ನಿಜ ಕ್ರೈಸ್ತತ್ವಕ್ಕೆ ಕೀಲಿಕೈ ಯಾವುದು?
ಇಂದು ಲೋಕದ ಬೇರೆ ಯಾವುದೇ ಧರ್ಮಕ್ಕಿಂತ ಕ್ರೈಸ್ತತ್ವಕ್ಕೆ ತಾವು ಸೇರಿದವರೆಂದು ಹೇಳುವ ಜನರು ಎಷ್ಟೋ ಹೆಚ್ಚು. ಆದರೆ ಈ ಸ್ವಯಂ-ವಾದಿ ಕ್ರೈಸ್ತರ ನಂಬಿಕೆಗಳು ಪ್ರತಿವಿರುದ್ಧವಾಗಿರುತ್ತವೆ, ಐಕ್ಯತೆಯು ಅವರಲ್ಲಿ ಇಲ್ಲ ಮತ್ತು ಕೆಲವೊಮ್ಮೆ ಅವರು ಒಬ್ಬರನ್ನೊಬ್ಬರು ಕೊಲ್ಲುವುದೂ ಉಂಟು. ಹೀಗೆ ಅನೇಕರು ನಿಜ ಕ್ರೈಸ್ತರಲವ್ಲೆಂಬದು ವ್ಯಕ್ತ. ನಮ್ಮ ದಿನಗಳಲ್ಲಿ ಅನೇಕರು ಯೇಸುವನ್ನು “ಸ್ವಾಮೀ, ಸ್ವಾಮೀ,” ಎಂದು ಕರೆಯುವರೆಂದೂ, ಅಂದರೆ ತಮ್ಮನ್ನು ಕ್ರೈಸ್ತರೆಂದು ಹೇಳಿಕೊಳ್ಳುವರೆಂದೂ, ಆದರೆ ಆತನು ಅವರಿಗೆ “ನಾನೆಂದೂ ನಿಮ್ಮ ಗುರುತು ಕಾಣೆನು, ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ” ಎಂದು ಹೇಳುವೆನೆಂದೂ ಯೇಸುವಂದನು. (ಮತ್ತಾಯ 7:21, 23) ಆ ಗುಂಪಿನಲ್ಲಿ ನಮ್ಮಲ್ಲಿ ಯಾವನೂ ಇರಲು ಬಯಸಲಿಕ್ಕಿಲ್ಲ ನಿಶ್ಚಯ! ಹೀಗಿರಲಾಗಿ, ನಾವು ನಿಜ ಕ್ರೈಸ್ತರೋ ಅಲ್ಲವೋ ಎಂದು ನಮಗೆ ತಿಳಿಯುವುದು ಹೇಗೆ?
ವಾಸ್ತವಾಂಶವೇನಂದರೆ, ಒಬ್ಬ ನಿಜ ಕ್ರೈಸ್ತನಾಗುವುದಕ್ಕೆ ಅನೇಕ ಸಂಗತಿಗಳು ಬೇಕು. ನಿಜ ಕ್ರೈಸ್ತನಿಗೆ ದೃಢವಾದ ನಂಬಿಕೆ ಇರಬೇಕು ಯಾಕಂದರೆ “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ.” (ಇಬ್ರಿಯ 11:6) ಆ ಬಲವಾದ ನಂಬಿಕೆಯು ಯೋಗ್ಯವಾದ ಕ್ರಿಯೆಗಳಿಂದ ಜತೆಗೂಡಿರತಕ್ಕದ್ದು. ಶಿಷ್ಯ ಯಾಕೋಬನು, “ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದೇ” ಎಂದು ಎಚ್ಚರಿಸಿದ್ದಾನೆ. (ಯಾಕೋಬ 2:26) ಅದಲ್ಲದೆ ಕ್ರೈಸ್ತನಿಗೆ, “ನಂಬಿಗಸ್ತನೂ ವಿವೇಕಿಯೂ ಆಗಿರುವ ಆಳಿನ” ಅಧಿಕಾರವನ್ನು ಅಂಗೀಕರಿಸಲಿಕ್ಕಿದೆ. (ಮತ್ತಾಯ 24:45-47) ಆದರೆ ನಿಜ ಕ್ರೈಸ್ತತ್ವದ ಕೀಲಿಕೈ ಇದಕ್ಕಿಂತ ಬೇರೆಯಾದ ಒಂದು ಸಂಗತಿ.
