ಕನಲುರಿಯುತ್ತಿರುವ ಬತ್ತಿಯೊಂದನ್ನು ನೀವು ನಂದಿಸುವಿರೊ?
ಯೇಸು ಕ್ರಿಸ್ತನು ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲ ರೀತಿಯ ಜನರಿಗೆ ಘೋಷಿಸಿದನು. ಅವರಲ್ಲಿ ಅನೇಕರು ಪೀಡಿಸಲ್ಪಟ್ಟವರೂ ನಿರುತ್ಸಾಹಗೊಳಿಸಲ್ಪಟ್ಟವರೂ ಆಗಿದ್ದರು. ಆದರೆ ಹುರಿದುಂಬಿಸುವ ಒಂದು ಸಂದೇಶವನ್ನು ಯೇಸು ಅವರಿಗೆ ನೀಡಿದನು. ಕಷ್ಟಾನುಭವಿಸುವ ಜನರಿಗಾಗಿ ಅವನಲ್ಲಿ ಅನುಕಂಪವಿತ್ತು.
ಸುವಾರ್ತಾ ಬರಹಗಾರನಾದ ಮತ್ತಾಯನು, ಯೆಶಾಯನ ಮೂಲಕ ದಾಖಲಿಸಲ್ಪಟ್ಟ ಒಂದು ಪ್ರವಾದನೆಯ ಕಡೆಗೆ ಗಮನವನ್ನು ಸೆಳೆಯುವ ಮೂಲಕ ಯೇಸುವಿನ ಅನುಕಂಪವನ್ನು ಅತ್ಯುಜಲ್ವಪಡಿಸಿದನು. ಕ್ರಿಸ್ತನಿಂದ ನೆರವೇರಿಸಲ್ಪಟ್ಟ ಮಾತುಗಳನ್ನು ಉದ್ಧರಿಸುತ್ತ, ಮತ್ತಾಯನು ಬರೆದುದು: “ಜಜ್ಜಿದ ದಂಟನ್ನು ಮುರಿದುಹಾಕದೆಯೂ ಕನಲುರಿಯುತ್ತಿರುವ ಅಗಸೆ ನಾರಿನ ಬತ್ತಿಯನ್ನು ನಂದಿಸದೆಯೂ ನ್ಯಾಯವನ್ನು ದಿಗಿಜ್ವಯಕ್ಕಾಗಿ ಕಳುಹಿಸಿ ಕೊಡುವನು.” (ಮತ್ತಾಯ 12:20, NW; ಯೆಶಾಯ 42:3) ಈ ಮಾತುಗಳ ಅರ್ಥವೇನು, ಮತ್ತು ಯೇಸು ಈ ಪ್ರವಾದನೆಯನ್ನು ಹೇಗೆ ನೆರವೇರಿಸಿದನು?
ಪ್ರವಾದನೆಯ ಕಡೆಗೆ ಒಂದು ನೋಟ
ದಂಟು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ ಮತ್ತು ಅದು ಬಲವಾದ ಹಾಗೂ ಸ್ಥಿರವಾದ ಸಸ್ಯವಾಗಿರುವುದಿಲ್ಲ. ಒಂದು “ಜಜ್ಜಿದ ದಂಟು” ನಿಶ್ಚಯವಾಗಿ ಬಲಹೀನವಾಗಿರುವುದು. ಆದುದರಿಂದ ಅದು, ಸಬ್ಬತ್ ದಿನದಂದು ಯಾವ ಮನುಷ್ಯನ ಬತ್ತಿಹೋಗಿದ್ದ ಕೈಯನ್ನು ಯೇಸು ಗುಣಪಡಿಸಿದನೊ, ಅಂತಹ ಪೀಡಿಸಲ್ಪಟ್ಟ ಅಥವಾ ಕಷ್ಟಾನುಭವಿಸುತ್ತಿರುವ ಜನರನ್ನು ಪ್ರತಿನಿಧಿಸುವಂತೆ ತೋರುತ್ತದೆ. (ಮತ್ತಾಯ 12:10-14) ಆದರೆ ದೀಪದ ಬತ್ತಿಗೆ ಮಾಡಲ್ಪಟ್ಟಿರುವ ಪ್ರವಾದನಾತ್ಮಕ ಉಲ್ಲೇಖದ ಕುರಿತೇನು?
ಸಾ.ಶ. ಮೊದಲನೆಯ ಶತಮಾನದ ಒಂದು ಸಾಮಾನ್ಯ ಮನೆಯ ದೀಪವು, ಒಂದು ಕುಣಿಕೆಯ ಹಿಡಿಯಿರುವ ಚಿಕ್ಕದಾದೊಂದು ಹೂಜಿಯಂತಹ ಮಣ್ಣಿನ ಪಾತ್ರೆಯಾಗಿತ್ತು. ದೀಪವು ಸಾಮಾನ್ಯವಾಗಿ ಆಲಿವ್ ಎಣ್ಣೆಯಿಂದ ತುಂಬಿಸಲ್ಪಡುತ್ತಿತ್ತು. ಲೋಮನಾಳಾಕರ್ಷಣದಿಂದ, ಅಗಸೆ ನಾರಿನಿಂದ ಮಾಡಲ್ಪಟ್ಟ ಒಂದು ಬತ್ತಿಯು ಜ್ವಾಲೆಯನ್ನು ಪೋಷಿಸಲು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಿಶ್ಚಯವಾಗಿ, ‘ಕನಲುರಿಯುತ್ತಿರುವ ಬತ್ತಿ’ಯೊಂದು, ಇನ್ನೇನು ನಂದಿಹೋಗುವುದರಲ್ಲಿರುತ್ತದೆ.
