ಅರಿಸ್ತಾರ್ಕ—ನಿಷ್ಠಾವಂತ ಸಂಗಾತಿ
ಅಪೊಸ್ತಲ ಪೌಲನ ಅನೇಕ ಭರವಸಾರ್ಹ ಜೊತೆ ಕೆಲಸಗಾರರಲ್ಲಿ ಅರಿಸ್ತಾರ್ಕನು ಒಬ್ಬನಾಗಿದ್ದನು. ಅವನ ಹೆಸರನ್ನು ಕೇಳಿದಾಗ ನೀವು ಏನು ಯೋಚಿಸುತ್ತೀರಿ? ಏನನ್ನಾದರೂ ನೆನಸಿಕೊಳ್ಳುತ್ತೀರೊ? ಆದಿ ಕ್ರೈಸ್ತ ಇತಿಹಾಸದ ಘಟನೆಗಳಲ್ಲಿ ಅವನು ಯಾವ ಪಾತ್ರವನ್ನು ವಹಿಸಿದನೆಂದು ನೀವು ಹೇಳಶಕ್ತರೊ? ನಮ್ಮ ಅತಿ ಪರಿಚಿತ ಬೈಬಲ್ ವ್ಯಕ್ತಿಗಳಲ್ಲಿ ಅರಿಸ್ತಾರ್ಕನು ಒಬ್ಬನಾಗಿರಲಿಕ್ಕಿಲ್ಲವಾದರೂ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿರುವ ಅನೇಕ ಘಟನಾವಳಿಗಳಲ್ಲಿ ಅವನು ಸೇರಿಕೊಂಡಿದ್ದನು.
ಹಾಗಾದರೆ, ಈ ಅರಿಸ್ತಾರ್ಕನು ಯಾರಾಗಿದ್ದನು? ಅವನಿಗೆ ಪೌಲನೊಂದಿಗೆ ಯಾವ ಸಂಬಂಧವಿತ್ತು? ಅರಿಸ್ತಾರ್ಕನು ನಿಷ್ಠಾವಂತ ಸಂಗಾತಿಯಾಗಿದ್ದನೆಂದು ಏಕೆ ಹೇಳಸಾಧ್ಯವಿದೆ? ಮತ್ತು ಅವನ ಮಾದರಿಯನ್ನು ಪರೀಕ್ಷಿಸುವುದರಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
ಅಪೊಸ್ತಲರ ಕೃತ್ಯಗಳು ಪುಸ್ತಕದ ವೃತ್ತಾಂತದೊಳಗೆ ಅರಿಸ್ತಾರ್ಕನ ನಾಟಕೀಯ ಪ್ರವೇಶವು, ಎಫೆಸ ನಗರದಲ್ಲಿ ಚಿತ್ತೋನ್ಮಾದದಿಂದ ದೊಂಬಿಸೇರಿದ ಜನರ ಬೊಬ್ಬೆ ಮತ್ತು ಗಲಿಬಿಲಿಗಳ ನಡುವೆ ಆಗುತ್ತದೆ. (ಅ. ಕೃತ್ಯಗಳು 19:23-41) ಸುಳ್ಳು ದೇವತೆ ಅರ್ತೆಮೀಯ ಬೆಳ್ಳಿಯ ಗುಡಿಗಳನ್ನು ಮಾಡುವುದು, ದೇಮೇತ್ರಿಗೂ ಎಫೆಸದ ಬೇರೆ ಅಕ್ಕಸಾಲಿಗರಿಗೂ ಲಾಭದಾಯಕವಾದ ವ್ಯಾಪಾರವಾಗಿತ್ತು. ಆದಕಾರಣ, ಆ ನಗರದಲ್ಲಿನ ಪೌಲನ ಸಾರುವ ಕಾರ್ಯವು, ಗಣನೀಯ ಸಂಖ್ಯೆಯ ಜನರು ಈ ದೇವತೆಯ ಅಶುದ್ಧಾರಾಧನೆಯನ್ನು ತ್ಯಜಿಸುವಂತೆ ಮಾಡಿದಾಗ, ದೇಮೇತ್ರಿಯು ಇತರ ಕರಕುಶಲಿಗಳನ್ನು ಗಲಭೆಗೆಬ್ಬಿಸಿದನು. ಪೌಲನ ಸಾರುವಿಕೆ ತಮ್ಮ ಆರ್ಥಿಕ ಭದ್ರತೆಗೆ ಅಪಾಯವನ್ನು ತರುವುದು ಮಾತ್ರವಲ್ಲ, ಅರ್ತೆಮೀಯ ಆರಾಧನೆ ಇಲ್ಲದೆ ಹೋಗುವ ಸಾಧ್ಯತೆಯನ್ನೂ ತರುವುದೆಂದು ಅವನು ಅವರಿಗೆ ಹೇಳಿದನು.
