“ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ
“ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.”—1 ಯೋಹಾನ 4:8.
1-3. (ಎ) ಯೆಹೋವನ ಪ್ರೀತಿಯ ಗುಣದ ಕುರಿತು ಬೈಬಲು ಯಾವ ಹೇಳಿಕೆಯನ್ನು ಮಾಡುತ್ತದೆ, ಮತ್ತು ಯಾವ ವಿಧದಲ್ಲಿ ಈ ಹೇಳಿಕೆಯು ಅಪೂರ್ವವಾದದ್ದಾಗಿದೆ? (ಬಿ) “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಎಂದು ಬೈಬಲು ಏಕೆ ಹೇಳುತ್ತದೆ?
ಯೆಹೋವನ ಸಕಲ ಗುಣಲಕ್ಷಣಗಳು ಅತ್ಯುತ್ತಮವಾದವೂ, ಪರಿಪೂರ್ಣವೂ, ಆಕರ್ಷಣೀಯವೂ ಆಗಿವೆ. ಆದರೆ ಯೆಹೋವನ ಗುಣಗಳಲ್ಲಿ ಎಲ್ಲದಕ್ಕಿಂತಲೂ ಅತಿ ಹೆಚ್ಚು ಆಕರ್ಷಣೀಯವಾದ ಗುಣವು ಪ್ರೀತಿಯಾಗಿದೆ. ಯೆಹೋವನ ಬೇರೆ ಯಾವ ಗುಣವೂ ಆತನ ಪ್ರೀತಿಯಷ್ಟು ಪ್ರಬಲವಾದ ರೀತಿಯಲ್ಲಿ ನಮ್ಮನ್ನು ಆತನ ಕಡೆಗೆ ಸೆಳೆಯುವುದಿಲ್ಲ. ಸಂತೋಷಕರವಾಗಿಯೇ, ಪ್ರೀತಿಯು ಆತನ ಎದ್ದುಕಾಣುವ ಗುಣವೂ ಆಗಿದೆ. ಅದು ನಮಗೆ ಹೇಗೆ ಗೊತ್ತು?
2 ಪ್ರೀತಿಯ ಕುರಿತು ಬೈಬಲು ಹೇಳುವಂಥ ಒಂದು ವಿಷಯವನ್ನು, ಅದು ಯೆಹೋವನ ಬೇರೆ ಯಾವ ಪ್ರಧಾನ ಗುಣಗಳ ಬಗ್ಗೆ ತಿಳಿಸುವಾಗಲೂ ಹೇಳುವುದಿಲ್ಲ. ದೇವರು ಶಕ್ತಿಯಾಗಿದ್ದಾನೆ ಎಂದಾಗಲಿ, ನ್ಯಾಯವಾಗಿದ್ದಾನೆ ಎಂದಾಗಲಿ, ವಿವೇಕವಾಗಿದ್ದಾನೆ ಎಂದಾಗಲಿ ಶಾಸ್ತ್ರವಚನಗಳು ತಿಳಿಸುವುದಿಲ್ಲ. ಆತನು ಆ ಗುಣಗಳನ್ನು ಹೊಂದಿದ್ದಾನೆ ಮತ್ತು ಆ ಎಲ್ಲಾ ಮೂರು ಗುಣಗಳ ಮೂಲನು ಆತನಾಗಿದ್ದಾನೆ. ಆದರೆ ಪ್ರೀತಿಯ ಸಂಬಂಧದಲ್ಲಿ, 1 ಯೋಹಾನ 4:8ನೆಯ ವಚನವು ಹೆಚ್ಚು ಗಹನವಾದ ಹೇಳಿಕೆಯನ್ನು ಮಾಡುತ್ತದೆ: “ದೇವರು ಪ್ರೀತಿಸ್ವರೂಪಿಯು.” ಹೌದು, ಯೆಹೋವನಲ್ಲಿ ಪ್ರೀತಿಯು ಉಕ್ಕಿಹರಿಯುತ್ತದೆ. ಅದು ಆತನ ಸತ್ವ ಅಥವಾ ಸ್ವರೂಪವೇ ಆಗಿದೆ. ಸಾಮಾನ್ಯವಾಗಿ ಮಾತಾಡುವಲ್ಲಿ, ನಾವು ಅದರ ವಿಷಯದಲ್ಲಿ ಹೀಗೆ ಯೋಚಿಸಬಹುದು: ಯೆಹೋವನ ಶಕ್ತಿಯು ಆತನನ್ನು ಕ್ರಿಯೆಗೈಯಲು ಶಕ್ತನನ್ನಾಗಿ ಮಾಡುತ್ತದೆ. ಆತನ ನ್ಯಾಯವೂ ಆತನ ವಿವೇಕವೂ ಆತನು ಕ್ರಿಯೆಗೈಯುವ ರೀತಿಯನ್ನು ಮಾರ್ಗದರ್ಶಿಸುತ್ತದೆ. ಆದರೆ ಯೆಹೋವನ ಪ್ರೀತಿಯು ಆತನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ. ಮತ್ತು ಆತನ ಪ್ರೀತಿಯು ಆತನು ಬೇರೆ ಗುಣಗಳನ್ನು ಉಪಯೋಗಿಸುವ ರೀತಿಯಲ್ಲಿ ಸದಾ ಪ್ರತಿಬಿಂಬಿತವಾಗುತ್ತದೆ.
3 ಯೆಹೋವನು ಪ್ರೀತಿಯ ಸಾಕಾರಮೂರ್ತಿಯಾಗಿದ್ದಾನೆ ಎಂದು ಅನೇಕವೇಳೆ ಹೇಳಲಾಗುತ್ತದೆ. ಆದುದರಿಂದ, ನಾವು ಪ್ರೀತಿಯ ಕುರಿತು ಕಲಿಯಲು ಬಯಸುವುದಾದರೆ, ನಾವು ಯೆಹೋವನ ಕುರಿತು ತಿಳಿದುಕೊಳ್ಳಲೇಬೇಕಾಗಿದೆ. ಹಾಗಾದರೆ, ಯೆಹೋವನ ಅನುಪಮ ಪ್ರೀತಿಯ ವೈಶಿಷ್ಟ್ಯಗಳಲ್ಲಿ ಕೆಲವನ್ನು ನಾವೀಗ ಪರೀಕ್ಷಿಸೋಣ.
ಪ್ರೀತಿಯ ಅತ್ಯಂತ ಮಹಾನ್ ಕೃತ್ಯ
4, 5. (ಎ) ಇತಿಹಾಸದಲ್ಲಿಯೇ ಪ್ರೀತಿಯ ಅತ್ಯಂತ ಮಹಾನ್ ಕೃತ್ಯವು ಯಾವುದಾಗಿದೆ? (ಬಿ) ಯೆಹೋವನೂ ಆತನ ಪುತ್ರನೂ, ಇಷ್ಟರ ತನಕ ರೂಪಿಸಲ್ಪಟ್ಟಿರುವ ಪ್ರೀತಿಯ ಬಂಧಗಳಲ್ಲೇ ಅತ್ಯಂತ ಪ್ರಬಲವಾದ ಬಂಧದಲ್ಲಿ ಐಕ್ಯಗೊಂಡಿದ್ದಾರೆ ಎಂದು ನಾವೇಕೆ ಹೇಳಸಾಧ್ಯವಿದೆ?
4 ಯೆಹೋವನು ಅನೇಕ ವಿಧಗಳಲ್ಲಿ ಪ್ರೀತಿಯನ್ನು ತೋರಿಸಿದ್ದಾನಾದರೂ, ಅವುಗಳಲ್ಲಿ ಒಂದು ವಿಧವು ಬೇರೆಲ್ಲವನ್ನೂ ಮೀರಿಸುತ್ತದೆ. ಅದು ಯಾವುದಾಗಿದೆ? ತನ್ನ ಪುತ್ರನು ನಮಗಾಗಿ ಕಷ್ಟಾನುಭವಿಸಿ ಮರಣ ಹೊಂದುವಂತೆ ಕಳುಹಿಸಿದ್ದೇ ಅದಾಗಿದೆ. ಇಡೀ ಇತಿಹಾಸದಲ್ಲೇ ಇದನ್ನು ಪ್ರೀತಿಯ ಅತ್ಯಂತ ಮಹಾನ್ ಕೃತ್ಯವೆಂದು ನಾವು ಸೂಕ್ತವಾಗಿಯೇ ಹೇಳಸಾಧ್ಯವಿದೆ. ನಾವು ಏಕೆ ಹಾಗೆ ಹೇಳುತ್ತೇವೆ?
