ಆಧುನಿಕ ಜೀವನಕ್ಕೆ ಪ್ರಾಯೋಗಿಕವಾದೊಂದು ಗ್ರಂಥ
ಇಂದಿನ ಜಗತ್ತಿನಲ್ಲಿ ಸಲಹೆನೀಡುವ ಪುಸ್ತಕಗಳು ಅತಿ ಜನಪ್ರಿಯ. ಆದರೆ ಅವುಗಳಿಗೆ ಹಳೆಯದಾಗುವ ಪ್ರವೃತ್ತಿಯಿದ್ದು, ಅವು ಬೇಗನೆ ಪರಿಷ್ಕರಿಸಲ್ಪಡುತ್ತವೆ ಅಥವಾ ಬದಲಿಮಾಡಲ್ಪಡುತ್ತವೆ. ಬೈಬಲಿನ ವಿಷಯದಲ್ಲೇನು? ಅದನ್ನು ಸುಮಾರು 2,000 ವರ್ಷಗಳ ಹಿಂದೆ ಪೂರ್ಣಗೊಳಿಸಲಾಗಿದ್ದರೂ ಅದರ ಮೂಲ ಸಂದೇಶವು ಉತ್ತಮಗೊಳಿಸಲ್ಪಟ್ಟದ್ದಾಗಲಿ, ಸದ್ಯೋಚಿತವಾಗಿ ಮಾಡಲ್ಪಟ್ಟದ್ದಾಗಲಿ ಇಲ್ಲ. ಇಂತಹ ಒಂದು ಗ್ರಂಥದಲ್ಲಿ ನಮ್ಮ ದಿನಗಳಿಗಾಗಿ ಪ್ರಾಯೋಗಿಕ ಮಾರ್ಗದರ್ಶನವು ಇರುವುದು ಸಾಧ್ಯವೆ?
ಕೆಲವರು ಇಲ್ಲವೆನ್ನುತ್ತಾರೆ. “ಆಧುನಿಕ ರಸಾಯನಶಾಸ್ತ್ರದ ತರಗತಿಯಲ್ಲಿ 1924ರ ರಸಾಯನಶಾಸ್ತ್ರದ ಪಠ್ಯಪುಸ್ತಕವನ್ನು ಬಳಸುವುದನ್ನು ಯಾವನೂ ಸಮರ್ಥಿಸನು,” ಎಂದು ಡಾ. ಈಲೈ ಎಸ್. ಚೆಸನ್, ಬೈಬಲ್ ಸದ್ಯೋಚಿತವಲ್ಲದ್ದೆಂದು ತಾನೇಕೆ ಎಣಿಸುತ್ತೇನೆಂದು ವಿವರಿಸುವಾಗ ಬರೆದರು.1 ಈ ವಾದದಲ್ಲಿ ಹುರುಳಿದೆಯೆಂದು ತೋರಿಬರುವುದು ನಿಜ. ಎಷ್ಟೆಂದರೂ, ಬೈಬಲನ್ನು ಬರೆದು ಪೂರ್ಣಗೊಳಿಸಿದಂದಿನಿಂದ, ಮನುಷ್ಯನು ಮಾನಸಿಕ ಆರೋಗ್ಯ ಮತ್ತು ಮಾನವ ವರ್ತನೆಯ ಕುರಿತು ಎಷ್ಟೋ ವಿಷಯಗಳನ್ನು ಕಲಿತಿದ್ದಾನೆ. ಆದಕಾರಣ ಅಷ್ಟು ಹಳೆಯದಾಗಿರುವ ಒಂದು ಗ್ರಂಥವು ಆಧುನಿಕ ಜೀವನಕ್ಕೆ ಕಾರ್ಯೋಚಿತವಾಗಸಾಧ್ಯವಿರುವುದಾದರೂ ಹೇಗೆ?
ಅನಂತಕಾಲಿಕ ಮೂಲತತ್ತ್ವಗಳು
ಕಾಲಗಳಲ್ಲಿ ಬದಲಾವಣೆಯಾಗಿರುವುದು ಸತ್ಯವಾದರೂ, ಮೂಲ ಮಾನವಾವಶ್ಯಕತೆಗಳು ಹಾಗೆಯೇ ಉಳಿದಿವೆ. ಇತಿಹಾಸದಾದ್ಯಂತವೂ ಜನರಿಗೆ ಪ್ರೀತಿ ಮತ್ತು ವಾತ್ಸಲ್ಯಗಳ ಅಗತ್ಯವಿತ್ತು. ಅವರು ಸಂತುಷ್ಟರಾಗಿರಲು ಮತ್ತು ಅರ್ಥಭರಿತ ಜೀವಿತಗಳನ್ನು ನಡೆಸಲು ಬಯಸುತ್ತಿದ್ದರು. ಆರ್ಥಿಕ ಒತ್ತಡಗಳನ್ನು ಹೇಗೆ ನಿಭಾಯಿಸುವುದು, ವಿವಾಹವನ್ನು ಸಫಲಗೊಳಿಸುವುದು ಹೇಗೆ, ಮತ್ತು ತಮ್ಮ ಮಕ್ಕಳಲ್ಲಿ ಉತ್ತಮವಾದ ನೈತಿಕ ಮತ್ತು ನೀತಿತತ್ವಸಂಬಂಧಿತ ಮೌಲ್ಯಗಳನ್ನು ತುಂಬುವುದು ಹೇಗೆಂಬುದರ ಕುರಿತು ಬುದ್ಧಿವಾದ ಅವರಿಗೆ ಬೇಕಾಗಿತ್ತು. ಆ ಮೂಲ ಆವಶ್ಯಕತೆಗಳನ್ನು ಸಂಬೋಧಿಸುವ ಬುದ್ಧಿವಾದ ಬೈಬಲಿನಲ್ಲಿ ಅಡಕವಾಗಿದೆ.—ಪ್ರಸಂಗಿ 3:12, 13; ರೋಮಾಪುರ 12:10; ಕೊಲೊಸ್ಸೆ 3:18-21; 1 ತಿಮೊಥೆಯ 6:6-10.
ಬೈಬಲಿನ ಸಲಹೆಯು ಮಾನವ ಪ್ರಕೃತಿಯ ತೀಕ್ಷ್ಣ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಜೀವಿತಕ್ಕೆ ಪ್ರಾಯೋಗಿಕವಾದ ಅದರ ನಿರ್ದಿಷ್ಟವಾದ, ಅನಂತಕಾಲಿಕ ಮೂಲತತ್ತ್ವಗಳ ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ.
ವಿವಾಹಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶನ
ಕುಟುಂಬವು, “ಮಾನವ ವ್ಯವಸ್ಥಾಪನೆಯ ಅತಿ ಹಳೆಯ ಮತ್ತು ಅತಿ ಮೂಲಭೂತವಾದ ಏಕಾಂಶ; ಸಂತತಿಗಳ ನಡುವಣ ಅತಿ ನಿರ್ಧಾರಕ ಕೊಂಡಿಯಾಗಿದೆ,” ಎನ್ನುತ್ತದೆ ಯುಎನ್ ಕ್ರಾನಿಕ್ಲ್. ಆದರೂ, ಈ “ನಿರ್ಧಾರಕ ಕೊಂಡಿ” ಅಪಾಯಸೂಚಕ ಪ್ರಮಾಣದಲ್ಲಿ ಕಳಚಿಬರುತ್ತಿದೆ. ಕ್ರಾನಿಕ್ಲ್ ದಾಖಲಿಸುವುದು: “ಇಂದಿನ ಜಗತ್ತಿನಲ್ಲಿ ಅನೇಕ ಕುಟುಂಬಗಳು, ತಮ್ಮ ಕೆಲಸ ನಡೆಸುವಿಕೆಯನ್ನು, ಹೌದು, ತಮ್ಮ ಪಾರಾಗಿ ಉಳಿಯುವಿಕೆಯನ್ನೇ ಬೆದರಿಸುವಂತಹ, ಎದೆಗುಂದಿಸುವ ಪಂಥಾಹ್ವಾನಗಳನ್ನು ಎದುರಿಸುತ್ತವೆ.”2 ಆ ಕುಟುಂಬ ಏಕಾಂಶವು ಬದುಕಿ ಉಳಿಯುವಂತೆ ಸಹಾಯ ಮಾಡಲು ಬೈಬಲು ಯಾವ ಬುದ್ಧಿವಾದವನ್ನು ನೀಡುತ್ತದೆ?
