ನೀವು ಉತ್ತರ ಕೊಡಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ
ಕೆಲವು ಪ್ರಶ್ನೆಗಳು ನೀರ್ಗಲ್ಲ ಗುಡ್ಡಗಳಂತಿರುತ್ತವೆ. ಅವುಗಳ ಅತಿ ದೊಡ್ಡ ಭಾಗವು ನೀರಿನ ಮೇಲ್ಮೈಯ ಕೆಳಗಿರುತ್ತದೆ. ಮರೆಯಾಗಿರುವ ವಿವಾದಾಂಶವು ಕೇಳಲ್ಪಟ್ಟಿರುವ ಪ್ರಶ್ನೆಗಿಂತ ಅನೇಕವೇಳೆ ಹೆಚ್ಚು ಪ್ರಾಮುಖ್ಯವಾಗಿರುತ್ತದೆ.
ಪ್ರಶ್ನೆಯನ್ನು ಕೇಳುವವನು ಉತ್ತರಕ್ಕಾಗಿ ತವಕಿಸುತ್ತಿರುವಾಗಲೂ, ಉತ್ತರ ಕೊಡುವ ವಿಧವನ್ನು ನೀವು ತಿಳಿದಿರಬೇಕಾಗಿದೆ. ಎಷ್ಟರ ಮಟ್ಟಿಗೆ ಉತ್ತರ ಕೊಡಬೇಕು ಮತ್ತು ಯಾವ ದೃಷ್ಟಿಕೋನದಿಂದ ಆ ವಿಷಯವನ್ನು ಸಮೀಪಿಸಬೇಕು ಎಂಬುದನ್ನು ವಿವೇಚಿಸುವುದು ಇದರಲ್ಲಿ ಸೇರಿರಬಹುದು. (ಯೋಹಾ. 16:12) ಕೆಲವು ಸಂದರ್ಭಗಳಲ್ಲಿ, ಯೇಸು ತನ್ನ ಅಪೊಸ್ತಲರಿಗೆ ಸೂಚಿಸಿದಂತೆ, ಒಬ್ಬ ವ್ಯಕ್ತಿಯು ತನಗೆ ಕೇಳಲು ಹಕ್ಕಿಲ್ಲದ ಅಥವಾ ತನಗೆ ನಿಜವಾಗಿಯೂ ಪ್ರಯೋಜನಕರವಾಗಿರದಂಥ ಮಾಹಿತಿಗಾಗಿ ಕೇಳಾನು.—ಅ. ಕೃ. 1:6, 7.
“ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ, ರಸವತ್ತಾಗಿಯೂ ಇರಲಿ [“ದಯಾಪರತೆಯುಳ್ಳದ್ದೂ ಉಪ್ಪಿನಿಂದ ರುಚಿಗೊಳಿಸಲ್ಪಟ್ಟದ್ದೂ ಆಗಿರಲಿ,” NW]; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ,” ಎಂದು ಶಾಸ್ತ್ರವಚನಗಳು ನಮಗೆ ಸಲಹೆ ನೀಡುತ್ತವೆ. (ಕೊಲೊ. 4:6) ಆದುದರಿಂದ, ನಾವು ಉತ್ತರ ಕೊಡುವ ಮೊದಲು, ನಾವು ಏನು ಹೇಳಲಿರುವೆವು ಎಂದಷ್ಟೇಯಲ್ಲ, ಅದನ್ನು ಹೇಗೆ ಹೇಳುವೆವೆಂಬುದನ್ನೂ ಪರಿಗಣಿಸುವ ಅಗತ್ಯವಿದೆ.
ಪ್ರಶ್ನಿಸುವವನ ದೃಷ್ಟಿಕೋನವನ್ನು ವಿವೇಚಿಸಿ
ಸದ್ದುಕಾಯರು, ಅನೇಕಬಾರಿ ಮದುವೆಯಾಗಿದ್ದ ಒಬ್ಬ ಸ್ತ್ರೀಯ ಪುನರುತ್ಥಾನದ ಕುರಿತಾದ ಪ್ರಶ್ನೆಯನ್ನು ಕೇಳುವ ಮೂಲಕ ಯೇಸುವನ್ನು ಸಿಕ್ಕಿಸಿಹಾಕಲು ಪ್ರಯತ್ನಿಸಿದರು. ಆದರೆ, ಅವರು ವಾಸ್ತವವಾಗಿ ಪುನರುತ್ಥಾನದಲ್ಲಿ ನಂಬಿಕೆಯಿದ್ದವರಾಗಿರಲಿಲ್ಲವೆಂಬುದು ಯೇಸುವಿಗೆ ತಿಳಿದಿತ್ತು. ಆದಕಾರಣ, ತಾನು ಕೊಟ್ಟ ಉತ್ತರದಲ್ಲಿ ಯೇಸು, ಅವರು ಕೇಳಿದ ಪ್ರಶ್ನೆಯ ಹಿಂದಿದ್ದ ತಪ್ಪಾದ ದೃಷ್ಟಿಕೋನಕ್ಕೆ ಸಂಬಂಧಿಸಿದಂಥ ರೀತಿಯಲ್ಲಿ ಅವರಿಗೆ ಉತ್ತರಿಸಿದನು. ಅತ್ಯುತ್ತಮವಾದ ತರ್ಕ ವಿಧಾನವನ್ನು ಮತ್ತು ಚಿರಪರಿಚಿತವಾದ ಶಾಸ್ತ್ರೀಯ ವೃತ್ತಾಂತವನ್ನು ಉಪಯೋಗಿಸುತ್ತ ಯೇಸು, ಅವರು ಹಿಂದೆಂದೂ ಪರಿಗಣಿಸಿದ್ದಿರದ ವಿಷಯವನ್ನು, ಅಂದರೆ ದೇವರು ಮೃತರನ್ನು ನಿಶ್ಚಯವಾಗಿಯೂ ಪುನರುತ್ಥಾನ ಮಾಡುವನೆಂಬುದಕ್ಕೆ ಸ್ಪಷ್ಟವಾದ ರುಜುವಾತನ್ನು ಕೊಟ್ಟನು. ಅವನ ಉತ್ತರವು ಆ ವಿರೋಧಿಗಳನ್ನು ಎಷ್ಟು ಬೆರಗುಗೊಳಿಸಿತೆಂದರೆ, ಅವನನ್ನು ಮುಂದೆ ಪ್ರಶ್ನಿಸಲು ಅವರು ಭಯಪಟ್ಟರು.—ಲೂಕ 20:27-40.
