ನೀವು ಹಿತಕರವಾದ ಮನೋರಂಜನೆಯನ್ನು ಕಂಡುಕೊಳ್ಳಸಾಧ್ಯವಿದೆ
ಬೈಬಲು ಮನೋರಂಜನೆಯ ಆನಂದಗಳನ್ನು ಖಂಡಿಸುವುದಿಲ್ಲ, ಇಲ್ಲವೆ ಆಟಪಾಟಗಳ ಸುಖಾನುಭವವನ್ನು ಕಾಲಹರಣವಾಗಿ ಭಾವಿಸುವುದೂ ಇಲ್ಲ. ಇದಕ್ಕೆ ವಿರುದ್ಧವಾಗಿ, “ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಇದೆಯೆಂದು ಪ್ರಸಂಗಿ 3:4 ಹೇಳುತ್ತದೆ.a ಪ್ರಾಚೀನ ಇಸ್ರಾಯೇಲಿನಲ್ಲಿ ದೇವರ ಜನರು, ಸಂಗೀತ, ನೃತ್ಯ, ಮತ್ತು ಆಟಗಳನ್ನು ಸೇರಿಸಿ, ವಿವಿಧ ಪ್ರಕಾರಗಳ ಮನೋರಂಜನೆಯಲ್ಲಿ ಆನಂದಿಸಿದರು. ಸ್ವತಃ ಯೇಸು ವಿವಾಹದ ಭಾರಿ ಔತಣಕ್ಕೆ ಮತ್ತು ಇನ್ನೊಂದು ಸಂದರ್ಭದಲ್ಲಿ “ದೊಡ್ಡ ಔತಣ”ಕ್ಕೆ ಹಾಜರಾದನು. (ಲೂಕ 5:29: ಯೋಹಾನ 2:1, 2) ಆದುದರಿಂದ ಒಂದು ಸುಸಮಯವನ್ನು ಅನುಭವಿಸುವುದರ ಕುರಿತಾಗಿ ಬೈಬಲು ಯಾವ ವಿರೋಧವನ್ನೂ ವ್ಯಕ್ತಪಡಿಸುವುದಿಲ್ಲ.
ಆದಾಗಲೂ, ಇಂದಿನ ಮನೋರಂಜನೆಯಲ್ಲಿ ಹೆಚ್ಚಿನದ್ದು, ದೇವರನ್ನು ಅಪ್ರಸನ್ನಗೊಳಿಸುವ ನಡತೆಯನ್ನು ಮಹಿಮೆಪಡಿಸುವುದರಿಂದ, ಮನೋರಂಜನೆಯ ಆಯ್ಕೆಮಾಡುವುದಕ್ಕಾಗಿರುವ ನಿಮ್ಮ ಮಟ್ಟಗಳು ಹಿತಕರವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡಸಾಧ್ಯವಿದೆ? ಎಂಬ ಪ್ರಶ್ನೆಯು ಏಳುತ್ತದೆ.
ಆಯ್ಕೆಮಾಡುವವರಾಗಿರಿ
ತಮ್ಮ ಮನೋರಂಜನೆಯ ಆಯ್ಕೆಮಾಡುವುದರಲ್ಲಿ ಕ್ರೈಸ್ತರು, ಬೈಬಲಿನ ಮೂಲತತ್ವಗಳಿಂದ ಮಾರ್ಗದರ್ಶಿಸಲ್ಪಡಲು ಬಯಸುವರು. ಉದಾಹರಣೆಗೆ, ಕೀರ್ತನೆಗಾರನಾದ ದಾವೀದನು ಬರೆದುದು: “ಯೆಹೋವನು ತಾನೇ ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ, ಮತ್ತು ಹಿಂಸಾಚಾರವನ್ನು ಪ್ರೀತಿಸುವವನನ್ನು ಆತನ ಪ್ರಾಣವು ಖಂಡಿತವಾಗಿಯೂ ದ್ವೇಷಿಸುತ್ತದೆ.” (ಕೀರ್ತನೆ 11:5, NW) ಮತ್ತು ಪೌಲನು ಕೊಲೊಸ್ಸೆಯವರಿಗೆ ಬರೆದುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ . . . ಲೋಭ . . . ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.”—ಕೊಲೊಸ್ಸೆ 3:5, 8.
