ನಮ್ಮ ಕಠಿನ ಸಮಯಗಳಿಗಾಗಿ ಸಹಾಯಕಾರಿ ಬೋಧನೆ
“ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”—2 ತಿಮೊಥೆಯ 3:1,13.
1, 2. ನಾವು ಯಾವ ಬೋಧನೆಗಳನ್ನು ಅನುಸರಿಸುತ್ತೇವೆ ಎಂಬ ವಿಷಯದಲ್ಲಿ ನಾವು ಆಸಕ್ತರಾಗಿರಬೇಕೇಕೆ?
ನಿಮಗೆ ಸಹಾಯ ಮಾಡಲಾಗುತ್ತಿದೆಯೊ ಯಾ ನಿಮ್ಮನ್ನು ನೋಯಿಸಲಾಗುತ್ತಿದೆಯೊ? ನಿಮ್ಮ ಸಮಸ್ಯೆಗಳು ಬಗೆಹರಿಸಲ್ಪಡುತ್ತಿವೆಯೊ ಯಾ ಇನ್ನೂ ಕೆಟ್ಟದಾಗಿ ಮಾಡಲ್ಪಡುತ್ತಿವೆಯೊ? ಯಾವುದರ ಮೂಲಕ? ಬೋಧನೆಗಳ ಮೂಲಕ. ಹೌದು ಬೋಧನೆಗಳು ನಿಮ್ಮ ಜೀವಿತವನ್ನು ಒಳ್ಳೆಯದಕ್ಕಾಗಿ ಯಾ ಕೆಟ್ಟದಕ್ಕಾಗಿ ಬಹಳವಾಗಿ ಪ್ರಭಾವಿಸಬಲ್ಲವು.
2 ಮೂವರು ಪ್ರೊಫೆಸರರು ಇತ್ತೀಚೆಗೆ ಈ ವಿಷಯವನ್ನು ಸಂಶೋಧಿಸಿದರು ಮತ್ತು ಅವರ ಕಂಡುಹಿಡಿತಗಳನ್ನು ಜರ್ನಲ್ ಫಾರ್ ದ ಸೈಂಟಿಫಿಕ್ ಸಡ್ಟಿ ಆಫ್ ರಿಲಿಜನ್ ಎಂಬ ಪತ್ರಿಕೆಯಲ್ಲಿ ಸಾದರಪಡಿಸಿದರು. ಅವರು ನಿಮ್ಮನ್ನು ಅಥವಾ ನಿಮ್ಮ ಕುಟುಂಬವನ್ನು ಅಭ್ಯಾಸಿಸಿರಲಿಕ್ಕಿಲ್ಲ ನಿಜ. ಆದರೂ, ಬೋಧನೆಗಳ ಮತ್ತು ನಮ್ಮ ಕಠಿನ ಸಮಯಗಳೊಂದಿಗೆ ನಿಭಾಯಿಸುವುದರಲ್ಲಿ ಒಬ್ಬ ವ್ಯಕ್ತಿಯ ಗೆಲವು ಅಥವಾ ಸೋಲಿನ ನಡುವೆ ನಿಶ್ಚಿತವಾದೊಂದು ಸಂಬಂಧವಿದೆಯೆಂದು ಅವರು ಕಂಡುಹಿಡಿದ ವಿಷಯವು ತೋರಿಸುತ್ತದೆ. ಮುಂದಿನ ಲೇಖನದಲ್ಲಿ, ಅವರು ಕಂಡುಹಿಡಿದ ವಿಷಯದ ಕುರಿತು ನಾವು ಗಮನಿಸುವೆವು.
3, 4. ನಾವು ಕಠಿನ ಕಾಲಗಳಲ್ಲಿ ಜೀವಿಸುತ್ತೇವೆಂಬುದಕ್ಕೆ ಕೆಲವು ಪ್ರಮಾಣಗಳು ಯಾವುವು?
3 ಆದರೆ, ಪ್ರಥಮವಾಗಿ ಈ ಪ್ರಶ್ನೆಯನ್ನು ಪರಿಗಣಿಸಿರಿ: ನಿಭಾಯಿಸಲು ಕಠಿನವಾದ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆಂದು ನೀವು ಒಪ್ಪುತ್ತೀರೊ? ಹಾಗಿರುವಲ್ಲಿ, ಇವು “ಕಠಿನಕಾಲ” ಗಳಾಗಿವೆ ಎಂದು ಪ್ರಮಾಣವು ರುಜುಪಡಿಸುತ್ತದೆಂದು ನೀವು ಖಂಡಿತ ನೋಡುವಿರಿ. (2 ತಿಮೊಥೆಯ 3:1-5) ಜನರು ಪ್ರಭಾವಿಸಲ್ಪಡುವ ವಿಧಾನಗಳು ಭಿನ್ನವಾಗಿವೆ. ಉದಾಹರಣೆಗೆ, ವಿಭಿನ್ನ ಪಂಗಡಗಳು ರಾಜಕೀಯ ಪ್ರಾಬಲ್ಯಕ್ಕಾಗಿ ಹೋರಾಡಿದಂತೆ, ಈಗ ಛಿದ್ರವಾಗುತ್ತಿರುವ ದೇಶಗಳ ಕುರಿತು ಬಹುಶಃ ನೀವು ತಿಳಿದಿದ್ದೀರಿ. ಬೇರೆ ಕಡೆಗಳಲ್ಲಿ, ಕೊಲ್ಲುವಿಕೆಯು ಧಾರ್ಮಿಕ ಅಥವಾ ರಾಷ್ಟ್ರೀಯ ಭಿನ್ನತೆಗಳಿಂದ ಹುಟ್ಟುತ್ತದೆ. ಗಾಯಗೊಳ್ಳುವವರಲ್ಲಿ ಸೈನಿಕರು ಏಕೈಕರಾಗಿರುವುದಿಲ್ಲ. ಅತಿ ಕ್ರೌರ್ಯಕ್ಕೊಳಗಾಗಿರುವ ಅಸಂಖ್ಯಾತ ಹೆಂಗಸರ ಮತ್ತು ಹುಡುಗಿಯರ ಅಥವಾ ಆಹಾರ, ಶಾಖ, ಮತ್ತು ಆಸರೆಗಳಿಲ್ಲದೆ ವಂಚಿತರಾಗಿರುವ ವೃದ್ಧರ ಕುರಿತು ಯೋಚಿಸಿರಿ. ಎಣಿಸಲಾಗದಷ್ಟು ಜನರು ಬಹಳವಾಗಿ ಕಷ್ಟಾನುಭವಿಸುತ್ತಿದ್ದಾರೆ, ಇದು ನಿರಾಶ್ರಿತರ ಮಿತಿಮೀರಿದ ಸಂಖ್ಯೆಗಳಿಗೆ ಮತ್ತು ಅನೇಕ ಸಂಬಂಧಿತ ಸಂಕಟಗಳಿಗೆ ನಡೆಸುತ್ತಿದೆ.
4 ನಮ್ಮ ಸಮಯಗಳು, ಮುಚ್ಚಲ್ಪಟ್ಟ ಕಾರ್ಖಾನೆಗಳು, ನಿರುದ್ಯೋಗ, ನಷ್ಟವಾದ ಪ್ರಯೋಜನಗಳು ಮತ್ತು ನಿವೃತ್ತಿವೇತನಗಳು, ಹಣದ ಮೌಲ್ಯದ ಸವೆತ, ಮತ್ತು ಕೊಂಚ ಯಾ ಕಡಿಮೆ ಸಂಖ್ಯೆಯ ಊಟಗಳಲ್ಲಿ ಫಲಿಸುವ ಆರ್ಥಿಕ ಸಮಸ್ಯೆಗಳಿಂದಲೂ ಕೂಡ ಗುರುತಿಸಲ್ಪಟ್ಟಿವೆ. ಸಮಸ್ಯೆಗಳ ಪಟ್ಟಿಗೆ ಹೆಚ್ಚಿನದನ್ನು ನೀವು ಕೂಡಿಸಬಲ್ಲಿರೊ? ಬಹುಶಃ ಹಾಗೆ ಮಾಡುವಿರಿ. ಭೂಮಂಡಲದ ಸುತ್ತಲೂ ಇತರ ಲಕ್ಷಾಂತರ ಜನರು ಆಹಾರದ ಅಭಾವಗಳಿಂದ ಮತ್ತು ರೋಗಗಳಿಂದ ಕಷ್ಟಾನುಭವಿಸುತ್ತಾರೆ. ಕೃಶರಾದ ಗಂಡಸರು, ಹೆಂಗಸರು, ಮತ್ತು ಮಕ್ಕಳನ್ನು ತೋರಿಸುವ ಪೂರ್ವ ಆಫ್ರಿಕದ ಭಯಂಕರ ಛಾಯಾಚಿತ್ರಗಳನ್ನು ಪ್ರಾಯಶಃ ನೀವು ನೋಡಿದ್ದೀರಿ. ಏಷಿಯಾದಲ್ಲಿ ಲಕ್ಷಾಂತರ ಜನರು ಇದೇ ರೀತಿಯಲ್ಲಿ ಕಷ್ಟಾನುಭವಿಸುತ್ತಾರೆ.