ಪ್ರಥಮವಾಗಿ, ಪತಿಪತ್ನಿಯರು ಪರಸ್ಪರ ಹೇಗೆ ಉಪಚರಿಸಿಕೊಳ್ಳಬೇಕೆಂಬ ವಿಷಯದಲ್ಲಿ ಬೈಬಲಿಗೆ ಹೇಳಲು ತುಂಬ ವಿಷಯಗಳಿವೆ. ಉದಾಹರಣೆಗೆ, ಪತಿಗಳ ಕುರಿತು ಅದು ಹೇಳುವುದು: “ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” (ಓರೆಅಕ್ಷರಗಳು ನಮ್ಮವು.) (ಎಫೆಸ 5:28, 29) “ತನ್ನ ಗಂಡನ ಕಡೆಗೆ ಆಳವಾದ ಗೌರವವನ್ನು ಹೊಂದಿರಬೇಕು” ಎಂಬ ಬುದ್ಧಿವಾದವು ಒಬ್ಬ ಹೆಂಡತಿಗೆ ಕೊಡಲ್ಪಟ್ಟಿತ್ತು.—ಎಫೆಸ 5:33, NW.
ಇಂತಹ ಬೈಬಲ್ ಸಲಹೆಯನ್ನು ಅನ್ವಯಿಸಿಕೊಳ್ಳುವುದರ ಸೂಚಿತಾರ್ಥಗಳನ್ನು ಪರಿಗಣಿಸಿರಿ. ತನ್ನ ‘ಸ್ವಂತ ಶರೀರದಂತೆ’ ಪತ್ನಿಯನ್ನು ಪ್ರೀತಿಸುವವನು ಅವಳೆಡೆಗೆ ಹಗೆ ಹುಟ್ಟಿಸುವವನಾಗಲಿ ನಿರ್ದಯಿಯಾಗಲಿ ಆಗಿರುವುದಿಲ್ಲ. ಅವನು ಅವಳಿಗೆ ಶಾರೀರಿಕವಾಗಿ ಹೊಡೆಯುವುದೂ ಇಲ್ಲ, ಮಾತುಗಳಿಂದ ಅಥವಾ ಭಾವಾತ್ಮಕವಾಗಿ ನಿಂದಿಸುವುದೂ ಇಲ್ಲ. ಬದಲಿಗೆ, ಅವನು ತನಗೆ ತೋರಿಸಿಕೊಳ್ಳುವ ಮಾನ್ಯತೆ ಮತ್ತು ಚಿಂತನೆಯನ್ನು ಅವಳೆಡೆಗೂ ತೋರಿಸುತ್ತಾನೆ. (1 ಪೇತ್ರ 3:7) ಹೀಗೆ ಅವನ ಪತ್ನಿಗೆ ಆಕೆಯ ವಿವಾಹದಲ್ಲಿ ಪ್ರೀತಿಸಲ್ಪಡುವ ಮತ್ತು ಸುಭದ್ರಳಾಗಿರುವ ಅನಿಸಿಕೆಯಾಗುತ್ತದೆ. ಈ ಮೂಲಕ ಅವನು ತನ್ನ ಮಕ್ಕಳಿಗೆ, ಸ್ತ್ರೀಯರನ್ನು ಅವರು ಹೇಗೆ ಉಪಚರಿಸಬೇಕೆಂಬ ವಿಷಯದಲ್ಲಿ ಉತ್ತಮ ಮಾದರಿಯನ್ನು ಒದಗಿಸುತ್ತಾನೆ. ಮತ್ತೊಂದು ಕಡೆಯಲ್ಲಿ, ತನ್ನ ಪತಿಯ ಕಡೆಗೆ “ಆಳವಾದ ಗೌರವ”ವಿರುವ ಪತ್ನಿಯು, ಅವನನ್ನು ಸದಾ ಟೀಕಿಸುತ್ತಿರುವ ಮೂಲಕ ಅಥವಾ ಹೀನೈಸುತ್ತಿರುವ ಮೂಲಕ ಅವನ ಘನತೆಯನ್ನು ತೆಗೆದುಹಾಕುವುದಿಲ್ಲ. ಆಕೆ ಅವನನ್ನು ಗೌರವಿಸುವುದರಿಂದ, ಅವನಿಗೆ ತಾನು ಭರವಸಾರ್ಹನು, ಅಂಗೀಕಾರಾರ್ಹನು ಮತ್ತು ಕೃತಜ್ಞತಾರ್ಹನೆಂಬ ಅನಿಸಿಕೆಯಾಗುತ್ತದೆ.
ಇಂತಹ ಬುದ್ಧಿವಾದವು ಈ ಆಧುನಿಕ ಜಗತ್ತಿನಲ್ಲಿ ಪ್ರಾಯೋಗಿಕವೊ? ಇಂದು ಕುಟುಂಬಗಳ ಕುರಿತಾಗಿ ವ್ಯಾಸಂಗಮಾಡುವುದನ್ನು ವೃತ್ತಿಯಾಗಿ ಮಾಡುವವರು ತದ್ರೀತಿಯ ತೀರ್ಮಾನಗಳಿಗೆ ಬಂದಿರುವುದು ಆಸಕ್ತಿಕರವಾದ ವಿಷಯವಾಗಿದೆ. ಕುಟುಂಬ ಸಲಹಾ ಕಾರ್ಯಕ್ರಮವೊಂದರ ಆಡಳಿತಗಾರ್ತಿಯೊಬ್ಬಳು ಗಮನಿಸಿದ್ದು: “ತಾಯಿ ಮತ್ತು ತಂದೆಯ ಮಧ್ಯೆ ಬಲವಾದ, ಪ್ರೀತಿಯ ಸಂಬಂಧವಿರುವಂತಹ ಕುಟುಂಬಗಳೇ, ನನಗೆ ತಿಳಿದಿರುವವುಗಳಲ್ಲಿ ಅತಿ ಆರೋಗ್ಯಕರವಾದ ಕುಟುಂಬಗಳು. . . . ಈ ಬಲಾಢ್ಯವಾದ ಪ್ರಧಾನ ಸಂಬಂಧವು ಮಕ್ಕಳಲ್ಲಿ ಭದ್ರತೆಯನ್ನು ತುಂಬಿಸುವಂತೆ ಕಾಣುತ್ತದೆ.”3
ಗತ ವರ್ಷಗಳಲ್ಲಿ, ವಿವಾಹದ ಕುರಿತ ಬೈಬಲಿನ ಸಲಹೆಯು ಸದುದ್ದೇಶದ ಅಸಂಖ್ಯಾತ ಕುಟುಂಬ ಸಲಹೆಗಾರರ ಬುದ್ಧಿವಾದಕ್ಕಿಂತ ಎಷ್ಟೋ ಹೆಚ್ಚು ಭರವಸಾರ್ಹವಾಗಿ ಪರಿಣಮಿಸಿದೆ. ಎಷ್ಟೆಂದರೂ, ಅಹಿತಕರವಾದ ವಿವಾಹಕ್ಕೆ ವಿಚ್ಛೇದನೆಯೇ ಕ್ಷಿಪ್ರವಾದ ಮತ್ತು ಸುಲಭ ಪರಿಹಾರವೆಂದು ಅನೇಕ ಪರಿಣತರು ಸಮರ್ಥಿಸಿದ ಕಾಲವು ದಾಟಿ ಹೆಚ್ಚು ಸಮಯವಾಗಿರುವುದಿಲ್ಲ. ಇಂದು ಅವರಲ್ಲಿ ಅನೇಕರು, ಜನರನ್ನು, ಸಾಧ್ಯವಿರುವಲ್ಲಿ ಏನಾದರೂ ಮಾಡಿ ವಿವಾಹವನ್ನು ಬಾಳುವಂತೆ ಮಾಡಬೇಕೆಂದು ಪ್ರೋತ್ಸಾಹಿಸುತ್ತಾರೆ. ಆದರೆ ಹೇರಳವಾದ ಹಾನಿಯಾದ ತರುವಾಯವೇ ಈ ಬದಲಾವಣೆಯು ಬಂದಿದೆ.