ಇಂದು ಲಭ್ಯವಿರುವ ಹೆಚ್ಚಿನ ಮನೋರಂಜನೆಯು, ಸ್ಪಷ್ಟವಾಗಿ ಈ ಪ್ರೇರಿತ ಸಲಹೆಯನ್ನು ಉಲ್ಲಂಘಿಸುತ್ತದೆ. ‘ಆದರೆ ಪರದೆಯ ಮೇಲೆ ಚಿತ್ರಿಸಲ್ಪಡುವ ವಿಷಯಗಳನ್ನು ನೋಡಿ, ನಾನು ಎಂದೂ ಹಾಗೆ ಮಾಡಲಾರೆ,’ ಎಂದು ಕೆಲವರು ಆಕ್ಷೇಪಿಸಬಹುದು. ಅದು ನಿಜವಾಗಿರಬಹುದು. ಆದರೆ ನಿಮ್ಮ ಮನೋರಂಜನೆಯು, ನೀವು ಯಾವ ರೀತಿಯ ವ್ಯಕ್ತಿಯಾಗುವಿರೆಂದು ಸೂಚಿಸುವುದಿಲ್ಲವಾದರೂ, ಈಗಾಗಲೇ ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ ಎಂಬ ವಿಷಯವನ್ನು ಅದು ಪ್ರಕಟಪಡಿಸಬಹುದು. ದೃಷ್ಟಾಂತಕ್ಕೆ ನೀವು “ಹಿಂಸಾಚಾರವನ್ನು ಪ್ರೀತಿಸುವವ”ರಲ್ಲಿ ಇಲ್ಲವೆ ‘ಜಾರತ್ವ, ಕಾಮಾಭಿಲಾಷೆ, ಲೋಭ, ಮತ್ತು ದುರ್ಭಾಷೆ’ಯ ವಿಷಯದಲ್ಲಿ ಮಗ್ನರಾಗಿರುವವರಲ್ಲಿ ಒಬ್ಬರೊ ಅಥವಾ ನಿಜವಾಗಿಯೂ “ಕೆಟ್ಟದ್ದನ್ನು ದ್ವೇಷಿಸು”ವವರಲ್ಲಿ (NW) ಒಬ್ಬರೊ ಎಂಬುದಾಗಿ ಅದು ಹೇಳಬಹುದು.—ಕೀರ್ತನೆ 97:10.
ಪೌಲನು ಫಿಲಿಪ್ಪಿಯವರಿಗೆ ಬರೆದುದು: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”—ಫಿಲಿಪ್ಪಿ 4:8.
ಅಂದರೆ, ಯಾವುದೊ ಬಗೆಯ ಅನೀತಿ, ಬಹುಶಃ ಒಂದು ಅಪರಾಧದೊಂದಿಗೆ ವ್ಯವಹರಿಸುವ ಒಂದು ಕಥಾವಸ್ತುವಿರುವ ಪ್ರತಿಯೊಂದು ಚಲನ ಚಿತ್ರ, ಪುಸ್ತಕ ಇಲ್ಲವೆ ಟಿವಿ ಪ್ರದರ್ಶನವು, ಅನಿವಾರ್ಯವಾಗಿ ಕೆಟ್ಟದ್ದಾಗಿದೆ ಎಂಬುದು ಈ ಶಾಸ್ತ್ರವಚನದ ಅರ್ಥವೊ? ಅಥವಾ ಎಲ್ಲ ಹಾಸ್ಯನಾಟಕಗಳು, ಅವು “ಮಾನ್ಯ”ವಾದವುಗಳಲ್ಲದ ಕಾರಣ, ಅನರ್ಹವೆಂದು ನಿರ್ಣಯಿಸಲ್ಪಟ್ಟಿವೆಯೊ? ಇಲ್ಲ, ಪೂರ್ವಾಪರವು ತೋರಿಸುವುದೇನೆಂದರೆ, ಪೌಲನು ಮನೋರಂಜನೆಯ ಕುರಿತಾಗಿ ಅಲ್ಲ, ಬದಲಾಗಿ ಹೃದಯದ ಮನನಗಳ—ಇವು ಯೆಹೋವನಿಗೆ ಮೆಚ್ಚಿಗೆಯಾಗುವ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು—ಕುರಿತಾಗಿ ಚರ್ಚಿಸುತ್ತಿದ್ದನು. (ಕೀರ್ತನೆ 19:14) ಆದರೂ, ಪೌಲನು ಹೇಳಿದಂತಹ ಸಂಗತಿಯು, ಮನೋರಂಜನೆಯನ್ನು ಆರಿಸಿಕೊಳ್ಳುವ ವಿಷಯದಲ್ಲಿ ನಮಗೆ ಸಹಾಯಮಾಡಬಲ್ಲದು. ಫಿಲಿಪ್ಪಿ 4:8ರಲ್ಲಿರುವ ಮೂಲತತ್ವವನ್ನು ಉಪಯೋಗಿಸುತ್ತಾ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಸಾಧ್ಯವಿದೆ, ‘ಮನೋರಂಜನೆಯ ವಿಷಯದಲ್ಲಿನ ನನ್ನ ಆಯ್ಕೆಯು, ಶುದ್ಧವಾಗಿರದ ವಿಷಯಗಳ ಕುರಿತು ಮನನಮಾಡುವಂತೆ ನನ್ನನ್ನು ನಡೆಸುತ್ತದೊ?’ ಹಾಗೆ ಮಾಡುವಲ್ಲಿ, ನಾವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ.
ಆದರೆ, ಮನೋರಂಜನೆಯ ಮಟ್ಟವನ್ನು ನಿರ್ಧರಿಸುವುದರಲ್ಲಿ, ಕ್ರೈಸ್ತರು ‘ತಮ್ಮ ವಿವೇಚನೆಯು ಎಲ್ಲ ಮನುಷ್ಯರಿಗೆ ಗೊತ್ತಾಗುವಂತೆ ಬಿಡ’ಬೇಕು (NW). (ಫಿಲಿಪ್ಪಿ 4:5) ಸ್ಪಷ್ಟವಾಗಿಯೇ, ಸತ್ಯ ಕ್ರೈಸ್ತರಿಗೆ ಸೂಕ್ತವಾಗಿರದ ಅತಿರೇಕಗಳು ಮನೋರಂಜನೆಯಲ್ಲಿವೆ. ಅದೂ ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯು ವಿಷಯಗಳನ್ನು ಜಾಗರೂಕವಾಗಿ ತೂಗಿನೋಡಿ, ದೇವರು ಮತ್ತು ಮನುಷ್ಯನ ಮುಂದೆ ಶುದ್ಧವಾದ ಮನಸ್ಸಾಕ್ಷಿಯುಳ್ಳವನಾಗಿರುವಂತೆ ಅವನನ್ನು ಅನುಮತಿಸುವ ನಿರ್ಣಯಗಳನ್ನು ಮಾಡಬೇಕು. (1 ಕೊರಿಂಥ 10:31-33; 1 ಪೇತ್ರ 3:21) ಇತರರನ್ನು ಕ್ಷುಲ್ಲಕ ವಿಷಯಗಳಿಗಾಗಿ ಖಂಡಿಸುವುದು ಇಲ್ಲವೆ ಇತರರು ಏನು ಮಾಡಬೇಕೆಂಬುದನ್ನು ನಿರ್ಧರಿಸುವ ನಿರಂಕುಶ ನಿಯಮಗಳನ್ನು ಸ್ಥಾಪಿಸುವುದು ಯೋಗ್ಯವಾಗಿರಲಿಕ್ಕಿಲ್ಲ.b—ರೋಮಾಪುರ 14:4; 1 ಕೊರಿಂಥ 4:6.