5, 6. ರೋಗವು ಕೂಡ ನಮ್ಮ ಕಠಿನ ಕಾಲಗಳ ತಡೆಯಲಸಾಧ್ಯವಾದ ಒಂದು ಸ್ಥಿತಿಯಾಗಿದೆ ಎಂದು ಹೇಳಸಾಧ್ಯವಿದೆ ಏಕೆ?
5 ಈಗ ಅಭಿವೃದ್ಧಿ ಹೊಂದುತ್ತಿರುವ, ಭಯಹುಟ್ಟಿಸುವ ರೋಗಗಳ ಕುರಿತು ನಾವೆಲ್ಲರೂ ಕೇಳಿದ್ದೇವೆ. ಜನವರಿ 25, 1993 ರಂದು, ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ಲೈಂಗಿಕ ಸ್ವೇಚ್ಛಾಸಂಪರ್ಕ, ಕಪಟ ಮತ್ತು ಗೊತ್ತುಗುರಿಯಿಲ್ಲದ ವ್ಯಾಧಿನಿವಾರಣೆಯ ನಡುವೆ ಅಭಿವೃದ್ಧಿ ಪಡೆಯುತ್ತಿರುವ ಲ್ಯಾಟಿನ್ ಅಮೆರಿಕದ ಏಯ್ಡ್ಸ್ ಸಾಂಕ್ರಾಮಿಕ ರೋಗವು, ಅಮೆರಿಕದಲ್ಲಿರುವ ಏಯ್ಡ್ಸ್ ಸಾಂಕ್ರಾಮಿಕ ರೋಗವನ್ನು ಮೀರಿಸಲು ಮುಂದೆ ಸಾಗುತ್ತಿದೆ . . . ಹೆಚ್ಚಿನ ಬೆಳವಣಿಗೆಯು ಹೆಂಗಸರೊಳಗೆ . . . ಏರುತ್ತಿರುವ ಸೋಂಕಿನ ಪ್ರಮಾಣಗಳಿಂದ ಬರುತ್ತದೆ.” ಅಕ್ಟೋಬರ 1992 ರಲ್ಲಿ, ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿದ್ದು: “ಹಿಂದೆಂದೂ ಸಂಭವಿಸದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ವಿಜಯಗಳಲ್ಲಿ ಒಂದನ್ನು ಅಭಿವಂದಿಸುತ್ತಾ, ‘ಸಾಂಕ್ರಾಮಿಕ ರೋಗಗಳ ಕುರಿತು ಹೆಚ್ಚು ಚಿಂತಿಸದೆ ಇರುವ ಸಮಯವು’ ಇದಾಗಿದೆ ಎಂದು ಅಮೆರಿಕದ ಮುಖ್ಯ ಸರ್ಜನರು ಪ್ರಕಟಿಸಿದ್ದು ಕೇವಲ ಎರಡು ದಶಕಗಳ ಹಿಂದೆ.” ಆದರೆ ಈಗಿನ ಪರಿಸ್ಥಿತಿಯ ಕುರಿತೇನು? “ಸೋಲಿಸಲ್ಪಟ್ಟಿವೆ ಎಂಬುದಾಗಿ ಭಾವಿಸಲಾದ ಉಪದ್ರವಗಳ ರೋಗಿಗಳಿಂದ ಆಸ್ಪತ್ರೆಗಳು ಮತ್ತೆ ತುಂಬಿ ಹರಿಯುತ್ತಿವೆ. . . . ಹೊಸ ಪ್ರತಿಜೀವಾಣುಗಳ ವಿಕಾಸಕ್ಕಿಂತಲೂ ಶೀಘ್ರವಾಗಿ ಬೆಳೆಯಲು ಬಿಡುವಂತಹ ಅತಿ ಜಾಣ್ಮೆಯ ಉತ್ಪತ್ತಿ ಯುಕ್ತಿಗಳನ್ನು ಸೂಕ್ಷ್ಮಜೀವಿಗಳು ವಿಕಸಿಸುತ್ತಿವೆ. . . . ‘ಸಾಂಕ್ರಾಮಿಕ ರೋಗಗಳ ಒಂದು ಹೊಸ ಯುಗವನ್ನು ನಾವು ಪ್ರವೇಶಿಸುತ್ತಾ ಇದ್ದೇವೆ.’”
6 ಒಂದು ಉದಾಹರಣೆಯೋಪಾದಿಯಲ್ಲಿ, ಜನವರಿ 11, 1993ರ ನ್ಯೂಸ್ವೀಕ್, ವರದಿಸಿದ್ದು: “ಮಲೇರಿಯದ ಪರೋಪಜೀವಿಗಳು ಈಗ ಪ್ರತಿ ವರ್ಷ ಅಂದಾಜುಮಾಡಲಾದ 2 ಕೋಟಿ 70 ಲಕ್ಷ ಜನರನ್ನು ಸೋಂಕಿಸುತ್ತವೆ, 20 ಕೋಟಿಯಷ್ಟು ಜನರನ್ನು ಕೊಲ್ಲುತ್ತಾ . . . ಮತ್ತು ಕಡಿಮೆಪಕ್ಷ ತೀವ್ರ ಕಾಯಿಲೆಯ 10 ಕೋಟಿ ವಿದ್ಯಮಾನಗಳನ್ನು ಉಂಟುಮಾಡುತ್ತಾ ಇವೆ. . . . ಅದೇ ಸಮಯದಲ್ಲಿ, ರೋಗವು ಹಿಂದಿನ ರೋಗ ನಿವಾರಕ ಔಷಧಗಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೋಧಕವಾಗುತ್ತಿದೆ. . . . ಕೆಲವು ಜಾತಿಗಳು ಬೇಗನೆ ಚಿಕಿತ್ಸೆಗೆ ಒಳಪಡದೆ ಹೋಗುವ ಸಾಧ್ಯತೆಯಿದೆ.” ಇದು ನಿಮ್ಮನ್ನು ಭಯದಿಂದ ಕಂಪಿಸುವಂತೆ ಮಾಡುತ್ತದೆ.
7. ಇಂದು ಅನೇಕರು ಕಠಿನ ಸಮಯಗಳಿಗೆ ಹೇಗೆ ಪ್ರತಿವರ್ತಿಸುತ್ತಿದ್ದಾರೆ?