ಪೌಲನನ್ನು ಕಂಡುಹಿಡಿಯದೆ ಹೋದ ಸಿಟ್ಟಿಗೆದ್ದಿದ್ದ ದೊಂಬಿಗಾರರು, ಬಲಾತ್ಕಾರದಿಂದ ಅವನ ಸಂಗಾತಿಗಳಾದ ಅರಿಸ್ತಾರ್ಕನನ್ನೂ ಗಾಯನನ್ನೂ ನಾಟಕ ಶಾಲೆಯೊಳಗೆ ಎಳೆದುಕೊಂಡು ಹೋದರು. ಅವರಿಬ್ಬರು ಮಹತ್ತಾದ ಅಪಾಯದಲ್ಲಿದ್ದುದರಿಂದ, ಪೌಲನ ಸ್ನೇಹಿತರು, “ನಾಟಕ ಶಾಲೆಯೊಳಗೆ ಹೋಗಿ ನಿನ್ನನ್ನು ಅಪಾಯಕ್ಕೆ ಗುರಿಮಾಡಿಕೊಳ್ಳಬೇಡ” ಎಂದು ಅವನಲ್ಲಿ ಬೇಡಿಕೊಂಡರು.
ಆ ಸ್ಥಿತಿಯಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಿ. ಚಿತ್ತೋನ್ಮಾದಗೊಂಡ ಆ ದೊಂಬಿಗಾರರು, ಸುಮಾರು ಎರಡು ತಾಸುಗಳ ತನಕ, “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಕೂಗಿದರು. ತಮ್ಮ ಸ್ವಂತ ಪ್ರತಿವಾದವನ್ನು ಮಾಡಲಿಕ್ಕೂ ಶಕ್ತರಾಗದೆ ಆ ಮತಾಂಧ ದೊಂಬಿಗಾರರ ಪೂರ್ತಿ ಹತೋಟಿಯಲ್ಲಿ ತಮ್ಮನ್ನು ಕಂಡುಕೊಂಡದ್ದು, ಅರಿಸ್ತಾರ್ಕನಿಗೂ ಗಾಯನಿಗೂ ನಿಜವಾಗಿಯೂ ಭೀಕರವಾದ ಉಗ್ರಪರೀಕ್ಷೆಯಾಗಿದ್ದಿರಬೇಕು. ತಾವು ಅದನ್ನು ಪಾರಾಗಿ ಉಳಿಯುತ್ತೇವೊ ಇಲ್ಲವೊ ಎಂದು ಅವರು ಸಂಶಯಿಸಿದ್ದಿರಬೇಕು. ಸಂತೋಷಕರವಾಗಿ, ಅವರು ಪಾರಾಗಿ ಉಳಿದರು. ಲೂಕನ ವೃತ್ತಾಂತದ ಸ್ಪಷ್ಟ ವರ್ಣನೆಯು, ಅವನು ಪ್ರತ್ಯಕ್ಷ ಸಾಕ್ಷಿಗಳಿಂದ, ಪ್ರಾಯಶಃ ಅರಿಸ್ತಾರ್ಕ ಮತ್ತು ಗಾಯರಿಂದಲೇ ಅದನ್ನು ಪಡೆದಿರಬೇಕೆಂದು ಸೂಚಿಸುವಂತೆ ಕೆಲವು ವಿದ್ವಾಂಸರನ್ನು ನಡೆಸಿದೆ.
