ನಿಷ್ಠಾವಂತ ಕೈಗಳನ್ನೆತ್ತಿ ಪ್ರಾರ್ಥಿಸಿರಿ
“ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ [“ನಿಷ್ಠಾವಂತ,” “NW”] ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ.”—1 ತಿಮೊಥೆಯ 2:8.
1, 2. (ಎ) ಯೆಹೋವನ ಜನರು ಮಾಡುವ ಪ್ರಾರ್ಥನೆಗೆ 1 ತಿಮೊಥೆಯ 2:8 ಹೇಗೆ ಅನ್ವಯವಾಗುತ್ತದೆ? (ಬಿ) ನಾವು ಈಗ ಏನನ್ನು ಪರಿಗಣಿಸುವೆವು?
ಯೆಹೋವನು ತನ್ನ ಜನರು ತನಗೆ ಮತ್ತು ಪರಸ್ಪರರಿಗೆ ನಿಷ್ಠಾವಂತರಾಗಿರಬೇಕೆಂದು ಅಪೇಕ್ಷಿಸುತ್ತಾನೆ. “ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ [“ನಿಷ್ಠಾವಂತ,” NW] ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ” ಎಂದು ಅಪೊಸ್ತಲ ಪೌಲನು ಬರೆದಾಗ, ಅವನು ಪ್ರಾರ್ಥನೆಯೊಂದಿಗೆ ನಿಷ್ಠೆಯನ್ನು ಜೋಡಿಸಿದನು. (1 ತಿಮೊಥೆಯ 2:8) ಕ್ರೈಸ್ತರು ಜೊತೆಯಾಗಿ ಸೇರಿಬರುವ “ಎಲ್ಲಾ ಸ್ಥಳಗಳಲ್ಲಿ” ಸಾರ್ವಜನಿಕ ಪ್ರಾರ್ಥನೆಯ ಕುರಿತಾಗಿ ಪೌಲನು ಮಾತಾಡುತ್ತಿದ್ದನೆಂದು ವ್ಯಕ್ತವಾಗುತ್ತದೆ. ಸಭಾ ಕೂಟಗಳಲ್ಲಿ ಯಾರು ದೇವರ ಜನರನ್ನು ಪ್ರತಿನಿಧಿಸಲಿದ್ದರು? ದೇವರ ಕಡೆಗಿರುವ ಎಲ್ಲ ಶಾಸ್ತ್ರೀಯ ಕರ್ತವ್ಯಗಳನ್ನು ಜಾಗರೂಕತೆಯಿಂದ ಪಾಲಿಸುತ್ತಿದ್ದ ಪವಿತ್ರ, ನೀತಿವಂತ, ಭಯಭಕ್ತಿಯ ಪುರುಷರು ಮಾತ್ರವೇ. (ಪ್ರಸಂಗಿ 12:13, 14) ಅವರು ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿದ್ದು, ಯೆಹೋವ ದೇವರಿಗೆ ನಿರ್ವಿವಾದವಾಗಿ ಸಮರ್ಪಿಸಿಕೊಂಡಿರುವವರು ಆಗಿರಬೇಕಿತ್ತು.
2 ವಿಶೇಷವಾಗಿ ಸಭಾ ಹಿರಿಯರು ‘ಪ್ರಾರ್ಥನೆಯಲ್ಲಿ ತಮ್ಮ ನಿಷ್ಠಾವಂತ ಕೈಗಳನ್ನೆತ್ತಬೇಕು.’ ಯೇಸು ಕ್ರಿಸ್ತನ ಮೂಲಕ ಅವರು ಮಾಡುವ ಹೃತ್ಪೂರ್ವಕ ಪ್ರಾರ್ಥನೆಗಳು, ದೇವರ ಕಡೆಗಿರುವ ಅವರ ನಿಷ್ಠೆಯನ್ನು ತೋರಿಸುತ್ತವೆ. ಮತ್ತು ವಾಗ್ವಾದಗಳು ಹಾಗೂ ಕೋಪದ ಕೆರಳುವಿಕೆಗಳಿಂದ ದೂರವಿರಲು ಅವರಿಗೆ ಸಹಾಯಮಾಡುತ್ತವೆ. ಸಾರ್ವಜನಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಸಭೆಯನ್ನು ಪ್ರತಿನಿಧಿಸುವ ಸುಯೋಗವುಳ್ಳ ಯಾವುದೇ ಪುರುಷನು, ಕೋಪ, ಸೇಡಿನ ವಿಷಯದಲ್ಲಿ ಮತ್ತು ಯೆಹೋವನ ಹಾಗೂ ಆತನ ಸಂಸ್ಥೆಯ ಕಡೆಗೆ ನಿಷ್ಠಾದ್ರೋಹವಿಲ್ಲದವನು ಆಗಿರಬೇಕು. (ಯಾಕೋಬ 1:19, 20) ಸಾರ್ವಜನಿಕ ಪ್ರಾರ್ಥನೆಯಲ್ಲಿ ಇತರರನ್ನು ಪ್ರತಿನಿಧಿಸುವ ಸುಯೋಗವುಳ್ಳವರಿಗಾಗಿ ಬೈಬಲಿನಲ್ಲಿ ಇನ್ನಾವ ನಿರ್ದೇಶನಗಳಿವೆ? ಮತ್ತು ನಮ್ಮ ಖಾಸಗಿ ಹಾಗೂ ಕುಟುಂಬ ಪ್ರಾರ್ಥನೆಗಳಲ್ಲಿ ನಾವು ಅನ್ವಯಿಸಬೇಕಾದ ಕೆಲವೊಂದು ಶಾಸ್ತ್ರೀಯ ಮೂಲತತ್ವಗಳು ಯಾವುವು?
ಏನು ಪ್ರಾರ್ಥಿಸುವಿರೆಂಬುದನ್ನು ಮುಂದಾಲೋಚಿಸಿರಿ
3, 4. (ಎ) ಸಾರ್ವಜನಿಕ ಪ್ರಾರ್ಥನೆಯನ್ನು ಮಾಡುವ ಮುಂಚೆ ಅದರ ಕುರಿತು ಯೋಚಿಸುವುದು ಏಕೆ ಉಪಯುಕ್ತವಾಗಿದೆ? (ಬಿ) ಪ್ರಾರ್ಥನೆಗಳ ಉದ್ದದ ಕುರಿತಾಗಿ ಶಾಸ್ತ್ರವಚನಗಳು ಏನನ್ನು ಸೂಚಿಸುತ್ತವೆ?