ಆ ಕೀಲಿಕೈ ಯಾವುದು? ಅಪೊಸ್ತಲ ಪೌಲನು ಅದನ್ನು ಕೊರಿಂಥದವರಿಗೆ ಬರೆದ ತನ್ನ ಮೊದಲ ಪತ್ರದಲ್ಲಿ ವಿವರಿಸಿದ್ದಾನೆ: “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ, ನನಗೆ ಪ್ರವಾದನಾ ವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿ ಇಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವದೆಲ್ಲವನ್ನು ಅನ್ನದಾನ ಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.”—1 ಕೊರಿಂಥ 13:1-3.
ಹೀಗೆ ಪ್ರೀತಿ ನಿಜ ಕ್ರೈಸ್ತತ್ವಕ್ಕೆ ಕೀಲಿಕೈಯಾಗಿದೆ. ನಂಬಿಕೆ, ಕ್ರಿಯೆಗಳು ಮತ್ತು ಯೋಗ್ಯ ಸಹವಾಸವು ಸಹ ಅತ್ಯಗತ್ಯ, ಅತ್ಯಾವಶ್ಯಕ. ಆದರೆ ಪ್ರೀತಿಯ ಹೊರತು, ಅವುಗಳ ಬೆಲೆಯು ಸಿದ್ಧಿಗೆ ಬರುವುದಿಲ್ಲ. ಅದು ಏಕೆ?
ಮೂಲತಃ ಏಕೆಂದರೆ ನಾವು ಆರಾಧಿಸುವ ದೇವರ ಗುಣಲಕ್ಷಣದಿಂದಾಗಿ. ನಿಜ ಕ್ರೈಸ್ತತ್ವದ ದೇವರಾದ ಯೆಹೋವನನ್ನು, ಅಪೊಸ್ತಲ ಯೋಹಾನನು ಈ ಮಾತುಗಳಲ್ಲಿ ವರ್ಣಿಸಿದ್ದಾನೆ: “ದೇವರು ಪ್ರೀತಿ ಸ್ವರೂಪನು.” (1 ಯೋಹಾನ 4:8) ಯೆಹೋವ ದೇವರಿಗೆ ಶಕ್ತಿ, ನ್ಯಾಯ, ಜ್ಞಾನಗಳೆಂಬ ಇನ್ನೆಷ್ಟೋ ಬೇರೆ ಗುಣಗಳಿವೆ, ಆದರೆ ಆತನು ಸರ್ವೋತ್ಕೃಷವ್ಟಾಗಿ ಪ್ರೀತಿಯ ದೇವರಾಗಿರುವುದರಿಂದ, ಆತನ ಆರಾಧಕರು ಯಾವ ರೀತಿಯವರಾಗಿರಬೇಕೆಂದು ಅವನು ಬಯಸುತ್ತಾನೆ? ಆತನನ್ನು ಅನುಕರಿಸುವವರೂ ಪ್ರೀತಿಯನ್ನು ಬೆಳೆಸಿಕೊಳ್ಳುವವರೂ ಆದ ವ್ಯಕ್ತಿಗಳೆಂಬದು ನಿಶ್ಚಯ.—ಮತ್ತಾಯ 5:44, 45; 22:37-39.
ಒಂದು ಯೋಗ್ಯ ಹೇತು
ಹೌದು, ತಾವು ಆರಾಧಿಸುವ ದೇವರಂತೆ ಕ್ರೈಸ್ತರನ್ನು ಮಾಡುವುದು ಅವರಲ್ಲಿರುವ ಪ್ರೀತಿಯೇ. ಅಂದರೆ, ಅವರ ಹೇತುಗಳು ದೇವರ ಹೇತುಗಳಿಗೆ ಸರಿಹೋಲುತ್ತವೆ ಎಂದರ್ಥ. ನಿತ್ಯಜೀವವನ್ನು ಪಡೆಯುವ ಒಂದು ಸಂದರ್ಭವನ್ನು ನಮಗೆ ಕೊಡುವದಕ್ಕಾಗಿ ಯೇಸುವನ್ನು ಭೂಮಿಗೆ ಕಳುಹಿಸಲು ಯೆಹೋವ ದೇವರನ್ನು ಎಲ್ಲದಕ್ಕಿಂತ ಹೆಚ್ಚು ಪ್ರೇರೇಪಿಸಿದ ಹೇತು ಅದ್ಯಾವುದು? ಪ್ರೀತಿಯೇ. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಹಾಗಾದರೆ ದೇವರ ಚಿತ್ತವನ್ನು ಮಾಡುವದಕ್ಕೆ ನಮಗಿರುವ ಹೇತು ಏನಾಗಿರಬೇಕು? ಪುನಃ, ಅದು ಪ್ರೀತಿಯೇ. “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.”—1 ಯೋಹಾನ 5:3.
