ಅಧ್ಯಾಯ 5
ಸೃಷ್ಟಿಕಾರಕ ಶಕ್ತಿ—‘ಭೂಮಿ ಆಕಾಶವನ್ನು ನಿರ್ಮಿಸಿದವನು’
1, 2. ಸೂರ್ಯ ಯೆಹೋವನ ಸೃಷ್ಟಿಕಾರಕ ಶಕ್ತಿಯನ್ನು ಹೇಗೆ ಪ್ರದರ್ಶಿಸುತ್ತದೆ?
ಚಳಿಗಾಲದ ಒಂದು ರಾತ್ರಿಯಲ್ಲಿ ನೀವೆಂದಾದರೂ ಬೆಂಕಿಯ ಬಳಿ ಚಳಿಕಾಯಿಸುತ್ತಾ ಕುಳಿತದ್ದುಂಟೊ? ಆ ಸುಖೋಷ್ಣದಲ್ಲಿ ಆನಂದಿಸಲು ನೀವು ಸಾಕಷ್ಟು ದೂರದಲ್ಲಿದ್ದುಕೊಂಡೇ ಕೈಚಾಚಿಕೊಂಡಿದ್ದಿರಬಹುದು. ತೀರ ಹತ್ತಿರ ಬಂದಲ್ಲಿ ತಾಳಲಾರದಷ್ಟು ಬಿಸಿ. ತೀರ ದೂರ ಸರಿದಲ್ಲಿ ಚಳಿಗಾಳಿಯ ಕೊರೆತ ನಿಮ್ಮನ್ನು ಸೆಡೆಸಿದ್ದೀತು.
2 ಹಗಲು ಹೊತ್ತಿನಲ್ಲಿ ನಮ್ಮ ಚರ್ಮವನ್ನು ಬೆಚ್ಚಗಾಗಿರಿಸುವ ಒಂದು “ಬೆಂಕಿ” ಇದೆ. ಆ “ಬೆಂಕಿ”ಯು 15 ಕೋಟಿ ಕಿಲೊಮೀಟರ್ ದೂರದಲ್ಲಿ ಉರಿಯುತ್ತಾ ಇದೆ!a ಅಷ್ಟು ದೂರವಿದ್ದರೂ, ಸೂರ್ಯನ ತಾಪವು ನಿಮಗೆ ತಟ್ಟುತ್ತಿರುವಲ್ಲಿ, ಅದರ ಶಕ್ತಿಯೆಷ್ಟಿರಬೇಕು! ಆದರೂ ಭೂಮಿಯು ಆ ಭಾರೀ ಥರ್ಮೋನ್ಯೂಕ್ಲಿಯರ್ (ಉಷ್ಣಬೈಜಿಕ) ಕುಲುಮೆಯಿಂದ ಸರಿಯಾದ ದೂರದಲ್ಲಿ ಆವರ್ತಿಸುತ್ತದೆ. ಅದಕ್ಕೆ ಇನ್ನೂ ಹತ್ತಿರವಿರುತ್ತಿದ್ದಲ್ಲಿ ಭೂಮಿಯ ಜಲವೆಲ್ಲಾ ಹಬೆಯಾಗಿ ಹೋಗುತ್ತಿತ್ತು. ಮತ್ತು ಇನ್ನೂ ದೂರವಿರುತ್ತಿದ್ದಲ್ಲಿ ಅದರ ನೀರೆಲ್ಲಾ ಹಿಮಗಡ್ಡೆಯಾಗಿ ಹೋಗುತ್ತಿತ್ತು. ಇದರಲ್ಲಿ ಯಾವುದೇ ಒಂದು ಅತಿರೇಕಕ್ಕೆ ಹೋದರೂ ನಮ್ಮ ಗ್ರಹವು ಜೀವರಹಿತವಾಗುವುದು. ಸೂರ್ಯನ ಬೆಳಕು ಭೂಜೀವಿತಕ್ಕೆ ಅತ್ಯಾವಶ್ಯಕ ಮಾತ್ರವಲ್ಲದೆ ಅದು ಸ್ವಚ್ಛವೂ ಕಾರ್ಯದಕ್ಷವೂ ಆಗಿದೆ, ಮತ್ತು ಹರ್ಷಕರವೂ ಹೌದು.—ಪ್ರಸಂಗಿ 11:7.
ಯೆಹೋವನು “ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಿಕನು”
3. ಯಾವ ಪ್ರಾಮುಖ್ಯವಾದ ಸತ್ಯಕ್ಕೆ ಸೂರ್ಯ ಸಾಕ್ಷಿಕೊಡುತ್ತದೆ?
3 ಹೀಗಿದ್ದರೂ ತಮ್ಮ ಜೀವವೇ ಸೂರ್ಯನ ಮೇಲೆ ಹೊಂದಿಕೊಂಡಿರುವುದಾದರೂ ಹೆಚ್ಚಿನವರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಹೀಗೆ ಸೂರ್ಯವು ನಮಗೆ ಕಲಿಸಬಲ್ಲ ವಿಷಯಗಳು ಅವರ ಕೈತಪ್ಪಿಹೋಗುತ್ತವೆ. ಯೆಹೋವನ ಕುರಿತು ಬೈಬಲ್ ಅನ್ನುವುದು: “ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಕನು ನೀನು.” (ಕೀರ್ತನೆ 74:16) ಹೌದು, ಸೂರ್ಯವು ‘ಭೂಮಿ ಆಕಾಶವನ್ನು ನಿರ್ಮಿಸಿದವನಾದ’ ಯೆಹೋವನಿಗೆ ಗೌರವವನ್ನು ತರುತ್ತದೆ. (ಕೀರ್ತನೆ 19:1; 146:6) ಯೆಹೋವನ ಅಪಾರವಾದ ಸೃಷ್ಟಿಕಾರಕ ಶಕ್ತಿಯ ಕುರಿತು ನಮಗೆ ಕಲಿಸುವ ಅಸಂಖ್ಯಾತ ಆಕಾಶಸ್ಥಕಾಯಗಳಲ್ಲಿ ಅದು ಕೇವಲ ಒಂದು. ಇವುಗಳಲ್ಲಿ ಕೆಲವನ್ನು ನಾವು ಹೆಚ್ಚು ನಿಕಟವಾಗಿ ಪರೀಕ್ಷಿಸೋಣ ಮತ್ತು ಆಮೇಲೆ ಭೂಮಿಯ ಕಡೆಗೂ ಅದರ ಮೇಲಿರುವ ಸಮೃದ್ಧಜೀವರಾಶಿಯ ಕಡೆಗೂ ನಮ್ಮ ಗಮನವನ್ನು ಹರಿಸೋಣ.
“ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ”
4, 5. ಸೂರ್ಯವು ಎಷ್ಟು ಶಕ್ತಿಶಾಲಿ ಮತ್ತು ದೊಡ್ಡದ್ದಾಗಿದೆ, ಆದರೂ ಬೇರೆ ನಕ್ಷತ್ರಗಳೊಂದಿಗೆ ಹೋಲಿಸುವಾಗ ಅದು ಹೇಗಿದೆ?
4 ನಮ್ಮ ಸೂರ್ಯ ಒಂದು ನಕ್ಷತ್ರವೆಂಬುದು ನಿಮಗೆ ಗೊತ್ತಿದ್ದೀತು. ಅದು ನಾವು ರಾತ್ರಿಯಲ್ಲಿ ಕಾಣುವ ನಕ್ಷತ್ರಗಳಿಗಿಂತ ದೊಡ್ಡದಾಗಿರುವಂತೆ ತೋರುತ್ತದೆ. ಯಾಕಂದರೆ ಆ ನಕ್ಷತ್ರಗಳಿಗಿಂತ ಅದು ತೀರ ಸಮೀಪದಲ್ಲಿದೆ. ಆದರೆ ಅದಕ್ಕಿರುವ ಶಕ್ತಿಯೆಷ್ಟು? ಸೂರ್ಯಗರ್ಭದ ತಾಪಮಾನವು ಸುಮಾರು 1,50,00,000 ಡಿಗ್ರಿ ಸೆಲ್ಸಿಯಸ್ ಆಗಿದೆ. ಸೂರ್ಯಗರ್ಭದಿಂದ ಗುಂಡುಸೂಜಿಯ ತಲೆಯಷ್ಟು ಚಿಕ್ಕ ಭಾಗವನ್ನು ಇಲ್ಲಿ ಭೂಮಿಯಲ್ಲಿಡುವುದಾದರೆ, ಶಾಖದ ಆ ಪುಟ್ಟ ಮೂಲದಿಂದ ನೀವು 140 ಕಿಲೊಮೀಟರ್ ದೂರದಲ್ಲಿ ನಿಂತರೆ ಮಾತ್ರ ಸುರಕ್ಷಿತರಾಗಿರುವಿರಿ! ಸೂರ್ಯ ಪ್ರತಿಯೊಂದು ಸೆಕೆಂಡಿಗೆ, ನೂರಾರು ಮಿಲಿಯ ನ್ಯೂಕ್ಲಿಯರ್ ಬಾಂಬ್ಗಳ ಸ್ಫೋಟಕ್ಕೆ ಸರಿಸಮಾನವಾದ ಶಕ್ತಿಯನ್ನು ಹೊರಸೂಸುತ್ತದೆ.