ಸಾಂಕೇತಿಕವಾಗಿ ಬಗ್ಗಿಸಲ್ಪಟ್ಟ ಮತ್ತು ಮೇಲಿಂದ ಮೇಲೆ ಹೊಡೆಯಲ್ಪಟ್ಟ ಒಂದು ಜಜ್ಜಿದ ದಂಟಿನೋಪಾದಿ ಇದ್ದ ಅನೇಕರಿಗೆ, ಯೇಸು ತನ್ನ ಸಾಂತ್ವನದಾಯಕ ಸಂದೇಶವನ್ನು ಘೋಷಿಸಿದನು. ಈ ಜನರು ಸಹ ಕನಲುರಿಯುತ್ತಿರುವ ಅಗಸೆ ನಾರಿನ ಬತ್ತಿಯಂತೆ ಇದ್ದರು, ಏಕೆಂದರೆ ಅವರ ಜೀವನದ ಕೊನೆಯ ಕಿಡಿ ಬಹುಮಟ್ಟಿಗೆ ನಂದಿಸಲ್ಪಟ್ಟಿತ್ತು. ಅವರು ನಿಜವಾಗಿಯೂ ಪೀಡಿಸಲ್ಪಟ್ಟವರೂ ನಿರುತ್ಸಾಹಗೊಳಿಸಲ್ಪಟ್ಟವರೂ ಆಗಿದ್ದರು. ಆದಾಗಲೂ, ಯೇಸು, ಸಾಂಕೇತಿಕವಾದ ಒಂದು ಜಜ್ಜಿದ ದಂಟನ್ನು ಮುರಿದುಹಾಕಲಿಲ್ಲ ಅಥವಾ ಒಂದು ಸಾಂಕೇತಿಕವಾದ ಕನಲುರಿಯುತ್ತಿರುವ ಬತ್ತಿಯನ್ನು ನಂದಿಸಲಿಲ್ಲ. ಅವನ ಪ್ರೀತಿಯ, ಕೋಮಲವಾದ, ಅನುಕಂಪದ ಮಾತುಗಳು, ಕಷ್ಟಾನುಭವಿಸುತ್ತಿರುವ ಜನರನ್ನು ಇನ್ನೂ ಹೆಚ್ಚು ನಿರುತ್ಸಾಹಗೊಳಿಸಲಿಲ್ಲ ಮತ್ತು ತಗ್ಗಿಸಲಿಲ್ಲ. ಬದಲಿಗೆ, ಅವರೊಂದಿಗಿನ ಅವನ ಹೇಳಿಕೆಗಳು ಮತ್ತು ಅವನ ವ್ಯವಹಾರಗಳು ಆತ್ಮೋನ್ನತಿಮಾಡುವ ಪರಿಣಾಮವನ್ನು ಹೊಂದಿದ್ದವು.—ಮತ್ತಾಯ 11:28-30.
ಇಂದು ಕೂಡ ಅನೇಕರಿಗೆ ಅನುಕಂಪ ಮತ್ತು ಉತ್ತೇಜನದ ಅಗತ್ಯವಿದೆ, ಏಕೆಂದರೆ ಅವರು ಎದೆಗುಂದಿಸುವ ಸಮಸ್ಯೆಗಳನ್ನು ಎದುರಿಸುತ್ತಾರೆ. ಯೆಹೋವನ ಸೇವಕರು ಸಹ ಯಾವಾಗಲೂ ಬಲದ ಬುರುಜುಗಳಾಗಿರುವುದಿಲ್ಲ. ಕೆಲವೊಮ್ಮೆ ಕೆಲವರು ಕನಲುರಿಯುತ್ತಿರುವ ಬತ್ತಿಗಳನ್ನು ಹೋಲುತ್ತಾರೆ. ಆದುದರಿಂದ ಕ್ರೈಸ್ತರು ಉತ್ತೇಜಿಸುವವರಾಗಿ—ನಿಜಕ್ಕೂ ಜ್ವಾಲೆಯನ್ನು ಉದ್ದೀಪಿಸುತ್ತಾ—ಹೀಗೆ ಒಬ್ಬರನ್ನೊಬ್ಬರು ಬಲಪಡಿಸುತ್ತಾ ಇರಬೇಕು.—ಲೂಕ 22:32; ಅ. ಕೃತ್ಯಗಳು 11:23.