7 ನಿಭಾಯಿಸಲು ಕಠಿನವಾದ ಈ ಸಮಯಗಳಲ್ಲಿ, ಅನೇಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕ್ಕಾಗಿ ಹುಡುಕುತ್ತಿದ್ದಾರೆಂದು ನೀವು ಗಮನಿಸಿರಬಹುದು. ಒತ್ತಡ ಇಲ್ಲವೆ ಯಾವುದೊ ಹೊಸ ರೋಗದೊಂದಿಗೆ ನಿಭಾಯಿಸುವುದರ ಕುರಿತು ಪುಸ್ತಕಗಳ ಕಡೆಗೆ ತಿರುಗುವವರ ಕುರಿತು ಯೋಚಿಸಿರಿ. ಇತರರು ವಿಫಲಗೊಳ್ಳುತ್ತಿರುವ ಒಂದು ಮದುವೆಯ ಕುರಿತು, ಮಕ್ಕಳ ಪೋಷಣೆಯ ಕುರಿತು, ಮದ್ಯಪಾನ ಯಾ ಅಮಲೌಷಧ ತೊಂದರೆಗಳ ಕುರಿತು, ತಮ್ಮ ಕೆಲಸದ ಬೇಡಿಕೆಗಳನ್ನು ಮತ್ತು ಮನೆಯಲ್ಲಿ ಅವರು ಅನುಭವಿಸುವ ಒತ್ತಡಗಳನ್ನು ಹೇಗೆ ಸರಿದೂಗಿಸುವುದು ಎಂಬುದರ ಕುರಿತು ಸಲಹೆಗಾಗಿ ತೀರ ಆಸೆಗೆಟ್ಟಿದ್ದಾರೆ. ಹೌದು, ಅವರಿಗೆ ನಿಜವಾಗಿಯೂ ಸಹಾಯದ ಅಗತ್ಯವಿದೆ! ನೀವೊಂದು ವೈಯಕ್ತಿಕ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೀರೊ ಅಥವಾ ಯುದ್ಧ, ಬರಗಾಲ, ಯಾ ವಿಪತ್ತಿನಿಂದ ಉಂಟಾದ ಕೆಲವೊಂದು ತೊಂದರೆಗಳನ್ನು ಅನುಭವಿಸುತ್ತಿದ್ದೀರೊ? ತುರ್ತಾದ ಸಮಸ್ಯೆಯೊಂದು ಪರಿಹಾರವನ್ನು ಮೀರಿರುವಂತೆ ತೋರಿದರೂ, ‘ಇಂತಹ ಕಠಿನವಾದೊಂದು ಸ್ಥಿತಿಯನ್ನು ನಾವು ಯಾಕೆ ತಲಪಿದ್ದೇವೆ?’ ಎಂದು ಕೇಳಲು ನಿಮಗೆ ಕಾರಣವಿದೆ.
8. ಒಳನೋಟ ಮತ್ತು ಮಾರ್ಗದರ್ಶನಕ್ಕಾಗಿ ನಾವು ಬೈಬಲಿನ ಕಡೆಗೆ ನೋಡಬೇಕು ಏಕೆ?
8 ನಾವು ಪರಿಣಾಮಕಾರಿಯಾಗಿ ನಿಭಾಯಿಸಿ ಮತ್ತು ಈಗ ಹಾಗೂ ಭವಿಷ್ಯತ್ತಿನಲ್ಲಿ ಜೀವಿತದಲ್ಲಿ ಸಂತೃಪ್ತಿಯನ್ನು ಕಂಡುಹಿಡಿಯುವ ಮುಂಚೆ, ಇಂತಹ ಕಠಿನ ಸಮಯಗಳನ್ನು ನಾವು ಯಾಕೆ ಎದುರಿಸುತ್ತಿದ್ದೇವೆಂದು ತಿಳಿಯುವ ಅಗತ್ಯ ನಮಗಿದೆ. ಯಥಾರ್ಥವಾಗಿ ಹೇಳುವುದಾದರೆ, ನಮ್ಮಲ್ಲಿ ಪ್ರತಿಯೊಬ್ಬರು ಬೈಬಲನ್ನು ಪರಿಗಣಿಸುವ ಕಾರಣವನ್ನು ಅದು ಒದಗಿಸುತ್ತದೆ. ನಾವು ಬೈಬಲನ್ನು ಸೂಚಿಸುವುದೇಕೆ? ಏಕೆಂದರೆ, ನಮ್ಮ ಅವಸ್ಥೆಗೆ ಕಾರಣಗಳು, ನಾವು ಎಲ್ಲಿದ್ದೇವೆ, ಮತ್ತು ಎತ್ತ ಸಾಗುತ್ತಿದ್ದೇವೆ ಎಂದು ತೋರಿಸುವ, ಮುಂಚಿತವಾಗಿ ಬರೆದಿಡಲ್ಪಟ್ಟ ಇತಿಹಾಸವು, ನಿಷ್ಕೃಷ್ಟವಾದ ಪ್ರವಾದನೆಯು ಕೇವಲ ಅದರಲ್ಲಿದೆ.
ಇತಿಹಾಸದಿಂದ ಒಂದು ಪಾಠ
9, 10. ಮತ್ತಾಯ 24 ನೆಯ ಅಧ್ಯಾಯದಲ್ಲಿರುವ ಯೇಸುವಿನ ಪ್ರವಾದನೆಯು ಪ್ರಥಮ ಶತಮಾನದಲ್ಲಿ ಹೇಗೆ ನೆರವೇರಿತು?
9 ಮತ್ತಾಯ 24 ನೆಯ ಅಧ್ಯಾಯದಲ್ಲಿರುವ ಯೇಸುವಿನ ಸುಸ್ಪಷ್ಟ ಪ್ರವಾದನೆಯ ಗಮನಾರ್ಹ ಪುನರ್ವಿಮರ್ಶೆಯನ್ನು, ಫೆಬ್ರವರಿ 15, 1994ರ ಕಾವಲಿನಬುರುಜು ಪತ್ರಿಕೆಯು ಒದಗಿಸಿತು. ನೀವು ನಿಮ್ಮ ಬೈಬಲನ್ನು ಆ ಅಧ್ಯಾಯಕ್ಕೆ ತೆರೆಯುವುದಾದರೆ, ಯೇಸುವಿನ ಅಪೊಸ್ತಲರು ಅವನ ಭವಿಷ್ಯತ್ತಿನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತು ಒಂದು ಸೂಚನೆಗಾಗಿ ಕೇಳಿದರೆಂದು 3 ನೆಯ ವಚನದಲ್ಲಿ ನೀವು ನೋಡಬಲ್ಲಿರಿ. ಆಮೇಲೆ, 5 ರಿಂದ 14 ನೆಯ ವಚನಗಳಲ್ಲಿ ಯೇಸು, ಸುಳ್ಳು ಕ್ರಿಸ್ತರು, ಯುದ್ಧಗಳು, ಆಹಾರದ ಅಭಾವಗಳು, ಕ್ರೈಸ್ತರ ಹಿಂಸೆ, ನಿಯಮರಾಹಿತ್ಯ, ಮತ್ತು ದೇವರ ರಾಜ್ಯದ ಕುರಿತು ವಿಸ್ತಾರವಾದ ಸಾರುವಿಕೆಯನ್ನು ಮುಂತಿಳಿಸಿದನು.
10 ಯೆಹೂದಿ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ಆ ವಿಷಯಗಳೇ ಸಂಭವಿಸಿದವೆಂದು ಇತಿಹಾಸವು ರುಜುಪಡಿಸುತ್ತದೆ. ನೀವು ಆಗ ಜೀವಿಸುತ್ತಿದ್ದರೆ, ಅವು ಕಠಿನವಾದ ಸಮಯಗಳಾಗಿರುತ್ತಿರಲಿಲ್ಲವೆ? ಹಾಗಿದ್ದರೂ, ವಿಷಯಗಳು ಒಂದು ಪರಾಕಾಷ್ಠೆ—ಯೆರೂಸಲೇಮ್ ಮತ್ತು ಯೆಹೂದಿ ವ್ಯವಸ್ಥೆಯ ಮೇಲೆ ಅಭೂತಪೂರ್ವವಾದೊಂದು ಸಂಕಟ—ಯ ಕಡೆಗೆ ಸಾಗುತ್ತಿದ್ದವು. ಸಾ.ಶ. 66 ರಲ್ಲಿ ರೋಮನರು ಯೆರೂಸಲೇಮನ್ನು ಮುತ್ತಿದ ತರುವಾಯ ಏನು ನಡೆಯಿತು ಎಂಬುದರ ಕುರಿತು ನಾವು 15 ನೆಯ ವಚನದಲ್ಲಿ ಓದಲು ಪ್ರಾರಂಭಿಸುತ್ತೇವೆ. ವಚನ 21 ರಲ್ಲಿ ಯೇಸು ತಿಳಿಸಿದ ಸಂಕಟದಲ್ಲಿ ಆ ಘಟನೆಗಳು ಪರಾಕಾಷ್ಠೆಯನ್ನು ತಲಪಿದವು—ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನ; ಆ ಪಟ್ಟಣಕ್ಕೆ ಹಿಂದೆಂದೂ ಸಂಭವಿಸದ ಅತಿ ಕೇಡಿನ ಸಂಕಟವಾಗಿತ್ತು. ಆದರೂ, ಅಲ್ಲಿಗೆ ಇತಿಹಾಸವು ನಿಲ್ಲಲಿಲ್ಲವೆಂದು ನಿಮಗೆ ಗೊತ್ತು, ಹಾಗೆ ಆಗುವುದೆಂದು ಯೇಸು ಹೇಳಲೂ ಇಲ್ಲ. ಸಾ.ಶ. 70ರ ಸಂಕಟದ ತರುವಾಯ, ಬೇರೆ ವಿಷಯಗಳು ಸಂಭವಿಸುವುವು ಎಂದು 23 ರಿಂದ 28ರ ವಚನಗಳಲ್ಲಿ ಅವನು ತೋರಿಸಿದನು.