5 ಬೈಬಲ್ ಯೇಸುವನ್ನು ‘ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು’ ಎಂದು ಕರೆಯುತ್ತದೆ. (ಕೊಲೊಸ್ಸೆ 1:15) ಭೌತಿಕ ವಿಶ್ವಕ್ಕೆ ಮುಂಚೆಯೇ ಯೆಹೋವನ ಪುತ್ರನು ಅಸ್ತಿತ್ವದಲ್ಲಿದ್ದನು ಎಂಬುದನ್ನು ತುಸು ಆಲೋಚಿಸಿರಿ. ಹಾಗಾದರೆ, ತಂದೆಯೂ ಪುತ್ರನೂ ಎಷ್ಟು ಕಾಲದ ವರೆಗೆ ಜೊತೆಯಾಗಿದ್ದರು? ಈ ವಿಶ್ವವು 1,300 ಕೋಟಿ ವರ್ಷಗಳಷ್ಟು ಹಳೆಯದಾಗಿದೆ ಎಂದು ಕೆಲವು ವಿಜ್ಞಾನಿಗಳು ಅಂದಾಜುಮಾಡುತ್ತಾರೆ. ಒಂದುವೇಳೆ ಈ ಅಂದಾಜು ಸರಿಯಾಗಿರುವುದಾದರೂ, ಯೆಹೋವನ ಜ್ಯೇಷ್ಠಪುತ್ರನ ಜೀವನಾಯುಷ್ಯವನ್ನು ಪ್ರತಿನಿಧಿಸಲು ಇದು ಸಾಕಷ್ಟು ದೀರ್ಘ ಕಾಲಾವಧಿಯಾಗಿರುವುದಿಲ್ಲ! ಆ ಎಲ್ಲಾ ಯುಗಗಳಾದ್ಯಂತ ಅವನು ಏನು ಮಾಡುತ್ತಿದ್ದನು? ಈ ಪುತ್ರನು ಸಂತೋಷದಿಂದ ತನ್ನ ತಂದೆಯ ಬಳಿ ಕುಶಲ “ಶಿಲ್ಪಿ”ಯಾಗಿ ಕೆಲಸಮಾಡುತ್ತಿದ್ದನು. (ಜ್ಞಾನೋಕ್ತಿ 8:30; ಯೋಹಾನ 1:3) ಯೆಹೋವನೂ ಆತನ ಪುತ್ರನೂ ಸಕಲವನ್ನೂ ಅಸ್ತಿತ್ವಕ್ಕೆ ತರುವುದರಲ್ಲಿ ಒಟ್ಟಿಗೆ ಕಾರ್ಯನಡಿಸಿದರು. ಅವರಿಬ್ಬರೂ ಎಷ್ಟು ರೋಮಾಂಚಕವಾದ, ಸಂತೋಷಭರಿತ ಸಮಯದಲ್ಲಿ ಆನಂದಿಸಿದರು! ಹೀಗಿರುವಾಗ, ಅಷ್ಟೊಂದು ಅಪರಿಮಿತವಾದ ಕಾಲಾವಧಿಯಲ್ಲಿ ಅವರ ಮಧ್ಯೆ ಇದ್ದ ಬಂಧದ ಶಕ್ತಿಯನ್ನು ನಮ್ಮಲ್ಲಿ ಯಾರು ನಿಜವಾಗಿಯೂ ಅರ್ಥಮಾಡಿಕೊಳ್ಳಶಕ್ತರು? ಯೆಹೋವ ದೇವರೂ ಆತನ ಪುತ್ರನೂ, ಇಷ್ಟರ ತನಕ ರೂಪಿಸಲ್ಪಟ್ಟಿರುವ ಪ್ರೀತಿಯ ಬಂಧಗಳಲ್ಲೇ ಅತ್ಯಂತ ಪ್ರಬಲವಾದ ಬಂಧದಲ್ಲಿ ಐಕ್ಯಗೊಂಡಿದ್ದಾರೆ ಎಂಬುದಂತೂ ಸುಸ್ಪಷ್ಟ.
6. ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ, ಯೆಹೋವನು ತನ್ನ ಪುತ್ರನ ಕುರಿತಾದ ತನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಿದನು?
6 ಆದರೂ, ಯೆಹೋವನು ತನ್ನ ಪುತ್ರನನ್ನು ಒಂದು ಮಾನವ ಶಿಶುವಾಗಿ ಜನಿಸುವಂತೆ ಭೂಮಿಗೆ ಕಳುಹಿಸಿಕೊಟ್ಟನು. ಹೀಗೆ ಮಾಡುವುದು, ಮೂರು ದಶಕಗಳಿಗಿಂತಲೂ ಹೆಚ್ಚು ಸಮಯಾವಧಿಯ ವರೆಗೆ ಯೆಹೋವನು ಸ್ವರ್ಗದಲ್ಲಿ ತನ್ನ ಪ್ರೀತಿಯ ಪುತ್ರನೊಂದಿಗಿನ ಆಪ್ತ ಸಹವಾಸವನ್ನು ಬಿಟ್ಟುಕೊಡುವುದನ್ನು ಅರ್ಥೈಸಿತು. ಯೇಸು ಒಬ್ಬ ಪರಿಪೂರ್ಣ ಮಾನವನಾಗಿ ಬೆಳೆಯುತ್ತಿದ್ದಾಗ, ಸ್ವರ್ಗದಿಂದ ಯೆಹೋವನು ತೀವ್ರವಾದ ಆಸಕ್ತಿಯಿಂದ ಅವನನ್ನು ಗಮನಿಸಿದನು. ಸುಮಾರು 30ರ ಪ್ರಾಯದಲ್ಲಿ ಯೇಸು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಆ ಸಂದರ್ಭದಲ್ಲಿ ಈ ತಂದೆಯು ಸ್ವರ್ಗದಿಂದ ವೈಯಕ್ತಿಕವಾಗಿ ಮಾತಾಡಿದನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:17) ಪ್ರವಾದಿಸಲ್ಪಟ್ಟಂಥ ಎಲ್ಲಾ ಸಂಗತಿಗಳನ್ನು, ಅವನಿಂದ ಕೇಳಿಕೊಳ್ಳಲ್ಪಟ್ಟಿದ್ದ ಎಲ್ಲಾ ಕೆಲಸಗಳನ್ನು ಯೇಸು ನಂಬಿಗಸ್ತಿಕೆಯಿಂದ ಪೂರೈಸುವುದನ್ನು ನೋಡಿ ಅವನ ತಂದೆಯು ಎಷ್ಟು ಹರ್ಷಾನಂದಪಟ್ಟಿರಬೇಕು!—ಯೋಹಾನ 5:36; 17:4.
7, 8. (ಎ) ಸಾ.ಶ. 33ರ ನೈಸಾನ್ 14ರಂದು ಯೇಸು ಏನನ್ನು ತಾಳಿಕೊಳ್ಳಬೇಕಾಯಿತು, ಮತ್ತು ಇದು ಅವನ ಸ್ವರ್ಗೀಯ ತಂದೆಯ ಮೇಲೆ ಹೇಗೆ ಪರಿಣಾಮ ಬೀರಿತು? (ಬಿ) ತನ್ನ ಪುತ್ರನು ಕಷ್ಟಾನುಭವಿಸಿ ಸಾಯುವಂತೆ ಯೆಹೋವನು ಏಕೆ ಅನುಮತಿಸಿದನು?