5 ಸೂರ್ಯ ಎಷ್ಟು ಬೃಹದಾಕಾರದ್ದಾಗಿದೆಯೆಂದರೆ, ನಮ್ಮ ಭೂಗೃಹದಷ್ಟು ದೊಡ್ಡದಾದ 13,00,000ಕ್ಕಿಂತ ಹೆಚ್ಚು ಭೂಗೃಹಗಳನ್ನು ಅದರೊಳಗೆ ತುಂಬಿಸಬಹುದು. ಸೂರ್ಯ ಅಸಾಧಾರಣವಾಗಿ ದೊಡ್ಡದಾದ ಒಂದು ತಾರೆಯೊ? ಅಲ್ಲ, ಖಗೋಳಶಾಸ್ತ್ರಜ್ಞರು ಅದನ್ನು ಹಳದಿ ಕುಬ್ಜತಾರೆ ಎಂದು ಕರೆಯುತ್ತಾರೆ. “ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚುಕಡಿಮೆಯುಂಟಷ್ಟೆ” ಎಂದು ಅಪೊಸ್ತಲ ಪೌಲನು ಬರೆದಿದ್ದಾನೆ. (1 ಕೊರಿಂಥ 15:41) ಆ ಪ್ರೇರಿತ ಮಾತುಗಳು ಎಷ್ಟು ಸತ್ಯವೆಂಬುದು ಆಗ ಅವನಿಗೆ ತಿಳಿದಿದ್ದಿರಲಿಕ್ಕಿಲ್ಲ. ಅವುಗಳಲ್ಲಿ ಒಂದು ನಕ್ಷತ್ರವು ಎಷ್ಟು ದೊಡ್ಡದಾಗಿದೆಯೆಂದರೆ, ಅದನ್ನು ಸೂರ್ಯನಿರುವ ಅದೇ ಸ್ಥಳದಲ್ಲಿ ಇಟ್ಟರೆ, ನಮ್ಮ ಭೂಮಿಯು ಅದರ ಒಳಗಡೆ ಇರುವುದು. ಇನ್ನೊಂದು ದೈತ್ಯಾಕಾರದ ನಕ್ಷತ್ರವನ್ನು ಸೂರ್ಯನಿರುವ ಅದೇ ಸ್ಥಳದಲ್ಲಿ ಇಡುವಂತಿದ್ದರೆ, ಅದು ಶನಿಗ್ರಹದ ವರೆಗೆ ತಲಪಿಬಿಡುವುದು. ಮತ್ತು ಈ ಶನಿಗ್ರಹವಾದರೊ ಭೂಮಿಯಿಂದ ಎಷ್ಟು ದೂರವಿದೆಯೆಂದರೆ, ಒಂದು ಆಕಾಶನೌಕೆಯು, ಶಕ್ತಿಯುತ ಕೋವಿಯಿಂದ ಹಾರಿಸಲ್ಪಡುವ ಗುಂಡಿನ ವೇಗಕ್ಕಿಂತ 40 ಪಟ್ಟು ಹೆಚ್ಚು ವೇಗದಲ್ಲಿ ಪ್ರಯಾಣಮಾಡಿದರೂ ಅಲ್ಲಿಗೆ ತಲಪಲು ಅದಕ್ಕೆ ನಾಲ್ಕು ವರ್ಷಗಳು ತಗಲಿದವು!
6. ಮಾನವ ದೃಷ್ಟಿಕೋನದಿಂದ ನಕ್ಷತ್ರಗಳ ಸಂಖ್ಯೆಯು ಅಪಾರವಾಗಿರುತ್ತದೆಂದು ಬೈಬಲು ಹೇಗೆ ತೋರಿಸುತ್ತದೆ?
6 ನಕ್ಷತ್ರಗಳ ಗಾತ್ರಕ್ಕಿಂತಲೂ ಹೆಚ್ಚು ಬೆರಗುಗೊಳಿಸುವಂಥ ಸಂಗತಿಯು ಅವುಗಳ ಸಂಖ್ಯೆಯೇ. ನಕ್ಷತ್ರಗಳನ್ನು ಕಾರ್ಯತಃ ಎಣಿಸಲಾಗದೆಂದು, “ಸಮುದ್ರತೀರದ ಉಸುಬಿ”ನಂತೆಯೇ ಅವುಗಳನ್ನು ಲೆಕ್ಕಿಸುವುದು ಕಷ್ಟವೆಂದು ಬೈಬಲು ಹೇಳುತ್ತದೆ. (ಯೆರೆಮೀಯ 33:22) ನಮ್ಮ ಬರಿಗಣ್ಣಿನಿಂದ ನೋಡಸಾಧ್ಯವಾಗುವುದಕ್ಕಿಂತ ಎಷ್ಟೋ ಹೆಚ್ಚು ನಕ್ಷತ್ರಗಳು ಇವೆಯೆಂದು ಈ ಹೇಳಿಕೆಯು ಸೂಚಿಸುತ್ತದೆ. ಯೆರೆಮೀಯನಂಥ ಬೈಬಲ್ ಲೇಖಕನು ಸಹ, ರಾತ್ರಿಯಲ್ಲಿ ಆಕಾಶದೆಡೆಗೆ ಕಣ್ಣೆತ್ತಿ ದೃಶ್ಯ ತಾರೆಗಳನ್ನು ಲೆಕ್ಕಿಸಲು ಪ್ರಯತ್ನಿಸಿರುತ್ತಿದ್ದರೆ, ಬರೇ ಮೂರು ಸಾವಿರದಷ್ಟು ತಾರೆಗಳನ್ನು ಲೆಕ್ಕಿಸಿರುತ್ತಿದ್ದನು. ಯಾಕಂದರೆ ಒಂದು ಶುಭ್ರ ಆಕಾಶವುಳ್ಳ ರಾತ್ರಿಯಂದು ಒಬ್ಬನು ಬರಿಗಣ್ಣಿನಿಂದ ಕಾಣಶಕ್ತನಾಗುವುದು ಅಷ್ಟನ್ನೇ. ಈ ಸಂಖ್ಯೆಯನ್ನು ಒಂದು ಹಿಡಿ ಮರಳಿಗೆ ಹೋಲಿಸಬಹುದಾಗಿದೆ ಅಷ್ಟೆ. ವಾಸ್ತವದಲ್ಲಿಯಾದರೊ ನಕ್ಷತ್ರಗಳು ಸಮುದ್ರದ ಮರಳಿನಷ್ಟು ಅಸಂಖ್ಯಾತವಾಗಿವೆ.b ಅಂಥ ಸಂಖ್ಯೆಯನ್ನು ಯಾರು ತಾನೇ ಲೆಕ್ಕಿಸಬಲ್ಲರು?
7. (ಎ) ನಮ್ಮ ಕ್ಷೀರಪಥ ಗ್ಯಾಲಕ್ಸಿಯಲ್ಲಿ ಸುಮಾರು ಎಷ್ಟು ನಕ್ಷತ್ರಗಳು ಇವೆ, ಮತ್ತು ಆ ಸಂಖ್ಯೆಯು ಎಷ್ಟು ದೊಡ್ಡದು? (ಪಾದಟಿಪ್ಪಣಿ ನೋಡಿ.) (ಬಿ) ಗ್ಯಾಲಕ್ಸಿಗಳ ಸಂಖ್ಯೆಯನ್ನು ಲೆಕ್ಕಿಸುವುದು ಖಗೋಳಶಾಸ್ತ್ರಜ್ಞರಿಗೆ ಕಷ್ಟವಾಗಿರುವುದು ಗಮನಾರ್ಹವೇಕೆ, ಮತ್ತು ಇದು ಯೆಹೋವನ ಸೃಷ್ಟಿಕಾರಕ ಶಕ್ತಿಯ ಕುರಿತು ನಮಗೆ ಏನನ್ನು ಕಲಿಸುತ್ತದೆ?