ಒಂದು ಕೆಟ್ಟ ಹೇತುವಿನಿಂದ ದೇವರನ್ನು ಸೇವಿಸ ಸಾಧ್ಯವಿದೆಯೇ? ಹೌದು. ಪೌಲನು ತನ್ನ ಕಾಲದಲ್ಲಿ, ಹೊಟ್ಟೇಕಿಚ್ಚು ಮತ್ತು ಪ್ರತಿಸ್ಪರ್ಧೆಯಿಂದಾಗಿ ಸೇವೆಮಾಡಿದ ಕೆಲವರ ಕುರಿತು ತಿಳಿಸಿದ್ದಾನೆ. (ಫಿಲಿಪ್ಪಿಯ 1:15-17) ಅದು ನಮಗೂ ಸಂಭವಿಸಬಹುದು. ಈ ಲೋಕವು ಪೈಪೋಟಿಗೆ ಖ್ಯಾತ, ಮತ್ತು ಆ ಆತ್ಮವು ನಮಗೂ ತಗಲಬಲ್ಲದು. ನಾವು ಒಳ್ಳೆಯ ಬಹಿರಂಗ ಭಾಷಕರು ಅಥವಾ ಇತರರಿಗಿಂತ ಹೆಚ್ಚು ಸಾಹಿತ್ಯಗಳನ್ನು ನೀಡಶಕ್ತರು ಎಂಬ ಹೆಮ್ಮೆ ಒಂದುವೇಳೆ ನಮಗಿರಬಹುದು. ನಾವು ನಮ್ಮ ಸೇವಾ ಸುಯೋಗಗಳನ್ನು ಬೇರೆಯವರು ಆನಂದಿಸುವ ಸುಯೋಗಗಳಿಗೆ ಹೋಲಿಸುತ್ತಾ, ಜಂಬಕೊಚ್ಚಬಹುದು ಇಲ್ಲವೇ ಹೊಟ್ಟೇಕಿಚ್ಚು ಪಡಲೂ ಬಹುದು. ಒಬ್ಬ ಹಿರಿಯನು ತನಗಿರುವ ಅಧಿಕಾರ ಸ್ಥಾನಕ್ಕಾಗಿ ಗರ್ವದಿಂದಿರಬಹುದು, ಯೋಗ್ಯತೆಯುಳ್ಳ ಯುವ ಪುರುಷನೊಬ್ಬನು ಪ್ರಗತಿ ಮಾಡದಂತೆ ತಡೆದು ಹಿಡಿಯುವ ಬಿಂದುವಿಗೂ ಅವನಿಳಿಯಬಹುದು. ವೈಯಕ್ತಿಕ ಲಾಭಕ್ಕಾಗಿ ನಾವು ಒಂದುವೇಳೆ ಧನಿಕ ಕ್ರೈಸ್ತರ ಸ್ನೇಹವನ್ನು ಬೆಳೆಸಲು ಪ್ರೇರಿತರಾಗಿ ಅದೇ ಸಮಯದಲ್ಲಿ ಬಡವರನ್ನು ಅಸಡ್ಡೆ ಮಾಡಲೂ ಬಹುದು.
ಇದು ಸಂಭವಿಸ ಸಾಧ್ಯವಿದೆ ಯಾಕಂದರೆ ನಾವು ಅಪೂರ್ಣರಾಗಿದ್ದೇವೆ. ಆದರೂ ನಾವು—ಯೆಹೋವನಂತೆ—ಪ್ರೀತಿಯನ್ನು ನಮ್ಮ ಮುಖ್ಯ ಪ್ರಚೋದನೆಯಾಗಿ ಮಾಡುವುದಾದರೆ, ಅಂಥ ಪ್ರವೃತ್ತಿಗಳ ವಿರುದ್ಧ ನಾವು ಹೋರಾಡುವೆವು. ಸ್ವಾರ್ಥತೆ, ನಮ್ಮನ್ನು ಹೆಚ್ಚಿಸಿಕೊಳ್ಳುವ ಅಪೇಕ್ಷೆ ಅಥವಾ ದುರಹಂಕಾರದ ಗರ್ವವು ನಮ್ಮ ಪ್ರೀತಿಯನ್ನು ಹೊರತಳ್ಳುವದು, ಹೀಗೆ ನಾವು “ಯಾವ ಪ್ರಯೋಜನವೂ” ಇಲ್ಲದವರಾಗುವೆವು.—ಜ್ಞಾನೋಕ್ತಿ 11:2; 1 ಕೊರಿಂಥ 13:3.