ನಗರದ ಅಭಿಲೇಖಕನು ಕೊನೆಗೆ ಆ ದೊಂಬಿಯನ್ನು ತಣಿಸಿದನು. ಅವನು ತಮ್ಮ ನಿರ್ದೋಷಿತನವನ್ನು ವಸ್ತುನಿಷ್ಠೆಯಿಂದ ಒಪ್ಪಿದ್ದನ್ನು ಕೇಳಿ, ಬಳಿಕ ತಮ್ಮ ಸುತ್ತಲಿದ್ದ ಗಲಭೆಯು ಇಲ್ಲದೆಹೋದದ್ದನ್ನು ನೋಡಿ, ಅರಿಸ್ತಾರ್ಕನಿಗೂ ಗಾಯನಿಗೂ ಮಹತ್ತಾದ ನೆಮ್ಮದಿಯಾಗಿರಬೇಕು.
ನೀವು ಅಲ್ಲಿರುತ್ತಿದ್ದರೆ, ಅಂತಹ ಒಂದು ಅನುಭವದ ಬಳಿಕ ನಿಮಗೆ ಹೇಗನಿಸಿದ್ದಿರಬಹುದು? ಪೌಲನ ಮಿಷನೆರಿ ಸಂಗಾತಿಯಾಗಿರುವ ಕೆಲಸವು ನಿಮಗಾಗಿರುವುದಿಲ್ಲ, ಅದು ತೀರ ಅಪಾಯಕರ, ಮತ್ತು ಹೆಚ್ಚು ಶಾಂತ ರೀತಿಯ ಜೀವನವನ್ನು ಬೆನ್ನಟ್ಟುವುದು ನಿಮಗೆ ಹೆಚ್ಚು ಉತ್ತಮವೆಂದು ನೀವು ತೀರ್ಮಾನಿಸುತ್ತಿದ್ದಿರೊ? ಅರಿಸ್ತಾರ್ಕನು ಹಾಗೆಣಿಸಲಿಲ್ಲ! ಥೆಸಲೊನೀಕದವನಾಗಿದ್ದುದರಿಂದ, ಸುವಾರ್ತೆಯನ್ನು ಪ್ರಕಟಿಸುವುದರಲ್ಲಿದ್ದ ಅಪಾಯವನ್ನು ಅವನು ಪ್ರಾಯಶಃ ಆಗಲೇ ತಿಳಿದಿದ್ದನು. ಕೆಲವೇ ವರ್ಷಗಳಿಗೆ ಮೊದಲು, ತನ್ನ ನಗರದಲ್ಲಿ ಪೌಲನು ಸಾರಿದಾಗ ಅಲ್ಲಿಯೂ ಒಂದು ದಂಗೆಯೆದ್ದಿತ್ತು. (ಅ. ಕೃತ್ಯಗಳು 17:1-9; 20:4) ಅರಿಸ್ತಾರ್ಕನು ನಿಷ್ಠೆಯಿಂದ ಪೌಲನಿಗೆ ಅಂಟಿಕೊಂಡನು.
ಗ್ರೀಸ್ನಿಂದ ಯೆರೂಸಲೇಮಿಗೆ
ಅಕ್ಕಸಾಲಿಗರ ದೊಂಬಿಯ ಕೆಲವು ತಿಂಗಳುಗಳ ಅನಂತರ, ಪೌಲನು ಗ್ರೀಸ್ನಲ್ಲಿದ್ದು, ಅಲ್ಲಿಂದ ಯೆರೂಸಲೇಮಿಗೆ ಹೋಗುವ ಮಾರ್ಗದಲ್ಲಿ ಸಿರಿಯಕ್ಕೆ ನೌಕಾಪ್ರಯಾಣವನ್ನು ಮಾಡಲಿದ್ದಾಗ, “ಅವನಿಗೆ ವಿರುದ್ಧವಾಗಿ ಯೆಹೂದ್ಯರಲ್ಲಿ ಒಳಸಂಚು” ನಡೆದಿತ್ತು. (ಅ. ಕೃತ್ಯಗಳು 20:2, 3) ಈ ವಿಪತ್ಕಾರಕ ಪರಿಸ್ಥಿತಿಗಳಲ್ಲಿ ಪೌಲನೊಂದಿಗೆ ಯಾರಿದ್ದನೆಂದು ನಾವು ಕಂಡುಕೊಳ್ಳುತ್ತೇವೆ? ಅರಿಸ್ತಾರ್ಕನು!