ವೈದೃಶ್ಯವಾಗಿ, ಬೈಬಲು ವಿವಾಹದ ವಿಷಯದಲ್ಲಿ ವಿಶ್ವಾಸಾರ್ಹವಾದ, ಸಮತೋಲನವುಳ್ಳ ಸಲಹೆಯನ್ನು ಕೊಡುತ್ತದೆ. ಕೆಲವು ವಿಪರೀತ ಪರಿಸ್ಥಿತಿಗಳು ವಿವಾಹ ವಿಚ್ಛೇದನೆಗೆ ಅನುಮತಿಸುತ್ತವೆಂದು ಅದು ಒಪ್ಪುತ್ತದೆ. (ಮತ್ತಾಯ 19:9) ಅದೇ ಸಮಯದಲ್ಲಿ, ಕ್ಷುಲ್ಲಕ ವಿಷಯಗಳಿಗಾಗಿ ವಿಚ್ಛೇದನೆಯನ್ನು ಅದು ಖಂಡಿಸುತ್ತದೆ. (ಮಲಾಕಿಯ 2:14-16) ಅದು ದಾಂಪತ್ಯ ದ್ರೋಹವನ್ನೂ ಖಂಡಿಸುತ್ತದೆ. (ಇಬ್ರಿಯ 13:4) ವಿವಾಹದಲ್ಲಿ ಬದ್ಧತೆಯು ಒಳಗೊಂಡಿರುತ್ತದೆಂದು ಅದು ಹೇಳುತ್ತದೆ: “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು [“ಅಂಟಿಕೊಳ್ಳಬೇಕು,” NW]; ಅವರಿಬ್ಬರು ಒಂದೇ ಶರೀರವಾಗಿರುವರು.”a—ಆದಿಕಾಂಡ 2:24; ಮತ್ತಾಯ 19:5, 6.
ವಿವಾಹದ ಕುರಿತ ಬೈಬಲಿನ ಬುದ್ಧಿವಾದವು, ಬೈಬಲ್ ಬರೆಯಲ್ಪಟ್ಟ ಕಾಲದಲ್ಲಿ ಎಷ್ಟು ಕಾರ್ಯೋಚಿತವಾಗಿತ್ತೋ ಈಗಲೂ ಅಷ್ಟೇ ಕಾರ್ಯೋಚಿತವಾಗಿದೆ. ಪತಿ ಮತ್ತು ಪತ್ನಿ, ಒಬ್ಬರನ್ನೊಬ್ಬರು ಪ್ರೀತಿ ಮತ್ತು ಗೌರವದಿಂದ ಉಪಚರಿಸಿ, ವಿವಾಹವನ್ನು ಏಕೈಕ ಸಂಬಂಧವೆಂಬುದಾಗಿ ವೀಕ್ಷಿಸುವಲ್ಲಿ, ಆ ವಿವಾಹವು—ಅದರೊಂದಿಗೆ ಆ ಕುಟುಂಬವು—ಪಾರಾಗಿ ಉಳಿಯುವುದು ಹೆಚ್ಚು ಸಂಭಾವ್ಯ.
ಹೆತ್ತವರಿಗಾಗಿ ಪ್ರಾಯೋಗಿಕ ಮಾರ್ಗದರ್ಶನ
ಹಲವಾರು ದಶಕಗಳ ಹಿಂದೆ ಅನೇಕ ಮಂದಿ ಹೆತ್ತವರು, ಶಿಶು ತರಬೇತಿಯ ವಿಷಯದಲ್ಲಿ “ನಾವೀನ್ಯ ತರುವ ವಿಚಾರ”ಗಳಿಂದ ಉತ್ತೇಜಿತರಾಗಿ “ನಿಷೇಧಿಸುವುದು ನಿಷಿದ್ಧ” ಎಂದೆಣಿಸಿದರು.8 ಮಕ್ಕಳಿಗೆ ಮಿತಿಗಳನ್ನು ಇಡುವುದು, ಮಾನಸಿಕ ಆಘಾತ ಮತ್ತು ಹತಾಶೆಯನ್ನು ಉಂಟುಮಾಡೀತೆಂದು ಅವರು ಭಯಪಟ್ಟರು. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ, ಹೆತ್ತವರು ತಮ್ಮ ಮಕ್ಕಳಿಗೆ ಅತಿ ಮೃದುವಾದ ತಿದ್ದುಪಾಟಿಗಿಂತ ಹೆಚ್ಚಿನದ್ದೇನನ್ನೂ ಕೊಡಬಾರದೆಂದು ಸದ್ಭಾವನೆಯ ಸಲಹೆಗಾರರು ಪಟ್ಟುಹಿಡಿದು ಹೇಳುತ್ತಿದ್ದರು. ಆದರೆ ಅಂತಹ ಪರಿಣತರಲ್ಲಿ ಅನೇಕರು ಈಗ ಶಿಸ್ತಿನ ಪಾತ್ರವನ್ನು ಪುನರಾಲೋಚಿಸುತ್ತಿದ್ದಾರೆ ಮತ್ತು ಚಿಂತಿತ ಹೆತ್ತವರು ಆ ವಿಷಯದಲ್ಲಿ ತುಸು ಸ್ಪಷ್ಟತೆಗಾಗಿ ಹುಡುಕುತ್ತಿದ್ದಾರೆ.
ಆದರೆ ಈ ಎಲ್ಲ ಸಮಯಗಳಲ್ಲಿ, ಮಕ್ಕಳನ್ನು ಬೆಳೆಸುವ ಸಂಬಂಧದಲ್ಲಿ ಸ್ಪಷ್ಟವಾದ ಮತ್ತು ಸಮಂಜಸವಾದ ಸಲಹೆಯನ್ನು ಬೈಬಲು ನೀಡಿದೆ. ಸುಮಾರು 2,000 ವರ್ಷಗಳ ಹಿಂದೆ ಅದು ಹೇಳಿದ್ದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ [“ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ,” NW] ಅವರನ್ನು ಸಾಕಿಸಲಹಿರಿ.” (ಎಫೆಸ 6:4) “ಶಿಸ್ತು” ಎಂಬುದಾಗಿ ಭಾಷಾಂತರಿಸಿದ ಗ್ರೀಕ್ ನಾಮಪದದ ಅರ್ಥವು, “ಬೆಳೆಸುವುದು, ತರಬೇತು ನೀಡುವುದು, ಉಪದೇಶಿಸುವುದು” ಎಂದಾಗಿದೆ.9 ಇಂತಹ ಶಿಸ್ತು ಅಥವಾ ಶಿಕ್ಷಣವು ಹೆತ್ತವರ ಪ್ರೇಮದ ಸಾಕ್ಷ್ಯವೆಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 13:24) ಸ್ಪಷ್ಟವಾದ ನೈತಿಕ ಮಾರ್ಗದರ್ಶನದಲ್ಲಿ ಮತ್ತು ಸರಿ ಮತ್ತು ತಪ್ಪಿನ ಸಂಬಂಧದಲ್ಲಿ ಪೂರ್ಣವಾದ ಪ್ರಜ್ಞೆಯಿರುವಲ್ಲಿ ಮಕ್ಕಳು ಏಳಿಗೆ ಹೊಂದುತ್ತಾರೆ. ಹೆತ್ತವರು ತಮ್ಮ ವಿಷಯ ಮತ್ತು ತಾವು ಯಾವ ವಿಧದ ವ್ಯಕ್ತಿಯಾಗಿ ಪರಿಣಮಿಸುತ್ತಿದ್ದೇವೆಂಬ ವಿಷಯದಲ್ಲಿ ಚಿಂತೆಮಾಡುತ್ತಾರೆಂದು ಶಿಸ್ತು ಅವರಿಗೆ ತಿಳಿಸುತ್ತದೆ.