ಕ್ರೈಸ್ತರೋಪಾದಿ ನಾವು ಆತ್ಮೋನ್ನತಿಮಾಡುವವರಾಗಿರಲು ಬಯಸುತ್ತೇವೆ. ಆತ್ಮಿಕ ಸಹಾಯವನ್ನು ಕೋರುವ ಯಾರೊಬ್ಬರನ್ನು ಉದ್ದೇಶಪೂರ್ವಕವಾಗಿ ಬಲಹೀನಗೊಳಿಸಲು ನಾವು ಪ್ರಯತ್ನಿಸಲಾರೆವು. ನಿಶ್ಚಯವಾಗಿ, ಇತರರನ್ನು ಬಲಪಡಿಸುವುದರಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಕರಿಸಲು ಅಪೇಕ್ಷಿಸುತ್ತೇವೆ. (ಇಬ್ರಿಯ 12:1-3; 1 ಪೇತ್ರ 2:21) ಉತ್ತೇಜನಕ್ಕಾಗಿ ನಮ್ಮ ಕಡೆಗೆ ನೋಡುವ ಯಾರನ್ನಾದರೂ ನಾವು ಬುದ್ಧಿಪೂರ್ವಕವಲ್ಲದೆ ಜಜ್ಜಬಲ್ಲೆವೆಂಬ ನಿಜತ್ವವು, ಇತರರೊಂದಿಗೆ ವ್ಯವಹರಿಸುವ ನಮ್ಮ ವಿಧದ ಸಂಬಂಧದಲ್ಲಿ ಗಂಭೀರವಾದ ಆಲೋಚನೆಯನ್ನು ಕೊಡಲು ಒಳ್ಳೆಯ ಕಾರಣವಾಗಿದೆ. ನಾವು ಖಂಡಿತವಾಗಿ ‘ಕನಲುರಿಯುತ್ತಿರುವ ಬತ್ತಿಯೊಂದನ್ನು ನಂದಿಸಲು’ ಬಯಸುವುದಿಲ್ಲ. ಈ ಸಂಬಂಧದಲ್ಲಿ ಯಾವ ಶಾಸ್ತ್ರೀಯ ಮಾರ್ಗದರ್ಶನೆಗಳು ನಮಗೆ ಸಹಾಯ ಮಾಡಬಲ್ಲವು?
ವಿಮರ್ಶೆಯ ಪರಿಣಾಮಗಳು
ಕ್ರೈಸ್ತನೊಬ್ಬನು ‘ಯಾವುದೊ ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವುದಾದರೆ, ಆತ್ಮಿಕ ಅರ್ಹತೆಗಳುಳ್ಳವರು ಅಂತಹ ಒಬ್ಬ ವ್ಯಕ್ತಿಯನ್ನು ಶಾಂತಭಾವದಿಂದ ಸರಿಪಡಿಸಲು ಪ್ರಯತ್ನಿಸಬೇಕು.’ (ಗಲಾತ್ಯ 6:1) ಹಾಗಿದ್ದರೂ, ಇತರರಲ್ಲಿ ಕುಂದುಗಳಿಗಾಗಿ ದೃಷ್ಟಿಯಿಡುವುದು ಮತ್ತು ಅವುಗಳನ್ನು ತಿದ್ದಲು ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸುವುದು ಯೋಗ್ಯವಾಗಿರುವುದೊ? ಬಹುಶಃ ಅವರಲ್ಲಿ ದೋಷದ ಭಾವನೆಗಳನ್ನುಂಟುಮಾಡುತ್ತಾ, ತಮ್ಮ ಸದ್ಯದ ಪ್ರಯತ್ನಗಳು ಸಾಕಷ್ಟಿಲ್ಲವೆಂದು ಸೂಚಿಸುವ ಮೂಲಕ, ಹೆಚ್ಚು ಉತ್ತಮವಾಗಿ ಮಾಡುವಂತೆ ಅವರನ್ನು ಒತ್ತಾಯಿಸುವುದು ಸೂಕ್ತವಾಗಿರುವುದೊ? ಆ ರೀತಿಯ ಯಾವ ವಿಷಯವನ್ನಾದರೂ ಯೇಸು ಮಾಡಿದನೆಂಬ ಸಾಕ್ಷ್ಯವಿರುವುದಿಲ್ಲ. ಇತರರು ಅಭಿವೃದ್ಧಿ ಹೊಂದುವಂತೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದ್ದರೂ, ನಿರ್ದಯವಾಗಿ ವಿಮರ್ಶಿಸಲ್ಪಡುತ್ತಿರುವವರು ಬಲಗೊಳಿಸಲ್ಪಡುವ ಬದಲು ಬಲಹೀನಗೊಳಿಸಲ್ಪಡಬಹುದು. ರಚನಾತ್ಮಕ ವಿಮರ್ಶೆಯು ಕೂಡ ಅತಿಯಾಗಿ ನೀಡಲ್ಪಟ್ಟಲ್ಲಿ, ಬಹಳವಾಗಿ ನಿರುತ್ಸಾಹಗೊಳಿಸುವಂತಹದ್ದಾಗಿರಬಲ್ಲದು. ನ್ಯಾಯನಿಷ್ಠೆಯ ಕ್ರೈಸ್ತನೊಬ್ಬನ ಅತ್ಯುತ್ತಮ ಪ್ರಯತ್ನಗಳು ಅಸಮ್ಮತಿಯನ್ನೇ ಪಡೆಯುವುದಾದರೆ, ಅವನು ಕಾರ್ಯತಃ ಪ್ರಯತ್ನವನ್ನು ಬಿಟ್ಟುಬಿಡುತ್ತಾ, ‘ಪ್ರಯತ್ನವನ್ನಾದರೂ ಏಕೆ ಮಾಡಬೇಕು?’ ಎಂದು ಹೇಳಬಹುದು. ನಿಜಕ್ಕೂ ಅವನು ಸಂಪೂರ್ಣವಾಗಿ ಪ್ರಯತ್ನವನ್ನು ಬಿಟ್ಟುಬಿಡಬಹುದು.