7 ಯೆಶಾಯ 40:26 ಉತ್ತರಕೊಡುವುದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ.” ಕೀರ್ತನೆ 147:4 ಹೀಗೆ ಹೇಳುತ್ತದೆ: “ಆತನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿದ್ದಾನೆ.” ಆ “ನಕ್ಷತ್ರಗಳ ಸಂಖ್ಯೆ” ಎಷ್ಟು? ಇದೊಂದು ಸುಲಭವಾದ ಪ್ರಶ್ನೆಯಲ್ಲ. ನಮ್ಮ ಕ್ಷೀರಪಥ ಗ್ಯಾಲಕ್ಸಿಯೊಂದರಲ್ಲಿಯೇ ದಶಸಹಸ್ರ ಕೋಟಿಗಿಂತ ಹೆಚ್ಚು ತಾರೆಗಳಿವೆಯೆಂದು ಖಗೋಳಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.c ಆದರೆ ನಮ್ಮ ಈ ಗ್ಯಾಲಕ್ಸಿಯು, ಇರುವಂಥ ಅನೇಕಾನೇಕ ಗ್ಯಾಲಕ್ಸಿಗಳಲ್ಲಿ ಕೇವಲ ಒಂದಾಗಿದೆ ಮತ್ತು ಈ ಅನೇಕಾನೇಕ ಗ್ಯಾಲಕ್ಸಿಗಳಲ್ಲಿ ಇನ್ನೂ ಹೆಚ್ಚಿನ ನಕ್ಷತ್ರಗಳು ಇವೆ. ಈ ಗ್ಯಾಲಕ್ಸಿಗಳ ಸಂಖ್ಯೆಯಾದರೂ ಎಷ್ಟು? ಐದು ಸಹಸ್ರ ಕೋಟಿಯೆಂದು ಖಗೋಳಶಾಸ್ತ್ರಜ್ಞರ ಅಂದಾಜು. ಇತರರ ಲೆಕ್ಕಕ್ಕನುಸಾರ, 12,500 ಕೋಟಿಯಷ್ಟು ಗ್ಯಾಲಕ್ಸಿಗಳಿರಬಹುದು. ಹೀಗೆ ಗ್ಯಾಲಕ್ಸಿಗಳ ಸಂಖ್ಯೆಯನ್ನೇ ಪತ್ತೆಹಚ್ಚಲಾರದ ಮನುಷ್ಯನು, ಅವುಗಳಲ್ಲಿರುವ ಕೋಟ್ಯನುಕೋಟಿ ತಾರೆಗಳ ಒಟ್ಟು ಸಂಖ್ಯೆಯನ್ನು ಲೆಕ್ಕಿಸುವುದಂತೂ ಅಸಾಧ್ಯವೇ ಸರಿ. ಆದರೂ ಯೆಹೋವನಿಗೆ ಆ ಸಂಖ್ಯೆ ಗೊತ್ತಿದೆ. ಅಷ್ಟೇ ಅಲ್ಲ, ಆತನು ಪ್ರತಿಯೊಂದು ನಕ್ಷತ್ರಕ್ಕೆ ಅದರ ಸ್ವಂತ ಹೆಸರನ್ನೂ ಕೊಡುತ್ತಾನೆ!
8. (ಎ) ಕ್ಷೀರಪಥ ಗ್ಯಾಲಕ್ಸಿಯ ಗಾತ್ರವನ್ನು ನೀವು ಹೇಗೆ ವಿವರಿಸುವಿರಿ? (ಬಿ) ಆಕಾಶಸ್ಥಕಾಯಗಳ ಚಲನೆಗಳನ್ನು ಯೆಹೋವನು ಹೇಗೆ ಚಲಾಯಿಸುತ್ತಾನೆ?
8 ನಾವು ಗ್ಯಾಲಕ್ಸಿಗಳ ಗಾತ್ರವನ್ನು ಪರಿಗಣಿಸುವಾಗ, ನಮಗಾಗುವ ವಿಸ್ಮಯವು ಇನ್ನೂ ಹೆಚ್ಚಾಗುವುದು. ಕ್ಷೀರಪಥ ಗ್ಯಾಲಕ್ಸಿಯ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಹೋಗಲು ಸುಮಾರು 1,00,000 ಬೆಳಕಿನ ವರ್ಷಗಳು ತಗಲುವವೆಂದು ಅಂದಾಜುಮಾಡಲಾಗಿದೆ. ಪ್ರತಿ ಸೆಕೆಂಡಿಗೆ 3,00,000 ಕಿಲೊಮೀಟರುಗಳ ಪ್ರಚಂಡ ವೇಗದಲ್ಲಿ ಚಲಿಸುವ ಬೆಳಕಿನ ಕಿರಣವೊಂದನ್ನು ಚಿತ್ರಿಸಿಕೊಳ್ಳಿರಿ. ನಮ್ಮ ಗ್ಯಾಲಕ್ಸಿಯನ್ನು ಹಾಯುವುದಕ್ಕೆ ಆ ಕಿರಣಕ್ಕೆ 1,00,000 ವರ್ಷಗಳು ಬೇಕಾಗುವವು! ಕೆಲವು ಗ್ಯಾಲಕ್ಸಿಗಳಾದರೊ ನಮ್ಮ ಗ್ಯಾಲಕ್ಸಿಯ ಗಾತ್ರಕ್ಕಿಂತ ಎಷ್ಟೋ ಪಟ್ಟು ಹೆಚ್ಚು ದೊಡ್ಡದಾಗಿವೆ. ಈ ವಿಶಾಲವಾದ ಆಕಾಶಗಳನ್ನು ಯೆಹೋವನು ಒಂದು ಬರಿಯ ವಸ್ತ್ರದಂತೆ “ಹರಡಿ” ಇಡುತ್ತಾನೆಂದು ಬೈಬಲು ತಿಳಿಸುತ್ತದೆ. (ಕೀರ್ತನೆ 104:2) ಆತನು ಈ ಸೃಷ್ಟಿವಸ್ತುಗಳ ಚಲನೆಗಳನ್ನೂ ಸಂಘಟಿಸುತ್ತಾನೆ. ನಕ್ಷತ್ರಗಳ ಮಧ್ಯೆ ಇರುವ ಅತಿ ಚಿಕ್ಕ ಧೂಳಿನ ಕಣದಿಂದ ಹಿಡಿದು ಬೃಹದಾಕಾರದ ಗ್ಯಾಲಕ್ಸಿಯ ತನಕ ಎಲ್ಲವೂ ಯೆಹೋವನು ರೂಪಿಸಿದ ಮತ್ತು ಕಾರ್ಯರೂಪಕ್ಕೆ ಹಾಕಿರುವ ಭೌತ ನಿಯಮಗಳಿಗೆ ಅನುಸಾರವಾಗಿ ಚಲಿಸುತ್ತಿವೆ. (ಯೋಬ 38:31-33) ಹೀಗೆ, ವಿಜ್ಞಾನಿಗಳು ಈ ಆಕಾಶಸ್ಥಕಾಯಗಳ ನಿಕರವಾದ ಚಲನೆಗಳನ್ನು, ಬಹಳ ಪರ್ಯಾಲೋಚಿಸಿ ಸಂಯೋಜಿಸಲ್ಪಟ್ಟಿರುವ ಬ್ಯಾಲೆ ನೃತ್ಯದಲ್ಲಿನ ಹೆಜ್ಜೆಗಳಿಗೆ ಹೋಲಿಸುತ್ತಾರೆ! ಹೀಗಿರುವಾಗ, ಇವುಗಳನ್ನು ನಿರ್ಮಿಸಿದಾತನ ಕುರಿತು ತುಸು ಯೋಚಿಸಿರಿ. ಅಷ್ಟು ಅಪಾರವಾದ ಸೃಷ್ಟಿಕಾರಕ ಶಕ್ತಿಯಿರುವ ದೇವರಿಂದ ನೀವು ವಿಸ್ಮಿತರಾಗುವುದಿಲ್ಲವೊ?
“ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ”ದಾತನು
9, 10. ನಮ್ಮ ಸೌರವ್ಯೂಹ, ಗುರುಗ್ರಹ, ಭೂಮಿ, ಮತ್ತು ಚಂದ್ರ ಇರಿಸಲ್ಪಟ್ಟಿರುವ ಸ್ಥಾನದ ಸಂಬಂಧದಲ್ಲಿ ಯೆಹೋವನ ಶಕ್ತಿಯು ಹೇಗೆ ತೋರಿಬರುತ್ತದೆ?