ಆದರೆ ಹೆತ್ತವರ ಅಧಿಕಾರ—“ಶಿಕ್ಷಕನ [“ಅಧಿಕಾರಿಕೆಯ,” NW] ಬೆತ್ತ”—ವು ಎಂದಿಗೂ ತಪ್ಪಾಗಿ ಬಳಸಲ್ಪಡಬಾರದು.b (ಜ್ಞಾನೋಕ್ತಿ 22:15; 29:15) ಬೈಬಲು ಹೆತ್ತವರನ್ನು ಎಚ್ಚರಿಸುವುದು: “ನಿಮ್ಮ ಮಕ್ಕಳನ್ನು ಮಿತಿಮೀರಿ ತಿದ್ದಬೇಡಿರಿ. ಹಾಗೆ ಮಾಡಿದರೆ ನೀವು ಅವರ ಹೃದಯವನ್ನೇ ಕುಂದಿಸುವಿರಿ.” (ಕೊಲೊಸ್ಸೆ 3:21, ಫಿಲಿಪ್ಸ್) ದೈಹಿಕ ಶಿಕ್ಷೆಯು ಸಾಮಾನ್ಯವಾಗಿ ಅತಿ ಫಲಕಾರಿಯಾದ ಕಲಿಸುವ ವಿಧಾನವಾಗಿರುವುದಿಲ್ಲವೆಂಬುದನ್ನೂ ಅದು ಒಪ್ಪಿಕೊಳ್ಳುತ್ತದೆ. ಜ್ಞಾನೋಕ್ತಿ 17:10 ಹೇಳುವುದು: “ಮಂದನಿಗೆ ನೂರು ಪೆಟ್ಟು ಹೊಡೆಯುವದಕ್ಕಿಂತಲೂ ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.” ಇದಲ್ಲದೆ, ಬೈಬಲು ತಡೆಗಟ್ಟುವ ಶಿಸ್ತನ್ನು ಶಿಫಾರಸ್ಸುಮಾಡುತ್ತದೆ. ಧರ್ಮೋಪದೇಶಕಾಂಡ 11:19ರಲ್ಲಿ ಹೆತ್ತವರು ತಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೇರೂರಿಸಲು ಅನಿಯತ ಕ್ಷಣಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ.—ಧರ್ಮೋಪದೇಶಕಾಂಡ 6:6, 7ನ್ನೂ ನೋಡಿ.
ಹೆತ್ತವರಿಗೆ ಬೈಬಲು ಕೊಡುವ ಅನಂತಕಾಲಿಕ ಬುದ್ಧಿವಾದವು ಸ್ಪಷ್ಟ. ಮಕ್ಕಳಿಗೆ ಸುಸಂಗತವಾದ ಮತ್ತು ಪ್ರೀತಿಪೂರ್ವಕವಾದ ಶಿಸ್ತು ಅಗತ್ಯ. ಅಂತಹ ಸಲಹೆಯು ನಿಜವಾಗಿಯೂ ಕಾರ್ಯನಡೆಸುತ್ತದೆಂದು ಪ್ರಾಯೋಗಿಕ ಅನುಭವವು ತೋರಿಸುತ್ತದೆ.c
ಜನರನ್ನು ವಿಭಾಗಿಸುವ ತಡೆಗಳನ್ನು ಜಯಿಸುವುದು
ಜನರು ಇಂದು ಜಾತೀಯ, ರಾಷ್ಟ್ರೀಯ, ಹಾಗೂ ಕುಲಸಂಬಂಧವಾದ ತಡೆಗಟ್ಟುಗಳಿಂದ ವಿಭಾಗಿತರಾಗಿದ್ದಾರೆ. ಇಂತಹ ಕೃತಕ ತಡೆಗಳು ಲೋಕದಾದ್ಯಂತದ ಯುದ್ಧಗಳಲ್ಲಿ ಮುಗ್ಧ ಮಾನವರ ಸಂಹಾರಕ್ಕೆ ಸಹಾಯ ಮಾಡಿದೆ. ಇತಿಹಾಸದಲ್ಲಿ ಸಂಭವಿಸಿರುವುದನ್ನು ಪರಿಗಣಿಸುವುದಾದರೆ, ವಿಭಿನ್ನ ಕುಲ ಮತ್ತು ಜನಾಂಗಗಳ ಸ್ತ್ರೀ, ಪುರುಷರು ಒಬ್ಬರನ್ನೊಬ್ಬರು ಸಮಾನರೆಂದು ನೋಡಿ ಉಪಚರಿಸುವ ಪ್ರತೀಕ್ಷೆಯು ನಿಶ್ಚಯವಾಗಿಯೂ ನಿರಾಶಾದಾಯಕವಾಗಿದೆ. “ಪರಿಹಾರವು ನಮ್ಮ ಹೃದಯಗಳಲ್ಲಿದೆ,” ಎನ್ನುತ್ತಾನೆ, ಒಬ್ಬ ಆಫ್ರಿಕನ್ ರಾಜ್ಯ ನೀತಿಜ್ಞನು.11 ಆದರೆ ಮಾನವ ಹೃದಯಗಳ ಪರಿವರ್ತನೆಯು ಸುಲಭವಾಗಿರುವುದಿಲ್ಲ. ಆದರೂ ಬೈಬಲಿನ ಸಂದೇಶವು ಹೇಗೆ ಹೃದಯಕ್ಕೆ ಹಿಡಿಸಿ, ಸಮಾನತೆಯ ಮನೋಭಾವಗಳನ್ನು ಬೆಳೆಸುತ್ತದೆಂಬುದನ್ನು ಪರಿಗಣಿಸಿರಿ.
ದೇವರು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ”ದನೆಂಬ ಬೈಬಲಿನ ಬೋಧನೆಯು, ಕುಲಸಂಬಂಧದ ಶ್ರೇಷ್ಠತೆಯ ಯಾವುದೇ ವಿಚಾರವನ್ನು ಹೊರಹಾಕುತ್ತದೆ. (ಅ. ಕೃತ್ಯಗಳು 17:26) ಇರುವುದು ನಿಜವಾಗಿಯೂ ಏಕಮಾತ್ರ ಕುಲ—ಮಾನವಕುಲ—ವೆಂದು ಅದು ತೋರಿಸುತ್ತದೆ. ಬೈಬಲು ‘ದೇವರನ್ನು ಅನುಕರಿಸುವವರಾಗಿರಿ’ ಎಂದು ಮತ್ತೂ ನಮಗೆ ಪ್ರೋತ್ಸಾಹಿಸುತ್ತಾ, ಆತನ ಕುರಿತು, “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದು ಹೇಳುತ್ತದೆ. (ಎಫೆಸ 5:1; ಅ. ಕೃತ್ಯಗಳು 10:34, 35) ಬೈಬಲನ್ನು ಗಂಭೀರವಾಗಿ ತೆಗೆದುಕೊಂಡು ಅದರ ಬೋಧನೆಗಳಂತೆ ಜೀವಿಸಪ್ರಯತ್ನಿಸುವವರಲ್ಲಿ, ಈ ಜ್ಞಾನವು ಏಕೀಕರಿಸುವ ಪರಿಣಾಮವನ್ನುಂಟುಮಾಡುತ್ತದೆ. ಅದು ಅಗಾಧವಾದ ತಳದಲ್ಲಿ, ಮಾನವ ಹೃದಯದಲ್ಲಿ, ಜನರನ್ನು ವಿಭಾಗಿಸುವಂತಹ ಮಾನವನಿರ್ಮಿತ ತಡೆಗಳನ್ನು ವಿಲೀನಗೊಳಿಸುತ್ತ ಕೆಲಸನಡಿಸುತ್ತದೆ. ಒಂದು ದೃಷ್ಟಾಂತವನ್ನು ಪರಿಗಣಿಸಿರಿ.