ಉತ್ತರ ಕೊಡಬೇಕಾದ ರೀತಿಯನ್ನು ತಿಳಿದಿರಲಿಕ್ಕಾಗಿ, ನಿಮ್ಮನ್ನು ಪ್ರಶ್ನಿಸುವವರ ದೃಷ್ಟಿಕೋನಗಳು ಮತ್ತು ಅಭಿರುಚಿಗಳು ಏನೆಂಬುದನ್ನು ನೀವು ವಿವೇಚಿಸಿ ತಿಳಿದುಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಸಹಪಾಠಿಯೊ ಜೊತೆಕಾರ್ಮಿಕನೊ ನೀವು ಕ್ರಿಸ್ಮಸನ್ನು ಏಕೆ ಆಚರಿಸುವುದಿಲ್ಲವೆಂದು ನಿಮ್ಮನ್ನು ಕೇಳಬಹುದು. ಅವನು ಹಾಗೆ ಕೇಳುವುದೇಕೆ? ಅವನು ನಿಜವಾಗಿಯೂ ಆ ಕಾರಣವನ್ನು ತಿಳಿಯಲು ಬಯಸುತ್ತಾನೊ, ಅಥವಾ ನಿಮಗೆ ಆ ಸಮಯದಲ್ಲಿ ಮಜಾಮಾಡಲು ಅನುಮತಿ ಇದೆಯೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾನೊ? ಇದನ್ನು ಕಂಡುಹಿಡಿಯಲಿಕ್ಕಾಗಿ, ಆ ಪ್ರಶ್ನೆಯನ್ನು ಕೇಳಲು ಕಾರಣವೇನು ಎಂದು ನೀವು ಅವನನ್ನೇ ಕೇಳಬೇಕಾಗಬಹುದು. ಬಳಿಕ, ಅದಕ್ಕನುಸಾರವಾಗಿ ಉತ್ತರ ಕೊಡಿರಿ. ಆ ಸಂದರ್ಭವನ್ನು ನೀವು, ಬೈಬಲಿನ ಮಾರ್ಗದರ್ಶನವನ್ನು ಅನುಸರಿಸುವುದು ಜನರಿಗೆ ಹತಾಶೆಯನ್ನೂ ಹೊರೆಯನ್ನೂ ಉಂಟುಮಾಡಿರುವ ಹಬ್ಬದ ಆ ನಿರ್ದಿಷ್ಟ ಅಂಶಗಳಿಂದ ಹೇಗೆ ಕಾಪಾಡುತ್ತದೆಂದು ತೋರಿಸಲು ಸಹ ಉಪಯೋಗಿಸಬಹುದು.
ವಿದ್ಯಾರ್ಥಿಗಳ ಒಂದು ಗುಂಪಿಗೆ ಯೆಹೋವನ ಸಾಕ್ಷಿಗಳ ಕುರಿತು ಮಾತನಾಡಲು ನಿಮಗೆ ಕರೆ ಕೊಡಲಾಗಿದೆ ಎಂದು ನೆನಸೋಣ. ನಿಮ್ಮ ಭಾಷಣದ ನಂತರ, ಅವರು ನಿಮಗೆ ಪ್ರಶ್ನೆಗಳನ್ನು ಕೇಳಬಹುದು. ಪ್ರಶ್ನೆಗಳು ಯಥಾರ್ಥವಾದವುಗಳೂ ಮುಚ್ಚುಮರೆಯಿಲ್ಲದವುಗಳೂ ಆಗಿರುವಲ್ಲಿ, ಉತ್ತರಗಳು ಸರಳವಾದವುಗಳೂ ನೇರವಾದವುಗಳೂ ಆಗಿರುವುದು ಅತ್ಯುತ್ತಮ. ಆ ಪ್ರಶ್ನೆಗಳು ಸಮಾಜದ ದುರಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ, ನಿಮ್ಮ ಉತ್ತರಗಳ ಮುಂಚೆ, ಅಂತಹ ವಿವಾದಾಂಶಗಳ ಸಂಬಂಧದಲ್ಲಿ ಜನಪ್ರಿಯ ದೃಷ್ಟಿಕೋನಗಳನ್ನು ಯಾವುದು ರೂಪಿಸುತ್ತದೆ ಎಂಬುದರ ಬಗ್ಗೆಯೂ, ಯೆಹೋವನ ಸಾಕ್ಷಿಗಳು ಬೈಬಲೇ ತಮಗೋಸ್ಕರ ಮಟ್ಟವನ್ನಿಡುವಂತೆ ಏಕೆ ಅನುಮತಿಸುತ್ತಾರೆಂಬುದರ ಬಗ್ಗೆಯೂ ಸಂಕ್ಷಿಪ್ತ ಹೇಳಿಕೆಗಳನ್ನು ಮಾಡುವುದರಿಂದ ನೀವು ಹೆಚ್ಚು ಒಳಿತನ್ನು ಮಾಡಬಹುದು. ಇಂತಹ ಪ್ರಶ್ನೆಗಳು ಒಂದುವೇಳೆ ಪಂಥಾಹ್ವಾನವನ್ನೊಡ್ಡುವ ರೀತಿಯಲ್ಲಿ ಕೇಳಲ್ಪಟ್ಟರೂ, ಅವುಗಳನ್ನು ಹಾಗೆ ವೀಕ್ಷಿಸದೆ, ಸಭಿಕರಿಗೆ ಚಿಂತೆಯ ವಿಷಯಗಳಾಗಿವೆ ಎಂಬಂತೆ ವೀಕ್ಷಿಸುವುದು ಪ್ರಯೋಜನಕರವಾಗಿದೆ. ಆಗ ನಿಮ್ಮ ಉತ್ತರವು ನಿಮ್ಮ ಸಭಿಕರ ದೃಷ್ಟಿಕೋನವನ್ನು ವಿಶಾಲಗೊಳಿಸುವ, ಅವರಿಗೆ ನಿಷ್ಕೃಷ್ಟವಾದ ಮಾಹಿತಿಯನ್ನು ಒದಗಿಸುವ ಮತ್ತು ನಮ್ಮ ನಂಬಿಕೆಗಳಿಗಾಗಿರುವ ಶಾಸ್ತ್ರೀಯ ಆಧಾರವನ್ನು ವಿವರಿಸುವ ಅವಕಾಶವನ್ನು ನಿಮಗೆ ಕೊಡುವುದು.
