ವಾಚಕರಿಂದ ಪ್ರಶ್ನೆಗಳು
ತಾನು “ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು [“ಮರೆತುಬಿಡುತ್ತಾ,” NW] ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ”ದ್ದೇನೆಂದು ಅಪೊಸ್ತಲ ಪೌಲನು ಹೇಳಿದಾಗ, ಅವನು ಏನನ್ನು ಅರ್ಥೈಸಿದನು? (ಫಿಲಿಪ್ಪಿ 3:13) ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಯಾವುದೇ ವಿಷಯವನ್ನು ಮರೆತುಬಿಡಲು ಸಾಧ್ಯವಿದೆಯೊ?
ಇಲ್ಲ, ಹೆಚ್ಚಿನ ವಿದ್ಯಮಾನಗಳಲ್ಲಿ ನಾವು ನಮ್ಮ ಮನಸ್ಸಿನಿಂದ ಒಂದು ನೆನಪನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಸಾಧ್ಯವಿಲ್ಲ. ವಾಸ್ತವಾಂಶವೇನಂದರೆ, ನಾವು ನೆನಪಿನಲ್ಲಿಡಲು ಇಷ್ಟಪಡುವ ಹೆಚ್ಚಿನ ಸಂಗತಿಗಳನ್ನು ಮರೆತುಬಿಡುತ್ತೇವೆ ಮತ್ತು ನಾವು ಬೇಗನೆ ಮರೆಯಬೇಕಾದ ಅನೇಕ ಸಂಗತಿಗಳನ್ನು ನೆನಪಿನಲ್ಲಿಡುತ್ತೇವೆ. ಹಾಗಾದರೆ, ಫಿಲಿಪ್ಪಿ 3:13 ರ ಮಾತುಗಳನ್ನು ಪೌಲನು ಬರೆದಾಗ ಅವನು ಏನನ್ನು ಅರ್ಥೈಸಿದನು? ಪೂರ್ವಾಪರವು ನಮಗೆ ತಿಳಿಯಲು ಸಹಾಯಮಾಡುತ್ತದೆ.
ಫಿಲಿಪ್ಪಿ ಅಧ್ಯಾಯ 3ರಲ್ಲಿ, ತನ್ನ “ಶರೀರಸಂಬಂಧವಾದ . . . ಭರವಸೆಗಾಗಿ ಆಧಾರಗಳನ್ನು” ಪೌಲನು ವರ್ಣಿಸುತ್ತಾನೆ. ತನ್ನ ನಿರ್ದುಷ್ಟ ಯೆಹೂದಿ ಹಿನ್ನೆಲೆ ಮತ್ತು ನಿಯಮಶಾಸ್ತ್ರಕ್ಕಾಗಿರುವ ತನ್ನ ಹುರುಪು—ಇಸ್ರಾಯೇಲ್ ರಾಷ್ಟ್ರದಲ್ಲಿ ಅವನಿಗೆ ಅನೇಕ ಲಾಭಗಳನ್ನು ಕೊಡಸಾಧ್ಯವಿದ್ದ ಈ ಸಂಗತಿಗಳ ಕುರಿತಾಗಿ ಅವನು ಮಾತಾಡುತ್ತಾನೆ. (ಫಿಲಿಪ್ಪಿ 3:4-6; ಅ. ಕೃತ್ಯಗಳು 22:3-5) ಆದರೂ, ಅವನು ಅಂತಹ ಲಾಭಗಳನ್ನು ತಿರಸ್ಕರಿಸಿದನು, ಲಾಕ್ಷಣಿಕವಾಗಿ ಹೇಳುವುದಾದರೆ ಅವುಗಳನ್ನು ಒಂದು ನಷ್ಟದೋಪಾದಿ ತೊಡೆದುಹಾಕಿದನು. ಯಾಕೆ? ಯಾಕಂದರೆ ಅವನು ಹೆಚ್ಚು ಉತ್ತಮವಾದುದನ್ನು—“ಕ್ರಿಸ್ತ ಯೇಸುವಿನ ಜ್ಞಾನದ ಉತ್ಕೃಷ್ಟ ಮೌಲ್ಯವನ್ನು”—ಕಂಡುಹಿಡಿದಿದ್ದನು.—ಫಿಲಿಪ್ಪಿ 3:7, 8, NW.