9 ನಮ್ಮ ಬೀಡಾಗಿರುವ ಈ ಭೂಮಿಯಲ್ಲಿ ಯೆಹೋವನ ಸೃಷ್ಟಿಕಾರಕ ಶಕ್ತಿಯು ಪ್ರತ್ಯಕ್ಷವಾಗಿ ತೋರಿಬರುತ್ತದೆ. ಈ ವಿಶಾಲವಾದ ವಿಶ್ವದಲ್ಲಿ ಆತನು ಈ ಭೂಮಿಯನ್ನು ಅತಿ ಜೋಪಾನದಿಂದ ಸರಿಯಾದ ಸ್ಥಾನದಲ್ಲಿರಿಸಿದ್ದಾನೆ. ಅನೇಕ ಗ್ಯಾಲಕ್ಸಿಗಳು, ನಮ್ಮ ಭೂಮಿಯಂಥ ಜೀವಹೊತ್ತಿರುವ ಗ್ರಹಕ್ಕೆ ಪ್ರತಿಕೂಲವಾಗಿರುವಂಥ ವಾತಾವರಣವನ್ನು ಹೊಂದಿರಬಹುದೆಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ನಮ್ಮ ಕ್ಷೀರಪಥ ಗ್ಯಾಲಕ್ಸಿಯಲ್ಲಿ ಹೆಚ್ಚಿನ ಭಾಗವು ಜೀವವನ್ನು ಪೋಷಿಸುವುದಕ್ಕಾಗಿ ರಚಿಸಲ್ಪಟ್ಟಿರಲಿಲ್ಲವೆಂದು ವ್ಯಕ್ತವಾಗುತ್ತದೆ. ಈ ಗ್ಯಾಲಕ್ಸಿಯ ಕೇಂದ್ರಭಾಗವು ನಕ್ಷತ್ರಗಳಿಂದ ಕಿಕ್ಕಿರಿದಿದೆ. ಅಲ್ಲಿ ವಿಕಿರಣವು ಹೆಚ್ಚು ತೀವ್ರವಾಗಿರುತ್ತದೆ ಮತ್ತು ನಕ್ಷತ್ರಗಳು ಒಂದಕ್ಕೊಂದು ಅಡ್ಡಬಂದು ಡಿಕ್ಕಿಹೊಡೆಯುವಂಥಾಗುವ ಸಂದರ್ಭಗಳು ಸರ್ವಸಾಮಾನ್ಯ. ಮತ್ತು ಈ ಗ್ಯಾಲಕ್ಸಿಯ ಹೊರಅಂಚುಗಳಲ್ಲಿ ಜೀವಕ್ಕೆ ಅತ್ಯಾವಶ್ಯಕವಾದ ಘಟಕಗಳು ಇಲ್ಲ. ನಮ್ಮ ಸೌರವ್ಯೂಹವಾದರೊ ಅಂಥ ಅತಿರೇಕ ಸ್ಥಿತಿಗಳ ಮಧ್ಯದಲ್ಲಿದ್ದು ಆದರ್ಶ ಪರಿಸ್ಥಿತಿಗಳಲ್ಲಿ ನೆಲೆಸಿರುತ್ತದೆ.
10 ಬಹಳ ದೂರದಲ್ಲಿರುವ ಆದರೆ ಬೃಹದಾಕಾರದ್ದಾಗಿರುವ ರಕ್ಷಕ ಗ್ರಹವಾದ ಗುರುಗ್ರಹದಿಂದ ಭೂಮಿಗೆ ಪ್ರಯೋಜನವಾಗುತ್ತದೆ. ಭೂಮಿಯ ಗಾತ್ರಕ್ಕಿಂತ ಸಾವಿರಾರು ಪಟ್ಟು ಹೆಚ್ಚು ದೊಡ್ಡದಿರುವ ಗುರುಗ್ರಹವು ಪ್ರಚಂಡವಾದ ಗುರುತ್ವಾಕರ್ಷಣ ಪ್ರಭಾವವನ್ನು ಪ್ರಯೋಗಿಸುತ್ತದೆ. ಪರಿಣಾಮವೇನು? ಬಾಹ್ಯಾಕಾಶದಲ್ಲೆಲ್ಲ ವೇಗದಿಂದ ಧಾವಿಸುತ್ತಿರುವ ಭಿನ್ನ ವಸ್ತುಗಳನ್ನೆಲ್ಲ ಅದು ಹೀರಿಕೊಳ್ಳುತ್ತದೆ ಅಥವಾ ಪಥತಪ್ಪಿಸುತ್ತದೆ. ಗುರುಗ್ರಹವು ಇಲ್ಲದಿರುತ್ತಿದ್ದರೆ, ಭೂಮಿಗೆ ಬಡಿಯುವಂಥ ಬೃಹದ್ಗಾತ್ರದ ಕಾಯಗಳ ಸುರಿಮಳೆಯು, ಸದ್ಯಕ್ಕಿಂತ 10,000 ಪಟ್ಟು ಹೆಚ್ಚು ಬಿರುಸಾಗಿರುತ್ತಿತ್ತು. ನಮ್ಮ ಈ ಬೀಡಿನ ಸಮೀಪದಲ್ಲೇ, ಒಂದು ಅಸಾಧಾರಣ ಉಪಗ್ರಹವಾದ ಚಂದ್ರನಿಂದಲೂ ನಮ್ಮ ಭೂಮಿ ಪ್ರಯೋಜನ ಹೊಂದುತ್ತದೆ. ಚಂದ್ರ ಕೇವಲ ಒಂದು ಸುಂದರ ವಸ್ತು ಮತ್ತು “ಇರುಳಿನ ಬೆಳಕು” ಆಗಿರುವುದಕ್ಕಿಂತಲೂ ಹೆಚ್ಚಾಗಿ ಭೂಮಿಯನ್ನು ಸದಾ ಸ್ಥಿರವಾಗಿ ಒಂದು ಬಾಗಿನಲ್ಲಿ ನಿಲ್ಲಿಸಲು ಸಹಾಯಮಾಡುತ್ತದೆ. ಆ ಬಾಗು, ಭೂಮಿಗೆ ಅದರ ಸ್ಥಿರವಾದ, ಮುಂದಾಗಿಯೇ ತಿಳಿಸಬಹುದಾದ ಋತುಗಳನ್ನು ಕೊಡುತ್ತದೆ, ಮತ್ತು ಈ ಋತುಗಳು ಭೂಮಿಯ ಮೇಲಿನ ಜೀವಕ್ಕೆ ಮಹತ್ವಪೂರ್ಣವಾದ ಇನ್ನೊಂದು ವರವಾಗಿವೆ.
11. ಭೂಮಿಯ ವಾಯುಮಂಡಲವು ರಕ್ಷಣಾತ್ಮಕ ಕವಚದೋಪಾದಿ ರಚಿಸಲ್ಪಟ್ಟಿರುವುದು ಹೇಗೆ?
11 ಭೂಮಿಯ ರಚನೆಯ ಪ್ರತಿಯೊಂದು ವೈಶಿಷ್ಟ್ಯದಲ್ಲೂ ಯೆಹೋವನ ಸೃಷ್ಟಿಕಾರಕ ಶಕ್ತಿಯು ತೋರಿಬರುತ್ತದೆ. ರಕ್ಷಣಾತ್ಮಕ ಕವಚದಂತಿರುವ ನಮ್ಮ ವಾಯುಮಂಡಲವನ್ನು ಪರಿಗಣಿಸಿರಿ. ಸೂರ್ಯನು ಆರೋಗ್ಯಕರ ಕಿರಣಗಳನ್ನಲ್ಲದೆ ಮಾರಕ ಕಿರಣಗಳನ್ನೂ ಹೊರಸೂಸುತ್ತದೆ. ಆ ಪ್ರಾಣಾಂತಕ ಕಿರಣಗಳು ಭೂಮಿಯ ವಾಯುಮಂಡಲದ ಮೇಲ್ಭಾಗವನ್ನು ಹೊಡೆಯುವಾಗ, ಅವು ಸಾಮಾನ್ಯವಾದ ಆಮ್ಲಜನಕವನ್ನು ಓಸೋನ್ ಅನಿಲವಾಗಿ ಮಾರ್ಪಡಿಸುತ್ತವೆ. ಹೀಗೆ ಉಂಟಾಗುವ ಓಸೋನ್ ಪದರವು ಆ ಕಿರಣಗಳಲ್ಲಿ ಹೆಚ್ಚಿನವನ್ನು ಹೀರಿಕೊಳ್ಳುತ್ತದೆ. ಕಾರ್ಯತಃ ನಮ್ಮ ಗ್ರಹವು ಅದರ ಸ್ವಂತ ರಕ್ಷಣಾತ್ಮಕ ಕವಚದೊಂದಿಗೆ ರಚಿಸಲ್ಪಟ್ಟಿರುತ್ತದೆ!
12. ನಮ್ಮ ವಾಯುಮಂಡಲದ ಜಲಚಕ್ರವು ಯೆಹೋವನ ಸೃಷ್ಟಿಕಾರಕ ಶಕ್ತಿಯನ್ನು ಹೇಗೆ ಚಿತ್ರಿಸುತ್ತದೆ?