ಶಾಸ್ತ್ರೀಯ ಸಲಹೆಯನ್ನು ಕೊಡುವುದು ಪ್ರಾಮುಖ್ಯವಾಗಿದ್ದರೂ, ಅದು ಸಭೆಯಲ್ಲಿರುವ ನೇಮಿತ ಹಿರಿಯರ ಅಥವಾ ಇತರರ ಆತ್ಮದ ವಿಶೇಷ ಲಕ್ಷಣವಾಗಿರಬಾರದು. ಕ್ರೈಸ್ತ ಕೂಟಗಳು ಮುಖ್ಯವಾಗಿ ಸಲಹೆಯನ್ನು ನೀಡಲು ಮತ್ತು ಪಡೆಯಲು ನಡೆಸಲ್ಪಡುವುದಿಲ್ಲ. ಬದಲಿಗೆ, ಒಬ್ಬರು ಇನ್ನೊಬ್ಬರ ಆತ್ಮೋನ್ನತಿಮಾಡಲು ಮತ್ತು ಉತ್ತೇಜನ ನೀಡಲು ನಾವು ಕ್ರಮವಾಗಿ ಕೂಡಿಬರುತ್ತೇವೆ, ಇದರಿಂದ ಎಲ್ಲರು ತಮ್ಮ ಸಾಹಚರ್ಯದಲ್ಲಿ ಮತ್ತು ದೇವರಿಗೆ ತಮ್ಮ ಪವಿತ್ರ ಸೇವೆಯಲ್ಲಿ ಆನಂದಿಸಬಲ್ಲರು. (ರೋಮಾಪುರ 1:11, 12; ಇಬ್ರಿಯ 10:24, 25) ಅಲಕ್ಷ್ಯಮಾಡುವುದು ವಿವೇಕಯುತವೂ ಪ್ರೀತಿಪರವೂ ಆಗಿರುವ ಒಂದು ಅಪರಿಪೂರ್ಣತೆ ಮತ್ತು ಗಂಭೀರವಾದೊಂದು ಕುಂದಿನ ನಡುವೆ ಇರುವ ಭಿನ್ನತೆಯನ್ನು ನಾವು ವಿವೇಚಿಸುವಾಗ, ಅದು ಎಷ್ಟು ಒಳ್ಳೆಯದಾಗಿರುತ್ತದೆ!—ಪ್ರಸಂಗಿ 3:1, 7; ಕೊಲೊಸ್ಸೆ 3:13.
ಜನರು ತಾವು ವಿಮರ್ಶೆಗೆ ಪ್ರತಿಕ್ರಿಯಿಸುವುದಕ್ಕಿಂತ ಹೆಚ್ಚು ತೀವ್ರವಾಗಿ ಉತ್ತೇಜನಕ್ಕೆ ಪ್ರತಿಕ್ರಿಯಿಸುತ್ತಾರೆ. ವಾಸ್ತವದಲ್ಲಿ, ತಾವು ಅನ್ಯಾಯವಾಗಿ ವಿಮರ್ಶಿಸಲ್ಪಡುತ್ತಿದ್ದೇವೆಂದು ಜನರಿಗೆ ಅನಿಸುವಾಗ, ವಿಮರ್ಶಿಸಲ್ಪಟ್ಟ ವರ್ತನೆಗೆ ಅವರು ಹೆಚ್ಚು ನಿಕಟವಾಗಿ ಅಂಟಿಕೊಳ್ಳಬಹುದು! ಆದರೆ ಅವರು ನ್ಯಾಯವಾಗಿ ಪ್ರಶಂಸಿಸಲ್ಪಟ್ಟಾಗ, ಉತ್ತೇಜನಗೊಳ್ಳುತ್ತಾರೆ ಮತ್ತು ಅಭಿವೃದ್ಧಿಮಾಡುವಂತೆ ಪ್ರಚೋದಿಸಲ್ಪಡುತ್ತಾರೆ. (ಜ್ಞಾನೋಕ್ತಿ 12:18) ಆದುದರಿಂದ ನಾವು ಯೇಸುವಿನಂತೆ ಉತ್ತೇಜನ ನೀಡುವವರಾಗಿರೋಣ ಮತ್ತು ಎಂದಿಗೂ ‘ಕನಲುರಿಯುತ್ತಿರುವ ಬತ್ತಿಯೊಂದನ್ನು ನಂದಿಸದಿರೋಣ.’
ಹೋಲಿಕೆಗಳನ್ನು ಮಾಡುವುದರ ಕುರಿತೇನು?