ಪೌಲನ ಪ್ರಧಾನ ಗುರಿಯು, ಈ ಲೋಕದಲ್ಲಿ ಒಂದು ಸ್ಥಾನವನ್ನಲ್ಲ, ಬದಲಾಗಿ “ಸತ್ತವರಲ್ಲಿ ಕೆಲವರಿಗೆ [“ಹೆಚ್ಚು ಮುಂಚಿತವಾಗಿ,” NW] ಆಗುವ ಪುನರುತ್ಥಾನ”ವನ್ನು ಗಳಿಸುವುದು ಆಗಿತ್ತು. (ಫಿಲಿಪ್ಪಿ 3:11, 12) ಹೀಗಿರುವುದರಿಂದ, ಅವನು ಬರೆಯುವುದು: “ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು [“ಮರೆತುಬಿಡುತ್ತಾ,” NW] ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿ 3:13, 14) ತಾನು “ಹಿಂದಿನ ಸಂಗತಿಗಳನ್ನು ಮರೆತುಬಿಡುತ್ತಾ” ಇದ್ದೆನೆಂದು ಪೌಲನು ಹೇಳಿದಾಗ, ಅವನು ಹೇಗಾದರೂ ತನ್ನ ಮನಸ್ಸಿನಿಂದ “ಹಿಂದಿನ ಸಂಗತಿಗಳನ್ನು” ಅಳಿಸಿಬಿಟ್ಟಿದ್ದನೆಂದು ಅವನು ಅರ್ಥೈಸಲಿಲ್ಲ. ಅವನು ಅವುಗಳನ್ನು ಇದೀಗಲೇ ಪಟ್ಟಿಮಾಡಿದುದರಿಂದ ಅವನು ಅವುಗಳನ್ನು ಇನ್ನೂ ನೆನಪಿಸಿಕೊಂಡನೆಂಬುದು ವ್ಯಕ್ತ. ಇದರ ಹೊರತು, ಮೂಲ ಗ್ರೀಕ್ ಭಾಷೆಯಲ್ಲಿ ಅವನು ನಡೆಯುತ್ತಿರುವ, ಇನ್ನೂ ಪೂರ್ಣಗೊಂಡಿರದ ಒಂದು ಕ್ರಿಯೆಯನ್ನು ಸೂಚಿಸುವ, ಕ್ರಿಯಾಪದದ ಒಂದು ರೂಪವನ್ನು ಬಳಸುತ್ತಾನೆ. ಅವನು “ಮರೆತುಬಿಡುತ್ತಾ” ಎಂದು ಹೇಳುತ್ತಾನೆ, “ಮರೆತುಬಿಟ್ಟಿರುವ” ಎಂಬುದಾಗಿ ಹೇಳುವುದಿಲ್ಲ.
“ಮರೆತುಬಿಡು” ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್ ಶಬ್ದ (ಎಪಿಲಾನ್ತಾನ್ ಓಮೈ)ಕ್ಕೆ ಅರ್ಥದ ವಿಭಿನ್ನ ಛಾಯೆಗಳಿವೆ. ಅವುಗಳಲ್ಲಿ ಒಂದು, “ಚಿಂತೆಯಿಲ್ಲದೆ ಇರುವುದು” ಅಥವಾ “ಅಲಕ್ಷಿಸು”ವುದು ಎಂದಾಗಿರುತ್ತದೆ. ಎಕ್ಸಿಜೀಟಿಕಲ್ ಡಿಕ್ಷ್ನರಿ ಆಫ್ ದ ನ್ಯೂ ಟೆಸ್ಟಮೆಂಟ್ (ಹೊರ್ಸ್ಟ್ ಬಾಲ್ಸ್ ಮತ್ತು ಗೆರ್ಹಾರ್ಡ್ ಸ್ನೀಡರ್ ಇವರಿಂದ ಸಂಪಾದಿಸಲ್ಪಟ್ಟದ್ದು)ಗನುಸಾರ, ಫಿಲಿಪ್ಪಿ 3:13 ರಲ್ಲಿ “ಮರೆತುಬಿಡುತ್ತಾ” ಎಂಬ ಪದದ ಅರ್ಥ ಇದೇ ಆಗಿದೆ. ಪೌಲನು ತಾನು ಬಿಟ್ಟುಕೊಟ್ಟಿದ್ದಂತಹ ಸಂಗತಿಗಳ ಕುರಿತಾಗಿ ಸತತವಾಗಿ ಯೋಚಿಸಲಿಲ್ಲ. ಅವುಗಳನ್ನು ಕಡಿಮೆ ಆಸಕ್ತಿಯುಳ್ಳದ್ದಾಗಿ ದೃಷ್ಟಿಸಲು ಅವನು ಕಲಿತಿದ್ದನು. ಸ್ವರ್ಗೀಯ ನಿರೀಕ್ಷೆಗೆ ಹೋಲಿಸಲ್ಪಟ್ಟಾಗ ಅವು “ಕಸ”ದಂತಿದ್ದವು.—ಫಿಲಿಪ್ಪಿ 3:8.
