ತಿಮೊಥೆಯ—“ನಂಬಿಕೆಯ ವಿಷಯದಲ್ಲಿ ನಿಜಕುಮಾರ”
ತಿಮೊಥೆಯನನ್ನು ಕ್ರೈಸ್ತ ಅಪೊಸ್ತಲನಾದ ಪೌಲನು, ತನ್ನ ಸಂಚರಣ ಸಂಗಾತಿಯಾಗಿ ಆರಿಸಿಕೊಂಡಾಗ, ಅವನು ಇನ್ನೂ ಯುವ ಪ್ರಾಯದವನಾಗಿದ್ದನು. ಇದು ಅವರ ಮಧ್ಯೆ, 15 ವರ್ಷಗಳ ಕಾಲ ಜೊತೆಯಾಗಿ ಕೆಲಸಮಾಡುವ ಒಂದು ಸಹಭಾಗಿತ್ವದ ಆರಂಭವಾಗಿತ್ತು. ಈ ಇಬ್ಬರು ಪುರುಷರ ಮಧ್ಯೆ ವಿಕಸಿಸಿದ ಸಂಬಂಧವು ಹೇಗಿತ್ತೆಂದರೆ, ಪೌಲನು ತಿಮೊಥೆಯನನ್ನು “ಕರ್ತನಲ್ಲಿ ಪ್ರಿಯನೂ ನಂಬಿಗಸ್ತನೂ ಆಗಿರುವ ನನ್ನ ಮಗ”ನೆಂದು ಮತ್ತು “ನಂಬಿಕೆಯ ವಿಷಯದಲ್ಲಿ ನಿಜಕುಮಾರ”ನೆಂದು ಕರೆಯಸಾಧ್ಯವಾಗಿತ್ತು.—1 ಕೊರಿಂಥ 4:17; 1 ತಿಮೊಥೆಯ 1:2.
ತಿಮೊಥೆಯನಲ್ಲಿರುವ ಯಾವ ವಿಷಯವನ್ನು ಕಂಡು, ಪೌಲನು ಅವನನ್ನು ಬಹಳವಾಗಿ ಪ್ರೀತಿಸತೊಡಗಿದನು? ತಿಮೊಥೆಯನು ಒಬ್ಬ ಮುಖ್ಯ ಸಂಗಾತಿಯಾದದ್ದು ಹೇಗೆ? ಮತ್ತು ತಿಮೊಥೆಯನ ಚಟುವಟಿಕೆಗಳ ಪ್ರೇರಿತ ದಾಖಲೆಯಿಂದ ನಾವು ಯಾವ ಪ್ರಯೋಜನಕರ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?
ಪೌಲನಿಂದ ಆರಿಸಿಕೊಳ್ಳಲ್ಪಟ್ಟದ್ದು
ಅಪೊಸ್ತಲ ಪೌಲನು ಸಾ.ಶ. 50ರಲ್ಲಿ ತನ್ನ ಎರಡನೆಯ ಮಿಷನೆರಿ ಸಂಚಾರದ ಭಾಗವಾಗಿ ಲುಸ್ತ್ರ (ಆಧುನಿಕ ದಿನದ ಟರ್ಕಿಯಲ್ಲಿ)ವನ್ನು ಸಂದರ್ಶಿಸಿದಾಗ, ಯುವ ಶಿಷ್ಯನಾದ ತಿಮೊಥೆಯನನ್ನು ಭೇಟಿಯಾದನು. ತನ್ನ ಹದಿಹರೆಯದ ಕೊನೆಯ ವರ್ಷಗಳಲ್ಲಿ ಅಥವಾ 20ರ ಆರಂಭದಲ್ಲಿದ್ದಿರಬಹುದಾದ ತಿಮೊಥೆಯನ ಬಗ್ಗೆ, ಲುಸ್ತ್ರ ಮತ್ತು ಇಕೋನ್ಯದ ಕ್ರೈಸ್ತರು ಒಳ್ಳೇ ಮಾತುಗಳನ್ನಾಡಿದರು. (ಅ. ಕೃತ್ಯಗಳು 16:1-3) “ದೇವರನ್ನು ಘನಪಡಿಸುವವನು” ಎಂಬ ಅರ್ಥವುಳ್ಳ ತನ್ನ ಹೆಸರಿಗೆ ತಕ್ಕಂತೆ ಅವನು ಜೀವಿಸಿದನು. ಬಾಲ್ಯಾವಸ್ಥೆಯಿಂದಲೂ ತಿಮೊಥೆಯನಿಗೆ ತನ್ನ ಅಜ್ಜಿಯಾದ ಲೋವಿ ಹಾಗೂ ತಾಯಿಯಾದ ಯೂನೀಕೆಯಿಂದ ಪವಿತ್ರ ಶಾಸ್ತ್ರಗಳ ಬೋಧನೆಯು ಲಭ್ಯವಿತ್ತು. (2 ತಿಮೊಥೆಯ 1:5; 3:14, 15) ಒಂದೆರಡು