ಒಂದು ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ರಜೆಯನ್ನು ಕೊಡಲು ಇಷ್ಟಪಡದ ಒಬ್ಬ ಧಣಿಗೆ ನೀವು ಹೇಗೆ ಉತ್ತರ ಕೊಡುವಿರಿ? ಪ್ರಥಮವಾಗಿ, ಅವನ ದೃಷ್ಟಿಕೋನದಿಂದ ವಿಷಯಗಳನ್ನು ಪರಿಗಣಿಸಿರಿ. ಇನ್ನೊಂದು ಸಮಯದಲ್ಲಿ ಓವರ್ಟೈಮ್ ಮಾಡುತ್ತೇನೆಂದು ಹೇಳುವುದರಿಂದ ಸಹಾಯವಾದೀತೊ? ನಮ್ಮ ಅಧಿವೇಶನಗಳಲ್ಲಿ ದೊರೆಯುವ ಶಿಕ್ಷಣವು ನಮ್ಮನ್ನು ಪ್ರಾಮಾಣಿಕರಾದ, ಭರವಸಾರ್ಹ ಕಾರ್ಮಿಕರಾಗಿ ಮಾಡುತ್ತದೆಂದು ಹೇಳುವುದರಿಂದ ಸಹಾಯವು ಸಿಕ್ಕೀತೊ? ಅವನ ಅಭಿರುಚಿಗಳನ್ನು ನೀವು ಗಣನೆಗೆ ತೆಗೆದುಕೊಳ್ಳುತ್ತೀರೆಂಬುದನ್ನು ನೀವು ತೋರಿಸುವುದಾದರೆ, ಪ್ರಾಯಶಃ ನಿಮ್ಮ ಜೀವನದಲ್ಲಿ ಪ್ರಾಮುಖ್ಯವಾದ ವಿಷಯಗಳೆಂದು ಅವನು ಗ್ರಹಿಸುವ ವಿಷಯಗಳಿಗೆ ಅವನೂ ಅನುಕೂಲವಾದ ಪರಿಗಣನೆಯನ್ನು ತೋರಿಸುವಂತೆ ಮಾಡೀತು. ಆದರೆ ಅಪ್ರಾಮಾಣಿಕವಾದ ಸಂಗತಿಯನ್ನು ನೀವು ಮಾಡಬೇಕೆಂದು ಅವನು ಬಯಸುವಲ್ಲಿ ಆಗೇನು? ಆಗ ಸ್ಪಷ್ಟವಾದ ನಿರಾಕರಣೆ ಮತ್ತು ಶಾಸ್ತ್ರವಚನದಿಂದ ತೆಗೆಯಲ್ಪಟ್ಟ ಒಂದು ಹೇಳಿಕೆಯು ನಿಮ್ಮ ನಿಲುವನ್ನು ತಿಳಿಯಪಡಿಸಬೇಕು. ಆದರೆ, ಮೊದಲಾಗಿ ಆ ವಿಷಯದಲ್ಲಿ ತರ್ಕಬದ್ಧವಾಗಿ ಮಾತಾಡುವುದರಿಂದ, ಅಂದರೆ ಅವನಿಗಾಗಿ ಸುಳ್ಳು ಹೇಳುವ ಅಥವಾ ಕಳ್ಳತನ ಮಾಡುವ ವ್ಯಕ್ತಿಯು ಅವನಿಗೂ ಸುಳ್ಳು ಹೇಳಬಹುದು ಅಥವಾ ಅವನಿಂದಲೂ ಕದಿಯಬಹುದು ಎಂದು ಹೇಳುವುದರಿಂದ ಹೆಚ್ಚು ಒಳ್ಳೆಯದಾಗಬಹುದೊ?