ಹೆತ್ತವರ ಪಾತ್ರ
ಮನೋರಂಜನೆಯ ವಿಷಯದಲ್ಲಿ ಹೆತ್ತವರು ಒಂದು ನಿರ್ಧಾರಕ ಪಾತ್ರವನ್ನು ವಹಿಸುತ್ತಾರೆ. ಪೌಲನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಹೀಗೆ, ಕುಟುಂಬದ ಸದಸ್ಯರಿಗೆ ಪ್ರಾಪಂಚಿಕವಾಗಿ ಮಾತ್ರವಲ್ಲ, ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಒದಗಿಸುವ ಹಂಗು ಹೆತ್ತವರಿಗಿದೆ. ಇದು ಹಿತಕರವಾದ ವಿಶ್ರಾಂತಿಗಾಗಿ ಏರ್ಪಾಡು ಮಾಡುವುದನ್ನೂ ಒಳಗೊಳ್ಳುವುದು.—ಜ್ಞಾನೋಕ್ತಿ 24:27.
ಕೆಲವೊಮ್ಮೆ ಕುಟುಂಬ ಜೀವನದ ಈ ಅಂಶವನ್ನು ಕಡೆಗಣಿಸಲಾಗುತ್ತದೆ. ನೈಜೀರಿಯದಲ್ಲಿರುವ ಒಬ್ಬ ಮಿಷನೆರಿಯು ಹೇಳುವುದು, “ಅಸಂತೋಷಕರವಾಗಿ, ಕೆಲವು ಹೆತ್ತವರು ಆಟಪಾಟವನ್ನು ಕಾಲಹರಣವೆಂದು ಪರಿಗಣಿಸುತ್ತಾರೆ. ಫಲಸ್ವರೂಪವಾಗಿ, ಕೆಲವು ಮಕ್ಕಳಿಗೆ ಹೆತ್ತವರ ಸ್ವಸ್ಥಕರ ಮಾರ್ಗದರ್ಶನ ಸಿಗುವುದಿಲ್ಲ, ಮತ್ತು ಅವರು ಕೆಟ್ಟ ರೀತಿಯ ಮಿತ್ರರನ್ನು ಮತ್ತು ಕೆಟ್ಟ ರೀತಿಯ ವಿನೋದವನ್ನು ಕಂಡುಕೊಳ್ಳುತ್ತಾರೆ.” ಹೆತ್ತವರೇ, ಇದು ಸಂಭವಿಸುವಂತೆ ಬಿಡಬೇಡಿರಿ! ನಿಮ್ಮ ಮಕ್ಕಳನ್ನು ನಿಜವಾಗಿಯೂ ಚೈತನ್ಯಗೊಳಿಸುವ ಹಿತಕರವಾದ ಮನೋರಂಜನೆ ಅವರಿಗೆ ಸಿಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
ಆದರೆ ಎಚ್ಚರಿಕೆಯ ಅಗತ್ಯವಿದೆ. ಕ್ರೈಸ್ತರು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ”ರಾಗಿರುವ ಇಂದಿನ ಅನೇಕರಂತೆ ಆಗಬಾರದು. (2 ತಿಮೊಥೆಯ 3:1-4) ಹೌದು, ಮನೋರಂಜನೆಯನ್ನು ಅದರ ಸ್ಥಾನದಲ್ಲಿಡಬೇಕು. ಅದು ಒಬ್ಬನ ಜೀವಿತದ ಮೇಲೆ ಅಧಿಕಾರ ನಡೆಸಬಾರದು, ಅವನನ್ನು ಚೈತನ್ಯಗೊಳಿಸಬೇಕು. ಆದುದರಿಂದ ಮಕ್ಕಳಿಗೆ ಅಷ್ಟೇ ಅಲ್ಲದೆ ವಯಸ್ಕರಿಗೂ ಯೋಗ್ಯ ರೀತಿಯ ಮನೋರಂಜನೆ ಮಾತ್ರವಲ್ಲ ಯೋಗ್ಯ ಪರಿಮಾಣದ ಮನೋರಂಜನೆಯೂ ಅಗತ್ಯ.—ಎಫೆಸ 5:15, 16.