ಈ ಹೊಸ ಬೆದರಿಕೆಯು, ಪೌಲ, ಅರಿಸ್ತಾರ್ಕ ಮತ್ತು ಅವರ ಸಂಗಡಿಗರು ತಮ್ಮ ಯೋಜನೆಗಳನ್ನು ಬದಲಾಯಿಸುವಂತೆ ಮಾಡಿತು. ಅವರು ಮೊದಲಾಗಿ ಮಕೆದೋನ್ಯದ ಮಾರ್ಗವಾಗಿ, ಆ ಬಳಿಕ ಹಂತಹಂತವಾಗಿ ಏಷಿಯ ಮೈನರ್ ಕರಾವಳಿಯುದ್ದಕ್ಕೂ ಪ್ರಯಾಣಿಸಿ, ಕೊನೆಗೆ ಪತರದಲ್ಲಿ ಫೊಯಿನೀಕೆಗೆ ಹೋಗಲು ಹಡಗು ಹತ್ತಿದರು. (ಅ. ಕೃತ್ಯಗಳು 20:4, 5, 13-15; 21:1-3) ಈ ಪ್ರಯಾಣದ ಉದ್ದೇಶವು, ಮಕೆದೋನ್ಯ ಮತ್ತು ಅಖಾಯದಲ್ಲಿದ್ದ ಕ್ರೈಸ್ತರ ಕಾಣಿಕೆಗಳನ್ನು ಯೆರೂಸಲೇಮಿನಲ್ಲಿದ್ದ ಅವರ ಬಡ ಸಹೋದರರಿಗೆ ಮುಟ್ಟಿಸುವುದೇ ಆಗಿತ್ತೆಂಬುದು ವ್ಯಕ್ತ. (ಅ. ಕೃತ್ಯಗಳು 24:17; ರೋಮಾಪುರ 15:25, 26) ಪ್ರಾಯಶಃ ವಿವಿಧ ಸಭೆಗಳು ಈ ಜವಾಬ್ದಾರಿಯನ್ನು ಅನೇಕರಿಗೆ ಕೊಟ್ಟಿದ್ದುದರಿಂದ, ಅವರು ಒಂದು ದೊಡ್ಡ ಸಂಖ್ಯೆಯಾಗಿ ಕೂಡಿ ಪಯಣಿಸಿದರು. ಅಂತಹ ದೊಡ್ಡ ಗುಂಪು ಹೆಚ್ಚಿನ ಸುರಕ್ಷೆಯ ಖಾತ್ರಿಯನ್ನೂ ಕೊಡುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.
ಪೌಲನ ಜೊತೆಯಲ್ಲಿ ಗ್ರೀಸ್ನಿಂದ ಯೆರೂಸಲೇಮಿಗೆ ಪಯಣಿಸುವ ಮಹಾ ಸುಯೋಗ ಅರಿಸ್ತಾರ್ಕನದ್ದಾಗಿತ್ತು. ಆದರೂ, ಅವರ ಮುಂದಿನ ಪಯಣವು ಅವರನ್ನು ಯೂದಾಯದಿಂದ ರೋಮ್ನ ವರೆಗೂ ಒಯ್ಯಲಿಕ್ಕಿತ್ತು.