ಸ್ವಾರ್ಥಪರ ಲೋಕದಲ್ಲಿ ಪ್ರೀತಿ
ತನ್ನ ಹಿಂಬಾಲಕರು “ಈ ಲೋಕದ ಭಾಗವಾಗದೇ” ಇರುವರೆಂದು ಯೇಸು ಹೇಳಿದನು. (ಯೋಹಾನ 17:14) ನಮ್ಮ ಸುತ್ತಲಿರುವ ಈ ಲೋಕದ ಪ್ರಭಾವದಿಂದ ನಾವು ಮುಳುಗಿಸಲ್ಪಡದಂತೆ ತಪ್ಪಿಸಿಕೊಳ್ಳುವದಾದರೂ ಹೇಗೆ? ಪ್ರೀತಿಯು ಸಹಾಯ ಮಾಡುವುದು. ಉದಾಹರಣೆಗೆ, ಇಂದು ಜನರು, “ದೇವರನ್ನು ಪ್ರೀತಿಸದೆ ಭೋಗಗಳನ್ನು ಪ್ರೀತಿಸುವವರಾಗಿದ್ದಾರೆ.” (2 ತಿಮೊಥಿ 3:4) ನಾವು ಆ ರೀತಿ ಇರದಂತೆ ಯೋಹಾನನು ನಮ್ಮನ್ನು ಎಚ್ಚರಿಸಿದ್ದಾನೆ. ಅವನಂದದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.”—1 ಯೋಹಾನ 2:15, 16.
ಆದರೂ, “ಶರೀರದಾಶೆ” ಮತ್ತು “ಕಣ್ಣಿನಾಶೆ”ಗಳನ್ನು ಪೂರಾ ರೀತಿಯಲ್ಲಿ ವರ್ಜಿಸಲು ಅಷ್ಟೇನೂ ಸುಲಭವಲ್ಲ. ಆ ವಿಷಯಗಳನ್ನು ನಾವು ಪ್ರೀತಿಸಲಿಕ್ಕೆ ನಿಶ್ಚಿತ ಕಾರಣ ಅವು ನಮ್ಮ ಮಾಂಸಿಕ ಇಚ್ಛೆಗಳಿಗೆ ಅಷ್ಟು ಅಪ್ಪೀಲಾಗಿರುವುದೇ. ಅಷ್ಟಲ್ಲದೆ, ಯೋಹಾನನ ದಿನಗಳಿಗಿಂತ ಎಷ್ಟೋ ಹೆಚ್ಚು ಮತ್ತು ವಿವಿಧ ರೀತಿಯ ಸುಖಭೋಗಗಳು ಇಂದು ದೊರಕುತ್ತವೆ. ಹೀಗೆ ಕಣ್ಣಿನಾಶೆಯು, ಅಂದು ಒಂದು ಸಮಸ್ಯೆಯಾಗಿದ್ದದ್ದಾದರೆ, ವಿಶೇಷವಾಗಿ ಇಂದು ಇನ್ನೂ ಹೆಚ್ಚು ದೊಡ್ಡ ಸಮಸ್ಯೆಯು.
ರಸಕರವಾಗಿಯೇ, ಲೋಕವು ನೀಡುವ ಅನೇಕ ಆಧುನಿಕ ಸುಖಭೋಗಗಳು ತಮ್ಮಲ್ಲಿ ತಾವೇ ಕೆಟ್ಟವಲ್ಲ. ಒಂದು ದೊಡ್ಡ ಮನೆ, ಒಳ್ಳೇ ಕಾರು, ಒಂದು ಟೆಲಿವಿಷನ್ ಸೆಟ್ ಅಥವಾ ಸ್ಟೀರಿಯೊ ಯುನಿಟ್ ಇರುವುದೇನೂ ತಪ್ಪಲ್ಲ. ಒಂದು ದೀರ್ಘವಾದ, ಸ್ವಾರಸ್ಯ ಪ್ರವಾಸವನ್ನು ಮಾಡುವುದು ಇಲ್ಲವೇ ರೋಮಾಂಚಕರ ರಜೆಗಳಲ್ಲಿ ಆನಂದಿಸುವುದೇನೂ ಬೈಬಲ್ ನಿಯಮದ ಉಲ್ಲಂಘನೆಯಲ್ಲ. ಹಾಗಾದರೆ ಯೋಹಾನನ ಎಚ್ಚರಿಕೆಯಲ್ಲಿರುವ ಬಿಂದುವೇನು? ಒಂದನೆಯದಾಗಿ, ಅಂಥ ವಿಷಯಗಳು ನಮಗೆ ತೀರಾ ಹೆಚ್ಚು ಮಹತ್ವದ್ದಾಗಿ ಪರಿಣಮಿಸಿದಲ್ಲಿ, ಅವು ನಮ್ಮಲ್ಲಿ ಸ್ವಾರ್ಥಪರತೆ, ಪ್ರಾಪಂಚಿಕತೆ ಮತ್ತು ದುರಹಂಕಾರವನ್ನು ವಿಕಸಿಸಬಹುದು. ಮತ್ತು ಅವನ್ನು ಪಡಕೊಳ್ಳಲು ಹಣ ಸಂಪಾದಿಸುವ ಪ್ರಯತ್ನದಲ್ಲಿ ಯೆಹೋವನ ನಮ್ಮ ಸೇವೆಗೆ ತಡೆಯಾಗ ಸಾಧ್ಯವಿದೆ. ಅಂಥ ವಸ್ತುಗಳನ್ನು ಆನಂದಿಸುವುದಕ್ಕೆ ಕೂಡಾ ಸಮಯಬೇಕು, ಮತ್ತು ಕ್ರೈಸ್ತನಿಗಿರುವ ಕರ್ತವ್ಯಗಳಾದ ಬೈಬಲ್ ಅಧ್ಯಯನ, ಆರಾಧನೆಗಾಗಿ ಜತೆಕ್ರೈಸ್ತರೊಂದಿಗೆ ಕೂಡಿಬರುವಿಕೆ ಮತ್ತು ರಾಜ್ಯ ಸುವಾರ್ತೆಯ ಸಾರುವಿಕೆಯ ನೋಟದಲ್ಲಿ ಅವನಿಗಿರುವ ಸಮಯ ಬಲು ಸೀಮಿತ.—ಕೀರ್ತನೆ 1:1-3; ಮತ್ತಾಯ 24:14; 28:19, 20; ಇಬ್ರಿಯ 10:24, 25.
ಈ ಪ್ರಾಪಂಚಿಕ ಯುಗದಲ್ಲಿ, ‘ದೇವರ ರಾಜ್ಯವನ್ನು ಪ್ರಥಮವಾಗಿಡಲು’ ಮತ್ತು ‘ಲೋಕವನ್ನು ಪರಿಪೂರ್ಣವಾಗಿ ಅನುಭೋಗಿಸುವುದರಿಂದ’ ತಡೆಯಲು, ನಿರ್ಧಾರವನ್ನು ಮಾಡುವ ಅಗತ್ಯವಿದೆ. (ಮತ್ತಾಯ 6:33; 1 ಕೊರಿಂಥ 7:31) ಒಂದು ಬಲವಾದ ನಂಬಿಕೆಯೂ ಅದಕ್ಕೆ ಸಹಾಯಕವು. ಆದರೆ ವಿಶೇಷವಾಗಿ, ಯೆಹೋವನ ಮತ್ತು ನಮ್ಮ ನೆರೆಯವರ ಕಡೆಗಿನ ನಿಜ ಪ್ರೀತಿಯು, ತಮ್ಮಲ್ಲಿ ತಾವೇ ಕೆಟ್ಟದ್ದಲ್ಲವಾದರೂ ‘ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸುವುದರಿಂದ’ ನಮ್ಮನ್ನು ತಡೆಯುವ ಅಂಥ ಪಾಶಗಳನ್ನು, ಎದುರಿಸುವಂತೆ ನಮ್ಮನ್ನು ಬಲಗೊಳಿಸುವದು. (2 ತಿಮೊಥಿ 4:5) ಅಂಥ ಪ್ರೀತಿಯ ಹೊರತು ನಮ್ಮ ಶುಶ್ರೂಷೆಯು ಕೇವಲ ಕುರುಹು-ಸಲಿಕ್ಲೆ ಅಗಿರುವುದು.