ವರ್ಷಗಳ ಹಿಂದೆ, ಪೌಲನು ಆ ಪಟ್ಟಣಕ್ಕೆ ತನ್ನ ಪ್ರಥಮ ಭೇಟಿಯನ್ನು ನೀಡಿದ್ದ ಸಮಯದಲ್ಲಿ ಅವರು ಕ್ರೈಸ್ತತ್ವವನ್ನು ಸ್ವೀಕರಿಸಿದ್ದಿರಬಹುದು. ಈಗ ಪವಿತ್ರಾತ್ಮದ ಕಾರ್ಯಾಚರಣೆಯಿಂದಾಗಿ, ತಿಮೊಥೆಯನ ಭವಿಷ್ಯವು ಏನಾಗಿರಬಹುದೆಂಬುದನ್ನು ಒಂದು ಭವಿಷ್ಯವಾಣಿಯು ಸೂಚಿಸಿತು. (1 ತಿಮೊಥೆಯ 1:18) ಆ ನಿರ್ದೇಶನಕ್ಕನುಸಾರ, ಪೌಲನು ಮತ್ತು ಸಭೆಯ ಹಿರಿಯರು ಈ ಯುವ ಪುರುಷನ ಮೇಲೆ ತಮ್ಮ ಹಸ್ತಗಳನ್ನಿಟ್ಟು, ಅವನನ್ನು ವಿಶೇಷವಾದ ಸೇವೆಗೆ ಮೀಸಲಾಗಿಟ್ಟರು. ಅಪೊಸ್ತಲ ಪೌಲನು ಅವನನ್ನು ತನ್ನ ಮಿಷನೆರಿ ಸಂಗಾತಿಯನ್ನಾಗಿ ಆರಿಸಿಕೊಂಡನು.—1 ತಿಮೊಥೆಯ 4:14; 2 ತಿಮೊಥೆಯ 1:6.
ತಿಮೊಥೆಯನ ತಂದೆ ಒಬ್ಬ ಅವಿಶ್ವಾಸಿ ಗ್ರೀಕನಾಗಿದ್ದ ಕಾರಣ, ತಿಮೊಥೆಯನು ಸುನ್ನತಿ ಮಾಡಿಸಿಕೊಂಡಿರಲಿಲ್ಲ. ಇದೊಂದು ಕ್ರೈಸ್ತ ಆವಶ್ಯಕತೆಯೂ ಆಗಿರಲಿಲ್ಲ. ಆದರೂ, ತಾವು ಸಂದರ್ಶಿಸಲಿದ್ದ ಯೆಹೂದ್ಯರಿಗೆ ಒಂದು ಎಡವುಗಲ್ಲಾಗಿ ಪರಿಣಮಿಸಬಾರದೆಂಬ ಉದ್ದೇಶದಿಂದ, ಅವನು ಈ ವೇದನಾಮಯ ಕಾರ್ಯವಿಧಾನಕ್ಕೆ ಒಳಗಾದನು.—ಅ. ಕೃತ್ಯಗಳು 16:3.
ತಿಮೊಥೆಯನು ಈ ಮೊದಲು ಒಬ್ಬ ಯೆಹೂದ್ಯನಾಗಿ ಪರಿಗಣಿಸಲ್ಪಟ್ಟಿದ್ದನೊ? ಕೆಲವು ಪಂಡಿತರು ವಾದಿಸುವುದೇನೆಂದರೆ, ರಬ್ಬಿಸಂಬಂಧಿತ ಆಧಾರಗ್ರಂಥಗಳ ಪ್ರಕಾರ “ಅಂತರ್ಜಾತೀಯ ವಿವಾಹಗಳಲ್ಲಿ, ಮಕ್ಕಳ ಸ್ಥಾನಮಾನವು ತಂದೆಯಿಂದಲ್ಲ ತಾಯಿಯಿಂದ ನಿರ್ಧರಿಸಲ್ಪಡುತ್ತದೆ.” ಅಂದರೆ, “ಯೆಹೂದಿ ಸ್ತ್ರೀಯೊಬ್ಬಳು ಯೆಹೂದಿ ಮಕ್ಕಳಿಗೆ ಜನ್ಮನೀಡುತ್ತಾಳೆ.” ಆದರೂ, ಇಂತಹ “ರಬ್ಬಿಸಂಬಂಧಿತ ನಿಯಮಗಳು ಸಾ.ಶ. ಒಂದನೆಯ ಶತಮಾನದಲ್ಲಿ ಇದ್ದವೊ” ಮತ್ತು ಅವು ಏಷಿಯ ಮೈನರ್ನಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಂದ ಪಾಲಿಸಲ್ಪಟ್ಟವೊ ಇಲ್ಲವೊ ಎಂಬುದನ್ನು ಬರಹಗಾರ ಷೇ ಕೋಹನ್ ಪ್ರಶ್ನಿಸುತ್ತಾರೆ. ಐತಿಹಾಸಿಕ ಪುರಾವೆಗಳನ್ನು ಪರಿಗಣಿಸಿದ ಬಳಿಕ ಅವರು ತೀರ್ಮಾನಿಸುವುದೇನೆಂದರೆ, ಅನ್ಯಜನಾಂಗದ ಪುರುಷರು ಇಸ್ರಾಯೇಲ್ಯ ಸ್ತ್ರೀಯರನ್ನು ವಿವಾಹವಾದಾಗ, “ಆ ಕುಟುಂಬವು ಇಸ್ರಾಯೇಲ್ಯರ ಮಧ್ಯದಲ್ಲಿ ಜೀವಿಸುವುದಾದರೆ ಮಾತ್ರ ಇಂತಹ ವಿವಾಹಗಳಿಂದ ಜನಿಸುವ ಮಕ್ಕಳನ್ನು ಇಸ್ರಾಯೇಲ್ಯರೆಂದು ಪರಿಗಣಿಸಲಾಗುತ್ತಿತ್ತು. ಕುಟುಂಬವು ತಾಯ್ನಾಡಿನಲ್ಲಿ ವಾಸಿಸಿದಷ್ಟು ಕಾಲ, ಮಕ್ಕಳನ್ನು ಮಾತೃವಂಶಸ್ಥರೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಇಸ್ರಾಯೇಲ್ಯ ಸ್ತ್ರೀಯು ಅನ್ಯಜನಾಂಗದವನಾದ ತನ್ನ ಗಂಡನೊಂದಿಗೆ ಜೀವಿಸಲು ಬೇರೆ ದೇಶಕ್ಕೆ ಹೋಗುವುದಾದರೆ, ಅವಳ ಮಕ್ಕಳನ್ನು ಅನ್ಯರೆಂದು ಪರಿಗಣಿಸಲಾಗುತ್ತಿತ್ತು.” ವಿಷಯವು ಏನೇ ಆಗಿರಲಿ, ತಿಮೊಥೆಯನ ಮಿಶ್ರಿತ ಪರಂಪರೆಯು, ಸಾರುವ ಕಾರ್ಯಕ್ಕೆ ಬಹಳ ಲಾಭದಾಯಕವಾಗಿ ಪರಿಣಮಿಸಿದ್ದಿರಬೇಕು. ಹೀಗಾಗಿ, ಯೆಹೂದ್ಯರು ಇಲ್ಲವೆ ಗ್ರೀಕರೊಂದಿಗೆ ಸಂಬಂಧವನ್ನಿಟ್ಟುಕೊಂಡು, ಅವರ ಮಧ್ಯದಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ದೂರಮಾಡುವುದು ಅವನಿಗೆ ಕಷ್ಟಕರವಾಗಿದ್ದಿರಲಿಕ್ಕಿಲ್ಲ.
ಲುಸ್ತ್ರ ಪಟ್ಟಣಕ್ಕೆ ಪೌಲನು ನೀಡಿದ ಭೇಟಿಯು ತಿಮೊಥೆಯನ ಜೀವಿತದಲ್ಲಿ ಒಂದು ನಿರ್ಧಾರಕ ಸಮಯವಾಗಿತ್ತು. ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸಲು ಮತ್ತು ಕ್ರೈಸ್ತ ಹಿರಿಯರೊಂದಿಗೆ ದೀನಭಾವದಿಂದ ಸಹಕರಿಸಲು ಈ ಯುವ ಪುರುಷನು ವ್ಯಕ್ತಪಡಿಸಿದ ಸಿದ್ಧಮನಸ್ಸು, ಮಹಾ ಆಶೀರ್ವಾದಗಳಿಗೆ ಮತ್ತು ಸೇವಾ ಸುಯೋಗಗಳಿಗೆ ನಡಿಸಿತು. ಪೌಲನ ಮಾರ್ಗದರ್ಶನದ ಕೆಳಗೆ ತಿಮೊಥೆಯನು ಪ್ರಮುಖವಾದ ದೇವಪ್ರಭುತ್ವ ನೇಮಕಗಳಲ್ಲಿ ಉಪಯೋಗಿಸಲ್ಪಟ್ಟು, ತನ್ನ ಮನೆಯಿಂದ ಆ ಸಾಮ್ರಾಜ್ಯದ ರಾಜಧಾನಿಯಾದ ರೋಮಿನಷ್ಟು ದೂರದ ವರೆಗೂ ಒಯ್ಯಲ್ಪಡುವನೆಂಬುದನ್ನು ಅವನು ಆ ಸಮಯದಲ್ಲಿ ಗ್ರಹಿಸಿದನೊ ಇಲ್ಲವೊ ಎಂಬುದು ಅಸ್ಪಷ್ಟವಾಗಿದೆ.