11. ಮತ್ತಾಯ 24 ನೆಯ ಅಧ್ಯಾಯದ ಪ್ರಥಮ ಶತಮಾನದ ನೆರವೇರಿಕೆಯು, ನಮ್ಮ ದಿನಕ್ಕೆ ಯಾವ ರೀತಿಯಲ್ಲಿ ಸಂಬಂಧಪಟ್ಟಿದೆ?
11 ಕೆಲವರು ಇಂದು, ‘ಅದು ಅಷ್ಟೊಂದು ಮಹತ್ವವುಳ್ಳದ್ದಾಗಿರಬೇಕೇಕೆ?’ ಎಂಬ ಪ್ರಶ್ನೆಯೊಂದಿಗೆ, ಗತಕಾಲದ ಇಂತಹ ವಿಷಯಗಳನ್ನು ತಳ್ಳಿಹಾಕುವ ಪ್ರವೃತ್ತಿಯುಳ್ಳವರಾಗಿರಬಹುದು. ಅದು ತಪ್ಪಾಗಿರುವುದು. ಆಗ ನಡೆದ ಪ್ರವಾದನೆಯ ನೆರವೇರಿಕೆಯು ಬಹಳ ಪ್ರಾಮುಖ್ಯವಾಗಿದೆ. ಯಾಕೆ? ಯೆಹೂದಿ ವ್ಯವಸ್ಥೆಯ ಸಮಾಪ್ತಿಯಲ್ಲಿ ಸಂಭವಿಸಿದ ಯುದ್ಧಗಳು, ಬರಗಾಲಗಳು, ಭೂಕಂಪಗಳು, ವ್ಯಾಧಿಗಳು, ಮತ್ತು ಹಿಂಸೆಯು, 1914 ರಲ್ಲಿ “ಅನ್ಯದೇಶದವರ ಸಮಯಗಳು” ಕೊನೆಗೊಂಡ ಬಳಿಕ ಅತಿ ದೊಡ್ಡ ನೆರವೇರಿಕೆಯಲ್ಲಿ ಪ್ರತಿಬಿಂಬಿಸಲ್ಪಡಲಿದ್ದವು. (ಲೂಕ 21:24) ಒಂದನೆಯ ಲೋಕ ಯುದ್ಧಕ್ಕೆ—ಈ ಆಧುನಿಕ ನೆರವೇರಿಕೆ ಆರಂಭವಾದಾಗ—ಈಗ ಜೀವಿಸುತ್ತಿರುವ ಅನೇಕರು ಪ್ರತ್ಯಕ್ಷದರ್ಶಿಗಳಾಗಿದ್ದರು. ಆದರೆ ನೀವು 1914ರ ತರುವಾಯ ಜನಿಸಿರುವುದಾದರೂ, ಯೇಸುವಿನ ಪ್ರವಾದನೆಯು ನೆರವೇರುತ್ತಿರುವುದನ್ನು ನೀವು ಕಂಡಿದ್ದೀರಿ. ಈ ಪ್ರಸ್ತುತ ದುಷ್ಟ ವ್ಯವಸ್ಥೆಯ ಸಮಾಪ್ತಿಯಲ್ಲಿ ನಾವು ಈಗ ಜೀವಿಸುತ್ತಿದ್ದೇವೆಂದು ಈ 20 ನೆಯ ಶತಮಾನದ ಘಟನೆಗಳು ಮಿತಿಮೀರಿ ರುಜುಪಡಿಸುತ್ತವೆ.
12. ಯೇಸುವಿಗನುಸಾರ, ನಾವು ಇನ್ನೂ ಏನನ್ನು ನೋಡಲು ನಿರೀಕ್ಷಿಸಬಲ್ಲೆವು?
12 ಇದರ ಅರ್ಥವು, ಮತ್ತಾಯ 24:29ರ “ಸಂಕಟವು” ನಮ್ಮ ಮುಂದೆ ಇದೆ. ಊಹಿಸಲು ಅಸಾಧ್ಯವಾಗಿರಬಹುದಾದ ಆಕಾಶದ ಘಟನೆಯನ್ನು ಅದು ಒಳಗೊಳ್ಳುವುದು. ಆಗ ಜನರು ಭಿನ್ನವಾದೊಂದು ಸೂಚನೆಯನ್ನು—ನಾಶನವು ಹತ್ತಿರವಿದೆಯೆಂದು ರುಜುಪಡಿಸುವ ಸೂಚನೆಯನ್ನು—ನೋಡುವರೆಂದು ವಚನ 30 ತೋರಿಸುತ್ತದೆ. ಲೂಕ 21:25-28 ರಲ್ಲಿರುವ ಸಮಾನಾಂತರ ದಾಖಲೆಗನುಸಾರ, ಆ ಭವಿಷ್ಯದ ಸಮಯದಲ್ಲಿ, ‘ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.’ ತಮ್ಮ ಬಿಡುಗಡೆಯು ಬಹಳ ಹತ್ತಿರವಿರುವುದರಿಂದ ಕ್ರೈಸ್ತರು ಆಗ ತಮ್ಮ ತಲೆಗಳನ್ನು ಮೇಲಕ್ಕೆತ್ತುವರೆಂದು ಕೂಡ ಲೂಕನ ದಾಖಲೆಯು ಹೇಳುತ್ತದೆ.
13. ಯಾವ ಎರಡು ಮುಖ್ಯ ವಾದಾಂಶಗಳು ನಮ್ಮ ಗಮನಕ್ಕೆ ಯೋಗ್ಯವಾಗಿವೆ?
13 ‘ಅದನ್ನು ನಾನು ಸ್ವೀಕರಿಸಿ ಒಪ್ಪುತ್ತೇನೆ,’ ‘ಆದರೆ ನಮ್ಮ ಕಠಿನ ಕಾಲಗಳನ್ನು ನಾನು ಅರಿತುಕೊಂಡು ಎದುರಿಸುವುದು ಹೇಗೆ ಎಂಬುದೆ ವಿವಾದಾಂಶವಾಗಿತ್ತೆಂದು ನಾನು ನೆನಸಿದೆ’ ಎಂದು ನೀವು ಹೇಳಬಹುದು. ಸರಿ. ಮುಖ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಾವು ಹೇಗೆ ತೊರೆಯಬಲ್ಲೆವೆಂದು ನೋಡುವುದೇ ನಮ್ಮ ಪ್ರಥಮ ವಾದಾಂಶವಾಗಿದೆ. ಒಂದು ಉತ್ತಮ ಜೀವಿತವನ್ನು ಈಗ ಅನುಭವಿಸಲು ಶಾಸ್ತ್ರೀಯ ಬೋಧನೆಗಳು ನಮಗೆ ಹೇಗೆ ಸಹಾಯಮಾಡಬಲ್ಲವು ಎಂಬ ಎರಡನೆಯ ಅಂಶವು ಅದಕ್ಕೆ ಸೇರಿದೆ. ಈ ಸಂಬಂಧದಲ್ಲಿ, ದಯವಿಟ್ಟು ನಿಮ್ಮ ಬೈಬಲನ್ನು 2 ತಿಮೊಥೆಯ 3 ನೆಯ ಅಧ್ಯಾಯಕ್ಕೆ ತೆರೆಯಿರಿ, ಮತ್ತು ಕಠಿನ ಸಮಯಗಳನ್ನು ನಿಭಾಯಿಸಲು ಅಪೊಸ್ತಲ ಪೌಲನ ಮಾತುಗಳು ನಿಮಗೆ ಹೇಗೆ ಸಹಾಯ ಮಾಡಬಲ್ಲವೆಂದು ನೋಡಿರಿ.