12 ಇದು ನಮ್ಮ ವಾಯುಮಂಡಲದ ಕೇವಲ ಒಂದು ವೈಶಿಷ್ಟ್ಯ. ಈ ವಾಯುಮಂಡಲವು, ಭೂಮಿಯ ಮೇಲೆ ಅಥವಾ ಹೊರಮೈಯ ಸಮೀಪದಲ್ಲಿ ಜೀವಿಸುತ್ತಿರುವ ಜೀವಿಗಳನ್ನು ಪೋಷಿಸಲಿಕ್ಕಾಗಿ ತಕ್ಕದಾದ ಅನಿಲಗಳ ಜಟಿಲವಾದ ಮಿಶ್ರಣವಾಗಿದೆ. ಈ ವಾಯುಮಂಡಲದ ಅದ್ಭುತಗಳಲ್ಲಿ ಜಲಚಕ್ರವು ಒಂದು. ಪ್ರತಿವರ್ಷ ಸೂರ್ಯ, ಬಾಷ್ಪೀಕರಣದ ಮೂಲಕ ಭೂಮಿಯ ಸಮುದ್ರಸಾಗರಗಳಿಂದ, 4,00,000 ಘನ ಕಿಲೊಮೀಟರ್ಗಳಿಗಿಂತಲೂ ಹೆಚ್ಚು ನೀರನ್ನು ಮೇಲೆತ್ತುತ್ತದೆ. ಆ ನೀರು ಮೋಡಗಳಾಗಿ ಮಾರ್ಪಡುತ್ತದೆ ಮತ್ತು ವಾಯುಮಂಡಲದ ಗಾಳಿಗಳಿಂದಾಗಿ ಆ ಮೋಡಗಳು ದೂರ ದೂರ ಚದರಿಸಲ್ಪಡುತ್ತವೆ. ಈಗ ಸೋಸಿ ಶುದ್ಧೀಕರಣ ಹೊಂದಿರುವ ನೀರು ಮಳೆ, ಹಿಮ, ಮತ್ತು ಮಂಜಾಗಿ ಭೂಮಿಗೆ ಬಿದ್ದು ನೀರಿನ ಸರಬರಾಯಿಯನ್ನು ಮತ್ತೆ ಭರ್ತಿಮಾಡುತ್ತದೆ. ಇದು ಪ್ರಸಂಗಿ 1:7 ಹೇಳುವಂತೆಯೆ ಇದೆ: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” ಅಂಥ ಒಂದು ಜಲಚಕ್ರವನ್ನು ದೇವರಾದ ಯೆಹೋವನು ಮಾತ್ರ ನಿರ್ಮಿಸಶಕ್ತನು.
13. ಭೂಮಿಯ ಸಸ್ಯಗಳಲ್ಲಿ ಮತ್ತು ಮಣ್ಣಿನಲ್ಲಿ ನಿರ್ಮಾಣಿಕನ ಶಕ್ತಿಯು ನಮಗೆ ಹೇಗೆ ತೋರಿಬರುತ್ತದೆ?
13 ನಾವು ಎಲ್ಲಿ ಜೀವರಾಶಿಯನ್ನು ನೋಡುತ್ತೇವೊ ಅಲ್ಲಿ ನಿರ್ಮಾಣಿಕನ ಶಕ್ತಿಯ ರುಜುವಾತನ್ನು ಕಾಣುತ್ತೇವೆ. ನಾವು ಉಸಿರಾಡುವ ಹೆಚ್ಚಿನ ಆಮ್ಲಜನಕವನ್ನೊದಗಿಸುವಂಥ, 30 ಮಹಡಿಯ ಕಟ್ಟಡಕ್ಕಿಂತಲೂ ಹೆಚ್ಚು ಎತ್ತರ ಬೆಳೆಯುವ ಮಹಾ ಮಂಜತ್ತಿ ವೃಕ್ಷಗಳಿಂದ ಹಿಡಿದು ಸಾಗರಗಳಲ್ಲಿ ಸಮೃದ್ಧವಾಗಿ ಬೆಳೆಯುವ ಸೂಕ್ಷ್ಮಾತಿಸೂಕ್ಷ್ಮ ಸಸ್ಯಜೀವಿಗಳ ತನಕ, ಯೆಹೋವನ ಸೃಷ್ಟಿಕಾರಕ ಶಕ್ತಿಯು ಪ್ರತ್ಯಕ್ಷವಾಗಿ ತೋರಿಬರುತ್ತದೆ. ಮಣ್ಣು ತಾನೇ ಅನೇಕ ತರದ ಜೀವಿಗಳಿಂದ, ಅಂದರೆ ಸಸ್ಯಗಳ ಬೆಳವಣಿಗೆಗಾಗಿ ಜಟಿಲ ರೀತಿಯಲ್ಲಿ ಒಂದುಗೂಡಿ ಕೆಲಸಮಾಡುವ ಹುಳುಗಳು, ಅಣಬೆ, ಮತ್ತು ಜೀವಾಣುಗಳಿಂದ ತುಂಬಿಕೊಂಡಿದೆ.
14. ಅತಿ ಚಿಕ್ಕದಾದ ಪರಮಾಣುವಿನಲ್ಲಿಯೂ ಯಾವ ಸುಪ್ತಶಕ್ತಿಯು ಅಡಗಿದೆ?
14 ಯೆಹೋವನು “ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ”ದ್ದಾನೆ ಎಂಬುದಕ್ಕೆ ಯಾವ ಸಂಶಯವೂ ಇರುವುದಿಲ್ಲ. (ಯೆರೆಮೀಯ 10:12) ದೇವರ ಅತ್ಯಂತ ಚಿಕ್ಕದಾದ ಸೃಷ್ಟಿಯಲ್ಲಿಯೂ ಆತನ ಶಕ್ತಿಯು ತೋರಿಬರುತ್ತದೆ. ದೃಷ್ಟಾಂತಕ್ಕಾಗಿ, ಹತ್ತು ಲಕ್ಷ ಪರಮಾಣುಗಳನ್ನು ಒತ್ತೊತ್ತಾಗಿ ಇಟ್ಟರೂ ಅವು ಮಾನವನ ಒಂದು ಕೇಶದಷ್ಟೂ ದಪ್ಪವಾಗಿರಲಾರವು. ಮತ್ತು ಒಂದು ಪರಮಾಣುವನ್ನು 14 ಮಹಡಿಯ ಕಟ್ಟಡದಷ್ಟು ಎತ್ತರವಾಗಿ ಹಿಗ್ಗಿಸಿದರೂ, ಅದರ ನಾಭಿಯು ಏಳನೆಯ ಮಹಡಿಯಲ್ಲಿ ಬರಿಯ ಒಂದೇ ಒಂದು ಉಪ್ಪಿನ ಕಣದಂತಿರುವುದು. ಆದರೂ ಈ ಸೂಕ್ಷ್ಮಾತಿಸೂಕ್ಷ್ಮ ನಾಭಿಯೇ, ನ್ಯೂಕ್ಲಿಯರ್ ಸ್ಫೋಟದಲ್ಲಿ ಬಿಡುಗಡೆಯಾಗುವ ಭಯಾನಕ ಶಕ್ತಿಯ ಮೂಲವಾಗಿರುತ್ತದೆ!
“ಶ್ವಾಸವಿರುವದೆಲ್ಲವೂ”
15. ವಿವಿಧ ವನ್ಯ ಮೃಗಗಳ ಬಗ್ಗೆ ಚರ್ಚಿಸುವ ಮೂಲಕ ಯೆಹೋವನು ಯೋಬನಿಗೆ ಯಾವ ಪಾಠವನ್ನು ಕಲಿಸಿದನು?