ರಾಜ್ಯದ ಅಭಿರುಚಿಗಳನ್ನು ತಿಮೊಥೆಯನು ಪ್ರವರ್ಧಿಸಿದನು
ತಿಮೊಥೆಯನ ಚಟುವಟಿಕೆಗಳ ಸಮಗ್ರವಾದ ದಾಖಲೆಯು ನಮ್ಮಲ್ಲಿ ಇರದಿದ್ದರೂ, ಅವನು ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ವ್ಯಾಪಕವಾಗಿ ಸಂಚರಿಸಿದನು. ಪೌಲ ಮತ್ತು ಸೀಲರೊಂದಿಗೆ ಸಾ.ಶ. 50ರಲ್ಲಿ ತಿಮೊಥೆಯನು ಕೈಗೊಂಡ ಪ್ರಥಮ ಪ್ರಯಾಣವು, ಅವನನ್ನು ಏಷಿಯ ಮೈನರ್ ಮತ್ತು ಯೂರೋಪ್ನ ದೇಶಗಳಿಗೆ ಕೊಂಡೊಯ್ಯಿತು. ಅಲ್ಲಿ ಅವನು ಫಿಲಿಪ್ಪಿ, ಥೆಸಲೊನೀಕ, ಮತ್ತು ಬೆರೋಯ ಪಟ್ಟಣಗಳಲ್ಲಿ ನಡೆದ ಸಾರುವ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡನು. ವಿರೋಧದ ಕಾರಣ ಪೌಲನು ಅಥೇನೆ ಪಟ್ಟಣಕ್ಕೆ ಹೋದಾಗ, ಬೆರೋಯದಲ್ಲಿ ಸ್ಥಾಪಿಸಲ್ಪಟ್ಟ ಶಿಷ್ಯರ ಗುಂಪನ್ನು ಪರಾಮರಿಸಲು ತಿಮೊಥೆಯ ಮತ್ತು ಸೀಲರು ಅಲ್ಲೇ ಉಳಿದರು. (ಅ. ಕೃತ್ಯಗಳು 16:6–17:14) ತದನಂತರ, ಥೆಸಲೊನೀಕದಲ್ಲಿದ್ದ ಹೊಸ ಸಭೆಯನ್ನು ಬಲಪಡಿಸಲಿಕ್ಕಾಗಿ ಪೌಲನು ತಿಮೊಥೆಯನನ್ನು ಅಲ್ಲಿಗೆ ಕಳುಹಿಸಿದನು. ತರುವಾಯ ತಿಮೊಥೆಯನು ಪೌಲನನ್ನು ಕೊರಿಂಥದಲ್ಲಿ ಭೇಟಿಯಾದಾಗ, ಆ ಸಭೆಯ ಪ್ರಗತಿಯ ಕುರಿತು ಒಳ್ಳೆಯ ವರದಿಯನ್ನು ನೀಡಿದನು.—ಅ. ಕೃತ್ಯಗಳು 18:5; 1 ಥೆಸಲೊನೀಕ 3:1-7.
ತಿಮೊಥೆಯನು ಎಷ್ಟು ಸಮಯದ ವರೆಗೆ ಕೊರಿಂಥದವರೊಂದಿಗೆ ತಂಗಿದನೆಂಬುದನ್ನು ಶಾಸ್ತ್ರಗಳು ತಿಳಿಸುವುದಿಲ್ಲ. (2 ಕೊರಿಂಥ 1:19) ಬಹುಶಃ ಸಾ.ಶ. 55ರಲ್ಲಿ, ಕೊರಿಂಥದವರ ಸ್ಥಿತಿಯು ತೀರ ಕೆಟ್ಟಿರುವುದರ ಸುದ್ದಿ ಪೌಲನಿಗೆ ತಲಪಿದಾಗ, ಅವನು ತಿಮೊಥೆಯನನ್ನು ಪುನಃ ಅಲ್ಲಿಗೆ ಕಳುಹಿಸುವ ಯೋಚನೆ ಮಾಡಿದನು. (1 ಕೊರಿಂಥ 4:17; 16:10) ಅನಂತರ ತಿಮೊಥೆಯನನ್ನು ಎರಸ್ತನೊಂದಿಗೆ ಎಫೆಸದಿಂದ ಮಕೆದೋನ್ಯಕ್ಕೆ ಕಳುಹಿಸಲಾಯಿತು. ತರುವಾಯ ಪೌಲನು ಕೊರಿಂಥ ಪಟ್ಟಣದಿಂದ ರೋಮನರಿಗೆ ಪತ್ರ ಬರೆದಾಗ, ತಿಮೊಥೆಯನು ಪುನಃ ಅವನೊಂದಿಗಿದ್ದನು.—ಅ. ಕೃತ್ಯಗಳು 19:22; ರೋಮಾಪುರ 16:21.