ಇತರ ಚಟುವಟಿಕೆಗಳಲ್ಲಿ ಆನಂದಿಸಿರಿ
ಜನಪ್ರಿಯ ಮನೋರಂಜನೆಯಲ್ಲಿ ಹೆಚ್ಚಿನಾಂಶವು, ಜನರಿಗೆ ಸಕ್ರಿಯರಾಗಿರುವುದಕ್ಕಿಂತಲೂ ನಿಷ್ಕ್ರಿಯರಾಗಿರುವಂತೆ ಕಲಿಸುತ್ತದೆ. ಉದಾಹರಣೆಗೆ, ಟೆಲಿವಿಷನನ್ನು ಪರಿಗಣಿಸಿರಿ. ಟಿವಿಯನ್ನು ಆಫ್ ಮಾಡಿದ ನಂತರ ನೀವು ಮಾಡಬೇಕಾದ ವಿಷಯ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಅದರ ಸ್ವಭಾವಕ್ಕನುಗುಣವಾಗಿ [ಟೆಲಿವಿಷನ್] ನಿಷ್ಕ್ರಿಯರಾಗಿರುವಂತೆ ನಮಗೆ ಕಲಿಸುತ್ತದೆ: ಮನೋರಂಜನೆ ಮತ್ತು ಕಲಿಯುವಿಕೆ ಕೂಡ, ನಾವು ನಮ್ಮ ಸಕ್ರಿಯ ಕಲ್ಪನಾ ಶಕ್ತಿಯಿಂದಲ್ಲ ಬದಲಿಗೆ ಪ್ರಯತ್ನರಹಿತವಾಗಿ ಪಡೆದುಕೊಳ್ಳುವ ವಿಷಯವಾಗುತ್ತದೆ.” ನಿಶ್ಚಯವಾಗಿಯೂ, ನಿಷ್ಕ್ರಿಯ ಮನೋರಂಜನೆಗೂ ಒಂದು ಸ್ಥಾನವುಂಟು. ಆದರೆ ಅದು ವ್ಯಕ್ತಿಯೊಬ್ಬನ ಬಿಡುವಿನ ಸಮಯದಲ್ಲಿ ತೀರ ಹೆಚ್ಚನ್ನು ಬಳಸಿಕೊಳ್ಳುವುದಾದರೆ, ಅವನಿಂದ ರೋಮಾಂಚಕ ಸಂದರ್ಭಗಳನ್ನು ಅದು ಕಸಿದುಕೊಳ್ಳುತ್ತದೆ.
ತಾನು, “ಟಿವಿ ಜನಪ್ರಿಯವಾಗುವ ಮುಂಚೆ ಬೆಳೆದವ”ನೆಂದು ಹೇಳಿಕೊಳ್ಳುವ ಗ್ರಂಥಕರ್ತ ಜೆರಿ ಮ್ಯಾಂಡರ್, ತನ್ನ ಬಾಲ್ಯಾವಸ್ಥೆಯನ್ನು ಬಾಧಿಸಿದ ಬೇಸರದ ಸಾಂದರ್ಭಿಕ ಅವಧಿಗಳನ್ನು ವರ್ಣಿಸುತ್ತಾನೆ: “ಬೇಸರದೊಂದಿಗೆ ಕಳವಳವು ಸೇರಿತ್ತು,” ಎಂದು ಅವನು ಹೇಳುತ್ತಾನೆ. “ಅದು ಬಹಳ ಅಹಿತಕರವಾಗಿತ್ತು, ಎಷ್ಟು ಅಹಿತಕರವೆಂದರೆ, ಕ್ರಿಯೆಗೈಯಲು—ಏನನ್ನಾದರೂ ಮಾಡಲು ನಾನು ಕಟ್ಟಕಡೆಗೆ ನಿರ್ಧರಿಸುತ್ತಿದ್ದೆ. ಒಬ್ಬ ಮಿತ್ರನಿಗೆ ಫೋನ್ ಮಾಡುತ್ತಿದ್ದೆ, ಹೊರಗೆ ತಿರುಗಾಡಲು ಹೋಗುತ್ತಿದ್ದೆ. ಚೆಂಡಾಟವಾಡಲು ಹೋಗುತ್ತಿದ್ದೆ. ಓದುತ್ತಿದ್ದೆ. ಏನನ್ನಾದರೂ ಮಾಡುತ್ತಿದ್ದೆ. ಹಿನ್ನೋಟ ಬೀರುವಾಗ, ಬೇಸರದ, ‘ಏನನ್ನೂ ಮಾಡಲಿಕ್ಕಿರದ’ ಆ ಸಮಯವನ್ನು ನಾನು, ಸೃಜನಶೀಲ ಕ್ರಿಯೆಯು ಚಿಮ್ಮುವ ಗುಂಡಿಯಾಗಿ ವೀಕ್ಷಿಸುತ್ತೇನೆ.” ಇಂದು ಮಕ್ಕಳು, ಟಿವಿಯನ್ನು ಬೇಸರಕ್ಕಿರುವ ಒಂದು ಸುಲಭ ಪರಿಹಾರವಾಗಿ ಉಪಯೋಗಿಸುತ್ತಾರೆ ಎಂದು ಮ್ಯಾಂಡರ್ ಗಮನಿಸುತ್ತಾನೆ. “ಬೇಸರವು ಪ್ರೇರಿಸಬಹುದಾದ ಕಳವಳ ಮತ್ತು ಸೃಜನಶೀಲತೆ—ಎರಡನ್ನೂ ಟಿವಿಯು ನಂದಿಸುತ್ತದೆ,” ಎಂದು ಅವನು ಕೂಡಿಸುತ್ತಾನೆ.