ನಮ್ಮ ಸಮಯಗಳ ಕುರಿತಾದ ಒಂದು ಪ್ರವಾದನೆ
14. ಎರಡನೆಯ ತಿಮೊಥೆಯ 3:1-5ರ ಪರಿಗಣನೆಯು ನಮ್ಮನ್ನು ಪ್ರಯೋಜನಪಡಿಸಬಲ್ಲದೆಂದು ನಂಬಲು ಕಾರಣವಿದೆ ಏಕೆ?
14 ಅಧಿಕ ಯಶಸ್ವಿಕರ ಮತ್ತು ಸಂತೋಷಕರ ಜೀವಿತವನ್ನು ನಡೆಸಲು ಸಹಾಯಮಾಡಿದ ಹೆಚ್ಚಿನ ಉತ್ತಮ ಸಲಹೆಯನ್ನು ನಿಷ್ಠಾವಂತ ಕ್ರೈಸ್ತ ತಿಮೊಥೆಯನಿಗೆ ಬರೆಯುವಂತೆ, ದೇವರು ಪೌಲನನ್ನು ಪ್ರೇರೇಪಿಸಿದನು. ಪೌಲನು ಬರೆದ ವಿಷಯದ ಒಂದು ಭಾಗದ ಪ್ರಧಾನ ಅನ್ವಯವು ನಮ್ಮ ದಿನದಲ್ಲಿ ಇರಲಿಕ್ಕಿತ್ತು. ಅವುಗಳನ್ನು ನೀವು ಚೆನ್ನಾಗಿ ಬಲ್ಲಿರೆಂದು ನಿಮಗನಿಸಿದರೂ, 2 ತಿಮೊಥೆಯ 3:1-5 ರಲ್ಲಿರುವ ಪ್ರವಾದನಾ ಮಾತುಗಳನ್ನು ನಿಕಟವಾಗಿ ಅನುಸರಿಸಿರಿ. ಪೌಲನು ಬರೆದದ್ದು: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.”
15. ಇಂದು ನಮಗೆ ಎರಡನೆಯ ತಿಮೊಥೆಯ 3:1 ವಿಶೇಷವಾದ ಆಸಕ್ತಿಯುಳ್ಳದ್ದಾಗಿರಬೇಕು ಏಕೆ?
15 ಅಲ್ಲಿ 19 ವಿಷಯಗಳ ಪಟ್ಟಿಮಾಡಲಾಗಿದೆ ಎಂದು ದಯವಿಟ್ಟು ಗಮನಿಸಿರಿ. ಅವುಗಳನ್ನು ಪರೀಕ್ಷಿಸಿ, ಪ್ರಯೋಜನ ಪಡೆಯುವ ಸ್ಥಾನಕ್ಕೆ ಬರುವ ಮುಂಚೆ, ಪ್ರವಾದನೆಯ ಸಮಗ್ರ ನೋಟವನ್ನು ಪಡೆಯಿರಿ. ಒಂದನೆಯ ವಚನವನ್ನು ನೋಡಿರಿ. ಪೌಲನು ಮುಂತಿಳಿಸಿದ್ದು: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ.” ಯಾವ “ಕಡೇ ದಿವಸಗಳು”? ಪ್ರಾಚೀನ ಪಾಂಪೆಯ ಕಡೇ ದಿವಸಗಳು ಅಥವಾ ಒಬ್ಬ ಅರಸನ ಯಾ ಆಳಿಕೆ ನಡೆಸುವ ಒಂದು ಕುಟುಂಬದ ಕಡೇ ದಿವಸಗಳಂತಹ ಅನೇಕ ಕಡೇ ದಿವಸಗಳು ಆಗಿ ಹೋಗಿವೆ. ಯೆಹೂದಿ ವ್ಯವಸ್ಥೆಯ ಕಡೇ ದಿವಸಗಳಂತೆ, ಅನೇಕ ಕಡೇ ದಿವಸಗಳ ಕುರಿತು ಬೈಬಲ್ ಕೂಡ ಹೇಳುತ್ತದೆ. (ಅ. ಕೃತ್ಯಗಳು 2:16, 17) ಪೌಲನು ತಿಳಿಸಿದ “ಕಡೇ ದಿವಸಗಳು” ನಮ್ಮ ಸಮಯವನ್ನು ಸೂಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು, ಯೇಸುವಾದರೊ ನಮಗಾಗಿ ಆಧಾರವನ್ನು ಸ್ಥಾಪಿಸಿದನು.
16. ಗೋದಿ ಮತ್ತು ಹಣಜಿಗಳ ಸಾಮ್ಯವು ನಮ್ಮ ಸಮಯಕ್ಕಾಗಿ ಯಾವ ಸನ್ನಿವೇಶವನ್ನು ಮುಂತಿಳಿಸಿತು?
16 ಗೋದಿ ಮತ್ತು ಹಣಜಿಗಳ ಕುರಿತು ಒಂದು ಸಾಮ್ಯದಿಂದ ಯೇಸು ಹಾಗೆ ಮಾಡಿದನು. ಇವುಗಳನ್ನು ಒಂದು ಹೊಲದಲ್ಲಿ ಬಿತ್ತಿ ಬೆಳೆಯಲು ಬಿಡಲಾಯಿತು. ಗೋದಿ ಮತ್ತು ಹಣಜಿಗಳು ಜನರನ್ನು—ನಿಜ ಕ್ರೈಸ್ತರನ್ನು ಮತ್ತು ಸುಳ್ಳು ಕ್ರೈಸ್ತರನ್ನು ಪ್ರತಿನಿಧಿಸುತ್ತವೆ ಎಂದು ಅವನು ಹೇಳಿದನು. ಸಂಪೂರ್ಣ ದುಷ್ಟ ವ್ಯವಸ್ಥೆಯ ಸಮಾಪ್ತಿಯ ಮುಂಚೆ ದೀರ್ಘವಾದ ಸಮಯಾವಧಿಯು ದಾಟಿ ಹೋಗುವುದೆಂದು ಅದು ಸ್ಥಾಪಿಸುವುದರಿಂದ, ನಾವು ಈ ಸಾಮ್ಯವನ್ನು ಗಮನಕ್ಕೆ ತರುತ್ತೇವೆ. ಸಮಾಪ್ತಿಯು ತಲಪಿದಾಗ, ಯಾವುದೊ ವಿಷಯವು ಉಚ್ಛಾಯ್ರ ಸ್ಥಿತಿಯಲ್ಲಿರುವುದು. ಯಾವುದು? ದುಷ್ಟತನದ ಒಂದು ದೊಡ್ಡ ಬೆಳೆಯಲ್ಲಿ ಫಲಿಸುವ ಧರ್ಮಭ್ರಷ್ಟತೆ, ಯಾ ನಿಜ ಕ್ರೈಸ್ತತ್ವದಿಂದ ದೂರ ಸರಿಯುವಿಕೆ. ದುಷ್ಟ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಇದು ಸಂಭವಿಸುವುದೆಂದು ಇತರ ಬೈಬಲ್ ಪ್ರವಾದನೆಗಳು ದೃಢಪಡಿಸುತ್ತವೆ. ನಾವು ಇರುವುದೇ ಅಲ್ಲಿ, ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ.—ಮತ್ತಾಯ 13:24-30, 36-43.
17. ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತು ಯಾವ ಸಮಾಂತರ ಮಾಹಿತಿಯನ್ನು 2 ತಿಮೊಥೆಯ 3:1-5 ಒದಗಿಸುತ್ತದೆ?
17 ಇದರ ಮಹತ್ವವನ್ನು ನೀವು ಕಾಣುತ್ತೀರೋ? ವ್ಯವಸ್ಥೆಯ ಸಮಾಪ್ತಿ ಯಾ ಕಡೇ ದಿವಸಗಳಲ್ಲಿ, ಕ್ರೈಸ್ತರ ಸುತ್ತಲಿರುವ ಫಲವು ಕೆಟ್ಟದ್ದಾಗಿರುವುದೆಂಬ ಸಮಾಂತರ ಸೂಚನೆಯನ್ನು ಎರಡನೆಯ ತಿಮೊಥೆಯ 3:1-5 ನಮಗೆ ಕೊಡುತ್ತದೆ. ಕಡೇ ದಿವಸಗಳು ಆಗಮಿಸಿವೆ ಎಂಬುದನ್ನು ರುಜುಪಡಿಸಲು ಪಟ್ಟಿಮಾಡಲಾದ 19 ವಿಷಯಗಳು ಪ್ರಧಾನ ಮಾರ್ಗವಾಗಿದೆಯೆಂದು ಪೌಲನು ಹೇಳುತ್ತಿದುದ್ದಲ್ಲ. ಬದಲಿಗೆ, ಕಡೇ ದಿವಸಗಳಲ್ಲಿ ನಾವು ಯಾವುದರೊಂದಿಗೆ ಹೋರಾಡಬೇಕಾಗುವುದು ಎಂಬುದರ ಕುರಿತು ಅವನು ಎಚ್ಚರಿಸುತ್ತಿದ್ದನು. ಒಂದನೆಯ ವಚನವು “ಕಠಿನಕಾಲಗಳ” ಕುರಿತು ಮಾತಾಡುತ್ತದೆ. ಆ ಅಭಿವ್ಯಕ್ತಿಯು ಗ್ರೀಕ್ ಭಾಷೆಯಿಂದ ಬಂದದ್ದು, ಮತ್ತು ಅದು ಅಕ್ಷರಾರ್ಥಕವಾಗಿ “ಉಗ್ರವಾದ ನೇಮಿತ ಸಮಯಗಳು” ಎಂಬುದನ್ನು ಅರ್ಥೈಸುತ್ತದೆ. (ಕಿಂಗ್ಡಂ ಇಂಟರ್ಲಿನಿಯರ್) ನಾವು ಇಂದು ಎದುರಿಸುತ್ತಿರುವುದನ್ನು “ಉಗ್ರ” ಪದವು ಸೂಕ್ತವಾಗಿ ವರ್ಣಿಸುತ್ತದೆಂದು ನೀವು ಒಪ್ಪುವುದಿಲ್ಲವೊ? ಈ ಪ್ರೇರಿತ ಭಾಗವು ನಮ್ಮ ಸಮಯದೊಳಗೆ ದೈವಿಕ ಒಳನೋಟವನ್ನು ಕೊಡಲು ಮುಂದುವರಿಯುತ್ತದೆ.
18. ಪೌಲನ ಪ್ರವಾದನಾ ಮಾತುಗಳನ್ನು ನಾವು ಅಭ್ಯಾಸಿಸುವಾಗ, ಯಾವ ವಿಷಯದ ಮೇಲೆ ನಾವು ಕೇಂದ್ರೀಕರಿಸಬೇಕು?
18 ನಮ್ಮ ಸಮಯವು ಎಷ್ಟು ಕಠಿನ ಯಾ ಉಗ್ರವಾಗಿದೆ ಎಂಬ ದುರಂತಕರ ಉದಾಹರಣೆಗಳನ್ನು ಗುರುತಿಸುವಂತೆ, ಈ ಪ್ರವಾದನೆಯಲ್ಲಿರುವ ನಮ್ಮ ಆಸಕ್ತಿಯು ನಮ್ಮನ್ನು ಅನುಮತಿಸಬೇಕು. ನಮ್ಮ ಎರಡು ಮುಖ್ಯವಾದ ಅಂಶಗಳನ್ನು ಜ್ಞಾಪಿಸಿಕೊಳ್ಳಿ: (1) ನಮ್ಮ ಸಮಯಗಳನ್ನು ಕಠಿನವನ್ನಾಗಿ ಮಾಡುವ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಹೇಗೆ ತೊರೆಯುವುದೆಂದು ನೋಡುವುದು; (2) ನಿಜವಾಗಿಯೂ ಪ್ರಾಯೋಗಿಕವಾಗಿರುವ ಮತ್ತು ಒಂದು ಉತ್ತಮ ಜೀವಿತವನ್ನು ಅನುಭವಿಸುವಂತೆ ನಮಗೆ ಸಹಾಯ ಮಾಡಬಲ್ಲ ಬೋಧನೆಗಳನ್ನು ಅನುಸರಿಸುವುದು. ಆದುದರಿಂದ ನಕಾರಾತ್ಮಕಗಳನ್ನು ಒತ್ತಿಹೇಳುವ ಬದಲಿಗೆ, ನಿಭಾಯಿಸಲು ಕಠಿನವಾದ ಈ ಸಮಯಗಳಲ್ಲಿ ನಮಗೆ ಮತ್ತು ನಮ್ಮ ಕುಟುಂಬಗಳಿಗೆ ಸಹಾಯ ಮಾಡಬಲ್ಲ ಬೋಧನೆಗಳ ಮೇಲೆ ನಾವು ಕೇಂದ್ರೀಕರಿಸುವೆವು.
ಸಮೃದ್ಧ ಪ್ರಯೋಜನಗಳನ್ನು ಕೊಯ್ಯಿರಿ
19. ಮನುಷ್ಯರು ಸ್ವಾರ್ಥಚಿಂತಕರು ಎಂಬುದರ ಕುರಿತು ಯಾವ ಪ್ರಮಾಣವನ್ನು ನೀವು ನೋಡಿದ್ದೀರಿ?
19 ಕಡೇ ದಿವಸಗಳಲ್ಲಿ, “ಮನುಷ್ಯರು ಸ್ವಾರ್ಥಚಿಂತಕರೂ” ಆಗಿರುವರೆಂದು ಮುಂತಿಳಿಸುವ ಮೂಲಕ ಪೌಲನು ತನ್ನ ಪಟ್ಟಿಯನ್ನು ಆರಂಭಿಸುತ್ತಾನೆ. (2 ತಿಮೊಥೆಯ 3:2) ಅವನು ಏನನ್ನು ಅರ್ಥೈಸಿದನು? ಇತಿಹಾಸದ ಉದ್ದಕ್ಕೂ ಅಹಂಭಾವನೆಯುಳ್ಳ, ಸ್ವಾರ್ಥಿಗಳಾದ ಪುರುಷರು ಮತ್ತು ಸ್ತ್ರೀಯರು ಜೀವಿಸಿದ್ದರೆಂದು ಹೇಳುವುದರಲ್ಲಿ ನೀವು ಸರಿಯಾಗಿರುವಿರಿ. ಆದರೂ, ಈ ಕೊರತೆಯು ಇಂದು ಅಸಾಧಾರಣವಾಗಿ ಸಾಮಾನ್ಯವಾಗಿದೆ ಎಂಬುದರಲ್ಲಿ ಯಾವು ಸಂದೇಹವೂ ಇರುವುದಿಲ್ಲ. ಅನೇಕ ಜನರಲ್ಲಿ ಇದು ಅತಿಯಾಗಿರುತ್ತದೆ. ರಾಜಕೀಯ ಮತ್ತು ವಾಣಿಜ್ಯ ಲೋಕದಲ್ಲಿ ಅದು ಬಹುಮಟ್ಟಿಗೆ ಆದರ್ಶ ನಡತೆಯಾಗಿದೆ. ಪುರುಷರು ಮತ್ತು ಸ್ತ್ರೀಯರು ಯಾವುದೇ ಬೆಲೆಯನ್ನು ತೆತ್ತಾದರೂ ಅಧಿಕಾರವನ್ನೂ ಕೀರ್ತಿಯನ್ನೂ ಬೆನ್ನಟ್ಟುತ್ತಾರೆ. ಸಾಮಾನ್ಯವಾಗಿ ಯಾವುದೇ ಬೆಲೆಯನ್ನು ಇತರರಿಗೆ ನಷ್ಟಮಾಡಲು ತೆರುತ್ತಾರೆ, ಯಾಕೆಂದರೆ ಅವರು ಇತರ ಜನರನ್ನು ಹೇಗೆ ಹಾನಿಗೊಳಪಡಿಸುತ್ತಾರೆಂದು ಇಂತಹ ಸ್ವಾರ್ಥಚಿಂತಕರು ಲಕ್ಷಿಸುವುದಿಲ್ಲ. ಇತರರ ಮೇಲೆ ದಾವೆ ಹೂಡಲು ಯಾ ವಂಚಿಸಲು ಅವರು ಚುರುಕಾಗಿರುತ್ತಾರೆ. ಅನೇಕರು ಇದನ್ನು “ಅಹಂ ಸಂತತಿ” ಎಂದು ಕರೆಯುವ ಕಾರಣವನ್ನು ನೀವು ತಿಳಿಯಸಾಧ್ಯವಿದೆ. ತೀರ ಶಿಸ್ತುರಹಿತರಾದ ಮತ್ತು ಸ್ವಾರ್ಥಮಗ್ನರಾದ ಜನರು ತುಂಬಿರುತ್ತಾರೆ.