7 ಆದರೂ, ಸಾ.ಶ. 33ರ ನೈಸಾನ್ 14ರಂದು ಯೇಸುವಿಗೆ ವಿಶ್ವಾಸದ್ರೋಹ ಮಾಡಲ್ಪಟ್ಟಾಗ ಮತ್ತು ನಂತರ ಕೋಪಗೊಂಡಿದ್ದ ಜನರ ಗುಂಪಿನಿಂದ ಅವನು ಸೆರೆಹಿಡಿಯಲ್ಪಟ್ಟಾಗ ಯೆಹೋವನಿಗೆ ಹೇಗನಿಸಿತು? ಜನರು ಯೇಸುವಿಗೆ ಅಪಹಾಸ್ಯಮಾಡಿ, ಅವನ ಮೇಲೆ ಉಗುಳಿ, ಮುಷ್ಟಿಗಳಿಂದ ಗುದ್ದಿದಾಗ ಆತನಿಗೆ ಹೇಗಾಗಿರಬೇಕು? ಅವನು ಕೊರಡೆಗಳಿಂದ ಹೊಡೆಯಲ್ಪಟ್ಟು, ಅವನ ಬೆನ್ನು ಗಾಯಗಳಿಂದ ಛಿದ್ರಗೊಂಡಾಗ ಅದನ್ನು ನೋಡಿ ಆತನಿಗೆ ಹೇಗನಿಸಿತು? ಒಂದು ಮರದ ಕಂಬದ ಮೇಲೆ ಅವನ ಕೈಕಾಲುಗಳನ್ನು ಮೊಳೆಗಳಿಂದ ಜಡಿದು, ಕಂಬದ ಮೇಲೆ ನೇತಾಡುತ್ತಿರುವಂತೆ ಬಿಡಲ್ಪಟ್ಟು, ಜನರು ಅವನನ್ನು ನಿಂದಿಸುತ್ತಿದ್ದಾಗ ಆತನಿಗೆ ಯಾವ ಅನಿಸಿಕೆಯಾಯಿತು? ತನ್ನ ಪ್ರಿಯ ಪುತ್ರನು ತೀವ್ರ ಯಾತನೆಯ ಕಾರಣ ಮಹಾಧ್ವನಿಯಿಂದ ಕೂಗಿದ್ದನ್ನು ಕೇಳಿಸಿಕೊಂಡು ಆ ತಂದೆಗೆ ಹೇಗನಿಸಿರಬೇಕು? ಯೇಸು ಕೊನೆಯುಸಿರೆಳೆದಾಗ, ಮತ್ತು ಸರ್ವ ಸೃಷ್ಟಿಯು ಆರಂಭವಾದಾಗಿನಿಂದ ಮೊತ್ತಮೊದಲ ಬಾರಿಗೆ ತನ್ನ ಪ್ರಿಯ ಪುತ್ರನು ಅಸ್ತಿತ್ವದಲ್ಲಿಲ್ಲದೆ ಹೋದಾಗ ಯೆಹೋವನಿಗೆ ಯಾವ ಅನಿಸಿಕೆಯಾಯಿತು?—ಮತ್ತಾಯ 26:14-16, 46, 47, 56, 59, 67; 27:26, 38-44, 46; ಯೋಹಾನ 19:1.
8 ಯೆಹೋವನಿಗೆ ಭಾವನೆಗಳಿರುವುದರಿಂದ, ತನ್ನ ಪುತ್ರನ ಮರಣದ ಸಮಯದಲ್ಲಿ ಆತನು ಅನುಭವಿಸಿರಬಹುದಾದ ನೋವನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಆದರೆ ಅದೆಲ್ಲವೂ ಸಂಭವಿಸುವಂತೆ ಅನುಮತಿಸಿದ್ದಕ್ಕೆ ಯೆಹೋವನಿಗಿದ್ದ ಉದ್ದೇಶವನ್ನು ಖಂಡಿತವಾಗಿಯೂ ವ್ಯಕ್ತಪಡಿಸಸಾಧ್ಯವಿದೆ. ತಂದೆಯು ತನ್ನನ್ನು ಅಷ್ಟೊಂದು ನೋವಿಗೆ ಒಳಪಡಿಸಿಕೊಂಡದ್ದೇಕೆ? ಯೋಹಾನ 3:16ರಲ್ಲಿ ಯೆಹೋವನು ನಮಗೆ ಆಶ್ಚರ್ಯಕರವಾದ ವಿಷಯವೊಂದನ್ನು ತಿಳಿಯಪಡಿಸುತ್ತಾನೆ. ಬೈಬಲಿನ ಈ ವಚನವು ಎಷ್ಟು ಪ್ರಾಮುಖ್ಯವಾದ ವಚನವಾಗಿದೆಯೆಂದರೆ, ಅದನ್ನು ಸುವಾರ್ತಾ ಪುಸ್ತಕಗಳ ಸೂಕ್ಷ್ಮ ಪ್ರತಿರೂಪವೆಂದು ಕರೆಯಲಾಗಿದೆ. ಅದು ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಹೀಗೆ, ಪ್ರೀತಿಯೇ ದೇವರ ಉದ್ದೇಶದ ಸಾರಾಂಶವಾಗಿತ್ತು. ಇದಕ್ಕಿಂತಲೂ ಹೆಚ್ಚಿನ ಪ್ರೀತಿಯು ಎಂದೂ ತೋರಿಸಲ್ಪಟ್ಟಿಲ್ಲ.
ಯೆಹೋವನು ತನ್ನ ಪ್ರೀತಿಯ ಆಶ್ವಾಸನೆಯನ್ನು ಕೊಡುವ ವಿಧ
9. ನಮ್ಮ ಕುರಿತಾದ ಯೆಹೋವನ ದೃಷ್ಟಿಕೋನದ ಬಗ್ಗೆ ಏನನ್ನು ನಂಬುವಂತೆ ಸೈತಾನನು ಬಯಸುತ್ತಾನೆ, ಆದರೆ ಯೆಹೋವನು ನಮಗೆ ಯಾವ ಆಶ್ವಾಸನೆ ಕೊಡುತ್ತಾನೆ?
9 ಆದರೂ, ಒಂದು ಪ್ರಮುಖ ಪ್ರಶ್ನೆಯು ಏಳುತ್ತದೆ: ದೇವರು ನಮ್ಮನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತಾನೋ? ಯೋಹಾನ 3:16 ಹೇಳುವಂತೆ, ದೇವರು ಜನರನ್ನು ಸಾಮೂಹಿಕವಾಗಿ ಪ್ರೀತಿಸುತ್ತಾನೆಂಬ ಮಾತನ್ನು ಕೆಲವರು ಅಂಗೀಕರಿಸಬಹುದು. ಆದರೆ ‘ದೇವರು ನನ್ನನ್ನು ವ್ಯಕ್ತಿಗತವಾಗಿ ಎಂದಿಗೂ ಪ್ರೀತಿಸನು’ ಎಂದು ಅವರು ಕಾರ್ಯತಃ ನೆನಸುತ್ತಾರೆ. ವಾಸ್ತವವೇನಂದರೆ, ಯೆಹೋವನು ನಮ್ಮನ್ನು ಪ್ರೀತಿಸುವುದೂ ಇಲ್ಲ, ನಾವು ಅಮೂಲ್ಯರೆಂದೆಣಿಸುವುದೂ ಇಲ್ಲ ಎಂದು ನಾವು ನಂಬುವಂತೆ ಮಾಡಲು ಸೈತಾನನಿಗೆ ತೀವ್ರಾಸಕ್ತಿಯಿದೆ. ಇನ್ನೊಂದು ಕಡೆಯಲ್ಲಿ, ನಾವು ಪ್ರೀತಿಸಲ್ಪಡಲು ಅಯೋಗ್ಯರೂ ಪ್ರಯೋಜನವಿಲ್ಲದವರೂ ಆಗಿದ್ದೇವೆಂದು ನಾವು ಎಷ್ಟೇ ನೆನಸುವುದಾದರೂ, ತನ್ನ ನಂಬಿಗಸ್ತ ಸೇವಕರಲ್ಲಿ ಪ್ರತಿಯೊಬ್ಬರೂ ತನಗೆ ಅಮೂಲ್ಯರಾಗಿದ್ದಾರೆಂದು ಯೆಹೋವನು ಆಶ್ವಾಸನೆ ಕೊಡುತ್ತಾನೆ.
10, 11. ಗುಬ್ಬಿಗಳ ಕುರಿತಾದ ಯೇಸುವಿನ ದೃಷ್ಟಾಂತವು, ಯೆಹೋವನ ದೃಷ್ಟಿಯಲ್ಲಿ ನಮಗೆ ಮೌಲ್ಯವಿದೆ ಎಂಬುದನ್ನು ಹೇಗೆ ತೋರಿಸುತ್ತದೆ?
10 ಉದಾಹರಣೆಗೆ, ಮತ್ತಾಯ 10:29-31ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳನ್ನು ನೋಡಿರಿ. ತನ್ನ ಶಿಷ್ಯರ ಮೌಲ್ಯವನ್ನು ದೃಷ್ಟಾಂತಿಸುತ್ತಾ ಯೇಸು ಹೇಳಿದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” ಆ ಪ್ರಥಮ ಶತಮಾನದ ಕೇಳುಗರಿಗೆ ಆ ಮಾತುಗಳು ಏನನ್ನು ಅರ್ಥೈಸಿದವೆಂಬುದನ್ನು ಪರಿಗಣಿಸಿರಿ.