ಹಿಟ್ಲರನು ಯೂರೋಪಿನಾದ್ಯಂತ ಯುದ್ಧಹೂಡಿದಾಗ, ಕ್ರೈಸ್ತರ ಒಂದು ಗುಂಪಾದ ಯೆಹೋವನ ಸಾಕ್ಷಿಗಳು ಮುಗ್ಧ ಮಾನವರ ಸಂಹಾರದಲ್ಲಿ ಸೇರಿಕೊಳ್ಳಲು ದೃಢನಿಷ್ಠೆಯಿಂದ ನಿರಾಕರಿಸಿದರು. ಅವರು ಜೊತೆಮಾನವರ ವಿರುದ್ಧ ‘ಕತ್ತಿಯನ್ನೆತ್ತರು.’ ದೇವರನ್ನು ಮೆಚ್ಚಿಸಲು ಅವರಿಗಿದ್ದ ಬಯಕೆಯ ಕಾರಣವೇ ಅವರು ಈ ನಿಲುವನ್ನು ಆಯ್ದುಕೊಂಡರು. (ಯೆಶಾಯ 2:3, 4; ಮೀಕ 4:3, 5) ಬೈಬಲು ಏನನ್ನು ಬೋಧಿಸುತ್ತದೊ ಅದನ್ನು—ಯಾವ ಜನಾಂಗವಾಗಲಿ, ಕುಲವಾಗಲಿ, ಒಂದು ಇನ್ನೊಂದಕ್ಕಿಂತ ಶ್ರೇಷ್ಠವಲ್ಲವೆಂಬುದನ್ನು, ಅವರು ನಿಜವಾಗಿಯೂ ನಂಬಿದರು. (ಗಲಾತ್ಯ 3:28) ಶಾಂತಿಯನ್ನು ಪ್ರೀತಿಸುವ ಅವರ ಈ ಸ್ಥಾನದ ಕಾರಣ, ಯೆಹೋವನ ಸಾಕ್ಷಿಗಳು ಕೂಟಶಿಬಿರಗಳ ಪ್ರಥಮ ನಿವಾಸಿಗಳ ಮಧ್ಯೆ ಇರುವವರಾದರು.—ರೋಮಾಪುರ 12:18.
ಆದರೆ ಬೈಬಲನ್ನು ಅನುಸರಿಸುತ್ತೇವೆಂದು ಹೇಳಿಕೊಂಡವರೆಲ್ಲರೂ ಇಂತಹ ಸ್ಥಾನವನ್ನು ತೆಗೆದುಕೊಳ್ಳಲಿಲ್ಲ. IIನೆಯ ಲೋಕ ಯುದ್ಧ ಮುಗಿದ ಸ್ವಲ್ಪದರಲ್ಲಿ, ಮಾರ್ಟೀನ್ ನೀಮಲರ್ ಎಂಬ ಒಬ್ಬ ಜರ್ಮನ್ ಪ್ರಾಟೆಸ್ಟಂಟ್ ಪಾದ್ರಿ ಬರೆದುದು: “[ಯುದ್ಧಗಳಿಗಾಗಿ] ದೇವರ ಮೇಲೆ ಅಪವಾದ ಹೊರಿಸುವ ಯಾವನಿಗೂ ಒಂದೇ ದೇವರ ವಾಕ್ಯದ ಪರಿಚಯವಿಲ್ಲ, ಇಲ್ಲವೆ ಅದನ್ನು ಪರಿಚಯಿಸಿಕೊಳ್ಳಲು ಮನಸ್ಸಿಲ್ಲ. . . . ಕ್ರೈಸ್ತ ಚರ್ಚುಗಳು ಯುಗಾಂತರಗಳಿಂದಲೂ ಯುದ್ಧಗಳನ್ನು, ಸೈನ್ಯಗಳನ್ನು ಮತ್ತು ಆಯುಧಗಳನ್ನು ಆಶೀರ್ವದಿಸುವುದರಲ್ಲಿ ಪದೇ ಪದೇ ಭಾಗವಹಿಸಿ . . . ಯುದ್ಧದಲ್ಲಿ ತಮ್ಮ ವೈರಿಗಳ ನಾಶನಕ್ಕಾಗಿ ತೀರ ಅಕ್ರೈಸ್ತ ರೀತಿಯಲ್ಲಿ ಪ್ರಾರ್ಥಿಸಿವೆ. ಇವೆಲ್ಲ ನಮ್ಮ ಮತ್ತು ನಮ್ಮ ಪಿತೃಗಳ ದೋಷವೇ ಹೊರತು, ಇದಕ್ಕೆ ದೇವರು ಎಂದಿಗೂ ಜವಾಬ್ದಾರನಲ್ಲ. ಮತ್ತು ಇಂದಿನ ಕ್ರೈಸ್ತರಾದ ನಾವು, ಅರ್ನೆಸ್ಟ್ ಬೈಬಲ್ ಸ್ಟೂಡೆಂಟ್ಸ್ [ಯೆಹೋವನ ಸಾಕ್ಷಿಗಳು] ಎಂದು ಕರೆಯಲ್ಪಡುವ ಪಂಥದೆದುರು ಲಜ್ಜಿತರಾಗಿ ನಿಂತಿದ್ದೇವೆ. ಅವರು ನೂರುಗಟ್ಟಲೆ ಮತ್ತು ಸಾವಿರಗಟ್ಟಲೆಯಾಗಿ ಕೂಟಶಿಬಿರಗಳಿಗೆ ಹೋಗಿ, ಯುದ್ಧ ಸೇವೆಯನ್ನು ನಿರಾಕರಿಸಿದುದಕ್ಕಾಗಿ ಸತ್ತರು [ಕೂಡ], ಮತ್ತು ಜನರ ಮೇಲೆ ಗುಂಡುಹಾರಿಸಲು ನಿರಾಕರಿಸಿದರು.”12
ಈ ದಿನದ ತನಕವೂ ಯೆಹೋವನ ಸಾಕ್ಷಿಗಳು ತಮ್ಮ ಸಹೋದರತ್ವಕ್ಕೆ ಪ್ರಖ್ಯಾತರು. ಇದು ಅರಬಿಗಳನ್ನೂ ಯೆಹೂದ್ಯರನ್ನೂ, ಕ್ರೊಏಷಿಯನರನ್ನೂ ಸರ್ಬಿಯದವರನ್ನೂ, ಹೂಟೂಗಳನ್ನೂ ಟೂಟ್ಸಿಗಳನ್ನೂ ಒಂದುಗೂಡಿಸುತ್ತದೆ. ಆದರೂ ಈ ಐಕ್ಯವು ಸಾಧ್ಯವಿರುವುದು, ತಾವು ಇತರರಿಗಿಂತ ಉತ್ತಮರಾಗಿರುವ ಕಾರಣದಿಂದಲ್ಲ, ಬೈಬಲಿನ ಸಂದೇಶದ ಶಕ್ತಿಯಿಂದ ಪ್ರಚೋದಿತರಾಗಿರುವ ಕಾರಣವೇ ಎಂದು ಸಾಕ್ಷಿಗಳು ಸಿದ್ಧಮನಸ್ಸಿನಿಂದ ಒಪ್ಪುತ್ತಾರೆ.—1 ಥೆಸಲೊನೀಕ 2:13.