20. ಚಾಲ್ತಿಯಲ್ಲಿರುವ ಸ್ವಪ್ರೇಮ ಮನೋಭಾವದೊಂದಿಗೆ ಬೈಬಲ್ ಸಲಹೆಯು ಹೇಗೆ ವಿರುದ್ಧಭಾವದಲ್ಲಿದೆ?
20 “ಸ್ವಾರ್ಥಚಿಂತಕರು” ಆಗಿರುವ ಜನರೊಂದಿಗೆ ವ್ಯವಹರಿಸುವುದರಲ್ಲಿ ನಮಗಾದ ಕಹಿ ಅನುಭವಗಳ ಕುರಿತು ಜ್ಞಾಪಿಸಲ್ಪಡಲು ನಾವು ಬಯಸುವುದಿಲ್ಲ. ಈ ಸಮಸ್ಯೆಯನ್ನು ಮುಚ್ಚುಮರೆಯಿಲ್ಲದೆ ಗುರುತಿಸುವ ಮೂಲಕ, ಈ ಪಾಶವನ್ನು ನಾವು ಹೇಗೆ ತೊರೆಯಬೇಕೆಂದು ಕಲಿಸುವುದರಲ್ಲಿ ಬೈಬಲ್ ನಮಗೆ ಸಹಾಯ ಮಾಡುತ್ತಿರುವುದು ಸತ್ಯವಾದ ಸಂಗತಿಯಾಗಿದೆ. ಅದು ಹೇಳುವ ವಿಷಯವು ಇದಾಗಿದೆ: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” “ನಿನ್ನ ವಿಷಯದಲ್ಲಿ ಏನು ಯೋಚನೆ ಬೇಕೋ ಅದಕ್ಕಿಂತ ಹೆಚ್ಚು ಉನ್ನತನೆಂದು ಭಾವಿಸಬೇಡ. ಬದಲಿಗೆ ನಿನ್ನ ಯೋಚನೆಯಲ್ಲಿ ಅಭಿಮಾನ ಮಿತಿಯುಳ್ಳವನಾಗಿರು.” ಟುಡೇಸ್ ಇಂಗ್ಲಿಷ್ ವರ್ಶನ್ ನಲ್ಲಿ ಭಾಷಾಂತರ ಮಾಡಿರುವಂತೆ, ಆ ಅತ್ಯುತ್ತಮ ಸಲಹೆಯು ಫಿಲಿಪ್ಪಿ 2:3, 4 ಮತ್ತು ರೋಮಾಪುರ 12:3 ರಲ್ಲಿ ಕಂಡುಬರುತ್ತದೆ.
21, 22. (ಎ) ಇಂತಹ ಸಲಹೆಯು ಇಂದು ಸಹಾಯಕಾರಿಯಾಗಿ ಪರಿಣಮಿಸಬಲ್ಲದು ಎಂಬುದಕ್ಕೆ ಯಾವ ವಿಶಾಲವಾದ ಪ್ರಮಾಣವಿದೆ? (ಬಿ) ಸಾಧಾರಣ ವ್ಯಕ್ತಿಗಳ ಮೇಲೆ ಯಾವ ಪ್ರಭಾವವನ್ನು ಬೈಬಲಿನ ಸಲಹೆಯು ಬೀರಿದೆ?
21 ‘ಅದು ಹಿತಕರವಾಗಿ ಧ್ವನಿಸುತ್ತದೆ, ಆದರೆ ಅದು ಪ್ರಾಯೋಗಿಕವಾಗಿಲ್ಲ’ ಎಂದು ಯಾರಾದರೂ ಆಕ್ಷೇಪಿಸಬಹುದು. ಹೌದು, ಅದು ಪ್ರಾಯೋಗಿಕವಾಗಿದೆ. ಅದು ಸಫಲಗೊಳ್ಳಬಲ್ಲದು ಮತ್ತು ಇಂದು ಸಾಮಾನ್ಯ ಜನರಲ್ಲಿ ಅದು ಸಫಲಗೊಳ್ಳುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಕ್ಕಾಗಿರುವ ಪ್ರಕಾಶಕರು 1990 ರಲ್ಲಿ, ಪಂಥಾಭಿಮಾನದ ಸಾಮಾಜಿಕ ಪರಿಮಾಣಗಳು (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕವನ್ನು ಮುದ್ರಿಸಿದರು. ಎಂಟನೆಯ ಅಧ್ಯಾಯವನ್ನು, “ಕ್ಯಾತೊಲಿಕ್ ದೇಶವೊಂದರಲ್ಲಿ ಯೆಹೋವನ ಸಾಕ್ಷಿಗಳು” (“ಜೆಹೋವಸ್ ವಿಟ್ನೆಸೆಸ್ ಇನ್ ಎ ಕ್ಯಾತೊಲಿಕ್ ಕಂಟ್ರಿ”) ಎಂಬುದಾಗಿ ಹೆಸರಿಸಲಾಗಿತ್ತು, ಮತ್ತು ಬೆಲ್ಜಿಯಮ್ನಲ್ಲಿ ನಡೆಸಿದ ಅಧ್ಯಯನವೊಂದನ್ನು ಅದು ವರ್ಣಿಸಿತು. ನಾವು ಓದುವುದು: “‘ಸತ್ಯದ’ ಆಕರ್ಷಣೆ ಅಲ್ಲದೆ, ಒಬ್ಬ ಸಾಕ್ಷಿಯಾಗುವ ಸಕಾರಾತ್ಮಕ ಆಕರ್ಷಣೆಗೆ ತಿರುಗುತ್ತಾ, ಪ್ರತಿವಾದಿಗಳು ಮತ್ತೆ ಕೆಲವೊಮ್ಮೆ ಒಂದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯವನ್ನು ತಿಳಿಯಪಡಿಸಿದರು. . . . ಆದರಣೆ, ಸ್ನೇಹಭಾವ, ಪ್ರೀತಿ, ಮತ್ತು ಐಕ್ಯವು ಅತ್ಯಂತ ಕ್ರಮವಾಗಿ ಉಲ್ಲೇಖಿಸಲಾದ ಗುಣಗಳಾಗಿದ್ದರೂ, ‘ಬೈಬಲ್ ತತ್ವಗಳನ್ನು ಕಾರ್ಯಗತ ಮಾಡುವುದರಲ್ಲಿ’ ಪ್ರಾಮಾಣಿಕತೆ, ಮತ್ತು ಒಳ್ಳೆಯ ವೈಯಕ್ತಿಕ ನಡತೆಯು ಕೂಡ ಸಾಕ್ಷಿಗಳು ಪಾಲಿಸುವ ಗುಣಗಳಾಗಿದ್ದವು.”