ಸಭೆಯಲ್ಲಿ ಪ್ರೀತಿ
“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಹೇಳಿದಾಗ, ಯೇಸು ಪ್ರೀತಿಯ ಪ್ರಾಮುಖ್ಯತೆಯನ್ನು ಎತ್ತಿಹೇಳಿದನು. (ಯೋಹಾನ 13:35) ಹಿರಿಯರಲ್ಲಿ ಜತೆಕ್ರೈಸ್ತರ ಕಡೆಗೆ ಪ್ರೀತಿಯು ಇದ್ದಿಲ್ಲವಾದರೆ ಅವರು ಪರಿಪಾಲನೆ ಮತ್ತು ಸಹಾಯಕ್ಕಾಗಿ ಅಷ್ಟೊಂದು ಸಮಯವನ್ನು ಕಳೆಯುವರೇಕೆ? ಒಂದುವೇಳೆ ಪ್ರೀತಿಯು ಇಲ್ಲದೆ ಇದ್ದಲ್ಲಿ ಸಭೆಯವರು ತಮ್ಮ ಜೊತೆ ಸಹವಾಸಿಗಳ ನಿರ್ಬಲತೆಗಳೊಂದಿಗೆ—ಹಿರಿಯರದ್ದೂ ಸೇರಿ—ತಾಳಿಕೊಳ್ಳುವರೇಕೆ? ಇತರರು ಕೊರತೆಯಲ್ಲಿರುವರೆಂಬ ಸುದ್ದಿ ಕೇಳುವಾಗ ಭೌತಿಕ ರೀತಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಲು ಪ್ರೀತಿಯು ಕ್ರೈಸ್ತರನ್ನು ಪ್ರೇರೇಪಿಸುತ್ತದೆ. (ಅಪೊಸ್ತಲರ ಕೃತ್ಯ 2:44, 45) ಹಿಂಸೆಯ ಸಮಯಗಳಲ್ಲಿ ಕ್ರೈಸ್ತರು ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುತ್ತಾರೆ, ಒಬ್ಬರು ಇನ್ನೊಬ್ಬರಿಗಾಗಿ ಸಾಯಲೂ ಸಿದ್ಧರು. ಯಾಕೆ? ಪ್ರೀತಿಯ ಕಾರಣದಿಂದಲೇ.
ಕೆಲವುಸಾರಿ ಪ್ರೀತಿಯ ಮಹತ್ತಮ ರುಜುವಾತುಗಳು ಚಿಕ್ಕ ಚಿಕ್ಕ ವಿಷಯಗಳಲ್ಲಿ ತೋರಿಬರುತ್ತವೆ. ಈವಾಗಲೇ ಭಾರವಾದ ಕೆಲಸದ ಒತ್ತಡದ ಕೆಳಗಿರುವ ಹಿರಿಯನೊಬ್ಬನನ್ನು, ಅವರು ಆವಾಗಲೇ ಪುನಃ ಪುನಃ ಚರ್ಚಿಸಿದ್ದ ಅದೇ ದೂರನ್ನು ಹಿಡಿದುಕೊಂಡು ಜತೆ ಕ್ರೈಸ್ತನೊಬ್ಬನು ಸಂದರ್ಶಿಸುತ್ತಾನೆ. ಆಗ ಹಿರಿಯನು ಕೋಪಗೊಳ್ಳಬೇಕೋ? ಇದು ಒಂದು ಪಕ್ಷಭೇದಕ್ಕೆ ಕಾರಣವಾಗುವಂತೆ ಬಿಡುವ ಬದಲಿಗೆ, ಸಹೋದರನೊಂದಿಗೆ ತಾಳ್ಮೆಯಿಂದ ಮತ್ತು ದಯೆಯಿಂದ ಅವನು ವ್ಯವಹರಿಸುತ್ತಾನೆ. ಅವರು ವಿಷಯಗಳನ್ನು ಒಟ್ಟುಗೂಡಿ ಚರ್ಚಿಸುತ್ತಾರೆ ಮತ್ತು ಹಿಂದಿಗಿಂತಲೂ ಹೆಚ್ಚು ಸ್ನೇಹಿತರಾಗುತ್ತಾರೆ. (ಮತ್ತಾಯ 5:23, 24; 18:15-17) ಪ್ರತಿಯೊಬ್ಬನು ತನ್ನ ಹಕ್ಕುಗಳನ್ನು ನಿರ್ಬಂಧಿಸಿ ಕೇಳುವ ಬದಲಾಗಿ, ‘ಏಳೆಪ್ಪತ್ತು ಸಾರಿ’ ತಮ್ಮ ಸಹೋದರರನ್ನು ಕ್ಷಮಿಸಲು ಸಿದ್ಧರಾಗಿರುವ ಹೃದಯ ವೈಶಾಲ್ಯದ ಯೇಸುವಿನ ಶಿಫಾರಸನ್ನು ಎಲ್ಲರೂ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. (ಮತ್ತಾಯ 18:21, 22) ಹೀಗೆ ಕ್ರೈಸ್ತರು ಪ್ರೀತಿಯನ್ನು ಧರಿಸಿಕೊಳ್ಳಲು ಪ್ರಯಾಸಪಡುತ್ತಾರೆ ಯಾಕಂದರೆ ಅದು ‘ಐಕ್ಯತೆಯನ್ನು ಪರಿಪೂರ್ಣ ಮಾಡುವ ಬಂಧವಾಗಿದೆ.’—ಕೊಲೊಸ್ಸೆ 3:14.