ಉತ್ತಮ ಮಾನಸಿಕ ಆರೋಗ್ಯವನ್ನು ಪ್ರವರ್ಧಿಸುವ ಪ್ರಾಯೋಗಿಕ ಮಾರ್ಗದರ್ಶನ
ಅನೇಕ ವೇಳೆ, ಒಬ್ಬ ವ್ಯಕ್ತಿಯ ಶಾರೀರಿಕ ಆರೋಗ್ಯವು ಅವನ ಮಾನಸಿಕ ಹಾಗೂ ಭಾವಾತ್ಮಕ ಆರೋಗ್ಯದ ಸ್ಥಿತಿಯಿಂದ ಪ್ರಭಾವಿಸಲ್ಪಡುತ್ತದೆ. ಉದಾಹರಣೆಗೆ, ಕೋಪದ ಹಾನಿಕಾರಕ ಪರಿಣಾಮಗಳನ್ನು ವೈಜ್ಞಾನಿಕ ಅಧ್ಯಯನಗಳು ರುಜುಪಡಿಸಿವೆ. “ಕಡಮೆ ಮಿತ್ರರು, ಕೋಪಿಸಿಕೊಂಡಾಗ ಹೆಚ್ಚು ಶಾರೀರಿಕ ಪರಿಣಾಮಗಳು ಮತ್ತು ಅಪಾಯಕಾರಿಯಾದ ಆರೋಗ್ಯಸಂಬಂಧೀ ವರ್ತನೆಗಳು ಸೇರಿರುವ ವಿವಿಧ ಕಾರಣಗಳಿಗಾಗಿ, ಮುಂಗೋಪಿಗಳು ಹೃದಯ ರಕ್ತನಾಳಸಂಬಂಧದ ರೋಗ (ಹಾಗೂ ಇತರ ಕಾಯಿಲೆಗಳು)ದ ವಿಷಯದಲ್ಲಿ ಹೆಚ್ಚು ಅಪಾಯದಲ್ಲಿದ್ದಾರೆಂದು, ದೊರೆಯುವ ಹೆಚ್ಚಿನ ಸಾಕ್ಷ್ಯಗಳು ಸೂಚಿಸುತ್ತವೆ” ಎಂದು ಕೋಪ ಕೊಲ್ಲುತ್ತದೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಡ್ಯೂಕ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ನ ವರ್ತನಾಸಂಶೋಧನೆಯ ಡೈರೆಕ್ಟರರಾದ ಡಾ. ರೆಡ್ಫರ್ಡ್ ವಿಲ್ಯಮ್ಸ್ ಮತ್ತು ಅವರ ಪತ್ನಿ, ವರ್ಜಿನ್ಯ ವಿಲ್ಯಮ್ಸ್ ಹೇಳುತ್ತಾರೆ.13
ಇಂತಹ ವೈಜ್ಞಾನಿಕ ಅಧ್ಯಯನಗಳಿಗೆ ಸಾವಿರಾರು ವರ್ಷಗಳ ಪೂರ್ವದಲ್ಲಿ, ಬೈಬಲು, ಸರಳವಾದರೂ ಸ್ಪಷ್ಟವಾದ ಮಾತುಗಳಲ್ಲಿ, ನಮ್ಮ ಭಾವಾತ್ಮಕ ಸ್ಥಿತಿ ಮತ್ತು ಶಾರೀರಿಕ ಆರೋಗ್ಯದ ನಡುವೆ ಸಂಬಂಧವನ್ನು ಕಲ್ಪಿಸಿತು: “ಶಾಂತ ಹೃದಯವು ಶಾರೀರಿಕ ಜೀವಿಯ ಹುಮ್ಮಸ್ಸಾಗಿದೆ, ಆದರೆ ಈರ್ಷ್ಯೆಯು ಎಲುಬುಗಳಿಗೆ ಕ್ಷಯವಾಗಿದೆ.” (ಜ್ಞಾನೋಕ್ತಿ 14:30, NW; 17:22) ಬೈಬಲು ವಿವೇಕದಿಂದ ಸಲಹೆ ನೀಡಿದ್ದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ,” ಮತ್ತು “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ.”—ಕೀರ್ತನೆ 37:8; ಪ್ರಸಂಗಿ 7:9.
ಬೈಬಲಿನಲ್ಲಿ ಕೋಪವನ್ನು ನಿಯಂತ್ರಿಸಿಕೊಳ್ಳಲು ನ್ಯಾಯವಾದ ಬುದ್ಧಿವಾದವೂ ಇದೆ. ಉದಾಹರಣೆಗೆ, ಜ್ಞಾನೋಕ್ತಿ 19:11 ಹೇಳುವುದು: “ಮನುಷ್ಯನ ವಿವೇಕವು [“ಅಂತರ್ದೃಷ್ಟಿ,” NW] ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” “ಅಂತರ್ದೃಷ್ಟಿ” ಎಂಬುದಕ್ಕೆ ಹೀಬ್ರು ಪದವು ಯಾವುದಾದರೊಂದು ವಿಷಯಕ್ಕಾಗಿರುವ “ಕಾರಣದ ಜ್ಞಾನ”ಕ್ಕೆ ಗಮನ ಸೆಳೆಯುವ ಕ್ರಿಯಾಪದದಿಂದ ಬಂದಿದೆ.14 “ಕಾರ್ಯವನ್ನು ಕೈಕೊಳ್ಳುವ ಮೊದಲು ಯೋಚಿಸು” ಎಂಬುದೇ ವಿವೇಕಪೂರ್ಣವಾದ ಬುದ್ಧಿವಾದ. ಇತರರು ಒಂದು ನಿರ್ದಿಷ್ಟವಾದ ವಿಧದಲ್ಲಿ ಏಕೆ ಮಾತನಾಡುತ್ತಾರೆ ಅಥವಾ ವರ್ತಿಸುತ್ತಾರೆ ಎಂಬುದಕ್ಕಿರುವ ಮೂಲಭೂತ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ಒಬ್ಬ ವ್ಯಕ್ತಿಯು ಹೆಚ್ಚು ಸಹಿಷ್ಣುವಾಗಿರಲು ಮತ್ತು ಕಡಮೆ ಕೋಪಪ್ರವೃತ್ತಿಯವನಾಗಿರಲು ಸಹಾಯನೀಡಬಲ್ಲದು.—ಜ್ಞಾನೋಕ್ತಿ 14:29.
ಕೊಲೊಸ್ಸೆ 3:13ರಲ್ಲಿ ಇನ್ನೊಂದು ಪ್ರಾಯೋಗಿಕ ಬುದ್ಧಿವಾದವಿದೆ. ಅದು ಹೇಳುವುದು: “ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.” ಸಣ್ಣಪುಟ್ಟ ರೇಗಿಸುವಿಕೆಗಳು ಜೀವನದ ಭಾಗವಾಗಿವೆ. “ಸೈರಿಸಿ”ಕೊಳ್ಳುವುದೆಂಬ ಅಭಿವ್ಯಕ್ತಿಯು, ಇತರರಲ್ಲಿ ನಮಗೆ ಇಷ್ಟವಾಗದಿರುವ ಸಂಗತಿಗಳನ್ನು ತಾಳಿಕೊಳ್ಳುವುದನ್ನು ಸೂಚಿಸುತ್ತದೆ. “ಕ್ಷಮಿಸು”ವುದರ ಅರ್ಥ, ತೀವ್ರ ಅಸಮಾಧಾನವನ್ನು ಹೋಗಗೊಡಿಸುವುದಾಗಿದೆ. ಆಗಾಗ್ಗೆ ನಿಷ್ಠುರ ಅನಿಸಿಕೆಗಳನ್ನು ಪೋಷಿಸುವ ಬದಲು ಅವನ್ನು ಹೋಗಗೊಡಿಸುವುದು ವಿವೇಕಪ್ರದ; ಸಿಟ್ಟಿಗೆ ಆಶ್ರಯಕೊಡುವುದು ನಮ್ಮ ಹೊರೆಗೆ ಕೇವಲ ಹೆಚ್ಚನ್ನು ಕೂಡಿಸುತ್ತದೆ ಅಷ್ಟೆ.—“ಮಾನವ ಸಂಬಂಧಗಳಿಗಾಗಿ ಪ್ರಾಯೋಗಿಕ ಮಾರ್ಗದರ್ಶನ” ಎಂಬ ರೇಖಾಚೌಕವನ್ನು ನೋಡಿ.