ಇತರ ಕ್ರೈಸ್ತರ ಉತ್ತಮ ಅನುಭವಗಳನ್ನು ಕೇಳುವುದು ಬಹಳವಾಗಿ ಪ್ರೇರಿಸುವಂತಹದ್ದಾಗಿರಬಲ್ಲದು. ರಾಜ್ಯ ಸಂದೇಶವನ್ನು ಸಾರುವುದರಲ್ಲಿ ತನ್ನ ಶಿಷ್ಯರ ಯಶಸ್ಸಿನ ಕುರಿತು ಕೇಳಿದಾಗ, ಯೇಸು ಸ್ವತಃ ಹರ್ಷಿಸಿದನು. (ಲೂಕ 10:17-21) ತದ್ರೀತಿಯಲ್ಲಿ, ನಂಬಿಕೆಯಲ್ಲಿರುವ ಇತರರ ಯಶಸ್ಸು, ಒಳ್ಳೆಯ ಮಾದರಿ, ಅಥವಾ ಸಮಗ್ರತೆಯ ಕುರಿತು ನಾವು ಕೇಳುವಾಗ, ನಾವು ಉತ್ತೇಜಿಸಲ್ಪಡುತ್ತೇವೆ ಮತ್ತು ನಮ್ಮ ಕ್ರೈಸ್ತ ಮಾರ್ಗಕ್ಕೆ ಅಂಟಿಕೊಂಡಿರಲು ಹೆಚ್ಚು ನಿಶ್ಚಿತರಾಗಿರುವ ಅನಿಸಿಕೆ ನಮಗಾಗುತ್ತದೆ.
ಆದರೂ, ಒಂದು ವರದಿಯು, ‘ನೀವು ಆ ಕ್ರೈಸ್ತರಷ್ಟು ಒಳ್ಳೆಯವರಲ್ಲ, ಮತ್ತು ನೀವು ಮಾಡುತ್ತಿರುವುದಕ್ಕಿಂತಲೂ ಇನ್ನೂ ಉತ್ತಮವಾಗಿ ಮಾಡುತ್ತಿರಬೇಕು,’ ಎಂದು ಸೂಚಿಸುವ ಒಂದು ವಿಧದಲ್ಲಿ ಸಾದರಪಡಿಸಲ್ಪಡುವುದಾದರೆ ಆಗೇನು? ಕೇಳುಗನು ಅಭಿವೃದ್ಧಿಯ ಜೋರಾದ ಕಾರ್ಯಕ್ರಮವನ್ನು ಪ್ರಾರಂಭಿಸುವ ಸಾಧ್ಯತೆ ಇದೆಯೊ? ವಿಶೇಷವಾಗಿ ಹೋಲಿಕೆಗಳು ಅನೇಕ ವೇಳೆ ಮಾಡಲ್ಪಡುವಾಗ ಅಥವಾ ಸೂಚಿಸಲ್ಪಡುವಾಗ, ಅವನು ನಿರುತ್ಸಾಹಗೊಂಡು ಬಹುಶಃ ಬಿಟ್ಟುಬಿಡುವ ಸಾಧ್ಯತೆಯಿದೆ. ಇದು ಬಹುಮಟ್ಟಿಗೆ ಹೆತ್ತವರಲ್ಲಿ ಒಬ್ಬನು ತನ್ನ ಮಗನನ್ನು, ‘ನಿನ್ನ ಸಹೋದರನಂತಿರಲು ನಿನಗೆ ಏಕೆ ಸಾಧ್ಯವಿಲ್ಲ?’ ಎಂದು ಕೇಳುವಂತಿರುವುದು. ಇಂತಹ ಒಂದು ಹೇಳಿಕೆಯು ಅಸಮಾಧಾನ ಮತ್ತು ನಿರುತ್ಸಾಹವನ್ನು ಉಂಟುಮಾಡಬಹುದು, ಆದರೆ ಅದು ಉತ್ತಮ ವರ್ತನೆಯನ್ನು ಪ್ರವರ್ಧಿಸುವುದು ಅಸಂಭವನೀಯ. ಹೋಲಿಕೆಗಳು, ವಯಸ್ಕರ ಮೇಲೆ ತಾವು ಯಾರೊಂದಿಗೆ ಹೋಲಿಸಲ್ಪಡುತ್ತಿದ್ದೇವೊ ಅಂಥವರ ಕಡೆಗೆ ಕೊಂಚಮಟ್ಟಿಗೆ ಅಸಮಾಧಾನಗೊಳ್ಳುವಂತೆ ಕೂಡ ಮಾಡುತ್ತಾ, ತದ್ರೀತಿಯ ಪರಿಣಾಮವನ್ನು ಬೀರಬಹುದು.
ದೇವರ ಸೇವೆಯಲ್ಲಿ ಎಲ್ಲರು ಒಂದೇ ಮೊತ್ತವನ್ನು ಮಾಡುವಂತೆ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಯೇಸುವಿನ ದೃಷ್ಟಾಂತಗಳಲ್ಲೊಂದರಲ್ಲಿ, ಒಬ್ಬ ನಿರ್ದಿಷ್ಟ ಯಜಮಾನನು ತನ್ನ ಆಳುಗಳಿಗೆ ಒಂದು, ಎರಡು ಅಥವಾ ಐದು ಬೆಳ್ಳಿಯ ತಲಾಂತುಗಳನ್ನು ಕೊಟ್ಟನು. ಇವು “ಅವನವನ ಸಾಮರ್ಥ್ಯದ ಪ್ರಕಾರ” ಕೊಡಲ್ಪಟ್ಟವು. ಬುದ್ಧಿವಂತಿಕೆಯಿಂದ ವ್ಯಾಪಾರಮಾಡಿ ತಮ್ಮ ತಲಾಂತುಗಳನ್ನು ಹೆಚ್ಚಿಸಿಕೊಂಡ ಇಬ್ಬರು ಆಳುಗಳು, ಅವರ ಕೆಲಸವು ಭಿನ್ನವಾದ ಫಲಿತಾಂಶಗಳನ್ನು ನೀಡಿದರೂ, ನಂಬಿಗಸ್ತರಾಗಿದ್ದ ಕಾರಣ ಪ್ರಶಂಸಿಸಲ್ಪಟ್ಟರು.—ಮತ್ತಾಯ 25:14-30.