ಒಬ್ಬರನೊಬ್ಬರು ಪ್ರೀತಿಸುವುದನ್ನು ತೀವ್ರಗೊಳಿಸುವುದು
ಹೌದು, ಪ್ರೀತಿಯು ಯೆಹೋವನನ್ನು ಸೇವಿಸುವುದಕ್ಕೆ ಯೋಗ್ಯ ಹೇತುವಾಗಿದೆ. ಲೋಕದಿಂದ ಪ್ರತ್ಯೇಕವಾಗಿರುವುದಕ್ಕೆ ಪ್ರೀತಿಯು ನಮ್ಮನ್ನು ಬಲಪಡಿಸುವುದು, ಮತ್ತು ಸಭೆಯು ನಿಜವಾಗಿ ಕ್ರಿಸ್ತೀಯತೆಯಲ್ಲಿ ಉಳಿಯುವಂತೆ ಪ್ರೀತಿಯು ನಿಶ್ಚಿತಪಡಿಸುತ್ತದೆ. ಕಾರ್ಯದಕ್ಷತೆಯನ್ನು ಕಡಿಮೆಮಾಡಬಾರದಾದರೂ, ಅಧಿಕಾರ ಸ್ಥಾನದಲ್ಲಿರುವವರು ಬೇರೆಯವರೊಂದಿಗೆ ದಯೆ ಮತ್ತು ವಿನಯದಿಂದ ವರ್ತಿಸುವುದನ್ನು ಮರೆತುಬಿಡುವಷ್ಟು ಕಾರ್ಯ-ದಕ್ಷ ಆತ್ಮದಿಂದ ಮಗ್ನರಾಗದಂತೆ ಅದು ನೆರವಾಗುವುದು. ನಮ್ಮ “ಸಭಾನಾಯಕರ ಮಾತನ್ನು ಕೇಳಿ, ಅವರಿಗೆ ಅಧೀನರಾಗಿ” ಇರುವಂತೆ ಪ್ರೀತಿಯು ನಮಗೆಲ್ಲರಿಗೆ ಸಹಾಯ ಮಾಡುತ್ತದೆ.—ಇಬ್ರಿಯ 13:17.
ಒಬ್ಬರಿಗೊಬ್ಬರ ಕಡೆಗೆ “ತೀವ್ರವಾದ ಪ್ರೀತಿಯು” ಇರುವಂತೆ ಅಪೊಸ್ತಲ ಪೇತ್ರನು ನಮ್ಮ ಪ್ರೇರೇಪಿಸುತ್ತಾನೆ ಯಾಕಂದರೆ “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ನಾವಿದನ್ನು ಮಾಡುವುದು ಹೇಗೆ? ಮನುಷ್ಯನು ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟನು ಮತ್ತು ಹೀಗೆ ಅವನಲ್ಲಿ ಪ್ರೀತಿಸುವ ಸ್ವಾಭಾವಿಕ ಸಾಮರ್ಥ್ಯವು ಇದೆ. ಆದರೆ ನಾವಿಲ್ಲಿ ಹೇಳುತ್ತಿರುವ ಪ್ರೀತಿಗೆ ಹೆಚ್ಚು ವಿಷಯಗಳು ಬೇಕು. ವಾಸ್ತವಿಕವಾಗಿ ಅದು ದೇವರಾತ್ಮದ ಮುಖ್ಯ ಫಲವಾಗಿದೆ. (ಗಲಾತ್ಯ 5:22) ಆದದರಿಂದ ಪ್ರೀತಿಯನ್ನು ಬೆಳೆಸಲಿಕ್ಕೆ, ನಾವು ನಮ್ಮನ್ನು ದೇವರಾತ್ಮಕ್ಕೆ ತೆರೆದಿಡುವ ಅಗತ್ಯವಿದೆ. ಹೇಗೆ? ಯೆಹೋವನ ಆತ್ಮದಿಂದ ಪ್ರೇರೇಪಿಸಲ್ಪಟ್ಟ ಬೈಬಲನ್ನು ಅಭ್ಯಾಸಿಸುವ ಮೂಲಕ. (2 ತಿಮೊಥಿ 3:16) ಯೆಹೋವನಿಗಾಗಿ ಮತ್ತು ನಮ್ಮ ಸಹೋದರರಿಗಾಗಿ ನಮ್ಮ ಪ್ರೀತಿಯನ್ನು ಬಲಪಡಿಸುವಂತೆ ಯೆಹೋವನಾತ್ಮಕ್ಕಾಗಿ ಪ್ರಾರ್ಥಿಸುವ ಮೂಲಕ. ಮತ್ತು ಎಲ್ಲಿ ದೇವರಾತ್ಮವು ಧಾರಾಳವಾಗಿ ಹರಿಯುತ್ತದೋ ಆ ಯೆಹೋವನ ಸಭೆಯೊಂದಿಗೆ ಸಹವಸಿಸುವ ಮೂಲಕವೇ.