ಇಂದು ಸಲಹೆ ಮತ್ತು ಮಾರ್ಗದರ್ಶನವನ್ನು ಕೊಡುವ ಮೂಲಗಳೋ ಅನೇಕ. ಆದರೆ ಬೈಬಲು ನಿಜವಾಗಿಯೂ ಅನನ್ಯವಾಗಿರುತ್ತದೆ. ಅದರ ಸಲಹೆ ಕೇವಲ ಊಹೆಯೂ ಅಲ್ಲ, ಅದರ ಬುದ್ಧಿವಾದವು ನಮ್ಮ ಹಾನಿಗಾಗಿ ಎಂದೂ ಕೆಲಸಮಾಡುವುದೂ ಇಲ್ಲ. ಬದಲಾಗಿ, ಅದರ ವಿವೇಕ “ಬಹು ಖಂಡಿತ,” [“ಅತಿ ವಿಶ್ವಾಸಾರ್ಹ,” NW]ವಾಗಿ ರುಜುವಾಗಿದೆ. (ಕೀರ್ತನೆ 93:5) ಇದಲ್ಲದೆ, ಬೈಬಲಿನ ಸಲಹೆಯು ಅನಂತಕಾಲಿಕ. ಅದು ಸುಮಾರು 2,000 ವರ್ಷಗಳ ಹಿಂದೆ ಮುಗಿಸಲ್ಪಟ್ಟಿದೆಯಾದರೂ, ಅದರ ಮಾತುಗಳು ಇನ್ನೂ ಅನ್ವಯಯೋಗ್ಯ. ಮತ್ತು ಅವು, ನಮ್ಮ ಚರ್ಮದ ಬಣ್ಣವು ಯಾವುದೇ ಆಗಿರಲಿ ಅಥವಾ ನಾವು ಯಾವುದೇ ದೇಶದಲ್ಲಿ ಜೀವಿಸುತ್ತಿರಲಿ, ಅಷ್ಟೇ ಪರಿಣಾಮಕಾರಿಯಾಗಿ ಅನ್ವಯಿಸುತ್ತವೆ. ಬೈಬಲಿನ ಮಾತುಗಳಿಗೆ ಶಕ್ತಿ—ಜನರನ್ನು ಹೆಚ್ಚು ಉತ್ತಮವಾದ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿಯಿದೆ. (ಇಬ್ರಿಯ 4:12) ಆ ಗ್ರಂಥವನ್ನು ಓದಿ, ಅದರ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದು, ಹೀಗೆ ನಿಮ್ಮ ಜೀವನದ ಗುಣಮಟ್ಟವನ್ನು ವರ್ಧಿಸಬಲ್ಲದು.
[ಅಧ್ಯಯನ ಪ್ರಶ್ನೆಗಳು]
a “ಅಂಟಿಕೊ” ಎಂದು ಇಲ್ಲಿ ಭಾಷಾಂತರವಾಗಿರುವ ಡವಾಕ್ ಎಂಬ ಹೀಬ್ರು ಪದವು, “ವಾತ್ಸಲ್ಯ ಮತ್ತು ನಿಷ್ಠೆಯಲ್ಲಿ ಒಬ್ಬನನ್ನು ನೆಚ್ಚಿಕೊಳ್ಳುವುದು ಎಂಬ ಅರ್ಥವನ್ನು ತಳೆದಿರುತ್ತದೆ.”4 ಗ್ರೀಕ್ನಲ್ಲಿ, ಮತ್ತಾಯ 19:5ರಲ್ಲಿ (NW) “ಅಂಟಿಕೊಳ್ಳುವನು,” ಎಂದು ಭಾಷಾಂತರಿಸಲ್ಪಟ್ಟ ಪದವು, “ಬಂಧಿಸು,” “ಹಚ್ಚಿಸು,” “ಒಟ್ಟಿಗೆ ಬಿಗಿಯಾಗಿ ಜೋಡಿಸು” ಎಂದು ಅರ್ಥಕೊಡುವ ಪದಕ್ಕೆ ಸಂಬಂಧಿತವಾಗಿದೆ.5
b ಬೈಬಲ್ ಸಮಯಗಳಲ್ಲಿ, “ಬೆತ್ತ” (ಹೀಬ್ರು, ಶೆವೆಟ್)ದ ಅರ್ಥವು ಒಬ್ಬ ಕುರುಬನು ಉಪಯೋಗಿಸುತ್ತಿದ್ದಂತಹ “ದೊಣ್ಣೆ” ಅಥವಾ “ದಂಡ” ಎಂದಾಗಿತ್ತು.10 ಈ ಪೂರ್ವಾಪರದಲ್ಲಿ “ಅಧಿಕಾರದ ಬೆತ್ತ”ವು ಕಠಿನವಾದ ನಿರ್ದಯತೆಯನ್ನಲ್ಲ, ಪ್ರೀತಿಯ ಮಾರ್ಗದರ್ಶನವನ್ನು ಸೂಚಿಸುತ್ತದೆ.—ಹೋಲಿಸಿ ಕೀರ್ತನೆ 23:4.
c “ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ,” “ನಿಮ್ಮ ಹದಿಹರೆಯದವನು ಏಳಿಗೆ ಹೊಂದುವಂತೆ ನೆರವಾಗಿರಿ,” “ಮನೆಯಲ್ಲಿ ಪ್ರತಿಭಟಕನೊಬ್ಬನಿದ್ದಾನೊ?” ಮತ್ತು “ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ” ಎಂಬ ಅಧ್ಯಾಯಗಳನ್ನು, ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿತವಾದ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದಲ್ಲಿ ನೋಡಿರಿ.
[ಪುಟ 35 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲು ಕುಟುಂಬ ಜೀವಿತದ ವಿಷಯದಲ್ಲಿ ಸ್ಪಷ್ಟವಾದ ಹಾಗೂ ನ್ಯಾಯಸಮ್ಮತವಾದ ಸಲಹೆಯನ್ನು ನೀಡುತ್ತದೆ
[ಪುಟ 34 ರಲ್ಲಿರುವ ಚೌಕ]
ಸುಸ್ಥಿತಿಯುಳ್ಳ ಕುಟುಂಬಗಳ ವೈಶಿಷ್ಟ್ಯಗಳು
ಹಲವು ವರ್ಷಗಳ ಹಿಂದೆ, ಒಬ್ಬ ಶಿಕ್ಷಕರೂ ಕುಟುಂಬ ವಿಶೇಷಜ್ಞರೂ ಆದವರೊಬ್ಬರು ಒಂದು ವ್ಯಾಪಕವಾದ ಅಧ್ಯಯನವನ್ನು ನಡೆಸಿದರು. ಅದರಲ್ಲಿ ಕುಟುಂಬಗಳೊಂದಿಗೆ ಕೆಲಸಮಾಡುವ 500ಕ್ಕೂ ಹೆಚ್ಚು ವೃತ್ತಿಪರರೊಂದಿಗೆ, “ಸುಸ್ಥಿತಿಯ” ಕುಟುಂಬಗಳಲ್ಲಿ ಅವರು ಅವಲೋಕಿಸಿದಂತಹ ವಿಶೇಷ ಲಕ್ಷಣಗಳ ಕುರಿತು ಹೇಳುವಂತೆ ಕೇಳಿಕೊಳ್ಳಲಾಯಿತು. ಆಸಕ್ತಿಕರವಾಗಿ, ಪಟ್ಟಿಮಾಡಲ್ಪಟ್ಟಿದ್ದ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ, ಬೈಬಲು ಬಹು ಹಿಂದೆ ಶಿಫಾರಸ್ಸು ಮಾಡಿದ ಸಂಗತಿಗಳು ಸೇರಿದ್ದವು.