ಇನ್ನೊಂದು ಪಕ್ಕದಲ್ಲಿ, ನೀವು ಪ್ರಾಯಶಃ ಅಶಾಸ್ತ್ರೀಯವಾದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಬಯಸದ ವಿದ್ಯಾರ್ಥಿಯಾಗಿದ್ದೀರಿ. ನಿಮ್ಮ ಶಿಕ್ಷಕರಿಗೆ ಪ್ರಾಯಶಃ ನಿಮಗಿರುವ ದೃಷ್ಟಿಕೋನಗಳೇ ಇರಲಿಕ್ಕಿಲ್ಲ ಹಾಗೂ ಕ್ಲಾಸಿನಲ್ಲಿ ಶಿಸ್ತನ್ನು ಕಾಪಾಡುವ ಜವಾಬ್ದಾರಿ ಅವರಿಗಿದೆ ಎಂಬುದು ನೆನಪಿರಲಿ. ಈಗ ನಿಮ್ಮ ಮುಂದಿರುವ ಪಂಥಾಹ್ವಾನಗಳು ಯಾವುವೆಂದರೆ, (1) ಅವರ ಜವಾಬ್ದಾರಿಗಳಿಗೆ ಮಾನ್ಯತೆ ತೋರಿಸುವುದು, (2) ಆ ವಿಷಯದಲ್ಲಿ ನಿಮ್ಮ ಸ್ಥಾನವನ್ನು ಗೌರವದಿಂದ ವಿವರಿಸುವುದು, ಮತ್ತು (3) ಯಾವುದು ಯೆಹೋವನಿಗೆ ಮೆಚ್ಚಿಕೆಯಾಗಿದೆಯೋ ಆ ವಿಷಯದಲ್ಲಿ ಸ್ಥಿರಚಿತ್ತರಾಗಿರುವುದು. ಅತ್ಯುತ್ತಮವಾದ ಫಲಿತಾಂಶಗಳಿಗಾಗಿ, ನೀವೇನನ್ನು ನಂಬುತ್ತೀರಿ ಎಂಬುದರ ಬಗ್ಗೆ ಸರಳವಾದ ಮತ್ತು ನೇರವಾದ ಹೇಳಿಕೆಗಿಂತಲೂ ಹೆಚ್ಚಿನದ್ದರ ಅಗತ್ಯವಿದ್ದೀತು. (ಜ್ಞಾನೋ. 15:28) ನೀವು ಎಳೆಯರಾಗಿರುವಲ್ಲಿ, ಹೇಳಬೇಕಾಗಿರುವ ವಿಷಯವನ್ನು ತಯಾರಿಸಲಿಕ್ಕಾಗಿ ನಿಮ್ಮ ತಂದೆಯೊ ತಾಯಿಯೊ ನಿಮಗೆ ಸಹಾಯಮಾಡುವರು ಎಂಬುದರಲ್ಲಿ ಸಂದೇಹವಿಲ್ಲ.
ಕೆಲವು ಸಲ, ಅಧಿಕಾರಿಗಳು ನಿಮ್ಮ ಮೇಲೆ ಹಾಕಿದ ಆರೋಪವನ್ನು ತಪ್ಪೆಂದು ನೀವು ರುಜುಪಡಿಸಬೇಕಾಗಬಹುದು. ಒಂದು ನಿರ್ದಿಷ್ಟ ನಿಯಮಕ್ಕೆ ವಿಧೇಯತೆ, ಕ್ರೈಸ್ತ ತಾಟಸ್ಥ್ಯದ ವಿಷಯದಲ್ಲಿ ನಿಮ್ಮ ಸ್ಥಾನ ಅಥವಾ ದೇಶಭಕ್ತಿಯ ಆಚರಣೆಗಳಲ್ಲಿ ಭಾಗವಹಿಸುವ ವಿಷಯದಲ್ಲಿ ನಿಮ್ಮ ಮನೋಭಾವದ ಕುರಿತಾದ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಕೊಡುವಂತೆ, ಒಬ್ಬ ಪೊಲೀಸ್ ಅಧಿಕಾರಿಯೊ, ಸರಕಾರೀ ಅಧಿಕಾರಿಯೊ ಇಲ್ಲವೆ ನ್ಯಾಯಾಧೀಶನೊ ನಿರ್ಬಂಧಪಡಿಸಬಹುದು. ಆಗ ನೀವು ಹೇಗೆ ಉತ್ತರ ಕೊಡಬೇಕು? “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ಹಾಗೆ ಮಾಡಿರಿ ಎಂದು ಬೈಬಲು ಸಲಹೆ ನೀಡುತ್ತದೆ. (1 ಪೇತ್ರ 3:15) ಅಲ್ಲದೆ, ಈ ವಿವಾದಾಂಶಗಳು ಅವರಿಗೆ ಏಕೆ ಪ್ರಾಮುಖ್ಯವಾಗಿವೆ ಎಂದು ನಿಮ್ಮನ್ನೇ ಪ್ರಶ್ನಿಸಿಕೊಂಡು, ಗೌರವಭಾವದಿಂದ ಆ ಕಾರಣವನ್ನು ಅಂಗೀಕರಿಸಿರಿ. ಆ ಬಳಿಕ ಏನು? ಅಪೊಸ್ತಲ ಪೌಲನು ರೋಮನ್ ನಿಯಮವು ಕೊಟ್ಟಿದ್ದ ಹಕ್ಕುಗಳ ಕುರಿತು ಸೂಚಿಸಿ ಮಾತಾಡಿದುದರಿಂದ, ನೀವೂ ನಿಮ್ಮ ಮೊಕದ್ದಮೆಗೆ ಅನ್ವಯಿಸುವ ಶಾಸನಬದ್ಧ ಹಕ್ಕುಗಳಿಗೆ ಸೂಚಿಸಿ ಮಾತಾಡಬಹುದು. (ಅ. ಕೃ. 22:25-29) ಆದಿ ಕ್ರೈಸ್ತರು ಮತ್ತು ಇಂದಿನ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ತೆಗೆದುಕೊಂಡಿರುವ ನಿಲುವಿನ ಕುರಿತಾದ ವಾಸ್ತವಾಂಶಗಳು, ಪ್ರಾಯಶಃ ಅಧಿಕಾರಿಗಳ ದೃಷ್ಟಿಕೋನವನ್ನು ವಿಶಾಲಗೊಳಿಸಬಹುದು. ಅಥವಾ, ದೇವರ ಅಧಿಕಾರಕ್ಕೆ ಮನ್ನಣೆಯು ಜನರು ಮನುಷ್ಯರ ಸೂಕ್ತ ನಿಯಮಗಳಿಗೆ ಎಲ್ಲ ಸಮಯಗಳಲ್ಲೂ ವಿಧೇಯರಾಗಿರುವಂತೆ ಹೇಗೆ ಪ್ರಚೋದಿಸುತ್ತದೆಂಬುದನ್ನು ನೀವು ತೋರಿಸಬಹುದು. (ರೋಮಾ. 13:1-14) ಇಂತಹ ಹಿನ್ನೆಲೆಯ ಮಾಹಿತಿಯನ್ನು ನೀಡಿದಾಗ, ನಿಮ್ಮ ನಿಲುವಿಗಾಗಿರುವ ಶಾಸ್ತ್ರೀಯ ಕಾರಣಗಳ ಹೇಳಿಕೆಯನ್ನು ಅಧಿಕಾರಿಗಳು ಸಕಾರಾತ್ಮಕವಾಗಿಯೇ ಅಂಗೀಕರಿಸಬಹುದು.