15 ಯೆಹೋವನ ಸೃಷ್ಟಿಕಾರಕ ಶಕ್ತಿಯ ಇನ್ನೊಂದು ಸ್ಪಷ್ಟವಾದ ರುಜುವಾತು, ಭೂಮಿಯಲ್ಲಿ ಸಮೃದ್ಧವಾಗಿರುವ ಪ್ರಾಣಿ ಜೀವಿಗಳೇ. 148ನೆಯ ಕೀರ್ತನೆಯು, ಯೆಹೋವನನ್ನು ಕೊಂಡಾಡುವ ಇಂಥ ಅನೇಕ ಪ್ರಾಣಿಜೀವಿಗಳ ಪಟ್ಟಿಯನ್ನು ಮಾಡಿದೆ; ಮತ್ತು 10ನೆಯ ವಚನವು “ಎಲ್ಲಾ ಮೃಗಪಶು”ಗಳನ್ನೂ ಅದರಲ್ಲಿ ಒಳಗೂಡಿಸುತ್ತದೆ. ಮನುಷ್ಯನು ಏಕೆ ನಿರ್ಮಾಣಿಕನ ಭಯಭಕ್ತಿಯಿಂದ ಇರಬೇಕೆಂಬುದನ್ನು ತೋರಿಸಲು ಯೆಹೋವನು ಒಮ್ಮೆ ಯೋಬನಿಗೆ ಸಿಂಹ, ಪಟ್ಟೆಕುದುರೆ (ಜೀಬ್ರಾ), ಕಾಡುಕೋಣ, ಬೆಹೇಮೋತ್ (ಅಥವಾ ನೀರಾನೆ), ಮತ್ತು ಲಿವ್ಯಾತಾನ್ (ಪ್ರಾಯಶಃ ಮೊಸಳೆ)ನಂಥ ಪ್ರಾಣಿಗಳ ಕುರಿತು ಮಾತನಾಡಿದನು. ಕಾರಣ? ಈ ಬಲಾಢ್ಯ, ಭಯಂಕರ ಹಾಗೂ ಪಳಗಿಸಲಾಗದ ವನ್ಯಜೀವಿಗಳ ಎದುರಲ್ಲೇ ಮನುಷ್ಯನು ಭಯಚಕಿತನಾಗಿ ನಿಲ್ಲುವಾಗ, ಅವುಗಳ ನಿರ್ಮಾಣಿಕನ ಎದುರಲ್ಲಾದರೊ ಅವನ ಭಯಭಕ್ತಿ ಇನ್ನೆಷ್ಟು ಹೆಚ್ಚಿರಬೇಕು?—ಯೋಬ, ಅಧ್ಯಾಯಗಳು 38-41.
16. ಯೆಹೋವನು ಸೃಷ್ಟಿಸಿರುವ ಕೆಲವು ಪಕ್ಷಿಗಳ ಕುರಿತು ಯಾವ ವಿಷಯವು ನಿಮ್ಮನ್ನು ಪ್ರಭಾವಿಸುತ್ತದೆ?
16 ಕೀರ್ತನೆ 148:10 “ಪಕ್ಷಿ”ಗಳ ಕುರಿತೂ ತಿಳಿಸುತ್ತದೆ. ಎಷ್ಟೊಂದು ವಿಧವಿಧವಾದ ಪಕ್ಷಿಗಳಿವೆಯೆಂದು ಯೋಚಿಸಿರಿ! “ಕುದುರೆಯನ್ನೂ ಸವಾರನನ್ನೂ ಹೀಯಾಳಿಸುವ” ಉಷ್ಟ್ರಪಕ್ಷಿಯ ಕುರಿತು ಯೆಹೋವನು ಯೋಬನಿಗೆ ತಿಳಿಸಿದನು. ಸುಮಾರು ಎಂಟು ಅಡಿ ಎತ್ತರವಿರುವ ಈ ಪಕ್ಷಿಗೆ ಹಾರಲಾಗದಿದ್ದರೂ ಅದು ತಾಸಿಗೆ 65 ಕಿಲೊಮೀಟರ್ ವೇಗದಲ್ಲಿ ಓಡಬಲ್ಲದು; ಒಂದೇ ದಾಪುಗಾಲಿಗೆ 15 ಅಡಿಯಷ್ಟು ದೂರ ಹೋಗಬಲ್ಲದು! (ಯೋಬ 39:13, 18) ಇನ್ನೊಂದು ಕಡೆ, ಕಡಲುಕೋಳಿ (ಆ್ಯಲ್ಬಟ್ರಾಸ್)ಯಾದರೊ ತನ್ನ ಜೀವಿತದ ಹೆಚ್ಚಿನ ಭಾಗವನ್ನು ಕಡಲುಗಳ ಮೇಲಿನ ಆಕಾಶದಲ್ಲಿ ಹಾರುತ್ತಾ ಕಳೆಯುತ್ತದೆ. ಸ್ವಾಭಾವಿಕವಾಗಿ ಗಾಳಿಯಲ್ಲಿ ತೇಲಿಕೊಂಡು ಹೋಗುವ ಈ ಪಕ್ಷಿಯ ರೆಕ್ಕೆಯ ಹರವು 11 ಅಡಿಯಷ್ಟಿದೆ! ತನ್ನ ರೆಕ್ಕೆಗಳನ್ನು ಬಡಿಯದೆಯೆ, ಎಡೆಬಿಡದೆ ಅನೇಕ ತಾಸುಗಳ ತನಕ ಅದು ಬಹಳ ಎತ್ತರದಲ್ಲಿ ಹಾರಿಕೊಂಡಿರಬಲ್ಲದು. ಈ ಪಕ್ಷಿಗೆ ಹೋಲಿಕೆಯಲ್ಲಿ, ಕೇವಲ ಎರಡೇ ಇಂಚು ಉದ್ದದ ಝೇಂಕಾರದ ಹಕ್ಕಿ (ಹಮಿಂಗ್ಬರ್ಡ್) ಭೂಮಿಯಲ್ಲಿರುವ ಅತಿ ಚಿಕ್ಕ ಹಕ್ಕಿ. ಇದು ತನ್ನ ರೆಕ್ಕೆಯನ್ನು ಒಂದು ಸೆಕೆಂಡಿನಲ್ಲಿ 80 ಸಲ ಬಡಿಯಬಹುದು! ಈ ಝೇಂಕಾರದ ಹಕ್ಕಿಗಳು ರೆಕ್ಕೆಗಳಿರುವ ಪುಟ್ಟ ರತ್ನಮಣಿಗಳ ಹಾಗೆ ಥಳಥಳಿಸುತ್ತಾ, ಹೆಲಿಕಾಪ್ಟರುಗಳ ಹಾಗೆ ಒಂದೇ ಸ್ಥಳದಲ್ಲಿ ಗಾಳಿಯಲ್ಲಿ ತೂಗಾಡುತ್ತಿರುತ್ತಾ, ಹಿಮ್ಮುಖವಾಗಿಯೂ ಹಾರಬಲ್ಲವು.
17. ನೀಲ ತಿಮಿಂಗಿಲದ ಗಾತ್ರವೆಷ್ಟು, ಮತ್ತು ಯೆಹೋವನ ಪ್ರಾಣಿಜೀವಿಗಳ ಸೃಷ್ಟಿಯ ಬಗ್ಗೆ ಪರ್ಯಾಲೋಚಿಸಿದ ಬಳಿಕ ನಾವು ಯಾವ ಸಹಜವಾದ ತೀರ್ಮಾನಕ್ಕೆ ಬರಬೇಕು?
17 “ಮಹಾ ಸಮುದ್ರಪ್ರಾಣಿ”ಗಳು ಸಹ ಯೆಹೋವನನ್ನು ಕೊಂಡಾಡುತ್ತವೆಂದು ಕೀರ್ತನೆ 148:7 (ಪರಿಶುದ್ಧ ಬೈಬಲ್) ತಿಳಿಸುತ್ತದೆ. ಈ ಭೂಗ್ರಹದಲ್ಲಿ ಜೀವಿಸಿರುವ ಪ್ರಾಣಿಗಳಲ್ಲೇ ಅತ್ಯಂತ ದೊಡ್ಡದೆಂದು ಎಣಿಸಲ್ಪಡುವ ನೀಲ ತಿಮಿಂಗಿಲವನ್ನು ಪರಿಗಣಿಸಿರಿ. ಈ ದೈತ್ಯಾಕಾರದ “ಸಮುದ್ರಪ್ರಾಣಿ”ಯು ಸಾಗರದಾಳದಲ್ಲಿ ಜೀವಿಸುತ್ತಾ, 100 ಅಡಿ ಅಥವಾ ಅದಕ್ಕಿಂತಲೂ ಹೆಚ್ಚು ಉದ್ದ ಬೆಳೆಯುತ್ತದೆ. ಅದರ ತೂಕವು, 30 ವಯಸ್ಕ ಆನೆಗಳ ಹಿಂಡಿನ ತೂಕದಷ್ಟಿರಬಹುದು. ಕೇವಲ ಅದರ ನಾಲಗೆಯ ತೂಕವೇ ಒಂದು ಆನೆಯ ತೂಕದಷ್ಟಿದೆ. ಅದರ ಹೃದಯದ ಗಾತ್ರವು ಒಂದು ಚಿಕ್ಕ ಮೋಟಾರ್ ಕಾರಿನಷ್ಟಿದೆ. ಈ ಬಹುದೊಡ್ಡ ಅಂಗವು ನಿಮಿಷಕ್ಕೆ 9 ಸಲ ಮಾತ್ರ ಬಡಿಯುತ್ತದೆ. ಇದಕ್ಕೆ ತುಲನೆಯಲ್ಲಿ ಝೇಂಕಾರ ಹಕ್ಕಿಯ ಹೃದಯದ ಬಡಿತವಾದರೊ ನಿಮಿಷಕ್ಕೆ 1,200 ಬಾರಿ ಆಗಿರುತ್ತದೆ. ನೀಲ ತಿಮಿಂಗಲದ ರಕ್ತಧಮನಿಗಳಲ್ಲಿ ಕಡಿಮೆಪಕ್ಷ ಒಂದು ಎಷ್ಟು ದೊಡ್ಡದಿದೆಯೆಂದರೆ, ಒಂದು ಮಗುವು ಅಂಬೆಗಾಲಿಕ್ಕುತ್ತಾ ಸುಲಭವಾಗಿ ಅದರೊಳಗೆ ಹೋಗಬಹುದು. ಕೀರ್ತನೆ ಪುಸ್ತಕದ ಕೊನೆಯಲ್ಲಿ ಕೊಡಲ್ಪಟ್ಟ ಈ ಚರಣವನ್ನು ಪ್ರತಿಧ್ವನಿಸಲು ನಿಶ್ಚಯವಾಗಿಯೂ ನಮ್ಮ ಹೃದಯವು ನಮ್ಮನ್ನು ಪ್ರೇರಿಸುವುದು: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ.”—ಕೀರ್ತನೆ 150:6.