ಉತ್ತಮ ಸಂವಾದಾಚಾರಗಳು—ಭೇದಭಾವಗಳನ್ನು ರಾಜಿಮಾಡಿಕೊಳ್ಳುವ ಪರಿಣಾಮಕಾರಿಯಾದ ವಿಧಾನಗಳು ಸೇರಿ—ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದವು. ಸುಸ್ಥಿತಿಯ ಕುಟುಂಬಗಳಲ್ಲಿದ್ದ ಒಂದು ಸಾಮಾನ್ಯ ಕಾರ್ಯನೀತಿಯು, “ಇನ್ನೊಬ್ಬನಲ್ಲಿ ಸಿಟ್ಟಾಗಿರುತ್ತ ಯಾರೂ ನಿದ್ದೆಮಾಡುವುದಿಲ್ಲ” ಎಂದಾಗಿತ್ತೆಂದು ಸಮೀಕ್ಷೆಯ ಗ್ರಂಥಕರ್ತರು ಗಮನಿಸಿದರು. ಆದರೂ, 1,900 ವರ್ಷಗಳ ಹಿಂದೆ, ಬೈಬಲ್ ಬುದ್ಧಿಹೇಳಿದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಬೈಬಲ್ ಕಾಲಗಳಲ್ಲಿ ದಿನವನ್ನು ಸೂರ್ಯಾಸ್ತಮಾನದಿಂದ ಸೂರ್ಯಾಸ್ತಮಾನಕ್ಕೆ ಲೆಕ್ಕಿಸಲಾಗುತ್ತಿತ್ತು. ಹೀಗೆ, ಆಧುನಿಕ ಪರಿಣತರು ಕುಟುಂಬಗಳನ್ನು ಅಧ್ಯಯನಿಸುವುದಕ್ಕೆ ಎಷ್ಟೋ ಮೊದಲು, ಬೈಬಲು ವಿವೇಕದಿಂದ ಬುದ್ಧಿಹೇಳಿದ್ದು: ಒಡಕುಂಟುಮಾಡುವ ಸಂಗತಿಗಳನ್ನು ಬೇಗನೇ—ದಿನಾಂತ್ಯಕ್ಕೆ ಮತ್ತು ಇನ್ನೊಂದು ದಿನಾರಂಭಕ್ಕೆ ಮೊದಲು—ತೀರಿಸಿರಿ.
ಸುಸ್ಥಿತಿಯ ಕುಟುಂಬಗಳು “ತಾವು ಹೊರಹೋಗುವ ಅಥವಾ ನಿದ್ರಾಸಮಯಕ್ಕೆ ಮೊದಲು ಸ್ಫೋಟನಸಾಧ್ಯ ವಿಷಯಗಳನ್ನು ಚರ್ಚಿಸುವುದಿಲ್ಲ,” ಎಂದು ಲೇಖಕರು ಕಂಡುಹಿಡಿದರು. “ನಾನು ಪದೇ ಪದೇ ‘ಸರಿಯಾದ ಸಮಯ’ ಎಂಬ ವಾಕ್ಸರಣಿಯನ್ನು ಕೇಳಿಸಿಕೊಂಡೆ.” ಇಂತಹ ಕುಟುಂಬಗಳು 2,700 ವರ್ಷಗಳ ಹಿಂದೆ ದಾಖಲೆ ಮಾಡಲ್ಪಟ್ಟ ಬೈಬಲ್ ಜ್ಞಾನೋಕ್ತಿಯನ್ನು ಅನುದ್ದೇಶಪೂರ್ವಕವಾಗಿ ಪ್ರತಿಧ್ವನಿಸಿದವು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸೆಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಓರೆಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 15:23; 25:11) ಈ ಉಪಮೆಯು, ಬೈಬಲ್ ಸಮಯಗಳಲ್ಲಿ ಬೆಲೆಬಾಳುವ ಹಾಗೂ ಸುಂದರವಾದ ಸ್ವತ್ತುಗಳಾದ, ಕೆತ್ತನೆಯ ಕೆಲಸದ ಬೆಳ್ಳಿತಟ್ಟೆಗಳಲ್ಲಿ ಇಡಲ್ಪಟ್ಟ ಸೇಬುಹಣ್ಣುಗಳ ಆಕಾರದ ಚಿನ್ನದ ಆಭರಣಗಳನ್ನು ಪರೋಕ್ಷವಾಗಿ ಸೂಚಿಸಬಹುದು. ತಕ್ಕ ಸಮಯದಲ್ಲಿ ಹೇಳಲಾಗುವ ಮಾತುಗಳ ಸೌಂದರ್ಯವನ್ನೂ ಬೆಲೆಯನ್ನೂ ಇದು ವ್ಯಕ್ತಪಡಿಸುತ್ತದೆ. ಪ್ರಯಾಸದ ಪರಿಸ್ಥಿತಿಗಳಲ್ಲಿ, ಸರಿಯಾದ ಸಮಯದಲ್ಲಿ ನುಡಿಯಲ್ಪಟ್ಟ ಸರಿಯಾದ ಮಾತುಗಳು ಅಮೂಲ್ಯ.—ಜ್ಞಾನೋಕ್ತಿ 10:19.
[ಪುಟ 37 ರಲ್ಲಿರುವ ಚೌಕ]
ಮಾನವ ಸಂಬಂಧಗಳಿಗಾಗಿ ಪ್ರಾಯೋಗಿಕ ಮಾರ್ಗದರ್ಶನ
“ಭಯಪಡಿರಿ, [“ಉದ್ರೇಕಗೊಳ್ಳಿರಿ,” NW] ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (ಕೀರ್ತನೆ 4:4) ಸಣ್ಣಪುಟ್ಟ ತಪ್ಪುಗಳಿರುವ ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳುವುದು ವಿವೇಕಪ್ರದವಾಗಿದೆ. ಹೀಗೆ ಭಾವಾತ್ಮಕ ಎದುರಿಸುವಿಕೆಯನ್ನು ತಪ್ಪಿಸಬಹುದು.
“ಕತ್ತಿ ತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18) ಯೋಚಿಸಿ ಮಾತಾಡಿರಿ. ವಿಚಾರಹೀನವಾದ ಮಾತುಗಳು ಇತರರನ್ನು ಗಾಯಗೊಳಿಸಿ, ಮಿತ್ರತ್ವಗಳನ್ನು ಕೊಲ್ಲಸಾಧ್ಯವಿದೆ.
“ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಮೃದುವಾದ ಪ್ರತ್ಯುತ್ತರ ಕೊಡಬೇಕಾದರೆ ಆತ್ಮನಿಯಂತ್ರಣ ಅಗತ್ಯ, ಆದರೆ ಅಂತಹ ಒಂದು ರೀತಿಯು ಅನೇಕ ವೇಳೆ ಸಮಸ್ಯೆಗಳನ್ನು ಸುಗಮಮಾಡಿ, ಶಾಂತಿಯ ಸಂಬಂಧಗಳನ್ನು ಪ್ರವರ್ಧಿಸುತ್ತದೆ.
“ವ್ಯಾಜ್ಯದ ಆರಂಭವು ಒಡ್ಡು ಬಿರುಕು ಬಿಟ್ಟಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.” (ಜ್ಞಾನೋಕ್ತಿ 17:14) ನೀವು ರೇಗುವ ಮೊದಲು ಆ ಸ್ಫೋಟಕ ಸ್ಥಿತಿಯನ್ನು ಬಿಟ್ಟುಹೋಗುವುದು ವಿವೇಕಯುತವಾಗಿದೆ.
“ತೀವ್ರ ಅಸಮಾಧಾನ ತೋರಿಸಲು ಆತುರಪಡಬೇಡ; ಏಕೆಂದರೆ ತೀವ್ರ ಅಸಮಾಧಾನವು ಮೂರ್ಖರಿಂದಲೇ ಪೋಷಿಸಲ್ಪಡುತ್ತದೆ.” (ಪ್ರಸಂಗಿ 7:9, ದ ನ್ಯೂ ಇಂಗ್ಲಿಷ್ ಬೈಬಲ್) ಅನೇಕ ವೇಳೆ, ಭಾವಾವೇಶವು ಕ್ರಿಯೆಗೆ ಅಗ್ರಗಾಮಿಯಾಗಿದೆ. ಬೇಗ ತಪ್ಪರ್ಥಮಾಡಿಕೊಳ್ಳುವವನು ಮೂರ್ಖನು, ಏಕೆಂದರೆ ಅವನ ಆ ಮಾರ್ಗವು ಮುಂದಾಲೋಚನೆಯಿಲ್ಲದ ಮಾತುಗಳಿಗೆ ಅಥವಾ ಕ್ರಿಯೆಗಳಿಗೆ ನಡಿಸೀತು.
[ಪುಟ 36 ರಲ್ಲಿರುವ ಚಿತ್ರ]
ಮೊತ್ತಮೊದಲ ಕೂಟಶಿಬಿರದ ನಿವಾಸಿಗಳಲ್ಲಿ ಯೆಹೋವನ ಸಾಕ್ಷಿಗಳು ಸೇರಿದ್ದರು