ಅಪೊಸ್ತಲ ಪೌಲನು ಸೂಕ್ತವಾಗಿಯೆ ಬರೆದುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತ [“ಹೋಲಿಕೆ,” NW]ದಿಂದಾಗುವದಿಲ್ಲ.” (ಗಲಾತ್ಯ 6:4) ಹಾಗಾದರೆ, ಇತರರಿಗೆ ನಿಜವಾಗಿಯೂ ಉತ್ತೇಜನ ನೀಡುವವರಾಗಿರಲಿಕ್ಕಾಗಿ, ನಕಾರಾತ್ಮಕ ಹೋಲಿಕೆಗಳನ್ನು ಮಾಡುವುದನ್ನು ತೊರೆಯಲು ನಾವು ಪ್ರಯತ್ನಿಸಬೇಕು.
ಬಲಪಡಿಸಲಿಕ್ಕಾಗಿರುವ ಕೆಲವು ವಿಧಗಳು
ನಿರುತ್ಸಾಹಗೊಂಡವರನ್ನು ಬಲಪಡಿಸಲು ಮತ್ತು ‘ಕನಲುರಿಯುತ್ತಿರುವ ಬತ್ತಿಯೊಂದನ್ನು ನಂದಿಸುವುದನ್ನು’ ತೊರೆಯಲು ನಾವು ಏನು ಮಾಡಬಲ್ಲೆವು? ಒಳ್ಳೆಯದು, ಉತ್ತೇಜನವನ್ನು ಒದಗಿಸುವುದು ಒಂದು ನಿರ್ದಿಷ್ಟ ಸೂತ್ರವನ್ನು ಅನುಸರಿಸುವ ವಿಷಯವಾಗಿರುವುದಿಲ್ಲ. ಆದರೆ, ನಾವು ಬೈಬಲ್ ತತ್ವಗಳನ್ನು ಅನ್ವಯಿಸುವುದಾದರೆ ನಮ್ಮ ಮಾತುಗಳು ಇತರರನ್ನು ಬಲಪಡಿಸುವ ಸಾಧ್ಯತೆಯಿದೆ. ಇವುಗಳಲ್ಲಿ ಕೆಲವು ಯಾವುವು?
ದೀನರಾಗಿರ್ರಿ. ಫಿಲಿಪ್ಪಿ 2:3ರಲ್ಲಿ, ಪೌಲನು ನಮ್ಮನ್ನು ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದಿರುವಂತೆ’ ಉತ್ತೇಜಿಸಿದನು. ಅದಕ್ಕೆ ಬದಲಾಗಿ ನಾವು ದೀನರಾಗಿ ಮಾತಾಡಬೇಕು ಮತ್ತು ವರ್ತಿಸಬೇಕು. ‘ದೀನಭಾವದಿಂದ ಮತ್ತೊಬ್ಬರನ್ನು ನಮಗಿಂತಲೂ ಶ್ರೇಷ್ಠರೆಂದು ನಾವು ಎಣಿಸಬೇಕು.’ ನಮ್ಮ ಕುರಿತು ಏನನ್ನೂ ಯೋಚಿಸಬಾರದೆಂದು ಪೌಲನು ಹೇಳಲಿಲ್ಲ. ಆದರೂ, ಪ್ರತಿಯೊಬ್ಬ ವ್ಯಕ್ತಿ ನಮಗಿಂತ ಯಾವುದೊ ವಿಧದಲ್ಲಿ ಶ್ರೇಷ್ಠನೆಂಬುದನ್ನು ನಾವು ಗಣ್ಯಮಾಡಬೇಕು. “ಶ್ರೇಷ್ಠ” ಎಂಬುದಾಗಿ ಇಲ್ಲಿ ತರ್ಜುಮೆ ಮಾಡಲ್ಪಟ್ಟಿರುವ ಗ್ರೀಕ್ ಪದವು ಸೂಚಿಸುವುದೇನೆಂದರೆ, ಒಬ್ಬ ಮನುಷ್ಯನು “ತನ್ನ ಸ್ವಂತ ಸುಯೋಗಗಳಿಂದ ದೃಷ್ಟಿಯನ್ನು ತಿರುಗಿಸಿ, ಇನ್ನೊಬ್ಬನು ಶ್ರೇಷ್ಠನಾಗಿರುವ ಅವನ ದೇವದತ್ತ ಯೋಗ್ಯತೆಗಳನ್ನು ಉತ್ಸುಕತೆಯಿಂದ ಅವಲೋಕಿಸುವನು.” (ನ್ಯೂ ಟೆಸ್ಟಮೆಂಟ್ ವರ್ಡ್ ಸಡ್ಟೀಸ್, ಜಾನ್ ಆ್ಯಲ್ಬರ್ಟ್ ಬೆಂಗಲ್ ಅವರಿಂದ, ಸಂಪುಟ 2, ಪುಟ 432) ನಾವು ಇದನ್ನು ಮಾಡಿದರೆ ಮತ್ತು ಇತರರನ್ನು ಶ್ರೇಷ್ಠರೆಂದೆಣಿಸಿದರೆ, ಅವರೊಂದಿಗೆ ದೀನಭಾವದಿಂದ ವ್ಯವಹರಿಸುವೆವು.