3 ಸಾರ್ವಜನಿಕವಾಗಿ ಪ್ರಾರ್ಥಿಸಲು ನಮ್ಮನ್ನು ಕೇಳಿಕೊಳ್ಳುವಲ್ಲಿ, ನಾವೇನು ಪ್ರಾರ್ಥಿಸುವೆವೆಂದು ಕಡಿಮೆಪಕ್ಷ ಮುಂದಾಲೋಚಿಸಸಾಧ್ಯವಿದೆ. ಹೀಗೆ ಮಾಡುವುದರಿಂದ, ಒಂದು ಉದ್ದವಾದ, ಇಲ್ಲವೇ ಸುಮ್ಮನೆ ಅರ್ಥರಹಿತವಾದ ಪ್ರಾರ್ಥನೆಯನ್ನು ಮಾಡದೆ, ಸೂಕ್ತವಾದ ಪ್ರಮುಖ ವಿಷಯಗಳನ್ನು ತಿಳಿಸಲು ನಮಗೆ ಸಹಾಯಮಾಡುವುದು. ಖಂಡಿತವಾಗಿಯೂ ನಾವು ನಮ್ಮ ಖಾಸಗಿ ಪ್ರಾರ್ಥನೆಗಳನ್ನು ಸಹ ಗಟ್ಟಿಯಾಗಿ ಮಾಡಬಹುದು ಮತ್ತು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಮಿತಿಯಿಲ್ಲ. ಯೇಸು ತನ್ನ 12 ಅಪೊಸ್ತಲರನ್ನು ಆರಿಸಿಕೊಳ್ಳುವ ಮುಂಚೆ ಒಂದು ಇಡೀ ರಾತ್ರಿ ಪ್ರಾರ್ಥಿಸಿದನು. ಆದರೆ ತನ್ನ ಮರಣದ ಜ್ಞಾಪಕದ ಸಮಯದಲ್ಲಿ, ರೊಟ್ಟಿ ಮತ್ತು ದ್ರಾಕ್ಷಾರಸಕ್ಕಾಗಿ ಪ್ರಾರ್ಥಿಸುತ್ತಿದ್ದಾಗ ಅವನ ಪ್ರಾರ್ಥನೆಗಳು ಸಂಕ್ಷಿಪ್ತವಾಗಿದ್ದವು. (ಮಾರ್ಕ 14:22-24; ಲೂಕ 6:12-16) ಮತ್ತು ಯೇಸುವಿನ ಆ ಚಿಕ್ಕ ಪ್ರಾರ್ಥನೆಗಳನ್ನು ಸಹ ದೇವರು ಸಂಪೂರ್ಣವಾಗಿ ಸ್ವೀಕರಿಸಿದನೆಂಬುದು ನಮಗೆ ತಿಳಿದಿದೆ.
4 ಊಟ ಮಾಡುವ ಮುಂಚೆ ಒಂದು ಕುಟುಂಬಕ್ಕಾಗಿ ಪ್ರಾರ್ಥನೆಯನ್ನು ಹೇಳುವ ಸುಯೋಗ ನಮಗಿದೆಯೆಂದು ಭಾವಿಸೋಣ. ಅಂತಹ ಪ್ರಾರ್ಥನೆಯು ಸಾಕಷ್ಟು ಮಟ್ಟಿಗೆ ಚಿಕ್ಕದ್ದಾಗಿರಬೇಕು. ಆದರೆ ಅದರಲ್ಲಿ, ಆಹಾರಕ್ಕಾಗಿ ಉಪಕಾರಗಳ ಅಭಿವ್ಯಕ್ತಿಯು ಸೇರಿಕೊಂಡಿರಬೇಕು. ಒಂದು ಕ್ರೈಸ್ತ ಕೂಟದ ಮುಂಚೆ ಅಥವಾ ಅನಂತರ ನಾವು ಸಾರ್ವಜನಿಕವಾಗಿ ಪ್ರಾರ್ಥಿಸುತ್ತಿರುವಲ್ಲಿ, ಅನೇಕ ಸಂಗತಿಗಳನ್ನು ತಿಳಿಸುತ್ತಾ, ನಾವು ಒಂದು ಉದ್ದ ಪ್ರಾರ್ಥನೆಯನ್ನು ಹೇಳಬೇಕಾಗಿಲ್ಲ. ‘ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಿದ್ದ’ ಶಾಸ್ತ್ರಿಗಳನ್ನು ಯೇಸು ಟೀಕಿಸಿದನು. (ಲೂಕ 20:46, 47) ದೈವಭಕ್ತಿಯುಳ್ಳ ಒಬ್ಬ ವ್ಯಕ್ತಿಯು ಎಂದಿಗೂ ಹಾಗೆ ಮಾಡಬಯಸುವುದಿಲ್ಲ. ಆದರೆ, ಕೆಲವೊಮ್ಮೆ ಸಾರ್ವಜನಿಕವಾಗಿ ಒಂದಿಷ್ಟು ಮಟ್ಟಿಗೆ ಉದ್ದವಾಗಿರುವ ಪ್ರಾರ್ಥನೆಯನ್ನು ಹೇಳುವುದು ಸೂಕ್ತವಾಗಿರಬಹುದು. ದೃಷ್ಟಾಂತಕ್ಕಾಗಿ, ಒಂದು ಸಮ್ಮೇಳನದಲ್ಲಿ ಒಬ್ಬ ಹಿರಿಯನು ಕೊನೆಯ ಪ್ರಾರ್ಥನೆಯನ್ನು ಮಾಡಬೇಕಾದೀತು. ಅವನು ಮುಂಚಿತವಾಗಿಯೇ ಏನನ್ನು ಹೇಳುವನೆಂಬುದನ್ನು ಯೋಚಿಸಿ, ಅನೇಕ ಸಂಗತಿಗಳನ್ನು ತಿಳಿಸಬಹುದು. ಆದರೂ ಅಂತಹ ಪ್ರಾರ್ಥನೆಯು ಸಹ ತೀರ ಉದ್ದವಾಗಿರಬಾರದು.
ಭಯಭಕ್ತಿಯಿಂದ ದೇವರಿಗೆ ಪ್ರಾರ್ಥಿಸಿರಿ
5. (ಎ) ಸಾರ್ವಜನಿಕವಾಗಿ ಪ್ರಾರ್ಥಿಸುತ್ತಿರುವಾಗ ನಾವೇನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? (ಬಿ) ಘನತೆ ಹಾಗೂ ಗೌರವಪೂರ್ಣವಾದ ರೀತಿಯಲ್ಲಿ ಏಕೆ ಪ್ರಾರ್ಥಿಸಬೇಕು?