11 ಯೇಸುವಿನ ದಿನಗಳಲ್ಲಿ, ಆಹಾರಕ್ಕಾಗಿ ಮಾರಲ್ಪಡುತ್ತಿದ್ದ ಪಕ್ಷಿಗಳಲ್ಲಿ ಗುಬ್ಬಿಯು ತೀರ ಕಡಿಮೆ ಬೆಲೆಯದ್ದಾಗಿತ್ತು. ಖರೀದಿಸುವವನು, ಅಲ್ಪ ಮೌಲ್ಯದ ಒಂದು ನಾಣ್ಯಕ್ಕೆ ಎರಡು ಗುಬ್ಬಿಗಳನ್ನು ಪಡೆಯುತ್ತಿದ್ದನು. ಆದರೆ ಲೂಕ 12:6, 7ಕ್ಕನುಸಾರ ಯೇಸು ತರುವಾಯ ಹೇಳಿದ್ದೇನೆಂದರೆ, ಒಬ್ಬನು ಎರಡು ನಾಣ್ಯಗಳನ್ನು ಕೊಡುವಲ್ಲಿ ಅವನಿಗೆ ನಾಲ್ಕು ಗುಬ್ಬಿಗಳಲ್ಲ, ಐದು ಗುಬ್ಬಿಗಳು ದೊರೆಯುತ್ತಿದ್ದವು. ಹೆಚ್ಚಿನ ಆ ಒಂದು ಗುಬ್ಬಿಯನ್ನು, ಅದಕ್ಕೆ ಬೆಲೆಯೇ ಇಲ್ಲವೆಂಬಂತೆ ಕೊಡಲಾಗುತ್ತಿತ್ತು. ಪ್ರಾಯಶಃ ಅಂತಹ ಪಕ್ಷಿಗಳು ಮನುಷ್ಯನ ದೃಷ್ಟಿಯಲ್ಲಿ ಬೆಲೆಯಿಲ್ಲದವುಗಳಾಗಿದ್ದರೂ, ಸೃಷ್ಟಿಕರ್ತನು ಅವುಗಳನ್ನು ಹೇಗೆ ವೀಕ್ಷಿಸಿದನು? ಯೇಸು ಹೇಳಿದ್ದು: “ಅವುಗಳಲ್ಲಿ ಒಂದಾದರೂ [ಹೆಚ್ಚಿಗೆ ಕೊಡಲ್ಪಟ್ಟ ಆ ಗುಬ್ಬಿಯನ್ನೂ ಸೇರಿಸಿ] ದೇವರಿಗೆ ಮರೆತುಹೋಗುವದಿಲ್ಲ.” ಈಗ ನಮಗೆ ಯೇಸುವಿನ ಮಾತುಗಳ ಮುಖ್ಯಾಂಶವು ಅರ್ಥವಾಗಬಹುದು. ಯೆಹೋವನು ಕೇವಲ ಒಂದು ಗುಬ್ಬಿಗೆ ಅಷ್ಟು ಬೆಲೆಯನ್ನು ಕೊಡುವುದಾದರೆ, ಮಾನವನು ಅದಕ್ಕಿಂತ ಎಷ್ಟು ಹೆಚ್ಚು ಬೆಲೆಯುಳ್ಳವನಾಗಿರುವನು! ಯೇಸು ಹೇಳಿದಂತೆ, ಯೆಹೋವನಿಗೆ ನಮ್ಮ ಬಗ್ಗೆ ಪ್ರತಿಯೊಂದು ವಿವರವೂ ತಿಳಿದಿದೆ. ಅಷ್ಟೇಕೆ, ನಮ್ಮ ತಲೆಗೂದಲುಗಳು ಸಹ ಎಣಿಸಲ್ಪಟ್ಟಿವೆ!
12. ನಮ್ಮ ತಲೆಗೂದಲುಗಳು ಎಣಿಸಲ್ಪಟ್ಟಿರುವುದರ ಕುರಿತು ಯೇಸು ಮಾತಾಡಿದಾಗ, ಅವನು ವಾಸ್ತವಿಕ ಸಂಗತಿಯನ್ನು ತಿಳಿಸುತ್ತಿದ್ದನು ಎಂಬ ಖಾತ್ರಿ ನಮಗಿರಬಲ್ಲದೇಕೆ?
12 ಯೇಸು ಇಲ್ಲಿ ಅತಿಶಯಿಸಿ ಮಾತಾಡುತ್ತಿದ್ದನೆಂದು ಕೆಲವರು ಊಹಿಸಬಹುದು. ಆದರೆ ಪುನರುತ್ಥಾನದ ನಿರೀಕ್ಷೆಯ ಕುರಿತು ತುಸು ಯೋಚಿಸಿರಿ. ನಮ್ಮನ್ನು ಪುನರ್ನಿರ್ಮಿಸಲು ಯೆಹೋವನಿಗೆ ನಮ್ಮ ಬಗ್ಗೆ ಎಷ್ಟು ಆಪ್ತವಾದ ಪರಿಚಯವಿರಬೇಕು! ಆತನು ನಮ್ಮನ್ನು ಎಷ್ಟು ಅಮೂಲ್ಯವೆಂದೆಣಿಸುತ್ತಾನೆಂದರೆ, ಆತನು ನಮ್ಮ ಜಟಿಲವಾದ ಆನುವಂಶಿಕ ಸಂಕೇತ ಭಾಷೆ ಮತ್ತು ನಮ್ಮ ವರ್ಷಾನುಗಟ್ಟಲೆಯ ನೆನಪುಗಳು ಹಾಗೂ ಅನುಭವಗಳ ಸಮೇತ ಪ್ರತಿಯೊಂದು ವಿವರವನ್ನೂ ಜ್ಞಾಪಕದಲ್ಲಿಡುತ್ತಾನೆ. ಇದಕ್ಕೆ ಹೋಲಿಸುವಾಗ, ನಮ್ಮ ತಲೆಗೂದಲುಗಳನ್ನು—ಪ್ರತಿ ತಲೆಯಲ್ಲಿ ಬೆಳೆಯುವ ಸರಾಸರಿ 1 ಲಕ್ಷ ಕೂದಲುಗಳನ್ನು—ಎಣಿಸುವುದು ಅತಿ ಸುಲಭದ ಕೆಲಸವಾಗಿರುವುದು! ಯೇಸುವಿನ ಮಾತುಗಳು, ಯೆಹೋವನು ನಮ್ಮ ಬಗ್ಗೆ ವ್ಯಕ್ತಿಗತವಾಗಿ ಚಿಂತಿಸುತ್ತಾನೆಂಬ ಆಶ್ವಾಸನೆಯನ್ನು ಎಷ್ಟು ಸೊಗಸಾಗಿ ನೀಡುತ್ತವೆ!
13. ಅರಸನಾದ ಯೆಹೋಷಾಫಾಟನ ಉದಾಹರಣೆಯು, ನಾವು ಅಪರಿಪೂರ್ಣರಾಗಿರುವುದಾದರೂ ಯೆಹೋವನು ನಮ್ಮಲ್ಲಿರುವ ಒಳ್ಳೇ ಅಂಶವನ್ನು ಗಮನಿಸುತ್ತಾನೆ ಎಂಬುದನ್ನು ಹೇಗೆ ತೋರಿಸುತ್ತದೆ?
13 ಯೆಹೋವನ ಪ್ರೀತಿಯ ಆಶ್ವಾಸನೆಯನ್ನು ಕೊಡುವಂತಹ ಬೇರೊಂದು ವಿಷಯವನ್ನು ಬೈಬಲು ತಿಳಿಯಪಡಿಸುತ್ತದೆ. ಅದೇನೆಂದರೆ, ಆತನು ನಮ್ಮಲ್ಲಿರುವ ಒಳ್ಳೇ ಅಂಶಗಳನ್ನು ಗಮನಿಸುತ್ತಾನೆ ಮತ್ತು ಅವುಗಳನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ. ಉದಾಹರಣೆಗೆ, ಒಳ್ಳೇ ಅರಸನಾಗಿದ್ದ ಯೆಹೋಷಾಫಾಟನ ಕುರಿತು ಪರಿಗಣಿಸಿರಿ. ಆ ಅರಸನು ಒಂದು ಮೂರ್ಖ ಕೃತ್ಯವನ್ನು ಮಾಡಿದಾಗ, ಯೆಹೋವನ ಪ್ರವಾದಿಯು ಅವನಿಗೆ ಹೇಳಿದ್ದು: “ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.” ಎಷ್ಟು ಗಂಭೀರವಾದ ವಿಚಾರವಿದು! ಆದರೆ ಯೆಹೋವನ ಸಂದೇಶವು ಅಷ್ಟಕ್ಕೇ ಕೊನೆಗೊಳ್ಳಲಿಲ್ಲ. ಅದು ಹೀಗೆ ಮುಂದುವರಿಯಿತು: “ಆದರೂ . . . ನಿನ್ನಲ್ಲಿ ಸುಶೀಲತೆಯೂ [“ಒಳ್ಳೇ ವಿಷಯಗಳು,” NW] ಉಂಟೆಂದು ತಿಳಿದು ಬಂತು.” (2 ಪೂರ್ವಕಾಲವೃತ್ತಾಂತ 19:1-3) ಹೀಗೆ, ಯೆಹೋವನ ನೀತಿಭರಿತ ಕೋಪವು, ಯೆಹೋಷಾಫಾಟನ ಕುರಿತಾದ ‘ಒಳ್ಳೇ ವಿಷಯಗಳನ್ನು’ ಗಮನಿಸುವುದರಿಂದ ಆತನನ್ನು ತಡೆಯಲಿಲ್ಲ. ನಾವು ಅಪರಿಪೂರ್ಣರಾಗಿರುವುದಾದರೂ, ನಮ್ಮ ದೇವರು ನಮ್ಮಲ್ಲಿರುವ ಒಳ್ಳೇ ಅಂಶವನ್ನು ಗಮನಿಸುತ್ತಾನೆ ಎಂಬುದನ್ನು ತಿಳಿಯುವುದು ಪುನರಾಶ್ವಾಸನೆಯನ್ನು ನೀಡುವುದಿಲ್ಲವೋ?