ಯೆಹೋವನ ಸೃಷ್ಟಿಕಾರಕ ಶಕ್ತಿಯಿಂದ ಕಲಿಯುವುದು
18, 19. ಈ ಭೂಮಿಯಲ್ಲಿ ಯೆಹೋವನು ಮಾಡಿರುವ ಜೀವಜಂತುಗಳು ಎಷ್ಟು ವೈವಿಧ್ಯಭರಿತವಾಗಿವೆ, ಮತ್ತು ಆತನ ಪರಮಾಧಿಕಾರದ ಕುರಿತು ಸೃಷ್ಟಿಯು ನಮಗೇನನ್ನು ಕಲಿಸುತ್ತದೆ?
18 ಯೆಹೋವನ ಸೃಷ್ಟಿಕಾರಕ ಶಕ್ತಿಯ ಉಪಯೋಗದಿಂದ ನಾವೇನನ್ನು ಕಲಿಯುತ್ತೇವೆ? ಆತನ ಸೃಷ್ಟಿಯಲ್ಲಿರುವ ವೈವಿಧ್ಯವು ನಮ್ಮನ್ನು ಭಯಚಕಿತರನ್ನಾಗಿ ಮಾಡುತ್ತದೆ. ಕೀರ್ತನೆಗಾರನೊಬ್ಬನು ಉದ್ಗರಿಸಿದ್ದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. . . . ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” (ಕೀರ್ತನೆ 104:24) ಇದೆಷ್ಟು ಸತ್ಯ! ಭೂಮಿಯ ಮೇಲೆ 10 ಲಕ್ಷಕ್ಕಿಂತಲೂ ಹೆಚ್ಚು ಜೀವಜಾತಿಗಳನ್ನು ಜೀವವಿಜ್ಞಾನಿಗಳು ಗುರುತಿಸಿದ್ದಾರೆ; ಆದರೂ ಎರಡು, ಮೂರು ಇಲ್ಲವೆ ಇನ್ನೂ ಹೆಚ್ಚು ಕೋಟಿಗಳಷ್ಟು ಜೀವಜಾತಿಗಳಿರಬಹುದೊ ಎಂಬ ವಿಷಯದಲ್ಲಿ ವಿವಿಧ ಅಭಿಪ್ರಾಯಗಳಿವೆ. ಒಬ್ಬ ಮಾನವ ಕಲಾಕಾರನ ರಚನಾತ್ಮಕ ಶಕ್ತಿಯು ಕೆಲವೊಮ್ಮೆ ಬತ್ತಿಹೋಗಿರುವಂತೆ ಕಂಡುಬರಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯೆಹೋವನ ಸೃಜನಶೀಲತೆಯು, ಅಂದರೆ ಹೊಸತಾದ ಮತ್ತು ವಿವಿಧ ವಸ್ತುಗಳನ್ನು ನಿರ್ಮಿಸುವ ಆತನ ಶಕ್ತಿಯು ಅಕ್ಷಯವೆಂಬುದು ಸುವ್ಯಕ್ತ.
19 ಯೆಹೋವನ ಸೃಷ್ಟಿಕಾರಕ ಶಕ್ತಿಯ ಬಳಕೆಯು ಆತನ ಪರಮಾಧಿಕಾರದ ಕುರಿತು ನಮಗೆ ಕಲಿಸುತ್ತದೆ. “ಸೃಷ್ಟಿಕರ್ತನು” ಎಂಬ ಶಬ್ದವು ತಾನೇ ಆತನನ್ನು ವಿಶ್ವದಲ್ಲಿರುವ ಬೇರೆಲ್ಲಾ ವಸ್ತುಗಳಿಂದ ಪ್ರತ್ಯೇಕಿಸುತ್ತದೆ, ಯಾಕಂದರೆ ಅವೆಲ್ಲವು ಆತನ “ಸೃಷ್ಟಿ” ಆಗಿವೆ. ಸೃಷ್ಟಿಕ್ರಿಯೆಯ ಸಮಯದಲ್ಲಿ “ನಿಪುಣ ಕೆಲಸಗಾರ”ನಾಗಿ ಕೆಲಸಮಾಡಿದ ಯೆಹೋವನ ಏಕಜಾತ ಪುತ್ರನು ಸಹ ಸೃಷ್ಟಿಕರ್ತನೆಂದಾಗಲಿ ಉಪಸೃಷ್ಟಿಕರ್ತನೆಂದಾಗಲಿ ಬೈಬಲಿನಲ್ಲೆಲ್ಲೂ ಕರೆಯಲ್ಪಟ್ಟಿರುವುದಿಲ್ಲ. (ಜ್ಞಾನೋಕ್ತಿ 8:30, ಪರಿಶುದ್ಧ ಬೈಬಲ್; ಮತ್ತಾಯ 19:4) ಬದಲಿಗೆ ಅವನನ್ನು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು” ಎಂದು ಕರೆಯಲಾಗಿದೆ. (ಓರೆ ಅಕ್ಷರಗಳು ನಮ್ಮವು.) (ಕೊಲೊಸ್ಸೆ 1:15) ಸೃಷ್ಟಿಕರ್ತನೋಪಾದಿ ಯೆಹೋವನಿಗಿರುವ ಸ್ಥಾನವು, ವಿಶ್ವವೆಲ್ಲಾದರ ಮೇಲೆ ಸಂಪೂರ್ಣ ಪರಮಾಧಿಕಾರದ ಶಕ್ತಿಯನ್ನು ಪ್ರಯೋಗಿಸುವ ಸಹಜವಾದ ಹಕ್ಕನ್ನು ಆತನಿಗೆ ಕೊಡುತ್ತದೆ.—ರೋಮಾಪುರ 1:20; ಪ್ರಕಟನೆ 4:11.
20. ತನ್ನ ಭೂಸೃಷ್ಟಿಕಾರ್ಯವನ್ನು ಮುಗಿಸಿದಂದಿನಿಂದ ಯಾವ ಅರ್ಥದಲ್ಲಿ ಯೆಹೋವನು ವಿಶ್ರಮಿಸಿದ್ದಾನೆ?
20 ಯೆಹೋವನು ತನ್ನ ಸೃಷ್ಟಿಕಾರಕ ಶಕ್ತಿಯನ್ನು ಪ್ರಯೋಗಿಸುವುದನ್ನು ಈಗ ನಿಲ್ಲಿಸಿರುತ್ತಾನೊ? ಆರನೆಯ ಸೃಷ್ಟಿಕಾರಕ ದಿನದಲ್ಲಿ ಯೆಹೋವನು ತನ್ನ ಸೃಷ್ಟಿಕಾರಕ ಕೆಲಸವನ್ನು ನಿಲ್ಲಿಸಿ, “ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು” ಎಂದು ಬೈಬಲು ಹೇಳುತ್ತದೆ ನಿಜ. (ಆದಿಕಾಂಡ 2:2) ಈ ಏಳನೆಯ “ದಿನ”ವು ಸಾವಿರಾರು ವರ್ಷಗಳಷ್ಟು ದೀರ್ಘವಾಗಿದೆ ಎಂಬುದಾಗಿ ಅಪೊಸ್ತಲ ಪೌಲನು ಸೂಚಿಸಿದ್ದಾನೆ, ಯಾಕಂದರೆ ಅವನ ದಿನಗಳಲ್ಲಿ ಅದು ಇನ್ನೂ ಮುಂದುವರಿಯುತ್ತಲಿತ್ತು. (ಇಬ್ರಿಯ 4:3-6) ಆದರೆ ದೇವರು “ವಿಶ್ರಮಿಸಿಕೊಂಡನು” ಎಂದರೆ ಯೆಹೋವನು ಎಲ್ಲಾ ಕೆಲಸಮಾಡುವುದನ್ನು ನಿಲ್ಲಿಸಿದ್ದಾನೆಂದು ಅರ್ಥವೊ? ಇಲ್ಲ, ಯೆಹೋವನು ಕೆಲಸಮಾಡುವುದನ್ನೆಂದೂ ನಿಲ್ಲಿಸುವುದಿಲ್ಲ. (ಕೀರ್ತನೆ 92:4; ಯೋಹಾನ 5:17) ಹೀಗಿರಲಾಗಿ ಆತನ ವಿಶ್ರಮಿಸುವಿಕೆಯು, ಭೂಮಿಗೆ ಸಂಬಂಧಪಟ್ಟ ಭೌತಿಕ ಸೃಷ್ಟಿಯ ಕೆಲಸದ ನಿಲ್ಲಿಸುವಿಕೆಗೆ ಮಾತ್ರ ಸೂಚಿಸುತ್ತಿರಬೇಕು. ಆತನ ಉದ್ದೇಶಗಳು ನೆರವೇರುವಂತೆ ಮಾಡುವ ಆತನ ಕೆಲಸವಾದರೊ ನಿಲ್ಲಿಸಲ್ಪಡದೆ ಮುಂದುವರಿಯುತ್ತಲಿದೆ. ಆ ಕೆಲಸದಲ್ಲಿ ಪವಿತ್ರ ಶಾಸ್ತ್ರಗಳ ದೈವಪ್ರೇರಣೆಯು ಸೇರಿರುತ್ತದೆ. ಆತನ ಈ ಕೆಲಸದಲ್ಲಿ, ಒಂದು “ನೂತನ ಸೃಷ್ಟಿ”ಯನ್ನು ಉತ್ಪಾದಿಸುವುದೂ ಒಳಗೂಡಿದೆ. ಇದರ ಕುರಿತು ಅಧ್ಯಾಯ 19ರಲ್ಲಿ ಚರ್ಚಿಸಲಾಗುವುದು.—2 ಕೊರಿಂಥ 5:17.
21. ಯೆಹೋವನ ಸೃಷ್ಟಿಕಾರಕ ಶಕ್ತಿಯು ನಂಬಿಗಸ್ತ ಮಾನವರ ಮೇಲೆ ಅನಂತಕಾಲದಲ್ಲೆಲ್ಲ ಹೇಗೆ ಪರಿಣಾಮ ಬೀರುವುದು?
21 ಯೆಹೋವನ ವಿಶ್ರಾಂತಿ ದಿನವು ಕೊನೆಗೆ ಅಂತ್ಯಗೊಳ್ಳುವಾಗ, ಸೃಷ್ಟಿಕಾರ್ಯದ ಆರನೆಯ ದಿನದಂತ್ಯದಲ್ಲಿ ಆತನು ಹೇಳಿದ ರೀತಿಯಲ್ಲೇ, ಭೂಮಿಯ ಮೇಲೆ ಆತನು ಮಾಡಿದ ಎಲ್ಲಾ ಸೃಷ್ಟಿಕಾರ್ಯವು “ಬಹು ಒಳ್ಳೇದಾಗಿದೆ” ಎಂದು ಆತನು ಹೇಳಶಕ್ತನಾಗುವನು. (ಆದಿಕಾಂಡ 1:31) ತನ್ನ ಎಣೆಯಿಲ್ಲದ ಸೃಷ್ಟಿಕಾರಕ ಶಕ್ತಿಯನ್ನು ಆತನು ಆಮೇಲೆ ಹೇಗೆ ಪ್ರಯೋಗಿಸಲಿರುವನೆಂದು ನಮಗಿನ್ನೂ ನೋಡಲಿಕ್ಕಿದೆ. ಹೇಗೂ ನಾವು ಸೃಷ್ಟಿಕಾರಕ ಶಕ್ತಿಯ ಯೆಹೋವನ ಉಪಯೋಗದಿಂದಾಗಿ ವಿಸ್ಮಯಗೊಳ್ಳುತ್ತಾ ಇರುವೆವೆಂಬುದಂತೂ ಖಂಡಿತ. ಅನಂತಕಾಲದಲ್ಲೆಲ್ಲ, ಆತನ ಸೃಷ್ಟಿಯ ಮೂಲಕ ನಾವು ಯೆಹೋವನ ಕುರಿತು ಹೆಚ್ಚೆಚ್ಚನ್ನು ಕಲಿಯುತ್ತಾ ಇರುವೆವು. (ಪ್ರಸಂಗಿ 3:11) ಎಷ್ಟು ಹೆಚ್ಚಾಗಿ ಆತನ ಕುರಿತು ನಾವು ಕಲಿಯುವೆವೊ, ಅಷ್ಟು ಹೆಚ್ಚಾಗಿ ನಮ್ಮ ಭಯಭಕ್ತಿಯು ಗಾಢಗೊಳ್ಳುತ್ತಾ, ನಾವು ನಮ್ಮ ಮಹಾ ಸೃಷ್ಟಿಕರ್ತನ ಮತ್ತಷ್ಟು ಹೆಚ್ಚು ಸಮೀಪಕ್ಕೆ ಬರುವೆವು.
a ಆ ದೊಡ್ಡ ಸಂಖ್ಯೆಯನ್ನು ಗ್ರಹಿಸಲು, ಇದರ ಬಗ್ಗೆ ಯೋಚಿಸಿರಿ: ಒಂದು ಮೋಟಾರ್ ಕಾರನ್ನು ತಾಸಿಗೆ 160 ಕಿಲೊಮೀಟರ್ ವೇಗದಲ್ಲಿ ಓಡಿಸುತ್ತಾ, ದಿನಕ್ಕೆ 24 ತಾಸು ನಡಿಸಿದರೂ, ಅಷ್ಟು ದೂರ ತಲಪಲು ನಿಮಗೆ 100 ವರ್ಷಕ್ಕಿಂತಲೂ ಹೆಚ್ಚು ಸಮಯ ಬೇಕಾಗುವುದು!
b ಬೈಬಲ್ ಕಾಲದ ಪೂರ್ವಜರು ಹಳೆಯ ತರಹದ ದುರ್ಬೀನನ್ನು ಉಪಯೋಗಿಸಿದ್ದಿರಬಹುದೆಂದು ಕೆಲವರ ಆಲೋಚನೆ. ಇಲ್ಲವಾದರೆ ನಕ್ಷತ್ರಗಳ ಸಂಖ್ಯೆಯು ಅಷ್ಟು ಅಪಾರ, ಅಷ್ಟು ಅಸಂಖ್ಯಾತವೆಂದು ಬರಿಯ ಮಾನವರು ಹೇಗೆ ತಿಳಿದಿದ್ದಾರು ಎಂಬುದವರ ತರ್ಕ. ಆದರೆ ಅಂಥ ನಿರಾಧಾರದ ಕಲ್ಪನೆಗಳು, ಬೈಬಲಿನ ಕರ್ತೃವಾಗಿರುವ ಯೆಹೋವ ದೇವರಿಗೆ ಗೌರವ ಮತ್ತು ಅಂಗೀಕಾರವನ್ನು ಕೊಡುವುದಿಲ್ಲ.—2 ತಿಮೊಥೆಯ 3:16.
c ನಿಮಗೆ ದಶಸಹಸ್ರ ಕೋಟಿ ನಕ್ಷತ್ರಗಳನ್ನು ಲೆಕ್ಕಮಾಡಲು ಅದೆಷ್ಟು ಸಮಯ ತಗಲಬಹುದೆಂದು ಸ್ವಲ್ಪ ಯೋಚಿಸಿರಿ. ಪ್ರತಿ ಸೆಕೆಂಡಿಗೆ ಒಂದೊಂದು ಹೊಸ ನಕ್ಷತ್ರವನ್ನು ಎಣಿಕೆಮಾಡಲು ನೀವು ಶಕ್ತರಾಗಿದ್ದಲ್ಲಿ ಮತ್ತು ದಿನದ 24 ತಾಸೂ ಅದನ್ನು ಎಣಿಸುತ್ತಾ ಇರುವಲ್ಲಿ ಅದನ್ನು ಮುಗಿಸಲು ನಿಮಗೆ 3,171 ವರ್ಷಗಳು ಹಿಡಿಯುವವು!