ಹೀಗೆ, ನಿಷ್ಕ್ರಿಯತೆಗಿಂತ ಭಾಗವಹಿಸುವಿಕೆಯನ್ನು ಕೇಳಿಕೊಳ್ಳುವ ಚಟುವಟಿಕೆಗಳು, ತಾವು ಊಹಿಸಿಕೊಂಡದ್ದಕ್ಕಿಂತ ಹೆಚ್ಚು ತೃಪ್ತಿದಾಯಕವಾಗಿರಸಾಧ್ಯವೆಂದು ಅನೇಕರು ಕಂಡುಕೊಂಡಿದ್ದಾರೆ. ಇತರರೊಂದಿಗೆ ಗಟ್ಟಿಯಾಗಿ ಓದುವುದು, ಆನಂದದ ಒಂದು ಮೂಲವೆಂದು ಕೆಲವರು ಕಂಡುಕೊಂಡಿದ್ದಾರೆ. ಇತರರು, ಒಂದು ಸಂಗೀತದ ವಾದ್ಯವನ್ನು ನುಡಿಸುವುದು ಇಲ್ಲವೆ ಒಂದು ಚಿತ್ರಕ್ಕೆ ಬಣ್ಣ ಹಚ್ಚುವಂತಹ ಹವ್ಯಾಸಗಳನ್ನು ಬೆನ್ನಟ್ಟುತ್ತಾರೆ. ಹಿತಕರವಾದ ನೆರವಿಗಳನ್ನು ಏರ್ಪಡಿಸುವ ಸಂದರ್ಭಗಳೂ ಇವೆ.c (ಲೂಕ 14:12-14) ಮನೆಯ ಹೊರಗಿನ ಆಟಪಾಟದಿಂದಲೂ ಪ್ರಯೋಜನಗಳಿವೆ. ಸ್ವೀಡನ್ನಲ್ಲಿರುವ ಒಬ್ಬ ಎಚ್ಚರ! ಸುದ್ದಿಗಾರನು ವರದಿಸುವುದು: “ಕೆಲವು ಕುಟುಂಬಗಳು ಬೀಡುಹೂಡಲು ಇಲ್ಲವೆ ಮೀನು ಹಿಡಿಯಲು ಹೋಗುತ್ತವೆ, ಅಥವಾ ಕಾಡಿನ ವಿಹಾರಗಳು, ದೋಣಿಯ ಸಂಚಾರಗಳು, ಪರ್ವತಗಳಲ್ಲಿ ವಾಯುವಿಹಾರಗಳು, ಇನ್ನು ಮುಂತಾದವುಗಳನ್ನು ಕೈಕೊಳ್ಳುತ್ತವೆ. ಎಳೆಯ ಮಕ್ಕಳು ಹರ್ಷಗೊಳ್ಳುತ್ತಾರೆ.”