“ಕ್ಷಮಿಸಲು” ಸಿದ್ಧನಾಗಿರುವಂಥ ಒಬ್ಬ ದೇವರು
14. ನಾವು ಪಾಪಮಾಡಿದಾಗ ಹೊರೆಯಂತಿರುವ ಯಾವ ಅನಿಸಿಕೆಗಳು ನಮಗಿರಬಹುದು, ಆದರೆ ಯೆಹೋವನ ಕ್ಷಮಾಪಣೆಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು?
14 ನಾವು ಪಾಪಮಾಡಿದಾಗ ಅನುಭವಿಸಬಹುದಾದ ಆಶಾಭಂಗ, ನಾಚಿಕೆ ಮತ್ತು ದೋಷಿ ಮನೋಭಾವವು, ನಾವೆಂದಿಗೂ ಯೆಹೋವನ ಸೇವೆಮಾಡಲು ಅರ್ಹರಾಗಸಾಧ್ಯವಿಲ್ಲ ಎಂದು ನೆನಸುವಂತೆ ಮಾಡಬಹುದು. ಆದರೂ, ಯೆಹೋವನು “ಕ್ಷಮಿಸಲು” ಸಿದ್ಧನಾಗಿದ್ದಾನೆ ಎಂಬುದನ್ನು ಮರೆಯದಿರಿ. (ಕೀರ್ತನೆ 86:5) ಹೌದು, ನಮ್ಮ ಪಾಪಗಳಿಗಾಗಿ ನಾವು ಪಶ್ಚಾತ್ತಾಪಪಡುವುದಾದರೆ ಮತ್ತು ಅವುಗಳನ್ನು ಪುನರಾವರ್ತಿಸದಿರಲು ಸತತವಾಗಿ ಪ್ರಯತ್ನಿಸುವುದಾದರೆ, ಯೆಹೋವನ ಕ್ಷಮಾಪಣೆಯಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಯೆಹೋವನ ಪ್ರೀತಿಯ ಈ ಅದ್ಭುತಕರ ಅಂಶವನ್ನು ಬೈಬಲು ಹೇಗೆ ವರ್ಣಿಸುತ್ತದೆ ಎಂಬುದನ್ನು ಪರಿಗಣಿಸಿರಿ.
15. ಯೆಹೋವನು ನಮ್ಮ ಪಾಪಗಳನ್ನು ನಮ್ಮಿಂದ ಎಷ್ಟರ ಮಟ್ಟಿಗೆ ದೂರ ಮಾಡುತ್ತಾನೆ?
15 ಯೆಹೋವನ ಕ್ಷಮಾಪಣೆಯನ್ನು ವರ್ಣಿಸಲಿಕ್ಕಾಗಿ ಕೀರ್ತನೆಗಾರನಾದ ದಾವೀದನು ಸುಸ್ಪಷ್ಟವಾದ ಅಭಿವ್ಯಕ್ತಿಯನ್ನು ಉಪಯೋಗಿಸಿದನು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.” (ಕೀರ್ತನೆ 103:12, ಓರೆ ಅಕ್ಷರಗಳು ನಮ್ಮವು.) ಹಾಗಾದರೆ ಪೂರ್ವಕ್ಕೂ ಪಶ್ಚಿಮಕ್ಕೂ ನಡುವೆ ಎಷ್ಟು ಅಂತರವಿದೆ? ಒಂದರ್ಥದಲ್ಲಿ, ಪೂರ್ವ ದಿಕ್ಕು ಯಾವಾಗಲೂ ಪಶ್ಚಿಮ ದಿಕ್ಕಿನಿಂದ ಊಹಿಸಸಾಧ್ಯವಿರುವುದಕ್ಕಿಂತಲೂ ಅತ್ಯಧಿಕ ದೂರದಲ್ಲಿರುತ್ತದೆ; ಈ ಎರಡು ಬಿಂದುಗಳು ಎಂದೂ ಪರಸ್ಪರ ಸಂಧಿಸುವುದಿಲ್ಲ. ಈ ಅಭಿವ್ಯಕ್ತಿಯ ಅರ್ಥವನ್ನು ಒಬ್ಬ ವಿದ್ವಾಂಸರು, “ಸಾಧ್ಯವಿರುವಷ್ಟು ದೂರ; ನಾವು ಊಹಿಸಸಾಧ್ಯವಿರುವುದಕ್ಕಿಂತಲೂ ತುಂಬ ದೂರ” ಎಂದು ವಿವರಿಸುತ್ತಾರೆ. ಯೆಹೋವನು ಕ್ಷಮಾಪಣೆಯನ್ನು ನೀಡುವಾಗ, ಆತನು ನಮ್ಮ ಪಾಪಗಳನ್ನು ನಾವು ಊಹಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚು ದೂರ ಮಾಡುತ್ತಾನೆ ಎಂದು ದಾವೀದನ ಪ್ರೇರಿತ ಮಾತುಗಳು ನಮಗೆ ತಿಳಿಸುತ್ತವೆ.
16. ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ಅಂದಿನಿಂದ ಆತನು ನಮ್ಮನ್ನು ಶುದ್ಧರನ್ನಾಗಿ ಪರಿಗಣಿಸುತ್ತಾನೆ ಎಂಬ ಆಶ್ವಾಸನೆ ನಮಗೆ ಏಕೆ ಇರಬಹುದು?
16 ತಿಳಿ ಬಣ್ಣದ ಬಟ್ಟೆಯ ಮೇಲಿನ ಒಂದು ಕಲೆಯನ್ನು ತೆಗೆಯಲು ನೀವೆಂದಾದರೂ ಪ್ರಯತ್ನಿಸಿದ್ದೀರೋ? ಬಹುಶಃ ನಿಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಆ ಕಲೆಯು ಸ್ವಲ್ಪಮಟ್ಟಿಗೆ ಇನ್ನೂ ಉಳಿದಿರಬಹುದು. ಆದರೆ ಕ್ಷಮಾಪಣೆಯ ವಿಷಯದಲ್ಲಿ ತನಗಿರುವ ಸಾಮರ್ಥ್ಯವನ್ನು ಯೆಹೋವನು ಹೇಗೆ ವರ್ಣಿಸುತ್ತಾನೆ ಎಂಬುದನ್ನು ಗಮನಿಸಿರಿ: “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣ [“ರಕ್ತವರ್ಣ,” NW]ವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.” (ಯೆಶಾಯ 1:18, ಓರೆ ಅಕ್ಷರಗಳು ನಮ್ಮವು.) ‘ಕಡು ಕೆಂಪು’ ಎಂಬ ಪದವು ಗಾಢ ಕೆಂಪು ಬಣ್ಣವನ್ನು ಸೂಚಿಸುತ್ತದೆ.a “ರಕ್ತವರ್ಣ”ವು ಬಣ್ಣಹಾಕಲ್ಪಟ್ಟಿರುವ ವಸ್ತುವಿನ ಗಾಢ ವರ್ಣಗಳಲ್ಲಿ ಒಂದಾಗಿದೆ. ನಮ್ಮ ಸ್ವಂತ ಪ್ರಯತ್ನಗಳಿಂದ ನಾವೆಂದಿಗೂ ಪಾಪದ ಕಲೆಯನ್ನು ಅಳಿಸಿಹಾಕಲಾರೆವು. ಆದರೆ, ಕಡು ಕೆಂಪು ಮತ್ತು ರಕ್ತವರ್ಣದಂತಿರುವ ಪಾಪಗಳನ್ನು ಯೆಹೋವನು ಅಳಿಸಿಹಾಕಬಲ್ಲನು ಮತ್ತು ಅವುಗಳನ್ನು ಹಿಮದ ಹಾಗೆ ಬಿಳುಪಾಗಿ ಅಥವಾ ಉಣ್ಣೆಯಷ್ಟು ಬೆಳ್ಳಗಾಗಿ ಮಾಡಬಲ್ಲನು. ಆದುದರಿಂದ, ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ನಮ್ಮ ಉಳಿದ ಜೀವಮಾನವೆಲ್ಲಾ ಅಂಥ ಪಾಪಗಳ ಕಲೆಯು ನಮ್ಮ ಮೇಲಿರುತ್ತದೆ ಎಂದು ನೆನಸುವ ಆವಶ್ಯಕತೆಯಿಲ್ಲ.