ಶಾಸ್ತ್ರವಚನಗಳ ಬಗ್ಗೆ ಪ್ರಶ್ನೆಯನ್ನು ಕೇಳುವವನ ನೋಟ
ಉತ್ತರ ನೀಡುವ ರೀತಿಯನ್ನು ಪರಿಗಣಿಸುವಾಗ, ಪವಿತ್ರ ಶಾಸ್ತ್ರದ ಬಗ್ಗೆ ಪ್ರಶ್ನೆ ಕೇಳುವವನಿಗಿರುವ ನೋಟವನ್ನೂ ಪರಿಗಣಿಸುವುದು ಅಗತ್ಯ. ಪುನರುತ್ಥಾನದ ಕುರಿತು ಸದ್ದುಕಾಯರು ಕೇಳಿದ ಪ್ರಶ್ನೆಗೆ ಉತ್ತರ ಕೊಡುವಾಗ ಯೇಸು ಹೀಗೆ ಮಾಡಿದನು. ಅವರು ಮೋಶೆಯ ಬರಹಗಳನ್ನು ಮಾತ್ರ ಅಂಗೀಕರಿಸಿದ್ದರೆಂದು ತಿಳಿದಿದ್ದ ಯೇಸು, ಪ್ರಥಮ ಗ್ರಂಥ ಪಂಚಕ (ಪೆಂಟಟ್ಯೂಕ್)ದಿಂದ ಒಂದು ವೃತ್ತಾಂತವನ್ನು ತೆಗೆದು, ತನ್ನ ಹೇಳಿಕೆಗಳನ್ನು ಈ ಮಾತುಗಳಿಂದ ಆರಂಭಿಸಿದನು: “ಸತ್ತವರು ಬದುಕಿ ಏಳುತ್ತಾರೆಂಬದನ್ನು ಮೋಶೆಯೂ ಸೂಚಿಸಿದ್ದಾನೆ.” (ಲೂಕ 20:37) ನೀವೂ ಹೀಗೆ ನಿಮ್ಮ ಕೇಳುಗನು ಅಂಗೀಕರಿಸುವ ಮತ್ತು ಅವನಿಗೆ ಚಿರಪರಿಚಿತವಾಗಿರುವ ಬೈಬಲ್ ಭಾಗಗಳನ್ನು ಎತ್ತಿಹೇಳುವುದನ್ನು ಪ್ರಯೋಜನಕರವಾಗಿ ಕಂಡುಕೊಳ್ಳಬಹುದು.
ಆದರೆ ನಿಮ್ಮ ಕೇಳುಗನು ಬೈಬಲಿನ ಅಧಿಕಾರವನ್ನು ಅಂಗೀಕರಿಸದಿರುವಾಗ ಏನು ಮಾಡುವಿರಿ? ಅಪೊಸ್ತಲರ ಕೃತ್ಯಗಳು 17:22-31 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅರಿಯೊಪಾಗದಲ್ಲಿ ಅಪೊಸ್ತಲ ಪೌಲನು ತನ್ನ ಭಾಷಣದಲ್ಲಿ ಏನು ಮಾಡಿದನೆಂಬುದನ್ನು ಗಮನಿಸಿರಿ. ಬೈಬಲಿನಿಂದ ನೇರವಾಗಿ ಉಲ್ಲೇಖಿಸದೇ ಅವನು ಶಾಸ್ತ್ರೀಯ ಸತ್ಯಗಳನ್ನು ಜನರೊಂದಿಗೆ ಹಂಚಿಕೊಂಡನು. ಅಗತ್ಯವಿರುವಲ್ಲಿ ನೀವೂ ಹಾಗೆ ಮಾಡಬಲ್ಲಿರಿ. ಕೆಲವು ಸ್ಥಳಗಳಲ್ಲಿ, ಬೈಬಲಿಗೆ ನೇರವಾಗಿ ಸೂಚಿಸುವ ಮೊದಲು, ಒಬ್ಬ ವ್ಯಕ್ತಿಯೊಂದಿಗೆ ಅನೇಕ ಚರ್ಚೆಗಳನ್ನು ಮಾಡಬೇಕಾಗಿ ಬಂದೀತು. ಮತ್ತು ನೀವು ಬೈಬಲನ್ನು ಪರಿಚಯಿಸುವಾಗ, ಅದು ದೇವರ ವಾಕ್ಯವೆಂದು ಖಡಾಖಂಡಿತವಾಗಿ ಹೇಳುವ ಬದಲು, ಮೊದಲಾಗಿ ಅದು ಪರಿಗಣನೆಗೆ ಏಕೆ ಯೋಗ್ಯವಾಗಿದೆ ಎಂಬುದಕ್ಕೆ ಕೆಲವು ಕಾರಣಗಳನ್ನು ಕೊಡುವುದು ವಿವೇಕವುಳ್ಳದ್ದಾಗಿರಬಹುದು. ಆದರೂ, ನಿಮ್ಮ ಗುರಿಯು ದೇವರ ಉದ್ದೇಶದ ಕುರಿತು ಸ್ಪಷ್ಟವಾದ ಸಾಕ್ಷಿಯನ್ನು ಕೊಡುವುದಾಗಿರಬೇಕು, ಮತ್ತು ಸಕಾಲದಲ್ಲಿ, ಬೈಬಲು ಏನು ಹೇಳುತ್ತದೆಂಬುದನ್ನು ನಿಮ್ಮ ಕೇಳುಗನೇ ನೋಡುವಂತೆ ಮಾಡುವುದಾಗಿರಬೇಕು. ನಾವು ವೈಯಕ್ತಿಕವಾಗಿ ಹೇಳಿ ಒಡಂಬಡಿಸುವುದಕ್ಕಿಂತಲೂ ಎಷ್ಟೋ ಹೆಚ್ಚು ಉತ್ತಮವಾಗಿ ಒಡಂಬಡಿಸುವ ಶಕ್ತಿ ಬೈಬಲಿಗಿದೆ.—ಇಬ್ರಿ. 4:12.
‘ಯಾವಾಗಲೂ ದಯಾಪರತೆಯುಳ್ಳದ್ದು’
ಸ್ವತಃ ದಯಾಪರನಾಗಿರುವ ಯೆಹೋವನ ಸೇವಕರ ಮಾತು “ಯಾವಾಗಲೂ ದಯಾಪರತೆಯುಳ್ಳದ್ದೂ ಉಪ್ಪಿನಿಂದ ರುಚಿಗೊಳಿಸಲ್ಪಟ್ಟದ್ದೂ” ಆಗಿರಬೇಕೆಂದು ಹೇಳಲ್ಪಟ್ಟಿರುವುದು ಎಷ್ಟು ಸೂಕ್ತವಾದದ್ದಾಗಿದೆ! (ಕೊಲೊ. 4:6, NW; ವಿಮೋ. 34:6) ಒಬ್ಬ ವ್ಯಕ್ತಿ ಕರುಣೆಗೆ ಅರ್ಹವಾಗಿಲ್ಲದಿರುವಂತೆ ಕಂಡುಬರುವಾಗಲೂ ನಾವು ಕರುಣೆಯಿಂದ ಮಾತಾಡಬೇಕೆಂಬುದು ಇದರ ಅರ್ಥ. ನಮ್ಮ ಮಾತು ಹಿತಕರವಾದದ್ದಾಗಿರಬೇಕು, ಒರಟಾಗಿಯೂ ಸಮಯೋಚಿತ ನಯವಿಲ್ಲದ್ದಾಗಿಯೂ ಇರಬಾರದು.
ಅನೇಕ ಜನರು ವಿಪರೀತ ಒತ್ತಡದ ಕೆಳಗಿದ್ದು, ಪ್ರತಿದಿನ ಮಾತಿನ ನಿಂದೆಗೆ ತುತ್ತಾಗುತ್ತಾರೆ. ನಾವು ಅವರನ್ನು ಭೇಟಿ ಮಾಡುವಾಗ, ಅವರು ನಮಗೆ ಬಿರುಸಾಗಿ ಮಾತಾಡಬಹುದು. ಆಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಬೈಬಲು ಹೇಳುವುದು: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು.” ಅಂತಹ ಉತ್ತರವು, ವಿರೋಧಾತ್ಮಕ ದೃಷ್ಟಿಕೋನವಿರುವ ಒಬ್ಬನ ಮನಸ್ಸನ್ನೂ ಮೃದುಗೊಳಿಸಸಾಧ್ಯವಿದೆ. (ಜ್ಞಾನೋ. 15:1; 25:15) ಪ್ರತಿದಿನ ಬಿರುಸು ಮಾತುಗಳನ್ನು ಕೇಳಿಸಿಕೊಳ್ಳುವವರಿಗೆ, ದಯೆಯನ್ನು ವ್ಯಕ್ತಪಡಿಸುವಂಥ ರೀತಿಯೂ ಸ್ವರವೂ ಎಷ್ಟು ಆಕರ್ಷಕವಾಗಿರಬಲ್ಲದೆಂದರೆ, ನಾವು ಕೊಂಡೊಯ್ಯುವ ಸುವಾರ್ತೆಗೆ ಅವರು ಕಿವಿಗೊಟ್ಟಾರು.
ಸತ್ಯಕ್ಕೆ ಗೌರವವನ್ನು ತೋರಿಸದವರೊಂದಿಗೆ ವಾದಿಸುವ ಆಸಕ್ತಿ ನಮಗಿಲ್ಲ. ಬದಲಿಗೆ, ಶಾಸ್ತ್ರವಚನಗಳಿಂದ ತರ್ಕಬದ್ಧವಾಗಿ ಮಾತಾಡಲು ಅನುಮತಿಸುವವರೊಂದಿಗೆ ಮಾತಾಡುವುದೇ ನಮ್ಮ ಅಪೇಕ್ಷೆಯಾಗಿದೆ. ನಾವು ಯಾವುದೇ ಸನ್ನಿವೇಶವನ್ನು ಎದುರಿಸಲಿ, ದೇವರ ಅಮೂಲ್ಯ ವಾಗ್ದಾನಗಳು ಭರವಸಾರ್ಹವಾಗಿವೆ ಎಂದು ದಯಾಭಾವದಿಂದ ಮತ್ತು ನಿಶ್ಚಿತಾಭಿಪ್ರಾಯದಿಂದ ಉತ್ತರ ಕೊಡಬೇಕೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.—1 ಥೆಸ. 1:5.