ರೋಮ್ಗೆ ಪ್ರಯಾಣ
ಈ ಬಾರಿ ಪರಿಸ್ಥಿತಿಗಳು ತೀರ ಭಿನ್ನವಾಗಿದ್ದವು. ಪೌಲನು ಎರಡು ವರ್ಷಕಾಲ ಕೈಸರೈಯದಲ್ಲಿ ಸೆರೆಮನೆಯಲ್ಲಿದ್ದನು, ಕೈಸರನಿಗೆ ಅಪ್ಪೀಲು ಮಾಡಿದ್ದನು, ಮತ್ತು ಬೇಡಿಗಳಿಂದ ಕಟ್ಟಲ್ಪಟ್ಟವನಾಗಿ ರೋಮಿಗೆ ಒಯ್ಯಲ್ಪಡಲಿದ್ದನು. (ಅ. ಕೃತ್ಯಗಳು 24:27; 25:11, 12) ಪೌಲನ ಸಂಗಾತಿಗಳಿಗೆ ಹೇಗನಿಸಿತೆಂಬುದನ್ನು ಊಹಿಸಿಕೊಳ್ಳಲು ಪ್ರಯತ್ನಿಸಿ. ಕೈಸರೈಯದಿಂದ ರೋಮ್ಗೆ ಮಾಡುವ ಪ್ರಯಾಣವು, ದೀರ್ಘವೂ ಭಾವುಕವಾಗಿ ಪರೀಕ್ಷಾತ್ಮಕವೂ ಆಗಿದ್ದು, ಮುನ್ಸೂಚಿಸಲಾಗದ ಪರಿಣಾಮವನ್ನು ತರಲಿಕ್ಕಿತ್ತು. ಬೆಂಬಲವನ್ನೂ ನೆರವನ್ನೂ ಕೊಡಲು ಅವನ ಜೊತೆಯಲ್ಲಿ ಯಾರಿಗೆ ಹೋಗಸಾಧ್ಯವಿತ್ತು? ಇಬ್ಬರು ಪುರುಷರನ್ನು ಆರಿಸಲಾಯಿತು ಅಥವಾ ಸ್ವಯಂಸೇವಕರಾಗಿ ಅವರು ತಮ್ಮನ್ನು ದೊರಕಿಸಿಕೊಂಡರು. ಅರಿಸ್ತಾರ್ಕ ಮತ್ತು ಅಪೊಸ್ತಲರ ಕೃತ್ಯಗಳ ಲೇಖಕನಾದ ಲೂಕರೇ ಅವರು.—ಅ. ಕೃತ್ಯಗಳು 27:1, 2.
ರೋಮ್ಗೆ ಮಾಡಿದ ಪ್ರಯಾಣದ ಪ್ರಥಮ ಹಂತದಲ್ಲಿ, ಲೂಕ ಮತ್ತು ಅರಿಸ್ತಾರ್ಕ ಅದೇ ಹಡಗಿನಲ್ಲಿ ಪ್ರಯಾಣಿಸುವರೆ ಹೇಗೆ ಶಕ್ತರಾದರು? ಇತಿಹಾಸಕಾರ ಜೂಸೆಪ್ಪೆ ರೀಕಾಟೀ ಸೂಚಿಸುವುದು: “ಇವರಿಬ್ಬರು ಖಾಸಗಿ ಪ್ರಯಾಣಿಕರಾಗಿ ಹೊರಟರು . . . ಇಲ್ಲವೆ, ಅವರನ್ನು ಪೌಲನ ದಾಸರಾಗಿ ತೋರ್ಪಡಿಸಿದ ಶತಾಧಿಪತಿಯ ದಯೆಯಿಂದ ಅವರು ಒಳಪ್ರವೇಶಿಸಿದ್ದಿರಬಹುದು. ಏಕೆಂದರೆ ಒಬ್ಬ ರೋಮನ್ ನಾಗರಿಕನ ನೆರವಿಗಾಗಿ ಇಬ್ಬರು ಗುಲಾಮರು ಹೋಗಲು ಕಾನೂನು ಅನುಮತಿಸಿತು.” ಅವರ ಸಮಕ್ಷಮ ಮತ್ತು ಪ್ರೋತ್ಸಾಹದಿಂದ ಪೌಲನು ಎಷ್ಟೊಂದು ಹುರಿದುಂಬಿಸಲ್ಪಟ್ಟಿರಬೇಕು!
ಲೂಕ ಮತ್ತು ಅರಿಸ್ತಾರ್ಕರು ಪೌಲನ ಕಡೆಗಿದ್ದ ಅವರ ಪ್ರೀತಿಯನ್ನು, ತಮ್ಮ ಮೇಲೆ ನಷ್ಟವನ್ನೂ ಅಪಾಯವನ್ನೂ ಬರಮಾಡಿಕೊಳ್ಳುವ ಮೂಲಕ ಪ್ರದರ್ಶಿಸಿದರು. ವಾಸ್ತವವಾಗಿ, ಮೆಲೀತೆ ದ್ವೀಪದಲ್ಲಿ ಹಡಗೊಡೆದಾಗ, ಅವರು ತಮ್ಮ ಬಂದಿಯಾಗಿದ್ದ ಸಂಗಾತಿಯೊಂದಿಗೆ ಜೀವಾಪಾಯದ ಸ್ಥಿತಿಯನ್ನು ಅನುಭವಿಸಿದರು.—ಅ. ಕೃತ್ಯಗಳು 27:13–28:1.
