13) ಅವನ ಮಾದರಿಯನ್ನು ಯಾಕೆ ಅನುಕರಿಸಬಾರದು? ವಿವೇಚನೆಯುಳ್ಳ, ಬಗ್ಗುವ ವ್ಯಕ್ತಿಯಾಗಿರುವುದಕ್ಕೆ ನಿಮಗೆ ಸತ್ಕೀರ್ತಿ ಇದೆಯೊ ಇಲ್ಲವೊ ಎಂಬ ಯಥಾರ್ಥತೆಗಾಗಿ ನೀವು ಆತುಕೊಳ್ಳಬಲ್ಲ ಯಾವ ವ್ಯಕ್ತಿಯನ್ನಾದರೂ ಕೇಳಬಹುದು. ಯೇಸುವಿನ ವಿವೇಚನಾ ಶಕ್ತಿಯ ಪರಿಪೂರ್ಣ ಮಾದರಿಯನ್ನು ಇನ್ನೂ ನಿಕಟವಾಗಿ ಅನುಕರಿಸಲು ನಾವೆಲ್ಲರು ಮಾಡಬಲ್ಲ ಅತ್ಯಧಿಕ ವಿಷಯಗಳು ಖಂಡಿತವಾಗಿ ಇವೆ! ವಿಶೇಷವಾಗಿ ನಾವು ಇತರರ ಮೇಲೆ ಒಂದಿಷ್ಟು ಅಧಿಕಾರವನ್ನು ಪ್ರಯೋಗಿಸುವಾಗ, ಅದನ್ನು ಯಾವಾಗಲೂ ಯುಕ್ತವಾದ ರೀತಿಯಲ್ಲಿ ಪ್ರಯೋಗಿಸುತ್ತಾ, ಸೂಕ್ತವಿರುವಲ್ಲಿ ಕ್ಷಮಿಸಲು, ಬಾಗಲು, ಯಾ ಬಗ್ಗಲು ಸದಾ ಸಿದ್ಧವಾಗಿರುತ್ತಾ, ನಾವು ಯಾವಾಗಲೂ ಯೆಹೋವ ಮತ್ತು ಯೇಸುವಿನ ಮಾದರಿಯನ್ನು ಅನುಕರಿಸೋಣ. ಖಂಡಿತವಾಗಿಯೂ, ನಮ್ಮಲ್ಲಿ ಪ್ರತಿಯೊಬ್ಬರು “ವಿವೇಚನೆಯುಳ್ಳವ” ರಾಗಿರಲು ಶ್ರಮಿಸುವಂತಾಗಲಿ!—ತೀತ 3:2.
[ಅಧ್ಯಯನ ಪ್ರಶ್ನೆಗಳು]
a ನ್ಯೂ ಟೆಸ್ಟಮೆಂಟ್ ವರ್ಡ್ಸ್ ಎಂಬ ಪುಸ್ತಕವು ಹೀಗೆ ಹೇಳುತ್ತದೆ: “ಎಪಿಯಿಕೆಸ್ [ವಿವೇಚನೆಯುಳ್ಳವ] ನಾಗಿರುವ ಮನುಷ್ಯನಿಗೆ, ಒಂದು ಸಂಗತಿಯು ಕಾನೂನುಬದ್ಧವಾಗಿ ಸಂಪೂರ್ಣವಾಗಿ ನ್ಯಾಯವೆಂದು ಸಮರ್ಥಿಸಲ್ಪಟ್ಟಾಗ್ಯೂ ನೈತಿಕವಾಗಿ ಸಂಪೂರ್ಣವಾಗಿ ತಪ್ಪಾಗಿರುವ ಸಂದರ್ಭಗಳು ಇವೆಯೆಂದು ಗೊತ್ತಿರುತ್ತದೆ. ಎಪಿಯಿಕೆಸ್ ನಾಗಿರುವ ಮನುಷ್ಯನಿಗೆ, ನಿಯಮಕ್ಕಿಂತ ಹೆಚ್ಚಿನದ್ದೂ ಉನ್ನತವೂ ಆಗಿರುವ ಶಕ್ತಿಯ ನಿರ್ಬಂಧದ ಕೆಳಗೆ ನಿಯಮವನ್ನು ಯಾವಾಗ ಸಡಿಲಮಾಡಬೇಕೆಂದು ಗೊತ್ತಿರುತ್ತದೆ.”
ನೀವು ಹೇಗೆ ಉತ್ತರಿಸುವಿರಿ?
▫ ಕ್ರೈಸ್ತರು ಯಾಕೆ ವಿವೇಚನೆಯುಳ್ಳವರಾಗಿರಲು ಬಯಸಬೇಕು?
▫ ಕ್ಷಮಿಸಲು ಸಿದ್ಧರಾಗಿರುವಲ್ಲಿ ಹಿರಿಯರು ಹೇಗೆ ಯೇಸುವನ್ನು ಅನುಕರಿಸಬಲ್ಲರು?
▫ ಯೇಸುವಿನಂತೆ ಬಾಗುವವರಾಗಿರಲು ನಾವು ಯಾಕೆ ಶ್ರಮಿಸಬೇಕು?
▫ ಅಧಿಕಾರವನ್ನು ಪ್ರಯೋಗಿಸುವ ರೀತಿಯಲ್ಲಿ ವಿವೇಚನಾ ಶಕ್ತಿಯನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?
▫ ನಾವು ನಿಜವಾಗಿಯೂ ವಿವೇಚನೆಯುಳ್ಳವರಾಗಿದ್ದೇವೊ ಇಲ್ಲವೊ ಎಂಬುದರ ಬಗ್ಗೆ ನಾವು ನಮ್ಮನ್ನು ಹೇಗೆ ಪರೀಕ್ಷಿಸಿಕೊಳ್ಳಬಹುದು?
[ಪುಟ 15 ರಲ್ಲಿರುವ ಚಿತ್ರ]
ಯೇಸು ಸಿದ್ಧಮನಸ್ಸಿನಿಂದ ಪಶ್ಚಾತಾಪ್ತಪಟ್ಟ ಪೇತ್ರನನ್ನು ಕ್ಷಮಿಸಿದನು
[ಪುಟ 16 ರಲ್ಲಿರುವ ಚಿತ್ರ]
ಸ್ತ್ರೀಯೊಬ್ಬಳು ಅಸಾಧಾರಣವಾದ ನಂಬಿಕೆಯನ್ನು ತೋರಿಸಿದಾಗ, ಅದು ಒಂದು ಸಾಮಾನ್ಯ ನಿಯಮನ್ನು ಕಾರ್ಯರೂಪಕ್ಕೆ ತರುವ ಸಮಯ ಆಗಿರಲಿಲ್ಲವೆಂದು ಯೇಸು ಗ್ರಹಿಸಿದನು
[ಪುಟ 18 ರಲ್ಲಿರುವ ಚಿತ್ರ]
ಹೆತ್ತವರೇ ಆಲಿಸಿರಿ!
[ಪುಟ 18 ರಲ್ಲಿರುವ ಚಿತ್ರ]
ಗಂಡಂದಿರೇ ಆಲಿಸಿರಿ!
[ಪುಟ 18 ರಲ್ಲಿರುವ ಚಿತ್ರ]
ಹಿರಿಯರೇ ಆಲಿಸಿರಿ!