17. ಯಾವ ಅರ್ಥದಲ್ಲಿ ಯೆಹೋವನು ನಮ್ಮ ಪಾಪಗಳನ್ನು ತನ್ನ ಬೆನ್ನ ಹಿಂದೆ ಹಾಕುತ್ತಾನೆ?
17 ಹಿಜ್ಕೀಯನು ಮರಣಕರ ರೋಗದಿಂದ ಕಾಪಾಡಲ್ಪಟ್ಟ ಬಳಿಕ, ತಾನು ರಚಿಸಿದ ಕೃತಜ್ಞತೆಯ ಒಂದು ಭಾವಪ್ರಚೋದಕ ಗೀತೆಯಲ್ಲಿ ಅವನು ಯೆಹೋವನಿಗೆ ಹೇಳಿದ್ದು: “ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನ ಹಿಂದೆ ಹಾಕಿಬಿಟ್ಟಿದ್ದೀ.” (ಯೆಶಾಯ 38:17) ಇಲ್ಲಿ ಯೆಹೋವನು ಪಶ್ಚಾತ್ತಾಪಪಡುವಂಥ ಒಬ್ಬ ತಪ್ಪಿತಸ್ಥನ ಪಾಪಗಳನ್ನು ಅವನಿಂದ ತೆಗೆದು, ಇನ್ನೆಂದಿಗೂ ಅವುಗಳನ್ನು ನೋಡದಿರಲಿಕ್ಕಾಗಿ ಅಥವಾ ಪರಿಗಣಿಸದಿರಲಿಕ್ಕಾಗಿ ಅವುಗಳನ್ನು ತನ್ನ ಬೆನ್ನ ಹಿಂದೆ ಹಾಕಿಬಿಡುವಂತೆ ಚಿತ್ರಿಸಲ್ಪಟ್ಟಿದ್ದಾನೆ. ಒಂದು ಪರಾಮರ್ಶೆಯ ಪುಸ್ತಕಕ್ಕನುಸಾರ, ಅಲ್ಲಿ ತಿಳಿಯಪಡಿಸಲ್ಪಟ್ಟಿರುವ ವಿಚಾರವನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಬಹುದು: “ನೀನು [ನನ್ನ ಪಾಪಗಳನ್ನು] ಅವು ಸಂಭವಿಸಿಯೇ ಇಲ್ಲವೋ ಎಂಬಂತೆ ಮಾಡಿದ್ದೀ.” ಇದು ನಮಗೆ ಸಾಂತ್ವನದಾಯಕವಾಗಿಲ್ಲವೋ?
18. ಯೆಹೋವನು ಕ್ಷಮಿಸುವಾಗ ಆತನು ನಮ್ಮ ಪಾಪಗಳನ್ನು ಶಾಶ್ವತವಾಗಿ ಅಳಿಸಿಬಿಡುತ್ತಾನೆ ಎಂಬುದನ್ನು ಪ್ರವಾದಿಯಾದ ಮೀಕನು ಹೇಗೆ ತೋರಿಸುತ್ತಾನೆ?
18 ಪುನಸ್ಸ್ಥಾಪನೆಯ ವಾಗ್ದಾನವೊಂದರಲ್ಲಿ ಪ್ರವಾದಿಯಾದ ಮೀಕನು, ಯೆಹೋವನು ಪಶ್ಚಾತ್ತಾಪಪಡುವಂಥ ತನ್ನ ಜನರನ್ನು ಖಂಡಿತವಾಗಿಯೂ ಕ್ಷಮಿಸುವನು ಎಂಬ ತನ್ನ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿದನು: “ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನೂ . . . ಆಗಿದ್ದೀ; . . . [ದೇವರೇ,] ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಟುಬಿಡುವಿ.” (ಮೀಕ 7:18, 19, ಓರೆ ಅಕ್ಷರಗಳು ನಮ್ಮವು.) ಬೈಬಲ್ ಸಮಯಗಳಲ್ಲಿ ಜೀವಿಸುತ್ತಿದ್ದ ಜನರಿಗೆ ಈ ಮಾತುಗಳು ಏನನ್ನು ಅರ್ಥೈಸಿದವು ಎಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ. “ಸಮುದ್ರದ ತಳಕ್ಕೆ” ಬಿಸಾಡಲ್ಪಟ್ಟ ಯಾವುದೇ ವಸ್ತುವನ್ನು ಪುನಃ ಪಡೆಯುವ ಅವಕಾಶವಿತ್ತೇ? ಹೀಗೆ, ಯೆಹೋವನು ಕ್ಷಮಿಸುವಾಗ ಆತನು ನಮ್ಮ ಪಾಪಗಳನ್ನು ಶಾಶ್ವತವಾಗಿ ಅಳಿಸಿಬಿಡುತ್ತಾನೆ ಎಂಬುದನ್ನು ಮೀಕನ ಮಾತುಗಳು ತೋರಿಸುತ್ತವೆ.
“ನಮ್ಮ ದೇವರ ಕೋಮಲ ಸಹಾನುಭೂತಿ”
19, 20. (ಎ) “ಕರುಣೆ ತೋರಿಸು” ಅಥವಾ “ಕನಿಕರಪಡು” ಎಂದು ತರ್ಜುಮೆಮಾಡಲ್ಪಟ್ಟಿರುವ ಹೀಬ್ರು ಕ್ರಿಯಾಪದದ ಅರ್ಥವೇನು? (ಬಿ) ಯೆಹೋವನ ಸಹಾನುಭೂತಿಯ ಕುರಿತು ನಮಗೆ ಕಲಿಸಲಿಕ್ಕಾಗಿ, ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ಭಾವನೆಗಳನ್ನು ಬೈಬಲು ಹೇಗೆ ಉಪಯೋಗಿಸುತ್ತದೆ?
19 ಸಹಾನುಭೂತಿಯು ಯೆಹೋವನ ಪ್ರೀತಿಯ ಇನ್ನೊಂದು ವೈಶಿಷ್ಟ್ಯವಾಗಿದೆ. ಸಹಾನುಭೂತಿ ಎಂದರೇನು? ಬೈಬಲಿನಲ್ಲಿ, ಸಹಾನುಭೂತಿ ಮತ್ತು ಕರುಣೆಯ ಮಧ್ಯೆ ನಿಕಟವಾದ ಸಂಬಂಧವಿದೆ. ಅನೇಕ ಹೀಬ್ರು ಮತ್ತು ಗ್ರೀಕ್ ಪದಗಳು ಸಹಾನುಭೂತಿಯ ಅರ್ಥವನ್ನು ಕೊಡುತ್ತವೆ. ಉದಾಹರಣೆಗೆ, ರಚಾಮ್ ಎಂಬ ಹೀಬ್ರು ಕ್ರಿಯಾಪದವನ್ನು ಅನೇಕವೇಳೆ “ಕರುಣೆ ತೋರಿಸು” ಅಥವಾ “ಕನಿಕರಪಡು” ಎಂದು ತರ್ಜುಮೆಮಾಡಲಾಗುತ್ತದೆ. ಯೆಹೋವನು ಸ್ವತಃ ತನಗೆ ಅನ್ವಯಿಸಿಕೊಳ್ಳುವ ಈ ಹೀಬ್ರು ಪದವು, “ಗರ್ಭಾಶಯ” ಎಂಬುದಕ್ಕಿರುವ ಪದಕ್ಕೆ ಸಂಬಂಧಿತವಾಗಿದ್ದು, ಇದನ್ನು “ಮಾತೃಸದೃಶ ಸಹಾನುಭೂತಿ” ಎಂದು ವರ್ಣಿಸಸಾಧ್ಯವಿದೆ.