ಪೌಲನ “ಜೊತೆಸೆರೆಯವನು”
ಪೌಲನು ಸಾ.ಶ. 60-61ರಲ್ಲಿ ಕೊಲೊಸ್ಸೆಯವರಿಗೆ ಮತ್ತು ಫಿಲೆಮೋನನಿಗೆ ಪತ್ರಗಳನ್ನು ಬರೆದಾಗ, ಅರಿಸ್ತಾರ್ಕ ಮತ್ತು ಲೂಕರು ಅವನೊಂದಿಗೆ ರೋಮ್ನಲ್ಲಿ ಇನ್ನೂ ಇದ್ದರು. ಅರಿಸ್ತಾರ್ಕನೂ ಎಪಫ್ರನೂ ಪೌಲನ ‘ಜೊತೆಸೆರೆಯವರು’ ಎಂದು ಸೂಚಿಸಲ್ಪಟ್ಟಿದ್ದಾರೆ. (ಕೊಲೊಸ್ಸೆ 4:10, 14; ಫಿಲೆಮೋನ 23, 24) ಆದಕಾರಣ, ಅರಿಸ್ತಾರ್ಕನು ಸ್ವಲ್ಪ ಕಾಲ ಪೌಲನ ಬಂಧನದಲ್ಲಿ ಪಾಲಿಗನಾಗಿದ್ದನೆಂದು ವ್ಯಕ್ತವಾಗುತ್ತದೆ.
ಪೌಲನು ರೋಮ್ನಲ್ಲಿ ಕಡಮೆ ಪಕ್ಷ ಎರಡು ವರ್ಷಗಳ ವರೆಗೆ ಕೈದಿಯಾಗಿದ್ದರೂ, ಅವನನ್ನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ ಕಾವಲಿನಲ್ಲಿರುವಂತೆ ಬಿಡಲಾಗಿತ್ತು. ಅಲ್ಲಿ ಅವನು ಭೇಟಿಕಾರರಿಗೆ ಸುವಾರ್ತೆಯನ್ನು ಪ್ರಕಟಿಸಬಹುದಾಗಿತ್ತು. (ಅ. ಕೃತ್ಯಗಳು 28:16, 30) ಅರಿಸ್ತಾರ್ಕ, ಎಪಫ್ರ, ಲೂಕ ಮತ್ತು ಇತರರು ಆಗ ಪೌಲನಿಗೆ ಸಹಾಯ ಮತ್ತು ಆಸರೆಯನ್ನು ಕೊಟ್ಟು, ಅವನ ಶುಶ್ರೂಷೆಯನ್ನು ಮಾಡಿದರು.
“ಬಲಪಡಿಸುವ ಸಹಾಯ”
ಪ್ರೇರಿತ ಬೈಬಲ್ ದಾಖಲೆಯಲ್ಲಿ ಅರಿಸ್ತಾರ್ಕನು ತೋರಿಬರುವ ಈ ವಿಭಿನ್ನ ಘಟನಾವಳಿಗಳನ್ನು ಪರ್ಯಾಲೋಚಿಸಿದ ಬಳಿಕ ಯಾವ ಚಿತ್ರ ಹೊರಬರುತ್ತದೆ? ಲೇಖಕ ಡಬ್ಲ್ಯೂ. ಡಿ. ಥಾಮಸ್ ಅವರಿಗನುಸಾರ, ಅರಿಸ್ತಾರ್ಕನು “ವಿರೋಧವನ್ನು ಎದುರಿಸಸಾಧ್ಯವಿದ್ದು, ಅಖಂಡವಾದ ನಂಬಿಕೆಯುಳ್ಳ ಮತ್ತು ಸೇವೆಮಾಡುವ ನಿರ್ಧಾರದಲ್ಲಿ ಕುಂದಿಲ್ಲದೆ ಹೊರಬರುವ ಪುರುಷನಾಗಿ ಎದ್ದುಕಾಣುತ್ತಾನೆ. ನೀಲಾಕಾಶದಲ್ಲಿ ಸೂರ್ಯನು ಪ್ರಜ್ವಲಿಸುವ ಸುದಿನಗಳಲ್ಲಿ ಮಾತ್ರವಲ್ಲ, ಮೂದಲಿಕೆ ಮತ್ತು ಕ್ಷೋಭೆಯಲ್ಲಿಯೂ ಅವನು ದೇವರನ್ನು ಪ್ರೀತಿಸುವ ಪುರುಷನಾಗಿ ಎದ್ದುಕಾಣುತ್ತಾನೆ.”