5 ಸಾರ್ವಜನಿಕವಾಗಿ ಪ್ರಾರ್ಥಿಸುತ್ತಿರುವಾಗ, ನಾವು ಮನುಷ್ಯರನ್ನು ಸಂಬೋಧಿಸುತ್ತಿಲ್ಲ ಎಂಬ ವಿಷಯವನ್ನು ಮನಸ್ಸಿನಲ್ಲಿಡಬೇಕು. ಬದಲಾಗಿ, ಪಾಪಿಗಳಾದ ನಾವು ಪರಮಾಧಿಕಾರಿ ಪ್ರಭುವಾದ ಯೆಹೋವನಿಗೆ ಭಿನ್ನಹ ಮಾಡುತ್ತಿದ್ದೇವೆ. (ಕೀರ್ತನೆ 8:3-5, 9; 73:28) ಆದುದರಿಂದ ನಾವೇನನ್ನು ಹೇಳುತ್ತೇವೊ ಮತ್ತು ಅದನ್ನು ಹೇಗೆ ಹೇಳುತ್ತೇವೊ ಅದರ ಮೂಲಕ ಆತನನ್ನು ಅಪ್ರಸನ್ನಗೊಳಿಸುವ ವಿಷಯದಲ್ಲಿ ಪೂಜ್ಯಭಾವನೆಯ ಭಯವನ್ನು ತೋರಿಸಬೇಕು. (ಜ್ಞಾನೋಕ್ತಿ 1:7) ಕೀರ್ತನೆಗಾರನಾದ ದಾವೀದನು ಹಾಡಿದ್ದು: “ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು; ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು.” (ಕೀರ್ತನೆ 5:7) ನಮಗೆ ಆ ಮನೋಭಾವವು ಇರುವಲ್ಲಿ, ಯೆಹೋವನ ಸಾಕ್ಷಿಗಳ ಒಂದು ಕೂಟದಲ್ಲಿ ಸಾರ್ವಜನಿಕವಾಗಿ ಪ್ರಾರ್ಥಿಸುವಂತೆ ಕೇಳಲಾಗುವಲ್ಲಿ ನಾವು ನಮ್ಮನ್ನು ಹೇಗೆ ವ್ಯಕ್ತಪಡಿಸಿಕೊಳ್ಳುವೆವು? ನಾವು ಒಬ್ಬ ಮಾನವ ಅರಸನೊಂದಿಗೆ ಮಾತಾಡುತ್ತಿರುವ ಸಂದರ್ಭದಲ್ಲಿ ಎಷ್ಟೊಂದು ಗೌರವಪೂರ್ವಕವಾಗಿ ಮತ್ತು ಘನತೆಯಿಂದ ಮಾತಾಡುವೆವು. ಅದೇ ರೀತಿಯಲ್ಲಿ “ನಿತ್ಯತೆಯ ಅರಸ”ನಾದ ಯೆಹೋವನಿಗೆ ನಾವು ಪ್ರಾರ್ಥಿಸುತ್ತಿರುವುದರಿಂದ, ಇನ್ನಷ್ಟು ಘನತೆ ಮತ್ತು ಗೌರವದಿಂದ ಮಾತಾಡಬೇಕಲ್ಲವೊ? (ಪ್ರಕಟನೆ 15:3, NW) ಆದುದರಿಂದ ಪ್ರಾರ್ಥಿಸುವಾಗ ನಾವು, “ನಮಸ್ಕಾರ ಯೆಹೋವನೇ,” “ನಿನಗೆ ನಮ್ಮ ಪ್ರೀತಿಯನ್ನು ಕಳುಹಿಸುತ್ತೇವೆ,” ಅಥವಾ “ನಿನಗೆ ಒಳ್ಳೇದಾಗಲಿ” ಎಂಬಂತಹ ಮಾತುಗಳನ್ನು ಉಪಯೋಗಿಸಬಾರದು. ದೇವರ ಏಕಜಾತ ಪುತ್ರನಾದ ಯೇಸು ಕ್ರಿಸ್ತನು, ತನ್ನ ಸ್ವರ್ಗೀಯ ತಂದೆಯನ್ನು ಎಂದೂ ಆ ರೀತಿಯಲ್ಲಿ ಸಂಭೋದಿಸಲಿಲ್ಲವೆಂದು ಶಾಸ್ತ್ರವಚನಗಳು ತೋರಿಸುತ್ತವೆ.
6. ‘ಅಪಾತ್ರದಯೆಯ ಸಿಂಹಾಸನವನ್ನು ಸಮೀಪಿಸು’ವಾಗ ನಮ್ಮ ಮನಸ್ಸಿನಲ್ಲಿ ಏನಿರಬೇಕು?
6 ಪೌಲನು ಹೇಳಿದ್ದು: “ನಾವು ಅಪಾತ್ರದಯೆಯ ಸಿಂಹಾಸನವನ್ನು ವಾಕ್ ಸ್ವಾತಂತ್ರ್ಯದೊಂದಿಗೆ ಸಮೀಪಿಸೋಣ.” (ಇಬ್ರಿಯ 4:16, NW) ನಾವು ಪಾಪಿಗಳಾಗಿದ್ದರೂ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿನ ನಮ್ಮ ನಂಬಿಕೆಯಿಂದಾಗಿ ನಾವು ಯೆಹೋವನನ್ನು “ವಾಕ್ ಸ್ವಾತಂತ್ರ್ಯದೊಂದಿಗೆ” ಸಮೀಪಿಸಬಹುದು. (ಅ. ಕೃತ್ಯಗಳು 10:42, 43; 20:20, 21) ಆದರೆ, ಅಂತಹ ವಾಕ್ ಸ್ವಾತಂತ್ರ್ಯವು, ನಾವು ದೇವರೊಂದಿಗೆ ಹರಟೆಹೊಡೆಯಬಹುದು ಎಂಬುದನ್ನು ಅರ್ಥೈಸುವುದಿಲ್ಲ; ಅಥವಾ ನಾವು ಆತನಿಗೆ ಅಗೌರವದಿಂದ ಮಾತಾಡಬಾರದು. ನಮ್ಮ ಸಾರ್ವಜನಿಕ ಪ್ರಾರ್ಥನೆಗಳು ಯೆಹೋವನನ್ನು ಸಂತೋಷಪಡಿಸಬೇಕಾದರೆ, ಅವುಗಳನ್ನು ಯೋಗ್ಯವಾದ ಗೌರವ ಮತ್ತು ಘನತೆಯಿಂದ ಮಾಡಬೇಕು. ಪ್ರಕಟನೆಗಳನ್ನು ಮಾಡಲು, ವ್ಯಕ್ತಿಗಳಿಗೆ ಸಲಹೆಕೊಡಲು ಅಥವಾ ಸಭಿಕರಿಗೆ ಭಾಷಣಬಿಗಿಯಲು ಅವುಗಳನ್ನು ಉಪಯೋಗಿಸುವುದು ಅನುಚಿತವಾಗಿರುವುದು.
ನಮ್ರ ಮನೋಭಾವದೊಂದಿಗೆ ಪ್ರಾರ್ಥಿಸಿರಿ
7. ಯೆಹೋವನ ಆಲಯದ ಸಮರ್ಪಣೆಯ ಸಮಯದಲ್ಲಿ ಪ್ರಾರ್ಥಿಸುವಾಗ ಸೊಲೊಮೋನನು ಹೇಗೆ ನಮ್ರತೆಯನ್ನು ತೋರಿಸಿದನು?
7 ನಾವು ಸಾರ್ವಜನಿಕವಾಗಿ ಪ್ರಾರ್ಥಿಸುತ್ತಿರಲಿ ಅಥವಾ ಖಾಸಗಿಯಾಗಿ ಪ್ರಾರ್ಥಿಸುತ್ತಿರಲಿ, ನಾವು ಮನಸ್ಸಿನಲ್ಲಿಡಬೇಕಾದ ಒಂದು ಪ್ರಮುಖ ಶಾಸ್ತ್ರೀಯ ಮೂಲತತ್ವವು ಏನೆಂದರೆ ನಮ್ಮ ಪ್ರಾರ್ಥನೆಗಳಲ್ಲಿ ನಾವು ನಮ್ರ ಮನೋಭಾವವನ್ನು ಪ್ರದರ್ಶಿಸಬೇಕು. (2 ಪೂರ್ವಕಾಲವೃತ್ತಾಂತ 7:13, 14) ಯೆರೂಸಲೇಮಿನಲ್ಲಿನ ಯೆಹೋವನ ಆಲಯದ ಸಮರ್ಪಣೆಯ ಸಮಯದಲ್ಲಿ ರಾಜ ಸೊಲೊಮೋನನು ಮಾಡಿದ ಸಾರ್ವಜನಿಕ ಪ್ರಾರ್ಥನೆಯಲ್ಲಿ, ಅವನು ನಮ್ರತೆಯನ್ನು ತೋರಿಸಿದನು. ಭೂಮಿಯಲ್ಲಿ ಕಟ್ಟಲ್ಪಟ್ಟಿರುವ ಅತಿ ವೈಭವಯುಕ್ತ ಕಟ್ಟಡಗಳಲ್ಲಿ ಒಂದನ್ನು ಸೊಲೊಮೋನನು ಆಗತಾನೇ ನಿರ್ಮಾಣಿಸಿ ಮುಗಿಸಿದ್ದನು. ಆದರೂ ಅವನು ನಮ್ರತೆಯಿಂದ ಪ್ರಾರ್ಥಿಸಿದ್ದು: “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು!”—1 ಅರಸುಗಳು 8:27.