ಗೌರವವನ್ನು ತೋರಿಸಿರಿ. ಪ್ರಾಮಾಣಿಕವಾಗಿ ನಮ್ಮನ್ನು ವ್ಯಕ್ತಪಡಿಸಿಕೊಳ್ಳುವ ಮೂಲಕ—ದೇವರನ್ನು ಮೆಚ್ಚಿಸಲು ಬಯಸುತ್ತಿರುವ ವ್ಯಕ್ತಿಗಳೋಪಾದಿ ಅವರನ್ನು ವೀಕ್ಷಿಸುತ್ತಾ—ನಂಬಿಗಸ್ತ ಜೊತೆ ವಿಶ್ವಾಸಿಗಳಲ್ಲಿ ನಮಗೆ ಭರವಸೆಯಿದೆ ಎಂಬುದನ್ನು ನಾವು ಸ್ಪಷ್ಟಪಡಿಸಬಲ್ಲೆವು. ಆದರೆ ಅವರಿಗೆ ಆತ್ಮಿಕ ಸಹಾಯದ ಅಗತ್ಯವಿದೆಯೆಂದು ಭಾವಿಸಿ. ಆಗ ನಾವು ನೆರವನ್ನು ಗೌರವಪೂರ್ಣವಾದ, ಘನತೆಯುಳ್ಳ ವಿಧದಲ್ಲಿ ನೀಡೋಣ. ವಿಷಯಗಳನ್ನು ಪೌಲನು ಈ ರೀತಿಯಲ್ಲಿ ಸಾದರಪಡಿಸಿದನು: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾಪುರ 12:10.
ಒಳ್ಳೆಯ ಕೇಳುಗರಾಗಿರ್ರಿ. ಹೌದು, ನಿರುತ್ಸಾಹಗೊಳಿಸುವ ಸಮಸ್ಯೆಗಳನ್ನು ಎದುರಿಸುತ್ತಿರಬಹುದಾದವರನ್ನು ಉತ್ತೇಜಿಸಲು, ಉಪನ್ಯಾಸಗಾರರಲ್ಲ, ಒಳ್ಳೆಯ ಕೇಳುಗರಾಗಿರುವ ಅಗತ್ಯ ನಮಗಿದೆ. ಕ್ಷಿಪ್ರವಾದ, ಆಳವಿಲ್ಲದ ಸೂಚನೆಗಳನ್ನು ನೀಡುವ ಬದಲಿಗೆ, ಅಸ್ತಿತ್ವದಲ್ಲಿರುವ ಅಗತ್ಯಗಳನ್ನು ನಿಜವಾಗಿಯೂ ಪೂರೈಸುವ ಶಾಸ್ತ್ರೀಯ ಮಾರ್ಗದರ್ಶನಗಳನ್ನು ಒದಗಿಸಲು ಬೇಕಾದ ಸಮಯವನ್ನು ನಾವು ತೆಗೆದುಕೊಳ್ಳೋಣ. ಏನು ಹೇಳಬೇಕೆಂಬುದು ನಮಗೆ ತಿಳಿಯದಿರುವಲ್ಲಿ, ಸಂತೈಸುವಂತೆ ಮಾತಾಡಲು ಮತ್ತು ಇತರರನ್ನು ಬಲಪಡಿಸಲು ಬೈಬಲ್ ಸಂಶೋಧನೆಯು ನಮಗೆ ಸಹಾಯ ಮಾಡುವುದು.
ಪ್ರೀತಿಪರರಾಗಿರ್ರಿ. ನಾವು ಯಾರನ್ನು ಉತ್ತೇಜಿಸಲು ಬಯಸುತ್ತೇವೊ ಅಂಥವರ ಪ್ರತಿ ಪ್ರೀತಿಯ ಭಾವನೆಯನ್ನು ಪಡೆದಿರುವುದು ಅಗತ್ಯ. ಯೆಹೋವನ ಜೊತೆ ಸೇವಕರಿಗೆ ಅನ್ವಯಿಸಲ್ಪಡುವಾಗ, ನಮ್ಮ ಪ್ರೀತಿಯು ಅವರ ಅತ್ಯುತ್ತಮ ಹಿತಾಸಕ್ತಿಗಳಿಗಾಗಿ ಕೇವಲ ಕಾರ್ಯಮಾಡುವುದನ್ನು ಮೀರಿ ಹೋಗಬೇಕು. ಅದು ತೀಕ್ಷ್ಣವಾದ ಭಾವನೆಯನ್ನು ಒಳಗೊಳ್ಳಬೇಕು. ಯೆಹೋವನ ಎಲ್ಲ ಜನರಿಗಾಗಿ ಇಂತಹ ಪ್ರೀತಿ ನಮಗಿರುವುದಾದರೆ, ನಮ್ಮ ಮಾತುಗಳು ಅವರಿಗೆ ಯಥಾರ್ಥವಾದ ಉತ್ತೇಜನವಾಗಿರುವುವು. ಅಭಿವೃದ್ಧಿಮಾಡುವಂತೆ ನಾವು ಒಂದು ಸೂಚನೆಯನ್ನು ನೀಡಬೇಕಾದರೂ—ನಮ್ಮ ಉದ್ದೇಶವು ಕೇವಲ ನಮ್ಮ ದೃಷ್ಟಿಕೋನವನ್ನು ತಿಳಿಸುವುದಲ್ಲ ಬದಲಿಗೆ ಪ್ರೀತಿಯ ಸಹಾಯವನ್ನು ನೀಡುವುದಾಗಿರುವಲ್ಲಿ—ನಾವು ಹೇಳುವಂತಹದ್ದು ಅಪಾರ್ಥಮಾಡಿಕೊಳ್ಳಲ್ಪಡುವುದು ಅಥವಾ ಹಾನಿಯನ್ನುಂಟುಮಾಡುವುದು ಎಂಬುದು ಅಸಂಭವನೀಯ. ಪೌಲನು ಸೂಕ್ತವಾಗಿಯೇ ಹೇಳಿದಂತೆ, “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.”—1 ಕೊರಿಂಥ 8:1; ಫಿಲಿಪ್ಪಿ 2:4; 1 ಪೇತ್ರ 1:22.