ಪೌಲನು ಯೆರೂಸಲೇಮಿಗೆ ಹೊರಡಲು ಸಿದ್ಧನಾದಾಗ, ತಿಮೊಥೆಯನು ಮತ್ತು ಇತರರು ಕೊರಿಂಥ ಪಟ್ಟಣವನ್ನು ಬಿಟ್ಟು ತ್ರೋವದ ವರೆಗೆ ಅಪೊಸ್ತಲನೊಂದಿಗೆ ಪ್ರಯಾಣಿಸಿದರು. ತಿಮೊಥೆಯನು ಯೆರೂಸಲೇಮಿನ ವರೆಗೆ ಪ್ರಯಾಣಿಸಿದನೊ ಇಲ್ಲವೊ ಎಂಬುದು ತಿಳಿದಿರುವುದಿಲ್ಲ. ಆದರೆ, ಸಾ.ಶ. 60-61ರ ಸಮಯದಲ್ಲಿ ಪೌಲನು ರೋಮ್ನ ಸೆರೆಮನೆಯಿಂದ ಬರೆದ ಮೂರು ಪತ್ರಗಳ ಪೀಠಿಕೆಯಲ್ಲಿ ಅವನ ಹೆಸರು ದಾಖಲಿಸಲ್ಪಟ್ಟಿದೆ.a (ಅ. ಕೃತ್ಯಗಳು 20:4; ಫಿಲಿಪ್ಪಿ 1:1; ಕೊಲೊಸ್ಸೆ 1:1; ಫಿಲೆಮೋನ 1) ತಿಮೊಥೆಯನನ್ನು ರೋಮ್ನಿಂದ ಫಿಲಿಪ್ಪಿಗೆ ಕಳುಹಿಸಲು ಪೌಲನು ಯೋಜಿಸಿದನು. (ಫಿಲಿಪ್ಪಿ 2:19) ಮತ್ತು ಸೆರೆಮನೆಯಿಂದ ಪೌಲನು ಬಿಡುಗಡೆ ಹೊಂದಿದ ಮೇಲೆ, ತಿಮೊಥೆಯನು ಅಪೊಸ್ತಲನ ನಿರ್ದೇಶನಕ್ಕನುಸಾರ ಎಫೆಸದಲ್ಲಿಯೇ ಉಳಿದನು.—1 ತಿಮೊಥೆಯ 1:3.
ಪ್ರಥಮ ಶತಮಾನದಲ್ಲಿ ಪ್ರಯಾಣವು ಸುಲಭವೂ ಸುಖಕರವೂ ಆಗಿರದಿದ್ದ ಕಾರಣ, ಸಭೆಗಳ ಸಲುವಾಗಿ ಅನೇಕ ಪ್ರಯಾಣಗಳನ್ನು ಕೈಗೊಳ್ಳಲು ತಿಮೊಥೆಯನು ವ್ಯಕ್ತಪಡಿಸಿದ ಸಿದ್ಧಮನಸ್ಸು ನಿಜವಾಗಿಯೂ ಪ್ರಶಂಸನೀಯವಾಗಿತ್ತು. (ಆಗಸ್ಟ್ 15, 1996ರ ಕಾವಲಿನಬುರುಜು, ಪುಟ 29, ರೇಖಾಚೌಕವನ್ನು ನೋಡಿರಿ.) ತಿಮೊಥೆಯನ ಭಾವೀ ಸಂಚಾರಗಳಲ್ಲಿ ಕೇವಲ ಒಂದನ್ನು ಪರಿಗಣಿಸಿ, ಅದು ಅವನ ಬಗ್ಗೆ ತಿಳಿಯಪಡಿಸುವ ವಿಷಯವನ್ನು ಅರ್ಥಮಾಡಿಕೊಳ್ಳಿರಿ.
ತಿಮೊಥೆಯನ ವ್ಯಕ್ತಿತ್ವದ ಮೇಲೆ ಬೆಳಕು
ಸೆರೆವಾಸಿಯಾಗಿದ್ದ ಅಪೊಸ್ತಲ ಪೌಲನು, ಫಿಲಿಪ್ಪಿಯಲ್ಲಿ ಹಿಂಸಿಸಲ್ಪಡುತ್ತಿದ್ದ ಕ್ರೈಸ್ತರಿಗೆ ಪತ್ರ ಬರೆದಾಗ, ತಿಮೊಥೆಯನು ಅವನೊಂದಿಗಿದ್ದನು. ಪೌಲನು ಹೇಳಿದ್ದು: “ಆದರೆ ಕರ್ತನಾದ ಯೇಸುವಿನ ಚಿತ್ತವಾದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಧೈರ್ಯ ತಂದುಕೊಂಡೇನು. ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. ತಿಮೊಥೆಯನ ಗುಣವನ್ನು ನೀವು ನೋಡಿ ತಿಳುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು.”—ಫಿಲಿಪ್ಪಿ 1:1, 13, 28-30; 2:19-22.