8. ಸಾರ್ವಜನಿಕ ಪ್ರಾರ್ಥನೆಯಲ್ಲಿ ನಮ್ರತೆಯನ್ನು ತೋರಿಸುವ ಕೆಲವು ವಿಧಗಳು ಯಾವುವು?
8 ಸಾರ್ವಜನಿಕ ಪ್ರಾರ್ಥನೆಯಲ್ಲಿ ನಾವು ಇತರರನ್ನು ಪ್ರತಿನಿಧಿಸುತ್ತಿರುವಾಗ ಸೊಲೊಮೋನನಂತೆ ನಮ್ರರಾಗಿರಬೇಕು. ನಾವು ಕಪಟ ಧಾರ್ಮಿಕತೆಯನ್ನು ತೋರಿಸಬಾರದಾದರೂ, ನಮ್ಮ ಸ್ವರದಿಂದ ನಮ್ರತೆಯನ್ನು ತೋರಿಸಬಹುದು. ನಮ್ರ ಪ್ರಾರ್ಥನೆಗಳು, ಆಡಂಬರದ್ದಾಗಿರುವುದಿಲ್ಲ ಅಥವಾ ನಾಟಕೀಯವಾಗಿರುವುದಿಲ್ಲ. ಅವು, ಪ್ರಾರ್ಥನೆ ಮಾಡುತ್ತಿರುವ ವ್ಯಕ್ತಿಯ ಕಡೆಗಲ್ಲ ಬದಲಾಗಿ ಯೆಹೋವನ ಕಡೆಗೆ ಗಮನವನ್ನು ಸೆಳೆಯುತ್ತವೆ. (ಮತ್ತಾಯ 6:5) ಪ್ರಾರ್ಥನೆಯಲ್ಲಿ ನಾವೇನನ್ನು ಹೇಳುತ್ತೇವೊ ಅದರಿಂದಲೂ ನಮ್ರತೆಯನ್ನು ತೋರಿಸಲಾಗುತ್ತದೆ. ನಾವು ನಮ್ರತೆಯಿಂದ ಪ್ರಾರ್ಥಿಸುವಲ್ಲಿ, ನಾವು ಬಯಸುವ ರೀತಿಯಲ್ಲಿ ದೇವರು ನಿರ್ದಿಷ್ಟ ಸಂಗತಿಗಳನ್ನು ಮಾಡಬೇಕೆಂಬಂತೆ ನಾವು ಧ್ವನಿಸಲಿಕ್ಕಿಲ್ಲ. ಬದಲಾಗಿ, ಯೆಹೋವನ ಪವಿತ್ರ ಚಿತ್ತಕ್ಕೆ ಹೊಂದಿಕೆಯಲ್ಲಿರುವ ರೀತಿಯಲ್ಲಿ ಕ್ರಿಯೆಗೈಯಲು ನಾವು ಯೆಹೋವನನ್ನು ಬಿನ್ನೈಸುವೆವು. ಕೀರ್ತನೆಗಾರನು ಹೀಗೆ ಬೇಡಿಕೊಂಡಾಗ ಯೋಗ್ಯವಾದ ಮನೋಭಾವದ ಮಾದರಿಯನ್ನಿಟ್ಟನು: “ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.”—ಕೀರ್ತನೆ 118:25; ಲೂಕ 18:9-14.
ಹೃತ್ಪೂರ್ವಕವಾಗಿ ಪ್ರಾರ್ಥಿಸಿರಿ
9. ಮತ್ತಾಯ 6:7ರಲ್ಲಿ ಯೇಸುವಿನಿಂದ ಕೊಡಲ್ಪಟ್ಟ ಯಾವ ಉತ್ತಮ ಸಲಹೆಯು ಕಂಡುಬರುತ್ತದೆ, ಮತ್ತು ಅದನ್ನು ಹೇಗೆ ಅನ್ವಯಿಸಸಾಧ್ಯವಿದೆ?
9 ನಮ್ಮ ಸಾರ್ವಜನಿಕ ಅಥವಾ ಖಾಸಗಿ ಪ್ರಾರ್ಥನೆಗಳು ಯೆಹೋವನನ್ನು ಸಂತೋಷಪಡಿಸಬೇಕಾದರೆ, ಅವು ಹೃತ್ಪೂರ್ವಕವಾಗಿರಬೇಕು. ನಾವೇನನ್ನು ಹೇಳುತ್ತಿದ್ದೇವೊ ಅದನ್ನು ನಾವು ಯೋಚಿಸದೆ, ಪುನಃ ಪುನಃ ಮಂತ್ರವನ್ನು ಉಚ್ಚರಿಸುವಂತೆ ಉಚ್ಚರಿಸುತ್ತಾ ಇರುವುದಿಲ್ಲ. ತನ್ನ ಪರ್ವತ ಪ್ರಸಂಗದಲ್ಲಿ, ಯೇಸು ಸಲಹೆಕೊಟ್ಟದ್ದು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೇ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು [ತಪ್ಪಾಗಿ] ನೆನಸುತ್ತಾರೆ.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯೇಸು ಹೇಳಿದ್ದು: “ಹೇಳಿದ್ದನ್ನೇ ಹೇಳುತ್ತಾ ಇರಬೇಡಿ; ಪೊಳ್ಳು ಶಬ್ದಗಳನ್ನು ಪುನಃ ಪುನಃ ಉಚ್ಚರಿಸುತ್ತಾ ಇರಬೇಡಿ.”—ಮತ್ತಾಯ 6:7, NW ಪಾದಟಿಪ್ಪಣಿ.
10. ಒಂದೇ ವಿಷಯದ ಕುರಿತಾಗಿ ಒಂದಕ್ಕಿಂತಲೂ ಹೆಚ್ಚು ಬಾರಿ ಪ್ರಾರ್ಥಿಸುವುದು ಏಕೆ ಸೂಕ್ತವಾಗಿದೆ?
10 ಖಂಡಿತವಾಗಿಯೂ, ಒಂದೇ ವಿಷಯದ ಕುರಿತು ಪುನಃ ಪುನಃ ಪ್ರಾರ್ಥಿಸುವ ಅಗತ್ಯವಿರಬಹುದು. ಅದು ತಪ್ಪಾಗಿರಲಿಕ್ಕಿಲ್ಲ, ಯಾಕಂದರೆ ಯೇಸು ಪ್ರೇರಿಸಿದ್ದು: “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು.” (ಮತ್ತಾಯ 7:7) ಯೆಹೋವನು ಸ್ಥಳಿಕ ಸಾರುವ ಕೆಲಸವನ್ನು ಸಮೃದ್ಧಿಗೊಳಿಸುತ್ತಿರುವುದರಿಂದ, ಒಂದು ಹೊಸ ರಾಜ್ಯ ಸಭಾಗೃಹದ ಅಗತ್ಯವಿರಬಹುದು. (ಯೆಶಾಯ 60:22) ಖಾಸಗಿಯಾಗಿ ಪ್ರಾರ್ಥಿಸುತ್ತಿರುವಾಗ ಅಥವಾ ಯೆಹೋವನ ಜನರ ಕೂಟಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗಳನ್ನು ಮಾಡುತ್ತಿರುವಾಗ ಈ ಅಗತ್ಯವನ್ನು ತಿಳಿಸುತ್ತಾ ಇರುವುದು ಯೋಗ್ಯವಾಗಿದೆ. ಹಾಗೆ ಮಾಡುವುದು, ನಾವು ‘ಪೊಳ್ಳು ಶಬ್ದಗಳನ್ನು ಪುನಃ ಪುನಃ ಹೇಳುತ್ತಾ ಇದ್ದೇವೆ’ ಎಂಬ ಅರ್ಥವನ್ನು ಕೊಡುವುದಿಲ್ಲ.