ವೈಯಕ್ತಿಕ ನಿರ್ಣಯಗಳು ಮತ್ತು ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳು
ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ತಾನು ಏನು ಮಾಡಬೇಕೆಂದು ಒಬ್ಬ ಬೈಬಲ್ ವಿದ್ಯಾರ್ಥಿಯೊ ಒಬ್ಬ ಜೊತೆವಿಶ್ವಾಸಿಯೊ ಕೇಳುವಲ್ಲಿ, ನೀವು ಹೇಗೆ ಉತ್ತರ ಕೊಡಬೇಕು? ನೀವು ವೈಯಕ್ತಿಕವಾಗಿ ಏನು ಮಾಡುವಿರೆಂದು ನಿಮಗೆ ಗೊತ್ತಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಮಾಡುವ ತನ್ನ ಸ್ವಂತ ನಿರ್ಣಯಗಳಿಗೆ ತಾನೇ ಜವಾಬ್ದಾರನಾಗಿರಬೇಕು. (ಗಲಾ. 6:5) ತಾನು ಯಾರಿಗೆ ಸಾರಿದೆನೋ ಆ ಜನರಿಗೆ, ಅವರು “ನಂಬಿಕೆಯೆಂಬ ವಿಧೇಯತ್ವ”ವನ್ನು ತೋರಿಸುವಂತೆ ತಾನು ಪ್ರೋತ್ಸಾಹಿಸಿದೆನೆಂದು ಅಪೊಸ್ತಲ ಪೌಲನು ವಿವರಿಸಿದನು. (ರೋಮಾ. 16:25, 26) ಅದು ನಮಗೆ ಅನುಸರಿಸಲು ಒಂದು ಉತ್ತಮ ಮಾದರಿಯಾಗಿದೆ. ಮುಖ್ಯವಾಗಿ ತನ್ನ ಬೈಬಲ್ ಬೋಧಕನನ್ನು ಅಥವಾ ಇನ್ನೊಬ್ಬ ಮನುಷ್ಯನನ್ನು ಮೆಚ್ಚಿಸಲಿಕ್ಕಾಗಿ ನಿರ್ಣಯಗಳನ್ನು ಮಾಡುವಂಥ ಒಬ್ಬ ವ್ಯಕ್ತಿಯು, ಮನುಷ್ಯರನ್ನು ಸೇವಿಸುತ್ತಾನೆಯೇ ಹೊರತು ನಂಬಿಕೆಗನುಸಾರ ಜೀವಿಸುವವನಾಗಿರುವುದಿಲ್ಲ. (ಗಲಾ. 1:10) ಆದಕಾರಣ, ಪ್ರಶ್ನೆಗೆ ಕೊಡಲ್ಪಡುವ ಸರಳವೂ ನೇರವೂ ಆದ ಉತ್ತರವು, ಆ ಪ್ರಶ್ನೆಯನ್ನು ಕೇಳಿದವನಿಗೆ ಹೆಚ್ಚಿನ ಪ್ರಯೋಜನವನ್ನು ಉಂಟುಮಾಡಲಿಕ್ಕಿಲ್ಲ.
ಹಾಗಾದರೆ, ಬೈಬಲಿನ ನಿರ್ದೇಶನಗಳಿಗೆ ಹೊಂದಿಕೆಯಾದ ರೀತಿಯಲ್ಲಿ ನೀವು ಹೇಗೆ ಉತ್ತರ ಕೊಡಬಲ್ಲಿರಿ? ನೀವು ಬೈಬಲ್ ದಾಖಲೆಯಲ್ಲಿರುವ ಯೋಗ್ಯವಾದ ಬೈಬಲ್ ಮೂಲತತ್ತ್ವಗಳಿಗೂ ಉದಾಹರಣೆಗಳಿಗೂ ಗಮನವನ್ನು ಸೆಳೆಯಬಹುದು. ಕೆಲವು ಸಂದರ್ಭಗಳಲ್ಲಿ, ಆ ಮೂಲತತ್ತ್ವಗಳನ್ನು ಮತ್ತು ಉದಾಹರಣೆಗಳನ್ನು ಅವನೇ ಕಂಡುಕೊಳ್ಳಸಾಧ್ಯವಾಗುವಂತೆ ಸಂಶೋಧನೆಯನ್ನು ಹೇಗೆ ನಡೆಸಬೇಕೆಂಬುದನ್ನು ನೀವು ಅವನಿಗೆ ತೋರಿಸಬಹುದು. ನೀವು ಆ ಮೂಲತತ್ತ್ವಗಳನ್ನು ಮತ್ತು ಉದಾಹರಣೆಗಳ ಮಹತ್ವವನ್ನು ಪ್ರಸ್ತುತ ಸನ್ನಿವೇಶಕ್ಕೆ ಅನ್ವಯಿಸದೇ ಅವುಗಳ ಕುರಿತು ಚರ್ಚಿಸಲೂಬಹುದು. ವಿವೇಕಪೂರ್ಣವಾದ ನಿರ್ಣಯವನ್ನು ಮಾಡಲು ಚರ್ಚಿಸಲ್ಪಟ್ಟ ವಿಷಯಗಳಲ್ಲಿ ಸಹಾಯಕರವಾದ ಯಾವುದಾದರೂ ಅಂಶವು ಕಂಡುಬರುತ್ತದೊ ಎಂದು ಆ ವ್ಯಕ್ತಿಯನ್ನು ಕೇಳಿರಿ. ಈ ಮೂಲತತ್ತ್ವಗಳ ಮತ್ತು ಉದಾಹರಣೆಗಳ ಬೆಳಕಿನಲ್ಲಿ, ಯಾವ ಮಾರ್ಗವು ಯೆಹೋವನಿಗೆ ಸಂತೋಷವನ್ನು ಉಂಟುಮಾಡಬಹುದೆಂಬುದನ್ನು ಪರಿಗಣಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ. ಹೀಗೆ ನೀವು, ಅವನು “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿಯಲು ಅವನಿಗೆ ಸಹಾಯಮಾಡುತ್ತೀರಿ.—ಇಬ್ರಿ. 5:14.