ಅರಿಸ್ತಾರ್ಕನೂ ಇತರರೂ ತನಗೆ “ಬಲಪಡಿಸುವ ಸಹಾಯ,” (ಗ್ರೀಕ್, ಪಾರಿಗೋರಿಯ) ಅಂದರೆ ಉಪಶಮನದ ಮೂಲವಾಗಿದ್ದರೆಂದು ಪೌಲನು ಹೇಳುತ್ತಾನೆ. (ಕೊಲೊಸ್ಸೆ 4:10, 11, NW) ಹೀಗೆ ಪೌಲನಿಗೆ ಉಪಶಮನ ಮತ್ತು ಉತ್ತೇಜನವನ್ನು ಕೊಡುತ್ತಾ, ಅರಿಸ್ತಾರ್ಕನು ಆಪತ್ಕಾಲದಲ್ಲಿ ನಿಜವಾದ ಸಂಗಾತಿಯಾಗಿದ್ದನು. ಅನೇಕ ವರ್ಷಗಳ ವರೆಗೆ ಅಪೊಸ್ತಲನ ಒಡನಾಟ ಮತ್ತು ಸ್ನೇಹವು, ಅತಿ ತೃಪ್ತಿಕರವಾದ ಮತ್ತು ಆತ್ಮಿಕವಾಗಿ ಪುಷ್ಟೀಕರಿಸುವ ಅನುಭವವಾಗಿದ್ದಿರಬೇಕು.
ಅರಿಸ್ತಾರ್ಕನು ಅನುಭವಿಸಿದಷ್ಟು ನಾಟಕೀಯ ಅನುಭವಗಳಿರುವ ಸ್ಥಿತಿಯಲ್ಲಿ ನಾವಿರಲಿಕ್ಕಿಲ್ಲ. ಆದರೂ, ಇಂದು ಕ್ರೈಸ್ತ ಸಭೆಯಲ್ಲಿರುವ ಸಕಲರಿಗೂ ಕ್ರಿಸ್ತನ ಆತ್ಮಿಕ ಸಹೋದರರ ಕಡೆಗೆ ಮತ್ತು ಯೆಹೋವನ ಸಂಸ್ಥೆಯ ಕಡೆಗೆ ತದ್ರೀತಿಯ ನಿಷ್ಠೆಯು ಅಗತ್ಯವಾಗಿದೆ. (ಮತ್ತಾಯ 25:34-40ನ್ನು ಹೋಲಿಸಿರಿ.) ಇಂದೊ ಮುಂದೊ, ನಮ್ಮ ಪರಿಚಯಸ್ಥರಾದ ಜೊತೆ ಆರಾಧಕರು, ಪ್ರಾಯಶಃ ವಿಯೋಗ, ಕಾಯಿಲೆ ಅಥವಾ ಇತರ ಪರೀಕ್ಷೆಗಳಿಂದಾಗಿ ದುಃಸ್ಥಿತಿಯನ್ನು ಅಥವಾ ಸಂಕಟವನ್ನು ಅನುಭವಿಸುವುದು ಸಂಭವನೀಯ. ಅವರಿಗೆ ಅಂಟಿಕೊಂಡಿದ್ದು, ಸಹಾಯ, ಸಾಂತ್ವನ ಮತ್ತು ಪ್ರೋತ್ಸಾಹವನ್ನು ಕೊಡುವುದರಿಂದ, ನಾವು ಆನಂದವನ್ನು ಕಂಡುಕೊಳ್ಳಬಲ್ಲೆವು ಹಾಗೂ ನಿಷ್ಠಾವಂತ ಸಂಗಾತಿಗಳೆಂದು ರುಜುಪಡಿಸಬಲ್ಲೆವು.—ಹೋಲಿಸಿ ಜ್ಞಾನೋಕ್ತಿ 17:17; ಅ. ಕೃತ್ಯಗಳು 20:35.