22 ಆ ಮೇಲಿನ ವಿವರಣೆಯನ್ನು ಒಂದು ಅಗಲ ಕೋನದ (ವೈಡ್ ಆ್ಯಂಗಲ್) ಲೆನ್ಸ್ನಿಂದ ತೆಗೆಯಲಾದ ಚಿತ್ರಕ್ಕೆ ಹೋಲಿಸಬಹುದು; ಅದರ ಬದಲಿಗೆ, ನೀವೊಂದು ಜೂಮ್ ಅಥವಾ ದೂರದರ್ಶಕ ಛಾಯಾಗ್ರಾಹಕ ಲೆನ್ಸನ್ನು ಉಪಯೋಗಿಸುವುದಾದರೆ, ಬೃಹದಾಕಾರದ ಚಿತ್ರಗಳನ್ನು, ಅನೇಕ ನಿಜ ಜೀವನದ ಅನುಭವಗಳನ್ನು ನೀವು ನೋಡಬಹುದು. ದುರಹಂಕಾರಿಗಳೂ, ದರ್ಪವುಳ್ಳವರೂ, ಅಥವಾ ತೀರ ಸ್ವಾರ್ಥಿಗಳೂ ಆಗಿದ್ದ, ಆದರೆ ಈಗ ಸೌಮ್ಯರಾಗಿದ್ದು ತಮ್ಮ ಸಂಗಾತಿಗಳಿಗೆ, ಮಕ್ಕಳಿಗೆ, ಮತ್ತು ಇತರರಿಗೆ ಕೋಮಲ ಪ್ರೀತಿ ಮತ್ತು ಕರುಣೆಯನ್ನು ತೋರಿಸುವ ಗಂಡಂದಿರು ಮತ್ತು ತಂದೆಗಳು ಆಗುತ್ತಿರುವ ಪುರುಷರನ್ನು ಇದು ಒಳಗೊಳ್ಳುತ್ತದೆ. ದೌರ್ಜನ್ಯದಿಂದಾಳುವ ಯಾ ನಿರ್ದಯಿಗಳಾಗಿದ್ದ, ಮತ್ತು ಈಗ ನಿಜ ಕ್ರೈಸ್ತತ್ವದ ಮಾರ್ಗದ ಕುರಿತು ಇತರರು ಕಲಿಯುವಂತೆ ಸಹಾಯ ಮಾಡುವ ಸ್ತ್ರೀಯರನ್ನು ಕೂಡ ಇದು ಒಳಗೊಳ್ಳುತ್ತದೆ. ಇಂಥ ನೂರಾರು ಸಾವಿರ ಉದಾಹರಣೆಗಳಿವೆ. ಈಗ ದಯವಿಟ್ಟು ಮುಚ್ಚುಮರೆಯಿಲ್ಲದೆ ಮಾತಾಡಿ. ಎಲ್ಲಕ್ಕಿಂತಲೂ ಪ್ರಥಮವಾಗಿ ತಮ್ಮನ್ನೇ ಪ್ರೀತಿಸಿಕೊಳ್ಳುವ ಪುರುಷರು ಮತ್ತು ಸ್ತ್ರೀಯರನ್ನು ಯಾವಾಗಲೂ ಸಂಧಿಸುವುದಕ್ಕಿಂತಲೂ, ಮೇಲೆ ತಿಳಿಸಲ್ಪಟ್ಟಂತಹ ಜನರ ಮಧ್ಯೆ ಇರುವುದನ್ನು ಹೆಚ್ಚು ಉತ್ತಮವೆಂದು ನೀವು ಕಂಡುಕೊಳ್ಳುವುದಿಲವ್ಲೆ? ನಮ್ಮ ಕಠಿನ ಸಮಯಗಳೊಂದಿಗೆ ನಿಭಾಯಿಸುವುದನ್ನು ಅದು ಸರಳಗೊಳಿಸಲಿಕ್ಕಿಲ್ಲವೆ? ಆದುದರಿಂದ ಇಂತಹ ಬೈಬಲ್ ಬೋಧನೆಗಳನ್ನು ಅನುಸರಿಸುವುದು ನಿಮ್ಮನ್ನು ಸಂತೊಷಗೊಳಿಸಲಿಕ್ಕಿಲ್ಲವೆ?
23. ಎರಡನೆಯ ತಿಮೊಥೆಯ 3:2-5ಕ್ಕೆ ಇನ್ನೂ ಹೆಚ್ಚಿನ ಗಮನವನ್ನು ಕೊಡುವುದು ಏಕೆ ಯೋಗ್ಯವಾಗಿರುವುದು?
23 ಎರಡನೆಯ ತಿಮೊಥೆಯ 3:2-5 ರಲ್ಲಿ ದಾಖಲೆಮಾಡಿರುವ ಪೌಲನ ಪಟ್ಟಿಯಲ್ಲಿ ಕೇವಲ ಒಂದನೆಯ ವಿಷಯವನ್ನು ಮಾತ್ರ ನಾವು ಪರಿಗಣಿಸಿದ್ದೇವೆ. ಇತರ ವಿಷಯಗಳ ಕುರಿತೇನು? ನಿಮ್ಮ ಜಾಗರೂಕತೆಯ ಪರೀಕ್ಷೆಯು, ನಮ್ಮ ಸಮಯದ ಮುಖ್ಯ ಸಮಸ್ಯೆಗಳನ್ನು ತಪ್ಪಿಸಲಿಕ್ಕಾಗಿ ಅವುಗಳನ್ನು ಗುರುತಿಸುವಂತೆ ಮತ್ತು ನಿಮಗೂ ನಿಮ್ಮ ಪ್ರಿಯರಿಗೂ ಹೆಚ್ಚಿನ ಸಂತೋಷವನ್ನು ಯಾವ ಮಾರ್ಗವು ತರುವುದೆಂದು ತಿಳಿದುಕೊಳ್ಳುವಂತೆ ಸಹಾಯ ಮಾಡುವುದೊ? ಆ ಪ್ರಶ್ನೆಗಳನ್ನು ಉತ್ತರಿಸಲು ಮತ್ತು ಸಮೃದ್ಧ ಆಶೀರ್ವಾದವನ್ನು ಪಡೆಯಲು ಮುಂದಿನ ಲೇಖನವು ನಿಮಗೆ ಸಹಾಯ ಮಾಡುವುದು.
ಜ್ಞಾಪಿಸಿಕೊಳ್ಳಲು ಅಂಶಗಳು
▫ ನಾವು ಕಠಿನ ಕಾಲಗಳಲ್ಲಿ ಜೀವಿಸುತ್ತೇವೆಂಬುದಕ್ಕೆ ಕೆಲವು ಪ್ರಮಾಣಗಳು ಯಾವುವು?
▫ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತೇವೆಂದು ಏಕೆ ನಿಶ್ಚಿತರಾಗಿರಬಲ್ಲೆವು?
▫ ಎರಡನೆಯ ತಿಮೊಥೆಯ 3:1-5ರ ಅಭ್ಯಾಸದಿಂದ ಯಾವ ಎರಡು ಮುಖ್ಯ ಅಂಶಗಳನ್ನು ನಾವು ಪಡೆಯಬಲ್ಲೆವು?
▫ ಎಷ್ಟೋ ಜನರು ಸ್ವಾರ್ಥಚಿಂತಕರಾಗಿರುವ ಈ ಸಮಯದಲ್ಲಿ, ಯೆಹೋವನ ಜನರಿಗೆ ಬೈಬಲ್ ಬೋಧನೆಗಳು ಹೇಗೆ ಸಹಾಯ ಮಾಡಿವೆ?
[ಪುಟ 8 ರಲ್ಲಿರುವ ಚಿತ್ರ ಕೃಪೆ]
Photo top left: Andy Hernandez/Sipa Press; photo bottom right: Jose Nicolas/Sipa Press