20 ಯೆಹೋವನ ಸಹಾನುಭೂತಿಯ ಕುರಿತು ನಮಗೆ ಕಲಿಸಲಿಕ್ಕಾಗಿ, ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ಭಾವನೆಗಳನ್ನು ಬೈಬಲು ಉಪಯೋಗಿಸುತ್ತದೆ. ಯೆಶಾಯ 49:15 ಹೇಳುವುದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ [“ಸಹಾನುಭೂತಿಯಿಲ್ಲದೆ,” NW; ರಚಾಮ್] ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.” ತಾನು ಹಾಲುಣಿಸುತ್ತಿರುವ ಮಗುವಿನ ಪೋಷಣೆ ಹಾಗೂ ಪರಾಮರಿಕೆಯನ್ನು ತಾಯಿಯೊಬ್ಬಳು ಮರೆಯುವುದನ್ನು ನಾವು ಊಹಿಸಿಕೊಳ್ಳುವುದೂ ಕಷ್ಟ. ಎಷ್ಟೆಂದರೂ ಒಂದು ಶಿಶುವು ನಿಸ್ಸಹಾಯಕವಾಗಿರುತ್ತದೆ; ಒಂದು ಮಗುವಿಗೆ ಹಗಲೂರಾತ್ರಿ ಅದರ ತಾಯಿಯ ಗಮನದ ಆವಶ್ಯಕತೆಯಿರುತ್ತದೆ. ಆದರೂ, ವಿಷಾದಕರವಾಗಿ ಈ ‘ಕಠಿನಕಾಲಗಳಲ್ಲಿ’ ತಾಯಂದಿರ ಅಲಕ್ಷ್ಯವು ಅಪರೂಪದ ಸಂಗತಿಯಾಗಿ ಉಳಿದಿಲ್ಲ. (2 ತಿಮೊಥೆಯ 3:1, 3) “ನಾನಾದರೆ ನಿನ್ನನ್ನು ಮರೆಯೆ” ಎಂದು ಯೆಹೋವನು ಉದ್ಗರಿಸುತ್ತಾನೆ. ತನ್ನ ಸೇವಕರ ಕಡೆಗೆ ಯೆಹೋವನಿಗಿರುವ ಕೋಮಲ ಸಹಾನುಭೂತಿಯು, ನಾವು ಊಹಿಸಸಾಧ್ಯವಿರುವ ಅತ್ಯಂತ ಕೋಮಲ ಮಮತೆಗಿಂತಲೂ, ಅಂದರೆ ಸಾಮಾನ್ಯವಾಗಿ ಒಬ್ಬ ತಾಯಿಯು ತನ್ನ ಶಿಶುವಿನ ಕಡೆಗೆ ತೋರಿಸುವ ಸಹಾನುಭೂತಿಗಿಂತಲೂ ಅತ್ಯಧಿಕವಾಗಿ ಪ್ರಬಲವಾದದ್ದಾಗಿದೆ.
21, 22. ಪುರಾತನ ಐಗುಪ್ತದಲ್ಲಿ ಇಸ್ರಾಯೇಲ್ಯರು ಏನನ್ನು ಅನುಭವಿಸಿದರು, ಮತ್ತು ಯೆಹೋವನು ಅವರ ಮೊರೆಗೆ ಹೇಗೆ ಪ್ರತಿಕ್ರಿಯಿಸಿದನು?
21 ಒಬ್ಬ ಪ್ರೀತಿಯ ಹೆತ್ತವನೋಪಾದಿ ಯೆಹೋವನು ಹೇಗೆ ಸಹಾನುಭೂತಿಯನ್ನು ತೋರಿಸುತ್ತಾನೆ? ಆತನು ಪುರಾತನ ಇಸ್ರಾಯೇಲ್ನೊಂದಿಗೆ ವ್ಯವಹರಿಸಿದ ರೀತಿಯಲ್ಲಿ ಈ ಗುಣವು ಸ್ಪಷ್ಟವಾಗಿ ಕಂಡುಬರುತ್ತದೆ. ಸಾ.ಶ.ಪೂ. 16ನೆಯ ಶತಮಾನದ ಅಂತ್ಯದಷ್ಟಕ್ಕೆ, ಲಕ್ಷಾಂತರ ಮಂದಿ ಇಸ್ರಾಯೇಲ್ಯರು ಐಗುಪ್ತದಲ್ಲಿ ಗುಲಾಮರಾಗಿದ್ದರು ಮತ್ತು ಅಲ್ಲಿ ಅವರು ಗಂಭೀರವಾದ ರೀತಿಯಲ್ಲಿ ದಬ್ಬಾಳಿಕೆಗೊಳಗಾಗಿದ್ದರು. (ವಿಮೋಚನಕಾಂಡ 1:11, 14) ಇಸ್ರಾಯೇಲ್ಯರು ದುರವಸ್ಥೆಯಲ್ಲಿದ್ದಾಗ, ಅವರು ಯೆಹೋವನ ಮೊರೆಹೊಕ್ಕರು. ಸಹಾನುಭೂತಿಯುಳ್ಳವನಾದ ದೇವರು ಹೇಗೆ ಪ್ರತಿಕ್ರಿಯಿಸಿದನು?
22 ಇದು ಯೆಹೋವನ ಹೃದಯವನ್ನು ಸ್ಪರ್ಶಿಸಿತು. ಆತನಂದದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೆ ನೋಡಿದ್ದೇನೆ. . . . ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಿಮೋಚನಕಾಂಡ 3:7) ತನ್ನ ಜನರ ಕಷ್ಟಾನುಭವಗಳನ್ನು ನೋಡಿ, ಅವರ ಗೋಳಾಟಗಳನ್ನು ಕೇಳಿಸಿಕೊಂಡ ನಂತರವೂ, ಯೆಹೋವನು ಅವರ ಬಗ್ಗೆ ಅನುಕಂಪಪಡದೇ ಇರುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯೆಹೋವನು ಪರಾನುಭೂತಿಯುಳ್ಳ ದೇವರಾಗಿದ್ದಾನೆ. ಮತ್ತು ಇತರರ ನೋವನ್ನು ಗುರುತಿಸುವಂಥ ಸಾಮರ್ಥ್ಯವಿರುವ ಸಹಾನುಭೂತಿಗೂ ಪರಾನುಭೂತಿಗೂ ನಿಕಟವಾದ ಸಂಬಂಧವಿದೆ. ಆದರೂ, ಯೆಹೋವನು ತನ್ನ ಜನರ ಕುರಿತು ಕೇವಲ ಮರುಕಪಡಲಿಲ್ಲ; ಬದಲಾಗಿ ಅವರ ಪರವಾಗಿ ಕಾರ್ಯನಡಿಸುವಂತೆ ಆತನು ಪ್ರಚೋದಿಸಲ್ಪಟ್ಟನು. ಯೆಶಾಯ 63:9 (NW) ಹೇಳುವುದು: “ತನ್ನ ಪ್ರೀತಿಯಿಂದಲೂ ಸಹಾನುಭೂತಿಯಿಂದಲೂ ಆತನು ಅವರನ್ನು ವಿಮೋಚಿಸಿದನು.” “ಭುಜಪರಾಕ್ರಮ”ದಿಂದ ಆತನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಪಾರುಮಾಡಿದನು. (ಧರ್ಮೋಪದೇಶಕಾಂಡ 4:34) ತದನಂತರ ಆತನು ಅವರಿಗೆ ಅದ್ಭುತಕರವಾಗಿ ಆಹಾರವನ್ನೂ ಒದಗಿಸಿದನು ಮತ್ತು ಅವರ ಸ್ವಂತ ಫಲಭರಿತ ದೇಶಕ್ಕೆ ಅವರನ್ನು ನಡೆಸಿದನು.
23. (ಎ) ಯೆಹೋವನು ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರ ಕುರಿತು ಆಳವಾಗಿ ಚಿಂತಿಸುತ್ತಾನೆ ಎಂಬುದಕ್ಕೆ ಕೀರ್ತನೆಗಾರನ ಮಾತುಗಳು ಹೇಗೆ ಆಶ್ವಾಸನೆ ನೀಡುತ್ತವೆ? (ಬಿ) ಯಾವ ವಿಧಗಳಲ್ಲಿ ಯೆಹೋವನು ನಮಗೆ ಸಹಾಯಮಾಡುತ್ತಾನೆ?