ಉಪಕಾರಸ್ತುತಿ ಮಾಡುವುದನ್ನು ಜ್ಞಾಪಕದಲ್ಲಿಡಿರಿ
11. ಫಿಲಿಪ್ಪಿ 4:6, 7, ಖಾಸಗಿ ಹಾಗೂ ಸಾರ್ವಜನಿಕ ಪ್ರಾರ್ಥನೆಗೆ ಹೇಗೆ ಅನ್ವಯವಾಗುತ್ತದೆ?
11 ಇಂದು ಅನೇಕ ಜನರು ತಮಗೆ ಏನಾದರೂ ಅಗತ್ಯವಿದ್ದಾಗ ಮಾತ್ರ ಪ್ರಾರ್ಥನೆ ಮಾಡುತ್ತಾರೆ. ಆದರೆ ನಾವು, ಯೆಹೋವ ದೇವರಿಗಾಗಿರುವ ನಮ್ಮ ಪ್ರೀತಿಯಿಂದಾಗಿ ಆತನಿಗೆ ಖಾಸಗಿ ಹಾಗೂ ಸಾರ್ವಜನಿಕ ಪ್ರಾರ್ಥನೆಯಲ್ಲಿ ಉಪಕಾರಸ್ತುತಿಗಳನ್ನು ಕೊಡುವಂತೆ ಪ್ರಚೋದಿಸಲ್ಪಡಬೇಕು. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೌದು, ವಿಜ್ಞಾಪನೆಗಳು ಮತ್ತು ಬೇಡಿಕೆಗಳೊಂದಿಗೆ, ನಾವು ಆತ್ಮಿಕ ಮತ್ತು ಭೌತಿಕ ಆಶೀರ್ವಾದಗಳಿಗಾಗಿ ಯೆಹೋವನಿಗೆ ಉಪಕಾರವನ್ನು ಸಲ್ಲಿಸಬೇಕು. (ಜ್ಞಾನೋಕ್ತಿ 10:22) ಕೀರ್ತನೆಗಾರನು ಹಾಡಿದ್ದು: “ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ಮಾಡಿದ ಹರಕೆಗಳನ್ನು ಪರಾತ್ಪರನಿಗೆ ಸಲ್ಲಿಸಿರಿ.” (ಕೀರ್ತನೆ 50:14) ಮತ್ತು ದಾವೀದನು ಮಾಡಿದಂತಹ ಒಂದು ಪ್ರಾರ್ಥನಾಪೂರ್ವಕ ಸಂಗೀತದಲ್ಲಿ ಈ ಮನತಟ್ಟುವ ಮಾತುಗಳಿದ್ದವು: “ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು.” (ಕೀರ್ತನೆ 69:30) ಸಾರ್ವಜನಿಕ ಮತ್ತು ಖಾಸಗಿ ಪ್ರಾರ್ಥನೆಯಲ್ಲಿ ನಾವು ಸಹ ಅದನ್ನೇ ಮಾಡಬೇಕಲ್ಲವೇ?
12. ಕೀರ್ತನೆ 100:4, 5 ಇಂದು ಹೇಗೆ ನೆರವೇರುತ್ತಿದೆ, ಮತ್ತು ಈ ಕಾರಣದಿಂದ ನಾವು ಯಾವುದಕ್ಕಾಗಿ ದೇವರಿಗೆ ಉಪಕಾರಸ್ತುತಿಯನ್ನು ಹೇಳಬಲ್ಲೆವು?
12 ದೇವರ ಕುರಿತಾಗಿ ಕೀರ್ತನೆಗಾರನು ಹಾಡಿದ್ದು: “ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ. ಯೆಹೋವನು ಒಳ್ಳೆಯವನು; ಆತನ ಕೃಪೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.” (ಕೀರ್ತನೆ 100:4, 5) ಇಂದು ಎಲ್ಲ ಜನಾಂಗಗಳಿಂದ ಜನರು ಯೆಹೋವನ ಆಲಯದ ಅಂಗಣವನ್ನು ಪ್ರವೇಶಿಸುತ್ತಿದ್ದಾರೆ. ಇದಕ್ಕಾಗಿಯೂ ನಾವು ಆತನಿಗೆ ಸ್ತುತಿ ಮತ್ತು ಉಪಕಾರಗಳನ್ನು ಸಲ್ಲಿಸಸಾಧ್ಯವಿದೆ. ಸ್ಥಳಿಕ ರಾಜ್ಯ ಸಭಾಗೃಹಕ್ಕಾಗಿ ನೀವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಆತನನ್ನು ಪ್ರೀತಿಸುವವರೊಂದಿಗೆ ಅಲ್ಲಿ ಕ್ರಮವಾಗಿ ಕೂಡಿಬರುವ ಮೂಲಕ ನಿಮ್ಮ ಗಣ್ಯತೆಯನ್ನು ಪ್ರದರ್ಶಿಸುತ್ತೀರೊ? ಅಲ್ಲಿರುವಾಗ, ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಗೆ ಉಪಕಾರಸ್ತುತಿಯ ಗೀತೆಗಳನ್ನು ಉತ್ಸಾಹದಿಂದ ಧ್ವನಿಯೆತ್ತಿ ಹಾಡುತ್ತೀರೊ?
ಪ್ರಾರ್ಥಿಸಲು ಎಂದೂ ನಾಚಿಕೆಪಡಬೇಡಿರಿ
13. ದೋಷಿಭಾವನೆಯಿಂದಾಗಿ ನಾವು ಅನರ್ಹರೆಂಬ ಅನಿಸಿಕೆಯಾದಾಗಲೂ ನಾವು ಯೆಹೋವನಿಗೆ ವಿಜ್ಞಾಪನೆಯನ್ನು ಮಾಡಬೇಕೆಂದು ಯಾವ ಶಾಸ್ತ್ರೀಯ ಉದಾಹರಣೆಯು ತೋರಿಸುತ್ತದೆ?
13 ದೋಷಿಭಾವನೆಯಿಂದಾಗಿ ನಮಗೆ ಅಯೋಗ್ಯರಾಗಿರುವ ಅನಿಸಿಕೆಯಾಗುವುದಾದರೂ, ನಾವು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುತ್ತಾ ದೇವರ ಬಳಿ ಹೋಗಬೇಕು. ವಿದೇಶೀ ಸ್ತ್ರೀಯರನ್ನು ತಮ್ಮ ಹೆಂಡತಿಯರನ್ನಾಗಿ ಮಾಡುತ್ತಾ ಯೆಹೂದ್ಯರು ಪಾಪಮಾಡಿದಾಗ, ಎಜ್ರನು ಮೊಣಕಾಲೂರಿ ದೇವರಿಗೆ ತನ್ನ ನಿಷ್ಠಾವಂತ ಕೈಗಳನ್ನೆತ್ತಿ, ನಮ್ರತೆಯಿಂದ ಪ್ರಾರ್ಥಿಸಿದನು: “ನನ್ನ ದೇವರೇ; ನಾನು ಮನಗುಂದಿದವನಾಗಿದ್ದೇನೆ ನಿನ್ನ ಕಡೆಗೆ ಮುಖವನ್ನೆತ್ತುವದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದವು, ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಯಿತು. ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನ ವರೆಗೆ ಮಹಾಪರಾಧಿಗಳೇ . . . ನಮ್ಮ ದುಷ್ಕರ್ಮಮಹಾಪರಾಧಗಳ ನಿಮಿತ್ತವಾಗಿ ಇಷ್ಟೆಲ್ಲಾ ಕೇಡು ಬಂದರೂ ನಮ್ಮ ದೇವರಾದ ನೀನು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ ನಮ್ಮಲ್ಲಿ ಇಷ್ಟು ಮಂದಿಯನ್ನು ಉಳಿಸಿದಿ; ಹೀಗಿರುವಲ್ಲಿ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿಬಿಡುವಿಯಲ್ಲವೋ? ಯೆಹೋವನೇ, ಇಸ್ರಾಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು.”—ಎಜ್ರ 9:1-15; ಧರ್ಮೋಪದೇಶಕಾಂಡ 7:3, 4.