ಯಾವುದೇ ರೀತಿಯ ಪ್ರೀತಿರಹಿತ ಕ್ರಿಯೆಗಳನ್ನು ಯಾ ಆಲೋಚನೆಗಳನ್ನು ಪರಿಶೋಧಿಸಲು ನಾವು ನಮ್ಮನ್ನು ಪರೀಕ್ಷಿಸಿಕೊಳ್ಳುವ ಅಗತ್ಯವೂ ಅಲ್ಲಿದೆ. ಪ್ರೀತಿಯು ಹೃದಯದ ಪ್ರಕ್ರಿಯೆ ಎಂಬದನ್ನು ನೆನಪಿನಲ್ಲಿಡಿರಿ, ಮತ್ತು “ಹೃದಯವು ಎಲ್ಲಕ್ಕಿಂತಲೂ ವಂಚಕ.” (ಯೆರೆಮೀಯ 17:9) ಯೆಹೋವನು ಒದಗಿಸುವ ಎಲ್ಲಾ ಸಹಾಯಕಗಳೊಂದಿಗೆ ಕೆಲವು ಸಾರಿ ನಾವು ಪ್ರೀತಿರಹಿತ ನಡವಳಿಕೆಯನ್ನು ತೋರಿಸುತ್ತೇವೆ. ಜೊತೆ ಕ್ರೈಸ್ತನೊಬ್ಬನೊಂದಿಗೆ ನಾವು ಅನಾವಶ್ಯಕವಾಗಿ ಕಟುನುಡಿಯನ್ನಾಡಬಹುದು, ಅಥವಾ, ಹೇಳಲ್ಪಟ್ಟ ಒಂದು ಸಂಗತಿಗಾಗಿ ರೇಗಿ, ಒರಟಾಗಿ ವರ್ತಿಸಬಹುದು. ಆದಕಾರಣ ದಾವೀದನ ಪ್ರಾರ್ಥನೆಯಂತೆ ಪ್ರತಿಧ್ವನಿಸುವುದು ನಮಗೆ ಹಿತಕರವು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ. ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನ ಮಾರ್ಗದಲ್ಲಿ ನನ್ನನ್ನು ನಡಿಸು.”—ಕೀರ್ತನೆ 139:23, 24.
ಬೈಬಲ್ ಹೇಳುವಂತೆ, “ಪ್ರೀತಿ ಎಂದೂ ಬಿದ್ದು ಹೋಗುವದಿಲ್ಲ.” (1 ಕೊರಿಂಥ 13:8) ನಾವು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ಅಭ್ಯಾಸ ಮಾಡಿದರೆ, ಪರೀಕ್ಷೆಯ ಸಮಯದಲ್ಲಿ ಅದರ ಕೊರತೆಯುಳ್ಳವರಾಗಿ ಎಂದೂ ಕಂಡು ಬಾರೆವು. ದೇವ ಜನರಲ್ಲಿ ಅಸ್ತಿತ್ವದಲ್ಲಿರುವ ಪ್ರೀತಿಯು ಇಂದಿರುವ ಆತ್ಮಿಕ ಪರದೈಸಕ್ಕೆ ಮಹತ್ತಮವಾಗಿ ನೆರವಾಗುತ್ತಿದೆ. ಯಾರು ಒಬ್ಬರನ್ನೊಬ್ಬರು ಹೃದಯದಿಂದ ಗಾಢವಾಗಿ ಪ್ರೀತಿಸುತ್ತಾರೋ ಅವರು ಮಾತ್ರವೇ ಹೊಸಲೋಕದಲ್ಲಿ ಜೀವಿಸುವುದರಲ್ಲಿ ಆಹ್ಲಾದವನ್ನು ಕಂಡುಕೊಳ್ಳುವರು. ಆದಕಾರಣ ಅಂಥ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಯೆಹೋವನನ್ನು ಅನುಕರಿಸಿರಿ ಮತ್ತು ಐಕ್ಯತೆಯ ಬಂಧವನ್ನು ಬಲಗೊಳಿಸಿರಿ. ಪ್ರೀತಿಯನ್ನು ಬೆಳೆಸಿಕೊಳ್ಳಿರಿ, ಮತ್ತು ನಿಜ ಕ್ರೈಸ್ತತ್ವದ ಕೀಲಿಕೈಯನ್ನು ಪಡೆದುಕೊಳ್ಳಿರಿ. (w91 10/1)