ಯಾವಾಗಲೂ ಆತ್ಮೋನ್ನತಿಮಾಡುವವರಾಗಿರ್ರಿ
ಈ ಕಠಿನವಾದ “ಕಡೇ ದಿವಸಗಳಲ್ಲಿ” ಯೆಹೋವನ ಜನರು ಅನೇಕ ಪರೀಕ್ಷೆಗಳನ್ನು ಎದುರಿಸುತ್ತಾರೆ. (2 ತಿಮೊಥೆಯ 3:1-5) ಅವರು ಕೆಲವೊಮ್ಮೆ ತಮ್ಮ ಸಹನೆಯ ಮಿತಿಯೆಂದು ತೋರುವ ಮಟ್ಟಿಗೆ ಕಷ್ಟಾನುಭವಿಸುತ್ತಾರೆಂಬುದು ಆಶ್ಚರ್ಯಕರವೇನೂ ಅಲ್ಲ. ಯೆಹೋವನ ಸೇವಕರೋಪಾದಿ, ನಮ್ಮ ಯಾವುದೇ ಜೊತೆ ಆರಾಧಕರಿಗೆ ಇನ್ನೇನು ನಂದಿಸಲ್ಪಡಲಿಕ್ಕಿರುವ ಕನಲುರಿಯುತ್ತಿರುವ ಬತ್ತಿಗಳ ಹಾಗೆ ಅನಿಸುವಂತೆ ಮಾಡಬಹುದಾದ ವಿಷಯಗಳನ್ನು ಹೇಳಲು ಅಥವಾ ಮಾಡಲು ನಾವು ಖಂಡಿತವಾಗಿ ಬಯಸೆವು.
ಹಾಗಾದರೆ, ನಾವು ಒಬ್ಬರನ್ನೊಬ್ಬರು ಉತ್ತೇಜಿಸುವುದು ಎಷ್ಟು ಪ್ರಾಮುಖ್ಯವಾಗಿದೆ! ನಿರುತ್ಸಾಹಗೊಂಡ ಜೊತೆ ಆರಾಧಕರ ವಿಷಯದಲ್ಲಿ ದೀನರೂ ಗೌರವಪೂರ್ಣರೂ ಆಗಿರುವ ಮೂಲಕ ನಾವು ಆತ್ಮೋನ್ನತಿಮಾಡುವವರಾಗಿರಲು ಪ್ರತಿಯೊಂದು ಪ್ರಯತ್ನವನ್ನು ಮಾಡೋಣ. ಅವರು ನಮ್ಮಲ್ಲಿ ನಂಬಿಕೆಯಿಟ್ಟು ವಿಷಯಗಳನ್ನು ಹೇಳುವಾಗ ನಾವು ಜಾಗರೂಕರಾಗಿ ಆಲಿಸೋಣ ಮತ್ತು ದೇವರ ವಾಕ್ಯವಾದ ಬೈಬಲಿನ ಕಡೆಗೆ ಗಮನವನ್ನು ನಿರ್ದೇಶಿಸುವ ಮೂಲಕ ಅವರಿಗೆ ಸಹಾಯ ಮಾಡಲು ಯಾವಾಗಲೂ ಪ್ರಯತ್ನಿಸೋಣ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪ್ರೀತಿಯನ್ನು ಪ್ರದರ್ಶಿಸೋಣ, ಯಾಕೆಂದರೆ ಯೆಹೋವನ ಪವಿತ್ರಾತ್ಮದ ಈ ಫಲವು ಒಬ್ಬರನ್ನೊಬ್ಬರು ಬಲಪಡಿಸುವಂತೆ ನಮಗೆ ಸಹಾಯ ಮಾಡುವುದು. ‘ಕನಲುರಿಯುತ್ತಿರುವ ಬತ್ತಿಯೊಂದನ್ನು ನಂದಿಸ’ಬಹುದಾದ ಯಾವುದೇ ರೀತಿಯಲ್ಲಿ ನಾವು ಎಂದಿಗೂ ಮಾತಾಡದಿರೋಣ ಅಥವಾ ಕ್ರಿಯೆಗೈಯದಿರೋಣ.