ಜೊತೆ ವಿಶ್ವಾಸಿಗಳಿಗಾಗಿ ತಿಮೊಥೆಯನು ವ್ಯಕ್ತಪಡಿಸಿದ ಚಿಂತೆಯನ್ನು ಈ ಮಾತುಗಳು ಒತ್ತಿಹೇಳುತ್ತವೆ. ಅವನು ದೋಣಿಯ ಮೂಲಕ ಹೋಗದಿದ್ದರೆ, ರೋಮ್ನಿಂದ ಫಿಲಿಪ್ಪಿ ಪಟ್ಟಣಕ್ಕೆ ಕೈಗೊಳ್ಳಲ್ಪಟ್ಟ ಇಂತಹ ಒಂದು ಸಂಚಾರವು, 40 ದಿನಗಳ ಕಾಲ್ನಡಿಗೆಯನ್ನು, ಆ್ಯಡ್ರಿಯಾಟಿಕ್ ಸಮುದ್ರವನ್ನು ದಾಟಲು ಒಂದಿಷ್ಟು ಸಮುದ್ರ ಪ್ರಯಾಣವನ್ನು, ಮತ್ತು ರೋಮ್ಗೆ ಹಿಂದಿರುಗಲು ಇನ್ನೂ 40 ದಿನಗಳ ಕಾಲ್ನಡಿಗೆಯನ್ನು ಅಗತ್ಯಪಡಿಸಿತು. ತನ್ನ ಸಹೋದರ ಸಹೋದರಿಯರಿಗೆ ಬೇಕಾದ ಸೇವೆಯನ್ನು ಸಲ್ಲಿಸಲು ತಿಮೊಥೆಯನು ಇದೆಲ್ಲವನ್ನೂ ಮಾಡಲು ಸಿದ್ಧನಾಗಿದ್ದನು.
ತಿಮೊಥೆಯನು ವ್ಯಾಪಕವಾಗಿ ಸಂಚರಿಸಿದರೂ, ಕೆಲವೊಮ್ಮೆ ಅವನ ಆರೋಗ್ಯ ಚೆನ್ನಾಗಿರುತ್ತಿರಲಿಲ್ಲ. ಅವನಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿದ್ದ ಕಾರಣ, “ಆಗಾಗ್ಗೆ . . . ಅಸ್ವಸ್ಥತೆ”ಯನ್ನು ಅನುಭವಿಸುತ್ತಿದ್ದನು. (1 ತಿಮೊಥೆಯ 5:23) ಹಾಗಿದ್ದರೂ ಸುವಾರ್ತೆಗಾಗಿ ಅವನು ಬಹಳವಾಗಿ ಪ್ರಯಾಸಪಟ್ಟನು. ಇಂತಹ ಒಬ್ಬ ವ್ಯಕ್ತಿಯೊಂದಿಗೆ ಪೌಲನು ಆಪ್ತ ಸಂಬಂಧವನ್ನು ಪಡೆದಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
ಅಪೊಸ್ತಲನ ಪಾಲನೆಯಿಂದಾಗಿ ಮತ್ತು ಅವರಿಬ್ಬರೂ ಸೇರಿ ಅನುಭವಿಸಿದ ವಿಷಯಗಳಿಂದಾಗಿ, ತಿಮೊಥೆಯನು ಪೌಲನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವವನಾದನು. ಆದಕಾರಣ, ಪೌಲನು ಅವನಿಗೆ ಹೀಗೆ ಹೇಳಬಹುದಿತ್ತು: “ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘಶಾಂತಿ ಪ್ರೀತಿ ಸೈರಣೆ ಇವುಗಳನ್ನೂ ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು.” ತಿಮೊಥೆಯನು ಪೌಲನೊಂದಿಗೆ ಕಣ್ಣೀರು ಸುರಿಸಿದನು, ಅವನ ಪ್ರಾರ್ಥನೆಗಳಲ್ಲಿ ಜ್ಞಾಪಿಸಿಕೊಳ್ಳಲ್ಪಟ್ಟನು, ಮತ್ತು ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ಅವನೊಂದಿಗೆ ಸೇರಿ ದುಡಿದನು.—2 ತಿಮೊಥೆಯ 1:3, 4; 3:10, 11.
“ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡ”ಬೇಡವೆಂದು ಪೌಲನು ತಿಮೊಥೆಯನಿಗೆ ಉತ್ತೇಜನ ನೀಡಿದನು. ತಿಮೊಥೆಯನು ನಾಚಿಕೆ ಸ್ವಭಾವದವನಾಗಿದ್ದು, ಅಧಿಕಾರವನ್ನು ಪ್ರಯೋಗಿಸುವ ವಿಷಯದಲ್ಲಿ ಹಿಂಜರಿಯುವವನಾಗಿದ್ದನು ಎಂಬುದನ್ನು ಇದು ಸೂಚಿಸಬಹುದು. (1 ತಿಮೊಥೆಯ 4:12; 1 ಕೊರಿಂಥ 16:10, 11) ಆದರೂ, ಅವನು ಸ್ವತಂತ್ರನಾಗಿ ಸೇವೆಸಲ್ಲಿಸುವ ಸಾಮರ್ಥ್ಯವುಳ್ಳವನಾಗಿದ್ದನು. ಆದುದರಿಂದಲೇ ಪೌಲನು ಪೂರ್ಣ ಭರವಸೆಯಿಂದ ಅವನಿಗೆ ಜವಾಬ್ದಾರಿಯುತ ನೇಮಕಗಳನ್ನು ವಹಿಸಿಕೊಟ್ಟನು. (1 ಥೆಸಲೊನೀಕ 3:1, 2) ಎಫೆಸದ ಸಭೆಯಲ್ಲಿ ಬಲವಾದ ದೇವಪ್ರಭುತ್ವ ಮೇಲ್ವಿಚಾರಣೆಯ ಅಗತ್ಯವನ್ನು ಪೌಲನು ಮನಗಂಡಾಗ, ತಿಮೊಥೆಯನು ಅಲ್ಲಿಯೇ ಉಳಿದು “ಕೆಲವರಿಗೆ—ಬೇರೆ ಉಪದೇಶವನ್ನು ಮಾಡಬಾರದೆಂತಲೂ . . . ಆಜ್ಞಾಪಿಸಬೇಕೆಂಬದಾಗಿ” ತಿಮೊಥೆಯನನ್ನು ಪ್ರೋತ್ಸಾಹಿಸಲಾಯಿತು. (1 ತಿಮೊಥೆಯ 1:3, ಓರೆ ಅಕ್ಷರಗಳು ನಮ್ಮವು.) ತಿಮೊಥೆಯನಿಗೆ ಅನೇಕ ಜವಾಬ್ದಾರಿಗಳು ಒಪ್ಪಿಸಲ್ಪಟ್ಟಿದ್ದರೂ, ಅವನು ವಿನಯಶೀಲನಾಗಿದ್ದನು. ಅವನು ನಾಚಿಕೆ ಸ್ವಭಾವದನಾಗಿದ್ದರೂ, ಧೈರ್ಯವಂತನಾಗಿದ್ದನು. ಉದಾಹರಣೆಗೆ, ನಂಬಿಕೆಯ ಕಾರಣ ವಿಚಾರಣೆಗೆ ಒಳಗಾಗಿದ್ದ ಪೌಲನಿಗೆ ನೆರವು ನೀಡಲು ಅವನು ರೋಮಿಗೆ ಹೋದನು. ಬಹುಶಃ ತನ್ನ ನಂಬಿಕೆಯ ಕಾರಣದಿಂದಲೇ ತಿಮೊಥೆಯನು ಸಹ ಒಂದಿಷ್ಟು ಕಾಲ ಸೆರೆವಾಸವನ್ನು ಅನುಭವಿಸಿದನು.—ಇಬ್ರಿಯ 13:23.
ತಿಮೊಥೆಯನು ಪೌಲನಿಂದ ಬಹಳಷ್ಟು ವಿಷಯಗಳನ್ನು ಕಲಿತುಕೊಂಡನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಪೌಲನು ತನ್ನ ಜೊತೆಗಾರನಾದ ತಿಮೊಥೆಯನನ್ನು ಬಹಳ ಗೌರವದಿಂದೆಣಿಸಿದನೆಂಬುದು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಕಂಡುಬರುವ, ಅವನಿಗೆ ಬರೆಯಲ್ಪಟ್ಟ ಎರಡು ದೈವಪ್ರೇರಿತ ಪತ್ರಗಳಿಂದ ಸ್ಪಷ್ಟವಾಗುತ್ತದೆ. ಸಾ.ಶ. 65ರಲ್ಲಿ, ತನ್ನ ಮರಣವು ಇನ್ನೇನು ಬಹಳ ಸಮೀಪವಾಗಿದೆ ಎಂಬುದನ್ನು ಪೌಲನು ಗ್ರಹಿಸಿದಾಗ, ಅವನು ಮತ್ತೊಮ್ಮೆ ತಿಮೊಥೆಯನನ್ನು ಕರೆಕಳುಹಿಸಿದನು. (2 ತಿಮೊಥೆಯ 4:6, 9) ಆ ಅಪೊಸ್ತಲನು ಮರಣಕ್ಕೊಪ್ಪಿಸಲ್ಪಡುವ ಮುಂಚೆ ತಿಮೊಥೆಯನು ಅವನನ್ನು ನೋಡಸಾಧ್ಯವಾಯಿತೊ ಇಲ್ಲವೊ ಎಂಬುದನ್ನು ಶಾಸ್ತ್ರಗಳು ಸೂಚಿಸುವುದಿಲ್ಲ.
ನಿಮ್ಮನ್ನು ನೀಡಿಕೊಳ್ಳಿರಿ!