14. ಎಜ್ರನ ದಿನಗಳಲ್ಲಿ ಪ್ರದರ್ಶಿಸಲ್ಪಟ್ಟಿರುವಂತೆ, ದೇವರ ಕ್ಷಮೆಯನ್ನು ಪಡೆಯಬೇಕಾದರೆ ಏನು ಆವಶ್ಯಕವಾಗಿದೆ?
14 ದೇವರ ಕ್ಷಮಾಪಣೆಯನ್ನು ಪಡೆದುಕೊಳ್ಳಬೇಕಾದರೆ, ನಾವು ಆತನಿಗೆ ಮಾಡುವ ತಪ್ಪೊಪ್ಪಿಗೆಯು, ಪಾಪಕ್ಕಾಗಿ ಪರಿತಾಪ ಮತ್ತು “ಪಶ್ಚಾತ್ತಾಪಕ್ಕೆ ತಕ್ಕ ಫಲ”ಗಳಿಂದ ಕೂಡಿದ್ದಾಗಿರಬೇಕು. (ಲೂಕ 3:8; ಯೋಬ 42:1-6; ಯೆಶಾಯ 66:2) ಎಜ್ರನ ದಿನಗಳಲ್ಲಿ, ಒಂದು ಪಶ್ಚಾತ್ತಾಪಿ ಮನೋಭಾವದೊಂದಿಗೆ, ಆ ವಿದೇಶೀ ಹೆಂಡತಿಯರನ್ನು ಹಿಂದೆಕಳುಹಿಸುವ ಮೂಲಕ, ಮಾಡಲ್ಪಟ್ಟ ತಪ್ಪನ್ನು ಸರಿಪಡಿಸುವ ಯತ್ನವನ್ನು ಮಾಡಲಾಯಿತು. (ಎಜ್ರ 10:44; ಹೋಲಿಸಿ 2 ಕೊರಿಂಥ 7:8-13.) ಗಂಭೀರವಾದ ತಪ್ಪಿಗಾಗಿ ನಾವು ದೇವರ ಕ್ಷಮೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಲ್ಲಿ, ನಮ್ರತೆಯಿಂದ ಪ್ರಾರ್ಥಿಸಿ ತಪ್ಪೊಪ್ಪಿಗೆಯನ್ನು ಮಾಡೋಣ ಮತ್ತು ಪಶ್ಚಾತ್ತಾಪಕ್ಕೆ ತಕ್ಕ ಫಲಗಳನ್ನು ಉತ್ಪಾದಿಸೋಣ. ಒಂದು ಪಶ್ಚಾತ್ತಾಪಿ ಮನೋಭಾವ ಮತ್ತು ಮಾಡಲ್ಪಟ್ಟ ತಪ್ಪನ್ನು ಸರಿಪಡಿಸಲಿಕ್ಕಾಗಿರುವ ಬಯಕೆಯು, ನಾವು ಕ್ರೈಸ್ತ ಹಿರಿಯರ ಆತ್ಮಿಕ ಸಹಾಯವನ್ನು ಪಡೆದುಕೊಳ್ಳುವಂತೆಯೂ ಪ್ರಚೋದಿಸುವುದು.—ಯಾಕೋಬ 5:13-15.
ಪ್ರಾರ್ಥನೆಯ ಮೂಲಕ ಸಾಂತ್ವನವನ್ನು ಪಡೆದುಕೊಳ್ಳಿರಿ
15. ಪ್ರಾರ್ಥನೆಯ ಮೂಲಕ ನಾವು ಸಾಂತ್ವನವನ್ನು ಪಡೆದುಕೊಳ್ಳಬಹುದೆಂದು ಹನ್ನಳ ಅನುಭವವು ಹೇಗೆ ತೋರಿಸುತ್ತದೆ?
15 ಯಾವುದೋ ಕಾರಣಕ್ಕಾಗಿ ನಮಗೆ ಮನೋವೇದನೆಯಿರುವಲ್ಲಿ, ನಾವು ಪ್ರಾರ್ಥನೆಯ ಮೂಲಕ ಸಾಂತ್ವನವನ್ನು ಕಂಡುಕೊಳ್ಳಬಹುದು. (ಕೀರ್ತನೆ 51:17; ಜ್ಞಾನೋಕ್ತಿ 15:13) ನಿಷ್ಠಾವಂತಳಾದ ಹನ್ನಳು ಪ್ರಾರ್ಥನೆಯಲ್ಲಿ ಸಾಂತ್ವನವನ್ನು ಕಂಡುಕೊಂಡಳು. ಇಸ್ರಾಯೇಲಿನಲ್ಲಿ ದೊಡ್ಡ ಕುಟುಂಬಗಳು ಸಾಮಾನ್ಯವಾಗಿದ್ದಂತಹ ಸಮಯದಲ್ಲಿ ಅವಳು ಜೀವಿಸುತ್ತಿದ್ದಳು. ಆದರೆ ಅವಳಿಗೆ ಮಕ್ಕಳೇ ಆಗಲಿಲ್ಲ. ಅವಳ ಗಂಡನಾದ ಎಲ್ಕಾನನು, ಅವನ ಇನ್ನೊಂದು ಹೆಂಡತಿಯಾದ ಪೆನಿನ್ನಳಿಂದ ಪುತ್ರಪುತ್ರಿಯರನ್ನು ಪಡೆದುಕೊಂಡಿದ್ದನು. ಹನ್ನಳು ಬಂಜೆಯಾಗಿದ್ದದರಿಂದ ಪೆನಿನ್ನಳು ಅವಳನ್ನು ಹೀಯಾಳಿಸುತ್ತಿದ್ದಳು. ಹನ್ನಳು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿ, ಅವಳಿಗೆ ಒಬ್ಬ ಮಗನನ್ನು ದಯಪಾಲಿಸುವಲ್ಲಿ, ‘ಅವನು ಜೀವದಿಂದಿರುವ ತನಕ ಯೆಹೋವನಿಗೇ ಪ್ರತಿಷ್ಠಿಸಿ ಕೊಡುವೆನೆಂದು’ ಮಾತುಕೊಟ್ಟಳು. ತನ್ನ ಪ್ರಾರ್ಥನೆ ಮತ್ತು ಮಹಾ ಯಾಜಕನಾದ ಏಲಿಯನ ಮಾತುಗಳಿಂದ ಸಂತೈಸಲ್ಪಟ್ಟು, ಹನ್ನಳ “ಮೋರೆಯಲ್ಲಿ ದುಃಖವು ಕಾಣಲಿಲ್ಲ.” ಅವಳು ಒಬ್ಬ ಗಂಡು ಮಗುವಿಗೆ ಜನ್ಮವಿತ್ತಳು, ಮತ್ತು ಅವನಿಗೆ ಸಮುವೇಲನೆಂದು ಹೆಸರಿಟ್ಟಳು. ತದನಂತರ ಅವಳು ಯೆಹೋವನ ಆಲಯದಲ್ಲಿ ಸೇವೆಗಾಗಿ ಅವನನ್ನು ಅರ್ಪಿಸಿದಳು. (1 ಸಮುವೇಲ 1:9-28) ತನ್ನ ಕಡೆಗೆ ದೇವರು ತೋರಿಸಿದ ಈ ದಯೆಗಾಗಿ ಆಭಾರಿಯಾಗಿದ್ದು, ಯೆಹೋವನಿಗೆ ಯಾರೂ ಸರಿಸಾಟಿ ಇಲ್ಲವೆಂದು ಸ್ತುತಿಸಿದಂತಹ ಉಪಕಾರದ ಪ್ರಾರ್ಥನೆಯನ್ನು ಅವಳು ಮಾಡಿದಳು. (1 ಸಮುವೇಲ 2:1-10) ತನ್ನ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಎಲ್ಲ ವಿನಂತಿಗಳನ್ನು ದೇವರು ಉತ್ತರಿಸುತ್ತಾನೆಂಬ ಭರವಸೆಯೊಂದಿಗೆ, ಹನ್ನಳಂತೆ ನಾವು ಸಹ ಪ್ರಾರ್ಥನೆಯ ಮೂಲಕ ಸಾಂತ್ವನವನ್ನು ಪಡೆದುಕೊಳ್ಳಬಹುದು. ಮನಬಿಚ್ಚಿ ಆತನಿಗೆ ಪ್ರಾರ್ಥಿಸುವಾಗ, ನಾವು ‘ದುಃಖಿತರಾಗಿರುವ’ ಅಗತ್ಯವಿಲ್ಲ, ಯಾಕಂದರೆ ಆತನು ನಮ್ಮ ಭಾರವನ್ನು ತೆಗೆದುಹಾಕುವನು ಇಲ್ಲವೇ, ಅದನ್ನು ಹೊತ್ತುಕೊಳ್ಳಲು ನಮಗೆ ಶಕ್ತಿಕೊಡುವನು.—ಕೀರ್ತನೆ 55:22.