ಮನೋರಂಜನೆಯಲ್ಲಿ ಭ್ರಷ್ಟಗೊಳಿಸುವ ಅಂಶಗಳು ಇರುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ರಾಷ್ಟ್ರಗಳ ಜನರು “ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ” ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (ಎಫೆಸ 4:17) ಆದುದರಿಂದ, ಮನೋರಂಜಿಸುವಂತಹದ್ದೆಂದು ಅವರು ಕಂಡುಕೊಳ್ಳುವ ವಿಷಯದಲ್ಲಿ ಹೆಚ್ಚಿನದ್ದು, “ಶರೀರಭಾವದ ಕರ್ಮ”ಗಳಿಗೆ ನೆರವು ನೀಡುವುದೆಂಬುದು ತೀರ ನಿರೀಕ್ಷಾಯೋಗ್ಯವಾದದ್ದು. (ಗಲಾತ್ಯ 5:19-21) ಹಾಗಿದ್ದರೂ, ತಮ್ಮ ಮನೋರಂಜನೆಯ ಗುಣಮಟ್ಟ ಹಾಗೂ ಪರಿಮಾಣದ ಸಂಬಂಧದಲ್ಲಿ ಸ್ವಸ್ಥಕರ ನಿರ್ಣಯಗಳನ್ನು ಮಾಡುವಂತೆ ಕ್ರೈಸ್ತರು ತಮ್ಮನ್ನೇ ತರಬೇತುಗೊಳಿಸಿಕೊಳ್ಳಬಲ್ಲರು. ಆಟಪಾಟವನ್ನು ಅವರು ಕುಟುಂಬದ ವಿಷಯವಾಗಿಯೂ ಮಾಡಬಲ್ಲರು. ಮತ್ತು ಚೈತನ್ಯದಾಯಕವಾಗಿರುವ ಹಾಗೂ ಬರಲಿರುವ ವರ್ಷಗಳಿಗಾಗಿ ಸವಿನೆನಪುಗಳನ್ನು ಒದಗಿಸುವ ಹೊಸ ಚಟುವಟಿಕೆಗಳನ್ನು ಸಹ ಪ್ರಯತ್ನಿಸಿ ನೋಡಸಾಧ್ಯವಿದೆ. ಹೌದು, ನೀವು ಹಿತಕರವಾದ ಮನೋರಂಜನೆಯನ್ನು ಕಂಡುಕೊಳ್ಳಸಾಧ್ಯವಿದೆ!
[ಅಧ್ಯಯನ ಪ್ರಶ್ನೆಗಳು]
a “ನಗುವ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದದ ಇತರ ರೂಪಗಳನ್ನು, “ಆಡುವ,” “ಒಂದಿಷ್ಟು ವಿನೋದವನ್ನು ನೀಡುವ,” “ಆಚರಿಸುವ,” ಇಲ್ಲವೆ “ಸುಸಮಯವನ್ನು ಅನುಭವಿಸುವ” ಎಂಬುದಾಗಿ ತರ್ಜುಮೆಮಾಡಸಾಧ್ಯವಿದೆ.
b ಹೆಚ್ಚಿನ ಮಾಹಿತಿಗಾಗಿ, ಅವೇಕ್! ಪತ್ರಿಕೆಯ ಮಾರ್ಚ್ 22, 1978ರ ಸಂಚಿಕೆ, ಪುಟಗಳು 16-21, ಮತ್ತು ಡಿಸೆಂಬರ್ 8, 1995ರ ಸಂಚಿಕೆ, ಪುಟಗಳು 6-8ನ್ನು ನೋಡಿರಿ.
c ಸಾಮಾಜಿಕ ನೆರವಿಗಳ ಕುರಿತ ಶಾಸ್ತ್ರೀಯ ಮಾರ್ಗದರ್ಶನಗಳಿಗಾಗಿ, ಕಾವಲಿನಬುರುಜು ಪತ್ರಿಕೆಯ ಆಗಸ್ಟ್ 15, 1992 (ಇಂಗ್ಲಿಷ್), ಪುಟಗಳು 15-20 ಮತ್ತು ಅಕ್ಟೋಬರ್ 1, 1996, ಪುಟಗಳು 18-19ನ್ನು ನೋಡಿರಿ.
[ಪುಟ 0 ರಲ್ಲಿರುವ ಚಿತ್ರ]
ಹಿತಕರವಾದ ಮನೋರಂಜನೆಯು ಪ್ರತಿಫಲದಾಯಕವಾಗಿರಬಲ್ಲದು