ಪೌಲನ ಮಾತುಗಳು ಇಂದು ಹೇಗೆ ಅನ್ವಯಿಸಬಲ್ಲವು? ಒಳ್ಳೇದು, ಕ್ರೈಸ್ತನೊಬ್ಬನು ದೇವರಿಗೆ ಸೇವೆಸಲ್ಲಿಸಲು ಪೌಲನಂತೆ ತ್ಯಾಗಗಳನ್ನು ಮಾಡಿದ್ದಿರಬಹುದು. ಪೂರ್ಣ-ಸಮಯದ ಸೇವೆಗಾಗಿ ಅವನು ಒಂದು ಲಾಭಕರ ಜೀವನೋದ್ಯೋಗವನ್ನು ಬಿಟ್ಟುಕೊಟ್ಟಿರಬಹುದು. ಅಥವಾ ಅವನು, ಸತ್ಯವನ್ನು ಅಸಮ್ಮತಿಸುವ ಕಾರಣದಿಂದ ಅವನನ್ನು ಆರ್ಥಿಕವಾಗಿ ಕಡಿದುಹಾಕಿರುವ ಒಂದು ಧನವಂತ ಕುಟುಂಬಕ್ಕೆ ಸೇರಿದವನಾಗಿರಬಹುದು. ಅಂತಹ ತ್ಯಾಗಗಳು ಪ್ರಶಂಸಾರ್ಹವಾಗಿವೆ, ಆದರೆ ಅವು ಸತತವಾಗಿ ಚಿಂತಿಸುವ ವಿಷಯಗಳಾಗಿರುವುದಿಲ್ಲ. ಒಬ್ಬ ಕ್ರೈಸ್ತನು, ತನ್ನ ಮುಂದೆ ಕಾದಿರುವ ಮಹಿಮಾಭರಿತ ಭವಿಷ್ಯತ್ತಿನ ನೋಟದಲ್ಲಿ, “ಹಿಂದಿನ ಸಂಗತಿಗಳ” ಕುರಿತಾಗಿ ಚಿಂತಿತನಾಗಿರುವುದನ್ನು ನಿಲ್ಲಿಸುತ್ತಾನೆ, ‘ಮರೆತುಬಿಡುತ್ತಾನೆ.’—ಲೂಕ 9:62.
ಪೌಲನ ಮಾತುಗಳ ಮರೆಯಲ್ಲಿನ ಮೂಲತತ್ತ್ವವು ಪ್ರಾಯಶಃ ಇನ್ನೊಂದು ರೀತಿಯಲ್ಲಿ ಅನ್ವಯಿಸಲ್ಪಡಸಾಧ್ಯವಿದೆ. ದೇವರ ಕುರಿತಾಗಿ ಕಲಿಯುವ ಮುಂಚೆ ತಪ್ಪು ನಡತೆಯಲ್ಲಿ ತೊಡಗಿದ್ದ ಕ್ರೈಸ್ತನೊಬ್ಬನ ಕುರಿತಾಗಿ ಏನು? (ಕೊಲೊಸ್ಸೆ 3:5-7) ಅಥವಾ ಒಬ್ಬ ಕ್ರೈಸ್ತನಾದ ಬಳಿಕ, ಅವನು ಒಂದು ಗುರುತರ ಪಾಪವನ್ನು ನಡೆಸಿ ಸಭೆಯಿಂದ ಶಿಸ್ತಿಗೊಳಪಡಿಸಲ್ಪಟ್ಟನೆಂದು ಊಹಿಸಿಕೊಳ್ಳಿರಿ. (2 ಕೊರಿಂಥ 7:8-13; ಯಾಕೋಬ 5:15-20) ಒಳ್ಳೇದು, ಅವನು ನಿಜವಾಗಿ ಪಶ್ಚಾತ್ತಾಪ ಪಡುವವನಾಗಿರುವಲ್ಲಿ ಮತ್ತು ತನ್ನ ಮಾರ್ಗಗಳನ್ನು ಬದಲಾಯಿಸಿಕೊಂಡಿರುವಲ್ಲಿ, ಅವನು ‘ತೊಳೆಯಲ್ಪಟ್ಟಿ’ದ್ದಾನೆ. (1 ಕೊರಿಂಥ 6:9-11) ಏನು ಸಂಭವಿಸಿತೊ ಅದು ಆಗಿಹೋದ ಸಂಗತಿ. ತಾನು ಏನನ್ನು ಮಾಡಿದ್ದನೋ ಅದನ್ನು ಅವನು ಎಂದೂ ಅಕ್ಷರಶಃವಾಗಿ ಮರೆಯಲಿಕ್ಕಿಲ್ಲ—ಆದರೆ ಆ ಪಾಪವನ್ನು ಪುನಃ ಮಾಡದಿರುವಂತೆ ಆ ಅನುಭವದಿಂದ ಕಲಿಯುವಷ್ಟು ಅವನು ವಿವೇಕಿಯಾಗಿರುವನು ಖಂಡಿತ. ಆದರೂ, ತನ್ನನ್ನು ಸತತವಾಗಿ ಬೈದುಕೆಡವದೇ ಇರುವ ಅರ್ಥದಲ್ಲಿ ಅವನು ‘ಮರೆತುಬಿಡುತ್ತಾನೆ.’ (ಯೆಶಾಯ 65:17 ನ್ನು ಹೋಲಿಸಿರಿ.) ಯೇಸುವಿನ ಯಜ್ಞದ ಆಧಾರದ ಮೇಲೆ ಕ್ಷಮಿಸಲ್ಪಟ್ಟಿದ್ದು, ತನ್ನ ಗತಕಾಲದ ವಿಷಯವನ್ನು ತನ್ನ ಹಿಂದೆ ಹಾಕಲು ಅವನು ಶ್ರಮಿಸುತ್ತಾನೆ.
ಫಿಲಿಪ್ಪಿ 3:13, 14 ರಲ್ಲಿ ಪೌಲನು ತನ್ನನ್ನು, ಗುರಿಯನ್ನು ತಲಪಲು “ಎದೆಬೊಗ್ಗಿದವನಾಗಿ”ರುವ ಓಟದಲ್ಲಿನ ಒಬ್ಬ ಓಟಗಾರನಾಗಿ ವರ್ಣಿಸಿಕೊಳ್ಳುತ್ತಾನೆ. ಒಬ್ಬ ಓಟಗಾರನು ಮುಂದೆ ನೋಡುತ್ತಾನೆ, ಹಿಂದೆ ಅಲ್ಲ. ತದ್ರೀತಿಯಲ್ಲಿ ಒಬ್ಬ ಕ್ರೈಸ್ತನು ಮುಂದಿರುವ ಆಶೀರ್ವಾದಗಳ ಕಡೆಗೆ ನೋಡಬೇಕು, ಹಿಂದೆ ಬಿಟ್ಟಿರುವ ಸಂಗತಿಗಳಿಗಳನ್ನಲ್ಲ. ಪೌಲನು ಇದನ್ನೂ ಹೇಳುತ್ತಾನೆ: “ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.” (ಫಿಲಿಪ್ಪಿ 3:15) ಆದುದರಿಂದ, ಈ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯ ಮಾಡಲು ದೇವರಿಗೆ ಪ್ರಾರ್ಥಿಸಿರಿ. ಬೈಬಲಿನಲ್ಲಿ ಕಂಡುಕೊಳ್ಳಲ್ಪಟ್ಟಂತೆ ದೇವರ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ತುಂಬಿಸಿರಿ. (ಫಿಲಿಪ್ಪಿ 4:6-9) ನಿಮಗಾಗಿರುವ ಯೆಹೋವನ ಪ್ರೀತಿ ಮತ್ತು ಅದರಿಂದಾಗಿ ನೀವು ಅನುಭೋಗಿಸುವ ಆಶೀರ್ವಾದಗಳ ಕುರಿತಾಗಿ ಧ್ಯಾನಿಸಿರಿ. (1 ಯೋಹಾನ 4:9, 10, 17-19) ಆಗ, ನೀವೇನನ್ನು ಹಿಂದೆ ಬಿಟ್ಟಿದ್ದೀರೋ ಅದರ ಕುರಿತಾಗಿ ನೀವು ಚಿಂತಿಸದೆ ಇರುವಂತೆ ಯೆಹೋವನು ಪವಿತ್ರಾತ್ಮದ ಮೂಲಕ ನಿಮಗೆ ಸಹಾಯ ಮಾಡುವನು. ಅದರ ಬದಲಿಗೆ, ಪೌಲನಂತೆ ನೀವು ಮುಂದಿರುವ ಮಹಿಮಾಭರಿತ ಭವಿಷ್ಯತ್ತಿನ ಕಡೆಗೆ ನೋಡುವಿರಿ.—ಫಿಲಿಪ್ಪಿ 3:17.