ಸಭಾ ಕೂಟಗಳಲ್ಲಿ ಉತ್ತರ ಕೊಡುವುದು
ಕ್ರೈಸ್ತ ಸಭಾ ಕೂಟಗಳು ಅನೇಕವೇಳೆ ನಮ್ಮ ನಂಬಿಕೆಯನ್ನು ಬಹಿರಂಗವಾಗಿ ಪ್ರಕಟಿಸುವ ಸಂದರ್ಭಗಳನ್ನು ನಮಗೆ ಒದಗಿಸುತ್ತವೆ. ನಮ್ಮ ನಂಬಿಕೆಯನ್ನು ಬಹಿರಂಗವಾಗಿ ಪ್ರಕಟಿಸುವ ಒಂದು ವಿಧವು ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಆಗಿದೆ. ನಾವು ಹೇಗೆ ಉತ್ತರ ಕೊಡಬೇಕು? ಯೆಹೋವನನ್ನು ಕೊಂಡಾಡುವ ಅಥವಾ ಆತನ ಕುರಿತು ಸದಭಿಪ್ರಾಯದಿಂದ ಮಾತಾಡುವ ಆಸೆಯೊಂದಿಗೆ. “ಕೂಡಿದ ಸಭೆಗಳಲ್ಲಿ” ಕೀರ್ತನೆಗಾರನಾದ ದಾವೀದನು ಅದನ್ನೇ ಮಾಡಿದನು. (ಕೀರ್ತ. 26:12) ಅಪೊಸ್ತಲ ಪೌಲನು ಉತ್ತೇಜಿಸಿದಂತೆ, ನಾವು ಜೊತೆವಿಶ್ವಾಸಿಗಳನ್ನು “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಗಳನ್ನುಮಾಡಬೇಕೆಂತಲೂ” ಪ್ರೇರೇಪಿಸಿ, ಪ್ರೋತ್ಸಾಹಿಸುವ ವಿಧದಲ್ಲಿಯೂ ಉತ್ತರ ಕೊಡಬೇಕು. (ಇಬ್ರಿ. 10:23-25) ಪಾಠಗಳನ್ನು ಮುಂದಾಗಿಯೇ ಅಧ್ಯಯನ ಮಾಡುವುದು, ನಾವಿದನ್ನು ಸಾಧಿಸುವಂತೆ ಸಹಾಯಮಾಡಬಲ್ಲದು.
ಉತ್ತರ ಕೊಡುವ ಅವಕಾಶ ಸಿಕ್ಕಾಗ, ನಿಮ್ಮ ಹೇಳಿಕೆಗಳು ಸರಳವಾಗಿರಲಿ ಸ್ಪಷ್ಟವಾಗಿರಲಿ ಮತ್ತು ಸಂಕ್ಷಿಪ್ತವಾಗಿರಲಿ. ಇಡೀ ಪ್ಯಾರಗ್ರಾಫನ್ನು ಆವರಿಸಿ ಉತ್ತರ ಕೊಡಬೇಡಿ; ಒಂದು ಅಂಶವನ್ನು ಮಾತ್ರ ತಿಳಿಸಿರಿ. ಉತ್ತರದ ಒಂದು ಭಾಗವನ್ನು ಮಾತ್ರ ನೀವು ತಿಳಿಸುವಲ್ಲಿ, ಇನ್ನಿತರರಿಗೆ ಬೇರೆ ಉತ್ತರಗಳನ್ನು ಕೊಡುವ ಅವಕಾಶ ಸಿಗುತ್ತದೆ. ಆ ಲೇಖನದಲ್ಲಿರುವ ಶಾಸ್ತ್ರವಚನಗಳನ್ನು ಎತ್ತಿತೋರಿಸುವುದು ವಿಶೇಷವಾಗಿ ಪ್ರಯೋಜನದಾಯಕವಾಗಿದೆ. ಹಾಗೆ ಮಾಡುವಾಗ, ಚರ್ಚಿಸಲ್ಪಡುತ್ತಿರುವ ವಿಷಯಕ್ಕೆ ಸಂಬಂಧಿಸಿರುವ ವಚನಭಾಗಕ್ಕೆ ಗಮನ ಸೆಳೆಯಲು ಪ್ರಯತ್ನಿಸಿರಿ. ಪ್ಯಾರಗ್ರಾಫ್ನಿಂದ ನೇರವಾಗಿ ಓದಿ ಹೇಳುವ ಬದಲು, ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರ ನೀಡಲು ಕಲಿಯಿರಿ. ನೀವು ಕೊಡುವ ಉತ್ತರವು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ಬರದಿದ್ದರೆ ತೀರ ಚಿಂತಿತರಾಗಬೇಡಿ. ಉತ್ತರ ಕೊಡುವ ಯಾವನಿಗೂ ಒಮ್ಮೊಮ್ಮೆ ಹಾಗಾಗುವುದು ಸಾಮಾನ್ಯ.
ನಾವು ಹೇಗೆ ಉತ್ತರ ಕೊಡಬೇಕು ಎಂಬುದನ್ನು ತಿಳಿಯುವುದರಲ್ಲಿ, ಕೇವಲ ಉತ್ತರವನ್ನು ತಿಳಿದಿರುವುದಕ್ಕಿಂತ ಹೆಚ್ಚಿನದ್ದು ಸೇರಿದೆ ಎಂಬುದು ಸುವ್ಯಕ್ತವಾಗುತ್ತದೆ. ಇದಕ್ಕೆ ವಿವೇಚನಾಶಕ್ತಿಯ ಅಗತ್ಯವಿದೆ. ಆದರೆ, ನಿಮ್ಮ ಮನದಾಳದಿಂದ ಬರುವ ಉತ್ತರವನ್ನು ಕೊಟ್ಟು, ಅದು ಇತರರ ಹೃದಯವನ್ನು ತಲಪುವಾಗ ಅದೆಷ್ಟು ಸಂತೃಪ್ತಿದಾಯಕವಾಗಿರುವುದು!—ಜ್ಞಾನೋ. 15:23.