16. ಯಾಕೋಬನ ವಿದ್ಯಮಾನದಲ್ಲಿ ತೋರಿಸಲ್ಪಟ್ಟಿರುವಂತೆ, ನಾವು ಭಯಭೀತರೂ ಅಥವಾ ಚಿಂತಿತರಾಗಿರುವಾಗ ಏಕೆ ಪ್ರಾರ್ಥಿಸಬೇಕು?
16 ಒಂದು ಸನ್ನಿವೇಶವು, ಭಯ, ಮನೋವೇದನೆ, ಅಥವಾ ಚಿಂತೆಯನ್ನು ಉಂಟುಮಾಡುವಲ್ಲಿ, ಸಾಂತ್ವನಕ್ಕಾಗಿ ಪ್ರಾರ್ಥನೆಯ ಮೂಲಕ ದೇವರ ಬಳಿ ಹೋಗಲು ನಾವು ತಪ್ಪದಿರೋಣ. (ಕೀರ್ತನೆ 55:1-4) ಕುಟುಂಬದಿಂದ ದೂರಹೋಗಿದ್ದ ತನ್ನ ಜಗಳಗಂಟಿ ಅಣ್ಣನಾದ ಏಸಾವನನ್ನು ಭೇಟಿಯಾಗಲಿದ್ದಾಗ ಯಾಕೋಬನು ಹೆದರಿದನು. ಆದರೂ ಯಾಕೋಬನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನ ತಂದೆತಾತಂದಿರಾದ ಇಸಾಕ ಅಬ್ರಹಾಮರ ದೇವರೇ, ಸ್ವದೇಶಕ್ಕೆ ಬಂಧುಗಳ ಬಳಿಗೆ ತಿರಿಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೇದನ್ನು ಮಾಡುವೆನೆಂದು ನನಗೆ ವಾಗ್ದಾನಮಾಡಿದವನು ನೀನೇ ಅಲ್ಲವೇ. ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಪಾತ್ರನಾಗಿದ್ದೇನೆ. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಪಾಳೆಯಗಳಿಗೆ ಒಡೆಯನಾಗಿದ್ದೇನೆ. ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಿಯನ್ನೂ ಕೊಲ್ಲುವನೋ ಏನೋ ಎಂದು ನನಗೆ ಭಯವದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನಿನಗೆ ಒಳ್ಳೇದನ್ನು ಮಾಡಿ ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿಮಾಡುವೆನೆಂದು ನೀನು ನನಗೆ ಹೇಳಿದಿಯಲ್ಲವೇ.” (ಆದಿಕಾಂಡ 32:9-12) ಯಾಕೋಬ ಮತ್ತು ಅವನ ಪರಿವಾರದವರ ಮೇಲೆ ಏಸಾವನು ದಾಳಿಮಾಡಲಿಲ್ಲ. ಈ ರೀತಿಯಲ್ಲಿ ಆ ಸಂದರ್ಭದಲ್ಲಿ ಯೆಹೋವನು ಯಾಕೋಬನಿಗೆ ‘ಒಳ್ಳೇದನ್ನು ಮಾಡಿದನು.’
17. ಕೀರ್ತನೆ 119:52ಕ್ಕನುಸಾರ, ನಾವು ಕಠಿನವಾದ ಪರೀಕ್ಷೆಯನ್ನು ಎದುರಿಸುತ್ತಿರುವಾಗ ಪ್ರಾರ್ಥನೆಯು ನಮಗೆ ಹೇಗೆ ಸಾಂತ್ವನವನ್ನು ತರಬಲ್ಲದು?
17 ನಮ್ಮ ವಿಜ್ಞಾಪನೆಗಳ ಸಮಯದಲ್ಲಿ, ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳನ್ನು ಜ್ಞಾಪಿಸಿಕೊಳ್ಳುವ ಮೂಲಕ ನಾವು ಸಾಂತ್ವನವನ್ನು ಪಡೆದುಕೊಳ್ಳಬಹುದು. ಒಂದು ಸುಂದರ ಪ್ರಾರ್ಥನೆ ಗೀತೆಯಾಗಿರುವ ಅತಿ ಉದ್ದವಾದ ಕೀರ್ತನೆಯಲ್ಲಿ, “ಯೆಹೋವನೇ, ನಿನ್ನ ಪುರಾತನ ವಿಧಿಗಳನ್ನು ನೆನಪುಮಾಡಿಕೊಂಡು ನನ್ನನ್ನು ಸಂತೈಸಿಕೊಂಡಿದ್ದೇನೆ” ಎಂದು ಹಾಡಿದವನು ರಾಜಕುಮಾರ ಹಿಜ್ಕೀಯನು ಆಗಿರಬಹುದು. (ಕೀರ್ತನೆ 119:52) ನಾವು ಕಠಿನವಾಗಿ ಪರೀಕ್ಷಿಸಲ್ಪಡುತ್ತಿರುವಾಗ ಮಾಡುವ ನಮ್ರ ಪ್ರಾರ್ಥನೆಯಲ್ಲಿ, ನಮಗೆ ಒಂದು ಬೈಬಲ್ ಮೂಲತತ್ವ ಅಥವಾ ನಿಯಮವು ಜ್ಞಾಪಕಕ್ಕೆ ಬರಬಹುದು. ನಮ್ಮ ಸ್ವರ್ಗೀಯ ತಂದೆಯನ್ನು ಸಂತೋಷಪಡಿಸುತ್ತಿದ್ದೇವೆಂಬ ಸಾಂತ್ವನದಾಯಕ ಆಶ್ವಾಸನೆಯಲ್ಲಿ ಫಲಿಸುವ ಒಂದು ಮಾರ್ಗಕ್ರಮವನ್ನು ಬೆನ್ನಟ್ಟುವಂತೆ ಇದು ನಮಗೆ ಸಹಾಯಮಾಡಸಾಧ್ಯವಿದೆ.
ನಿಷ್ಠಾವಂತರು ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುತ್ತಾರೆ
18. ‘ಪ್ರತಿಯೊಬ್ಬ ನಿಷ್ಠಾವಂತನು ಪ್ರಾರ್ಥಿಸು’ವನೆಂದು ಏಕೆ ಹೇಳಸಾಧ್ಯವಿದೆ?
18 ಯೆಹೋವ ದೇವರಿಗೆ ನಿಷ್ಠಾವಂತರಾಗಿರುವವರೆಲ್ಲರೂ ‘ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವರು.’ (ರೋಮಾಪುರ 12:12) ದಾವೀದನು ಬತ್ಷೆಬೆಯೊಂದಿಗೆ ಪಾಪವನ್ನು ಮಾಡಿದ ನಂತರ ಬಹುಶಃ 32ನೆಯ ಕೀರ್ತನೆಯನ್ನು ರಚಿಸಿದನು. ಅದರಲ್ಲಿ ಅವನು, ಕ್ಷಮೆಯನ್ನು ಕೋರಲು ತಾನು ತಪ್ಪಿಬಿದ್ದಾಗ ತನಗಾದ ಪ್ರಾಣಸಂಕಟವನ್ನೂ ಹಾಗೂ ಪಶ್ಚಾತ್ತಾಪಪಟ್ಟು ದೇವರಿಗೆ ತಪ್ಪೊಪ್ಪಿಗೆಯನ್ನು ಮಾಡುವುದರಿಂದ ಬಂದ ಉಪಶಮನವನ್ನೂ ಅವನು ವರ್ಣಿಸಿದನು. ಅನಂತರ ದಾವೀದನು ಹಾಡಿದ್ದು: “ಇದರಿಂದ [ನಿಜವಾಗಿ ಪಶ್ಚಾತ್ತಾಪಿ ವ್ಯಕ್ತಿಗಳಿಗೆ ಯೆಹೋವನ ಕ್ಷಮೆಯು ಲಭ್ಯವಿರುವುದರಿಂದ] ಭಕ್ತರೆಲ್ಲರೂ [“ಪ್ರತಿಯೊಬ್ಬ ನಿಷ್ಠಾವಂತನು,” NW] ಸಕಾಲದಲ್ಲಿ ನಿನ್ನನ್ನು ಪ್ರಾರ್ಥಿಸಲಿ.”—ಕೀರ್ತನೆ 32:6.
19. ನಾವು ಪ್ರಾರ್ಥನೆಯಲ್ಲಿ ನಿಷ್ಠಾವಂತ ಕೈಗಳನ್ನೆತ್ತಬೇಕು ಏಕೆ?
19 ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವು ಅಮೂಲ್ಯವೆಂದೆಣಿಸುವುದಾದರೆ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಾವು ಆತನ ಕರುಣೆಗಾಗಿ ಪ್ರಾರ್ಥಿಸುವೆವು. ಕರುಣೆ ಮತ್ತು ಸಮಯೋಚಿತ ಸಹಾಯವನ್ನು ಪಡೆಯಲಿಕ್ಕೋಸ್ಕರ ನಾವು ನಂಬಿಕೆಯಿಂದ ಅಪಾತ್ರದಯೆಯ ಸಿಂಹಾಸನವನ್ನು ವಾಕ್ಸ್ವಾತಂತ್ರ್ಯದೊಂದಿಗೆ ಸಮೀಪಿಸಬಲ್ಲೆವು. (ಇಬ್ರಿಯ 4:16) ಪ್ರಾರ್ಥನೆ ಮಾಡಲು ಎಷ್ಟೊಂದು ಕಾರಣಗಳಿವೆ! ಆದುದರಿಂದ ದೇವರಿಗೆ ಹೃತ್ಪೂರ್ವಕವಾದ ಉಪಕಾರಸ್ತುತಿಯ ಪದಗಳೊಂದಿಗೆ ನಾವು ‘ಎಡಬಿಡದೆ ಪ್ರಾರ್ಥನೆಮಾಡೋಣ.’ (1 ಥೆಸಲೊನೀಕ 5:17) ಹಗಲೂರಾತ್ರಿ ನಾವು ಪ್ರಾರ್ಥನೆಯಲ್ಲಿ ನಮ್ಮ ನಿಷ್ಠಾವಂತ ಕೈಗಳನ್ನೆತ್ತೋಣ.
ನೀವು ಹೇಗೆ ಉತ್ತರಿಸುವಿರಿ?
◻ ಸಾರ್ವಜನಿಕ ಪ್ರಾರ್ಥನೆಯ ಕುರಿತಾಗಿ ಮುಂಚಿತವಾಗಿಯೇ ಯೋಚಿಸುವುದು ಏಕೆ ಪ್ರಯೋಜನಕರವಾಗಿದೆ?
◻ ನಾವು ಏಕೆ ಗೌರವಪೂರ್ವಕವಾಗಿ ಮತ್ತು ಘನತೆಯಿಂದ ಪ್ರಾರ್ಥಿಸಬೇಕು?
◻ ನಾವು ಪ್ರಾರ್ಥಿಸುವಾಗ ಯಾವ ಮನೋಭಾವವನ್ನು ಪ್ರದರ್ಶಿಸಬೇಕು?
◻ ಪ್ರಾರ್ಥನೆಮಾಡುವಾಗ, ನಾವು ಏಕೆ ಉಪಕಾರಸ್ತುತಿಗಳನ್ನು ತಿಳಿಸಲು ಮರೆಯಬಾರದು?
◻ ನಾವು ಪ್ರಾರ್ಥನೆಯ ಮೂಲಕ ಸಾಂತ್ವನವನ್ನು ಪಡೆದುಕೊಳ್ಳಬಲ್ಲೆವೆಂದು ಬೈಬಲ್ ಹೇಗೆ ತೋರಿಸುತ್ತದೆ?
[ಪುಟ 17 ರಲ್ಲಿರುವ ಚಿತ್ರ]
ಯೆಹೋವನ ಆಲಯದ ಸಮರ್ಪಣೆಯ ಸಮಯದಲ್ಲಿ ರಾಜ ಸೊಲೊಮೋನನು ತನ್ನ ಸಾರ್ವಜನಿಕ ಪ್ರಾರ್ಥನೆಯಲ್ಲಿ ನಮ್ರತೆಯನ್ನು ತೋರಿಸಿದನು
[ಪುಟ 18 ರಲ್ಲಿರುವ ಚಿತ್ರ]
ಹನ್ನಳಂತೆ, ನೀವು ಪ್ರಾರ್ಥನೆಯ ಮೂಲಕ ಸಾಂತ್ವನವನ್ನು ಪಡೆದುಕೊಳ್ಳಬಹುದು