23 ಯೆಹೋವನು ತನ್ನ ಜನರಿಗೆ ಒಂದು ಗುಂಪಿನೋಪಾದಿ ಮಾತ್ರ ಸಹಾನುಭೂತಿಯನ್ನು ತೋರಿಸುವುದಿಲ್ಲ. ನಮ್ಮ ಪ್ರೀತಿಯ ದೇವರು ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರ ಕುರಿತು ಆಳವಾಗಿ ಚಿಂತಿಸುತ್ತಾನೆ. ನಾವು ಅನುಭವಿಸಬಹುದಾದ ಯಾವುದೇ ಕಷ್ಟವನ್ನು ಆತನು ಚೆನ್ನಾಗಿ ಬಲ್ಲವನಾಗಿದ್ದಾನೆ. ಕೀರ್ತನೆಗಾರನು ಹೇಳಿದ್ದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:15, 18) ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಹೇಗೆ ಸಹಾಯಮಾಡುತ್ತಾನೆ? ನಮ್ಮ ಕಷ್ಟಾನುಭವದ ಮೂಲಕಾರಣವನ್ನು ಆತನು ಎಲ್ಲಾ ಸಮಯದಲ್ಲಿ ತೆಗೆದುಹಾಕುವುದಿಲ್ಲ. ಆದರೆ ಸಹಾಯಕ್ಕಾಗಿ ತನ್ನ ಬಳಿ ಮೊರೆಯಿಡುವವರಿಗಾಗಿ ಆತನು ಹೇರಳವಾದ ಒದಗಿಸುವಿಕೆಗಳನ್ನು ಮಾಡಿದ್ದಾನೆ. ಗಮನಾರ್ಹವಾದ ರೀತಿಯಲ್ಲಿ ನಮಗೆ ಸಹಾಯಮಾಡಸಾಧ್ಯವಿರುವ ಪ್ರಾಯೋಗಿಕ ಸಲಹೆಯನ್ನು ಆತನ ವಾಕ್ಯವು ಒದಗಿಸುತ್ತದೆ. ಸಭೆಯಲ್ಲಿ ಆತನು ಆತ್ಮಿಕವಾಗಿ ಅರ್ಹರಾಗಿರುವ ಮೇಲ್ವಿಚಾರಕರನ್ನು ಒದಗಿಸುತ್ತಾನೆ, ಮತ್ತು ಇವರು ಇತರರಿಗೆ ಸಹಾಯಮಾಡುವುದರಲ್ಲಿ ಆತನ ಸಹಾನುಭೂತಿಯನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತಾರೆ. (ಯಾಕೋಬ 5:14, 15) ‘ಪ್ರಾರ್ಥನೆಯನ್ನು ಕೇಳುವವನೋಪಾದಿ’ ಯೆಹೋವನು “ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡು”ತ್ತಾನೆ. (ಕೀರ್ತನೆ 65:2; ಲೂಕ 11:13) ಅಂಥ ಎಲ್ಲಾ ಒದಗಿಸುವಿಕೆಗಳು “ನಮ್ಮ ದೇವರ ಕೋಮಲ ಸಹಾನುಭೂತಿಯ” ಅಭಿವ್ಯಕ್ತಿಗಳಾಗಿವೆ.—ಲೂಕ 1:78, NW.
24. ಯೆಹೋವನ ಪ್ರೀತಿಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?
24 ನಮ್ಮ ಸ್ವರ್ಗೀಯ ತಂದೆಯ ಪ್ರೀತಿಯ ಕುರಿತು ಆಲೋಚಿಸುವುದು ರೋಮಾಂಚಕರವಾಗಿದೆ ಅಲ್ಲವೇ? ಹಿಂದಿನ ಲೇಖನದಲ್ಲಿ ನಮಗೆ, ಯೆಹೋವನು ತನ್ನ ಶಕ್ತಿ, ನ್ಯಾಯ, ಮತ್ತು ವಿವೇಕವನ್ನು ನಮ್ಮ ಪ್ರಯೋಜನಾರ್ಥವಾಗಿ ಪ್ರೀತಿಭರಿತ ವಿಧಗಳಲ್ಲಿ ವ್ಯಕ್ತಪಡಿಸಿದ್ದಾನೆ ಎಂಬುದನ್ನು ನೆನಪು ಹುಟ್ಟಿಸಲಾಗಿತ್ತು. ಮತ್ತು ಈ ಲೇಖನದಲ್ಲಿ, ಗಮನಾರ್ಹವಾದ ವಿಧಗಳಲ್ಲಿ ಯೆಹೋವನು ಮಾನವಕುಲಕ್ಕಾಗಿ ಮತ್ತು ವೈಯಕ್ತಿಕವಾಗಿ ನಮಗಾಗಿರುವ ತನ್ನ ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸಿದ್ದಾನೆ ಎಂಬುದನ್ನು ನಾವು ನೋಡಿದ್ದೇವೆ. ಈಗ, ನಮ್ಮಲ್ಲಿ ಪ್ರತಿಯೊಬ್ಬರೂ ‘ಯೆಹೋವನ ಪ್ರೀತಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ?’ ಎಂದು ಕೇಳಿಕೊಳ್ಳತಕ್ಕದ್ದು. ನಿಮ್ಮ ಪೂರ್ಣ ಹೃದಯ, ಮನಸ್ಸು, ಪ್ರಾಣ ಹಾಗೂ ಬಲದಿಂದ ಆತನನ್ನು ಪ್ರೀತಿಸುವ ಮೂಲಕ ನೀವು ಆತನ ಪ್ರೀತಿಗೆ ಪ್ರತಿಕ್ರಿಯಿಸುವಂತಾಗಲಿ. (ಮಾರ್ಕ 12:29, 30) ಪ್ರತಿ ದಿನ ನೀವು ಜೀವಿಸುವಂಥ ವಿಧವು, ಯೆಹೋವನಿಗೆ ಇನ್ನಷ್ಟು ಸಮೀಪವಾಗುವ ನಿಮ್ಮ ಹೃತ್ಪೂರ್ವಕ ಬಯಕೆಯನ್ನು ಪ್ರತಿಬಿಂಬಿಸುವಂತಾಗಲಿ. ಅಷ್ಟುಮಾತ್ರವಲ್ಲ, ಪ್ರೀತಿಸ್ವರೂಪಿಯಾಗಿರುವ ಯೆಹೋವ ದೇವರು ನಿತ್ಯತೆಯಾದ್ಯಂತವೂ ನಿಮಗೆ ಹೆಚ್ಚು ಸಮೀಪವಾಗಲಿ!—ಯಾಕೋಬ 4:8.
[ಪಾದಟಿಪ್ಪಣಿ]
a ಒಬ್ಬ ವಿದ್ವಾಂಸನು ಹೇಳುವುದೇನೆಂದರೆ, ಕಡು ಕೆಂಪು ಬಣ್ಣವು “ಸ್ಥಿರವಾದ, ಅಥವಾ ಅಚಲ ಬಣ್ಣವಾಗಿತ್ತು. ಇಬ್ಬನಿಯಾಗಲಿ, ಮಳೆಯಾಗಲಿ, ಒಗೆಯುವಿಕೆಯಾಗಲಿ, ದೀರ್ಘವಾದ ಬಳಕೆಯಾಗಲಿ ಅದರ ಬಣ್ಣವು ಹೋಗುವಂತೆ ಮಾಡುತ್ತಿರಲಿಲ್ಲ.”
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ಪ್ರೀತಿಯು ಯೆಹೋವನ ಪ್ರಧಾನ ಗುಣವಾಗಿದೆ ಎಂಬುದು ನಮಗೆ ಹೇಗೆ ತಿಳಿದಿದೆ?
• ತನ್ನ ಮಗನು ನಮಗೋಸ್ಕರ ಕಷ್ಟಾನುಭವಿಸಿ ಸಾಯುವಂತೆ ಯೆಹೋವನು ಕಳುಹಿಸಿಕೊಟ್ಟದ್ದು, ಇಷ್ಟರ ತನಕ ಮಾಡಲ್ಪಟ್ಟಿರುವ ಪ್ರೀತಿಯ ಅತ್ಯಂತ ಮಹಾನ್ ಕೃತ್ಯವಾಗಿದೆ ಎಂದು ಏಕೆ ಹೇಳಸಾಧ್ಯವಿದೆ?
• ನಮ್ಮನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತಾನೆಂಬ ಆಶ್ವಾಸನೆಯನ್ನು ಯೆಹೋವನು ಹೇಗೆ ನೀಡುತ್ತಾನೆ?
• ಯಾವ ಸುಸ್ಪಷ್ಟ ವಿಧಗಳಲ್ಲಿ ಯೆಹೋವನ ಕ್ಷಮಾಪಣೆಯನ್ನು ಬೈಬಲ್ ವರ್ಣಿಸುತ್ತದೆ?
[ಪುಟ 15ರಲ್ಲಿರುವ ಚಿತ್ರ]
“ದೇವರು . . . ತನ್ನ ಒಬ್ಬನೇ ಮಗನನ್ನು ಕೊಟ್ಟನು”
[ಪುಟ 16, 17ರಲ್ಲಿರುವ ಚಿತ್ರ]
“ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು”
[ಕೃಪೆ]
© J. Heidecker/VIREO
[ಪುಟ 18ರಲ್ಲಿರುವ ಚಿತ್ರ]
ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ಭಾವನೆಗಳು, ಯೆಹೋವನ ಸಹಾನುಭೂತಿಯ ಕುರಿತು ನಮಗೆ ಪಾಠವನ್ನು ಕಲಿಸಬಲ್ಲವು