ತಿಮೊಥೆಯನ ಉತ್ತಮ ಮಾದರಿಯಿಂದ ಬಹಳಷ್ಟನ್ನು ಕಲಿತುಕೊಳ್ಳಸಾಧ್ಯವಿದೆ. ಅವನು ಪೌಲನೊಂದಿಗೆ ಸಹವಾಸಿಸುವ ಮೂಲಕ ಬಹಳವಾಗಿ ಪ್ರಯೋಜನವನ್ನು ಪಡೆದುಕೊಂಡು, ನಾಚಿಕೆ ಸ್ವಭಾವದ ಯುವಕನಿಂದ ಒಬ್ಬ ಮೇಲ್ವಿಚಾರಕನಾದನು. ಇಂದು ತದ್ರೀತಿಯ ಸಹವಾಸದಿಂದ, ಕ್ರೈಸ್ತ ಯುವ ಸ್ತ್ರೀಪುರುಷರು ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮತ್ತು ಅವರು ಯೆಹೋವನ ಸೇವೆಯನ್ನು ತಮ್ಮ ಜೀವನಮಾರ್ಗವಾಗಿ ಮಾಡಿಕೊಳ್ಳುವುದಾದರೆ, ಅವರು ಮಾಡಸಾಧ್ಯವಿರುವ ಸಾರ್ಥಕವಾದ ಕೆಲಸಕ್ಕೆ ಕೊರತೆಯೇ ಇರುವುದಿಲ್ಲ. (1 ಕೊರಿಂಥ 15:58) ಅವರು ತಮ್ಮ ಸಭೆಯಲ್ಲೇ ಪಯನೀಯರರು ಇಲ್ಲವೆ ಪೂರ್ಣ ಸಮಯದ ಸೌವಾರ್ತಿಕರಾಗಬಹುದು, ಇಲ್ಲವೆ ರಾಜ್ಯದ ಘೋಷಕರ ಅಗತ್ಯವು ಹೆಚ್ಚಾಗಿರುವಲ್ಲಿಗೆ ಹೋಗಿ ಸೇವೆಸಲ್ಲಿಸಬಹುದು. ಲಭ್ಯವಿರುವಂತಹ ಅನೇಕ ಸಾಧ್ಯತೆಗಳಲ್ಲಿ, ಮತ್ತೊಂದು ದೇಶದಲ್ಲಿ ಮಿಷನೆರಿಯಾಗಿ ಸೇವೆಸಲ್ಲಿಸುವುದು ಇಲ್ಲವೆ ವಾಚ್ ಟವರ್ ಸೊಸೈಟಿಯ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಇಲ್ಲವೆ ಅದರ ಬ್ರಾಂಚುಗಳಲ್ಲೊಂದರಲ್ಲಿ ಸೇವೆಸಲ್ಲಿಸುವುದು ಸೇರಿರುತ್ತದೆ. ಮತ್ತು ಎಲ್ಲ ಕ್ರೈಸ್ತರು ಯೆಹೋವನಿಗೆ ಪೂರ್ಣಹೃದಯದ ಸೇವೆಯನ್ನು ಸಲ್ಲಿಸುವ ಮೂಲಕ, ತಿಮೊಥೆಯನು ಪ್ರದರ್ಶಿಸಿದಂತಹ ಆತ್ಮವನ್ನೇ ಪ್ರದರ್ಶಿಸಬಹುದು.
ನೀವು ಆತ್ಮಿಕವಾಗಿ ಬೆಳೆಯುತ್ತಾ ಇದ್ದು, ಯೆಹೋವನ ಸಂಸ್ಥೆಯಲ್ಲಿ ಆತನು ಯೋಗ್ಯವೆಂದೆಣಿಸಬಹುದಾದ ನೇಮಕದಲ್ಲಿ ಸೇವೆಸಲ್ಲಿಸಲು ಬಯಸುತ್ತೀರೊ? ಹಾಗಿರುವಲ್ಲಿ, ತಿಮೊಥೆಯನು ಮಾಡಿದಂತೆಯೇ ಮಾಡಿರಿ. ಸಾಧ್ಯವಿರುವಷ್ಟರ ಮಟ್ಟಿಗೆ, ನಿಮ್ಮನ್ನು ನೀಡಿಕೊಳ್ಳಿರಿ. ನಿಮಗಾಗಿ ಯಾವ ಭಾವೀ ಸೇವಾ ಸುಯೋಗಗಳು ಕಾದಿವೆಯೆಂಬುದು ಯಾರಿಗೆ ಗೊತ್ತು?
[ಅಧ್ಯಯನ ಪ್ರಶ್ನೆಗಳು]
a ಪೌಲನ ಇತರ ನಾಲ್ಕು ಪತ್ರಗಳಲ್ಲೂ ತಿಮೊಥೆಯನ ಉಲ್ಲೇಖವಿದೆ.—ರೋಮಾಪುರ 16:21; 2 ಕೊರಿಂಥ 1:1; 1 ಥೆಸಲೊನೀಕ 1:1; 2 ಥೆಸಲೊನೀಕ 1:1.
[ಪುಟ 31 ರಲ್ಲಿರುವ ಚಿತ್ರ]
“ಅವನ ಹಾಗೆ . . . ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ”